Tuesday, September 13, 2011

ಸದಾನಂದ ಗೌಡರ ನಗೆ-ನಡೆ ಹೀಗಿದ್ದರೆ ಹೇಗೆ?


ಚಿದಂಬರ ಬೈಕಂಪಾಡಿ ನಿಮಗೆ ಗೊತ್ತಿರಬಹುದು. ವಡ್ದರ್ಸೆ ರಘುರಾಮಶೆಟ್ಟರ ಗರಡಿಯಲ್ಲಿ ಬೆಳೆದವರು. ಇತ್ತೀಚಿಗೆ ತಾನೇ ಅವರು ವಡ್ಡರ್ಸೆ ಕುರಿತಾದ ಪುಸ್ತಕವೊಂದನ್ನು ಹೊರತಂದಿದ್ದಾರೆ. ಮೂಲತಃ ಕವಿಯಾದ  ಚಿದಂಬರ ಅವರು ಹಲವು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮುಂಗಾರು ಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿ ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳು, ಚಾನಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಸಂಪಾದಕೀಯಕ್ಕಾಗಿ ಬರೆದಿರುವ ಈ ಲೇಖನ ನಿಮಗಿಷ್ಟವಾಗಬಹುದು.


-ಸಂಪಾದಕೀಯ


ಕರ್ನಾಟಕದ ಮುಖ್ಯಮಂತ್ರಿಯಾಗಿ ಕರಾವಳಿ ಮೂಲದ ಡಿ.ವಿ.ಸದಾನಂದ ಗೌಡ ಅವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಒಂದು ಹಂತದ ಬಿಜೆಪಿಯ ರಾಜಕೀಯ ತುಮುಲಕ್ಕೆ ತೆರೆ ಬಿದ್ದಿದೆ ಅಂದುಕೊಂಡರೂ ಎಲ್ಲವೂ ಸರಿಯಾಗಿಲ್ಲ. ಆ ಪಕ್ಷದೊಳಗಿನ ಆಂತರಿಕ ತಳಮಳ ಮಾತ್ರ ಮುಂದುವರಿದಿದೆ. ಆ ಪಕ್ಷದವರೇ ಹೇಳಿಕೊಂಡಿರುವಂತೆ ಅವರೇ ಹುಟ್ಟುಹಾಕಿದ ಸಮಸ್ಯೆಯನ್ನು ಅವರೇ ನಿಭಾಯಿಸಿಕೊಳ್ಳುತ್ತಾರೆ ಅಂದುಕೊಳ್ಳಬಹುದು.

ಕರ್ನಾಟಕದ ೨೬ ನೆಯ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿ.ವಿ.ಸದಾನಂದ ಗೌಡರು ಅಖಂಡ ಕರ್ನಾಟಕವನ್ನು ಕಣ್ತುಂಬಿಕೊಂಡು ಕೆಲಸ ಮಾಡಬೇಕಾಗಿದೆ. ಇಪ್ಪತೈದು ಮಂದಿ ಮುಖ್ಯಮಂತ್ರಿಗಳು ಈ ನಾಡನ್ನು ಮುನ್ನಡೆಸಲು, ನಾಡಿನ ಜನರ ಬದುಕನ್ನು ಹಸನುಗೊಳಿಸಲು ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮಾಡದೇ ಉಳಿದಿರುವ ಮತ್ತು ಮಾಡಲೇಬೇಕಾದ ಈಗಿನ ಅವಶ್ಯಕತೆಯನ್ನು ಮನನ ಮಾಡಿ ಮುನ್ನಡಿಯಿಡಬೇಕಾಗಿದೆ.

ಕೆಂಗಲ್ ಹನುಮಂತಯ್ಯ ವಿಧಾನ ಸೌಧ ಕಟ್ಟಿಸಿದ ಕತೆಯಿಂದ ನಿರ್ಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮೀಣ ಬಡ ಮಕ್ಕಳಿಗೆ ಸೈಕಲ್ ವಿತರಿಸಿದ ತನಕದ ಕಥಾನಕಗಳ ಇತಿಹಾಸವಿದೆ. ಅಧಿಕಾರ ಸುಖಭೋಗ ಅನುಭವಿಸಿ, ಸಂಪತ್ತುಕೊಳ್ಳೆಹೊಡೆದು ಕುಳಿತು ತಿನ್ನುತ್ತಿರುವವರೂ ಕಣ್ಣಮುಂದಿದ್ದಾರೆ. ಹಗರಣಗಳನ್ನು ಮೈಕೈಗೆ ಮೆತ್ತಿಸಿಕೊಂಡು ಮಾನಗೆಟ್ಟವರೂ ನಮ್ಮ ಮಧ್ಯೆಯೇ ಇದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಡಿ.ವಿ.ಸದಾನಂದ ಗೌಡರು ಸದಾ ಆನಂದದ ನಗೆ ಚೆಲ್ಲಿದರೆ ಅದಷ್ಟೇ ಸಾಧನೆಯಾಗುವುದಿಲ್ಲ, ಇತಿಹಾಸದ ಪುಟಗಳಲ್ಲಿ ಉಳಿದದ್ದು ಕೇವಲ ನಗೆಯಾಗಬಾರದು.

ಕರ್ನಾಟವನ್ನು ಮುನ್ನಡೆಸಿದ ಮುಖ್ಯಮಂತ್ರಿಗಳ ಸಾಧನೆಯ ಪುಟಗಳನ್ನು ತಿರುಗಿಸುತ್ತಾ ಹೋದಾಗ ನಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವಂತಿಲ್ಲ. ಎರಡು ಕೋಟಿಯಿದ್ದ ಜನಸಂಖ್ಯೆ ಆರು ಕೋಟಿಗೇರಿದೆ. ದುಡಿವ ಕೈಗಳಿಗೆ ಉದ್ಯೋಗ ಪೂರ್ಣಪ್ರಮಾಣದಲ್ಲಿ ಸಿಕ್ಕಿಲ್ಲ. ನೆಲಜಲ ಸಂರಕ್ಷಣೆಯಲ್ಲಿ ಉದಾಸೀನ ತೋರಿಸಲಾಗಿದೆ. ಹೇರಳವಾದ ಖನಿಜ ಸಂಪತ್ತು ಲೂಟಿಯಾಗಿದೆ. ಫಲವತಾದ ಕೃಷಿ ಭೂಮಿ ಅಭಿವೃದ್ದಿ, ಕೈಗಾರಿಕೆಗಳ ಹೆಸರಲ್ಲಿ ಬಂಡವಾಳಶಾಹಿಗಳ ವಶವಾಗಿದೆ.

ಶಿಕ್ಷಣ ವ್ಯಾಪಾರೀಕರಣವಾಗಿದೆ. ಹಳ್ಳಿಗಳು ಆಧುನಿಕತೆಯ ಲೇಪಹಚ್ಚಿಕೊಂಡು ತಮಗರಿವಿಲ್ಲದಂತೆಯೇ ಪಟ್ಟಣಗಳ ಸ್ವರೂಪಪಡೆಯುತ್ತಿವೆ. ಗ್ರಾಮೀಣ ಪ್ರದೇಶಗಳ ಯುವಮನಸ್ಸುಗಳು ಪೇಟೆಯ ಬೆಡಗಿಗೆ ಆಕರ್ಷಿತವಾಗಿ ಗುಳೇಹೋಗುತ್ತಿವೆ. ಐಟಿ-ಬಿಟಿಯೇ ಪರಮ ಸತ್ಯ, ಅದೇ ಸ್ವರ್ಗಕ್ಕೆ ರಹದಾರಿ ಎನ್ನುವ ಗುಂಗಿನಲ್ಲಿ ಹೊಸಪೀಳಿಗೆ ಸಾಮಾನ್ಯ ಶಿಕ್ಷಣದಿಂದ ದೂರ ಸರಿಯುತ್ತಿದೆ.

ನದಿಗಳು ಬತ್ತಿ ಹೋಗುತ್ತಿವೆ, ಕಾಡುಗಳು ಬೋಳಾಗುತ್ತಿವೆ, ಬೆಟ್ಟಗಳು ಕರಗುತ್ತಿವೆ. ಮರ, ಮಣ್ಣು, ನೀರು ಮಾರಾಟದ ಸರಕಾಗಿವೆ. ಎಲ್ಲವನ್ನೂ ಕೆಡವಲು ಮನಸ್ಸುಗಳು ತುಡಿಯುತ್ತಿವೆಯೇ ಹೊರತು ಕಟ್ಟುವ ಅಗತ್ಯವನ್ನು ಮರೆತುಬಿಟ್ಟಿವೆ. ಮನುಷ್ಯ-ಮನುಷ್ಯರ ನಡುವೆ ಅಪನಂಬಿಕೆಯ ಕಂದರ ಹೆಚ್ಚಾಗುತ್ತಿದೆ. ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು ಕಣ್ಣಮುಂದಿರುವ ಸವಾಲುಗಳನ್ನು, ಸಮಸ್ಯೆಗಳನ್ನು.

ಈ ನಾಡಿನ ಸಾರಥಿಗಳಾಗಿ ನೆಟ್ಟ ಹೆಜ್ಜೆಗುರುತುಗಳನ್ನು ಅವಲೋಕಿಸಿದರೆ ಸದಾನಂದ ಗೌಡರು ಮುಂದಕ್ಕೆ ಇಡಬೇಕಾದ ಹೆಜ್ಜೆಯ ದರ್ಶನವಾಗುತ್ತದೆ. ಅವರು ದಾಖಲಿಸಿದ ಸಾಧನೆಯ ಹೆಗ್ಗುರುತುಗಳು ಹೊಸ ಸಾಧನೆಗೆ ಸ್ಪೂರ್ತಿಯಾಗುತ್ತದೆ.

ಎಸ್.ನಿಜಲಿಂಗಪ್ಪ, ಎಚ್.ಡಿ.ದೇವೇಗೌಡ ಮತ್ತು ಬಿ.ಡಿ.ಜತ್ತಿ ಈ ನಾಡಿನಿಂದ ದೇಶದ ಅತ್ಯುನ್ನತ ಹುದ್ದೆಗಳನ್ನೇರಿದ ಸಾಧಕರು. ನಿಜಲಿಂಗಪ್ಪ ಅವರು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ದಿವಂಗತ ಇಂದಿರಾ ಗಾಂಧಿ ಅವರ ಜೊತೆ ಕುಳಿತು, ಅವರಿಗೂ ಮಾರ್ಗದರ್ಶನ ಮಾಡುವಂಥ ದೊಡ್ಡ ಸ್ಥಾನದಲ್ಲಿದ್ದವರು. ಅವರು ಮುಖ್ಯಮಂತ್ರಿಯಾಗಿ ಶರಾವತಿ, ಕಾಳಿ ವಿದ್ಯುತ್ ಯೋಜನಗಳಿಗೆ ಬುನಾದಿ ಹಾಕಿ ನಾಡಿಗೆ ಬೆಳಕು ನೀಡಿದವರು.

ಮುಖ್ಯಮಂತ್ರಿಯಾಗಿ, ನಂತರ ಈ ದೇಶದ ಪ್ರಧಾನಿ ಹುದ್ದೆಗೇರಿದ ಎಚ್.ಡಿ.ದೇವೇಗೌಡರು ರೈತಪರ ಕಾಳಜಿಯನ್ನು ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದವರು. ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ನೀರಾವರಿ ಮಂತ್ರಿಯಾಗಿದ್ದಾಗ ಗೌಡರು ಬಜೆಟ್ ನಲ್ಲಿ ನೀರಾವರಿಗೆ ಒದಗಿಸಿದ ಹಣ ಕಡಿಮೆಯೆಂದು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದರು.

ಮುಖ್ಯಮಂತ್ರಿಯಾಗಿ, ದೇಶದ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಬಸಪ್ಪ ದಾನಪ್ಪ ಜತ್ತಿ ಅವರದು ಆದರ್ಶ ಬದುಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಜೊತೆಗೆ ಸಮಗ್ರ ಕರ್ನಾಟಕದ ಏಳಿಗೆಯ ಕನಸು ಕಂಡವರು.

ವೀರೇಂದ್ರ ಪಾಟೀಲ್ ನಾಡು ಕಂಡ ದಕ್ಷ ಆಡಳಿತಗಾರ. ಆಡಳಿತದಲ್ಲಿ ಸುಧಾರಣೆಗಳನ್ನು ತರುವಲ್ಲಿ ಇವರ ಶ್ರಮ ನಿಜಕ್ಕೂ ಶ್ಲಾಘನೀಯ. ಇಂದಿರಾಗಾಂಧಿಯವರ ನಿಕಟವರ್ತಿಯಾಗಿದ್ದ ದೇವರಾಜ ಅರಸು ಹಿಂದುಳಿದ ವರ್ಗದವರ ಪಾಲಿಗೆ ಆಶಾಕಿರಣವಾದರು. ಇಂದಿರಾ ಅವರಂತೆಯೇ ಸಾಮಾಜಿಕ ಸುಧಾರಣೆಗಳಿಗೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ಅರಸು ಭೂಸುಧಾರಣೆಯನ್ನು ಪರಿಣಾಮಕಾರಿಯಾಗಿ ಜ್ಯಾರಿಗೆ ತಂದು ಬಡವರ ಬದುಕಿನ ಬಾಗಿಲು ತೆರೆಸಿದರು. ಇಂದಿರಾ ಅವರ ವೈರತ್ವ ಕಟ್ಟಿಕೊಂಡು ಕಾಂಗ್ರೆಸ್ ಪಕ್ಷದಿಂದ ಸಿಡಿದು ತಮ್ಮದೇ ಅರಸು ಕಾಂಗ್ರೆಸ್ ಪಕ್ಷ ಕಟ್ಟಿ ಮೂಲೆಗುಂಪಾದದ್ದು ಮಾತ್ರ ದುರಂತ.

ಕೊಡಗಿನ ಆರ್.ಗುಂಡೂರಾವ್ ಕರ್ನಾಟಕ ಕಂಡ ಅತ್ಯಂತ ರೋಚಕ ಮುಖ್ಯಮಂತ್ರಿ. ತಾನು ನುಡಿದದ್ದೇ ವೇದವಾಕ್ಯ, ಆದೇ ಆದೇಶ, ಸಂದೇಶ ಎನ್ನುವ ಮಟ್ಟಿಗೆ ಸುದ್ದಿಯಾದರು. ಗೋಕಾಕ್ ಚಳುವಳಿ, ನರಗುಂದ, ನವಲಗುಂದ ರೈತ ಚಳುವಳಿ ಗುಂಡೂರಾವ್ ಅವರ ಪತನಕ್ಕೆ ನಾಂದಿಯಾದವು. ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ ಎನ್ನುವ ಅವರ ಒಂದು ಸ್ಟೇಟ್ ಮೆಂಟ್ ಅವರ ಸರ್ಕಾರದ ಅವಸಾನಕ್ಕೆ ಹೇತುವಾಯಿತು.

ಕಾಂಗ್ರೇಸೇತರ ಸರ್ಕಾರವನ್ನು ಕರ್ನಾಟಕದಲ್ಲಿ ಸ್ಥಾಪಿಸಿದ ರೂವಾರಿ ರಾಮಕೃಷ್ಣ ಹೆಗಡೆ ನಾಡುಕಂಡ ಅತ್ಯಂತ ಚಾಣಕ್ಷ ಮುಖ್ಯಮಂತ್ರಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜ್ಯಾರಿಗೆ ತಂದು ತಮ್ಮ ಛಾಪು ಮೂಡಿಸಿದರು. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಗರಿಬಿಚ್ಚಿಕೊಂಡದ್ದೂ ಕೂಡಾ ಹೆಗಡೆ ಕಾಲದಲ್ಲಿ ಎನ್ನುವುದನ್ನು ಮರೆಯಬಾರದು.
ಚಿದಂಬರ ಬೈಕಂಪಾಡಿ

ಸಾರೆಕೊಪ್ಪ ಬಂಗಾರಪ್ಪ ರಾಜಕೀಯದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡವರು. ಮುಖ್ಯಮಂತ್ರಿಯಾಗಿ ಅವರು ಅನುಷ್ಠಾನಕ್ಕೆ ತಂದ ಆರಾಧನಾ, ವಿಶ್ವ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು. ಗ್ರಾಮೀಣ ಮಾಕ್ಕಳಿಗೆ ಕೃಪಾಂಕ ನೀಡಿಕೆಯೂ ಇವರ ಬಳುವಳಿ.

ಕರಾವಳಿ ಮೂಲದ ಎಂ.ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿ ಜ್ಯಾರಿಗೆ ತಂದ ಸಿಇಟಿ ಬಡವರ ಮಕ್ಕಳು ವೃತ್ತಿಪರ ಕೋರ್ಸ್ ಸೇರಲು ಅನುವಾಯಿತು. ಪ್ರಾದೇಶಿಕ ಭಾಷೆಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕೊಡವ, ಕೊಂಕಣಿ, ತುಳು ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿದ ಕೀರ್ತಿ ಇವರದು.

ಜೆ.ಎಚ್.ಪಟೇಲ್ ಅವರದು ಅವರ ಬದುಕಿನಂತೆಯೇ ಸ್ವಚ್ಚಂದ ಸರ್ಕಾರ. ಹೆಣ್ಣು- ಹೆಂಡ ನನ್ನ ವೀಕ್ ನೆಸ್ ಅಂತ ಬಹಿರಂಗವಾಗಿ ಹೇಳಿಕೊಂಡು ತಮಗೆ ಸರಿಕಂಡಂತೆಯೇ ಸರ್ಕಾರ ನಡೆಸಿ ಇತಿಹಾಸ ಸೇರಿಕೊಂಡರು.

ಕರ್ನಾಟಕದಲ್ಲಿ ಹಗರಣಗಳ ಸರಮಾಲೆಯೇ ಹುಟ್ಟಿಕೊಳ್ಳುವುದು ೨೦೦೦ದಿಂದೀಚೆಗೆ. ಎಸ್.ಎಂ.ಕೃಷ್ಣ, ಧರಂ ಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಸರ್ಕಾರಗಳು ಹಗರಣಗಳ ಧೂಳಿನಿಂದ ಆವರಿಸಿಕೊಂಡವು. ಕಾಡುಗಳ್ಳ ವೀರಪ್ಪನ್ ಮಾಡಿದ ರಾಜ್ ಅಪಹರಣ, ಅವನಿಗೆ ಒತ್ತೆಹಣ ಸಂಗ್ರಹದಿಂದ ಹಿಡಿದು ಖೇಣಿಯ ನೈಸ್ ವಿವಾದ, ಗಣಿ ಲೂಟಿ ತನಕವೂ ಹಗರಣಗಳೇ ಸದ್ದು ಮಾಡಿದವು. ದಶಕದ ಕರ್ನಾಟಕದ ಆಡಳಿತ ಅನೇಕ ಕಾರಣಗಳಿಂದಾಗಿ ದೇಶದ ಗಮನ ಸೆಳೆಯಿತು. ರೆಸಾರ್ಟ್ ಸಂಸ್ಕೃತಿ ಬೆಳೆದದ್ದು ಕೂಡಾ ಈ ಅವಧಿಯಲ್ಲೇ.

ಈ ಎಲ್ಲಾ ಅಂಶಗಳನ್ನು ಮನನ ಮಾಡಿದರೆ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಏನು ಮಾಡಬೇಕು ಎನ್ನುವುದು ಗೋಚರವಾಗುತ್ತದೆ. ಒಂದು ದಶಕದಿಂದ ಆಡಳಿತ ಹಳಿತಪ್ಪಿದೆ, ಅಭಿವೃದ್ಧಿ ಯೋಜನೆಗಳು ವೇಗ  ಕಳೆದುಕೊಂಡಿವೆ. ಸರ್ಕಾರ ಉಳಿಸಿಕೊಳ್ಳುವುದು, ತಾನು ಅಧಿಕಾರದಲ್ಲಿ ಮುಂದುವರಿಯುವುದೇ ಪರಮಧ್ಯೇಯ ಎನ್ನುವಷ್ಟರಮಟ್ಟಿಗೆ ಸೀಮಿತವಾಗಿದೆ. ಪಕ್ಷ ರಾಜಕಾರಣ ಪಾರಾಕಾಷ್ಠೆಗೆ ಮುಟ್ಟಿರುವುದೂ ಕೂಡಾ ಈ ದಶಕದಲ್ಲೇ ಎನ್ನುವ ಸತ್ಯವನ್ನು ಮರೆಯಬಾರದು.

ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಪವಾಡ  ಮಾಡಿಬಿಡುತ್ತಾರೆ ಎನ್ನುವ ಭ್ರಮೆ ಯಾರಿಗೂ ಬೇಕಾಗಿಲ್ಲ. ಪವಾಡಗಳು ಏನಿದ್ದರೂ ತಾತ್ಕಾಲಿಕ ಅಥವಾ ರೋಚಕ. ಹಳಿತಪ್ಪಿರುವ ಆಡಳಿತ ವ್ಯವಸ್ಥೆ ಮತ್ತೆ ಹಳಿಗೆ ಬರಬೇಕು. ವೇಗ ಕಳೆದುಕೊಂಡಿರುವ ಯೋಜನೆಗಳು ವೇಗ ಹೆಚ್ಚಿಸಿಕೊಳ್ಳಬೇಕು. ಪಕ್ಷ ರಾಜಕಾರಣ ಮಾಡಲು ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳಿರುವುದರಿಂದ ಗೌಡರಿಗೆ ಇದರಗೊಡವೆ ಬೇಕಾಗಿಲ್ಲ.

ಪಾರದರ್ಶಕ ಆಡಳಿತ, ಜನಮೆಚ್ಚುವ ಅಭಿವೃದ್ಧಿಪರ ಸರ್ಕಾರಕೊಡುವುದು ಮುಖ್ಯವಾಗಿದೆ. ಕಾಡುಗಳ್ಳರು, ನೆಲಗಳ್ಳರಿಂದಾಗಿ ಲೂಟಿಯಾಗಿರುವ ಸಂಪತ್ತು ಮತ್ತೆ ಲೂಟಿಯಾಗದಂತೆ ಕಡಿವಾಣ ಹಾಕುವ ಗಟ್ಟಿತನದ ಅವಶ್ಯಕತೆಯಿದೆ. ಮುಖ್ಯಮಂತ್ರಿಗಳು ತಮ್ಮ ಎಡ-ಬಲಗಳಲ್ಲಿ ಕೈ, ಬಾಯಿ ಶುದ್ಧವಿದ್ದವರನ್ನೇ ಇಟ್ಟುಕೊಂಡರೆ ಘನತೆ ಬರುತ್ತದೆ. ಜಾತಿಯ ವಾಸನೆ, ಅಧಿಕಾರದ ಮದದಿಂದ ಮುಕ್ತರಾಗುವುದು ಕೂಡಾ ಯಶಸ್ಸಿಗೆ ಮೆಟ್ಟಿಲುಗಳು ಎನ್ನುವುದನ್ನು ಮರೆಯಬಾರದು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐದು ದಶಕಗಳಿಂದ ರೂಢಿಸಿಕೊಂಡು ಬಂದಿರುವ ಶಿಸ್ತನ್ನು ಉಳಿಸಿಕೊಂಡು ಕನ್ನಡನಾಡಿನ ತೇರನ್ನು ಸದಾನಂದ ಗೌಡರು ಎಳೆಯಬೇಕಾಗಿದೆ. ಮುಂದಿನ ಪೀಳಿಗೆ ನೆನೆಪಿಡುವಂಥ ಕೊಡುಗೆಯನ್ನು ಕೊಡಲು ಮನಸ್ಸು ಮಾಡಬೇಕು. ಕರಾವಳಿಗೆ ಮತ್ತೆ ಬಹುಬೇಗ ಇಂಥ ಅವಕಾಶ ಸಿಗುವುದೆಂದು ಊಹಿಸುವುದು ತುಸು ಕಷ್ಟವೇ ಸರಿ.

ಕರಾವಳಿಗೆ ಶ್ರೀನಿವಾಸ ಮಲ್ಯರು ಕೊಟ್ಟ ಕೊಡುಗೆಯನ್ನು ಮರೆಯಲು ಹೇಗೆ ಸಾಧ್ಯವಿಲ್ಲವೋ ಅಂಥ ಕೊಡುಗೆಯನ್ನು ಸದಾನಂದ ಗೌಡರು ನಾಡಿಗೆ ಕೊಡಲು ಸಿಕ್ಕಿರುವ ಸದವಕಾಶ. ಮೈಮರೆಯದೆ, ಮದವೇರದೆ ಮನವಿಟ್ಟು ಕೆಲಸ ಮಾಡಿದರೆ ನಾಡು-ನಾಡಿನ ಜನ ಮುಂದೊಂದು ದಿನ ಕೊಂಡಾಡುತ್ತಾರೆ, ಇಲ್ಲವಾದರೆ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿದ ಕಪ್ಪುಚುಕ್ಕೆ ಇತಿಹಾಸದ ಪುಟದಲ್ಲಿ ದಾಖಲಾಗಿಬಿಡುತ್ತದೆ.

-ಚಿದಂಬರ ಬೈಕಂಪಾಡಿ

1 comment:

  1. ಸ್ವಾಮಿ ಒಂದನ್ನು ಮರೆತ್ತಿದ್ದೀರಿ... ಭ್ರಷ್ಟ ಪತ್ರಕತ೵ರನ್ನು ದೂರ ಇಡಿ ಎಂಬುವುದನ್ನು ಹೇಳಿಲ್ಲ. ಯಡಿಯೂರಪ್ಪಗೆ ಅಡ್ಡಡ್ಡ ಬಿದ್ದು, ಬೆಂಗಳೂರು ಹಾಗೂ ಶಿವಮೊಗ್ಗ ಪತ್ರಕತ೵ರು ಈಗಾಗಲೇ ಬಿಡಿಎ - ಕೆಹೆಚ್ ಬಿ ನಿವೇಶನಗಳನ್ನು ಪಡೆದರು. ಕೊನೆಗೆ ಹಗರಣಗಳಲ್ಲಿ ಸಿಲುಕಿ ಯಡ್ಡಿ ರಾಜೀನಾಮೆ ನೀಡಿದ್ದಾರೆ. ಇಂತಹ ದುಷ್ಟ - ಭ್ರಷ್ಟ ಪತ್ರಿಕೋದ್ಯಮಿಗಳನ್ನು ಡಿ.ವಿ. ಸದಾನಂದಗೌಡ ದೂರವಿಡುವುದು ಒಳ್ಳೆಯದು. ಇಲ್ಲದಿದ್ದರೇ, ಯಡ್ಡಿ ಸ್ಥಿತಿಯೇ ಎದುರಾಗಬೇಕಾಗುತ್ತದೆ.

    ReplyDelete