Monday, November 21, 2011

ದಿನೇಶ್ ಅಮೀನ್ ಮಟ್ಟು ಹೇಳಿದ್ದು ಮತ್ತು ಹೇಳದೆ ಉಳಿದದ್ದು...


 ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ವಿವಾದಾತ್ಮಕ ಹೇಳಿಕೆಗಳನ್ನು ಕುರಿತು ಪ್ರಜಾವಾಣಿಯ ಇಂದಿನ ಅನಾವರಣ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ. ದಿನೇಶ್ ಅವರು ಮೊದಲ ಬಾರಿಗೆ ಅತ್ಯಂತ ಡಿಪ್ಲಮ್ಯಾಟಿಕ್ ಆಗಿ ಇದನ್ನು ಬರೆದಿದ್ದಾರಾ ಅನ್ನುವ ಅನುಮಾನ ನಮಗೆ. ಅನುಮಾನ ಯಾಕೆ ಅನ್ನೋದನ್ನು ಹೇಳುವ ಪ್ರಯತ್ನ ಮಾಡುತ್ತೇವೆ.

ಮಾರ್ಕಂಡೇಯ ಖಟ್ಜು 
ಮಾರ್ಕಂಡೇಯ ಖಟ್ಜು ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಸಿಎನ್‌ಎನ್ ಐಬಿಎನ್‌ನ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ದೇಶದ ಮಾಧ್ಯಮಗಳ ಕುರಿತು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಅಮೀನ್ ಮಟ್ಟು ಬರೆಯುವುದು ಹೀಗೆ: ..... ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ. ಖಟ್ಜು ಹೇಳಿರುವ ಮಾತುಗಳು ಪತ್ರಕರ್ತನ್ನು ಕೆರಳಿಸಿವೆ. ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳು ಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ. ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?....

ನಿಜವಾದ ಮಾತೇ ಇದು? ದೇಶದ ಪತ್ರಕರ್ತರೆಲ್ಲ ಖಡ್ಜು ಮಾತಿನಿಂದ ಕೆರಳಿದ್ದಾರೆಯೇ? ಖಟ್ಜು ಅವರ ವಿರುದ್ಧ ಇಡೀ ಪತ್ರಕರ್ತ ಸಮೂಹವೇ ಕೋಪ ಮಾಡಿಕೊಂಡಿದೆಯೇ? ಖಟ್ಜು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಬಲ್ಲ ಪತ್ರಕರ್ತರೇ ಇಲ್ಲವೇನು? ಬೇರೇನೂ ಬೇಡ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳೋಣ. ಖಟ್ಜು ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿ ಎಷ್ಟೋ ದಿನ ಕಳೆದ ನಂತರ ಪ್ರಜಾವಾಣಿಯಲ್ಲಿ ಒಂದು ತೀವ್ರ ಖಂಡನೆಯ ಸಂಪಾದಕೀಯ ಹೊರಬಂದಿತ್ತು. ಮತ್ತೆ ಒಂದೆರಡು ಪತ್ರಿಕೆಗಳಲ್ಲಿ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!)  ಖಟ್ಜು ಮಾತುಗಳಿಗೆ ಇಡೀ ಪತ್ರಿಕಾ ಸಮೂಹ ಸಿಟ್ಟಿಗೆದ್ದಿದೆ ಎಂದು ಅಮೀನ್‌ಮಟ್ಟು ಯಾಕೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ?

ಹಾಗೆ ನೋಡಿದರೆ ದಿನೇಶ್ ಅವರು ಖಟ್ಜು ಆಡಿರುವ ಎಲ್ಲ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಖಟ್ಜು ಯಾವ ಆದರ್ಶಗಳನ್ನು ಪತ್ರಕರ್ತರಿಂದ ಬಯಸುತ್ತಿದ್ದಾರೋ ಆ ಆದರ್ಶಗಳನ್ನು ಹೊಂದಿರುವ ಅಪರೂಪದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು. ಹೀಗಾಗಿ ಖಟ್ಜು ಅವರು ಮಾಧ್ಯಮಗಳ ಕುರಿತು ಆಡಿರುವ ಅನೇಕ ಮಾತುಗಳಿಗೆ ಅವರ ಪರೋಕ್ಷ ಸಮ್ಮತಿ ಇದೆ. ಖಟ್ಜು ಹೇಳುವ ರೀತಿ ಸರಿಯಿಲ್ಲವೆಂಬುದು ಅವರ ಆಪಾದನೆ. ಖಟ್ಜು ಆರೋಪಗಳೆಲ್ಲವೂ ಹಳೆಯವು ಎಂಬುದು ಅವರ ಟೀಕೆ. (ಹಳೇ ಆರೋಪಗಳು ಅಪ್ರಸ್ತುತ ಯಾಕಾಗಬೇಕು? ಅಷ್ಟಕ್ಕೂ ಈ ಸಂದರ್ಶನದಲ್ಲಿ ಕರಣ್ ಎತ್ತಿದ ಪ್ರಶ್ನೆಗಳಿಗೆ ಖಟ್ಜು ಉತ್ತರಿಸುತ್ತಾ ಹೋಗಿದ್ದಾರಷ್ಟೆ.) ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೇ ಇದ್ದರೆ ಮಾತು ಸೋತುಹೋಗುತ್ತದೆ. ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.

ನ್ಯಾಯಸ್ಥಾನದಲ್ಲಿ ಕುಳಿತುಕೊಂಡವರು ಪ್ರಾಮಾಣಿಕರಾಗಿದ್ದರೂ ಸಣ್ಣಪ್ರಮಾಣದ (ಕೆಲವೊಮ್ಮೆ ದೊಡ್ಡಪ್ರಮಾಣದ) ಬಾಯಿಬಡುಕುತನ ಪ್ರದರ್ಶನ ತೋರುತ್ತಿರುವುದು ದಿನೇಶ್ ಅವರಿಗೆ ಗೊತ್ತಿಲ್ಲದ ವಿದ್ಯಮಾನವೇನೂ ಅಲ್ಲ. ಕರ್ನಾಟಕದ ಉದಾಹರಣೆ ಕೊಡುವುದಾದರೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ನ್ಯಾ.ವೆಂಕಟಾಚಲ ಹಾಗು ನ್ಯಾ ಸಂತೋಷ್ ಹೆಗ್ಡೆ ಅವರಿಬ್ಬರೂ ಈ ಅಪವಾದದಿಂದ ಮುಕ್ತರಾಗಿರಲಿಲ್ಲ. ಆದರೆ ಮಾತು ಅತಿರೇಕವಾಯಿತು ಎನ್ನುವ ಕಾರಣಕ್ಕೂ ಮಾತಿನ ಹಿಂದಿನ ಆಶಯಗಳೆಲ್ಲವೂ ತಿರಸ್ಕಾರಕ್ಕೆ ಯೋಗ್ಯವಾಗುತ್ತವೆಯೇ?

ದಿನೇಶ್ ಅವರೂ ಸೇರಿದಂತೆ ಖಟ್ಜು ಅವರನ್ನು ವಿರೋಧಿಸುತ್ತಿರುವುದು ಅವರು ಸಂದರ್ಶನದಲ್ಲಿ ಆಡಿದ ಕೆಲವು ಸಡಿಲ ಮಾತುಗಳನ್ನು ಮಾತ್ರ. ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ, ಫಿಲಾಸಫಿ ಇತ್ಯಾದಿಗಳಲ್ಲಿ ಪರಿಣತಿ ಇಲ್ಲ ಎಂಬ ಅವರ ಮಾತುಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಪತ್ರಕರ್ತರಿಗೆ ಎಂಬ ಶಬ್ದದ ಹಿಂದೆ ಕೆಲವು ಅಂತಲೋ, ಬಹುತೇಕ ಅಂತಲೋ ಒಂದು ಪದಬಳಕೆಯಾಗಿದ್ದರೆ ಈ ವಿಷಯದ ಚರ್ಚೆಯೇ ಅಸಾಧ್ಯವಾಗುತ್ತಿತ್ತು. ಖಟ್ಜು ಆತುರದಲ್ಲಿ ಅದನ್ನು ಮರೆತಿದ್ದಾರೆ. ಹೀಗಾಗಿ ಪೆನ್ನುಗಳು ಖಡ್ಗಗಳಾಗುತ್ತಿವೆ.

ಖಟ್ಜು ಹೇಳದೇ ಉಳಿದದ್ದನ್ನು ಹೇಳುವ ಆತುರದಲ್ಲಿ ದಿನೇಶ್ ಅವರು ಒಂದು ಸ್ಪಷ್ಟ ಲೋಪವನ್ನು ಉಳಿಸಿದ್ದಾರೆ. ಖಟ್ಜು ಮಾಧ್ಯಮ ಭ್ರಷ್ಟಾಚಾರ, ಕಾಸಿಗಾಗಿ ಸುದ್ದಿ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಆಕ್ಷೇಪಣೆ ತೆಗೆದಿದ್ದಾರೆ. ಕರಣ್ ಜತೆಗಿನ ಸಂದರ್ಶನದಲ್ಲಿ ಖಟ್ಜು ಈ ವಿಷಯಯನ್ನು ಕಟುವಾಗಿಯೇ ಪ್ರಸ್ತಾಪಿಸಿದ್ದಾರೆ. ಹಿಂದೆಲ್ಲ ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರೇ ೧೦,೦೦೦ ರೂ. ಪಡೆದು ಅಭ್ಯರ್ಥಿಗಳ ಪರವಾಗಿ ಬರೆಯುತ್ತಿದ್ದರು. ಇದನ್ನು ಗಮನಿಸಿದ ಮ್ಯಾನೇಜ್‌ಮೆಂಟುಗಳು ತಾವೇ ಲಾಭ ಮಾಡಿಕೊಳ್ಳಲು ಕಾಸಿಗಾಗಿ ಸುದ್ದಿ ದಂಧೆಯನ್ನು ಆರಂಭಿಸಿದವು ಎಂದು ಖಟ್ಜು ಹೇಳಿರುವುದನ್ನು ದಿನೇಶ್ ಪ್ರಮಾದವಶಾತ್ ಮರೆತಿದ್ದಾರೆ. ಒಂದೇ ಪತ್ರಿಕೆಯಯಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಕಾಸಿಗಾಗಿ ಸುದ್ದಿಗಳು ಪ್ರಕಟವಾದಾಗ ಆದ ಅವಾಂತರಗಳನ್ನೂ ಖಟ್ಜು ನೆನಪಿಸಿಕೊಂಡಿದ್ದಾರೆ.

ಬಹಳ ಮುಖ್ಯವಾಗಿ ಖಟ್ಜು ಅವರ ಸಿಟ್ಟು ಇರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು. ಈ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜ್ಯೋತಿಷಿಗಳ ವಿಜೃಂಭಣೆ, ಕ್ರಿಕೆಟ್-ಸಿನಿಮಾಗಳಿಗೆ ದಕ್ಕುವ ಪ್ರಾಶಸ್ತ್ಯ, ತೇಜೋವಧೆ, ಜನಗಳನ್ನು ಉದ್ದೇಶಪೂರ‍್ವಕವಾಗಿ ಒಡೆಯುವ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಖಟ್ಜು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಪ್ರೆಸ್ ಕೌನ್ಸಿಲ್‌ನ ಅಡಿಯಲ್ಲೇ ಈ ಚಾನಲ್‌ಗಳನ್ನೂ ತರುವ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಪ್ರಧಾನಿಗೂ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಪ್ರೆಸ್ ಕೌನ್ಸಿಲ್ ಅನ್ನು ಮೀಡಿಯಾ ಕೌನ್ಸಿಲ್ ಆಗಿ ಬದಲಾಯಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವೇ ಗಂಭೀರವಾಗಿ ಚರ್ಚೆಯಾಗಬೇಕಿತ್ತಲ್ಲವೇ? ಇದಕ್ಕೆ ಹೊರತಾಗಿ ಪತ್ರಕರ್ತರ ಕೌಶಲ್ಯದ ವಿಷಯವೇ ಚರ್ಚೆಯ ವಿಷಯವಾಗಿದ್ದು ಏಕೆ?

ದಿನೇಶ್ ಅಮೀನ್ ಮಟ್ಟು
ಕಡೆಯದಾಗಿ ಪ್ರೆಸ್ ಕೌನ್ಸಿಲ್‌ಗೆ ಇನ್ನೊಂದಿಷ್ಟು ಅಧಿಕಾರ ಬೇಕು ಎಂದು ಖಟ್ಜು ಹೇಳಿದ್ದಾರೆ. ನಿಜವಾಗಿಯೂ ಪತ್ರಿಕೋದ್ಯಮಿಗಳನ್ನು (ಎಲ್ಲಾ ಪತ್ರಕರ್ತರನ್ನಲ್ಲ) ಕೆರಳಿಸಿರುವುದು ಇದೇ ವಿಷಯ. ಖಟ್ಜು ಒಂದು ಬಗೆಯ ಮೂಗುದಾರ ಬೇಕು ಎನ್ನುತ್ತಿದ್ದಾರೆ. ಮಾಧ್ಯಮಗಳು ಹಾದಿ ತಪ್ಪಿ ಹೋಗಿರುವುದರಿಂದಲೇ ಈ ಮೂಗುದಾರದ ಪ್ರಸ್ತಾಪ ಮಾಡುತ್ತಿದ್ದಾರೆ. ಪತ್ರಕರ್ತರು ಒಂದೇ ಸ್ವಯಂ ನಿಯಂತ್ರಣದ ಹಾದಿ ತುಳಿಯಬೇಕು, ಅಥವಾ ಇನ್ಯಾವುದೋ ಸಂಸ್ಥೆಯ-ನ್ಯಾಯಮಂಡಳಿಯ ಮೂಗುದಾರಕ್ಕೆ ಒಳಗಾಗಬೇಕು. ಹೀಗಾಗಿಯೇ ಖಟ್ಜು ಇದನ್ನು ಹೇಳಿದ್ದಾರೆ. ಒಂದು ವೇಳೆ ಹೆಚ್ಚು ಅಧಿಕಾರ ದೊರೆತರೂ,  ತಪ್ಪು ಮಾಡಿದ ಮಾಧ್ಯಮ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವುದು ವಿರಳಾತಿವಿರಳ ಸಂದರ್ಭಗಳಲ್ಲಿ ಎಂದು ಅವರು ಪದೇಪದೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಂಡಿಯಾದ ಮೀಡಿಯಾ ಯಾರ ಅಂಕೆಯಲ್ಲೂ ಇರಲು ಒಲ್ಲದು. ಹೀಗಾಗಿ ಸಕಾರಣವಾಗಿಯೇ ವಿರೋಧಗಳು ಎದ್ದಿವೆ. ರಾಷ್ಟ್ರಮಟ್ಟದ ಪತ್ರಿಕಾ ಸಂಘಟನೆಗಳು ಅಮೀನ್ ಮಟ್ಟು ಹೇಳಿದಂತೆ ಕತ್ತಿ ಝಳಪಿಸುತ್ತಿವೆ. ಹೀಗೆ ಬೇಕಾದವರ ಮೇಲೆ ಕತ್ತಿ ಝಳಪಿಸುವ ಸ್ವಾತಂತ್ರ್ಯ ಮಾಧ್ಯಮಗಳಿವೆ. ಅದನ್ನು ಅವು ಪರಿಪೂರ್ಣವಾಗಿ ಬಳಸಿಕೊಳ್ಳುತ್ತಿವೆ.

ಅಷ್ಟಕ್ಕೂ ಖಟ್ಜು ಹೇಳಿದಂತೆ ಪರಿಪೂರ್ಣವಾದ ಸ್ವಾತಂತ್ರ್ಯ ಎಂಬುದು ಇರಬೇಕಾ? ಸಾರ್ವಜನಿಕ ಬದುಕಿನ ಪ್ರತಿಯೊಬ್ಬರೂ ಯಾರಿಗಾದರೂ ಉತ್ತರದಾಯಿ ಆಗಲೇಬೇಕಲ್ಲವೇ? ಮಾನನಷ್ಟ ಕಟ್ಲೆಗಳಂಥ ಬಹುತೇಕ ಸಂದರ್ಭದಲ್ಲಿ ನಿರುಪಯೋಗಿಯಾದ, ನ್ಯಾಯಕ್ಕಾಗಿ ವರ್ಷಗಟ್ಟಲೆ ಕಾಲ ಅಂಗಲಾಚಬೇಕಾದ ಮಾರ್ಗವನ್ನು ಹೊರತುಪಡಿಸಿದರೆ ಮಾಧ್ಯಮಗಳಿಂದ ನೊಂದವರಿಗೆ ನ್ಯಾಯ ದೊರೆಯುವುದಕ್ಕೆ ಮಾರ್ಗ ಬೇಡವೇ? ಮಾನನಷ್ಟ ಕಟ್ಲೆಯಂಥವು ವೈಯಕ್ತಿಕ ತೇಜೋವಧೆಯಂಥ ಪ್ರಕರಣಗಳಿಗೆ ಸಂಬಂಧಿಸಿದ್ದವು. ಇಡೀ ಸಮಾಜವನ್ನೇ ದಿಕ್ಕುಗೆಡಿಸುವ ಪತ್ರಿಕಾಸಂಸ್ಥೆಗಳನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು? ಸದಾ ಕತ್ತಿಯಂಥ ಪೆನ್ನನ್ನು ಹಿಡಿದುಕೊಂಡೇ ಓಡಾಡುವವರನ್ನು ಎದುರಿಸಿ ನಿಲ್ಲುವವರಾದರೂ ಯಾರು?

ಜನಲೋಕಪಾಲದ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳನ್ನು ಒಪ್ಪಿಸಿದರೆ ಹೇಗೆ ಎಂಬ ಪ್ರಶ್ನೆಯೊಂದನ್ನು ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಮಾಧ್ಯಮ ಭ್ರಷ್ಟಾಚಾರವನ್ನು ಜನಲೋಕಪಾಲಕ್ಕೆ ವಹಿಸಿದರೆ, ಭ್ರಷ್ಟ ಪತ್ರಕರ್ತರಿಗೆ ಶಿಕ್ಷೆಯಾಗಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ಮಾಧ್ಯಮಗಳ ಇತರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಧರ್ಮದ ಹೆಸರಲ್ಲಿ ದೇಶ ಒಡೆಯುವ ಪತ್ರಕರ್ತರನ್ನು ಏನು ಮಾಡುವುದು?  ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಹರಡಿ ಜನರನ್ನು ಪಾತಾಳಕ್ಕೆ ತಳ್ಳುವವರನ್ನೇನು ಮಾಡೋದು? ಖಟ್ಜು ಹೇಳಿದಂತೆ ಹಸಿವು, ದಾರಿದ್ರ್ಯ ದೇಶದ ತುಂಬೆಲ್ಲ ಹರಡಿರುವಾಗ ಕರೀನಾ ಕಪೂರ್, ಐಶ್ವರ್ಯ ರೈಗಳ ಸುತ್ತ ಸುತ್ತುತ್ತ ವಂಚನೆ ಎಸಗುತ್ತಿರುವ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು ಏನು ಮಾಡುವುದು?

ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವುದರಿಂದ, ಮಂಡಳಿಗೆ ಅಧಿಕಾರ ದೊರೆತರೆ ಸರ್ಕಾರ ಮೀಡಿಯಾ ವ್ಯವಹಾರದಲ್ಲಿ ಕೈಹಾಕಬಹುದು ಎಂಬುದು ದಿನೇಶ್ ಹಾಗು ಇದನ್ನು ವಿರೋಧಿಸುತ್ತಿರುವ ಎಲ್ಲರ ಕಾಳಜಿ. ಆದರೆ ಪ್ರಜಾತಂತ್ರದಲ್ಲಿ ನ್ಯಾಯಾಧೀಶರಿಂದ ಹಿಡಿದು ಪೊಲೀಸರವರೆಗೆ ಎಲ್ಲರನ್ನೂ ನೇಮಿಸುವುದು ಸರ್ಕಾರವೇ ಅಲ್ಲವೇ? ಸರ್ಕಾರ ನೇಮಿಸಿದ ಪೊಲೀಸರು ಎಂಬ ಕಾರಣಕ್ಕೆ ಪೊಲೀಸರ ಅಡಿಯಲ್ಲಿ ನಾವು ಬರುವುದಿಲ್ಲವೆಂದು ಸಾಮಾನ್ಯ ಪ್ರಜೆ ಹೇಳಲು ಸಾಧ್ಯವೇ? ಎಲ್ಲರೂ ಸರ್ಕಾರದ ನೀತಿ ನಿರೂಪಣೆಗಳಿಂದ ಹೊರಗಿರಲು ಬಯಸುವುದಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಾದರೂ ಹೇಗೆ?

ಆಧುನಿಕ ಸಮಾಜವಾಗಿ ಬದಲಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ಭಾರತದಲ್ಲಿ ಈ ಸಂಕ್ರಮಣದ ಸ್ಥಿತಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ ಎಂದು ಖಟ್ಜು ಯೂರೋಪ್‌ನ ಉದಾಹರಣೆ ನೀಡಿ ಆಕ್ಷೇಪವೆತ್ತಿದ್ದಾರೆ. ಪತ್ರಕರ್ತರು ಜನಪರವಾಗಿಲ್ಲ ಎಂಬುದು ಅವರ ಮುಖ್ಯ ಹೇಳಿಕೆ. ಇದಲ್ಲವೇ ಮುಖ್ಯವಾಗಿ ಚರ್ಚಿಸಬೇಕಾದ ವಿಷಯ?

ಒಂದಂತೂ ನಿಜ, ನ್ಯಾಯಮಂಡಳಿ ಅಧ್ಯಕ್ಷರ ಹೇಳಿಕೆಗೆ ಈ ಪರಿಯಲ್ಲಿ ಮಾಧ್ಯಮಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಪತ್ರಕರ್ತ ಸಂಘಟನೆಗಳು ವೀರಾವೇಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ, ಒಂದೊಮ್ಮೆ ಸರ್ಕಾರ ಪ್ರೆಸ್ ಕೌನ್ಸಿಲ್‌ಗೆ ಹೆಚ್ಚುವರಿ ಅಧಿಕಾರ ದೊರೆತರೆ ಯಾವ ಪ್ರಮಾಣದಲ್ಲಿ ಗಂಟಲು ಹರಿದುಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗಾಗಿ ಮಾಧ್ಯಮ ಸಂಸ್ಥೆಗಳು ನೆಮ್ಮದಿಯಾಗಿರಬಹುದು. ಅವುಗಳ ಸ್ವೇಚ್ಛೆಗೆ ಅಡ್ಡಿ ಬರುವವರನ್ನು ಅವುಗಳು ಎಂದಿಗೂ ಸಹಿಸಿಕೊಳ್ಳುವುದಿಲ್ಲ.

ದಿನೇಶ್ ಅಮೀನ್‌ಮಟ್ಟು ಹೇಳಬೇಕಾಗಿದ್ದನ್ನು ಪೂರ್ತಿ ಹೇಳಲು ಸಾಧ್ಯವಾಗಿಲ್ಲವೇನೋ? ಹೀಗಾಗಿ ಅವರು ಹೇಳದೇ ಉಳಿದ ಮಾತುಗಳನ್ನು ಹೇಳಲು ಇಲ್ಲಿ ಯತ್ನಿಸಿದ್ದೇವೆ. ಅಷ್ಟಾಗಿಯೂ ಈ ಮಟ್ಟಿಗಿನ ನಿರ್ಭೀತ ಬರವಣಿಗೆಗಾಗಿ ಅವರಿಗೊಂದು ಥ್ಯಾಂಕ್ಸ್.

ಕೊನೆಕುಟುಕು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ. ಸೋಮಣ್ಣ ಜತೆ ಹಮೀದ್ ಪಾಳ್ಯ ಸುವರ್ಣ ನ್ಯೂಸ್‌ನಲ್ಲಿ ಸಂದರ್ಶನ ನಡೆಸಿದರು. ಹಂಗಾದ್ರೆ ನೀವು ಯಾವುದೇ ಅಪರಾಧ ಎಸಗಿಲ್ಲ, ಅವ್ಯವಹಾರ ನಡೆಸಿಲ್ಲ, ನಿಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಅಂತ ನೀವು ಹೇಳ್ತೀರಾ.... ಎಂದು ಹಮೀದ್ ಪದೇ ಪದೇ ಸೋಮಣ್ಣಗೆ ಕೇಳುತ್ತಿದ್ದರು. ಸೋಮಣ್ಣ ಹೇಳಬೇಕಾದ ಮಾತುಗಳನ್ನು ಹಮೀದ್ ಯಾಕೆ ಸಜ್ಜೆಸ್ಟ್ ಮಾಡ್ತಾ ಇದ್ರು? ಸೋಮಣ್ಣ ವಿರುದ್ಧ ದೂರು ದಾಖಲಾದ ನಂತರ ಇದು ರಾಜಕೀಯ ಪ್ರೇರಿತ ದೂರು ಎಂಬ ಅರ್ಥದ ವರದಿಯೊಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸುವರ್ಣದಲ್ಲಿ ಈಗ ಸೋಮಣ್ಣಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಹೀಗಿರುವಾಗ ಲೋಕಾಯುಕ್ತ ಕೋರ್ಟು ಯಾಕೆ ಬೇಕು ಅಲ್ಲವೇ?

Wednesday, November 16, 2011

ವಿನೋದ್ ಮೆಹ್ತಾ ಆತ್ಮಕತೆ ಮತ್ತು ಅದರ ಅನುವಾದ

ನಲವತ್ತು ವರ್ಷಗಳ ಸುದೀರ್ಘ ಕೆಲಸದ ನಂತರವೂ ಒಂದೇ ಒಂದು ಪ್ರೊಮೋಷನ್ ಇಲ್ಲದೆ ಇರುವ ಪತ್ರಕರ್ತ ಬಹುಶಃ  ವಿನೋದ್ ಮೆಹ್ತಾ ಒಬ್ಬರೇ ಇರಬೇಕು. ಕಾರಣ ಇಷ್ಟೆ, ಅವರು ನಾಲ್ಕು ದಶಕಗಳ ಹಿಂದೆ ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ಸಂಪಾದಕರಾಗಿ. ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಅವರು ಪತ್ರಿಕೆಗಳನ್ನು ಬೆಳೆಸಿದ ರೀತಿ, ಲಕ್ಷಾಂತರ ಓದುಗ ಸಮೂಹದ ಯೋಚನೆಗಳನ್ನು ಪ್ರಭಾವಿಸಿದ ಪರಿ ಮಾತ್ರ ರೋಚಕ.
ಅವರ ಆತ್ಮಕತೆ 'Lucknow Boy A Memoir' ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಒಮ್ಮೆ ಓದಲು ಶುರು ಹಚ್ಚಿದರೆ, ಪುಸ್ತಕ ಮುಗಿಸುವ ತನಕ ಅದನ್ನು ಬಿಡುವುದು ತೀರಾ ಕಷ್ಟ. ನೀವು ಪತ್ರಕರ್ತರಾಗಿದ್ದಲ್ಲಿ, ಓದುವ ಹವ್ಯಾಸ ಇದ್ದಲ್ಲಿ, ನೀವು ಓದಲೇಬೇಕಾದ ಪುಸ್ತಕ ಇದು.
ಇತ್ತೀಚೆಗೆ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಪತ್ರಕರ್ತರೊಬ್ಬರು ಆ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತೇನೆಂದು ಹೆದರಿಸಿದ್ದಾರೆ. ಮೆಹ್ತಾ ಮತ್ತು ‘ಆ ಪತ್ರಕರ್ತ’ರಿಗೂ ಅಜಗಜಾಂತರ ವ್ಯತ್ಯಾಸ. ಯಾವ ಕೋನದಿಂದ ನೋಡಿದರೂ, ಇಬ್ಬರನ್ನು ಒಂದೇ ಕಡೆ ನೆನೆಸಿಕೊಳ್ಳಲೂ ಸಾಧ್ಯವಿಲ್ಲ.
ಅವರ ತರ್ಜುಮೆಗಾಗಿ ಕಾಯದೆ, ಮೂಲ ಪ್ರತಿಯನ್ನೇ ಓದಿದರೆ ಸೂಕ್ತ ಎನಿಸುತ್ತದೆ. ಕಾರಣ ಇಷ್ಟೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು, ಪನ್ ಎಲ್ಲವೂ ಮಾಯವಾಗಿಬಿಡುವ ಆತಂಕವಿದೆ. ಏಕೆಂದರೆ, ಅನುವಾದಕ್ಕೆ ಅನುಮತಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಕರ್ತರ ಅನುವಾದ ಕಲೆಗಾರಿಕೆ ಅವರ ಕೈಗೆಳಗೆ ಕೆಲಸ ಮಾಡುವ ಅನೇಕರಿಗೆ ಗೊತ್ತಿರುವ ಸಂಗತಿ. ಹೋಗಲಿ, ಹಟಕ್ಕೆ ಬಿದ್ದು (ಕಚೇರಿಯ ಬೇರೆ ಸಿಬ್ಬಂದಿ ಸಹಾಯವಿಲ್ಲದೆ) ಆ ಮಹಾಶಯರೇ ಸಂಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದರೂ ಅದು ಮೂಲ ಕೃತಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಎರಡು ಮೂರು ದಿನಗಳ ಹಿಂದೆ, ಅವರು ತಮ್ಮ ಅಂಕಣವೊಂದರಲ್ಲಿ ಮೂಲ ಕೃತಿಯ ಒಂದೇ ಒಂದು ಪ್ಯಾರವನ್ನು ಅನುವಾದ ಮಾಡಲು ಹೋಗಿ ಎಡವಿದ್ದಾರೆ. ಹಸಿ ಹಸಿ ತಪ್ಪು ಮಾಡಿದ್ದಾರೆ.
ಇವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದು, ಮೆಹ್ತಾ ಅವರು ಪತ್ರಕರ್ತರು ಉಡುಗೊರೆಗಳನ್ನು ಪಡೆಯಬೇಕೆ ಎನ್ನುವ ವಿಚಾರದ ಬಗ್ಗೆ ಬರೆದದ್ದನ್ನು. ಮೆಹ್ತಾ ಉಡುಗೊರೆಗಳನ್ನು ತಿರಸ್ಕರಿಸುತ್ತಾರೆ. ಇತರೆ ಪತ್ರಕರ್ತರೂ, ತಮ್ಮ ವೃತ್ತಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹಾಗೇ ಮಾಡಬೇಕೆಂದು ಬಯಸುತ್ತಾರೆ. (ಈ ಪ್ರಸ್ತುತ ವಿಚಾರದ ಬಗ್ಗೆ ಮಾತನಾಡಲು ಅಥವಾ ಬರೆಯಲು ಈ ಅನುವಾದಕರು ಎಷ್ಟರ ಮಟ್ಟಿಗೆ ಅರ್ಹರು ಎಂಬುದು ಬೇರೆ ಮಾತು.)
ಈಗ ಮೂಲ ಕೃತಿ ಮತ್ತು ಅವರ ಅನುವಾದವನ್ನು ಗಮನಿಸೋಣ.
Should a journalist take freebies? No. Absolutely Not. Pay your way. For the four decades I’ve been editor, I can claim, hand on heart, that I have never visited a restaurant or stayed in a hotel or travelled in an airline without paying the full bill.
ಪತ್ರಕರ್ತರ ಅನುವಾದ: ಪತ್ರಕರ್ತರಾದವರು ಗಿಫ್ಟ್ ಗಳನ್ನು ಸ್ವೀಕರಿಸಬಹುದಾ? ಅದಕ್ಕೆ ಮೆಹ್ತಾ ಹೇಳೋದೇನೆಂದರೆ – ಬಿಲ್ ಕುಲ್ ಕೂಡದು. ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ನಾನು ಕಳೆದ ನಲವತ್ತು ವರ್ಷಗಳಿಂದ ಸಂಪಾಕನಾಗಿದ್ದೇನೆ, ಎದೆ ಮೇಲೆ ಕೈಯಿಟ್ಟು ಹೇಳುತ್ತೇನೆ, ಯಾವುದೇ ಹೋಟೇಲ್ ನಲ್ಲಾಗಲಿ, ನನ್ನ ಹಣ ಕೊಡದೇ ಉಳಿದಿಲ್ಲ. ಆಹಾರ ಸೇವಿಸಿಲ್ಲ. ಬಿಟ್ಟಿಯಾಗಿ ಯಾವ ವಿಮಾನದಲ್ಲೂ ಪಯಣಿಸಿಲ್ಲ.
(ಈ ಮೇಲಿನ ವಾಕ್ಯದಲ್ಲಿ ಅನುವಾದ ಲೋಪ ಇದೆ ಎಂದು ಹೇಳಲು ಇದನ್ನು ಉದಾಹರಿಸುತ್ತಿಲ್ಲ. ಆಫ್ ಕೋರ್ಸ್ ಮೆಹ್ತಾ ಹೃದಯ ಮುಟ್ಟಿ ಹೇಳಿದರೆ, ಅನುವಾದಕರು ಎದೆ ಮುಟ್ಟಿ ಹೇಳುತ್ತಾರೆ. ಅದರಲ್ಲಿ ಅಂತಹ ಪ್ರಮಾದವೇನಿಲ್ಲ ಬಿಡಿ. ಯಾರೂ ಲಿಟರಲಿ ಹೃದಯ ಮುಟ್ಟಿ ಹೇಳಲಾಗದು. ಆದರೆ ಈ ಅನುವಾದಕರು ಅದೇ ಎದೆಯನ್ನು ಮುಟ್ಟಿಕೊಂಡು ಈ ಮೇಲಿನ ಮಾತುಗಳನ್ನು ತಮ್ಮ ವಿಷಯದಲ್ಲಿ ಹೇಳಿಕೊಳ್ಳಲು ಸಾಧ್ಯವೆ?)
ಮುಂದುವರಿದು ಮೆಹ್ತಾ ಹೇಳುತ್ತಾರೆ. Occasionally, the management makes a fuss and insists on waiving the charges. My escape from the crafty kindness is to joking protest, ‘This is an insult. If you are trying to bribe me, it has to be more than 6000 rupees’ (the usual bill at a five-star restaurant for two people) or ‘If you don’t let me pay I’ll never come again.”
ಅನುವಾದ: “ಈ ವಿಷಯವಾಗಿ ನನ್ನ ಮ್ಯಾನೇಜ್ ಮೆಂಟ್ ಕಿರಿಕಿರಿ ಮಾಡಿದ್ದುಂಟು. ಆಗ ನಾನು ನಗುನಗುತ್ತಲೇ ಪ್ರತಿಭಟಿಸಿದ್ದಿದೆ. “ಇದು ನಿಜಕ್ಕೂ ಅವಮಾನಕರ. ನೀವು ನನಗೆ ಲಂಚ ಕೊಡಬೇಕೆಂದು ನಿರ್ಧರಿಸಿದರೆ, ಆರೇಳು ಸಾವಿರ ರೂಪಾಯಿಗಿಂತ ಹೆಚ್ಚು ಕೊಡಿ. (ಪಂಚತಾರಾ ಹೋಟೆಲ್ ನಲ್ಲಿ ಇಬ್ಬರ ಊಟ-ತಿಂಡಿಗೆ ಇಷ್ಟೇ ಬಿಲ್ ಆಗುತ್ತದೆ.) ನನಗೆ ಹಣ ಕೊಡಲು ಒಪ್ಪದಿದ್ದರೆ ಇನ್ನೆಂದೂ ನಾನು ಹೊಟೇಲ್ ಗೆ ಹೋಗಲಾರೆ”.
ಈಗ ಸೂಕ್ಷ್ಮವಾಗಿ ಮೂಲ ಹಾಗೂ ಅನುವಾದವನ್ನು ಗಮನಿಸಿ. ಮೆಹ್ತಾ ಹೇಳ ಹೊರಟಿರುವುದು, ಹೊಟೇಲ್ ಖರ್ಚುಗಳ ಮನ್ನಾ ವಿಚಾರವಾಗಿ ಒತ್ತಾಯ ಮಾಡಿದಾಗ ಅವರು ತೀರಾ ಸಹಜ ತಮಾಷೆಯಿಂದಲೇ ಪ್ರತಿಭಟಿಸುತ್ತಾರೆ. “ಇದು ಅವಮಾನ. ನೀವು ನನಗೆ ಲಂಚ ಕೊಡುವ ಪ್ರಯತ್ನ ಮಾಡುವುದಾದರೆ, ನೀವು 6,000 ಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ. ನೀವು ನನಗೆ ಹಣ ಕೊಡಲು ಅವಕಾಶ ಮಾಡಿಕೊಡದಿದ್ದರೆ, ಮತ್ತೆಂದೂ ಇಲ್ಲಿಗೆ ಬರುವುದಿಲ್ಲ”.
ಆದರೆ ಹತ್ತಾರು ಪುಸ್ತಕಗಳನ್ನು ಅನುವಾದ ಮಾಡಿರುವ ಮಹಾಶಯರು ಅಸಂಬದ್ಧವಾಗಿ ‘ನಾನು ಇನ್ನೆಂದೂ ಹೋಟೆಲ್ ಗೆ ಹೋಗಲಾರೆ’ ಎಂದು ಅನುವಾದಿಸಿದ್ದಾರೆ. ಕನಿಷ್ಟ ತಮ್ಮ ಅಂಕಣಕ್ಕೆ ಅಗತ್ಯವಾದ ಅನುವಾದವನ್ನು ಅವರೇ ಮಾಡುತ್ತಾರೆಂದು ತಿಳಿಯೋದೆ ಆದರೆ, ಇದು ಅವರಿಂದಲೇ ಆಗಿರುವ ತಪ್ಪು ಗ್ರಹಿಕೆ ಮತ್ತು ತಪ್ಪು ಅನುವಾದ. ಇಂತಹ ಅನುವಾದ ಬೇಕಾ?

Friday, November 4, 2011

ಮಾಧ್ಯಮ ವೃತ್ತಿ ತೊರೆಯಲು ಹೊರಟ ಹುಡುಗನ ಅಂತರಾಳದ ಮಾತುಗಳು...


ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಘೋಷಣೆಯಾಗಿವೆ. ಗೆಳೆಯರೊಬ್ಬರು ಮೇಲ್ ಮಾಡಿದ್ದಾರೆ. ಪ್ರಶಸ್ತಿ ಪಡೆದವರೊಬ್ಬರು ತಮ್ಮ ಸಂಪಾದಕರಿಗೆ ಕಾಲಿಗೆ ಬೀಳಲು ಪ್ರಯತ್ನಿಸುವ ದೃಶ್ಯವೊಂದು ಟಿವಿ ಚಾನಲ್‌ನಲ್ಲಿ ಪ್ರಸಾರವಾಗಿದೆ. ಪತ್ರಿಕೋದ್ಯಮವೂ ಮಠ-ಮಾನ್ಯವಾಗಿ ಹೋಯ್ತಾ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಏನುತ್ತರ ಕೊಡೋದು, ನೀವೇ ಹೇಳಿ.


ಇರ್ಷಾದ್
ಮತ್ತೊಬ್ಬ ಗೆಳೆಯರು ಇರ್ಷಾದ್ ಎಂ. ವೇಣೂರು ಅವರ ಬ್ಲಾಗ್ ಲಿಂಕ್ ಕಳಿಸಿದ್ದಾರೆ. ಇರ್ಷಾದ್ ಹೆಸರು ನೀವು ಕೇಳಿರಬಹುದು. ಪತ್ರಿಕೋದ್ಯಮ ವಿದ್ಯಾರ್ಥಿ. ಇಂಚರ ಎಂಬ ಬ್ಲಾಗ್ ಮೂಲಕ ಬ್ಲಾಗಿಗರಿಗೆ ಪರಿಚಿತರು. ಪತ್ರಿಕೋದ್ಯಮ ಕ್ಷೇತ್ರ ಬಿಡೋಣ ಅಂತಿದ್ದೀನಿ ಎಂದು ಅವರೊಂದು ಲೇಖನ ಬರೆದಿದ್ದಾರೆ. ಆದರ್ಶದ ಕನಸು ಹೊತ್ತ ಹೊಸ ಹುಡುಗ ಹುಡುಗಿಯರಿಗೆ ಮಾಧ್ಯಮ ಕ್ಷೇತ್ರ ಎಷ್ಟು ನಿರಾಶೆ ಮೂಡಿಸುತ್ತಿದೆ ಎನ್ನುವುದಕ್ಕೆ ಈ ಲೇಖನ ಸಾಕ್ಷಿ. ಇರ್ಷಾದ್ ತಮ್ಮ ನಿಲುವು ಬದಲಿಸಲಿ. ಅವರೇ ಹೇಳಿರುವಂತೆ ಮಾಧ್ಯಮಕ್ಷೇತ್ರ ಇಡಿಇಡಿಯಾಗೇನೂ ಕೆಟ್ಟಿಲ್ಲ. ನಿರಾಶೆ ಬೇಡ, ಹತಾಶೆ ಬೇಡ ಎಂಬುದು ನಮ್ಮ ಸಲಹೆ.


-ಸಂಪಾದಕೀಯ.

ಬಹಳ ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. ನನಗಿನ್ನೂ ನನ್ನ ಪ್ರೌಢ ಶಿಕ್ಷಣದ ದಿನಗಳು ನೆನಪಾಗುತ್ತವೆ. ನನ್ನ ಒಬ್ಬ ಪರ್ತಕರ್ತ ಸ್ನೇಹಿತನನ್ನು ಮೆಚ್ಚಿಕೊಂಡು ಈ ಬದುಕಿನಲ್ಲಿ ಏನಾದರೂ ಮಾಡಬೇಕೂಂತ ಮರುದಿನವೇ ನಾನೊಬ್ಬ ಪರ್ತಕರ್ತನಾಗುತ್ತೇನೆ ಎಂಬ ನಿರ್ಣಯ ಮಾಡಿದವನು ನಾನು. ಅಪ್ಪ ಅಮ್ಮನ ಬೈಗುಳಗಳ ಸುರಿಮಳೆ ಸಹಿಸಿಕೊಂಡು ಎಸ್‌ಎಸ್‌ಎಲ್‌ಸಿ ಬಳಿಕ ಸೈನ್ಸ್ ತೆಗೆದುಕೊಳ್ಳುವ ಅರ್ಹತೆ ಇದ್ದರೂ ಆರ್ಟ್ಸ್ ತೆಗೆದುಕೊಂಡೆ. ಬರವಣಿಗೆಯನ್ನೂ ಶುರು ಹಚ್ಚಿಕೊಂಡಿದ್ದೆ ಪ್ರಜಾವಾಣಿಯ ಮುಖಾಂತರ.

ಪದವಿಗೆ ಬಂದಾಗ ಬರವಣಿಗೆಯ ಹಸಿವು ಹೆಚ್ಚಾಯಿತು. ನನ್ನ ಹೆಸರು ಎಲ್ಲೋ ಓದಿದ್ದೇನೆ ಎಂಬ ಪ್ರತಿಕ್ರಿಯೆ ಕಂಡವರಿಂದ ಬರುವ ಮಟ್ಟಿಗೆ ನನ್ನ ಗುರುತು ಸಿಕ್ಕಿತ್ತು. ನನ್ನ ಪತ್ರಿಕೋದ್ಯಮದ ತುಡಿತವೂ ಹೆಚ್ಚಾಯಿತು. ರಜೆ ದಿನವೂ ಫೀಲ್ಡ್‌ಗಿಳಿಯುತ್ತಿದ್ದೆ. ನನ್ನ ಕ್ಯಾಮರಾ ಹಿಡಿದುಕೊಂಡು ಬೈಕ್ ಏರಿ ಹೊರಟೆನೆಂದರೆ ಹೊತ್ತು - ಊಟ ಯಾವುದರ ಪರಿವೆ ಇಲ್ಲದೆ ಸಮಾಜದ ಜೊತೆ ಬೆರೀತಿದ್ದೆ. ಸ್ಪೆಷಲ್ ಫೀಚರ್ ಸ್ಟೋರಿಗಳನ್ನು ಮಾಡುತ್ತಿದ್ದೆ. ಮಾನವೀಯ ದೃಷ್ಟಿಯಲ್ಲಿ ಹಲವರ ನೋವಿಗೆ ಕಿವಿಯಾಗುತ್ತಿದ್ದೆ. ಪದವಿಯ ದಿನದಲ್ಲೇ ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಬರವಣಿಗೆ - ಪತ್ರಿಕೋದ್ಯಮ - ಛಾಯಾಗ್ರಹಣ ಕುರಿತಾದ ಪಾಠ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ನಾನು ಸುವರ್ಣಾವಕಾಶ ಎಂದು ಸ್ಟೂಡೆಂಟ್ ರಿಪೋರ್ಟರ್ ಆಗಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶಿದ್ದೆ.

ಪತ್ರಿಕೋದ್ಯಮ ಎಂದರೆ ಏನು ಎಂದು ನನಗೆ ೯೯% ತಿಳಿದದ್ದು ಅಲ್ಲೇ. ಇಂಥಾ ಕಚ್ಡಾ ಕ್ಷೇತ್ರಕ್ಕೆ ನಾನು ಬಂದೆನಾ ಎಂಬ ಪಾಪ ಪ್ರಜ್ಞೆ ಕಾಡಿದ ಮೊದಲ ದಿನವದು. ಬಕೆಟ್ ಹಿಡಿದವನೇ ಅಲ್ಲಿ ಬಾಸು. ನಿಯತ್ತಿಂದ ಕೆಲಸ ಮಾಡುವವನು ಕಾಲಡಿಯ ಕಸ. ಎಲ್ಲರನ್ನೂ ಚೆನ್ನಾಗಿಟ್ಟುಕೊಂಡರೆ ಮಾತ್ರ ಅಲ್ಲಿರಬಹುದು. ಎಲ್ಲರ ಸಹಕಾರವೂ ಇರುತ್ತದೆ. ನೀಯತ್ತು - ನೀತಿ ಎಂದೆಲ್ಲಾ ಒನ್ ಮ್ಯಾನ್ ಆರ್ಮಿ ಆಗಹೊರಟರೆ ನಮಗೇ ಗುಂಡಿ ತೋಡುವ ಜನ! ಎಲ್ಲಾ ಬಿಟ್ಟು ರಿಯಾಲಿಟೀ ಶೋ ಎಂದು ಮಾಡಿ, ಬಹುಮಾನದ ಹಣ ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಊರಿಗೆ ಬಸ್ ಹತ್ತಿಸುವ ಜನಾನೇ ಅಲ್ಲಿರುವವರು. ಎಲ್ಲಾ ತಿಳಿದಾಗ ನಾನು ಅಲ್ಲಿಂದ ಹೊರಬಂದಿದ್ದೆ. ಜಾಬ್ ಆಫರ್ ಕೊಡುತ್ತೇವೆ ಎಂಬ ಆಫರ್ ಬಿಟ್ಟು.

ಮೊನ್ನೆ ಅಡ್ವಾಣಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಭೂಪಾಲದಲ್ಲಿ ಯಾತ್ರೆಯ ಪ್ರಚಾರಕ್ಕೆ ಬಿಜೆಪಿ ಸಂಸದ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರಿಗೆ ನೋಟು ನೀಡಿದ ವಿಚಾರ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಗಿಯೂ ಪ್ರಚಾರವಾಗಲಿಲ್ಲ. ಅದೇ ವರದಿ ಹಿಂದೂ ಪತ್ರಿಕೆಯಲ್ಲಿ ಲೀಡ್ ನ್ಯೂಸ್ ಆಗಿ ಓದಲು ಸಹಕಾರಿಯಾಯ್ತು. ಹಾಗಾದರೆ ಸಾಮಾನ್ಯ ಜನರಿಗೆ ವರದಿ ಮುಟ್ಟಿಸಬೇಕಾದ ಪರ್ತಕರ್ತರು ಮುಚ್ಚಿಹಾಕುವ ಕೆಲಸಕ್ಕಿಳಿದರೆ ಯಾಕೆ ಬೇಕು ಈ ಕ್ಷೇತ್ರ?

ಲಂಚಗುಳಿತನ ಪತ್ರಿಕೋದ್ಯಮಕ್ಕೂ ಆವರಿಸಿರುವಾಗ ಅಣ್ಣಾ ಹಜಾರೆಯನ್ನು ಬೆಂಬಲಿಸಿ ಬರೆಯುವ ಯಾವ ನೈತಿಕತೆ ನಮ್ಮಲ್ಲಿದೆ. ರಾಜಾ ಹಗರಣ ಬಯಲಿಗೆಳೆದಂತೆ ನಮ್ಮ ಪ್ರತಿಷ್ಠಿತ ಫಿಕ್ಸ್ ಆಗಿರುವ ಪರ್ತಕರ್ತರ ಹಗರಣ ಬಯಲುಗೊಂಡರೆ ಹೇಗಾಗಬಹುದು ನಮ್ಮ ಸ್ಥಿತಿ. ಬಹುಶಃ ರಸ್ತೆ ಮಧ್ಯ ನಿಲ್ಲಿಸಿ ಬೆತ್ತಲು ಜಗತ್ತು ತೋರಿಸಿದಂತಾಗಬಹುದು! ಹಲವು ವರ್ಷಗಳಿಂದ ನಾನು ವಸ್ತುನಿಷ್ಠ ಸುದ್ದಿ ಪತ್ರಿಕೆ ಎಂದು ಕನ್ನಡದ ಪತ್ರಿಕೆಯೊಂದನ್ನು ಓದುತ್ತಿದ್ದೆ. ಆದರೆ ಆ ಪತ್ರಿಕೆಗೆ ಪತ್ರಿಕಾವಲಯದ ಆಪರೇಷನ್ ಕಮಲ ಆದ ನಂತರ ಓದಿ ಓದಿ ಬೇಸತ್ತು ಹೋಗಿತ್ತು. ಮೊನ್ನೆ ಹೋಗಿ ಏಜಂಟನಿಗೆ ಒಂದೇ ಪತ್ರಿಕೆ ಸಾಕು. ಎರಡು ಬೇಡ ಎಂದು ಹೇಳಿ ಬಂದೆ.

ರಾಜಕಾರಣಿ ಹೇಳಿದ್ದನ್ನು ಪರ್ತಕರ್ತ ಕೇಳುವುದಾದರೆ, ಅವರನ್ನು ಕೇಳಿ ಬರೆಯುವುದಾದರೆ ಯಾವ ಕರ್ಮಕ್ಕೆ ಈ ಪ್ರೆಸ್ ಕಾರ್ಡ್. ಪರ್ತಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸಬೇಕಾದ ಪ್ರೆಸ್‌ಕ್ಲಬ್‌ಗಳು ಪರ್ತಕರ್ತನಿಗೆ ಅನ್ಯಾಯವಾಗುವಾಗ ಬಾಯಿ ಮುಚ್ಚಿ ಬಾಗಿಲು ಹಾಕಿಕೊಳ್ಳುವುದಾದರೆ ಯಾಕೆ ಬೇಕು ಆ ಕ್ಲಬ್‌ಗಳು. ಕೇಳಲು ಪ್ರಶ್ನೆಗಳು ಬಹಳ ಇದೆ. ಆದರೆ ಉತ್ತರಿಸುವ ತಾಕತ್ತು ಯಾರಲ್ಲಿದೆ?

ನನ್ನೂರಿನ ಹತ್ತಿರ ಒಂದು ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆ ಇದೆ. ಆ ಸಂಸ್ಥೆಯ ಮುಖ್ಯಸ್ಥ ಮಾಡುತ್ತಿರುವು ಅನಾಚಾರಗಳನ್ನೇ. ಆ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗೆ ಏನೋ ಸಮಸ್ಯೆಯಿಂದ ಕಾಲೇಜು ಬದಲಾಯಿಸಬೇಕಾಗಿ ಬಂದರೆ ಟಿ.ಸಿ ಬೇಕಾದರೆ ಮುಂದಿನ ಎರಡೂ ವರ್ಷಗಳ ಫೀಸು ಭರಿಸಬೇಕು. ಹಾಗಾದರೆ ಮಾತ್ರ ಟಿ.ಸಿ. ಸಿಗುತ್ತದೆ. ಇಲ್ಲದಿದ್ದರೆ ಹಳೆ ಗಂಡನ ಪಾದವೇ ಗತಿ. ಎಷ್ಟೇ ಕಷ್ಟವಾದರೂ ಕೂಡ. ಮಂಗಳೂರಿನ ಎಸ್‌ಇಝೆಡ್ ಗೆ ಆ ಸಂಸ್ಥೆಯ ಮುಖ್ಯಸ್ಥ ಪರವಾಗಿದ್ದಾಗ ಸಂತ್ರಸ್ತ ಜನರು ಪತ್ರಿಕಾಗೋಷ್ಠಿ ಆಯೋಸಿದ್ದರು. ನಾನು ಇಂಟರ್ನ್‌ಶಿಪ್ ಮಾಡುತ್ತಿದ್ದಾಗಿನ ಘಟನೆ ಅದು. ನಾನು ಅದನ್ನು ವರದಿ ಮಾಡಿ ನನ್ನ ಚೀಫ್‌ಗೆ ನೀಡಿದಾಗ ಆತ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದ. ಅವರ ಬಗ್ಗೆ ವರದಿ ಬರಿಬೇಡಿ, ಅದು ನಮ್ಮ ಜಾಹಿರಾತು ಪಾರ್ಟಿ ಎಂಬ ತಾಕೀತು ಬೇರೆ! ಅಷ್ಟೇ ಏಕೆ ಆ ಕಾಲೇಜಿನಲ್ಲಿ ದುರ್ಘಟನೆ ನಡೆದ ವರದಿಗಳು ತನ್ನನ್ನೇ ಮಾರಿಕೊಂಡ ಆ ಪತ್ರಿಕೆಯಲ್ಲಿ ಇಂದಿಗೂ ...... ಸಮೀಪದ ಖಾಸಗಿ ಕಾಲೇಜು ಎಂಬ ಲೀಡ್ನಲ್ಲಿ ಪ್ರಕಟಗೊಳ್ಳುತ್ತದೆ. ಪತ್ರಿಕೆಯ ಜೊತೆ ಹಾಗೆ ಬರೆಯಲಿಕ್ಕೆ ಅವನಿಗೂ ಜಾಹಿರಾತು ಸಿಗುತ್ತದೆ! ಇದು ವಸ್ತುನಿಷ್ಠ ಪತ್ರಿಕೋದ್ಯಮ!

ಹಾಗಂತ ಪತ್ರಿಕೋದ್ಯಮ ಸಂಪೂರ್ಣ ಕೊಳೆತು ನಾರುತ್ತಿದೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಪತ್ರಿಕೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದೆ. ಅಷ್ಟೇ ಸಂತೃಪ್ತಿಯಿಂದ ಅವರ ಹೊಟ್ಟೆ ತುಂಬಿಸುತ್ತಿದೆ.

ಒಮ್ಮೊಮ್ಮೆ ನನಗೆ ನನ್ನ ಮೇಲೆನೇ ಬೇಜಾರು ಬಂದು ಬಿಡುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಇಂದಿಗೂ ಇಲ್ಲಿ ನೀವು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದೆಲ್ಲಾ ಭರವಸೆ ಆಸೆ ಆಂಕಾಂಕ್ಷೆ, ಕನಸುಗಳನ್ನು ತುಂಬುತ್ತಿದ್ದೇನೆ. ನನ್ನ ಕೆಲವೊಂದು ಅನುಭವಗಳನ್ನು ಅವರ ಮುಂದಿಡುತ್ತೇನೆ. ಅವರು ಅದನ್ನು ಚೆನ್ನಾಗಿ ನಂಬಿ ನನ್ನನ್ನೇ ರೋಲ್ ಮಾಡೆಲ್ ಎಂದು ಭಾವಿಸುತ್ತಿದ್ದಾರೆ. ಆದರೆ ಬಾಯಿಯ ಒಳಗಿರುವುದು ಹುಳುಕು ಎಂಬ ಸತ್ಯ ಅವರಿಗೆ ಹೇಳಬೇಕೆಂದು ಮನಸು ಬಯಸುತ್ತೆ. ಕೂಡಲೇ ಸುಮ್ಮನಾಗುತ್ತದೆ.

ನನ್ನದೀಗ ಸ್ನಾತಕೋತ್ತರ ಪದವಿ ಶಿಕ್ಷಣ. ಅದೂ ಪತ್ರಿಕೋದ್ಯಮದಲ್ಲೇ. ಮಳೆ ನಿಂತು ಹೋದ ಮೇಲೆ ಎಂಬಂತೆ ಈಗ ನನಗಾಗಿರುವುದು ಜ್ಞಾನೋದಯಾನೋ ಅಥವಾ ವೈರಾಗ್ಯನೋ ಅಂತ ನನಗೆ ಮಾತ್ರ ಗೊತ್ತಿಲ್ಲ. ಹಾಗಂತ ಇನ್ನೇನೂ ಮಾಡೋಕಾಗಲ್ಲ ಅಂತಾನೂ ಗೊತ್ತು. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. ಫ್ರೀಲಾನ್ಸರ್ ಆಗುತ್ತೇನೆ. ಜೊತೆಗೆ ನಾಳೆ ಪಾಠ ಮಾಡುವ ಅವಕಾಶ ಬಂದರೆ ಮತ್ತೆ ನನ್ನ ವಿದ್ಯಾರ್ಥಿಗಳಲ್ಲಿ ಆಸೆಯ ಬೀಜ ಬಿತ್ತುತ್ತೇನೆ. ಎಷ್ಟಾದರೂ ಇದು ಮುಖವಾಡದ ಬದುಕು ಅಲ್ವಾ?

Tuesday, November 1, 2011

ಕನ್ನಡ ರಾಜ್ಯೋತ್ಸವವೂ, ನಮ್ಮ ಸುದ್ದಿವಾಹಿನಿಗಳ ಕನ್ನಡಾಭಿಮಾನವೂ...


ಇವತ್ತು ಕನ್ನಡ ರಾಜ್ಯೋತ್ಸವ. ಕನ್ನಡ ಮಾಧ್ಯಮಗಳಿಗೆ ನಾಡಪ್ರೇಮ ಉಕ್ಕಿ ಹರೀತಾ ಇದೆ. ತುಂಬಾ ಸಂತೋಷದ ವಿಷಯ. ಕನ್ನಡ ಪತ್ರಿಕೆಗಳ ಕನ್ನಡ ಪ್ರೀತಿಗೆ ಒಂದು ಅರ್ಥವಿದೆ. ಕನ್ನಡದ ವಿಷಯ ಬಂದಾಗ ಪತ್ರಿಕೆಗಳು ಸದಾ ಕಾಲಕ್ಕೂ ಧ್ವನಿ ಎತ್ತುತ್ತ ಬಂದಿವೆ. ಕನ್ನಡ ಭಾಷೆ-ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ವದ್ದು. ಹೀಗಾಗಿ ಇವತ್ತು ಎಲ್ಲ ಕನ್ನಡ ಪತ್ರಿಕೆಗಳು ರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಸಂಚಿಕೆಗಳು ಖುಷಿ ಕೊಡುತ್ತವೆ.

ಕನ್ನಡ ಸುದ್ದಿವಾಹಿನಿಗಳಿಗೂ ಇವತ್ತು ಕನ್ನಡಾಭಿಮಾನ ಹುಚ್ಚು ಹೊಳೆಯಂತೆ ಹರಿಯುತ್ತಿದೆ. ಇದೂ ಕೂಡ ಸಂತೋಷದ ವಿಷಯವೇ ಹೌದು. ಆದರೆ ಸುದ್ದಿವಾಹಿನಿಗಳ ವಿಷಯದಲ್ಲಿ ಕೆಲವೊಂದು ಆಕ್ಷೇಪಣೆಗಳು ನಮಗಿವೆ. ಆಕ್ಷೇಪಣೆಗಳಿರುವುದರಿಂದಲೇ ಸುದ್ದಿವಾಹಿನಿಗಳ ಕನ್ನಡಪ್ರೇಮ ಅತ್ಯಂತ ಕೃತಕವಾಗಿಯೂ ಕಾಣುತ್ತದೆ.

ಮೊದಲನೆಯದಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಪರಭಾಷಾ ಚಿತ್ರಗಳ ಮೋಹ ಹದ್ದು ಮೀರಿ ಹೋಗಿದೆ. ನಿಜ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಎಂಬುದು ವಾಸ್ತವ. ಗಣನೀಯ ಸಂಖ್ಯೆಯಲ್ಲಿ ಕನ್ನಡಿಗರೂ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂಬುದೂ ನಿಜ. ಕಲೆಗೆ ಭಾಷೆಯ ಗಡಿ ರೇಖೆ ಇರುವುದಿಲ್ಲ ಎನ್ನುವದನ್ನೂ ಒಪ್ಪಿಕೊಳ್ಳೋಣ.

ಆದರೆ ಇವತ್ತು ಕರ್ನಾಟಕದ ಯಾವ ಮೂಲೆಯಲ್ಲಾದರೂ ಹೋಗಿ ನೋಡಿ. ಕನ್ನಡೇತರ ಟಿವಿ ಚಾನಲ್‌ಗಳು ಪ್ರಸಾರವಾಗುತ್ತವೆ. ಅವುಗಳಿಗೆ ಕೇಬಲ್ ಆಪರೇಟರ್‌ಗಳು ಯಾವ ಅಡೆತಡೆಯನ್ನೂ ಮಾಡಿಲ್ಲ. ಪರಭಾಷಾ ಚಿತ್ರಗಳ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮಗಳು ಈ ಪರಭಾಷಾ ಚಾನಲ್‌ಗಳಲ್ಲೇ ಲಭ್ಯವಾಗಿರುವುದರಿಂದ ಕನ್ನಡ ಚಾನಲ್‌ಗಳಲ್ಲೂ ಅದೇ ಚರ್ವಿತ ಚರ್ವಣ ವರದಿಗಳು ಯಾಕೆ? ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿ ಬೇಕಿರುವವರು ಅದೇ ಭಾಷೆಯ ಚಾನಲ್‌ಗಳನ್ನು ನೋಡುತ್ತಾರೆ, ನೋಡಿಕೊಳ್ಳಲಿ. ಕನ್ನಡಿಗರ ಗಂಟಲಿಗೂ ಈ ಬಲವಂತದ ಅಡುಗೆಯನ್ನು ತುಂಬುವುದು ಯಾಕೆ?

ಇದು ಆರಂಭವಾಗಿದ್ದು ಟಿವಿ೯ ಮೂಲಕ. ಟಿವಿ೯ ಆಂಧ್ರಪ್ರದೇಶ ಮೂಲದ ಚಾನಲ್. ಹೀಗಾಗಿ ಟಿವಿ೯ ತೆಲುಗು ಪ್ರಸಾರ ಮಾಡುವ ಕಾರ್ಯಕ್ರಮಗಳ ದೃಶ್ಯಗಳನ್ನೇ ಬಳಸಿ ಟಿವಿ೯ ಕನ್ನಡ ಕೂಡ ತೆಲುಗು ಚಿತ್ರಗಳನ್ನು ವೈಭವೀಕರಿಸುವ ಕೆಲಸ ಆರಂಭಿಸಿತು. ತೆಲುಗು ಚಿತ್ರನಟ-ನಟಿಯರ ಜನ್ಮದಿನಗಳಂದು ಗಂಟೆಗಟ್ಟಲೆ ಕಾಲ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ತೆಲುಗು ಸಿನಿಮಾಗಳು ಬಿಡುಗಡೆಯಾಗುವ ಸಂದರ್ಭದಲ್ಲಂತೂ ಅತಿರೇಕದ ಪ್ರಚಾರ ನೀಡಲಾಯಿತು. ಇದೊಂದು ರೀತಿಯಲ್ಲಿ ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿ ಪ್ರಚಾರ ಕೊಡುವ, ಆ ಚಿತ್ರಗಳ ಮಾರುಕಟ್ಟೆ ಹೆಚ್ಚಿಸುವ ಪ್ರಯತ್ನದ ಹಾಗೇ ಕಾಣಿಸಿತು.

ಇದೇ ರೋಗ ಈಗ ಎಲ್ಲ ಚಾನಲ್‌ಗಳಿಗೂ ಅಂಟಿಕೊಂಡಿದೆ. ಸುವರ್ಣ ನ್ಯೂಸ್ ಮತ್ತು ಸಮಯ ಟಿವಿಯಲ್ಲೂ ಈಗ ಪರಭಾಷಾ ಸಿನಿಮಾಗಳ ಬಗ್ಗೆ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದು ಯಾಕೆ ಬೇಕು ಎಂಬ ಪ್ರಶ್ನೆಗೆ ಸಮರ್ಥನೀಯ ಉತ್ತರ ಚಾನಲ್ ನಡೆಸುವವರಲ್ಲಿ ಇದೆಯೋ ಇಲ್ಲವೋ ನಮಗಂತೂ ಗೊತ್ತಿಲ್ಲ.

ಎರಡನೆಯ ಆಕ್ಷೇಪಣೆ ಶೀರ್ಷಿಕೆಗಳಿಗೆ ಸಂಬಂಧಿಸಿದ್ದು. ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮಗಳ ಶೀರ್ಷಿಕೆಗಳಂತೂ ಪೂರ್ಣ ಇಂಗ್ಲಿಷ್‌ಮಯವಾಗಿ ಹೋಗಿದೆ. ಒಂದೆರಡು ಶೀರ್ಷಿಕೆಗಳು ಇಂಗ್ಲಿಷ್‌ನಲ್ಲಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಇಂಗ್ಲಿಷ್‌ನ ಸಾಕಷ್ಟು ಶಬ್ದಗಳು ಕನ್ನಡದೊಂದಿಗೆ ಬೆರೆತು ಹೋಗಿವೆ. ಅವುಗಳನ್ನು ಬಳಸುವುದು ತಪ್ಪಲ್ಲ. ಆದರೆ ಎಲ್ಲ ಶೀರ್ಷಿಕೆಗಳು ಇಂಗ್ಲಿಷಿನಲ್ಲೇ ಇರಬೇಕೆ? ಒಳ್ಳೆಯ ಕನ್ನಡ ಶೀರ್ಷಿಕೆಗಳನ್ನು ಇಡಲು ಸಾಧ್ಯವಿಲ್ಲವೇ?

ಕನ್ನಡ ಚಾನಲ್‌ಗಳನ್ನು ನಡೆಸುವ ಪತ್ರಕರ್ತರಿಗೆ ಕನ್ನಡ ಶೀರ್ಷಿಕೆಗಳನ್ನು ಇಡುವುದಕ್ಕೆ ಒಂದು ಬಗೆಯ ಕೀಳರಿಮೆ. ಇಂಗ್ಲಿಷ್ ಶೀರ್ಷಿಕೆ ಇಟ್ಟರೆ ಕಾರ್ಯಕ್ರಮಗಳು ಜನಪ್ರಿಯವಾಗುತ್ತವೆ ಎಂಬ ಮೂಢನಂಬಿಕೆ. ಕನ್ನಡದ ಶೀರ್ಷಿಕೆ ಇಟ್ಟು, ಆ ಶೀರ್ಷಿಕೆಯನ್ನೇ ಜನಪ್ರಿಯಗೊಳಿಸುವ ಧೈರ್ಯ, ಸಾಮರ್ಥ್ಯ ಇವರುಗಳಿಗೆ ಇದ್ದಂತೆ ಇಲ್ಲ. ಹೀಗಾಗಿ ಇಂಗ್ಲಿಷ್ ಚಾನಲ್‌ಗಳ ಹಾಗೆ ನ್ಯೂಸ್ ಅಟ್ ನೈನ್, ೯ ಪಿಎಂ ನ್ಯೂಸ್, ಬ್ರೇಕ್ ಫಾಸ್ಟ್ ನ್ಯೂಸ್, ಮಾರ್ನಿಂಗ್ ಕಾಫಿ, ಲೇಡೀಸ್ ಕ್ಲಬ್, ವಾರಂಟ್, ಚಾರ್ಜ್‌ಶೀಟ್, ಫಿಲ್ಮಿ ಫಂಡಾ ಇತ್ಯಾದಿ ಹೆಸರುಗಳನ್ನೇ ಇಡುತ್ತಾರೆ. ಕನ್ನಡದ ಹೆಸರುಗಳನ್ನು ಇಟ್ಟು ಅವುಗಳನ್ನೇ ಜನರ ನಾಲಿಗೆ ತುದಿಗೆ ತರುವುದಕ್ಕೂ ಒಂದು ಯೋಗ್ಯತೆ ಬೇಕಲ್ಲವೇ?

ಈ ಇಂಗ್ಲಿಷ್ ರೋಗವನ್ನು ಹರಡಲು ಶುರು ಮಾಡಿದ್ದು ಹಾಯ್ ಬೆಂಗಳೂರು ಪತ್ರಿಕೆ. ಹಲೋ, ಬಾಟಮ್ ಐಟಮ್, ಫೀಡ್ ಬ್ಯಾಕ್, ಸಾಫ್ಟ್ ಕಾರ್ನರ್, ಖಾಸ್‌ಬಾತ್ ಇತ್ಯಾದಿ ಶೀರ್ಷಿಕೆಗಳನ್ನು ಆರಂಭಿಸಿದ್ದು ರವಿ ಬೆಳಗೆರೆ. ನಂತರ ಇದು ಎಲ್ಲ ಕಡೆಗೂ ವಿಶೇಷವಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಹಬ್ಬಿತು. ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳ ಅಬ್ಬರದ ನಂತರವಂತೂ ಇಂಗ್ಲಿಷ್ ಹೆಸರುಗಳಿದ್ದರೆ ಮಾತ್ರ ಕಾರ್ಯಕ್ರಮ ಓಡುತ್ತವೆ ಎಂಬ ದರಿದ್ರ ಮೌಢ್ಯಕ್ಕೆ ವಾಹಿನಿಗಳು ಅಂಟಿಕೊಂಡವು.

ಮೂರನೆಯದಾಗಿ ಕನ್ನಡ ಸುದ್ದಿವಾಹಿನಿಗಳು ಬಳಸುವ ಭಾಷೆ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ನಿರೂಪಕರು, ವರದಿಗಾರರು ಬಳಸುವ ಕನ್ನಡವನ್ನು ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಒಂದು ವಾಕ್ಯದಲ್ಲಿ ಕನಿಷ್ಠ ನಾಲ್ಕೈದಾದರೂ ಇಂಗ್ಲಿಷ್ ಪದಗಳನ್ನು ಬಳಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಇವರುಗಳು ಮಾತನಾಡುತ್ತಾರೆ. ಕನ್ನಡ ಭಾಷೆಯ ಕುರಿತ ಪ್ರಾಥಮಿಕ ಜ್ಞಾನವೂ ಇಲ್ಲದವರೆಲ್ಲ ನಿರೂಪಕರು, ವರದಿಗಾರರಾಗಿರುವುದು ಇದಕ್ಕೆ ಕಾರಣ. ತಮಾಶೆಯೆಂದರೆ ಬಹುತೇಕ ಟಿವಿ ವರದಿಗಾರರು, ನಿರೂಪಕರಿಗೆ ತಪ್ಪಿಲ್ಲದಂತೆ ಒಂದು ಪ್ಯಾರಾ ಕನ್ನಡದಲ್ಲಿ ಬರೆಯಲೂ ಸಹ ಬರುವುದಿಲ್ಲ. ಚಾನಲ್‌ಗಳಲ್ಲಿ ಕೆಲಸ ಮಾಡುವವರಿಗೆ ಮಾತನಾಡುವುದಷ್ಟೇ ಗೊತ್ತಿದ್ದರೆ ಸಾಕು, ಬರೆಯಲು ಬರಬೇಕಿಲ್ಲ ಎಂಬ ವಾತಾವರಣ ಇದೆ. ಕನಿಷ್ಠ ತಮ್ಮ ಚಾನಲ್ ಕೆಲಸಗಾರರಿಗೆ ಕನ್ನಡ ಪ್ರಾಧ್ಯಾಪಕರಿಂದ ತರಬೇತಿ ಕೊಡುವ ಕೆಲಸವನ್ನೂ ಸಂಸ್ಥೆಗಳು ನಡೆಸುವುದಿಲ್ಲ. ಹೀಗಾಗಿ ಟಿವಿ ಚಾನಲ್‌ಗಳು ಮಾತಾಡಿದ್ದೇ ಕನ್ನಡ ಎನ್ನುವಂತಾಗಿದೆ.

ಕನ್ನಡ ರಾಜ್ಯೋತ್ಸವದ ದಿನ ಮುಖಕ್ಕೆ ಚಿತ್ರವಿಚಿತ್ರವಾಗಿ ಹಳದಿ ಕೆಂಪು ಬಣ್ಣ ಮೆತ್ತಿಕೊಂಡು, ಚಾನಲ್ ಲೋಗೋ ಪಕ್ಕದಲ್ಲಿ ಕನ್ನಡ ಬಾವುಟವನ್ನು ಪಟಪಟಿಸುವಂತೆ ಮಾಡಿದರೆ ಸಾಲದು, ಕನ್ನಡದ ಹೆಸರಿನಲ್ಲಿ ಚಾನಲ್ ನಡೆಸುತ್ತಿರುವ ಕಾರಣಕ್ಕಾದರೂ ಕನ್ನಡದ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವನ್ನು ಈ ವಾಹಿನಿಗಳು ಮಾಡುವಂತಾಗಲಿ. ಇದು ರಾಜ್ಯೋತ್ಸವ ಸಂದರ್ಭದಲ್ಲಿ ಈ ವಾಹಿನಿಗಳಿಗೆ ನಮ್ಮ ವಿನಮ್ರ ಮನವಿ.

ಅಂದಹಾಗೆ, ಎಲ್ಲ ಸಂಪಾದಕೀಯದ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.