Sunday, March 4, 2012

ಪತ್ರಕರ್ತರು, ವಕೀಲರು ಆಯಾ ಸಮುದಾಯವನ್ನಷ್ಟೇ ಪ್ರತಿನಿಧಿಸುವುದಿಲ್ಲ, ಅದು ವೃತ್ತಿಧರ್ಮವೂ ಅಲ್ಲ....


ಯುದ್ಧ ಹೆಚ್ಚು ದೀರ್ಘವಾದಷ್ಟೂ ಉಭಯ ಪಂಗಡಗಳಿಗೂ ಸಾವು ನೋವು ಖಾತರಿ. ಹಾಗಾಗಿ ಯುದ್ಧವನ್ನು ಹೆಚ್ಚು ಕಾಲ ಮುಂದುವರೆಸಲಾಗುವುದಿಲ್ಲ. ರಕ್ತ-ಗಾಯಗಳು ಕಾಣಿಸಿದ ಮೇಲೆ ಯುದ್ಧಪೂರ್ವದ ತೇಜಸ್ಸೂ, ಆವೇಶವೂ ಹಾಗೇ ಉಳಿದಿರುವುದಿಲ್ಲ. ವಕೀಲರು-ಪತ್ರಕರ್ತರ ಸಂಘರ್ಷದಲ್ಲಿ ಮರೆತ ಮಾನವೀಯತೆಯನ್ನು ಹುಡುಕಿಕೊಳ್ಳಲೇಬೇಕು. ಎಲ್ಲಾದರೂ ಈ ಅಸಹನೀಯ ದ್ವೇಷದ ವಾತಾವರಣವನ್ನು ತಿಳಿಗೊಳಿಸುವ ಕಾರ್ಯ ಯಾರಿಂದಾದರೂ ನಡೆಯಲೇಬೇಕು. ಅದು ಆರಂಭವಾಗಿದೆ. ನಾಳೆ ವಕೀಲರ ಪ್ರತಿಭಟನೆ. ಅದು ಮತ್ತೆ ಈ ಸಂಘರ್ಷವನ್ನು ತಾರಕಕ್ಕೆ ತೆಗೆದುಕೊಂಡು ಹೋಗುತ್ತದಾ? ಅಥವಾ ಆ ಕಡೆಯಿಂದನೂ ಬಿಳಿ ಪಾರಿವಾಳಗಳು ಹಾರಬಹುದಾ? ಕಾದು ನೋಡಬೇಕು. ನಾಳೆ ಪತ್ರಕರ್ತರ ದೊಡ್ಡಮಟ್ಟದ ಪ್ರತಿಭಟನೆಯೂ ನಡೆಯಲಿದೆ. ಅಲ್ಲಿ ಹಿರಿಯ ಪತ್ರಕರ್ತರು ಒಂದಷ್ಟು ವಿವೇಕದ ಮಾತನಾಡಬಹುದಾ? ಕಾದುನೋಡಬೇಕು.

ಇದಕ್ಕೂ ಮುನ್ನವೇ ತಿಳಿಗೊಳಿಸುವ ಪ್ರಯತ್ನವನ್ನು ಮೊದಲು ಆರಂಭಿಸಿದ್ದು ಸಮಯ ಟಿವಿ. ಇತರ ಚಾನಲ್ಲುಗಳು ರೋಷಾವೇಶದಲ್ಲಿ ಕುದಿಯುತ್ತಿದ್ದಾಗಲೇ ಸಮಯ ಟಿವಿ ಯಾಕೆ ಹಿಂಗಾಯ್ತು ಎಂಬ ಚರ್ಚೆ ನಡೆಸಿ ಆತ್ಮಶೋಧನೆಗೆ ದಾರಿ ಮಾಡಿಕೊಟ್ಟಿತು. ಮೂವರು ವಕೀಲರು, ಇಬ್ಬರು ಪತ್ರಕರ್ತರು ಮತ್ತು ಓರ್ವ ಮಾಜಿ ಪೊಲೀಸ್ ಅಧಿಕಾರಿಯ ಜತೆ ಸಮಯದ ನಿರ್ದೇಶಕ ಶಿವಪ್ರಸಾದ್ ಚರ್ಚೆ ನಡೆಸಿದರು.

ಒಂದು ಬಹುಮುಖ್ಯ ವಿಷಯವೆಂದರೆ ನೀವು ನನ್ನ ಪ್ರಶ್ನೆಗಷ್ಟೇ ಉತ್ತರ ಕೊಡಬೇಕು, ಉತ್ತರ ಕೊಡುವಾಗಲೂ ನನಗೆ ಅಹಿತವೆನಿಸಿದ್ದನ್ನು ಹೇಳಕೂಡದು, ನನಗೆ ಬೇಡದ ಉತ್ತರ ಬಂದರೆ ನಿಮಗೆ ಮಾತನಾಡಲು ಬಿಡುವುದಿಲ್ಲ ಎಂಬ ಕೆಲವು ಟಿಪಿಕಲ್ ನಿರೂಪಕರ ಹಾಗೆ ಅವರು ಚರ್ಚೆ ನಡೆಸಲಿಲ್ಲ. ಎಲ್ಲರಿಗೂ ಅವರ ಪಾಡಿಗೆ ಅವರು ಮಾತನಾಡಲು ಬಿಟ್ಟರು. ಹಿರಿಯ ವಕೀಲ ದೊರೆರಾಜು ಸ್ವಲ್ಪ ಭಾವುಕರಾದಂತೆ ಕಂಡರೂ ತಮಗೆ ಹೇಳಬೇಕೆನಿಸಿದ್ದನ್ನು ಎಗ್ಗಿಲ್ಲದೆ ಹೇಳಿದರು. ಡಾ. ಸಿ.ಎಸ್.ದ್ವಾರಕಾನಾಥ್ ಸಹ ಘಟನೆಯ ಎಲ್ಲ ಮಗ್ಗುಲುಗಳನ್ನು ವಿವರಿಸಿದರು. ಪತ್ರಕರ್ತರ ಮೇಲೆ ದಾಳಿ ನಡೆಸಿದವರನ್ನು ನೇಣು ಹಾಕಿ, ನಮ್ಮ ಅಭ್ಯಂತರವಿಲ್ಲ. ಆದರೆ ಇಡೀ ವಕೀಲ ಸಮುದಾಯವನ್ನು ಗೂಂಡಾಗಳೆಂದು ಕರೆಯಬೇಡಿ ಎಂದು ಅವರು ಹೇಳಿದರು.

ಕೋರ್ಟ್ ಒಳಗೆ ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ಕವರ್ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಒಳಗೆ ಮೀಡಿಯಾ ಕ್ಯಾಮೆರಾಗಳು ಇಲ್ಲದೇ ಇದ್ದಿದ್ದು ಎಂದು ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತ ಬಾಲಿಷ ಸಮರ್ಥನೆ ನೀಡಿದಾಗ ದ್ವಾರಕಾನಾಥ್ ನೀಡಿದ ಉತ್ತರ: ಸುದ್ದಿ ಮಾಡುವುದಕ್ಕೆ ಕ್ಯಾಮೆರಾ ಬೇಕು ಎಂದೇನೂ ಇಲ್ಲ. ಕಣ್ಣು ಇರಬೇಕು, ಹೃದಯ ಇರಬೇಕು, ಮನಸ್ಸು ಇರಬೇಕು...

ಇದಾದ ತರುವಾಯ ಎಲ್ಲ ಚಾನಲ್‌ಗಳಲ್ಲೂ ಒರಟಾಟದ ಧ್ವನಿ ಗಣನೀಯವಾಗಿ ತಗ್ಗಿದ್ದನ್ನು ಗಮನಿಸಬಹುದು. ಭಾಷೆಯಲ್ಲಿ ಸ್ವಲ್ಪ ಸೌಮ್ಯತೆ ಕಾಣಿಸಿತು. ಗಲಭೆಯ ದಿನ ಸೈನಿಕರನ್ನು ಹುರಿದುಂಬಿಸುವ ಸೇನಾಧಿಪತಿಯಂತೆ ಮಾತನಾಡುತ್ತಿದ್ದ ಪಬ್ಲಿಕ್ ಟಿವಿಯ ರಂಗಣ್ಣನ ಧ್ವನಿಯಲ್ಲೂ ಒಂಚೂರು ಸೌಮ್ಯತೆ ಕಾಣಿಸಿದ್ದನ್ನು ನೀವು ಗಮನಿಸಿರಬಹುದು. ಪೊಲೀಸರು ಬಿಡುಗಡೆ ಮಾಡಿದ ಆರೋಪಿಗಳ ಪಟ್ಟಿಯನ್ನು ಅಪರಾಧಿಗಳ ಪಟ್ಟಿ ಎಂಬಂತೆಯೇ ಘೋಷಿಸುತ್ತಿದ್ದ ಸುವರ್ಣನ್ಯೂಸ್‌ನಲ್ಲೂ ಕೊಂಚ ಅಬ್ಬರದ ಧ್ವನಿ ತಗ್ಗಿದಂತಿತ್ತು.

ಉದಯವಾಣಿ ಪತ್ರಿಕೆ ಇವತ್ತು ಘಟನೆಗೆ ಇರುವ ಮೂರು ಆಯಾಮಗಳನ್ನು ವಿವರಿಸಿ ತನ್ನ ಅಗ್ರ ಸುದ್ದಿ ಪ್ರಕಟಿಸಿತು. ಅದೂ ಕೂಡ ರಣಭೂಮಿಯಲ್ಲಿ ಒಂದು ಹೆಜ್ಜೆ ಹಿಂದಿಟ್ಟ ಸೇನಾಪಾಳಯದ ಲಕ್ಷಣ. ಹೊತ್ತಿರುವ ಬೆಂಕಿಯನ್ನು ಆರಿಸುವುದು ಹೇಗೆ ಎಂಬುದು ಮೊದಲ ಆದ್ಯತೆ ಎಂದು ರವಿ ಹೆಗಡೆ ಬರೆದು ಪತ್ರಿಕೆಯ ನಿಲುವನ್ನು ಜಾಹೀರುಪಡಿಸಿದರು.

ವಾರ್ತಾಭಾರತಿ ಸಂಪಾದಕ ಬಿ.ಎಂ.ಬಷೀರ್ ತಮ್ಮ ಫೇಸ್ ಬುಕ್‌ನಲ್ಲಿ ಬರೆಯುತ್ತ ಮಾನವ ಹಕ್ಕಿನ ಮೇಲೆ ದಾಳಿಯಾದಾಗ ಸಂತ್ರಸ್ತರಿಗೆ ಬೆಂಗಾವಲಾಗಿ ನಿಂತು, ಗುದ್ದಾಡಿದ, ಒದ್ದಾಡಿದ, ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ವಕೀಲರು ನಮ್ಮ ನಡುವೆ ಇರುವಾಗ, ವಕೀಲ ವೃತ್ತಿಯ ಘನತೆಯನ್ನು ತಿಳಿಯ ಹೊಸ ತಲೆಮಾರು, ಯಾವುದೋ ಹಿತಾಸಕ್ತಿಗೆ ಬಲಿಯಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಾಕ್ಷಣ ನಾವು ಇಡೀ ವಕೀಲರ ಮೇಲೆ ಆರೋಪ ಮಾಡುವುದು ನಿಜವಾದ ಲಾಯರ್‌ಗಳಿಗೆ ಮಾಡುವ ಅವಮಾನ. ಈ ನಾಡಿನ ಅದೆಷ್ಟೋ ರಾಜಕಾರಣಿಗಳು ಒಂದು ಕಾಲದಲ್ಲಿ ವಕೀಲರಾಗಿ ದುಡಿದವರು. ಪೊಲೀಸ್ ವ್ಯವಸ್ಥೆ ನಿರಂಕುಶವಾಗಿ ವರ್ತಿಸಿದಾಗ ಪತ್ರಕರ್ತರನ್ನೂ ಸೇರಿದಂತೆ ಈ ನಾಡಿನ ಜನತೆಯನ್ನು ಮುಂದೆ ನಿಂತು ರಕ್ಷಿಸಿದವರು ವಕೀಲರು. ಇಂದು ನಾವು ವಕೀಲರ ಮೇಲೆ ಸಾರಾಸಗಟಾಗಿ ಆರೋಪ ಮಾಡುವಾಗ, ಆ ಕುರಿತ ಪ್ರಜ್ಞೆ ನಮ್ಮಲ್ಲಿರಬೇಕಾಗುತ್ತದೆ  ಎಂದು ಹೇಳಿದ್ದಾರೆ.

ಪತ್ರಕರ್ತ ಕೇವಲ ಪತ್ರಕರ್ತ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆತ ಇಡೀ ಸಮಾಜದ ಗಂಟಲು. ಧರ್ಮ, ಜಾತಿ, ಮತ, ಪಂಥ, ಭಾಷೆಗಳ ಭೇದವಿಲ್ಲದಂತೆ ಎಲ್ಲರ ಅಭಿವ್ಯಕ್ತಿಗಳಿಗೂ ಅವನು ಕಣ್ಣಾಗಬೇಕು, ಕಿವಿಯಾಗಬೇಕು.  ನಾನು ಪತ್ರಕರ್ತರನ್ನಷ್ಟೆ ಪ್ರತಿನಿಧಿಸುತ್ತೇನೆ ಎಂದು ಚೌಕಟ್ಟು ಹಾಕಿಕೊಂಡು ಕುಳಿತ ತಕ್ಷಣ ಅವನೊಳಿಗೆ ಪತ್ರಕರ್ತ ಸತ್ತ ಎಂದೇ ಅರ್ಥ. ಇಂಥವರು ಕೇವಲ ಸಂಬಳಕ್ಕಾಗಿ ವೃತ್ತಿ ಮಾಡುವವರು. ಪತ್ರಕರ್ತರು ಸಮಾಜದ ಪ್ರತಿಯೊಬ್ಬನ, ಕಟ್ಟಕಡೆಯ ಮನುಷ್ಯನನ್ನೂ ಪ್ರತಿನಿಧಿಸಬೇಕು, ಅವನ ಧ್ವನಿಯನ್ನು ದಾಖಲಿಸಬೇಕು. ವಕೀಲರ ನೋವನ್ನು, ಅವರ ಮೇಲೆ ನಡೆದ ದೌರ್ಜನ್ಯವನ್ನು ನಾವು ಪ್ರಕಟಿಸುವುದಿಲ್ಲ, ಪ್ರಸಾರಿಸುವುದಿಲ್ಲ ಎಂಬ ನಿಲುವು ವೃತ್ತಿಧರ್ಮವಲ್ಲ. ವಕೀಲರ ಕೊಲೆ ಕೇಸು ಆರೋಪಿಗೂ ಒಬ್ಬ ವಕೀಲನಿರುತ್ತಾನೆ, ವಕೀಲರಿಲ್ಲದೆ ಕೇಸು ನಡೆಯುವುದಿಲ್ಲ, ಯಾರೋ ಒಬ್ಬರು ವಕಾಲತು ಮಾಡಲೇಬೇಕು, ಅದು ವಕೀಲರ ವೃತ್ತಿಧರ್ಮ. ಹಾಗೆಯೇ ಪತ್ರಕರ್ತರು ಮೊನ್ನೆಯ ಘಟನೆಯಲ್ಲಿ ತಾವು ಒಂದು ಪಕ್ಷವಾಗಿದ್ದರೂ ಸಹ, ಎದುರು ಪಕ್ಷದವರ ಮಾತನ್ನೂ ಪ್ರಕಟಿಸಬೇಕು, ಪ್ರಸಾರಿಸಬೇಕು. ಆ ಕೆಲಸ ಈಗ ಆಗುತ್ತಿದೆ.

ದಾಳಿಕೋರ ವಕೀಲರನ್ನು ವಕೀಲ ಸಮುದಾಯದಿಂದ ಪ್ರತ್ಯೇಕಿಸಿ ಮಾತನಾಡದ ಹೊರತು, ಹಲ್ಲೆಗೊಳಗಾದ ಪತ್ರಕರ್ತರಿಗೆ ನ್ಯಾಯ ದೊರೆಯುವುದೂ ಅನುಮಾನ. ಯಾಕೆಂದರೆ ಇಡೀ ಸಮುದಾಯವನ್ನು ನಿಂದಿಸುತ್ತಲೇ ಇದ್ದರೆ ಆ ಸಮುದಾಯ ಒಟ್ಟಾಗಿ ನಿಲ್ಲುತ್ತದೆ, ದಾಳಿಕೋರರಿಗೆ ರಕ್ಷಣೆಯೂ ದೊರೆಯುತ್ತದೆ.

ಇದೆಲ್ಲವನ್ನೂ ವಕೀಲ ಸಮುದಾಯವೂ ಗಮನಿಸಿರಬಹುದು, ಗಮನಿಸಬಹುದು. ಮಾಧ್ಯಮದಲ್ಲಿ ಇರುವವರೆಲ್ಲ ಭ್ರಷ್ಟರಲ್ಲ, ದುಷ್ಟರಲ್ಲ ಎಂಬುದು ಅವರಿಗೂ ಗೊತ್ತಿದೆ. ವಕೀಲರ ಜತೆಗೆ ಅನುಚಿತವಾಗಿ ವರ್ತಿಸಿರಬಹುದಾದ ಪತ್ರಕರ್ತರು ಬೆರಳೆಣಿಕೆಯಷ್ಟು ಜನರು, ಎಲ್ಲರೂ ಹಾಗಿರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಅರಿವಾಗಬೇಕು. ಮಿಕ್ಕಂತೆ ಪ್ರಚೋದಿತ ವರದಿಗಳು, ಏಕಮುಖ ವರದಿಗಳಿಗೆ ಆ ಕ್ಷಣದ ರೋಷಾವೇಶಗಳು ಕಾರಣವಾಗಿರುತ್ತವೆ ಎಂದೂ ಸಹ ಅವರು ಅರಿತುಕೊಳ್ಳಬೇಕು.

ಒಂದು ಕಡೆಯಿಂದ ಸೌಹಾರ್ದತೆಯ ಮಾತುಗಳು ಕೇಳಿಬಂದಿದೆ, ಮತ್ತೊಂದು ಕಡೆಯಿಂದಲೂ ಅದು ಬರುವಂತಾಗಲಿ. ಇದು ನಮ್ಮ ಆಶಯ.

6 comments:

 1. ಗಾಯವಾಗಿಬಿಟ್ಟಿದೆ...

  ಮತ್ತೆ ಮತ್ತೆ ಕೆರೆದು ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ಮುಲಾಮು ಹಚ್ಚುವ ಕೆಲಸ ಆಗಬೇಕಾಗಿದೆ..

  ಈ ನಿಟ್ಟಿನಲ್ಲಿ ಎರಡು ಕಡೆಯವರು ತಾಳ್ಮೆ, ವಿವೇಕದಿಂದ ಹೆಜ್ಜೆ ಇಡಬೇಕು..

  ಹಾಗೆ ಆಗಲೆನ್ನುವದು ನಮ್ಮೆಲ್ಲರ ಆಶಯಕೂಡ...

  ನಿಮ್ಮ ಲೇಖನ ಇಷ್ಟವಾಯಿತು...

  ReplyDelete
 2. ಬಹಳ ತಡವಾಗಿಯಾದರೂ ವಿವೇಕಯುತವಾದ ಧ್ವನಿ ಮಾಧ್ಯಮ ಲೋಕದ ಕೆಲವು ಬೆರಳೆಣಿಯ ಮೀಡಿಯಾಗಳ ಕಡೆಯಿಂದ ಮೊಳಗಿ ಬರುತ್ತಿರುವುದು ಸಂತಸದ ಹಾಗೂ ಅಭಿನಂದನಾರ್ಹ ವಿಚಾರ. ಈ ಕೆಲಸ ಮೊದಲೇ ಆಗಿದ್ದರೆ ಮಾಧ್ಯಮ ಪ್ರಪಂಚದ ಪ್ರಾಮಾಣಿಕತೆಗೆ ಜನವಲಯದಲ್ಲಿ ಅದರಲ್ಲೂ ವಿಶೇಷವಾಗಿ ವಕೀಲ ಸಮುದಾಯದ ಮಧ್ಯೆ ಒಂದು ಬೆಲೆ ಬರುತಿತ್ತು. ನ್ಯಾಯವಂಚಿತ-ಶೋಷಿತ ಜನವರ್ಗಕ್ಕೆ ನ್ಯಾಯವೊದಗಿಸುವಲ್ಲಿ ವಕೀಲರಿಗೆ ಆಸರೆಯಾಗಿ ನಿಲ್ಲಬೇಕಾದ ಮಾಧ್ಯಮ ಬಳಗ ಯಾವುದೇ ಅಜ್ಝಾತ ವಾಣಿಯ ಪ್ರಚೋದನೆ ಅಥವಾ ಪ್ರಲೋಭನೆಗೆ ಸಿಲುಕಿ ಪೋಲೀಸರ ಮುಖವಾಣಿಯಾಗಿ ವರ್ತಿಸಿದ್ದು ಸರ್ವಥಾ ಸಮರ್ಥನೀಯವಲ್ಲ. ವೃತ್ತಿ ಧರ್ಮ ಮರೆತು ಉನ್ಮಾದಕ್ಕೊಳಗಾದಂತೆ ವರ್ತಿಸಿದ ಲಂಗುಲಗಾಮಿಲ್ಲದ ಹುಚ್ಚು ಮಾಧ್ಯಮಗಳ ಬೆಂಬಲವೇ ವಕೀಲರ ಮೇಲೆ ದೌರ್ಜನ್ಯನಡೆಸಲು ಪೋಲೀಸರಿಗೆ ಧೈರ್ಯ ಕೊಟ್ಟದ್ದೆಂದರೆ ತಪ್ಪಲ್ಲ. ನಾಳೆ ಪೋಲೀಸರಿಂದ ಇದೇ ಗತಿ ತಮಗೂ ಬರಲಿದೆ ಎಂಬ ಅರಿವಿಲ್ಲದೆ ವಕೀಲರ ವಿರುದ್ದ ಅತಿರೇಕದ-ಕಪೋಲ ಕಲ್ಪಿತ ವರದಿಗಳನ್ನು ಬಿತ್ತರಿಸಿದ ಮಾಧ್ಯಮದ ಮಂದಿ ಪಾಠ ಕಲಿಯುವ ದಿನ ದೂರವಿಲ್ಲ. ಆಗ ನಗುವ ಸರದಿ ವಕೀಲರದು. ಆದರೆ ಹಾಗಾಗುವ ಮುನ್ನ ಮಾಧ್ಯಮಗಳು ತಮ್ಮ ತಪ್ಪಿಗೆ ಬಹಿರಂಗ ಕ್ಶಮೆ ಕೇಳಲಿ. ಆದಾಗ ಮಾತ್ರ ಮಾಧ್ಯಮ-ವಕೀಲ ಯುದ್ದ ಕೊನೆಗೊಳ್ಳಲು ಸಾಧ್ಯ. ಎ.ಎ.ಶಫೀರ್, ವಕೀಲರು

  ReplyDelete
 3. ಶಿವನೇ ಶಂಭುಲಿಂಗಾ ... ಇದ್ದೋರು ಮೂರು ಜನರಲ್ಲಿ ಕದ್ದೋನೂ ಯಾರು ಅಂದರಂತೆ , ಅಲ್ಲ ಕಣ್ಲಾ ಒಳ್ಳೆಯವರು ಕೆಟ್ಟವರು ಅಂತಾರೆ ಅದೇನೋ ನಿಜ
  ಆದರೆ ವಿದ್ಯಾ ಬುದ್ದಿ ಇದ್ದು ಹಿಂಗ ಆಡಿದರೆ - ಯಾರಣ ಮೆಚತರಾ ?

  ಕರಿ ಕೋಟು ನಮ್ಮ ಬ್ರಹಮ ಕವಚ ಅನ್ನೋ ಭ್ರಮೆ ಇವರಿಗೆ , ಖಡ್ಗಕಿಂತ ಹರಿತವಾದುದು ಲೇಖನಿ ಎನ್ನುವ ಆಹಮ್ಮೂ ಇವರಿಗೆ, ಬೆತ್ತದಿಂದಲೇ ಭಕ್ತಿ ಬೆತ್ತದಿಂದಲೆ ಮುಕ್ತಿ ಎನ್ನುವ ಭಂಡತನ ಇವರಿಗೆ... ಹ್ಮ್ ಆಆಹ..ಎಲ್ಲಿಯ ಶಾಂತಿ ಮಾತು ಕತೆ ಸಂಧಾನ , ಆಗಿಯೇ ಬಿಡಲಿ ಯುದ್ದ
  ಒಂದ ದಪ , ನೋಡೇ ಬಿಡನ ಎನ್ ಅಂತಿರಪ್ಪ ??? ಶಿವನೇ ಶಂಬುಲಿಂಗ

  ReplyDelete
  Replies
  1. lawyers galu media davarige naayige hodedange hodedu (vinaakaarana) adara prathipala 2nd hallf police navaru laywers mele attack maadiruvudu (january revenge)
   laywers navaru meediyadavarige tale burude hodedu, plicenavaru lawyers navarige hodedaddanna mediayavaru torisalilla anta heltidiralla nimma kaiyalli hodesikondu nimage police navaru hodeda drushya vanna torisalilla annodu yaava nyaya nyayavaadigale??????

   Delete
  2. can i ask you mr. Anonymous a simple question ?
   lawyers galu media davarige naayige hodedange hodedu (vinaakaarana) - did they saw some Rocky baloba movie all nite ?? to say vinakaaran ??

   appa - naanu yaava nyaavaadi alla , press reproter alla , policu alla , Kooli naali maadkondu - hottege hittu, one swlpa internet connection anta maadkondiro and - pratidina - law, governance, media, galinda " Anubhavisutha iruvaa samnya praje "

   Delete
 4. ರಾಜಿ ಸೂತ್ರ, ಸಂಧಾನ ಎಂಬ ಮಾತುಗಳು ಶುರುವಾಗಿವೆ. ವಕೀಲರನ್ನು ಗೂಂಡಾಗಳು, ಮಾನವೀಯತೆ ಇಲ್ಲದವರು, 3 ಪೋಲೀಸ್ ಪೇದೆಗಳ ಸಾವಿಗೆ ಕಾರಣರಾದವರು, ಒಬ್ಬ ಪೋಲೀಸ್ ಪೇದೆಯ ಕಣ್ಣು ಕಿತ್ತವರು. ಹೀಗೆ ಹುಚ್ಚುಚ್ಚಾಗಿ ಹೇಳಿ, ಬರೆದು ತಮ್ಮ ಸುದ್ದಿಯ ದಾಹವನ್ನು ನೀಗಿಸಿಕೊಂಡು, ಎಲ್ಲಾ ಜನರು ವಕೀಲ ಮಿತ್ರರುಗಳನ್ನು ಅನುಮಾನದಿಂದ ನೋಡುವ, ಅಸಹ್ಯಪಟ್ಟು ಕೊಳ್ಳುವ, ಹೇಸಿಗೆ ಪಟ್ಟುಕೊಳ್ಳುವ ಮನಸ್ಥಿಗೆ ದೂಡಿದ ಈ ಸುದ್ಧಿ ಮಾಧ್ಯಮಗಳು, ಈಗ ರಾಜಿ ಸೂತ್ರವನ್ನು ಪಟಿಸುತ್ತಿರುವುದು ಹೇಗಿದೆಯೆಂದರೆ ಕೋಟೆ ಹೊಡೆದ ಮೇಲೆ ದಿಡ್ಡಿಯ ಬಾಗಿಲು ಹಾಕಿದ ಹಾಗಿದೆ. ಯಾರೋ ಕೆಲವು ಅವಿವೇಕಿಗಳು ಮಾಡಿದ ಕೃತ್ಯಕ್ಕೆ ಇಡೀ ವಕೀಲ ಸಮುದಾಯವನ್ನು ಎಲ್ಲರ ಮುಂದೆ ಬೆತ್ತಲು ಮಾಡಿ, ಮಾಡಬಾರದ ಆರೋಪಗಳನ್ನೆಲ್ಲ ಮಾಡಿ ಈಗ ಶಾಂತಿಯ ಮಂತ್ರವನ್ನು ಓದುತ್ತಿರುವುದು ಅವರುಗಳ ಬಗ್ಗೆ ಅಸಹ್ಯ ತರುತ್ತಿದೆ. ಏಕ ಪಕ್ಷೀಯವಾಗಿ ವರದಿ ಮಾಡಿ ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡ ಇವರು ಈಗ ಹೇಳುತ್ತಿರುವುದಾದರೂ ಏನು '' ವಕೀಲರು ತಮ್ಮ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಎಲ್ಲಾ ಪಕ್ಷಗಾರರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ ವಹಿಸುವುದು ನ್ಯಾಯ. ಇನ್ನು ಮುಂದೆ ಪತ್ರಕರ್ತರ ಹಾಗು ಸುದ್ಧಿ ಮಾಧ್ಯಮಗಳ ಪರವಾಗಿ ವಕೀಲಿಕೆ ನಡೆಸುವುದಿಲ್ಲ ಎಂಬುದು ಏಕ ಪಕ್ಷೀಯ ನಿರ್ಧಾರ ಆಗುತ್ತದೆ ಎಂದು ನ್ಯಾಯ ಅನ್ಯಾಯಗಳ ಪರಾಮರ್ಶೆಯನ್ನು ಈಗ ಹೇಳುತಿದ್ದಾರೆ.'' ಪೊಲೀಸರು ಸಿಕ್ಕ ಸಿಕ್ಕ ವಕೀಲರನ್ನು ಹೊಡೆಯುತ್ತಾ, ಬೈಕು ಕಾರುಗಳನ್ನು ಸುಡುತಿದ್ದರೆ ಪರೋಕ್ಷವಾಗಿ ಪೊಲೀಸರಿಗೆ ಬೆಂಬಲ ನೀಡಿ, ಪತ್ರಿಕೆ ಹಾಗು ಮಾಧ್ಯಮದಲ್ಲಿ ವಕೀಲರ ಮೇಲೆ ಪೊಲೀಸರು ನಡಿಸಿದ ದೌರ್ಜನ್ಯದ ಬಗ್ಗೆ ಒಂದು ಸಾಲನ್ನು ಬರೆಯದ ಹೇಳದ ಈ ಮಂದಿ ಈ ದಿನ ನ್ಯಾಯ ನೀತಿ ವೃತ್ತಿ ಧರ್ಮದ ಬಗ್ಗೆ ಭಾಷಣಗಳನ್ನು ಬಿಗಿಯುತಿದ್ದಾರೆ. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಲಿ. ಆತ ವಕೀಲನಾಗಿರಲಿ ಯಾವನೇ ಆಗಿರಲಿ. ಜನತೆಯ ಮುಂದೆ ಆ ದಿನ ನಡೆದ ಪೋಲೀಸ್ ದೌರ್ಜನ್ಯದ ವರದಿಗಳನ್ನು ಜನತೆಯ ಮುಂದೆ ಇಡಲಿ. ಇಡೀ ವಕೀಲ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಮಾಧ್ಯಮ ಹಾಗು ಪತ್ರಿಕೆಯವರು ಕ್ಷಮೆ ಕೇಳಲಿ. ''ಏನ್ ಲಾ '' ಎಂದು ಪರೋಕ್ಷವಾಗಿ ವಕೀಲರನ್ನು ತುಚ್ಛವಾಗಿ ಕಂಡ ಪತ್ರಿಕೆಯೊಂದರ ಸಂಪಾದಕರು ಬಹಿರಂಗವಾಗಿ ಕ್ಷಮೆ ಕೇಳಲಿ. ವಕೀಲರ ಮೇಲೆ ನಡೆದ ದೌರ್ಜನ್ಯದ ಸಚಿತ್ರ ಚಿತ್ರಗಳ ಸಮೇತ ವರದಿಗಳನ್ನು ಪ್ರಕಟಿಸಲಿ.

  ReplyDelete