Tuesday, October 11, 2011

ಐಆರ್‌ಎಸ್ ಸರ್ವೆ ಬೆಂಗಳೂರು: ಕನ್ನಡ ಪತ್ರಿಕೆಗಳಲ್ಲಿ ತಳಮಳ ಶುರು....

೨೦೧೧ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಕನ್ನಡ ಪತ್ರಿಕೆಗಳಿಗೆ ತಳಮಳ ತರುವ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು ನಗರದಮಟ್ಟಿನ ಫಲಿತಾಂಶಗಳು ಹೀಗಿವೆ. ವಿಜಯ ಕರ್ನಾಟಕ ಎಂದಿನಂತೆ ತನ್ನ ನಂ.೧ ಸ್ಥಾನ ಉಳಿಸಿಕೊಂಡಿದೆ. ಆದರೆ ಈ ತ್ರೈಮಾಸಿಕದಲ್ಲಿ ಯಾವುದೇ ಪ್ರಗತಿ ಸಾಧಿಸಲು ಪತ್ರಿಕೆಗೆ ಸಾಧ್ಯವಾಗಿಲ್ಲ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಎರಡು ಸಾವಿರ ಓದುಗರನ್ನು ವಿಜಯ ಕರ್ನಾಟಕ ಕಳೆದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ೭.೧೯ ಲಕ್ಷವಾಗಿದ್ದರೆ ಈ ತ್ರೈಮಾಸಿಕದಲ್ಲಿ ಅಲ್ಪ ಹಿನ್ನಡೆ ಅನುಭವಿಸಿ ೭.೧೭ ಲಕ್ಷಕ್ಕೆ ಇಳಿದಿದೆ. ಆದರೆ ವಿಜಯ ಕರ್ನಾಟಕ ಕಳೆದ ಒಂದು ವರ್ಷದಲ್ಲಿ ಒಟ್ಟಾರೆ ಶೇ.೬.೯ರಷ್ಟು ಬೆಳವಣಿಗೆ ಕಂಡಿರುವುದು ಆ ಪತ್ರಿಕೆಯ ವ್ಯವಸ್ಥಾಪಕ ಮಂಡಳಿಗೆ ಆಶಾದಾಯಕವಾಗಿ ಕಾಣಬಹುದು. ಕಳೆದ ವರ್ಷದ ತ್ರೈಮಾಸಿಕ ವರದಿಯಲ್ಲಿ ವಿಜಯ ಕರ್ನಾಟಕದ ಓದುಗರ ಸಂಖ್ಯೆ ೬.೭೧ ಲಕ್ಷ ಮಾತ್ರ ಇತ್ತು. ಅದೀಗ ೭.೧೭ ಲಕ್ಷಕ್ಕೆ ತಲುಪಿದೆ.

ಎರಡನೇ ಸ್ಥಾನವನ್ನು ಪ್ರಜಾವಾಣಿ ಕಾಪಾಡಿಕೊಂಡಿದೆ. ಈ ತ್ರೈಮಾಸಿಕ ಪ್ರಜಾವಾಣಿಗೆ ಅಷ್ಟೇನು ಲಾಭದಾಯಕವಾಗಿಲ್ಲ. ಅದರ ಅಂದಾಜು ಓದುಗರ ಸಂಖ್ಯೆ ೧೧,೦೦೦ದಷ್ಟು ಕುಸಿದಿದೆ. ಈ ತ್ರೈಮಾಸಿಕ ವರದಿಯ ಪ್ರಕಾರ ಪ್ರಜಾವಾಣಿ ಓದುಗರ ಸಂಖ್ಯೆ ಈಗ ೬.೫೯ ಲಕ್ಷ. ಆದರೆ ಒಟ್ಟಾರೆ ವರ್ಷವನ್ನು ಗಣನೆಗೆ ತೆಗೆದುಕೊಂಡರೆ ಪ್ರಜಾವಾಣಿ ಶೇ.೮ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಈ ಹೊತ್ತಿಗೆ ಪ್ರಜಾವಾಣಿ ಓದುಗರ ಸಂಖ್ಯೆ ೬.೧ ಲಕ್ಷವಿತ್ತು, ಅದೀಗ ೬.೫೯ ಲಕ್ಷಕ್ಕೆ ಏರಿದೆ.

ಮೂರನೇ ಸ್ಥಾನದಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಈ ತ್ರೈಮಾಸಿಕದಲ್ಲಿ ಶೇ.೬.೫ರಷ್ಟು ಓದುಗರನ್ನು ಹೆಚ್ಚುವರಿಯಾಗಿ ಪಡೆದಿದೆ. ಕಳೆದ ವರ್ಷ ಟಿಓಐಗೆ ಹರ್ಷವನ್ನೇ ತಂದಿದೆ. ಶೇ.೩೩.೧ರಷ್ಟು ಬೆಳವಣಿಗೆ ಸಾಧಿಸಿರುವುದು ವಿಶೇಷ. ಈಗ ಟಿಓಐ ಓದುಗರ ಸಂಖ್ಯೆ  ೪.೪೨ ಲಕ್ಷ. ಕಳೆದ ವರ್ಷ ಈ ಹೊತ್ತಿಗೆ ಇದು ಕೇವಲ ೩.೩ ಲಕ್ಷವಾಗಿತ್ತು.

ನಾಲ್ಕನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈ ತ್ರೈಮಾಸಿಕ ವರದಿ ಪ್ರಕಾರ ಡೆಕ್ಕನ್ ಹೆರಾಲ್ಡ್ ಓದುಗರ ಸಂಖ್ಯೆ ೨.೦೧ ಲಕ್ಷ. ಡೆಕ್ಕನ್ ಹೆರಾಲ್ಡ್ ಸಹ ಕಳೆ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಶೇ. ೨೨.೬ರಷ್ಟು ಹೆಚ್ಚುವರಿ ಓದುಗರನ್ನು ಗಳಿಸಿಕೊಂಡಿದೆ.

ಐದನೇ ಸ್ಥಾನದಲ್ಲಿರುವ ಬೆಂಗಳೂರು ಮಿರರ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ೨೦೧೦ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ ಕೇವಲ ೬೨,೦೦೦ ಓದುಗರನ್ನು ಪಡೆದಿದ್ದ ಮಿರರ್ ಈಗ ೧.೫೬ ಲಕ್ಷ ಓದುಗರನ್ನು ಗಳಿಸಿಕೊಂಡಿದೆ. ಅಂದರೆ ಕಳೆದ ವರ್ಷವೊಂದರಲ್ಲಿ ಮಿರರ್ ಶೇ.೧೫೦ರಷ್ಟು ಬೆಳವಣಿಗೆ ಕಂಡಿದೆ.

ಆರನೇ ಸ್ಥಾನದಲ್ಲಿರುವ ಕನ್ನಡಪ್ರಭಕ್ಕೆ ಬೆಂಗಳೂರು ಪ್ರಸಾರದ ನಿಟ್ಟಿನಲ್ಲಿ ಹೇಳುವುದಾದರೆ ಕಳೆದ ವರ್ಷ ಅತ್ಯಂತ ಕೆಟ್ಟ ವರ್ಷ. ಈ ತ್ರೈಮಾಸಿಕವೂ ಅದರ ಪಾಲಿಗೆ ಯಾವ ಖುಷಿಯನ್ನೂ ತಂದಿಲ್ಲ. ಈ ಬಾರಿ ಸುಮಾರು ೧೪,೦೦೦ ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಾರೆಯಾಗಿ ಈ ವರ್ಷ ಕನ್ನಡಪ್ರಭ ೩೨,೦೦೦ ಓದುಗರನ್ನು ಕಳೆದುಕೊಂಡಿದೆ. ೨೦೧೧ರ ಎರಡನೇ ತ್ರೈಮಾಸಿಕ ವರದಿ ಪ್ರಕಾರ ಕನ್ನಡಪ್ರಭ ಓದುಗರ ಸಂಖ್ಯೆ ಕೇವಲ ೧.೨೫ ಲಕ್ಷಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಈ ಸಂಖ್ಯೆ ೧.೫೭ ಲಕ್ಷವಾಗಿತ್ತು.

ಉದಯವಾಣಿ ಪತ್ರಿಕೆ ಮಾತ್ರ ಕಳೆದ ತ್ರೈಮಾಸಿಕದಲ್ಲಿ ಅಲ್ಪಪ್ರಮಾಣದಲ್ಲಿ ಹೆಚ್ಚುವರಿ ಓದುಗರನ್ನು ಪಡೆಯಲು ಯಶಸ್ವಿಯಾಗಿ ಏಳನೇ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ ೧.೧೨ ಲಕ್ಷದಷ್ಟು ಓದುಗರ ಸಂಖ್ಯೆ ಹೊಂದಿದ್ದ ಉದಯವಾಣಿ ಈಗ ೧.೧೮ ಲಕ್ಷ ಓದುಗರನ್ನು ಪಡೆದಿದೆ. ಉದಯವಾಣಿ ಕಳೆದ ವರ್ಷ ಪಡೆದಿದ್ದ ಓದುಗರ ಸಂಖ್ಯೆ ೯೭,೦೦೦ ಮಾತ್ರ. ಅದು ೧.೧೮ ಲಕ್ಷಕ್ಕೆ ಏರಿರುವುದು ಆಶಾದಾಯಕ ಬೆಳವಣಿಗೆ.

ಇನ್ನು ಎಂಟು, ಒಂಭತ್ತು ಮತ್ತು ಹತ್ತನೇ ಸ್ಥಾನಗಳನ್ನು ಡೈಲಿ ತಂತಿ, ಡೆಕ್ಕನ್ ಕ್ರಾನಿಕಲ್ ಮತ್ತು ಡಿಎನ್ ಎ ಪತ್ರಿಕೆಗಳು ಕ್ರಮವಾಗಿ ಪಡೆದಿವೆ.

7 comments:

  1. As per the original link, this survey tells about reader in BENGALURU. Not entire Karnataka.

    We are loosing more Kannada reader in bengaluru, need to rethink by all publishers.

    How can we say which is NO. 1 in ENTIRE KARNATAKA?
    Top 10 Papers & how many readers are there? how we will know all these things.

    ANY PRIVATE AGENCY SURVEY THIS ONE??

    ReplyDelete
  2. ಕನ್ನಡ ಪ್ರಭದ ಸ್ಟಾರ್‌ ಪತ್ರಕರ್ತರು, "ನೋಡ್ತಾ ಇರಿ ಏನ್‌ ಏನ್‌ ಮಾಡ್ತೀವಿ" ಅಂತಿದ್ರು. ಅವರು ಹೇಳೋದನ್ನು ಕೇಳಿ ರಾಜೀವ್‌ ಚಂದ್ರಶೇಖರ್‌ ಕೂಡ ಖುಷಿಯಲ್ಲಿದ್ದರು. ಅವರು ಹೀಗೆ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು ಹೇಳಿ..? ಅರುಣ್‌

    ReplyDelete
  3. Odutta iri..
    yenen madtivi..

    ReplyDelete
  4. ಮೂಲ ಲೇಖನದ ಪ್ರಕಾರ ಈ ಸರ್ವೆ ಕರ್ನಾಟಕದ್ದು ಅಲ್ಲ, ಕೇವಲ ಬೆಂಗಳೂರಿನದ್ದು., ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರು ಮತ್ತು ಪತ್ರಿಕೆ ಓದುವವರು ಬಹಳ ಕಡಿಮೆ... ನಿಮ್ಮ ಹುಡುಕಾಟ ಭಟ್ಟರ ಮ್ಯಾಜಿಕ್ ಕಡೆಗಿತ್ತು.. ಅದು workout ಆಗಿಲ್ಲ ಅಂತ ಉದ್ದೇಶದಿಂದ ಈ ಲೇಖನ ಬರೆದಿದ್ದೀರ. ಆದರೆ IRS 2011 Q2 ಕರ್ನಾಟಕದ ಸರ್ವೆ ಪ್ರಕಾರ ಕನ್ನಡಪ್ರಭ 57% ಯಶಸ್ಸು ಸಾಧಿಸಿದೆ
    --
    ರಾಜ್

    ReplyDelete
  5. ಯಾವ್ದೂ ಜಾಸ್ತಿ ಮಾರಾಟ ಆಗ್ತಾ ಇದೆ.. ಅಂತ ಗೊತ್ತಾ ಆಯ್ತು... ಆದ್ರೆ.. ಯಾವ್ದೂ ಒಳ್ಳೇ ಪತ್ರಿಕೆ.. ಅಂತ ಏನಾದ್ರೂ ಸರ್ವೇ.. ಆದ್ರೆ.. ತಿಳಿಸಿ... :)

    ReplyDelete
  6. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಪ್ರಜವಾಣಿಯೇ ನಂಬರ್ ಒನ್ ಅದು ಜನರ ಮನೆಯಲ್ಲಿ ಅಲ್ಲಾ ಮನದಲ್ಲಿದೆ

    ReplyDelete
  7. ದೊಡ್ಡಿಪಾಳ್ಯ ನರಸಿಂಹಮೂರ್ತಿ.October 16, 2011 at 9:00 PM

    ಕನ್ನಡಪ್ರಭದ ಬೆಳವಣಿಗೆ(?) ಕಂಡು ಆಶ್ಚರ್ಯವಾಗುತ್ತಿದೆ. ಅವರು ಏನೇನೋ ಕಡಿದುಬಿಡ್ತೇವೆ ಅಂತಾ ಅಬ್ಬರಿಸುತ್ತಿದ್ದರಲ್ಲ? ಬಹುಷಃ ಲೋಕಾಯುಕ್ತ ವರದಿಯಲ್ಲಿ ಕೆಲ ಭ್ರಷ್ಟ ಪತ್ರಕರ್ತರ ಹೆಸರಿತ್ತಲ್ಲಾ? ಅದರ ಎಫೆಕ್ಟ್ ಏನಾದರೂ ಇರಬಹುದೆ? ಜನ ಇವರ ಆಷಾಡಭೂತಿತನ ಕಂಡು ಇವರ ಬಗ್ಗೆ ಭ್ರಮ ನಿರಸನಗೊಂಡಿದ್ದರೆ ಎಷ್ಟು ಚನ್ನಾಗಿರುತ್ತೆ? ಅದು ನಮ್ಮ ಸಮಾಜದ ಆರೋಗ್ಯದ ಲಕ್ಷಣ ಅಲ್ಲವೆ? ಏನಂತೀರಿ...?

    ReplyDelete