Friday, September 9, 2011

ಮಾಧ್ಯಮ ಲೋಕದ ಭ್ರಷ್ಟಾಚಾರ: ಒಂದು ಗಂಭೀರ ಆತ್ಮಾವಲೋಕನ



ಮಾಧ್ಯಮ ಲೋಕದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮ ವಲಯದಿಂದಲೇ ಆತ್ಮಾವಲೋಕನ ಆರಂಭವಾಗಬೇಕು ಎಂಬುದು ಮೊದಲಿನಿಂದಲೂ ನಮ್ಮ ಆಗ್ರಹ. ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರ ಹೆಸರು, ಇನಿಷಿಯಲ್ಸ್ ಕಾಣಿಸಿಕೊಂಡ ಹಿನ್ನೆಲೆಯನ್ನಿಟ್ಟುಕೊಂಡು ಸಂಡೆ ಇಂಡಿಯನ್ ಪತ್ರಿಕೆ ವರದಿಗಾರ ಹರ್ಷ ಕುಮಾರ್ ಕುಗ್ವೆ ಸುದೀರ್ಘ ಲೇಖನವನ್ನು ಸಂಪಾದಕೀಯಕ್ಕಾಗಿ ಬರೆದಿದ್ದಾರೆ. ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಮಾತನಾಡುವವರೂ ಇಲ್ಲದ ಈ ಸಂದರ್ಭದಲ್ಲಿ ಓರ್ವ ಪತ್ರಕರ್ತನಾಗಿ ತನ್ನ ಅರಿವಿನ ಮಿತಿಯಲ್ಲಿ ಇಡೀ ಸಮಸ್ಯೆಯನ್ನು ಪ್ರಾಂಜಲ ಮನಸ್ಸಿನಿಂದ ಬಿಡಿಸಿಡಲು ಹರ್ಷ ಪ್ರಯತ್ನಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.


-ಸಂಪಾದಕೀಯ

ಲೋಕಾಯುಕ್ತ ನಿಕಟಪೂರ್ವ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ಗಣಿ ಅಕ್ರಮ ಕುರಿತ ಅಂತಿಮ ವರದಿಯ ಅಡಕಭಾಗವಾದ ಯು.ವಿ.ಸಿಂಗ್ ವರದಿಯಲ್ಲಿರುವ ಗಣಿಕಳ್ಳರಿಂದ ಹಣ ಪಡೆದ ಪತ್ರಕರ್ತರ ಹೆಸರುಗಳ ಇನಿಷಿಯಲ್ಲುಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಕುರಿತು ಪತ್ರಕರ್ತರ ಒಳಗೊಳಗೇ ಅನೌಪಚಾರಿಕವಾಗಿ ಚರ್ಚೆಯಾಗುತ್ತಿರುವುದನ್ನು ಬಿಟ್ಟರೆ ಹೊರಗಡೆ ಯಾರೂ ಮಾತನಾಡುವ ವಾತಾವರಣವೇ ಇಲ್ಲದಷ್ಟು ಮುಕ್ತತೆಯನ್ನು ಕಳೆದುಕೊಂಡಿದೆ ನಮ್ಮ ಪತ್ರಿಕೋದ್ಯಮ. ಮೊನ್ನೆ ಮಿತ್ರ ಅಹೋಬಳಪತಿ ಕರೆಮಾಡಿ ಅಲ್ಲಾ ಮಾರಾಯಾ ಬೇರೆಯವರ ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೇ, ವಾರಗಟ್ಟಲೇ ಬರೆಯುವ, ಜಾಡಿಸುವ, ಹಂಗಿಸುವ ನಮ್ಮ ಪತ್ರಕರ್ತರು ಯಾಕೆ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ? ಏನಾದರೂ ಮಾಡಬೇಕಲ್ವಾ ಇದರ ಬಗ್ಗೆ? ಎಂದರು. ನಾವೇನು ಮಾಡಬಹುದು ಎಂದು ನಿಜಕ್ಕೂ ನನಗೆ ತೋಚಲಿಲ್ಲ.

ನಾನು ಒಬ್ಬ ಪತ್ರಕರ್ತ. ಮುಖ್ಯವಾಗಿ ಹೊಟ್ಟೆಪಾಡಿಗಾಗಿ ಈ ವೃತ್ತಿ ಸೇರಿಕೊಂಡವ. ಅಪಾರ ವಿಸ್ತಾರ, ವೈವಿಧ್ಯತೆ ಹೊಂದಿರುವ ಈ ಕ್ಷೇತ್ರದಲ್ಲಿ ಈಗಿನ್ನೂ ಕಣ್ ಕಣ್ ಬಿಡುತ್ತಿರುವ ಪತ್ರಕರ್ತರಲ್ಲಿ ನಾನೂ ಒಬ್ಬ ಎಂದರೂ ಸರಿ. ಇಂದಿನ ವಾಸ್ತವಿಕ ಪತ್ರಿಕೋದ್ಯಮ ಹಿಡಿದ ದಿಕ್ಕು - ನಂಬಿದ್ದೇನೆಂದುಕೊಂಡಿರುವ ಆದರ್ಶಗಳ ನಡುವೆ ತಾಕಲಾಡುತ್ತಾ ಮುಂದೋ, ಹಿಂದೋ ಅರಿಯದೇ ಓಡುತ್ತಿರುವವ. ಇದೇ ಓಟದಲ್ಲಿ ಗಕ್ ಅಂತ ನಿಂತು ಒಮ್ಮೆ ಸುತ್ತಲೆಲ್ಲ ಕಣ್ಣಾಡಿಸಿ ಮುಂದೆ ಓಡಲನುವಾಗುವ ಮುನ್ನ ಈ ಪ್ರಶ್ನೆ ಎದುರಾಗಿದೆ. ದೇಶದ ಮಾಧ್ಯಮ ಜಗತ್ತು ಹಾಗೂ ಮಧ್ಯಮ ವರ್ಗ ಹಿಂದೆಂದಿಗಿಂತ ತೀವ್ರವಾಗಿ ಭ್ರಷ್ಟಾಚಾರದ ವಿಷಯಕ್ಕೆ ಸ್ಪಂದಿಸುತ್ತಿರುವಾಗ ನನ್ನ ನಿಲುವೇನಾಗಿರಬೇಕು? ಏನಾಗಿದೆ? ಮತ್ತು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೇನೆ?

ನನ್ ನನಗೇ ಕೆಲವು ವಿಷಯಗಳು ಸ್ಪಷ್ಟವಾಗಬೇಕಿರುವ ಕಾರಣಕ್ಕಾಗಿಯಾದರೂ, ನನ್ನನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿಕೊಳ್ಳುವ ಸಲುವಾಗಿ ಹಾಗೂ ದಾರಿ ತಪ್ಪಿದರೆ ನನ್ನ ಮಾತುಗಳನ್ನು ಮುಂದೆ ಯಾರಾದರೂ ನೆನಪಿಸಲಿ ಎನ್ನುವ ಕಾರಣಕ್ಕಾಗಿಯಾದರೂ ಈ ಕುರಿತು ಬರೆದುಕೊಳ್ಳಬೇಕಾಗಿದೆ.  ನಾನೇನೋ ಶೇಕಡಾ ನೂರು ಸಾಚಾ ಎಂಬ ಭಾವನೆ ನನಗಿಲ್ಲದಿದ್ದರೂ ಇಂತಹ ಸಂದರ್ಭ ನನ್ನೊಳಗೇ ಸೃಷ್ಟಿಸಿರುವ ಆತ್ಮಾವಲೋಕನಕ್ಕೆ ನಾನೂ ಒಳಗಾಗಲೇಬೇಕಿದೆ. ಪತ್ರಕರ್ತನಾಗಿ ಹೆಚ್ಚು ಕಾಲ ಅನುಭವವಿಲ್ಲದಿದ್ದರೂ ನನ್ನ ಅನುಭವಕ್ಕೆ ಬಂದ, ಕಣ್ಣಿಗೆ ಕಂಡ, ಕಿವಿಗೆ ಬರಸಿಡಿಲಂತೆ ಅಪ್ಪಳಿಸಿದ ಸಂಗತಿಗಳನ್ನು ಎಲ್ಲರೆದುರು ಹಂಚಿಕೊಳ್ಳುವ ಅನಿವಾರ್ಯತೆಯನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ.

****

ಕಳೆದ ವರ್ಷ ಕಾರ್ಯಕ್ರಮವೊಂದಕ್ಕೆ ಹೋದೆ. ಅದು ಡಿಅಡಿಕ್ಷನ್ ಆಸ್ಪತ್ರೆಯೊಂದು ನಡೆಸಿದ ಕಾರ್ಯಕ್ರಮ. ನ್ಯಾಯಾಧೀಶರಿಂದ ಹಿಡಿದು ವೈದ್ಯರವರೆಗೆ ಅನೇಕ ಅತಿಥಿಗಳು ಭಾಗವಹಿಸಿದ್ದ ಆ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಕೊನೆಗೆ ಎಲ್ಲರೂ ಹೊರಡಲನುವಾದಾಗ ಒಬ್ಬ ವ್ಯಕ್ತಿ ನನ್ನೆಡೆ ಬಂದು ಒಂದು ಬದಿಗೆ ಕರೆದುಕೊಂಡು ಹೋಗಿ ಒಂದು ಸೀಲ್ ಮಾಡಿದ್ದ ಕವರ್ ನೀಡಲು ಬಂದರು. ಅದರ ಮರ್ಮ ತಿಳಿದು ಇಲ್ಲ ಅದೆಲ್ಲಾ ಬೇಡ ಎಂದೆ. ಇಲ್ಲಾ ಸರ್ ಬೇಡ ಅನ್ನಬಾರದು. ನಮ್ ಡಾಕ್ಟರು ತಿಳಿಸಿಬಿಟ್ಟಿದ್ದಾರೆ. ಬಂದಿರುವ ಎಲ್ಲಾ ಪತ್ರಕರ್ತರಿಗೂ ಕೊಡಬೇಕು ಎಂದು. ನೀವು ತೊಗೊಳ್ಳಿಲ್ಲ ಅಂದರೆ ನಮಗೆ ಬೈಯುತ್ತಾರೆ. ಪ್ಲೀಸ್ ತೊಗೊಳ್ಳಿ ಸಾರ್ ಎಂದರು. ಸ್ವಲ್ಪ ಗಂಭೀರ ದ್ವನಿಯಲ್ಲೇ ನೀವು ಹೀಗೆಲ್ಲಾ ಹೇಳಿದ್ರೆ ನಾನು ಬರ‍್ತಾನೇ ಇರಲಿಲ್ಲ. ಮತ್ತೆ ಎಂದೂ ಕರೆಯಬೇಡಿ ಎಂದೆ. ಆಗ ಆ ವ್ಯಕ್ತಿ ಸುಮ್ಮನೇ ನಡೆದ.  ಅಂದು ಅಲ್ಲಿಗೆ ವಿಶೇಷ ವಾಹನವೊಂದರ ವ್ಯವಸ್ಥೆಯಲ್ಲಿ ಬಂದಿದ್ದ ಪತ್ರಕರ್ತರ ಗುಂಪೊಂದು ಪ್ರತ್ಯೇಕ ಕೊಠಡಿಗಳಿದ್ದ ಕಡೆ ನಡೆದಿದ್ದು ದೂರದಿಂದಲೇ ಕಂಡು ಪಿಚ್ಚೆನಿಸಿತ್ತು.

ಪತ್ರಕರ್ತರು ಸರ್ಕಾರ ನೀಡುವ ಸೈಟುಗಳನ್ನು ತೆಗೆದುಕೊಳ್ಳೋದು ಇದ್ದೇ ಇದೆ. ಕೆಲ ದಿನಗಳ ಹಿಂದೆ ನನ್ನ ಗೆಳೆಯ ಪತ್ರಕರ್ತರೊಬ್ಬರು ಪ್ರೆಸ್ ಕಾಲನಿ ಸೈಟೊಂದನ್ನು ರಕ್ಷಿಸಿಕೊಳ್ಳಲು ವಿಶೇಷ ಶ್ರಮ ಪಡುತ್ತಿದ್ದುದು ಕಂಡು ಕೇಳಿದ್ದೆ. ಸಾರ್. ನಿಮಗೆ ಸ್ವಂತ ಮನೆ ಇದೆ. ಹೀಗಿದ್ದೂ ಈ ಸೈಟು ನಿಮಗೆ ಅಗತ್ಯ ಇದೆಯಾ? ನನ್ನಿಂದ ಈ ಪ್ರಶ್ನೆಯನ್ನು ನಿರೀಕ್ಷಿಸಿಯೇ ಇದ್ದ ನನ್ನ ಪ್ರಶ್ನೆಗವರು  ಮುಗುಳ್ನಕ್ಕು  ಮೂರ್ಖ ನನ್ ಮಗನೇ ಎನ್ನುವಂತೆ ನನ್ನೆಡೆ ನೋಡಿ ಸೈಟಿಗಾಗಿಯೇ ರಾಜಕಾರಣಿಗಳ ಕೈಕಾಲು ಹಿಡಿಯುವ ಪೈಕಿ ನಾನಲ್ಲವಾದರೂ ಅದಾಗಿಯೇ ಬಂದಾಗ ಬೇಡ ಎಂದು ದೂರ ತಳ್ಳುವ ಮೂರ್ಖನೂ ಅಲ್ಲ ಎಂದರು. ಅಂದಿನಿಂದ ಅವರನ್ನು ನೋಡುವ ನನ್ನ ದೃಷ್ಟಿಕೋನವೇ ಬದಲಾಯಿತು. ಈ ಹಾಳು ಭ್ರಮೆಗಳು ಇನ್ನೂ ಯಾಕಾದರೂ ತಲೆಯಲ್ಲಿವೆಯೋ? ಎನ್ನಿಸಿತ್ತು. ಅಂತೆಯೇ ಶಿವಮೊಗ್ಗೆಯಲ್ಲಿ ಸೈಟಿಗಾಗಿ ಅರ್ಜಿ ಹಾಕಿದವರ ಸಂಖ್ಯೆ ೩೫೦ ಎಂದು ತಿಳಿದಾಗ ದಿಗ್ಭ್ರಮೆಯಾಗಿತ್ತು. ಯಾಕೆಂದರೆ ಶಿವಮೊಗ್ಗ ನಗರದ ಪ್ರತಿಯೊಂದೂ ಪತ್ರಿಕಾ ಕಛೇರಿಗೂ ತಿಂಗಳಿಗೆ ಏಳೆಂಟು ಸಲವಾದರೂ ಭೇಟಿ ಕೊಡುತ್ತಿದ್ದ ನನಗೆ ಅಲ್ಲಿರುವ ಬರೋಬ್ಬರಿ ೩೦ - ೩೫ ಪತ್ರಿಕಾ ಕಛೇರಿಗಳಲ್ಲಿ ಎಲ್ಲಾ ಸಿಬ್ಬಂದಿಯವರನ್ನ ಸೇರಿಸಿದರೂ ೧೫೦ಕ್ಕಿಂತ ಹೆಚ್ಚು ಮಂದಿ ಇದ್ದಾರೆನಿಸಿರಲಿಲ್ಲ. ನಂತರ ಈ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಕಾರಣಕ್ಕೆ ಕೆಲವರು ಭಾರೀ ಪ್ರತಿಭಟನೆ ನಡೆಸಿದ್ದವರಲ್ಲಿ ಒಬ್ಬರು ತಾಮ್ಮನ್ನು ತಾವು ಕಾಮ್ರೇಡ್  ಎಂದುಕೊಳ್ಳುತ್ತಾ ಕೆಂಪು ಕಪ್ಪು ಡ್ರೆಸ್ ಹಾಕುತ್ತಾ, ಕೆಂಪು ಬೈಕ್‌ನಲ್ಲಿ ಓಡಾಡಿಕೊಂಡಿದ್ದವರು ಯಡಿಯೂರಪ್ಪ ಮುಖ್ಯಮಂತ್ರಿಯಾದೊಡನೆ ದಿಢೀರ್ ಅಂತ ಯಡಿಯೂರಪ್ಪನ ಆರಾಧಕರಾಗಿದ್ದದ್ದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ.

ಒಬ್ಬ ಪತ್ರಕರ್ತನ ಅನೇಕ ಬರಹಗಳಲ್ಲಿ ಹುತಾತ್ಮ ಭಗತ್ ಸಿಂಗ್, ಆಜಾದ್ ಸಾವರ್ಕರ್ ಮುಂತಾದವರ ಬಗ್ಗೆ ಅವರಿಗಿಂತ ತಾನು ಹೆಚ್ಚು ದೇಶಪ್ರೇಮಿ ಎನ್ನುವ ದಾಟಿಯಲ್ಲಿ ಬರೆದಿರುವುದನ್ನೂ, ತನ್ನಿಂದಲೇ ಧರ್ಮರಕ್ಷಣೆ ಎಂದು ಆತ ಹೂಂಕರಿಸುವುದನ್ನೂ ಓದಿದ್ದೇನೆ. ಆದರೆ ಆವರೇಜ್ ಪತ್ರಕರ್ತರಿಗಿಂತ ಹೆಚ್ಚಿಗೇ ಸಂಬಳ ಪಡೆಯುವ ಈತ ಹಾಗೆಲ್ಲಾ ಬರೆದು ತಾನು ಪಡೆದ ಹೆಸರಿನಿಂದ ಹಾಗೂ, ತಾನಿರುವ ಸುದ್ದಿಮನೆ ಕತೆಗಾರ, ಗಾಡ್‌ಫಾದರ್ ಪತ್ರಕರ್ತರ ಪ್ರಭಾವ ಬಳಸಿಕೊಂಡು ತನ್ನ ಅಂಗವಿಕಲ ಹೆಂಡತಿಯ ಹೆಸರಲ್ಲಿ ಜಿ ಕೆಟಗರಿ ಸೈಟ್ ಪಡೆದಿದ್ದು ಬೆತ್ತಲಾದಾಗ, ಹಾಗೆ ಪಡೆದಿದ್ದನ್ನು ನಾಚಿಕೆಯಿಲ್ಲದೆ ಭಂಡನಂತೆ ಸಮರ್ಥಿಸಿಕೊಂಡಾಗ ನನಗೆ ಏನನ್ನಿಸಿತ್ತು ಎಂದು ಇಲ್ಲಿ ಹೇಳಲು ಆಗುವುದೇ ಇಲ್ಲ. ಸದ್ಯ ಆ ಭಗತ್ ಸಿಂಗ್, ಆಜಾದ್, ಸಾವರ್ಕರ್ ಈಗಿಲ್ಲ. ಅದು ಅವರ ಅದೃಷ್ಟವೆಂದೇ ಹೇಳಬೇಕು!

ಈ ಸಮಾಜದಲ್ಲಿ ಸಾಮಾನ್ಯ ಜನರೆನಿಸಿಕೊಂಡವರು ಒಂದು ಮದುವೆ ಮಾಡಲು, ಒಂದು ಸೈಟು ಕೊಳ್ಳಲು, ಒಂದು ಮನೆ ಕಟ್ಟಲು ತಮ್ಮ ಇಡೀ ಜೀವನಾಯುಷ್ಯವನ್ನೇ ಕಳೆಯುತ್ತಾರೆ. ಸಾಲಸೋಲದಲ್ಲಿ ಬಿದ್ದು ಪಡಬಾರದ ಪಡಿಪಾಟಲು ಪಡುತ್ತಿರುತ್ತಾರೆ. ಅದೇ ಸಾಮಾನ್ಯ ಜನರ ನಡುವಿನ ಕತೆಗಳನ್ನು ಅವರಿಗೇ ಅಸಾಮಾನ್ಯವೆಂಬಂತೆ ಓದಿಸಿ, ತೋರಿಸಿ, ರಂಜಿಸಿ, ಬೆಚ್ಚಿ ಬೀಳಿಸಿ, ಕೊನೆಗೆ ಆ ಸಾಮಾನ್ಯರಿಗಿಂತ ಭಿನ್ನರಾಗಿ, ಶ್ರೇಷ್ಟರಾಗಿ, ಅದೇ ಕಾರಣಕ್ಕೆ ಆ ಸಾಮಾನ್ಯ ಜನರ ವಿರೋಧಿಗಳಿಂದ ಕಾಣಿಕೆಗಳನ್ನು ಸವಲತ್ತುಗಳನ್ನು ಪಡೆದು ಅಸಾಮಾನ್ಯರಾಗಿಬಿಡುವ ಈ ಪತ್ರಕರ್ತರ ಬಗ್ಗೆ ಏನು ಹೇಳೋಣ?!

ಕೆಲವು ಪತ್ರಕರ್ತರಿದ್ದಾರೆ. ತಮ್ಮ ಕೆಳಗಿನವರು ಎಂತಹಾ ಕಡು ಭ್ರಷ್ಟರೆಂಬುದು ಅವರಿಗೆ ತಿಳಿದಿರುತ್ತದೆ. ಆದರೆ ಅವರ ಕೆಲಸ ಅಂತ ಕೆಳಗಿನವವರನ್ನೇ ಅವಲಂಬಿಸಿರುತ್ತಾದ್ದರಿಂದ ಆ ಕುರಿತು ಎಲ್ಲೂ ಪಿಟಕ್ ಎನ್ನುತ್ತಿರುವುದಿಲ್ಲ. ತಾವು ಮಾತ್ರ ಸರ್ವಸಂಪನ್ನರಾಗಿದ್ದುಬಿಡುತ್ತಾರೆ. ಆ ಕೆಳಗಿನವರು ಅನೇಕ ಸಲ ಇವರು ನೀಡುವ ಕಡಿಮೆ ಸಂಬಳದ ಕಾರಣದ ಜೊತೆಗೆ ಸ್ಥಳೀಯವಾಗಿ ಭ್ರಷ್ಟರಾಗಲು ಇರುವ ಅವಕಾಶಗಳ ಕಾರಣವೂ ಸೇರಿಕೊಂಡು ಭ್ರಷ್ಟತೆಯ ಹಾದಿ ಹಿಡಿದಿರುವುದೂ ಉಂಟು. ಅವರಿಗೇನ್ ಬಿಡಿ. ಬೆಂಗಳೂರಲ್ಲಿ ಕಂಪ್ಯೂಟರ್ ಮುಂದು ಕುಳಿತು ಯಾವುದಕ್ಕೂ ಕಡಿಮೆ ಮಾಡಿಕೊಳ್ಳದಂಗೆ ಇರುತ್ತಾರೆ. ಆದರೆ ಇಲ್ಲಿ ನಾವು ಎಷ್ಟೋ ಸಲ ಎಂತೆಂತಹ ರಿಸ್ಕ್ ತೆಗೆದುಕೊಳ್ಳಬೇಕಿರುತ್ತೆ ಅವರಿಗೆ ತಿಳಿಯೋದಿಲ್ಲ. ಹೋದಲ್ಲೆಲ್ಲಾ ಕಾರ್ಮಿಕರ, ಬಡವರ ಬಗ್ಗೆ ಭಾಷಣ ಮಾಡ್ತಾರೆ. ಆದರೆ ನಮಗೆ ಐನೂರು ರೂಪಾಯಿ ಜಾಸ್ತಿ ಕೊಡೋಕೆ ಹಿಂದೆ ಮುಂದೆ ನೋಡುತ್ತಾರೆ. ಅವರು ಒಂದೊತ್ತಿನ ಕುಡಿತಕ್ಕೆ ಹಾಕೋದನ್ನೇ ನಮಗೆ ನೀಡಿದ್ರೆ ನಮ್ಮ ಮನೆಯ ಎಷ್ಟೋ ಪ್ರಾಬ್ಲಂಗಳು ಪರಿಹಾರ ಆಗಿಬಿಡ್ತವೆ ಕಣ್ರೀ. ಆದರೆ ಅವರು ನಮ್ಮ ಬಗ್ಗೆ ಕ್ಯಾರೇ ಅನ್ನಲ್ಲ. ಹಿಂಗಾಗಿ ನಾವೂ ಬೇರೆ ದಾರಿ ಮಾಡಿಕೊಳ್ಳಬೇಕಾಗಿದೆ ಎಂದು ಒಬ್ಬ ಪತ್ರಕರ್ತ ಗೆಳೆಯ ತಾನು ನಡೆಸುವ ಡೀಲಿಂಗ್‌ಗಳನ್ನು ಸಮರ್ಥಿಸುವುದನ್ನು ಕೇಳಿ ಮೈಪರಚಿಕೊಳ್ಳುವಂತಾಗಿತ್ತು ನನಗೆ.

ಇನ್ನೊಂದು ಘಟನೆ. ಒಬ್ಬ ಯುವಕ ನನ್ನನ್ನು ಪರಿಚಯ ಮಾಡಿಕೊಂಡ. ಉದ್ಯೋಗ ಕೇಳಿದ. ನಾನು ಪತ್ರಕರ್ತ ಎಂದೆ. ಕೂಡಲೇ ಆತ ಒಂದು ಟಾಪ್ ಟೀವಿ ವಾಹಿನಿಯ ಬೆಂಗಳೂರಿನ ವರದಿಗಾರನೊಬ್ಬನನ್ನು ವಾಚಾಮಗೋಚರ ಬೈಯತೊಡಗಿದ. ಅಲ್ಲಾ ಸಾರ್.. ಈ ಬೇವರ್ಸಿ ನನ್ ಮಕ್ಕಳು ಉತ್ತಮ ಸಮಾಜ ನಿರ್ಮಿಸ್ತೀವಿ ಎನ್ನುತ್ತಾರೆ. ಅವರು ನಿಜಕ್ಕೂ ಸಾಚಾ ಆಗಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅದು ಬಿಟ್ಟು ತಪ್ಪು ಮಾಡಿದೋರ ವೀಕ್‌ನೆಸ್ ಬಳಸಿಕೊಂಡು ಡೀಲಿಂಗ್‌ಗೆ ಇಳೀತಾರಲ್ಲಾ ಸಾರ್. ಅವರು ಕೇಳಿದಷ್ಟು ಕೊಡಲಿಲ್ಲ ಎಂದಾಕ್ಷಣ ಹಾಕಿ ಜಡಿದು ಬಿಡ್ತಾರೆ. ಇದಾ ಸಾರ್ ಪತ್ರಿಕೋದ್ಯಮ ಎಂದರೆ? ಅಂದ. ನನಗೆ ತಲೆಬುಡ ತಿಳಿಯಲಿಲ್ಲ. ಆಮೇಲೆ ಕೇಳಿದ್ದಕ್ಕೆ ಆ ವರದಿಗಾರನು ಕೆಲವು ಯುವಕರು (ಬಹುಶಃ ನನಗೆ ಹೇಳಿದವನೂ ಸೇರಿಕೊಂಡೆ) ಬೆಂಗಳೂರಿನ ಕೆಲ ಪ್ರತಿಷ್ಟಿತ ಕಾಲೇಜುಗಳ  ಹುಡುಗಿಯರಿಗೂ ಗಿರಾಕಿಗಳಿಗೂ ನಡುವೆ ತಲೆಹಿಡಿಯುವ ಕೆಲಸ ಮಾಡುತ್ತಿದ್ದುದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಆ ಯುವಕರಿಗೆ ಒಂದು ಲಕ್ಷ ರೂಪಾಯಿ ಕೊಡಲು ಡಿಮಾಂಡ್ ಮಾಡಿದ್ದನಂತೆ. ಅವರು ೮೦ ಸಾವಿರ ರೂಪಾಯಿ ಕೊಡಲು ತಯಾರಿದ್ದರೂ ಒಪ್ಪದೆ ಕೊನೆಗೆ ಪ್ರಸಾರ ಮಾಡಿಯೇ ಬಿಟ್ಟರಂತೆ!.

ಎರಡು ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬ ಕಾಲ್ ಮಾಡಿ ಟೀವಿ ಚಾನಲ್ ಒಂದರ ಹೆಸರು ಹೇಳಿ ಅದರಲ್ಲಿ ಮನರಂಜನಾ ವಿಭಾಗದಲ್ಲಿ ಕೆಲಸದಲ್ಲಿರುವ ರಾಜು(ಹೆಸರು ಬದಲಿಸಿಲ್ಲ) ಎನ್ನುವವ ನಿನಗೆ ಗೊತ್ತಾ? ಕೇಳಿದ. ವಿಷಯ ಏನು ಎಂದಿದ್ದಕ್ಕೆ. ವಿದ್ಯಾರ್ಥಿನಿಯೊಬ್ಬಳು ಟೀವಿಯಲ್ಲಿ ನಿರೂಪಕಿಯಾಗಲು ಇಚ್ಚಿಸಿ ಕರೆ ಮಾಡಿದ್ದಾಗ ಆಕೆಯ ಫೋಟೋ ತರಿಸಿಕೊಂಡು ನೀನು ಬೆಂಗಳೂರಿಗೆ ಬಂದು ಕೆಲವು ದಿನ ನಮ್ಮ ಜೊತೆ ಇರಬೇಕಾಗುತ್ತೆ ಕಣಮ್ಮಾ. ಇಲ್ಲಿಂದ ಹೊರ ಊರಿಗೂ ಬರಬೇಕಾಗುತ್ತೆ. ಅದಕ್ಕೆ ತಯಾರಿದ್ದೀಯಾ? ಹಳ್ಳಿ ಗೌರಮ್ಮನ ರೀತಿ ಇರೋ ಹಾಗಿಲ್ಲ, ಇಲ್ಲಿ ಅಡ್ಜ್ಜಸ್ಟ್ ಮಾಡಿಕೊಂಡು ಇರಬೇಕಾಗುತ್ತೆ. ಓಕೆನಾ? ಎಂದು ಅಸಭ್ಯವಾಗಿ ವರ್ತಿಸಿದ್ದನಂತೆ. ಕೊನೆಗೆ ಆ ವ್ಯಕ್ತಿಯ ಜಾಡು ಹಿಡಿದ ನನ್ನ ಕೆಲವು ಸ್ನೇಹಿತರು ಆತನ ದೇಹಚರ್ಯೆ ಬದಲಿಸುವುದರೊಳಗಾಗಿ ಅವನ ಹಲ್ಕಟ್ ಕೆಲಸಗಳು ಚಾನೆಲ್‌ನ ಮುಖ್ಯಸ್ಥರ ಗಮನಕ್ಕೆ ಬಂದು ಆತನನ್ನು ಬಿಡಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಈತನಿಗೊಬ್ಬ ಮಧ್ಯವರ್ತಿ ಇದಾನೆ. ಆತ ಇನ್ನೂ ಅದರಲ್ಲೇ ಇದ್ದಾನೆ. ಈ ಘಟನೆಯಿಂದಾಗಿ ಆ ವಿದ್ಯಾರ್ಥಿನಿ ಅದೆಷ್ಟು ಜರ್ಝರಿತಳಾಗಿದ್ದಳೆಂದರೆ ಹೇಳತೀರದು. ಒಂದೊಮ್ಮೆ ಇಂತಹ ಘಟನೆಗಳು ಸಮಾಜದ ಮುಂದೆ ಬಯಲಾದರೆ ಪರಿಸ್ಥಿತಿ ಏನಾಗುತ್ತದೆ? ಸ್ವಾಭಿಮಾನ- ಗೌರವ - ಮರ್ಯಾದೆಯಿಂದ ಟೀವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ರಾತ್ರಿ ಹಗಲೆನ್ನದೇ ಸೇವೆ ಸಲ್ಲಿಸುತ್ತಿರುವ ಹೆಣ್ಣುಮಕ್ಕಳನ್ನು ಅವರ ಸುತ್ತಮುತ್ತಲಿನ ಸಮಾಜ ನೋಡುವ ರೀತಿ ಏನಾಗಬಹುದು. ರಾಜುನಂತಹ ನೀಚರಿಗೆ ಅಷ್ಟು ಮುಂದುವರೆಯಲು ಇಲ್ಲಿ ಅವಕಾಶ ಇದ್ದುದಾದರೂ ಹೇಗೆ?

ಪತ್ರಕರ್ತರಿಗೆ, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನೈಚ್ಚಿಕವಾಗಿಯೂ, ಅನಾಯಾಸವಾಗಿಯೂ ಹಲವಾರು ಸಲ ವಿಶೇಷ ಅವಕಾಶಗಳು ಸೌಲಭ್ಯಗಳು ದೊರೆಯುತ್ತವೆ. ಪತ್ರಿಕಾಗೋಷ್ಠಿಗಳಲ್ಲಿ ದೊಡ್ಡ ಕುಳಗಳು ಒಳ್ಳೆಯ ಊಟ ಹಾಕಿಸುವುದರಿಂದ ಹಿಡಿದು ವಿಶೇಷ ಕೊಡುಗೆ, ಬೆಳ್ಳಿ ಪಾತ್ರೆ ನೀಡುವವರೆಗೂ ಆ ಸೌಲಭ್ಯಗಳು ಇರುತ್ತವೆ. ಮಾಧ್ಯಮವೊಂದರಲ್ಲಿ ತಮಗಿರುವ ಸ್ಥಾನಮಾನದ ಕಾರಣಕ್ಕಾಗಿ ಸಮಾಜದಲ್ಲಿ ಅವರ ಮಾತಿಗೆ ಬೆಲೆ ಬರುತ್ತದೆ. ಅಧಿಕಾರಿಗಳು, ಮಂತ್ರಿ ಮಹೋದಯರು ಭಯಮಿಶ್ರಿತ ಗೌರವಾಧರಗಳನ್ನು ನೀಡತೊಡಗುತ್ತಾರೆ. ಅಲ್ಲಿಗೆ ಆ ಪತ್ರಕರ್ತನ ಪಾತ್ರ ಪತ್ರಿಕೆಗೆ ಮಾತ್ರ ಸೀಮಿತಗೊಳ್ಳದೇ ಆತ ಏಕಾಪಾತ್ರಾಭಿನಯ ಶುರು ಮಾಡಿತ್ತಾನೆ. ಏಕಕಾಲದಲ್ಲಿ ಅರೆಕಾಲಿಕ ಪತ್ರಕರ್ತನೂ, ಅರೆಕಾಲಿಕ ರಾಜಕಾರಣಿಯೂ ಆಗಿ ಮಾರ್ಪಾಡಾಗುತ್ತಾನೆ. ಕೆಲ ರಾಜಕಾರಣಿಗಳು ಪತ್ರಕರ್ತನನ್ನ ಅಣ್ಣಾ ಎಂದೋ, ಸಾರ್ ಎಂದೋ ಸಂಬೋಧಿಸುತ್ತಾ ತಮ್ಮ ಹಿತೈಷಿಗಳನ್ನಾಗಿಯೂ, ಮಾರ್ಗದರ್ಶಕರನ್ನಾಗಿಯೂ ಮಾಡಿಕೊಳ್ಳುತ್ತಾರೆ. ಪತ್ರಕರ್ತನಾಗಿ ಅವನ ಹುದ್ದೆ ಒಂದು ಮಟ್ಟದಲ್ಲಿ ನಿಂತು ಹೋಗಿಬಿಡಬಹುದು. ಆದರೆ ಈ ಬಗೆಯ ಮಾರ್ಗದರ್ಶಕ, ಚಿಂತಕ, ಸೆಮಿ ರಾಜಕಾರಣಿ ಪಾತ್ರಧಾರಿಯಾಗಿ, ನಟನಾಗಿ, ಟಿವಿ ಚಾನಲ್‌ಗಳಲ್ಲಿ ಆತನ ವಿಶೇಷ ಕಾರ್ಯಕ್ರಮಗಳು, ಪ್ಯಾನೆಲ್ ಚರ್ಚೆಗಳು, ಅವ್ಯಾಹತವಾಗಿ ನಡೆಯತೊಡಗುತ್ತವೆ. ಕೆಲವೊಮ್ಮೆ ಕ್ರೈಂ ವರದಿಗಳನ್ನೂ, ಕಾರ್ಯಕ್ರಮಗಳನ್ನೂ ಆತ ಲೈವ್ ಆಗಿ ವರದಿ ಮಾಡಿದ ಕಾರಣದಿಂದ ಸಮಾಜದ ಆ ಅಪರಾಧಿ ವರ್ಗವೂ ಈತನಿಗೆ ವಿಶೇಷ ರಕ್ಷಣೆ, ಬೆಂಬಲಗಳನ್ನೂ ನೀಡುತ್ತಿರುತ್ತದೆ. ಆದರೆ ಈ ಪತ್ರಕರ್ತನಿಗೆ ವೃತ್ತಿನಿಷ್ಟೆ ಎಷ್ಟೆಂದರೆ ಅಪ್ಪಿತಪ್ಪಿಯೂ ತಾನು ನಿರ್ವಹಿಸುವ ಇಂತಹ ಅರೆಕಾಲಿಕ ಕೆಲಸಗಳನ್ನು ಆತ ಬರೆದುಕೊಳ್ಳಲು ಹೋಗುವುದಿಲ್ಲ. ಅಲ್ಲಿ ಸಿಗುವ ವಿಶೇಷ ಸೌಲಭ್ಯಗಳ ಬಗ್ಗೆ ಖಾಸಗಿ ರಾತ್ರಿ ಪಾರ್ಟಿಗಳಲ್ಲಿ ಬಿಟ್ಟರೆ ಯಾವ ಕಾಲಂಗಳಲ್ಲಿಯೂ ಬರೆಯುವುದಿಲ್ಲ. ಬರೆದರೂ ಸಹ ಅಲ್ಲಿ ಪತ್ರಕರ್ತನಾಗಿ ಏನು ಮಾಡಿದ್ದನೋ ಅಷ್ಟು ವಿವರಣೆ ಮಾತ್ರ ಇರುತ್ತದೆ.

ಈ ಸಮಾಜದ ಬಹುಪಾಲು ಜನರಿಗೆ ಪತ್ರಕರ್ತರಾದ ನಮ್ಮ ಬಗ್ಗೆ ವಿಶೇಷ ಗೌರವದ ಭಾವನೆ ಇದೆ. ಯಾಕೆ ಹೇಳಿ. ಇಲ್ಲಿ ಸುತ್ತಮುತ್ತಲಿನ ಜನರ ಸಮಸ್ಯೆಗಳಿಗೆ ದನಿಯಾಗಿರುವವರು ನಾವೇ ಎಂದು. ಜಗದ ಹಲವಾರು ಕೌತುಕಗಳನ್ನು ಮನಸ್ಸಿಗೆ, ಕೆಲವೊಮ್ಮೆ ಹೃದಯಕ್ಕೆ ತಟ್ಟುವ ಭಾಷೆಯಲ್ಲಿ ಅವರಿಗೆ ತಿಳಿಯಪಡಿಸುತ್ತೇವೆ ಎಂದು. ನಮ್ಮ ಮಾಧ್ಯಮಗಳು ಜನರಿಗೆ ಜ್ಞಾನದ ಕಿಂಡಿಗಳಾಗಿದ್ದೇವೆ ಎಂದು ಹಾಗೂ ಭ್ರಷ್ಟರ ಬಣ್ಣ ಬಯಲು ಮಾಡುವವರೂ ನಾವೇ ಎಂದು. ಇಲ್ಲಿ ಸಿನಿಕತೆಯಿಂದ ಯಾವುದನ್ನೂ ನೋಡುವ ಅವಶ್ಯಕತೆ ಇಲ್ಲವಾದರೂ ಒಬ್ಬ ರಾಜಕಾರಣಿಗಿಂತಲೂ, ಒಬ್ಬ ಉದ್ಯಮಿ, ಒಬ್ಬ ಅಧಿಕಾರಿಗಿಂತಲೂ ಒಬ್ಬ ಪತ್ರಕರ್ತನಿಗಿರುವ ಹೊಣೆ ಮಹತ್ತರದ್ದು. ಯಾಕೆಂದರೆ ಇವರೆಲ್ಲಾ ಮಾಡುವ ತಪ್ಪುಗಳನ್ನು ಎತ್ತಿಹಿಡಿದು ಅವರಲ್ಲಿ ಭಯವಿರಿಸಿ ಜನರಲ್ಲಿ ಆಶಾ ಭಾವನೆ ಉಳಿಯುವಂತೆ ಮಾಡುವುದು ಪತ್ರಕರ್ತನೇ. ಆದರೆ ಇಲ್ಲಿ ಆಗುತ್ತಿರುವುದೇನು? ಹೊಲವನ್ನು ಮೇಯುತ್ತಿರುವ ಗೂಳಿಗಳೊಂದಿಗೆ ಬೇಲಿಯೂ ಸಾಥ್ ನೀಡಿದೆಯಲ್ಲಾ. ಅದೂ ಹೇಗೆಂದರೆ ದೂರದಿಂದ ನೋಡಿದವರಿಗೆ ಬೇಲಿ ತಾನು ಬಹಳ ಶ್ರಮವಹಿಸಿ ಗೂಳಿಯನ್ನು ಕೂಡಿಹಾಕಿಕೊಂಡು ಬಂಧಿಸಿ ಬಿಟ್ಟಿದೆ ಎಂದು ಅನ್ನಿಸುವಂತೆ! ನನಗೆ ಪ್ರಾಮಾಣಿಕವಾಗಿ ಅನ್ನಿಸುವುದೆಂದರೆ ಒಬ್ಬ ಅಧಿಕಾರಿಯೋ, ರಾಜಕಾರಣಿಯೋ ಭ್ರಷ್ಟನಾದರೆ ಆತನನ್ನು ಸಮಾಜವಿರೋಧಿ ಎನ್ನಬಹುದು. ಅದೇ ಒಬ್ಬ ಪತ್ರಕರ್ತ ಭ್ರಷ್ಟನಾದರೆ ಆತ ಸಮಾಜದ್ರೋಹಿಯೇ ಅಗುತ್ತಾನೆ.

ಒಂದು ವಿಷಯ ಗಮನಿಸಬಹದು. ಹಲವಾರು ಪತ್ರಕರ್ತರ ನಡುವೆ ಹಾವು ಮುಂಗುಸಿ ಸಂಬಂಧ ಇದ್ದೇ ಇರುತ್ತದೆ. ಇದು ಕೆಲವೊಮ್ಮೆ ಸೈದ್ಧಾಂತಿಕ ಕಾರಣಗಳಿಗಾದರೆ ಕೆಲವೊಮ್ಮೆ ವೃತ್ತಿ ವೈಷಮ್ಯದಿಂದಾಗಿ. ಆದರೆ ಸಮಾಜದಲ್ಲಿ ಅದು ಹೇಗೆ ವ್ಯಕ್ತವಾಗುತ್ತದೆ? ಇಬ್ಬರು ಪ್ರತಿಸ್ಪರ್ಧಿ ಪತ್ರಕರ್ತರಿದ್ದಾರೆ, ಇಬ್ಬರು ಪ್ರತಿಸ್ಪರ್ಧಿ ಭ್ರಷ್ಟ ಉದ್ಯಮಿಗಳಿದ್ದಾರೆ ಎಂದಿಟ್ಟುಕೊಳ್ಳೋಣ. ಒಬ್ಬ ಉದ್ಯಮಿಯ ಅಂದಾದುಂದಿಗಳನ್ನು ಒಬ್ಬ ಪತ್ರಕರ್ತ ತನಿಖೆ ನಡೆಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುತ್ತಾನೆ. ತಕ್ಷಣ ಆತನ ಎದುರಾಳಿ ಪತ್ರಕರ್ತ ಆ ಬಯಲಾದ ಆ ಉದ್ಯಮಿಯನ್ನು ಸಂಪರ್ಕಿಸಿ ನೋಡ್ರೀ. ಆ ಪತ್ರಕರ್ತ ನಿಮ್ಮ ವಿರುದ್ಧ ಹಾಗೆ ಬರೆದಿದ್ದಾನೆ. ಆದರೆ ನಿಮ್ಮ ವಿರೋಧಿ ಉದ್ಯಮಿಯ ಬಗ್ಗೆ ಏನೂ ಬರೆದಿಲ್ಲ. ನಾನು ಬರೀತೀನಿ ಎಂದು ವ್ಯವಹಾರ ಕುದುರಿಸಿಕೊಳ್ಳುತ್ತಾನೆ. ಅಲ್ಲಿಗೆ ಇಬ್ಬರ ಪತ್ರಿಕೆಗಳಲ್ಲಿ ಒಬ್ಬರನ್ನು ಸಮರ್ಥಿಸುವ ಮತ್ತೊಬ್ಬರನ್ನು ಬಯಲುಗೊಳಿಸುವ ಮೇಲಾಟ ಶುರುವಾಗುತ್ತದೆ.

ಪತ್ರಕರ್ತರ ಮೇಲಾಟಗಳಲ್ಲಿ ಅನೇಕ ಸೂಕ್ಷ್ಮ ಮನಸ್ಸಿನ ಓದುಗರು, ಸಾಹಿತಿಗಳು ತಮ್ಮದಲ್ಲದ ತಪ್ಪಿಗೆ ಮಾನಸಿಕವಾಗಿ ನೊಂದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಸಾಮಾನ್ಯವಾಗಿ ಒಂದು ಪತ್ರಿಕೆಯ ಸಂಪಾದಕ ತನ್ನ ಓದುಗರನ್ನು ಎಲ್ಲಾ ರೀತಿಯಿಂದಲೂ ಪ್ರಭಾವಿಸಿಬಿಡುವುದರಿಂದ ಆತ ಹೇಳಿದ್ದೇ ವೇದವಾಕ್ಯ ಎಂದು ಓದುಗರು ಭಾವಿಸುವುದುಂಟು. ಹೀಗಾಗಿ ಸಹಜವಾಗಿ ಆ ಪತ್ರಕರ್ತನ ಎದುರಾಳಿ ಪತ್ರಕರ್ತನ ಬಗ್ಗೆ ಅವರು ಯಾವಾಗಲೂ ಸಂದೇಹಿಸುತ್ತಲೇ ಇರುತ್ತಾರೆ. ಆದರೆ ಸತ್ಯ ಇಬ್ಬರ ನಡುವೆ ಇರುತ್ತದೆ.

ಪೀತ ಪತ್ರಿಕೋದ್ಯಮ ಎನ್ನುವುದು ಇಂದು ಎಲ್ಲಾ ಕಡೆ ಅವ್ಯಾಹತವಾಗಿ ನಡೆದಿದೆ. ಇಲ್ಲಿ ನಿಜಕ್ಕೂ ವಿಪರ‍್ಯಾಸ ಎಂದರೆ ನಾವು ಭ್ರಷ್ಟ ಪತ್ರಕರ್ತರು ಎಂದು ಯಾರನ್ನಾದರೂ ಗುರುತಿಸುವುದಾದರೆ ಸಂಶಯವೇ ಬೇಡ ಆ ಪತ್ರಕರ್ತ ಹಿಂದೆಯೋ ಅಥವಾ ಈಗಲೋ ಒಂದಲ್ಲಾ ಒಂದು ರೀತಿ ಭ್ರಷ್ಟಾಚಾರದ ವಿರುದ್ಧ ಗುಡುಗಿದವನೇ ಆಗಿರುತ್ತಾನೆ. ಹೀಗೆ ಭ್ರಷ್ಟಾಚಾರದ ವಿರುದ್ಧ ಆತ ಜೋರು ದನಿಯಲ್ಲಿ, ಭಾವಾವೇಶದಲ್ಲಿ ಬರೆದಾಗಲೇ ಆತನಿಗೆ ದೊಡ್ಡ ಭ್ರಷ್ಟನಾಗುವ ಅವಕಾಶವೂ ಲಭಿಸಿರುತ್ತದೆ. ಆದರೆ ಆತ ಭ್ರಷ್ಟನಾಗಿ ಪರಿವರ್ತನೆಗೊಂಡ ಮೇಲೆ ಮೊದಲಿನಂತೆ ನಿಷ್ಪಕ್ಷವಾಗಿ ಭ್ರಷ್ಟಾಚಾರದ ಬಗ್ಗೆ ವರದಿ ಮಾಡುವ ಬದಲು ತಾನು ಯಾರನ್ನು ಬಗ್ಗಿಸಬೇಕೆಂದಿರುತ್ತಾನೋ ಅವರ ಭ್ರಷ್ಟಾಚಾರದ ಬಗ್ಗೆ ಅಥವಾ ತನಗೆ ಗಿಫ್ಟ್ ನೀಡುವ ಭ್ರಷ್ಟರ ವಿರೋಧಿಗಳ ಭ್ರಷ್ಟಾಚಾರದ ಬಗ್ಗೆ ಮಾತ್ರ ಆಕರ್ಷಕ ಶೀರ್ಷಿಕೆಗಳನ್ನು ನೀಡಿ ಬರೆಯತೊಡಗುತ್ತಾನೆ. ಉದಾಹರಣೆಗೆ, ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಯಾಕೆ ಗೆಲ್ಲಬೇಕೆಂದರೆ...........!!

ಭ್ರಷ್ಟಾಚಾರವನ್ನು ಬರೀ ಅಕ್ರಮ ಮಾರ್ಗದಿಂದ ಹಣ ಆಸ್ತಿ ಗಳಿಸುವುದೊಂದಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಆದರೆ ಇಂದಿನ ದಿನಮಾನದಲ್ಲಿ ಅದೂ ಬಹಳ ಪ್ರಮುಖವಾದದ್ದೇ. ಈ ಅರ್ಥದಲ್ಲಿ ಮಾಧ್ಯಮ ಜಗತ್ತಿನ ಅನೇಕ ಮಂದಿ ದೊಡ್ಡ ಮಟ್ಟದಲ್ಲಿಯೇ ಭ್ರಷ್ಟರಾಗಿದ್ದಾರೆ. ಆದರೆ ಬಹುತೇಕರು ಪ್ರಾಮಾಣಿಕವಾಗಿಯೇ ಇದ್ದಾರೆ. ಇದಕ್ಕೆ ಎರಡು ಕಾರಣ. ಒಂದನೆಯದು ಬಹಳ ಜನ ಪತ್ರಕರ್ತರಿಗೆ ಅವರಿಗೆ ಭ್ರಷ್ಟರಾಗುವ ಅವಕಾಶ ಸಿಗದಿರುವುದು. ಸಿಕ್ಕರೂ ಮೇಲಿನವರ ಭಯದಿಂದ ಸುಮ್ಮನಿರುವುದು. ಎರಡನೆಯದು ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕರಾಗಿ ಬದುಕುವುದು. ಪತ್ರಿಕೋದ್ಯಮವನ್ನು ಬರಿ ಉದ್ದಿಮೆಯಾಗಿ ಅಲ್ಲದೇ ಸಾಮಾಜಿಕ ಬದ್ಧತೆ ಹಾಗೂ ಬದುಕಿನ ಸಿದ್ದಾಂತವನ್ನಾಗಿ ಸ್ವೀಕರಿಸಿರುವುದು. ನನಗೇ ತಿಳಿದಿರುವ ಅನೇಕರು ಹೀಗೆ ಬದುಕುತ್ತಿರುವವವರಿದ್ದಾರೆ. ತಮ್ಮ ಜ್ಞಾನ, ಅನುಭವ, ಅವಕಾಶಗಳಲ್ಲಿ ಇವರು ಬಹಳಷ್ಟು ಹಣ, ಆಸ್ತಿ, ಅಂತಸ್ತು ಗಳಿಸಬಹುದಾಗಿರುವಂತವರು. ಆದರೆ ಬದುಕು ಅನೇಕ ಸವಾಲು ಸಂಕಷ್ಟಗಳನ್ನನ್ನೊಡ್ಡಿದರೂ ನಂಬಿದ ತತ್ವಗಳೊಂದಿಗೆ ರಾಜಿಮಾಡಿಕೊಳ್ಳಲು ಬಯಸದ ಇವರು ತಮ್ಮ ಅನೇಕ ರೀತಿಯ ಮಿತಿಗಳಲ್ಲಿಯೇ ನನ್ನ ಹಾಗೂ ನನ್ನಂತವರ ಆಶಾದೀಪಗಳಾಗಿರುವಂತವರು. ಲಂಕೇಶ್, ವಡ್ಡರ್ಸೆ ರಘುರಾಮ ಶೆಟ್ಟರು, ಮುಂತಾದ ನಾನು ಕೇಳಿರುವ ಆದರೆ ಇಂದು ನಮ್ಮೆದುರು ಇಲ್ಲದ ಐಕನ್‌ಗಳನ್ನು ಬಿಟ್ಟರೆ ನನ್ನ ಸೀಮಿತ ತಿಳಿವಳಿಕೆ ಅನುಭವದಲ್ಲಿ ಇಲ್ಲಿ ಹೆಸರಿಸಲೇಬೇಕಾದ ಇಬ್ಬರೆಂದರೆ ಶಿವಮೊಗ್ಗದ ನಮ್ಮನಾಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಜಾರ್ಜ್ ಸಾಲ್ಡಾನಾ. ಮತ್ತೊಬ್ಬರು ಸಾಗರದ ನಮ್ಮೂರಿನ ಮಣ್ಣಿನ ವಾಸನೆ ಪತ್ರಿಕೆಯ ಸಂಪಾದಕ ಅ.ರಾ. ಶ್ರೀನಿವಾಸ್. ಇವರಿಬ್ಬರ ಕರ್ತವ್ಯನಿಷ್ಟೆ, ನಿಷ್ಠುರತೆ ಎಷ್ಟೋ ಸಲ ನನ್ನೊಳಗೆ ಕೀಳರಿಮೆಯನ್ನುಂಟುಮಾಡುವ ಜೊತೆಗೇ ಆದರ್ಶಗಳು ಹೇಳಲು ಮಾತ್ರ ಅಲ್ಲ ಎನ್ನುವುದನ್ನು ನಂಬಲೂ, ಅವನ್ನು ಪಾಲಿಸುವ ಧೈರ್ಯ ತೋರಲೂ ಸಹಕರಿಸಿವೆ. ಎಲ್ಲಾ ಊರುಗಳಲ್ಲಿಯೂ ಜಾರ್ಜ್, ಶ್ರೀನಿವಾಸ್ ಅಂತವರು ಇದ್ದೇ ಇರುತ್ತಾರೆ ಎಂಬುದು ನನ್ನ ನಂಬಿಕೆ. ಅವರೆಲ್ಲರಿಗೂ ಈ ಯುವಪತ್ರಕರ್ತನ ಹೃದಯಪೂರ್ವಕ ನಮನಗಳು.

-ಹರ್ಷ ಕುಮಾರ್ ಕುಗ್ವೆ

ಚಿತ್ರಕೃಪೆ: ಭಾರತ್ ಸ್ವಾಭಿಮಾನ್ ಆಂದೋಲನ್ ವೆಬ್ ಸೈಟ್

29 comments:

  1. ಹರ್ಷ ಸರ್ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣಹುಡುಕೋರು ಈ ಮಾದ್ಯಮದ ಭ್ರಷ್ಟಾಚಾರಿಗಳು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಮಾತಾಡೊಲ್ಲ
    ಯಾಕೇಂದ್ರೆ ಇವರಿಗೆ ಜನರನ್ನು ಅವರ ಗಮನವನ್ನು ಯಾವಾಗಲೂ ಬೇರೆಯವರ ಮೇಲೆ ತಿರುಗಿಸುವ ಚಟ ತುಂಬಾನೆ ಇದೆ

    ReplyDelete
  2. ಭಗತ್ ಸಿಂಗ್, ಅಜಾದ್, ಸಾವರ್ಕರ್ ಈಗಿಲ್ಲ ಬಹುಷಃ ಇದ್ದಿದ್ರೆ ಎದೆ ಹೊಡೆದು ಸಾಯ್ತಾಯಿದ್ರೆನೊ. ಐಸರಾಮಿ ಜೀವನ ಪದ್ದತಿಗೆ ಒಗ್ಗಿ ಹೋಗಿರುವ ಇಂತಹ ಭ್ರಷ್ಟಾತಿಭ್ರಷ್ಟ ಮಾದ್ಯಮದವರಿಗೆ ಆತ್ಮಾವಲೋಕನ ಮಾಡಿಸುವುದಾದರು ಯಾರು, ಪಕ್ಕಕ್ಕೆ ಕರೆದು ಕುತ್ತಿಗೆ ಪಟ್ಟಿ ಹಿಡಿದು ಆ ರೀತಿ ಬರೆದವನು ಈಗ ಈ ರೀತಿ ಕೊಳಚೆಯಲ್ಲಿ ಬಿದ್ದು ಒದ್ದಾಡಲು ಮನಸಾದರು ಹೇಗೆ ಬಂತು ಎಂದು ಹೇಳುವ ಪರಿಯಾದರು ಎಂತು, ಯು.ವಿ. ಸಿಂಗ್ ರ ವರದಿಯಲ್ಲಿ ಉಲ್ಲೇಖಗೊಂಡವರನ್ನು ಬಿಟ್ಟು ಕೊಚ್ಚೆಯಲ್ಲಿ ಒದ್ದಾಡುತ್ತಿರುವ ಭ್ರಷ್ಟ ಮಾದ್ಯಮದವರೆಷ್ಟು ಮಂದಿ ನನ್ನಂತಹ ಸಾಮಾನ್ಯ ನಾಗರಿಕನಿಗೆ ತಿಳಿಯುವುದಾದರೂ ಹೇಗೆ. ಶಾಲಾ ಕಾಲೇಜಿನ ಶಿಕ್ಷಕ - ಉಪನ್ಯಷಕರ ಹೆಸರಿನ ಇನಿಷಿಯಲ್ಲಿನಂತೆ ಗೋಚರಿಸುವ ಇಂತಹವರ ಜಾತಕವನ್ನ ಬಿಚ್ಚಿಡಬೇಕಾದ ನಿಮ್ಮಂತಹ ಮಾದ್ಯಮದ ಮಂದಿಯೆ (ಸಂಪಾದಕೀಯವು ಸೇರಿ) ತೆಪ್ಪಗೆ ಕುಳಿತಿರಬೇಕಾದ್ರೆ ಸಾಮಾನ್ಯರಲ್ಲಿ ಸಾಮಾನ್ಯ ನಾಗರಿಕರೇನು ಮಾಡಿಯಾರು ಹೇಳಿ, ಅವರ ಜೊತೆಗೆ ನೀವೂ, ನಿಮ್ಮ ಜೊತೆಗೆ ನಾವು ಕೂಡಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
    ಲೇಖನ ಇಷ್ಟವಾಯ್ತು ಮಿತ್ರ ಹರ್ಷಕುಮಾರ್

    ReplyDelete
  3. ನೀವು ಸಹ ಗಾಳಿಯಲ್ಲಿ ಗುಂಡು ಹೊಡೆದಿರಿ. ಯಾಕೆ ಯಾರ (ಭ್ರಷ್ಟರ) ಹೆಸರನ್ನು ಹೇಳದೆ ಈ ಲೇಖನ ಮುಗಿಸಿದಿರಿ? ನಿಮಗೂ ಧೈರ್ಯ ಸಾಲದಾಯಿತ?- chandan

    ReplyDelete
  4. ಶ್ರೀಯುತ ಹರ್ಷಕುಮಾರ್, ನೀವು ಸುಮ್ಮನೆ ತೌಡು ಕುಟ್ಟಿದ್ದೀರೆ ಹೊರತು, DH ಮತ್ತು ಪ್ರಜಾವಣಿಯಲ್ಲಿ ಬಂದಿರುವವರ ಹೆಸರನ್ನೂ ಸಹ ನೀವು ಪ್ರಸ್ಥಾಪಿಸಿಲ್ಲ.

    - "...... ನನ್ನ ಗೆಳೆಯ ಪತ್ರಕರ್ತರೊಬ್ಬರು ಪ್ರೆಸ್ ಕಾಲನಿ ಸೈಟೊಂದನ್ನು ರಕ್ಷಿಸಿಕೊಳ್ಳಲು ವಿಶೇಷ ಶ್ರಮ ಪಡುತ್ತಿದ್ದುದು ಕಂಡು ಕೇಳಿದ್ದೆ ......." ಈ ಮಹಾನುಭಾವ ಯಾರು ಅಂತ ಹೇಳಿಲ್ಲ.

    - "ಈ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಕಾರಣಕ್ಕೆ ಕೆಲವರು ಭಾರೀ ಪ್ರತಿಭಟನೆ ನಡೆಸಿದ್ದವರಲ್ಲಿ ಒಬ್ಬರು ತಾಮ್ಮನ್ನು ತಾವು ಕಾಮ್ರೇಡ್ ಎಂದುಕೊಳ್ಳುತ್ತಾ ಕೆಂಪು ಕಪ್ಪು ಡ್ರೆಸ್ ಹಾಕುತ್ತಾ, ಕೆಂಪು ಬೈಕ್‌ನಲ್ಲಿ ಓಡಾಡಿಕೊಂಡಿದ್ದವರು ಯಡಿಯೂರಪ್ಪ ಮುಖ್ಯಮಂತ್ರಿಯಾದೊಡನೆ ದಿಢೀರ್ ಅಂತ ಯಡಿಯೂರಪ್ಪನ ಆರಾಧಕರಾಗಿದ್ದದ್ದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ " ಹರ್ಷರವರೇ ನಮಗೆ ಗೊತ್ತಿಲ್ಲ ದಯಮಾಡಿ ಹೆಸರು ತಿಳಿಸಿ.

    - ".....ತನ್ನ ಅಂಗವಿಕಲ ಹೆಂಡತಿಯ ಹೆಸರಲ್ಲಿ ಜಿ ಕೆಟಗರಿ ಸೈಟ್ ಪಡೆದಿದ್ದು ಬೆತ್ತಲಾದಾಗ, ಹಾಗೆ ಪಡೆದಿದ್ದನ್ನು ನಾಚಿಕೆಯಿಲ್ಲದೆ ಭಂಡನಂತೆ ...." ಪ್ರತಾಪ ಸಿಂಹ ಅಂತ ಹೇಳೋಕೆ ಭಯ ಯಾಕೆ?

    - ".......ಒಬ್ಬ ಪತ್ರಕರ್ತ ಗೆಳೆಯ ತಾನು ನಡೆಸುವ ಡೀಲಿಂಗ್‌ಗಳನ್ನು ಸಮರ್ಥಿಸುವುದನ್ನು ಕೇಳಿ ಮೈಪರಚಿಕೊಳ್ಳುವಂತಾಗಿತ್ತು ನನಗೆ " ಸರ್ ದಯವಿಟ್ಟು ಒಂದೆರಡು ಡೀಲಿಂಗ್ ವಿಷಯ ಹೇಳಿ .

    - ".....ಒಂದು ಟಾಪ್ ಟೀವಿ ವಾಹಿನಿಯ ಬೆಂಗಳೂರಿನ ವರದಿಗಾರನೊಬ್ಬನನ್ನು ವಾಚಾಮಗೋಚರ ಬೈಯತೊಡಗಿದ ..." TV ಮತ್ತು ವರದಿಗಾರನ ಹೆಸರು ಹೇಳಿಲ್ಲ.

    - ಹಾಕಿರುವ ಫೋಟೊ ಯಾರದು 'ರಾಜ'ನ್ದಾ?

    - ಬೆಳ್ಳಿ ಪಾತ್ರೆ ಕೊಟ್ಟ ಕುಳಗಳ ಹೆಸರು ಹಾಗು ತೊಗೊಂಡೋರ ಹೆಸರು ಇಲ್ಲ ಫೋಟೊ ಇದ್ರೆ ಪ್ರಕಟಿಸಿ.

    - "........ಮಾರ್ಗದರ್ಶಕ, ಚಿಂತಕ, ಸೆಮಿ ರಾಜಕಾರಣಿ ಪಾತ್ರಧಾರಿಯಾಗಿ, ನಟನಾಗಿ, ಟಿವಿ ಚಾನಲ್‌ಗಳಲ್ಲಿ ಆತನ ವಿಶೇಷ ಕಾರ್ಯಕ್ರಮಗಳು, ಪ್ಯಾನೆಲ್ ಚರ್ಚೆಗಳು, ಅವ್ಯಾಹತವಾಗಿ ನಡೆಯತೊಡಗುತ್ತವೆ. ಕೆಲವೊಮ್ಮೆ ಕ್ರೈಂ ವರದಿಗಳನ್ನೂ, ಕಾರ್ಯಕ್ರಮಗಳನ್ನೂ ಆತ ಲೈವ್ ಆಗಿ ...." ( + ) "........ಉದಾಹರಣೆಗೆ, ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಯಾಕೆ ಗೆಲ್ಲಬೇಕೆಂದರೆ...........!!" ಯಾರು RB ನ ?

    - ".....ಇಬ್ಬರು ಪ್ರತಿಸ್ಪರ್ಧಿ ಪತ್ರಕರ್ತರಿದ್ದಾರೆ, ಇಬ್ಬರು ಪ್ರತಿಸ್ಪರ್ಧಿ ಭ್ರಷ್ಟ ಉದ್ಯಮಿಗಳಿದ್ದಾರೆ ಎಂದಿಟ್ಟುಕೊಳ್ಳೋಣ. ......." ಒಂದೆರಡಾದರೂ ಉದಾಹರಣೆ ಕೊಡಬಾರದೆ?

    ಸಂಪಾದಕರೇ, ಬರೀ ಪ್ರಲಾಪವೇ ಇದೆಯಲ್ಲ, ಸುದ್ದಿ ಹಾಕಿ ಸರ್.

    ReplyDelete
  5. ಹರ್ಷಕುಮಾರ್ ಅವರೇ ಭ್ರಷ್ಟ ಪತ್ರಕರ್ತರ ಅಸಲಿ ಮುಖವಾಡವನ್ನೂ, ಅತ್ಯಂತ ಪ್ರಾಮಾಣಿಕವಾಗಿ ನಮಗೆ ಪರಿಚಯ ಮಾಡಿಕೊಟ್ಟಿದ್ದೀರಿ... ಧನ್ಯವಾದಗಳು. ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಶಿವಮೊಗ್ಗ ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ಸಮಗ್ರ ವರದಿ ಮಾಡಿಲ್ಲ. 150 ಪತ್ರಕರ್ತರಿದ್ದಾರೆ. ಅರ್ಜಿ ಹಾಕಿದವರ ಸಂಖ್ಯೆ ೩೫೦ ಎಂದು ತಿಳಿದಾಗ ದಿಗ್ಭ್ರಮೆಯಾಗಿತ್ತು ಎಂದಿದ್ದೀರಿ.... ಶಿವಮೊಗ್ಗ ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ವರದಿಯನ್ನು ಬಿತ್ತರಿಸಿ. ಅಸಲಿ ವಿಷಯವನ್ನು ಮನವರಿಕೆ ಮಾಡಿಕೊಡಿ. ಪತ್ರಕರ್ತರು ಸಮಾಜ ಸೇವೆ ಮಾಡುತ್ತಿದ್ದಾರಾ? ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರಾ? ಎಂಬುವುದು ಬಹಿರಂಗವಾಗಲಿದೆ. ಈಗಾಗಲೇ ಶಿವಮೊಗ್ಗ ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ ಎಂದು 'ಸಂಪಾದಕೀಯ'ದಲ್ಲಿ ಓದುಗರೊಬ್ಬರ ಕಾಮೆಂಟ್ನಲ್ಲಿ ಓದಿದ್ದೇನೆ. ಶಿವಮೊಗ್ಗ ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ತಿಳಿದುಕೊಳ್ಳಲು ತಮಗೂ ಸಾಕಷ್ಟೂ ಕುತೂಹಲವಿದೆ. ಪ್ರೀತಿಯ ಸಂಪಾದಕರೇ,,, ದಯವಿಟ್ಟು ಈ ಬಗ್ಗೆ 'ಸಂಪಾದಕೀಯ'ದಲ್ಲಿ ವರದಿಯನ್ನು ಪ್ರಕಟಿಸಿ ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ.

    ReplyDelete
  6. one of the best from Harsha :)

    ReplyDelete
  7. ಪತ್ರಿಕೋದ್ಯಮದ ಲೋಕಾಯುಕ್ತ 'ಸಂಪಾದಕೀಯ...'. ಹೌದು. ಇದು ಅತಿಶಯೋಕ್ತಿಯಲ್ಲ.
    ಸಂಪಾದಕೀಯ ಟೀಮ್ಗೆ ಧನ್ಯವಾದ. ಪತ್ರಕರ್ತರ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದೀರಿ. ಗೋಮುಖ ವ್ಯಾಘ್ರ ಪತ್ರಕರ್ತರಿಗೆ ಸಿಂಹಸ್ವಪ್ನವಾಗಿದ್ದೀರಿ... ಕಡಿಮೆ ಅವಧಿಯಲ್ಲಿ ದೇಶ - ವಿದೇಶಗಳಲ್ಲಿಯೂ ಹೆಸರು ಸಂಪಾದಿಸಿದ್ದೀರಿ.. ಗ್ರೇಟ್..! ಮುಂದಿನ ದಿನಗಳಲ್ಲಿ ಪತ್ರಕತ೵ರ ಮತ್ತಷ್ಟು ಹಗರಣಗಳನ್ನು ಬಯಲಿಗೆಳೆಯಿರಿ. ನಿಮ್ಮೊಂದಿಗೆ ನಾವಿದ್ದೇವೆ.

    ReplyDelete
  8. ಈಗ ಸಮಾಜದ ಕೆಲ ವಲಯಗಳಲ್ಲಿ ಪತ್ರಕತ೵ರೆಂದರೆ ಹೇಸಿಗೆಯಿಂದ ನೋಡುತ್ತಾರೆ. ನಾವು ಈ ವೃತ್ತಿಯಲ್ಲಿ ಇದ್ದೇವೆ ಎಂದು ಹೇಳಿಕೊಳ್ಳಲು ಸಹ ಹಿಂಜರಿಯುವ ಪರಿಸ್ಥಿತಿ ನಿಮಾ೵ಣವಾಗಿದೆ.ಅಥವಾ ಕೆಲ ಪತ್ರಕತ೵ರು ನಿಮಿ೵ಸಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಇಂಥವರು ಮಾಮೂಲಿಗಾಗಿ ಠಳಾಯಿಸಿವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ವ್ಯವಸ್ಥೆಯನ್ನು ಭ್ರಷ್ಟವಾಗಿಸಲು ಇವರೂ ಸಹ ಧಾರಾಳ ಕೊಡುಗೆ ನೀಡುತ್ತಿದ್ದಾರೆ.

    ReplyDelete
  9. @G S Shrinath
    ".....ಇಬ್ಬರು ಪ್ರತಿಸ್ಪರ್ಧಿ ಪತ್ರಕರ್ತರಿದ್ದಾರೆ, ಇಬ್ಬರು ಪ್ರತಿಸ್ಪರ್ಧಿ ಭ್ರಷ್ಟ ಉದ್ಯಮಿಗಳಿದ್ದಾರೆ ಎಂದಿಟ್ಟುಕೊಳ್ಳೋಣ. ......." ಒಂದೆರಡಾದರೂ ಉದಾಹರಣೆ ಕೊಡಬಾರದೆ?
    Ans: RB and VB: ಸದ್ಯದ ಬೆಳವಣಿಗೆ ನೋಡಿದರೆ ಇವರಿಬ್ಬರು ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ನಮ್ಮ ರಾಜ್ಯಕ್ಕೆ ದೊಡ್ಡ ಕಂಟಕ.


    ಮನು

    ReplyDelete
  10. ಹರ್ಷಕುಮಾರ್ ಅವರೇ SHIMOGA ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ಬರೆಯಿರಿ... ತಾವು ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದಾಗಿ ಹೇಳುತ್ತಿದ್ದೀರಿ... ಅಲ್ಪ ಮಾಹಿತಿ ನೀಡಿದ್ದೀರಿ... ನೀವು ಏನಾದರೂ ಸೈಟ್ ಪಡೆಯಲು ಕಾಯುತ್ತಿದ್ದೀರಾ ಹೇಗೆ..? ನಿಮ್ಮ ಅಂಕಣದಲ್ಲಿ ಸಮಗ್ರ ವಿವರವನ್ನು ಪ್ರಕಟಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. SHIMOGA ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ಸಮಗ್ರ ಮಾಹಿತಿ ನೀಡಿ, ಆರೋಪದಿಂದ ನೀವೂ ಕೂಡ ಮುಕ್ತರಾಗಿ... ಸ್ವಾಮಿ.!

    ReplyDelete
  11. hasanada kela patrakartaru sachiva v.somanna avarinda site gala kappa padediruvudu tilididdaru aa patrakartara pratistege hedari bahirangavage charche aaguttilla. uurige upadesha maduvavaru modalu tamma tatteya kolakannu nodikollali. brasta patrakartara anavarana maduva kelasa turtagi aagabeku.

    ReplyDelete
  12. ಗೆಳೆಯರೆ, ಮೊದಲನೆಯದಾಗಿ ಈ ಲೇಖನವನ್ನು ನಾನು ತನಿಖಾ ವರದಿ ಎಂದುಕೊಂಡು ಬರೆದಿಲ್ಲ. ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಈ ಕುರಿತು ನನ್ನ ಮನಸ್ಸಿನಲ್ಲಿ ಇರುವುದನ್ನು ನಿಮ್ಮೆದುರು ಹಂಚಿಕೊಂಡಿದ್ದೇನೆ. ಇಲ್ಲಿ ಹೆಸರುಗಳು ಮುಖ್ಯವಲ್ಲ. ಪತ್ರಿಕೋಧ್ಯಮದಲ್ಲಿ ಭ್ರಷ್ಟಾಚಾರ ಯಾವ ಯಾವ ಸ್ವರೂಪದಲ್ಲಿ ವ್ಯಕ್ತಗೊಳ್ಳುತ್ತಿದೆ ಎಂಬ ಕುರಿತು ಒಂದು ಜಿಜ್ಞಾಸೆ ಇದು.
    ಎರಡನೆಯದಾಗಿ,ಶಿವಮೊಗ್ಗದಲ್ಲಿ ಸೈಟುಗಳ ವಿಚಾರದಲ್ಲಿ ಏನು ನಡೆದಿದೆ ಎಂಬುದನ್ನು ತನಿಖೆ ನಡೆಸುವ ಅಗತ್ಯ ನನಗೆ ಬರಲಿಲ್ಲ. ತಮಗೆ ಸಿಗಲಿಲ್ಲವಲ್ಲ ಎಂದುಕೊಂಡವರು ಸೈಟು ಸ್ಯಾಂಕ್ಷನ್ ಗೆ ತಡೆಯುಂಟು ಮಾಡಿದ್ದು ಗೊತ್ತು. ನಿಮಗೆ ಈ ರೀತಿ ನನ್ನ ಬಗ್ಗೆ ಸಂಶಯವಿದ್ದಲ್ಲಿ ಶಿವಮೊಗ್ಗದ ಯಾರಾದರೂ ಪತ್ರಕರ್ತ ಗೆಳೆಯರಲ್ಲಿ ವಿಚಾರಿಸಿ ನೋಡಿ. ನಿಮಗೇ ತಿಳಿಯಬಹುದು.
    -ಹರ್ಷ ಕುಮಾರ್ ಕುಗ್ವೆ

    ReplyDelete
  13. ಹರ್ಷ ಕುಮಾರ್ ಕುಗ್ವೆ ಅವರೇ,,, ಶಿವಮೊಗ್ಗ ಪತ್ರಕರ್ತರ KHB ಸೈಟ್ ಹಗರಣದ ಬಗ್ಗೆ ತಮಗೆ ಸರಿಯಾದ ಮಾಹಿತಿಯೇ ಇಲ್ಲ..?! ನೀವು ಪ್ರತಿಕ್ರಿಯಿಸಿರುವ ರೀತಿ ನೋಡಿದರೇ ಇದು ನಿಜವಾಗುತ್ತದೆ. ಮಾಹಿತಿಯೇ ಇಲ್ಲದ ವಿಷಯದ ಬಗ್ಗೆ 'ನನ್ನ ಮನಸ್ಸಿನಲ್ಲಿ ಇರುವುದನ್ನು ನಿಮ್ಮೆದುರು ಹಂಚಿಕೊಂಡಿದ್ದೇನೆ' ಎಂದು ಹೇಳುತ್ತಿರುವುದು, ನಿಜಕ್ಕೂ ಆಚ್ಚರಿ ಸೃಷ್ಟಿಸುತ್ತಿದೆ. ನೀವು ಬರೆದಿರುವುದೆಲ್ಲ ಊಹಾಪೋಹವೇ... ಸುಳ್ಳಿನ ಕಂತೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒಂದು ಕಡೆ ನೀವು, 'ಶಿವಮೊಗ್ಗದಲ್ಲಿ ಎಲ್ಲ ಪತ್ರಿಕಾ ಕಚೇರಿ ಹುಡುಕಿದರೂ 150 ಪತ್ರಕರ್ತರಿದ್ದಾರೆ. ಅರ್ಜಿ ಹಾಕಿದವರ ಸಂಖ್ಯೆ 350' ಎಂದು ತಿಳಿದಾಗ ದಿಗ್ಭ್ರಮೆಯಾಗಿತ್ತು ಎಂದಿದ್ದೀರಿ...' ಆದರೆ, 'ಮತ್ತೊಂದೆಡೆ ತಮಗೆ ಸಿಗಲಿಲ್ಲವಲ್ಲ ಎಂದುಕೊಂಡವರು ಸೈಟು ಸ್ಯಾಂಕ್ಷನ್ ಗೆ ತಡೆಯುಂಟು ಮಾಡಿದ್ದು ಗೊತ್ತು' ಎಂದು ಹೇಳಿದ್ದೀರಿ. ನಿಮ್ಮಲ್ಲಿಯೇ ಅನುಮಾನವಿದೆ. ಶಿವಮೊಗ್ಗ ಕೆಹೆಚ್ ಬಿ ನಿವೇಶನ ಹಗರಣದ ಬಗ್ಗೆ ನಿಮಗೆ ಮಾಹಿತಿಯೇ ಗೊತ್ತಿಲ್ಲ. ಮೊದಲು ಬೆಂಗಳೂರಿನಲ್ಲಿರುವ ಕೆಹೆಚ್ ಬಿ ಅಧಿಕಾರಿಗಳಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಿರಿ. ಇಲ್ಲವಾದರೇ ಶಿವಮೊಗ್ಗದ ಯಾರಾದರೂ ವರದಿಗಾರರ ಬಳಿ ಮಾಹಿತಿ ಪಡೆಯಿರಿ. ಶಿವಮೊಗ್ಗ ಪತ್ರಕತಱರ KHB syte ಹಗರಣ ಗೊತ್ತಾಗಲಿದೆ. ಸುಮ್ಮನೆ ಮನಸ್ಸಿಗೆ ಬಂದಿದ್ದನ್ನು ಬರೆಯಬೇಡಿ. ಮತ್ತೊಬ್ಬರ ಮೇಲೆ ಗೂಬೆ ಕೂರಿಸಬೇಡಿ. ಗೌರವಾನ್ವಿತ 'ಸಂಪಾದಕರೇ...' ಶಿವಮೊಗ್ಗ ಪತ್ರಕತಱರ KHB syte ಹಗರಣದ ಕುರಿತು ನೀವಾದರೂ ಮಾಹಿತಿ ಪಡೆದು, ತಮ್ಮ ಸೈಟ್ ನಲ್ಲಿ ಪ್ರಕಟಿಸಿ. ವಾಸ್ತವ ಏನೆಂಬುವುದು ದೇಶದ ಪತ್ರಿಕೋದ್ಯಮಿಗಳಿಗೆ, ಓದುಗರಿಗೆ ಗೊತ್ತಾಗಲಿ.....

    ReplyDelete
  14. What is This Shimoga Journalists KHB Site Scam? Please give Full Detail about This Scam.

    ReplyDelete
  15. shimoga bagge sariyada vichara tilidukollade Harsha kugve manassige bandante barediddare. ketta manassina kela patrakartara(?)matu keli lekhana bareyodu nyja patrakrtana lakshnavalla. very sorry.
    site sigada, site padeda aneka patrakartaru "sadist" reetiyalli sullu mahiti neediddare.shimoga bagge "prejudice" agi baredu edee lekhana tooka kaledukondide. ellige bandu ella patrakartara hattira matadi lekhana bareyiri.

    ReplyDelete
  16. ಸಂಪಾದಕೀಯ ಬ್ಲಾಗ್ ಅನ್ನು ನಾವೆಲ್ಲ ನೋಡುತ್ತಿದ್ದೇವೆ. ಪತ್ರಿಕೋದ್ಯಮ ಒಳ ಹೊರಗಿನ ಸುದ್ದಿಗಳನ್ನು ಹೆಕ್ಕಿ ನೀಡುವ ನಿಮ್ಮ ಪ್ರಯತ್ನ ನಮಗೆ ಖುಷಿ ತಂದಿತ್ತು. ಜೊತೆಗೆ ವರ್ತಮಾನದ ಕೆಲವು ಸಮಸ್ಯೆ, ಘಟನೆ ಮತ್ತು ವಿಷಯಗಳಿಗೆ ಸ್ಪಂದಿಸುವ ರೀತಿಯೂ ಉತ್ತಮವಾದುದೇ. ನಾವು ಜೊತೆಗಾರರೆಲ್ಲ ಇದರ ಬಗ್ಗೆ ಚರ್ಚಿಸುತ್ತಿರುತ್ತೇವೆ. ಪತ್ರಿಕೋದ್ಯಮದೊಳಗಿನ ಭ್ರಷ್ಟಾಚಾರದ, ವೈಚಾರಿಕ ನಿಲುವಿನ ಮತ್ತು ತಪ್ಪು ಒಪ್ಪುಗಳ ಕುರಿತು ಅವಲೋಕನ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಇದರ ಬಗ್ಗೆ ನಮ್ಮ ಸಹಮತವಿದೆ. ಯಾರೋ ಕೆಲವು ಪತ್ರಕರ್ತರು ಅಥವಾ ಬೆಂಗಳೂರಿನಲ್ಲಿ ಕೆಲ ಪತ್ರರ್ಕರು ಮಾಡುತ್ತಿರುವ ಕೆಲಸಗಳ ಅಥವಾ ವರ್ತನೆ ಬಗ್ಗೆ ನಿಮಗೆ ಅಸಹನೆ ಇರಬಹುದು. ಇದು ಸರಿ ಕೂಡ. ಆದರೆ ಇದನ್ನು ಸಾರ್ವತ್ರೀಕರಣ ಮಾಡುವುದು ಸರಿಯಲ್ಲ. ಶಿವಮೊಗ್ಗದ ಕೆಎಚ್‌ಬಿ ನಿವೇಶನ ಹಂಚಿಕೆ ವಿಷಯದ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ ಪೂರ್ವಾಗ್ರಹ ಪೀಡಿತವಾಗಿ ವರದಿಯೊಂದನ್ನು ಬರೆಯುವುದು ಯಾವ ಪತ್ರಿಕೋದ್ಯಮ? ಊರವರಿಗೆ ಉಪದೇಶ ಮಾಡುವ ನಿಮ್ಮ ವರ್ತನೆ ಎಷ್ಟರಮಟ್ಟಿಗೆ ಸರಿ? ಇದು ಇಡೀ ಶಿವಮೊಗ್ಗದ ಪ್ರಜ್ಞಾವಂತ ಪತ್ರಕರ್ತರಲ್ಲಿ ನೋವು ತಂದಿದೆ. ಎಲ್ಲ ಕಡೆ ಇರುವಂತೆ ಇಲ್ಲಿಯೂ ಕೆಲವು ಅಡ್ನಾಡಿ ಪತ್ರಕರ್ತರಿದ್ದಾರೆ. ಅಕ್ಷರವನ್ನೇ ಸರಿಯಾಗಿ ಬರೆಯಲು ಬಾರದ ಕೆಂಪುಟೋಪಿ ಧರಿಸುವ, ಬಡವರ ಭೂಮಿ ಕಸಿದುಕೊಂಡು , ಪತ್ರಿಕೋದ್ಯಮದ ಬದಲಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುವುದೇ ತಮ್ಮ ಮುಖ್ಯ ಕಸುಬನ್ನಾಗಿಸಿಕೊಂಡಿರುವ, ಹೋದ ಕಡೆಯೆಲ್ಲಾ ಪಟೇಲರು, ಯಡಿಯೂರಪ್ಪನವರು, ಬಂಗಾರಪ್ಪ ಎಲ್ಲರನ್ನೂ ನಾನೇ ಮುಖ್ಯಮಂತ್ರಿ ಮಾಡಿದ್ದು ಎಂದೆನ್ನುತ್ತಾ, ಎಲ್ಲರನ್ನೂ ಜೈಲಿಗೆ ಹಾಕಿಸುತ್ತೇನೆ ಎಂದು ಅರಚುತ್ತಾ ಅಸಹ್ಯ ಸೃಷ್ಟಿಸುತ್ತಿರುವ ವಯೋವೃದ್ಧ ಪತ್ರಕರ್ತರು, ಇವರನ್ನು ಬೆಂಬಲಿಸುವ ಬೇಕರಿ ಮಾಣಿಗಳು, ಮಾಧ್ಯಮ ಕೇಂದ್ರ ಎಂದು ಒಂದಿಷ್ಟು ಹಣ ಜೇಬಿಗಿಳಸಿ ಜೆರಾಕ್ಸ್ ಅಂಗಡಿ ನಡೆಸುತ್ತಿರುವ ಪತ್ರಕರ್ತರು, ಜೊತೆಗಿಂದಿಷ್ಟು ಹಳದಿ ಪತ್ರಕರ್ತರು ಸೇರಿಕೊಂಡ ಗ್ಯಾಂಗ್ ನಡೆಸುವ ಅಪಪ್ರಚಾರ ಇದು. ಇದು ಶಿವಮೊಗ್ಗದ ಎಲ್ಲ ಪತ್ರಕರ್ತರಿಗೂ ಗೊತ್ತು. ಎಲ್ಲೂ ಮುಖಾಮುಖಿಯಾಗಿ ಚರ್ಚಿಸದೆ, ಮುಖೇಡಿಗಳಾಗಿಯೇ ಓಡಾಡುವ ಇವರ ಮಾತೇ ನಿಮಗೆ ಶ್ರೇಷ್ಠವಾದುದಾದರೂ ಹೇಗೆ?
    ಹರ್ಷ ಕುಗ್ವೆ ಬಗೆಗೆ ಕೂಡ ಒಂದಿಷ್ಟು ಗೌರವ ಇತ್ತು. ಚಿಕ್ಕ ವಯಸ್ಸಿನಲ್ಲಿಯೇ ಒಂದಿಷ್ಟು ಓದಿಕೊಂಡು ಬರೆಯುತ್ತಾರೆ ಎಂಬ ಸಂತೋಷ ಇತ್ತು. ಆದರೆ ಹೊರಗಡೆಯ ಮುಖಕ್ಕೂ, ಒಳಗಡೆ ಇರುವ ಇನ್ನೊಂದು ಮುಖಕ್ಕೂ ಇರುವ ವ್ಯತ್ಯಾಸವನ್ನು ಅವರು ಸ್ಪಷ್ಟವಾಗಿ ತೆರೆದಿಟ್ಟಿದ್ದಾರೆ. ತಮಗೆ ಅನ್ನಿಸಿದ್ದನ್ನು ಬರೆಯುವ ಅದಿಕಾರ ಅವರಿಗೆ ಯಾರೂ ನೀಡಿಲ್ಲ. ಪತ್ರಕರ್ತನೋರ್ವ ಬರೆಯುವ ಯಾವುದೇ ವರದಿ ಅಥವಾ ಲೇಖನ ಸತ್ಯದ ಹತ್ತಿರ ಇರಬೇಕು ಮತ್ತು ಸತ್ಯದ ಪರವಾಗಿರಬೇಕು. ಸಾಕಷ್ಟು ಜನ ನೋಡುವ ನಿಮ್ಮ ಬ್ಲಾಗ್‌ನಲ್ಲಿ ತಪ್ಪು ಮಾಹಿತಿ ನೀಡಿ ಸುಮ್ಮನಾಗುವುದಾದರೆ ಅದಕ್ಕೆ ಏನು ಬೆಲೆ? ಸ್ಪಷ್ಟನೆ ಕೂಡ ಮುಖ್ಯ ಲೇಖನದಷ್ಟೇ ಪ್ರಭಾವವಾಗಿ ಇರಬೇಕು.
    ಹರ್ಷ ಕುಗ್ವೆಯವರನ್ನೇ ಶಿವಮೊಗ್ಗಕ್ಕೆ ಕಳುಹಿಸಿಕೊಡಿ. ಅವರು ಎಲ್ಲರಿಗೂ ಗೊತ್ತಾಗುವಂತೆ ಬಂದು ಹೋಗಲಿ. ಮುಖೇಡಿಯಾಗಿ ಬಂದು ಹೋಗುವುದು ಬೇಡ.ಬಂದವರು ಎಲ್ಲ ಕಾರ್ಯನಿರತ ಪತ್ರಕರ್ತರ ಜೊತೆ ಚರ್ಚಿಸಲಿ. ಸತ್ಯ ಹೊರಗೆ ತರಲಿ.

    ReplyDelete
  17. ಧನ್ಯವಾದಗಳು ಸಂಪಾದಕೀಯ!,
    ಹರ್ಷ ಕುಗ್ವೆ ಒಳ್ಳೆಯ ವಿಷಯವನ್ನೇ ಚರ್ಚೆಗೆ ತಂದಿದ್ದಾರೆ, ಸತ್ಯ ಯಾವತ್ತಿದ್ದರೂ ಕಹಿಯಾಗಿರುತ್ತೆ ಎಂಬುದು ಈ ಚರ್ಚೆಯಲ್ಲಿ ಸಾಬೀತಾಗಿದೆ. ಗಾಸಿಪ್ ಅಂಶಗಳು ಚರ್ಚೆಗೆ ಬಂದಾಗಲೇ ಅಲ್ಲವೇ ನಿಜ ಬೆಳಕಿಗೆ ಬರೋದು? ಹಾಗಿರುವಾಗ ಯಾರೂ ಯಾರ ವಿರುದ್ದವೂ ತೊಡೆ ತಟ್ಟುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಭಾವನೆ.

    ReplyDelete
  18. ಸತ್ಯ ಕಹಿಯಾಗಿರುವುದು ಅದನ್ನು ಸ್ವೀಕರಿಸಲು ಸಾಧ್ಯವಾಗದವರಿಗೆ ಮಾತ್ರ. ಆದರೆ ಸುಳ್ಳು ಯಾವತ್ತೂ ಕಹಿಯಾಗಿರುತ್ತದೆ. ಹಷ೯ಕುಮಾರ್ ಕುಗ್ವೆ ಅವರಿಗೆ ಹೇಳಲು ನನ್ನಲ್ಲಿ ಕೆಲ ಮಾಹಿತಿಗಳಿವೆ.

    1. ಶಿವಮೊಗ್ಗದಲ್ಲಿ ಕಾಯ೯ನಿರತ ಪತ್ರಕತ೯ರಿಗೆ ಮಾತ್ರ ಅಲ್ಲ, 2 ಸಾವಿರ, 3 ಸಾವಿರ ಸಂಬಳ ಪಡೆದು ಕೆಲಸ ಮಾಡುವ ಪತ್ರಿಕಾ ಕಚೇರಿಯ ಉದ್ಯೋಗಿಗಳಿಗೆ ಕೆಎಚ್್ಬಿ ನಿವೇಶನ ನೀಡಲಾಗಿದೆ ಎಂಬುದು ನಿಮಗೆ ಗೊತ್ತೇ? ರಿಯಲ್ ಎಸ್ಟೇಟ್ ದರ ಗಗನ ಮಟ್ಟಿರುವ ಈ ಸಂದಭ೯ದಲ್ಲಿ ಅವರು ತಮ್ಮ ಜೀವಿತಾವಧಿಯಲ್ಲಿ ಯಾವತ್ತಾದರೂ ನಿವೇಶನ ಖರೀದಿಸಲು ಸಾಧ್ಯವಾಗುತ್ತಿತ್ತೇ?

    2. 350 ಜನರಿಗೆ ನಿವೇಶನ ನೀಡಿರುವುದನ್ನು ಖಚಿತಪಡಿಸಿಕೊಂಡಿದ್ದೀರಾ? ನನಗೆ ಗೊತ್ತಿರುವಂತೆ ಕೆಎಚ್್ಬಿ ನಿವೇಶನ ಪಡೆದಿರುವವರ ಸಂಖ್ಯೆ 270. ಶಿವಮೊಗ್ಗದಲ್ಲಿ ಹಾಲಿ 20-25 ರಾಜ್ಯಮಟ್ಟದ ಪತ್ರಿಕಾ ಕಚೇರಿ- ವಿದ್ಯುನ್ಮಾನ ಮಾದ್ಯಮ ಕಚೇರಿಗಳಿವೆ. 20ಕ್ಕಿಂತ ಹೆಚ್ಚು ಸ್ಥಳೀಯ ದಿನಪತ್ರಿಕೆಗಳಿವೆ. ಈ ಎಲ್ಲಾ ಕಚೇರಿಗಳ ಉದ್ಯೋಗಿಗಳ ಸಂಖ್ಯೆ 500 ದಾಟುತ್ತದೆ.

    3. ಇವರ್ಯಾರಿಗೂ ಪುಕ್ಕಟ್ಟೆ ನಿವೇಶನ ಸಿಕ್ಕಿಲ್ಲ. ಎಷ್ಟೋ ಬಡ ಪತ್ರಕತ೯ರು ಎಲ್ಲೆಲ್ಲಿಂದಲೋ ಹಣ ಹೊಂದಿಸಿ, ಕೆಲವರು ತಮ್ಮ ಹೆಂಡತಿಯ ತಾಳಿ ಅಡವಿಟ್ಟು ಸಾಲ ಪಡೆದು ನಿವೇಶನದ ಕಂತುಗಳನ್ನು ಕಟ್ಟಿದ್ದಾರೆ. ಯಾವ ಪತ೯ಕತ್ರರಿಗೂ ಸಹ ಯಡಿಯೂರಪ್ಪರಾಗಲಿ, ಬಿ.ವೈ. ರಾಘವೇಂದ್ರ ಆಗಲಿ ಕಂತು ಕಟ್ಟಲು ಹಣ ನೀಡಿಲ್ಲ.

    4. ಇಷ್ಟಾಗಿಯೂ ಸಹ ಕೆಲವರು ಸಕ್ಷಮ ಪ್ರಾಧಿಕಾರದಿಂದ ಎರಡೆರಡು ನಿವೇಶನ ಪಡೆದಿರಬಹುದು. ಅಂತಹ ವಿಷಯಗಳ ಬಗ್ಗೆ ತನಿಖೆ ಆಗಲಿ. ಅವರಿಗೆ ನಿವೇಶನ ಕೊಡುವುದು ಬೇಡ. ಅದನ್ನು ಬಿಟ್ಟು ಶಿವಮೊಗ್ಗದ ಪತ್ರಕತ೯ರೆಲ್ಲಾ ಹಗರಣದಲ್ಲಿ ಭಾಗಿಯಾಗಿದ್ದಾರೆ, ಅವರೆಲ್ಲರೂ ಪುಕ್ಕಟೆ ಸೈಟು ಪಡೆದಿದ್ದಾರೆ ಎಂದು ಹೇಳುವುದು ಎಷ್ಟು ಸರಿ? ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯವರು ಎಂಬ ಕಾರಣಕ್ಕೆ ಎಲ್ಲಾ ಪತ್ರಕತ೯ರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ?

    5. ಇಷ್ಟಾಗಿಯೂ ನಿಮಗೆ ಅನುಮಾನಗಳಿದ್ದರೆ ಕೆಎಚ್್ಬಿ ಕಚೇರಿಯಿಂದ ಅಗತ್ಯ ದಾಖಲೆಗಳನ್ನು ಪಡೆಯಿರಿ. ಶಿವಮೊಗ್ಗದಲ್ಲಿರುವ ಪತ್ರಕತ೯ ಗೆಳೆಯರಲ್ಲಿ ವಿಚಾರಿಸಿ. ಸುಖಾಸುಮ್ಮನೆ ಹಗರಣ ನಡೆದಿದೆ ಎಂದು ಗುಲ್ಲೆಬ್ಬಿಸುವುದು ಸರಿ ಅಲ್ಲ. ಈ ರೀತಿ ಗುಲ್ಲೆಬ್ಬಿಸುತ್ತಿರುವುದು ಸೈಟು ಸಿಗದವರಿಗಿಂತ ಹೆಚ್ಚಾಗಿ ಸೈಟು ಸಿಕ್ಕವರೇ ಎಂಬುದು ವಿಪಯಾ೯ಸ. ವೈಯಕ್ತಿಕ ವೈಮನಸ್ಯವನ್ನು ಈ ರೀತಿ ವಿಷ ಕಾರುತ್ತಿದ್ದಾರೆ. ಅದನ್ನೇ ಸತ್ಯವೆಂದು ತಿಳಿದಿದ್ದೀರಾ...

    ReplyDelete
  19. ಇದು ನನ್ನ ಅಣ್ಣ ಬದುಕಿದ್ದಾಗ ಆತ ತನ್ನ ಗೆಳೆಯನೋಬ್ಬನೊಂದಿಗೆ ಸಿಟ್ಟಿನಿಂದ ಹಂಚಿಕೊಂಡಿದ್ದನ್ನು ಕೇಳಿಸಿ ಕೊಂಡಿದ್ದು. ಅದು ಮಂಗಳೂರಿನ ಸುರತ್ಕಲಿನ ಕೋಮು ಗಲಭೆಯ ಸಂದರ್ಭ.( ಅಣ್ಣ ಆಗ ಲಂಕೇಶ್ ಪತ್ರಿಕೆ ಅಥವಾ ಹಾಯ್ ಬೆಂಗಳೂರು...ಇವೆರಡರಲ್ಲಿ ಯಾವುದೋ ಒಂದು ಪತ್ರಿಕೆಗೆ ದ. ಕ. ಜಿಲ್ಲೆಯ ವರದಿಗಾರನಾಗಿದ್ದ. ) ಸುರತ್ಕಲ್ ಗಲಭೆಯಲ್ಲಿ ಮುಸ್ಲಿಮರೆ ಅತಿ ಹೆಚ್ಚು ಸಂತ್ರಸ್ತರಾಗಿದ್ದವರು. ಒಂದಿಷ್ಟು ಮುಸ್ಲಿಂ ಮುಖಂಡರು ಅಣ್ಣನನ್ನು ಸಂತ್ರಸ್ತ ಪ್ರದೇಶದ ಸ್ಥಳ ವೀಕ್ಷಣೆಗೆಂದು ಕರೆದೊಯ್ದಿದ್ದರು. ಅವನು ಹೋದಾಕ್ಷಣ ಪ್ರದೇಶದ ಮುಸ್ಲಿಮರು ಸುತ್ತುಗಟ್ಟಿ ತಮ್ಮ ಗೋಳನ್ನು ಹೇಳತೊಡಗಿದರಂತೆ. ಹಲವರು ಕಣ್ಣೀರು ಇಟ್ಟರಂತೆ. ಅಲ್ಲಿನ ಸ್ಥಿತಿ ನಿಜಕ್ಕೂ ಆತನನ್ನು ಕಂಗೆಡಿಸಿತ್ತು. ಎಲ್ಲರಿಂದಲೂ ಹೇಳಿಕೆಗಳನ್ನು ಪಡೆದ. ವಿವರಗಳನ್ನು ದಾಖಲಿಸಿದ. ಎಲ್ಲ ಮುಗಿದ ಬಳಿಕ ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ಲಿಂ ಮುಖಂಡರಲ್ಲಿ ಒಬ್ಬ ಅಣ್ಣನ ಕಿಸೆಗೆ ಕವರೊಂದನ್ನು ತುರಿಕಿಸಿದನಂತೆ. ಏನಿದು ಎಂದು ಅಲ್ಲೇ ತೆರೆದು ನೋಡಿದರೆ ಆ ಕವರಿನೊಳಗೆ 500 ರ ಎರಡು ನೋಟುಗಳಿತ್ತು. ಅದನ್ನು ಅಲ್ಲೇ ಅವನ ಮುಖಕ್ಕೆ ಎಸೆದು, ಅವನಿಗೆ ಉಗಿದು ಅಲ್ಲಿಂದ ಪಾರಾಗಿ ಬಂದನಂತೆ. ಇದಾಗಿ ಸುಮಾರು 10 ವರ್ಷಕ್ಕೂ ಅಧಿಕ ಕಾಲ ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರಲ್ಲಿ ಅಣ್ಣ ವರದಿಗಾರನಾಗಿ ದುಡಿದಿದ್ದ. ಒಂದು ದಿನ ಅವನು ಸತ್ತಾಗ ಅವನದೆಂದು ನನಗೆ ಸಿಕ್ಕಿದ್ದು ಒಂದು ಪರ್ಸ್ ಮತ್ತು ಅವನ ಕಿಸೆಯಲ್ಲಿ ಯಾರಿಗೂ ತೋರಿಸದಂತೆ ಭದ್ರವಾಗಿ ಇಟ್ಟುಕೊಂಡಿದ್ದ ಪಾಸ್ ಬುಕ್. ಪರ್ಸನಲ್ಲಿದ್ದುದು ಬರೆ 125 ರು. ಅವನ ಬ್ಯಾಂಕ್ ಅಕೌಂಟ್ನಲ್ಲಿದ್ದುದು ಬರೆ 450 ರು. ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದರೆ ಕನಿಷ್ಠ 3 000 ರು. ವಾದರೂ ಬೇಕು ಎನ್ನೋದು ವರದಿಗಾರನಾದ ಅವನಿಗೆ ಗೊತ್ತಿರಲಿಲ್ಲ. ಅವನ ಸಾಚಾತನದ ಕುರಿತಂತೆ ನನಗೆ ಹೆಮ್ಮೆ ಪಡಲು ಇದ್ದ ಒಂದೇ ಒಂದು ಪುಸ್ತಕವಾಗಿತ್ತು ಅವನು ಬಿಟ್ಟು ಹೋದ ಪಾಸ್ ಪುಸ್ತಕ. ಇಂದಿಗೂ ಅದು ನನ್ನಲ್ಲಿ ಭದ್ರವಾಗಿದೆ.

    ReplyDelete
  20. bmbasheer12@gmail.comSeptember 11, 2011 at 7:15 PM

    ಇದು ನನ್ನ ಅಣ್ಣ ಬದುಕಿದ್ದಾಗ ಆತ ತನ್ನ ಗೆಳೆಯನೋಬ್ಬನೊಂದಿಗೆ ಸಿಟ್ಟಿನಿಂದ ಹಂಚಿಕೊಂಡಿದ್ದನ್ನು ಕೇಳಿಸಿ ಕೊಂಡಿದ್ದು. ಅದು ಮಂಗಳೂರಿನ ಸುರತ್ಕಲಿನ ಕೋಮು ಗಲಭೆಯ ಸಂದರ್ಭ.( ಅಣ್ಣ ಆಗ ಲಂಕೇಶ್ ಪತ್ರಿಕೆ ಅಥವಾ ಹಾಯ್ ಬೆಂಗಳೂರು...ಇವೆರಡರಲ್ಲಿ ಯಾವುದೋ ಒಂದು ಪತ್ರಿಕೆಗೆ ದ. ಕ. ಜಿಲ್ಲೆಯ ವರದಿಗಾರನಾಗಿದ್ದ. ) ಸುರತ್ಕಲ್ ಗಲಭೆಯಲ್ಲಿ ಮುಸ್ಲಿಮರೆ ಅತಿ ಹೆಚ್ಚು ಸಂತ್ರಸ್ತರಾಗಿದ್ದವರು. ಒಂದಿಷ್ಟು ಮುಸ್ಲಿಂ ಮುಖಂಡರು ಅಣ್ಣನನ್ನು ಸಂತ್ರಸ್ತ ಪ್ರದೇಶದ ಸ್ಥಳ ವೀಕ್ಷಣೆಗೆಂದು ಕರೆದೊಯ್ದಿದ್ದರು. ಅವನು ಹೋದಾಕ್ಷಣ ಪ್ರದೇಶದ ಮುಸ್ಲಿಮರು ಸುತ್ತುಗಟ್ಟಿ ತಮ್ಮ ಗೋಳನ್ನು ಹೇಳತೊಡಗಿದರಂತೆ. ಹಲವರು ಕಣ್ಣೀರು ಇಟ್ಟರಂತೆ. ಅಲ್ಲಿನ ಸ್ಥಿತಿ ನಿಜಕ್ಕೂ ಆತನನ್ನು ಕಂಗೆಡಿಸಿತ್ತು. ಎಲ್ಲರಿಂದಲೂ ಹೇಳಿಕೆಗಳನ್ನು ಪಡೆದ. ವಿವರಗಳನ್ನು ದಾಖಲಿಸಿದ. ಎಲ್ಲ ಮುಗಿದ ಬಳಿಕ ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ಲಿಂ ಮುಖಂಡರಲ್ಲಿ ಒಬ್ಬ ಅಣ್ಣನ ಕಿಸೆಗೆ ಕವರೊಂದನ್ನು ತುರಿಕಿಸಿದನಂತೆ. ಏನಿದು ಎಂದು ಅಲ್ಲೇ ತೆರೆದು ನೋಡಿದರೆ ಆ ಕವರಿನೊಳಗೆ 500 ರ ಎರಡು ನೋಟುಗಳಿತ್ತು. ಅದನ್ನು ಅಲ್ಲೇ ಅವನ ಮುಖಕ್ಕೆ ಎಸೆದು, ಅವನಿಗೆ ಉಗಿದು ಅಲ್ಲಿಂದ ಪಾರಾಗಿ ಬಂದನಂತೆ. ಇದಾಗಿ ಸುಮಾರು 10 ವರ್ಷಕ್ಕೂ ಅಧಿಕ ಕಾಲ ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರಲ್ಲಿ ಅಣ್ಣ ವರದಿಗಾರನಾಗಿ ದುಡಿದಿದ್ದ. ಒಂದು ದಿನ ಅವನು ಸತ್ತಾಗ ಅವನದೆಂದು ನನಗೆ ಸಿಕ್ಕಿದ್ದು ಒಂದು ಪರ್ಸ್ ಮತ್ತು ಅವನ ಕಿಸೆಯಲ್ಲಿ ಯಾರಿಗೂ ತೋರಿಸದಂತೆ ಭದ್ರವಾಗಿ ಇಟ್ಟುಕೊಂಡಿದ್ದ ಪಾಸ್ ಬುಕ್. ಪರ್ಸನಲ್ಲಿದ್ದುದು ಬರೆ 125 ರು. ಅವನ ಬ್ಯಾಂಕ್ ಅಕೌಂಟ್ನಲ್ಲಿದ್ದುದು ಬರೆ 450 ರು. ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದರೆ ಕನಿಷ್ಠ 3 000 ರು. ವಾದರೂ ಬೇಕು ಎನ್ನೋದು ವರದಿಗಾರನಾದ ಅವನಿಗೆ ಗೊತ್ತಿರಲಿಲ್ಲ. ಅವನ ಸಾಚಾತನದ ಕುರಿತಂತೆ ನನಗೆ ಹೆಮ್ಮೆ ಪಡಲು ಇದ್ದ ಒಂದೇ ಒಂದು ಪುಸ್ತಕವಾಗಿತ್ತು ಅವನು ಬಿಟ್ಟು ಹೋದ ಪಾಸ್ ಪುಸ್ತಕ. ಇಂದಿಗೂ ಅದು ನನ್ನಲ್ಲಿ ಭದ್ರವಾಗಿದೆ.

    B.M.BASHEER

    ReplyDelete
  21. ಖಾಸಗಿ ಪತ್ರಿಕೆಗಳಲ್ಲಿ ಕೆಲಸ ಮಾಡಿಕೊಂಡವರು ಸರ್ಕಾರಿ ನೆರವಿನಿಂದ ಕಡಿಮೆ ಖರ್ಚಿನಲ್ಲಿ ಸೈಟು ಪಡೆದರೆ ತಪ್ಪೇನು ಎಂಬ ವಾದವೇ ವಿತಂಡ. ಹಾಗಾದರೆ ಇಂಥ ಕಡಿಮೆ ಸಂಬಳ ಪಡೆಯುತ್ತಿರುವ ಎಲ್ಲರಿಗೂ ಸರ್ಕಾರ ಸೈಟು ಕೊಡುತ್ತದೆಯೆ? ಸೀದಾ ಸಾದಾ ಪಾಳಿಯಲ್ಲಿ ನಿಂತು ಸೈಟು ಖರೀದಿಸಲು ಇವರಿಗೇನು ಮರ್ಯಾದೆ ಹೋಗುತ್ತದೆಯೆ? ಕಡಿಮೆಸಂಬಳದವನು, ಹೆಚ್ಚು ಸಂಬಳದವನ ಪತ್ನಿ, - ಯಾರಾದರೂ ಆಗಲಿ, ವಸ್ತುನಿಷ್ಠತೆ, ಪಕ್ಷಾತೀತ ವರದಿಗಾರಿಕೆ ಮಾಡಬೇಕಾದ ಪತ್ರಕರ್ತರು ಸರ್ಕಾರಿ ನೆರವಿನಿಂದ ಸೈಟು ಪಡೆಯುವುದೇ ಆತ್ಮವಂಚನೆಯಲ್ಲವೆ? ಸರ್ಕಾರಕ್ಕೆ ಬುದ್ಧಿ ಹೇಳುವ ನಾಲಗೆಯನ್ನು ಅಡವಿಟ್ಟು ಈ ಬಗೆಯ ಮಾತನಾಡಿ ಮಾರಾಯ್ರೆ.... ನಿಮ್ಮ ಪತ್ರಿಕೆಗಳನ್ನು ಓದುವ ಜನರಿಗೆ ಯಾಕೆ ಸುಮ್ನೆ ಯಾಮಾರಿಸ್ತೀರ?

    ReplyDelete
  22. ಹರ್ಷ ಕುಗ್ವೆ ಅವರೇ ಶಿವಮೊಗ್ಗ ಪತ್ರಕತ೯ರ ಕೆಹೆಚ್ ಬಿ ನಿವೇಶನ ಹಗರಣದ ಬಗ್ಗೆ ಪ್ರಸ್ತಾಪಿಸಿ, ಒಳ್ಳೆಯ ಕೆಲಸ ಮಾಡಿದ್ದೀರಿ. 'ಭೂತದ ಬಾಯಲ್ಲಿ ಭಗವದ್ಗೀತೆ' ಎಂಬಂತೆ ಕೆಲ ಪತ್ರಕತ೯ರು ನಡೆದುಕೊಳ್ಳುತ್ತಿದ್ದಾರೆ. ಭ್ರಷ್ಟ ರಾಜಕಾರಣಿಗಳನ್ನು ಓಲೈಸಿ, ಬೇಕಾಬಿಟ್ಟಿಯಾಗಿ ಸೈಟ್ ಪಡೆದು, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ಇವರು ನಿಮ್ಮಂತ ಪ್ರಾಮಾಣಿಕ ಯುವ ವರದಿಗಾರರಿಗೆ ಬುದ್ದಿ ಹೇಳುವ ನೈತಿಕತೆಯೂ ಇಲ್ಲ. 'ತಾನು ಕಳ್ಳ ಪರರನ್ನು ನಂಬ...' ಎಂಬಂತೆ ಶಿವಮೊಗ್ಗದ ಕೆಲ ಭ್ರಷ್ಟ ಪತ್ರಕತ೵ರು ನಡೆದುಕೊಳ್ಳುತ್ತಿದ್ದಾರೆ. ಇವರ ಗೊಡ್ಡು ಬೆದರಿಕೆಗೆ ಹೆದರಬೇಡಿ. ಶಿವಮೊಗ್ಗ ಕೆಹೆಚ್್ ಬಿ ನಿವೇಶನ ಹಗರಣವನ್ನು ಬಯಲಿಗೆಳೆಯಿರಿ. ನಿಮ್ಮೊಂದಿಗೆ ನಾವಿದ್ದೇವೆ.

    ReplyDelete
  23. ಶಿವಮೊಗ್ಗ ಕೆಹೆಚ್್ ಬಿ ನಿವೇಶನ ಹಗರಣವನ್ನು ಬಯಲಿಗೆಳೆಯಿರಿ. ನಿಮ್ಮೊಂದಿಗೆ ನಾವಿದ್ದೇವೆ.

    ReplyDelete
  24. ಮಾ ಸು ಮಂಜುನಾಥSeptember 13, 2011 at 7:18 PM

    ಸಾಮಾಜಿಕ ತಾಣಗಳು ಸ್ವಲ್ಪ ಮಟ್ಟಿಗೆ ಇಂದಿನ ಭ್ರಷ್ಟ ಮಾಧ್ಯಮಗಳಿಗಿಂತ ಉತ್ತಮವೇನೋ ಎನ್ನಿಸುತ್ತವೆ.

    ReplyDelete
  25. ನಿಮ್ಮ ಹಾಗೆಯೇ ಭ್ರಮನಿರಸನಗೊಂಡ ಒಂದು ಯುವಮನSeptember 14, 2011 at 9:20 PM

    ಎಲ್ಲ ಯುವ ಪತರ್ಕರ್ತರೂ ಹೀಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಆರೋಗ್ಯಕರ. ಎಷ್ಟೋ ಯುವ ಪತ್ರಕರ್ತರಲ್ಲಿ ಇರಬಹುದಾದ ಇಂಥ ಜಿಙ್ಞಾಸೆ, ಪ್ರಶ್ನೆಗಳು ಮತ್ತು ಬಹುಷಃ ವ್ಯವಸ್ಥೆಯ ಒತ್ತಡಕ್ಕೆ ಒಳಗಾಗಿ ಅದುಮಿಟ್ಟ ಸಂಕಟಗಳಿಗೆ ಈ ಬರಹದ ಮೂಲಕ ಮಾತು ಕೊಡುವ ಕೆಲಸ ಇಲ್ಲಿ ನಡೆದಿದೆ. ಇದಕ್ಕಾಗಿ ನಿಮಗೆ ಅಭಿನಂದನೆಗಳು ಸಲ್ಲಬೇಕು.

    ಸೋ ಕಾಲ್ಡ್ 'ಸಕ್ಸಸ್' ನ ಹಿಂದೆ ಬಿದ್ದಿರುವ ಪತ್ರಿಕೋದ್ಯಮಿಗಳು ತುಳಿದಿರುವ ಶಾರ್ಟ್ ಕಟ್ ದಾರಿ ನೆನೆಸಿಕೊಂಡರೆ ವಾಕರಿಕೆ ಬರುತ್ತೆ.
    ಜಾಣ ಕುರುಡು/ಕಿವುಡು ಎಂಬುದು ಕೊನೆಗೆ ಕಣ್ಣು-ಕಿವಿಗಳ ಸಂವೇದನೆಯನ್ನೇ ಕೊಂದುಕೊಳ್ಳುವ ಮಟ್ಟಕ್ಕೆ ತಂದುನಿಲ್ಲಿಸುವ ಆತ್ಮರಹಿತ ವ್ಯವಸ್ಥೆಯಲ್ಲಿ ನಾವಿದ್ದೇವೆ!

    ಎಷ್ಟೋ ಆದರ್ಶಗಳನ್ನು, ಉನ್ನತ ಗುರಿಗಳನ್ನು ಇಟ್ಟುಕೊಂಡು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿರಿಸುವ ಇಂತಹ ಅದೆಷ್ಟೋ ಯುವಕರಿಗೆ ಆಗಿರಬಹುದಾದ ಭ್ರಮನಿರಸನಗಳು ಹೀಗೆ ಸಾರ್ವತ್ರಿಕವಾಗಿ ಚರ್ಚೆಗೆ ವಿಷಯವಾಗುವುದು ಖಂಡಿತವಾಗಿಯೂ ಆಗಬೇಕಾದದ್ದೇ. ಇಂಥ ತೆರೆದ, ಆರೋಗ್ಯಕರ ಚರ್ಚೆಗೆ ನಿಮ್ಮ ಈ ಲೇಖನ ಪೀಠಿಕೆಯಾಗಲಿ ಮತ್ತು ಮ್ರಾಮಾಣಿಕ ಯುವಕರಿಗೆ ಇಂಥ ಆತ್ಮಪ್ರಙ್ಷೆ ಮೂಡಿಸುವಲ್ಲಿ ಸ್ಫೂರ್ತಿಯಾಗಲಿ.

    ನಿಮ್ಮ ಈ ಬರಹ ಸಕಾಲಿಕವಾದುದು. ಇದರಿಂದ ಕೆಲವು ಪತ್ರಕರ್ತರಾದರೂ 'ಮುಟ್ಟಿನೋಡಿಕೊಳ್ಳುವ' ಹಾಗಾಗಲಿ !
    ಇಲ್ಲಿ ಹಲವರದು "ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡ್ಕೊಂಡ.." ಅನ್ನೊ ಪರಿಸ್ಥಿತಿ ಪಾಪ !!

    ReplyDelete
  26. praamanikaraagiddare muchhu mare bekaagilla !

    ReplyDelete
  27. ರಾಜಧಾನಿ ಪತ್ರಕತ೯ರು ಮಾತ್ರ ಸೈಟು ಪಡೆಯಲು ಮಾತ್ರ ಲಾಯಕ್ಕಾ ?????

    ReplyDelete