Wednesday, August 24, 2011

ಲೋಕಪಾಲ್ Vs ಜನ ಲೋಕಪಾಲ್

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಹೋರಾಟ ಪುನರ್ ಆರಂಭಗೊಂಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅಣ್ಣಾ ಮತ್ತವರ ತಂಡದ ಸುತ್ತ ನೆರೆದಿದ್ದ ಮತ್ತದೇ ನಗರವಾಸಿ ಮಧ್ಯಮವರ್ಗದ ಜನರೇ ಇವತ್ತೂ ಅವರನ್ನು ಸುತ್ತುವರಿದಿದ್ದಾರೆ. ಅವರಲ್ಲಿ ಬಹಳಷ್ಟು ಜನ ಅಣ್ಣಾ ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನಾಗಲಿ ಯುಪಿಎ ಸಕರ್ಾರ ಸಿದ್ಧಪಡಿಸಿರುವ ಲೋಕಪಾಲ್ ಕರಡನ್ನಾಗಲಿ ಓದಿರಲಿಕ್ಕಿಲ್ಲ. ಆದರೂ ಅವರ ದೃಷ್ಟಿಯಲ್ಲಿ ಅಣ್ಣಾ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನು ಸಕರ್ಾರ ಜಾರಿಗೆ ತರಲೇಬೇಕು ಮತ್ತು ಮುಂದಿನ ದಿನಗಳಲ್ಲಿ ಈ ಕಾಯಿದೆಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿನರ್ಾಮವಾಗುತ್ತದೆ.
          ಈ ಮಧ್ಯಮ ವರ್ಗ ಒಂದು ರೀತಿಯ ಭ್ರಮೆಯಲ್ಲಿ ಬದುಕುತ್ತಿರುವಂತಿದೆ. ಒಮ್ಮೆಯೂ ರೈತರ, ಬಡವರ, ದೀನದಲಿತರ ಪರವಾಗಿ ಪ್ರತಿಭಟಿಸದ, ಬೀದಿಗಿಳಿಯದ ಈ ವರ್ಗ ಇವತ್ತು ಭ್ರಷ್ಟಾಚಾರ ನಿಮರ್ೂಲನೆಗೆ ತೊಡೆತಟ್ಟಿ ನಿಂತಿದೆ. ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಸೃಷ್ಟಿಯಾಗಿರುವ ಈ ನೂತನ ವರ್ಗ ಉದ್ಯೋಗ, ಹಣ ಮತ್ತು ಸ್ಥಾನಮಾನಗಳು ಕಂಡಿರುವುದು ಎಷ್ಟು ನಿಜವೋ ಅದೇ ಜಾಗತೀಕರಣದಿಂದಾಗಿ ಇವತ್ತು ನಮ್ಮ ದೇಶದ ಇತಿಹಾಸದಲ್ಲೇ ಅತಿಹೆಚ್ಚು ಬಡವರು ಸೃಷ್ಟಿಯಾಗಿದ ್ದಾರೆಂಬುದರ ಬಗ್ಗೆ, ನಮ್ಮ ಸಕರ್ಾರ ದಮನಕಾರಿ ಅಂಶಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆ ಅಷ್ಟೇ ಕುರುಡಾಗಿರುವುದೂ ನಿಜ. ಮಾತ್ರವಲ್ಲ, ಈ ವರ್ಗಕ್ಕೆ ಪ್ರಜಾತಂತ್ರದ ಬಗ್ಗೆ ಕಾಳಜಿಯಾಗಲಿ, ತಾಳ್ಮೆಯಾಗಲಿ ಇಲ್ಲವೇ ಇಲ್ಲ. ಅದರಲ್ಲೂ ಮೀಸಲಾತಿ ಮತ್ತು ಪ್ರಾತಿನಿಧಿಕ ಸಿದ್ಧಾಂತದ ಬಗ್ಗೆ ಈ ವರ್ಗದಲ್ಲಿ ಅಸಹನೆ ತುಂಬಿತುಳುಕುತ್ತಿದೆ.
          ಇವತ್ತು ಭಾರತದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗವಾದ, ಮುಖ್ಯವಾಗಿ ನಗರವಾಸಿಗಳಾದ ಈ ಮಧ್ಯಮ ವರ್ಗಕ್ಕೆ ರಾಜಕಾರಣಿಗಳನ್ನು ಕಂಡರಾಗುವುದಿಲ್ಲ. ಬದಲಾಗಿ ತಾವು ಕೆಲಸ ಮಾಡುವ ಕಾಪರ್ೊರೇಟ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೋ ಹಾಗೆಯೇ ದೇಶ ಕೂಡ ಇರಬೇಕೆಂದು ಭಾವಿಸುವ ವರ್ಗವಿದು. ಓರ್ವ ಬರಹಗಾರರು ಹೇಳಿರುವಂತೆ ``ಈ ವರ್ಗಕ್ಕೆ ಎಟಿಎಂ ಮೆಶೀನ್ನಿಂದ ಹಣ ಬರುವಷ್ಟೇ ಸುಲಭವಾಗಿ ಬದಲಾವಣೆಯೂ ಬರಬೇಕು. ಆದರೆ ಮೀಸಲಾತಿ, ಪ್ರಾತಿನಿಧ್ಯ ಎಂದೆಲ್ಲ  ಕೂತರೆ ಬದಲಾವಣೆ ಆಗುವುದಿಲ್ಲ'' ಎಂಬ ನಿಲುವು ಮಧ್ಯಮ ವರ್ಗದ್ದು. ಹಾಗೆಯೇ ಮತ್ತೊಬ್ಬ ಲೇಖಕರು ಗಮನಿಸಿರುವಂತೆ ``ಎಂದೂ ಚುನಾವಣೆ ಸಮಯದಲ್ಲಿ ತಮ್ಮ ಮತ ಚಲಾಯಿಸುವ ಗೋಜಿಗೆ ಹೋಗದ ಈ ವರ್ಗಕ್ಕೆ ರಾಜಕೀಯ ಬದಲಾವಣೆ ಮಾತ್ರ ಬೇಕು.''
          ಇವತ್ತು ಅಣ್ಣಾ ಹಜಾರೆ ಅವರ ಸುತ್ತ ಇರುವ ಈ ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಇರುವ ಆಕ್ರೋಶ ನಿಜವಾದದ್ದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಹೋರಾಟವು ದೇಶದಲ್ಲಿ ದೊಡ್ಡ ಕ್ರಾಂತಿಗೆ ನಾಂದಿ ಹಾಡುತ್ತದೆ ಎಂಬ ಭ್ರಮೆಯಲ್ಲಿ ಅವರೆಲ್ಲ ಇರುವುದೂ ಅಷ್ಟೇ ನಿಜ.
          ಇಂತಹ ಭ್ರಮೆ ಜನರಲ್ಲಿ ಹೆಚ್ಚಾಗುವಂತೆ ಕೇಂದ್ರ ಸಕರ್ಾರ ನಡೆದುಕೊಂಡಿದೆ. ಆರಂಭದಲ್ಲಿ ಅಣ್ಣಾ ಅವರಿಗೆ ಸಿಕ್ಕ ಜನಬೆಂಬಲವನ್ನು ಕಂಡು ದಂಗಾದ ಕೇಂದ್ರ ಸಕರ್ಾರ ತನ್ನ ಕೈಲಾಗದ್ದನ್ನು ಮಾಡುವುದಾಗಿ ಅಣ್ಣಾ ತಂಡಕ್ಕೆ ಭರವಸೆ ನೀಡಿತು. ಅಣ್ಣಾ ತಂಡದ ಈ ಯಶಸ್ಸನ್ನು ಕಂಡು ತಾವೂ ಲಾಭ ಪಡೆದುಕೊಳ್ಳಲು ಮುಂದಾದ ಬಾಬಾ ರಾಮದೇವ್ ಎಂಬ ಢೋಂಗಿ ಸ್ವಾಮಿ ಮತ್ತು ಆತನ ಬೆನ್ನಿಗೆ ನಿಂತಿದ್ದ ಚೆಡ್ಡಿಗಳನ್ನು ಬಗ್ಗುಬಡಿಯಲು ಪೊಲೀಸರಿಂದ ಲಾಠಿಪ್ರಹಾರ ನಡೆಸಿ ತನ್ನ ಸವರ್ಾಧಿಕಾರಿ ಗುಣವನ್ನು ಪ್ರದಶರ್ಿಸಿತು. ಇದಾದನಂತರ ಅಣ್ಣಾ ತಂಡದೊಂದಿಗೆ ಲೋಕಪಾಲ್ ಕರಡು ಕುರಿತಂತೆ ನಡೆದ ಸಭೆಗಳಲ್ಲಿ ಸರಿಯಾಗಿ ಚಚರ್ೆ ನಡೆಸದೆ ಅಣ್ಣಾ ತಂಡವನ್ನು ಅವಹೇಳನ ಮಾಡುವುದರಲ್ಲೇ ಮಗ್ನವಾಗಿತ್ತು. ಕೊನೆಗೆ ಬೇಕಾಬಿಟ್ಟಿಯಾಗಿ  ಕರಡನ್ನು ರಚಿಸಿ ``ಇದನ್ನು ಬೇಕಿದ್ದರೆ ಒಪ್ಪಿಕೊಳ್ಳಿ ಇಲ್ಲವೆಂದರೆ ಬಿಡಿ'' ಎಂಬ ಧೋರಣೆಯನ್ನು ತೋರಿತು.
          ಈ ಎಲ್ಲ ಗೊಂದಲಗಳ ಮಧ್ಯೆ ಅಣ್ಣಾ ತಂಡ ಮತ್ತು ಸರಕಾರಿ ತಂಡ ರೂಪಿಸಿರುವ ಕರಡಿನ ಬಗ್ಗೆ ಸರಿಯಾದ ಚಿಂತನೆ, ಚರ್ಚೆ, ಅಧ್ಯಯನ ಸಾಧ್ಯವೇ ಆಗಿಲ್ಲ. ಈ ಎರಡೂ ಕಡೆಯವರು ಮತ್ತು ಇತರರು ಏನನ್ನು ಹೇಳುತ್ತಿದ್ದಾರೆ ಎಂದು ಯಾರೂ ಕೇಳಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಆದ್ದರಿಂದ ``ಪ್ರಧಾನಮಂತ್ರಿಯನ್ನು ಯಾಕೆ ಸೇರಿಸಬಾರದು?'', ``ಅಣ್ಣಾ ತಂಡ ಹೇಳುತ್ತಿರುವುದೆಲ್ಲ ಸರಿ ಇದೆಯಲ್ಲವಾ?'' ಎಂಬ ಗೊಂದಲಗಳು ಜನರಲ್ಲಿ ಮನೆ ಮಾಡಿವೆ. ಆದ್ದರಿಂದ ಈ ಅಣ್ಣಾ ತಂಡ ಮತ್ತು ಸಕರ್ಾರ ರೂಪಿಸಿರುವ ಕರಡುಗಳ ಪ್ರಮುಖ ಅಂಶಗಳತ್ತ ಗಮನ ಹರಿಸುವುದು ಅವಶ್ಯಕವಾಗಿದೆ.
          ಮೊದಲಿಗೆ ಯುಪಿಎ ಸಕರ್ಾರ ರೂಪಿಸಿರುವ ಕರಡನ್ನೇ ತೆಗೆದುಕೊಳ್ಳೋಣ. ಯುಪಿಎ ಸಕರ್ಾರ ಈ ಮಸೂದೆಯನ್ನು ಮೊದಲು ಪ್ರಸ್ತಾಪಿಸಿದಾಗ ಭ್ರಷ್ಟಾಚಾರ ಮಾಡಿದ ಪ್ರಧಾನಿಯನ್ನೂ ಬಲಿ ಹಾಕಬಲ್ಲಂಥ ಕರಡು ಇದು ಎಂದು ಪ್ರಚಾರ ಮಾಡಿತ್ತು. ಆದರೆ ಅಂತಹ ಅಂಶ ಈ ಕರಡಿನಲ್ಲಿ ಇಲ್ಲವೇ ಇಲ್ಲ ಮಾತ್ರವಲ್ಲ ಇದೊಂದು ಕಣ್ಣೊರೆಸುವ ತಂತ್ರವಾಗಿದೆ.
ನಮ್ಮ ಅಂಕಣಕಾರ ಶಿವಸುಂದರ್ ಅವರು ಈ ಹಿಂದೆ ಬರೆದಿದ್ದಂತೆ ಸಕರ್ಾರ ರೂಪಿಸಿರುವ ಲೋಕಪಾಲ್ ಮಸೂದೆ ಪ್ರಕಾರ:
          * ಲೋಕಪಾಲ್ ಸಂಸ್ಥೆ ತಾನೇ ಖುದ್ದಾಗಿ ಯಾರಮೇಲೂ ತನಿಖೆ ನಡೆಸುವಂತಿಲ್ಲ. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷ ಯಾರ ಬಗ್ಗೆ ದೂರು ಕೊಡುತ್ತಾರೋ ಅವರ ಬಗ್ಗೆ ಮಾತ್ರ ತನಿಖೆ ನಡೆಸಬಹುದು. ಇವೆರಡೂ ಸ್ಥಾನಗಳಿಗೆ ಆಳುವ ಪಕ್ಷದ ಪ್ರತಿನಿಧಿಯೇ ಆಯ್ಕೆಯಾಗುತ್ತಾರಾದ್ದರಿಂದ ಸ್ಪೀಕರ್ ಅಥವಾ ಪ್ರಧಾನಿಯ ಬಗ್ಗೆ ಇರಲಿ, ತಮ್ಮದೇ ಪಕ್ಷದ ಸದಸ್ಯನ ಬಗ್ಗೆ ತನಿಖೆ ನಡೆಸುವಂತೆ ಅವರು ಆಗ್ರಹಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಹೆಚ್ಚೆಂದರೆ ಆ ಮಸೂದೆ ವಿರೋಧಿ ಪಕ್ಷಗಳನ್ನು ಮಟ್ಟ ಹಾಕುವ ಆಯುಧಗಳಾಗುತ್ತದೆಯಷ್ಟೆ.
          * ಈ ಲೋಕಪಾಲ್ ಸಂಸ್ಥೆಗೆ ಕನಿಷ್ಟ ಒಂದು ಪೊಲೀಸ್ ಸ್ಟೇಷನ್ನಿಗೆ ಇರುವ ಅಧಿಕಾರವೂ ಇಲ್ಲ. ಇದು ಯಾರ ಬಗ್ಗೆಯೂ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ಅನ್ನೂ ದಾಖಲಿಸಿಕೊಳ್ಳುವಂತಿಲ್ಲ. ಅದು ಏನಿದ್ದರೂ ಒಂದು ಸಲಹಾ ಸಮಿತಿಯ ಮಾದರಿಯದ್ದು. ತನ್ನ ವಿಚಾರಣೆಯ ವರದಿಯನ್ನು ಅದು ಸಂಬಂಧಪಟ್ಟ ಸಂಸ್ಥೆಗೆ ಕೊಡಬೇಕು. ಆ ಸಂಸ್ಥೆ ಆ ವರದಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಲೂಬಹುದು.
          * ಕ್ಯಾಬಿನೆಟ್ ಮಂತ್ರಿಗಳ ಬಗೆಗಿನ ತನಿಖಾ ವರದಿಯ ಬಗ್ಗೆ ಅಂತಿಮ ತೀಮರ್ಾನ ತೆಗೆದುಕೊಳ್ಳುವ ಪರಮಾಧಿಕಾರ ಪ್ರಧಾನಿಗೆ ಇರುತ್ತದೆ ಮತ್ತು ಪ್ರಧಾನಿ ಅಥವಾ ಇತರ ಸಂಸತ್ ಸದಸ್ಯರ ಮೇಲಿನ ದೂರಿನ ಮೇಲೆ ತೀಮರ್ಾನ ತೆಗೆದುಕೊಳ್ಳುವ ಪರಮಾಧಿಕಾರ ಸಂಸತ್ತಿಗೆ ಇರುತ್ತದೆ. ಹೀಗೆ ಇಲ್ಲಿಯೂ ಭಕ್ಷಕರ ಕೈಯಲ್ಲೇ ನ್ಯಾಯ ರಕ್ಷಣೆಯ ಜವಾಬ್ದಾರಿಯನ್ನು ನೀಡಲಾಗಿದೆ.
          * ಈ ಲೋಕಪಾಲ್ ಪರಿಧಿಯಿಂದ ರಕ್ಷಣಾ ಇಲಾಖೆ ಮತ್ತು ವಿದೇಶಾಂಗ ಇಲಾಖೆಯನ್ನು ಹೊರಗಿಡಲಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಪ್ರತಿವರ್ಷ ರಕ್ಷಣಾ ಇಲಾಖೆಗೆ ಕೇಂದ್ರ ಸಕರ್ಾರ ಬಜೆಟ್ಟಿನಲ್ಲಿ ಹೆಚ್ಚು ಹಣವನ್ನು ನೀಡುತ್ತದೆ. ಹಾಗೆಯೇ ಈಗಾಗಲೇ ಬೋಫೋಸರ್್ ಮತ್ತು ಶವಪೆಟ್ಟಿಗೆ ಹಗರಣಗಳು ಸಾಬೀತು ಪಡಿಸಿರುವಂತೆ ಈ ರಕ್ಷಣಾ ಇಲಾಖೆಯಲ್ಲಿ ಹಲವಾರು ಹಗರಣಗಳು ನಡೆಯು ತ್ತವೆ. ಆದರೂ ಈ ಇಲಾಖೆಯನ್ನು ಲೋಕಪಾಲರ ಪರಿಧಿಗೆ ತಂದಿಲ್ಲ.
          * ಈ ಲೋಕಪಾಲಕ್ಕೆ ನಿವೃತ್ತ ನ್ಯಾಯಮೂತರ್ಿ ಗಳು ಮಾತ್ರ ಸದಸ್ಯರಾಗಬಹುದು. ಅವರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳು ಇರುತ್ತಾವಾದರೂ ಅಂತಿಮ ತೀಮರ್ಾನ ಆಳುವ ಸಕರ್ಾರದ್ದೇ ಆಗಿರುತ್ತದೆ. ಹೀಗಾಗಿ ನಿವೃತ್ತಿಯ ನಂತರದ ಆಶ್ರಯಕ್ಕಾಗಿ ವೃತ್ತಿಯಲ್ಲಿರುವಾಗಲೇ ನ್ಯಾಯ ಮೂತರ್ಿಗಳು ಆಳುವ ಸಕರ್ಾರದ ಪರ ವಾಲುವ ಸಾಧ್ಯತೆ ಇದ್ದೇ ಇರುತ್ತದೆ.
ಇದೆಲ್ಲದರ ಅರ್ಥ ಯುಪಿಎ ಸಕರ್ಾರ ಮಂಡಿಸಿರುವ ಲೋಕಪಾಲ್ ಮಸೂದೆ ಹಲ್ಲಿಲ್ಲದ ಹಾವು ಮಾತ್ರವಲ್ಲ ಅದಕ್ಕೆ ಭುಸುಗುಡುವುದೂ ಕಷ್ಟ.
ಈಗ ಸಕರ್ಾರಿ ತಂಡ ರಚಿಸಿರುವುದಕ್ಕೆ ಪ್ರತಿಯಾಗಿ ಹಜಾರೆ ಮತ್ತು ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡು ಏನನ್ನುತ್ತದೆ ಎಂದು ನೋಡೋಣ. ಲೋಕಪಾಲ್ನಲ್ಲಿ ನ್ಯಾಯಮೂತರ್ಿಗಳು ಮಾತ್ರವಲ್ಲದೆ ಜನಪ್ರತಿನಿಧಿಗಳು ಇರಬೇಕೆಂದೂ, ಲೋಕಪಾಲಕ್ಕೆ ಯಾರ ಬಗ್ಗೆಯಾದರೂ ತಾನೇ ಸ್ವಯಂ ತನಿಖೆ ಮಾಡುವ ಹಾಗೂ ಶಿಕ್ಷಿಸುವ ಅಧಿಕಾರವೂ ಇರಬೇಕೆಂದೂ ಅವರ ಕರಡು ಆಗ್ರಹಿಸುತ್ತದೆ.
ಇದರ ಇತರೆ ಪ್ರಮುಖ ಅಂಶಗಳು ಹೀಗಿವೆ:
          * ಲೋಕಪಾಲ್ ಸಂಸ್ಥೆ ಸಂಪೂರ್ಣವಾಗಿ ಸ್ವತಂತ್ರ ವಾಗಿದ್ದು ಯಾರಿಗೂ ಉತ್ತರದಾಯಿ ಆಗಿರುವುದಿಲ್ಲ. ಇದರ ಅರ್ಥ ನಮ್ಮ ಸಂಸತ್ತು ಮತ್ತು ನ್ಯಾಯಾಂಗಕ್ಕೆ ಇರುವ ಸ್ವಾತಂತ್ರಕ್ಕಿಂತ ಹೆಚ್ಚು ಸ್ವಾತಂತ್ರ್ಯ ಮತ್ತು ಅಧಿಕಾರ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ನಮ್ಮ ಪ್ರಜಾತಂತ್ರ ದೇಶದಲ್ಲಿ ಈ ಲೋಕಪಾಲ್ ಯಾರಿಗೂ ವಿವರಣೆ ಅಥವಾ ಉತ್ತರ ಕೊಡಬೇಕಿಲ್ಲ ಎಂದರೆ ಅದು ಪ್ರಜಾತಂತ್ರದ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಅದೆಷ್ಟು ಸರಿ?
          * ನಮ್ಮ ದೇಶದಲ್ಲಿ ಇವತ್ತು ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ 77 ಲಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇಡುವ ಅಧಿಕಾರವು ಕೇವಲ ಹನ್ನೊಂದು ಜನರಿರುವ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ಮೇಲುನೋಟಕ್ಕೇ ಇದು ಅಸಾಧ್ಯ ಎಂದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ.
          * ಪ್ರಜಾತಂತ್ರದ ಆಶಯವೇ ಎಲ್ಲ ವರ್ಗ,  ಜಾತಿ, ಸಮು ದಾಯಗಳಿಗೆ ಸಮಾನ ಪ್ರಾತಿನಿಧ್ಯ ಒದಗಿಸುವುದು. ಆದರೆ ಈ ಜನ ಲೋಕಪಾಲ್ ಸಂಸ್ಥೆ ಅಂತಹ ಯಾವ ಆಶಯವನ್ನೂ ತನ್ನ ಕರಡಿನಲ್ಲಿ ವ್ಯಕ್ತಪಡಿಸಿಲ್ಲ. ಬದಲಾಗಿ ಈ ದೇಶದ ಅತಿ ಬುದ್ಧಿವಂತರೂ, ಜ್ಞಾನಪೀಠ ಪ್ರಶಸ್ತಿ ವಿಜೇತರೂ, ನೊಬೆಲ್ ಪ್ರಶಸ್ತಿ ಪಡೆದಿರುವವರೂ ಇತ್ಯಾದಿ `ಮೇಧಾ ವಿ'ಗಳು ಮಾತ್ರ ಇರಬಹುದಾದ ಸಂಸ್ಥೆಯಾಗಿ ಜನಲೋಕಪಾಲ್ಅನ್ನು ಕಲ್ಪಿಸಿಕೊಳ್ಳಲಾಗಿದೆ. ಅಂದರೆ ಪರೋಕ್ಷವಾಗಿ ಈ ದೇಶದ ಬಹುಸಂಖ್ಯಾತ ಜನರನ್ನು ತನ್ನೊಳಗೆ ತರುವ ಆಶಯವನ್ನೇ ಇದು ಹೊಂದಿಲ್ಲ.
          * ಇವತ್ತು ಕಾಪರ್ೊರೇಟ್ ಕಂಪನಿಗಳೂ ಜನಲೋಕಪಾಲ್ ಕರಡನ್ನು ಬೆಂಬಲಿಸುತ್ತಿರುವುದರ ಹಿಂದೆ ಒಂದು ಮಸಲತ್ತು ಅಡಗಿದೆ. ಅದೇನೆಂದರೆ ಈ ಜನಲೋಕಪಾಲ್ ಸಂಸ್ಥೆಗೆ ನಮ್ಮ ಶಾಸಕಾಂಗ, ನ್ಯಾಯಾಂಗ ಮತ್ತು ಕಾಯರ್ಾಂಗದ ಮೇಲೆ ನಿಗಾ ಇಡುವ ಸ್ವಾತಂತ್ರವಿರುತ್ತದೆಯೇ ಹೊರತು ಬಂಡವಾಳಶಾಹಿ ಕಂಪನಿಗಳ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅಂದರೆ ಈ ಕಾಯ್ದೆಯಿಂದಾಗಿ ಕಾಪರ್ೊರೇಟ್ ಕಂಪನಿಗಳಿಗೆ ಲಾಭವಾಗಲಿದೆ. ಈಗ ಅವರ ಬೆಂಬಲ ಯಾಕೆ ಎಂದು ಅರ್ಥವಾಯಿತೇ?!
          * ನಮ್ಮ ಪ್ರಜಾಸತ್ತೆಯಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾಯರ್ಾಂಗಗಳಿಗೆ ಅಧಿಕಾರವನ್ನು ನೀಡಲಾಗಿದ್ದರೂ ಅವುಗಳ ಮೇಲೆ ಜನರ ಪ್ರಾತಿನಿಧಿಕ ಉಸ್ತುವಾರಿ ಇರುವ ಸಾಂಕೇತಿಕ ರಚನೆಗಳಾದರೂ ಇವೆ. ಆದರೆ ಜನಲೋಕಪಾಲ್ ಕರಡಿನಲ್ಲಿ ಅದು ತನ್ನನ್ನು ಈ ಮೂರು ಸಂಸ್ಥೆಗಳಿಗೂ ಮೇಲಿರುವ ಪರಮೋಚ್ಛ ಸಂಸ್ಥೆಯಾಗಿ ಕಲ್ಪಿಸಿ ಕೊಳ್ಳುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ಜನತೆಯ ಪ್ರಾತಿನಿಧಿಕ ಉಸ್ತುವಾರಿಯನ್ನಾದರೂ ತನ್ನ ಮೇಲೆ ಇರಿಸಿಕೊಳ್ಳುವ ಯಾವುದೇ ಸೂಚನೆಯನ್ನು ಒಪ್ಪಿಕೊಳ್ಳುತ್ತಿಲ್ಲ.
ಇದೆಲ್ಲದರ ಆರ್ಥ ಏನೆಂದರೆ ಇತ್ತ ಸಕರ್ಾರಿ ತಂಡ ರಚಿಸಿರುವ  ಲೋಕಪಾಲ್ ಕರಡಿಗೆ ಹಲ್ಲುಗಳಿಲ್ಲದಿದ್ದರೆ, ಅತ್ತ ಅಣ್ಣಾ ತಂಡ ರಚಿಸುರುವ ಜನಲೋಕಪಾಲ್ ಕರಡು ಒಂದು ರಾಕ್ಷಸನನ್ನು ಸೃಷ್ಟಿಸುವ ಎಲ್ಲ ಲಕ್ಷಣಗಳನ್ನು ಹೊಂದಿದೆ....
ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಅದ್ಭುತವಾಗಿದೆ ಎಂಬುದನ್ನು ಯಾರೂ ಒಪ್ಪುವುದಿಲ್ಲ. ಆದರೆ ಈ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಲು ಇವತ್ತು ಅಣ್ಣಾ ಹಜಾರೆ ಅವರ ತಂಡ ಹಾಗು ನಮ್ಮ ಮಧ್ಯಮವರ್ಗ ಆಗ್ರಹಿಸುತ್ತಿರುವಂತೆ ಒಂದು ಸ್ವತಂತ್ರ ಸಂಸ್ಥೆಯನ್ನು ಸೃಷ್ಟಿಸಿ, ಅದಕ್ಕೆ ಮಿತಿ ಇಲ್ಲದ ಅಧಿಕಾರವನ್ನು ನೀಡಿ, ಅದು ಯಾರಿಗೂ ಉತ್ತರದಾಯಿ ಅಲ್ಲ ಎನ್ನುವುದು ಇತ್ತ ಪ್ರಜಾಸತ್ತೆಯೂ ಅಲ್ಲ, ಅತ್ತ ಎಲ್ಲ ದೋಷಗಳನ್ನು ನಿವಾರಿಸಬಲ್ಲ ಮಾಯಾ ದಂಡವೂ ಅಲ್ಲ. ಅಣ್ಣಾ ಹಜಾರೆಯವರು ಪ್ರಾಮಾಣಿಕರು ನಿಜ. ಆದರೆ ಅವರ ತಂಡ ರಚಿಸಿರುವ ಕರಡಿನಲ್ಲಿರುವ ದೋಷಗಳಿಗೆ ಅಣ್ಣಾ ಕುರುಡರಾಗಿದ್ದಾರೆ....
- ಗೌರಿ ಲಂಕೇಶ

Sunday, August 21, 2011

ಜನಲೋಕಪಾಲ ಬೇಕು, ಆದರೆ ಈ ದಾರಿಯಿಂದ ಅಲ್ಲ....


ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ. ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ?


ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ ಆರಂಭಗೊಂಡ ಸಂದರ್ಭದಲ್ಲಿ ನಡೆದ ರ‍್ಯಾಲಿಯಲ್ಲಿ, ನಂತರ ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಸಮಾಜದ ವಿವಿದ ಜನವರ್ಗಗಳು ಸ್ಟ್ರೈಕು, ಧರಣಿ ಅಂತೆಲ್ಲಾ ನಡೆಸುವಾಗ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದ ಐಟಿ ಗಯ್‌ಗಳು ಅಲ್ಲಿ ಅಂದು ಹೋರಾಟದ ಹುಮ್ಮಸ್ಸಿನಲ್ಲಿ ಕುಳಿತದ್ದು ಕಂಡು ಬಹಳ ಖುಷಿಗೊಂಡಿದ್ದೆ. ನಂತರ ಇತ್ತೀಚೆಗೆ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲ್ ತಂಡ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕೇಜ್ರಿವಾಲ್ ಅವರು ತಮ್ಮ ಕರಡಿನ ಪರವಾಗಿ ಮಂಡಿಸಿದ ಪ್ರತಿಯೊಂದಕ್ಕೂ ಅಲ್ಲಿದ್ದ ಎಲ್ಲರಂತೆ ನಾನೂ ಬೆಂಬಲ ಸೂಚಿಸಿದ್ದೆ. ಸರ್ಕಾರಿ ಲೋಕಪಾಲ ಮಸೂದೆಯನ್ನು ಎಲ್ಲರಂತೆ ನಾನೂ ಖಂಡಿಸಿದೆ. ಅರವಿಂದ ಕೇಜ್ರಿವಾಲ್ ಕರಡು ರಚಿಸಿ ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ತಿದ್ದುಪಡಿ ಮಾಡಿರುವ ಜನಲೋಕಪಾಲ ಕರಡನ್ನು ಪೂರ್ತಿ ಓದಿ ಅರ್ಥಮಾಡಿಕೊಂಡ ಮೇಲೆ ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಅದು ಜಾರಿಯಾಗಬೇಕು ಎನ್ನುವುದು. ಅದು ಭ್ರಷ್ಟಾಚಾರವನ್ನು ಪೂರ್ತಿ ನಿರ್ಮೂಲಿಸುವುದಿಲ್ಲ ಎನ್ನುವುದು ನಿಜವಾದರೂ ಭ್ರಷ್ಟರಿಗೆ ಮೂಗುದಾಣವನ್ನಂತೂ ಹಾಕುವುದರಲ್ಲಿ ಸಂಶಯವಿಲ್ಲ.  ಈ ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಂಡು ಸಹಜವಾದ ಸಿಟ್ಟು ಆಕ್ರೋಶ ಎಲ್ಲರಿಗಿರುವಂತೆ ನನಗೂ ಇರುವುದು ವಿಶೇಷವೇನಲ್ಲ. ಅದಕ್ಕಾಗಿ ಏನಾದರೂ ಪರಿಹಾರ ಬೇಕೆಂದು ಪರಿತಪಿಸುತ್ತಿರುವ ಕೋಟ್ಯಾಂತರ ಜನರಲ್ಲಿ ನಾನೂ ಒಬ್ಬ. ಭ್ರಷ್ಟಾಚಾರದ ಕಾರ್ಗತ್ತಲಿನಲ್ಲಿ ಜನಲೋಕಪಾಲವು ಒಂದು ಸಣ್ಣ ಬೆಳಕಿಂಡಿ ಎನ್ನುವುದು ನನ್ನ ಅಭಿಪ್ರಾಯ.


ಇದಿಷ್ಟು ನನ್ನ ಆಂಟಿಸಿಪೇಟರಿ ಬೇಲ್.


ಈಗ ವಿಷಯಕ್ಕೆ ಬರೋಣ. ಬರೀ ಪ್ರಾಮಾಣಿಕತೆ, ಬದ್ಧತೆಗಳು ಯಾವ ಹೋರಾಟವನ್ನೂ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಚಳವಳಿಯ ಯಶಸ್ಸಿಗೆ ಅತ್ಯವಶ್ಯಕವಾಗಿ ಬೇಕಾದದ್ದು ವ್ಯವಸ್ಥಿತ ಸಂಘಟನೆ ಹಾಗೂ ದೂರದೃಷ್ಟಿ. ಅಣ್ಣಾ ಹಜಾರೆಯವರು ಬಂಧಿತರಾದ ನಂತರದಲ್ಲಿ ಇಡೀ ಚಳವಳಿ ಒಂದು ನೆಗೆತವನ್ನು  ಸಾಧಿಸಿರುವ ಹೊತ್ತಿನಲ್ಲಿ ಕೊಂಚ ಹಿಂತಿರುಗಿ ನೋಡಿದರೆ ಸ್ಪಷ್ಟವಾಗಿ ತೋರುವುದೆಂದರೆ ಈ ಚಳವಳಿಗೆ ವ್ಯವಸ್ಥಿತ ಸಂಘಟನೆಯಾಗಲೀ ದೂರದೃಷ್ಟಿಯಾಗಲೀ ಇಲ್ಲ ಎನ್ನುವುದು. ಈ ಸಂಘಟನೆ ಎಷ್ಟೊಂದು ಜಾಳುಜಾಳಾಗಿದೆ ಎಂದರೆ ಅಣ್ಣಾ ಹಜಾರೆಗೆ ಬಿಡಿ ಸ್ವತಃ ಕೇಜ್ರೀವಾಲ್, ಕಿರಣ್ ಬೇಡಿಯವರಿಗೇ ಅದರ ಮೇಲೆ ಹಿಡಿತ ಇಲ್ಲ. ಬೆಂಗಳೂರಿನಲ್ಲಿ ಚಳವಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವವರು ಲೋಕಸತ್ತಾ ಪಾರ್ಟಿ ಹಾಗೂ ರವಿಶಂಕರ್ ಗುರೂಜಿ ಶಿಷ್ಯರು. ಇವರಿಬ್ಬರಿಗೂ ಪ್ರತ್ಯೇಕ ಅಜೆಂಡಾಗಳಿವೆ. ಬಿಜೆಪಿ ಹಾಗೂ ಅಬ್ಬರಿಸಿ ಬೊಬ್ಬಿಡುವ ವಿದೂಷಕರ ಪರಿಷತ್ತಿನವರು ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಣ್ಣಾ ಅವರ ಜನಲೋಕಪಾಲದ ಬಗೆಗೆ ಅವರಿಗೆ ಸಂಪೂರ್ಣ ಭಿನ್ನಾಭಿಪ್ರಾಯವಿದೆ. ಅಂದರೆ ಅವರಿಗೆ ಈ ದೇಶದಲ್ಲಿ ಭ್ರಷ್ಟಾಚಾರ ನಿಯಮತ್ರಣವಾಗುವುದು ಬೇಕಾಗೇ ಇಲ್ಲ. ಅವರ ಹಿಡನ್ ಅಜೆಂಡಾ ಏನಿದ್ದರೂ ಕಾಂಗ್ರೆಸ್ ಬೀಳಿಸುವುದು. ಮೊನ್ನೆ ಸಂತೋಷ್ ಹೆಗಡೆ ವರದಿ ನೀಡಿದ್ದ ದಿನವೇ ಎಬಿವಿಪಿ ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಕನಿಷ್ಠ ಖಂಡಿಸುವ ಪ್ರಾಮಾಣಿಕತೆಯನ್ನು ಎಬಿವಿಪಿ ತೋರಲಿಲ್ಲ ಎನ್ನುವುದೇ ಅದರ ಇಬ್ಬಂದಿತನವನ್ನು ತೋರಿಸುತ್ತದೆ. ಇದೆಲ್ಲಾ ಟೀಂ ಅಣ್ಣಾಗೆ ತಿಳಿದಿಲ್ಲವೇ? ತಿಳಿದೂ ಇಂತಹವರನ್ನು ದೂರ ಇಟ್ಟು ಚಳವಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅಂತಿಮವಾಗಿ ದುರ್ಬಲಗೊಳ್ಳುವುದು ಇಡೀ ಚಳವಳಿಯೇ ಅಲ್ಲವೇ? ಬೆಂಗಳೂರಿನಲ್ಲಿ ಭಾಷಣ ಮಾಡಿದ ಅಣ್ಣಾ ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಮಾತಾಡಿದ್ದರೂ ಸಮಾಧಾನವಾಗುತ್ತಿತ್ತು. ಆದರೆ ಅವರಿಗ್ಯಾಕೆ ಜಾಣಕುರುಡು ಎಂದು ತಿಳಿಯಲಿಲ್ಲ.


ನಿಜ. ಇಂದು ಇಡೀ ದೇಶದಲ್ಲಿ ಒಂದು ಗಣನೀಯ ಮಟ್ಟದ ಜನರನ್ನು ಕದಲಿಸುವ ಶಕ್ತಿ ಇದ್ದರೆ ಅದು ಅಣ್ಣಾ ಹಜಾರೆಗೆ ಮಾತ್ರ. ಅದು ಮಾಧ್ಯಮಗಳ ಹೈಪ್ ಇರಲಿ ಮತ್ತೇನೇ ಇರಲಿ. ಇಂದು ಸಹಸ್ರಾರು ಯುವಕರು, ವಿದ್ಯಾರ್ಥಿಗಳು, ನಾಗರಿಕರಿಗೆ ಅಣ್ಣಾ ಒಂದು ಆಶಯ. ಹೀಗಾಗಿಯೇ ಅಣ್ಣಾ ಅವರ ಮೇಲೆ ಇರುವ ಹೊಣೆಗಾರಿಕೆಯೂ ಹೆಚ್ಚಿನದ್ದು. ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ದೇಶದ ಹಿತದಿಂದ ಹುಷಾರಾಗಿ ಇಡಬೇಕಾದ ಜವಾಬ್ದಾರಿ ಅವರದ್ದಾಗಿದೆ. ಆದರೆ ಇಲ್ಲಿ ಅಂತಹ ತಾಳ್ಮೆಯ, ಹುಷಾರಿತನದಲ್ಲಿ ಅವರು ಹೀಗುತ್ತಿಲ್ಲ. ಬರೀ ಭಾವೋನ್ಮಾದದಲ್ಲೇ ಚಳವಳಿಯನ್ನು ಕೊಂಡೊಯ್ಯುತ್ತಿರುವುದು ನಿಚ್ಚಳವಾಗಿದೆ. ಈ ಚಳವಳಿ ಮಧ್ಯಮವರ್ಗದ ಜೊತೆ ಸಮಾಜದ ಬಹುದೊಡ್ಡ ವರ್ಗವಾದ ರೈತಾಪಿ, ಕಾರ್ಮಿಕರು, ಆದಿವಾಸಿಗಳನ್ನು ಒಳಗೊಳ್ಳಲು ಏನು ಮಾಡುತ್ತಿದೆ?. ಕೇಜ್ರಿವಾಲ್‌ರ ಸಂಘಟನೆಗೆ ಅದರ ಅಗತ್ಯವೇ ಕಾಣುತ್ತಿಲ್ಲ.


ಈಗ ಈ ಚಳವಳಿಯ ತಾಂತ್ರಿಕ ಅಂಶವನ್ನು ನೋಡೋಣ. ಜನಲೋಕಪಾಲವು ಜಾರಿಯಾಗಬೇಕು ನಿಜ. ಟೀಂ ಅಣ್ಣಾ ಹೇಳುವ ಒಂದು ಬಲವಾದ ಲೋಕಪಾಲ್ ಕಾಯ್ದೆಯನ್ನು ಜಾರಿಗೆ ತರಲು ಯಾವೊಂದು ರಾಜಕೀಯ ಪಕ್ಷಕ್ಕೂ ಇಚ್ಛೆಯಿಲ್ಲ. ಹಾಗಾಗಿ ಅವರು ಒಪ್ಪಿಗೆ ಕೊಡುವುದಿಲ್ಲ. ಆದರೆ ಅಂತಹ ಕಾಯ್ದೆ ಜಾರಿಯಾಗಬೇಕಾದರೆ ಸಂವಿಧಾನಬದ್ಧವಾಗಿ ಸಂಸತ್ತಿನ ಮೂಲಕವೇ ಜಾರಿಯಾಗಬೇಕು. ಹೀಗಿರುವಾಗ ಇಲ್ಲಿ ಎರಡೇ ದಾರಿ. ಒಂದೋ ಅಣ್ಣಾ ಚಳವಳಿ ಎಲ್ಲಾ ಕ್ಯಾಬಿನೆಟ್ ಸದಸ್ಯರ ಮನವೊಲಿಸಿ ಅದು ಮಂಡನೆಯಾಗುವಂತೆ ನೋಡಿಕೊಳ್ಳುವುದು. ನಂತರ ಸಂಸತ್ ಸದಸ್ಯರ (ಸರಳ ಬಹಮತಕ್ಕೆ ಬೇಕಾದಷ್ಟು) ಮನವೊಲಿಸುವುದು. ಇದು ಸಾಧ್ಯವಾಗದ ಕಾಲಕ್ಕೆ ಟೀಂ ಅಣ್ಣಾ ಒಂದು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಇದಕ್ಕಾಗಿ ಹೋರಾಟ ನಡೆಸುವುದು. ಈ ಎರಡು ದಾರಿಗಳನ್ನು ಬಿಟ್ಟು ಬೇರೆ ದಾರಿ ಎಲ್ಲಿದೆ? ಇದರ ಕುರಿತು ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಅವಧಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರು.


ಹೀಗಿರುವಾಗ ಈ ಚಳವಳಿಯ ಗುರಿಯಾದರೂ ಏನು? ಅಂಧಕ ಕೈಯ ಅಂಧಕ ಹಿಡಿದಂತೆ ಹಜಾರೆಯ ಕೈಯನ್ನು ನಾವುಗಳು ಹಿಡಿಯುತ್ತಿದ್ದೇವೆ ಅನ್ನಿಸುವುದಿಲ್ಲವೇ. ಮಾತ್ರವಲ್ಲಾ ಅಣ್ಣಾ ನಿಮ್ಮ ಹಿಂದೆ ನಾವಿದ್ದೇವೆ. ನೀವು ಪ್ರಾಣ ತ್ಯಾಗಮಾಡಿದರೂ ಅಡ್ಡಿ ಇಲ್ಲ ಎನ್ನುವ ಧೋರಣೆ ತೋರುತ್ತಿರುವ ನಮಗೆ ಯಾವ ಮಟ್ಟಿಗಿನ ಸಿದ್ಧತೆ ಇದೆ?. ಹೆಚ್ಚೆಂದರೆ ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ನಮ್ಮ ಆಕ್ರೋಶ ತೋರಿಸಬಹುದಷ್ಟೇ?.


ಚಳವಳಿ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಕುರಿತು ಯಾವ ಸ್ಪಷ್ಟತೆಯೂ ಇಲ್ಲದೇ ಹೀಗೆ ಭಾವೋನ್ಮಾದದಿಂದ ಮುನ್ನುಗ್ಗುವುದು ಈ ದೇಶಕ್ಕೆ ಒಳ್ಳೆಯದು ಮಾಡುತ್ತದೆಯಾ?


ಇಲ್ಲಿ ನಡೆಯುತ್ತಿರುವ ಚಳವಳಿಯ ಉದ್ದೇಶ ಕೇವಲ ಒಂದು ಕಾಯ್ದೆಯನ್ನು ಜಾರಿ ಮಾಡುವುದು. ಆದರೆ ಅದು ಪಡೆದುಕೊಳ್ಳುತ್ತಿರುವ ಪ್ರಚಾರವ್ಯಾಪ್ತಿ ಮಾತ್ರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುವುದು. ಅಣ್ಣಾ ಇನ್ನೂ  ಹೆಚ್ಚೆಚ್ಚು ದಿನ ಉಪವಾಸ ಮಾಡಿದಂತೆ ಇಡೀ ದೇಶದಲ್ಲಿ (ಮಾಧ್ಯಮ ತಲುಪುವ ದೇಶ) ಇನ್ನಷ್ಟು ಆತಂಕ ಹೆಚ್ಚುತ್ತದೆ. ಆದರೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳ ಬಗ್ಗುವುದು ಕಡಿಮೆ.


ಇಂತಹ ಭಾವೋನ್ಮಾದದ ಹಾಗೂ ಆತಂಕಪೂರಿತ ವಾತಾವರಣದಲ್ಲಿ ಏನಾಗಬಹುದು ಎಂಬ ಆಲೋಚನೆ ನಮ್ಮಿಲ್ಲಿದೆಯೇ? ಇಲ್ಲಿ ಚಳವಳಿಯಲ್ಲಿ ಅಪ್ರಾಮಾಣಿಕವಾಗಿ ಭಾಗವಹಿಸುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳು ದೇಶದಾದ್ಯಂತ ಒಂದು ಪ್ರಕ್ಷೋಭೆ ಸೃಷ್ಟಿಸಲು ಅದನ್ನು ಬಳಸಿಕೊಳ್ಳ ಬಹುದು. ಸರ್ಕಾರ ಹೋರಾಟವನ್ನು ಬಗ್ಗುಬಡಿಯಲು ಇನ್ನಷ್ಟು ಆಕ್ರಮಣಕಾರಿಯಾಗಬಹುದು. ಲಾಠಿಚಾರ್ಜು, ಗೋಲಿಬಾರ್‌ಗಳು ಟೀವಿಗಳಲ್ಲಿ ಮತ್ತಷ್ಟು ರಂಜಕವಾಗಿ ಪ್ರಸಾರವಾಗಬಹುದು. ಟಿಆರ್‌ಪಿ ರೇಟ್ ಹೆಚ್ಚಬಹುದು. ಆದರೆ ಜನಲೋಕಪಾಲ ಜಾರಿಯಾಗುವುದಿಲ್ಲ!


ಇಲ್ಲವಾದರೆ ಅಣ್ಣಾ ಹಜಾರೆ ಮತ್ತು ತಂಡ ಇಡೀ ಸಂಸದೀಯ ಪ್ರಜಾಪ್ರಭುತ್ವವನ್ನು ಬದಲಾಯಿಸಿ ಇನ್ನೂ ಉತ್ತಮ ವ್ಯವಸ್ಥೆ ಜಾರಿಗೊಳಿಸುವ ಪರ್ಯಾಯ ಸೂಚಿಸಲಿ. ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು. ಆದರೆ ಈಗ ಮಾಡುತ್ತಿರುವಂತೆ ಈ ಚಳವಳಿ ಎಲ್ಲಿಗೆ ತಲುಪುತ್ತದೆ ಎಂಬ ಕನಿಷ್ಠ ದೂರದೃಷ್ಟಿಯಿಲ್ಲದೇ ವಿಚ್ಛಿದ್ರಕಾರಿಗಳಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ನೀಡುವುದು ಬೇಡ. ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಈಜಿಪ್ಟ್‌ನಲ್ಲಿ, ಟುನಿಷಿಯಾದಲ್ಲಿ ಹೀಗೇ ಸ್ವಪ್ರೇರಿತ ದಂಗೆಗಳಾದವು. ಅಧಿಕಾರ ಹಸ್ತಾಂತರವಾಯಿತು. ಆದರೆ ಇಂದು ಈ ದೇಶಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಈ ಹಿಂದಿನ ಕ್ರಾಂತಿಕಾರಿಗಳು ಹೊಸ ವ್ಯವಸ್ಥೆಯನ್ನು ತಾವೇ ನಡೆಸಬೇಕಾಗಿ ಬಂದಿರುವಾಗ ಎಂಥಾ ಗಂಭೀರ ಪಡಿಪಾಟಲುಗಳನ್ನು ಎದುರಿಸುತ್ತಿದ್ದಾರೆ ನೋಡಿ. ಇದೇ ಪರಿಸ್ಥತಿ ಕಳೆದೆರಡು ಮೂರು ವರ್ಷಗಳಲ್ಲಿ ಪಕ್ಕದ ನೇಪಾಳದಲ್ಲೂ ಏರ್ಪಟ್ಟಿದೆ.


ಒಂದು ವಿಷಯವನ್ನು ಮರೆಯದಿರೋಣ. ಚಳವಳಿಯ ಸಂಘಟನೆ, ದಾರಿ ಸರಿಯಿರದಿದ್ದರೆ ಅದು ಸಫಲಗೊಳ್ಳುವ ಸಾಧ್ಯತೆಯೂ ಕಡಿಮೆ. ಒಂದೊಮ್ಮೆ ಈ ಚಳವಳಿ ಕೆಟ್ಟ ರೀತಿಯಲ್ಲಿ ಪರ್ಯಾವಸಾನವಾದರೆ, ವಿಫಲವಾದರೆ ಏನಾಗುತ್ತದೆ? ಏನೂ ಆಗಲ್ಲ. ಮುಂದಿನ ೫೦ ವರ್ಷ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಒಬ್ಬನೇ ಒಬ್ಬ ಈ ದೇಶದಲ್ಲಿರುವುದಿಲ್ಲ. ಅಂತಹ ಹತಾಶೆ, ನಿರಾಸೆ ಎಲ್ಲೆಡೆ ಆವರಿಸಿಕೊಳ್ಳುತ್ತೆ. ಟೀಂ ಅಣ್ಣಾ ಈ ವಿಷಯವನ್ನು ಪರಿಗಣಿಸಿದೆಯಾ? ಇಲ್ಲವೇ ಇಲ್ಲ. ಇದ್ದಿದ್ದರೆ ಅಣ್ಣಾ ಈಗ ಮಾಡುತ್ತಿರುವಂತೆ ಮಾಡುವ ಬದಲು ಮೊದಲು ದೇಶದಾದ್ಯಂತ ಉತ್ತಮ ಸಂಘಟನೆಗೆ ಮುಂದಾಗುತ್ತಿದ್ದರು. ಈಗ ವ್ಯಕ್ತವಾಗುತ್ತಿರುವ ಬೆಂಬಲದ ಮಹಾಪೂರವನ್ನು ಸಾಂಘಿಕ ಶಕ್ತಿಯಾಗಿ ಮಾರ್ಪಡಿಸುತ್ತಿದ್ದರು. ನಿಜವಾದ ದೇಶನಾಯಕವಾಗುತ್ತಿದ್ದರು. ಬೇಕಾದರೆ ಇನ್ನೂ ನಾಲ್ಕು ವರ್ಷ ತಯಾರಿ ನಡೆಸಿ ನಿಜವಾದ ಬದಲಾವಣೆಯ ಹರಿಕಾರನಾಗುತ್ತಿದ್ದರು. ಆದರೆ ಇಲ್ಲಿ ಅಂತಹ ಯಾವ ಲಕ್ಷಣಗಳೂ ಇಲ್ಲ. ಹೀಗಾಗಿ ಈ ಹಿಂದೆ ಉತ್ಸಹಾದಿಂದಲೇ ಅಣ್ಣಾ ಚಳವಳಿಯನ್ನು ಒಂದು ಆಶಯವಾಗಿ ನೋಡಿದ ನನ್ನಂತವರಿಗೆ ನಿರಾಸೆಯಾಗುತ್ತಿದೆ.


ಇವೆಲ್ಲವನ್ನೂ ಹೊರತು ಪಡಿಸಿದ ಮತ್ತೊಂದು ಮುಖ್ಯವಾದ ವಿಷಯವಿದೆ. ಇಂದು ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರು ಒಂದು ಭ್ರಮೆಯಲ್ಲಿರುವುದಂತೂ ಸತ್ಯ. ಅದು ಅಣ್ಣಾ ಗೆದ್ದರೆ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣವಾಗಿಬಿಡುತ್ತದೆ ಎಂಬ ಫೂಲ್ಸ್ ಪ್ಯಾರಡೈಸ್ ಅದು. ನಾವು ಅರ್ಥ ಮಾಡಿಕೊಳ್ಳಬೇಕಿರುವುದಿಷ್ಟೆ. ಈ ದೇಶದಲ್ಲಿ ನೂರು ಜನಲೋಕಪಾಲಗಳು ಬಂದರೂ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಎಲ್ಲಿಯವರೆಗೆ? ಭ್ರಷ್ಟಾಚಾರಕ್ಕೆ ಮೂಲವಾಗಿರುವ ಒಂದು ಆರ್ಥಿಕ ಸಾಮಾಜಿಕ ವ್ಯವಸ್ಥೆ ಇರುವವರೆಗೆ.


ಅಷ್ಟಕ್ಕೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಯಾವಾಗ? ಮತ್ತು ಹೇಗೆ? ಸಂಶಯವೇ ಇಲ್ಲ. ಯಾವಾಗ ನವ ಉದಾರವಾದಿ ನೀತಿಗಳು ಇಲ್ಲಿ ಜಾರಿಯಾದವೋ, ಯಾವಾಗ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ನಿದೇಶಿ ನೇರ ಹೂಡಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹೆಸರಲ್ಲಿ ದಂಡಿದಂಡಿಯಾಗಿ ನುಗ್ಗತೊಡಗಿತೋ, ಯಾವಾಗ ಖಾಸಗೀಕರಣ ಈ ದೇಶದ ಸಾರ್ವಜನಿಕ ಕ್ಷೇತ್ರವನ್ನು ನುಂಗಿ ಹಾಕತೊಡಗಿತ್ತೋ, ಯಾವಾಗ ಸರ್ಕಾರ ನಡೆಸುವವರಿಗೆ ಕೈಗಾರಿಕೆಗಳನ್ನು ನಡೆಸುವ ಕೆಲಸ ತಪ್ಪಿ ಬರೀ ಎಂಒಯುಗಳಿಗೆ ಸಹಿ ಹಾಕುವ, ಹೂಡಿಕೆ ಅಪಹೂಡಿಕೆಗಲನ್ನು ಮ್ಯಾನೇಜ್ ಮಾಡುವ ಕೆಲಸ ಮಾತ್ರ ಉಳಿಯಿತೋ, ಭ್ರಷ್ಟಾಚಾರಕ್ಕೆ ಇನ್ನಿಲ್ಲದ ಅವಕಾಶ ದೊರೆತು ಯಾವಾಗ ದೊಡ್ಡ ಖಾಸಗಿ ಕಾರ್ಪೋರೇಷನ್ ಗಳು, ಕಂಪನಿಗಳು ದೊಡ್ಡ ಮೊತ್ತದ ಆಮಿಷಗಳನ್ನು ಒಡ್ಡತೊಡಗಿದರೋ ಆಗಲೇ ತಾನೆ ಭ್ರಷ್ಟಾಚಾರ ಎನ್ನುವುದು ಸರ್ವಾಂರ್ಯಾಮಿಯೂ, ಸರ್ವಶಕ್ತವೂ, ಸರ್ವವ್ಯಾಪಿಯೂ ಆದದ್ದು? ಈ ದೇಶದ ಆರ್ಥಿಕ ನೀತಿಗಳಲ್ಲೇ ಭ್ರಷ್ಟಚಾರದ ಮೂಲವಡಗಿರುವ ಅದರ ಕುರಿತು ಏನೂ ಮಾತನಾಡದ ಜನಲೋಕಪಾಲವಾಗಲೀ ಲೋಕಪಾಲವಾಗಲೀ ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸುತ್ತದೆ ಹೇಳಿ? ಹೆಚ್ಚೆಂದರೆ ಈಗ ನಾವು ಕರ್ನಾಟಕದಲ್ಲಿ ಹೇಗೆ 'ಲೋಕಾಯುಕ್ತ ಬಲೆಗೆ ಬಿದ್ದ ಹೆಗ್ಗಣ'ಗಳನ್ನು ದಿನನಿತ್ಯ ನೋಡುತ್ತಿದ್ದೇವೆಯೋ ಹಾಗೆ ದೇಶಾದ್ಯಂತ ಹೆಗ್ಗಣಗಳ ಪಟ್ಟಿ ಬೆಳೆಯುತ್ತಾ ಹೋಗಬಹುದು. ಇಂದು ರಾಜಕಾರಣಿಗಳು ಭಾಗಿಯಾಗಿರುವ ಯಾವುದೇ ಹಗರಣಗಳನ್ನು ನೋಡಿ, ಅಲ್ಲಿ ಭ್ರಷ್ಟರು ರಾಜಕಾರಣಿಗಳು ಮಾತ್ರವಲ್ಲ. ಅವರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುವ ಕಾರ್ಪೋರೇಷನ್ ಗಳೂ ಇವೆ. ಆದರೆ ಜನಲೋಕಪಾಲ ಅವುಗಳ ಬಗ್ಗೆ ಎಲ್ಲೂ ಮಾತನಾಡುವುದಿಲ್ಲವಲ್ಲ? ಭ್ರಷ್ಟಾಚಾರ ಒಂದು ಬೃಹತ್ ಆಲದ ಮರವಿದ್ದಂತೆ. ಜನಲೋಕಪಾಲದ ಶಕ್ತಿ ಇರುವುದು ಒಂದು ಕೊಂಬೆಯನ್ನು ಅಲ್ಲಾಡಿಸುವುದಕ್ಕಾಗಿ ಮಾತ್ರ. ಅದರಿಂದಾಗಿ ಅಕ್ಕ ಪಕ್ಕದ ಇನ್ನಷ್ಟು ಕೊಂಬೆಗಳು ಅಲ್ಲಾಡಬಹುದೇ ವಿನಃ ಮರದ ಬುಡು ಅಲ್ಲಾಡುವುದಿಲ್ಲ. ಇನ್ನು ಆ ಮರವನ್ನು ಉರುಳಿಸುವ ಮಾತು ಬಹಳ ದೂರದ್ದು.                                       

ಹರ್ಷಕುಮಾರ್ ಕುಗ್ವೆ

Friday, August 19, 2011

ಯಾರು ಈ ವಿ.ಭಟ್, ಆರ್‌ಬಿ, ಸಂಜಯ ಸರ್? ಏನಿದರ ಹಕೀಕತ್ತು?

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳು ಇವತ್ತು ಸ್ಫೋಟಿಸಿರುವ ಗಣಿಕಪ್ಪ ಕುರಿತ ಸುದ್ದಿಗಳು ಇಡೀ ಪತ್ರಿಕಾರಂಗದಲ್ಲಿ ದೊಡ್ಡ ಪ್ರಮಾಣದ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಎಲ್ಲೆಡೆ ಗುಸುಗುಸು ಚರ್ಚೆ. ಎಸ್‌ಎಂಎಸ್‌ಗಳ ವಿನಿಮಯ. ಪತ್ರಕರ್ತರು ಅಣ್ಣಾ ಹಜಾರೆ ಚಳವಳಿಯ ಬಗ್ಗೆ ಮಾತಾಡೋದನ್ನು ಬಿಟ್ಟು ಪ್ರಜಾವಾಣಿ ಸುದ್ದಿಯನ್ನೇ ಎಲೆಅಡಿಕೆ ಅಗಿದಂತೆ ಅಗಿದು ನುಂಗುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಬಹಿರಂಗ ಆದ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ವರದಿಯಲ್ಲಿ ಇದುವರೆಗೆ ಬಹಿರಂಗವಾಗದೇ ಉಳಿದಿದ್ದ ಭಾಗಗಳು (ಯು.ವಿ ಸಿಂಗ್ ನೇತೃತ್ವದ ತಂಡದ ತನಿಖಾ ವರದಿ) ಈಗ ಹೊರಬಂದಿವೆ. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಗಳು ಈ ಕುರಿತ ಸುದ್ದಿಗಳನ್ನು ಪ್ರಕಟಿಸುತ್ತಿವೆ.

ಎರಡು ದಿನಗಳಿಂದ ಅಕ್ರಮ ಗಣಿಗಾರಿಕೆಯ ಪಾಲುದಾರರಿಂದ ಯಾರು ಯಾರಿಗೆ ಹಣ ಹೋಗಿದೆ ಎಂಬ ಮಾಹಿತಿ ಈ ಪತ್ರಿಕೆಗಳ ವರದಿ ಮೂಲಕ ಗೊತ್ತಾಗಿದೆ. ಡೆಕ್ಕನ್ ಹೆರಾಲ್ಡ್ ಇದುವರೆಗೆ ೨೦೦ ಅಧಿಕಾರಿಗಳ ಪಟ್ಟಿ ಪ್ರಕಟಿಸಿದೆ. ಜನಾರ್ದನ ರೆಡ್ಡಿ ಮತ್ತವರ ಸಂಗಡಿಗರು ಬೇನಾಮಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರದಪುಡಿ ಮಹೇಶ್ ಮತ್ತು ಮಧುಕುಮಾರ್ ವರ್ಮಾ ಲೋಕಾಯುಕ್ತ ವರದಿ ಪ್ರಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರು. ಅವರ ಮೂಲಕ ಹಣ ಸಂದಾಯವಾದ ಬಗ್ಗೆ ಮಾಹಿತಿಯನ್ನು ಐಟಿ ಅಧಿಕಾರಿಗಳು ಸಂಗ್ರಹಿಸಿದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಆ ಪರಿಣಾಮ ಈ ಹೆಸರುಗಳೆಲ್ಲಾ ಹೊರಬಂದಿದೆ. ದಿನಾಂಕ ಜುಲೈ ೩೧, ೨೦೧೦ ರಂದು ಆರ್.ಬಿ ಎನ್ನುವವರಿಗೆ ಮಧುಕುಮಾರ್ ವರ್ಮಾನಿಂದ ೧೦ ಲಕ್ಷ ರೂ ಸಂದಾಯವಾಗಿದೆ. ನಂತರ ವಿ.ಭಟ್ ಎನ್ನುವವರಿಗೆ ಆಗಸ್ಟ್ ೪ ರಂದು ೨೫ ಲಕ್ಷ ರೂ ಹಾಗೂ ಐದು ದಿನಗಳ ನಂತರ (ಆಗಸ್ಟ್ ೯) ರಂದು ಮತ್ತೆ ೫೦ ಲಕ್ಷ ರೂ ಸಂದಾಯವಾಗಿದೆ. ಆಗಸ್ಟ್ ೩೧ ರಂದು ಡೆಕ್ಕನ್ ಕ್ರಾನಿಕಲ್‌ಗೆ ೨೫ ಲಕ್ಷ ರೂ ಸಂದಾಯವಾಗಿದೆ. ಬೆಂಗಳೂರಿನ ಸ್ಥಳೀಯ ಪತ್ರಿಕೆಗಳಿಗೆ ಸಂಜಯ್ ಸರ್ ಎಂಬುವವರ ಮೂಲಕ ೧.೫೨ ಲಕ್ಷ ರೂ ಸಂದಾಯವಾಗಿದೆ. ಅದೇ ದಿನ ಪ್ರೆಸ್ ಕ್ಲಬ್‌ಗೆ ಐದು ಲಕ್ಷ ಕೊಡಲಾಗಿದೆ. ಪತ್ರಿಕೆಗಳಿಗೆ ಪಾವತಿಯಾಗಿದ್ದು ಜಾಹೀರಾತು ಹಣವಾ? ಅಥವಾ ಬೇರಿನ್ನೇನಾದರೂ ಇರಬಹುದೇ? ಡೆಕ್ಕನ್ ಕ್ರಾನಿಕಲ್‌ನವರು ಸೂಕ್ತ ಸ್ಪಷ್ಟನೆ ನೀಡುವರೆ? ಒಂದು ವೇಳೆ ಕ್ರಾನಿಕಲ್‌ನವರು ಹಣ ಪಡೆಯದಿದ್ದರೆ, ಅವರ ಹೆಸರಲ್ಲಿ ಹಣ ಪಡೆದವರು ಯಾರು?

ಯಾರ‍್ಯಾರಿಗೆ ಹಣ ಪಾವತಿಯಾಗಿದೆ ಎಂಬ ಪಟ್ಟಿಯ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳು ಏಳುವುದು ಸಹಜ. ಆದರೆ ಈ ಪೈಕಿ ಬೆಂಗಳೂರು ಪ್ರೆಸ್ ಕ್ಲಬ್ ಪಡೆದ ಐದು ಲಕ್ಷ ರೂ. ಹಣ ನಿಖರವಾಗಿ ಸಾಬೀತಾಗಿದೆ. ಪ್ರೆಸ್‌ಕ್ಲಬ್‌ಗೆ ೪೦ ವರ್ಷ ತುಂಬಿದ ಸಂದರ್ಭದಲ್ಲಿ ೬೦ ಮಂದಿ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಈ ಪತ್ರಕರ್ತರ ನೆನಪಿನ ಕಾಣಿಕೆ (ಬೆಳ್ಳಿ ತಟ್ಟೆ)ಗಾಗಿ ಈ ಹಣವನ್ನು ಬಳಸಿಕೊಳ್ಳಲಾಗಿತ್ತು. ಇದು ಅಧಿಕೃತವಾಗಿ ಕ್ಲಬ್‌ನ ಅಕೌಂಟುಗಳಲ್ಲಿ ದಾಖಲಾಗಿದೆ. ಪ್ರೆಸ್‌ಕ್ಲಬ್‌ನ ಕಳೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಅಜೆಂಡಾಗೆ ತಂದಿದ್ದ ಕೆಲ ಪತ್ರಕರ್ತರು ಕ್ಲಬ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಗಣಿ ದಂಧೆಕೋರರಿಂದ ಡೊನೇಷನ್ ಪಡೆದು ಕ್ಲಬ್ ನಡೆಸಬೇಕಾದ ಅನಿವಾರ್ಯತೆ ಏನು ಎಂದು ಪ್ರಶ್ನಿಸಿದ್ದರು. ಕೊಡುಗೆ ನೀಡಿದ ಜನಾರ್ದನ ರೆಡ್ಡಿ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲೂ ಉಪಸ್ಥಿತರಿದ್ದರು. ಆದರೀಗ ಕ್ಲಬ್‌ಗೆ ದೇಣಿಗೆ ನೀಡಿದ್ದು ಮಧುಶ್ರೀ ಎಂಟರ್‌ಪ್ರೈಸಸ್ ಎಂಬುದು ಪತ್ರಿಕೆಗಳ ವರದಿ ಮೂಲಕ ಬಯಲಾಗಿದೆ.

ಈ ಆರ್.ಬಿ, ವಿ.ಭಟ್, ಸಂಜಯ್ ಸರ್ - ಇವರೆಲ್ಲ ಯಾರು ಎನ್ನುವುದು ಸಹಜವಾಗಿಯೇ ಕುತೂಹಲದ ಸಂಗತಿ. ಆ ಕುತೂಹಲ ನಮಗೂ ಇದೆ. ಒಂದು ವರ್ಷದ ಹಿಂದೆ ಇಷ್ಟು ದೊಡ್ಡ  ಮೊತ್ತ (ಕೆಲವರಿಗೆ ಇದು ಪೀನಟ್ಸ್ ಅನ್ನಿಸಬಹುದು.) ರವಾನೆಯಾಗಿದ್ದು ಯಾವ ಕಾರಣಕ್ಕೆ ಎನ್ನುವುದೂ ಸಹ ನಿಗೂಢ. ಈ ಬಗ್ಗೆ ಏನಾದರೂ ತನಿಖೆ ನಡೆಯುತ್ತಾ? ಗೊತ್ತಿಲ್ಲ.

ಇವತ್ತು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ದೊಡ್ಡ ಮಟ್ಟದ ಆಂದೋಲನವೇ ನಡೆಯುತ್ತಿದೆ. ಇದನ್ನು ಇಡೀ ಮೀಡಿಯಾ ಜಗತ್ತು ಒಂದೇ ಧ್ವನಿಯಲ್ಲಿ ಬೆಂಬಲಿಸುತ್ತಿದೆ. ದುರದೃಷ್ಟವೆಂದರೆ ಪತ್ರಕರ್ತರು ಲೋಕಾಯುಕ್ತದ ವ್ಯಾಪ್ತಿಗೂ ಬರೋದಿಲ್ಲ, ಅಣ್ಣಾ ಹಜಾರೆಯವರ ಜನಲೋಕಪಾಲದ ವ್ಯಾಪ್ತಿಗೂ ಬರೋದಿಲ್ಲ. ಹೀಗಾಗಿ ಬದನೇಕಾಯಿ ತಿನ್ನುತ್ತಲೇ ಆಚಾರ ಹೇಳುವುದು ಪತ್ರಕರ್ತರಿಗೆ ಬಹಳ ಸುಲಭ. ಅಣ್ಣಾ ಹಜಾರೆ ಜಿಂದಾಬಾದ್!

ಕೊನೆಮಾತು: ಈಗ್ಗೆ ಕೆಲವು ದಿನಗಳ ಹಿಂದೆ ೨೪/೭ ಸುದ್ದಿ ವಾಹಿನಿಯೊಂದರಲ್ಲಿ ಯಡಿಯೂರಪ್ಪ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ಉತ್ಸಾಹಿ ಪತ್ರಕರ್ತರೊಬ್ಬರು ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿಯವರ ಬಗ್ಗೆ ಮಾತನಾಡುತ್ತ - ಹವಾಲಾ ಹಗರಣದಲ್ಲಿ ಡೈರಿಯೊಂದರಲ್ಲಿ ತಮ್ಮ ಹೆಸರನ್ನು ಸೂಚಿಸಬಹುದಾದ ಸಂಕೇತಗಳು ಸ್ಫುಟವಾಗಿ (only initials) ನಮೂದಾಗಿದ್ದ ಕಾರಣಕ್ಕೆ ಅಡ್ವಾಣಿ, ಆರೋಪದಿಂದ ಮುಕ್ತನಾಗುವ ತನಕ ಚುನಾವಣಾ ರಾಜಕಾರಣದಿಂದ ದೂರ ಉಳಿದರು. ಅಂತಹ ನೈತಿಕತೆ ಈಗಿನ ಯಡಿಯೂರಪ್ಪನಿಗೆಲ್ಲಿದೆ ಎಂದು ಟೀಕಿಸಿದ್ದರು. ಆ ಮಾತು ಇಂದು ಅದೇಕೋ ನೆನಪಾಯಿತು.

Thursday, August 18, 2011

ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ...


ನೂರೈವತ್ತು ಕೋಟಿ ಜನರು ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತದೆ  ಸಿಎನ್ಎನ್ ಐಬಿಎನ್ ಎಂಬ ಒಂದು ಟಿವಿ ಚಾನಲ್. ಯಾರು ಈ ನೂರೈವತ್ತು ಕೋಟಿ ಜನ? ಎಲ್ಲಿಂದ ಬಂದರು? ದೇಶದ ಜನಸಂಖ್ಯೆಯೇ ೧೧೦ ಕೋಟಿ ಇರಬಹುದು. ಇನ್ನೂ ಐವತ್ತು ವರ್ಷಗಳಲ್ಲಿ ಹುಟ್ಟುವವರನ್ನು ಸೇರಿಸಿಕೊಂಡಿಯೇ ಈ ಚಾನಲ್ ಬೆಂಬಲ ಘೋಷಿಸುತ್ತಿದೆಯೇ? ಈ ನೂರೈವತ್ತು ಕೋಟಿ ಜನರಲ್ಲಿ ದೇಶದ ಹಳ್ಳಿಹಳ್ಳಿಗಳಲ್ಲಿ ಇರುವ ರೈತ ಇದ್ದಾನೆಯೇ? ದಿನಕ್ಕೆ ಹತ್ತಿಪ್ಪತ್ತು ರೂಪಾಯಿಯಿಂದ ಎಂಭತ್ತು ರೂಪಾಯಿಗಳವರೆಗೆ ದುಡಿಯುವ ಕೂಲಿ ಕಾರ್ಮಿಕರಿದ್ದಾರೆಯೇ? ಬೀದಿ ಕಸ ಗುಡಿಸುವವರು, ಮಲ ಎತ್ತುವವರು, ಕಾಡುಗಳಲ್ಲಿ ಇರುವ ಬುಡಕಟ್ಟು ಜನರು, ಅಣ್ಣಾ ಹಜಾರೆ ಹೆಸರನ್ನೇ ಕೇಳದೇ ಇರಬಹುದಾದ ಅಮಾಯಕ, ಮುಗ್ಧ ಬಡಜನರು ಇದ್ದಾರೆಯೇ?

ಯಾಕೆ ನಮ್ಮ ಚಾನಲ್‌ಗಳು-ಪತ್ರಿಕೆಗಳು ಹೀಗೆ ಹುಚ್ಚುಹುಚ್ಚಾಗಿ ವರ್ತಿಸುತ್ತಿವೆ? ಸುಳ್ಳುಗಳನ್ನೇ ಹೇಳುತ್ತಿವೆ? ಅಣ್ಣಾ ಬೆನ್ನ ಹಿಂದೆ ಇಡೀ ದೇಶವೇ ಇದೆ ಎಂದು ಪದೇಪದೇ ಬೊಬ್ಬೆ ಹೊಡೆಯುತ್ತಿವೆ?

ನಿಜ, ಅಣ್ಣಾ ಹಜಾರೆ ಹೋರಾಟಕ್ಕೆ ಗಣನೀಯ ಪ್ರಮಾಣದ ಜನರು ಬೆಂಬಲ ನೀಡುತ್ತಿರುವುದಂತೂ ನಿಜ. ಇತ್ತೀಚಿನ ದಿನಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿ ಅಣ್ಣಾ ಪರವಾಗಿ ಒಂದು ಪ್ರತಿಭಟನೆಯ ಅಲೆ ಎದ್ದಿರುವುದೂ ನಿಜ. ಆದರೆ ಇಡೀ ದೇಶವೇ ಬೆನ್ನಿಗಿದೆ ಎಂಬ ಉತ್ಪ್ರೇಕ್ಷೆ ಯಾಕೆ?

ಚಾನಲ್ ಗಳಲ್ಲಿ ಮಾತನಾಡುವವ ವರದಿಗಾರ-ವರದಿಗಾರ್ತಿಯರನ್ನು ಗಮನಿಸಿ. ಅವರು ಚಳವಳಿಯ ಕಾರ್ಯಕರ್ತರಿಗಿಂತ ಹೆಚ್ಚು ಭಾವಾವೇಶಕ್ಕೆ ಒಳಗಾಗಿದ್ದಾರೆ. ಇಡೀ ವಿವಾದದ ಒಂದು ಮುಖವಷ್ಟೇ ಅವರಿಗೆ ಬೇಕು, ಒಂದೇ ಕಡೆ ನಿಂತು ಅವರು ವಾದಿಸುತ್ತಿದ್ದಾರೆ, ತಾವೇ ಜಡ್ಜ್‌ಮೆಂಟ್ ಕೊಡುತ್ತಿದ್ದಾರೆ.

ಅಣ್ಣಾ ಹಜಾರೆ ಬಂಧನಕ್ಕೆ ಸಂಬಂಧಿಸಿದಂತೆಯೂ ಮಾಧ್ಯಮಗಳು ಸತ್ಯವನ್ನು ಹೇಳಲಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಯಾವುದೇ ಷರತ್ತುಗಳನ್ನು ವಿಧಿಸದೆ ಸಾವಿರಾರು ಜನರು ಸೇರುವ ಅಣ್ಣಾ ಚಳವಳಿಯನ್ನು ನಡೆಸಲು ಅನುಮತಿ ನೀಡಲು ಸಾಧ್ಯವೇ ಎಂಬ ಗಂಭೀರ ವಿಷಯವನ್ನು ಮರೆಮಾಚಲಾಯಿತು. ಇಂಥ ಚಳವಳಿಗಳ ಮೇಲಿನ ಕೆಲ ನಿಯಂತ್ರಣಗಳ ಕುರಿತು ಸುಪ್ರೀಂ ಕೊರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳು ನೀಡಿರುವ ನಿರ್ದೇಶನಗಳ ಕುರಿತು ಮಾಧ್ಯಮಗಳು ಮಾತನಾಡಲಿಲ್ಲ. ಒಂದು ವೇಳೆ ಲಕ್ಷಾಂತರ ಜನರು ನೆರೆದು ಯಾರೋ ಕಿಡಿಗೇಡಿಗಳಿಂದ ಅನಾಹುತವಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನೂ ಇವು ಕೇಳಿಕೊಳ್ಳಲಿಲ್ಲ.

ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಚಳವಳಿಗೆ ಮುಂದಾದ ಅಣ್ಣಾ ಹಜಾರೆಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸರು ಅವರ ನ್ಯಾಯಾಂಗ ಬಂಧನವನ್ನು ಕೇಳಿಯೇ ಇರಲಿಲ್ಲ. ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಲು ಹೊರಟಿರುವುದು ನಿಜ ಎಂದು ಅಣ್ಣಾ ಹೇಳಿದಾಗ, ನ್ಯಾಯಾಧೀಶರು ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಕೇಳಿದ್ದಾರೆ. ಅಣ್ಣಾ ಅದಕ್ಕೆ ಒಪ್ಪಿಗೆ ನೀಡಿದ ಮೇಲೆ ಒಂದು ವಾರದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಪೂರ್ಣ ವಿವರವನ್ನು ಯಾವ ಮಾಧ್ಯಮವೂ ಸರಿಯಾಗಿ ಹೇಳಲೇ ಇಲ್ಲ.

ತಿಹಾರ್ ಜೈಲಿನಲ್ಲಿ ಕುಳಿತ ಅಣ್ಣಾ ಹಜಾರೆ ಬಿಡುಗಡೆ ಆದೇಶ ಬಂದ ಮೇಲೂ ಹೊರಗೆ ಬರಲಿಲ್ಲ. ಕಡೆಗೆ ಪೊಲೀಸರ ಜತೆ ಒಪ್ಪಂದ ಮಾಡಿಕೊಂಡು ೧೫ ದಿನಗಳ ಉಪವಾಸಕ್ಕೆ ಒಪ್ಪಿಕೊಂಡರು. ಇದನ್ನೂ ನಮ್ಮ ಮೀಡಿಯಾ ಅಣ್ಣಾ ಹಜಾರೆಗೆ ದೊರೆತ ಜಯ ಎಂದು ಹೇಳಿದವು. ಇದೆಂಥ ಜಯ? ಸರ್ಕಾರವೇನು ಜನ ಲೋಕಪಾಲವನ್ನು ಜಾರಿಗೊಳಿಸುತ್ತೇವೆಂದು ಹೇಳಿದೆಯೇ?

ಮಾಧ್ಯಮಗಳಿಗೆ ಸಂಸದೀಯ ಪ್ರಜಾಸತ್ತೆಯ ಕುರಿತು ಕನಿಷ್ಠ ಗೌರವವೂ ಇದ್ದಂತಿಲ್ಲ. ಸಂಸದೀಯ ಪ್ರಜಾಸತ್ತೆಯನ್ನು ದುರ್ಬಲಗೊಳಿಸಿದರೆ ದೇಶ ಅರಾಜಕ ಪರಿಸ್ಥಿತಿಗೆ ದೂಡಲ್ಪಡುತ್ತದೆ ಎಂಬುದೂ ಅವುಗಳಿಗೆ ಗೊತ್ತಿದ್ದಂತಿಲ್ಲ. ಜನರಿಂದ ಆಯ್ಕೆಯಾದವರೇ ಕಾನೂನು ರೂಪಿಸಬೇಕು ಎಂಬ ಸಂವಿಧಾನದ ಮೂಲ ಅಂಶವೂ ಅವುಗಳ ಗಮನದಲ್ಲಿಲ್ಲ. ಆಗಸ್ಟ್ ೧೫ರಂದು ಯಾವ ಮುಖ ಹೊತ್ತು ರಾಷ್ಟ್ರಧ್ವಜ ಹಾರಿಸುತ್ತೀರಿ ಎಂದು ಅಣ್ಣಾ ಹಜಾರೆಯವರು ಪ್ರಧಾನಿಗೊಂದು ಪತ್ರ ಬರೆದರೆ ಅದು ಅವರಿಗೆ ರೋಮಾಂಚನದ ಸುದ್ದಿಯಾಗುತ್ತದೆ; ತಲೆ ತಗ್ಗಿಸುವ, ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುವ, ಸಾಂವಿಧಾನಿಕ ಸಂಸ್ಥೆ-ಧ್ವಜದ ಗೌರವವನ್ನು ಹಾಳುಗೆಡಹುವ ಹೇಳಿಕೆಯಂತೆ ಕಾಣಿಸುವುದಿಲ್ಲ.

ಅಣ್ಣಾ ಮತ್ತು ತಂಡ ಇಡೀ ಸಂಸತ್ತಿನ ಪರಮಾಧಿಕಾರವನ್ನೇ ಹೈಜಾಕ್ ಮಾಡುವ ಬದಲು ಸಂಸತ್ತನ್ನು ಅಧಿಕೃತ ಮಾರ್ಗದಲ್ಲಿ ಪ್ರವೇಶಿಸಲು ಅವರು ಯಾಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆಯನ್ನು ಯಾವ ಮೀಡಿಯಾ ಕೂಡ ಮುಂದೆ ಮಾಡುತ್ತಿಲ್ಲ. ಜನ ಲೋಕಪಾಲ ಎಂಬುದು ಒಂದು ಮಂತ್ರದಂಡದಂಥ ಕಾಯ್ದೆ. ಅದನ್ನು ವಾಮಮಾರ್ಗದಲ್ಲಾದರೂ ಸರಿ, ಬ್ಲಾಕ್‌ಮೇಲ್ ಮಾಡಿಯಾದರೂ ಸರಿ ಸಂಸತ್ತಿನಲ್ಲಿ ಪಾಸ್ ಮಾಡಿಸಬೇಕು ಎಂದು ಹೊರಟಿವೆ ಮಾಧ್ಯಮಗಳು. ಸಂಸತ್ ಸದಸ್ಯರೆಲ್ಲ ಕಳ್ಳರು ಎಂಬ ಧಾಟಿಯಲ್ಲಿ ಮಾತನಾಡುತ್ತಿರುವ ಅಣ್ಣಾ ಟೀಂ, ಚುನಾವಣಾ ವ್ಯವಸ್ಥೆ ಸುಧಾರಣೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಚುನಾವಣಾ ವ್ಯವಸ್ಥೆ ಸುಧಾರಣೆಯಾದರೆ ತನ್ನಿಂತಾನೇ ಪ್ರಾಮಾಣಿಕರು ಆರಿಸಿ ಬರುತ್ತಾರಲ್ಲವೇ? ತನ್ನಿಂತಾನೇ ಭ್ರಷ್ಟಾಚಾರದ ಪ್ರಮಾಣವೂ ಕುಸಿಯುತ್ತದಲ್ಲವೇ? ಹೀಗಂತ ಯಾರೂ ಕೇಳುತ್ತಲೇ ಇಲ್ಲ.

ಅಷ್ಟಕ್ಕೂ ಅಣ್ಣಾ ಹಜಾರೆ ಚಳವಳಿ ಒಂದು ರಾಜಕೀಯ ಹೋರಾಟವೇ ಅಲ್ಲವೇ? ಅದನ್ನು ಇಡಿಇಡಿಯಾಗಿ ಹ್ಯಾಂಡಲ್ ಮಾಡುತ್ತಿರುವುದು ಸಂಘ ಪರಿವಾರವೇ ಅಲ್ಲವೇ? ಭೂಷಣ್‌ಗಳು, ಕೇಜ್ರಿವಾಲ್‌ಗಳು, ಬೇಡಿಗಳು, ಅಗ್ನಿವೇಶ್‌ಗಳು, ರಾಮದೇವ್‌ಗಳ ಅತ್ಯಂತಿಕ ಉದ್ದೇಶವಾದರೂ ಏನು? ಜನ ಲೋಕಪಾಲಕ್ಕೆ ಹೊರತಾಗಿ ಅವರ ಬಳಿ ಇರುವ ಇತರ ಅಜೆಂಡಾಗಳು ಯಾವುವು? ಭ್ರಷ್ಟಾಚಾರದ ಹಾಗೆಯೇ ದೇಶವನ್ನು ಕಿತ್ತು ತಿನ್ನುತ್ತಿರುವ ಜಾತೀಯತೆ, ಧರ್ಮಾಂಧತೆ, ಅಸ್ಪೃಶ್ಯತೆ, ರೈತರ ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಇವರ ನಿಲುವುಗಳು ಏನು? ಈ ಚಳವಳಿಗೆ ನಿಜಕ್ಕೂ ಒಂದು ಸೈದ್ಧಾಂತಿಕ ಹಿನ್ನೆಲೆ ಇದೆಯೇ? ದೂರದರ್ಶಿತ್ವ ಇದೆಯೇ? ದೂರಗಾಮಿ ಯೋಜನೆಗಳು ಇವೆಯೇ? ನಮ್ಮ ಮೀಡಿಯಾ ಇವತ್ತಿನವರೆಗೆ ಇವರನ್ನು ಪ್ರಶ್ನಿಸಿದ ಹಾಗೆ ಕಾಣುತ್ತಿಲ್ಲ.

ಗಣಿ ಹಗರಣದಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾದಾಗ, ಮುಖ್ಯಮಂತ್ರಿಯೇ ಹತ್ತಾರು ಭೂ ಹಗರಣಗಳಲ್ಲಿ ಸಿಕ್ಕಿಬಿದ್ದಾಗ, ದಲಿತರು-ದುರ್ಬಲರ ಮೇಲೆ ದೌರ್ಜನ್ಯಗಳು ನಡೆದಾಗ, ರೈತರ ಮೇಲೆ ಗೋಲಿಬಾರ್-ಲಾಠಿಚಾರ್ಜ್‌ಗಳು ನಡೆದಾಗ ಇದೇ ಫ್ರೀಡಂ ಪಾರ್ಕಿನಲ್ಲಿ ಯಾರೂ ಕಾಣಿಸಿಕೊಳ್ಳಲಿಲ್ಲವಲ್ಲ, ಯಾಕೆ? ಈಗ ಇದ್ದಕ್ಕಿದ್ದಂತೆ ಎದ್ದುನಿಂತಿರುವ ಸಮೂಹಸನ್ನಿಯಿಂದ ಚೀರಾಡುತ್ತಿರುವ ಗುಂಪಾದರೂ ಯಾವುದು? ಅದರ ಉದ್ದೇಶವಾದರೂ ಏನು? ಈ ಪ್ರಮಾಣದ ದೇಶಭಕ್ತಿ, ಸಾಮಾಜಿಕ ಕಳಕಳಿ ಹೀಗೆ ಒಮ್ಮಿಂದೊಮ್ಮೆಗೆ ಸೃಷ್ಟಿಯಾಗಿದ್ದಾದರೂ ಹೇಗೆ?

ದೇಶದ ಜನರನ್ನು ಹುಚ್ಚು ಭ್ರಮೆಗೆ ತಳ್ಳಿ, ಸಂವಿಧಾನಕ್ಕೆ ಕಿಚ್ಚು ಇಡಲು ಹೊರಟಿರುವ ಮಾಧ್ಯಮಗಳಿಗೆ ತಿವಿದು ಬುದ್ಧಿ ಹೇಳುವವರು ಯಾರು? ಯಾಕೆ ಈ ಚಾನಲ್‌ಗಳು ತಮ್ಮ ಪ್ಯಾನಲ್ ಚರ್ಚೆಯನ್ನೇ ಸಂಸತ್ತಿನ ಚರ್ಚೆಯೆಂಬಂತೆ ಬಿಂಬಿಸಲು ಯತ್ನಿಸುತ್ತವೆ? ಟೈಮ್ಸ್ ನೌನ ಅರ್ನಾಬ್ ಗೋಸ್ವಾಮಿ ಪದೇಪದೇ ನೂರು ಕೋಟಿ ಜನರು ನೋಡ್ತಾ ಇದ್ದಾರೆ, ಉತ್ತರ ಕೊಡಿ ಎಂದು ರಾಜಕಾರಣಿಗಳನ್ನು ಯಾಕೆ  ದಬಾಯಿಸುತ್ತಾನೆ? ಮಾಧ್ಯಮಗಳು ಸಂವಿಧಾನವನ್ನೂ ಮೀರಿದ ಸಂಸ್ಥೆಗಳೇ? ಸಂಸತ್ತನ್ನು ಮೀರಿದ ಚರ್ಚಾ ಸ್ಥಳವೇ?

ಅಣ್ಣಾ ಹಜಾರೆ ನಿಜಕ್ಕೂ ಪ್ರಾಮಾಣಿಕರು, ಸಚ್ಚಾರಿತ್ರ್ಯವಂತರು. ರಾಣೇಗಣ್ ಸಿದ್ಧಿಯಲ್ಲಿ ಗ್ರಾಮಸ್ವರಾಜ್ಯದ ಪವಾಡವನ್ನೇ ಸಾಧಿಸಿದವರು. ಆದರೆ ಆ ಸಂದರ್ಭದಲ್ಲಿ ನಮ್ಮ ಮೀಡಿಯಾ ಓಬಿ ವ್ಯಾನ್‌ಗಳು ಯಾವತ್ತೂ ಆ ಊರಿನ ದರ್ಶನ ಮಾಡಿರಲಿಲ್ಲ. ಅಂಥ ಚಟುವಟಿಕೆಗಳು ನಮ್ಮ ಮೀಡಿಯಾಗೆ ಮುಖ್ಯವಾಗುವುದೂ ಇಲ್ಲ. ಈಗ ಅಣ್ಣ ಯಾರದೋ ಚದುರಂಗದ ಕಾಯಿಯಂತೆ ಕಾಣಿಸುತ್ತಿದ್ದಾರೆ.  ಮಾಧ್ಯಮಗಳು ಅಣ್ಣಾ ಭಾವಚಿತ್ರವನ್ನೇ ತಮ್ಮ ಲೋಗೋ ಮಾಡಿಕೊಂಡಿವೆ.

೭೪ವರ್ಷದ ಹಿರಿಯ ಜೀವ ಆಮರಣಾಂತ ಉಪವಾಸಕ್ಕೆ ಕುಳಿತಿದೆ. ನಡುವಯಸ್ಸಿನಲ್ಲಿರುವ ಕೇಜ್ರಿವಾಲ್‌ಗಳು, ಬೇಡಿಗಳೇಕೆ ಈ ಜವಾಬ್ದಾರಿ ಹೊರುವುದಿಲ್ಲ? ಯಾಕೆ ಆ ಹಿರಿಯ ಜೀವವನ್ನೇ ಪದೇಪದೇ ಉಪವಾಸಕ್ಕೆ ತಳ್ಳುತ್ತಾರೆ? ರಾಜ್‌ದೀಪ್ ಸರ್‌ದೇಸಾಯಿ, ಬರ್ಖಾ ದತ್, ಅರ್ನಾಬ್‌ರಂಥವರ ತಲೆಗೆ ಈ ಪ್ರಶ್ನೆ ಯಾಕೆ ಹೊಳೆಯುವುದೇ ಇಲ್ಲ.

ಅಣ್ಣಾ ಹಜಾರೆ ಮತ್ತೆ ಆಮರಣಾಂತ ಉಪವಾಸಕ್ಕೆ ಕುಳಿತಿದ್ದಾರೆ. ೭೪ರ ವಯಸ್ಸು ಇಂಥ ಸತ್ಯಾಗ್ರಹಗಳನ್ನು ಸೈರಿಸಿಕೊಳ್ಳಲಾರದು. ಆ ಹಿರಿಯ ಜೀವಕ್ಕೆ ಕಿಂಚಿತ್ತೂ ಘಾಸಿಯಾಗದಿರಲಿ.

ಕೊನೆಕುಟುಕು: ನಿನ್ನೆ ಲೋಕಸಭೆಯಲ್ಲಿ ಸಂಸದರೊಬ್ಬರು ಹೇಳಿದ ಒಂದು ಪ್ರಸಂಗ: ಹಳ್ಳಿಯೊಂದರ ಪಂಚಾಯಿತಿಯಲ್ಲಿ ಆರೋಪಿಯೊಬ್ಬನಿಗೆ ಶಿಕ್ಷೆ ಘೋಷಣೆಯಾಗುತ್ತದೆ. ಅವನಿಗೆ ಎರಡು ಆಯ್ಕೆ. ಒಂದೇ ನೂರು ಛಡಿ ಏಟು ತಿನ್ನಬೇಕು, ಅಥವಾ ನೂರು ಈರುಳ್ಳಿ ತಿನ್ನಬೇಕು. ಈರುಳ್ಳಿ ತಿನ್ನುವುದೇ ಸುಲಭ ಎನ್ನಿಸಿದ ಆತ ಎರಡು ಈರುಳ್ಳಿ ತಿನ್ನುವಷ್ಟರಲ್ಲಿ ಸುಸ್ತಾಗಿ ಛಡಿ ಏಟೇ ಕೊಡಿ ಎನ್ನುತ್ತಾನೆ. ನಾಲ್ಕು ಛಡಿ ಏಟು ತಿನ್ನುತ್ತಿದ್ದಂತೆ ಈರುಳ್ಳಿ ತಿನ್ನುವುದೇ ವಾಸಿ ಎಂದುಕೊಂಡು ಈರುಳ್ಳಿ ತಿನ್ನತೊಡಗುತ್ತದೆ. ಹೀಗೇ ಮುಂದುವರೆದು ಕಡೆಗೆ ಅವನು ನೂರು ಛಡಿಯನ್ನೂ ತಿನ್ನುತ್ತಾನೆ, ನೂರು ಈರುಳ್ಳಿಯನ್ನೂ ತಿನ್ನುತ್ತಾನೆ. ಅಣ್ಣಾ ಚಳವಳಿಯನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕತ್ವವೂ ಹೀಗೇ ಆಗಿದೆ ಎಂದರು ಆ ಸಂಸದರು. ಕಾಂಗ್ರೆಸ್‌ನ ಮೂರ್ಖರು ಸಾಮಾನ್ಯ ಜ್ಞಾನವನ್ನೂ ಪ್ರದರ್ಶಿಸಲಾರದ ಸ್ಥಿತಿ ತಲುಪಿದ್ದೇಕೆ?

Wednesday, August 17, 2011

ಅಮೂರ್ತ ಗುರಿಯತ್ತ ಅಣ್ಣಾ ಹಜಾರೆ ಹೋರಾಟ ಮತ್ತು ನಮ್ಮ ಹತಾಶೆಗಳು...


ಹತಾಶೆ ಭಾರತೀಯರ ಮೂಲಗುಣ. ದೊಡ್ಡದೊಡ್ಡ ಭ್ರಮೆಗಳಲ್ಲಿ ಮುಳುಗುವುದು ನಮಗೆ ಮಾಮೂಲು. ಭ್ರಮೆಗಳು ನೀರಮೇಲಿನ ಗುಳ್ಳೆಗಳಂತೆ ಒಡೆದುಹೋದಾಗ ಸುಸ್ತುಬೀಳುವವರು ನಾವು. ನಮಗೆ ಕನಸು ಕಟ್ಟುವುದು ಗೊತ್ತು. ಇಂಥ ಕನಸುಗಳೂ ಸಹ ಅಮೂರ್ತವಾಗೇ ಇರುತ್ತವೆ. ಗೊತ್ತು ಗುರಿಯಿಲ್ಲದ ದಾರಿಯಲ್ಲಿ ಎಷ್ಟು ಕಾಲ ನಡೆಯುವುದು?

ಭ್ರಷ್ಟಾಚಾರದ ವಿರುದ್ಧ ಕೇಳಿಬರುತ್ತಿರುವ ಘೋಷಣೆಗಳೂ ಸಹ ಅಮೂರ್ತ ಗುರಿಯನ್ನಿಟ್ಟುಕೊಂಡು ಹೊರಟಂತೆ ಕಾಣುತ್ತಿವೆ.  ಶತ್ರುವಿನ ಸ್ಥಾನದಲ್ಲಿ ನಿಂತಿರುವುದು ರಾಜಕಾರಣಿಗಳು ಮಾತ್ರ. ಹೌದಾ? ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಮ್ಮ ಶತ್ರುಗಳು ರಾಜಕಾರಣಿಗಳು ಮಾತ್ರನಾ? ಭ್ರಷ್ಟಾಚಾರಿಗಳು ಮಾತ್ರ ಭ್ರಷ್ಟಾಚಾರ ವಿರೋಧಿಗಳ ನಡುವೆ ಹಾಗೆ ಗೆರೆ ಹೊಡೆದು ವಿಭಾಗಿಸಿ ಗುರುತಿಸಲು ಸಾಧ್ಯವೇ?

ಜನಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಮತ್ತು ತಂಡ ಸತ್ಯಾಗ್ರಹಕ್ಕೆ ಕುಳಿತಿದೆ. ಆದರೆ ಅದು ಜಾರಿಯಾಗುವ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಪೈಕಿ ಶೇ.೯೯ರಷ್ಟಕ್ಕೂ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ. ಅಣ್ಣಾ ಹಜಾರೆಯವರ ಜನಲೋಕಪಾಲ್ ಹಾಗು ಸರ್ಕಾರ ತರಲು ಹೊರಟಿರುವ ಲೋಕಪಾಲ್ ನಡುವೆ ಇರುವ ವ್ಯತ್ಯಾಸಗಳೂ ಅವರಿಗೆ ಗೊತ್ತಿಲ್ಲ.

ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇವತ್ತು ಲೋಕಸಭೆಯಲ್ಲಿ ಮಾತನಾಡಿದ್ದನ್ನು ಗಮನಿಸಿದರೆ ಜನಲೋಕಪಾಲ ಜಾರಿಯಾಗುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ. ಮಸೂದೆ ಸಿದ್ಧಪಡಿಸುವುದು ನಮ್ಮ ಕೆಲಸ, ಸಂಸತ್ತಿನ ಹೊರಗೆ ಕುಳಿತ ವ್ಯಕ್ತಿಯದಲ್ಲ ಎಂಬುದು ಸಂಸತ್ ಸದಸ್ಯರ ಪಟ್ಟು. ನಾವು ಸಿದ್ಧಪಡಿಸಿರುವ ಕರಡನ್ನೇ ನೀವು ಒಪ್ಪಿ ಎಂಬುದು ಅಣ್ಣಾ ತಂಡದ ಆಗ್ರಹ.

ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಬಹುದು ಎಂಬುದು ಅಣ್ಣಾ ತಂಡದ ಎಣಿಕೆ. ಅವರನ್ನು ಜೈಲಿಗೆ ಕಳಿಸಿ, ಬಲಪ್ರಯೋಗ ಮಾಡಿ, ಕಾನೂನು-ಕಟ್ಲೆ ಮುಂದಿಟ್ಟುಕೊಂಡು ಎದ್ದೇಳಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಹಾವು ಸಾಯೋದಿಲ್ಲ, ಕೋಲು ಮುರಿಯೋದಿಲ್ಲ.

ಅಣ್ಣಾ ಚಳವಳಿಗೆ ಧುಮುಕಿರುವವರನ್ನು ಗಮನಿಸಿ ನೋಡಿ. ತರೇಹವಾರಿ ಜನಗಳು ಕಾಣಿಸ್ತಾ ಇದ್ದಾರೆ. ಒಂದು ವರ್ಗ ನಿಜವಾದ, ಪ್ರಾಮಾಣಿಕ ಕಳಕಳಿಯಿಂದ ಬಂದಿರುವವರು. ಭ್ರಷ್ಟಾಚಾರದಿಂದ ರೋಸಿದ ಜನರು ಇವರು. ಜನಲೋಕಪಾಲ್ ಬಂದರೆ ಯಾವುದೋ ಅಗೋಚರ ಯಕ್ಷಿಣಿಯ ಹಾಗೆ ಭ್ರಷ್ಟಾಚಾರ ಎಂಬುದು ದಿಢೀರನೆ ಮಾಯವಾಗುತ್ತೆ ಎಂಬುದು ಇವರ ನಂಬುಗೆ.

ಮತ್ತೊಂದು ವರ್ಗ ನಮ್ಮ ಸಂಸದೀಯ ಪ್ರಜಾಸತ್ತೆಯನ್ನೇ ನಂಬದವರು. ಈ ದೇಶ ಸರಿ ಹೋಗಬೇಕು ಅಂದ್ರೆ ಮಿಲಿಟರಿ ಆಡಳಿತ ಬರಬೇಕು ಕಣ್ರೀ ಎಂದು ಮಾತನಾಡುವ ಬೇಜವಾಬ್ದಾರಿ, ಅಪಾಯಕಾರಿ, ಅಪ್ರಬುದ್ಧ ಮನಸ್ಸುಗಳು.

ಇನ್ನೊಂದು ವರ್ಗ ನೇರಾನೇರ ಭ್ರಷ್ಟರೇ. ಸಮಾಜದ ಎದುರು ತಾವು ಆದರ್ಶವಾದಿಗಳೆಂದು ಫೋಸು ಕೊಡಲು ಬಯಸುವವರು. ತಮ್ಮ ಕಳಂಕಗಳನ್ನು ಈ ಮೂಲಕವಾದರೂ ತೊಳೆದುಕೊಳ್ಳಲು ಬಯಸುವವರು. ಪಾಪ ಮಾಡಿ ದೇವರ ಹುಂಡಿಗೆ ಹಣ ಹಾಕುವ ಶೈಲಿಯ ಜನರು ಇವರು.

ಮಗದೊಂದು ವರ್ಗ ಅಪ್ಪಟ ರಾಜಕೀಯ ಕಾರಣಗಳಿಗಾಗಿ ಬಂದಿರುವವರು. ಜನ ಲೋಕಪಾಲ್ ಆಗಲಿ ಇನ್ನೊಂದಾಗಲಿ ಅವರಿಗೆ ಮುಖ್ಯವಲ್ಲ. ಚಳವಳಿ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಇರುವುದರಿಂದ ಜನರ ಆಕ್ರೋಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವವರು.

ಮತ್ತೂ ಒಂದು ವರ್ಗವಿದೆ. ಅದು ಪ್ರಚಾರಪ್ರಿಯರ ವರ್ಗ. ಅವರಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು, ಪತ್ರಿಕೆಗಳಲ್ಲಿ ತಮ್ಮ ಹೆಸರು ಬರಬೇಕು. ಒಂದು ವೇಳೆ ಹೆಸರು ಬರುತ್ತದೆ ಎಂದರೆ ಇದೇ ಜನರು ಜನಲೋಕಪಾಲದ ವಿರುದ್ಧವೇ ಮಾತನಾಡಬಲ್ಲರು.

ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಭ್ರಷ್ಟಾಚಾರದ ವಿರುದ್ಧ, ಜನಲೋಕಪಾಲದ ಪರವಾಗಿ ಪ್ರತಿಭಟನೆ ನಡೆಸಲಿದ್ದಾರೆ. ಯಡಿಯೂರಪ್ಪ ಮತ್ತು ಸಂತೋಷ್ ಹೆಗ್ಡೆ ಇಬ್ಬರೂ ಭ್ರಷ್ಟಾಚಾರದ ವಿರುದ್ಧ ಒಟ್ಟಿಗೆ ನಿಂತು ಘೋಷಣೆ ಕೂಗುವಂತಾಗುವುದೇ ಕ್ರೂರ ವ್ಯಂಗ್ಯ. ಇನ್ನೂ ಯಾರ‍್ಯಾರು ಅಣ್ಣಾ ಬೆನ್ನಿಗೆ ನಿಲ್ಲುತ್ತಾರೋ ಗೊತ್ತಿಲ್ಲ.

ಸರಿಯಾಗಿ ಗಮನಿಸಿದರೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ, ಇಂಡಿಯಾ ಗೇಟ್‌ನಲ್ಲಿ, ತಿಹಾರ್ ಜೈಲಿನ ಮುಂದೆ ಮೇಲೆ ಉಲ್ಲೇಖಿಸಿದ ಎಲ್ಲ ವೆರೈಟಿಯ ಜನರೂ ಕಾಣಿಸುತ್ತಾರೆ. ಕೆಲವರ ಕೈಯಲ್ಲಿ ರಾಷ್ಟ್ರಧ್ವಜ, ಕೆಲವರ ಕೈಯಲ್ಲಿ ಕೇಸರಿ ಧ್ವಜ, ಮತ್ತೆ ಕೆಲವರ ಕೈಯಲ್ಲಿ ಇನ್ನ್ಯಾವುದೋ ವೆರೈಟಿಯ ಧ್ವಜಗಳು. ಒಬ್ಬ ಬಾಬಾ ರಾಮದೇವ ಅದ್ಯಾವುದೋ ಕಾರು ಹತ್ತಿ ನಿಂತು ಮದುಮಗನಂತೆ ಫೋಜು ಕೊಟ್ಟು ಕೈ ಬೀಸುತ್ತಾರೆ. ಚಳವಳಿಯ ನಾಯಕರ‍್ಯಾರಾದರೂ ಬಂದು, ಇದು ಪೊಲಿಟಿಕಲ್ ರ‍್ಯಾಲಿ ಅಲ್ಲ, ಸುಮ್ಮನೆ ಇಳಿದು ಕುಳಿತುಕೊಳ್ಳಿ ಎಂದು ಗದರಿಸಿ ಹೇಳುವುದಿಲ್ಲ. ಚಳವಳಿ ಹಾದಿ ತಪ್ಪಿರುವ ಲಕ್ಷಣ ಇದು. ನಾಳೆ ರ‍್ಯಾಲಿ ನಡೆಸುವಾಗ ಯಾರೋ ಒಬ್ಬ ಅಥವಾ ಒಂದು ಗುಂಪು ಕಲ್ಲು ಬೀಸಲು ನಿಂತಿತೆಂದರೆ ಅದನ್ನು ನಿಯಂತ್ರಿಸುವವರು ಯಾರು?

ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಹೋಗಿ ಬನ್ನಿ. ಅಲ್ಲಿ ಚಳವಳಿಯನ್ನು ನಿಯಂತ್ರಿಸುವ ಬಹುತೇಕರಿಗೆ ಕನ್ನಡವೇ ಗೊತ್ತಿಲ್ಲ. ಎಲ್ಲಿಂದ ಬಂದ ಜನರು ಇವರು? ಇವರೆಲ್ಲ ಹೇಗೆ ಉದ್ಭವವಾದರು? ಚಳವಳಿಗೆ ಬರುವವರ ಪೈಕಿ ಯಾರು ಪ್ರಾಮಾಣಿಕರು, ಯಾರು ಭ್ರಷ್ಟರೆಂದು ಇವರು ಹೇಗೆ ನಿರ್ಧರಿಸುತ್ತಾರೆ? ಈ ಹಿಂದೆ ಭ್ರಷ್ಟಾಚಾರದಂಥ ಇನ್ನೂ ನೂರಾರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಡೆದ ಸಾವಿರಾರು ಚಳವಳಿಗಳಲ್ಲಿ ಇವರ‍್ಯಾರೂ ಕಾಣಿಸಿಯೇ ಇರಲಿಲ್ಲವಲ್ಲ, ಯಾಕೆ?

ಕರ್ನಾಟಕದಲ್ಲಿ ಹಿಂದೆಲ್ಲ ಚಳವಳಿಗಳು ಘಟಿಸಿವೆ. ರೈತ ಚಳವಳಿ ಇಲ್ಲಿ ಸರ್ಕಾರವನ್ನೇ ಉರುಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಚಳವಳಿಗಾರರಿಗೆ ಒಂದು ನೈತಿಕ ಸಂಹಿತೆ ಇತ್ತು. ಅವರು ಸರಳ ವಿವಾಹವಾಗುತ್ತಿದ್ದರು. ಅದ್ದೂರಿ ಮದುವೆಗಳಿಗೆ ಹೋಗುತ್ತಿರಲಿಲ್ಲ.  ಇವತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೆ ಇಂಥದ್ದೊಂದು ನೀತಿಸಂಹಿತೆ ಬೇಡವೇ? ನಮ್ಮೆಲ್ಲರ ಎದೆಯೊಳಗೇ ಒಂದು ಚಳವಳಿಯ ಕಿಚ್ಚು ಹೊತ್ತಬೇಕಲ್ಲವೇ? ನಮ್ಮೊಳಗಿನ ಲಾಲಸೆ, ಕೊಳ್ಳುಬಾಕತನ, ಜಾತೀಯತೆ, ಧರ್ಮಾಂಧತೆಯ ವಿರುದ್ಧ ನಾವು ಹೋರಾಡಬೇಕಲ್ಲವೇ? ಇಂಥ ಕೆಲಸವನ್ನು ನಮ್ಮದೇ ನೆಲದಲ್ಲಿ ನಡೆದ ರೈತ-ದಲಿತ ಚಳವಳಿಗಳು ಮಾಡಿದ್ದವಲ್ಲವೇ? ಗಾಂಧೀಜಿಯವರ ಆಂದೋಲನವೂ ನಿರಂತರವಾಗಿ ಆತ್ಮಶೋಧನೆ ಮತ್ತು ಆತ್ಮಶುದ್ಧಿಯನ್ನೇ ಕೇಂದ್ರೀಕರಿಸಿತ್ತಲ್ಲವೇ?

ಅಣ್ಣಾ ಹಜಾರೆ ನಮ್ಮ ನಡುವೆಯಿಂದ ಎದ್ದ ಸೂಪರ್ ಹೀರೋ ಹಾಗೆ ಕಾಣುತ್ತಿದ್ದಾರೆ. ಹಜಾರೆ ನಮ್ಮ ಒಳಗಿನ ಫ್ಯಾಂಟಸಿಗಳಿಗೆ ಮೂರ್ತ ರೂಪ ಕೊಡುತ್ತಿರುವ ಪಾತ್ರವಷ್ಟೆ. ಈ ಫ್ಯಾಂಟಸಿಗಳು ಯಾಕೆ ಹುಟ್ಟುತ್ತವೆಂದರೆ ನಾವು ಸಹಜವಾಗಿ, ಸರಳವಾಗಿ ಬದುಕಲು ಕಲಿಯದವರು. ಸದಾ ಅತೀಂದ್ರಿಯ, ಅತಿಮಾನುಷ ಶಕ್ತಿಗಳ ಕಡೆಗೆ ಕೈ ಚಾಚಿ ನಿಂತವರು ನಾವು. ಅಣ್ಣಾ ಸಹಾ ನಮಗೆ ಈಗ ಅತಿಮಾನುಷರಂತೆ ಕಾಣುತ್ತಿರುವುದರ ಹಿನ್ನೆಲೆಯಲ್ಲಿರುವುದು ಅಸಹಾಯಕತೆ, ಬೇಜವಾಬ್ದಾರಿ, ಕೀಳರಿಮೆ, ಸ್ವಾರ್ಥ ಮುಂತಾದ ದೌರ್ಬಲ್ಯಗಳೇ ಅಲ್ಲವೇ? ನಾವು ಯಾವತ್ತು ಸಮಷ್ಠಿ ಪ್ರಜ್ಞೆಯಿಂದ ವ್ಯವಹರಿಸಿದ್ದೇವೆ? ಯಾಕೆ ನಮ್ಮ ನಾಡಿನ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ನಮ್ಮನ್ನು ಭಾದಿಸುವುದಿಲ್ಲ? ಮಲದ ಗುಂಡಿಯನ್ನು ಶುದ್ಧಗೊಳಿಸಲು ಹೋಗಿ ನಮ್ಮದೇ ಅಣ್ಣತಮ್ಮಂದಿರಂಥ ಯುವಕರು ಸತ್ತರೂ ನಮ್ಮನ್ನೇಕೆ ಅದು ಕದಲಿಸುವುದಿಲ್ಲ? ನಮ್ಮ ಸುತ್ತಲಿರುವ ಜನರ ಸಮಸ್ಯೆಗಳಿಗೆ ಕುರುಡಾಗೇ ಇರುವ ನಾವು ನಮ್ಮ ಅಸ್ತಿತ್ವದ ಸಮಸ್ಯೆ ಬಂದಾಗ ಯಾಕೆ ವಿಚಲಿತರಾಗುತ್ತೇವೆ?

ಹಳ್ಳಿಗಳಲ್ಲಿ ಬದುಕುವ ಜನರು ನಗರಗಳ ಮಧ್ಯಮ ವರ್ಗದ ನಾಗರಿಕರಿಗಿಂತ ಪ್ರಾಮಾಣಿಕರಾಗೇ ಇದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಅವರಿಗೆ ಅಭ್ಯಾಸ. ಹಾಸಿಗೆಯಿಂದ ಹೊರಗೆ ಕಾಲು ಇಟ್ಟವರು ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿರುವ ನಗರವಾಸಿಗಳು ಮಾತ್ರ. ಸೂಪರ್ ಹೀರೋಗಳನ್ನು ಸೃಷ್ಟಿಸಿಕೊಳ್ಳುವುದರ ಜತೆಗೆ ಸೂಪರ್ ವಿಲನ್‌ಗಳನ್ನೂ ನಾವು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ಬದುಕಿನ ಎಲ್ಲ ವೈಫಲ್ಯಗಳಿಗೂ ಈ ಸೂಪರ್ ವಿಲನ್‌ಗಳೇ ಕಾರಣ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಸದ್ಯಕ್ಕೆ ಸೂಪರ್ ವಿಲನ್‌ಗಳ ಜಾಗದಲ್ಲಿ ರಾಜಕಾರಣಿಗಳಿದ್ದಾರೆ. ನಾವು ಪುಂಖಾನುಪುಂಖ ಬೈಯುತ್ತಿದ್ದೇವೆ.

ಇದೆಲ್ಲದರ ನಡುವೆ ಅಣ್ಣಾ ಹಜಾರೆಯವರನ್ನು ಹುತಾತ್ಮರನ್ನಾಗಿಸುವ ಯತ್ನಗಳೇನಾದರೂ ನಡೆಯುತ್ತಿವೆಯೇ ಎಂಬ ಆತಂಕ ಕಾಡುತ್ತಿದೆ. ಅಣ್ಣಾ ಸಹ ಮುಗ್ಧರಾಗಿ ಇಂಥ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೋ ಎಂಬ ಭೀತಿಯೂ ಕಾಡುತ್ತಿದೆ.

ಅಣ್ಣಾಗೆ ಸಂಸತ್ತಿನ ಮೇಲೆ ನಂಬಿಕೆ ಇದೆ, ಆದರೆ ಒಳಗೆ ಕುಳಿತಿರುವ ಸದಸ್ಯರ ಮೇಲಲ್ಲ. ಇದು ಅವರದೇ ಹೇಳಿಕೆ. ಹೀಗಿರುವಾಗ ಅಣ್ಣಾ ಮತ್ತು ತಂಡ ಸದ್ಯ ಕೈಗೊಳ್ಳಬಹುದಾದ ವಿವೇಕದ ತೀರ್ಮಾನವೇನೆಂದರೆ ಅವರ ನಂಬುಗೆ ಕಳೆದುಕೊಂಡಿರುವ ಸಂಸತ್ ಸದಸ್ಯರು ಕುಳಿತುಕೊಳ್ಳುವ ಜಾಗದಲ್ಲಿ ಅವರೇ ಬಂದು ಕೂರುವುದು. ಇದು ಸಾಧ್ಯವಾಗುವುದು ಜನತಾಂತ್ರಿಕ ವ್ಯವಸ್ಥೆಯ ಅತ್ಯುನ್ನತ ಕ್ರಮವಾಗಿರುವ ಚುನಾವಣೆಗಳ ಮೂಲಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ರಾಜಕಾರಣಿಗಳನ್ನು ದೂಷಿಸಿ, ಸರಿದಾರಿಗೆ ತರಲು ಯತ್ನಿಸಿ ವಿಫಲರಾಗುವುದಾದರೆ, ನೀವೇ ಆ ನಾಯಕತ್ವ ವಹಿಸಿಕೊಳ್ಳಲೂ ತಯಾರಿರಬೇಕಾಗುತ್ತದೆ. ಅಣ್ಣಾ ಈಗಾಗಲೇ ಯುವಜನತೆಗೆ ನಾಯಕತ್ವ ನೀಡಿದ್ದಾರೆ. ನಾಯಕತ್ವದ ಹೊಣೆಗಾರಿಕೆಯನ್ನು ನಿಭಾಯಿಸುವುದು ಸುಲಭದ ವಿಷಯವಲ್ಲ. ಅಣ್ಣಾ ಮತ್ತು ತಂಡ ತಮಗಿರುವ ಜನಬೆಂಬಲವನ್ನು ಅಧಿಕೃತವಾಗಿ ದೃಢಪಡಿಸಿಕೊಳ್ಳಬೇಕಿರುವುದು ಚುನಾವಣೆಗಳ ಮೂಲಕವೇ. ಸಂಸತ್ತಿನ ಹೊರಗೆ ನಿಂತು ತಾವು ಸಿದ್ಧಪಡಿಸಿದ ಮಸೂದೆಯನ್ನೇ ಪಾಸು ಮಾಡಿ ಎಂದು ಪ್ರಾಯೋಗಿಕವಲ್ಲದ ಬೇಡಿಕೆ ಮಂಡಿಸುವುದಕ್ಕಿಂತ ಸಂಸತ್ತಿನ ಒಳಗೆ ಪ್ರವೇಶಿಸಿ ಕಾಯಿದೆ ರೂಪಿಸುವ ಅಧಿಕೃತ ಹಕ್ಕು ಪಡೆದು ಅದನ್ನು ಮಾಡುವುದು ಒಳ್ಳೆಯದು.

ಇದೆಲ್ಲವನ್ನು ಹೇಳುತ್ತಿರುವಾಗ ದೇಶದ ಉದ್ದಗಲದಲ್ಲಿ ನಡೆಯುತ್ತಿರುವ ಭಾವಾವೇಶದ ಹೋರಾಟಗಳನ್ನು ಗಮನಿಸಿ ನೋಡಿ. ಜನಲೋಕಪಾಲ ಜಾರಿಯಾಗಲಾರದ ಸಂಕೀರ್ಣ ರಾಜಕೀಯ ವ್ಯವಸ್ಥೆಯಿರುವ ಈ ಹೊತ್ತಿನಲ್ಲಿ, ಇಡೀ ಚಳವಳಿಯ ಫಲಿತವು ದೇಶದ ಯುವಸಮುದಾಯವನ್ನು ಇನ್ನಷ್ಟು ಹತಾಶೆಗೆ ತಳ್ಳುತ್ತದಾ ಎಂಬ ನಿಜವಾದ ಆತಂಕ ನಮ್ಮದು.


ಸಂಬಂಧಿತ ಲೇಖನಗಳು:


ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ... ಎದ್ದು ನಿಂತಿದ್ದೇವೆ..


Sunday, August 7, 2011

ಸೋನಿಯಾ ದೇಹಕ್ಕಾದ ಕ್ಯಾನ್ಸರ್ ಮತ್ತು ದೇಶಭಕ್ತರಿಗೆ ಹರಡುತ್ತಿರುವ ಏಡ್ಸ್!


ಸೋನಿಯಾ ಗಾಂಧಿ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕ್ಯಾನ್ಸರ್ ಆಗಿರಬಹುದು ಎಂಬುದು ಮೀಡಿಯಾ ಊಹೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೇನು ಒದಗಿಸಿಲ್ಲ. ಅವರು ಬೇಗ ಗುಣಮುಖರಾಗಲಿ. ಮನುಷ್ಯತ್ವ ಉಳ್ಳವರು ಹೇಳುವ ಮಾತು ಇದು.

ಆದರೆ ಸೋನಿಯಾ ಖಾಯಿಲೆ ಕುರಿತ ಸುದ್ದಿಗಳು ಹೊರಬರುತ್ತಿದ್ದಂತೆ ಅದಕ್ಕೆ ಫೇಸ್‌ಬುಕ್, ಟ್ವಿಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳು ಹೇಸಿಗೆ ಹುಟ್ಟಿಸುತ್ತವೆ. ಸೋನಿಯಾಗೇ ಆರೋಗ್ಯ ಚೆನ್ನಾಗೇ ಇದೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣ ಮುಚ್ಚಿಡಲು ಹೋಗಿದ್ದಾರೆ ಎನ್ನುತ್ತವೆ ಕೆಲವು ಪ್ರಭೃತಿಗಳು. ಇಂಡಿಯಾದಲ್ಲಿ ಆಸ್ಪತ್ರೆಗಳು ವೈದ್ಯರುಗಳು ಇರಲಿಲ್ಲವೇ? ವಿದೇಶಕ್ಕೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನಿಸುತ್ತಾರೆ ಇನ್ನಷ್ಟು ಮುಠ್ಠಾಳರು. ಕೆಲವರ ಫೇಸ್‌ಬುಕ್ ಸ್ಟೇಟಸ್‌ಗಳನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಹಿಂಜರಿಕೆಯಾಗುತ್ತದೆ. ಇದೇ ಒಂದು ಖಾಯಿಲೆಯಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಎಲ್ಲ ಕಡೆಯೂ ಕೊಳಕು ಗಬ್ಬು ನಾರುತ್ತಿದೆ. ವಿಕಿಲೀಕ್ಸ್‌ನಲ್ಲಿ ಸ್ವಿಜ್ ಬ್ಯಾಂಕ್ ಅಕೌಂಟುಗಳನ್ನು ಹೊಂದಿರುವವರ ಪಟ್ಟಿ ಹೊರಬಂದಿದೆ ಎಂದು ಸುಳ್ಳೇಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅದರಲ್ಲಿ ಸೋನಿಯಾ, ಕುಮಾರಸ್ವಾಮಿಯವರ ಹೆಸರುಗಳನ್ನು ಸೇರಿಸಿ, ಅದನ್ನೇ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದಾರೆ ಕೆಲವು ತರಲೆಗಳು.

ಸೋನಿಯಾ ಗಾಂಧಿ ಒಂದು ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗು ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಒಕ್ಕೂಟದ ಅಧ್ಯಕ್ಷರು. ಯಾರಿಗಾದರೂ ಅವರ ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಕುರಿತು ಸಿಟ್ಟು, ಆಕ್ರೋಶವಿದ್ದರೆ ಆರೋಗ್ಯಕರವಾಗಿ ಚರ್ಚಿಸುವ ಅವಕಾಶವಿರುತ್ತದೆ. ಡೆಮಾಕ್ರಸಿ ಇರುವುದೇ ಹಾಗೆ. ಆದರೆ ಒಬ್ಬ ಹೆಣ್ಣುಮಗಳ ಕುರಿತು, ಅದೂ ಆಕೆ ಅನಾರೋಗ್ಯದಿಂದ ಬಳಲುವಾಗ ಅದನ್ನೇ ಕೊಳಕಾಗಿ ವಿಶ್ಲೇಷಿಸುವ ಜನರಿಗೆ ಏನು ಹೇಳುವುದು. ಸೋನಿಯಾಗಿರುವ ಖಾಯಿಲೆ ದೇಹಕ್ಕೆ ಸಂಬಂಧಿಸಿದ್ದು, ಅದು ವಾಸಿಯಾಗುತ್ತದೆ. ಆದರೆ ಇಂಥವರ ಮನಸ್ಸುಗಳಲ್ಲೇ ಕ್ಯಾನ್ಸರ್, ಏಡ್ಸ್‌ಗಳಿವೆಯಲ್ಲ ಅದು ವಾಸಿಯಾಗುವುದು ಹೇಗೆ?

ಬಹುತೇಕ ಇಂಥ ವರಸೆಯ ಪ್ರಚಾರದಲ್ಲಿ ತೊಡಗಿರುವವರು ತಥಾಕಥಿತ ದೇಶಭಕ್ತರು. ದೇಶಭಕ್ತರದ್ದೇ ಪಾರ್ಟಿಯಾದ ಭಾರತೀಯ ಜನತಾ ಪಕ್ಷದ ಮುಖಂಡರು ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ ವಿದೇಶೀ ಮೂಲವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು. ಬಿಜೆಪಿಯ ಬಹುತೇಕ ಘಟಾನುಘಟಿ ಮುಖಂಡರೆಲ್ಲ ಇಟಾಲಿಯನ್ ಸೋನಿಯಾ ಕೈಗೆ ಅಧಿಕಾರ ಕೊಡಬೇಡಿ ಎಂದೇ ಭಾಷಣ ಮಾಡಿದ್ದರು. ಆದರೆ ಜನರು ಬೇರೆಯದೇ ತೀರ್ಮಾನ ಮಾಡಿದ್ದರು. ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅದೇ ಯುಪಿಎ ಒಕ್ಕೂಟವನ್ನು ಅಧಿಕಾರಕ್ಕೆ ತಂದಿದ್ದರು. ಬುದ್ಧಿವಂತ ದೇಶಭಕ್ತರು ಸೋನಿಯಾ ಭಾರತೀಯಳೇ ಅಲ್ಲ ಎಂದು ಬಿಂಬಿಸಲು ಎಷ್ಟೆಲ್ಲಾ ಹರಸಾಹಸ ನಡೆಸಿದರೂ ಅದು ಫಲ ಕೊಡಲಿಲ್ಲ. ಯಾಕೆಂದರೆ ದೇಶದ ಜನಸಾಮಾನ್ಯರು ಈ ತರ್ಕವನ್ನು ಒಪ್ಪಲಿಲ್ಲ.

ನಿಜ, ಯುಪಿಎ ಸರ್ಕಾರ ಈಗ ಹಗರಣಗಳಲ್ಲಿ ಮುಳುಗಿ ಹೋಗಿದೆ. ೨ಜಿ, ಕಾಮನ್ವೆಲ್ತ್‌ನಿಂದ ಹಿಡಿದು ಭ್ರಷ್ಟಾಚಾರದ ಹಲವಾರು  ಪ್ರಕರಣಗಳಲ್ಲಿ ಅದು ಸಿಕ್ಕುಬಿದ್ದಿದೆ. ಅದಕ್ಕೆ ಯುಪಿಎ, ಕಾಂಗ್ರೆಸ್ ಬೆಲೆ ತೆರಲೇಬೇಕು. ಈಗಾಗಲೇ ಸಾಕಷ್ಟು ಭ್ರಷ್ಟರು ಜೈಲು ಸೇರಿದ್ದಾರೆ. ಇನ್ನಷ್ಟು ಮಂದಿ ಮುಂದೆಯೂ ಹೋಗುತ್ತಾರೆ. ಒಂದು ವೇಳೆ ಸೋನಿಯಾ ಮತ್ತವರ ತಂಡವೂ ಎಲ್ಲ ಹಗರಣಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಜನರೇ ತಿರಸ್ಕರಿಸುತ್ತಾರೆ.

ಹಾಗೆಂದ ಮಾತ್ರಕ್ಕೆ ಕ್ಯಾನ್ಸರ್‌ನಂಥ ಖಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಸತ್ತೇ ಹೋಗಲಿ ಎಂದು ಬಯಸುವವರ ಮನಸ್ಥಿತಿಗೇನಾಗಿದೆ? ಸೋನಿಯಾ ಅವರ ಅರೆನಗ್ನ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿರುವವರು ನಿಜವಾಗಿಯೂ ಹೆಣ್ಣಮಕ್ಕಳನ್ನು ಪೂಜಿಸುವ, ಗೌರವಿಸುವ ಪರಂಪರೆಗೆ ಸೇರಿದವರಾ? ಇಂಥ ವಿಕೃತರೆಲ್ಲ ತಮ್ಮನ್ನು ತಾವು ದೇಶಭಕ್ತರು, ಧರ್ಮಭಕ್ತರು ಎಂದು ಹೇಳಿಕೊಳ್ಳುವುದಾದರೂ ಹೇಗೆ?

ಸೋನಿಯಾಗಾಂಧಿಯೋ, ವಾಜಪೇಯಿಯೋ, ದೇವೇಗೌಡರೋ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದು ಮನುಷ್ಯತ್ವದ ಕ್ರಿಯೆ. ಇಂಥ ಸಂದರ್ಭದಲ್ಲೂ ಹೇಟ್ ಕ್ಯಾಂಪೇನ್‌ಗಳನ್ನು ನಡೆಸುತ್ತ ಕೊಳಕು ಮಾತುಗಳನ್ನಾಡುವವರು ನಿಜವಾದ ಅರ್ಥದಲ್ಲಿ ರೋಗಗ್ರಸ್ಥರು. ಅವರು ಬೇಗ ಗುಣಮುಖರಾಗಬೇಕಿದೆ. ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ.

Saturday, August 6, 2011

ಜ್ಯೋತಿಷ್ಯ, ಜಗದೀಶ್ ಶೆಟ್ಟರ್, ಜನಶ್ರೀ ಚಾನಲ್ ಇತ್ಯಾದಿ...

ಇವತ್ತಿನ ಉದಯವಾಣಿಯಲ್ಲಿ ವಿಜಯ್ ಮಲಗಿಹಾಳ ಬರೆದ ವಿಶೇಷ ವರದಿಯೊಂದು ಗಮನ ಸೆಳೆಯುವಂತಿದೆ. ಹೋಮ, ಹವನ ಮಾಡಿಸುವಂತೆ ಶೆಟ್ಟರ್‌ಗೆ ಕಾಟ ಎಂಬ ಶೀರ್ಷಿಕೆಯ ವರದಿ ಇದು. ಮುಖ್ಯಮಂತ್ರಿ ಹುದ್ದೆ ಪಡೆಯುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡ ಜಗದೀಶ್ ಶೆಟ್ಟರ್ ಅವರಿಗೆ ಹೋಮ-ಹವನ ಮಾಡಿಸಿ, ನಿಮಗೆ ಸಿಎಂ ಹುದ್ದೆ ಸಿಗುತ್ತದೆ ಎಂದು ಜ್ಯೋತಿಷಿಗಳು ಕಾಟ ಕೊಡುತ್ತಿದ್ದಾರಂತೆ.

ಇಂಟರೆಸ್ಟಿಂಗ್ ಅಂದರೆ ಜಗದೀಶ್ ಶೆಟ್ಟರ್ ಈ ಜ್ಯೋತಿಷಿಗಳನ್ನು ಕ್ಯಾರೇ ಅನ್ನುತ್ತಿಲ್ಲ ಎನ್ನುವ ಮಾಹಿತಿ ಈ ವರದಿಯಲ್ಲಿದೆ. ಅವರು ವೈಯಕ್ತಿಕ ಮಟ್ಟದ ಪೂಜೆ, ಧಾರ್ಮಿಕ ನಂಬಿಕೆಗಳಲ್ಲೇ ತೃಪ್ತರು. ಧಾರ್ಮಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಒಲ್ಲರು. ಅವರು ಹೇಳುವುದನ್ನು ಗಮನಿಸಿ.

ನನಗೆ ಮೊದಲಿನಿಂದಲೂ ಈ ಜ್ಯೋತಿಷ್ಯ, ಹೋಮ, ಹವನ ಮತ್ತಿತರ ಪೂಜಾ ವಿಧಿ ಕೈಗೊಳ್ಳುವುದರಲ್ಲಿ ನಂಬಿಕೆಯಿಲ್ಲ. ಇದುವರೆಗೆ ನಾನು ಯಾವ ಹೋಮ, ಹವನ ಮಾಡದೆ ಈ ಸ್ಥಾನದವರೆಗೆ ಬಂದಿದ್ದೇನೆ. ಮುಂದೆ ಬರಬೇಕಾದ್ದು ಬಂದೇ ಬರುತ್ತದೆ. ಅದಕ್ಕಾಗಿ ಈ ರೀತಿಯ ವಿಶೇಷ ಪ್ರಯತ್ನ ಮಾಡುವುದು ನನ್ನ ಮನಸ್ಸಿಗೆ ಒಪ್ಪುವುದಿಲ್ಲ.

ರಾಜಕಾರಣದಲ್ಲಿ ಈಗ ಜ್ಯೋತಿಷಿಗಳ ದರ್ಬಾರು ದಿನೇದಿನೇ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ಜಗದೀಶ್ ಶೆಟ್ಟರ್ ಅಂಥವರು ಇರುವುದೇ ಸಂತೋಷದ ವಿಷಯ. ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿಗಳ ನಡುವೆ ಜಗದೀಶ್ ಶೆಟ್ಟರ್ ತಮ್ಮ ವೈಯಕ್ತಿಕ ನಿಲುವನ್ನು ಕಾಪಾಡಿಕೊಂಡು ಬಂದಿರುವುದು ಆಶ್ಚರ್ಯ. ಯಾಕೆಂದರೆ ಅಧಿಕಾರ ಸ್ಥಾನದಲ್ಲಿರುವವರ ಮೇಲೆ ಜ್ಯೋತಿಷ್ಯದ ಮೊರೆ ಹೋಗುವ, ಹೋಮ-ಹವನ, ಮಾಟ-ಮಂತ್ರ ಮಾಡಿಸುವ ಒತ್ತಡ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ದುರ್ಬಲ ಮನಸ್ಸಿನವರು ಸುಲಭವಾಗಿ ಬಲಿಯಾಗುತ್ತಾರೆ. ಶೆಟ್ಟರ್ ಅಂಥವರಲ್ಲ ಅನ್ನುವುದು ಸಂತೋಷದ ವಿಷಯ. ಸೋನಿಯಾ ಗಾಂಧಿ ಗುಣಮುಖರಾಗಲೆಂದು ಜನಾರ್ದನ ಪೂಜಾರಿಯಂಥ ಹಿರಿಯ ರಾಜಕಾರಣಿ ಉರುಳು ಸೇವೆ ಮಾಡುವ ಸಾರ್ವಜನಿಕ ಮನರಂಜನೆಯಲ್ಲಿ ತೊಡಗಿರುವಾಗ ಶೆಟ್ಟರ್ ರಂಥವರು ಭರವಸೆ ಮೂಡಿಸುತ್ತಾರೆ.

***

ನಿಮಗೆ ಗೊತ್ತು, ಈ ಬ್ಲಾಗ್ ನಲ್ಲಿ ನಾವು ಪದೇಪದೇ ಕಪಟ ಜ್ಯೋತಿಷಿಗಳ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮಾಧ್ಯಮಗಳಲ್ಲಿ ಜ್ಯೋತಿಷಿಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಚಾನಲ್‌ಗಳೂ ದಿನವನ್ನು ಆರಂಭಿಸುವುದೇ ಜ್ಯೋತಿಷಿಗಳ ಮೂಲಕ. ನ್ಯೂಸ್ ಚಾನಲ್‌ಗಳಂತೂ ಏನೇ ವಿವಾದ ಎದ್ದರೂ ಮೂರ‍್ಲಾಲ್ಕು ಜ್ಯೋತಿಷಿಗಳನ್ನು ಹಿಡಿದು ತಂದು ಚರ್ಚೆ ಆರಂಭಿಸುತ್ತವೆ. ನಮಗೂ ಟೀಕಿಸಿ ಸಾಕಾಗಿ ಹೋಗಿದೆ. ನಾಯಿ ಬಾಲ ನೆಟ್ಟಗಾಗುವುದಿಲ್ಲ.

ಆದರೆ ಒಂದು ಆಶಾದಾಯಕ ಬೆಳವಣಿಗೆಯನ್ನು ನಿಮಗೆ ಹೇಳಲೇಬೇಕು. ಜನಶ್ರೀ ಚಾನಲ್ ಮಾತ್ರ ಜ್ಯೋತಿಷಿಗಳನ್ನು ಮೈಮೇಲೆ ಬಿಟ್ಟುಕೊಂಡಿಲ್ಲ. ಜ್ಯೋತಿಷಿಗಳನ್ನು ಬಳಸಿಕೊಳ್ಳದೇ ಆ ಚಾನಲ್ ಮುಂದುವರೆಯುತ್ತಿದೆ. ಇತರ ಚಾನಲ್‌ಗಳಲ್ಲಿ ಜ್ಯೋತಿಷಿಗಳು ಪದ್ಮಾಸನ ಹಾಕಿ ಕುಳಿತು ಪ್ರವಚನ ನಡೆಸುವ ಸಮಯಕ್ಕೆ ಸರಿಯಾಗಿ ಜನಶ್ರೀ ಚಾನಲ್ ನಿರುದ್ಯೋಗಿ ಯುವಕ-ಯುವತಿಯರಿಗೆ ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ ಎಂಬುದನ್ನು ಹೇಳುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಬೊಗಳೆ ಜ್ಯೋತಿಷ್ಯವನ್ನು ಪ್ರಸಾರ ಮಾಡಿ ಜನರ ತಲೆಕೆಡಿಸುವ ಬದಲು ನಿರುದ್ಯೋಗಿ ಯುವಸಮುದಾಯದ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ತನ್ನ ಆದ್ಯತೆಗಳೇನು ಎಂಬುದನ್ನು ಅದು ಸ್ಪಷ್ಟಪಡಿಸಿಕೊಂಡಿದೆ.

ಜನಶ್ರೀಯನ್ನು ಮೆಚ್ಚಿಕೊಳ್ಳುವುದಕ್ಕೆ ಇನ್ನಷ್ಟು ಕಾರಣಗಳೂ ಇವೆ. ಕಳೆದ ಹದಿನೈದು ದಿನಗಳ ರಾಜಕೀಯ ವಿಪ್ಲವಗಳ ಸಂದರ್ಭದಲ್ಲಿ ಜನಶ್ರೀ ಸುದ್ದಿ ಮತ್ತು ವಿಶ್ಲೇಷಣೆಯನ್ನು ನಿರ್ವಹಿಸಿದ ರೀತಿ ಸೊಗಸಾಗಿತ್ತು. ಚಾನಲ್‌ನ ಮುಖ್ಯಸ್ಥ ಅನಂತ ಚಿನಿವಾರ್ ನಡೆಸುವ ಚರ್ಚೆಗಳು ಗಮನ ಸೆಳೆಯುವಂತಿದ್ದವು. ಚಾನಲ್‌ನ ಒಡೆಯರು ರೆಡ್ಡಿ ಸೋದರರಾಗಿದ್ದರೂ, ಅವರ ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಕಾರ್ಯಕ್ರಮ ನಡೆಸುವಲ್ಲಿ ಅವರು ಯಶಸ್ವಿಯಾದರು.

ನಿಮಗೆ ನೆನಪಿರಬಹುದು. ಜನಶ್ರೀ ಶುರುವಾಗುವ ಹೊತ್ತಿನಲ್ಲಿ ಇದೂ ಸಹ ಕಸ್ತೂರಿ ವಾಹಿನಿಯಂತೆ ತನ್ನ ಮಾಲಿಕರ ಒಲವು-ನಿಲುವುಗಳನ್ನು ಬಿಂಬಿಸುವ ಚಾನಲ್ ಆಗಬಹುದು ಎಂದು ಅನುಮಾನಪಟ್ಟಿದ್ದೆವು. ಆದರೆ ಅದನ್ನು ಸುಳ್ಳು ಮಾಡುವಲ್ಲಿ ಜನಶ್ರೀ ತಂಡ ಯಶಸ್ವಿಯಾಗಿದೆ.

ಅಪ್ಪಂದಿರ ದಿನದಂದು ಅನಂತ್ ಚಿನಿವಾರ್ ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪತ್ರಕರ್ತ ಬಿ.ವಿ.ವೈಕುಂಠರಾಜು, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮಕ್ಕಳನ್ನು ( ಚುಕ್ಕಿ, ಸನತ್ ಕುಮಾರ್, ಮಹಿಮಾ ಪಟೇಲ್) ಕೂರಿಸಿಕೊಂಡು ಒಂದು ವಿಶೇಷ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮನಮುಟ್ಟುವಂತಿತ್ತು. ಸಂಜೆ ಶ್ರೀ ಲಕ್ಷ್ಮಿ ನಡೆಸಿಕೊಡುವ ವಿಶೇಷ ಕಾರ್ಯಕ್ರಮವೂ ಆಸಕ್ತಿದಾಯಕವಾಗಿರುತ್ತದೆ. ಇಂಥ ಹಲವು ವಿಶೇಷಗಳು ಜನಶ್ರೀಯಲ್ಲಿದೆ. ಹೀಗಾಗಿಯೇ ಅದು ದಿನೇದಿನೇ ತನ್ನ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಜನಶ್ರೀ ತಂಡಕ್ಕೆ ಅಭಿನಂದನೆಗಳು ಹಾಗು ವಿಶೇಷವಾಗಿ ಜ್ಯೋತಿಷಗಳನ್ನು ಸೇರಿಸಿಕೊಳ್ಳದ ಅವರ ನಿಲುವಿಗೆ ಕೃತಜ್ಞತೆಗಳು.

ಕೊನೆಕುಟುಕು: ಜನಶ್ರೀ ಬಳ್ಳಾರಿ ರೆಡ್ಡಿಗಳ ತುತ್ತೂರಿಯಾಗಿಲ್ಲ ಎಂಬುದೇನೋ ನಿಜ. ಒಂದು ವೇಳೆ ಹಾಗೆ ಆಗಿದ್ದರೆ ಜನಶ್ರೀ ತಂಡ ಹುಚ್ಚಾಸ್ಪತ್ರೆಗೆ ಸೇರಬೇಕಿತ್ತು. ಯಾಕೆಂದರೆ, ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವವರೆಗೂ ಅವರ ಜತೆಯಲ್ಲೇ ಇದ್ದ ಜನಾರ್ದನರೆಡ್ಡಿ ಸಂಜೆ ಹೊತ್ತಿಗೆ ಜಗದೀಶ್ ಶೆಟ್ಟರ್ ಕ್ಯಾಂಪ್ ಸೇರಿಕೊಂಡಿದ್ದರು!

Friday, August 5, 2011

ಕೋಳಿ-ಕುರಿ ಕಡಿಯುವುದು ಸಹಜ ಬದುಕಿನ ಭಾಗ: ಹರ್ಷ ಕುಗ್ವೆ


ಪ್ರಾಣಿಬಲಿ ಕುರಿತ ಚರ್ಚೆ ಮುಂದುವರೆದಿದೆ. ಈಗ ಅಖಾಡಕ್ಕೆ ಇಳಿದವರು ಸಂಡೆ ಇಂಡಿಯನ್ ಪತ್ರಿಕೆಯ ವರದಿಗಾರ, ಪ್ರತಿಭಾವಂತ ಲೇಖಕ ಹರ್ಷ ಕುಮಾರ್ ಕುಗ್ವೆ. ಪ್ರಾಣಿ ಬಲಿಯೂ ಸಹ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಸಂಸ್ಕೃತಿಯ ಭಾಗವೇ ಆಗಿದೆ ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಪ್ರಾಣಿ ಬಲಿ ವಿರೋಧಿ ಚಿಂತನೆಯಲ್ಲಿ ನಿರ್ದಿಷ್ಟ ರಾಜಕಾರಣ ಇರುವುದನ್ನು ಗುರುತಿಸಿದ್ದಾರೆ. ಚರ್ಚೆ ಮುಂದುವರೆಯುತ್ತದೆ. -ಸಂಪಾದಕೀಯ

ಮೊದಲನೆಯದಾಗಿ ಇಲ್ಲಿ ಯಾವುದನ್ನು ಅರುಣ್, ರೂಪಾ ಹಾಸನ ಅವರು ಪ್ರಾಣಿ ಬಲಿ ಎಂದು ಕರೆದಿದ್ದಾರೋ ಅದನ್ನು ನಾನು ಪ್ರಾಣಿ ಬಲಿ ಎಂದು ಕರೆಯುವುದಿಲ್ಲ. ಯಾಕೆಂದರೆ ಅದನ್ನು ಹಾಗೆ ಕರೆಯುವ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಹಾಗೂ ಮನಸ್ಥಿತಿ ಇದೆ ಎಂದು ನನ್ನ ಸ್ಪಷ್ಟ ಅಭಿಪ್ರಾಯ. ಹಾಗಾಗಿ ಈ ಆಚರಣೆಯನ್ನು ನಾನು ಕೋಳಿ ಕುರಿ ಕಡಿಯೋದು ಎಂದು ಕರೆಯುತ್ತೇನೆ. ನಮ್ಮ ಊರಿನಲ್ಲಿ ಹಾಗೂ ನಾನು ಕಂಡಿರುವ ಹಲವಾರು ಹಳ್ಳಿಗಳಲ್ಲಿ ಅದನ್ನು ಎಲ್ಲರೂ ಕರೆಯುವುದೇ ಹಾಗೆ. ದೇವರ ಹೆಸರಲ್ಲಿ ಕುರಿ ಕೋಳಿಗಳನ್ನು ಬಲಿಕೊಡುತ್ತಾರಾದರೂ ಯಾರೂ ಹಾಗೆ ಕರೆಯುವುದಿಲ್ಲ.

ನಮ್ಮ ಊರಲ್ಲಿ ಸುಮಾರು ಹಬ್ಬಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಕೋಳಿಕುರಿ ಕಡಿಯುವ ಸಂಪ್ರದಾಯ ಇದೆ. ಪ್ರತಿ ವರ್ಷ ಚೌಡಿ ಹಬ್ಬ ಅಂತ ಆಚರಿಸುತ್ತೇವೆ. ಆ ದಿನ ತಪ್ಪದೇ ಊರಿನ ಪ್ರತಿ ಮನೆಯವರೂ (ನಮ್ಮೂರಲ್ಲಿರುವ ೫೦೦ ಮನೆಗಳಲ್ಲಿ ಒಂದೈವತ್ತು ಮನೆಗಳಲ್ಲಿ ಮಾತ್ರ ಮಾಂಸಾಹಾರ ಮಾಡುವುದಿಲ್ಲ. ಆ ಮನೆಗಳವರು ಹೊರತುಪಡಿಸಿ) ಊರಿನ ಹೊರವಲಯದಲ್ಲಿರುವ ಚೌಡಿಬನಕ್ಕೆ ಕೋಳಿಗಳನ್ನು ತರುತ್ತಾರೆ. ಇಡೀ ಊರಿನ ಜನರ ಚಂದಾ (ಅದಕ್ಕೆ ವರಾಡ ಅಂತಾರೆ) ಎತ್ತಿ ೨-೩ ಕುರಿಗಳನ್ನು ತಂದಿರುತ್ತಾರೆ. ಆ ಚೌಡಿ ಬನದಲ್ಲಿರುವ ಚೌಡಿಗೆ ದಾಸಯ್ಯ ಎನ್ನುವವರು ಪೂಜೆ ನಡೆಸಿದ ಕೂಡಲೇ ಒಬ್ಬ ನಿರ್ದಿಷ್ಟ ವ್ಯಕ್ತಿ ಅಲ್ಲಿದ್ದ ಕುರಿಗಳನ್ನು ಕಡಿಯುತ್ತಾರೆ. ಆ ಕೂಡಲೇ ಎಲ್ಲರೂ ತಮ್ಮ ತಮ್ಮ ಕೋಳಿಗಳನ್ನು ಕುಯ್ದು, ತೆಂಗಿನಕಾಯಿ ಕಾಯಿ ಒಡೆದುಕೊಂಡು ಮನೆಗೆ ಹೋಗುತ್ತಾರೆ.

ಇದು ನೂರಾರು ವರ್ಷಗಳಿಂದ ನಡೆದು ಬಂದ ಆಚರಣೆ. ಈಗ ಕೆಲವರ್ಷಗಳಿಂದ ಬಿಟ್ಟರೆ ಚಿಕ್ಕಂದಿನಿಂದಲೂ ಈ ಆಚರಣೆಯಲ್ಲಿ ನಾನು ಭಾಗಿಯಾಗುತ್ತಲೇ ಬಂದಿದ್ದೇನೆ. ಪೇಪರುಗಳಲ್ಲಿ, ಟಿವಿಗಳಲ್ಲಿ ಇಂತಹ ಆಚರಣೆಯ ಕುರಿತು ಭೀಕರವಾಗಿ ಚಿತ್ರಣವಾದಾಗಲೆಲ್ಲಾ ಈ ಕುರಿತು ನನ್ನೊಳಗೇ ಜಿಜ್ಞಾಸೆ ನಡೆದಿದೆ. ಒಂದರೆ ಕ್ಷಣ ಈ ಸಂಪ್ರದಾಯದ ಆಚರಣೆಯ ಸಂದರ್ಭದಲ್ಲಿ ನಮ್ಮ ಊರಿನ ಜನರ ಸಂಭ್ರಮ ಸಡಗರಗಳು ಮನಸ್ಸಿನಲ್ಲಿ ಬಂದರೆ ಇನ್ನೊಂದು ಕ್ಷಣ ಅದನ್ನು ಮಾಧ್ಯಮಗಳು ಭೀಕರವಾಗಿ, ಅಮಾನವೀಯವಾಗಿ ಚಿತ್ರಿಸುವ ಮನಸ್ಥಿತಿಯ ಕುರಿತು ಯೋಚಿಸುತ್ತೇನೆ.

ಆದರೆ ಸೋಕಾಲ್ಡ್ ನಾಗರಿಕ ಸಮಾಜದ ಕೆಲವೇ ಮಂದಿ ಈ ಆಚರಣೆಯನ್ನು ಪರಿಭಾವಿಸುವಂತೆ ಇದು ಅಮಾನವೀಯ ಎಂತಲೋ, ಭೀಭತ್ಸ ಎಂತಲೋ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೂ ಇಲ್ಲ. ಇದು ನಮ್ಮ ಊರಿನ ಜನರು ಆಚರಿಸುವ ಹಬ್ಬದ ಸಡಗರದ ಒಂದು ಭಾಗವಷ್ಟೇ ಆಗಿ ತೋರಿದೆ ನನಗೆ. ನನ್ನ ಮಾತುಗಳು ಅನೇಕರಿಗೆ ಕ್ರೂರವೆನ್ನಿಸಲೂ ಕಾರಣವಿಲ್ಲದಿಲ್ಲ. ಆದರೆ ರೂಪಾ ಹಾಸನ ಅವರ ವಾದದಲ್ಲಿ ನನಗೆ ಅರ್ಥವಾಗದಿರುವುದೇನೆಂದರೆ ಅವರು ಕುರಿ ಕೋಳಿ ಮೀನುಗಳನ್ನು ಅಂಗಡಿಗಳಲ್ಲಿ ಕಡಿಯುವದಕ್ಕೇನೂ ವಿರೋಧ ವ್ಯಕ್ತಪಡಿಸಿಲ್ಲ. ಅದು ಅವರಿಗೆ ಶುದ್ಧವಾದ ವಿಧಾನವಾಗಿ ತೋರುತ್ತದೆ. ಆದರೆ ಹೀಗೆ ಕುರಿಕೋಳಿ ಕಡಿಯುವುದು ಸಾಮುದಾಯಿಕ ನೆಲೆಯಲ್ಲಿ ಸಾಮೂಹಿಕವಾಗಿ ನಡೆದಾಗ ಮಾತ್ರ ಅದು ಮಾನವೀಯವಾಗಿ ತೋರುತ್ತದೆ. ಏನಿದರ ಅರ್ಥ? ಹೊಟೆಲ್‌ನಲ್ಲಿ ಮಾಂಸ ಎಷ್ಟಾದರೂ ತಿನ್ನಬಹುದು ಆದರೆ ಹಬ್ಬಹರಿದಿನಗಳಲ್ಲಿ ಸಂಭ್ರಮದಿಂದ ಜನರು ಮಾಂಸಾಹಾರವನ್ನು ತಿನ್ನುವುದು ವರ್ಜ್ಯ. ಇದೆಂತಹ ಇಬ್ಬಂದಿತನ?

ನಮ್ಮ ಸಂವಿಧಾನ ಹಾಗೂ ಅಂಬೇಡ್ಕರ್‌ರನ್ನು ರೂಪಾ ಹಾಸನ ಅವರು ತಮ್ಮ ವಾದಕ್ಕೆ ತಂದಿದ್ದಾರೆ. ನನಗೆ ತಿಳಿದಿರುವಂತೆ ಸಂವಿಧಾನದ ೫೧ಎ ಕಲಮು ಮೂಲಭೂತ ಕರ್ತವ್ಯಗಳ ಕುರಿತು ಮಾತನಾಡುತ್ತದೆಯೇ ಹೊರತು ಪ್ರಾಣಿಬಲಿಯ ಬಗ್ಗೆ ಅಲ್ಲ. ೫೨ಎ (ಎಫ್) ಪರಿಚ್ಛೇದ ದೇಶದ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ಕುರಿತು ಮಾತನಾಡುತ್ತದೆ. ನನಗೆ ನಮ್ಮೂರಿನ ಚೌಡಿ ಹಬ್ಬವನ್ನು ಹೊರತುಪಡಿಸಿದ ದೇಶದ ಸಂಸ್ಕೃತಿ ಯಾವುದಾದರೂ ಇದೆಯೇ ಎಂದು ನೋಡಿದರೆ ಅದು ಪರಕೀಯ ಸಂಸ್ಕೃತಿಯಾಗಿ ಕಾಣುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಇದನ್ನು ವಿರೋಧಿಸಿದ್ದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅವರು ನಂತರದಲ್ಲಿ ಆಯ್ಕೆ ಮಾಡಿಕೊಂಡ ಬೌದ್ಧ ಧರ್ಮದ ಮೂಲ ಪುರುಷ ಗೌತಮ ಬುದ್ಧ ಗೋವಧೆಯನ್ನು ನಿಷೇಧಿಸಲು ನಿರ್ದಿಷ್ಠ ಚಾರಿತ್ರಿಕ ಕಾರಣವಿತ್ತು. ಅಂದು ಗೋವಧೆಯು ವೈದಿಕ ಧರ್ಮದ ಪ್ರಮುಖ ಆಚರಣೆಯಾಗಿದ್ದರಿಂದ ಕೃಷಿಯಲ್ಲಿ ಬಂದಂತಹ ಬಿಕ್ಕಟ್ಟನ್ನು ಪರಿಹರಿಸಲು ಬೌದ್ಧಧರ್ಮ ಹಾಗೆ ನಿಯಮವನ್ನು ಜಾರಿಗೊಳಿಸಿತ್ತು. ಈ ಕಾರಣದಿಂದಲೇ ಅದು ಕೃಷಿಕ ಸಮುದಾಯಕ್ಕೆ ಹತ್ತಿರವಾಯಿತು. ತದನಂತರದಲ್ಲಿ ಅದರ ಜನಪ್ರಿಯತೆಯನ್ನು ತಪ್ಪಿಸಿ ತನ್ನ ಅಸ್ತಿತ್ವವನ್ನು ಕಾಪಾಡಲು ವೈದಿಕ ಧರ್ಮ ಸಂಪೂರ್ಣ ಮಾಂಸಾಹಾರವನ್ನು ಪ್ರತಿಪಾದಿಸಿತ್ತು. ಇದು ದಾಮೋದರ ಧರ್ಮಾನಂದ ಕೋಸಾಂಬಿ ಹಾಗೂ ಆರ್.ಎಸ್.ಶರ್ಮರಂತ ಪ್ರಮುಖ ಚರಿತ್ರೆಕಾರರ ಆಖ್ಯಾನ.

ಅರುಣ್ ಜೋಳದ ಕೂಡ್ಲಿಗಿಯವರು ಸಾಂಸ್ಕೃತಿಕ ಚರ್ಚೆಯ ಹಿನ್ನೆಲೆಯಲ್ಲಿ ಮಾತನಾಡಿದ್ದಾರಾದರೂ ಅವರ ಮನಸ್ಸಿನಲ್ಲಿಯೂ ಹೀಗೆ ಪ್ರಾಣಿಗಳನ್ನು ಕಡಿಯುವುದು ಸರಿಯಲ್ಲ ಎನ್ನುವ ಮನಸ್ಥಿತಿಯಿದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ನನ್ನ ಅಭಿಪ್ರಾಯಗಳನ್ನು ಇನ್ನೊಂದು ರೀತಿ ವಿವರಿಸಲು ಇಚ್ಚಿಸುತ್ತೇನೆ. ಇದು ಬಹಳ ಜನರಿಗೆ ತಲೆಹರಟೆ ಎಂತಲೋ ವಿತಂಡವಾದ ಎಂತಲೋ ಕಾಣಬಹುದು. ತೀರಾ ಅಕಾಡೆಮಿಕ್ ಆಗಿ, ಉಲ್ಲೇಖಗಳೊಂದಿಗೆ ನಡೆಸುವ ಚರ್ಚೆಗಿಂತ ನಾನು ಈ ನಾಡಿನ ಬಹುಸಂಖ್ಯಾತರ ಕಾಮನ್‌ಸೆನ್ಸ್‌ನ ಭಾಗವಾಗಿರುವ ವಿಚಾರಗಳನ್ನಷ್ಟೇ ಮುಂದಿಡಲು ಬಯಸುತ್ತೇನೆ.

ಮಾಂಸಾಹಾರವನ್ನು ವಿರೋಧಿಸುವವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಮಾನವೀಯತೆಯ ಬಗ್ಗೆ ಮಾತನಾಡುತ್ತಾರೆ. ಇಂದಿನ ವ್ಯವಸ್ಥೆಯಲ್ಲಿ ಯಾವುದು ಹಿಂಸೆ, ಯಾವುದು ಮಾನವೀಯತೆ ಎನ್ನುವುದೂ ಬಹಳ ಚರ್ಚಾಸ್ಪದ. ಇವುಗಳ ಬಗ್ಗೆ ಏಕಸೂತ್ರವಾಗಲೀ, ಏಕಾಭಿಪ್ರಾಯವಾಗಲೀ ಇಲ್ಲ. ಇವು ಒಂದು ಬಗೆಯಲ್ಲಿ ಸಾಪೇಕ್ಷ ಮೌಲ್ಯಗಳು.

ಆದರೆ ನನ್ನ ಪ್ರಕಾರ ಭಾರತದ ಮೆಜಾರಿಟಿ ಜನರು ಮೀನು, ಕೋಳಿ, ಕುರಿ, ಹಂದಿ, ಅಥವಾ ಇನ್ನಾವುದೇ ಪ್ರಾಣಿಗಳನ್ನು. (ನಮ್ಮ ದೇಶದ ಮುಸ್ಲಿಮರು, ಮಾದಿಗರು ದನ, ಎಮ್ಮೆ ತಿನ್ನುತ್ತಾರೆ ಹಾಗೂ ಪ್ರಪಂಚದ ಮೆಜಾರಿಟಿ ಜನರು ಜನರು ಬೀಫ್, ಪೋರ್ಕ್ ತಿನ್ನುತ್ತಾರೆ, ಈಶಾನ್ಯ ಭಾರತ ರಾಜ್ಯಗಳಲ್ಲಿ ನಾಯಿಯನ್ನೂ ತಿನ್ನುತ್ತಾರೆ. (ನಮ್ಮ ರಾಜ್ಯದಲ್ಲಿ ಬ್ರಾಹ್ಮಣರು, ಲಿಂಗಾಯತರು. ಕರಾವಳಿಯಲ್ಲಿ ಹಾಗೂ ಉತ್ತರದ ಕೆಲವು ರಾಜ್ಯಗಳಲ್ಲಿ ಬ್ರಾಹ್ಮಣರೂ ಮಾಂಸಹಾರಿಗಳೇ. ನಿಮಗೆ ತಿಳಿದಿರಬಹುದು. ನಮ್ಮ ಪರಿಸರದಲ್ಲಿ ಮಾಂಸಹಾರಿ ಸಸ್ಯಗಳೂ ಇವೆ. ನಮ್ಮೂರಿನಲ್ಲ್ಲಿ ಸಣ್ಣ ಪುಟ್ಟ ಇರುವೆಗಳನ್ನು ತಿನ್ನುವ ಸಸ್ಯಗಳನ್ನು ನಾನು ನೋಡಿದ್ದೇನೆ. ಹಿಂದೆ ದೊಡ್ಡ ಪ್ರಾಣಿಗಳನ್ನು ತಿನ್ನುವ ಸಸ್ಯಗಳೂ ಇದ್ದವೆಂದು ಹೇಳುತ್ತಾರೆ) ತಿನ್ನುವುದಕ್ಕೂ, ಇದೇ ಜನರು ಮಾಂಸಾಹಾರದೊಂದಿಗೆ ಸಸ್ಯಾಹಾರವನ್ನೂ ಹಾಗೂ ಕೆಲವೇ ಜನರು ಬರೀ ಸಸ್ಯಾಹಾರ ಸೇವಿಸುವುದಕ್ಕೂ ಜೈವಿಕವಾಗಿ ಯಾವುದೇ ವ್ಯತ್ಯಾಸವಿಲ್ಲ. ಯಾಕೆಂದರೆ ಜೀವದ ವಿಷಯಕ್ಕೆ ಬಂದರೆ ಪ್ರಾಣಿಗಳಿಗೂ ಸಸ್ಯಗಳಿಗೂ ವ್ಯತ್ಯಾಸವೇನಿಲ್ಲ. ಹಾಗೆ ನೋಡಿದರೆ ಪ್ರಾಣಿಗಳಿಗಿಂತಾ ಸಸ್ಯಗಳು ತೀರಾ ಪಾಪದವು. ಪ್ರಾಣಿಗಳಾದರೋ ತಮಗೆ ನೋವಾದರೆ ಅದನ್ನು ವ್ಯಕ್ತಪಡಿಸುತ್ತವೆ. ಆದರೆ ಸಸ್ಯಗಳು ಅದನ್ನೂ ಮಾಡಲು ಆಗುವುದಿಲ್ಲ. ಅವು ಮೂಕಜೀವಿಗಳು. ಪ್ರಾಣಿಗಳಾದರೋ ಒಂದೇ ಏಟಿಗೆ ಸಾಯುತ್ತವೆ. ಆದರೆ ಸಸ್ಯಗಳನ್ನು ಕಡಿದು, ಅವುಗಳ ಸಿಪ್ಪೆ (ಚರ್ಮ) ಸುಲಿದು, ಒಲೆಯ ಬೆಂಕಿಯ ಮೇಲಿಟ್ಟರೂ ಪೂರ್ತಿ ಜೀವ ಕಳೆದುಕೊಂಡಿರುವುದಿಲ್ಲ. ಅವುಗಳ ಜೀವಕೋಶಗಳೆಲ್ಲಾ ಪೂರ್ತಿ ಸತ್ತುಹೋದ ಮೇಲಷ್ಟೇ ಬೆಂದಿತು ಎನ್ನುತ್ತೇವೆ. ವಾದಿಸುವುದಾದರೆ ಪ್ರಾಣಿಗಳ ಮೇಲಿನ ಹಿಂಸೆಗಿಂತಾ ಹೆಚ್ಚಿನ ಹಿಂಸೆ ಇದು ಎನ್ನಬಹುದು. ಈ ನಿಟ್ಟಿನಲ್ಲಿ ನೋಡಿದಾಗ ನಾವು ಸಸ್ಯಗಳನ್ನು ಹೊಲಗಳಲ್ಲಿ ಕಟಾವು ಮಾಡುವುದೇ ಒಂದು ಸಾಮೂಹಿಕ ಬಲಿ. ಇದನ್ನು ಸಸ್ಯ ಬಲಿ ಎಂದು ಯಾರಾದರೂ ಕರೆದಿದ್ದಾರಾ? ಕರೆಯುವುದಿಲ್ಲ ಯಾಕೆ?

ಸಸ್ಯಾಹಾರ ಸಹಜವಾದದ್ದಾದರೆ ಮಾಂಸಾಹಾರ ಸಹಜ ಯಾಕಲ್ಲ? ಪರಿಸರದಲ್ಲಿ. ಕೇವಲ ಸಸ್ಯಾಹಾರಿಗಳೂ, ಕೇವಲ ಮಾಂಸಹಾರಿಗಳೂ ಇರುವಂತೆ ಬೆಕ್ಕು, ಹಾವು, ಮನುಷ್ಯನಂತಹ ಸರ್ವಾಹಾರಿ (ಆಮ್ನಿವೋರಸ್) ಜೀವಿಗಳಿವೆ. ಇದು ಸಹಜವಾದದ್ದು. ಒಂದು ಜೀವಿಯನ್ನು ಇನ್ನೊಂದು ಜೀವಿ ಅವಲಂಬಿಸಿಯೇ ಬದುಕುತ್ತದೆ. ಅದು ಪ್ರಾಣಿಯೋ ಸಸ್ಯವೋ ಎನ್ನುವುದು ಯಾಕೆ ಮುಖ್ಯವಾಗಬೇಕು? ಆದರೆ ಸಾಮಾನ್ಯವಾಗಿ ಜೀವಿಗಳು ಸಮಾನ ಪ್ರಜ್ಞೆಯ ಜೀವಿಗಳನ್ನು ತಿನ್ನುವುದಿಲ್ಲ. ಅಷ್ಟೆ. ಅದು ಕಾರ್ಯಸಾಧ್ಯವೂ ಅಲ್ಲ.

ಹಲವಾರು ಜನರು ನಾಗರಿಕತೆ, ಮಾನವೀಯತೆ ಮುಂತಾದ ನೆಪಗಳಲ್ಲಿ ಕುರಿಕೋಳಿ ಕಡಿಯುವುದನ್ನು ವಿರೋಧಿಸುತ್ತಾರೆ. ಮನುಷ್ಯನ ಸಹಜ ಆಹಾರವಾದ ಕುರಿಕೋಳಿಗಳ ಬಗ್ಗೆ ಕಾಳಜಿ ತೋರುವ ಇವರು ಸಹಮನುಷ್ಯರ ಬಗ್ಗೆ ಯಾಕೆ ಕಾಳಜಿ ತೋರುವುದಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಇತ್ತೀಚೆಗೆ ಕೊಪ್ಪಳದ ಬಳಿ ಕರಡಿ ಆಡಿಸುವವವರ ಕಸುಬನ್ನು ಪ್ರಾಣಿ ದಯಾಸಂಘ ಹಾಗೂ ಸರ್ಕಾರ ಸೇರಿ ಬಲವಂತವಾಗಿ ಬಿಡಿಸಿ ಕರಡಿ ಆಡಿಸುವ ಸಮುದಾಯವನ್ನೂ, ಅವರಿಲ್ಲದೇ ಬದುಕಲು ಕಷ್ಟಪಡುತ್ತಿರುವ ಕರಡಿಗಳನ್ನೂ ಬೇರ್ಪಡಿಸಿದ್ದು. ಇಂದು ಆ ಇಡೀ ಸಮುದಾಯದ ನೋವು ಈ ದಯಾಮಯಿಗಳಿಗೆ ಕಾಣಲೇ ಇಲ್ಲ.

ಸಾಮೂಹಿಕವಾಗಿ ಪ್ರಾಣಿಗಳನ್ನು ಕಡಿಯುವುದು ದೇವರ ಹೆಸರಲ್ಲಿಯೇ ನಡೆಯುತ್ತದೆಯಾದರೂ ಅದರಲ್ಲಿ ಮಾಂಸಹಾರದ ಬಹಿರಂಗ ಸಮರ್ಥನೆ ಇದೆ ಎಂತಲೇ ನನ್ನ ಭಾವನೆ. ನಗರಗಳಲ್ಲಿ ಪಕ್ಕದ ಮನೆಯ ಲಿಂಗಾಯತರಿಗೋ ಬ್ರಾಹ್ಮಣರಿಗೋ ಗೊತ್ತಾಗದಂತೆ ಮಾಂಸದ ಅಂಗಡಿಯಲ್ಲೇ ಎಲ್ಲಾ ಮಾಡಿಸಿಕೊಂಡು ಬಂದು ಒಲೆ ಮೇಲೆ ಬೇಯಿಸಬೇಕಾದ ಪರಿಸ್ಥಿತಿ ಹಳ್ಳಿಗಳಲ್ಲಿ ಇರುವುದಿಲ್ಲ. ಜನರು ಸಂತೋಷದಿಂದಲೇ ಹೋಗಿ ತಾವು ಅಪರೂಪಕ್ಕೆ ತಿನ್ನುವ ವಿಶೇಷ ಆಹಾರವನ್ನು ಸಾಮೂಹಿಕವಾಗಿ ತಯಾರು ಮಾಡುತ್ತಾರೆ. ಪಕ್ಕಾ ಸಸ್ಯಾಹಾರದ ಪ್ರತಿಪಾದಕರು ಮತ್ತು ಪ್ರಾಣಿ ಪ್ರೇಮವುಳ್ಳವರು ಹೀಗೆ ಮಾಡುವುದರಲ್ಲಿ ಜೀವವಿರೋಧಿತನವನ್ನು ಕಾಣಬಹುದೇನೋ. ಆದರೆ ನನ್ನ ಪ್ರಕಾರ ಯಾರು ಪ್ರಾಣಿಗಳನ್ನು ತಿನ್ನುತ್ತಾರೋ ಅವರೇ ಆ ಜೀವಗಳಿಗೆ ಕಾರಣವಾಗುವಂತವರು. ಉದಾಹರಣೆಗೆ, ನಮ್ಮ ಉರಿನಲ್ಲಿ ಒಂಭತ್ತು ವರ್ಷಕ್ಕೊಮ್ಮೆ ನಡೆಯುವ ಮಾರಿಜಾತ್ರೆಯ ದಿನ ಮನೆಗೊಂದರಂತೆ ಎಂದರೂ ಐನೂರು ಕುರಿಗಳನ್ನು ಕಡಿಯಲಾಗುತ್ತದೆ. ಹೀಗೆ ೫೦೦ ಕುರಿಗಳು ಒಂದೇ ದಿನ ಸಾಯುವುದನ್ನು ಕಲ್ಪಿಸಿಕೊಂಡ ಪ್ರಾಣಿಪ್ರಿಯರು ಶಾಂತಂ ಪಾಪಂ ಎಂದು ಹಿಂಸೆ ಪಟ್ಟುಕೊಳ್ಳಬಹುದು. ಆದರೆ ಒಂದೊಮ್ಮೆ ನಮ್ಮೂರಿನ ಜನರೆಲ್ಲರೂ ಸಸ್ಯಾಹಾರಿಗಳೇ ಆಗಿದ್ದಿದ್ದಲ್ಲಿ ಆ ಐನೂರು ಪ್ರಾಣಿಗಳೂ (ಆಡುಗಳು) ಈ ಭೂಮಿಯ ಮೇಲೆ ಜನ್ಮ ತಾಳಲು ಅವಕಾಶವೇ ಇರುತ್ತಿರಲಿಲ್ಲ. ಮಟನ್, ಚಿಕನ್ ತಿನ್ನಬಾರದು ಎಂದು ಹೇಳುವುದು ಕೋಳಿಗಳ, ಕುರಿಗಳ ಸಂತತಿಯನ್ನು ಭೂಮಿಯ ಮೇಲೆ ಉಳಿಸಲೇಬಾರದು ಎಂದು ಹೇಳಿದಂತೆ.

ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳಲ್ಲಿ ಜನರು ಕುರಿಕೋಳಿಗಳನ್ನು ಸಾಕುವಾಗ ಅವುಗಳನ್ನು ಮುಂದೆ ತಿನ್ನುವುದೇ ಆದರೂ ಅವುಗಳನ್ನು ಸಾಕಷ್ಟು ಪ್ರೀತಿ, ಜತನದಿಂದಲೇ ಸಾಕುತ್ತಾರೆ. ಕೋಳಿ ಮರಿಯೊಂದನ್ನು ಹದ್ದು ಕಚ್ಚಿಕೊಂಡು ಹೋದರೆ ಮುಂದೆ ತಿನ್ನಲು ಒಂದು ಕೋಳಿ ಕಡಿಮೆಯಾಯಿತಲ್ಲಾ ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ ಅದರ ಮೇಲಿನ ಕಾಳಜಿಯಿಂದ ಮರುಗುತ್ತಾರೆ. ಹಾಗೆಯೇ ಜಾತ್ರೆಗಾಗಿ ತಂದ ಕುರಿಯನ್ನು ಸಾಕುವಾಗ ಅದರೊಂದಿಗೆ ಒಂದು ಬಾಂಧವ್ಯವೂ ಇರುತ್ತದೆ. ಆದರೆ ಅವುಗಳನ್ನು ಸಾಕುವ ಉದ್ದೇಶವೇ ತಿನ್ನುವುದಕ್ಕಾಗಿ ಎಂಬುದೂ ಸರ್ವವಿಧಿತವಾಗಿರುತ್ತದಷ್ಟೆ. ಹದಿನೈದು ದಿನಗಳ ಹಿಂದೆ ನಮ್ಮ ಮನೆಯ ಎಮ್ಮೆ ಅನಿರೀಕ್ಷಿತವಾಗಿ ತೀರಿಕೊಂಡು ಬಿಟ್ಟಿತು. ಮನೆಯವರೆಲ್ಲರಿಗೂ ದುಃಖವಾಯಿತು. ಕಾರಣ ಕಳೆದ ನಾಲ್ಕಾರು ವರುಷಗಳಿಂದ ಅದರೊಂದಿಗಿನ ನಮ್ಮ ಒಡನಾಟ. ಅದರಿಂದ ನಾವು, ನಮ್ಮಿಂದ ಅದು ಎಂಬಂತಿತ್ತು. ಸರಿ. ಬೆಳಿಗ್ಗೆ ನಮ್ಮೂರಲ್ಲಿ ಗಫಾರರು ಎಂದು ಕರೆಯುವವರಿಗೆ ಹೇಳಿ ಕಳುಹಿಸಲಾಯಿತು. ಅವರು ಅದನ್ನು ಮಾಂಸಕ್ಕಾಗಿ ಎತ್ತಿಕೊಂಡು ಹೋದರು. ಇದು ಪ್ರತಿ ಊರಿನಲ್ಲಿ ಕಾಣುವ ದೃಶ್ಯ. ಇದು ರೈತಾಪಿ ಬದುಕಿನ ಸಹಜತೆಯಲ್ಲಿ ಸೇರಿರುತ್ತದೆ. ಪ್ರತಿವರ್ಷದ ದೀಪಾವಳಿಯಲ್ಲಿ ದನ ಹಸುಗಳಿಗೆ ನಾವು ಪಾದ ಪೂಜೆ ಪಾಡುತ್ತೇವೆ. ಅವು ಸತ್ತ ಮೇಲೆ ಅದನ್ನು ತಿನ್ನುವ ಜನರಿಗೇ ಒಪ್ಪಿಸುತ್ತೇವೆ. ತಿನ್ನುವವರು ಅಷ್ಟರ ಮಟ್ಟಿಗೆ ತಿನ್ನದವರನ್ನು ಸಂಕಟದಿಂದ ಪಾರು ಮಾಡುತ್ತಾರೆ.

ಹೀಗಾಗಿ ಮಾಂಸಾಹಾರ ಈ ಜಗತ್ತಿನಲ್ಲಿ ಸಹಜವಾದದ್ದು. ಹಾಗೆಯೇ ಸೊಕಾಲ್ಡ್ ಪ್ರಾಣಿಬಲಿಯ ಮೂಲಕ ಮಾಂಸಾಹಾರದ ಬಹಿರಂಗ ಸಮರ್ಥನೆಯೂ ಕೂಡಾ. ಇದನ್ನು ನಿಷೇಧಿಬೇಕಿಲ್ಲ. ಅದು ನಮ್ಮ ಸಂಸ್ಕೃತಿಯ ಒಂದು ಭಾಗವಷ್ಟೇ. ಅದು ಇತಿಹಾಸ ಕ್ರಮದಲ್ಲಿ ರಹಮತ್ ತರೀಕೆರೆಯವರು ಹೇಳಿದಂತೆ ಅದು ಪ್ರತಿಸಂಸ್ಕೃತಿಯೂ ಇರಬಹುದು. ಇನ್ನು ರೂಪಾ ಹಾಸನ್ ಅವರು ಉಲ್ಲೇಖಿಸಿರುವ ಪ್ರಾಣಿಬಲಿ ನಿಷೇಧ ಕಾಯ್ದೆಗಳನ್ನು ಮಾಡಿರುವವರ ಉದ್ದೇಶವೂ ಪ್ರಶ್ನಾರ್ಹವಾದದ್ದೇ. ಇತ್ತೀಚೆಗೆ ಜಾನುವಾರು ಹತ್ಯಾ ಕಾಯ್ದೆಯನ್ನು ಕರ್ನಾಟಕ ಸರ್ಕಾರವು ಸಂಘಪರಿವಾರದ ಕುಮ್ಮಕ್ಕಿನಿಂದ ಜಾರಿಗೊಳಿಸಿತು. ಹಾಗಂತ ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ. ಪ್ರಾಣಿಗಳ ಬಗ್ಗೆ ಕೃತಕ ದಯೆ ತೋರುವ ಅನೇಕರು  ಆಂತರ್ಯದಲ್ಲಿ ಜಾತಿ ಲಿಂಗ ಅಸಮಾನತೆಯನ್ನು ಪ್ರತಿಪಾದಿಸುವವರೂ ಮನುಷ್ಯರನ್ನು ಧರ್ಮದ ಹೆಸರಲ್ಲಿ ಕೊಚ್ಚಿ ಕೊಲ್ಲುವುದನ್ನೂ, ಹಾಗೂ ಹೆಣ್ಣೊಂದರ ಭ್ರೂಣವನ್ನು ಸೀಳುವುದನ್ನು ಸಮರ್ಥಿಸುವವರೂ ಆಗಿತ್ತಾರಲ್ಲಾ.... ಇದ್ಯಾಕೆ?

ಪ್ರಾಣಿಹಿಂಸೆ, ಮಾನವೀಯತೆ, ದಯೆ ಇಂತಹವುಗಳ ಬಗ್ಗೆ ಚರ್ಚಿಸುವಾಗ ಈ ಪ್ರಶ್ನೆಗಳೂ ಮುಖ್ಯವಾಗುತ್ತವೆ. ಇವುಗಳನ್ನು ಬಿಟ್ಟು ಯೋಚಿಸಿದಾಗ ಕಿರಣ್ ಹೇಳಿದಂತೆ ನಾವು ನಮ್ಮತನವನ್ನೇ ಅಲ್ಲಗಳೆದುಕೊಳ್ಳಬೇಕಾಗುತ್ತದೆ.

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು


ಶಾಲೆಗಳಲ್ಲಿ ಭಗವದ್ಗೀತೆಯನ್ನು ಪ್ರಚಾರ ಮಾಡುವ ಅಭಿಯಾನ ಸಂಬಂಧ ಈಗಾಗಲೇ ಪತ್ರಿಕೆಗಳಲ್ಲಿ ವಿಸ್ತ್ರತ ಚರ್ಚೆ ನಡೆದಿದೆ. ಈ ಚರ್ಚೆಗಳನ್ನು ಗಮನಿಸಿರುವ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ರಾಜಾರಾಮ ಹೆಗಡೆಯವರು ಈ ಪ್ರತಿಕ್ರಿಯೆ ಕಳುಹಿಸಿದ್ದಾರೆ. ಲೇಖನ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸಂಪಾದಕೀಯದ ಓದುಗರ ಚರ್ಚೆಗೆ ಈ ಲೇಖನವನ್ನು ಇಡುತ್ತಿದ್ದೇವೆ. ಪ್ರತಿಕ್ರಿಯೆಗಳಿಗೆ ಸ್ವಾಗತ. ಹೆಗಡೆಯವರು ಪ್ರತಿಪಾದಿಸುವ ಕೆಲವು ವಿಷಯಗಳ ಕುರಿತು ನಮಗೂ ಸ್ಪಷ್ಟ ಭಿನ್ನಾಭಿಪ್ರಾಯವಿದ್ದರೂ ಅವರು ವಿಚಾರ ಮಂಡನೆಗೆ ಬಳಸಿರುವ ಸಂಯಮದ ಭಾಷೆ ಇವತ್ತಿನ ಅಗತ್ಯ ಎಂದೇ ಭಾವಿಸಿದ್ದೇವೆ. ಒಂದು ಆರೋಗ್ಯಕರ ಚರ್ಚೆಯ ನಿರೀಕ್ಷೆ ನಮ್ಮದು
- ಸಂಪಾದಕೀಯ


ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ  ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು  ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.


ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ  ಅದೊಂದು ಅಪಾಯಕಾರಿ ಗ್ರಂಥವಾಗಿದೆ.  ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.


ಈ ನಡುವೆ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ  ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ. ಒಂದೊಮ್ಮೆ ಅದು ಹಿಂದೂ ಸಂಸ್ಕೃತಿಯ ಉದ್ಧಾರಕ್ಕೆ ಸಹಕರಿಸುತ್ತದೆ ಎಂಬುದಾಗಿ ಅವರು ನಂಬಿಕೊಂಡಿದ್ದರೂ ಕೂಡ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುತ್ತಿದ್ದಾರೆಯೇ ಹೊರತೂ ಆಧುನಿಕ ಪರಿಭಾಷೆಯಲ್ಲಿ ಮಾತನಾಡುತ್ತಿಲ್ಲ. ನಮಗೆ ತಿಳಿದುಬರುವುದೇನೆಂದರೆ ಅವರ ಕಾರ್ಯಕ್ರಮದಲ್ಲಿ  ಎಲ್ಲಾ ಹಿನ್ನೆಲೆಯ ಮಕ್ಕಳೂ ಭಾಗವಹಿಸಿದ್ದಾರೆ ಹಾಗೂ ಅವರಾಗಲೀ ಅವರ ಪಾಲಕರಾಗಲೀ ಈ ಕಾರ್ಯಕ್ರಮದ ಕುರಿತು  ವಿರೋಧವನ್ನು ವ್ಯಕ್ತಪಡಿಸಿಲ್ಲ.

ಭಗವದ್ಗೀತಾ ಅಭಿಯಾನವನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್ ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮೀಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಚರ್ (Scripture) ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.

ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು  ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ  ರಿಲಿಜಿಯಸ್ ಸ್ಕ್ರಿಪ್ಚರ್‌ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಚರ್‌ಅನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಚರ್ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ.  ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್ವಾದಿಗಳಿಬ್ಬರೂ ಇದ್ದಾರೆ.

ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ  ಹೊಸ ಪಟ್ಟವನ್ನು ಕಟ್ಟಿ  ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳುವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂರ್ತಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂ ಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ.  ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು  ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.

ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ದಲಿತ ಹಾಗೂ ಪ್ರಗತಿಪರ ಚಿಂತಕರಲ್ಲಿ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ ೬೦ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಫ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಫ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ್ಲ.

ಇನ್ನು ದಿನೇಶ್ ಅಮೀನ್ಮಟ್ಟು ಅವರು ದಿನಾಂಕ ೧೮-೭-೨೦೧೧ರ ಪ್ರಜಾವಾಣಿಯಲ್ಲಿ ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯನ್ನು ಸೇರಿಸಿದ್ದಾರೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ  ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿರ್ದೇಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇತಿಹಾಸಕಾರರು ಈಗಾಗಲೇ ಕಸದಬುಟ್ಟಿಗೆಸೆದಿರುವ ಈ ಚರ್ಚೆಯನ್ನು ದಿನೇಶ್ ಅಮೀನ್ಮಟ್ಟು ಅವರಿನ್ನೂ ಇತಿಹಾಸ ಎಂಬುದಾಗಿ ನಂಬಿಕೊಂಡಿರುವುದೇ ಆಶ್ಚರ್ಯ.

ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು ೧) ಅದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬ ಪೂರ್ವಗೃಹೀತದಿಂದ ಹಾಗೂ ೨) ಅದು ಜಾತಿ/ಜನಾಂಗ ಸಂಘರ್ಷದ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ   ಕೋಮು  ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.

ಸ್ವರ್ಣವಲ್ಲಿ ಶ್ರೀಗಳು ಅಮೀನ್ಮಟ್ಟು ಅವರ ಹೊಸ ನಿರೂಪಣೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡುವುದಕ್ಕೂ ಮೊದಲು  ಈ ಮೇಲಿನ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಬಹು ಸಂಸ್ಕೃತಿಗಳನ್ನು ಸಾಮರಸ್ಯದಿಂದ ಪಾಲಿಸಬೇಕೆನ್ನುವ ಉದ್ದೇಶವನ್ನೊಳಗೊಂಡ ನಮ್ಮ ಸೆಕ್ಯುಲರ್ ರಾಷ್ಟ್ರದ ಆಶಯಕ್ಕೆ    ಭಗವದ್ಗೀತಾ ಅಭಿಯಾನಕ್ಕಿಂತ ಇಂಥ ನಿರೂಪಣೆಗಳೇ  ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಇತಿಹಾಸಗಳನ್ನು ಕಟ್ಟಿ  ಅವುಗಳನ್ನು ನಮ್ಮ ಮಠಾಧಿಪತಿಗಳು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ  ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅದು ಅರ್ಥವಾಗುವುದಿಲ್ಲ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.

ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು.  ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ  ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ  ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.

ಭಗವದ್ಗೀತೆಯಂಥ ಗ್ರಂಥಗಳ ಕುರಿತು ಇಂದು ಇರುವ ಮೇಲಿನ ಚರ್ಚೆಗಳು, ಹೋರಾಟಗಳು ಏನನ್ನು ದೃಷ್ಟಾಂತಪಡಿಸುತ್ತವೆ? ನಮ್ಮ ಸಂಸ್ಕತಿಯಲ್ಲಿ ಅದರ ಸ್ಥಾನಮಾನವೇನು ಹಾಗೂ ಅದರ ಜೊತೆಗೆ ವ್ಯಕ್ತಿಯೊಬ್ಬನು ಯಾವ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕೆಂಬುದೇ ನಮಗೆ ಮರೆತುಹೋಗಿದೆ. ಬದಲಾಗಿ ಅದನ್ನೊಂದು ಹಿಂದೂ ರಿಲಿಜಿಯಸ್ ಸ್ಕ್ರಿಪ್ಚರ್ ಎಂದೋ ಅಥವಾ ಆರ್ಯ-ಬ್ರಾಹ್ಮಣರ ಮ್ಯಾನಿಫೆಸ್ಟೋ ಅಥವಾ ಇತಿಹಾಸ ಎಂದೋ ಭಾವಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯವಾಗಿದೆ. ಹಿಂದಿನ ಅನೇಕ ತಲೆಮಾರುಗಳ ಅನೇಕ ವ್ಯಕ್ತಿಗಳಿಗೆ ಅದೊಂದು ಜೀವನ ಕಲಿಕೆಯ ಆಕರವಾಗಿದ್ದುದಂತೂ ಹೌದು.  ಒಂದು ಸಂಗೀತ ಪುಸ್ತಕದಂತೆ ಆಧ್ಯಾತ್ಮವಿದ್ಯೆಯ ಪುಸ್ತಕವಾಗಿ ಅದು ಸಹಕರಿಸಬಲ್ಲದು ಎಂಬುದಾಗಿ ಸಂಪ್ರದಾಯಸ್ಥರು ಭಾವಿಸಿದ್ದಾರೆ.  ಸ್ವರ್ನವಲ್ಲಿ ಶ್ರೀಗಳು ಭಗವದ್ಗೀತೆಯ ಈ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ವಿಧ್ಯಾರ್ಥಿಗಳಿಗೆ ಆ ಗ್ರಂಥದ ಕುರಿತು ಆಸಕ್ತಿ ಮೂಡಿಸುವ ಆದರ್ಶವನ್ನಿಟ್ಟುಕೊಂಡಿದ್ದಾರೆ ಎಂಬುದು ಅವರ ಪ್ರಚಾರ ಟಿಪ್ಪಣಿಗಳನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯ ಧುರೀಣರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಬೇರೆಯದೇ ರಾಜಕೀಯ ಕಾರಣಗಳಿವೆ ಎಂಬುದು ಸ್ಪಷ್ಟ. ಆದರೆ ಪ್ರಜ್ಞಾವಂತರು ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಕೂಡ ಗಮನಿಸಬೇಕು. ಇಂಥ ಸ್ವಾಮಿಗಳೆಲ್ಲ ಸತತ ಅಧ್ಯಯನಶೀಲರಾಗಿರುತ್ತಾರೆ.  ಅವರಿಗೂ  ನಮ್ಮಲ್ಲಿ ಅನೇಕರಂತೆ ಸಮಾಜದ ಕುರಿತು ಕಾಳಜಿಗಳಿವೆ ಹಾಗೂ ಸ್ವಂತ ನಿಲುವುಗಳಿವೆ.

ನಾವು ನಿಜವಾಗಿ ಜ್ಞಾನಾಸಕ್ತರೇ ಆಗಿದ್ದಲ್ಲಿ ಇಂಥ ಸಾಂಪ್ರದಾಯಿಕ ವಿದ್ವಾಂಸರ ಜೊತೆಗೆ ಹೇಗೆ ಸಂವಾದವನ್ನು ಏರ್ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ. ಹಾಗೂ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದಿದ್ದೇ ಹೌದಾದರೆ ಸೆಕ್ಯುಲರಿಸಂನ ಸ್ವರೂಪವನ್ನು ಮೊದಲು ತಿಳಿದುಕೊಳ್ಳೋಣ

Thursday, August 4, 2011

ಚಿಂತಾಮಣಿಯ ನರಮೇಧ: ಮಾಧ್ಯಮಗಳ ಹೊಣೆಗಾರಿಕೆಯ ಪ್ರಶ್ನೆಗಳು...


ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಚ್ಚವಾರ್ಲಪಲ್ಲಿ ಮತ್ತು ಯರ್ರಕೋಟಾದಲ್ಲಿ ಮಂಗಳವಾರ ಕಳ್ಳರು, ಮೋಸಗಾರರು ಎಂದು ಹೇಳಲಾದ ಹತ್ತು ಮಂದಿ ಹತರಾಗಿದ್ದಾರೆ. ಊರಿನ ಜನ ರೊಚ್ಚಿಗೆದ್ದು ಕೊಚ್ಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನೆಲದ ಕಾನೂನಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ಕಳೆದುಕೊಂಡೋ, ಅಥವಾ ಅನೇಕ ಬಾರಿ ಮೋಸ, ದಗಾ, ಕಳ್ಳತನಕ್ಕೆ ಒಳಗಾಗಿ ಬೇಸತ್ತೋ ಆ ಊರಿನ ಜನ ರೊಚ್ಚು ತೀರಿಸಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ ಪ್ರಸ್ತುತ ವ್ಯವಸ್ಥೆ ಜತೆ ಜತೆಗೆ ನ್ಯಾಯಾಲಯದ ಹೊರಗೆ ವಿಚಾರಣೆಗೆ ಮುಂದಾಗುವ ಮಾಧ್ಯಮವೂ ಮೇಲಿಂದ ಮೇಲೆ ಹೆಚ್ಚುತ್ತಿರುವ ಇಂಥ ಘಟನೆಗಳಿಗೆ ಪ್ರೇರಣೆಯಾಗುತ್ತಿದೆ ಎಂದರೆ ಯಾವ ಮಾಧ್ಯಮ ಮಿತ್ರರು ಅನ್ಯಥಾ ಭಾವಿಸಬಾರದು. ಕೆಲ ಮಾಧ್ಯಮಗಳ ಬೇಜವಾಬ್ದಾರಿ ವರ್ತನೆ ಅಲ್ಲಿನ ಜನರಿಗೆ ತಮ್ಮ ರಾಕ್ಷಸೀ ಕೃತ್ಯಕ್ಕೆ ಸ್ಫೂರ್ತಿ ನೀಡಿದ್ದರೆ ಆಶ್ಚರ್ಯವಿಲ್ಲ.

ನಿಜ, ಈ ಘಟನೆಯನ್ನು ಮಾಧ್ಯಮಗಳು ನೇರ ದೃಶ್ಯಾವಳಿಯಲ್ಲಿ ವರದಿ ಮಾಡಿಲ್ಲ. ಆದರೆ, ಪೊಲೀಸು ಹಾಗು ನ್ಯಾಯಾಲಯಗಳಂಥ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡ ಜನರ ಈ ತರಹದ ಪ್ರತಿಕ್ರಿಯೆಗಳ ಬೆಂಕಿಗೆ ತುಪ್ಪ ಸುರಿಯುತ್ತ ಬಂದಿರುವುದು ನಮ್ಮ ಮಾಧ್ಯಮಗಳೇ ಎಂಬುದು ಸುಳ್ಳಲ್ಲ. ಮಾಧ್ಯಮಗಳ ಈ ಸ್ವರೂಪದ ಪ್ರಚೋದನೆಗಳು ಇಂಥ ಘಟನೆಗಳಿಗೆ ಪರೋಕ್ಷ ಬೆಂಬಲವನ್ನು ಕೊಡುತ್ತಲೇ ಬಂದಿವೆ.

ಹೀಗೆ ಹತ್ತು ಜನರನ್ನು ಕೊಚ್ಚಿ ಕೊಂದ ದಿನವೇ, ಅದೇ ಕೋಲಾರದ ಇನ್ನೊಂದು ಹಳ್ಳಿಯಲ್ಲಿ ರೈತ ಮಹಿಳೆಯ ಸರ ಕದಿಯಲು ಹೋಗಿ ಸಿಕ್ಕಿಬಿದ್ದವನ ಪಾಡನ್ನು ಸುದ್ದಿವಾಹಿನಿಗಳು ಬಿತ್ತರಿಸುತ್ತಿದ್ದವು. ಅವನನ್ನು ಕಂಬಕ್ಕೆ ಕಟ್ಟಿ ಹಾಕಿ ಹೀನಾಯವಾಗಿ ಹಿಂಸಿಸುತ್ತಿದ್ದ ಹಸಿ ಹಸಿ ದೃಶ್ಯಗಳನ್ನು ಈ ನಾಡಿನ ಜನರಿಗೆ ಉಣಬಡಿಸಲಾಯಿತು.

ಇಂತಹ ದೃಶ್ಯಗಳು ಹೊಸತೇನಲ್ಲ. ರಾಷ್ಟ್ರೀಯ ವಾಹಿನಿಗಳಲ್ಲಿ ಇಂತಹ ದೃಶ್ಯಗಳು ಆಗಾಗ ಕಾಣ ಸಿಗುತ್ತವೆ. ಹಿಂಸೆಯ ವೈಭವೀಕರಣ ಟಿಆರ್‌ಪಿ ಹೆಚ್ಚಿಸಲು ಸಹಾಯಕ ಎಂದು ಮನಗಂಡಿರುವ ವಾಹಿನಿಗಳು ಅಂತಹದೇ ದೃಶ್ಯಗಳಿಗಾಗಿ ಹಾತೊರೆಯುವುದು ಸರ್ವೇ ಸಾಮಾನ್ಯ. ಕೆಲ ವಾಹಿನಿಗಳ ವರದಿಗಾರರಂತೂ ಹಿಂಸೆಯ ದೃಶ್ಯಗಳಿಗಾಗಿ ಸುದ್ದಿ ಮೂಲಗಳನ್ನು ಬುಕ್ ಮಾಡುತ್ತಾರೆ. ನಾವು ಬರುವ ತನಕ ನೀವು ಹಿಡಿದಿರುವವನನ್ನು ಪೊಲೀಸ್‌ಗೆ ಕೊಡಬಾರದು ಎಂಬ ಷರತ್ತಿನೊಂದಿಗೆ ಘಟನೆಯ ಸ್ಥಳಕ್ಕೆ ವರದಿಗಾರರು ಧಾವಿಸುತ್ತಾರೆ.

ಒಂದು ಪಕ್ಷ ಈಗಾಗಲೇ ಪ್ರತಿಸ್ಪರ್ಧಿ ಚಾನೆಲ್ ಸಿಬ್ಬಂದಿಗೆ ಹೊಡೆಯುವ ದೃಶ್ಯಗಳು ಸಿಕ್ಕಿದ್ದು, ತನ್ನ ಕೆಮರಾಕ್ಕೆ ಸಿಗಲಿಲ್ಲ ಎಂದರೆ, ವರದಿಗಾರರು ತಮ್ಮ ಕೆಮರಾಕ್ಕಾಗಿ ಮತ್ತೊಂದು ಸುತ್ತಿನ ಹಿಂಸೆಗಾಗಿ ಆಗ್ರಹಿಸುತ್ತಾರೆ. ಹಾಗೂ ಒಮ್ಮೆ ರೋಚಕ ದೃಶ್ಯಗಳು ಮಿಸ್ ಆದರೆ ವರದಿಗಾರರು ಸುದ್ದಿ ತಿಳಿಸಿ ಘಟನಾ ಸ್ಥಳಕ್ಕೆ ಕರೆಸಿದವರನ್ನು ಹೀಗಳೆಯುವುದಂತೂ ನಿಶ್ಚಿತ.

ನೋಡುಗ ವರ್ಗ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳನ್ನು ವೀಕ್ಷಿಸಲು ಬಯಸಲು ಕಾರಣ ಎರಡು. ಸಹಜವಾಗಿ ಹಿಂಸೆ ಆಕರ್ಷಣೀಯ. ಅದೇ ಕಾರಣಕ್ಕೆ ಸಿನಿಮಾಗಳಲ್ಲಿ ಫೈಟಿಂಗ್ ದೃಶ್ಯಗಳಿರುತ್ತವೆ. ಅಷ್ಟ್ಯಾಕೆ, ಮನೆ ಪಕ್ಕದಲ್ಲಿ ಮಾರಾಮಾರಿ ನಡೆಯುತ್ತಿದ್ದರೆ ಜನ ನಿಂತು ನೋಡಲು ಬಯಸುತ್ತಾರೆ. ಎರಡನೇ ಕಾರಣ - ಸಂವಿಧಾನಾತ್ಮಕ ಮಾರ್ಗದಲ್ಲಿ ನ್ಯಾಯ ಪಡೆಯಲು ತೊಡಕಾದಾಗ ಅಥವಾ ತಡವಾದಾಗ ಮನುಷ್ಯ ಸಹಜವಾಗಿ ರೊಚ್ಚಿಗೇಳುತ್ತಾನೆ. ಹಾಗಾದಾಗ ಯಾರಾದರೂ ವೈಯಕ್ತಿಕ ನೆಲೆಯಲ್ಲಿ ತಪ್ಪಿತಸ್ಥನಿಗೆ ಶಿಕ್ಷೆ ನೀಡಲು ಮುಂದಾದರೆ  ಮನುಷ್ಯನ ಒಳಗೇ ಇರುವ ಕ್ರೌರ‍್ಯದ ವ್ಯಕ್ತಿತ್ವಕ್ಕೆ ಅದು ಆಕರ್ಷಣೀಯವಾಗುತ್ತದೆ.

ಅಂತೆಯೇ ಇದೇ ದೃಶ್ಯಗಳು ಪದೇ ಪದೇ ಟಿವಿ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿದ್ದರೆ ಇತರರಿಗೆ ಪ್ರೇರಣೆಯಾದರೆ ಅಚ್ಚರಿಯೇನಿಲ್ಲ. ಕೋಲಾರದ ಎರಡು ಹಳ್ಳಿಗಳಲ್ಲಿ ನಡೆದಿರುವುದು ಇದೇ. ಮಾಧ್ಯಮ ಸಂಸ್ಥೆಗಳು ಇನ್ನಾದರೂ ಜವಾಬ್ದಾರಿಯಿಂದ ನಡೆದುಕೊಳ್ಳಲಿ.

ಕೊನೆ ಮಾತು: ವಿಚಿತ್ರ ನೋಡಿ, ಇದೇ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ಸಾಲು ಸಾಲು ದಲಿತರ ಮನೆಗಳು ಬೆಂಕಿಗೆ ಆಹುತಿಯಾದವು, ಸಾಲು ಸಾಲು ಹೆಣಗಳು ಮಲಗಿದವು. ಇದುವರೆಗೆ ಯಾರಿಗೂ ಶಿಕ್ಷೆಯಾಗಲಿಲ್ಲ. ಆದರೆ, ಕಳ್ಳರು ಎಂದು ಹೇಳಲಾದ ಹತ್ತು ಮಂದಿಗೆ ಇನ್‌ಸ್ಟಂಟ್ ಆದ ಘೋರ ಶಿಕ್ಷೆಯನ್ನು ನೀಡಿದ್ದು ಅಲ್ಲಿಯ ಜನ.

ಇತ್ತ ಗುಟ್ಟಾಗಿ ನಡೆದ ಪ್ರಮಾಣ ವಚನ: ಪ್ರಕಾಶ್ ಶೆಟ್ಟಿ ಪಂಚ್


Tuesday, August 2, 2011

ಪ್ರಾಣಿ ಬಲಿ: ಕಿರಣ್ ಗಾಜನೂರು ಬರೆದ ಟಿಪ್ಪಣಿಗಳು


ಪ್ರಾಣಿ ಬಲಿ ಕುರಿತ ಚರ್ಚೆಯನ್ನು ಡಾ. ಕಿರಣ್  ಎಂ. ಗಾಜನೂರು ಮುಂದುವರೆಸಿದ್ದಾರೆ. ನಮ್ಮ ಆಚರಣೆ ಮತ್ತು ಅವುಗಳ ವಿವರಣೆಯಲ್ಲಿರುವ ದ್ವಂದ್ವಗಳ ಕುರಿತು ಕಿರಣ್ ಲೇಖನ ಬೆಳಕು ಚೆಲ್ಲುವ ಯತ್ನ ನಡೆಸುತ್ತದೆ. ಚರ್ಚೆ ಮುಂದುವರೆಯುತ್ತದೆ. 
-ಸಂಪಾದಕೀಯ

ಸಂಪಾದಕೀಯ ತಾಣದಲ್ಲಿ ಪ್ರಾಣಿಬಲಿ ಕುರಿತು ನಡೆಯುತ್ತಿರುವ ಚರ್ಚೆ ಒಂದು ಅರ್ಥದಲ್ಲಿ (ನಮ್ಮ ಸಮಾಜವನ್ನು ನಾವು ಭೌದ್ಧಿಕವಾಗಿ ಅರ್ಥಮಾಡಿಕೊಂಡಿರುವ ದೃಷ್ಟಿಯಿಂದ) ಬಹಳ ಪ್ರಮುಖವಾದುದು ಇದರ ಕುರಿತಂತೆ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಆ ವಾದಗಳನ್ನು ಗುರುತಿಸುವ ಮೂದಲು ನಮಗೆ ಆ ರೀತಿಯ ಗ್ರಹಿಕೆಗಳು ಹೇಗೆ ಬಂದವು ಎಂದು ನೋಡುವುದು ಅಂತ್ಯಂತ ಪ್ರಮುಖ ಮತ್ತು ಅಗತ್ಯ

ನಾವು ಆಳಲ್ಪಡುತ್ತಿರುವ  ನಮ್ಮ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರವಾಗಿರುವ ಉದಾರವಾದಿ ಮೌಲ್ಯಗಳೆಂದರೆ: ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ. ಈ ಮೌಲ್ಯಗಳು ನಮಗೆ ಬಳುವಳಿಯಾಗಿ ಬಂದಿದ್ದು ಪಶ್ಚಿಮದಿಂದ. ನೂರಾರು ವರ್ಷಗಳ  ಕಾಲ ಯುರೋಪಿನಲ್ಲಿ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ನಡೆದ ಹೋರಾಟದ ಫಲವಾಗಿ ಹುಟ್ಟಿಕೊಂಡ ಈ ಮೌಲ್ಯಗಳು ಕ್ರಮೇಣ ವಸಾಹತುಶಾಹಿಯ ಕಾಲದಲ್ಲಿ ಜಾಗತಿಕ ಮೌಲ್ಯಗಳೆಂದು ಗುರುತಿಸಲ್ಪಟ್ಟವು.

ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕ? ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ (ಓದಿ: ಎಡ್ವರ್ಡ ಸಯೀದ್, ಬಾಲಗಂಗಾಧರ, ಮತ್ತು ಆಧುನಿಕೋತ್ತರ ಚಿಂತಕರು). ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸಬೇಕಾದ ಅಗತ್ಯವಿಲ್ಲ. ಯುರೋಪಿನ ಸಂಸ್ಕೃತಿಯ ಧೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡಿದಾಗ ಇತರ ಸಂಸ್ಕೃತಿಗಳ ಮೌಲ್ಯಗಳು ಉದಾರವಾದಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರತಿರೋಧವಾಗಿ ಕಂಡು ಬಂದಿದ್ದು ಆಶ್ಚರ್ಯಕರವಾದ ಬೆಳವಣಿಗೆಯೇನೂ ಅಲ್ಲ. ಭಾರತದ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಇಂತಹ ಮೌಲ್ಯಗಳಿಗೆ ವ್ಯತಿರಿಕ್ತವಾಗಿರುವುದರಿಂದ ಆಧುನಿಕ ಉದಾರವಾದಿ ಪ್ರಜಾಪ್ರಭುತ್ವಕ್ಕೆ ನಮ್ಮ ಸಮಾಜವನ್ನು ಸಜ್ಜುಗೊಳಿಸಲು ಸಾಮಾಜಿಕ ಸುಧಾರಣೆ ಅನಿವಾರ್ಯವೆನ್ನುವ ತೀರ್ಮಾನಕ್ಕೆ ನಮ್ಮ ಸಾಮಾಜಿಕ, ರಾಜಕೀಯ ಚಿಂತಕರು ಬಂದಿದ್ದು ಈ ಕಾರಣದಿಂದಲೆ.

ಭಾರತೀಯ ಚಿಂತಕರುಗಳಲ್ಲಿ ನಮ್ಮ ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಬದಲಾವಣೆ ಆಗಬೇಕು ಎನ್ನುವುದರಲ್ಲಿ ಒಮ್ಮತದ ಅಭಿಪ್ರಾಯವಿದ್ದರೂ ಸಹ ಹಾಗೆ ಮಾಡಬೇಕಾದ ಬದಲಾವಣೆಗಳ ಉದ್ದೇಶ ಮತ್ತು ಸ್ವರೂಪದ ಬಗ್ಗೆ ವಿಭಿನ್ನ, ಪರಸ್ಪರ ವಿರೋಧಿ ನಿಲುವುಗಳನ್ನು ನಾವು ಗುರುತಿಸಬಹುದು (ರಾಜಾರಾಮ ಮೋಹನ್ ರಾಯ್‌ರವರಿಂದ ಹಿಡಿದು ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರೆಗೆ ಅಂತಹ ಚಿಂತಕರ ಪಟ್ಟಿ ಮಾಡುತ್ತಾ ಹೋದರೆ ಅವರುಗಳಲ್ಲಿದ್ದ ಭಿನ್ನಾಬಿಪ್ರಾಯಗಳ ಅಗಾಧತೆ ಮತ್ತು ಸಂಕೀರ್ಣತೆಯ ಅರಿವು ನಮಗಾಗುತ್ತದೆ).

ತಮ್ಮ ತಾಣದಲ್ಲಿನ ನಡೆಯುತ್ತಿರುವ ಚರ್ಚೆಯು ಮೇಲಿನ ಬೌದ್ಧಿಕ ಚರ್ಚೆಯ ಹಿನ್ನೆಲೆಯಲ್ಲಿಯೇ ಸಾಗುತ್ತಿದೆ. ಅಂದರೆ ಇಲ್ಲಿ ವಾದಿಸುತ್ತಿರುವ ೨ ಗುಂಪಿನವರು ಭಾರತದ ಸಮಾಜದ ಕುರಿತಾದ ಪಶ್ಚಿಮದ ವಿವರಣೆಯನ್ನು  ಒಪ್ಪಿಕೊಂಡವರೇ ಅದ್ದರಿಂದ ಸಮಸ್ಯಯ ತಿರ್ವತೆಯ ಕುರಿತ (ಪ್ರಾಣಿಬಲಿ ವಿರೋಧ ಒಂದು ಜೀವ ಪರ ಕಾಳಜಿ) ಅವರ ಅಭಿಪ್ರಾಯಗಳು ಒಂದೇ ಆಗಿವೆ ಆದರೆ ಅದನ್ನು ಅರ್ಥಮಾಡಿಕೊಂಡು ಪರಿಹರಿಸಲು ಪ್ರಯತ್ನಿಸುತ್ತಿರುವ ಸೈಂಧಾಂತಿಕ ನೆಲೆಗಳು ಬೇರೆಯಾಗಿವೆ ಇದು ಇವರ ಸಮಸ್ಯೆ ಮಾತ್ರವಲ್ಲ ನಮ್ಮ ಸಾಮಾಜಿಕ ಸಮಸ್ಗಯೆಳ ಕುರಿತು ಮಾತನಾಡುವ ಬಹುಪಾಲು  ಸಮಾಜಶಾಸ್ತ್ರಜ್ಞಾರ ಸಮಸ್ಯೆ ಆಗಿದೆ.

ಏಕೆ ಒಂದೇ ವಿಷಯದ ಕುರಿತಾಗಿ ಚಿಂತಿಸುತ್ತಿರುವ ನಾವು ಭಿನ್ನ ಅಭಿಪ್ರಾಯ ಹೊಂದಿದ್ದೇವೆ? ಪ್ರಾಣಿಹತ್ಯೆ ಎಂಬುದು ಒಂದು ಜೀವ ವಿರೋಧಿ ಚಟುವಟಿಕೆ ಅನ್ನುವುದರ ಕುರಿತು ನಮ್ಮಲ್ಲಿ ಬಹುಜನರಿಗೆ ಸಮ್ಮತವಿದೆ. ಆದರೆ ಆ ಸಮಸ್ಯಯನ್ನು ಸೈದ್ಧಾಂತೀಕರಣಗೊಳಿಸಿ ಅದಕ್ಕೆ ಪರಿಹಾರ ಸೂಚಿಸುವಲ್ಲಿ ನಾವು ಚರ್ಚೆಗೆ ಬಿದ್ಧಿದ್ದೇವೆ. ಏಕೆ ಈ ವೈರುಧ್ಯ ಎಂದು ಗುರುತಿಸಲು ಪ್ರಯತ್ನಿಸಿದರೆ ಇತ್ತೀಚಿನ ಸಂಶೋಧನೆಗಳು ಹೊಸ ವಿಚಾರವನ್ನು ವಿವರಿಸುತ್ತವೆ. ಅದು ಯಾವುದೆಂದರೆ ಭಾರತೀಯ ಸಮಾಜ ಸಂಸ್ಕೃತಿಗಳನ್ನು ಅಧ್ಯಯನ ಮಾಡುತ್ತಿರುವ, ಅರ್ಥ್ಯೆಸುತ್ತಿರುವ ಆಧುನಿಕ ಬುದ್ದಿಜೀವಿಗಳು (ಭಾರತೀಯ ಮತ್ತು ಪಾಶ್ಚಾತ್ಯ) ಭಾರತೀಯ ಸಮಾಜ ಹಾಗು ಸಂಸ್ಕೃತಿಯನ್ನು ಯುರೋಪಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿಯೆ ಅಧ್ಯಯನ ಮಾಡಿದ್ದಾರೆ.  ಭಾರತದ ಸಮಾಜ ವಿಜ್ಞಾನಗಳಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವರ್ಗೀಕರಣ ಪದಗುಚ್ಚಗಳು (ಕೆಟೆಗರಿಸ್) ಕ್ರಿಶ್ಚಿಯನ್ ಥಿಯಾಲಜಿಯ ಮೂಲದಿಂದ ಬಂದವುಗಳಾದ್ದರಿಂದ ನಮ್ಮ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ನಿಜರೂಪವನ್ನು ಗುರುತಿಸಲು ವಿಫಲವಾಗಿವೆ.

ಪಾಶ್ಚಾತ್ಯರು ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ದಾರೆ ಅಂತಲ್ಲ ಬದಲಾಗಿ ಯುರೋಪಿನವರು ಬಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸ್ವರೂಪವನ್ನು ಹಾಗೆ ಗುರುತಿಸದೆ ಅನ್ಯ ಮಾರ್ಗವೇ ಅವರಿಗಿರಲಿಲ್ಲ. ಒಂದು ರೀತಿಯಲ್ಲಿ ಇದು ಎರಡು ಭಾಗಗಳ ((East and west)  ನಡುವಿನ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿರುವ ಜ್ಞಾನದ ಸ್ವರೂಪವನ್ನು ನಿರ್ಧರಿಸುವ ಪ್ರಶ್ನೆಯಾಗಿ ಕಾಡುತ್ತದೆ. ಇಲ್ಲಿನ ಸಮಸ್ಯೆ ಎಂದರೆ ಪಾಶ್ಚ್ಯಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಿರೂಪಿತವಾದ ಭಾರತದ ಸಮಾಜದ ಕುರಿತಾದ ಈ ವಿವರಣೆ ಒಂದು ವೈಜ್ಞಾನಿಕ ನಿರೂಪಣೆ ಎಂದೇ ಸಮಾಜ ವಿಜ್ಞಾನದ ವಲಯದಲ್ಲಿ ಇಂದಿಗೂ ನಂಬಲಾಗಿದೆ. ಜೊತೆಗೆ ಈ ವಾದವೇ ಸಮಾಜ ವಿಜ್ಞಾನಗಳ ಎಲ್ಲಾ ಸಿದ್ಧಾಂತಗಳಿಗೆ ಮೆಟಾ ಥಿಯರಿಯಾಗಿ ಕೆಲಸಮಾಡಿದೆ.

ಆದ್ದರಿಂದ ಇಂದು ನಾವು ಪ್ರಮುಖವಾಗಿ ಕೇಳಬೇಕಾದ ಪ್ರಶ್ನೆ ಎಂದರೆ ಭಾರತೀಯ ಸಮಾಜದ ಸಮಗ್ರ ಗ್ರಹಿಕೆಯು ಪಾಶ್ಚ್ಯಾತ್ಯರ ಸ್ವ ಸಂಸ್ಕೃತಿಯ ಅನುಭವದ ನೆಲೆಯಲ್ಲಿ ರೂಪುಗೊಂಡಿದ್ದು, ಈ ಗ್ರಹಿಕೆಗಳನ್ನು ವಿವರಿಸುವ ಪರಿಕಲ್ಪನೆಗಳು ಅನೇಕ ಸಂಧಿಗ್ಧತೆಗಳಿಂದ ಕೂಡಿವೆ. ಈ ಸಂಧಿಗ್ದ ಪರಿಕಲ್ಪನೆಗಳ ಬಳಕೆ ಎಷ್ಟರ ಮಟ್ಟಿಗೆ ನಮ್ಮ ಸಾಮಾಜಿಕ ಆಗು-ಹೋಗುಗಳನ್ನು ಅಥವಾ ಭವಿಷ್ಯವನ್ನು ರೂಪಿಸಲು ಅಥವಾ ನಿರ್ವಚಿಸಲು ಸಾಧ್ಯ? ಎಂಬುದಾಗಿದೆ.

ಪ್ರಾಣಿಬಲಿ ಸರಿ ತಪ್ಪು ಎಂಬ ನಿರ್ಧಾರ ಮಾಡುವುದಕ್ಕಿಂತ ಪೂರ್ವದಲ್ಲಿ ಭಾರತ ಸಮಾಜದಲ್ಲಿ ಇಂತಹ ಆಚರಣೆಗಳ ಮಹತ್ವವೇನು ಎಂಬುದನ್ನು ಗುರುತಿಸಬೇಕು( ಇದುವರೆಗಿನ ಭಾರತದ ಆಚರಣೆಯ ಕುರಿತ ಪಾಶ್ಚಾತ್ಯ ವಿವರಣೆಗಳಿಗಿಂತ ಹೊರತಾದ ಸಂಶೋಧನೆಯಿಂದ) ನಂತರ ಅದರ ಸಾಧಕ ಭಾದಕಗಳ ಚರ್ಚೆಯಾಗಬೇಕು. ಆಗ ಯಾವುದಾದರೂ ಒಂದು ಪರಿಹಾರ ಸಾಧ್ಯವೇ ಹೊರತು ಈಗ ಲಭ್ಯವಿರುವ ಭಾರತ ಸಮಾಜದ ಕುರಿತ ಪಾಶ್ಚಾತ್ಯ ವಿವರಣೆಗಳ ಆಧಾರದ ಮೇಲೆ ಅಲ್ಲ. ಒಂದು ವೇಳೆ ಹೀಗೆಯೇ ಮುಂದುವರೆದರೆ ವೈಯಕ್ತಿಕವಾಗಿ ಮಾಂಸಹಾರಿಯಾದ ನಾನು ಸಾರ್ವಜನಿಕವಾಗಿ ಮಾಂಸಹಾರವನ್ನು ವಿರೋಧಿಸುವ ಅನೈತಿಕ ನಡವಳಿಗೆ ಹೋಗಬೇಕಾಗುತ್ತದೆ. ಏಕೆಂದರೆ ನನ್ನ ಮತ್ತು ನನ್ನ ಸಮುದಾಯದ ಆಚರಣೆ ನನಗೆ ಒಂದು ರೀತಿಯ (ಪ್ರಾಣಿ ಬಲಿ) ಜ್ಞಾನ ನೀಡಿದ್ದರೇ ನನ್ನ ಶಿಕ್ಷಣ ಅದಕ್ಕೆ ವಿರುದ್ಧವಾದ ಒಂದು ಅಭಿಪ್ರಾಯವನ್ನು ನೀಡುತ್ತಿದೆ. ಇದರ ಅರ್ಥ ನಮ್ಮ ಆಚರಣೆ ಮತ್ತು ಅವುಗಳ ಕುರಿತಾದ ವಿವರಣೆಯ ನಡುವೆ ಏಕತೆಯಿಲ್ಲದಿರುವುದು ಸ್ಪಷ್ಟವಾಗುತ್ತದೆ.

ಮೊದಲು ನಮ್ಮ ಅನುಭವಕ್ಕೆ ಬರುವ ಈ ವಿಷಯಗಳ ಕುರಿತ ದ್ವಂದ್ವ ನಿವಾರಣೆಯಾಗಬೇಕು. ಇಲ್ಲವಾದರೆ ಅರುಣ್ ಹೇಳಿದಂತೆ ಇದು ಒಂದು ಸಮುದಾಯದ ಆಹಾರದ ಹಕ್ಕು ಎಂಬಂತೆ ವಿವರಿಸಬೇಕಾಗುತ್ತದೆ. ಇಲ್ಲವಾದರೆ ರೂಪ ಹೇಳಿದಂತೆ ಇದು ಒಂದು ಜೀವವಿರೋಧಿ ಕೃತ್ಯ ಎಂಬುದನ್ನು ಒಪ್ಪಬೇಕಾಗುತ್ತದೆ. ವಿಪರ್ಯಾಸ ಅಂದರೆ ಎರಡರಲ್ಲಿ ಯಾವುದನ್ನು ಒಪ್ಪಿದರೂ ಸಮಸ್ಯೆ ಪರಿಹಾರವಾಗದೇ ಅಲ್ಲೇ ಉಳಿದಿರುತ್ತದೆ.. . . .

(ಪ್ರಸ್ತುತ ಲೇಖನಕ್ಕೆ  ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಹಾಗು ಕನಕಗೋಪುರ ವಿವಾದ, ಲೇಖನದ ಕೆಲವು ವಾದಗಳನ್ನು ಬಳಸಲಾಗಿದೆ. ಲೇಖಕ ಪ್ರೊ. ಜೆ ಎಸ್. ಸದಾನಂದ, ಕುವೆಂಪುವಿಶ್ವವಿದ್ಯಾನಿಲಯ)


-Dr.Kiran.MGajanur,
R.T.A.In Political Science, Directorate of Distance Education
Kuvempu university