ಮಾಧ್ಯಮ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಹರ್ಷಕುಮಾರ್ ಕುಗ್ವೆ ಬರೆದ ಲೇಖನದ ಒಂದೆರಡು ಸಾಲುಗಳು ಶಿವಮೊಗ್ಗ ಪತ್ರಕರ್ತರ ವಲಯವನ್ನು ವಿಚಲಿತಗೊಳಿಸಿದೆ. ಜನಪರ ಪತ್ರಿಕೋದ್ಯಮದ ಪರಂಪರೆಯನ್ನು ಹೊಂದಿರುವ ಶಿವಮೊಗ್ಗದ ಪತ್ರಕರ್ತರ ಬಗ್ಗೆ ನಮಗೆ ವಿಶೇಷ ಗೌರವವಿದೆ. ಆದರೆ ಹರ್ಷ ಅವರ ಲೇಖನಕ್ಕೆ ಬಂದ ಅನಪೇಕ್ಷಿತ ಪ್ರತಿಕ್ರಿಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚರ್ಚೆಯನ್ನು ಮುಂದುವರೆಸುತ್ತಿದ್ದೇವೆ. ಹರ್ಷ ಈ ಪ್ರತಿಕ್ರಿಯೆಯನ್ನು ನೋವಿನಿಂದಲೇ ಬರೆದಂತಿದೆ. ಅವರೊಂದಿಗೆ ನಾವಿದ್ದೇವೆ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಯಸುತ್ತೇವೆ.
ಶಿವಮೊಗ್ಗದ ಕೆಎಚ್‌ಬಿ ಸೈಟು ಅವಾಂತರ ಯಾಕೆ ಸೃಷ್ಟಿಯಾಯಿತು? ಯಾಕೆ ಲೋಕಾಯುಕ್ತ, ರಾಜ್ಯಪಾಲರವರೆಗೆ ದೂರುಗಳು ಹೋದವು? ಯಾಕೆ ಫಲಾನುಭವಿಗಳ ಪಟ್ಟಿ ಸರಿಯಾದ ಪರಿಷ್ಕರಣೆಗೆ ಒಳಗಾಗಲಿಲ್ಲ? ಕೆಎಚ್‌ಬಿ ಕಾಯ್ದೆ ಉಲ್ಲಂಘಿಸಿ ಎರಡನೇ ಬಾರಿ ಸೈಟು ಪಡೆಯಲು ಹೊರಟವರ ಹೆಸರೂ ಪಟ್ಟಿಯಲ್ಲಿದೆಯೇ? ಪತ್ರಕರ್ತರಲ್ಲದವನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆಯೇ? ಹೀಗೆ ನೂರಾರು ಪ್ರಶ್ನೆಗಳು ಉದ್ಭವಿಸಿವೆ. ಕೆಲ ದಿನಗಳಲ್ಲೇ ಈ ಕುರಿತು ಒಂದು ಟಿಪ್ಪಣಿಯನ್ನು ಬರೆಯುವ ಪ್ರಯತ್ನ ನಡೆಸುತ್ತೇವೆ.
ಇದು ಯಾರ ಮೇಲೂ ಮಾಡಲಾಗುವ ಆರೋಪಪಟ್ಟಿಯೇನಲ್ಲ. ಪತ್ರಕರ್ತರು ಸ್ವಯಂ ನಿಯಂತ್ರಣ, ನೈತಿಕ ಶುದ್ಧತೆಯ ಮಾರ್ಗವೊಂದನ್ನು ಹಿಡಿಯಲೇಬೇಕು ಎಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿರುವುದರಿಂದ ಆತ್ಮಾವಲೋಕನದ ಧಾಟಿಯಲ್ಲೇ ಈ ಚರ್ಚೆ ನಡೆಯಲಿ. ಶಿವಮೊಗ್ಗ ಗೆಳೆಯರು ಯಾವುದನ್ನೂ ವೈಯಕ್ತಿಕವಾಗಿ ಸ್ವೀಕರಿಸದೆ ಒಂದು ಆರೋಗ್ಯಕರ ಚರ್ಚೆಗೆ ಅನುವಾಗುತ್ತಾರೆ ಎಂಬ ನಂಬುಗೆ ನಮ್ಮದು. ಆ ಸೂಕ್ಷ್ಮತೆ ಶಿವಮೊಗ್ಗದ ಗೆಳೆಯರಿಗಿದೆ ಎಂಬುದೂ ನಮಗೆ ಗೊತ್ತಿದೆ. ಒಂದು ವೇಳೆ ಈ ಚರ್ಚೆಗೆ ಸಂಪಾದಕೀಯ ಸರಿಯಾದ ವೇದಿಕೆಯಲ್ಲವೆಂದು ಅವರಿಗನ್ನಿಸಿದರೆ, ಬೇರೆ ವೇದಿಕೆಗಳಲ್ಲಿ ಈ ಚರ್ಚೆ ಮುಂದುವರೆಸಲಿ. ಆದರೆ ಉದ್ಭವವಾಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಚರ್ಚೆಯಂತೂ ನಡೆಯಬೇಕಲ್ಲವೇ?
-ಸಂಪಾದಕೀಯ
ನಮ್ಮ ಕಡೆ ಕಡಿಜೀರ ಎಂಬ ಕೀಟವಿದೆ. ಅದು ಜೇನು ಹುಳುವನ್ನೇ ಹೋಲುತ್ತದಾದರೂ ಅದಕ್ಕಿಂತ ಗಾತ್ರದಲ್ಲಿ ದೊಡ್ಡದು ಮತ್ತು ಇದು ಕಡಿದರೆ ಜೇನುಹುಳದ ಕಡಿತಕ್ಕಿಂತ ವಿಪರೀತ ಉರಿ ಮತ್ತು ವಿಷಕಾರಿ. ಇದೂ ಗೂಡು ಕಟ್ಟುತ್ತದೆ. ಆದರೆ ಅದರಲ್ಲಿ ಮಧುವಿರುವುದಿಲ್ಲ. ಪತ್ರಿಕೋದ್ಯಮದಲ್ಲಿನ ಭ್ರಷ್ಟಾಚಾರದ ಕುರಿತ ಕೆಲವು ಅನಿಸಿಕೆಗಳನ್ನು ಹೇಳಿಕೊಳ್ಳಲು ಹೋಗಿ ಈ ಕಡಿಜೀರದಿಂದ ಸಕತ್ತಾಗಿ ಕಡಿಸಿಕೊಂಡ ಅನುಭವ ನನ್ನದಾಗಿದೆ. ಕಡಿತ ತಾಳದೇ ನಾನು ಓಡಿಹೋದ ದಾರಿಯ ಅಕ್ಕಪಕ್ಕದಲ್ಲಿ ತಮ್ಮ ಪಾಡಿಗೆ ತಾವಿದ್ದ ಒಬ್ಬಿಬ್ಬರಿಗೂ ಕಚ್ಚಿಬಿಟ್ಟಿವೆ. ಅದರ ಗೂಡಿಗೆ ಯಾರೋ ಈಗಾಗಲೇ ಯಾವುದೋ ಕಾರಣಕ್ಕೆ ಕಲ್ಲುಹೊಡೆದಿದ್ದರು. ನಾನು ಸುಮ್ಮನೇ ಹೋಗಿ ಗೂಡಿನ ಕೆಳಗೆ ಇದು ಜೇನಿದ್ದಂಗೆ ಇಲ್ಲವಲ್ಲಾ..? ಎಂದು ತಲೆಕೆಡಿಸಿಕೊಂಡು ನಿಂತದ್ದೇ ಈಗ ಹುಳುಗಳು ಅಟ್ಟಾಡಿಸಿಕೊಂಡು ಕಚ್ಚುತ್ತಿವೆ. ಮುಖ ಮುಸುಡಿ ಏನೊಂದೂ ನೋಡುತ್ತಿಲ್ಲ. ಕೊನೆಯ ದಾರಿಯಾಗಿ ಈಗ ದೋಪ್ದಿಯ ರೀತಿ ಬನ್ನಿ ಅದೆಷ್ಟು ಕಚ್ಚುತ್ತೀರೋ ಕಚ್ಚಿ ಎಂದು ಹೇಳುವ ಸ್ಥಿತಿ ಬರುವಂತೆ ಕಾಣುತ್ತಿದೆ.
**
ಒಂದು ಬಗೆಯ ವಿಚಿತ್ರ ನೋವು, ಸಂಕಟ. ನನ್ನ ಲೇಖನದಲ್ಲಿ ಶಿವಮೊಗ್ಗ ಪತ್ರಕರ್ತರ ಪ್ರಸ್ತಾಪ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ನಾನು ನಿರೀಕ್ಷಿಸಿಯೇ ಇರದಿದ್ದ ರೀತಿಯ ಪ್ರತಿಕ್ರಿಯೆ ನನ್ನ ಶಿವಮೊಗ್ಗದ ಹಿರಿಯ ಪತ್ರಕರ್ತರ ಗೆಳೆಯರಿಂದ ವ್ಯಕ್ತವಾಗಿದೆ. ಸುಮಾರು ಹತ್ತು ವರ್ಷಗಳ ಕಾಲ ಹೊಂದಿದ್ದ ಉತ್ತಮ ಸಂಬಂಧ, ಗೌರವ ಎಲ್ಲವೂ ಒಮ್ಮೆಲೇ ಅನಿರೀಕ್ಷಿತವಾಗಿ ಹುಡಿಗಟ್ಟಿಬಿಡುತ್ತಿರುವ ಸಂಕಟವದು. ನನ್ನ ಮೇಲೆ ಅವರಿಗೆ, ಅವರ ಮೇಲೆ ನನಗೆ. ನನ್ನೆದುರು ಕೆಲವರು ಮನಸ್ಸಿಗೆ ಬಂದಂತೆ ಮಾತಾಡಿದಾಗ ಯಾವ ಪತ್ರಕರ್ತ ಗೆಳೆಯರನ್ನು ನನ್ನವರು ಎಂಬ ಭಾವನೆಯಿಂದ ಸಮರ್ಥಿಸಿಕೊಂಡು ಮಾತಾಡುತ್ತಿದ್ದೆನೋ, ಯಾರೊಂದಿಗೆ ಅಪಾರ ಗೌರವಗಳೊಂದಿಗೆ ವ್ಯವಹರಿಸುತ್ತಿದ್ದೆನೋ ಅವರ ಕುರಿತು ಕಟ್ಟಿಕೊಂಡಿದ್ದ ಮನಸ್ಸಿನ ಗೋಪುರ ಹೀಗೆ ದಢಾರ್ ಅಂತ ಕಳಚಿ ಬೀಳುತ್ತದೆ ಎಂದುಕೊಂಡಿರಲಿಲ್ಲ.
**
ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದೇ ಅನಿರೀಕ್ಷಿತ. ಹತ್ತು ಹನ್ನೆರಡು ವರ್ಷಗಳ ಕಾಲ ಶಿವಮೊಗ್ಗದ ಕಾಲೇಜುಗಳಲ್ಲಿ, ಹಾಸ್ಟೆಲುಗಳಲ್ಲಿ, ದಲಿತರ ಕೇರಿಗಳಲ್ಲಿ ವಿದ್ಯಾರ್ಥಿಗಳನ್ನು, ಯುವಕರನ್ನು ಕೂರಿಸಿಕೊಂಡು ನಿಸ್ವಾರ್ಥ ಸಮಾಜಸೇವೆಯ ಬಗ್ಗೆ ಭಾಷಣ ಕೊಚ್ಚುತ್ತಿದ್ದವ. ಬದುಕಲ್ಲಿ ಒಮ್ಮಿಂದೊಮ್ಮೆಗೇ ಅನಿರೀಕ್ಷಿತವಾಗಿ ಬಿದ್ದ ಹೊಡೆತಗಳನ್ನು ತಾಳಲಾಗದೇ, ಆ ಮೊದಲಿನ ಬದ್ಧತೆ ಉಳಿಸಿಕೊಳ್ಳಲಾಗದೇ ದುಡಿಮೆ ಅನಿವಾರ್ಯ ಎಂದುಕೊಂಡು ಈ ಕ್ಷೇತ್ರಕ್ಕೆ ಕಾಲಿಟ್ಟವ. ಒಂದು ನೆಲೆಯಿಂದ ಅದು ನನ್ನ ವೈಯುಕ್ತಿಕ ದೌರ್ಬಲ್ಯವೇ ಎನ್ನಿ. ಹೀಗೆ ಆದರ್ಶ - ಬದುಕು - ದೌರ್ಬಲ್ಯಗಳ ನಡುವೆ ನೈತಿಕ ಇಕ್ಕಟ್ಟನ್ನೆದುರಿಸುತ್ತಿದ್ದ ಸಂದರ್ಭದಲ್ಲೇ ಹೀಗೊಂದು ಭ್ರಷ್ಟಾಚಾರದ ವಿರುದ್ಧ ಚಳವಳಿ, ಚರ್ಚೆ, ವಾದ, ವಿವಾದ, ಸಂಪಾದಕೀಯ, ಇತ್ಯಾದಿಗಳೆಲ್ಲಾ ಸೇರಿ ಹೀಗೊಂದು ಲೇಖನ ಬರೆಯಲು ಪ್ರೇರೇಪಿಸಿತ್ತು.
ಸುತ್ತಮುತ್ತಲ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮಾಧ್ಯಮಗಳಿವೆ, ಆದರೆ ಮಾಧ್ಯಮ ಲೋಕದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇಲ್ಲಿ ಯಾರೂ ಇಲ್ಲದಿರುವ ಕುರಿತು ನನ್ನ ತಲೆಯಲ್ಲಿ ಬಹಳ ಕಾಲದಿಂದಲೇ ಕೊರೆಯುತ್ತಿತ್ತು. ಆದರೆ ಹಾಗಂತ ಅದನ್ನೆಲ್ಲಾ ತನಿಖೆ ನಡೆಸಿ ಬಯಲುಮಾಡಿಬಿಡುವ ಯೋಚನೆಯೂ ನನಗಿರಲಿಲ್ಲ. ಅದು ನನ್ನಿಂದ ಸಾಧ್ಯವೂ ಇರಲಿಲ್ಲವೆನ್ನಿ. ಆದರೆ ಈಗ ಪ್ರಾಮಾಣಿಕವಾಗಿ ಅನಿಸಿದ್ದನ್ನು ಬರೆದುಕೊಳ್ಳಲು ನನ್ನ ಬ್ಲಾಗ್ ಮತ್ತು ಸಂಪಾದಕೀಯ ಒಂದು ವೇದಿಕೆ ಕೊಟ್ಟಿದ್ದವಷ್ಟೆ. ಹಾಗೆಂದೇ ಬರೆದೆ. ನನ್ನನ್ನೂ ಒಳಗೊಂಡಂತೆ ಇಲ್ಲಿ ಪತ್ರಕರ್ತರಲ್ಲಿ ಆತ್ಮಾವಲೋಕನ ನಡೆಯಬೇಕು ಎನ್ನುವುದಿಷ್ಟೇ ನನ್ನ ಬಯಕೆಯಾಗಿತ್ತು. ಮತ್ತಿನ್ನಾರನ್ನೂ ಗುರಿಪಡಿಸುವ, ವಿಚಾರಣೆಗೊಳಪಡಿಸುವ, ಅವರನ್ನು ಕಾನೂನು ಅಥವಾ ಆರ್ಥಿಕ ಇಕ್ಕಟ್ಟಿಗೆ ಸಿಲುಕಿಸುವ ದುರುದ್ದೇಶಗಳು ನನ್ನದಾಗಿರಲಿಲ್ಲ.
**
ಈ ಭರದಲ್ಲಿ ನನ್ನಿಂದ ಒಂದು ತಪ್ಪಾಯಿತು. ಅದೇನೆಂದರೆ ಶಿವಮೊಗ್ಗದ ಕೆಎಚ್‌ಬಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯೂ ನನ್ನ ಬಳಿ ಇಲ್ಲದಿದ್ದರೂ ಬಹಳ ಹಿಂದೆ ಕೆಲ ಗೆಳೆಯರಿಂದ ಕೇಳಿದ್ದನ್ನು ಅಧಿಕೃತ ಮಾಹಿತಿಯನ್ನು ಕೈಯಲ್ಲಿಟ್ಟುಕೊಳ್ಳದೇ ಹಾಗೇ ದಾಖಲಿಸಿಬಿಟ್ಟೆ. ಅದರಲ್ಲೂ ಶಿವಮೊಗ್ಗದ ಎಲ್ಲಾ ಪತ್ರಕರ್ತರೂ ಎನ್ನುವ ರೀತಿಯಲ್ಲಿ. ನಿಜಕ್ಕೂ ಇದು ನನ್ನಿಂದಾದ ಪ್ರಮಾದ. ಆದರೆ ಇದರಾಚೆಗೆ ನನ್ನ ಲೇಖನಕ್ಕೆ ಫೋನ್ ಮೂಲಕ, ಹಾಗೂ ಅನಾಮಿಕವಾಗಿ ಬಂದ ಕಮೆಂಟುಗಳ ಮೂಲಕ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸುವುದು ಈ ಸಂದರ್ಭದಲ್ಲಿ ನನ್ನ ಜವಾಬ್ದಾರಿ ಎನ್ನಿಸಿದೆ. ಅವರ ಪ್ರತಿಕ್ರಿಯೆಯ ರೀತಿಯಿಂದಾಗಿ ನನಗೆ ಅವರ ಬಳಿ ನಿರ್ದಿಷ್ಟವಾಗಿ ಈ ವಿಷಯದ ಕುರಿತು ಯಾವ ಮಾತುಕತೆಯೂ ಬೇಕು ಎನ್ನಿಸಿರದ ಕಾರಣ ಅವರ ಕಮೆಂಟುಗಳನ್ನು ಮತ್ತು ಸೈಟು ಆಕಾಂಕ್ಷಿಗಳ ಪಟ್ಟಿಯನ್ನಾಧರಿಸಿ ಮಾತ್ರ ಶಿವಮೊಗ್ಗದ ಆ ಗೆಳೆಯರನ್ನುದ್ದೇಶಿಸಿ ಇಲ್ಲಿ ಬರೆಯುತ್ತಿದ್ದೇನೆ.
**
೧. ಮೊದಲನೆಯದಾಗಿ ನನಗೊಂದು ಮೂಲಭೂತ ಪ್ರಶ್ನೆ ಇದೆ. ಸೈಟುಗಳನ್ನು ಸರ್ಕಾರ ಸಂಬಂಧಪಟ್ಟ ಬೋರ್ಡುಗಳ ಮೂಲಕ ಜನರಿಗೆ ಕೊಡುವುದು ಸರಿ. ಆದರೆ, ಅದನ್ನು ಪತ್ರಕರ್ತರು ಎನ್ನುವ ಕಾರಣಕ್ಕೆ ಕೊಡುವುದು ಎಷ್ಟು ಸರಿ? ಈ ಟ್ರಂಪ್ ಕಾರ್ಡಿನಲ್ಲಿ ಸೈಟುಗಳಿಗೆ ಪತ್ರಕರ್ತರ ಸಂಘ ಸೈಟುಗಳನ್ನು ರಿಯಾಯ್ತಿಯಾಗಿ ಪಡೆಯುತ್ತದೆ ಎಂದಾದರೆ ಸಮಾಜದ ಎಲ್ಲಾ ವರ್ಗಗಳ ಸಂಘಗಳಿಗೂ ಅದೇ ರೀತಿ ನೀಡಬೇಕಲ್ಲವೇ? ಉದಾಹರಣೆಗೆ, ಶಿಕ್ಷಕರ ಸಂಘ, ವಕೀಲರ ಸಂಘ, ವೈದ್ಯರ ಸಂಘ,... ಇತ್ಯಾದಿ? ಯಾವಾಗಲೂ ಸರ್ಕಾರದ, ಸರ್ಕಾರವನ್ನು ನಡೆಸುವವರ ಮೇಲೆ ವಿಚಕ್ಷಣೆ ನಡೆಸಬೇಕಾದ ಪತ್ರಕರ್ತರಿಗೆ ಸರ್ಕಾರ, ಅಥವಾ ಒಂದು ಸಂದರ್ಭದಲ್ಲಿ ಸರ್ಕಾರ ನಡೆಸುವವರು ಸೈಟನ್ನು ನೀಡುವುದಾದರೆ ಪತ್ರಿಕೋದ್ಯಮ ಸಮಾಜದ ನಾಲ್ಕನೇ ಆಸ್ತಿ ಆಗಿ ಉಳಿಯಲು ಸಾಧ್ಯವಾ? ಪತ್ರಿಕೋದ್ಯಮದ ಸ್ವತಂತ್ರ ಅಸ್ತಿತ್ವದ ದೃಷ್ಟಿಯಿಂದ ಪತ್ರಕರ್ತರೆಂಬ ಕಾರಣಕ್ಕೆ ಸರ್ಕಾರ ಯಾವುದೇ ವಿಶೇಷ ಸೌಲಭ್ಯ (ಪ್ರಿವಿಲೇಜ್) ನೀಡುವುದು ಸರಿಯಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ. ‘ನನ್ನ ಲೇಖನದಲ್ಲಿ ಹೇಳಲು ಬಂದಿದ್ದು ಇದನ್ನೇ ಸಾರ್ ಎಂದಿದ್ದಕ್ಕೆ ಹಾಂ. ನಿಮ್ಮ ಈ ಅಭಿಪ್ರಾಯದ ಬಗ್ಗೆ ಗೌರವ ಇದೆ, ಇದು ರಾಜ್ಯದಲ್ಲಿ ಚರ್ಚೆಯಾಗತಕ್ಕ ವಿಷಯ ಎಂದು ಹೇಳಿದರು ಗೆಳೆಯರು. ಚರ್ಚೆ ನಡೆದರೆ ಒಂದು ಕಡೆಗೆ ನಡೆಯಲಿ, ಅಲ್ಲಿಯವರೆಗೆ ಏನೇನು ಸೌಲಭ್ಯ ಸಿಗುತ್ತದೆಯೋ ಅದನ್ನು ಪಡೆಯುತ್ತಾ ಇರೋಣ. ಆಮೇಲೆ ನೋಡೋಣ ಎಂದೋ ಇದರರ್ಥ?
೨. ಈಗ ನಾನೊಬ್ಬ ಅಪರಾಧಿ ಎಂದು ಗೆಳೆಯರು ನಿರ್ಧರಿಸಿಯಾಗಿದೆ. ಯಾಕೆಂದರೆ ತಮ್ಮ ಜೀವಮಾನದಲ್ಲಿ ಎಂದೂ ಸೈಟು ಪಡೆಯಲಾಗದ ಅನೇಕರಿಗೆ ಈಗ ಇವರ ಪ್ರಯತ್ನದಿಂದಾಗಿ ಸೈಟು ಸಿಗಲಿದೆ. ಪತ್ನಿಯರ ತಾಳಿ ಸರವನ್ನೂ ಮಾರಿ ಕಂತು ಕಟ್ಟುತ್ತಿದ್ದಾರೆ. ಪತ್ರಿಕಾ ಕಛೇರಿಗಳಲ್ಲಿ ಡಿಟಿಪಿ ಮಾಡುವ, ಪತ್ರಿಕೆ ವಿತರಿಸುವಂತವರಿಗೂ ಸೈಟು ಸಿಗುತ್ತಿದೆ. ಇಂತಾದ್ದರಲ್ಲಿ ಈಗ ಇದರ ಬಗ್ಗೆ ಇಲ್ಲ ಸಲ್ಲದ ಗುಲ್ಲೆಬ್ಬಿಸುತ್ತಿರವ ನಾನು ಈ ಮೇಲಿನವರ ವಿರೋಧಿಗಳು. ಅಂತವರ ಬಗ್ಗೆ ಕಾಳಜಿ ಇರದವನು. ನಾನೆಂತಹ ಸಂವೇದನೆ ಇಲ್ಲದ ವ್ಯಕ್ತಿ ಎಂದು ನನ್ನ ಬಗ್ಗೆ ನನಗೇ ಅಸಹ್ಯ ಎನ್ನಿಸಬೇಕು. ಹಾಗಿದೆ ನಿಮ್ಮ ವಾದ. ನನಗೂ ಗೊತ್ತು. ಪಾಪದ ಸುಮಾರು ಜನರು ೨೦ ಸಾವಿರ ರೂಪಾಯಿ ಕಟ್ಟಿ ಸೈಟು ಆಗ ಸ್ಯಾಂಕ್ಷನ್ ಆಗುತ್ತದೆಯೋ ಈಗ ಆಗುತ್ತದೆಯೋ ಎಂದು ಕಾಯುತ್ತಿದ್ದಾರೆ. ಆದವರು ನಾಲ್ಕೇ ಕಂತುಗಳಲ್ಲಿ ಕಟ್ಟುವ ಸಾಮರ್ಥ್ಯವಿಲ್ಲದೇ ಪರದಾಡುತ್ತಿದ್ದಾರೆ. ಆದರೆ ಈ ಯಾರೂ ಸಹ ತಾವು ಪತ್ರಿಕಾ ಕಛೇರಿಗಳಿಗೆ ಎಡತಾಕಿದಾಗ ಹೀಗೆ ಇತರೆ ಸಾಮಾನ್ಯ ಜನರಿಗೆ ಸುಲಭವಾಗಿ ಸಿಗದ ಸೈಟು ಪತ್ರಕರ್ತರಾಗುವ ತಮಗೆ ಸಿಗುತ್ತದೆ, ಹಾಗಾಗಿ ನಾವು ಕೆಲಸ ಸೇರಬೇಕು ಎಂದುಕೊಂಡು ಬಂದವರಲ್ಲ. ಬದಲಿಗೆ ಅವರಲ್ಲಿ ಈ ಪ್ರಲೋಭನೆ ಬರುವಂತೆ ಮಾಡಲಾಗಿದೆ. ಸೈಟು ಸಿಕ್ಕುವುದೇ ಒಂದು ಭಾಗ್ಯ ಎಂದುಕೊಂಡ ಇಂತಹ ಎಲ್ಲಾ ಉದ್ಯೋಗಿಗಳೂ ಸಹಜವಾಗಿ ಖುಷಿಯಾಗಿದ್ದಾರೆ. ತಾವೂ ಅರ್ಜಿ ಹಾಕಿದ್ದಾರೆ. ಸಮಸ್ಯೆ ಇರುವುದು ಇದಲ್ಲವೇ ಅಲ್ಲ. ಹೀಗೆ ಪ್ರಾಮಾಣಿಕವಾಗಿ ಸೈಟಿಗೆ ಅರ್ಜಿ ಹಾಕಿದವರದ್ದಂತೂ ಖಂಡಿತಾ ತಪ್ಪಲ್ಲ. ಆದರೆ ಏನಾಗಿದೆ ನೋಡಿ. ಹೀಗೆ ಅರ್ಜಿ ಹಾಕಿದವರೂ ಕೂಡಾ ಇಂದು ಒಂದು ಬಗೆಯ ಗೊಂದಲದಲ್ಲಿ ಮುಳುಗಿದ್ದಾರೆ. ಇಲ್ಲಿ ಯಾರದೋ ಮರ್ಜಿಗೆ ನಾವು ಒಳಗಾಗಿದ್ದೇವೆ, ಯಾರೋ ಎಸೆದ ದಾಳಕ್ಕೆ ಬಲಿಯಾಗಿದ್ದೇವೆ ಎಂದು. ಇದಕ್ಕೆ ಯಾರು ಹೊಣೆ ಸ್ವಾಮಿ? ಯಾಕೆ ಬರೀ ೨-೩ ಸಾವಿರ ಸಂಬಳ ಪಡೆದು ನಿವೇಶನ ಪಡೆದವರ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೀರಿ? ಈಗಾಗಲೇ ಉತ್ತಮ ಮನೆ ಇರುವವರು, ಮಗ, ಸೊಸೆ, ತಾಯಿ, ಹೆಂಡತಿ, ಹೀಗೆ ಅವರ ಇವರ ಹೆಸರಲ್ಲೆಲ್ಲಾ ನಿವೇಶನಕ್ಕೆ ಅರ‍್ಜಿ ಹಾಕಿದ್ದವರ ಬಗ್ಗೆ ಯಾಕೆ ಪ್ರಸ್ತಾಪಿಸಿಲ್ಲ? ಈಗಾಗಲೇ ಶಿವಮೊಗ್ಗದಲ್ಲೇ ಬೇರೆ ನಿವೇಶನ, ಮನೆ ಹೊಂದಿ ಮತ್ತೆ ಈಗ ದುರಾಸೆಯಿಂದ ಅರ್ಜಿ ಹಾಕಿರುವವರು, ಬೇರೆ ಊರುಗಳಲ್ಲಿ ಸಾಕಷ್ಟು ನಿವೇಶನ, ಮನೆ, ಆಸ್ತಿ, ಎಲ್ಲಾ ಇದ್ದೂ ಯಡಿಯೂರಪ್ಪನ ದುಬಾರಿ ಶಿವಮೊಗ್ಗದಲ್ಲಿ ಸೈಟು ಇರುವುದು ಲಾಭದಾಯಕ ಎಂದು ಕೊಂಡು ಮತ್ತೆ ಈಗ ಅರ್ಜಿ ಹಾಕಿರುವವರು, ಇಂಥವರೆಲ್ಲಾ ಇತರೆ ಪ್ರಾಮಾಣಿಕ ಸಾಮಾನ್ಯ ಪತ್ರಕರ್ತರನ್ನು ತಮ್ಮ ಸ್ವಾರ್ಥಸಾಧನೆಗೆ ಗುರಾಣಿಯಾಗಿಟ್ಟುಕೊಂಡಿದ್ದಾರೆ ಎಂದೆನ್ನಿಸುವುದಿಲ್ಲವೇ?
೩. ಸರಿ. ನಾನು ೩೫೦ ಜನರು ಎಂದು ಬರೆದಿದ್ದು ತಪ್ಪು. ಆದರೆ ಈ ಸೈಟುಗಳಿಗೆ ಮೊತ್ತ ಮೊದಲು ತಯಾರು ಮಾಡಿ ಕಳಿಸಿದ್ದ ಪಟ್ಟಿಯಲ್ಲಿ ಎಷ್ಟು ಜನರ ಹೆಸರುಗಳಿದ್ದವು? ಮತ್ತು ಅವುಗಲ್ಲಿ ಪತ್ರಕರ್ತರಲ್ಲದವರ ಹೆಸರುಗಳನ್ನು ಕೆಎಚ್‌ಬಿ ಅಂತಿಮಗೊಳಿಸಿ ಕಳಿಸಿದಾಗ ನೀವು ಯಾಕೆ ಕನಿಷ್ಟ ಒಂದು ಸುಳಿವನ್ನೂ ರಾಜ್ಯದ ಜನತೆಗೆ ಬಿಟ್ಟುಕೊಟ್ಟಿರಲಿಲ್ಲ? ನಂತರ ಅವುಗಳಲ್ಲಿ ಕೆಲವು ತಿರಸ್ಕಾರಗೊಂಡಿದ್ದು ಯಾಕೆ? ಈ ಎಲ್ಲಾ ಮಾಹಿತಿಗಳನ್ನೂ ಜನತೆಗೆ ಕೊಡಿ. ಪತ್ರಕರ್ತರ ಸಂಘದಿಂದ ಪರವಾಗಿ ನೂಡುವುದು ಉತ್ತಮ. ಅದಾಗದಿದ್ದರೆ ಹೀಗೇ ಅನಾಮಿಕವಾಗಿಯೇ ಕೊಡಿ. ಪರವಾಗಿಲ್ಲ. ಆಗ ನಿಮ್ಮ ಬಗ್ಗೆ ಇಲ್ಲಸಲ್ಲದ ಗುಲ್ಲುಗಳು ತಾನಾಗಿಯೇ ನಿಂತುಬಿಡುತ್ತಲ್ಲ?. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಜನತೆಗೆ ತಿಳಿದು ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ. ಈ ಹಿಂದೆ ಪಟ್ಟಿಯಲ್ಲಿ ಪತ್ರಕರ್ತರಲ್ಲದವರ ಹೆಸರುಗಳಿದ್ದಾಗ ಜವಾಬ್ದಾರಿಯ ಸ್ಥಾನದಲ್ಲಿದ್ದವರು ಯಾಕೆ ಮೌನ ವಹಿಸಿದ್ದಿರಿ? ಈಗ ಇರುವ ಪಟ್ಟಿಯಲ್ಲೂ ಎಲ್ಲರೂ ಪತ್ರಕರ್ತರಾ? ನಿಮ್ಮ ವರ್ತನೆ ನೋಡಿದಾಗ ನನಗೆ ಈ ಪ್ರಶ್ನೆಗಳು ಉದ್ಭವಿಸಿವೆ.
೪. ನೀವೇ ಹೇಳಿದ್ದೀರಿ ಇಷ್ಟಾಗಿಯೂ ಕೆಲವರು ಪ್ರಾಧಿಕಾರದಿಂದ ಎರಡೆರಡು ನಿವೇಶನ ಪಡೆದವರಿರಬಹುದು, ಅಂತಹ ವಿಷಯಗಳ ಬಗ್ಗೆ ತನಿಖೆ ನಡೆಯಲಿ, ಅವರಿಗೆ ನಿವೇಶನ ಕೊಡುವುದು ಬೇಡ ಎಂದು. ಈ ಕುರಿತು ನಿಮ್ಮಲ್ಲಿ ಸಂಪೂರ್ಣ ಮಾಹಿತಿ ಇದೆ ತಾನೆ? ಯಾರ‍್ಯಾರವೋ, ಎಂತೆಂತವೋ ಹಗರಣ ನಡೆದಾಗಲೆಲ್ಲಾ ಹೀಗೇ ತನಿಖೆಯಾಗಲಿ ಎಂದು ಕಾಯುತ್ತಾ ಕುಳಿತಿದ್ದಿರೋ ಅಥವಾ ನೀವೇ ಮುನ್ನುಗ್ಗಿ ತನಿಖೆ ನಡೆಸಿ ಅದನ್ನು ಬಯಲಿಗೆಳಿದಿದ್ದೀರೋ? ಹೇಳಿ. ಕನಿಷ್ಟ ಇದೇ ರೀತಿ ಅನಾಮಿಕನ ಹೆಸರಲ್ಲಿ ಇದೇ ‘ಸಂಪಾದಕೀಯದಲ್ಲೇ ಬಹಿರಂಗಪಡಿಸಬಹುದಲ್ಲಾ? ಗೆಳೆಯರೆ, ನಿಮಗೆ ಹೀಗೆ ಕಮೆಂಟು ಹಾಕುವಾಗ ನಿಮ್ಮ ಒಳಗಡೆ ಏನೂ ಕಾಡಿಲ್ಲವೇ? ಈಗಲೂ ಕಾಲ ಮಿಂಚಿಲ್ಲ ನೋಡಿ.
೫. ಈಗ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ದೊರೆತೊಡನೆ ಅವನ್ನು ಮಾರಿಕೊಳ್ಳಲು ತುದಿಗಾಲಲ್ಲಿ ನಿಂತು ಕೆಲವರು ಅಡ್ವಾನ್ಸನ್ನೂ ಪಡೆದಿರುವುದು ತನಿಖಾ ವರದಿಗಾರರಾದ ನಿಮಗೂ ತಿಳಿದಿರಬಹುದೇನೋ? ಅದೂ ಯಡಿಯೂರಪ್ಪನ ಕೃಪೆಯಿಂದ ಸೈಟುಗಳ ಬೆಲೆ ಯರ್ರಾಬಿರ್ರಿ ಏರಿರುವಾಗ ಇಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ನಡೆಯುವುದಿಲ್ಲ ಅಂತೀರಾ? ಅಂತಹ ದಂದೆಗೆ ಸುಮ್ಮನೇ ಪತ್ರಿಕೋದ್ಯಮವನ್ನು ಯಾಕೆ ಬಲಿ ಕೊಡ್ತೀರಾ?
ಗೆಳೆಯರೆ, ನನಗೆ ಜೀವನದಲ್ಲಿಯಾಗಲೀ, ಪತ್ರಿಕೋದ್ಯಮದಲ್ಲಿಯೇ ಆಗಲೀ ನಿಮ್ಮಷ್ಟು ಅನುಭವ ಇಲ್ಲ. ನೀವು ಬರೆಯುತ್ತಿದ್ದ ಅದ್ಭುತ ತನಿಖಾ ವರದಿಗಳನ್ನು ಕಣ್ಣರಳಿಸಿಕೊಂಡು ಓದಿ ಒಳಗೊಳಗೇ ಖುಷಿ ಪಡುತ್ತಾ ಬಂದವನು ನಾನು. ನನ್ನೊಂದಿಗರಿಗೂ ಜೋರಾಗಿ ಓದಿ ಹೇಳಿ ಚರ್ಚಿಸುತ್ತಿದ್ದವನು. ಹೀಗಾಗಿ ಎಲ್ಲೋ ಒಂದು ಮೂಲೆಯಲ್ಲಿ ನಿಮ್ಮ ಬಗ್ಗೆ ಆರಾಧನಾ ಮನೋಭಾವನೆಯೂ ಇತ್ತೆನ್ನಬಹುದು. ನಿಮ್ಮೆದುರು ಬಂದು ಕುಳಿತಾಗ ಸಣ್ಣ ದನಿಯಲ್ಲಿ ಹಾಗೆ ಸರ್, ಹೀಗೆ ಸರ್, ಹಾಂ ಸರ್, ಹೂಂ ಸರ್ ಎಂದು ಮಾತಾಡುತ್ತಿದ್ದವ. ಆ ನನ್ನ ಮುಖ ನಿಮಗೆ ಸೌಮ್ಯವಾಗಿಯೂ, ಸುಂದರವಾಗಿಯೂ ಕಂಡಿತ್ತು. ಆದರೆ ಈಗ ನನ್ನ ಒಳಮುಖ ನಿಮಗೆ ವಿಕಾರವಾಗಿ ಕಾಣುತ್ತಿದೆ ಅಲ್ಲವೇ? ಆ ನಿಮ್ಮ ಕಮೆಂಟು ನೋಡಿದಾಗ ನಿಜಕ್ಕೂ ತಪ್ಪು ನನ್ನದೇ ಇರಬೇಕು ಎಂದು ಕಳೆದ ನಾಲ್ಕೈದು ದಿನಗಳಿಂದ ಚಿಂತಾಕ್ರಾಂತನಾಗಿಬಿಟ್ಟಿದ್ದೇನೆ. ಆದರೆ ಇಲ್ಲಿ ಎಲ್ಲವೂ ಸರಿಯಿಲ್ಲ ಎಂದಷ್ಟೇ ಗಾಢವಾಗಿ ಅನ್ನಿಸುತ್ತಿದೆ. ಭ್ರಮೆಗಳು ಉದುರುದುರಿ ಕಳಚಿ ಬೀಳುತ್ತಿದೆ. ನೂರಾರು ದುಃಸ್ವಪ್ನಗಳನ್ನು ಒಂದೇ ಸಲಕ್ಕೆ ಕಂಡು ಕುಮುಟಿ ಬೀಳುತ್ತಿರುವಂತಾಗಿದೆ. ನನ್ನ ಸ್ಥಿತಿ ನನಗೆ ಒಮ್ಮೆ ನಗು ತರಿಸಿದರೆ ಇನ್ನೊಮ್ಮೆ ಅಳು, ಇನ್ನೊಮ್ಮೆ ಹತಾಷೆ, ಮತ್ತೊಮ್ಮೆ ಸಿಟ್ಟು. ಎಲ್ಲೋ ಮತ್ತೊಂದು ಮನಸ್ಸು ಇದೆಲ್ಲಾ ಬೇಕಿತ್ತಾ ಹರ್ಷಾ ನಿಂಗೆ? ಎಲ್ಲರ ತರ ನಿನ್ನನ್ನು ನೀನು ನೋಡಿಕೊಂಡು ಮುಚ್ಕೊಂಡು ಸುಮ್ನೆ ಕೂತಿದ್ರೆ ಆಗ್ತಿರಲಿಲ್ವಾ? ಅನ್ನುತ್ತೆ. ಪಕ್ಕನೆ ಚೆ-ಗುವಾರ ಎಚ್ಚರಿಸುತ್ತಾನೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯದ ವಿರುದ್ಧ ಸಿಡಿದು ನಿಂತರೆ ನೀನು ನನ್ನ ಸಂಗಾತಿ! ಕಳೆದ ಕೆಲವಾರು ವರ್ಷಗಳಲ್ಲಿ ನನಗಾಗಿರುವ ಭ್ರಮನಿರಸನಗಳ ಬಗ್ಗೆ ನಿಮಗೂ ತಿಳಿದೇ ಇದೆ. ಈಗ ಮತ್ತೆ ನಿಮ್ಮ ಬಗ್ಗೆಯೇ. ಬದುಕು ತುಂಬಾ ವಿಚಿತ್ರ ಸರ್!.
ಇಷ್ಟೆಲ್ಲಾ ಹೇಳಿದ ಮೇಲೂ ಮೇಲೂ ನನಗೆ ಶಿವಮೊಗ್ಗದ ಎಲ್ಲಾರನ್ನೂ ಒಂದೇ ರೀತಿಯಲ್ಲಿ ನೋಡಬೇಕೆನಿಸುತ್ತಿಲ್ಲ. ಕೆಲವರ ಬಗ್ಗೆ ಹೆಚ್ಚು, ಕೆಲವರ ಬಗ್ಗೆ ಕಡಿಮೆ. ಕೆಲವರ ಬಗ್ಗೆ ನನಗಿರುವ ಗೌರವಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈಗಲೂ ನನ್ನ ಉದ್ದೇಶಗಳನ್ನು ಸಂಶಯದಿಂದ ನೋಡಿ ಮತ್ತೊಮ್ಮೆ ದಾಳಿ ನಡೆಸುತ್ತೀರಾದರೆ ನಡೆಸಿ. ಅದೇ - ಮನಸ್ಸು ದೌಪ್ದಿಯಾಗಲು ಅಣಿಯಾಗುತ್ತಿದೆ. ಮುಗಿಸುವ ಮುನ್ನ ಒಂದೇ ಮಾತು. ಕಳೆದ ಹಲವಾರು ವರ್ಷಗಳಿಂದ ನನ್ನ ತಿಳಿವಳಿಕೆಯನ್ನು ಹಲವಾರು ರೀತಿಯಲ್ಲಿ ವಿಸ್ತರಿಸಲು ಸಹಕರಿಸಿರುವ ಹಾಗೂ ಈಗ ಮತ್ತೊಂದು ಬಗೆಯಲ್ಲಿ ಮತ್ತೂ ಸಹಕರಿಸಿರುವ ನಿಮಗೂ ನನ್ನ ಆಲೋಚನೆಗಳಿಗೆ ದನಿಯಾದ ಸಂಪಾದಕೀಯಕ್ಕೂ ಧನ್ಯವಾದಗಳು.
haraha nimma manadalada maatu nijakku sari anisutte,nanna aniske prakara yella patrakartaru brastralla,kelavaru irbahudu,patrakartara bagge anisike yannu chennagi nirupisiddira,samajadalli olle kelasa maadbayku andaga sumaru ade-thadegalu barutte,adannella yedurisi munnugodu nijavada baalu.nim kelasana neev maadidira aste.
ReplyDelete@ಸಂಪಾದಕೀಯ,
ReplyDeleteಸಂವೇದನಾಶೀಲ ವ್ಯಕ್ತಿತ್ವ ಹಾಗೂ ಸೂಕ್ಷ್ಮ ಪ್ರಜ್ಞೆಯ ಹರ್ಷಕುಮಾರ್ ಕುಗ್ವೆಯವರು ಪ್ರಸ್ತಾಪಿಸಿರುವ ವಿಚಾರಗಳಲ್ಲಿ ಆಕ್ಷೇಪಣಾರ್ಹವಾದುದು ಏನು ಇಲ್ಲವೆಂಬುದು ನನ್ನ ಭಾವನೆ. ಆದಾಗ್ಯೂ ಕುಗ್ವೆಯವರ "ಯಾವಾಗಲೂ ಸರ್ಕಾರದ, ಸರ್ಕಾರವನ್ನು ನಡೆಸುವವರ ಮೇಲೆ ವಿಚಕ್ಷಣೆ ನಡೆಸಬೇಕಾದ ಪತ್ರಕರ್ತರಿಗೆ ಸರ್ಕಾರ, ಅಥವಾ ಒಂದು ಸಂದರ್ಭದಲ್ಲಿ ಸರ್ಕಾರ ನಡೆಸುವವರು ಸೈಟನ್ನು ನೀಡುವುದಾದರೆ ಪತ್ರಿಕೋದ್ಯಮ ಸಮಾಜದ ನಾಲ್ಕನೇ ಆಸ್ತಿ ಆಗಿ ಉಳಿಯಲು ಸಾಧ್ಯವಾ? ಎಂಬ ಪ್ರಶ್ನೆಯನ್ನು ಸರಿಯಾಗಿ ಆರ್ಥೈಸಿಕೊಂಡರೆ ವಿನಾಕಾರಣ ಹಳಿಯುವ, ಒಣ ಚರ್ಚೆಯನ್ನು ಬೆಳೆಸುವ ಅಗತ್ಯವಿಲ್ಲ. ವಾಸ್ತವಕ್ಕೆ ಪತ್ರಕರ್ತರಾದವರು ತೆರೆದುಕೊಳ್ಳುವುದು ಒಳ್ಳೆಯದಲ್ಲವೇ?
ಭ್ರಷ್ಟ ಪತ್ರಕರ್ತರ ಅಸಲಿ ಮುಖವಾಡವನ್ನು ಬರೆದಿದ್ದೀರಾ... ಗುಡ್... ಸಾಚಾ ಪತ್ರಕರ್ತರ ಬಣ್ಣ ಬಯಲಾಗಿದೆ...
ReplyDeleteSHIMOGA ಪತ್ರಕರ್ತರ KHB ನಿವೇಶನ ಹಗರಣದ ಒಂದೊಂದೇ ಮಜಲುಗಳು ಬೆಳಕಿಗೆ ಬರುತ್ತಿವೆ. ಹರ್ಷಕುಮಾರ್ ಕುಗ್ವೆ ಅವರೇ ನೀವು ಬರೆದಿರುವುದು ಸರಿಯಿದೆ. ನೀವು ಅಂದುಕೊಂಡಂತೆ ಶಿವಮೊಗ್ಗದ ಕೆಲ ಪತ್ರಕರ್ತರು ಪ್ರಾಮಾಣಿಕರಲ್ಲ. ಭ್ರಷ್ಟ ಕೂಪಗಳು. ನಿಮ್ಮ ಬರವಣಿಗೆಗೆ ಬೆಂಬಲವಾಗಿ, ಶಿವಮೊಗ್ಗದಲ್ಲಿ ಅತ್ಯಧಿಕ ಪ್ರಸಾರ ಹೊಂದಿರುವ ಹೆಲೋ ಶಿವಮೊಗ್ಗ ಪತ್ರಿಕೆಯಲ್ಲಿ KHB ನಿವೇಶನ ಹಗರಣವನ್ನು ಬರೆದಿದ್ದಾರೆ. ಮಹಿಳಾ ಪೊಲೀಸ್ ಪೇದೆಗೂ ಪತ್ರಕತರ ಕೋಟಾದಲ್ಲಿ ನಿವೇಶನವನ್ನು ನೀಡಲಾಗಿದೆ. ಶಬ್ಬಾಶ್... ಇದು ನಿಜವಾದ ಪತ್ರಿಕೋದ್ಯಮ... ಅಲ್ಲಲ್ಲಾ... ರಿಯಲ್ ಎಸ್ಟೇಟ್ ಉದ್ಯಮ. ಇಷ್ಟರಲ್ಲಿಯೇ ಈ ಭ್ರಷ್ಟ ಪತ್ರಕರ್ತರು ಜೈಲು ಪಾಲಾಗುವುದು ನಿಶ್ಚಿತವಾಗಿದೆ. ಸಂಪಾದಕೀಯ ಬಳಗದವರೇ, ನಿಜಕ್ಕೂ ಒಳ್ಳೆಯ ಹಗರಣವನ್ನು ಬೆಳಕಿಗೆ ತಂದಿದ್ದೀರಿ. ಶಿವಮೊಗ್ಗದ ಕೆಲ ಪತ್ರಕರ್ತರ ಅಸಲಿ ಮುಖವಾಡವನ್ನು ಪರಿಚಯ ಮಾಡಿಕೊಟ್ಟಿದ್ದೀರಿ.
ReplyDeleteಹರ್ಷಕುಮಾರ್ ಕುಗ್ವೆ ಅವರೇ, SHIMOGA ಪತ್ರಕರ್ತರ KHB ನಿವೇಶನ ಹಗರಣವನ್ನು ಬಯಲಿಗೆಳೆಯಿರಿ. ಯಾವುದೇ ಗೊಡ್ಡು ಬೆದರಿಕೆ ಹೆದರಬೇಡಿ. ನಿಮ್ಮೊಂದಿಗೆ ನಾವೀದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಪತ್ರಿಕ್ಯೋದಮದ ಲೋಕಾಯುಕ್ತ ಎಂದೇ ಖ್ಯಾತವಾಗಿರುವ ಸಂಪಾದಕೀಯ ಟೀಮ್ ಬೆಂಬಲವಿದೆ.
ಶಿವಮೊಗ್ಗ ಕೆಹೆಚ್ ಬಿ ನಿವೇಶನ ಹಂಚಿಕೆಯಲ್ಲಿ ಮಹಿಳಾ ಪೊಲೀಸ್ ಪೇದೆಗೂ ಪತ್ರಕರ್ತರ ಕೋಟಾದಡಿ ನಿವೇಶನ ನೀಡಲಾಗಿದೆ!!!!!!!!! ಎಲ್ಲಿಯ ಪೊಲೀಸ್... ಎಲ್ಲಿಯ ಪತ್ರಕರ್ತ... ಇದಕ್ಕೆ ಇರಬೇಕು ಭ್ರಷ್ಟಾಚಾರ ಎಲ್ಲ ರಂಗಗಳಲ್ಲಿಯೂ ತುಂಬಿ ತುಳುಕುತ್ತಿದೆ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದು...
ReplyDeleteBanglore journlists in BDA Syte scam... Shimoga journalist in KHB Syte scam... Bellary journalist in Mining Scam...(Few Journlists) Great... Good journalism...
ReplyDeleteಜನಪರ ಪತ್ರಿಕೋದ್ಯಮದ ಪರಂಪರೆಯನ್ನು ಹೊಂದಿರುವ ಶಿವಮೊಗ್ಗದ ಪತ್ರಕರ್ತರ ಬಗ್ಗೆ.. ಎಂದು ಬಹಳ ಗೌರವವನ್ನು ಸಂಪಾದಕರು ನೀಡಿದ್ದಾರೆ. ಆದರೆ ಮಹಿಳಾ ಪೊಲೀಸ್ ಪೇದೆಗೆ ಪತ್ರಕರ್ತರ ಕೋಟಾದಲ್ಲಿ ಸೈಟ್ ನೀಡೋದು ಯಾವಾ ಜನಪರ ಪತ್ರಿಕೋದ್ಯಮ ಸಂಪಾದಕರೇ....
ReplyDeleteDo u Know SHIMOGA Jouranlists KHB Site Scam Detail Please Visit www.helloshivamogakannadadaily.wordpress.com Please See 13-9-2011 And 14-9-2011 Issues.
ReplyDeleteane heelodu, ella adralle ediyalla
ReplyDeleteಸಂಪಾದಕರೇ, ಶಿವಮೊಗ್ಗ ಪತ್ರಕತರ ಕೆಹೆಚ್ ಬಿ ಸೈಟ್ ಹಗರಣದ ಬಗ್ಗೆ ಸಮಗ್ರ ಮಾಹಿತಿಗಾಗಿ ಈ ವೆಬ್ ಸೈಟ್ ವೀಕ್ಷಿಸಿ. ನಾನು ವೀಕ್ಷಿಸಿದ್ದೇನೆ. www.helloshivamogakannadadaily.wordpress.com
ReplyDeleteಪ್ರಿಯ ಹರ್ಷ ,
ReplyDeleteಕಳೆದ ಒಂದು ತಿಂಗಳಾಚೆಯಿಂದಲೂ ದೇಶವ್ಯಾಪಿ ಭಾರೀ ಸಂಚಲನೆಯುಂಟು ಮಾಡಿದ್ದ (ಈಗಲೂ ಮಾಡುತ್ತಿರುವ) ಅಣ್ಣಾ ಹೋರಾಟದ ಸಾಗರೋಪಾದಿ ಬೆಂಬಲಿಗರ ನಡುವೆ ಗಂಟಲು ಹರಿಯುವಂತೆ ಬೊಬ್ಬಿರಿಯುತ್ತಿದ್ದವರಲ್ಲಿ ನೀವು ಉಲ್ಲೇಖಿಸಿದಂತ ಅದೆಷ್ಟೋ ಮಂದಿ ನುಸುಳಿಕೊಂಡಿದ್ದುದರಿಂದಲೇ, ಹಲವರ ದೃಷ್ಟಿಯಲ್ಲಿನ್ನೂ ಆ ಚಳವಳಿಗೆ ನಿರೀಕ್ಷಿತ ಮಟ್ಟದ "ಪರಿಪೂರ್ಣತೆಯ" ಸರ್ಟಿಫಿಕೇಟ್ ಸಿಗದಿರುವುದು. ಆದರ್ಶ-ತತ್ವಗಳೆಲ್ಲ ಊರ ಮಂದಿಗೆ ಸೇರಿದ್ದು- ಹಾದಿಬೀದಿಯ ಹೋರಾಟಗಳಲ್ಲಿ ವಸ್ತುವಾಗಿ ಬಳಸಲ್ಪಡುವಂಥದ್ದು- ನಮ್ಮ ಸ್ವಂತ ಪಾಲನೆಗಿರುವುದಲ್ಲ ಎಂದು ಭಾವಿಸಿದವರದ್ದೇ ಇಲ್ಲಿ ದೊಡ್ಡ ಪಾಲು. ಈ ದೇಶದಲ್ಲಿ ಬೆರಳೆಣಿಕೆಯ ಉದಾಹರಣೆ ಬಿಟ್ಟು ಮಿಕ್ಕಂತೆ ನಿಜವಾದ ಸದಾಚಾರಿಗಳ ಧ್ವನಿ ಕ್ಷೀಣ! ನಿಮಗೆ ಬಿದ್ದ ಹೊಡೆತ ನನಗೂ ಅಂತ ಭಾವಿಸಿದ್ದೇನೆ. ನೈತಿಕವಾಗಿ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ.
ಹರ್ಷ ಅವರೇ ಶಿವಮೊಗ್ಗ ಪತ್ರಕತರ ಕೆಹೆಚ್ ಬಿ ಸೈಟ್ ಹಗರಣದ ವಿರುದ್ದ ನಿಮ್ಮ ಪ್ರಾಮಾಣಿಕ ಲೇಖನ ಮುಂದುವರಿಸಿ... ದಿನೇಶ್ ಕುಕ್ಕುಜಡ್ಕ್ ಅವರು ಹೇಳಿದಂತೆ, ನೈತಿಕವಾಗಿ ನಿಮ್ಮನ್ನು ಬಿಟ್ಟು ನಾವೂ ಕೂಡ ಬಿಟ್ಟು ಕೊಡುವುದಿಲ್ಲ.
ReplyDeleteಇಂತಹ ಸೋಗಲಾಡಿ ಅನಾಮಿಕ ಟೀಕೆ ಮತ್ತು ಬೆದರಿಕೆಗಳಿಗೆ ಪ್ರಾಮಾಣಿಕ ಬರಹಗಾರ ನೊಂದುಕೊಳ್ಳಬೇಕಿಲ್ಲ...ಮುಂದುವರೆಸಿ ಸತ್ಯ ನಿಷ್ಠ ಪ್ರಾಮಾಣಿಕ ಬರಹಗಳನ್ನ
ReplyDeleteWow this is a big and cool news keep putting like this i had read the newspaper.
ReplyDeleteThe Owner and publisher is Nagaraja D G
Thanks Sir i am so glad to you give news like this always keep it up HELLO SHIVAMOGA
If All want To read Visit Hello Saivamoga
http://helloshivamogakannadadaily.wordpress.com/
For Sampadakiya of Hello Shivamoga http://helloshivamogakannadadaily.wordpress.com/sampadakia-hello-shivamoga/
i Had red if you also want read
ಪ್ರೀತಿಯ ಮಿತ್ರ ಹರ್ಷ ,
ReplyDeleteನಿನಗೆ ಅಭಿನಂದನೆಗಳು. ಇಡಿ ಸಮಾಜವನ್ನು ಸದಾ ಟೀಕಿಸುತ್ತ , ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ಮಾಧ್ಯಮ ಮಿತ್ರರೇ ಹೀಗೆ ಭ್ರಷ್ಟಾಚಾರಕ್ಕೆ ಈ ರೀತಿ ಅನಿಯಾಗಿಬಿಟ್ಟರೆ ಹೇಗೆ ?? ನಿನ್ನ ಬರಹ ಮತ್ತು ಭಾಷೆ ಎರಡು ಇಷ್ಟ ಆಯ್ತು . Truth will always reveal in future .. so don't be distracted by the critics , opinions and attacks through their pen... keep up the same interest and impulsion throughout your career ..... I know you from ur college days in shimoga and how your mind thinks ... anyway thanks for the bravery shown to unfold the truth hidden in media and journalists ... untill these issues are fact i dont think they need particular name and person's details involved in it ....
ಪ್ರಿಯ ಹರ್ಷ,
ReplyDeleteಮೌನವಾಗಿ ಎಲ್ಲವನ್ನೂ ಗಮನಿಸುತ್ತಿರುವ ನನಗೆ, ಈ ಸಂದರ್ಭದಲ್ಲಿ ನಿಮ್ಮ ನಿಲುವುಗಳನ್ನು ಬೆಂಬಲಿಸಬೇಕು ಎಂದು ಬಲವಾಗಿ ಅನಿಸಿದ್ದರಿಂದ ಈ ಪ್ರತಿಕ್ರಿಯೆ ಬರೆಯುತ್ತಿರುವೆ. ಮೊದಲು ಇದನ್ನು ವೈಯಕ್ತಿಕವಾಗಿ ಮೇಲ್ ಮಾಡೋಣ ಅನಿಸಿದರೂ, ಚರ್ಚೆ ಸಾರ್ವತ್ರಿಕವಾಗಿ ನಡೆಯುತ್ತಿರುವುದರಿಂದ, ಇಲ್ಲಿಯೇ ಇದನ್ನು ದಾಖಲಿಸೋಣ ಎಂದು ಭಾವಿಸಿದೆ.
ನಿಮ್ಮ ಬಹುತೇಕ ಅನುಭವಗಳು, ನಿಲುವುಗಳು ನನ್ನವೂ ಆಗಿವೆ. ನನ್ನ ಈ ನಿಲುವಿನಿಂದಾಗಿ ಒಂದೇ ಸಂಸ್ಥೆಯಲ್ಲಿ ತುಂಬ ದಿನ ಕೆಲಸ ಮಾಡದ ಪರಿಸ್ಥಿತಿಯನ್ನೂ ತಂದುಕೊಂಡಿದ್ದೇನೆ. ಸದ್ಯ, ಟಿವಿ-೯ ಸಂಸ್ಥೆಯಲ್ಲಿದ್ದರೂ, ಕೆಲ ದಿನಗಳಲ್ಲಿ ಅಲ್ಲಿಂದಲೂ ಎದ್ದು ಹೋಗುತ್ತಿದ್ದೇನೆ. ಎಲ್ಲಿ ಹೋಗುತ್ತೇನೋ ಗೊತ್ತಿಲ್ಲ. ಆದರೆ, ಅಲ್ಲಿರಲಾರೆ ಎಂದು ಮಾತ್ರ ಹೇಳಬಲ್ಲೆ.
ಏಕೆ ಹೀಗಾಗುತ್ತದೆ ಎಂದರೆ, ನಾವು ಒಪ್ಪಿಕೊಂಡ, ಆಚರಿಸುತ್ತಿರುವ ನಂಬಿಕೆಗಳಿಗೂ ಮತ್ತು ವಾಸ್ತವಕ್ಕೂ ತುಂಬ ತುಂಬ ವ್ಯತ್ಯಾಸವಿರುವುದರಿಂದ. ಪತ್ರಿಕೋದ್ಯಮ ಎಂಬುದು ಕೇವಲ ಬರೆಯುವವರ ಸ್ವತ್ತಾಗಿ ಉಳಿದಿಲ್ಲ. ಬಹುಶಃ ಬದಲಾದ ತಂತ್ರಜ್ಞಾನದಲ್ಲಿ ಅದು ಸೂಕ್ತವೂ ಅಲ್ಲ. ಆದರೆ, ಬರಹದಿಂದಲೇ ಬದುಕು ಕಟ್ಟಿಕೊಳ್ಳಲು ತೀರಾ ಇಷ್ಟೊಂದು ಕಷ್ಟಪಡಬೇಕಾಗುತ್ತದೆ ಎಂಬುದನ್ನು ನಾನು ಊಹಿಸಿದ್ದಿಲ್ಲ. ಇವತ್ತಿನ ನಮ್ಮ ಗೊಂದಲಗಳಿಗೆ, ಸಮಸ್ಯೆಗಳಿಗೆ ಇದೇ ಕಾರಣ ಎನಿಸುತ್ತದೆ.
ನನಗೆ ಗೊತ್ತಿರುವ, ಇಲ್ಲಿ ಸದ್ಯಕ್ಕೆ ಹೆಸರಲಿಸಲಾಗದ ತುಂಬ ಜನ ಈ ರೀತಿ ಫಲಾನುಭವಿಗಳಾಗಿರುವವರೇ. ಹೆಸರೇ ಗೊತ್ತಿರದ ಪತ್ರಿಕೆಗಳನ್ನು ನಡೆಸುತ್ತಿರುವವರೂ ಚೆನ್ನಾಗಿ ಆಸ್ತಿಪಾಸ್ತಿ ಮಾಡಿಕೊಂಡಿದ್ದಾರೆ. ಅವರ ಸಮೃದ್ಧಿಗೆ ಕಾರಣ ಪತ್ರಕರ್ತರೆಂಬ ಪಟ್ಟ. ಅಂಥವರು ನನ್ನಂಥವರನ್ನು ಗೇಲಿ ಮಾಡಿಕೊಂಡು ನಕ್ಕಿದ್ದೂ ಆಗಿದೆ. ಇಷ್ಟೆಲ್ಲ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ನೀನು, ಅದ್ಹೇಗೆ ಒಂದೇ ಒಂದು ಸೈಟೂ ಅಥವಾ ಇತರ ಬೆನಿಫಿಟ್ಟೂ ಮಾಡಿಕೊಳ್ಳದೇ ಪತ್ರಿಕೋದ್ಯಮ ಮಾಡಿದೆ ಎಂಬುದು ಅವರ ಲೇವಡಿಯ ಸಾರಾಂಶ. ಅದರ ಬಗ್ಗೆ ನನಗೆ ಬೇಸರವಿಲ್ಲ. ಏಕೆಂದರೆ, ಅದು ನಾನು ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡ ಹಾದಿ.
ಶಿವಮೊಗ್ಗ ಒಂದೇ ಏಕೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಫಲಾನುಭವಿ ಪತ್ರಕರ್ತರಿದ್ದಾರೆ. ತಮ್ಮ ನಂಟುಗಳನ್ನು ವ್ಯಾಪಾರಕ್ಕೆ ಬಳಸಿದವರಿದ್ದಾರೆ. ಕೆಲವರು ಯಾವ ರಗಳೆಗೂ ಹೋಗದೇ ತಮ್ಮ ಕೆಲಸಗಳನ್ನು ಮಾಡಿಕೊಂಡು ಆರಾಮವಾಗಿದ್ದಾರೆ. ಎಲ್ಲೋ ಕೆಲವರ ಹೆಸರುಗಳು ಮಾತ್ರ ಹೊರಗೆ ಬರುತ್ತವೆ. ಚರ್ಚೆ ಅವರ ಸುತ್ತಲೇ ಸುತ್ತುತ್ತದೆ. ಹೇಗೆ ಲೋಕಾಯುಕ್ತರು ದಾಳಿ ನಡೆಸಿದ ಅಧಿಕಾರಿಗಳಷ್ಟೇ ಭ್ರಷ್ಟರಾಗಿರುವುದಿಲ್ಲವೋ, ಹಾಗೆ ಚರ್ಚೆ ನಡೆಯುತ್ತಿರುವ ವ್ಯಕ್ತಿಗಳಷ್ಟೇ ಕಳಂಕಿತರಲ್ಲ. ಹಾಗೆ ನೋಡಿದರೆ, ಕಳಂಕಿತರಲ್ಲದವರ ಸಂಖ್ಯೆಯೇ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ, ನೀವು ಮಾಡಿರುವ ಆರೋಪಗಳಿಗೆ, ಎತ್ತಿದ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ನನ್ನ ಸಮರ್ಥನೆ ಇದೆ.
ನೀವು ಯಾರನ್ನೂ ಮೆಚ್ಚಿಸಬೇಕಿಲ್ಲ. ನಿಮ್ಮ ಅನಿಸಿಕೆ ಹೇಳಿದ್ದೀರಿ. ವಿರೋಧಿಸುವವರು, ಕುತ್ಸಿಕ ಕಾಮೆಂಟ್ ಹಾಕುವವರು ಹಾಕುತ್ತ ಹೋಗಲಿ. ಅದು ಅನಿರೀಕ್ಷಿತವೇನಲ್ಲ. ಬರೆದಿದ್ದನ್ನು ಎಲ್ಲರೂ ಮೆಚ್ಚಬೇಕೆಂದೇನೂ ಇಲ್ಲವಲ್ಲ? ವಿಷಯ ಏನೆಂಬುದನ್ನು ಹೊರತರಬೇಕಿತ್ತು. ಆ ಕೆಲಸವನ್ನು ಸಂಪಾದಕೀಯ ಮಾಡಿದೆ. ನೀವು ಅದನ್ನು ಬೆಂಬಲಿಸಿದ್ದೀರಿ. ಅಷ್ಟೇ. ಪ್ರತಿಕ್ರಿಯೆಗಳನ್ನು ಊಹಿಸಿಕೊಂಡು ಬರೆಯಲು ಕುರಿತರೆ, ಬಹುಶಃ ಹೊಗಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲಾಗದು.
ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಇಂಥ ಪತ್ರಕರ್ತರು ಇದ್ದಾರೆ ಎಂದೆ ಅಲ್ಲವೆ? ಎಷ್ಟೋ ಜನ ನನಗೆ ವೈಯಕ್ತಿಕವಾಗಿ ಗೊತ್ತಿರುವವರೇ. ತಮ್ಮ ಮಿತಿಯಲ್ಲಿ ನನಗೊಂದು ಸೈಟನ್ನು ಕೊಡಿಸಲು ಯತ್ನಿಸಿದವರೇ. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಬರೆಯುವ ವಿದ್ಯೆ ಗೊತ್ತಿದೆ. ಮುಂದೆ ಎಂದಾದರೂ ಅದು ಅನ್ನ ಹಾಕೀತು ಎಂಬ ನಂಬಿಕೆ ಈಗಲೂ ಜೀವಂತವಾಗಿದೆ. ಇತ್ತೀಚಿನ ವರ್ಷಗಳ ಬೆಳವಣಿಗೆ ನೋಡುತ್ತಿದ್ದರೆ, ಈ ವೃತ್ತಿಯನ್ನು ಬಿಟ್ಟು, ಹೊಟ್ಟೆಪಾಡಿಗೆ ಬೇರೆ ಯಾವುದಾದರೂ ವೃತ್ತಿಯನ್ನು ಮಾಡೋಣ ಎಂದು ಗಂಭೀರವಾಗಿ ಯೋಚಿಸುತ್ತಿರುವ ಹಂತದಲ್ಲಿ ನಾನಿದ್ದೇನೆ. ಅಲ್ಲಿಯವರೆಗೆ, ನನಗೆ ಗೊತ್ತಿರುವ ಕೆಲವು ಸತ್ಯಗಳನ್ನು ಹೊರಗೆಡವಲಾರೆ. ಮುಂದೆ ಇದ್ದೇ ಇದೆ ಹೂರಣ ಹೊರಗೆಳೆಯುವ ಕೆಲಸ. ಒಂದು ಸಂಸ್ಥೆಯಲ್ಲಿ ಇದ್ದುಕೊಂಡು ಆ ಬಗ್ಗೆ, ಅಥವಾ ಹಿಂದೆ ಕೆಲಸ ಮಾಡಿದ ಸಂಸ್ಥೆಗಳ ಹುಳುಕು ಹೊರಗೆಡವಬಾರದು ಎಂಬ ನಿಲುವಿನಿಂದ ಸುಮ್ಮನಿದ್ದೇನೆ. ನಿಮ್ಮ ಮೇಲೆ ನಡೆದಿರುವ ಪ್ರತಿಕ್ರಿಯಾ ದಾಳಿ ಸಹಿಸದೇ ಈ ಪ್ರತಿಕ್ರಿಯೆ ನೀಡಿದ್ದೇನೆ.
ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ಸಂಖ್ಯೆ ಸಣ್ಣದಿರಬಹುದು, ಆದರೆ ಸತ್ವಭರಿತವಾಗಿದೆ ಎಂದಷ್ಟೇ ಹೇಳಬಲ್ಲೆ. ಹೀಗೇ ಬರೆಯುತ್ತಿರಿ. ಅಂಜದೆ. ಅಳುಕದೇ. ಯಾವ ಕಾರಣಕ್ಕೂ ಪಶ್ಚಾತ್ತಾಪ ಪಡದೇ. ಇದುವರೆಗೆ ನಮ್ಮನ್ನು ರೂಪಿಸಿದ್ದೇ ಅದು. ಮುಂದೆಯೂ ಅದೇ ನಮ್ಮನ್ನು ರೂಪಿಸಲಿ.
ಅಂಥದೊಂದು ಗಟ್ಟಿತನವನ್ನು ನೀವು ಮತ್ತೆ ಮತ್ತೆ ತೋರಬೇಕೆಂಬುದೇ ನನ್ನಾಸೆ.
- ಚಾಮರಾಜ ಸವಡಿ http://chamarajsavadi.blogspot.com
ಪ್ರೀತಿಯ ಮಿತ್ರ ಹರ್ಷ ಹಾಗೂ ಚಾಮರಾಜ ಸವಡಿಯವರೇ ಎದೆಗುಂದ ಬೇಡಿ. ನಿಮ್ಮ ಪ್ರಾಮಾಣಿಕತಯೇ ನಿಮಗೆ ಶ್ರೀ ರಕ್ಷೆ ಎಂಬುವುದನ್ನು ಮರೆಯಬೇಡಿ. ಇಂದಲ್ಲ, ನಾಳೆ ನಿಮ್ಮ ನಿಯತ್ತು ನಿಮ್ಮನ್ನು ಮಾತ್ರವಲ್ಲ ನಿಮ್ಮ ಇಡೀ ಕುಟುಂಬವನ್ನು ಸಲಹುತ್ತದೆ.
ReplyDeleteನೀವಿಬ್ಬರೂ ಪ್ರಾಮಾಣಿಕ ಪತ್ರಿಕೋದ್ಯಮದ ಸಂಕೇತದಂತೆ ಎಂದರೇ ತಪ್ಪಾಗಲಾರದು. ಪ್ರಸ್ತುತ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಎಷ್ಟೋ ಯುವ ವರದಿಗಾರರು, ಆಮಿಷಕ್ಕೆ ಬಲಿಯಾಗುತ್ತಿರುವುದನ್ನು ನೋಡಿದ್ದೇನೆ. ಇಂತಹ ಸನ್ನಿವೇಶದಲ್ಲಿ ಹರ್ಷ ಹಾಗೂ ಚಾಮರಾಜ ಸವಡಿ ಮರುಭೂಮಿಯಲ್ಲಿ ಓಯಸಿಸ್ ರೀತಿ ಗೋಚರಿಸುತ್ತಾರೆ. ಶಿವಮೊಗ್ಗ ಪತ್ರಕತರ ಕೆಹೆಚ್ ಬಿ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಹರ್ಷ ಲೇಖನ ಪ್ರಭಾವಿಯುತವಾಗಿದೆ. ಈ ಹಗರಣದ ಬಗ್ಗೆ ಮತ್ತಷ್ಟು ವಿಸ್ತೃತ ಚಚೆಯಾಗಲಿ. ಹೆಗ್ಗಣಗಳು ಬೆಳಕಿಗೆ ಬರಲಿ.
a good article. morally we support you
ReplyDelete