ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!! ಎಂಬ ಶೀರ್ಷಿಕೆಯ ಲೇಖನ ಓದಿದ್ದೀರಿ. ಬನವಾಸಿ ಬಳಗ ಏನ್ ಗುರು ಬ್ಲಾಗ್ ನಲ್ಲಿ ಪ್ರಕಟಿಸಿದ ಲೇಖನ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಬಹುಮುಖ್ಯ ವಾಗ್ವಾದ ಇದು. ಆದರೆ ಆರ್ ಎಸ್ ಎಸ್ ನಿಲುವುಗಳನ್ನು ಸಮರ್ಥಿಸಿ ಬಂದ ಪ್ರತಿಕ್ರಿಯೆಗಳ ಠೊಳ್ಳುತನವನ್ನು ಬಹಿರಂಗಪಡಿಸುತ್ತಾ, ಮತ್ತಷ್ಟು ಪ್ರಶ್ನೆಗಳನ್ನು ಮುಂದಿಡುವ ಮತ್ತೊಂದು ಲೇಖನವನ್ನು ಏನ್ ಗುರು ಬ್ಲಾಗ್ `ಚಿಂತನಗಂಗಾ ಸಂಘದ ಸಿದ್ಧಾಂತವೇ?' ಎಂಬ ಶೀರ್ಷಿಕೆಯಡಿಯಲ್ಲಿ ಮಂಡಿಸಿದೆ. ಇದರ ಪೂರ್ಣಪಾಠ ಇಲ್ಲಿದೆ.
-ಸಂಪಾದಕೀಯ
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ಚಿಂತನಗಂಗಾದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, ‘ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ, ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ ‘ಶತ್ರುವಿನ ಸಂಚು ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ ಚಿಂತನಗಂಗಾವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.
ಚಿಂತನಗಂಗಾ ಸಂಘದ ಸಿದ್ಧಾಂತವೇ?
ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ಪ್ರವೇಶದಲ್ಲಿ ಹೇಳಿರುವಂತೆ ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು...
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ ಬಂಚ್ ಆಫ್ ಥಾಟ್ಸ್ ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!
ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!
ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ಯಾಕೆ ಮಾಡಿದಿರಿ? ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?
ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.
ಸಮಾಜದಲ್ಲಿ ಒಡಕಿನ ವಿಷ ತುಂಬುವ ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ ಎನ್ನುವುದನ್ನು. ಇಲ್ಲವೇ ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ ಇಲ್ಲಾ.. ಇಲ್ಲಾ.. ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.
ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...
ಪ್ರತಿಕ್ರಿಯೆಗಳ ಸಾರ!
ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ...
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.
ಇವೆಲ್ಲಾ ತೋರಿಸುವುದಾದರೂ ಏನನ್ನು? ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ ಎನ್ನುವ ನೇರವಂತಿಕೆಯಾಗಲೀ, ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.
ಬರಹದ ಆಶಯ
ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?
ಕೃಪೆ: ಏನ್ ಗುರು (ಬನವಾಸಿ ಬಳಗದ ಬ್ಲಾಗ್)
ರಾ.ಸ್ವ.ಸಂಘದ ಬಗ್ಗೆ ಬರೆದಿದ್ದೀರಿ.ಲೇಖನದಲ್ಲಿ ಉಲ್ಲೇಖಿಸಿರುವ ನಿಮ್ಮ ಉಳಿದ ಲೇಖನವನ್ನು ನಾನು ನೋಡಿಲ್ಲ. ಆದರೆ ಕಳೆದ ನಾಲ್ಕು ದಶಕಗಳಿಂದ ಸಂಘಕಾರ್ಯ ಮಾಡುತ್ತಿರುವವರಲ್ಲಿ ನಾನೂ ಒಬ್ಬನೆಂದು ಸಂಕೋಚವಿಲ್ಲದೆ ಹೇಳುವೆ. ಸಂಘದಲ್ಲಿ ಜಿಲ್ಲಾ ಕಾರ್ಯವಾಹ, ವಿಶ್ವಹಿಂದುಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮುಂತಾದ ಹೊಣೆಗಳನ್ನೆಲ್ಲಾ ಹೊತ್ತು ಕೆಲಸ ಮಾಡಿದವನು. ಆದರೆ ಕಳೆದ ಒಂದು ದಶಕದಿಂದ ಜವಾಬ್ದಾರಿ ಇಲ್ಲದಿದ್ದರೂ ಸಂಘ ಕಲಿಸಿರುವ ಸಾಮಾಜಿಕ ಕಳಕಳಿಯಿಂದ ಸಮಾಜಮುಖಿ ಕೆಲಸ ಮಾಡುತ್ತಿರುವವನು ನಾನು.
ReplyDeleteಶ್ರೀರಾಮಜನ್ಮ ಮುಕ್ತಿ ಆಂಧೋಳನದ ಸಮಯದಲ್ಲಿ ಮತ್ತು ನಂತರ ಪ್ರಖರ ಹಿಂದುತ್ವದ ಬಗ್ಗೆ ಪ್ರತಿಪಾದಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಹಿಂದು ಎಂದರೆ ಮುಸಲ್ಮಾನರ ಮತ್ತು ಕ್ರೈಸ್ತರ ಹೊರತಾದ ಮತೀಯ ಭಾವನೆಯಿಂದ ಕೆಲಸ ಮಾಡುವವರೂ ಇದ್ದಾರೆ. ಮುಸಲ್ಮಾನ ಮತ್ತು ಕ್ರೈಸ್ತರ ಸಂಘಟನೆಗಳು ಪ್ರಖರ ಮತೀಯವಾದದಲ್ಲಿ ಕೆಲಸ ಮಾಡುತ್ತಿರುವಾಗ ಪ್ರಖರ ಹಿಂದುತ್ವಕ್ಕಾಗಿ ಕೆಲಸ ಮಾಡುವುದರಲ್ಲಿ ನಾನು ತಪ್ಪು ಹುಡುಕಲಾರೆ. ಆದರೆ ಅದೆಲ್ಲಕ್ಕಿಂತ ಸಂಘದಲ್ಲಿರುವ ನಿಸ್ವಾರ್ಥ ಕಾರ್ಯಕರ್ತರ ಪಡೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಉತ್ತಮವಾದೀತು. ಯಾರೋ ಕೆಲವರು ಕ್ರೈಸ್ತ ಮುಸಲ್ಮಾನ ವಿರುದ್ಧ ಮಾತನಾಡುವವರೂ ಇರಬಹುದು. ಕ್ರೈಸ್ತ ಮತ್ತು ಇಸ್ಲಾಮ್ ಮತಗಳಿಗೆ ಮತಾಂತರ ಕ್ರಿಯೆ ಅವಿರತವಾಗಿ ನಡೆಯುವಾಗ ಅದರ ವಿರುದ್ಧ ಸ್ವಾಭಿಮಾನಿ ಹಿಂದು ಬಾಯಿ ಮುಚ್ಚಿ ಕುಳಿತಿರಲೂ ಸಾಧ್ಯವಿಲ್ಲ. ಆದರೆ ಅಷ್ಟಕ್ಕೇ ಸಂಘವನ್ನು ಸೀಮಿತಗೊಳಿಸಿದರೆ ಕುರುಡನೊಬ್ಬ ಆನೆಯ ಕಾಲನ್ನೋ ಕಿವಿಯನ್ನೋ ಮುಟ್ತಿ ಇದೇ ಆನೆ ಎಂದು ಭಾವಿಸಿದಂತಾಗುತ್ತದೆ.
ಅದಕ್ಕೆ ಹೊರತಾದ ಈ ದೇಶವನ್ನು ಹೃದಯಾಂತರಾಳದಿಂದ ಪ್ರೀತಿಸುವ ಸಹಸ್ರಾರು ಸ್ವಯಂ ಸೇವಕರನ್ನು ಸಂಘವು ತಯಾರು ಮಾಡಿದೆ. ಸಾವಿರಾರು ಜನ ಸಂಘದ ಸ್ವಯಂ ಸೇವಕರು ತಮ್ಮ ವಿದ್ಯಾಭ್ಯಾಸದ ನಂತರ [ಹಲವರು ಇಂಜಿನಿಯರುಗಳು, ಹಲವರು ವೈದ್ಯರು, ಹಲವರು ಅನ್ಯಾನ್ಯ ಪದವಿ ಪಡೆದಿರುವವರು] ದುಡಿಯಲು ಯಾವ ನೌಕರಿ ಆರಿಸದೆ ಮದುವೆ ಮುಂಜಿಯ ಬಗ್ಗೆ ಯೋಚಿಸದೆ ಸಂಘದ ಪ್ರಚಾರಕರಾಗಿ ಸೇರಿ ತಮ್ಮನ್ನು ಸಮಾಜಕಾರ್ಯಕ್ಕಾಗಿ ಸಮರ್ಪಿಸಿಕೊಂಡಿರುವ ಸಾವಿರಾರು ಉಧಾಹರಣೆಗಳಿವೆ. ಕರ್ನಾಟಕ ಸರ್ಕಾರದಲ್ಲಿ ಬ್ರಷ್ಟರಿಲ್ಲವೆಂದು ನಾನು ಹೇಳುವುದಿಲ್ಲ. ರಾಜಕಾರಣದಲ್ಲಿ ಶಿಷ್ಟರನ್ನು ಹುಡುಕುವುದು ಕಷ್ಟವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಎಲ್ಲಾ ಪಕ್ಷದಲ್ಲಿ ಬ್ರಷ್ಠ ರಿದ್ದಾರೆ ಹಾಗೆಯೇ ಭಾ.ಜ.ಪ ದಲ್ಲೂ ಇದ್ದಾರೆಂದು ನಾನು ಹೇಳಿ ಜಾರಿಕೊಳ್ಳುವುದಿಲ್ಲ. ಅದೊಂದು ಅವಮಾನಕರ ಸಂಗತಿಯೇ ಹೌದು. ಅದನ್ನು ಒದ್ದೋಡಿಸಲೆ ಬೇಕು. ಅದನ್ನು ಮಾಡುವ ಹೊಣೆ ಜನರಿಗೂ ಇದ್ದೇ ಇದೆ. ಅದು ಒತ್ತೊಟ್ಟಿಗಿರಲಿ.
ಆದರೆ ಸಿಪ್ಪೆಯನ್ನು ಹಿಡಿದುಕೊಂಡು ಹಣ್ನನ್ನು ಹಳಿಯುವ ವಿಧಾನ ಸರಿಯಿಲ್ಲ. ಚಿಂತನ ಗಂಗಾ ನಾನೂ ಓದಿದ್ದೇನೆ. ಇವತ್ತಿಗೆ ಅಲ್ಲಿನ ಹಲವು ಸಂಗತಿಗಳು ಮಾರ್ಪಾಡಾಗಬೇಕು. ಅದು ಮುಂದೆ ಆಗಲಾರದ ವಿಷಯವೇನಲ್ಲ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಮಾಜವು ಎಷ್ಟು ಶಿಥಿಲವಾಗುತ್ತಿದೆ, ನೈತಿಕ ಮೌಲ್ಯಗಳು ಮರೆಯಾಗುತ್ತಿವೆ, ಇಂದಿನ ಮಕ್ಕಳ ಭವಿಷ್ಯವೇನು, ಯುವಜನರ ಪಾಡೇನು? ಎಂಬ ಬಗ್ಗೆ ಆತಂಕವಾಗಬಾರದೇ? ಆದಿಕ್ಕಿನಲ್ಲಿ ಯುವಜನರಲ್ಲಿ ಚೈತನ್ಯವನ್ನು ತುಂಬುವ , ನಮ್ಮ ಸಂಸ್ಕೃತಿ ಪರಂಪರೆ೪ಗಳಬಗ್ಗೆ ಜಾಗೃತಿಗೊಳಿಸುವ ಕೆಲಸ ಎಷ್ಟು ನಡೆಯುತ್ತಿದೆ, ಎಂಬ ವಿಷಯ ಪ್ರಚಾರ ಪಡೆದಿಲ್ಲ. ಈಗ ಸಂಘಕಾರ್ಯವೆಂದರೆ ಕೇವಲ ಶಾಖೆ ಅಂತಲೋ, ಭಜರಂಗದಳದ ಅಥವಾ ರಾಜಕೀಯ ಕೆಲಸ ಅಂತಲೋ ಭಾವಿಸಬೇಡಿ. ಯುವಕರಲ್ಲಿ ತನ್ನ ಬಗ್ಗೆ ಸ್ವಾಭಿಮಾನ ತುಂಬುವ, ಈ ದೇಶವನ್ನು ಪ್ರೀತಿಸುವ, ದುರ್ಬಲರ ಬಗ್ಗೆ ಕನಿಕರಪಡುವ, ಸಹಾಯ ಹಸ್ತ ಚಾಚುವ ಹಲವು ಕಾರ್ಯಗಳನ್ನು ಸಂಘದಿಂದ ಪ್ರೇರಣೆ ಪಡೆದಿರುವ ಹಿರಿಯರು ಮಾಡುತ್ತಲೇ ಇದ್ದಾರೆ. ನನ್ನ ಬಗ್ಗೆಯೇ ಹೇಳಬೆಕೆಂದರೆ ದಿನದ ೨೪ ಗಂಟೆಯೂ ಸದ್ವಿಚಾರ ಚಿಂತನೆಯಲ್ಲಿಯೇ ಕ್ರಿಯಾಶೀಲವಾಗಿದ್ದುಕೊಂಡು ನನಗೆ ಸಮಾಧನ ಸಿಗುವ ಕ್ಷೇತ್ರದಲ್ಲಿ ನನ್ನ ಕೈಲಾದ ಮಟ್ಟಿಗೆ ನಾನು ಕೆಲಸ ಮಾಡುತ್ತಲೇ ಇದ್ದೇನೆ. ನನ್ನಂತವರು ಸಹಸ್ರಾರು ಜನರಿದ್ದಾರೆ. ನನಗೆ ನೂರಾರು ಮುಸ್ಲಿಮ್ ಸ್ನೇಹಿತರಿದ್ದಾರೆ.ನನ್ನ ನಾಲ್ಕು ದಶಕಳ ಸಂಘ ಜೀವನದಲ್ಲಿ ಒಮ್ಮೆಯೂ ನನಗೆ ಮುಸ್ಲಿಮ್ ಅಥವಾ ಕ್ರೈಸ್ತರ ವಿರುದ್ಧವಾಗಿರಬೇಕೆಂಬ ಭಾವನೆಯೇ ಮೂಡಲಿಲ್ಲ. ಅದಕ್ಕೆ ಕಾರಣ ನಮ್ಮ ಪವಿತ್ರವಾದ ವೇದ. ಇಡೀ ಮಾನವ ಕುಲವನ್ನು ಸೋದರರಂತೆ ಕಾಣಬೇಕೆಂದು ಪದೇ ಪದೇ ಹಲವು ಮಂತ್ರಗಳಲ್ಲಿ ಎಚ್ಚರಿಸುವ ವೇದವನ್ನು ನಮ್ಮ ಜನರು ಒಂದು ವರ್ಗಕ್ಕೆ ಸೀಮಿತ ಗೊಳಿಸಿಲ್ಲವೇ?
ಹಿಂದು ಸಮಾಜದಲ್ಲಿ ಬೆಳೆಯ ಜೊತೆಯಲ್ಲಿ ಕಳೆಯು ಹುಲುಸಾಗಿ ಬೆಳೆದಿದೆ ಎಂಬುದು ಸತ್ಯ ಸಂಗತಿ. ಆದರೆ ಕಳೆಯನ್ನು ತೆಗೆಯುವ ಕೆಲಸವಾದರೆ ಇಡೀ ವಿಶ್ವಕ್ಕೆ ಬೆಳೆ ಸಿಕ್ಕೇ ಸಿಗುತ್ತದೆ.
ಹಿಂದು ಕೇವಲ ಮತದ ಹೆಸರಲ್ಲ. ಅದು ಈ ರಾಷ್ಟ್ರದ, ಈ ಸಮಾಜದ, ಈ ಪರಂಪರೆಯ ಹೆಸರು. ಈ ದೃಷ್ಟಿಯಲ್ಲೇ ಸಂಘದ ಚಿಂತನೆ. ಯಾವುದೋ ಓಂದು ಘಟನೆಯನ್ನು ಉಲ್ಲೇಖಿಸಿ ಇಡೀ ಸಂಘವೆಂದರೆ ಇಷ್ಟೇ ಎಂದು ಹೇಳುವ ಕೆಲಸ ಇನ್ನಾದರೂ ನಿಲ್ಲಬೇಕು. ಭಾರತ ಅಷ್ಟೇ ಅಲ್ಲ ಇಡೀ ವಿಶ್ವದ ಉನ್ನತಿಗಾಗಿ, ವಿಶ್ವ ಬ್ರಾತೃತ್ವಕ್ಕಾಗಿ ಸಂಘದ ಕೆಲಸ ಬೇಕು. ಸಂಘಕಾರ್ಯದ ವ್ಯಾಪ್ತಿಯನ್ನು ಅರ್ಥಮಾಡಿ ಕೊಳ್ಲಲು ತಾಳ್ಮೆಯೂ ಬೇಕು. ಸಂಘಕಾರ್ಯದಲ್ಲೂ ಬೆಳೆಯೊಡನೆ ಕಳೆ ಕಂಡರೆ ಅದನ್ನು ಬುಡಸಮೇತ ಕಿತ್ತು ಹಾಕುವ ಕೆಲಸ ಕೂಡ ಆಗಬೇಕು. ಆದರೆ ಸಂಘವನ್ನು ಜರಿಯುತ್ತಾ ಹೋದರೆ ಅದು ಸಮಾಜಕ್ಕೆ ಹಿನ್ನಡೆ ಅಷ್ಟೆ.
ಸರ್ವೇ ಭವಂತು ಸುಖಿನ:|
ಸರ್ವೇ ಸಂತು ನಿರಾಮಯಾ: |
ಸರ್ವೇ ಭದ್ರಾಣಿ ಪಶ್ಯಂತು|
ಮಾ ಕಷ್ಚಿತ್ ದು:ಖ ಭಾಗ್ಭವೇತ್||
Agreed Sir,
Deleteಮಾನ್ಯ ಹರಿಹರಪುರ ಶ್ರೀಧರ್ ರವರೇ, RSS ನ ಕಾರ್ಯಕರ್ತರ ಈ ಲೇಕನದಲ್ಲಿ ಮಾತನಾಡುತ್ತಿಲ್ಲ ಮತ್ತು ಈ ಲೇಕನದಲ್ಲಿ ಮಾತನಾಡುತ್ತಿರುವುದು RSS ನಂಬಿರುವ ಸಿದ್ದಾಂತದ ಬಗ್ಗೆ. ತಾವು ಚಿಂತನಾಗಂಗಾ ಮಾರ್ಪಾಡಾಗಬೇಕೆಂದು ಹೇಳಿದ್ದೀರಿ ಓಳ್ಳೆಯದೇ. ಆದರೆ ಬದಲಾಗಬೇಕಾದ ಅಂಶಗಳಲ್ಲಿ ಹಿಂದಿಯನ್ನ ರಾಶ್ಟ್ರಬಾಶೆಯನ್ನಗಿಸಬೇಕು, ಬಾರತ ಒಕ್ಕೂಟ ರಾಶ್ಟ್ರವಾಗಬಾರದು ಸ್ವಯಮಾದಿಕಾರ ಉಳ್ಳ ರಾಜ್ಯಗಳು ಇರಬಾರದು, ಹಿಂದು ದರ್ಮದವರನ್ನು ಬಿಟ್ಟು ಬೇರೆ ದರ್ಮದ ಜನರಿಗೆ ದೇಶಾಬಿಮಾನವಿಲ್ಲ, ಕೆಳವರ್ಗದ ಜನರಿಗೆ ಮೀಸಲಾತಿ ಸಿಗಬಾರದು ಎನ್ನುವಂತಿರುವ ಅಂಶಗಳು ಬದಲಾಗಬೇಕು ಎನ್ನುವುದನ್ನ ಒಪ್ಪಿವಿರೇ? ಇಲ್ಲವೆಂದಲ್ಲಿ ಈ ಅಂಶಗಳು ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಹೇಗೆ ಒಳ್ಳೆಯದು ಮಾಡುತ್ತವೆಂದು ವಿವರಿಸಿ. ಇಲ್ಲವೇ ಚಿಂತನಾಗಂಗಾದ ಮಾತಿಗೂ ಸಂಘದ ಸಿದ್ದಾಂತಕ್ಕೂ ಯಾವುದೇ ಸಂಬಂದವಿಲ್ಲ ಎನ್ನುವುದನ್ನ ಆದಾರದ ಸಮೇತ ತೋರಿಸಿ.
ReplyDeleteಹಿಂದಿ ನಮ್ಮ ರಾಷ್ಟ್ರ ಭಾಷೆ ಆಗಬೇಕು. ಆಗ ಇಂಗ್ಲಿಶ್ ಭಾಷೆ ಉಪಯೋಗ ಕಡಿಮೆ ಮಾಡಬಹುದು. ಸ್ವಯಂ ಅಧಿಕಾರ ಉಳ್ಳ ರಾಜ್ಯಗಳು ಇರಬಾರದು. ಎಂದಿಗೂ ನಾವೆಲ್ಲರೂ ಭಾರತ ಮಾತೆಯ ಮಕ್ಕಳಾದ ಕನ್ನಡಿಗರು. ನೀವೇನು ಭಾರತವನ್ನು ಕರ್ನಾಟಕ ತಮಿಳುನಾಡು ಎಂದು ವಿಭಜಿಸಲು ಹೊರಟಿರುವಿರೇನು ? ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮದವರಿಗೆ ದೇಶಾಭಿಮಾನ ಇಲ್ಲ ಎಂದು rss ಯಾವತ್ತು ಹೇಳಿಲ್ಲ. ಸುಮ್ನೆ ಟೆನ್ಶನ್ ಮಾಡ್ಕೋಬೇಡಿ. ಕೆಳವರ್ಗಕ್ಕೂ ಮೆಲ್ವರ್ಗಕ್ಕೂ ಯಾವುದೇ ವರ್ಗಕ್ಕೂ ಮೀಸಲಾತಿ ಇರಬಾರದು. ಗ್ರಾಮೀಣ ಮೀಸಲಾತಿ ನಗರ ಈ ತರ ಯಾವುದೇ ಮೀಸಲಾತಿ ಇರಬಾರದು. ಕೇವಲ "ಪ್ರತಿಭೆಗೆ" ಬೆಲೆ ಇರಬೇಕು.
Deleteಈ ಹಿಂದಿನ ಬ್ಲಾಗಿನಲ್ಲಿ ಚಿಂತನಗಂಗಾದಲ್ಲಿ ಹೇಳಿರುವ ವಿಷಯಗಳು ಹೇಗೆ ಕನ್ನಡ, ಕನ್ನಡಿಗ, ಕರ್ನಾಟಕ್ಕೆ ಮುಳುವಾಗುತ್ತದೆ ಅನ್ನುವುದನ್ನು ಸವಿಸ್ತಾರವಾಗಿ ಹೇಳಲಾಗಿತ್ತು.ಬಹಳಷ್ಟು ಆರ್.ಎಸ್.ಎಸ್ ಬೆಂಬಲಿಗರು ಕಾರ್ಯಕರ್ತರು ಆರ್.ಎಸ್.ಎಸ್ ಸಿದ್ಧಾಂತಕ್ಕೂ ಚಿಂತನಗಂಗಾದಲ್ಲಿ ಹೇಳಿರುವ ವಿಷಯಕ್ಕೂ ಸಂಬಂಧವೇ ಇಲ್ಲ ಅನ್ನುವ ಹಾಗೆ ಕೆಲವು ಮಾತುಗಳು ಬಂತು. ಇನ್ನು ಕೆಲವರು ಬ್ಲಾಗಿನಲ್ಲಿ ಹೇಳಿರುವ ವಿಷಯವನ್ನ ಪ್ರಸ್ತಾಪಿಸದೆಯೇ ತಮಗೆ ಹೇಳಿಕೊಟ್ಟಿರುವ, ತಲೆಯಲ್ಲಿ ತುಂಬಿರುವ ಗಿಣಿಪಾಠವನ್ನು ಸಕ್ಕತ್ ಆಗಿ ಒಪ್ಪಿಸಿದರು.
ReplyDeleteಸಮಾಜದಲ್ಲಿ ಸಂಘ ಮಡುತ್ತಿದ್ದೇವೆ ಎಂದು ಹೇಳಿರುವ ಸಮಾಜ ಸೇವೆಯ ಕೆಲಸಗಳು ನಿಜಕ್ಕು ನಡೆದಿದ್ದರೆ, ಅದರ ಬಗ್ಗೆ ಗೌರವ ಖಂಡಿತ ಇದೆ. ಅದೇ ರೀತಿ ಸಂಘ ಹೇಗೆ ತಮ್ಮ ರಾಜಕೀಯ ಮುಖವಾದ ಬಿಜೆಪಿಯ ಮೂಲಕ ಕನ್ನಡ ಮನಸ್ಸುಗಳಿಗೆ, ಕನ್ನಡಿಗರಿಗೆ ಕೊಡಲಿ ಪೆಟ್ಟನ್ನು ಕೊಟ್ಟರು ಅನ್ನುವುದನ್ನು ಈ ಬ್ಲಾಗು ಚೆನ್ನಾಗಿ ಹೇಳುತ್ತದೆ.
ಈ ಎರಡು ಬ್ಲಾಗುಗಳನ್ನು ಎಲ್ಲ ಸಂಘದ ಕಾರ್ಯಕರ್ತರು ಬಿಚ್ಚು ಮನಸ್ಸಿನಿಂದ ಓದಿಕೊಂಡು ತಮಗೆ ಕನ್ನಡ-ಕನ್ನಡಿಗ-ಕರ್ನಾಟಕ ಏಳಿಗೆ ಮುಖ್ಯವಾ, ಅಲ್ಲವಾ ಅನ್ನುವುದನ್ನು ಯೋಚಿಸಲು. ಬಹುಷ ಅದನ್ನ ಬಹಿರಂಗವಾಗಿ ಹೇಳುವ ಮನಸ್ಸು, ಧೈರ್ಯ ಇಲ್ಲವಾದರು ಪರವಾಗಿಲ್ಲ. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡು ಯಾವುದು ವಾಸ್ತವ, ಯಾವುದು ಕೃತಕ ಅನ್ನುವ ನಿಲುವಿಗೆ ಬರುವಂತಾಗಲೀ.
ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವ್ಯವಸ್ಥೆಯ ಮೂಲೋತ್ಪಾಟನೆ ಮಾಡಲು ಕರೆ ನೀಡಿದ್ದರು. ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ್ದರು. ಆದರೆ ಇಂದು ಸಂಘ ಪರಿವಾರದವರು ಪುರೋಹಿತಶಾಹಿ ವ್ಯವಸ್ಥೆಯ ಸಬಲೀಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಮುಂದುವರಿಯುತ್ತಿದ್ದಾರೆ. ಮೂಢ ನಂಬಿಕೆಗಳನ್ನು ಬಿತ್ತಿ ಬೆಳೆಸುತ್ತಿರುವ ವ್ಯವಸ್ಥೆಯ ವಿರುದ್ಧ ಸಂಘ ಪರಿವಾರ ಹೋರಾಟ ನಡೆಸಿದ್ದು ಕಂಡು ಬರುತ್ತಿಲ್ಲ, ಬದಲಿಗೆ ಹಲವು ಮೂಢ ನಂಬಿಕೆಗಳ ಪರವಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹೋರಾಡುತ್ತಿರುವುದು ಕಂಡು ಬರುತ್ತದೆ. ಸಂಘ ಪರಿವಾರವು ಕೆಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ, ಈ ಹಿಂದೆಯೂ ಮಾಡಿದೆ ಆದರೆ ಅದರ ಜೊತೆಯೇ ಕೆಲವು ರಾಷ್ಟ್ರದ ಹಿತಕ್ಕೆ ಮಾರಕವಾದ ಕೆಲಸಗಳನ್ನೂ ಮಾಡುತ್ತಿದೆ. ಕೇಂದ್ರದಲ್ಲಿ ಸಂಘ ಪರಿವಾರದ ರಾಜಕೀಯ ಅಂಗವಾದ ಬಿಜೆಪಿ ಸರ್ಕಾರವಿರುವಾಗ ಜ್ಯೋತಿಷ್ಯದಂಥ ಪರಮ ಮೂಢ ನಂಬಿಕೆಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಒಂದು ವಿಷಯವಾಗಿ ಕಲಿಸುವ ಪ್ರಯತ್ನ ಮಾಡಿತ್ತು. ಇಂದು ಕೂಡ ಬಿಜೆಪಿ ಮಂತ್ರಿಗಳು, ಮುಖ್ಯ ಮಂತ್ರಿಗಳು ಅಧಿಕಾರ ವಹಿಸಿಕೊಳ್ಳುವಾಗ ಪೂಜೆ ಪುನಸ್ಕಾರದಂಥ ಪುರೋಹಿತಶಾಹಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಇದು ವಾಸ್ತವವಾಗಿ ಸ್ವಾಮಿ ವಿವೇಕಾನಂದರ ಕರೆಗೆ ವಿರುದ್ಧವಾದುದಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಘ ಅಸ್ತಿತ್ವದಲ್ಲಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಗಾಂಧೀಜಿಯವರು ಸ್ವಾಮಿ ವಿವೇಕಾನಂದರ ಕರೆಯಂತೆ ಪುರೋಹಿತಶಾಹಿ ವ್ಯವಸ್ಥೆಗೆ ವಿರುದ್ಧವಾಗಿ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಗಾಂಧೀಜಿವವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದು ಸಂಘದ ಪ್ರೇರಣೆಯಿಂದ ಎಂದು ತಿಳಿದುಬರುತ್ತದೆ. ಏಕೆಂದರೆ ಸುಧಾರಣೆಗಳನ್ನು ಜಾರಿಗೆ ತರಲು ಹೋರಾಡುತ್ತಿದ್ದ ಗಾಂಧೀಜಿ ಹಿಂದೂ ಪುರೋಹಿತಶಾಹಿಗೆ ಒಂದು ದೊಡ್ಡ ಬೆದರಿಕೆಯಾಗಿದ್ದರು. ಸಂಘವು ಅನ್ಯ ಧರ್ಮಗಳ ಜನರು ಹಿಂದೂಗಳ ಹಿತಕ್ಕೆ ಮಾರಕ ಎಂದು ಬಿಂಬಿಸಿ ಹಿಂದೂಗಳ ಮತಬ್ಯಾಂಕ್ ರೂಪಿಸಿ ಅಧಿಕಾರಕ್ಕೆ ಬರುವ ಹುನ್ನಾರ ಲಾಗಾಯ್ತಿನಿಂದಲೂ ಮಾಡುತ್ತ ಬಂದಿದೆ, ಆದರೆ ಹಿಂದೂ ಧರ್ಮದಲ್ಲಿರುವ ತಾರತಮ್ಯ ವ್ಯವಸ್ಥೆಯ ನಿವಾರಣೆಗೆ ಸಮರ್ಪಕ ಕಾರ್ಯಕ್ರಮ ಕೈಗೊಂಡಿಲ್ಲ. ಅಂಥ ಕೆಲಸದಲ್ಲಿ ಅದಕ್ಕೆ ಆಸಕ್ತಿಯೂ ಇರುವಂತೆ ಕಾಣುವುದಿಲ್ಲ- ಕೃಷ್ಣಪ್ಪ
ReplyDeleteಸಾಮಾಜಿಕ ತಾಣಗಳಿಗೆ ಸಮಾಜದ ಸ್ವಾಸ್ಥ್ಯ ಮೊದಲ ಪ್ರಾಶಸ್ತ್ಯ ವಲ್ಲವೇ? ಭಾಷಾಭಿಮಾನದ ಬಗ್ಗೆ ಚರ್ಚಿಸೋಣ. ಆದರೆ ಆರ್.ಎಸ್.ಎಸ್. ಬಗ್ಗೆ ಚರ್ಚೆ ಬಂದಾಗ ಯಾವುದಕ್ಕೆ ಸಂಘ ಹೆಚ್ಚು ಒತ್ತು ಕೊಟ್ಟಿದೆ, ಎಂಬುದರ ಪ್ರಸ್ತಾಪವಾಗಬಾರದೆ? ನಿಜಕ್ಕೂ ಮೊದಲು ನಾವೆಲ್ಲಾ ನಮ್ಮ ಎದೆಮುಟ್ಟಿಕೊಂಡು ಹೇಳೋಣ. ’ಇವತ್ತಿನ ಜ್ವಲಂತ ಸಮಸ್ಯೆ ಯಾವುದು?" ಬಡವರ ಶೋಷಣೆ, ಅಸ್ಪೃಶ್ಯತಾ ಆಚರಣೆ, ಬ್ರಷ್ಟಾಚಾರ, ಇವೆಲ್ಲವೂ ದೇಶವನ್ನು ತಿನ್ನುತ್ತಿವೆ. ಹಲವು ಮನೆಯಲ್ಲಿ ಅಜ್ಜ-ಅಜ್ಜಿ ಯರಿಗೆ ಉಳಿಗಾಲವಿಲ್ಲ. ಪತಿ ಪತ್ನಿ ಅವರ ಒಂದು ಮಗು. ಇಷ್ಟಕ್ಕೆ ಅವರ ಸಂಸಾರ ಮುಗಿಯಿತು. ಅಜ್ಜ-ಅಜ್ಜಿಗೆ ವೃದ್ಧಾಶ್ರಮ. ತನ್ನ ಸೀಮಿತ ಸಂಸಾರ ಬಿಟ್ಟರೆ ತನ್ನ ಅಣ್ಣ-ತಮ್ಮ ,ಅಕ್ಕ-ತಂಗಿಯರ ಗೊಡವೆಯೂ ಬೇಡ. ಪರಿಸ್ಥಿತಿ ಹೀಗಿರುವಾಗ ಇನ್ಯಾವ ಸಮಸ್ಯೆ ಬಗ್ಗೆ ಜನ ತಲೆ ಕೆಡಸಿಕೊಂಡಾರು? ಇವೆಲ್ಲಾ ಜ್ವಲಂತ ಸಮಸ್ಯೆ ಎನಿಸುತ್ತಿಲ್ಲವೇ? ಇಂತಾ ಕೆಟ್ಟ ಪರಿಸ್ಥಿತಿಯನ್ನು ಹೋಗಲಾಡಿಸಲು ಸಂಘವು ಮಾಡುತ್ತಿರುವ ಜಾಗೃತಿ ಕೆಲಸಕ್ಕೆ ಬೆಲೆ ಇಲ್ಲವೇ? ನಾಳಿನ ನಿಮ್ಮ ಮಕ್ಕಳ ಭವಿಷ್ಯ ಜೀವನವನ್ನು ಒಮ್ಮೆ ಚಿಂತಿಸಿ ನೋಡಿ. ಆಗ ನನ್ನ ಆತಂಕಕ್ಕೆ ಕಾರಣ ಸಿಕ್ಕೀತು. ನನ್ನ ದೃಷ್ಟಿಯಲ್ಲಿ ಇವೆಲ್ಲದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ಸಮಾಜ ಸೇವೆಯೇ ಆಗಿದೆ. ನಮ್ಮ ಯುವಕರಿಗೆ ದೇಶ ಭಕ್ತಿಯ ಜಾಗೃತಿ ಕೆಲಸವಾಗಬಾರದೇ?
ReplyDeleteಮತ್ತೊಂದು ರಾಜ್ಯದ ವಿಚಾರವಿರಲಿ, ತಮ್ಮ ಊರಿನಲ್ಲೇ ತಮ್ಮ ಕೇರಿಯಲ್ಲೇ ಬೆಂಕಿ ಬಿದ್ದಿದ್ದರೂ ನನಗೇನೂ ಸಂಬಂಧವಿಲ್ಲವೆಂಬಂತೆ ಟಿ.ವಿ. ಮುಂದೆ ಕುಳಿತು ಮೋಜು ಮಾಡುವ ಯುವಕರ ಸಂಖ್ಯೆ ಬಗ್ಗೆ ಅರಿವಿದೆಯೇ?
ನಾಳಿನ ಭವಿಷ್ಯ ಅಷ್ಟು ಸುಲಭವಾಗಿಲ್ಲ ಎಂಬ ಅರಿವು ನಮಗಿರಬೇಕು.
ಈಗ ಭಾಷೆಯಬಗ್ಗೆ ಮಾತನಾಡೋಣ. ತಮಿಳರಿಗೆ ಇರುವಷ್ಟು ಭಾಷಾಂಧಾಭಿಮಾನ ನಮಗಿಲ್ಲವೆಂಬ ಸಮಾಧಾನ ನನ್ನದು.ಹಿಂದಿಯ ಬಗ್ಗೆ ಮಾತನಾಡಿದರೆ ದೇಶ ಅಲ್ಲೋಲ ಕಲ್ಲೋಲಾಅಗಿಬಿಡುತ್ತದೆಯೇ? ತಪ್ಪು ತಪ್ಪಾಗಿ ಇಂಗ್ಲೀಶ್ ಮಾತನಾಡಬಹುದು, ಇಂಗ್ಲೀಶ್ ಸಂಸ್ಕೃತಿಯಲ್ಲಿ ಬದುಕಬಹುದು, ಆದರೆ ಹಿಂದಿ ಅಂದರೆ ಸಿಟ್ಟೇಕೆ? ಕನ್ನಡವನ್ನು ಪ್ರೀತಿಸೋಣ, ಆದರೆ ರಾಷ್ಟ್ರ ಭಾಷೆಯಾಗಿ ಕನ್ನಡವನ್ನು ತರಲು ಸಾಧ್ಯವೇ? ಆ ಜಾಗದಲ್ಲಿ ಹಿಂದಿ ಕಲಿತರೆ ತಪ್ಪೇ? ಇಂಗ್ಲೀಶನ್ನು ಕೂಡ ದ್ವೇಶಿಸಬೇಕೆಂದು ನಾನು ಹೇಳುವುದಿಲ್ಲ. ಈಗ ಇಡೀ ವಿಶ್ವ ಒಂದು ಪುಟ್ತ ಗ್ರಾಮದಂತಿದೆ. ಅಂತರಾಷ್ಟ್ರೀಯ ಭಾಷೆಯಾಗಿ ಇಂಗ್ಲೀಶನ್ನೂ ಕೂಡ ಕಲಿಯಲೇ ಬೇಕು. ಆದರೆ ಪ್ರಾಥಮಿಕ ಹಂತದಲ್ಲಿ ಕನ್ನಡ, ನಂತರ ಪ್ರೌಢ ಶಿಕ್ಷಣದಲ್ಲಿ ಹಿಂದಿ ನಂತರ ಮುಂದೆ ಇಂಗ್ಲೀಶ್ ಕೂಡ ಅನಿವಾರ್ಯವೇ, ಆಗಿದೆ. ಭಾಷೆಯದು ಒಂದು ಸಮಸ್ಯೆ ಆಗಲೇ ಬಾರದು. ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸೂಕ್ತ ವಾಗಿದ್ದರೆ ಆಯ್ತು. ಆದರೆ ಸಂಸ್ಕೃತ ಕಲಿತರೆ ಇನ್ನೂ ಹೆಚ್ಚು ಲಾಭವಿದೆ.
ಇನ್ನು ಮುಸಲ್ಮಾನರು ಮತ್ತು ಕ್ರೈಸ್ತರು ಈ ದೇಶದ ಮಕ್ಕಳಲ್ಲ ಎಂದು ಸಂಘ ಎಂದೂ ಹೇಳಿಲ್ಲ. ನಮ್ಮ ದೇಶದಲ್ಲಿ ಎಲ್ಲರೂ ಸಮಾನರೇ. ಎಲ್ಲರೂ ಸೇರಿ ಭಾರತವನ್ನು ಪ್ರೀತಿಸಬೇಕು. ಭಾರತದ ಗೌರವ ವಿಶ್ವದಲ್ಲಿ ಇನ್ನೂ ಹೆಚ್ಚು ಎತ್ತರಕ್ಕೆ ಏರಬೇಕಾದರೆ ಹಿಂದು ಮುಸ್ಲಿಮ್ ಅಥವಾ ಕ್ರೈಸ್ತರೆನ್ನದೆ ಎಲ್ಲರೂ ಭಾರತದ ಪುರಾತನ ಸಂಸ್ಕೃತಿಯನ್ನು ಮೇಲೆತ್ತಬೇಕು. ಹೊರ ದೇಶಗಳಲ್ಲಿ ಶಾಲೆಗಳಲ್ಲಿ ವೇದಮಂತ್ರ ಪಠಿಸುವ, ಸಂಸ್ಕೃತ ಮಾತನಾಡುವ ಹಿಂದುಧರ್ಮವನ್ನು ಅಧ್ಯಯನ ಮಾಡುತ್ತಿರುವ ಉಧಾಹರಣೆಗಳು ಸಾಕಷ್ಟಿವೆ. ಯೂ ಟ್ಯೂಬ್ ನಲ್ಲಿ ಇಂತಹ ಸಾವಿರಾರು ವೀಡಿಯೋ ಗಳನ್ನು ನೋಡ ಬಹುದು.
ಚಿಂತನ ಗಂಗಾ ಗ್ರಂಥದಲ್ಲಿ ಈಗ್ಗೆ ಐದಾರು ದಶಕಗಳಲ್ಲಿ ಬರೆದಿರುವ ಕೆಲವು ಸಂಗತಿಗಳು ಇಂದಿನ ದಿನಕ್ಕೆ ಮಾನ್ಯವಾಗದಿರಬಹುದು. ಅಂತಹ ಅಂಶಗಳನ್ನು ಪುಟ ಸಂಖ್ಯೆ ಸಮೆತ ಪಟ್ಟಿ ಮಾಡಿ ಇಲ್ಲಿ ಬರೆಯಿರಿ. ಅವುಗಳು ತಪ್ಪಾಗಿದ್ದರೆ ತಿದ್ದಿ ಒಂದು ಪುಸ್ತಕ ಬರೆಯಲು ಸಂಘವನ್ನು ಕೋರಿದರಾಯ್ತು. ಯಾವುದೂ ನಿಂತ ನೀರಾಗಬಾರದು ಹರಿವ ಗಂಗೆಯಾಗಬೇಕು.
ಒಂದು ವೇಳೆ ಯಾವುದೋ ಕಾರಣಕ್ಕೆ ಆರ್.ಎಸ್.ಎಸ್. ಬೇಡ ಎನ್ನುವುದಾದರೆ, ವಿಶ್ವದಲ್ಲಿ ಅರ್.ಎಸ್.ಎಸ್.ಗಿಂತಲೂ ಹಿರಿದಾದ ಇನ್ನೂ ಉತ್ತಮವಾದ ಸಂಘಟನೆಯ ಹೆಸರು ಹೇಳಿ, ಯಾವ ಕಾರಣದಿಂದ ಅದು ಉತ್ತಮವೆಂದು ಹೇಳಿ.ಆ ಬಗ್ಗೆಯೂ ಚರ್ಚೆ ನಡೆಯಲಿ
ಬಿ.ಜೆ.ಪಿ ಪಕ್ಷದ ತಾಯಿಯಾಗಿರುವ ಸಂಘವು ಹಿಂದೆ ನಿಂತುಕೊಂಡು ಮಾಡಿಸುತ್ತಿರುವ ಕೆಲಸಗಳು ನಿಜಕ್ಕೂ ನಮ್ಮ ವ್ಯವಸ್ಥೆಯ ಸ್ವಾಸ್ಥ್ಯವನ್ನೇ ಹಾಳು ಮಾಡಲು ಹೊರಟಂತಿದೆ. ರಾಜಕೀಯಕ್ಕೂ ಹಾಗೂ ನಮಗೂ ಸಂಬಂಧವೇ ಇಲ್ಲಾ ಅಂತ ಹೇಳುತ್ತಾ ತನಗೆ ಬೇಕಾಗಿರುವ ಕೆಲಸಗಳನ್ನು ಹಿಂಬಾಗಿಲಿನ ಮೂಲಕ ಮಾಡಿಸುತ್ತಾ ಹೋಗುತ್ತಿದೆ. ಇದಕ್ಕೆ ಉದಾಹರಣೆಯಾಗಿ
ReplyDelete೧. ಕಡಿಮೆ ಮಕ್ಕಳು ಇದ್ದಾರೆ ಅನ್ನೋ ನೆಪದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ. ಅವೇ ಜಾಗಗಳಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡುತ್ತಿದೆ. ಈ ಖಾಸಗಿ ಶಾಲೆಗಳು ಸಂಘದ ಸಿದ್ಧಾಂತವನ್ನು ಪ್ರತಿಪಾದನೆ ಮಾಡಲು ಹೊರಟಿರುವ ಸುದ್ದಿ
೨. ವಿವಿಧ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕ್ಟುತ ವಿಭಾಗದಲ್ಲಿ ಓದಲು ವಿಧ್ಯಾರ್ಥಿಗಳಿಲ್ಲದಾಗ, ವಿರೋಧದ ನಡುವೆ ಸಂಸ್ಕ್ಟುತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಸುತ್ತದೆ
೩. ಶಾಲೆಗಳಲ್ಲಿ ಕೇವಲ ಭಗವದ್ ಗೀತೆಯನ್ನು ಕಲಿಸಲು ಹೊರಟಿರುವುದು ಯಾಕೆ. ಮೊದಲನೆಯದಾಗಿ ಧರ್ಮಗಳನ್ನು ಆಚರಣೆಗೆ ತರಬೇಕಾಗಿರುವುದು ನಮ್ಮ ಮನೆಗಳಲ್ಲಿ ಹಾಗು ಅದನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಬೇಕು. ಅದನ್ನ ಬಿಟ್ಟು ಏನು ಅರಿಯದ ಮಕ್ಕಳಲ್ಲಿ ಒಡಕು ಉಂಟು ಮಾಡುವುದು ಪಾಪವೇ ಸರಿ. ಮಕ್ಕಳಿಗೆ ಕೊಡಬೇಕಾಗಿರುವುದು ಬದುಕಲು ಬೇಕಾಗಿರುವ ಕೌಶಲ್ಯ ಹಾಗೂ ಶಿಕ್ಷಣವೇ ಹೊರತು ಧರ್ಮಾಧಾರಿತ ಶಿಕ್ಷಣವಲ್ಲ.
೪. ಅಧಿಕಾರಕ್ಕೆ ಬರುವಾಗ ರೆಡ್ಡಿ ಹಾಗೂ ಇತರರನ್ನು ಉಪಯೋಗಿಸಿಕೊಂಡ ಸಂಘವು ನಂತರ ಹಗರಣ ಬಯಲಾದಾಗ ಯಡಿಯೂರಪ್ಪ ಹಾಗೂ ರೆಡ್ಡಿಗಳ ಮೇಲೆ ಹಾಕಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಮಾತನ್ನ ಜಗತ್ತಿಗೆ ಹೇಳೂತ್ತೆ. ಹೊಣೆಗಾರಿಕೆ ಇಲ್ಲದೇ ಅಧಿಕಾರ ಚಲಾಯಿಸುತ್ತಿದೆ. ಆಪತ್ತು ಬಂದಾಗ ಸುಲಭವಾಗಿ ನುಣುಚಿಕೊಳ್ಳುತ್ತದೆ.
೫. ಕನ್ನಡಿಗರಿಗೆ ಬೇಡವಾಗಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಎಲ್ಲರ ವಿರೋಧದ ನಡುವೆಯೂ ಸ್ಥಾಪಿಸಲಾಯಿತು.
೬. ಮತೀಯ ಗಲಭೆಗಳಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದಿರುವ ಸರ್ಕಾರ, ಅದೇ ನಾಡು ನುಡಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಿರುವ ಕನ್ನಡಪರ ಸಂಘಟನೆಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಅವುಗಳನ್ನು ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಿದೆ.
೭. ಇನ್ನು ಮುಖ್ಯವಾಗಿ ಇತ್ತೀಚಿಗೆ ಶಾಲೆಯಲ್ಲಿ ತರಲಾಗುತ್ತಿರುವ ಪಠ್ಯವನ್ನು ಕೇಸರಿಕರಣಗೊಳಿಸಲಾಗುತ್ತಿದೆ. ಬಾಲ್ಯದಿಂದಲೇ ಮಕ್ಕಳ ಮನಸಲ್ಲಿ ದ್ವೇಷದ ಬೀಜವನ್ನು ಬಿತ್ತಿ, ಸಮಾಜದ ಸಾಮರಸ್ಯವನ್ನು ಕೆಡಿಸುವುದಕ್ಕೆ ಹೊರಟಿದೆ. ಇದಕ್ಕೆ ಉದಾಹರಣೆಯಾಗಿ ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಈ ಲೇಖನವನ್ನ ನೋಡಿ. http://www.prajavani.net/web/include/story.php?news=3374§ion=30&menuid=14
ಹರಿಹರಪುರ ಶ್ರೀಧರ್ ಅವರ ಪ್ರೌಢ ಅಭಿಪ್ರಾಯಕ್ಕೆ ಪ್ರತಿಯಾಗಿ ಉಳಿದವರ ಪೂರ್ವಗ್ರಹಪೀಡಿತ ಬಾಲಿಶ ಅಭಿಪ್ರಾಯಗಳನ್ನು ಓದುವಾಗ ಪ್ರಗತಿಪರರೆಂಬ ಮುಸುಕಿನೊಳಗೆ ಹುದುಗಿರುವ ಅವೈಚಾರಿಕ ಮನುಷ್ಯರ ಬಗ್ಗೆ ಅನುಕಂಪ ಜೊತೆಗೆ ದೇಶದ ಭವಿಷ್ಯದ ಬಗ್ಗೆ ಗಾಬರಿ ಉಂಟಾಗುತ್ತದೆ.
ReplyDeleteRSS ಬಗೆಗಿನ ಸಂಪಾದಕೀಯದ ಲೇಖನ ಪ್ರಜಾವಾಣಿಯ ವಿವೇಕಾನಂದ ಲೇಖನದ ಮುಂದುವರಿದ ಬಾಗದಂತಿದೆ. ಒಂದು ಪರಕೀಯ ಸಿದ್ದಾಂತ್ತಕ್ಕೆ (ಇಲ್ಲಿ ಮಾರ್ಕ್ಸ್ ವಾದ) ಬದ್ದರಾಗಿ ಹಾಗು ನಿಷ್ಟರಾಗಿ ಪೂರ್ವಗ್ರಹತೆ ಇಂದ ಬರೆದಿರುವ ಲೇಖನ ಎಂದು ಸೂಕ್ಷ್ಮ ಮನಸಿನ ಯಾರಿಗೂ ತಿಳಿಯದ ವಿಷಯವೇನಲ್ಲ. Marx ವಾದಿಗಳಿಗೆ ಹಿಂದೂ ಸಂಕೇತಗಳನ್ನ ಹಳಿಯುವುದು, ಹಿಂದೂ ಸಂಘಟನೆಗಳನ್ನು ತಿರಸ್ಕಾರದಿಂದ ನೋಡುವುದು ಒಂದು ಚಾಳಿಯಾಗಿದೇ. ಇದು ಅವರ ತಂತ್ರ (tactic) ಕೂಡ ಹೌದು. ತಮಾಷೆಯ ಸಂಗತಿ ಏನೆಂದರೆ, ಪ್ರಜಾಪ್ರಭುತ್ವ ಕೊಡಮಾಡುವ ಎಲ್ಲ ಸ್ವಾತಂತ್ರಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುವ ಇವರು, ಅಧಿಕಾರಕ್ಕೆ ಬಂದಕೂಡಲೇ ಸ್ವತಂತ್ರ ಹರಣ ಮಾಡಿಬಿಡುತ್ತಾರೆ. ಇದಕ್ಕೆ ಎಲ್ಲ ಕಾಮ್ಮುನಿಸ್ಟ್ ರಾಷ್ಟ್ರಗಳೇ ಉದಾಹರಣೆ. RSS ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ಇದೆ ಮತ್ತು ಅದರ ಎಲ್ಲ ಕಾರ್ಯಕ್ರಮಗಳು ಮತ್ತು ಪ್ರಕಟಣೆಗಳು ಕನ್ನಡದಲ್ಲೇ ಇವೆ ಎಂಬುದನ್ನು Marxist ಪತ್ರಕರ್ತರ ಜಾಣ ಕುರುಡು ಮರೆಮಾಚುತ್ತೆ.
Deleteಆರೆಸ್ಸೆಸ್ ಬಗ್ಗೆ ಬರೆದಿರುವ ಏನ್ ಗುರುವಿನ ಲೇಖನದಲ್ಲಿ ಆರೆಸ್ಸೆಸ್ ಅನ್ನು ಬಯ್ದ ಯಾವ ಅಂಶ ಕಂಡಿರಿ? ಆರೆಸ್ಸಿಸ್ಸಿನ ಚಿಂತನಗಂಗಾ ಹೊತ್ತಗೆಯ ಕೆಲ ಅನಿಸಿಕೆಗಳು ತೀರಾ ಸರಿಯಿಲ್ಲದಂತೆ ಕಂಡಾಗ "ಇಂಥಾ ನಿಲುವು ನಾಡಿಗೆ ಮಾರಕ" ಎಂದು ಎಚ್ಚರಿಸುವ ಬರಹಗಳು ಅವು. ಆರೆಸ್ಸೆಸ್ ಅನ್ನು ಪ್ರಶ್ನೆ ಮಾಡಿದವರೆಲ್ಲಾ ಎಡಪಂಥೀಯರು ಎನ್ನುವ ನಿಮ್ಮ ಅನಿಸಿಕೆ ಸಂಪೂರ್ಣ ತಪ್ಪು! ಮೂಲತಃ ಏನ್ ಗುರು ಬರಹಗಳನ್ನು ಓದಿ ನೋಡಿದರೆ ಅವರು ಖಂಡಿತಾ ಎದಪಂಥೀಯರಲ್ಲ ಎನ್ನುವುದು ತಿಳಿಯುತ್ತದೆ. ಬಲಪಂಥೀಯರನ್ನು ಬೆಂಬಲಿಸದವರೆಲ್ಲಾ ಎಡ ಅಲ್ಲಾ. ಅಷ್ಟಕ್ಕೂ ಹೀಗೆ ಕೇಳಿದ್ದರಲ್ಲಿ ತಪ್ಪೇನಿದೆ ಅದನ್ನು ಹೇಳುವುದು ಬಿಟ್ಟು ಚಾಳಿ, ಪಾಳಿ ಎಂದೆಲ್ಲಾ ಹೇಳುವುದು ಪಲಾಯನವಾದ ಅಲ್ಲವೇ?
Deleteಪ್ರಶ್ನೆ ಇರುವುದು ಲೇಖನದ ಪ್ರಕಟಣೆಯ ಸಮಯದ ಬಗ್ಗೆ (Timing of the article). ಇದೀಗತಾನೆ ಸಂಘದ ಹುಬ್ಬಳ್ಳಿಯ ಕಾರ್ಯಕ್ರಮ ಮುಗಿದಿದೆ, ಅದಾದ ತಕ್ಷಣ ಬೇರೆ ವೆಬ್ ಸೈಟ್ ನಿಂದ ಲೇಖನವನ್ನು ಎತ್ತಿ ಪ್ರಕಟಿಸಲಾಗಿದೆ. ಮುಖ್ಯವಾಗಿ ಕೇಳುವುದು ಎಡ ಮಾರ್ಕ್ಸ್ ವಾದಿ ಪಕ್ಷಗಳ ರಾಜ್ಯ ಸಮ್ಮೇಳನಗಳು ಆಗಾಗ ನಡೆಯುತ್ತಿರುತ್ತದೆ, ಆದರೆ ನನ್ನ ನೆನಪಿನಲ್ಲಿ ಒಂದುಸಾರಿಯು ಸಂಪಾದಕೀಯವು ಅವರ ಭಾಷಾ ನಿಲುವು(Marxists opposed giving primacy to kannada during Gokak agitation) ಬದಲಾಗಿದೆಯೇ? ಅಥವಾ ಮೂಲಭೂತ ಸ್ವತಂತ್ರದ ಬಗ್ಗೆ ಅವರ ನಿಲುವೇನು ಅಂತ ಪ್ರಶ್ನಿಸಿದ ನೆನಪಿಲ್ಲ. ಇದರಿಂದ ಅನಿಸುವುದೆನೆಂದರೆ ಲೇಖನ ಕನ್ನಡದ ಮೇಲಿನ ಪ್ರೀತಿಗಿಂತ ಕೇವಲ ಸಂಘವನ್ನು ಹಳಿಯಬೇಕು ಅನ್ನುವುದು ಮುಖ್ಯವಾಗಿದೆ ಅಂತ. ಲೇಖನ ಪ್ರಕಟಿಸಿರುವ ಉದ್ದೇಶ ಪ್ರಾಮಾಣಿಕ ವಾಗಿಲ್ಲ.
Deleteಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.
DeleteRSS ಬಗೆಗಿನ ಸಂಪಾದಕೀಯದ ಲೇಖನ ಪ್ರಜಾವಾಣಿಯ ವಿವೇಕಾನಂದ ಲೇಖನದ ಮುಂದುವರಿದ ಬಾಗದಂತಿದೆ. ಒಂದು ಪರಕೀಯ ಸಿದ್ದಾಂತ್ತಕ್ಕೆ (ಇಲ್ಲಿ ಮಾರ್ಕ್ಸ್ ವಾದ) ಬದ್ದರಾಗಿ ಹಾಗು ನಿಷ್ಟರಾಗಿ ಪೂರ್ವಗ್ರಹತೆ ಇಂದ ಬರೆದಿರುವ ಲೇಖನ ಎಂದು ಸೂಕ್ಷ್ಮ ಮನಸಿನ ಯಾರಿಗೂ ತಿಳಿಯದ ವಿಷಯವೇನಲ್ಲ. Marx ವಾದಿಗಳಿಗೆ ಹಿಂದೂ ಸಂಕೇತಗಳನ್ನ ಹಳಿಯುವುದು, ಹಿಂದೂ ಸಂಘಟನೆಗಳನ್ನು ತಿರಸ್ಕಾರದಿಂದ ನೋಡುವುದು ಒಂದು ಚಾಳಿಯಾಗಿದೇ. ಇದು ಅವರ ತಂತ್ರ (tactic) ಕೂಡ ಹೌದು. ತಮಾಷೆಯ ಸಂಗತಿ ಏನೆಂದರೆ, ಪ್ರಜಾಪ್ರಭುತ್ವ ಕೊಡಮಾಡುವ ಎಲ್ಲ ಸ್ವಾತಂತ್ರಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುವ ಇವರು, ಅಧಿಕಾರಕ್ಕೆ ಬಂದಕೂಡಲೇ ಸ್ವತಂತ್ರ ಹರಣ ಮಾಡಿಬಿಡುತ್ತಾರೆ. ಇದಕ್ಕೆ ಎಲ್ಲ ಕಾಮ್ಮುನಿಸ್ಟ್ ರಾಷ್ಟ್ರಗಳೇ ಉದಾಹರಣೆ. RSS ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ಇದೆ ಮತ್ತು ಅದರ ಎಲ್ಲ ಕಾರ್ಯಕ್ರಮಗಳು ಮತ್ತು ಪ್ರಕಟಣೆಗಳು ಕನ್ನಡದಲ್ಲೇ ಇವೆ ಎಂಬುದನ್ನು Marxist ಪತ್ರಕರ್ತರ ಜಾಣ ಕುರುಡು ಮರೆಮಾಚುತ್ತೆ. ಕನ್ನಡಕಾಗಿ ಗೋಕಾಕ್ ಚಳುವಳಿ ನಡೆಯುತ್ತಿದ್ದಾಗ ಅದನ್ನು ವಿರೋದಿಸಿದ marxist ಪಕ್ಷ, ಗೋಕಾಕ್ ಚಳುವಳಿಯನ್ನು ವಿರೋದಿಸಿ ಲೇಖನದ ಸರಮಾಲೆಯನ್ನೇ ಬರೆದ ಪ್ರಜಾವಾಣಿಯ Marx ವಾದಿ ಹರಿಕುಮಾರ್, ಚಳುವಳಿಯನ್ನು 'ಸಮೂಹ ಸನ್ನಿ' ಎಂದು ಹಿಯಾಳಿಸಿ ವಿರೋದಿಸಿದ್ದ ಅನಂತ ಮೂರ್ತಿ...ಇದೆಲ್ಲ ನಿಮಗೆ ಲಕ್ಷ್ಯಕ್ಕೆ ಸಿಗುವಿದಿಲ್ಲ ಅಥವಾ ಜಾಣ ಮರೆವು?
ReplyDeleteHa Ha Ha... viShayaaMtara mattu eduraligaLa avahELana: ide RSS siddhamta!
ReplyDeleteಸುಧೀರ್ ಸಾನು,
ReplyDeleteಹರಿಹರಪುರ ಶ್ರೀಧರ್ ಅವರಿಗೆ ನೀಡಿರುವ ಉತ್ತರಗಳನ್ನು ದಯಮಾಡಿ ಗಮನಿಸಿ. ಬಾಲಿಷ ಯಾವುದು? ಪ್ರೌಢವಾದ್ದು ಯಾವುದು? ಸಾಧ್ಯವಾದರೆ ಅರಿಯಿರಿ.
ಹರಿಹರಪುರ ಶ್ರೀಧರ್ ಅವರು ಸಂಘ ಸಿದ್ಧಾಂತದ ಕೆಲವು ಅಂಶಗಳು ಮಾರ್ಪಾಡಾಗಬೇಕು ಎನ್ನುವುದನ್ನು ಒಪ್ಪಿದ್ದಾರೆ. ಇದು ಸಂತೋಷದ ವಿಷಯ. ಇವತ್ತಿನ ಜ್ವಲಂತ ಶೋಷಣೆಯೆಂದು ವಿಷಯಾಂತರ ಮಾಡುವುದು ಪ್ರೌಢತನವಲ್ಲಾ. ಈಗ ಏನ್ ಗುರು ಎತ್ತಿರುವ ಪ್ರಶ್ನೆಯ ಮಹತ್ವವನ್ನು ಅರಿಯದಿರುವುದು, ಇಲ್ಲವೇ ಅತಿಜಾಣತನ ಅಥವಾ ಉದ್ದೇಶಪೂರ್ವಕ ಅಷ್ಟೇ. ನೀವೇ ಹೇಳಿ, ಕನ್ನಡದ ಯುವಕರು ತಮ್ಮದೇ ನಾಡಿನ ಮುಸ್ಲಿಮರ ಬಗ್ಗೆ ಅನುಮಾನಗಳನ್ನು ತಾಳುವಂತಹ ನಿಲುವು ಸಂಘದ್ದಾಗಿದೆ ಎನ್ನುವುದು ಕಾಣದೇ? ಮುಸ್ಲಿಮರು ಮತ್ತು ಕ್ರೈಸ್ತರು ಈ ದೇಶದ ಅಪಾಯಗಳು ಎಂದರೆ ಏನರ್ಥ? ಇವರನ್ನು ಅನುಮಾನಿಸು ಎಂದಲ್ಲವೇನು? ಇಂತಹ ಒಡಕನ್ನು ಸಂಘದಲ್ಲಿ ತುಂಬುತ್ತಿಲ್ಲಾ ಎಂದು ನಂಬುವುದು ಹೇಗೆ? ಹೇಳಿ. ನೀವು ಸಂಘ ಪರಿವಾರ ನಡೆಸುವ ನೂರು ಸಾಮಾಜಿಕ ಕಾರ್ಯಗಳ ಹಿರಿಮೆಯನ್ನು ಎತ್ತಿ ಕೊಂಡಾಡಿದರೂ ಮೂಲ ಸಿದ್ಧಾಂತದಲ್ಲೇ ಒಡಕು, ಅಪನಂಬಿಕೆ ಮತ್ತು ಧಾರ್ಮಿಕ ಪಕ್ಷಪಾತತನವಿರುವಾಗ ಈ ಕೆಲಸಗಳನ್ನು ಗೌರವಿಸುವುದು ಹೇಗೆ? ಯಾವ ಸಂಘ ಹಿಂದೀಯನ್ನು ರಾಷ್ಟ್ರಭಾಷೆಯಾಗಿಸಬೇಕು, ಸಂಪರ್ಕ ಭಾಷೆಯಾಗಿಸಬೇಕು ಎನ್ನುತ್ತದೋ ಅದು ಕನ್ನಡ ಕಲಿಸಲು ಮುಂದಾದರೆ ಅದರ ನಿಜಾಯತಿಯನ್ನು ನಂಬಲಾಗುವುದೇ? ರಾಜ್ಯಗಳಿಗೆ ಶಾಸನ ಮಾಡುವ ಅಧಿಕಾರ ಇರಬಾರದು ಎನ್ನುವ ಸಂಘವು ಹೀಗೆನ್ನೆವು ಮೂಲಕ ವಿಕೇಂದ್ರೀಕರಣದ ವಿರೋಧಿ ಅಲ್ಲವೇ? ಮೀಸಲಾತಿಯನ್ನು ಹಣದ ಆಮಿಶವೆನ್ನುವಂತೆ ನೋಡುವ ಸಂಘವು ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ನಂಬಲಾಗುವುದೇ?
ಗೆಳೆಯರೇ, ನಾವು ಸಂಘಕ್ಕೆ ಇಂಥಾ ನಿಲುವು ಇರಬಾರದು ಎಂದೇನೂ ಹೇಳುತ್ತಿಲ್ಲ. ಇಂತಹ ನಿಲುವನ್ನು ಒಳಗಿಟ್ಟುಕೊಂಡು, ಹೊರಮುಖವಾಗಿರುವ ಬಿಜೆಪಿಗೆ ಇದರ ವಿರುದ್ಧವಾದ ನಿಲುವುಗಳ ನಿಲುವಂಗಿ ತೊಡಿಸಿ ಅಧಿಕಾರಕ್ಕೆ ತಂದು ತನ್ನ ಸಿದ್ಧಾಂತಗಳನ್ನು ಜಾರಿಮಾಡಲು ಮುಂದಾಗುವುದು ಹೇಯ ಎಂದು ನಿಮಗನ್ನಿಸದೇ? ತನ್ನ ಸಿದ್ಧಾಂತಗಳನ್ನೇ ಜನರ ಮುಂದಿಟ್ಟು ಮತಪಡೆದು ಅಧಿಕಾರಕ್ಕೆ ಬಂದು ತನ್ನ ಸಿದ್ಧಾಂತ ಜಾರಿ ಮಾಡಬೇಕಾದ್ದು ಪ್ರಾಮಾಣಿಕತೆಯಲ್ಲವೇ? ಇಷ್ಟನ್ನೇ ಏನ್ ಗುರುವಿನ ಎರಡೂ ಲೇಖನಗಳು ಪ್ರತಿಪಾದಿಸಿದ್ದು... ಇದುವರೆಗೂ ನಮ್ಮ ನಿಲುವು ಇದೇ ಎಂದು ಹೇಳಿಕೊಳ್ಳುವ ಧೈರ್ಯವನ್ನು ಸಂಘದವರು ಮಾಡಿಲ್ಲ ಎನ್ನುವುದು ಅಚ್ಚರಿಯ ವಿಷಯವಾಗಿದೆ.
ಉತ್ತಮವಾದ ವಿಚಾರ ಪ್ರಚೋದಕವಾದ ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.
ReplyDeleteಆದರೆ ಇಲ್ಲೂ ಸಹ ಕೆಲವು "ಅನಾಮಧೇಯ"ರು ಆರೆಸ್ಸೆಸ್ ಬಗ್ಗೆ ವಕಾಲತ್ತು ವಹಿಸಿರುವುದು ಕುತೂಹಲಕಾರಿಯಾಗಿದೆ! ಇರಲಿ, ನಾವು ಪ್ರಜಾಪ್ರಭುತ್ವವನ್ನೂ, ವಾಕ್ಸ್ವಾತಂತ್ರದ ಮೌಲ್ಯಗಳನ್ನೂ ಒಪ್ಪಿರುವುದರಿಂದ RSS ಪರ ವಾದಿಸುತ್ತಿರುವ ವಕೀಲರ ವಾದಕ್ಕೂ ಕಿವಿಗೊಡುವುದು ವಿಚಾರದ ದೃಷ್ಟಿಯಿಂದ ಒಳ್ಳೆಯದೇ.
ಈ RSS ಗೆಳೆಯರೊಂದಿಗೆ ಚರ್ಚೆಗೆ ಇಳಿಯುವ ಮುನ್ನ ಅವರ ಕನ್ನಡ ವೆಬ್ ಸೈಟ್ ನೋಡಿ, ಮತ್ತೆ ಮಾತುಕತೆ ಆರಂಭಿಸುವುದು ಒಳ್ಳೆಯದು ಎಂದೆನಿಸಿದೆ.
ಆದಷ್ಟು ಬೇಗನೆ ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ.
RSS ನವರು ತಮ್ಮ ನಿಲುವುಗಳು ಪ್ರಶ್ನೆಗೊಳಗಾದಾಗ ಎಂದಿಗೂ ಅವುಗಳಿಗೆ ನೇರವಾದ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ, ಬದಲಿಗೆ ಒಂದು ರೀತಿಯ whispering campaign ನಡೆಸುತ್ತಾ ಕಾರ್ಯ ಸಾಧಿಸುವುದರಲ್ಲಿ ಅವರು ಮಗ್ನರಾಗಿರುವುದು ಇತಿಹಾಸದುದ್ದಕ್ಕೂ ಕಂಡುಬರುತ್ತದೆ. ಕನ್ನಡ-ಕನ್ನಡಿಗ- ಕರ್ನಾಟಕ ವಿಷಯದ ಬಗ್ಗೆ ಮಾತ್ರವಲ್ಲ. ಅವರು ಪ್ರತಿಪಾದಿಸುವ ಯಾವುದೇ ವಿಷಯದಲ್ಲಾದರೂ ಮುಕ್ತವಾದ ಚರ್ಚೆಗೆ ತೊಡಗಿದ ಉದಾಹರಣೆ ಕಂಡು ಬರುವುದಿಲ್ಲ.
ReplyDeleteಇಲ್ಲಸಲ್ಲದ ಕತೆಗಳನ್ನು ಹೇಳಿ ವಿಷಯಾಂತರ ಮಾಡುವುದು ಅವರಿಗೆ ಕರಗತವಾಗಿರುವ ಒಂದು ವಿದ್ಯೆ. ಪದೇ ಪದೇ ಉತ್ತರಿಸಲಾಗದ ಪ್ರಶ್ನೆಗಳೆದುರಾದರೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು, ಅಥವಾ ಕಮ್ಯುನಿಷ್ಟ್ ಎಂದು ಮೂದಲಿಸಿ ಜಾರಿಕೊಳ್ಳುವ ಚಾಳಿ ಅವರಿಗೆ ರಕ್ತಗತವಾಗಿರುವಂತೆ ಕಾಣುತ್ತದೆ.
RSS ನವರು ನೇರವಾಗಿ ಚರ್ಚೆಗೆ ಇಳಿಯುವ ಧೈರ್ಯ ತೋರಿಸುವುದು ಯಾವಾಗ? ಈಗಲಾದರೂ ಅಂಥಾ ಧೈರ್ಯ ತೋರಬಾರದೆ?