Thursday, February 9, 2012

ಒಬ್ಬ ಧೂರ್ತ ನೀಲಿಚಿತ್ರ ನೋಡಿದ, ನೀವು ಕೋಟ್ಯಂತರ ಜನರು ನೋಡುವಂತೆ ಮಾಡಿದಿರಿ...!


ಒಟ್ಟು ಹನ್ನೆರಡು ನಿಮಿಷಗಳ ಟೇಪು ನಮ್ಮ ಬಳಿ ಇದೆ ಎಂದು ಚಾನಲ್‌ಗಳು ಹೇಳಿಕೊಳ್ಳುತ್ತಿವೆ. ಅದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಚಾನಲ್ ಗಳಲ್ಲಿ ಪ್ರಸಾರವಾಗಿದ್ದು ಎಷ್ಟು ಗಂಟೆಗಳ ಕಾಲ? ಐಬಿಎನ್ ನಂಥ ಚಾನಲ್ ಗಳು ಮೊಬೈಲ್ ಪರದೆಯನ್ನು ಪೂರ್ತಿ ಮಸುಕು ಮಾಡಿ ಪ್ರಸಾರ ಮಾಡಿದವು. ಕನ್ನಡದ ಕೆಲ ಚಾನಲ್‌ಗಳು ಅರೆಬರೆ ಮಸುಕು ಮಾಡಿ ಗಂಟೆಗಟ್ಟಲೆ ಪ್ರಸಾರ ಮಾಡಿದವು. ಆರಂಭದಲ್ಲಂತೂ ಕೆಲ ಚಾನಲ್‌ಗಳು ಒಂಚೂರೂ ಮುಸುಕು ಮಾಡದೇ, ನೀಲಿಚಿತ್ರಗಳನ್ನು ಯಥಾವತ್ತಾಗಿ ಪ್ರಸಾರವನ್ನೇ ಮಾಡಿಬಿಟ್ಟವು.

ಮುಠ್ಠಾಳ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ನೋಡಿದ. ಅದನ್ನು ಇನ್ನೊಬ್ಬ ಮಂತ್ರಿ ಇಣುಕಿದ. ತನ್ನ ಮೊಬೈಲನ್ನು ಕೊಟ್ಟು ಈ ಚಿತ್ರಗಳನ್ನು ನೋಡಿ ಎಂದವನು ಮತ್ತೊಬ್ಬ ಮಂತ್ರಿ. ಈ ನೀಚ ಕೆಲಸಕ್ಕೆ ಆ ಮೂವರೂ ಮಂತ್ರಿಪದವಿ ಕಳೆದುಕೊಂಡಿದ್ದಾರೆ. ಟಿವಿ ಚಾನಲ್‌ಗಳು ಸಾಹಸಕ್ಕೆ ಶಹಬ್ಬಾಸ್ ಅನ್ನೋಣ.

ಆದರೆ ಇದೇ ಚಾನಲ್ ಗಳು ಇದೇ ಬ್ಲೂಫಿಲ್ಮ್ ನ ತುಣುಕುಗಳನ್ನು ಕೋಟ್ಯಂತರ ಜನರು ನೋಡುವಂತೆ ಮಾಡಿದರಲ್ಲ? ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನು ತೋರಿಸಿದರಲ್ಲ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು? ಸಚಿವತ್ರಯರ ನೀಲಿಚಿತ್ರ ವೀಕ್ಷಣೆಯನ್ನು ಹಲವು ಹಾಡುಗಳನ್ನು ಬಳಸಿ ತಮಾಶೆಯಾಗಿ ತೋರಿಸುವ ಪ್ರಯತ್ನವನ್ನೂ ಚಾನಲ್‌ಗಳು ಮಾಡಿದವು. ಜತೆಗೆ ಅಯ್ಯೋ ಅಮ್ಮಾ ಎನ್ನುವ ಹೆಣ್ಣು ಕಂಠದ ಕಾಮೋದ್ವೇಗದ ಆರ್ತನಾದವೂ ಕೇಳಿಬಂತು. ಮನೆಮಕ್ಕಳು, ಹೆಂಗಸರು, ಹಿರಿಯರು ಇದನ್ನು ನೋಡಲು ಸಾಧ್ಯವೇ ಎಂಬ ಕನಿಷ್ಠ ಸಾಮಾನ್ಯಪ್ರಜ್ಞೆಯನ್ನೂ ಚಾನಲ್‌ಗಳು ಮರೆತವು. ಅವರಿಗೆ ತತ್ ಕ್ಷಣದ ಟಿಆರ್ ಪಿ ಬೇಕಿತ್ತು. ಇತರ ಚಾನಲ್ ಗಳನ್ನು ಹಿಂದಿಕ್ಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ ಒಂದಕ್ಕೊಂದು ಸ್ಪರ್ಧೆ ನಡೆಸುತ್ತಾ, ಲಕ್ಷಾಂತರ ಜನರಿಗೆ ನೀಲಿ ಚಿತ್ರಗಳನ್ನು ತೋರಿಸಿಯೇಬಿಟ್ಟವು, ಗಂಟೆಗಟ್ಟಲೆ, ದಿನಗಟ್ಟಲೆ...

ಇಷ್ಟೆಲ್ಲ ಮಾಡುವ ಚಾನಲ್ ಗಳ ನಿರೂಪಕರು ಸಚಿವತ್ರಯರನ್ನು ಪೋಲಿಗಳು, ಕಾಮಾಂಧರು, ದರ್ಟಿ ಪಾಲಿಟಿಷಿಯನ್ಸ್ ಎಂದೆಲ್ಲಾ ನೇರಾನೇರ ಬೈಯುತ್ತಲೇ ಇದ್ದರು. ಜನರ ಆಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಅವಕಾಶವನ್ನೂ ಯಾವ ನಿರೂಪಕನೂ ಬಿಡಲಿಲ್ಲ. ಆದರೆ ಅದೇ ಸಮಯಕ್ಕೆ ಸಚಿವತ್ರಯರು ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಪ್ರಮಾದವನ್ನು ತಾವೇ ಮಡುತ್ತಿದ್ದೇವೆಂಬುದನ್ನು ಅವರು ಮರೆತರು.

ಎಷ್ಟು ವಿಚಿತ್ರವೆಂದರೆ ಪ್ರತಿ ನ್ಯೂಸ್ ಚಾನಲ್‌ಗಳೂ ಸಚಿವರ ಬ್ಲೂಫಿಲ್ಮ್ ವೀಕ್ಷಣೆಯ ಸುದ್ದಿಯನ್ನು ಬ್ರೆಕ್ ಮಾಡಿದ್ದು ತಾವೇ ಮೊದಲು ಎಂದು ಹೇಳಿಕೊಂಡವು. ಕೆಲ ಚಾನಲ್‌ಗಳಂತೂ ತಮ್ಮ ಕ್ಯಾಮರಾಮೆನ್‌ಗಳ ಸಂದರ್ಶನವನ್ನೂ ಪ್ರಸಾರ ಮಾಡಿದವು. ಒಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದ ಸುದ್ದಿಯನ್ನು ಬಿತ್ತರಿಸುವ ಧಾವಂತಕ್ಕಿಂತ, ಈ ಸುದ್ದಿ ಹಿಡಿದುತಂದಿದ್ದು ನಾವೇ ಎಂಬ ಅಹಂ ಮತ್ತು ಅದರಿಂದ ಬರುವ ಲಾಭವೇ ಚಾನಲ್ ಗಳಿಗೆ ಮುಖ್ಯವಾದಂತೆ ಕಂಡುಬಂತು.

ವಿಧಾನಸೌಧದಲ್ಲಿ ಕಲಾಪ ನಡೆಯುವಾಗಲೇ ಸಚಿವರುಗಳು ಬ್ಲೂಫಿಲ್ಮ್ ನೋಡಿದರು. ನೈತಿಕ ದೃಷ್ಟಿಯಿಂದ, ಕಾನೂನಿನ ದೃಷ್ಟಿಯಿಂದ ಇದು ಅಪರಾಧ. ಅದನ್ನು ಬಯಲು ಮಾಡಿದ್ದೂ ಕೂಡ ಶ್ಲಾಘನೀಯವೇ ಹೌದು. ಆದರೆ ಅದನ್ನು ಹೇಳುವ ಭರದಲ್ಲಿ ಚಾನಲ್‌ಗಳು ಹದ್ದುಮೀರಿ ಯಥಾವತ್ ದೃಶ್ಯಗಳನ್ನು ಪ್ರಸಾರ ಮಾಡಿದವು. ಅದು ಅನಿವಾರ್ಯವೇನೂ ಆಗಿರಲಿಲ್ಲ. ಅದಕ್ಕೆ ಹೊರತಾದ ಮಾರ್ಗವೂ ಇತ್ತು. ಚಾನಲ್ ಗಳ ಮುಖ್ಯಸ್ಥರ ಜಾಗದಲ್ಲಿ ಕುಳಿತವರು ಆತ್ಮವಂಚಕರಾದಾಗ ಹೀಗೆಲ್ಲಾ ಆಗಿಬಿಡುತ್ತದೆ.

ಇಷ್ಟೆಲ್ಲ ಮಾಡಿದ ಚಾನಲ್ ಗಳು ಸ್ವತಃ ಲಕ್ಷ್ಣಣ ಸವದಿಯೇ ಪ್ರತಿಕ್ರಿಯೆ ನೀಡುತ್ತಿದ್ದಾಗ ಆತನನ್ನು ಸರಿಯಾದ ದಾರಿಯಲ್ಲಿ ಪ್ರಶ್ನಿಸಲು ವಿಫಲವಾದವು. ಲಕ್ಷ್ಮಣ ಸವದಿಯ ಪ್ರಕಾರ ಆತ ನೋಡಿದ್ದು ಬೇರೊಂದು ದೇಶದಲ್ಲಿ ನಡೆದ ನೈಜ ಘಟನೆಯೊಂದರ ವಿಡಿಯೋ. ಒಬ್ಬ ಹುಡುಗಿಯನ್ನು ನಾಲ್ವರು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲುತ್ತಾರೆ, ಆಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾರೆ. ಪೊಲೀಸರು ನಾಲ್ವರನ್ನು ಬಂಧಿಸಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ಇದು ಸವದಿ ನೋಡಿದ ವಿಡಿಯೋವಂತೆ.

ನೀಲಿಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ, ಅತ್ಯಾಚಾರ ಪ್ರಕರಣ ಹಾಗಲ್ಲ. ನೀಲಿ ಚಿತ್ರಗಳನ್ನು ನೋಡುವವರಿಗೂ ಅತ್ಯಾಚಾರ ದೃಶ್ಯಗಳನ್ನು ನೋಡುವ ಮನಸ್ಸಾಗುವ ಸಾಧ್ಯತೆ ಕಡಿಮೆ. ಈ ರೀತಿಯ ಸಾಮೂಹಿಕ ಅತ್ಯಾಚಾರ ದೃಶ್ಯವನ್ನು ನೋಡುವವರು ವಿಕೃತರೂ, ಕ್ರೂರ ಮನಸ್ಸಿನವರೂ ಸ್ಯಾಡಿಸ್ಟ್ ಗಳೂ ಆಗಿರಬೇಕು. ನೀವು ನೀಲಿ ಚಿತ್ರಗಳನ್ನು ನೋಡುವುದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೀರಿ ಎಂದು ಚಾನಲ್ ನಿರೂಪಕರು ಕೇಳಬಹುದಿತ್ತು, ಕೇಳಲಿಲ್ಲ.

ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಬಾಲಿವುಡ್ ನ ಹಸಿಹಸಿ ಸೆಕ್ಸ್ ದೃಶ್ಯಗಳಿರುವ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೀಡುತ್ತ ಬಂದಿವೆ. ನೀಲಿ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಇರುವ ಹಲವು ಸಿನಿಮಾಗಳ ದೃಶ್ಯಗಳನ್ನು ಒಂದೆಡೆ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಕೊಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಸಚಿವರುಗಳ ಸೆಕ್ಸ್ ದೃಶ್ಯ ವೀಕ್ಷಣೆಯನ್ನು ಖಂಡಿಸುವ ಜತೆಜತೆಗೆ ತಾವೇನು ಮಾಡುತ್ತಿದ್ದೇವೆಂಬುದನ್ನೂ ಈ ಚಾನಲ್‌ಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಸಚಿವತ್ರಯರು ಕರ್ನಾಟಕದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ನಮ್ಮ ಚಾನಲ್ ಗಳು ಕರ್ನಾಟಕದ ಮನಸ್ಸುಗಳನ್ನೇ ಕೆಡಿಸುವ ಕೆಲಸ ಮಾಡಿದವು. ಯಾರ ಅಂಕೆಗೂ ಸಿಗದ ಚಾನಲ್‌ಗಳು ಇನ್ನೇನೇನು ಅನಾಹುತಗಳನ್ನು ಮಾಡುತ್ತವೆಯೋ ಕಾದು ನೋಡಬೇಕು.

14 comments:

 1. chandravarma b yadavaFebruary 9, 2012 at 2:50 PM

  Its a very true thought...i would like to appreciate the work efficiency of the cameraman who has captured... but i did not like the way the media people had expressed the topic.

  ReplyDelete
 2. ಇವರಿಗೆ TRP ಬೇಕು..ಆ ಕಾರಣಕ್ಕಾಗಿ ಸದನದಲ್ಲಿ ಗುಟ್ಟಾಗಿ ನೋಡಿದ್ದನ್ನ ಊರಿಗೆಲ್ಲ
  ತೋರಿಸಿ ಬಹಳ ಘನಂದಾರಿ ಕೆಲಸ ಮಾಡಿದ್ದರೆ. ಅದಕ್ಕೆ ಬೆನ್ನು ತಟ್ಟಿ ಶಃಬಾಶ್ ಬೇರೆ ಕೇಡು.
  ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನುತೋರಿಸಿದರಲ್ಲಾ ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು
  ಮಾಧ್ಯಮದವರು ಅಂದ್ರೆ ನೈತಿಕತೆ ಬೇಡವಾ?? ಜವಾಬ್ದಾರಿ ಬೇಡವಾ?? ನಿಮಗೆ ಯಾವುದೇ ಹೊಣೆ ಇಲ್ಲವಾ??
  -ಸತ್ಯ

  ReplyDelete
 3. Their punchline is simple and clear..."Noodta Iri...Yenen Madtivi"

  ReplyDelete
 4. ಇನ್ನೊಂದು ಗಮನಿಸ ಬೇಕಾದ ಅಂಶ, ನಿರೂಪಕನಿಗೆ ಶಾಸಕನೋಟ್ಟಿಗೆ ನೇರಾ ನೇರ ಮಾತನಾಡಲು ಅವಕಾಶವಿದ್ದಾಗಿಯೂ, ನೇರ ನೇರ ಪ್ರಶ್ನೆ ಕೇಳದೆ ಸುತ್ತಿ ಬಳಸಿ ಮಾತಾಡಿಸಿ, ಕಡೆಗೆ ಸವದಿ, ತಾ ಮಾಡಿದ್ದು ತಪ್ಪೇ ಅಲ್ಲ ಅನ್ನೋ ಸಮರ್ಥನೆ ಹೇಳಿಕೆ ನೀಡೋ ಹಾಗಾಯ್ತು. ಶಾಸಕರನ್ನು ಬೇಗ ಮಾತಾಡಿಸಿ ಬಿಟ್ಟರೆ ಟಿಆರ್ ಪಿ ಗತಿ? ಪಾಪ ಮಾಧ್ಯಮದವರಿಗೆ ಸುದ್ದಿ ನೆ ಇಲ್ಲದೆ ಓದ್ದಾಡುವಂಥ ಸಮಯದಲ್ಲಿ, ಅಕ್ಷಯ ಪಾತ್ರೆ ಥರ ಸಿಕ್ಕಿದಲ್ವ ಈ ಶಾಸಕರ 'ಪೋಲಿ'ಟಿಕ್ಸ, ಅದನ್ನೇ ಬಿಟ್ಟು ಬಿಡದೆ ತೋರಿಸಿ ತೋರಿಸಿ ನೋಡುವವವ್ರಿಗೆ ವಾಕರಿಕೆ ಬಂದರೂ ಪರವಾಗಿಲ್ಲ, ಎಂಥ ಸುದ್ದಿ, ಮಿಸ್ ಆದ್ರೆ ಏನ್ ಕಥೆ,ನಮ್ಮನೆ ಅಪ್ರಭುದ್ಧ ಮಕ್ಕಳು, ಅಪ್ಪ-ಅಮ್ಮನ್ನ, ಆ ಚಿತ್ರದಲ್ಲೇನ್ ನಡೀತಿದೆ ಅಂತ ಪ್ರಶ್ನಿಸಿದರೂ ಪರವಾಗಿಲ್ಲ, ಅದನ್ನ ಹೇಗೆ ಡೌನ್ಲೋಡ್ ಮಾಡಿ ನೋಡೋದು ಅಂತಾನೂ ತೋರಿಸಿ ಪಾವನವಾದರು! ಇನ್ನು ಶಾಸಕರ ನೈತಿಕತೆ ಪ್ರಶ್ನೆ ಮಾಡುವ, ಇವರುಗಳು, ಅಕಸ್ಮಾತಾಗಿ ಮತ್ತೆ ಮುಂದಿನ ಚುನಾವಣೆಯಲ್ಲಿ ಆರಿಸಿ ಬಂದರೆ, ಹಿಂದೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಅವರನ್ನೇ ತಂದು ಸಿಂಹಾಸನದಲ್ಲಿ ಕೂರಿಸಿ ಚರ್ಚೆ ನಡೆಸುತ್ತಾರೆ. ಹಿಂದೆ ಇದೆ ರೀತಿಯ ಪ್ರಮಾದದಲ್ಲಿ ಸಿಕ್ಕಿ ಬಿದ್ದ ಮಂತ್ರಿಯನ್ನ ದಿನ ಬೆಳಗಾದರೆ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ನೋಡುವ ಸುಭಾಗ್ಯ ನಮ್ಮೆಲ್ಲರದಾಗಿತ್ತು, ಈ ಸುದ್ದಿಯು ಇಂಥ ಸದಾವಕಾಶಗಳ ಹೊರತೇನಲ್ಲ, ನೋಡ್ತಿರಿ ಮುಂದಿನ ಚುನಾವಣೆಗಳಲ್ಲಿ, ರಾಜಿನಾಮೆ ಕೊಟ್ಟ ತ್ರೀಮೂರ್ತಿಗಳು ಮತ್ತೆ ಆರಿಸಿ ಬಂದೆ ಬರುತ್ತಾರೆ, ಅವಾಗ ಹಿಗ್ಗ ಮುಗ್ಗ ಉಗಿದ ಮಾಧ್ಯಮಗಳೇ ಅವರ ಚುನಾವಣೆ ಗೆಲುವಿನ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಾರೆ ನೋಡಿ ಆನಂದಿಸೋಣ !!

  ReplyDelete
 5. ರಾಜ್ಯದ ಜನರ ಪಾಲಿಗೆ ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ!
  ಅದರಲ್ಲೂ 24/7 ನ್ಯೂಸ್ ಚಾನಲ್ಲುಗಳ ಭರಾಟೆಯಲ್ಲಿ ಸುದ್ದಿ ಯಾವುದು, ಮನೋರಂಜನೆ ಯಾವುದು ಎಂಬುದು ಗೊತ್ತೇ ಆಗದಂತೆ ಕನ್ಫೂಸ್ ಆಗಿಹೋಗಿದ್ದ ಕಾಲದಲ್ಲಿ ಮೂವರು ಸಚಿವರ ರಾಜೀನಾಮೆ ಕೊಡುವಂತೆ ಮಾಡಿದವರನ್ನು ಪ್ರೋತ್ಸಾಹಿಸಬೇಕಿದೆ, ಅಭಿನಂದಿಸಬೇಕಿದೆ!
  ಏನಿಲ್ಲವೆಂದರೂ ಪ್ರತಿ ದಿನ ವಿಧಾನಸೌಧದ ಮೆಟ್ಟಿಲು ತುಳಿಯುವ ಕನಿಷ್ಟ ಐವತ್ತು ಅರವತ್ತು ರಾಜಕೀಯ ವರದಿಗಾರರು, ಇದರ ಅರ್ಧದಷ್ಟು 'ವಿಡಿಯೋ ಜರ್ನಲಿಸ್ಟ್'ಗಳು, ಪತ್ರಿಕಾ ಛಾಯಾಗ್ರಾಹಕರ ಪಾಲಿಗೆ ಇದು ಹೆಮ್ಮೆ ಪಡುವ ಬೆಳವಣಿಗೆ. ಬಹುಶಃ ಹಲವು ದಿನಗಳ ನಂತರ ಹೀಗೊಂದು ಬೆಳವಣಿಗೆ ನಡೆದಿದೆ. ನಾನಾ ಜಾತಿಯ, ವಿವಿಧ ಪಕ್ಷಗಳ ಹಿನ್ನೆಲೆಯ, ಹಲವು ಸಿದ್ಧಾಂತಗಳ ಮಾಲೀಕರು ಮತ್ತು ಸಿಬ್ಬಂದಿಗಳ ಕಲಸುಮೇಲೊಗರವಾಗಿರುವ ರಾಜ್ಯದ ಮಾಧ್ಯಮಗಳು ಒಂದೇ ವಿಚಾರದಲ್ಲಿ ವಿಚಿತ್ರ ಸಹಮತವನ್ನು ವ್ಯಕ್ತಪಡಿಸುತ್ತಿರುವುದನ್ನು ಜನ ನೋಡುತ್ತಿದ್ದಾರೆ. 'ಎಲ್ಲಾ ತತ್ವದೆಲ್ಲೆ ಮೀರಿ' ವೃತ್ತಿ ಧರ್ಮವನ್ನು ಪಾಲಿಸಿದ ಸುಸಂದರ್ಭವನ್ನು ಶ್ಲಾಘಿಸದೇ ಇನ್ನೇನು ಮಾಡಲು ಸಾಧ್ಯ ಹೇಳಿ?
  ಇಲ್ಲಿ ಗಮನಿಸಬೇಕಿರುವ ಕೆಲವು ಅಂಶಗಳಿವೆ. ಮಂಗಳವಾರ ಸಂಜೆ ವೇಳೆಗೆ ಎಲ್ಲಾ ನ್ಯೂಸ್ ಚಾನಲ್'ಗಳು ಒಟ್ಟಾಗಿ 'ಪೋರ್ನೊ ಗೇಟ್' ಹಗರಣವನ್ನು ಹೊರಗೆಳದಾಗ ಟಿವಿ ನೋಡುತ್ತ ಕುಳಿತ ಪ್ರತಿ ಮನೆಯಲ್ಲೂ ಪುಟ್ಟದೊಂದು ಚರ್ಚೆ ಆರಂಭವಾಯಿತು. ಹಾಗಂತ ಇದನ್ನು ಅನಿರೀಕ್ಷಿತ ಬೆಳವಣಿಗೆ ಎಂಬಂತೆ ಯಾರೂ ಸ್ವೀಕರಿಸಲಿಲ್ಲ. ಒಂದಷ್ಟು ಗೇಲಿಯ, ಮತ್ತೊಂದಿಷ್ಟು ಮನೋರಂಜನೆಯ ಸುದ್ದಿಯಂತೆ ಎಲ್ಲರೂ ಚಪ್ಪರಿಸಿದರು. ಇಂತವರು ಸದನದ ಮರ್ಯಾದೆ ತೆಗೆದರು ಎಂದು ಸಾಮಾಜಿಕ ತಾಣಗಳಲ್ಲಿ ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಳ್ಳಲು ಶುರುಮಾಡಿದರು.
  ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದು ದಿನ ಪತ್ರಿಕೆಗಳು. ಎರಡು ಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ಅಷ್ಟೂ ಪತ್ರಿಕೆಗಳಲ್ಲಿ ಸುದ್ದಿ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಲಾಯಿತು. ತೀರಾ "ಏಕ ವಚನ"ದಲ್ಲಿ ಹೆಡ್ಲೈನ್ ಕೊಟ್ಟು ಕೊಂಚ ಧೈರ್ಯ ಪ್ರದರ್ಶನವೂ ನಡೆಯಿತು. ಒಂದು ಕಡೆ ಸುದ್ದಿ ರಾಜ್ಯದ ಮೂಲೆಮೂಲೆಗಳಲ್ಲಿ ಚರ್ಚೆ ಶುರುವಾಗುವ ಹೊತ್ತಿಗೆ ಅತ್ತ ದೇಶ ಮತ್ತು ವಿದೇಶದ ಮಾಧ್ಯಮಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತು. ಈ ಮೂಲಕ ರಾಜ್ಯದ ರಾಜಕಾರಣಿಗಳು, ನಂತರ ನಮ್ಮ ವಿಧಾನಸಭೆ, ಆಮೇಲೆ ರಾಜ್ಯದ ಹೆಸರು ಹೀಗೆ "ಹೂವಿನ ಜೊತೆ ನಾರೂ ಸ್ವರ್ಗ ಸೇರುವಂತೆ" ಮೂವರು ಸಚಿವತ್ರಯರ ಜತೆ ನಾವು-ನೀವು ಎಲ್ಲರೂ ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿ ಇಟ್ವಿ. ಇದಕ್ಕೆಲ್ಲಾ ಕಾರಣವಾಗಿದ್ದು ನಮ್ಮ ಸ್ಥಳೀಯ ಸುದ್ದಿ ವಾಹಿನಿಗಳು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳದೆ ಬೇರೆ ದಾರಿಯಾದರೂ ಯಾರಿಗಿದೆ ಹೇಳಿ?
  ಬಹುಷಃ ಈ ಕಾರಣಕ್ಕೆ ಇರಬೇಕು, ವಿದೇಶಿ ಮಾಧ್ಯಮಗಳು ಸುದ್ದಿ ಭಿತ್ತರಿಸುವಾಗ "ಲೋಕಲ್ ನ್ಯೂಸ್ ಚಾನಲ್'ಗಳು ಹೀಗೊಂದು ಸುದ್ದಿ ಹೊರಗೆಳೆದಿವೆ" ಎಂದು ಹೇಳುವುದನ್ನು ಮರೆಯಲಿಲ್ಲ. ಇದನ್ನು ದೂರದಲ್ಲಿ ಕುಳಿತು ನೋಡುತ್ತಿದ್ದವರಿಗೆ "ನಮ್ಮ ಸುದ್ದಿ ವಾಹಿನಿಗಳ" ಬಗ್ಗೆ ಗೌರವ ಹುಟ್ಟದೇ ಇರಲು ಸಾಧ್ಯವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರೋತ್ಸಾಹ ಕೂಡ ವ್ಯಕ್ತವಾಗುತ್ತಿತ್ತು.
  ಆದರೆ ಬುಧವಾರ ಸಂಜೆ ವೇಳೆಗೆ ಶುರುವಾಗಿದ್ದು ಹೊಸ ಆಟ. ಪ್ರತಿ ಚಾನಲ್'ಗಳ ಪರದೆ ಮೇಲೆ ಸುದ್ದಿಯನ್ನು ಮೊದಲು ಸೆರೆಹಿಡಿದಿದ್ದು ನಮ್ಮ "ವಿಡಿಯೋ ಜರ್ನಲಿಸ್ಟ್" ಎಂಬ ಕ್ರೆಡಿಟ್ ಪಡೆಯುವ ಹುನ್ನಾರ ಸ್ಪಷ್ಟವಾಗಿ ಕಾಣಲಾರಂಭಿಸಿತು. ಅಲ್ಲೀವರೆಗೂ ಸಂತಸ ಪಡುವಂತಿದ್ದ ನ್ಯೂಸ್ ಚಾನಲ್'ಗಳ ವೃತ್ತಿಧರ್ಮ ವಾಕರಿಕೆ ಹುಟ್ಟಿಸಿಸೊದೊಂದು ಬಾಕಿ ಇತ್ತು. ಹೇಳಿ, ಅಪರೂಪಕ್ಕೊಂದು ಒಳ್ಳೆಯ ಕೆಲಸ ಮಾಡಿದ ಚಾನಲ್ ಮಂದಿ ಕೊನೆಯಲ್ಲಿ ಈ ಪರಿಯ 'ಮುಗ್ಧತೆ ಪ್ರದರ್ಶನ' ಮಾಡಬೇಕಾಗಿತ್ತಾ.....? - ನಟರಾಜ ಕಾನುಗೋಡು

  ReplyDelete
 6. After SHOWING WITH MASK,CLEARLY TO PUBLIC, MINISTERS ARE DENYING THAT THEY HAVE NOTHING SEEN SUCH THINGS ,SUPPOSE CHANNELS MASKED THESE MINISTERS DEFENSE,PUBLIC COULD HAVE AGREE MINISTERS ARE INNOCENT ,MEDIA IS WRONG . WHAT CHANNELED FOR EVIDENCE ,REALTY TO PEOPLE IS RIGHT ,SHOULD DILUTE ISSUE IT RELATED WITH LEADERS MORALITY .

  ReplyDelete
 7. ಥೂ... ಈ ಕಚಡಾ ಚಾನಲ್ ಗಳಿಗೆ ಅ ಮೂರೂ ಮೂಟ್ಟಾಳರಿಗಿಂತ ಹೆಚ್ಹು ಶಿಕ್ಶೆ ಆಗಬೇಕು... ನನ್ನ ೪ ವರ್ಷದ ಮಗ ಕೇಳ್ತಾನೆ ’ಅಪ್ಪ ಸೆಕ್ಸ್ ಸ್ಕ್ಯಾಂಡಲ್’ ಅಂದ್ರೆ ಏನಪ್ಪಾ" ಯಾಕಪ್ಪ ಮೊಬೈಲ್ ನಲ್ಲಿ ನೋಡೋದಕ್ಕೆ ಇಂಗೆಲ್ಲಾ ಬೈತಿದಾರೆ ಯಕಪ್ಪಾ ಅಂತ ಕೇಳ್ತಾನೆ.. ಏನ್ ಮಾಡೋದು.. ಅದಕ್ಕೇ ನಮ್ ಟಿ.ವಿ. ನಲ್ಲಿ ನ್ಯೂಸ್ ಚಾನಲ್ ಎಲ್ಲಾ ಡಿಲಿಟ್ ಮಾಡ್ಬಿಟ್ಟೆ..

  ReplyDelete
 8. Very rightly said. Media is supposed to be the voice of the nation in right way but today we see it more in wrong side by trying to get TRP and increase the number of viewers by providing MASALA filled news.

  ReplyDelete
 9. ಮಾನ್ಯರೆ,

  ಒಬ್ಬ ಧೂರ್ತ ನೋಡಿದ ನೀಲಿ ಚಿತ್ರ, ನೀವು ಕೋಟ್ಯಂತರ ಜನ ನೋಡುವಂತೆ ಮಾಡಿದಿರಿ. . .! ಎಂಬ ಶೀರ್ಷಿಕೆ ಅಡಿಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಓದಿದೆ. ನಿಮಗೆ ನನ್ನ ಹಾರ್ದಿಕ ಅಭಿನಂದನೆಗಳು.

  ರಾಜ್ಯ ವಿಧಾನಸಭೆಯಲ್ಲಿ ನಡೆದ ಈ ಪ್ರಕರಣವನ್ನು ಮಾಧ್ಯಮಗಳು ಪ್ರಕಟಿಸಲೇ ಬೇಕು. ಇದು ಅವರ ಕರ್ತವ್ಯ. ಆ ಕೆಲಸ ಮಾಡಿದುದಕ್ಕಾಗಿ ಮಾಧ್ಯಮಗಳಿಗೂ ನನ್ನ ಅಭಿನಂದನೆಗಳು. ಆದರೆ, ಏನು, ಹೇಗೆ, ಎಷ್ಟುಕಾಲ, ಯಾವರೀತಿ, ಪರಿಣಾಮ-ಮುಂತಾದ ದೃಷ್ಟಿಯಿಂದ ಗಮನಿಸಿ ಈ ಕರ್ತವ್ಯವನ್ನು ನಿರ್ವಹಿಸಬೇಕಾದುದು ಅಷ್ಟೇ ಅಗತ್ಯ. ಮಾಧ್ಯಮಗಳ ಕರ್ತವ್ಯ ಕೂಡ.
  -ಎಸ್.ವಿ. ಜಯಶೀಲರಾವ್
  ಮಾಜಿ ಸಂಪಾದಕೀಯ ಸಲಹೆಗಾರ ಪ್ರಜಾವಾಣಿ,
  ಸಂಪಾದಕ: ಸಂಯುಕ್ತ ಕರ್ನಾಟಕ,
  ಸಂಪಾದಕ: ಮುಂಜಾನೆ
  ಸದಸ್ಯರು: ಭಾರತೀಯ ಪತ್ರಿಕಾ ಮಂಡಳಿ

  ReplyDelete
 10. ಕೆಲವರು ಟಿವಿ ಮಾಧ್ಯಮಗಳ ಧೋರಣೆ ಖಂಡಿಸಿದ್ದಾರೆ. ಅದು ಸರಿ. ಆದರೆ ದಿನಪತ್ರಿಕೆಯ ಸಂಪಾದಕರೊಬ್ಬರು 'ಅಂದರಿಕಿ ಮಂಚಿವಾಳ್ಳು ಅನಂತರಾಮಯ್ಯ' ಎಂಬಂತೆ, ಅದೂ ಸರಿ ಇದೂ ಸರಿ ಎಂದು ಹೇಳಿದ್ದಾರೆ. ಟಿವಿಗಳ ಹೇಯ ಕೆಲಸವನ್ನು ಖಂಡಿಸಲು ಇವರಿಗೆ ಆಗದು.

  ReplyDelete
 11. ಕೆಲವರು ಮಾನಗೇಡಿಗಳು ಸಾರ್ವಜನಿಕವಾಗಿ ಬೆತ್ತಲಾದರು.. ಅವರು ಹೇಗೆ ಬೆತ್ತಲಾದರೆಂಬುದನ್ನು ಟಿ.ವಿ.ಯವರು ತಾವೂ ಬೆತ್ತಲೆನಿಂತು ತೋರಿಸಿದರು...

  ReplyDelete
 12. BM ಬಷೀರ್ರವರ ಸಾಲು ಇವರಿಗೊಸ್ಕರ ಬರೆದಿದ್ದಿರಬೇಕು .....

  ಸದನದಲ್ಲಿ ನೋಡಬಾರದನ್ನು ನೋಡಿದ ಸಚಿವರಿಗೆ ಥೂ ಎಂದು ಉಗಿದೆ... ಕನ್ನಡಿ ನೋಡಿದರೆ ಮುಖದ ತುಂಬಾ ಎಂಜಲು!!

  ನಾಗೇಂದ್ರ

  ReplyDelete
 13. adke tane monne hige agiddu ella limit idre enu agalla

  ReplyDelete
 14. ಸಂಪಾದಕೀಯ ತಂಡಕ್ಕೆ ನಮಸ್ಕಾರ, ಮುಂಚಿನಿಂದಲೂ ನಾನು ನಿಮ್ಮ ಬ್ಲಾಗ್ ಓದುತ್ತ ಇದ್ದೇನೆ.

  ನಾನು ನೋಡುತ್ತಿರುವಂತೆ, ನಿಮ್ಮ ಬ್ಲಾಗ್ ಪತ್ರಕರ್ತರನ್ನು ದೂಶಿಸುವುದಕ್ಕೆ ಶುರು ಮಾಡಿದಂತಿದೆ. ಪತ್ರಕರ್ತರಾಗಿದ್ದು ಪತ್ರಕರ್ತರನ್ನೇ ಬೈಯುವುದು ನಿಜಕ್ಕೂ ಮೆಚ್ಚಲೇಬೇಕು. ಆದರೆ, ನನ್ನ ಪ್ರಶ್ನೆ ನೀವೆಷ್ಟು ಸಾಚಾ?. ಏನೋ ದೊಡ್ಡ ಬದಲಾವಣೆ ತರುತ್ತೇವೆ ಅನ್ನುವ ರೀತಿಯಲ್ಲಿ ಮಾತನಾಡುತೀರಲ್ರಿ. ನಾನು ಒಳ್ಳೆಯವನೆಂದು ತೋರಿಸಿಕೊಲ್ಲಬೇಕಾದರೆ ಬೇರೆಯವರನ್ನು ಕೆತ್ತವನೆಂದು ತೋರಿಸಬೇಕು ಅನ್ನುವನ್ತಿರುತ್ತವೆ ನಿಮ್ಮ ಮಾತುಗಳು. ದೇವರು ಆದಷ್ಟು ಬೇಗ ನಿಮ್ಮ ಬ್ಲಾಗಾತ್ಮಕ್ಕೆ ಶಾಂತಿ ಕೊಡಲಿ, ನಾವೇ ಸಾಚಾ ಎಂಬ ನಿಮ್ಮ ತೆವಳು ಆದಷ್ಟು ಬೇಗ ಶಾಂತವಾಗಲಿ

  ReplyDelete