Saturday, October 8, 2011

ಅಮೆರಿಕಾದಲ್ಲಿ ಸಿಡಿದ ಬಂಡಾಯ- ಒಂದು ಆಶಾಭಾವನೆ!

ಚಳವಳಿಗಳಿಲ್ಲದ, ಪ್ರತಿಭಟನೆಯಿಲ್ಲದ, ಪರ್ಯಾಯ ಚಿಂತನೆಗಳಿಲ್ಲದ ಸಮಾಜ-ದೇಶ ಯಾವತ್ತೂ ಅಪಾಯಕಾರಿಯೇ. ಇಂಥ ಸಮಾಜ-ದೇಶಗಳು ಏಕಕಾಲಕ್ಕೆ ದುರಹಂಕಾರಿಯೂ, ನೈಜ ಪ್ರಜಾಪ್ರಭುತ್ವ ವಿರೋಧಿಯೂ, ಮನುಷ್ಯತ್ವ ವಿರೋಧಿಯೂ ಆಗಿರುತ್ತದೆ. ಅಮೆರಿಕದಲ್ಲಿ ಆರಂಭವಾಗಿರುವ ಜನಾಂದೋಲನ ಈ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು. ಈ ಬಗ್ಗೆ ಬೆಳಕು ಚೆಲ್ಲುವ ಲೇಖನವನ್ನು ಹರ್ಷಕುಮಾರ್ ಕುಗ್ವೆ ಬರೆದಿದ್ದಾರೆ. ಇದು ನಿಮಗಿಷ್ಟವಾದೀತು -ಸಂಪಾದಕೀಯ


ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು.  ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಈ ಬಂಡಾಯ ಎಲ್ಲಿಯವರೆಗೆ ನಡೆಯುತ್ತದೆ, ಏನು ಸಾಧಿಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ. 

ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿಯಿಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆಗೆ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗೆ ಸೊನ್ನೆಯಾಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಈ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್‌ಗಳಿಗೆ ಈಗ ಕನಿಷ್ಟ ಒಂದು ವರದಿಯನ್ನೂ ಮಾಡದಿರುವಂತದ್ದು ಏನಾಗಿದೆ?!


ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳವಳಿ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ’ಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆಯಲ್ಲಿ ಚಳವಳಿಗಾರರು ಆರಂಭಿಸಿದ ಈ ಚಳವಳಿಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ 'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯನ್ನು ಇದುವರೆಗೆ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋರ್ಟ್‌ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾರ್ಮಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್‌ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಕಾರ್ಡ್‌ಬೋರ್ಡ್ ಜೋಪಡಿ ಕಟ್ಟಿಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬೆಂಬಲವಾಗಿ ಅಮೆರಿಕದಾದ್ಯಂತ ಸಾವಿರಾರು ಜನರು ಕೇರಾಫ್ ’ಆಕ್ಯುಪೈ ವಾಲ್‌ಸ್ಟ್ರೀಟ್’ ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್‌ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಒಟ್ಟಾರೆಯಾಗಿ ನಿಧಾನಕ್ಕೆ ಈ ಬಂಡಾಯ ಒಂದು ಬೃಹತ್ ಜನಾಂದೋಲನವಾಗಿ ಚಳವಳಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಕಳೆದ ಒಂದು ದಶಕದಲ್ಲಿ ಅಮೆರಿಕದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಗಮನಿಸಿದರೆ ಈ ಸೂಚನೆ ತೋರುತ್ತದೆ. 


ನೀವೆಲ್ಲಾ ೧೯೮೪ರಲ್ಲಿ ಚೀನಾ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಡೆಸಿದ್ದ ದಂಗೆಯ ಕುರಿತು ಕೇಳಿರಬಹುದು. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಈ ಚಳವಳಿಯನ್ನು ಗಮನಿಸಿದರೆ ಬಹುತೇಕ ಅದೇ ಮಾದರಿಯಲ್ಲಿ ನಡೆಯುತ್ತಿರುವಂತೆ  ಕಾಣಿಸುತ್ತಿದೆ. ಆದರೆ ಇಲ್ಲಿ ನಡೆಯುತ್ತಿರುವುದು ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ಬರೀ ಒಬಾಮಾ ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ. ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವ ’ವಾಲ್‌ಸ್ಟ್ರೀಟ್’ನ ಹಣಕಾಸು ಸರ್ವಾಧಿಕಾರದ ವಿರುದ್ಧ ನಡೆಯುತ್ತಿರುವ ಚಳವಳಿ ಇದು.

ಈಗ ನಡೆಯುತ್ತಿರುವ ಚಳವಳಿಯ ರೂಪುರೇಷೆಯನ್ನು ಮೊದಲು ನೀಡಿದ್ದು ಕೆನಡಾದಲ್ಲಿರುವ 'ಅಡ್‌ಬಸ್ಟರ್’ ಎಂಬ ಗುಂಪು. ಈ ಗುಂಪಿನ ಸಲಹೆ ಮೇರೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಗೊಂಡು ಸೆಪ್ಟೆಂಬರ್ ೧೭ರಂದು ಚಳವಳಿ ಆರಂಭವಾಯಿತು. ಈ ಚಳವಳಿಯವರು ತಮ್ಮ ಹೋರಾಟವನ್ನು ಘೋಷಿಸಿಕೊಂಡಿರುವುದು ಹೀಗೆ-  "ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್‌ಲ್ಯಾಂಡ್‌ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಲು ಬಳಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ...'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಒಂದು ನಾಯಕರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ ೧% ಜನರ ದುರಾಸೆ ಹಾಗೂ ಭ್ರಷ್ಟಾಚಾರವನ್ನು ೯೯%ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ"


ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-  "ನಾವು ಬಹಳ ಮಂದಿ, ಅವರು ಕೆಲವೇ ಮಂದಿ. ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?", "ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾರ್ಥಿಗಳ ಎಲ್ಲಾ ಸಾಲ ಮನ್ನಾ ಮಾಡಿ",  "ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್ ಸಾಲಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ  ತೆರಿಗೆ ಹೆಚ್ಚಿಸಿ". ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವಳಿ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.

ಈ ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ, 
* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
* ಸಾಮಾಜಿಕ ಭದ್ರತಾ ಕ್ರಮಗಳನ್ನು ರದ್ದುಗೊಳಿಸದೇ ಹೆಚ್ಚಿಸಬೇಕು.
* ಸರ್ಕಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ ೧೦ಷ್ಟು ಶ್ರೀಂಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು
* ದೊಡ್ಡ ಕಾರ್ಪೊರೇಟ್ ಸಂಸ್ಥೇಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರುವುದು.
* ಸರ್ವರಿಗೂ ಹೆಲ್ತ್ ಕೇರ್ ವ್ಯವಸ್ಥೆ ಜಾರಿಗೊಳಿಸುವುದು.
* ಉಚಿತ ಕಾಲೇಜು ಶಿಕ್ಷಣ ನೀಡಬೇಕು.
* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾರಿಗೊಳಿಸಬೇಕು.
* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್
ನೀಡಬೇಕು.
* ಪರಿಸರ ಸಂರಕ್ಷಣೆಗಾಗಿ ಒಂಟು ಲಕ್ಷ ಕೋಟಿ ಡಾಲರ್ ನೀಡಬೇಕು.
* ತೈಲ ಇಂದನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.

ಈ ಚಳವಳಿ ತನ್ನ ಕೇಂದ್ರವನ್ನು ವಾಲ್‌ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್‌ಸ್ಟ್ರೀಟ್‌ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನಾಸ್ಡಾಕ್ ಎಲ್ಲಾ ಇರುವುದು ಇಲ್ಲೇ. ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯ ಲೋಗೋ ನೋಡಿ. ಗೂಳಿಯ ಮೇಲೆ ನೃತ್ಯಗೈಯುತ್ತಿರುವ ಯುವತಿಯ ಚಿತ್ರ!  


ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯವಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟುಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪರ್ಯಾಯ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ’ಆಕ್ಯುಪೈ ವಾಲ್‌ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂ’ ಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇ ಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್‌ಬುಕ್,  ಟ್ವಿಟರ್‌ಗಳು, ಯೂಟ್ಯೂಬ್, ವೆಬ್‌ಸೈಟ್ ಹೀಗೆ ಎಲ್ಲವೂ ನಿರಂತರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚರ್ಚಾ ವೇದಿಕೆಗಳಾಗಿ ಕೆಲಸ ಮಾಡುತ್ತಿದೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿರುತ್ತವೆಯೆ?

ಸೆಪ್ಟೆಂಬರ್ ೧೭ರಿಂದ ಆರಂಭವಾದ ಈ ಚಳವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀವಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ಕಾರ್ಡ್‌ಬೋರ್ಡ್‌ಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾರ್ಕ್ ಪೋಲೀಸ್ ಇಲಾಖೆ ಟೆಂಟ್‌ಬಳಕೆಯನ್ನು ನಿಷೇಧಿಸಿದ ಕಾರಣ).  ಆ ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.೨೪ರಂದು ಕನಿಷ್ಟ ೮೦ ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾಪಟಿಯಲ್ಲಿ ಮೂವರು ಮಹಿಳೆಯರ ಮೇಲೆ ಪೋಲೀಸರು ಬಲೆಯನ್ನು ಬೀಸಿ ’ಪೆಪ್ಪರ್’ (ಮೆಣಸು ಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್‌ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾಕಾರರು ಆ ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ ನಂಬರ್‌ಗಳನ್ನೂ ಪ್ರಕಟಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!


ಅಕ್ಟೋಬರ್ ೧ರಂದು ಬ್ರೂಕ್‌ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು ೭೦೦ ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರು ’ಕೆಟ್ಲಿಂಗ್’ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾರ್ಜು, ಹಲ್ಲೆಗಳನ್ನು ಅಮೆರಿಕದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಮಾನವ ಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂದಂತೆ ವರ್ತಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. 


ಅಕ್ಟೋಬರ್ ೫ ರಂದು ನ್ಯೂಯಾರ್ಕ್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲು ಸುಮಾರು ೧೫,೦೦೦ ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.

೧೯೯೯ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯೂಟಿಓ ಸಮ್ಮೇಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿರ್ದಿಷ್ಟ ದಿನಗಳಂದು ನಡೆದ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು. 


ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆರಿಕದಂಥ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಈ ಕುರಿತು ಕೊಂಚ ತಲೆಕೆಡಿಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ ಎರಡನೆಯ ವಿಶ್ವ ಮಹಾಯುದ್ಧದ ನಂತರದಲ್ಲಿ ಅದರಲ್ಲೂ ಸೋವಿಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳುವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆರ್ಥಿಕತೆಯ ನೀತಿಗಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸುತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣಹೋಮ ನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಇಸ್ಲಾಂ ಭಯೋತ್ಪಾದನೆಗೆ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯುತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.

ಇಂತಿಪ್ಪ ಅಮೆರಿಕದ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಖಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿಸುವ ಅಗತ್ಯವಿದೆ. ಇದಕ್ಕಾಗಿ ಈ ಚಳವಳಿಗೆ ಕಾರಣವಾಗಿರುವ ಅಮೆರಿಕ ಆರ್ಥಿಕತೆಯನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕಾಗುತ್ತದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಮೆರಿಕ ಸರ್ಕಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲೊಂದಾದ ಎಸ್ & ಪಿ  ಎಎಎ ಯಿಂದ ಎಎ+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸರ್ಕಾರವು ಸಾಲ ಒಪ್ಪಂದ ಕಾಯ್ದೆಯನ್ನು ಜಾರಿ ಮಾಡಿತು. ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕವು ಸರ್ಕಾರದ ವೆಚ್ಚಗಳನ್ನು ೨ ರಿಂದ ೨.೪ ಲಕ್ಷ ಕೋಟಿ ಡಾಲರುಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. ೨೦೦೮ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್‌ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಸಬ್‌ಪ್ರೈಮ್ ಗೃಹಸಾಲ ಮಾರುಕಟ್ಟೆಯೊಳಗೆ ಕಾಲಿಟ್ಟಿದ್ದವು. ವಾಣಿಜ್ಯ ಬ್ಯಾಂಕುಗಳು ಅಗ್ಗದ ಬಡ್ಡಿ ದರದಲ್ಲಿ ನೀಡತೊಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತುಕಟ್ಟಲಾರದೆ ಜನರು ಡಿಫಾಲ್ಟರ್ ಆಗತೊಡಗಿದ್ದರೋ ಆಗ ಈ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿಟ್ಟದ್ದ ಆರ್ಥಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ ೨೦೦೭ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಈ ಸಬ್‌ಫ್ರೈಮ್ ಗೃಹಸಾಲದ ಒಟ್ಟು ಮೊತ್ತ ೭೦ ಲಕ್ಷ ಕೋಟಿ ರೂಗಳು! ಅದೇ ವರ್ಷ ೧೩ ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ  ಬೀದಿಗೆ ಬಿದ್ದವರ ಸಂಖ್ಯೆ ೪೫ ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇ. ೪೦ ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. ೧.೮೬ ಕೋಟಿ ಮನೆಗಳು ಹೀಗೆ ಧೂಳು ಹಿಡಿದು ಕೂತಿದ್ದವು. ಆದರೆ ಆ ಮನೆಗಳಲ್ಲಿರಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರುಗಳೊಳಗೆ, ರೈಲು ಬೋಗಿಗಳಲ್ಲಿ, ಪಾರ್ಕ್‌ಗಳಲ್ಲಿ ರಾತ್ರಿ ಕಳೆಯುವ ಪರಿಸ್ತಿತಿ ಬಂದೊದಗಿತ್ತು! 


ಮತ್ತೊಂದೆಡೆ ಲೀಮಾನ್ ಬ್ರದರ‍್ಸ್‌ನಂತಹ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕರಣ ಮಾಡಿ ಉಳಿಸಿಕೊಂಡಿತು. ಅಮೆರಿಕ ಸರ್ಕಾರ ಕೂಡಲೇ ಸುಮಾರು ೭೦೦ ಶತಕೋಟಿ ಡಾಲರುಗಳ ಬೇಲೌಟ್ ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತತ್ಕಾಲಿಕ ಸಾಲ ನೀಡುವ ಕಮರ್ಷಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದೇ ಇದಕ್ಕೆ ಕಾರಣವಾಗಿತ್ತು. ಆರ್ಥಿಕತೆಯ ಈ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕದಲ್ಲೇ ಕೆಲಸ ಕಳೆದುಕೊಂಡವರು ೧೨ ಲಕ್ಷಕ್ಕಿಂತ ಹೆಚ್ಚು ಮಂದಿ. ಈ ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.

೧೯೩೦ರಲ್ಲಾದಂತೆಯೇ ಮತ್ತೊಂದು ಆರ್ಥಿಕ ಮಹಾಕುಸಿತದ ಮುನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ಡಿಪ್ರೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂರ್ತಿ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆರ್ಥಿಕ ಕುಸಿತದ ಭಯ!

೨೦೦೮ರ ಈ ಕುಸಿತವಾದಾಗ ಅಮೆರಿಕ ಸರ್ಕಾರ ಹಾಗೂ ಅನೇಕ ಆರ್ಥಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಈ ಸಮಸ್ಯೆಯ ಕಾರಣವನ್ನು ಗುರಿತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಿಲ್ಲ.

ಇಷ್ಟಕ್ಕೆಲ್ಲ ಇದ್ದ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ನೈಜವಾದ ಆರ್ಥಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗವನ್ನು ಆಧರಿಸಿದ ಆರ್ಥಿಕತೆ) ವಿಮುಖಗೊಂಡು ಹಣಕಾಸು ಬಂಡವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದದ್ದು. ಕೊನೆಗೆ ಇಡೀ ಆರ್ಥಿಕತೆಯೇ ಸಾಲದ ವ್ಯಸನಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾರ (speculative Buisiness ದ ಪ್ರಾಬಲ್ಯ ತೀವ್ರಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು. ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಂಡರೆ ೧೯೫೪ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ ೧೫೩ರಷ್ಟಿದ್ದರೆ ೨೦೦೭ರಲ್ಲಿ ಶೇಕಡಾ ೩೭೩ರಷ್ಟಿತ್ತೆಂದರೆ ಸಾಲದ ಪಾತ್ರವನ್ನು ಊಹಿಸಬಹುದು. ಮಾತ್ರವಲ್ಲ ಅತ್ತ ನೈಜ ಆರ್ಥಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆರ್ಥಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಹಣದ ಮೇಲೆಯೇ ನಿಲ್ಲಿಸಿದ ಪರಿಣಾಮವಾಗಿ ಕಾರ್ಪೊರೇಷನ್‌ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಈ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿಕೊಂಡವು. ಅಮೇರಿಕಾದಲ್ಲಿ ೨೦೦೧ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇ೧ರಷ್ಟು ಹಣಕಾಸು ಬಂಡವಾಳವು ಕೆಳಹಂತದ ಶೇ. ೮೦ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. ೨೦೦೬ರಲ್ಲಿ ಅಮೆರಿಕಾದ ೬೦ ಅತ್ಯಂತ ಶ್ರೀಮಂತರ ಬಳಿ ೬೩೦ ಬಿಲಿಯ ಡಾಲರುಗಳಷ್ಟು ಮೊತ್ತದ ಸಂಪತ್ತು ಶೇಖರಣೆಗೊಂಡಿತ್ತು!. ಆರ್ಥಿಕತೆ ಎಂದರೇ ಹಣಕಾಸು ಆರ್ಥಿಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರೇ ಈ ಕಾರ್ಪೊರೇಟರ್‌ಗಳಾದರು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಗಳು ಕಾರ್ಪೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಾಗಿದ್ದವು. 


ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆರ್ಥಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ ೨೦೦೮ರಲ್ಲಿ ಸಿಕ್ಕಿತ್ತು. ಆದರೆ ತಾವು ಆರ್ಥಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.

೧೯೩೦ರ ದಶಕದಲ್ಲೇ ರಲ್ಲೇ ಪ್ರಸಿದ್ಧ ಅರ್ಥಶಾಸ್ತ್ರಜ್ಞ  ಕೀನ್ಸ್ ಹೀಗೆ ಆರ್ಥಿಕತೆಯನ್ನು ಹಣಕಾಸಿನ ನೀರುಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು ವಿವರಿಸಿದ್ದರು. ಕೀನ್ಸ್ ಕೂಡಾ ಬಂಡವಾಳಶಹಿ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇಕಶೀಲವಾದಂತಹ ಬಂಡವಾಳವಾದವನ್ನು. ಬದಲಾಗಿ ಇಂದಿರುವ ದುರಾಸೆಯ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. ೧೯೮೦ರ ದಶಕದಲ್ಲೇ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗತ್ತನ್ನು ಮತ್ತೊಂದು ಆರ್ಥಿಕ ಕುಸಿತಕ್ಕೆ ಕೊಂಡೊಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗುತ್ತಿದೆ.  


ಜಾಗತೀಕರಣ ಎಂದರೆ ಅಮೇರಿಕೀಕರಣ ಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯಂತಹವರ ಅಭಿಪ್ರಾಯ ಮುಖ್ಯವಾಗುವುದು ಈ ಕಾರಣದಿಂದಲೇ. 


ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಮೆರಿಕದ ಈ ಚಳವಳಿ ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳುವ ಕರೆನೀಡಿ ಹೊರಟಿರುವುದು ಇಡೀ ಜಗತ್ತಿನ ಪ್ರಜಾಪ್ರಭುತ್ವವಾದಿಗಳ ದೃಷ್ಟಿಯಿಂದ ಅತ್ಯಂತ ಸ್ವಾಗತಿಸಬೇಕಾದ ಬೆಳವಣಿಗೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿರುವ ಜಗತ್ತಿನ ಜನಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್‌ಸ್ಕಿ ಕೂಡಾ ಈ ಚಳವಳಿಯನ್ನು ಸ್ವಾಗತಿಸಿದ್ದಾರೆ. ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 


ಈ ಚಳವಳಿ ತನ್ನನ್ನು ತಾನು ’ನಾಯಕರಹಿತ’ ಎಂದು ಬಣ್ಣಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಇಲ್ಲದೇ ಪ್ರತಿಯೊಂದು ನಿರ್ಧಾರವನ್ನೂ ಸಾಮೂಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸರ್ಕಾರಕ್ಕೆ ಈ ಚಳವಳಿಯನ್ನು ಹತ್ತಿಕ್ಕಲು ಸುಲಭಸಾಧ್ಯವಾಗಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಆ ಸಿದ್ದಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಆ ಚಳವಳಿಗಿರುತ್ತದೆ. ಮಾತ್ರವಲ್ಲ ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎನ್ನುವುದೂ ಸಂಶಯಕ್ಕೆಡೆಮಾಡುತ್ತದೆ. ಮಾತ್ರವಲ್ಲ. ಇಲ್ಲಿ ಹಲವಾರು ಸಿದ್ದಾಂತಗಳ ಕಾಕ್‌ಟೇಲ್. ಇಲ್ಲಿ ಕೂಡಾ ನೀತಿ ನಿರೂಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವ ಸಾಧ್ಯತೆಯೂ ಇರುತ್ತದೆ. 


ಅಮೆರಿಕಕ್ಕೆ ಚಳವಳಿಗಳನ್ನು ಎಲ್ಲಾ ರೀತಿಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕಕ್ಕೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸರ್ಕಾರ ಹತ್ತಿಕ್ಕಬಹುದು. ಈಗ ಅಮೆರಿಕದಲ್ಲಿ ಮತ್ತೊಂದು ತಿಯನನ್‌ಮನ್ ಚೌಕ ಮರುಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆಸುವುದೇನೂ ಸುಲಭಸಾಧ್ಯವಲ್ಲ ಬಿಡಿ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸರ್ವಾಧಿಕಾರಗಳೂ ಮಂಡಿಯೂರಿರುವುದೂ ಇತಿಹಾಸವೇ ಎಲ್ಲವೇ?  


ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸರ್ಕಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಆ ಎಲ್ಲಾ ಸರ್ಕಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸರ್ಕಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಚಿಂತನೆ ನಡೆಸುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. 



-ಹರ್ಷ ಕುಮಾರ್ ಕುಗ್ವೆ

23 comments:

  1. Very informative.ಅದ್ಭುತ ಲೇಖನ.ಲೇಖಕರು ಹೇಳಿದಂತೆ,"Occupy Wall street" ಗೆ ಯಾವ ಮಾಧ್ಯಮವೂ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿಲ್ಲ.ಇದಕ್ಕೆ ಅವರವರ ವೈಯಕ್ತಿಕ ಹಿತಾಸಕ್ತಿಯೂ ಕಾರಣವಿರಬಹುದು.ಏನೇ ಆದರೂ,
    ಈ ಪೇಪರ್ ಟ್ರೇಡಿಂಗ್ ನಿಂದಾಗಿ ಆಯಾ ದೇಶದ ಆರ್ಥಿಕ ವ್ಯವಸ್ಥೆಯೇ ನಿಲ್ಲುವಂತಾಗಿರುವದು ಪ್ರಸ್ತುತ ವ್ಯಂಗ್ಯಗಳಲ್ಲೊಂದು.
    ನಮ್ಮಲ್ಲಿನ ವ್ಯವಸ್ಥೆಯನ್ನೇ ನೋಡಿ:ಪ್ರಧಾನಿ ಅಥವಾ ಆಯಾ ಇಲಾಖೆಗೆ ಸಂಬಂಧಿಸಿದಂತಹ ಮಂತ್ರಿ ನೀಡುವ ಹೇಳಿಕೆಯ ಮೇಲೆ ಕೂಡ ನಮ್ಮ ಸೆನ್ಸೆಕ್ಸ್ ಓಲಾಡತೊಡಗುತ್ತದೆ.ಅವರ ಒಂದೇ ಒಂದು ಸ್ಟೇಟ್ ಮೆಂಟ್ ಮೇಲೆ ಆಯಾ ವರ್ಗದ ಶೇರು ಮೇಲೆ ಕೆಳಗೆ ಹರಿದಾಡುತ್ತದೆ.ಇದೊಂದು ಬರೀ ಜೂಜಾಟವಲ್ಲ; sophisticated gambling!
    -Raghavendra Joshi

    ReplyDelete
  2. ಹ್ಮ್.. ಈ ಬೇಡಿಕೆಗಳನ್ನು ನೋಡಿದರೆ ಕಮ್ಯುನಿಸಂ ಅಮೆರಿಕದಲ್ಲೂ ತಲೆ ಎತ್ತುತ್ತಿರುವಂತಿದೆ. ಸಾಲ ಮನ್ನಾ, ಬಿಟ್ಟಿ ಸೌಲಭ್ಯಗಳು... ಕೊನೆಗೆ ಬಡತನದ ತಾಂಡವ. ಜನರನ್ನು ಸೋಂಬೇರಿಗಳನ್ನಾಗಿ ಮಾಡಿ, ಬಡತನ ಮತ್ತು ಕೊಳಕನ್ನು ಹೆಚ್ಚಿಸುವುದೇ ಕಮ್ಯುನಿಸಂ..

    ReplyDelete
  3. Very good story
    -Veerannarayana2@gmail.com

    ReplyDelete
  4. ಉತ್ತಮ ಲೇಖನ ,ತಾನೇ ಶ್ರೀಮಂತ ಎಂದು ಬೀಗುವ ಅಮೇರಿಕದಲ್ಲಿ ಇಂತಹ ಬಂಡಾಯಗಳು ಅಗತ್ಯವಾದದ್ದು.....ಇಂತಹ ಮಹತ್ವದ ವಿಷಯಗಳನ್ನು ಪ್ರಸಾರ ಮಾಡಲು, ಪ್ರಕಟಿಸಲು ನಮ್ಮ ಮಾಧ್ಯಮಗಳಿಗೆ ಎಲ್ಲಿದೆ ಪರುಸೋತ್ತು ಸ್ವಾಮಿ,ಅವುಗಳು ಏನಿದರೂ ನಮ್ಮ ಸೆಲೆಬ್ರಿಟಿಗಳ ಸಂಸಾರದ ಗುಟ್ಟು ರಟ್ಟು ಮಾಡುವುದರಲ್ಲಿ.....ಪ್ರತಿಯೊಂದಕ್ಕು ಬೊಗಳೆ ಜ್ಯೋತಿಷಿಗಳ ಜೊತೆಯಲ್ಲಿನ ಮಾತುಕತೆಯಲ್ಲೇ ಬ್ಯುಸಿ.....ಜನಸಾಮನ್ಯರನ್ನು ರೋಚಕ ಸುದ್ದಿಗಳಿಂದಲೇ ತಲುಪುತ್ತೇವೆ ಎನ್ನುವ ತಪ್ಪು ಕಲ್ಪನೆ ಮತ್ತು ನಾವು ನೀಡಿದ್ದೆ ಸರಿ ಎನ್ನುವ ಗುಂಗಿನಲ್ಲಿ ಇಂತಹ ಮಹತ್ವಪೂರ್ಣ ಸುದ್ದಿಗಳು ಜನರನ್ನು ತಲುಪುತ್ತಿಲ್ಲ.....ಜಾಗತೀಕರಣವೆಂದರೆ ಅಮೇರಿಕರಣ ಎನ್ನುವ ಪದ ಬಳಕೆ ತುಂಬ ಸಮಂಜಸವಾಗಿದೆ.
    ಭಾರತದಲ್ಲಿ ಬಡತನವನ್ನು ಹೆಚ್ಚುಮಾಡುತ್ತಿರುವ ತಮ್ಮ ಜೋಳಿಗೆ ತುಂಬಿಸುವುದರಲ್ಲಿ, ಮಳಿಗೆ ಕಟ್ಟುವುದರಲ್ಲೇ ನಿರತರಾಗಿರುವ ,ನಿಷ್ಣತರಾಗಿರುವ ನಮ್ಮ ರಾಜಕಾರಣಿಗಳು, ಎಲ್ಲವು ತಮ್ಮದೇ ಎಂದು ದೋಚುವ ಶ್ರೀಮಂತರುಗಳ ವಿರುದ್ದ ಸರಿಯಾದ ರೀತಿಯಲ್ಲಿ ಬಂಡಾಯ ನಮ್ಮಲ್ಲಿ ಏಕೆ ಆಗುತ್ತಿಲ ?್ಲ....ಒಬ್ಬ ಆರೋಪಿ ಕಾನೂನು ಪ್ರಕಾರ ಜೈಲು ಸೇರಿದಾಗ ಬೇಕಾಬಿಟ್ಟಿ ಪ್ರತಿಭಟಿಸುವ ನಮ್ಮ ಜನರು ಬಡವರ ದುಡ್ಡಿನಲ್ಲೇ ದೊಡ್ಡ ಜನರಾಗುತ್ತಿರುವವರನ್ನು ವಿರೋದಿಸುತ್ತಿಲ್ಲ ಏಕೆ? ಒಂದು ವೇಳೆ ಅಂತಹ ವಿಷಯಗಳನ್ನು ಪ್ರತಿಭಟಿಸಿದರೂ ಕಡೆಗೆ ರಾಜಕೀಯ ಹಸ್ತಕ್ಷೇಪದಲ್ಲಿ ಮುಚ್ಚಿ ಹೋಗುತ್ತಿರುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳನ್ನು ಜನರಲ್ಲಿ ಹುಟ್ಟು ಹಾಕಿ ಜನರ ಜೊತೆ ತಾವು ಉತ್ತರ ಕಂಡುಕೊಳ್ಳುವಲ್ಲಿ ನಮ್ಮ ಮಾಧ್ಯಮಗಳಿಗೆ ಸಾಧ್ಯವಾಗದಿರುವುದು ದುರದೃಷ್ಟಕರವಾದದ್ದು.
    ಯಶೋಧರ.ವಿ.ಬಂಗೇರ ಮೂಡುಬಿದಿರೆ

    ReplyDelete
  5. ಸೆಪ್ಟೆಂಬರ್ ೧೭ ರಂದು ಆರಂಭವಾದ ಇಂಥ ಒಂದು ಚಳುವಳಿಯ ಬಗ್ಗೆ ಇಂದಿನ "ಗ್ಲೋಬಲ್ ವಿಲೇಜ್ " ದಿನಗಳಲ್ಲಿ ಇಷ್ಟು ದಿನಗಳು ಕಳೆದ ಮೇಲೂ ನಮಗೆ ಒಂದು ಸಣ್ಣ ಸುಳಿವೂ ನಮ್ಮ ಮಾಧ್ಯಮಗಳಿಂದ ದೊರಕಿಲ್ಲ. ಎಂಥ ವಿಪರ್ಯಾಸವಿದು. ನಮ್ಮ ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. -ಆನಂದ ಪ್ರಸಾದ್

    ReplyDelete
  6. very nice article
    To Mr. Kugve...please write this type of articles..
    let us stop thinking who made money/ site

    ReplyDelete
  7. ಮಾಹಿತಿಪೂರ್ಣ ಲೇಖನ.
    ಅಂತೂ ಜಗತ್ತಿನ ದೊಡ್ಡಣ್ಣನಿಗೆ ಆಳದಲ್ಲೊಂದು ಅಂತಃಸಾಕ್ಷಿ ಎಂಬುದೊಂದಿದೆ ಎಂಬುದು ಈ ಚಳುವಳಿಯ ಮೂಲಕ ಜಾಹೀರಾಗಿದೆ!! ಇದು ಪ್ರಭಾವಶಾಲಿಯಾಗಿ ಗುರಿಮುಟ್ಟಲಿ, ಧನಾತ್ಮಕವಾದ ಬದಲಾವಣೆಗಳಿಗೆ ನಾಂದಿಹಾಡಲಿ.
    ಮಾಹಿತಿಗಾಗಿ ಧನ್ಯವಾದ.
    - ಚರಿತಾ

    ReplyDelete
  8. Many people might have heard about "American Dream". America has given shelter to so many people, Country is formed by people outside. If you work hard you can achieve anything here. Looks like people who are protesting are having communist agenda. I see here many blacks don't want to work but they are ready to kill people for a dollar to fulfill their drug addiction.Please don't compare America with India or other countries. I agree they attack other countries but if you see they are the first to help when country faces disaster (could be natural or man made). I live here I know how much they have struggled to build the nation, In a year hardly 3 months will have good weather other wise it is extreme hot or cold. even being so rich if you don't work you don't get food. Not like India having communist/socialist agenda to distribute free rice and make people lazy

    ~Sri
    NJ, US

    ReplyDelete
  9. Thanks for Harsha kugve and for sampadakiya. really informative piece of article. our so called kannada news channels are not at all aware of these developments!!. if they are aware of this they would have shown this for all 24 hrs..! sorry to say that They are not journalists..and I donot know what they are..! as sampadakiya said earlier..Khaali taleya niroopakaru..

    ReplyDelete
  10. ಮಾಹಿತಿಪೂರ್ಣ ಲೇಖನ.
    ಅಂತೂ ಜಗತ್ತಿನ ದೊಡ್ಡಣನ ಒಳಗೆಲ್ಲೋ ಅವಿತಿದ್ದ ಅಂತಃಸಾಕ್ಷಿ ಎಂಬುದು ಈ ಚಳುವಳಿಗಳ ಮೂಲಕ ಮಾತಾಡುತ್ತಿದೆ! ಒಳ್ಳೆಯ ಬೆಳವಣಿಗೆ. ಇದು ಸಮರ್ಪಕವಾಗಿ, ಧನಾತ್ಮಕವಾಗಿ ಗುರಿಮುಟ್ಟಲಿ ಎಂದು ಆಶಿಸೋಣ.
    ಮಾಹಿತಿಗಾಗಿ ಧನ್ಯವಾದ.
    - ಚರಿತಾ

    ReplyDelete
  11. ಹರ್ಷ ಅವರೇ.. ತುಂಬಾ ಒಳ್ಳೆಯ ಲೇಖನ... ಇನ್ನೂ ಮುಂದಾದ್ರೂ.. ಈ ಅಮೇರಿಕದ ದುಡ್ಡಿನ ದರ್ಪದ ಕರಾಳ ಮುಖ... ಬಯಲಾಗಲಿ.. ಎನ್ನುವ ಯೋಚನೆ....

    ಒಂದು ರೇಫೇರ್ನ್ಸೆ... ಈ ವಿಷಯ್ಡ ಬಗ್ಗೆ...

    http://en.wikipedia.org/wiki/Confessions_of_an_Economic_Hit_Man



    ಇದೆ ರೀತಿ.. ಭಾರತದಲ್ಲಿ ಆಗುತ್ತಿರುವ ಚಳುವಳಿ ಗಳ ಬಗ್ಗೆ.. ಈ ತರದ ವಸ್ತುನಿಷ್ಟ ವಿಮರ್ಶೆ.. ಬರಹಗಳ.. ಅವಶ್ೈಕತೆ.. ಇದೆ

    ಧನ್ಯವಾದಗಳು

    ReplyDelete
  12. ಅವಿನಾಶ ಕನ್ನಮ್ಮನವರOctober 10, 2011 at 2:40 PM

    ಪೂರಕ : ಅಮೆರಿಕೆಯ ಸ್ವಾಸ್ಥ್ಯ ಕಾಪಾಡಲು ಯಾವಾಗಲು ಹೋರಾಡುವ "ಮೈಕಲ್ ಮೂರ್"(http://www.michaelmoore.com/) ಎನ್ನುವ ಪತ್ರಕರ್ತ ತಯಾರಿಸಿದ "Capitalism : A Love Story" Documentary ನೋಡಿಬಿಡಿ.
    http://www.imdb.com/title/tt1232207/

    ReplyDelete
  13. This is a meaningless movement. Will end up nowhere & has no ideology or alternative solution. Whatever the demands the Americans asking now (through this movement) are already in place in India, like free education, loan waiver etc. etc. But what did India achieve in its 60+ years of independence? The writers like Kugwe (or his role models like Ananthamurthy) will always celebrate any such so called anti-USA happenings because of their preconceived notion towards that country. I am neither a supporter of USA nor reckless capitalism. But hadn't USA took the role of leader (by default or forcibly) many things in this world would have gone terribly wrong (especially the fight against terrorism). Its crystal clear that the high rate of militant insurgency in J&K (during 90s & early 2K) got reduced considerably only after USA involved in fight against those terrorists in Pak & Afghanistan.

    ReplyDelete
  14. ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ...... ??

    What do you mean?? ???????

    ReplyDelete
  15. Truth will come out one day or the other. Any amount of suppression of facts by the media will not and cannot stop truth coming out.Finally what matters is life of ordinary people who are in majority in every country. US can not be an exception. Cursory glance of World history tells us that Rich nations have been and are looting the developing, under developed and least developed countries. US is the leader of such Rich countries. How long the oppressed can tolerate such onslought. They will retaliate. They are at it now. That is the whole story narrated by Harshakumar Kugve. Congratulations and thanks geleya.

    ReplyDelete
  16. Elladakku ondu antya irutte, prakruthi niyamane adu...... prapanchakke doddannagi mereda deshadalle nirudyoghada.... bandavalashahiyannu prapanchada tumba harada horata deshadalle bhari arthika hinjarita-Enta viparyasa alwa? adakke kaviyobbaru heliddu"NA MELINAVANU BALU DODDAVANU ENDU MEREDADA BEDA GELEYA, NINAGINTHA MIGILAVARU IDDARU BHUVIYALLI, NE HUCHCHU BHRAMEYALI MULUGABEDA" anta. Bandavalashahi Sarvadhukari deshada indina stithi bhandavalashahigalige ratnagambali hasuttiruva namma deshada, rajyada adalithagararige patavagabeku.....Harshakumar, upayuktha lekhana
    nididakke dhanyavada,

    ReplyDelete
  17. ಅಮೇರಿಕ ದಲ್ಲಿ ಆದ್ರೆ .. ಆಶಾ ಭಾವನೆ.. ಭಾರತ್ ದಲ್ಲ ಆದ್ರೆ... ಹತಾಶೆ ಭ್ರಮೆ. ಮದ್ಯಮ್ ವರ್ಗದ ಜಿಗುಪ್ಸೆ.. ... ದವಡೆ ಮೂಲ...

    ಬ್ಪಪ್ಪರೆ ... ಹೌದ್ ಹೌದ್ ಅಂದೇಪಾ

    ReplyDelete
  18. @ ravindra: ರವೀಂದ್ರ ಅವರೇ, ಕಮ್ಯುನಿಸಮ್ಮನ್ನು ತೆಗಳುವ ಮುನ್ನ ನೀವು ಈ ದರಿದ್ರ ತಿರುಚಲಾದ ಜಾಗತೀಕರಣದಿಂದ ಯಾವ ಯಾವ ಬಡವರ ಅನ್ನ ಕಿತ್ತುಕೊಂಡಿದ್ದೀರಿ ಅಂತ ಯೋಚನೆ ಮಾಡಿ.... ನಿಮ್ಮ ಕಾಮೆಂಟ್ ನೋಡಿದರೆ ಈ ಜಾಗತೀಕರಣದ ಫಲವನ್ನು ಚೆನ್ನಾಗಿಯೇ ಉಣ್ಣುತ್ತಿರುವ ಹಾಗೆ ಕಾಣುತ್ತಿದೆ... ಬಂಡವಾಳಶಾಹಿ ವ್ಯವಸ್ಥೆಯ ಕರಾಳ ಅಧ್ಯಾಯ ಕೊನೆಗಾಣಬೇಕಿದೆ... ಪ್ರತಿಭೆ ಅನ್ನೋ ಹೆಸರಲ್ಲಿ ಯಾವುದೋ ಒಂದು ವರ್ಗದ ಉದ್ಧಾರ ನಡೆಯುತ್ತಿದೆ... ಜನರಲ್ಲಿ ಅಸಹ್ಯ ಕೊಳ್ಳುಬಾಕ ಧೋರಣೆ ಜಾಸ್ತಿ ಮಾಡುತ್ತಿದೆ.... ...

    ReplyDelete
  19. ಡಿಯರ್ 'ಅನಾನಿಮಸ್' ಅವರೇ, ನೀವು ಹೇಳಿದಂತೆ ಈ ಚಳವಳಿಗೆ ಎಲ್ಲಿಗೆ ತಲುಪುತ್ತದೆ ಎನ್ನುವುದು ಗೊತ್ತಿಲ್ಲ. ಸ್ಪಷ್ಟ ಸಿದ್ದಾಂತವೂ ಇಲ್ಲ. ಅಥವಾ ಈಗಿರುವ ಸಮಸ್ಯೆಗೆ ಸರಿಯಾದ ಪರ್ಯಾಯವನ್ನೂ ಇದು ಮುಂದಿಟ್ಟಿಲ್ಲ. ಆದರೆ ಒಮ್ಮೆ ಯೋಚಿಸೋಣ. ಅವನ್ನೆಲ್ಲಾ ಇಟ್ಟುಕೊಂಡೇ ಹೋಗುವುದು ಇವತ್ತಿನ ಯಾವ ಚಳವಳಿಗೂ ಪೂರ್ವಶರತ್ತಾಗಿರಲು ಸಾಧ್ಯವಾ? ಚಳವಳಿಯ ಹಂತದಲ್ಲೇ ಅವೆಲ್ಲಾ ತೀರ್ಮಾನ ಆಗಬಾರದು ಅಂತೇನೂ ಇಲ್ಲವಲ್ಲ. ಆದರೆ ನಾವು ನೋಡಬೇಕಿರುವುದು ಇಂತಹ ಪರಿಸ್ಥಿತಿ ಯಾಕೆ ಅಲ್ಲಿ ಬಂತು ಎನ್ನುವುದು. ನೀವು reckless capitalism ಒಪ್ಪುವುದಿಲ್ಲ ಎಂದಿದೀರಿ. ಆದರೆ ಇವತ್ತು ಕ್ಯಾಪಿಟಲಿಸಮ್ಮು ಇರುವುದೇ ಆ ಸ್ವರೂಪದಲ್ಲಿ ಸಾರ್. ಹಾಗಾದರೆ ಅದಕ್ಕೆ ಪರ್ಯಾಯ ಏನು ಎಂದು ನೀವು ಹೇಳಿ ನೋಡೋಣ.
    ಅಮೆರಿಕದ ಕುರಿತು ನಿಮಗೆ ನನ್ನ ಅಥವಾ ಅನಂತಮೂರ್ತಿಯವರ ಅಭಿಪ್ರಾಯ ಪೂರ್ವಾಗ್ರಹಪೀಡಿತವಾಗಿ ಕಾಣುತ್ತಿರಬಹುದು. ಆದರೆ ಇನ್ನೂ ಕೆಲವರ ಹೆಸರು ಹೇಳುತ್ತೇನೆ. ದಯಮಾಡಿ ಅವರ ಅಭಿಪ್ರಾಯಗಳೂ preconceived ಹೌದಾ ಎಂದು ತಿಳಿಸಿ. ಉದಾಹರಣೆಗೆ, ಅಮೆರಿಕದ ಸಿಐಎಯಲ್ಲಿ ಹಿಟ್ ಮ್ಯಾನ್ ಆಗಿ ಲ್ಯಾಟಿನ್ ಅಮೆರಿಕಾದಲ್ಲೆಲ್ಲಾ ಕೆಲಸ ಮಾಡಿ ಕೊನೆಗೆ 'ಪಾಪನಿವೇದನೆ' ಮಾಡಿಕೊಂಡ ಜಾನ್ ಪರ್ಕಿನ್ಸ್, ಅಮೆರಿಕದ ಪ್ರಭುತ್ತ್ವದ ದುಷ್ಟತನಗಳ ವಿರುದ್ಧ ಅಮೆರಿಕನ್ನರನ್ನೂ, ಜಗತ್ತಿನ ಜನರನ್ನೂ ನಿರಂತರವಾಗಿ ಎಚ್ಚರಿಸುತ್ತಿರುವ ಭಾಷಾತಜ್ಞ ಮತ್ತು ಮೇಧಾವಿ ನೋಮ್ ಚಾಮ್ಸ್ಕಿ, A People's History of the United States ಕೃತಿ ಬರೆದ, ಇತ್ತೀಚೆಗೆ ನಿಧನರಾದ ಅಮೆರಿಕನ್ ಚರಿತ್ರ್ಡಕಾರ ಹೋವಾರ್ಡ್ ಜಿನ್, ಈ ಎಲ್ಲಾ ಅಮೆರಿಕ್ಕನರ ಅಮೆರಿಕದ ಬಗೆಗಿನ ಅಭಿಪ್ರಾಯಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಬಹುದಾ?
    ಭಯೋತ್ಪಾದನೆಯ ವಿರುದ್ಧ ಅಮೆರಿಕ ಹೋರಾಟದ ನಾಯಕತ್ವ ವಹಿಸಿಕೊಂಡಿದೆ ಎಂದಿರಲ್ಲ ಅಮೆರಿಕದ ಪೆಂಟಗನ್ ಹಾಗೂ ಸಿಐಎ ಇಡೀ ಜಗತ್ತಿನಲ್ಲಿ ನಡೆಸಿರುವ, ನಡೆಸುತ್ತಿರುವ 'ಭಯೋತ್ಪಾದನೆ' ಬಗ್ಗೆ ಏನು ಹೇಳ್ತೀರಿ? ಅಷ್ಟಕ್ಕೂ ತಾಲಿಬಾನನ್ನು ಸೋವಿಯತ್ ರಷ್ಯಾ ವಿರುದ್ಧ ೆತ್ತಿ ಕಟ್ಟುವ ಸಲುವಾಗಿ ಬೆಳೆಸಿದ್ದು, ಅದಕ್ಕೆ ಬಯೋವೆಪನ್ಸ್ ತಂತ್ರಜ್ಞಾನ ಧಾರೆ ಎರೆದಿದ್ದು ಅಮೆರಿಕವೇ ಅಲ್ಲವೆ? ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಮಾಡಿರುವುದಾದರೂ ಏನು ಹೇಳಿ? ಅಮೆರಿಕದ ಪ್ರಭುತ್ವದ ಆರ್ಥಿಕ, ಯುದ್ಧದಾಹಿ, ತೈಲದಾಹಿ ನೀತಿಗಳ ಬಗ್ಗೆ ಅಮೆರಿಕನ್ನರಿಗೇ ಭ್ರಮನಿರಸನವಾಗಿ ಅವರು ಬೀದಿಗೆ ಇಳಿದಿದ್ದರೂ ಭಾರತೀಯರು ಮಾತ್ರ ಅಮೆರಿಕ ತೋರಿಸಿದ ಚಂದ್ರನನ್ನು ನೋಡ್ತಾ ಭ್ರಮೆಯಲ್ಲೇ ಇರುವುದು ಎಂತಹ ದುರಂತ ಅಲ್ವಾ? ಈಗ ಶುರುವಾಗಿರೋ ಚಳವಳಿ ಏನು ಮಾಡುತ್ತೋ ಬಿಡುತ್ತೋ ಆದರೆ ಅದು ಸರಿಯಾದ ಟಾರ್ಗೆಟ್ ಕಡೆ ಗುರಿ ಇಟ್ಟಿರೋದು ಮಾತ್ರ ನಿಜ. ಇದು ಈಗ ಅಮೆರಿಕದ ಗಡಿಯನ್ನೂ ದಾಟಿ ಹಲವಾರು ದೇಶಗಳಲ್ಲಿಯೂ ಪ್ರತಿಧ್ವನಿಸುತ್ತಿರುವುದನ್ನೂ ನೋಡುತ್ತಿದೀರಿ. ನೀವೇ ಹೇಳಿದಂತೆ reckless ಕ್ಯಾಪಿಟಲಿಸಂ ತಂದಿಟ್ಟ ಪರಿಸ್ತಿತಿ ಇದು. ಜನರಿಗೆ ಬೇರೆ ದಾರಿ ಇಲ್ಲ. ಇಂದಿನ ಅಗಾಧ ತಂತ್ರಜ್ಞಾನ ಕೆಲವೆ monopolist corporationಗಳ ತಿಜೋರಿ ತುಂಬಿಸಿ, ಜನರ ನಿರುದ್ಯೋಗ ಹೆಚ್ಚಿಸುವ ಬದಲಿಗೆ ಸರ್ವಜನರ ಜೀವನ ಮಟ್ಟ ಸುಧಾರಿಸಲು ಬಳಕೆಯಾಗುವಂತಹ, ಪ್ರಪಂಚದ ಎಲ್ಲಾ ಸಂಪತ್ತಿನ ಮೇಲೆ ಪ್ರಜೆಗಳೇ ನಿಯಂತ್ರಣ ಹೊಂದಿರುವ, ನಿಜವಾದ ಪ್ರಜಾಪ್ರಭುತ್ವ ಎನ್ನುವುದು ಪ್ರಪಂಚದಲ್ಲಿ ಇನ್ನೂ ನನಸಾಗಬೇಕಾದ ಒಂದು ಕನಸೇ ಆಗಿ ಉಳಿದಿರುವ ಸತ್ಯಕ್ಕೆ ಯಾರೂ ಕುರುಡಾಗಿರಬೇಕಿಲ್ಲ. ಈ ನಿಟ್ಟಿನಲ್ಲಿ ನಾವು ನಂಬಿ ಕೂತಿರುವ ಆರ್ಥೀಕ, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಜಗತ್ತು ಮರುಚಿಂತಿಸಲು ಈ ಸಂದರ್ಭ ಪ್ರೇರೇಪಿಸಲಿ. ಅಲ್ಲವೇ?
    -ಹರ್ಷ ಕುಗ್ವೆ

    ReplyDelete
  20. Dear Harsha... I completely agree with your views. I am also not supporting the 'greed' of America as explained by you. My point here is about the sustainability, growth & maturity of the economy of a nation. In my opinion the 'communistic' kind of ideologies proposed through this movement will not help the economy of any nation in long run. Its well proved in all erstwhile communist countries & will going to happen in China very soon. Just take the example of a tea vendor who runs a small tea shop & definitely he can not run it without profits. And tomorrow if be becomes the owner of a large chain of five star hotels, do you call him a hard worker or a 'greedy' person who looted people to make his fortunes? Its again one's own perception. In my opinion the person who calls him a greedy is only a looser in life who don't have any self ability rather gets self satisfaction by criticizing others. For India, the current need is not 'anti wall street' or 'anti Dalal Street' movement but anti Corruption & anti terrorism movement. Apart from this economic view I agree with your other points on America.

    ReplyDelete
  21. ಆತ್ಮೀಯರೆ, ಈ ಚಳವಳಿ ಕಮ್ಯೂನಿಸಂ ತರಲು ಹೊರಟಿದೆ ಎನ್ನುವುದು ವಾಸ್ತವವಲ್ಲ. ಿದನ್ನು ನಡೆಸುತ್ತಿರುವುದೂ ಕಮ್ಯುನಿಸ್ಟರಲ್ಲ. ನೀವು ಹೇಳಿದಂತೆ ಒಂದು ದೇಶದ ಆರ್ಥಿಕತೆಯ ಸುಸ್ಥಿರತೆ ಮತ್ತು ಬೆಳವಣಿಗೆಗಳು ಇಂದು ಸಾಧ್ಯವಾಗದ ಕಾರಣಕ್ಕೇ ಈ ಚಳವಳಿ ಶುರುವಾಗಿದೆ ಎಂದು ನನ್ನ ಭಾವನೆ. ಇನ್ನು ಕಮ್ಯುನಿಸಂ ಬಗ್ಗೆ ಅದರ ರಷ್ಯಾ, ಚೀನಾ ಎಪಿಸೋಡ್ ಗಳ ಬಗ್ಗೆ ಸರಿಯಾದ ಚರ್ಚೆಗಳೇ ಎಲ್ಲೂ ಆಗಿಲ್ಲ ಎನ್ನುವುದು ನನ್ನ ಭಾವನೆ. ಇಲ್ಲಿ ಒಂದೋ ಆ ದೇಶಗಳ ಬಗ್ಗೆ ಅಮೆರಿಕ ೆನೇನು ಹೇಳಿದೆಯೋ ಆ ಒಂದು version ನ್ನೇ ನಾವು ನಂಬಿಕೊಂಡಿದ್ದೇವೆ. ಇಲ್ಲವೆ ತಾವು ನಡೆಸಿರುವುದೆಲ್ಲವೂ ಸರಿ ಎಂದು ಹೇಳುವ ಕಮ್ಯೂನಿಷ್ಟರ ಮತ್ತೊಂದು version ಇದೆ. ಆದರೆ ಸತ್ಯ ಿವೆರಡರ ಮಧ್ಯೆ ಎಲ್ಲೋ ಇರಬಹುದು ಎಂದು ನನ್ನ ಅನಿಸಿಕೆ. ನೀವು ನಮಗೆ ಬೇಕಿರುವುದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು 'anti wall street' or 'anti Dalal Street' ಅಲ್ಲ ಎಂದಿದ್ದೀರಿ. /ಅದರೆ ಇಂದು ನಾವು ಕಾಣುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೀಜಗಳನ್ನು ಬಿತ್ತಿದ್ದೇ ಈ ವಾಲ್ ಸ್ಟ್ರೀಟ್ ಮತ್ತು ದಲಾಲ್ ಸ್ಟ್ರೀಟ್ ಗಳು ಎಂಬ ವಿಷಯವನ್ನು ನಾವು ಎಲ್ಲಿಯವರೆಗೆ ಕಾಣಲಾರೆವೋ ಅಲ್ಲಿಯವರೆಗೆ ಭ್ರಷ್ಟಾಛಾರದ ವಿರುದ್ಧ ಹೋರಾಟ ಅಪೂರ್ಣವಾಗಿಯೇ ಇರುತತದೆ. ವಾಸ್ತವದಲ್ಲಿ ಇದನ್ನನು ಗುರುತಿಸದಿರುವುದು ನಮ್ಮ ಅಣ್ಣಾ ಹಜಾರೆ ಹೋರಾಟದ ಮಿತಿ. ಇದನ್ನು ಗ್ರಹಿಸದಿದ್ದರೆ ಎಷ್ಟೇ ಜನಲೋಕಪಾಲಗಳು ಜಾರಿಯಾದರೂ ಭ್ಷಷ್ಟಾಚಾರ ನಿಯಂತ್ರಣ ಅಸಾಧ್ಯ. ಉಳಿದಂತೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete