Friday, November 4, 2011

ಮಾಧ್ಯಮ ವೃತ್ತಿ ತೊರೆಯಲು ಹೊರಟ ಹುಡುಗನ ಅಂತರಾಳದ ಮಾತುಗಳು...


ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಘೋಷಣೆಯಾಗಿವೆ. ಗೆಳೆಯರೊಬ್ಬರು ಮೇಲ್ ಮಾಡಿದ್ದಾರೆ. ಪ್ರಶಸ್ತಿ ಪಡೆದವರೊಬ್ಬರು ತಮ್ಮ ಸಂಪಾದಕರಿಗೆ ಕಾಲಿಗೆ ಬೀಳಲು ಪ್ರಯತ್ನಿಸುವ ದೃಶ್ಯವೊಂದು ಟಿವಿ ಚಾನಲ್‌ನಲ್ಲಿ ಪ್ರಸಾರವಾಗಿದೆ. ಪತ್ರಿಕೋದ್ಯಮವೂ ಮಠ-ಮಾನ್ಯವಾಗಿ ಹೋಯ್ತಾ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಏನುತ್ತರ ಕೊಡೋದು, ನೀವೇ ಹೇಳಿ.


ಇರ್ಷಾದ್
ಮತ್ತೊಬ್ಬ ಗೆಳೆಯರು ಇರ್ಷಾದ್ ಎಂ. ವೇಣೂರು ಅವರ ಬ್ಲಾಗ್ ಲಿಂಕ್ ಕಳಿಸಿದ್ದಾರೆ. ಇರ್ಷಾದ್ ಹೆಸರು ನೀವು ಕೇಳಿರಬಹುದು. ಪತ್ರಿಕೋದ್ಯಮ ವಿದ್ಯಾರ್ಥಿ. ಇಂಚರ ಎಂಬ ಬ್ಲಾಗ್ ಮೂಲಕ ಬ್ಲಾಗಿಗರಿಗೆ ಪರಿಚಿತರು. ಪತ್ರಿಕೋದ್ಯಮ ಕ್ಷೇತ್ರ ಬಿಡೋಣ ಅಂತಿದ್ದೀನಿ ಎಂದು ಅವರೊಂದು ಲೇಖನ ಬರೆದಿದ್ದಾರೆ. ಆದರ್ಶದ ಕನಸು ಹೊತ್ತ ಹೊಸ ಹುಡುಗ ಹುಡುಗಿಯರಿಗೆ ಮಾಧ್ಯಮ ಕ್ಷೇತ್ರ ಎಷ್ಟು ನಿರಾಶೆ ಮೂಡಿಸುತ್ತಿದೆ ಎನ್ನುವುದಕ್ಕೆ ಈ ಲೇಖನ ಸಾಕ್ಷಿ. ಇರ್ಷಾದ್ ತಮ್ಮ ನಿಲುವು ಬದಲಿಸಲಿ. ಅವರೇ ಹೇಳಿರುವಂತೆ ಮಾಧ್ಯಮಕ್ಷೇತ್ರ ಇಡಿಇಡಿಯಾಗೇನೂ ಕೆಟ್ಟಿಲ್ಲ. ನಿರಾಶೆ ಬೇಡ, ಹತಾಶೆ ಬೇಡ ಎಂಬುದು ನಮ್ಮ ಸಲಹೆ.


-ಸಂಪಾದಕೀಯ.

ಬಹಳ ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. ನನಗಿನ್ನೂ ನನ್ನ ಪ್ರೌಢ ಶಿಕ್ಷಣದ ದಿನಗಳು ನೆನಪಾಗುತ್ತವೆ. ನನ್ನ ಒಬ್ಬ ಪರ್ತಕರ್ತ ಸ್ನೇಹಿತನನ್ನು ಮೆಚ್ಚಿಕೊಂಡು ಈ ಬದುಕಿನಲ್ಲಿ ಏನಾದರೂ ಮಾಡಬೇಕೂಂತ ಮರುದಿನವೇ ನಾನೊಬ್ಬ ಪರ್ತಕರ್ತನಾಗುತ್ತೇನೆ ಎಂಬ ನಿರ್ಣಯ ಮಾಡಿದವನು ನಾನು. ಅಪ್ಪ ಅಮ್ಮನ ಬೈಗುಳಗಳ ಸುರಿಮಳೆ ಸಹಿಸಿಕೊಂಡು ಎಸ್‌ಎಸ್‌ಎಲ್‌ಸಿ ಬಳಿಕ ಸೈನ್ಸ್ ತೆಗೆದುಕೊಳ್ಳುವ ಅರ್ಹತೆ ಇದ್ದರೂ ಆರ್ಟ್ಸ್ ತೆಗೆದುಕೊಂಡೆ. ಬರವಣಿಗೆಯನ್ನೂ ಶುರು ಹಚ್ಚಿಕೊಂಡಿದ್ದೆ ಪ್ರಜಾವಾಣಿಯ ಮುಖಾಂತರ.

ಪದವಿಗೆ ಬಂದಾಗ ಬರವಣಿಗೆಯ ಹಸಿವು ಹೆಚ್ಚಾಯಿತು. ನನ್ನ ಹೆಸರು ಎಲ್ಲೋ ಓದಿದ್ದೇನೆ ಎಂಬ ಪ್ರತಿಕ್ರಿಯೆ ಕಂಡವರಿಂದ ಬರುವ ಮಟ್ಟಿಗೆ ನನ್ನ ಗುರುತು ಸಿಕ್ಕಿತ್ತು. ನನ್ನ ಪತ್ರಿಕೋದ್ಯಮದ ತುಡಿತವೂ ಹೆಚ್ಚಾಯಿತು. ರಜೆ ದಿನವೂ ಫೀಲ್ಡ್‌ಗಿಳಿಯುತ್ತಿದ್ದೆ. ನನ್ನ ಕ್ಯಾಮರಾ ಹಿಡಿದುಕೊಂಡು ಬೈಕ್ ಏರಿ ಹೊರಟೆನೆಂದರೆ ಹೊತ್ತು - ಊಟ ಯಾವುದರ ಪರಿವೆ ಇಲ್ಲದೆ ಸಮಾಜದ ಜೊತೆ ಬೆರೀತಿದ್ದೆ. ಸ್ಪೆಷಲ್ ಫೀಚರ್ ಸ್ಟೋರಿಗಳನ್ನು ಮಾಡುತ್ತಿದ್ದೆ. ಮಾನವೀಯ ದೃಷ್ಟಿಯಲ್ಲಿ ಹಲವರ ನೋವಿಗೆ ಕಿವಿಯಾಗುತ್ತಿದ್ದೆ. ಪದವಿಯ ದಿನದಲ್ಲೇ ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಬರವಣಿಗೆ - ಪತ್ರಿಕೋದ್ಯಮ - ಛಾಯಾಗ್ರಹಣ ಕುರಿತಾದ ಪಾಠ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ನಾನು ಸುವರ್ಣಾವಕಾಶ ಎಂದು ಸ್ಟೂಡೆಂಟ್ ರಿಪೋರ್ಟರ್ ಆಗಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶಿದ್ದೆ.

ಪತ್ರಿಕೋದ್ಯಮ ಎಂದರೆ ಏನು ಎಂದು ನನಗೆ ೯೯% ತಿಳಿದದ್ದು ಅಲ್ಲೇ. ಇಂಥಾ ಕಚ್ಡಾ ಕ್ಷೇತ್ರಕ್ಕೆ ನಾನು ಬಂದೆನಾ ಎಂಬ ಪಾಪ ಪ್ರಜ್ಞೆ ಕಾಡಿದ ಮೊದಲ ದಿನವದು. ಬಕೆಟ್ ಹಿಡಿದವನೇ ಅಲ್ಲಿ ಬಾಸು. ನಿಯತ್ತಿಂದ ಕೆಲಸ ಮಾಡುವವನು ಕಾಲಡಿಯ ಕಸ. ಎಲ್ಲರನ್ನೂ ಚೆನ್ನಾಗಿಟ್ಟುಕೊಂಡರೆ ಮಾತ್ರ ಅಲ್ಲಿರಬಹುದು. ಎಲ್ಲರ ಸಹಕಾರವೂ ಇರುತ್ತದೆ. ನೀಯತ್ತು - ನೀತಿ ಎಂದೆಲ್ಲಾ ಒನ್ ಮ್ಯಾನ್ ಆರ್ಮಿ ಆಗಹೊರಟರೆ ನಮಗೇ ಗುಂಡಿ ತೋಡುವ ಜನ! ಎಲ್ಲಾ ಬಿಟ್ಟು ರಿಯಾಲಿಟೀ ಶೋ ಎಂದು ಮಾಡಿ, ಬಹುಮಾನದ ಹಣ ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಊರಿಗೆ ಬಸ್ ಹತ್ತಿಸುವ ಜನಾನೇ ಅಲ್ಲಿರುವವರು. ಎಲ್ಲಾ ತಿಳಿದಾಗ ನಾನು ಅಲ್ಲಿಂದ ಹೊರಬಂದಿದ್ದೆ. ಜಾಬ್ ಆಫರ್ ಕೊಡುತ್ತೇವೆ ಎಂಬ ಆಫರ್ ಬಿಟ್ಟು.

ಮೊನ್ನೆ ಅಡ್ವಾಣಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಭೂಪಾಲದಲ್ಲಿ ಯಾತ್ರೆಯ ಪ್ರಚಾರಕ್ಕೆ ಬಿಜೆಪಿ ಸಂಸದ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರಿಗೆ ನೋಟು ನೀಡಿದ ವಿಚಾರ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಗಿಯೂ ಪ್ರಚಾರವಾಗಲಿಲ್ಲ. ಅದೇ ವರದಿ ಹಿಂದೂ ಪತ್ರಿಕೆಯಲ್ಲಿ ಲೀಡ್ ನ್ಯೂಸ್ ಆಗಿ ಓದಲು ಸಹಕಾರಿಯಾಯ್ತು. ಹಾಗಾದರೆ ಸಾಮಾನ್ಯ ಜನರಿಗೆ ವರದಿ ಮುಟ್ಟಿಸಬೇಕಾದ ಪರ್ತಕರ್ತರು ಮುಚ್ಚಿಹಾಕುವ ಕೆಲಸಕ್ಕಿಳಿದರೆ ಯಾಕೆ ಬೇಕು ಈ ಕ್ಷೇತ್ರ?

ಲಂಚಗುಳಿತನ ಪತ್ರಿಕೋದ್ಯಮಕ್ಕೂ ಆವರಿಸಿರುವಾಗ ಅಣ್ಣಾ ಹಜಾರೆಯನ್ನು ಬೆಂಬಲಿಸಿ ಬರೆಯುವ ಯಾವ ನೈತಿಕತೆ ನಮ್ಮಲ್ಲಿದೆ. ರಾಜಾ ಹಗರಣ ಬಯಲಿಗೆಳೆದಂತೆ ನಮ್ಮ ಪ್ರತಿಷ್ಠಿತ ಫಿಕ್ಸ್ ಆಗಿರುವ ಪರ್ತಕರ್ತರ ಹಗರಣ ಬಯಲುಗೊಂಡರೆ ಹೇಗಾಗಬಹುದು ನಮ್ಮ ಸ್ಥಿತಿ. ಬಹುಶಃ ರಸ್ತೆ ಮಧ್ಯ ನಿಲ್ಲಿಸಿ ಬೆತ್ತಲು ಜಗತ್ತು ತೋರಿಸಿದಂತಾಗಬಹುದು! ಹಲವು ವರ್ಷಗಳಿಂದ ನಾನು ವಸ್ತುನಿಷ್ಠ ಸುದ್ದಿ ಪತ್ರಿಕೆ ಎಂದು ಕನ್ನಡದ ಪತ್ರಿಕೆಯೊಂದನ್ನು ಓದುತ್ತಿದ್ದೆ. ಆದರೆ ಆ ಪತ್ರಿಕೆಗೆ ಪತ್ರಿಕಾವಲಯದ ಆಪರೇಷನ್ ಕಮಲ ಆದ ನಂತರ ಓದಿ ಓದಿ ಬೇಸತ್ತು ಹೋಗಿತ್ತು. ಮೊನ್ನೆ ಹೋಗಿ ಏಜಂಟನಿಗೆ ಒಂದೇ ಪತ್ರಿಕೆ ಸಾಕು. ಎರಡು ಬೇಡ ಎಂದು ಹೇಳಿ ಬಂದೆ.

ರಾಜಕಾರಣಿ ಹೇಳಿದ್ದನ್ನು ಪರ್ತಕರ್ತ ಕೇಳುವುದಾದರೆ, ಅವರನ್ನು ಕೇಳಿ ಬರೆಯುವುದಾದರೆ ಯಾವ ಕರ್ಮಕ್ಕೆ ಈ ಪ್ರೆಸ್ ಕಾರ್ಡ್. ಪರ್ತಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸಬೇಕಾದ ಪ್ರೆಸ್‌ಕ್ಲಬ್‌ಗಳು ಪರ್ತಕರ್ತನಿಗೆ ಅನ್ಯಾಯವಾಗುವಾಗ ಬಾಯಿ ಮುಚ್ಚಿ ಬಾಗಿಲು ಹಾಕಿಕೊಳ್ಳುವುದಾದರೆ ಯಾಕೆ ಬೇಕು ಆ ಕ್ಲಬ್‌ಗಳು. ಕೇಳಲು ಪ್ರಶ್ನೆಗಳು ಬಹಳ ಇದೆ. ಆದರೆ ಉತ್ತರಿಸುವ ತಾಕತ್ತು ಯಾರಲ್ಲಿದೆ?

ನನ್ನೂರಿನ ಹತ್ತಿರ ಒಂದು ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆ ಇದೆ. ಆ ಸಂಸ್ಥೆಯ ಮುಖ್ಯಸ್ಥ ಮಾಡುತ್ತಿರುವು ಅನಾಚಾರಗಳನ್ನೇ. ಆ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗೆ ಏನೋ ಸಮಸ್ಯೆಯಿಂದ ಕಾಲೇಜು ಬದಲಾಯಿಸಬೇಕಾಗಿ ಬಂದರೆ ಟಿ.ಸಿ ಬೇಕಾದರೆ ಮುಂದಿನ ಎರಡೂ ವರ್ಷಗಳ ಫೀಸು ಭರಿಸಬೇಕು. ಹಾಗಾದರೆ ಮಾತ್ರ ಟಿ.ಸಿ. ಸಿಗುತ್ತದೆ. ಇಲ್ಲದಿದ್ದರೆ ಹಳೆ ಗಂಡನ ಪಾದವೇ ಗತಿ. ಎಷ್ಟೇ ಕಷ್ಟವಾದರೂ ಕೂಡ. ಮಂಗಳೂರಿನ ಎಸ್‌ಇಝೆಡ್ ಗೆ ಆ ಸಂಸ್ಥೆಯ ಮುಖ್ಯಸ್ಥ ಪರವಾಗಿದ್ದಾಗ ಸಂತ್ರಸ್ತ ಜನರು ಪತ್ರಿಕಾಗೋಷ್ಠಿ ಆಯೋಸಿದ್ದರು. ನಾನು ಇಂಟರ್ನ್‌ಶಿಪ್ ಮಾಡುತ್ತಿದ್ದಾಗಿನ ಘಟನೆ ಅದು. ನಾನು ಅದನ್ನು ವರದಿ ಮಾಡಿ ನನ್ನ ಚೀಫ್‌ಗೆ ನೀಡಿದಾಗ ಆತ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದ. ಅವರ ಬಗ್ಗೆ ವರದಿ ಬರಿಬೇಡಿ, ಅದು ನಮ್ಮ ಜಾಹಿರಾತು ಪಾರ್ಟಿ ಎಂಬ ತಾಕೀತು ಬೇರೆ! ಅಷ್ಟೇ ಏಕೆ ಆ ಕಾಲೇಜಿನಲ್ಲಿ ದುರ್ಘಟನೆ ನಡೆದ ವರದಿಗಳು ತನ್ನನ್ನೇ ಮಾರಿಕೊಂಡ ಆ ಪತ್ರಿಕೆಯಲ್ಲಿ ಇಂದಿಗೂ ...... ಸಮೀಪದ ಖಾಸಗಿ ಕಾಲೇಜು ಎಂಬ ಲೀಡ್ನಲ್ಲಿ ಪ್ರಕಟಗೊಳ್ಳುತ್ತದೆ. ಪತ್ರಿಕೆಯ ಜೊತೆ ಹಾಗೆ ಬರೆಯಲಿಕ್ಕೆ ಅವನಿಗೂ ಜಾಹಿರಾತು ಸಿಗುತ್ತದೆ! ಇದು ವಸ್ತುನಿಷ್ಠ ಪತ್ರಿಕೋದ್ಯಮ!

ಹಾಗಂತ ಪತ್ರಿಕೋದ್ಯಮ ಸಂಪೂರ್ಣ ಕೊಳೆತು ನಾರುತ್ತಿದೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಪತ್ರಿಕೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದೆ. ಅಷ್ಟೇ ಸಂತೃಪ್ತಿಯಿಂದ ಅವರ ಹೊಟ್ಟೆ ತುಂಬಿಸುತ್ತಿದೆ.

ಒಮ್ಮೊಮ್ಮೆ ನನಗೆ ನನ್ನ ಮೇಲೆನೇ ಬೇಜಾರು ಬಂದು ಬಿಡುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಇಂದಿಗೂ ಇಲ್ಲಿ ನೀವು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದೆಲ್ಲಾ ಭರವಸೆ ಆಸೆ ಆಂಕಾಂಕ್ಷೆ, ಕನಸುಗಳನ್ನು ತುಂಬುತ್ತಿದ್ದೇನೆ. ನನ್ನ ಕೆಲವೊಂದು ಅನುಭವಗಳನ್ನು ಅವರ ಮುಂದಿಡುತ್ತೇನೆ. ಅವರು ಅದನ್ನು ಚೆನ್ನಾಗಿ ನಂಬಿ ನನ್ನನ್ನೇ ರೋಲ್ ಮಾಡೆಲ್ ಎಂದು ಭಾವಿಸುತ್ತಿದ್ದಾರೆ. ಆದರೆ ಬಾಯಿಯ ಒಳಗಿರುವುದು ಹುಳುಕು ಎಂಬ ಸತ್ಯ ಅವರಿಗೆ ಹೇಳಬೇಕೆಂದು ಮನಸು ಬಯಸುತ್ತೆ. ಕೂಡಲೇ ಸುಮ್ಮನಾಗುತ್ತದೆ.

ನನ್ನದೀಗ ಸ್ನಾತಕೋತ್ತರ ಪದವಿ ಶಿಕ್ಷಣ. ಅದೂ ಪತ್ರಿಕೋದ್ಯಮದಲ್ಲೇ. ಮಳೆ ನಿಂತು ಹೋದ ಮೇಲೆ ಎಂಬಂತೆ ಈಗ ನನಗಾಗಿರುವುದು ಜ್ಞಾನೋದಯಾನೋ ಅಥವಾ ವೈರಾಗ್ಯನೋ ಅಂತ ನನಗೆ ಮಾತ್ರ ಗೊತ್ತಿಲ್ಲ. ಹಾಗಂತ ಇನ್ನೇನೂ ಮಾಡೋಕಾಗಲ್ಲ ಅಂತಾನೂ ಗೊತ್ತು. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. ಫ್ರೀಲಾನ್ಸರ್ ಆಗುತ್ತೇನೆ. ಜೊತೆಗೆ ನಾಳೆ ಪಾಠ ಮಾಡುವ ಅವಕಾಶ ಬಂದರೆ ಮತ್ತೆ ನನ್ನ ವಿದ್ಯಾರ್ಥಿಗಳಲ್ಲಿ ಆಸೆಯ ಬೀಜ ಬಿತ್ತುತ್ತೇನೆ. ಎಷ್ಟಾದರೂ ಇದು ಮುಖವಾಡದ ಬದುಕು ಅಲ್ವಾ?

29 comments:

  1. ಇರ್ಷಾದ್ ಇಷ್ಟೆಲ್ಲಾ ಮಾತುಗಳನ್ನು ವೈಯಕ್ತಿಕವಾಗಿ ಬರೆದಿರಬಹುದು. ಆದರೆ ಅದಕ್ಕೂ ಮುನ್ನ ಒಂದು ಮಾತು. ಮಾಧ್ಯಮ ಸರಿಯಾಗಿದೆ ಎಂದು ನಾನು ಹೇಳುತಿಲ್ಲ. ನನ್ನ ಕ್ಲಾಸ್ಮೇಟಾಗಿದ್ದ ಇರ್ಷಾದ್ ನೀವು ಪಿಯುಸಿ-ಡಿಗ್ರಿಗೆ ಬಂದ ಆರಂಭದಲ್ಲಿ ಹೇಗಿದ್ರಿ ಎಂಬುವುದನ್ನು ಒಮ್ಮೆ ಯೋಚಿಸಿ. ನಿಮಗೂ ನಿಮ್ಮ ಒಣ ಪ್ರತಿಷ್ಠೆ ಅಷ್ಠೇ ಬೇಕು. ನಿಮ್ಮನ್ನು ಹೊಗಳದರೆ ಅವರ ಜೊತೆ ನೀವು ಮಾತನಾಡುತ್ತೀರಿ. ನೆಗ್ಲೆಕ್ಟ್ ಮಾಡಿದ್ರೆ.... ಸುವರ್ಣ ನ್ಯೂಸ್ ನ ಸ್ಟೂಡೆಂಟ್ ರಿಪೋರ್ಟರ್ ಗೆ ನೀವು ಹೋದ ಮೊದಲ ದಿನ ಅಲ್ಲಿನ ಕಚ್ಡಾ ಗೊತ್ತಾಗಿದ್ರೆ ನೀವು ಸಾಚಾ ಆಗಿದ್ರೆ ಅವತ್ತೇ ನೀವು ಬಿಟ್ಟು ಬರಬಹುದಿತ್ತು ಅಲ್ವಾ. ನೀವು ಸಾಫ್ ಆಗಿರ್ತಾ ಇದ್ರಿ. ನೀವು ಗೆಲ್ಲುತ್ತೀರಿ ಎನ್ನುವ ನಿಮ್ಮ ಓವರ್ ಕಾನ್ಫಿಡೆಂಟ್ಸ್ ಬರ್ಲಿಕ್ಕೆ ಬಿಡಲಿಲ್ಲ.
    ಕೆಲ ಸುದ್ದಿಗಳು ಮಿಸ್ ಆಗಬಹುದು. ಕನ್ನಡದಲ್ಲಿ ಯಾವ ಪತ್ರಿಕೆಗಳು ರಾಷ್ಟ್ರಮಟ್ಟದಲ್ಲಿ ಇಲ್ಲ. ಭೋಪಾಲ್ ನ ಸುದ್ದಿ ಹಿಂದೂ ಪತ್ರಿಕೆಯಲ್ಲಿ ಬಂದರೆ ಅದರಲ್ಲೇನೂ ವಿಶೇಷ ಇಲ್ಲ. ಯಾಕೆಂದರೆ ಅದು ರಾಷ್ಟ್ರೀಯ ಪತ್ರಿಕೆ ಎಲ್ಲಾ ಸುದ್ದಿಗಳನ್ನು ಪ್ರಕಟಿಸುತ್ತವೆ. ಕನ್ನಡ ಪತ್ರಿಕೆಯಲ್ಲಿರುವ ಸ್ಥಳಾವಕಾಶವನ್ನು ನೋಡಿ ಸುದ್ದಿ ಪ್ರಕಟಿಸಲಾಗುತ್ತದೆ. ಇನ್ನು ಜಾಹೀರಾತು. ನೀವು ಕೇಳುವ ಐದಂಕಿ ಸಂಬಳವನ್ನು ತಿಂಗಳು ತಿಂಗಳು ಎಣಿಸಲು ಯಾವ ಪತ್ರಿಕೆಯ ಮಾಲಕನೂ ದುಡ್ಡಿನ ಗಿಡ ನೆಟ್ಟಿಲ್ಲ ಎನ್ನುವುದನ್ನು ನೀವು ಯೋಚಿಸಲೇ ಬೇಕು. ಒಂದು ಪತ್ರಿಕೆಯ ಮೇಲೆ ಮುದ್ರಣದಿಂದ ಹಿಡಿದು ಅದರ ಪ್ರಸರಣದ ವರಗೆ ಎಷ್ಟು ವೆಚ್ಚವಾಗುತ್ತದೆ ಎನ್ನುವದನ್ನು ತರಗತಿಯಲ್ಲಿ ಹೇಳಿದ್ದಾರೆ ಎಂದುಕೊಂಡಿದ್ದೇನೆ. ಅಷ್ಟಾದ ಮೇಲೂ ನೀವು ಜಾಹೀರಾತು ಹಾಕುವುದು ತಪ್ಪು ಅಂತ ಹೇಳುವುದಾದರೆ ಅದನ್ನು ದಡ್ಡತನ ಅನ್ನಬೇಕೋ ಅಥವಾ ಅತೀ ಬುದ್ದಿವಂತಿಕೆ ಎನ್ನಬೇಕೋ ತಿಳಿಯದು. ನೀವು ಲೆಕ್ಚರರ್ ಆಗಿ ನಿಮ್ಮ ವಿದ್ಯಾರ್ಥಿಗಳಿಗೆ ತಿಳಿಸುವುದಾದರೂ ಏನೂ? ನಿಮಗೆ ಅಷ್ಟೂ ಕೆಟ್ಟ ಭಾವನೆ, ವೈರಾಗ್ಯ ಪತ್ರಿಕೋದ್ಯಮದಲ್ಲಿದ್ದರೆ, ಅಲ್ಲಿರುವ ಸತ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ... ಅದನ್ನು ಮುಚ್ಚಿಡುವ ಪ್ರಯತ್ನ ಬೇಕಿಲ್ಲ. ಹೇಡಿಯಾಗೆ ಪಲಾಯನ ಮಾಡುವ ಬದಲು ಅಲ್ಲಿದ್ದು ಜಯಿಸಲು ಪ್ರಯತ್ನಿಸಿ....

    ReplyDelete
  2. ಅದು ೨೦೦೬ ಅಂದುಕೊಳ್ಳುತ್ತೇನೆ ನಾನು ನಿನಾಸಂ ಸಂಸ್ಕೃತಿ ಶಿಬಿರಕ್ಕೆ ಹೋದಾಗ ಇರ್ಷಾದ್ ತನ್ನ ಗೆಳೆಯರೊಂದಿಗೆ ಬಂದಿದ್ದರು. ಅಗಲೇ ಪತ್ರಿಕೊಧ್ಯಮದ ಕುರಿತು ತುಂಬಾ ಕಾಳಜಿ ಮತ್ತು ಆಸಕ್ತಿ ಹೊಂದಿದ್ಧು ಗುರುತಿಸಿದ್ದೆ ಅ ನಂತೆರ ಒಮ್ಮೆ ಕರೆ ಮಾಡಿ ನಮ್ಮ ಕಾಲೇಜಿನಲ್ಲಿ ಒಂದು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿ ಪತ್ರಿಕೆ ಕಳಿಸಿದ್ದರು. ಆ ನಂತರ ನಾನು ಅವರನ್ನು ನೊಡಿದ್ದು ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲೆ. ಇಂದು ಅಂತಹ ಉತ್ಸಾಹದ ಹುಡುಗ ಪತ್ರಿಕೊಧ್ಯಮದ ಕುರಿತು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ನಿಜವಾಗಿಯು ಕಳವಳ ಉಂಟು ಮಾಡುತ್ತವೆ. ಅದರೆ ಅವರಿಗೆ ನಾನು ಹೇಳುವ ಮಾತು ಎಂದರೆ ಒಂದೇ ದಿನದಲ್ಲಿ ಎಲ್ಲವು ಬದಲಾಗುವುದಿಲ್ಲ ನಿಮ್ಮಂತಹವರು ನೋವುಗಳನ್ನು ಸಹಿಸಿಕೊಂಡು ಅಲ್ಲಿಯೇ ನಿಲ್ಲಬೇಕು ಒಂದು ದಿನ ನಿಮ್ಮ ಸರದಿ ಬರುತ್ತದೆ ಆಗ ನಿವು ಬಯಸುವ ಬದಲಾವಣೆ ತರಲು ಸಾಧ್ಯ. ಒಂದು ಕಾಲದಲ್ಲಿ ಚಳುವಳಿಗಳು, ಹೋರಾಟಗಳು ವ್ಯಕ್ತಿಯನ್ನು ತಿದ್ಧುತ್ತಿದ್ದವು ಬೆಳೆಸುತ್ತಿದ್ದವು. ಇಂದು ಜಾಗತೀಕರಣ ಬದುಕನ್ನು, ಮಾಡುವ ಕೆಲಸವನ್ನು ನಿರ್ಧರಿಸುತ್ತಿದೆ. ಪತ್ರಕೋಧ್ಯಮವು ಇದಕ್ಕೆ ಹೊರತಲ್ಲ. ನನ್ನ ಅನುಭವದಲ್ಲಿ ಒಂದು ಮಾತು ಹೇಳುತ್ತೇನೆ ಪ್ರತಿ ವರ್ಷ ನಮ್ಮ ವಿ.ವಿ ಗೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ ಹೋಗುತ್ತಾರೆ ಹಾಗಂತ ಉಪನ್ಯಾಸಕ ಅವರನ್ನೆಲ್ಲ ಎ ಇವರೆಲ್ಲ ಪ್ರತಿ ವರ್ಷ ಬರುವ ವಿದ್ಯಾರ್ಥಿಗಳೇ ಎಂದುಕೊಂಡರೆ ಅವನಾಥ ಮೂರ್ಖ ಮತ್ತೊಬ್ಬನಿಲ್ಲ ಪ್ರತಿವರ್ಷ ಬರುವ ವಿದ್ಯಾರ್ಥಿ ಸಮೂಹದಲ್ಲಿ ಒಬ್ಬನಾದರೂ ಹೊಸ ಆಲೋಚನೆಯ ವ್ಯಕ್ತಿ ಇರಬಹುದು ಅವನನ್ನು ಗುರುತಿಸಿ ಪ್ರೋತ್ಸಾಹಿಸುವುದು ಉಪನ್ಯಾಸಕ ಕೆಲಸವನ್ನು ರೋಮಂಚಕವಗಿಸುತ್ತದೆ. ನಮ್ಮ ಗುರಿ ಕನಸುಗಳಿಲ್ಲದ ಯಂತ್ರಿಕ ಬದುಕಿನ ದೃಷ್ಟಿಯ ನೂರು ವಿದ್ಯಾರ್ಥಿಗಳ ಬದಲಾಗಿ ಹೊಸ ಕನಸು ಕನವರಿಕೆ ಹೊಂದಿರುವ ಒಬ್ಬ/ಇಬ್ಬರು ವಿದ್ಯಾರ್ಥಿ ಆಗಿರಬೇಕು ಅಂತೆಯೇ ನಿಮ್ಮ ಸುತ್ತ ಇರುವ ನಿಮ್ಮಂತೇ ನೋಂದಿರುವ ಪತ್ರಿಕೋದ್ಯಮಕ್ಕೆ ಬಂದಿರುವ ಗಟ್ಟಿಕಾಳುಗಳನ್ನು ಒಟ್ಟಾಗಿಸಿ ಯಾರಿಗೆ ಗೊತ್ತು ಮುಂದೆ ಹೊಸ ಆಲೋಚನೆಗಳ ಒಂದು ಸದೃಡ ಯುವ ಪಡೆ ಬೆಳೆಯಬಹುದು ಲೆಟ್ಸ್ ಕೀಪ್ ಹೋಪ್ಸ್ ಆಲ್ ದಿ ಬೆಸ್ಟ್

    ReplyDelete
  3. ನಮ್ಮ ಕನ್ನಡ ಪತ್ರಿಕೆ, ಟೀವೀ,ಕೊನೆಗೆ ಈಗೀಗ ಬ್ಲಾಗ್ ಗಳಿಗೂ ಸಮಸ್ಯೆಯಲ್ಲಿ ಹೊರಳಾಡುವದೆಂದರೆ ತುಂಬಾ ಇಷ್ಟ. ನೀವು ಬೇಕಾದರೆ ನೋಡಬಹುದು. ನಮ್ಮ ಕನ್ನಡದ ಮೆಡಿಯಾ ಗಳು ಸಮಸ್ಯೆಗಳ ಬಗ್ಗೆ ಪುಟಗಟ್ಟಲೆ ಬರೀತಾರೆ. ಆದರೆ ಅದಕ್ಕೆ ಪರಿಹಾರ ಸೂಚಿಸಿದ್ದು ಕಡಿಮೆ.
    ಈರ್ಶಾದ್ ಅವರಿಗೆ ತಮ್ಮ ಪತ್ರಿಕೆ ಮಾಲೀಕರ ಬಗ್ಗೆ, ಜಾಹೀರಾತುದಾರರ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ? ಇವರಿಗೆ ಬೇರೆ ಸಮಸ್ಯೆಗಳು ಕಾಣುವಾದಿಲ್ಲವೆ? ಇದಕ್ಕೆ ಇವರೇ ಪರಿಹಾರ ಸೂಚಿಸಲಿ.
    ಪತ್ರಿಕೆ ನಡೆಸೋದಕ್ಕೆ ದುಡ್ಡು ಬೇಕು. ದುಡ್ಡು ಬೇಕಾದರೆ ಜಾಹೀರಾತು ಬೇಕು. ಇದಿಲ್ಲದೇ ಪತ್ರಿಕೆ ನಡೆಯಲ್ಲ. ಸರಿ ಈರ್ಶಾದ್ ಅವರೇ ಪತ್ರಿಕೆಯ ಮಾಲೀಕರಾಗಿದ್ದರೆ ಏನು ಮಾಡುತ್ತಿದ್ದರು ಹಾಗೂ ಈಗಿನ ಮಾಲಿಕರು ಏನು ಮಾಡಬೇಕೆಂದು ತಿಳಿಸಲಿ.
    ಈ ವಾರದ ಕನ್ನಡ ಪ್ರಭ ಏರ್‌ಟೆಲ್ ವಿರುದ್ದ ಮೂರಕೊಂಡು ಬಿದ್ದಿದೆ. ಎಲ್ಲಾ ಮೊಬೈಲ್ ಕಂಪನಿಗಳ ಕಥೆ ಅಷ್ಟೇ ಆದರೂ ಕನ್ನಡಪ್ರಭ ಏರ್‌ಟೆಲ್ ನ್ನೇ ಗುರಿಯಾಗಿಸಿ ಹಾನಿಯುತ್ತಿರುವದು ವಿಶೇಷ!
    ಕೊನೆಗೆ ಹಿಂದೂ ಪತ್ರಿಕೆ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ಬಿಜೆಪಿ ಪರವಾಗಿ ಬಂದದ್ದೆಲ್ಲ ದುಡ್ಡು ಕೊಟ್ಟು ಬರೆಸಿದ್ದೆನೂ ಅಲ್ಲ!
    Naveen

    ReplyDelete
  4. it's not the for quitting Irshad,you are too young you have lot of energy to build a new journalism field.contact sr and prompt journalists take guide from them,compared other field journalism field is more better,and the opinion wrote from Sampadakeeya Balaga is suitable guideline,"Ella baagilu kitakigalu mucchidaga yello ondu kindiyinda belaku tuuri bandee barttade,please a belakina margakkagi huduku"all the best- Sunagar Manjunatha

    ReplyDelete
  5. ಇರ್ಷಾದ್, ಮುಖವಾಡ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಇದೆ. ಪ್ರಾಮಾಣಿಕವಾದ ಕೆಲಸ ಮಾಡುವ ಮನೋಭಾವ ಇರುವ ಕ್ಷೇತ್ರವಾದರೂ ಯಾವುದಿದೆ? ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಇಂದಿನ ದಿನಗಳಲ್ಲಿ ನೀವು ಈಗಲಾದರೂ ಸತ್ಯವನ್ನು ಬಿಚ್ಚಿಟ್ಟೀದ್ದೀರಿ. ಆದರೆ ನೀವು ಅಂದುಕೊಂಡಷ್ಟೇನೂ ಕೆಟ್ಟಿಲ್ಲವೆಂದು ನನ್ನ ಅನಿಸಿಕೆ. ಈಗ ಇರುವ ಕ್ಷೇತ್ರದಲ್ಲೇ ಸಾಧಿಸಿ ತೋರಬೇಕೆಂಬ ಛಲ ಇರಬೇಕೆ ಹೊರತು, ತೀರ ನಿರಾಸೆಯನ್ನು ಹೊಂದಿದರೆ ಯಾವುದೇ ಕ್ಷೇತ್ರದಲ್ಲೂ ಏನೂ ಮಾಡಲಾರಿರಿ. ಎಲ್ಲೆಡೆಯೂ ನೀವು ಹೇಡಿಯಾಗಿಯೇ ಮರಳಬೇಕಾಗುತ್ತದೆ. ಎದುರಿಸಿ, ಸಾಧಿಸಿ, ಸಾಧನೆ ಮಾಡಿ ತೋರಿಸಿ. ಪಾಠ ಮಾಡುವ ನೀವೇ ಹೀಗೆ ತಲೆ ಮೇಲೆ ಕೈಹೊತ್ತರೆ, ವಿದ್ಯಾರ್ಥಿಗಳು ಎತ್ತ ಹೋಗಬೇಕು ಸಾರ್? ಅವರೂ ಮನೆಗೆ ಓಡಿಹೋಗಬೇಕಾ?

    ReplyDelete
  6. ಇರ್ಷಾದ್ ಏನೂಂತ ಇನ್ಯಾರಿಂದ ತಿಳಿದುಕೊಳ್ಳುವ ಅಗತ್ಯ ಇಲ್ಲ. ನನ್ನ ಬಗ್ಗೆ ನನಗೆ ಗೊತ್ತು. ನವ್ಯಜ್ಯೋತಿಯವರೇ ಮಾತು ಸ್ವಲ್ಪ ಸಾಫ್ಟ್ ಆಗಿ ಇರಲಿ. ಬಾಯಿಗೆ ಬಂದಂತೆ ಬರೆಯಬೇಡಿ. ನಾನು ಬರೆದದ್ದು ನನ್ನ ಅನುಭವ. ನನ್ನ ಮನದಾಳದ ತಳಮಳ. ಇನ್ನೊಬ್ಬರ ಬಗ್ಗೆ ಪರ್ಸನಲ್ ಕಮೆಂಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ. ನೀವು ಏನೂಂತ ಯೋಚಿಸಿ. ನಾನು ಕಚ್ಡಾ ಎಂದಿರುವುದು ಸುವರ್ಣ ನ್ಯೂಸ್ನ್ನು ಅಲ್ಲ. ಪ್ರಸ್ತುತ ಮಾಧ್ಯಮ ಕ್ಷೇತ್ರವನ್ನು. ಓದುವಾಗ ಅರ್ಥ ಮಾಡ್ಕೊಳ್ಳಿ. ನೀವು ಪ್ರತಿಷ್ಠಿತ ಪತ್ರಿಕೆಯ ವರದಿಗಾರ್ತಿಯಾಗಿ ವರದಿ ಮಾಡುವಾಗ ಮುಂದೆ ಈ ತಪ್ಪು ಮಾಡಿ ಪಶ್ಚಾತ್ತಾಪ ಪಡಬೇಡಿ. ಸ್ಟೂಡೆಂಟ್ ರಿಪೋರ್ಟರ್ನಲ್ಲಿ ಓವರ್ ಕಾನ್ಫಿಡೆನ್ಸ್ನಿಂದ ಕೊನೆಯವರೆಗೂ ಇದ್ದದ್ದಲ್ಲಾ ರೀ. ಎಂಟ್ರೆನ್ಸ್ ಟೆಸ್ಟ್ನಲ್ಲೇ ಟಾಪರ್ ಆಗಿ ನನ್ನ ಪ್ರತಿಭೆಯಿಂದ ಅಲ್ಲಿ ಗುರುತಿಸಿಕೊಂಡಿರುವವನು ನಾನು. ನಿಮ್ಮಲ್ಲಿ ಜಾಹಿರಾತು ತೆಗದುಕೊಳ್ಳಬೇಡಿ ಎಂದು ನಾನು ಹೇಳಿಲ್ಲ. ಆದರೆ ಸುದ್ಧಿ ಮುಚ್ಚಿ ಹಾಕುವ ಜಾಹಿರಾತು ಮಾತ್ರ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿರುವುದು ಅಷ್ಟೇ. ಒಣ ಪ್ರತಿಷ್ಠೆ ಇಟ್ಟುಕೊಳ್ಳುವ ದಡ್ಡ ನಾನಲ್ಲ. ಹಿಡಿತ ಇರಲಿ.ಹಿಡಿತ....

    ReplyDelete
  7. Yake gelaya Aa mathugalu?
    -Shashikiran Shetty

    ReplyDelete
  8. ಪತ್ರಿಕೋದ್ಯಮ ಎಂಬ ರಂಗನತಿಟ್ಟಿನ ತುಂಬಾ ಇಂದು ಧೂಳು ತುಂಬಿ ಕೆಸರುಮಯ, ನಾರುತಿಹುದು ಮಾಧ್ಯಮ ರಂಗ, ಈ ಕೀವಿಗೆ ಇದೆಯೆ ಪರಿಹಾರ? ಇಡಬಹುದೇ ಆಶಯ..
    -Srinivasa Pejathaya

    ReplyDelete
  9. Yelaru hege ne maadyama,cinema,politics...sabyaru kelsa mado jaga ala,adu kolethu hoge ero hannu athva vasi madoke agde ero hunnu...antha dhushusthane hodre elle vasthavage kelsa mado avru adru yaru???namge edun yela solve madoke bere obba leader yak beku....!??elle ero yelaru leader's yee...badalavane ega agathya...aa badlavane tharthene,tharthene antha heltha baronu bare reader agthane...vasthavage badlavane tharoavnu mathra nijavada leader agthane...ondu thunder tharthane...!!
    -Ashwini Awesum Ashu

    ReplyDelete
  10. sorry boss patrike, Media yavdu yenu madakee agalla, adu torsoke matra yaradru hogli goripalyada volage gottagutte namma kanunu yeshtu balavagide anta.
    -Prashiva Prasad

    ReplyDelete
  11. ನಾನು ಹತಾಶನಾಗಿಲ್ಲ. ಆದರೂ ಕೆಲವೊಮ್ಮೆ ನನ್ನನ್ನು ಕಾಡುತ್ತಿರುವ ನನ್ನ ಮನದಾಳದ ಭಾವನೆಗಳನ್ನು ಬರೆದಿದ್ದೇನೆ ಅಷ್ಟೆ. ಆದರೂ ಒಂದು ಬೇಸರ ಇದೆ. ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಯಾರೂ ಮಾತಾಡದೆ ವೈಯುಕ್ತಿಕ ಟೀಕೆ ಟಿಪ್ಪಣಿಗಳಲ್ಲೆ ತೊಡಗಿರುವುದು ಕಂಡು ಬರುತ್ತಿದೆ. ನಾನು ಏನೂಂತ ನನಗಿಂತ ಹೆಚ್ಚು ಇನ್ಯಾರಿಗೂ ಗೊತ್ತಿರದು ಅಷ್ಟೆ. ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುತ್ತೇನೆ. ಜೊತೆಗೆ ಒಂದಿಷ್ಟು ಬದಲಾವಣೆಯನ್ನೂ ಮಾಡುತ್ತೇನೆ.
    @ ಆ ಮಾತುಗಳು ಬರುವುದಕ್ಕೆ ಮೇಲಿನ ಮಾತುಗಲೇ ಕಾರಣ ಶಶಿಕಿರಣ್ ಶೆಟ್ಟಿಯವರೇ. ಸುಮ್ ಸುಮ್ನೆ ಏನೆಲ್ಲ ಹೇಳಿದಾಗ ಮನಸ್ಸಿಗೆ ಬೇಜಾರಾಗುತ್ತೆ ಸರ್. ಅಷ್ಟೆ. ಒಂದು ಒಳ್ಳೆಯ ಚರ್ಚೆಯಾಗಬಹುದು ಎಂದ್ದಿದ್ದ ವಿಚಾರ ಮತ್ತೆ ಇನ್ನೆಲ್ಲಿಗೋ ಹೊರಳುತ್ತಿದೆ. ನನಗದು ಇಷ್ಟ ಇಲ್ಲ. ಮೌನಕ್ಕೆ ಶರಣಗುತ್ತಿದ್ದೇನೆ. ಬೇಕಿದ್ದವರು ನನ್ನ ಬ್ಲಾಗಿನಲ್ಲಿರುವ ಪೂರಕ ಮಾಹಿತಿ ಉತ್ತರವನ್ನು ಓದಿಕೊಳ್ಳಲಿ.

    ReplyDelete
  12. ಇರ್ಷಾದ್ ನಿನ್ನ ನಿರ್ಧಾರದ ಸರಿಯಾಗಿಯೇ ಇದೆ. ಇಷ್ಟ ಇಲ್ಲದಿದ್ರೆ ಅಲ್ಲಿಂದ ಹೊರಗೆ ಬರೋದೇ ಒಳ್ಳೇದು. ಆದರೆ ನೀನು ಯಾವ ಕ್ಷೇತ್ರವನ್ನು ಕಚ್ಡಾ ಎಂದು ಕರೆಯುತ್ತಿಯೋ ಅದೇ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಾವಿರಾರು ಜನ ಇನ್ನೂ ಇದ್ದಾರೆ.ಯಾರಿಗೂ ಕೂಡಾ ಭ್ರಮ ನಿರಸನ ಆಗಿಲ್ಲ. ನೀನು ಹೇಳುವ ರೀತಿ ಎಲ್ಲವೂ ಕೆಟ್ಟು ಹೋಗಿಲ್ಲ. ಹಾಗಂತ ಎಲ್ಲಾನು ಸರಿ ಇದೆ ಅಂತಾನೂ ಇಲ್ಲ. ಬಕೇಟ್ಹಿ ಹಿಡಿಯುವವರು ಎಲ್ಲಿ ಹೋದರು ಇದ್ದೇ ಇರುತ್ತಾರೆ. ಆದರೆ ಹಿಡಿದವರಾರು ನಾನು ಬಕೇಟು ಹಿಡಿಯುತ್ತೇನೆ ಅಂತ ಹೇಳೊದಿಲ್ಲ. ಬಕೇಟು ಹಿಡಿಯದಿದ್ದರೆ ಎಲ್ಲಿಯೂ ಹೆಸರು ಮಾಡಲು ಆಗುವುದಿಲ್ಲ. ಹಾಗೇ ನೋಡಿದರೆ ಉಜಿರೆ ಕಾಲೇಜಿನಲ್ಲಿ ನಿನಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ.ಕಾಲೇಜಿನಲ್ಲಿ ಅಷ್ಟು ಜನರಿದ್ದಾಗ್ಯೂ ನಿನಗೆ ಸುವರ್ಣದ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಯಿತು. ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಅದೇ ರೀತಿಯಲ್ಲಿ ನವ್ಯಜ್ಯೋತಿಯವರು ನಿಮ್ಮ ಬಗ್ಗೆ ಅವರಿಗನ್ನಿಸಿದ್ದನ್ನು ಹೇಳಿದ್ದಾರೆ ಅಷ್ಟೇ ಅದಕ್ಕೆ ಯಾಕೆ ಅಷ್ಟು ಗರಂ ಆಗೋದು. ಹೊಗಳಿಕೆ, ತೆಗಳಿಕೆ ಎಲ್ಲವನ್ನು ಸಮಾನವಾಗಿಯೇ ಸ್ವೀಕರಿಸಬೇಕಲ್ಲ. ಆ ಮನಸ್ಥಿತಿ ಇಲ್ಲದಿದ್ದರೆ ಅಭಿಪ್ರಾಯಗಳನ್ನು ಒಳಗೆ ಇಟ್ಟುಕೊಳ್ಳಬೇಕು.
    ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡರೆ ನೀನು ಈ ಅಭಿಪ್ರಾಯ ಬರೆಯುತ್ತಿರಲಿಲ್ಲ.ಯಾವ ಕ್ಷೇತ್ರವೂ ಸರಿಯಾಗಿಲ್ಲ.ಅದೇ ರೀತಿಯಲ್ಲಿ ಯಾವ ವ್ಯಕ್ತಿಗಳೂ ಕೂಡಾ ಸಾಚಾ ಆಗಿ ಉಳಿದಿಲ್ಲ. ಹೇಳುವುದು ಒಂದಾದರೆ ಮಾಡುವುದು ಇನ್ನೊಂದು. ಆದರೆ ನಾನು ಸಾಚಾ ಎಂದು ಗೋಮುಖ ವ್ಯಾಗ್ರನಂತೆ ಪೋಸು ಕೊಡುತ್ತಾರೆ ಅಷ್ಟೇ. ಕೇವಲ ಸಿಂಪತಿ ಗಿಟ್ಟಿಸಿಕೊಳ್ಳುವುದಷ್ಟೇ ಮುಖ್ಯವಲ್ಲ.ಏನಾದರೊಂದು ರಿಯಾಲಿಟಿ ಇರಲೇ ಬೇಕಲ್ಲ.ಏನೇ ಆದರೂ ಎಲ್ಲರೂ ಮುಖವಾಡ ಕಳಚಬೇಕಾದ ಅಗತ್ಯವಿದೆ ಅಷ್ಟೇ.

    ReplyDelete
  13. ಇಗೋ'ಗೆ ಪೆಟ್ಟಾಯಿತಾ? ನಾನು ಅನುಭವದಲ್ಲಿ ಚಿಕ್ಕವಳೇ ಇರಬಹುದು. ಆದರೆ ನನ್ನನ್ನು ಆಯ್ಕೆ ಮಾಡಿಕೊಂಡ ನನ್ನ ಪತ್ರಿಕೆಯವರು ಅನುಭವದಿಂದ ನಾನು ಆ ಜವಾಬ್ದಾರಿಯನ್ನು ನಿರ್ವಹಿಸಬಲ್ಲೆ ಎಂದು ನನ್ನ ಆಯ್ಕೆ ಮಾಡಿದ್ದಾರೆ. ಇಲ್ಲಿಯ ವರೆಗೆ ನಾನು ತಪ್ಪಿ ವರದಿ ಮಾಡಿಲ್ಲ. ತಪ್ಪುಗಳೂ ಆಗಿಲ್ಲ. ನನಗೆ ಗೊತ್ತಿರದ ವಿಷಯ ಒಬ್ಬ ಭಿಕ್ಷುಕನಿಂದ ಸಿಕ್ಕರೂ ನಾನು ಅದನ್ನು ವಿಧೇಯಳಾಗಿ ಸ್ವೀಕರಿಸುತ್ತೇನೆ. ಅವರನ್ನು ಗುರು ಎಂದು ಸ್ವೀಕರಿಸುತ್ತೇನೆ. ಆದರೆ ಕಲಿತ ಶಾಲೆಗಾಗಲಿ, ಕಾಲೇಜಿಗಾಗಲಿ ಅಲ್ಲಿ ಅವಕಾಶ ಕೊಟ್ಟ ಮುಖ್ಯಸ್ಥರೇ ಆಗಲೀ ಯಾರಿಗೂ ಬೈಯಲ್ಲ. ಬೇರೆಯವರಿಂದ ಕಲಿತು ಅದು ನಾನೇ ಕಲಿತದ್ದು ಎಂದು ಹೇಳಲ್ಲ. ಯಾವ ವಿಚಾರವನ್ನೂ ತಿಳಿಯದ ನಾನು ಸುದ್ದಿ ಮಾಡಲ್ಲ, ಆ ಬಗ್ಗೆ ಮಾತೂ ಆಡಲ್ಲ. ನಾನು ಆರಕ್ಕೇರಿದರೆ ಹಿಗ್ಗಲ್ಲ, ಮೂರಕ್ಕಿಳಿದರೆ ಕುಗ್ಗಲ್ಲ. ಮೊದಲು ನಿಮ್ಮ ದುರಂಹಕಾರ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅಷ್ಟೇ ಎಲ್ಲವೂ ಸರಿಯಾಗುತ್ತದೆ.

    ReplyDelete
  14. ಮುಖ್ಯ ವಾಹಿನಿಯ ಮಾಧ್ಯಮ ಕ್ಷೇತ್ರದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಿಲ್ಲ. ಹೊಟ್ಟೆಪಾಡಿಗೆ ಆ ಕೆಲಸ ಮಾಡಬಹುದೇ ಹೊರತು ಅದನ್ನು ಒಂದು ಬದಲಾವಣೆಯ ಮಾಧ್ಯಮವಾಗಿ ತೆಗೆದುಕೊಂಡು ಕೆಲಸ ಮಾಡಲಾರದ ಸ್ಥಿತಿ ಇಂದು ಮಾಧ್ಯಮ ಕ್ಷೇತ್ರದಲ್ಲಿದೆ. ಹೀಗಾಗಿ ಮಾಧ್ಯಮ ಕ್ಷೇತ್ರದ ಕೆಲಸ ಎಂಬುದು ಯುವಕರಿಗೆ ಇಂದು ಆದ್ಯತೆಯ ಕೆಲಸ ಆಗಲಾರದು ಎಂಬ ವಿವೇಕ ಇದ್ದರೆ ಒಳ್ಳೆಯದು.

    ಅದ್ವಾನಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರಿಗೆ ನೋಟು ಹಂಚಿದ ವಿಷಯ ಎಲ್ಲ ಪತ್ರಿಕೆಗಳಲ್ಲೂ ಮುಖ ಪುಟದಲ್ಲಿ ಪ್ರಧಾನ ಸುದ್ದಿಯಾಗಿ ಬರಬೇಕಾಗಿತ್ತು ಏಕೆಂದರೆ ಇದು ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹೊರಟವರ ಉದ್ಧೇಶಕ್ಕೆ ತೀರ ವಿರುದ್ಧವಾದ್ದು. ಹೀಗಾಗಿ ಇದನ್ನು ಮುಚ್ಚಿಹಾಕಲು ಮಾಧ್ಯಮ ಪ್ರಯತ್ನಿಸಿದ್ದು ಮಾಧ್ಯಮ ಕ್ಷೇತ್ರಕ್ಕೆ ನಾಚಿಕೆಗೇಡಿನ ವಿಷಯ. ಕರ್ನಾಟಕದ ಮಾಧ್ಯಮ ಕ್ಷೇತ್ರ ತನ್ನ ಅತ್ಮಸಾಕ್ಷಿಯನ್ನೇ ಕಳೆದುಕೊಂಡಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.-ಆನಂದ ಪ್ರಸಾದ್

    ReplyDelete
  15. ಪ್ರೀತಿಯ ಇರ್ಷಾದ್,
    'ಸಂಪಾದಕೀಯ'ದಲ್ಲಿ ನಿಮ್ಮ ಬರಹ ಓದಿ ಮನಸ್ಸಿಗೆ ಯಾಕೋ ನೋವಾಯ್ತು.
    ಬದುಕಿನಲ್ಲಿ ಇಟ್ಟುಕೊಂಡ ಗುರಿ, ಕಂಡ ಕನಸುಗಳು ಈಡೇರದಿದ್ದಾಗ ಅಥವಾ ಈಡೇರದು ಎಂದು ತಿಳಿದುಹೋದಾಗ ಯಾರಿಗೇ ಆಗಲಿ ಖನ್ನತೆ ಆವರಿಸುವುದು ಸಹಜ. ಬಹುಶಃ ಅದು ನಿಮಗೂ ಆಗಿದೆ ಎಂದು ಭಾವಿಸುತ್ತೇನೆ.
    ಆದರೆ ಇರ್ಷಾದ್, ನೀವು ಅಂದುಕೊಂಡಂತೆ ಕೇವಲ ಒಂದು ಶಿಕ್ಷಣ ಸಂಸ್ಥೆಯ ಹುಳುಕಾಗಲೀ, ಸ್ಟೂಡೆಂಟ್ ರಿಪೋರ್ಟರ್ ತರಬೇತಿಯಾಗಲೀ, ನೀವೆಂದ ಓಟಿಗಾಗಿ ನೋಟಿನಂತಹ ಸುದ್ದಿಗಳಾಗಲೀ ಪತ್ರಿಕೋದ್ಯಮವಲ್ಲ. ಪತ್ರಿಕೋದ್ಯಮ ೆನ್ನುವುದು ಅಷ್ಟೆಲ್ಲಾ ಸುಲಭದಲ್ಲಿ ವ್ಯಾಪ್ತಿಗೆ ದಕ್ಕುವ ಸಂಗತಿಯೂ ಅಲ್ಲ. ಬಹುಶಃ ಕುರುಡರು ಆನೆಯನ್ನು ಮುಟ್ಟಿ ನೋಡಿ ಗಾತ್ರ ಹೇಳಿದಂತಾದೀತು.
    ನೀವೆಂದಂತೆ ಬರೀ ಕಚ್ಡಾಗಳ ಕ್ಷೇತ್ರ ಇದಾಗಿದ್ದರೆ, ಇಂದು ಮಾಧ್ಯಮ ಎನ್ನುವುದಕ್ಕೆ ಗೌರವವಾಗಲೀ, ಘನತೆಯಾಗಲೀ ಉಳಿದಿರುತ್ತಿರಲಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಮಂದಿಯನ್ನು ಕಂಡು ಇಡೀ ಪತ್ರಿಕೋದ್ಯಮವೇ 'ಕಚ್ಡಾ' ಎಂದು ಆರೋಪಿಸುವುದು ತಪ್ಪಾದೀತು.
    ನೀವೆಂದಂತೆ ಸೈನ್ಸ್ ತೆಗೆದುಕೊಳ್ಳುವ ಅರ್ಹತೆಯಿದ್ದರೂ ಆರ್ಟ್ಸ್ ತೆಗೆದುಕೊಂಡು ಪತ್ರಿಕೋದ್ಯಮವೇ ಬದುಕಿನ ಗುರಿಯಾಗಿಸಿದ ನೀವು, ಒಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಓರ್ವ ಪತ್ರಕರ್ತರನ್ನು (ನೀವು ಇಂಟರ್ನಶಿಪ್ ಮಾಡುವಾಗಿನ ನಿಮ್ಮ ಚೀಫ್)ರನ್ನು ಏಕ ವಚನದಲ್ಲಿ ಕರೆದಿರುವುದು ನೋಡಿ ಬೇಸರವಾಯಿತು.
    ಇರಲೀ, ಪತ್ರಿಕೋದ್ಯಮದ ಮೇಲೆ ನಿಮಗಷ್ಟೂ ಹೇವರಿಕೆಯಿದ್ಯಾದರೆ ನಿಮ್ಮ ಮನಕ್ಕೊಪ್ಪುವ ಕ್ಷೇತ್ರವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಿಮಗಿದೆಯಷ್ಟೇ.
    ಅದು ಬಿಟ್ಟು ಸಂವಿಧಾನದ ನಾಲ್ಕನೇ ಅಂಗ ಎಂದೇ ಗುರುತಿಸಿಕೊಳ್ವಾಳುವ ಮಾಧ್ಯಮವನ್ನು 'ಕಚ್ಡಾ' ಎಂದು ಕರೆಯುವುದು ನಿಮ್ಮಂಥ ಯುವಕರಿಗೆ ಶೋಭೆ ತರುವ ಸಂಗತಿಯಲ್ಲ. ಮೌನಕ್ಕೆ ಶರಣಾಗುತ್ತೇನೆ ಎಂದಿದ್ದೀರಿ. ಆದರೂ ಹೇಳಬೇಕೆನಿಸಿತು, ಹೇಳಿದ್ದೇನೆ.
    ಪ್ರೀತಿ ಇರಲಿ,
    ಓರ್ವ ಪತ್ರಕರ್ತ

    ReplyDelete
  16. ಪ್ರೀತಿ ಮಾಡಿರೋ ಹುಡುಗಿ ಕೈಕೊಟ್ಟಾಗ, ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುವ ಕ್ಷೇತ್ರ(ಕನಸು)ಕಣ್ಣೆದುರು ಸುಳ್ಳು ಎನಿಸಿದಾಗ ಮನಸಿಗೆ ಖೇದ, ನೋವು ಆಗೋದು ಸಾಮಾನ್ಯ. ಹೀಗಂತ ನೀವು ಕ್ಷೇತ್ರವನ್ನೇ ಬಿಡುವ ನಿರ್ಧಾರವೇನೂ ಬೇಕಾಗಿರಲಿಲ್ಲ. ಕಾರಣ, ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು ನಿಂತು ಅದನ್ನು ಎದುರಿಸುವದೇ ಚಾತುರ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಂದ ಮಾತ್ರಕ್ಕೆ ನೀವು ನಿಮ್ಮ ಸಾಕ್ಷಿಪ್ರಜ್ಷೆಯನ್ನು ಬೇರೆಯವರಿಗೆ ಒತ್ತೆಯಾಗಿಡಿ ಎಂದೂ ಹೇಳುತ್ತಿಲ್ಲ. ಇನ್ನೇನು ಫೀಲ್ಡ್ ಗೆ ಎಂಟ್ರಿ ಹೊಡೆದ ತಕ್ಷಣ ನಾಣು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅನ್ನೋ ಕನಸು ಸಾಮಾನ್ಯ ಅದನ್ನು ಮಾಡಲಾಗುತ್ತಿಲ್ಲವೆಂಬ ಹತಾಷೆಯೂ ಅಷ್ಟೇ ಸಾಮಾನ್ಯ. ಹೀಗಾಗಿ ನೀವು ನಿಮ್ಮನ್ನು ಪತ್ರಿಕೋದ್ಯಮದಲ್ಲಿ ಗುರುತಿಸಿಕೊಳ್ಳುವವರೆಗೂ ಪರಿಸ್ಥಿತಿಯನ್ನು ಬದಲಾಯಿಸಬಲ್ಲೇ ಎಂಬುದು ಮುಂಜಾಣೆಯ ಕನಸಷ್ಟೆ ಹೀಗಾಘಿ ಲೆಟ್ಸ್ ಎದ್ದೇಳಿ.. ಸಾಧನೆಯ ಮೆಟ್ಟಿಲು ನಿಮ್ಮನ್ನು ಕಾಯ್ತಾ ಇವೆ... ನಿರ್ಧಾರ ನಿಮ್ಮದು...
    ನಿಮ್ಮ ಹಿತೈಷಿ.

    ReplyDelete
  17. ಇರ್ಶಾದ್ ಮಾತಲ್ಲಿ ಎಳಸುತನ ಇದೆ. ಹಾಗೆ ವಯಸ್ಸಿಗೆ ಸಹಜವಾದ ಉದ್ವೇಗ...ಎಲ್ಲವು ಕೆಡುತ್ತಿರುವಾಗ ಮಾಧ್ಯಮ ಮಾತ್ರ ಸಾಚ ಇರಬೇಕು ಎಂದು ಬಯಸೋದು ಮುಗ್ಧತೆಯ ಒಂದು ಭಾಗ ಅಷ್ಟೇ. ಹಾಗೆಯೇ ಮಾಧ್ಯಮ ಕೆಟ್ಟಿರುದು ಹೊಸಸುದ್ದಿಯೂ ಅಲ್ಲ. ಇರ್ಶಾದ್ ಓದೋದು, ಕಾಣೋದು ಇನ್ನಷ್ಟು ಇದೆ. ಓದುತ್ತ, ಕಾಣುತ್ತ ಈ ಮಾಧ್ಯಮದಲ್ಲಿ ಬೆಳೆಯುವ ತಾಳ್ಮೆ ಇದ್ದರೆ ಇನ್ನಷ್ಟು ಗಟ್ಟಿಯಾಗಿ, ಎಲ್ಲದರ ಮಧ್ಯೆಯೂ ಒಂದು ದಾರಿ ತೆರೆದೇ ತೆರೆದು ಕೊಳ್ಳುತ್ತದೆ. ಇದು ಮಾಧ್ಯಮಕ್ಕೆ ಸಂಬಂಧಿಸಿ ಮಾತ್ರವಲ್ಲ ಎಲ್ಲ ಕ್ಷೇತ್ರಕ್ಕೂ ಸಂಬಂಧ ಪಡುತ್ತದೆ. ನೀರಿನ ಆಳವೇ ನಿಮಗೆ ಈಜನ್ನು ಕಲಿಸಿ ಕೊಡುತ್ತೆ. ಗುಡ್ ಲಕ್!

    ReplyDelete
  18. ಬಶೀರ್ ಮಾತುಗಳನ್ನೇ ಪುರುಚ್ಛರಿಸಬಯಸುತ್ತೇನೆ....

    ReplyDelete
  19. ಗೆಳತಿ ನವ್ಯಜ್ಯೋತಿ ನೀವು ತೀರಾ ವೈಯಕ್ತಿಕ ವಿಷಯಗಳತ್ತ ಹೋದದ್ದು ಸರಿ ಕಾಣಲಿಲ್ಲ . ಖಂಡಿತ ನೀವು ತುಂಬ ಒಳ್ಳೆಯ ವರದಿಗಾರರೆ ಅದರಲ್ಲಿ ಎರಡು ಮಾತಿಲ್ಲ. ನಿಮಗೆ ಮತ್ತು ಇಷಾ೯ದ್ ಗೆ ಪತ್ರಿಕೋದ್ಯಮದ ಬಗ್ಗೆ ಇರುವ ಆಸಕ್ತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಸಂಪಾದಕೀಯದಂತಹ ಬ್ಲಾಗ್ಗಳಲ್ಲಿ ಆರೋಗ್ಯಪೂರ್ಣ ಚಚೆ೯ಯಾಗಬೇಕೇ ಹೊರತು ವೈಯಕ್ತಿಕ ಕಾರಣಗಳಿಗೋಸ್ಕರ ಬಳಕೆಯಾಗುವುದು ಸರಿಯಲ್ಲ...
    ಪತ್ರಿಕೋದ್ಯಮದ ಬಗ್ಗೆ ಇರುವ ಅಭಿಪ್ರಾಯಗಳನ್ನು ಇಗೋ ಎನ್ನಲಾಗದು. ನೀವು ಒಬ್ಬ ಪತ್ರಕತೆ೯ಯಾಗಿ ಇನ್ನೊಬ್ಬ ಪತ್ರಕರ್ತನ ಅದರಲ್ಲು ನಿಮ್ಮ ಗೆಳೆಯನ ಬಗ್ಗೆ ಹೀಯಾಳಿಕೆ ಅನಿಸುವ ರೀತಿಯಲ್ಲಿ ಮಾತನಾಡಿದ್ದು ಸರಿ ಕಾಣಲಿಲ್ಲ.....ಒಬ್ಬರ ಬಗ್ಗೆ ಈ ರೀತಿಯ ಅಭಿಪ್ರಾಯ ಇರುವುದರಿಂದಲೇ ಪತ್ರಕರ್ತರ ನಡುವೆ ಒಡಕು ಮೂಡುತ್ತದೆ. ಕ್ರಮೇಣ ಇದು ಹೆಚ್ಚಾದಾದಲ್ಲಿ ಪತ್ರಿಕೋದ್ಯಮದಿಂದ ದೂರವಾಗುವ ಸನ್ನಿವೇಶ ಬರುತ್ತದೆ.

    ಇನ್ನು ಇಂದಿನ ಮಾಧ್ಯಮವು ಕೆಲವು ರಾಜಕಾರಣಿಗಳ ಕೆಲವು ಪಕ್ಷಗಳ ಕೈಗೊಂಬೆಯಾಗುವುದು ಹೆಚ್ಚುತ್ತಿದೆ, ಮಾಧ್ಯಮದ ಬಗ್ಗೆ ಕನಸುಗಳನ್ನು ಹೊತ್ತು ಬರುತ್ತಿರುವ ಯುವಕ ಯುವತಿಯರನ್ನು ತನ್ನ ಬಲಿಪಶು ಮಾಡುತ್ತಿದೆ. ಕ್ಯಾಮರ ಎದುರು ಬರುವಾಗ, ಲೇಖನಗಳಲ್ಲಿ ಪತ್ರಕರ್ತರು ಸುಖಿಗಳು ಎಂದು ಕಂಡು ಬಂದರು ತಮ್ಮ ಪತ್ರಿಕೆ,ಚಾನೆಲ್ ಗಳಿಂದಲೇ ಕೆಲವು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲವೂ ಗೊತ್ತಿದೆ ಎನ್ನುವ ರೀತಿಯವರಿಂದ ಕಿರುಕುಳಗಳನ್ನು ಯುವ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಯುವ ಪತ್ರಕರ್ತರು ಗ್ಲಾಮರ್ಗೋಸ್ಕರ ಪತ್ರಿಕೋದ್ಯಮಕ್ಕೆ ಬರುತ್ತಿಲ್ಲ. ತಮ್ಮಲ್ಲೂ ಸೃಜನಶೀಲತೆಗಳು.....ಉತ್ತಮ ಆಕಾಂಕ್ಷೆ ಇಟ್ಟು ಬರುತ್ತಾರೆ. ಅದಕ್ಕೆ ಸರಿಯಾದ ವೇದಿಕೆ ಸಿಗದೆ...ಪತ್ರಿಕೋದ್ಯಮದಿಂದ ದೂರವಾಗುತ್ತಿದ್ದಾರೆ. ಮಾಧ್ಯಮವು ಉದ್ಯಮವಾಗುತ್ತಿದೆ ಸರಿ ಆದರೆ ಅದನ್ನೇ ಮುಖ್ಯವಾಗಿಟ್ಟು ಕೊಂಡು ನಾವು ನೀಡಿದ್ದೇ ಅಂತಿಮ ಎನ್ನುವ ಮಾಧ್ಯಮ ನಿಲುವು ತಪ್ಪು...
    `ಮಾಧ್ಯಮ ಸಮಾಜವನ್ನು, ವ್ಯಕ್ತಿಗಳನ್ನು ಒಂದು ಮಾಡಬೇಕೇ ಹೊರತು ದೂರ ಮಾಡುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ'

    ಯಶೋಧರ.ವಿ.ಬ೦ಗೇರ

    ReplyDelete
  20. ಪ್ರಶಾಂತNovember 8, 2011 at 11:04 AM

    ಪತ್ರಕರ್ತರಿಗೆ ನೋಟು ಹಂಚಿದ್ದು ಕ. ಪ್ರಭದ ಒಳಪುಟದಲ್ಲಿ ಪ್ರಕಟವಾಗಿತ್ತು. ಭಾಷ್ಹೆಯಲ್ಲಿ ಸೌಜನ್ಯ ಇರಲಿ.

    ReplyDelete
  21. ಇಲ್ಲಿರುವ ಎಲ್ಲ ಪತ್ರಿಕೋದ್ಯಮದವರಿಗೆ ಒಂದು ಪ್ರಶ್ನೆ... ಒಂದು ಪರ್ಯಾಯ ಯೋಚನೆ.... ಜಾಹೀರಾತುಗಲ್ಲನ್ನ ಬಿಟ್ಟು.. ಬೇರೆ, ಆದರೆ ನ್ಯಾಯವಾದ.. ಆದಾಯದ ಮೂಲಗಳು ಯಾವು.. ? ಇದಾವಾ ? ಇದ್ದರೆ ಎಸ್ಟು ಪ್ರ್ಯಾಕ್ಟಿಕಲ್ ? -

    ಓ ಯಾವ್ದೂ ಇಲ್ಲ್ಲ ಅಂತ .. ಉದಾಸೀನ ಮಾಡ ಬೇಡಿ.. . ಯೋಚಿಸಿ ಉತ್ತರಿಸಿದರೆ .. ತುಂಬಾ ಸಂತೋಷ.... :)

    ReplyDelete
  22. ಪ್ರೀತಿಯ ಕಿರಣ್ ಅವರೇ, ನಿಮ್ಮ ಪರ್ಯಾಯ ಯೋಚನೆ ನಿಜಕ್ಕೂ ಉತ್ತಮವಾದುದು. ನೀವು ಕೇಳಿದ ಪ್ರಶ್ನೆಗೆ ಪತ್ರಕರ್ತರು ಉತ್ತರಿಸಲು ಸ್ವಲ್ಪ ಕಷ್ಟವೇ. ಪತ್ರಿಕೆ ಆದಾಯ ತರುವ ಕೆಲಸದಲ್ಲಿ ಪತ್ರಕರ್ತರ ಪಾಲಿರಬಹುದು. ಆದರೆ ಅದು ಅವರ ಕೆಲಸವಲ್ಲ. ಅದಕ್ಕಾಗಿ ಬೇರೆಯೇ ವಿಭಾಗಗಳಿವೆ. ಅವರನ್ನು ಕೇಳಿದರೆ, ಜಾಹೀರಾತುಗಳನ್ನು ಹೊರತು ಪಡಿಸಿದರೆ ಪತ್ರಿಕೆಯನ್ನು ನಡೆಸುವುದೇ ಕಷ್ಟ. ಯಾಕೆಂದರೆ 16 ಪುಟಗಳಿರುವ ಒಂದು ಪತ್ರಿಕೆಯನ್ನು ತರಬೇಕಾದರೆ ಅದಕ್ಕೆ 12ರಿಂದ 15 ರೂ. ಖರ್ಚು ಬೀಳುತ್ತದೆ. ಆದರೆ ಓದುಗರಿಗೆ ಪತ್ರಿಕೆ 3 ಅಥವಾ 3.50 ರೂ.ಗೆ ಸಿಗುತ್ತದೆ. ಪತ್ರಿಕೆಗೆ ಅಷ್ಟು ಖರ್ಚು ಬರುತ್ತದೆ ಅಂತ ಆ ಖರ್ಚನ್ನು ಓದುಗರ ಮೇಲೆ ಹೊರಿಸಲು ಸಾಧ್ಯವಿಲ್ಲ. 3 ರೂಗೆ ಪತ್ರಿಕೆ ಸಿಗುವಾಗಲೇ ಓದುಗರ ಕೊರತೆಯಿದೆ. ಇನ್ನು ಬೆಲೆಯನ್ನು ದುಪ್ಪಟ್ಟು ಮಾಡಿದರೆ ಪತ್ರಿಕೆ ಕೇವಲ ಅಂಗಡಿಗಳಲ್ಲಿ ಪ್ರದರ್ಶನವಾಗುತ್ತಿರುತ್ತದೆ ಅಷ್ಟೆ. ಅದನ್ನು ಸರಿದೂಗಿಸಬೇಕಾದರೆ ಜಾಹೀರಾತು ಅಗತ್ಯ. ಜಾಹೀರಾತು ಮಾತ್ರವಲ್ಲ. ಕೆಲ ಸುದ್ದಿಗಳನ್ನು ಜಾಹೀರಾತು ಬೆಲೆಯನ್ನೇ ತೆತ್ತು ಪ್ರಕಟಿಸುತ್ತಾರೆ. ಅದು ಪೈಯ್ಡ್ ನ್ಯೂಸ್ ಆಗುತ್ತದೆ. ಇದಕ್ಕೂ ಬುದ್ದಿ ಜೀವಿಗಳ ವಿರೋಧ ಬರುತ್ತದೆ. ಪೈಯ್ಡ್ ನ್ಯೂಸ್ ಎಂದರೆ ಅದೆಲ್ಲವೂ ನೆಗೆಟಿವ್ ಆಗಿರಬೇಕಿಲ್ಲ. ಆದರೂ ಪೇಯ್ಡ್ ನ್ಯೂಸ್ ಜಾಹೀರಾತುಗಳಿಗಿಂತಲೂ ಹೆಚ್ಚಾಗಿ ವಿರೋಧಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಅದನ್ನು ದುರುಪಯೋಗ ಪಡಿಸುವ ಸಾಧ್ಯತೆಗಳಿವೆ.

    ಗೆಳೆಯಾ, ನಾನು ಇದನ್ನು ತೀರಾ ವೈಯಕ್ತಿಕವಾಗಿ ಹೇಳುತ್ತಿದ್ದೇನೆ.... ನನಗೆ ಇರ್ಷಾದ್ ಬಗೆಗೆಗಾಗಲೀ ಇನ್ಯಾರದೇ ಬಗೆಗೆಗಾಗಲಿ ದ್ವೇಷ ಅಸೂಯೆಗಳಿಲ್ಲ. ಆದರೆ ಅಜ್ಜಿ ಕೋಳಿಯಿಂದಲೇ ಬೆಳಗಾಗುತ್ತದೆ ಎಂದು ಕೆಲವರು ಭಾವಿಸುತ್ತಾರಲ್ಲ ಅದಕ್ಕೆ ನನ್ನ ತೀವ್ರ ವಿರೋಧವಿದೆ. ತಾನೇ ದೊಡ್ಡದು, ಮಿಕ್ಕಿದ್ದೆಲ್ಲಾ ಹಾಳು ಎಂದು ಬಿಂಬಿಸುವವರನ್ನು, ಸಾರ್ವಜನಿಕವಾಗಿ ತಮ್ಮನ್ನು ತಾವು ಅತಿಯಾಗಿ ಹೊಗಳಿಕೊಳ್ಳುವವರನ್ನು ಕಂಡರೆ ನನಗಾಗುವುದಿಲ್ಲ. ಅದನ್ನೂ ನಾನು ವಿರೋಧಿಸುತ್ತೇನೆ. ಒಬ್ಬ ವ್ಯಕ್ತಿಗೆ ನ್ಯಾಯವಾಗಿ ಸಲ್ಲುವ ಗೌರವ ಅಗತ್ಯವಾಗಿ ಸಲ್ಲಬೇಕು. ಅದಕ್ಕಿಂತ ಹೆಚ್ಚಾಗಿ ಅಪೇಕ್ಷೆ ಪಡುವುದು ಸರಿಯಲ್ಲ. ಸಿಂಪತಿ ಗಿಟ್ಟಿಸಿಕೊಳ್ಳುವುದೂ ಒಳ್ಳೆಯದಲ್ಲ.
    ತರಗತಿಯಲ್ಲಿ ಪತ್ರಿಕೋದ್ಯಮ ಅಂತ ಏನು ಹೇಳಿಕೊಡುತ್ತಾರೋ ಅದೆಲ್ಲವೂ ವರ್ಷಾಂತ್ಯದ ಪರೀಕ್ಷೆಗೆ ಮಾತ್ರ ಸೀಮಿತ. ಪತ್ರಿಕೋದ್ಯಮ ನಾವು ಅಂದು ಕೊಂಡಷ್ಟು ಸುಲಭದ ವ್ಯಾಪ್ತಿಗೆ ದಕ್ಕುವುದಿಲ್ಲ. .5 ಶೇಕಡವಾದರೂ ಅದನ್ನು ತಿಳಿದುಕೊಳ್ಳುತ್ತೇವೆ ಎಂದಾದರೆ ೋದಿನ ಜೊತೆಗೆ ಒಂದು ಬಾರಿಯಾದರೂ ಇಂಟರ್ನಶಿಪ್ ಮಾಡಲೇ ಬೇಕು. ಆಗ ಕನಿಷ್ಠ ಪಕ್ಷ ಅದೇನು ಅಲ್ಲಿ ಹೇಗಿರಬೇಕು ಎನ್ನುವುದು ಅನುಭವಕ್ಕೆ ಬರುತ್ತದೆ.
    ಧನ್ಯವಾದ

    ReplyDelete
  23. badukinalli ella anubhavisida ritiya hatashe eeke? yaava kxstra pavitra aagi ulidide ?. olleyadu kettaddu edde eruttade. entha nerashe ellarallu eddiddare swatantrave baruttiralilla. anyway bhavanegala abivyakti, charche olleya bhasheyalli nadeyali.

    ReplyDelete
  24. ಈ ಚರ್ಚೆಗಳನ್ನೆಲ್ಲ ನೋಡಿದರೆ ಇಂಥದ್ದೇ ಮನಸ್ಥಿತಿ ಹೊಂದಿದ್ದ ನನ್ನ ಸಹಪಾಠಿಯ ನೆನಪಾಯಿತು. "ಇಲ್ಲಿ ಎಷ್ಟು ಅಗೆದ್ರೂ ಅಷ್ಟೆ... ಮಣ್ಣೂ ಸಿಗೊಲ್ಲ... ಕತ್ತೆ ಲದ್ದಿನೇ ಸಿಗೋದು" ಅಂತ ಅರ್ಧದಲ್ಲೇ ಪತ್ರಿಕೋದ್ಯಮ ಬಿಟ್ಟು ಪೊಲೀಸ್ ಡಿಪಾರ್ಟ್ ಮೆಂಟ್ ಸೇರಿದ್ದ. ಆದರೆ "ಇಲ್ಲಿ ಸಲ್ಲದವ ಎಲ್ಲೂ ಸಲ್ಲುವುದಿಲ್ಲ" ಎನ್ನುವಂತೆ ಕೆಲವೇ ದಿನಗಳಲ್ಲಿ ಭ್ರಮನಿರಸನಗೊಂಡ. ಮೊನ್ನೆ ತಾನೆ ಎಲ್ಲಿಂದಲೋ ನಂಬರ್ ಕಲೆಕ್ಟ್ ಮಾಡಿ ನನಗೆ ಫೋನ್ ಮಾಡಿದ್ದ. ತುಂಬಾ ನೊಂದವನಂತೆ ಮಾತನಾಡಿದ... "ಇಲ್ಲಿ ಬಕೆಟ್ ಹಿಡಿಯೋರಿಗಷ್ಟೇ ಉಳಿವು... ಇದೊಂತರಾ ತಿಪ್ಪೆ ಗುಂಡಿ ಇದ್ದಂಗೆ... ಎಲ್ರೂ ಹೇಸಿಗೆಗೆ ಕಾಯ್ಕಂಡಿರ್ತಾರೆ... ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ರೆ ಹುಚ್ಚ ಆಗ್ತಿನಿ... ಪ್ಲೀಜ್ ನೀವೆಲ್ಲ ಹೆಲ್ಪ್ ಮಾಡಿ... ಹಳೇ ನೋಟ್ಸ್ ಗಳನ್ನೆಲ್ಲ ಕೊಡಿ, ಮತ್ತೆ ಎಕ್ಸಾಮ್ ಕಟ್ಟಿ ಪಾಸ್ ಮಾಡ್ಕೊತಿನಿ... ನನಗೂ ನಿಮ್ ತರಾ ಅದೇ ಫೀಲ್ಡ್ ಗೆ ಬರಬೇಕೂ ಅಂತಾಸೆ... ಅಟ್ ಲಿಸ್ಟ್ ಅಲ್ಲಿ ಮನುಷ್ಯನಾಗಿ ಬದುಕಬಹುದು" ಅಂತ ಮಾತನಾಡಿದ. ನನಗೆ ಅವ್ನ ದನಿ ಕೇಳಿ ನಿಜಕ್ಕೂ ಬೇಸರ ಆಯ್ತು.... ಕಾಲೇಜಲ್ಲಿ ಹಸಿದ ಹೆಬ್ಬುಲಿಯಂಗೆ ಯಾವತ್ತೂ ಜಗಳಕ್ಕೆ ಕಾಯ್ಕಂಡಿರ್ತಿದ್ದ. ನನ್ನ ಜೊತೆ ಅಂತೂ ಒಂದೇ ಸೆಮ್ ನಲ್ಲಿ ನಾಲ್ಕಾರು ಬಾರಿ ಜಗಳ ಮಾಡಿದ್ದ. "ನನ್ನ ಹತ್ರ ಇರೋ ಎಲ್ಲಾ ನೋಟ್ಸ್ ಕೊಡ್ತೀನಿ ಆದ್ರೂ ಮತ್ತೊಮ್ಮೆ ಯೋಚ್ನೆ ಮಾಡು. ಯಾಕಂದ್ರೆ. ಯಾವ ಫೀಲ್ಡ್ ಆದ್ರೂ ಅಷ್ಟೆ, ನಮ್ಮನ್ನ ಕರೆದು ಮಣೆ ಹಾಕ್ಲಿ, ನಮ್ಮ ಪ್ರತಿಭೆಯನ್ನು ತಾವೇ ಗುರುತಿಸಿ ನಮಗೊಂದು ಸ್ಪೇಸ್ ಕೊಡ್ಲಿ ಅಂತಾ ಕಾಯೋದು ಮೂರ್ಖತನ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗ್ತಾ ಇರಬೇಕಷ್ಟೆ... ನಿಯತ್ತು ಇದ್ರೆ ಇವತ್ತಲ್ಲ ನಾಳೆ ನಮಗೂ ಒಂದ್ ಕಾಲ ಬರತ್ತೆ. ಅದಕ್ಕೆ ಕಾಯ್ಬೇಕು" ಅಂತ ಹೇಳಿದೆ.
    ಯಾರೋ ಬಕೇಟ್ ಹಿಡಿತಾರೆ ಅಂತ ನಾವು ಎದ್ದು ಓಡೋಕಾಗುತ್ತಾ? ಹಾಗೆ ಓಡೋದಾದ್ರೆ ಎಲ್ಲಿಗೆ ಓಡೋದು? ಎಲ್ಲಾ ಕಡೆ ಅಂಥವರು ಇದ್ದೇ ಇರ್ತಾರಲ್ಲ!!!!!!!!!!

    ReplyDelete
  25. ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಪರ್ಯಾಯವಾಗಿ ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಮಾಧ್ಯಮವು ಮಹತ್ವ ಪಡೆದುಕೊಳ್ಳಲಿದೆ. ಇದರಿಂದ ಜಾಹೀರಾತುದಾರರ, ಮಾಲಕರ, ಬಂಡವಾಳಗಾರರ ಹಿತಾಸಕ್ತಿಗಳಿಂದಾಗಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದ ಮುಖ್ಯ ವಾಹಿನಿಯ ಪತ್ರಿಕೆ, ಟಿವಿ ಮಾಧ್ಯಮಗಳಿಗೆ ಪರ್ಯಾಯವೊಂದು ರೂಪುಗೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬರುತ್ತವೆ. ಇಂಟರ್ನೆಟ್ ಸಾಕ್ಷರರ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಹಾಗೂ ಇಂಟರ್ನೆಟ್ ದರಗಳು ಅಗ್ಗವಾದಂತೆ ಇಂಟರ್ನೆಟ್ ಪತ್ರಿಕೆಗಳು/ಬ್ಲಾಗುಗಳು /ವೆಬ್ ಸೈಟುಗಳು ಕಡಿಮೆ ವೆಚ್ಚದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪುವ ವೈಶಿಷ್ಟ್ಯ ಹೊಂದಿವೆ. ಇವುಗಳಿಗೆ ಜಾಹೀರಾತುದಾರರ, ಬಂಡವಾಳಗಾರರ, ರಾಜಕಾರಣಿಗಳ ಹಂಗಿಲ್ಲ. ಇದೀಗ ಕಡಿಮೆ ವೆಚ್ಚದ ಟ್ಯಾಬ್ಲೆಟ್ ಕಂಪ್ಯೂಟರ್ಗಳು (ಡಾಟಾ ವಿಂಡ್ ೩೦೦೦ ರೂಪಾಯಿಗಳಿಗೆ ಇವುಗಳನ್ನು ಮಾರುಕಟ್ಟೆಗೆ ನವೆಂಬೆರ್ ಅಂತ್ಯದಿಂದ ಬಿಡಲಿದೆ) ಬರಲಿದ್ದು ಇವು ಇಂಟರ್ನೆಟ್ ಅನ್ನು ಜನಸಾಮಾನ್ಯರಿಗೆ ತಲುಪಿಸಲು ಮಹತ್ವದ ಪಾತ್ರ ವಹಿಸಲಿವೆ. ಹೀಗಾದಾಗ ಮೊಬೈಲ್ ಫೋನುಗಳಂತೆ ಇವುಗಳು ಜನಸಾಮಾನ್ಯರನ್ನು ತಲುಪಲಿವೆ. ಇಂಟರ್ನೆಟ್ ಬಳಕೆ ಹೆಚ್ಚಿದಂತೆ ಅದರ ದರಗಳು ಮೊಬೈಲ್ ದರಗಳಂತೆ ಅಗ್ಗವಾಗಲಿವೆ. ವಯರ್ಲೆಸ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಸೌಲಭ್ಯ ಮುಂಬರುವ ದಿನಗಳಲ್ಲಿ ದೇಶದಲ್ಲಿ ಹೆಚ್ಚಲಿದ್ದು ಇದರಿಂದ ಜನಸಾಮಾನ್ಯರು ಇಂಟರ್ನೆಟ್ ಬಳಸಲು ಅನುಕೂಲವಾಗಲಿದೆ. ಇದು ಇಂದಿನ ಮಾಧ್ಯಮ ಲೋಕದ ಯಜಮಾನರುಗಳ, ಜಾಹೀರಾತುದಾರರ ಏಕಸ್ವಾಮ್ಯವನ್ನು ಮುರಿಯಲಿರುವುದು ಖಚಿತ. ಇಂಟರ್ನೆಟ್ ಪತ್ರಿಕೆ, ವೆಬ್ ಸೈಟ್, ಬ್ಲಾಗ್ ಗಳಿಗೆ ಪತ್ರಿಕೆಗಳಂತೆ ಮುದ್ರಣ ವೆಚ್ಹ, ಮುದ್ರಣ ಕಾಗದದ ವೆಚ್ಚ, ಸಾಗಣೆ ವೆಚ್ಚ, ಏಜೆಂಟರ ಕಮಿಷನ್, ಪತ್ರಿಕೆ ಹಾಕುವ ಹುಡುಗರ ವೆಚ್ಚ ಇವ್ಯಾವುದೂ ಇರದಿರುವುದರಿಂದ ಇವುಗಳನ್ನು ನಡೆಸಲು ಹೆಚ್ಚಿನ ವೆಚ್ಚ ಬೀಳಲಾರದು. ಟಿವಿ ಮಾಧ್ಯಮದಂತಲ್ಲದೆ ಇಂಟರ್ನೆಟ್ ಮಾಧ್ಯಮದಲ್ಲಿ ಓದುಗರು ತಮ್ಮ ಅಭಿಪ್ರಾಯಗಳನ್ನು ತಕ್ಷಣವೇ ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇರುವುದರಿಂದ ಇದು ಜನಾಭಿಪ್ರಾಯ ರೂಪಿಸಲು ಮುಂಬರುವ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ.- ಆನಂದ ಪ್ರಸಾದ್

    ReplyDelete
  26. ಪತ್ರಕರ್ತರ ವೃತ್ತಿ ಅಭದ್ರತೆ ಬಗ್ಗೆ ಓದುತ್ತಿದ್ದೆ. ಇಂದು ಮಾಧ್ಯಮ ಉಧ್ಯಮವಾಗಿದೆ. ಹಾಗೆಯೇ ಪತ್ರಿಕಾ ಸೇವೆಯೂ ಸರಕಾಗಿ ಹೋಗಿದೆ. ಮಿತಿಗಳ ನಡುವೆಯೂ ಇಲ್ಲಿ ಜನಪರವಾಗಿ ತುಡಿಯುವವರಿಗೆ ಸಾಧ್ಯತೆಗಳುಂಟು. ಜನಪರ ತುಡಿತ ಎಂದರೆ ನಿಸ್ವಾರ್ಥದಿಂದ ತನ್ನ ಬದುಕು ಸಾಗಿಸುವ ಕಲೆ. ಬರಹ, ಬದುಕು ಮತ್ತು ನಮ್ಮ ನೋಟದಲ್ಲಿ ಈ ಜನಪರತೆ ಮೂಡಿದಲ್ಲಿ ಅದು ನಿಜಕ್ಕೂ ಇನ್ನೊಬ್ಬರಿಗೆ ಪ್ರೇರಣೆ ನೀಡುತ್ತದೆ. ಇದರ ಬಗ್ಗೆ ಯೋಚಿಸೋಣ. ನಮ್ಮ ಈ ತುಡಿತ ಒಬ್ಬನ ಮನ ಗೆದ್ದರೆ ಅದು ಮಾಧ್ಯಮ ಧರ್ಮಕ್ಕೆ ದೊರೆತ ಜಯ ಅಲ್ಲವೇ?

    ReplyDelete
  27. ಇಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಹಲವರು(ಎಲ್ಲರೂ!) ಅಕಸ್ಮಾತ್ ಆಗಿ ಪತ್ರಿಕೋದ್ಯಮಕ್ಕೆ ಬಂದು ಸಿಲುಕಿದವರು! ಬಹುಷಃ ಯಾರೂ ನಾನು ಪತ್ರಕರ್ತ ಆಗಬೇಕು ಅಂತ ಬಯಸಿ ಬಂದವರಲ್ಲ.

    ಆದರೆ ಅದೃಷ್ಟವಶಾತ್ ಈಗಿನ ಪೀಳಿಗೆಗೆ ಪತ್ರಿಕೋದ್ಯಮವನ್ನು ಓದೋ ಅವಕಾಶವಿದೆ. ಹಾಗಾಗಿ ಇದೊಂದು ಸ್ವಯಂಕೃತ ಅಪರಾಧ ಆಗಿಬಿಡುತ್ತೆ!

    ನನಗೆ ಯಾವಾಗಲೂ ಮಿಲಿಟರಿ ಸೇರಬೇಕೆಂದು ಆಸೆ ಇತ್ತು. ಆದರೆ ದೇಶಕ್ಕಾಗಿ ಸಾಯೋದಕ್ಕೂ ಅರ್ಹತೆ ಬೇಕು, ಎದೆ ಅಳತೆ ಇಷ್ಟೆ ಇರಬೇಕು ಅಂತ ಗೊತ್ತಾಗಿ ತೆಪ್ಪಗೆ ಕೂರಬೇಕಾಯಿತು.
    ಆದರೆ ಯಾವಾಗ ಜಾಲಹಳ್ಳಿಯ ಏರ್ ಫೋರ್ಸ್ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಸೇರಿದ್ದ ಹುಡುಗರಲ್ಲಿ ಉಫ್ ಎಂದು ಊದಿದರೆ ಬೀಳುವ ಕ್ಯಾಂಡಿದೇಟ್ ಗಳೂ ಇದ್ದುದನ್ನು ನೋಡಿ, ಅಯ್ಯೋ 'ಅಲ್ಲೂ' 'ಅದು' ನಡೆಯುತ್ತದೆಯೇ! ಎಂದು ಆಶ್ಚರ್ಯ ಪಟ್ಟದ್ದು ಸುಳ್ಳಲ್ಲ!

    ಯಾವ ಕೆಲಸದಲ್ಲೂ 100% ಪ್ರಾಮಾಣಿಕತೆ, ಆದರ್ಶ ಇರುವುದಿಲ್ಲ. ಇರುವ ವಾತಾವರಣದಲ್ಲಿಯೇ ಸಮಾಜಕ್ಕೇನಾದರೂ ಹಿಂತಿರುಗಿಸಿದಲ್ಲಿ ಅದೇ ದೊಡ್ಡ ಸಾಧನೆ!

    ಇತರ ಎಲ್ಲಾ ಉದ್ಯಮಗಳ ಹಾಗೆ ಪತ್ರಿಕೋದ್ಯಮವೂ ಒಂದು ಟೀಮ್ ವರ್ಕ್! ನಾನೊಬ್ಬನೇ ಎಲ್ಲವನ್ನೂ ಮಾಡುತ್ತೇನೆ ಅನ್ನೋದು ಅಲ್ಲಿಯೂ ಸಲ್ಲುವುದಿಲ್ಲ.

    ಇಲ್ಲಿಂದ 'ಎಸ್ಕೇಪ್' ಆಗಿ ಬೇರೆಲ್ಲೋ ಹೋದರೆ 'ಬಾಣಲೆಯಿಂದ ಬೆಂಕಿಗೆ' ಬೀಳೋ ಸಾಧ್ಯತೆಗಳೆ ಹೆಚ್ಚು!

    ReplyDelete
  28. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. - ಈ ವಾಕ್ಯ ನನ್ನ ಆಕರ್ಷಿಸಿತು. ನಿಜ. ಎಲ್ಲ ಕ್ಷೇತ್ರಗಳು ಬಹುಮಟ್ಟಿಗೆ ಗಬ್ಬೆದ್ದು ಹೋಗಿವೆ. ನಿಮಗೆ ಪತ್ರಿಕೋದ್ಯಮ ವೈರಾಗ್ಯ ತರಿಸಿದೆ. ನನಗೆ ಶಿಕ್ಷಣ ಕ್ಷೇತ್ರ ಅಸಹ್ಯ ಹುಟ್ಟಿಸಿದೆ. ಇಬ್ಬರದೂ ಒಂದೇ ರೀತಿಯ ಅನುಭವ. ನಿಮ್ಮದು ಪತ್ರಿಕೋದ್ಯಮ ಕ್ಷೇತ್ರ... ನನ್ನದು ಶಿಕ್ಷಣ ಕ್ಷೇತ್ರ....

    ನಿಮ್ಮ ಬ್ಲಾಗ್ ಹೆಸರನ್ನು ನನ್ನ ಬ್ಲಾಗ್‍ನಲ್ಲಿ ಸೇರಿಸ್ತೀನಿ. ಅಷ್ಟರ ಮಟ್ಟಿಗೆ ನಿಮ್ಮ ಬ್ಲಾಗ್ ಇಷ್ಟವಾಯಿತು. ಈ ಗುಣಮಟ್ಟ ಹೀಗೆ ಕಾಯ್ದುಕೊಂಡು ಹೋಗಿ.
    www.jnanamukhi.blogspot.com

    ReplyDelete
  29. ನಿಜ ಇಷಾದ ನೀವು ಹೇಳಿದ್ದು 100% ನಿಜ. ನಾನು ಸಹ ಕಳೆದ 4 ಸಂವತ್ಸರಗಳಿಂದ ಪತ್ರಿಕೋದ್ಯಮ ( ಪತ್ರಿಕಾರಂಗ ಈಗಿಲ್ಲ)ದಲ್ಲಿದ್ದೇನೆ. ರಾಜ್ಯ ಮಟ್ಟದ ದೊಡ್ಡ ಪತ್ರಿಕೆಯಲ್ಲಿ ಸಣ್ಣ ವರದಿಗಾರನಾಗಿದ್ದ ನನಗೂ ಒಂದು ಜಿಲ್ಲೆಯ ಜವಾಬ್ದಾರಿ ನೀಡಲಾಗಿತ್ತು. ಅಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅತಿನಿಷ್ಠೆಯಿಂದ ಇದ್ದದ್ದು. ಇದು ನಮ್ಮ ಆಡಳಿತ ಮಂಡಳಿಗೆ ಹಿಡಿಸಲಿಲ್ಲ ಅದಕ್ಕೆ ನನಗೆ ಕೊಟ್ಟ ಉಡಗೊರೆ ಏನು ಗೊತ್ತಾ ಕೆಲಸದಿಂದ ವಜಾಗೊಳಿಸಿದ್ದು. ಅವರು ಹೇಳಿದ ಹಾಗೆ ಲಕ್ಷಾಂತರ ರೂ ಸಂಪಾದನೆಗೆ ತೊಡಗಿಕೊಂಡಿದ್ದರೆ ಜೊತೆಗೆ ಅವರಿಗೂ ಪಾಲು ನೀಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಇಲ್ಲಿ ನಾನು ಕಲಿತಿರುವ ಒಂದು ಪಾಠವೆಂದರೆ ಯಾವುದೇ ಕಾರಣಕ್ಕೂ ಪಲಾಯನ ಮಾಡದೆ ಅವರ ಮುಂದೆಯೇ ಸೆಟೆದು ನಿಲ್ಲುವುದು. ಕಾರಣ ತಾವು ಸಹ ಎಲ್ಲಿಯೂ ಹೋಗದೆ ವೃತ್ತಿಯನ್ನು ಮುಂದುವರೆಸಿ ನಾವು ನಿಮ್ಮಜೊತೆಗಿದ್ದೇವೆ.

    ReplyDelete