Sunday, March 4, 2012

ವಕೀಲರು v/s ಮಾಧ್ಯಮಗಳು - ಪ್ರಜಾಪ್ರಭುತ್ವಕ್ಕೆ ಮತ್ತೊಂದು ಸೋಲು.


ಯಾವೆರಡು ಅಂಗಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕ್ರಿಯೆಯಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ತೊಡಗಿರಬೇಕಿತ್ತೋ ಅವೆರಡೂ ಪರಸ್ಪರ ಗುದುಮುರುಗಿಯಲ್ಲಿ ಬಿದ್ದಿವೆ. ಮೊನ್ನೆ ಬೆಂಗಳೂರನ ಸಿವಿಲ್ ಕೋರ್ಟಿನ ಆವರಣ ಮತ್ತು ಕೋರ್ಟಿನ ಒಳಗೆ ನಡೆದಿರುವ ಘಟನೆಗಳು ರಾಜ್ಯದ ಮಟ್ಟಿಗೆ ಅತ್ಯಂತ ಕೆಟ್ಟ ಬೆಳವಣಿಗೆಗಳು. ಅದೂ ಕೆಟ್ಟ ಆಡಳಿತವೊಂದನ್ನು ಜನರು ನೋಡುತ್ತಿರುವ ಸಂದರ್ಭದಲ್ಲಿ ಈಗಾಗಿರುವ ಬೆಳವಳಿಗೆ ಮತ್ತೂ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ನಿಜಕ್ಕೂ ಇಂತಹ ಕೆಟ್ಟಕಾಲದಲ್ಲಿ ಇರುವ ನಮ್ಮಷ್ಟು ದುರಾದೃಷ್ಟವಂತರು ಯಾರೂ ಇಲ್ಲವೇನೋ. ಒಂದೆಡೆ ಭ್ರಷ್ಟತೆಯ ಕೂಪದಲ್ಲಿ ನಾಡು ಮುಳುಗಿ ಏಳುತ್ತಿದ್ದರೆ ಈಗ ಹಲ್ಲೆ, ಗೂಂಡಾಗಿರಿಗಳು ತಾಂಡವವಾಡುತ್ತಿವೆ. ಅದರಲ್ಲೂ ಕಲಿತ ವರ್ಗಗಳೇ ಅರಾಜಕತೆಯಲ್ಲಿ ಮುಳುಗಿರುವಾಗ ಇನ್ಯಾರು ಈ ನಾಡನ್ನು ರಕ್ಷಿಸಲು ಸಾಧ್ಯ ಹೇಳಿ?

ಕೆಲವು ಗೂಂಡಾ ಪ್ರವೃತ್ತಿಯ, ಅವಿವೇಕಿ ವಕೀಲರು ಅಂದು ನಡೆದುಕೊಂಡಿರುವ ವರ್ತನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಾದ್ದು. ಬಡಪಾಯಿ ಹೊಟ್ಟಿಪಾಡಿನ ಮಾಧ್ಯಮ ವರದಿಗಾರರ ಮೇಲೆ ಕೈಮಾಡಿದ ಅವರ ಅಪರಾಧ ಅಕ್ಷಮ್ಯ. ಇಂತಹ ದುರಾಂಧರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು.

ಪತ್ರಕರ್ತರ ಪಾಲಿಗೆ ಇಂದು ಬಹಳ ಕೆಟ್ಟ ದಿನಗಳು. ಮೊನ್ನೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಕುಮ್ಮಕ್ಕಿನಿಂದ ಗೂಂಡಾಗಳು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಆತನ ಇಡೀ ಕುಟುಂಬದ ಸಮೇತ ಕಗ್ಗೊಲೆ ನಡೆಸಿದ್ದಾರೆ. ಇಂದು ದೇಶದಲ್ಲಿ ಹಲವಾರು ಕಡೆಗಳಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವವರೆಂದರೆ ಸತ್ಯವನ್ನು ಭೇಧಿಸುತ್ತೇವೆ ಎಂದು ಹೊರಡುವ ಪತ್ರಕರ್ತರು ಮತ್ತು ಭ್ರಷ್ಟರ ಕುರಿತ ಮಾಹಿತಿಯನ್ನು ಹೊರಗೆಳೆಯುತ್ತೇವೆ ಎಂದು ಹೊರಡುವ ಮಾಹಿತಿ ಹಕ್ಕು ಕಾರ್ಯಕರ್ತರು.

ಇಂತಹ ಒಂದು ಸಂದಿಗ್ಧ ಸಂದರ್ಭವನ್ನು ನ್ಯಾಯವಾದಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಮಾಧ್ಯಮಗಳೊಂದಿಗೆ ಸಂಘರ್ಷವಾಗುವ ಸಂದರ್ಭದಲ್ಲಿ ಕೊಂಚ ವಿವೇಕಿಗಳಾಗಿರಬೇಕಿತ್ತು. ಮಾಧ್ಯಮದವರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಕೀಲರು ಈ ಮೂರೂ ಜನರ ಉತ್ತಮ ಸಂಯೋಜನೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಆದರೆ ಇಲ್ಲಿ ಇತ್ತೀಚಿನ ಬೆಳವಣಿಗೆಗಳು ವಿರುದ್ಧಗತಿಯಲ್ಲಿ ಹೊರಟಿರುವುದು ಮಾತ್ರ ವಿಷಾಧನೀಯ.
ಇದು ಇಡೀ ಸಮಸ್ಯೆಯ ಒಂದು ಮುಖ. ಈಗ ಸೃಷ್ಟಿಯಾಗಿರುವ ಸಂದರ್ಭಕ್ಕೆ ಮತ್ತೊಂದು ಮುಖ ಇದೆ. ಇದು ಮಾಧ್ಯಮಗಳ ಅದರಲ್ಲೂ ದೃಶ್ಯವಾಹಿನಿಗಳ ಟಿಆರ್‌ಪಿ ಹುಚ್ಚು ಹಾಗೂ ಪ್ರತಿಯೊಂದನ್ನೂ ವೈಭವೀಕರಿಸಿ, ಅತಿರಂಜಿಸುವಲ್ಲಿನ ಹಾಳು ಪೈಪೋಟಿಯಿಂದಾದ ಅನಾಹುತ. ಅಗತ್ಯ ಇರುವುದು, ಇಲ್ಲದಿರುವುದು, ಏನೊಂದೂ ನೋಡದೇ ಪ್ರತಿಯೊಂದನ್ನೂ ಲೈವ್ ತೋರಿಸಬೇಕು ಎನ್ನುವ ಹಪಹಪಿಕೆ. ಇದರ ಪರಿಣಾಮವಾಗಿಯೇ ಒತ್ತಡದಲ್ಲಿ ಸಿಲುಕುವ ವರದಿಗಾರರು ಹಲ್ಲೆಗೆ, ನಿಂದನೆಗೆ ಒಳಗಾಗುವುದು.

ಮೊನ್ನೆ ಘಟನೆಯನ್ನೇ ನೋಡೋಣ. ನ್ಯಾಯಾಲಯ ಎಂದರೆ ಅದಕ್ಕೆ ಒಂದು ಘನತೆ ಇದೆಯಲ್ಲವೇ? ಆವರಣದಲ್ಲಿ ಒಂದು ಮೊಬೈಲ್ ರಿಂಗ್ ಆದರೂ ದಂಡವಿಧಿಸಲಾಗುತ್ತದೆ. ಹೀಗಿರುವಾಗ ಜನಾರ್ಧನ ರೆಡ್ಡಿಯ ಕಲಾಪಗಳನ್ನು ಕೋರ್ಟು ಆವರಣದ ಒಳಗಿನಿಂದಲೂ ಲೈವ್ ತೋರಿಸುವ ಅಗತ್ಯ ಯಾರಿಗಿತ್ತು? ನ್ಯಾಯಾಲಯದ ನಡೆಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕೋರ್ಟಿನೊಳಗೆ ಮಾಧ್ಯಮಗಳನ್ನು ಬಿಡಲಾಗುವುದಿಲ್ಲ ಎಂದು ನ್ಯಾಯವಾದಿಗಳು ಮಾಧ್ಯಮದವರಿಗೆ ತಾಕೀತು ಮಾಡಿದ್ದರಲ್ಲಿ ತಪ್ಪೇನಿತ್ತು? ಆದರೆ ತಾವು ಹೋಗುವುದೇ ಸೈ ಎಂದು ಪೊಲೀಸರನ್ನೂ ಬಳಸಿಕೊಂಡು ತಾವು ಸೆನ್ಷೇಶನ್ ನ್ಯೂಸ್ ಕೊಡುವುದೇ ಸೈ ಎಂದು ವಕೀಲರೊಂದಿಗೆ ವಾಗ್ವಾದಕ್ಕಿಳಿದ ಮಾಧ್ಯಮದ ವರದಿಗಾರರಿಗೆ ಪ್ರಜ್ಞೆ ಇತ್ತೇ?  ಅದರಲ್ಲೂ ಕೆಲ ದಿನಗಳ ಹಿಂದೆಯಷ್ಟೇ ಮಾಧ್ಯಮದವರಿಗೂ, ವಕೀಲರಿಗೂ ನಡುವೆ ಕಹಿ ಸಂಬಂಧ ಏರ್ಪಟ್ಟಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿತ್ತು. ನ್ಯಾಯವಾದಿಗಳನ್ನು ಲಾಕಪ್‌ನಲ್ಲಿ ಚಚ್ಚಿದ್ದ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆಗಿಳಿದಾಗ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಪಂದಿಸದಿದ್ದರಿಂದಾಗಿ ಗಂಟೆಗಟ್ಟಲೆ ರಸ್ತೆ ಜಾಮ್ ಆಗುವ ಸಂದರ್ಭ ಬಂದೊದಗಿತ್ತು. ಅಂದು ಮಾನ್ಯ ಮಿರ್ಜಿಯವರು ಕೂಡಲೇ ಸ್ಪಂದಿಸಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲ. ಆದರೆ ವಾಹಿನಿಯವರಿಗೆ ಸಮಸ್ಯೆ ಅಷ್ಟು ಸಲಭವಾಗಿ ಸಮಸ್ಯೆ ಬಗೆಹರಿದಿದ್ದರೆ ಅದು ಒಳ್ಳೆದಿನವಲ್ಲ. ಕೊನೆಗೆ ಅವರಿಚ್ಛೆಯಂತೆಯೇ ಆಗಿತ್ತು. ಹೀಗೆ ಅಂದು ಮಾಧ್ಯಮಗಳಿಂದ ಸಾರ್ವಜನಿಕವಾಗಿ ತೀರಾ ಅವಮಾನಕ್ಕೊಳಗಾಗಿದ್ದ ವಕೀಲರು ಯಾವ ಮನಸ್ಥಿತಿಯಲ್ಲಿದ್ದರು ಎಂದು ಗ್ರಹಿಸುವುದು ಟೀವಿಗಳ ಮುಖ್ಯಸ್ಥರಿಗೆ ಅರಿವಿರಲಿಲ್ಲವೇ? ಆದರೂ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮೊನ್ನೆ ವಕೀಲರೊಂದಿಗೆ ಜಗಳಕ್ಕಿಳಿಯುವ ಅಗತ್ಯವಿತ್ತೇ? ಪರಿಸ್ಥಿತಿಯ ಗಭೀರತೆಯನ್ನು ಗ್ರಹಿಸಿ ತಮ್ಮ ವರದಿಗಾರಿಗೆ ಕಿವಿಮಾತು ಹೇಳಿರಲಿಲ್ಲವೇಕೆ?

ವಕೀಲರು ವರದಿಗಾರರಿಗೆ ಹೊಡೆದರು. ಒಬಿ ವ್ಯಾನ್‌ಗಳ ಮೇಲೆ ಬಲವಾದ ಕಲ್ಲುಗಳನ್ನು ಎತ್ತಿಹಾಕಿದರು. ಇಷ್ಟೊತ್ತಿಗೆ ಅಂದು ಪರಿಸ್ಥಿತಿ ಹೀಗಾಗಲಿರುವನ್ನು ಸರಿಯಾಗಿಯೇ ಗ್ರಹಿಸಿದ್ದ ಪೊಲೀಸರು ಎಲ್ಲಾ ಬಗೆಯಿಂದಲೂ ಸಜ್ಜಿತವಾಗಿಯೇ ಬಂದಿದ್ದರು. ಬಾಕ್ಸ್‌ಗಳಲ್ಲಿ ಕಲ್ಲುಗಳನ್ನು ತಂದಿದ್ದರು. (ಕಲ್ಲುಗಳನ್ನು ತಂದಿದ್ದು ವಕೀಲರು ಎಂದು ಟಿವಿಗಳು ತಪ್ಪಾಗಿ ವರದಿ ಮಾಡಿದವು). ಅವರು ತಪ್ಪಿತ್ಥಸ್ಥರನ್ನು ಬಂಧಿಸುವ ಗೋಜಿಗೇ ಹೋಗಲಿಲ್ಲ. ಸಿಕ್ಕಿದ್ದೇ ಛಾನ್ಸು ಎಂದು ಪೊಲೀಸರು ಸಾವಿರ ಸಾವಿರ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ನುಗ್ಗಿದರು. ನಂತರ ಆವರಣದಲ್ಲಿ ಸಿಕ್ಕ ಸಿಕ್ಕ ವಕೀಲರನ್ನು ಚಚ್ಚಿದರು. ಈ ಹೊತ್ತಿಗೆ ಪೊಲೀಸರು ಹೊಡೆದ ಒಂದು ಕಲ್ಲನ್ನು ತಿರುಗಿಸಿ ವಕೀಲನೊಬ್ಬ ಹೊಡೆದ ಪೆಟ್ಟಿಗೆ ಪೇದೆಯೊಬ್ಬರಿಗೆ ಗಂಭೀರವಾಗಿ ಗಾಯವಾಯ್ತು.  ಕೊನೆಗೆ ಮಿರ್ಜಿ ಲಾಠಿಚಾರ್ಜ್‌ಗೆ ಆದೇಶ ನೀಡಿದರು. ಕೂಡಲೇ ತಮ್ಮ ಸಿಟ್ಟನ್ನು ವಿಚಿತ್ರ ರೀತಿಯಲ್ಲಿ ತೀರಿಸಿಕೊಂಡದ್ದು ಪೊಲೀಸರು. ಹೀಗೆ ವಕೀಲರನ್ನು ಥಳಿಸತೊಡಗಿದಂತೆಯೇ ವಕೀಲಲ್ಲಿ ಯಾವನೋ ತಲೆಕೆಟ್ಟ ಒಬ್ಬ ವಕೀಲ ಮೊದಲ ಮಹಡಿಯಿಂದ ಒಂದು ಕುರ್ಚಿ ಎತ್ತಿಹಾಕಿದ. (ಈ ಕುರ್ಚಿಯಿಂದ ಯಾರಿಗೂ ಪೆಟ್ಟಾಗಿಲ್ಲ. ಯಾಕೆಂದರೆ ಅದು ತೀರಾ ಹಗುರವಾಗಿತ್ತು). ಆದರೆ ಮಾಧ್ಯಮಗಳು ಈ ಕುರ್ಚಿಯ ಏಟಿನಿಂದಲೇ ಪೊಲೀಸ್ ಪೇದೆ ಮಹದೇವಯ್ಯ ಸತ್ತುಹೋದ ಎಂದು ನಿಮಿಷ ನಿಮಿಷಕ್ಕೂ ಭಿತ್ತರಿಸಿ ರಾಜ್ಯದಾದ್ಯಂತ ಸೆನ್ಷೇಷನ್ ಸೃಷ್ಟಿಸಿದರು. ಅಲ್ಲಿಗೆ ಪೊಲೀಸರು ಸಕ್ಸೆಸ್ ಆಗಿದ್ದರು.ಗಾಳಿಗೆ ಗುಂಡು ಹಾರಿಸುತ್ತ, ಟಿಯರ್ ಗ್ಯಾಸ್ ಸಿಡಿಸುತ್ತ ನೂರಾರು ಸಂಖ್ಯೆಯಲ್ಲಿ  ಶಸ್ತ್ರಸಜ್ಜ್ಜಿತರಾಗಿ, ಫೈಬರ್ ಲಾಟಿಗಳನ್ನು, ಕಲ್ಲುಗಳನ್ನು ಹಿಡಿದು ನ್ಯಾಯಾಲಯದ ಒಳಗೆ ನುಗ್ಗಿದ ಪೊಲೀಸರು ವಿಚಿತ್ರವಾಗಿ ವರ್ತಿಸಿದರು. ನೂರಾರು ವಕೀಲರ ಮೇಲೆ (ಇವರಲ್ಲಿ ಬಹುತೇಕರು ಅಮಾಯಕರು) ಮನಸೋಯಿಚ್ಛೇ ಥಳಿಸಿದರು. ೩೦- ೪೦ ವಕೀಲರಿಗೆ ಗಂಭೀರ ಗಾಯಗಳಾದವು. ನ್ಯಾಯಾಲದ ಅಸೋಷಿಯೇಷನ್ ಒಳಗೆ ನುಗ್ಗಿ ಸುಮ್ಮನೇ ಕುಳಿತಿದ್ದವರನ್ನೆಲ್ಲಾ ಥಳಿಸಿದರು. ಲೇಡೀಸ್ ಅಸೋಷಿಯೇಷನ್‌ಗೆ ನುಗ್ಗಲು ಯತ್ನಿಸಿದರು. ಆದರೆ ಕೂಡಲೇ ಅದರ ಬಾಗಿಲು ಹಾಕಾಯಿತು. ನ್ಯಾಯಾಧೀಶರನ್ನೂ ಬಿಡದೇ ಬಡಿದರು. ನ್ಯಾಯಾದೀಶ ಬೂದಿಹಾಳ್ ಅವರಿಗೆ ತೀವ್ರ ಏಟು ಬಿದ್ದಿತು. ಕೋರ್ಟ್ ಆವರಣದಲ್ಲಿದ್ದ ವಕೀಲರ ಹತ್ತಾರು ಕಾರುಗಳಿಗೆ ಪೊಲೀಸರು ಬೆಂಕಿ ಹಚ್ಚಿದರು. ಗಾಜುಗಳನ್ನು ಪುಡಿಪುಡಿ ಮಾಡಿದರು. ಮಿರ್ಜಿ ಸಾಹೇಬರು ವಕೀಲರೇ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳುತ್ತಾರೆ. ತಾವೆ ತಮ್ಮ ವಾಹನಗಳಿಗೆ ಬೆಂಕಿ ಹಚ್ಚಲು ಸಾಧ್ಯವೇ?

ಅತ್ತ ಟೀವಿಗಳಲ್ಲಿ ಮಾತ್ರ ಇದೆಲ್ಲದರರ ಬಗ್ಗೆ ಒಂದೇ ಒಂದು ಸೊಲೂ ಇರಲಿಲ್ಲ.

ನಿಜ ಹೇಳಬೇಕೆಂದಿದ್ದರೆ ಇಷ್ಟು ಹೊತ್ತಿಗೆ ಮಾಧ್ಯಮದವರೂ ಏಟು ತಿಂದು ಸೋತಿದ್ದರು. ವಕೀಲರೂ ಏಟು ತಿಂದು ಸೋತಿದ್ದರು. ಆದರೆ ಪೊಲೀಸರು ಗೆದ್ದಿದ್ದರು. ಅದೂ ಮಾಧ್ಯಮದವರ ಸಂಪೂರ್ಣ ಬೆಂಬಲದಿಂದ. ವಕೀಲರು ಹಾಗೂ ಮಾಧ್ಯಮದವರು ಇಬ್ಬರ ಕಾಟ ತಡೆಯಲಾರದೇ ಒಳಗೊಳಗೇ ಕುದಿಯುತ್ತಿದ್ದ ರಾಜಕಾರಣಿಗಳು, ಸಚಿವರು ಈಗ ಇಬ್ಬರ ಹೊಡೆದಾಟ ನೋಡಿ ಒಳಗೊಳಗೇ  ಮುಸಿಮುಸಿ ನಗುತ್ತಿದ್ದರು. ಈ ಖುಷಿಯಲ್ಲಿ ಮೊದಮೊದಲಿಗೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಏನು ಹೇಳುವುದೇ ತೋಚದಾಗಿ ಏನೇನೋ ಹೇಳಿಕೆ ನೀಡತೊಡಗಿದ್ದರು. ಮಾಧ್ಯಮಗಳ ಒತ್ತಡ ಹೆಚ್ಚಿದಾಗಲಷ್ಟೇ ಅವರು ಮಾಧ್ಯಮದ ಪರವಾಗಿ ನಿಂತದ್ದು.

ನಂತರದಲ್ಲಿ ಇಡೀ ರಾಜ್ಯದ ಮಾಧ್ಯಮಗಳು ಒಂದಾದವು. ಪ್ರತಿಭಟಿಸಿದವು, ಸರ್ಕಾರವನ್ನು ಮಣಿಸಿದವು. ಹೋರಾಟ ನಡೆಸಿದವು.  ಅಪರಾಧವೆಸಗಿದ, ಎಸಗದ, ಹಲ್ಲೆಗೆ ಒಳಗಾದ ಅಮಾಯಕ, ಪ್ರಾಮಾಣಿಕ, ಎಲ್ಲಾ ವಕೀಲರನ್ನೂ ಯಾರಿಗೂ ಕೊಂಚವೂ ಮಾರ್ಜಿನ್ ಕೊಡದೇ ’ಗೂಂಡಾ ವಕೀಲರು’ ’ತಾಲಿಬಾನ್‌ಗಳು’, ಇತ್ಯಾದಿಯಾಗಿ ಜರಿದು ತಮ್ಮ ಮಾಧ್ಯಮ ಪ್ರಭಾವದಿಂದ ಎಲ್ಲಾ ವಕೀಲರನ್ನು ವಿಲನ್‌ಗಳಾಗಿ ಮಾಡಿಬಿಟ್ಟರು. ಇಡೀ ಪ್ರಕರಣದಲ್ಲಿ ವೃತ್ತಿಧರ್ಮಕ್ಕೆ ನಿಷ್ಟರಾಗಿ ನಿಷ್ಪಕ್ಷಪಾತವಾಗಿ ವರದಿ ಮಾಡಿದ್ದೆಂದರೆ ’ದ ಹಿಂದೂ’ ಮತ್ತು ಇತರ ಕೆಲವೇ ಪತ್ರಿಕೆಗಳು.

ಆದರೆ ಪಬ್ಲಿಕ್ ಮೆಮೊರಿ ತುಂಬಾ ಶಾರ್ಟ್. ಮತ್ತೆ ದಿನರಾತ್ರಿ ಟೀವಿಗಳು ನಡೆಸುವ ರಿಯಾಲಿಟಿ ಶೋಗಳ, ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯಲ್ಲಿ ಜನರು ಈ ಎರಡು ದಿನ ನಡೆದಿದ್ದೆಲ್ಲವನ್ನೂ ಮರೆತೇ ಬಿಡುತ್ತಾರೆ. ಈಗ ನಿಜಕ್ಕೂ ಮತ್ತೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದು ಪತ್ರಕರ್ತರೇ.

ಈಗ ವಕೀಲರು ಸುಮ್ಮನೇ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ.  ಸಭೆಗಳ ಮೇಲೆ ಸಭೆಗಳಾಗುತ್ತಿವೆ.  ವಕೀಲರ ಸಂಘವೇ  ನಿರ್ಣಯಗಳನ್ನು ತೆಗೆದುಕೊಂಡಿದೆ. ಮಾಧ್ಯಮದ ಪಕ್ಷಪಾತದ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ.  ಪತ್ರಕರ್ತರ ಯಾವ ಕೇಸುಗಳನ್ನೂ ನಡೆಸಬಾರದು, ತಮ್ಮ ಬಗ್ಗೆ ಅವಾಚ್ಯವಾಗಿ ರೌಡಿಗಳು, ರೌಡಿ ವಕೀಲರು ಎಂದೆಲ್ಲಾ ದಿನವಿಡೀ ಕೂಗುತ್ತಿದ್ದ ಟಿವಿ ಚಾನಲ್‌ಗಳ ನಿರೂಪಕಿಯರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು, ಪತ್ರಕರ್ತರ ಕುರಿತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೇಸು ಜಡಿಯಬೇಕು ಎಂದೆಲ್ಲಾ ಚರ್ಚೆಗಳಾಗುತ್ತಿವೆ. ಇನ್ನು ರಾಜಕಾರಣಿಗಳ, ಭ್ರಷ್ಟರ ವಿರುದ್ಧ ಪತ್ರಕರ್ತರು ಬರೆದಾಗ ಕೇಸು ಹಾಕಿಸಿಕೊಂಡ ಪತ್ರಕರ್ತರು ವಕೀಲರನ್ನು ನೇಮಿಸಿಕೊಳ್ಳಬೇಕಾದಾಗ ಇದೇ ’ಗೂಂಡಾ’ ವಕೀಲರಿಗೇ ಕೈಕಾಲು ಹಿಡಿದು ದುಂಬಾಲು ಬೀಳಬೇಕಾದ ದುಸ್ಥಿತಿ ಬಂದೊದಗುವುದು ಎಷ್ಟು ಶೋಚನೀಯವಲ್ಲವೇ? ಇನ್ನು ರಾಜಕಾರಣಿಗಳು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ ಅವರ ಪರವಾಗಿ ಹೋಗುವ ಒಬ್ಬ ವಕೀಲ ಸಿಗುವುದೂ ದುಸ್ತರ. ಇಡೀ ಪ್ರಕರಣವನ್ನು ಏಕಮುಖವಾಗಿ ಹೇಳ ಹೊರಡುವ ಮುನ್ನ ಮಾಧ್ಯಮ ಮುಖ್ಯಸ್ಥರು ಕೊಂಚ ಆಲೋಚಿಸಬೇಕಿತ್ತಲ್ಲವೇ?

ಈಗ ಮಾಧ್ಯಮದವರನ್ನು ಬಳಸಿಕೊಂಡು ತಮ್ಮ ಬೇಳೆಕಾಳು ಬೇಯಿಸಕೊಂಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಆಗ ಪತ್ರಕರ್ತರ ಬೆಂಬಲಕ್ಕೆ ನಿಲ್ಲುವ ಯಾವ ಸಾಧ್ಯತೆಯೂ ಇಲ್ಲ.

ಕೊನೆಗೊಂದು ಪ್ರಶ್ನೆ: ನೇರವಾಗಿ ಈ ಹಿಂದೆ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರಾಗಿದ್ದವರಿಗೆ: 
ಈಗ ಟೀವಿ ವರದಿಗಾರರ ಮೇಲೆ ಹಲ್ಲೆಯಾಗಿದ್ದನ್ನು ಭಯಂಕರವಾಗಿ ವಿಶ್ಲೇಷಣೆಗೆ ತೊಡಗಿರುವ ನೀವು ಈ ಹಿಂದೆ ಬಳ್ಳಾರಿಯ ಗಣಿಕಳ್ಳರ ಗೂಂಡಾಗಳಿಂತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಾಮಾಣಿಕ ವರದಿಗಾರ ಕುಮಾರ ರೈತರಿಗೆ ಆಸ್ಪತ್ರೆ ಖರ್ಚಿಗೆ ಹಣಕಾಸು ಬೆಂಬಲ ನೀಡುವುದಿರಲಿ ಕನಿಷ್ಟ ನೈತಿಕ ಸ್ಥೈರ್ಯವನ್ನೂ ಹೇಳದೇ ಕೊನೆಗೆ ಅವರ ಮೇಲೇ ಗೂಬೆ ಕೂರಿಸಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿ ಉಂಟು ಮಾಡಿದಿರಲ್ಲಾ ಆವಾಗ ನಿಮ್ಮ ವೃತ್ತಿಪ್ರೇಮ ಎಲ್ಲಿಹೋಗಿತ್ತು ಸ್ವಾಮಿ?

10 comments:

 1. I have 2 questions to you:

  1. Why u people (so called writers of blog/FB/tabloids..) never even think about common people?....can u please analyze how it has affected us.

  2. All lawers and all journalists are not good. But, dont you think lawers 'need' punishment because of January 17th issue. On what basis, they 'stopped' bangalore for a complete day?. Forget about recent incident, do you still support lawers for Jan 17th incident??

  ReplyDelete
  Replies
  1. yes i still support lawyers for jan 17th incident. you should know the truth before comment anything on social networking websites. Even i have a questions for you - Do you know why they stopped bangalore for a complete day? Do you know how police treat when you go to police station to register a complaint? Do you know Who is hiding real fact behind all incidents? Do you know who owns all media stations? I still have so many questions to ask common people like you, but i want you to find answers for these questions and come back.

   Delete
  2. yes, prashant words correct. u do one thing, if u or ur frnds had a complaint against anybody go to the station and lodge, then only u know how they treat with u, on that day all advocate protest not only their self man, they were fight for justice for the society. pls, being a educative think broadly, our common people don't hv a time to think what happens in society, they are only believe what media shows is truth. ........ shame on

   Delete
 2. ಈಗ ಟೀವಿ ವರದಿಗಾರರ ಮೇಲೆ ಹಲ್ಲೆಯಾಗಿದ್ದನ್ನು ಭಯಂಕರವಾಗಿ ವಿಶ್ಲೇಷಣೆಗೆ ತೊಡಗಿರುವ ನೀವು ಈ ಹಿಂದೆ ಬಳ್ಳಾರಿಯ ಗಣಿಕಳ್ಳರ ಗೂಂಡಾಗಳಿಂತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಾಮಾಣಿಕ ವರದಿಗಾರ ಕುಮಾರ ರೈತರಿಗೆ ಆಸ್ಪತ್ರೆ ಖರ್ಚಿಗೆ ಹಣಕಾಸು ಬೆಂಬಲ ನೀಡುವುದಿರಲಿ ಕನಿಷ್ಟ ನೈತಿಕ ಸ್ಥೈರ್ಯವನ್ನೂ ಹೇಳದೇ ಕೊನೆಗೆ ಅವರ ಮೇಲೇ ಗೂಬೆ ಕೂರಿಸಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿ ಉಂಟು ಮಾಡಿದಿರಲ್ಲಾ ಆವಾಗ ನಿಮ್ಮ ವೃತ್ತಿಪ್ರೇಮ ಎಲ್ಲಿಹೋಗಿತ್ತು ಸ್ವಾಮಿ?...lokayutha report ee uttara

  ReplyDelete
 3. Well, it is quite open fact that whole nonsense started by lawyers ...may be because of Jan 17th issue, they thought they can do anything...they can take whole state to ransom. They started it,...they even beat-up some students....and finally whole system stood...they got what they deserved...this should teach them some lesson - just because of your LLB, you can't take law into your hands.....for a change - my full support to press & police...they did a wonderful job.

  ReplyDelete
 4. ONE CANNOT RULE OUT THE POLITICAL HAND BEHIND THIS INCIDENT. I STILL FEEL JANARDHAN REDDY MAY HAVE DEPLOYED HIS HENCHMEN TO CREATE SUCH A SITUATION IN LAWYERS COSTUME. WE NOW FEEL THE IMPORTANCE OF ID'S FOR LAWYERS.

  ReplyDelete
 5. Hi Prashanth,

  You have lot of questions.. hope you will get answer & publish to us.

  I believe both in Jan 17th & Mar 2nd incident Lawyers failure to take support of Public, because in Earlier many situation Lawyers always get support from Media & Public, and Senior Lawyers always need concern how to solve the problem, with help of public automatically media will help them.

  Regarding Police, they really GREAT CRIMINAL PERSONS, they took ADVANTAGE in both incident, always media or public should take care during MOB time not to give advantage to Police..

  Regarding Media, now they are against lawyers, but generally MEDIA DONT HAVE CONSTANT FRIENDS & ENEMIES.. already some medias trying to convince lawyers by allowing tell there EXPRESS in front of Media...

  I feel all senior people(lawyers, police & media) sit together and solve there issues internally..

  I pray in future nobody interfere others and make is environment COOLLLLLLLLLL

  ReplyDelete
 6. ಪುರುಷೊತ್ತಮ ಚಿಕ್ಕಹಾಗಡೆMarch 9, 2012 at 1:33 PM

  ನನಗೆ ತುಂಭ ಖುಷಿಯಾಯಿತು ಸಾರ ಈ ಲೇಖನ ಓದಿ. ಯಾಕೆ ಇನ್ನು ಮಾಧ್ಯಮದವರು ವಾಸ್ತವದ ನೆಲೆಯಲ್ಲಿ ನಿಂತು ಯೊಚನೆ ಮಾಡುತಿಲ್ಲ ಒಂದು ವಿಮರ್ಶೆ ತನಗೆ ತಾನು ಮಾಡಿಕೊಳ್ಳುತ್ತಿಲ್ಲವೆಂದು ಬೇಜಾರಾಗುತಿತ್ತು.ಸದ್ಯ ನೀವಾದರೂ ಒಂದು ಲೇಖನ ಮಾಡಿದ್ದೀರಲ್ಲವೆಂಬ ಸಣ್ಣ ಆಶಾಬಾವನೆ ಇನ್ನೂ ಉಳಿದು ಕೊಂಡಿದೆ. ಮಾದ್ಯಮದಲ್ಲಿ ಹೇಳುವುದೆಲ್ಲ ನಿಜವಲ್ಲವೆಂಬ ಅಂತಿಮ ನಿರ್ದಾರಕ್ಕೆ ಬರಬೇಕಾಗುತ್ತದೆ. ಯಾಕೆಂದರೆ ತಮ್ಮ ಟಿ ಆರ್ ಪಿ ರೇಟುಗಳನ್ನ ಹೆಚ್ಚಿಸಿಕೊಳ್ಳುವ ಬರದಲ್ಲಿ ವಾಸ್ತವವನ್ನು ಮರೆತು ಮಾತನಾಡುವ ಟಿ.ವಿ.ಮಾದ್ಯಮಗಳು ನೈತಿಕತೆಯನ್ನು ಉಳಿಸಿಕೊಂಡಿಲ್ಲವೆಂಬುದಕ್ಕೆ ಮತ್ತೊಂದು ಉದಾಹರಣೆಯಗಿ ನಮಗೆ ಕಣ್ಣಿ ಕಾಣಿಸುತದೆ. ನಾನು ಸಹ ಅವತ್ತಿನ ಘಟನೆಗೆ ಸಾಕ್ಷಿಯಾಗಿದ್ದೇನೆ. ವಕೀಲರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ನೀವೂ ಸಹ ವಿಡಿಯೋಗಳನ್ನು ನೋಡಿದ್ದೀರಿ ಅಂತ ನಾನು ಭಾವಿಸಿದ್ದೇನೆ. ವಕೀಲರು ಕೆಟ್ಟದಾಗಿ ಮಾತನಾಡಿದ್ದಾರೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬು ಸತ್ಯವಾದುದ್ದು ಹಾಗೆಯೇ ಮಾದ್ಯಮದವರು ಸಹ ಕೆಟ್ಟದಾಗಿ ಮಾತನಾಡಿದ್ದಾರೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬುದು ಸತ್ಯವಾದುದ್ದು. ಇಲ್ಲಿ ಮುಖ್ಯವಾಗಿ ಹೇಳಬೇಕಾಗಿರುವುದು ಪೋಲಿಸರ ವರ್ತನೆಯನ್ನು. ನೀವು ನಂಬುವುದಿಲ್ಲ 108 ಗಾಡಿಯನ್ನ ನಿಲ್ಲಿಸಿ ವಕೀಲನೆಂಬ ಕಾರಣದಿಂದಲೇ ಒಡೆದಿದ್ದಾರೆ ಎಂದರೆ ನೀವೇ ತಿಳಿದುಕೊಳ್ಳಿ.

  ReplyDelete
 7. ಪ್ರಶಾಂತ್ ಅವರೇ, ಜನವರಿ 17ರಂದು ವಕೀಲರು ಗಂಟೆಗಟ್ಟಲೆ ರಸ್ತೆ ತಡೆ ಮಾಡಿದ್ದರಿಂದ ನಾನು ನನ್ನ ಕಚೇರಿಗೆ ತಡವಾಗಿ ತಲುಪಿದೆ. ಇದರಿಂದಾಗಿ ಅದೆಷ್ಟೋ ಜನರು ಬಸ್ಸು, ಟ್ರೈನ್​ ಮಿಸ್​ ಮಾಡಿಕೊಂಡಿದ್ದಾರೆ. ಇವೆಲ್ಲ ನಿಮಗೆ ಗೊತ್ತಾಗಲಿಲ್ಲವೇ. ಒಂದೆರಡು ಆಂಬುಲೆನ್ಸ್​ಗಳು ಟ್ರಾಫಿಕ್ ಜಾಮ್​ನಲ್ಲಿ ಸಿಕ್ಕಿಕೊಂಡಿದ್ದವು. ಅದರೊಳಿಗೆದ್ದ ಪೇಷಂಟ್​ ಅಪ್ಪತಪ್ಪಿ ತೀರಿಕೊಂಡಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕಿತ್ತು? ಯಾರೋ ಒಬ್ಬ ವಕೀಲರ ಮೇಲಾದ ದೌರ್ಜನ್ಯಕ್ಕೆ ಅಮಾಯಕರನ್ನು ಬಲಿ ಪಡೆಯುವುದು ಸರಿಯಾ? ಪೊಲೀಸರು ವಕೀಲರ ಮೇಲೆ ಹಲ್ಲೆ ನಡೆಸಿದ್ದು ನಿಜವೇ ಆದರೆ, ಸೂಕ್ತ ದಾಖಲೆಗಳುನ್ನು ಇಟ್ಟುಕೊಂಡು ಅವರ ಮೇಲೆ ಕೇಸು ದಾಖಲಿಸಬಹುದಿತ್ತು. ಅದನ್ನು ಬಿಟ್ಟು ಗಂಟೆಗಟ್ಟಲೆ ರಸ್ತೆ ತಡೆ ಮಾಡುವುದು ಸರಿಯಾ? ನೀವು ಅದನ್ನು ಸಮರ್ಥನೆ ಮಾಡಿಕೊಳ್ಳುವುದು ವಕೀಲರು ಮಾಡಿದ ಪ್ರಮಾದಕ್ಕಿಂತಲೂ ದೊಡ್ಡ ತಪ್ಪಾಗಲಿದೆ. ಪ್ರಶಾಂತ್​ ಅವರೇ, ನಿಮಗೆ ಗೊತ್ತಿರಲಿ ಕೆಲವು ಯುವ ವಕೀಲರು, ತಾವೇನೆ ಮಾಡಿದರೂ ಯಾರು ತಮ್ಮ ವಿರುದ್ಧ ಧ್ವನಿ ಏರಿಸುವುದಿಲ್ಲ ಅನ್ನೋ ಗರ್ವದಲ್ಲಿದ್ದಾರೆ. ಇದರಿಂದಾಗಿಯೇ ಇಷ್ಟೊಂದು ಸಮಸ್ಯೆಯಾಗುತ್ತಿದೆ. ವಕೀಲಿ ವೃತ್ತಿ ಸಮಸ್ಯೆಯಲ್ಲಿ ಸಿಲುಕಿರುವವರನ್ನು ಅದರ ಕಪಿಮುಷ್ಟಿಯಿಂದ ಮುಕ್ತಿಗೊಳಿಸುವ ಶ್ರೇಷ್ಟ ಕೆಲಸವಾಗಿದೆ. ಅದನ್ನು ಬಿಟ್ಟು, ಅಮಾಯಕ ಜನರ ಸಮಯ ಕಸಿದುಕೊಂಡು, ಸಮಸ್ಯೆ ಸೃಷ್ಟಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ಇನ್ನು ಮಾರ್ಚಾ 2ರಂದು ಸಿವಿಲ್​ ಕೋರ್ಟ್​ ಆವರಣದಲ್ಲಿ ಪೊಲೀಸರು ಇವರ ಮೇಲೆ ದೌರ್ಜನ್ಯ ಮಾಡಿದ್ದರೆ, ಅದನ್ನಿಟ್ಟುಕೊಂಡು ಕೇಸು ದಾಖಲಿಸಿ, ಮಾಧ್ಯಮಗಳಿಗೆ ಹೇಳಿಕೆ ಕೊಡಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮದವರ ಮೇಲೆ ಹಲ್ಲೆ, ವಾಹನಗಳ ಮೇಲೆ ಕಲ್ಲು ತೂರಿದ್ದು ಸರಿಯಲ್ಲ. ವಕೀಲಿ ವೃತ್ತಿಯಲ್ಲಿ ಹೇಗೆ ಕೆಲವು ಹುಂಬ ಯುವ ವಕೀಲರಿದ್ದಾರೋ ಹಾಗೆಯೇ, ಮಾಧ್ಯಮದಲ್ಲೂ ಕೆಲವು ದರ್ಪ ತೋರುವ ಯುವ ಪತ್ರಕರ್ತರಿದ್ದಾರೆ. ಬಿಸಿ ರಕ್ತ ಇರುವವರು ವಿರೋಧಿಗಳಾದರೆ ಏನಾಗಬೇಕು ಅದೇ ಆಗಿದೆ. ಸಧ್ಯ ಇದನ್ನು ಬಗೆ ಹರಿಸಿದರೆ ನಮ್ಮಂತಹ ಸಾಮಾನ್ಯ ಜನರು ನೆಮ್ಮದಿಯಾಗಿ ಇರಬಹುದು. ಗಾಂಧೀಜಿಯವರು ವಕೀಲರು ಆಗಿದ್ದರು, ಪತ್ರಕರ್ತರು ಆಗಿದ್ದರು. ಅವರು ಶಾಂತಿಯ ಮಂತ್ರದಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಆದರೆ ಈಗ ಎರಡೂ ವೃತ್ತಿಯ ಕೆಲವರು ಈ ರೀತಿ ಕಾನೂನನ್ನು ಕೈಗೆತ್ತಿಕೊಂಡು, ನ್ಯಾಯದೇವತೆಯ ಜಾಗದಲ್ಲಿ ನೆತ್ತರು ಹರಿಸುವುದು ನಾಚೀಕೆಗೇಡು. ಭಾರತೀಯರು ತಲೆತಗ್ಗಿಸುವಂತಾಗಿದೆ. ಛೀ... ಇದನ್ನು ಸಮರ್ಥನೆ ಮಾಡಿಕೊಳ್ಳುವುದು ಅಸಹ್ಯ ಅಲ್ಲವೇ ಪ್ರಶಾಂತ್​....? HOPE U UNDERSTAND

  ReplyDelete