Thursday, October 27, 2011

ಕೆಜಿಎಫ್‌ನಲ್ಲಿ ಮತ್ತೆ ಮೂವರ ದಾರುಣ ಸಾವು: ದಯಾನಂದ್ ಬರೆದ ಆಘಾತಕಾರಿ ಸತ್ಯ ವರದಿ


ನೋಡಿ ಬೀದಿಯ ಮೇಲೆ ರಕ್ತವಿದೆ.. ರಕ್ತವಿದೆ ಬೀದಿಯ ಮೇಲೆ..
- ಪ್ಯಾಬ್ಲೋನೆರೂಡ 


ಪ್ರಸಾದ್ ಕುಟ್ಟಿಯ ಜೀವವಿಲ್ಲದ ಕಾಯದಲ್ಲಿ ಇನ್ನೂ ಕಣ್ಣುಗಳು ಉಸಿರಾಡುತ್ತಿವೆಯೇನೋ ಅನ್ನಿಸುತ್ತಿತ್ತು.. ಈಗಲೋ ಆಗಲೋ ಕಣ್ರೆಪೆ ಮಿಟುಕಿಸಿ ಎಂದಿನಂತೆ ನಾಗೇಂದ್ರ ಬಾಬು ನನಗೊಮ್ಮೆ ಕಣ್ಣು ಹೊಡೆಯುತ್ತಾನಾ? ಕಟಿಂಗು ಸೇವಿಂಗು ಚೇಸಕುನ್ನಾನು ಚೂಡು ಸಾರ್ ಅಂದೇ ಬಿಡುತ್ತಾನೆ ಅನ್ನುವಂತೆ ಇದ್ದ ಪುಟ್ಟಹುಡುಗ ರವಿ.. ಮೂವರೂ ಆ ಮಲದ ಬಾವಿಯ ಪಕ್ಕದಲ್ಲೇ ಒಬ್ಬರ ಪಕ್ಕ ಒಬ್ಬರು ಸಾಲುಸಾಲಾಗಿ ಮಲಗಿಬಿಟ್ಟಿದ್ದರು. ಸುತ್ತಮುತ್ತಲಿದ್ದ ಜನರು ಪೋಲೀಸರು, ಮುನಿಸಿಪಾಲಿಟಿಯವರು, ಆಸುಪಾಸಿನವರು ಈ ಮೂರೂ ಜೀವಗಳನ್ನು ಡೆಡ್ಡುಬಾಡಿ, ಹೆಣ, ಅದು.. ಹೀಗೆಲ್ಲ ಏನೇನೋ ಯಾಕೆ ಅನ್ನುತ್ತಿದ್ದಾರೆ. ಹೆಸರು ಹಿಡಿದು ಕರೆಯಬಾರದಾ? ಈ ಮೂವರಿಗೆ ಹೆಸರು ಇಲ್ಲವಾ ಅಂತ ಸಿಟ್ಟು ಬರುತ್ತಿತ್ತು.

ಮೂವರನ್ನು ಬಲಿತೆಗೆದುಕೊಂಡಿದ್ದು ಇದೇ ಪಿಟ್.
 ಫೋಟೋ ತೆಗೆಯುತ್ತ, ವಿಡಿಯೋ ಶೂಟ್ ಮಾಡುತ್ತಿದ್ದವನಿಗೆ ಪೋಲೀಸನೊಬ್ಬ ಬನ್ನೀ ಈಕಡೆ ಸಾಕು ಸಾಕು ಅಂದಂತಾಯಿತು.. ಜೂಲುನಾಯಿಗೆ ಕೊಟ್ಟಷ್ಟೇ ಬೆಲೆಯನ್ನು ಅವನಿಗೆ ಕೊಟ್ಟು ನನ್ನ ಪಾಡಿಗೆ ನಾನು ವಿಡಿಯೋ ಶೂಟ್ ಮಾಡುತ್ತಲೇ ಇದ್ದೆ. ೬ ತಿಂಗಳ ಹಿಂದೆ ಈ ಮೂರೂ ಜೀವಗಳು ಕೆಜಿಎಫ್‌ನಲ್ಲಿ ಎದುರಾದಾಗ, ಕುಟ್ಟಿಯ ಮನೆಯಲ್ಲಿ ಡಾಲ್ಮೇಷಿಯನ್ ನಾಯಿಗೆ ಹೆದರುತ್ತ ಊಟ ಮಾಡಿದಾಗ, ಮಾರನೆ ಬೆಳಿಗ್ಗೆ ಅವರನ್ನೇ ಹಿಂಬಾಲಿಸಿಕೊಂಡು ಗೆಳೆಯ ಚಂದ್ರುವಿನೊಡನೆ ಅವರ ಮಲಹೊರುವ ವೃತ್ತಿಯ ವಿವರಗಳನ್ನು ಇದೇ ಪನಾಸೋನಿಕ್ ಕೆಮೆರಾ ಶೂಟ್ ಮಾಡಿದಾಗ, ಇದೇ ಕೆನಾನ್ ಸ್ಟಿಲ್ ಕೆಮೆರಾ ರವಿಯ ತಮಾಷೆಗಳನ್ನು, ಪ್ರಸಾದ್ ಕುಟ್ಟಿಯ ನಿಷ್ಕಲ್ಮಶ ನಗೆಯನ್ನು, ನಾಗೇಂದ್ರ ಬಾಬುವಿನ ವಿನಾಕಾರಣ ಕಣ್ಣು ಹೊಡೆಯುತ್ತಿದ್ದದ್ದನ್ನ್ದು ಚಿತ್ರಗಳಾಗಿ ನುಂಗುತ್ತಿದ್ದಾಗ ನನಗೂ ಚಂದ್ರುವಿಗೂ ಇದೇ ಜನರ ಕಳೇಬರಗಳನ್ನು ಮುಂದೊಂದು ದಿನ ನಾವೇ ಮಬ್ಬಿನ ಪೊರೆಯ ಕಣ್ಣಲ್ಲಿ ಶೂಟ್ ಮಾಡುತ್ತೇವೆ, ಚಿತ್ರ ಹಿಡಿಯುತ್ತೇವೆ ಎಂಬ ಯಾವ ಊಹೆಯೂ ಇರಲಿಲ್ಲ.. ಎಲ್ಲವೂ ಗಿರಗಿರನೆ ನನ್ನ ಸುತ್ತಲೇ ಓಡಾಡುತ್ತಲೇ ಇತ್ತು..

ಗಂಗರಾಜು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿದ್ದ ಮೂರೂ ಜೀವಗಳ ಚಪ್ಪಲಿಗಳನ್ನು ಯಾವ ಕಾರಣಕ್ಕೆ ಅಷ್ಟು ಶ್ರದ್ಧೆಯಿಂದ ಆರಿಸುತ್ತಿದ್ದನೋ.. ಗಂಗರಾಜುವಿನ ದೇಹದಲ್ಲೂ ಜೀವವಿದೆಯೋ ಇಲ್ಲವೋ ಅಂತ ಆ ಸೆಕೆಂಡಿಗೂ ಗಾಬರಿಯಾಯಿತು..  ಕಣ್ಣೂ ಮಿಟುಕಿಸುತ್ತಿದ್ದ ಅನ್ನುವುದನ್ನು ಬಿಟ್ಟರೆ ೧೭ ವರ್ಷದ ಆ ಹುಡುಗನ ಇಡೀ ದೇಹದಲ್ಲಿ ಮತ್ತೇನೂ ಚಲಿಸುತ್ತಿಲ್ಲ ಅನಿಸಿ ಗಂಗರಾಜೂ ವಿಸೆರೇಯ್ರಾ, ಆ ಚೆಪ್ಪುಲ್ನಿ ತೀಸುಕೊನಿ ಏಮ್ ಚೇಸ್ತಾವ್ ನುವ್ವು (ಗಂಗರಾಜು ಆ ಚಪ್ಪಲಿ ತಗೊಂಡು ಏನು ಮಾಡ್ತೀಯ, ಬಿಸಾಕು ಮಾರಾಯ)  ಅಂದೆ.. ನನ್ನ ಮಾತಿಗೆ ಕಿಲುಬುಕಾಸಿನ ಬೆಲೆಯೂ ಕೊಡದೆ ಅವನ ಪಾಡಿಗವನು ಚಪ್ಪಲಿಗಳನ್ನು ಆಯ್ದುಕೊಂಡು ಒಂದು ಹ್ಯಾಂಡ್ ಕವರ್ರಿಗೆ ತುಂಬಿಕೊಂಡು ಕಂಕುಳಿಗೆ ಸಿಗಿಸಿಕೊಂಡು ನನ್ನ ಬಳಿಗೆ ಬಂದು ನಿಂತ. ನಾಗನ್ನ ಪಂಡಗನೇಸಿ ಮೊನ್ನ ತೀಸುಕುನ್ನಾಡು ಚೆಪ್ಪುಲು ಬಾಗುನ್ನಾಯಿ, ನೇನೇಸ್ಕುಂಟಾ, ಕುಟ್ಟನ್ನದಿ ಮಾ ಅಕ್ಕಕಿ ಸರವುತುಂದಿ, ರವೀದಿ ಅಲಾಗೇ ಉಂಚುಕುಂಟಾ (ನಾಗಣ್ಣ ಮೊನ್ನೆ ತಗೊಂಡ ಚಪ್ಪಲೀನಾ, ಚೆನಾಗಿದಾವೆ ನಾನೇ ಇಟ್ಕೋತೀನಿ, ಕುಟ್ಟಣ್ಣನ ಚಪ್ಪಲಿ ನಮ್ಮಕ್ಕನಿಗೆ ಸರಿ ಹೋಗ್ತವೆ.. ರವೀದು ಹಂಗೇ ಇಟ್ಕೋತೀನಿ)  ಅಂದು ಸುಮ್ಮನೆ ಹೋಗಿ ಗೋಡೆ ಬದಿಗೆ ಹೋಗಿ ಕುಳಿತ. ಆ ಕ್ಷಣಕ್ಕೆ ಅವನನ್ನೂ ಆ ಮಲದ ಬಾವಿಗೆ ನೂಕಿ ನಾನೂ ಅವನ ಹಿಂದೆಯೇ ಬಿದ್ದು ಸಾಯಬೇಕು ಅನಿಸುವಷ್ಟು ಒದ್ದಾಡಿಹೋದೆ.
ನಾಗೇಂದ್ರ ಬಾಬುನ ಒಂದು ವಾರದ ಕೂಸು.

ಗಂಗರಾಜು ನನ್ನ ಜೊತೆಗೋ, ಅವನ ಪಾಡಿಗವನೋ ಮಾತನಾಡುತ್ತಲೇ ಇದ್ದ. ನನ್ನೂ ಪಿಲಿಚಾರು.. ನೇನೆಳ್ಳಲೇದು, ಪೋಲೀಸೋಳ್ಳು ಪಟ್ಟುಕೊನಿ ಎಳತಾರನಿ.. ಎಳ್ಳಲೇದು.. ರೈಲ್‌ಪಟ್ಲು ಉಂದಿ ಕದ ಅಕ್ಕಡನಿಂಚಿ ಪಾರಿಪೋಯಾ, (ನನ್ನನ್ನೂ ಕರೆದ್ರು, ನಾನು ಪೋಲೀಸರು ಹಿಡಕಂಡು ಹೋಗತಾರೆ ಅಂತ ರೈಲ್ವೇಹಳಿ ದಾಟಿಕೊಂಡು ಓಡಿಹೋದೆ) ಗಂಗರಾಜನಿಗೂ ಜೀವವಿಲ್ಲದೆ ಮಲಗಿದ್ದ ಮೂವರಿಗೂ ಹಸಿವು ಅನ್ನೋ ಮೂರಕ್ಷರದಲ್ಲಿ ಸಾಮ್ಯತೆಯಿತ್ತು.  ಕಕ್ಕಸ್ಸುಗುಂಡಿ ಹುಡುಕುತ್ತ ಅಲೆದಾಡುವ ಗಂಗರಾಜುವಿನ ನಿಸ್ತೇಜ ಮುಖದಲ್ಲಿ, ನಾಳೆಯಿಂದ ಯಾರಿಗೋಸ್ಕರ ಮಲದಗುಂಡಿ ಹುಡುಕಲಿ ಎಂಬ ಗೊಂದಲವಿತ್ತೇ? ನನಗೂ ಗೊಂದಲವಾಯಿತು.

ಹೊರಗಡೆ ಸೇರಿದ್ದ ಕೆನಡಿ ಲೈನ್‌ನ ಬಡವರು ಕಟ್ಟೆಯೊಡೆದ ಕೆರೆಯಂತೆ ಭೋರಿಡುತ್ತಿದ್ದರು. ಯಾರು ಯಾರಿಗೋಸ್ಕರ ಅಳುತ್ತಿದ್ದಾರೆ ಎಂಬುದನ್ನು ಯಾರಿಗೂ ಗುರ್ತಿಸಲಾಗುತ್ತಿರಲಿಲ್ಲ. ಒಂದಷ್ಟು ಸಂಘಟನೆಯ ಜನ ಸರ್ಕಾರಂತೆ ಸರ್ಕಾರ, ಇವನಪ್ಪಂದಂತೆ ಸರ್ಕಾರ ಎನ್ನುತ್ತ ಅದನ್ನದನ್ನೇ ಪುನರಾವರ್ತಿಸುತ್ತಿದ್ದರು. ಡೀಸಿಯೂ ಬಂದ. ಇದೇ ಡೀಸಿ ಹದಿನಾಲ್ಕು ದಿನಗಳ ಹಿಂದೆ ಇದ್ದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದು ಪ್ರತಿಭಟಿಸುತ್ತಿದ್ದ ಇದೇ ಜನರನ್ನ ಯಾರ ಹತ್ರ ಪರ‍್ಮಿಷನ್ ತಗೊಂಡು ಇಲ್ಲಿ ಗಲಾಟೆ ಮಾಡ್ತೀದೀರಿ, ಎಲ್ಲರನ್ನೂ ಒಳಗೆ ಹಾಕ್ತೀನಿ ಎಂದು ಅಲ್ಸೇಷಿಯನ್‌ಗಳೂ ನಾಚಿಕೊಳ್ಳುವಂತೆ ಬೊಗಳಿ ಹೋಗಿದ್ದ. ಅಂಥಹವನ ಬಾಯಲ್ಲಿ ಸತ್ತ ಮೂವರ ಬಗ್ಗೆ ಮರುಕವೂ, ಕನಿಕರವೂ ಸರ್ಕಾರಿ ಪದಗಳಾಗಿ ಸುರಿಯುತ್ತಿದ್ದವು. ಕೆಜಿಎಫ್ ಅನ್ನು ಜರ್ಮನಿಯೆಂತಲೂ ತಾನೊಬ್ಬ ಹಿಟ್ಲರ್ ಎಂತಲೂ ಪರಿಭಾವಿಸಿಕೊಂಡ ಇಂಥಹ ಮೃಗವೊಂದರ ಬಾಯಲ್ಲಿ ಇಷ್ಟೆಲ್ಲ ಸುನೀತ ಪದಗಳು ಎಲ್ಲಿ ಅಡಗಿದ್ದವು ಇಷ್ಟು ದಿನ ಎಂದು ಒಂದು ಕಡೆಯಿಂದ ನನಗೆ ಅಸಹ್ಯ ಕಿತ್ತುಕೊಂಡು ಬರುತ್ತಿತ್ತು.

ನಾಗೇಂದ್ರ ಬಾಬು ಬದುಕಿದ್ದಾಗ 
ಈ ಮೃಗವನ್ನು ನೋಡುವುದಕ್ಕಿಂತ ಇನ್ನಷ್ಟು ಹೊತ್ತು ಸತ್ತುಹೋದ ಆ ಜೀವಗಳ ಹೆಣವನ್ನು ನೋಡುತ್ತ ಕೂರುವುದು ಹೆಚ್ಚು ಸಹನೀಯ ಅನ್ನಿಸುತ್ತಿರುವಾಗ ರೊಚ್ಚಿಗೆದ್ದ ಬಡವರ ಗುಂಪಿನಿಂದ ಒಬ್ಬಾತ ತನ್ನ ಚಪ್ಪಲಿಯನ್ನು ಕೈಗೇ ತೆಗೆದುಕೊಂಡು ಕೊಟ್ಟ ಕೆಲಸವನ್ನು ಕಿತ್ತುಕೊಂಡಲ್ಲೋ, ನಾಚಿಕೆ ಇದೆಯೇನೋ ನಿನಗೆ? ಹೊಟ್ಟೆಗೇನು ಹೇಲು ತಿನ್ನತೀಯೇನೋ, ಕೆಲಸ ಇಲ್ಲದೆ ಮತ್ತೆ ಕಕ್ಕಸ್ಸು ಗುಂಡು ಬಳಿಯೋಕೆ ಹೋಗಿ ಸತ್ತವರಲ್ಲ ಮೂರು ಜನ, ಕಟುಕ ನನಮಗನೇ ಅಂತ ಉಂಗುಷ್ಟದ ಜಾಗದಲ್ಲಿ ಹೇರ್‌ಪಿನ್ನು ಸಿಕ್ಕಿಸಿದ್ದ ತನ್ನ ಚಪ್ಪಲಿಯನ್ನು ತೂರಲು ಸಿದ್ದವಾಗಿದ್ದ. ಬಿಟ್ಟರೆ ಕೈಯೊಂದು ಕಡೆ, ತಲೆಯೊಂದು ಕಡೆ ಎಂಬಂತೆ ಮೃಗವನ್ನು ಚೆಂಡಾಡಲು ಜನರು ಸಿದ್ದವಿದ್ದಂತೆ ಕಾಣಿಸಿತೋ ಏನೋ ಲಾಠಿಚಾರ‍್ಜಿಗೆ ಮೃಗ ಆದೇಶಿಸಿತು. ಮತ್ತೊಂದು ಪೋಲೀಸು ಮೃಗ ಪೀಪೀ ಊದಲಾಗಿ ಉಳಿದ ಖಾಕಿ ದಿರಿಸಿನ, ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಆ ಬಡಜನರನ್ನು ಮನಬಂದಂತೆ ಬಡಿಯತೊಡಗಿದರು,  ಜರ್ಮನಿಯ ಹಿಟ್ಲರ್ರನಂತೆಯೇ ದಿವೀನಾಗಿ ಇದ್ದ ಮೃಗವು ಸುಮ್ಮನೆ ನಿಂತು ಇದನ್ನೆಲ್ಲ ನೋಡುತ್ತಿತ್ತು. ಬಡವರು ತಮಗೆ ಕಂಡಕಂಡಲ್ಲಿಗೆ ಬಡಿಯುತ್ತಿದ್ದ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳಿಂದ ತಪ್ಪಿಸಿಕೊಂಡು ಸಿಕ್ಕಸಿಕ್ಕಲ್ಲಿಗೆ ನುಗ್ಗುತ್ತಿದ್ದರು. ಅಷ್ಟರಲ್ಲಿ ಪ್ರಭು.. ಹೆಣ ತಗೊಂಡು ಹೋಗ್ತಿದಾರೆ ಕಣ್ರೋ ಎನ್ನುತ್ತ ಕೂಗುತ್ತ ಓಡಿ ಬಂದ..

ರವಿ ಮತ್ತು ಆತನ ಪತ್ನಿ
ಇಲ್ಲಿ ಲಾಠಿಚಾರ‍್ಜ್ ಮಾಡಿ ಆ ಕಡೆ ಹೆಣವನ್ನು ಹೊತ್ತೊಯ್ಯಲು ಯತ್ನಿಸುತ್ತಿದ್ದ ಪೋಲೀಸರನ್ನು ಕಂಡಕಂಡಲ್ಲಿಗೆ ನೂಕಿ ಎಸೆದು ಮೂರೂ ಹೆಣಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಡೀಸಿಯ ಮುಂದಿಟ್ಟು ಪ್ರಭು ಇನ್ನೂ ಎಷ್ಟು ಜನಾ ಸತ್ತ ಮೇಲೆ ಕೆಜಿಎಫ್ ನಲ್ಲಿ ಮಲ ಹೊರೋರು ಇದಾರೆ ಅಂತ ನಂಬತೀಯಾ? ಬರ್ರಪ್ಪಾ ಬರ್ರಿ.. ಸಾಲಾಗಿ ನಿಂತುಕೊಳ್ಳೋಣ ಎಲ್ಲಾರಿಗೂ ಗುಂಡು ಹೊಡೆದು ಕೊಂದ್ಹಾಕಿ ಆಮೇಲೆ, ಕಕ್ಕಸ್ಸು ಬಳಿಯೋರು ಯಾರೂ ಇಲ್ಲ ಅಂತ ರಿಪೋರ್ಟ್ ಬರಕೋ ಅಂತ ಕೂಗಾಡಿಬಿಟ್ಟ. ಇದಾದ ೨ ನಿಮಿಷಕ್ಕೆ ಸರ್ಕಾರಿ ಮೃಗ ತಲೆತಪ್ಪಿಸಿಕೊಂಡು ಕಂಡ ಜೀಪು ಹತ್ತಿಕೊಂಡು ಪರಾರಿಯಾಗಿ ಹೋಯಿತು. ಶವಪರೀಕ್ಷೆಗೆ ತೆಗೆದುಕೊಂಡ ಹೋದ ಮೂವರ ಹೆಣಗಳನ್ನು ಆ ಬಡವರಿಗೆ ಬಡಿಯುತ್ತಲೇ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಸರ್ಕಾರಿ ಆಸ್ಪತ್ರೆಯ ಕಡೆಗೆ ವಾಹನದಲ್ಲಿ ಕೊಂಡೊಯ್ದರು.

ಮಾರನೆಯ ಬೆಳಿಗ್ಗೆ ಕೆನಡೀಸ್ ಲೈನ್‌ನ ಮೂರೂ ಕ್ರಿಯಾಶೀಲ ಜೀವಗಳು ಬಿಳಿ ಬಟ್ಟೆಯೊಳಗೆ ತುಂಬಿಸಿಟ್ಟ ಮಾಂಸದ ಮುದ್ದೆಗಳಂತೆ ಗಾಜಿನಪೆಟ್ಟಿಗೆಗಳಲ್ಲಿ ಸುತ್ತಿಕೊಂಡಿದ್ದರು. ಮೂರೂ ಗಾಜಿನಪೆಟ್ಟಿಗೆಗಳ ಪಕ್ಕವೂ ಆ ಜೀವಗಳ ಪತ್ನಿಯರು ಅಳಲೂ ನಿತ್ರಾಣವಿಲ್ಲದೆ ಕುಳಿತಿದ್ದರು. ಕುಟ್ಟಿಯ ನಡುವಯಸ್ಕ ಪತ್ನಿ, ರವಿ ಮತ್ತು ನಾಗೇಂದ್ರ ಬಾಬುರ ಚಿಕ್ಕವಯಸ್ಸಿನ ಪತ್ನಿಯರು.. ಅವರನ್ನು ಸಮಾಧಾನಿಸುತ್ತಿದ್ದ ನೆರೆಹೊರೆಯವರು, ನಾಗೇಂದ್ರಬಾಬುವಿನ ಒಂದು ವಾರದ ಮಗು ಕುಟ್ಟಿಯ ಡಾಲ್ಮೇಷಿಯನ್ ನಾಯಿಯ ಮೇಲಿನ ಕಪ್ಪುಕಪ್ಪು ಚಿಕ್ಕೆಗಳನ್ನೇ ನೋಡುತ್ತಿತ್ತು. ಬ್ಯಾಂಡ್ ಸೆಟ್ಟಿನವರು ಶೋಕಗೀತೆಗಳನ್ನು ಹುಡುಕೀ ಹುಡುಕೀ ವಾದ್ಯ ಬಡಿಯುತ್ತ ಇದ್ದ ಸಂದರ್ಭದಲ್ಲೇ ಕೆನಡಿ ಲೈನ್‌ನ ಎರಡೂ ಬದಿಗಿದ್ದ ತಮಿಳು ಮತ್ತು ತೆಲುಗು ಚರ್ಚುಗಳಲ್ಲಿ ಒಂದರೊಳಗಿನಿಂದ ಆತ್ಮ ಸ್ವರೂಪನೇ, ಪ್ರಿಯ ಆತ್ಮಸ್ವರೂಪನೇ, ಈಗ ಬಾ ದೇವ, ಇಳಿದು ಬಾ ದೇವ ನಮ್ಮ ಮಧ್ಯದೊಳು, ಪಾಪ ತೊಳೆದು ಶುದ್ದೀಕರಿಸು ಈ ದಿವ್ಯ ಸಮಯದೊಳು ಎಂಬ ಪ್ರಾರ್ಥನೆ. ಯಾವ ದೇಶದ ಯಾವ ಜಾತಿಯ ಯಾವ ಜನ ಪಾಪಗಳ ಬಗ್ಗೆ ಯೇಸುದೇವನು ಮಾತಾಡುತ್ತಿದ್ದಾನೋ ಎಂದುಕೊಳ್ಳುತ್ತ ಸಿಗರೇಟು ಹಚ್ಚಿ ವಕೀಲೆ ಗೆಳತಿ ಮೈತ್ರೇಯಿ ಕೃಷ್ಣನ್ ಬಳಿ ಬಳಿ ನಿಂತುಕೊಂಡೆ.

ಮೃತರ ಸಂಬಂಧಿಗಳೊಂದಿಗೆ ಲೇಖಕ ದಯಾನಂದ್
 ಫ್ಯಾಮಿಲಿ ಪ್ರೊಫೈಲ್ ಒಂದು ಬೇಕಿತ್ತು ದಯಾ, ಮೂರೂ ಫ್ಯಾಮಿಲಿಗಳದ್ದು ಪ್ರೊಫೈಲ್ ಮಾಡಿಬಿಡು ಅರ್ಜೆಂಟಾಗಿ ಬೇಕಿದೆ ಎಂದ ಮೈತ್ರೇಯಿ ಮಾತಿಗೆ ಹೂಂಗುಟ್ಟಿ ಜೀವ ಕಳೆದುಕೊಂಡ ಮೂವರ ಮನೆಗಳ ಬಳಿ ಹೋಗಿ ಫೋಟೋ ವಿಡಿಯೋ ಮಾಡುತ್ತ ನಿಂತೆ. ಗೆಳೆಯ ಚಂದ್ರು, ರಾಜೇಂದ್ರ ಮತು ಪುರುಷಿ ಎಲ್ಲರೂ ಜನಗಳ ಸಭೆ ನಡೆಸುತ್ತಿದ್ದ ಸರ್ಕಲ್ ಬಳಿ ಬರುತ್ತಿದ್ದಂತೆ ೮೦ರ ಇಳಿವೃದ್ಧೆ ಅಂತೋನಿಯಮ್ಮ ಸಿಕ್ಕರು. ನಾ ಕೊಡುಕು ಬಾಬೂ ಸನಿಪೋಯಾಡು ನೈನಾ.. ಇಪ್ಪುಡು ಚೂಡು ಇಂಕಾ ಮುಗ್ಗುರು ಎಲ್ಲಿಪೋಯಾರು, ಯಮದೂತುದು ಇಕ್ಕಡೇ ಎಕ್ಕಡೋ ರೈಲುಪಟ್ಲ ದಗ್ಗರ ದಾಚಿಕೊನಿ ಉನ್ನಾಡೇಮೋ ನೈನಾ.. ಅಪ್ಪುಡಪ್ಪುಡು ವಚ್ಚೀ.. ಮನವಾಳನಿ ತೀಸುಕೆನಿ ಎಳುತೂ ಉಂಟಾಡು. ಇಂಕೆನ್ನಿ ಪ್ರಾಣಾಲೂ ಎಳ್ಳಾಲನಿ ರಾಸಿಪೆಟ್ಟುಂಂದೋ ತೆಲೀದು ನೈನಾ (ನನ್ನ ಮಗ ಬಾಬೂ ಸತ್ತುಹೋದ, ಈಗ ಇನ್ನು ಮೂವರು ಸತ್ತು ಹೋಗಿದ್ದಾರೆ.. ಯಮದೂತರು ಇಲ್ಲೇ ಎಲ್ಲೋ ರೈಲುಹಳಿ ಆಸುಪಾಸಿನಲ್ಲಿ ಕದ್ದು ಕೂತಿರಬಹುದು, ಅವಾಗವಾಗ ಬಂದು ನಮ್ಮ ಜನಗಳನ್ನ ಹಿಂಗೆ ಎಳೆದುಕೊಂಡು ಹೋಗ್ತಿದಾರೆ, ಇನ್ನೂ ಎಷ್ಟು ಜೀವಗಳು ಹೀಗೇ ಹೋಗುತ್ತವೋ ಗೊತ್ತಿಲ್ಲ ಕಣಪ್ಪ) ಅನ್ನುತ್ತ ಬಂದು ಕೈ ಹಿಡಿದುಕೊಂಡಿತು. ಒಮ್ಮೆ ಕುಮಾರ ಕುಡಿದ ಚೊಂಬಿನಲ್ಲಿಯೇ ನಾನು ನೀರು ಕುಡಿದಿದ್ದರಿಂದ ನನ್ನ ಬಗ್ಗೆ ಇದ್ದ ಭಯಾತಂಕಗಳೆಲ್ಲ ದೂರವಾಗಿ, ನನ್ನನ್ನು ಕಂಡಾಗಲೆಲ್ಲ ಒಂದು ಚೊಂಬಿನಲ್ಲಿ ನೀರು ಹಿಡಿದುಕೊಂಡು ನೀಳ್ಳು ತಾಗಂಡಿ ಸಾರೂ ಎಂದು ಹಿಂದ್ಹಿಂದೆ ಓಡಾಡುತ್ತಿದ್ದ ಕುಮಾರ ಕೈಯಲ್ಲಿ ಚೊಂಬಿಲ್ಲದೆ ಸುಮ್ಮನೆ ಕುಳಿತಿದ್ದ. ಗಂಗರಾಜು ಅವನಿಗೆ ಕುಟ್ಟಿ ಪ್ರಸಾದನ ಜೊತೆ ತಾನು ಹೋಗದೆ ಇದ್ದ ಕಾರಣಕ್ಕೆ ಹೇಗೆ ನನ್ನ ಜೀವವುಳಿಯಿತು ಎಂಬುದನ್ನು ವಿವರಿಸುತ್ತ, ತಾನು ಆಯ್ದುಕೊಂಡು ಬಂದಿದ್ದ ಮೂವರ ಚಪ್ಪಲಿಗಳಲ್ಲಿ ಒಂದನ್ನು ಕುಮಾರನ ಎದುರಿಗೆ ಹಾಕಿ ಸೈಜು ನೋಡಲು ಹೇಳುತ್ತಿದ್ದ. ಅಮಾಯಕ ಗಂಗರಾಜನ ಬುದ್ದಿಮತ್ತೆಗೆ ಗಾಜಿನಪೆಟ್ಟಿಗೆಯೊಳಗೆ ಉಸಿರೂ ಮರೆತು ಮಲಗಿದ್ದ ಜೀವಗಳಿಗಿಂತ ಆ ಮೂರು ಜೊತೆ ಕಡಿಮೆಬೆಲೆಯ ಚಪ್ಪಲಿಗಳು ದೊಡ್ಡವಾಗಿ ಕಂಡಿದ್ದು ಕರುಳು ಕಿತ್ತುಬಂದಂತೆ ಆಯ್ತು.

ಪ್ರಸಾದ್ ಕುಟ್ಟಿಯ ಪತ್ನಿ
ಕೆಜಿಎಫ್‌ನಲ್ಲಿ ಮಲಹೊರುವವ ಪ್ರಕರಣ ಇವತ್ತು ನಿನ್ನೆಯದ್ದಲ್ಲ. ಬಿಜಿಎಂಎಲ್ ನೇತೃತ್ವದ ಗಣಿ ಮುಚ್ಚುವುದಕ್ಕೂ, ನಾಲ್ಕಂಕಿ, ಐದಂಕಿ ಸಂಬಳ ತೆಗೆದುಕೊಳ್ಳುತ್ತಿದ್ದ ಅಧಿಕಾರಿಗಳು ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳನ್ನು ಪಡೆದು ಕೆಲಸದಿಂದ ನಿವೃತ್ತಿಯಾದ ಸಮಯಕ್ಕೇ ಅದೇ ಗಣಿಯಲ್ಲಿ ಚಿನ್ನ ಅಗೆಯಲು ಸುರಂಗ ನುಗ್ಗುತ್ತಿದ್ದ ಅನಕ್ಷರಸ್ಥ ಕಾರ್ಮಿಕರು ನೇರವಾಗಿ ಬೀದಿಪಾಲಾಗುವುದಕ್ಕೂ ಒಂದೇ ಆಗಿತ್ತು. ಆಗಿನಿಂದ ಕುಡಿಯಲು ನೀರನ್ನೂ ಸಹ ಕೊಡದೆ ಈ ಕಾರ್ಮಿಕರ ಕ್ವಾಟ್ರಸ್‌ಗಳಿಗೆ ಬಲವಂತವಾಗಿ ಕ್ವಾಟ್ರಸ್‌ಗಳಿಂದ ಓಡಿಸಲು ಜಿಲ್ಲಾಡಳಿತದ ವತಿಯಿಂದ ಹುನ್ನಾರಗಳೂ ನಡೆದಿದ್ದವು. ಆ ಸಮಯದಲ್ಲಿ ಕೋಲಾರದ ಸಂಘಟನೆಗಳ ಮತ್ತು ಪ್ರಜ್ಞಾವಂತರ ಪ್ರತಿಭಟನೆಯ ಕಾರಣಕ್ಕೆ ಕೆಜಿಎಫ್ ನಗರಸಭೆಯಲ್ಲಿ ಈ ಕಾರ್ಮಿಕರಿಗೆ ಗುತ್ತಿಗೆ ಪೌರಕಾರ್ಮಿಕರ ತಾತ್ಕಾಲಿಕ ಕೆಲಸವನ್ನೂ ನೀಡಲಾಗಿತ್ತು. ಆ...ದರೆ ಗಣಿಯಿಂದ ನೇರವಾಗಿ ಗುತ್ತಿಗೆ ಕಂಟ್ರಾಕ್ಟರ ಕಪಿಮುಷ್ಠಿಯೊಳಗೆ ಸಿಲುಕಿಕೊಂಡ ಈ ಕಾರ್ಮಿಕರು ನಿಯತ್ತಾಗಿ ಕೆಲಸವನ್ನೇನೋ ಮಾಡಿದರು, ಸಂಬಳ ಮಾತ್ರ ಸಿಗಲಿಲ್ಲ. ಸತತ ೯ ತಿಂಗಳು ಸಂಬಳವಿಲ್ಲದೆ ದುಡಿಸಿಕೊಂಡ ಕೆಜಿಎಫ್ ನಗರಸಭೆ ಈ ಕಾರ್ಮಿಕರ ಹಸಿವನ್ನು ಮಾತ್ರ ಗಣನೆಗೆ ತಂದುಕೊಳ್ಳಲೇ ಇಲ್ಲ. ಅನಿವಾರ್ಯವಾಗಿ ಸಂಬಳ ಸಿಗದ ಕೆಲಸ ತ್ಯಜಿಸಿ ಹೊಟ್ಟೆಹೊರೆಯಲು ಮಲಹೊರುವ ಕೆಲಸಕ್ಕೇ ಈ ಕಾರ್ಮಿಕರು ಬೀಳುವಂತೆ ಮಾಡಿದ್ದ್ದು ಇದೇ ಕೆಜಿಎಫ್ ನಗರಸಭೆ.

ನಾಗೇಂದ್ರ ಬಾಬು ಪತ್ನಿ
ಕಳೆದ ನಾಲ್ಕೂವರೆ ತಿಂಗಳ ಹಿಂದೆ ಕೆಜಿಎಫ್‌ನ ಈ ಕಾರ್ಮಿಕರ ಮಲಹೊರುವ ಬರ್ಬರತೆಯ ಮಾಹಿತಿ ಜಗತ್ತಿನ ಮುಂದೆ ಬರುತ್ತಿದ್ದಂತೆಯೇ ತಮ್ಮ ಮುಖದ ಮೇಲೆಯೇ ಈ ಕಾರ್ಮಿಕರು ಮಲ ಎಸೆದಂತಾಗಿ ಕನಲಿಹೋದ ಕೋಲಾರದ ಡೀಸಿ ಮತ್ತು ನಗರಸಭೆಯ ಕಮಿಷನರ್ ತರಾತುರಿಯಲ್ಲಿ ಮಲಹೊರುವುದನ್ನು ನಿಷೇಧಿಸಿ ಆಟೋ ಪ್ರಚಾರ ಕೈಗೊಂಡರು. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳ ಗಡುವು ವಿಧಿಸಿ ಹೋದರು, ಸಚಿವರಿಗೆ ಚಪ್ರಾಸಿಗಳಿಗೆ ಕೊಡುವಷ್ಟು ಬೆಲೆಯನ್ನೂ ಕೊಡದ ಕೋಲಾರ ಜಿಲ್ಲಾಡಳಿತ ಸಚಿವರ ಅಷ್ಟೂ ಸೂಚನೆಗಳನ್ನು ಗಾಳಿಗೆ ತೂರಿ ೧೪೦ ಮಂದಿಗೆ ದಿನಗೂಲಿ ಕೆಲಸ ನೀಡಿ ಕೈತೊಳೆದುಕೊಂಡಿತು. ಅದಾದಮೇಲೆ ಮಾನವಹಕ್ಕುಗಳ ಆಯೋಗದ ಸದಸ್ಯ ರೆಡ್ಡಿ ಕೆಜಿಎಫ್‌ಗೆ ಭೇಟಿ ನೀಡಿ ಕೆಲವೊಂದು ಜನಪರ ಆದೇಶಗಳು ಮತ್ತು ಸೂಚನೆಗಳನ್ನು ನೀಡಿದರು. ಅದಕ್ಕೂ ಇವರು ಕಿಲುಬುಕಾಸಿನ ಬೆಲೆಯನ್ನೂ ಕೊಡಲಿಲ್ಲ. ಮಲಹೊರುವ ಪ್ರಕರಣ ಬಯಲಿಗೆ ಬಂದಾದ ಮೇಲೆ ಕಡೇಪಕ್ಷ ಅಂಥಹ ಮಲದಗುಂಡಿಗಳನ್ನು ಮುಚ್ಚುವ ಕೆಲಸವಾದರೂ ಮಾಡಿದ್ದರೆ, ಮಲದಗುಂಡಿಗಳು ಎಲ್ಲೆಲ್ಲಿವೆ ಎಂಬ ಸರ್ವೇಯನ್ನಾದರೂ ಕೈಗೊಂಡಿದ್ದರೆ, ಮಲಹೊರುತ್ತಿರುವ ಕಾರ್ಮಿಕರ ಜನಪರ ಅಭಿವೃದ್ಧಿಗಾದರೂ ಮನಸ್ಸು ಮಾಡಿದ್ದರೆ ಇವತ್ತು ಮೂರು ಜೀವಗಳು ಹೆಣವಾಗುತ್ತಿರಲಿಲ್ಲ. ಯಾವುದನ್ನೂ ಮಾಡದ ಜಿಲ್ಲಾಡಳಿತ ತಮ್ಮ ಘೋರ ದುರಹಂಕಾರದ ಕಾರಣಕ್ಕೆ ಮೂವರು ಸತ್ತ ಕೂಡಲೇ ಪರಿಹಾರದ ಚೆಕ್ಕುಗಳನ್ನು ಹಿಡಿದು ಹೆಣದ ಮುಂದೆ ನಿಂತಿದ್ದರು. ಸತ್ತವರು ಸತ್ತರು ಉಳಿದವರ ಕಥೆಯೇನು? ಎಂದು ಸಮಗ್ರ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದ ಸಫಾಯಿ ಕರ್ಮಾಚಾರಿ ಆಂದೋಲನದ ವಿಲ್ಸನ್ ಬೆಜವಾಡ, ಬಾಲನ್ ಮತ್ತು ಹೋರಾಟದ ಹಿನ್ನೆಲೆಯ ನಾಯಕರ ಮೇಲೆ ಕೆಜಿಎಫ್ ನಗರಸಭೆಯ ಉಪಾಧ್ಯಕ್ಷ ಭಕ್ತವತ್ಸಲಂ ಎಂಬ ವಯೋವೃದ್ದ ಪುಢಾರಿಯೊಬ್ಬ ಪಕ್ಕಾ ಬೀದಿರೌಡಿಯಂತೆ ಕೊರಳಪಟ್ಟಿ ಹಿಡಿದು ಪ್ರತಿಭಟನೆ ಏತಕ್ಕೆ ಮಾಡ್ತೀಯ ಅಂತ ಬೊಗಳುತ್ತಿದ್ದ. ನಗರಸಭೆಯೆಂದರೇನು, ಅದರ ಘನತೆ, ಕರ್ತವ್ಯಗಳ ಕಿಂಚಿತ್ ಅರಿವಿಲ್ಲದೆ ಬೀದಿ ರೌಡಿಯಂತೆ ಹೊಡೆದಾಟಕ್ಕೆ ನಿಂತಿದ್ದ ಭಕ್ತವತ್ಸಲಂನನ್ನು ನಗರಸಭೆಯ ಉಪಾಧ್ಯಕ್ಷನನ್ನಾಗಿ ಆರಿಸಿದ ಮಂದಿಗೆ ತಲೆಯಲ್ಲಿ ಮಿದುಳಿತ್ತೋ ಅಥವಾ ಮತ್ತೇನಾದರೂ ವಿಸರ್ಜನೆಯ ಪದಾರ್ಥವಿತ್ತೋ ಅನ್ನಿಸಿತು. ಈ ಮೂರುಕಾಸಿನ ರೌಡಿಯ ದುಂಡಾವರ್ತಿಗೆ ಭಯಬಿದ್ದ ಸತ್ತವರ ಮನೆಯ ಹೆಣ್ಣುಮಕ್ಕಳು ಪರಿಹಾರದ ಚೆಕ್ ಅನ್ನು ತೆಗೆದುಕೊಂಡರು.
ಗಂಗರಾಜು

ತಾವು ಮಾಡಿದ ಕೊಲೆಗಡುಕ ಕೆಲಸವನ್ನು ಅಚ್ಚುಕಟ್ಟಾಗಿ ಮುಚ್ಚಿಹಾಕಲು ಹೊರಟಿರುವ ಜಿಲ್ಲಾಡಳಿತದ ಮೃಗಗಳು, ನಗರಸಭೆಯ ಕಮಿಷನರ್ ಎಂಬ ಹಾಸ್ಯಾಸ್ಪದ ದೇ, ಮತ್ತು ಕೋಲಾರದ ಪೋಲೀಸರು ಹೆಣ ಎತ್ತಲು ಬಿಡದೆ ಪ್ರತಿಭಟಿಸಿದ ಕಾರಣಕ್ಕೆ ಏಳು ಮಂದಿಯ ಮೇಲೆ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಕೇಸಿನಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ತೆಗೆದುಕೊಳ್ಳುವ ಸಂಬಳಕ್ಕೆ ಯಾವತ್ತೂ ಕೆಲಸ ಮಾಡದೆ ಬಡವರ ವಿರೋಧಿಯಾಗಿಯೇ ವರ್ತಿಸುತ್ತಿರುವ ಕೆಜಿಎಫ್ ನಗರಸಭೆ, ಜಿಲ್ಲಾಡಳಿತದ ಅತ್ಯುಚ್ಚ ಸ್ಥಾನದಲ್ಲಿರುವ ರಾಜಾಸ್ಥಾನಿ ಮೃಗ, ಸಾಲ ನೀಡಿಕೆಯಲ್ಲಿ ಕಮೀಷನ್ ಹೊಡೆಯುತ್ತ ಕಮೀಷನ್ ಏಜೆಂಟರಿಂದ ವಸೂಲು ಮಾಡಿದ ಹಡಬೆ ದುಡ್ಡಿನಲ್ಲಿ ತಮ್ಮ ಮಕ್ಕಳ ಕೈಯಲ್ಲಿ ಪಟಾಕಿ ಹೊಡೆಸುತ್ತ ಮಜಾ ಮಾಡುತ್ತ ಬಿದ್ದಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸತ್ತಿದೆಯೋ ಬದುಕಿದೆಯೋ ಅಂತಲೂ ತಿಳಿಯದಂತಾಗಿರುವ ಕೋಲಾರ ಸಮಾಜ ಕಲ್ಯಾಣ ಇಲಾಖೆ. ಇವರಲ್ಲಿ ಯಾವನಾದರೂ ಒಬ್ಬನೇ ಒಬ್ಬ ಪಿತೃಸಂಜಾತ ಈ ಕಾರ್ಮಿಕರ ಪರವಾಗಿದ್ದರೂ ಈ ಮೂರೂ ಮಂದಿ ಇವತ್ತು ಸಾಯುತ್ತಿರಲಿಲ್ಲ. ಇವರ ಕುತ್ತಿಗೆಗೆ ಕೈಯಿಟ್ಟು ಜೈಲಿಗೆ ನೂಕುವ ದರ್ದು ಪೋಲೀಸರಿಗೂ ಇಲ್ಲ. ಬೀದಿರೌಡಿಗಳಿಂದ ತುಂಬಿ ತುಳುಕುತ್ತಿರುವ ಕೆಜಿಎಫ್ ಅಧಿಕಾರಿಗಳ ವರ್ಗ ಮತ್ತು ರಾಜಕಾರಣ ವರ್ಗಕ್ಕೂ ಇಲ್ಲ.  

ಆ ಸಾವಿನ ಮನೆಯಲ್ಲಿ ನಡೆದ ಇನ್ನು ಉಳಿದ ವಿವರಗಳನ್ನು ಬರೆಯಲು ಬೆರಳುಗಳೋ, ಅಥವಾ ಇನ್ಯಾವುದೋ.. ಬರೆಯಲು ssಒಪ್ಪುತ್ತಿಲ್ಲ.. ಸಂಜೆಯ ೪ರ ಹೊತ್ತಿಗೆ ಒಂದೇ ಗುಂಡಿಯೊಳಗೆ ಮೂರೂ ಜೀವಗಳನ್ನು ಒಂದರಪಕ್ಕ ಒಂದರಂತೆ ಜೋಡಿಸಿ ಒಬ್ಬೊಬ್ಬರಾಗಿ ಮೂರು ಹಿಡಿ ಮಣ್ಣು ಸುರಿಯುತ್ತಿರುವಾಗ.. ಆ ಮೂರೂ ಹೆಣಗಳ ಕೊನೆಯಲ್ಲಿ ಯಾವುದೋ ನಾಲ್ಕನೆಯ ಹೆಣವೂ ಜೀವಕಳೆದುಕೊಂಡಂತೆ ಕಣ್ಣು ತೇಲಿಸಿಕೊಂಡು ಬಿದ್ದಂತೆ ಕಾಣಿಸಿತು.. ಅರ್ಧಗುಂಡಿಯ ಮಣ್ಣೂ ತುಂಬುವವರೆಗೂ ಆ ನಾಲ್ಕನೆಯ ಹೆಣ ಯಾರದ್ದಾಗಿರಬಹುದೆಂಬ ಪ್ರಶ್ನೆಗೆ ಗೊಂದಲಗಳೇ ಢಿಕ್ಕಿ ಹೊಡೆಯುತ್ತಿದ್ದವು. ಕೆಜಿಎಫ್ ನಿಂದ ವಾಪಸ್ಸು ಬರುವ ದಾರಿಯಲ್ಲಿ ಆ ನಾಲ್ಕನೆಯ ಹೆಣದ ಚಿತ್ರ ಸುಸ್ಪಷ್ಟವಾಗಿ ಕಂಡುಬಿಟ್ಟಿತು. ವಿ ದಿ ಪೀಪಲ್ ಎಂದು ಶುರುವಾಗುವ ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಶಾಸನಗಳು, ಅಧಿಕಾರಿಗಳು, ಅಧಿಕಾರಗಳು, ಎಲ್ಲದಕ್ಕೂ ಈ ಮೂರು ಹೆಣಗಳು ಒಟ್ಟಿಗೆ ಸೇರಿ ಶವಪರೀಕ್ಷೆ ಮಾಡಿ ಮುಗಿಸಿ ಅವಕ್ಕೂ ಒಂದು ಬಿಳೇಬಟ್ಟೇ ಸುತ್ತಿ ತಮ್ಮ ಪಕ್ಕದಲ್ಲಿ ಮಲಗಿಸಿಕೊಂಡೇ ಮಣ್ಣಾದವು ಅನಿಸತೊಡಗಿ ಒಂದಷ್ಟು ನಿರಾಸೆಯೂ, ಕಡುಕೋಪವೂ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸ್ಪಷ್ಟ ನಿರ್ಧಾರಗಳೂ ಒಟ್ಟೊಟ್ಟಿಗೇ ನುಗ್ಗತೊಡಗಿದವು.. ಯಾವ ಯಾವ ಕಾನೂನುಗಳನ್ನು ಶಾಸನಗಳನ್ನು ಯಾವ ಯಾವ ಸರ್ಕಾರಿಮೃಗಗಳ ವಿರುದ್ದವೇ ತಿರುಗಿಸಿಬಿಟ್ಟು ಯಾರು ಯಾರನ್ನು ಜೈಲುಪಾಲು ಮಾಡಬೇಕೆನ್ನುವ ಒಂದೇ ಒಂದು ಅಜೆಂಡಾ ನನ್ನೆದುರು ಈಗ ತಕಪಕನೆ ಕುಣಿಯುತ್ತಿದೆ. ಅಂದಹಾಗೆ ಮಲದಗುಂಡಿ ಶುಚಿಗೊಳಿಸಲು ತೆರಳಿದ್ದ ಆರು ಜನರಲ್ಲಿ ಮೂವರು ಹೆಣವಾದರು.. ಒಬ್ಬರ ಹಿಂದೊಬ್ಬರು ಕಣ್ಣೆದುರೇ ಮಲದಬಾವಿಯೊಳಗೆ ಉಸಿರುಸಿಲುಕಿಕೊಂಡು ಒದ್ದಾಡುವುದನ್ನು ಕಣ್ಣಾರೆ ನೋಡಿದ ಉಳಿದ ಮೂವರಲ್ಲಿ ಒಬ್ಬರಾದ ಫಿಟ್ಸ್‌ಬಾಬು, ತಾನು ಆಗ ಹಾಕಿಕೊಂಡಿದ್ದ ಹರಕಲು ಅಂಡರ್‌ವೇರ್‌ನಲ್ಲಿಯೇ ದಿಕ್ಕುತಿಳಿಯದೆ ಕೂಗಿಕೊಂಡು ಹೋದವರು ಇನ್ನೂ ಪತ್ತೆಯಿಲ್ಲ. ಎಲ್ಲಿದ್ದಾರೋ ಏನೋ, ಫಿಟ್ಸ್ ಖಾಲೆಯಿಂದ ಬಳಲುತ್ತಿರುವ ನಡುವಯಸ್ಸಿನ ಬಾಬು ಈ ದೇಶದ ಪ್ರಜಾಪ್ರಭುತ್ವದಂತೆಯೇ ಈಗೆಲ್ಲಿ ಹರಿದ ಅಂಡರ್ ವೇರ್‌ನಲ್ಲಿಯೇ ದಿಕ್ಕು ತಿಳಿಯದೆ ಅಲೆದಾಡುತ್ತಿದ್ದಾರೋ..

-ಟಿ.ಕೆ. ದಯಾನಂದ 

4 comments:

 1. It was shocking. I am shattered.

  ReplyDelete
 2. ಕೆ.ಜಿ.ಎಫ್ ಅದು ಚಿನ್ನದ ಗಣಿಯಾಗಿತ್ತೆದು ಮಕ್ಕಳಿಗೆ ಬುಲ್ ಶೀಟ್ ಪಾಠ ಹೇಲುವುದಕ್ಕಿಂತ ಇಂದು ಮಲದ ಗುಂಡಿಯಲ್ಲಿ ಆಗುತ್ತಿರುವ ಸಾವುಗಳು ಮತ್ತು ಅದರ ಸಂಖ್ಯೆ ಬೆಳವಣಿಗೆಗೆ ಕಾರಣವಾಗಿರುವ ಸರ್ಕಾರಿ ಮೃಗಗಳ ಬಗ್ಗೆ ಕೊಂಚ ಬೆಳಕು ಚೆಲ್ಲುವುದು ಅತ್ಯಗತ್ಯ.
  ಮಾದ್ಯಮಗಳು ಶ್ರೀಮಂತರ ಮದ್ಯವರ್ಥಿಗಳಾಗಿರುವುದರಿಂದ ಇಂತಹ ಅಸಹ್ಯ ಸಂಗತಿಗಳಿಗೆ ಜಾಗವಿಲ್ಲವಾಗಿ ಸುಂದರ ನಾಡಿನ ಕನಸನ್ನೇ(ಕಸವನ್ನೇ) ಮೆಲುಕುತ್ತಾರೆ.

  ReplyDelete
 3. Eee munche kGF alle chinnakage bhomi agetha edru,,ega shava galegage agebekagede...!!!ele yarna dushus beko??yarna aparadi sthana dali nelsbeko ennu gothagtha ela:(:(...goth ago asht hothege ennu yesht jana gala savvu age eruthon yeno????!!!
  -Ashwini Awesum Ashu

  ReplyDelete
 4. ದಯಾ ಅವರ ಇ ಲೇಖನ ಕ್ಕೆ ಏನು ಪ್ರತಿಕ್ರಿಯೆ ನೀಡುವದು..? ಆ ಯೋಗ್ಯತೆ ನಮ್ಮಲ್ಲಿ ಇದೆಯೇ..? ದೊಡ್ಡ ದೊಡ್ಡ ಭಾಷಣ
  ಮಾಡುವ ರಾಜಕೀಯ ನಾಯಕರು ..ಪ್ರಜಾಪ್ರಭುತ್ವ ..ಜನರಿಂದ ಆಡಳಿತ..ಇವೆಲ್ಲ ಹೇಳುವದು..ಬೂಟಾಟಿಕೆ ಅಲ್ಲದೆ ಮತ್ತೇನು..? ಆ ಕೆಲಸ ಜನರು ಯಾಕೆ ಮಾಡುತ್ತಾರೆ ಎಂದು ಕೇಳುವ
  ಅಧಿಕಾರಿ ಗಳು ಆ ಕೆಲಸಕ್ಕೆ ಇಳಿಯುವ ಅಂಥಹ ಪರಿಸ್ಥಿತಿ ಏಕೆ ಆಯಿತು...ಎಂದು ವಿಚಾರ ಮಾಡುವದಿಲ್ಲವೇ..?ಹಾಗಾದರೆ ನಮ್ಮ ದೇಶ ಕ್ಕೂ ಸೋಮಾಲಿಯ ಇಥಿಯೋಪಿಯ ಕ್ಕೂ ಏನು ವ್ಯತ್ಯಾಸ ..?
  ವಿಠಲ್ ರಾವ್ ಕುಲಕರ್ಣಿ ಮಲಖೇಡ್

  ReplyDelete