ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ವಿವಾದಾತ್ಮಕ ಹೇಳಿಕೆಗಳನ್ನು ಕುರಿತು ಪ್ರಜಾವಾಣಿಯ ಇಂದಿನ ಅನಾವರಣ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ. ದಿನೇಶ್ ಅವರು ಮೊದಲ ಬಾರಿಗೆ ಅತ್ಯಂತ ಡಿಪ್ಲಮ್ಯಾಟಿಕ್ ಆಗಿ ಇದನ್ನು ಬರೆದಿದ್ದಾರಾ ಅನ್ನುವ ಅನುಮಾನ ನಮಗೆ. ಅನುಮಾನ ಯಾಕೆ ಅನ್ನೋದನ್ನು ಹೇಳುವ ಪ್ರಯತ್ನ ಮಾಡುತ್ತೇವೆ.
ಮಾರ್ಕಂಡೇಯ ಖಟ್ಜು |
ನಿಜವಾದ ಮಾತೇ ಇದು? ದೇಶದ ಪತ್ರಕರ್ತರೆಲ್ಲ ಖಡ್ಜು ಮಾತಿನಿಂದ ಕೆರಳಿದ್ದಾರೆಯೇ? ಖಟ್ಜು ಅವರ ವಿರುದ್ಧ ಇಡೀ ಪತ್ರಕರ್ತ ಸಮೂಹವೇ ಕೋಪ ಮಾಡಿಕೊಂಡಿದೆಯೇ? ಖಟ್ಜು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಬಲ್ಲ ಪತ್ರಕರ್ತರೇ ಇಲ್ಲವೇನು? ಬೇರೇನೂ ಬೇಡ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳೋಣ. ಖಟ್ಜು ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿ ಎಷ್ಟೋ ದಿನ ಕಳೆದ ನಂತರ ಪ್ರಜಾವಾಣಿಯಲ್ಲಿ ಒಂದು ತೀವ್ರ ಖಂಡನೆಯ ಸಂಪಾದಕೀಯ ಹೊರಬಂದಿತ್ತು. ಮತ್ತೆ ಒಂದೆರಡು ಪತ್ರಿಕೆಗಳಲ್ಲಿ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!) ಖಟ್ಜು ಮಾತುಗಳಿಗೆ ಇಡೀ ಪತ್ರಿಕಾ ಸಮೂಹ ಸಿಟ್ಟಿಗೆದ್ದಿದೆ ಎಂದು ಅಮೀನ್‌ಮಟ್ಟು ಯಾಕೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ?
ಹಾಗೆ ನೋಡಿದರೆ ದಿನೇಶ್ ಅವರು ಖಟ್ಜು ಆಡಿರುವ ಎಲ್ಲ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಖಟ್ಜು ಯಾವ ಆದರ್ಶಗಳನ್ನು ಪತ್ರಕರ್ತರಿಂದ ಬಯಸುತ್ತಿದ್ದಾರೋ ಆ ಆದರ್ಶಗಳನ್ನು ಹೊಂದಿರುವ ಅಪರೂಪದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು. ಹೀಗಾಗಿ ಖಟ್ಜು ಅವರು ಮಾಧ್ಯಮಗಳ ಕುರಿತು ಆಡಿರುವ ಅನೇಕ ಮಾತುಗಳಿಗೆ ಅವರ ಪರೋಕ್ಷ ಸಮ್ಮತಿ ಇದೆ. ಖಟ್ಜು ಹೇಳುವ ರೀತಿ ಸರಿಯಿಲ್ಲವೆಂಬುದು ಅವರ ಆಪಾದನೆ. ಖಟ್ಜು ಆರೋಪಗಳೆಲ್ಲವೂ ಹಳೆಯವು ಎಂಬುದು ಅವರ ಟೀಕೆ. (ಹಳೇ ಆರೋಪಗಳು ಅಪ್ರಸ್ತುತ ಯಾಕಾಗಬೇಕು? ಅಷ್ಟಕ್ಕೂ ಈ ಸಂದರ್ಶನದಲ್ಲಿ ಕರಣ್ ಎತ್ತಿದ ಪ್ರಶ್ನೆಗಳಿಗೆ ಖಟ್ಜು ಉತ್ತರಿಸುತ್ತಾ ಹೋಗಿದ್ದಾರಷ್ಟೆ.) ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೇ ಇದ್ದರೆ ಮಾತು ಸೋತುಹೋಗುತ್ತದೆ. ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.
ನ್ಯಾಯಸ್ಥಾನದಲ್ಲಿ ಕುಳಿತುಕೊಂಡವರು ಪ್ರಾಮಾಣಿಕರಾಗಿದ್ದರೂ ಸಣ್ಣಪ್ರಮಾಣದ (ಕೆಲವೊಮ್ಮೆ ದೊಡ್ಡಪ್ರಮಾಣದ) ಬಾಯಿಬಡುಕುತನ ಪ್ರದರ್ಶನ ತೋರುತ್ತಿರುವುದು ದಿನೇಶ್ ಅವರಿಗೆ ಗೊತ್ತಿಲ್ಲದ ವಿದ್ಯಮಾನವೇನೂ ಅಲ್ಲ. ಕರ್ನಾಟಕದ ಉದಾಹರಣೆ ಕೊಡುವುದಾದರೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ನ್ಯಾ.ವೆಂಕಟಾಚಲ ಹಾಗು ನ್ಯಾ ಸಂತೋಷ್ ಹೆಗ್ಡೆ ಅವರಿಬ್ಬರೂ ಈ ಅಪವಾದದಿಂದ ಮುಕ್ತರಾಗಿರಲಿಲ್ಲ. ಆದರೆ ಮಾತು ಅತಿರೇಕವಾಯಿತು ಎನ್ನುವ ಕಾರಣಕ್ಕೂ ಮಾತಿನ ಹಿಂದಿನ ಆಶಯಗಳೆಲ್ಲವೂ ತಿರಸ್ಕಾರಕ್ಕೆ ಯೋಗ್ಯವಾಗುತ್ತವೆಯೇ?
ದಿನೇಶ್ ಅವರೂ ಸೇರಿದಂತೆ ಖಟ್ಜು ಅವರನ್ನು ವಿರೋಧಿಸುತ್ತಿರುವುದು ಅವರು ಸಂದರ್ಶನದಲ್ಲಿ ಆಡಿದ ಕೆಲವು ಸಡಿಲ ಮಾತುಗಳನ್ನು ಮಾತ್ರ. ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ, ಫಿಲಾಸಫಿ ಇತ್ಯಾದಿಗಳಲ್ಲಿ ಪರಿಣತಿ ಇಲ್ಲ ಎಂಬ ಅವರ ಮಾತುಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಪತ್ರಕರ್ತರಿಗೆ ಎಂಬ ಶಬ್ದದ ಹಿಂದೆ ಕೆಲವು ಅಂತಲೋ, ಬಹುತೇಕ ಅಂತಲೋ ಒಂದು ಪದಬಳಕೆಯಾಗಿದ್ದರೆ ಈ ವಿಷಯದ ಚರ್ಚೆಯೇ ಅಸಾಧ್ಯವಾಗುತ್ತಿತ್ತು. ಖಟ್ಜು ಆತುರದಲ್ಲಿ ಅದನ್ನು ಮರೆತಿದ್ದಾರೆ. ಹೀಗಾಗಿ ಪೆನ್ನುಗಳು ಖಡ್ಗಗಳಾಗುತ್ತಿವೆ.
ಖಟ್ಜು ಹೇಳದೇ ಉಳಿದದ್ದನ್ನು ಹೇಳುವ ಆತುರದಲ್ಲಿ ದಿನೇಶ್ ಅವರು ಒಂದು ಸ್ಪಷ್ಟ ಲೋಪವನ್ನು ಉಳಿಸಿದ್ದಾರೆ. ಖಟ್ಜು ಮಾಧ್ಯಮ ಭ್ರಷ್ಟಾಚಾರ, ಕಾಸಿಗಾಗಿ ಸುದ್ದಿ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಆಕ್ಷೇಪಣೆ ತೆಗೆದಿದ್ದಾರೆ. ಕರಣ್ ಜತೆಗಿನ ಸಂದರ್ಶನದಲ್ಲಿ ಖಟ್ಜು ಈ ವಿಷಯಯನ್ನು ಕಟುವಾಗಿಯೇ ಪ್ರಸ್ತಾಪಿಸಿದ್ದಾರೆ. ಹಿಂದೆಲ್ಲ ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರೇ ೧೦,೦೦೦ ರೂ. ಪಡೆದು ಅಭ್ಯರ್ಥಿಗಳ ಪರವಾಗಿ ಬರೆಯುತ್ತಿದ್ದರು. ಇದನ್ನು ಗಮನಿಸಿದ ಮ್ಯಾನೇಜ್‌ಮೆಂಟುಗಳು ತಾವೇ ಲಾಭ ಮಾಡಿಕೊಳ್ಳಲು ಕಾಸಿಗಾಗಿ ಸುದ್ದಿ ದಂಧೆಯನ್ನು ಆರಂಭಿಸಿದವು ಎಂದು ಖಟ್ಜು ಹೇಳಿರುವುದನ್ನು ದಿನೇಶ್ ಪ್ರಮಾದವಶಾತ್ ಮರೆತಿದ್ದಾರೆ. ಒಂದೇ ಪತ್ರಿಕೆಯಯಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಕಾಸಿಗಾಗಿ ಸುದ್ದಿಗಳು ಪ್ರಕಟವಾದಾಗ ಆದ ಅವಾಂತರಗಳನ್ನೂ ಖಟ್ಜು ನೆನಪಿಸಿಕೊಂಡಿದ್ದಾರೆ.
ಬಹಳ ಮುಖ್ಯವಾಗಿ ಖಟ್ಜು ಅವರ ಸಿಟ್ಟು ಇರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು. ಈ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜ್ಯೋತಿಷಿಗಳ ವಿಜೃಂಭಣೆ, ಕ್ರಿಕೆಟ್-ಸಿನಿಮಾಗಳಿಗೆ ದಕ್ಕುವ ಪ್ರಾಶಸ್ತ್ಯ, ತೇಜೋವಧೆ, ಜನಗಳನ್ನು ಉದ್ದೇಶಪೂರ‍್ವಕವಾಗಿ ಒಡೆಯುವ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಖಟ್ಜು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಪ್ರೆಸ್ ಕೌನ್ಸಿಲ್‌ನ ಅಡಿಯಲ್ಲೇ ಈ ಚಾನಲ್‌ಗಳನ್ನೂ ತರುವ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಪ್ರಧಾನಿಗೂ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಪ್ರೆಸ್ ಕೌನ್ಸಿಲ್ ಅನ್ನು ಮೀಡಿಯಾ ಕೌನ್ಸಿಲ್ ಆಗಿ ಬದಲಾಯಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವೇ ಗಂಭೀರವಾಗಿ ಚರ್ಚೆಯಾಗಬೇಕಿತ್ತಲ್ಲವೇ? ಇದಕ್ಕೆ ಹೊರತಾಗಿ ಪತ್ರಕರ್ತರ ಕೌಶಲ್ಯದ ವಿಷಯವೇ ಚರ್ಚೆಯ ವಿಷಯವಾಗಿದ್ದು ಏಕೆ?
ದಿನೇಶ್ ಅಮೀನ್ ಮಟ್ಟು |
ಅಷ್ಟಕ್ಕೂ ಖಟ್ಜು ಹೇಳಿದಂತೆ ಪರಿಪೂರ್ಣವಾದ ಸ್ವಾತಂತ್ರ್ಯ ಎಂಬುದು ಇರಬೇಕಾ? ಸಾರ್ವಜನಿಕ ಬದುಕಿನ ಪ್ರತಿಯೊಬ್ಬರೂ ಯಾರಿಗಾದರೂ ಉತ್ತರದಾಯಿ ಆಗಲೇಬೇಕಲ್ಲವೇ? ಮಾನನಷ್ಟ ಕಟ್ಲೆಗಳಂಥ ಬಹುತೇಕ ಸಂದರ್ಭದಲ್ಲಿ ನಿರುಪಯೋಗಿಯಾದ, ನ್ಯಾಯಕ್ಕಾಗಿ ವರ್ಷಗಟ್ಟಲೆ ಕಾಲ ಅಂಗಲಾಚಬೇಕಾದ ಮಾರ್ಗವನ್ನು ಹೊರತುಪಡಿಸಿದರೆ ಮಾಧ್ಯಮಗಳಿಂದ ನೊಂದವರಿಗೆ ನ್ಯಾಯ ದೊರೆಯುವುದಕ್ಕೆ ಮಾರ್ಗ ಬೇಡವೇ? ಮಾನನಷ್ಟ ಕಟ್ಲೆಯಂಥವು ವೈಯಕ್ತಿಕ ತೇಜೋವಧೆಯಂಥ ಪ್ರಕರಣಗಳಿಗೆ ಸಂಬಂಧಿಸಿದ್ದವು. ಇಡೀ ಸಮಾಜವನ್ನೇ ದಿಕ್ಕುಗೆಡಿಸುವ ಪತ್ರಿಕಾಸಂಸ್ಥೆಗಳನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು? ಸದಾ ಕತ್ತಿಯಂಥ ಪೆನ್ನನ್ನು ಹಿಡಿದುಕೊಂಡೇ ಓಡಾಡುವವರನ್ನು ಎದುರಿಸಿ ನಿಲ್ಲುವವರಾದರೂ ಯಾರು?
ಜನಲೋಕಪಾಲದ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳನ್ನು ಒಪ್ಪಿಸಿದರೆ ಹೇಗೆ ಎಂಬ ಪ್ರಶ್ನೆಯೊಂದನ್ನು ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಮಾಧ್ಯಮ ಭ್ರಷ್ಟಾಚಾರವನ್ನು ಜನಲೋಕಪಾಲಕ್ಕೆ ವಹಿಸಿದರೆ, ಭ್ರಷ್ಟ ಪತ್ರಕರ್ತರಿಗೆ ಶಿಕ್ಷೆಯಾಗಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ಮಾಧ್ಯಮಗಳ ಇತರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಧರ್ಮದ ಹೆಸರಲ್ಲಿ ದೇಶ ಒಡೆಯುವ ಪತ್ರಕರ್ತರನ್ನು ಏನು ಮಾಡುವುದು? ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಹರಡಿ ಜನರನ್ನು ಪಾತಾಳಕ್ಕೆ ತಳ್ಳುವವರನ್ನೇನು ಮಾಡೋದು? ಖಟ್ಜು ಹೇಳಿದಂತೆ ಹಸಿವು, ದಾರಿದ್ರ್ಯ ದೇಶದ ತುಂಬೆಲ್ಲ ಹರಡಿರುವಾಗ ಕರೀನಾ ಕಪೂರ್, ಐಶ್ವರ್ಯ ರೈಗಳ ಸುತ್ತ ಸುತ್ತುತ್ತ ವಂಚನೆ ಎಸಗುತ್ತಿರುವ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು ಏನು ಮಾಡುವುದು?
ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವುದರಿಂದ, ಮಂಡಳಿಗೆ ಅಧಿಕಾರ ದೊರೆತರೆ ಸರ್ಕಾರ ಮೀಡಿಯಾ ವ್ಯವಹಾರದಲ್ಲಿ ಕೈಹಾಕಬಹುದು ಎಂಬುದು ದಿನೇಶ್ ಹಾಗು ಇದನ್ನು ವಿರೋಧಿಸುತ್ತಿರುವ ಎಲ್ಲರ ಕಾಳಜಿ. ಆದರೆ ಪ್ರಜಾತಂತ್ರದಲ್ಲಿ ನ್ಯಾಯಾಧೀಶರಿಂದ ಹಿಡಿದು ಪೊಲೀಸರವರೆಗೆ ಎಲ್ಲರನ್ನೂ ನೇಮಿಸುವುದು ಸರ್ಕಾರವೇ ಅಲ್ಲವೇ? ಸರ್ಕಾರ ನೇಮಿಸಿದ ಪೊಲೀಸರು ಎಂಬ ಕಾರಣಕ್ಕೆ ಪೊಲೀಸರ ಅಡಿಯಲ್ಲಿ ನಾವು ಬರುವುದಿಲ್ಲವೆಂದು ಸಾಮಾನ್ಯ ಪ್ರಜೆ ಹೇಳಲು ಸಾಧ್ಯವೇ? ಎಲ್ಲರೂ ಸರ್ಕಾರದ ನೀತಿ ನಿರೂಪಣೆಗಳಿಂದ ಹೊರಗಿರಲು ಬಯಸುವುದಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಾದರೂ ಹೇಗೆ?
ಆಧುನಿಕ ಸಮಾಜವಾಗಿ ಬದಲಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ಭಾರತದಲ್ಲಿ ಈ ಸಂಕ್ರಮಣದ ಸ್ಥಿತಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ ಎಂದು ಖಟ್ಜು ಯೂರೋಪ್‌ನ ಉದಾಹರಣೆ ನೀಡಿ ಆಕ್ಷೇಪವೆತ್ತಿದ್ದಾರೆ. ಪತ್ರಕರ್ತರು ಜನಪರವಾಗಿಲ್ಲ ಎಂಬುದು ಅವರ ಮುಖ್ಯ ಹೇಳಿಕೆ. ಇದಲ್ಲವೇ ಮುಖ್ಯವಾಗಿ ಚರ್ಚಿಸಬೇಕಾದ ವಿಷಯ?
ಒಂದಂತೂ ನಿಜ, ನ್ಯಾಯಮಂಡಳಿ ಅಧ್ಯಕ್ಷರ ಹೇಳಿಕೆಗೆ ಈ ಪರಿಯಲ್ಲಿ ಮಾಧ್ಯಮಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಪತ್ರಕರ್ತ ಸಂಘಟನೆಗಳು ವೀರಾವೇಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ, ಒಂದೊಮ್ಮೆ ಸರ್ಕಾರ ಪ್ರೆಸ್ ಕೌನ್ಸಿಲ್‌ಗೆ ಹೆಚ್ಚುವರಿ ಅಧಿಕಾರ ದೊರೆತರೆ ಯಾವ ಪ್ರಮಾಣದಲ್ಲಿ ಗಂಟಲು ಹರಿದುಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗಾಗಿ ಮಾಧ್ಯಮ ಸಂಸ್ಥೆಗಳು ನೆಮ್ಮದಿಯಾಗಿರಬಹುದು. ಅವುಗಳ ಸ್ವೇಚ್ಛೆಗೆ ಅಡ್ಡಿ ಬರುವವರನ್ನು ಅವುಗಳು ಎಂದಿಗೂ ಸಹಿಸಿಕೊಳ್ಳುವುದಿಲ್ಲ.
ದಿನೇಶ್ ಅಮೀನ್‌ಮಟ್ಟು ಹೇಳಬೇಕಾಗಿದ್ದನ್ನು ಪೂರ್ತಿ ಹೇಳಲು ಸಾಧ್ಯವಾಗಿಲ್ಲವೇನೋ? ಹೀಗಾಗಿ ಅವರು ಹೇಳದೇ ಉಳಿದ ಮಾತುಗಳನ್ನು ಹೇಳಲು ಇಲ್ಲಿ ಯತ್ನಿಸಿದ್ದೇವೆ. ಅಷ್ಟಾಗಿಯೂ ಈ ಮಟ್ಟಿಗಿನ ನಿರ್ಭೀತ ಬರವಣಿಗೆಗಾಗಿ ಅವರಿಗೊಂದು ಥ್ಯಾಂಕ್ಸ್.
ಕೊನೆಕುಟುಕು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ. ಸೋಮಣ್ಣ ಜತೆ ಹಮೀದ್ ಪಾಳ್ಯ ಸುವರ್ಣ ನ್ಯೂಸ್‌ನಲ್ಲಿ ಸಂದರ್ಶನ ನಡೆಸಿದರು. ಹಂಗಾದ್ರೆ ನೀವು ಯಾವುದೇ ಅಪರಾಧ ಎಸಗಿಲ್ಲ, ಅವ್ಯವಹಾರ ನಡೆಸಿಲ್ಲ, ನಿಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಅಂತ ನೀವು ಹೇಳ್ತೀರಾ.... ಎಂದು ಹಮೀದ್ ಪದೇ ಪದೇ ಸೋಮಣ್ಣಗೆ ಕೇಳುತ್ತಿದ್ದರು. ಸೋಮಣ್ಣ ಹೇಳಬೇಕಾದ ಮಾತುಗಳನ್ನು ಹಮೀದ್ ಯಾಕೆ ಸಜ್ಜೆಸ್ಟ್ ಮಾಡ್ತಾ ಇದ್ರು? ಸೋಮಣ್ಣ ವಿರುದ್ಧ ದೂರು ದಾಖಲಾದ ನಂತರ ಇದು ರಾಜಕೀಯ ಪ್ರೇರಿತ ದೂರು ಎಂಬ ಅರ್ಥದ ವರದಿಯೊಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸುವರ್ಣದಲ್ಲಿ ಈಗ ಸೋಮಣ್ಣಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಹೀಗಿರುವಾಗ ಲೋಕಾಯುಕ್ತ ಕೋರ್ಟು ಯಾಕೆ ಬೇಕು ಅಲ್ಲವೇ?
ಅದೇ ಪತ್ರಿಕೆಯ ಅದೇ ಪುಟದಲ್ಲಿ ಸಂಪಾದಕರು ಡಿಕ್ಟೇಟ್ ಮಾಡಿದ ಒಂದು ಲೇಖನ ಪ್ರಕಟವಾಗಿದೆ.ಗಮನಿಸಿ.http://www.prajavani.net/web/include/story.php?news=2717§ion=30&menuid=14
ReplyDeleteಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!) yes you are right. some are busy with making money.others are uneducated, according to Justice. They can't read....
ReplyDeleteದಿನೇಶ್ ಅಮೀನ್‌ಮಟ್ಟುರವರ ಈ ಬರಹ ಪತ್ರಿಕಾರಂಗದಲ್ಲಿ ಕ್ರಾಂತಿ ಮೂಡಲು ಮೊದಲ ಹೆಜ್ಜೆಯಾಗಿ ಪರಿಗಣಿಸಬೇಕು. ಭ್ರಷ್ಟ ಮತ್ತು ಸ್ವಹಿತಾಸಕ್ತಿಯನ್ನು ಹೊಂದಿರುವ ವರದಿಗಾರರನ್ನು ಪತ್ರಿಕೆಯಿಂದ ದೂರ ಇಡಬೇಕು. ಪತ್ರಿಕೆಯ ನೀಜವಾದ ಬೆಲೆಯನ್ನು ನಿಗದಿ ಪಡಿಸಬೇಕು. ಸಾರಸರಿ ಜಾಹೀರಾತಿ ಸ್ಥಳವನ್ನು ನಿಗದಿಗೊಳಿಸಬೇಕು ಸರಾಸರಿ ಜಾಹೀರಾತಿನಿಂದ ಬರುವಂತ ಹಣ ಮತ್ತು ಉಳಿದ ಹಣವನ್ನು ಓದುಗರಿಂದಲೇ ಪಡೆಯಬೇಕು)
ReplyDeleteಮತ್ತೊಂದು ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅದು ವಿಶ್ವವಿದ್ಯಾಲದ ಶಿಕ್ಷಣ ಮಟ್ಟದ ಬಗ್ಗೆ, ನಾನು 2009 ವರ್ಷದ ಸಂವಹನ ವಿದ್ಯಾರ್ಥಿ. ನಾನು ಓದಬೆಕಾದರೆ practical subjectಗಳ ಬಗ್ಗೆ practical Class ನಡೆಸಲೇ ಇಲ್ಲ. ಒಂದು ಕ್ಯಾಮರವನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದು ನಮ್ಮ classಲ್ಲಿ ಇದ್ದ 90/ ವಿಧ್ಯಾರ್ಥಿಗಳಿಗೆ ತಿಳಿದೇ ಇರಲಿಲ್ಲ. ಆದರೂ ನಾವು Msc in Mass communication and journalism First calss Student's!!!!. It's Real. ಇದು ನಮ್ಮ ಶಿಕ್ಷಣದ ಅದೋಗತಿ.
ಓದುಗರ ಒಡೆತನದ ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ವಡ್ಡಸರ್ೇರವರ, ನಂತರ ಕನ್ನಡ ಪತ್ರಿಕೋದ್ಯಮದಲ್ಲಿ ಎಲ್ಲಿಯೂ ಹೆಸರನ್ನು ಕೆಡಿಸಿಕೊಳ್ಳದ ಪ್ರಾಮಾಣಿಕ ಪತ್ರಕರ್ತರು ಯಾರಾದರೂ ಇದ್ದರೆ, ಅದು ದಿನೇಶ್ ಅಮೀನ್ಮಟ್ಟು ಮಾತ್ರ.. ಅದನ್ನು ನೀವುಗಳು ಈಗಾಗಲೇ ಒಪ್ಪಿಕೊಂಡಿದ್ದೀರಿ..
ReplyDeleteಈಗ ಎದ್ದಿರುವ ಪ್ರಶ್ನೆ ಇಷ್ಟೇ..
ಪ್ರತಿಸೋಮವಾರ ಅನಾವರಣವೆಂಬ ಅಂಕಣದಡಿ ಅಮೀನ್ಮಟ್ಟು ಅವರ ಲೇಖನ ಬರುತ್ತದೆ. ಸಹಸ್ರಾರು ಓದುಗರ ಮೆಚ್ಚುಗೆಯನ್ನೂ ಆ ಲೇಖನ ಪಡೆಯುತ್ತದೆ. ತಾವಲ್ಲದಿದ್ದರೂ, ತಮ್ಮಂತೆ ಬ್ಲಾಗು ನಡೆಸುವ ಸಾಕಷ್ಟು ಮಂದಿ ಆ ಲೇಖನವನ್ನು ತಮ್ಮ ಬ್ಲಾಗು, ಪೇಸ್ಬುಕ್, ಟ್ವಿಟರ್ಗಳಲ್ಲಿ ಹಾಕಿಕೊಳ್ಳುತ್ತಾರೆ. ಆದರೆ, ಈವರೆಗೆ ಯಾರೊಬ್ಬರೂ ದಿನೇಶ್ ಅಮೀನಮಟ್ಟುರವರ ಲೇಖನದ ಒಂದು ಸಾಲನ್ನು ಪ್ರಶ್ನಿಸಿದ್ದಿಲ್ಲ. (ಪ್ರಶ್ನೆ ಮಾಡಬಾರದು ಎಂಬುದು ನನ್ನ ನಿಲುವಲ್ಲ)
ಒಂದು ಲೇಖನದ ಕುರಿತು ಚಚರ್ೆ ನಡೆಯಬೇಕಾಗಿದ್ದರೆ, ಚಚರ್ೆ ಮಾಡುವ ವ್ಯಕ್ತಿಯ ನಿಲುವು ಮತ್ತು ಬದ್ದತೆ ಬಹಳ ಮುಖ್ಯವಾಗಿರುತ್ತದೆ. ಆದರೆ, ತಾವುಗಳು ಬರೆದಿರುವ "ದಿನೇಶ್ ಅಮೀನ್ಮಟ್ಟು ಹೇಳಿದ್ದು ಮತ್ತು ಹೇಳದೇ ಬಿಟ್ಟದ್ದು" ಎಂಬ ಶೀಷರ್ಿಕೆಯ ಲೇಖನದಲ್ಲಿ ನಿಮ್ಮ ನಿಲುವು ಮತ್ತು ಬದ್ದತೆ ಸ್ಪಷ್ಟವಾಗಿ ಕಾಣಲೇ ಇಲ್ಲ. ಅದೇ ಬೇಸರದ ಸಂಗತಿ.
ನಿಮಗನಿಸಿದ್ದನ್ನು ನೇರವಾಗಿ ಹೇಳಿದ್ದರೆ ನಡೆಯುತ್ತಿತ್ತು.. ಆದರೆ, ಇನ್ನೊಬ್ಬರ ಬರವಣಿಗೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗ್ರಹಿಸದೇ.. ಅವರು ಹೇಳದೇ ಬಿಟ್ಟದ್ದನ್ನು ನಾನು ಹೇಳುತ್ತೇನೆ ಎಂದು ಹೊರಡುವುದು ಉತ್ತಮ ಪತ್ರಕರ್ತರಿಗೆ ಶೋಭೆ ತರುವಂತಹದ್ದಲ್ಲ.
ಅಂತಹದೊಂದು ಪ್ರಯತ್ನವನ್ನು ನೀವು ಇಂದು ಮಾಡಲು ಹೋಗಿದ್ದೀರಿ.. ಖಟ್ಜುರವರು ಹೇಳಿದಂತೆ ಮಾನವ ಎಲ್ಲದರಲ್ಲಿಯೂ ಎಡವುತ್ತಾನೆ.. ಎಡವಿದ ನಂತರ ತಿದ್ದಿಕೊಂಡು ಹೋಗಬೇಕು.. ಇಲ್ಲವಾದಲ್ಲಿ ಅವರಿಗೂ ಸಮಾಜ ಒಂದು ಹಣೆಪಟ್ಟಿಯನ್ನು ಕಟ್ಟುತ್ತದೆ. ಅಂತಹ ಹಣಿಪಟ್ಟಿಯನ್ನು ಕಟ್ಟಿಕೊಂಡು ನೂರಾರು ಹೆಸರಾಂತ ಪತ್ರಕರ್ತರು ನಮ್ಮ ಮುಂದಿದ್ದಾರೆ.. ದಯಮಾಡಿ ನೀವುಗಳೂ ಅವರ ಸಾಲಿಗೆ ಸೇರಬೇಡಿರಿ..
ಇದು ನನ್ನ ಅಭಿಪ್ರಾಯವಷ್ಟೇ..
http://www.prajavani.net/web/include/story.php?news=51325§ion=4&menuid=10
ReplyDeleteಇಂದಿನ (22 nov 2011) ಪ್ರಜಾವಾಣಿ ಪತ್ರಿಕೆ ಯ ಪೇಜ್ ನಂ.10 ನಲ್ಲಿ ಕೊಟ್ಟಿರುವ ಅಶ್ಲೀಲ ಚಿತ್ರ ನೋಡಿ.. ಯಾಕೆ ಈಗೆ ಪ್ರಜಾವಾಣಿ? ಈ ರೀತಿ ಅಶ್ಲೀಲ ಚಿತ್ರ ಹಾಕಿ ಪ್ರಸಾರ ಹೆಚ್ಹಿಸಿಕೊಳ್ಳುವ ಹುನ್ನಾರವೇ?
ನಮಸ್ಕಾರ,
ReplyDeleteಸಂವೇದನಾಶೀಲ ಒಬ್ಬ ಪತ್ರಕರ್ತರು ಮಂಡಿಸಿದ ವಿಚಾರದ ಬಗ್ಗೆ ಚರ್ಚಾ ವೇದಿಕೆ ನಿರ್ಮಿಸಿದ ನಿಮಗೆ ಕೃತಜ್ಞತೆಗಳು. ಅಂದಹಾಗೆ ನೀವು ಹೇಳಿದಂತೆ ದಿನೇಶ್‌ಸರ್ ಯಾರನ್ನು ಮೆಚ್ಚಿಸಲು ಡಿಪ್ಲೊಮೆಟಿಕ್ ಆಗಿ ಬರೆಯಬೇಕಾಗಿದ್ದಿಲ್ಲ ಎಂಬುವುದು ನನ್ನ ವೈಯಕ್ತಿಕ ಸ್ಪಷ್ಟೀಕರಣ. ಆದರೆ, ಅವರು ಎತ್ತಿರುವ ಮಹತ್ವದ ವಿಷಯಗಳನ್ನು ಸಾರ್ವತ್ರಿಕ ಚರ್ಚೆಯ ವಿಷಯವನ್ನಾಗಿ ಮಾಡಿರುವ ನಿಮ್ಮ ಕಾಳಜಿ ಕೂಡ ಅತ್ಯಂತ ಸೂಕ್ಷ್ಮ ಹಾಗೂ ಜನಪರವಾದ ನಿಲುವು ಎನ್ನಲು ನನಗೆ ಯಾವುದೇ ಅನುಮಾನ ಇಲ್ಲ. ಆದರೆ, ಅನಾವರಣದಲ್ಲಿ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿ, ಅವನಿಗಿಂತ ದಡ್ಡನಾದ ಒಬ್ಬ ಪತ್ರಕರ್ತ ಸಾವಿರ ಪಾಲುವಾಸಿ ಎಂದು ಹೇಳಿದ್ದಾರೆ. ಅದು ಮುಖ್ಯವಾದ ಸಂಗತಿ. ಈ ಹಿಂದೊಮ್ಮೆ ಅದೇ ಅಂಕಣದಲ್ಲಿ ಕೇವಲ ಅಧಿಕಾರಶಾಹಿಗಳ ಸಂಪರ್ಕವೇ "ಪ್ರಕಾಂಡ ಪತ್ರಕರ್ತನ ಬಂಡವಾಳವಾಗುತ್ತಿದೆ" ಎಂಬ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದ್ದರು. ಅಂದರೆ ಇಲ್ಲಿ ಅವರ ದೃಷ್ಟಿಕೋನ ಕೇವಲ ’ಮಾಧ್ಯಮ ಭ್ರಷ್ಟಮುಕ್ತತೆಯತ್ತ’ ನೆಟ್ಟಿದೆಯೇ ವಿನಃ. ಬೇರೆಡೆ ಅಲ್ಲ ಎಂಬುದು ನನ್ನ ಅರಿವು.
ಅವರು ವಿಷಯ ಮಂಡನೆಯ ಸಂದರ್ಭದಲ್ಲಿ ವಾಚಾಳಿತನದಿಂದ ಕೆಲವೊಮ್ಮೆ ಗಂಭೀರ ವಿಷಯವೂ ಮುಚ್ಚಿಹೋಗಬಹುದು ಎಂಬ ಸಂದೇಹಾತ್ಮಕ ಅಂಶವನ್ನು ಎತ್ತುತ್ತಾರೆ. ಅದನ್ನು ಇಲ್ಲಿ ನಿವೃತ್ತ ಲೋಕಾಯುತ್ತರನ್ನು ಉದ್ದರಿಸಿ ಹೆಚ್ಚು ಮಾತನಾಡುವುದರಿಂದ ಮಾತಿನ ಮಹತ್ವವೇನು ಕಡಿಮೆ ಆಗುವುದಿಲ್ಲ ಎಂದು ನೀವು ಹೇಳಿದ್ದೀರಿ ಅದು ಕೂಡ ನಿಜ. ಹಾಗೆಯೇ ದಿನೇಶ್‌ಸರ್ ಹೇಳುವುದು ಅಷ್ಟೇ ಸತ್ಯ ಎನ್ನುವುದಕ್ಕೆ ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ, ಜನಾರ್ಧನ ಪೂಜಾರಿ ಅವರು ಎತ್ತುತ್ತಿದ್ದ ಸಮಸ್ಯೆಗಳು ಹೇಗೆ ಗಾಳಿಯಲ್ಲಿ ತೇಲಿ ಹೋಗುತ್ತಿದ್ದವು ಎನ್ನುವುದರಿಂದ ಗೊತ್ತಾಗುತ್ತದೆ. ಒಂದು ಕಾಲದಲ್ಲಿ ಯಡಿಯೂರಪ್ಪನವರ ಕಥೆಯೂ ಅದೇ ಆಗಿತ್ತು. ಅವರ ಅದೃಷ್ಟಕ್ಕೆ ಮುಖ್ಯಮಂತ್ರಿಯಾದಮೇಲೆ ವ್ಯವಸ್ಥಿತ ಜಾತಿಬಳಗ ಕಟ್ಟಿಕೊಂಡು ಅವರ ಮಾತಿಗೆ ಇನ್ನಿಲ್ಲದ ಮಾನ್ಯತೆಯನ್ನು ಸ್ವಯಂ ಸೃಷ್ಟಿಸಿಕೊಂಡರು ಇಲ್ಲದಿದ್ದರೇ ಅವರದೂ ಅದೆ ಕಥೆಯಾಗುತ್ತಿತ್ತು ಎನ್ನುವುದಕ್ಕೆ ಅವರ ಈ ಹಿಂದಿನ ರಾಜಕೀಯ ಇತಿಹಾಸ ಕೈಗನ್ನಡಿಯಾಗಬಹುದು. ಅದನ್ನು ನೋಡಿದರೆ ದಿನೇಶ್‌ಸರ್ ಅವರ ಮಾತು ಸುಳ್ಳಲ್ಲ. ಅಂದರೆ ಮನುಷ್ಯ ಎಷ್ಟೇ ವಿನೋದದ ಪವೃತ್ತಿ ಹೊಂದಿದ್ದರೂ ಸಾಂದರ್ಭಿಕ ಗಾಂಭಿರ್ಯ ಅನಿವಾರ್ಯ. ಅದಕ್ಕೆ ಮಾತು ಬೆಳ್ಳಿ ಮೌನ ಬಂಗಾರ ಎಂದು ಬಲ್ಲವರು ಹೇಳುತ್ತಾರೆ. ಅದಕ್ಕೆ (ಸಂಪಾದಕೀಯ) ನೀವು ಮಾತೆಂಬುದು ಜೋತಿರ್ಲಿಂಗ ಎಂದು ವಾದ ಮಂಡಿಸಬಹುದು. ಮಾತೇ ಮುಖ್ಯ ಎನ್ನಬಹುದು. ಜಗತ್ತಿನ ಇಂದಿನ ಬಹುತೇಕ ಎಲ್ಲ ಸಮಸ್ಯೆಗಳ ಮೂಲ "ಮಾತು" ಎನ್ನುವುದು ದಿನೇಶ್‌ಸರ್ ನಿಲುವು ಆಗಿದ್ದರೆ? ಹೀಗಾಗಿ ಅವರ ಆ ಮಾತು ಒಂದಿಷ್ಟು ಮಿತಿಯನ್ನು ಹೊಂದಿದ್ದರೂ, ಅವರ ವಿಚಾರ ಡಿಪ್ಲೊಮೆಟಿಕ್ ಎಂಬ ನಯವಾದ ಮಾತಿನಿಂದ "ಹೊಂದಾಣಿಕೆ"ಯ ಬರಹ ಎಂಬ ಒಗ್ಗರಣೆಯ ಆರೋಪವನ್ನು ನಾನು ಒಪ್ಪುವುದಿಲ್ಲ. ಪ್ರಮಾಣಿಕರಾದ ಅವರ ಪ್ರಾಮಾಣಿಕ ಕಾಳಜಿ ಮಾಧ್ಯಮದಲ್ಲಿ ಬೆಳೆದ ಕಳೆ ತೆಗೆದು ಕಳೆ ತರುವುದೇ ವಿನಃ ಮತ್ತೊಂದಲ್ಲ.
ಸಂಪಾದಕೀಯದಲ್ಲಿ ನೀವು ಎತ್ತಿರುವ ಪ್ರಶ್ನೆಗಳು ಹಾಗೂ ಅಮೀನ್ ಮತ್ತು ಹೇಳದೆ ಉಳಿದದ್ದು ಎಂದು ನೀವು ಸೇರಿಸಿದ್ದು ಸರಿಯಾಗಿಯೇ ಇದೆ. ಮಾಧ್ಯಮಗಳಿಗೆ ದೇಶದ ಹಾಗೂ ಸಾಮಾಜಿಕ ಹಿತದೃಷ್ಟಿಯಿಂದ ಕೆಲವೊಂದು ಬದ್ಧತೆಗಳನ್ನು ಕಡ್ಡಾಯವಾಗಿ ರೂಪಿಸಬೇಕಾಗಿರುವುದು ಅತ್ಯಂತ ಅಗತ್ಯ. ಇಲ್ಲದಿದ್ದರೆ ಮೂಗುದಾರ ಇಲ್ಲದ ಹೋರಿಯಂತೆ ಮಾರುಕಟ್ಟೆ ಶಕ್ತಿಗಳು ಹಾಗೂ ಬಂದವಳಗಾರರ ಹಿಡಿತದಲ್ಲಿರುವ ಮಾಧ್ಯಮಗಳು ಬೇಕಾಬಿಟ್ಟಿಯಾಗಿ ವರ್ತಿಸುವುದು ನಾವು ದಿನ ನಿತ್ಯ ಕಾಣುತ್ತಿರುವ ಸತ್ಯ. ಈ ಬಗ್ಗೆ ಲೋಕಪಾಲ್ ವಿಷಯದಲ್ಲಿ ಆದಂತೆ ದೇಶಾದ್ಯಂತ ಜನರ ಒತ್ತಾಯ ರೂಪುಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಈ ಕುರಿತು ಯಾವ ಪ್ರಗತಿಯೂ ಆಗಲಾರದು. ಇದಕ್ಕಾಗಿ ಪ್ರತ್ಯೇಕವಾದ, ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗ ಸ್ವಾಯತ್ತ ಸಂಸ್ಥೆಯೊಂದರ ಅವಶ್ಯಕತೆ ಇದೆ. ಈ ಬಗ್ಗೆ ಯೋಚನೆ ನಡೆಯಬೇಕಾಗಿದೆ. -ಆನಂದ ಪ್ರಸಾದ್
ReplyDeleteಕೆಲವು ಪತ್ರಕರ್ತರ ಮೇಲೆ ನಾವು ಅಪಾರವಾದ ವಿಶ್ವಾಸ ಹೊಂದಿದ್ದೆವು.ಇತ್ತೀಚಿನ ಬೆಳವಣಿಗೆ ನೋಡಿದರೆ ಆ ವಿಶ್ವಾಸವೆಲ್ಲಾ ನೀರು ಪಾಲಾಗಿದೆ.ಒಂದಲ್ಲಾ ಒಂದು ದಿನ ಈ ಬ್ರಷ್ಟ ಪತ್ರಕರ್ತರು ತಕ್ಕ ಪಾಠ ಕಲಿತೇ ಕಲಿಯುತ್ತಾರೆ.....
ReplyDeleteಭ್ರಷ್ಟ ಪತ್ರಕರ್ತರನ್ನು ಶಿಕ್ಷಿಸುವ ಆಯುಧ ಓದುಗರ ಕೈಯಲ್ಲಿಯೇ ಇದೆ. ಅದನ್ನು ಅವರು ಬಳಸಬೇಕು.ಸಮಾಜದಲ್ಲಿ ಗಣ್ಯರೆನಿಸಿಕೊಂಡವರು, ಬುದ್ದಿಜೀವಿಗಳು ಮತ್ತು ಸಾಹಿತಿಗಳು ಈ ಬಗ್ಗೆ ಸ್ಪಷ್ಟ ನಿಲುವು ತಳೆಯದೆ ಇರುವುದು ವಿಷಾದನೀಯ. ಆರೋಪಕ್ಕೊಳಗಾಗಿರುವ ಪತ್ರಕರ್ತರಿಂದಲೇ ಸಾರ್ವಜನಿಕ ಸಮಾರಂಭಗಳಲ್ಲಿ, ಸಮ್ಮೆಳನಗಳಲ್ಲಿ, ವಿಚಾರಸಂಕಿರಣಗಳಲ್ಲಿ ಭಾಷಣ ಕೊಡಿಸುವುದು, ಪುಸ್ತಕ ಬಿಡುಗಡೆ ಮಾಡಿಸುವುದು, ಟಿವಿ ಸೀರಿಯಲ್‌ಗಳಲ್ಲಿ ಪಾತ್ರ ಮಾಡಿಸುವುದು ನಡೆಯುತ್ತಲೇ ಇದೆ.ಮೊದಲು ಗಣ್ಯರೆನಿಸಿಕೊಂಡವರು, ಸಾಹಿತಿಗಳು, ಬುದ್ದಿಜೀವಿಗಳು ಜಾತಿ-ಧರ್ಮ ಮೀರಿ ಸರಿ-ತಪ್ಪು, ನ್ಯಾಯ-ಅನ್ಯಾಯಗಳ ವಿಮರ್ಶೆ ಮಾಡಿದರೆ ಸಮಾಜ ಸ್ವಲ್ಪ ಮಟ್ಟಿಗೆ ಸರಿಹೋಗಬಹುದೇನೋ?
ReplyDeleteಸಂಪಾ ದಕಿಯ ದವರಿಗೆ ಈಗ ಮಡೆಸ್ನಾನ ದ ವಸ್ತು ಸ್ಥಿತಿ ಯ ಅರಿವು ಆಗಿರಬಹುದು ಎಂದು ಭಾವಿಸುತ್ತೇನೆ. ನಂಬಿಕೆ ಎನ್ನುವುದು ಯಾರೊಬ್ಬನ, ಅಥವಾ ಯಾರಪ್ಪನ ಸ್ವತ್ತೂ ಅಲ್ಲ. ಅದನ್ನ ಬಲವಂತ ವಾಗಿ ಇನ್ನೊಬ್ಬರ ಮೇಲೆ ಹೇರುವುದೂ ಸಾಧ್ಯವಿಲ್ಲ. ಹಾಗೇ ಅದರಿಂದ ಕಳಚಿಸುವುದು ಕೂಡ ಸಾಧ್ಯವಿಲ್ಲ. ಅದು ಮೂಢ ನಂಬಿಕೆ ಯೋ , ಪ್ರಬುದ್ಧ ಮನಸ್ಸಿನ ನಂಬಿಕೆ ಯೋ ಅವರವರಿಗೆ ಬಿಟ್ಟದ್ದು. ನಮಗೆ ಮೌಡ್ಯ ಅನಿಸಿದ್ದು, ಬೇರೆಯವರಿಗೆ ಸತ್ಯ ದಷ್ಟೇ ಹರಿತವಾದ ನಂಬಿಕೆ ಯಾಗಿರಬಹುದು. ಅಂದ ಮಾತ್ರಕ್ಕೆ ಅದು ಬಲವಂತ ವಾಗಿ ಹೇರಲ್ಪಟ್ಟ ಆಚರಣೆ, ನಂಬಿಕೆ ಎಂದು ಭಾವಿಸುವುದು ನಮ್ಮ ಅಪ್ರಬ್ಬುದ್ಧತೆ ಯನ್ನು ಸೂಚಿಸುತ್ತದೆ. ನಮ್ಮ ದೇಶ , ಅದರ ಇತಿಹಾಸ ಅಷ್ಟು ಸರಳ ವಾದುದಲ್ಲ. ಇಲ್ಲಿ ಅನಾದಿ ಕಾಲ ದಿಂದಲೂ ಎಲ್ಲದರ ಬಗ್ಗೆ ಜಿಜ್ಞಾಸೆ ನಡೆದಿದೆ. ಬೇರೆ ಧ್ಹರ್ಮ ಗಳಲ್ಲಿ ಇರುವಂತೆ, "ಇವನೇ ಒಬ್ಬನೇ ನಮ್ಮ ದೇವರು" ಎಂಬಂತಹ ನಂಬಿಕೆ ಯೇ ನಮ್ಮಲ್ಲ್ಲಿ ಯಶಸ್ಸು ಕಂಡಿಲ್ಲ. ಅಷ್ಟರ ಮಟ್ಟಿಗೆ ಎಲ್ಲ ವಿಚಾರಗಳಲ್ಲಿ ಜಿಜ್ಞಾಸೆ ನಡೆದಿದೆ. ನಂಬಿಕೆ ಗೆ ಸಂಭಂದಿಸಿದಂತೆ ಯಾವುದನ್ನೂ, ಎಲ್ಲೂ ಹೇರಲು ಸಾಧ್ಯ ವಾಗಿಲ್ಲ. ಅದನ್ನು ನಮ್ಮ ಇತಿಹಾಸವೇ ಸ್ಪಷ್ಟ ವಾಗಿ ಹೇಳುತ್ತದೆ.
ReplyDeleteಸಂಪಾದಕೀಯ ಇನ್ನಾದರೂ ಇಂತಹ ಅನಾರೋಗ್ಯ ಕರ ಮನಸ್ಸನ್ನು ದೂರ ಇಟ್ಟು ನಿಜವಾದ ಸಮಸ್ಯೆ ಗಳ ಬಗ್ಗೆ ಬರೆಯುವುದು ಒಳಿತು. ಇತ್ತೀಚಿಗೆ ತುಮಕೂರ್ ಜಿಲ್ಲೆ ಯ ಶಿರ ತಾಲೂಕಿನಲ್ಲಿ, ಒಂದು ತಿಂಗಳ ಅವಧಿಯಲ್ಲಿ ೮-೧೦ ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡು ಸತ್ತರಂತೆ. E -TV ಕನ್ನಡ ದ ವಾರ್ತೆ ಯನ್ನು ಬಿಟ್ಟು ಬೇರೆ ಯಾವುದೇ ಸುದ್ದಿ ವಾಹಿನಿ ಗಳು ಇದನ್ನು ಪ್ರಸಾರ ಮಾಡಲಿಲ್ಲ. ಇದು ನಮ್ಮ ದುರಂತ. ಇದರ ಬಗ್ಗೆ ಬರೆಯಿರಿ ಸಂಪದಕಿಯದವರೇ.
ಜೀವ ಇಲ್ಲದ , ಆಕಾರ ಇಲ್ಲದ , ವ್ಯಕ್ತಿ ಇಂದ ವ್ಯಕ್ತಿ ಗೆ ಬದಲಾಗುವ ನಂಬಿಕೆ ಗಳಿಗಿಂತ , ಜೀವ ಇರುವ , ನಮಗೆ ಅನ್ನ ನೀಡುವ ರೈತ ಮುಖ್ಯನಾಗುತ್ತಾನೆ.