Thursday, December 23, 2010

ಸ್ವಂತ ಶ್ರಮ ಇಲ್ಲದೆ ಬಂದದ್ದೆಲ್ಲ ಅಮೇಧ್ಯ!

ಪತ್ರಿಕೋದ್ಯಮದಲ್ಲಿನ ಭ್ರಷ್ಟಾಚಾರದ ಬಗ್ಗೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಚರ್ಚೆಯಾಗುತ್ತಿದೆ. ಸ್ವಂತ ಪರಿಶ್ರಮವಿಲ್ಲದೆ ಬಂದ ಸಂಪತ್ತು ಅಮೇಧ್ಯ ಎನ್ನುವುದನ್ನು ಕೇವಲ ರಾಜಕಾರಣಿಗಳಲ್ಲ, ಪತ್ರಕರ್ತರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ವಿಶ್ವೇಶ್ವರ ಭಟ್ ವಿಜಯ ಕರ್ನಾಟಕದಿಂದ ಹೊರನಡೆದಿದ್ದಾರೆ. ಅವರು ಉನ್ನತ ವ್ಯಾಸಂಗಕ್ಕಾಗಿ ಹೊರಟಿದ್ದೇನೆ ಎಂದಿದ್ದಾರೆ. ಅವರಿಗೆ ಈಗಲಾದರೂ ಒಳ್ಳೆಯ ಶಿಕ್ಷಣ ಸಿಗಲಿ. ಅವರೇನೋ, ಉನ್ನತ ಶಿಕ್ಷಣ ಪಡೆಯುತ್ತಾರೆ, ಅವರನ್ನು ನಂಬಿಕೊಂಡು ಕೆಲಸ ಬಿಟ್ಟವರ ಗತಿ? ಅವರ ಅನುಯಾಯಿಗಳು ಎಂಬ ಕಾರಣಕ್ಕೆ ವಿಜಯ ಕರ್ನಾಟಕದಲ್ಲಿ ಮ್ಯಾನೇಜ್‌ಮೆಂಟ್‌ನ ಅನುಮಾನಗಳಿಗೆ ಗುರಿಯಾಗಿ ಯಾತನೆ ಅನುಭವಿಸುತ್ತಿರುವವರ ಗತಿ?

ಒಂದಂತೂ ಸತ್ಯ. ಇವರೆಲ್ಲರನ್ನೂ ಈ ಸ್ಥಿತಿಗೆ ತಂದ ನಿಜ ಕಾರಣಗಳು, ತಪ್ಪುಗಳು, ವೃತ್ತಿ ದ್ರೋಹದ ಕೃತ್ಯಗಳು ಬಯಲಾದರೆ ಎಲ್ಲರ ಮುಖವಾಡಗಳು ಕಳಚಿ ಎಲ್ಲರೂ ಬೆತ್ತಲಾಗುತ್ತಾರೆ.

ಹುಬ್ಬಳ್ಳಿಯಲ್ಲಿ ಪತ್ರಕರ್ತನಾಗಿದ್ದವನೊಬ್ಬ ಬೆಂಗಳೂರಿನಲ್ಲಿ ಅರಮನೆಯಂಥಾ ಮನೆ ಕಟ್ಟುತ್ತಿದ್ದಾನೆ ಎಂಬ ಸುದ್ದಿಯಿದೆ. ವಾರಕ್ಕೊಂದು ಅಂಕಣ ಬರೆದುಕೊಂಡಿದ್ದವನು ಹನ್ನೆರಡು ಅಂಕಣದ ಮನೆ ಕಟ್ಟಿಕೊಳ್ಳಲು ಮೈಸೂರಿನಲ್ಲಿ ಪತ್ನಿ ಹೆಸರಲ್ಲಿ ಜಿ-ಕೆಟಗರಿಯಲ್ಲಿ ಸೈಟ್ ಮಾಡಿಕೊಂಡಿದ್ದಾನೆ. ಆದರೂ ಸತ್ಯ, ನೀತಿ, ನಿಯತ್ತು ಎಂದೆಲ್ಲಾ ಬರೆಯುತ್ತಲೆ ಇದ್ದರು ಈ ಮಹಾನುಭಾವರುಗಳು.  ಆತ್ಮಸಾಕ್ಷಿ ಎನ್ನುವುದೇ ಬೇಡವೇ?

ಯಡಿಯೂರಪ್ಪ ಅಧಿಕಾರದಾಹಿ. ಆತ ಎಷ್ಟೇ ಹಗರಣಗಳು ಹೊರಬಂದರೂ ರಾಜೀನಾಮೆ ಕೊಡುವುದಿಲ್ಲ ಎಂದುಕೊಂಡ ಅನೇಕರಿಗೆ ಈ ಪತ್ರಕರ್ತರ ವರ್ತನೆ ದಿಗ್ಭ್ರಮೆ ಮೂಡಿಸಿದೆ. ಹಿಂದೆಲ್ಲ ಪತ್ರಕರ್ತರ ಮೇಲೆ ಸಣ್ಣ ಆರೋಪ ಬಂದರೂ ಅವರನ್ನು ಕಿತ್ತು ಎಸೆಯಲಾಗುತ್ತಿತ್ತು. ಆದರೆ ಪ್ರಣಬ್ ರಾಯ್‌ನಂಥ ಪ್ರಣಬ್ ರಾಯ್ ತನ್ನ ಎನ್‌ಡಿಟಿವಿಯ ಗ್ರೂಪ್ ಎಡಿಟರ್ ಬರ್ಖಾ ದತ್‌ಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ನೀರಾ ರಾಡಿಯಾ ಜತೆಗಿನ ಸಂಬಂಧದ ಕುರಿತಾಗಿ ಬರ್ಖಾಳ ‘ಮುಗ್ಧತೆಯನ್ನು ಅವರು ಸಮರ್ಥಿಸುತ್ತಿದ್ದಾರೆ. ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನೊಬ್ಬ ಒಂದು ಲಕ್ಷ ರೂಪಾಯಿ ಜಾಹೀರಾತು ಹಣ ಹೊಡೆದು ಸಿಕ್ಕಿಬಿದ್ದರೂ ಆತನ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. (ದಾಖಲೆಗಳು ದೊರೆತ ನಂತರ ಪೂರ್ಣ ವಿವರ
ನೀಡಲಾಗುವುದು.)

ಸಾಮಾನ್ಯ ಓದುಗನಿಗೆ ಪತ್ರಕರ್ತನೆಂದರೆ ಗೌರವ. ಮುದ್ರಿತ ರೂಪದಲ್ಲಿರುವ ಅಕ್ಷರಗಳೆಲ್ಲ ಸತ್ಯ ಎಂಬ ನಂಬಿಕೆ. ಆದರೆ ಆ ಗೌರವ ಮತ್ತು ನಂಬಿಕೆಗಳಿಗೆ ಕುತ್ತು ತರುವ ಕೆಲಸ ಪತ್ರಿಕೆಗಳ ನೇತೃತ್ವ ವಹಿಸಿದವರೇ ಮಾಡುತ್ತಿರುವುದು ದುರಂತ. ಹಾಲಪ್ಪನ ಅವಾಂತರ, ರೇಣುಕಾಚಾರ್ಯನ ಕಾಮಪುರಾಣ, ಯಡಿಯೂರಪ್ಪನ ಭೂದಾಹ, ಕಟ್ಟಾನ ದರೋಡೆಗಳ ಬಗ್ಗೆ ಬರೆಯುವವರು ಶುದ್ಧವಾಗಿರಬೇಕೆಂದು ಜನರು ನಿರೀಕ್ಷಿಸುವುದು ಸಹಜ.

ಅವರ ನಿರೀಕ್ಷೆಗಳನ್ನು ಉಪೇಕ್ಷಿಸುವುದು, ತಿರಸ್ಕರಿಸುವುದು, ಅಪಮಾನಿಸುವುದು ಎಷ್ಟು ಸರಿ?

6 comments:

 1. yathaa raaja tatha press..

  ReplyDelete
 2. ನಿಜ,
  ಮಾಧ್ಯಮದ ಜನರಿಗೂ ರಾಜಕಾರಣಿಗಳಿಗೂ ಮಧ್ಯೆ ಬೆಳೆಯುತ್ತಿರುವ ಅಪವಿತ್ರ ಮೈತ್ರಿ ಸುದ್ದಿ ಹಾಗೂ ವಿಶ್ಲೇಷಣೆಗಳ ಪ್ರಾಮಾಣಿಕತೆಯನ್ನೇ ಸಂದೇಹದಿಂದ ನೋಡುವಂತೆ ಮಾಡಿದೆ. ತಾನು ಪ್ರಭಾವಶಾಲಿ ಪತ್ರಿಕೆಯೊಂದರಲ್ಲಿ ಇರುವ ಕಾರಣಕ್ಕೆ ರಾಜಕಾರಣಿಗಳಿಗೆ ಹತ್ತಿರವಾಗುವದು, ಆ ಕಾರಣಕ್ಕೆ ಅವರ ಕೃಪೆಗೆ ಪಾತ್ರವಾಗುವದು,ಇನ್ನುಳಿದಂತೆ ಸ್ಥಿತಿವಂತಳಾದ ತನ್ನ ಪತ್ನಿಯ ಅಂಗವೈಕಲ್ಯವನ್ನು ನೆಪವಾಗಿಸಿಕೊಂಡು ಒಂದು ಸೈಟ್ ಕಬಳಿಸುವದು ಇವೆಲ್ಲ ದೊಡ್ಡ ದೊಡ್ಡ ಆದರ್ಶಗಳ ಮಾತಾಡುವ, ಇದೀಗ ಮಾಧ್ಯಮಲೋಕದಲ್ಲಿ ಕಣ್ಣು ಪಿಳುಕಿಸುತ್ತಿರುವ ಒಬ್ಬ ಮಾಧ್ಯಮಕರ್ಮಿಗೆ ಏನೂ ಅನ್ನಿಸುವದಿಲ್ಲ. ಅವನ ಕೆಲವು ಮತಾಂಧ ಬಡಬಡಿಕೆಗಳಿಗೆ ಜೋತುಬಿದ್ದ ಜನ ಹಾಗೂ ಅವನದೇ ಜಾತಿಯ ಕೆಲವು ಒರಟರು ಈ ಭ್ರಷ್ಠತೆಯ ಹೊರತಾಗಿಯೂ ಅವನನ್ನು ಪುರುಷ ಸಿಂಹದಂತೆ ಬಿಂಬಿಸುತ್ತಿರುವದು ಇನ್ನೂ ಹಾಸ್ಯಾಸ್ಪದ!

  ReplyDelete
 3. Media in Karnataka is on the rise. Undesirable tendencies seem to on the rise too.Let me hope your initiative provides a forum for the media minds to interact freely so that the credibility and integrity of the print and electronic media does not deteriorate any further.

  ReplyDelete
 4. Good blog. Keep it up. Vimarshaki wishes you all the best. Try to keep an eye on the misdeeds of these journalsits. We shall work together to fight these evil elements in media. VIMARSHAKI

  ReplyDelete
 5. ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನೊಬ್ಬ ಒಂದು ಲಕ್ಷ ರೂಪಾಯಿ ಜಾಹೀರಾತು ಹಣ ಹೊಡೆದು ಸಿಕ್ಕಿಬಿದ್ದರೂ ಆತನ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. (ದಾಖಲೆಗಳು ದೊರೆತ ನಂತರ ಪೂರ್ಣ ವಿವರ
  ನೀಡಲಾಗುವುದು.)avaru yaaru hesaru prakatisi

  ReplyDelete
 6. 1990ರ ದಶಕದಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತರಾದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತರ ಬಗ್ಗೆ ಪ್ರಸ್ತುತ ಬೆಂಗಳೂರಿನ ಸಮೂಹ ಮಾಧ್ಯಮದಲ್ಲಿರುವ ಹಿರಿಯರೊಬ್ಬರು 2009ರಲ್ಲಿ ವ್ಯಕ್ತಪಡಿಸಿದ್ದು ಹೀಗೆ:

  ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.

  ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. 'ಪಾಕೀಟು ಪತ್ರಿಕೋದ್ಯಮ' ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.

  ReplyDelete