Wednesday, February 9, 2011

ನಿಷ್ಠಾವಂತ ಕನ್ನಡಪ್ರಭ ಸಿಬ್ಬಂದಿಯ ಕಥೆ ಏನು?


ಕನ್ನಡಪ್ರಭಕ್ಕೆ ಹೊಸ ಸಂಪಾದಕರು ಬಂದಿದ್ದಾರೆ. ಅವರೊಟ್ಟಿಗೆ ವಿಜಯ ಕರ್ನಾಟಕದಿಂದ ಮತ್ತಷ್ಟು ಮಂದಿ ಬಂದು ಸೇರುವ ಸಾಧ್ಯತೆಗಳಿವೆ. ಇವರಿಗೆಲ್ಲ ಭಾರೀ ಮೊತ್ತದ ಸಂಬಳ ಇದೆ ಎನ್ನುವ ಮಾತೂ ಹರಿದಾಡುತ್ತಿದೆ. ಇದೆಲ್ಲವೂ ಈಗ ಹೊಸದಾಗಿ ಬಂದು ಸೇರುವವರ ಕತೆ. ಆದರೆ ಈಗಾಗಲೇ ಅಲ್ಲಿಯೇ ಇರುವವರ ಪರಿಸ್ಥಿತಿ?

ಸದ್ಯ ರೇಣುಕಾಪ್ರಸಾದ್ ಹಾಡ್ಯ ಮುಖ್ಯ ವರದಿಗಾರ. ಒಂದು ವೇಳೆ ಪಿ.ತ್ಯಾಗರಾಜ್ ಕನ್ನಡ ಪ್ರಭಕ್ಕೆ ಮುಖ್ಯ ವರದಿಗಾರರಾಗಿ ಬಂದರೆ, ಹಾಡ್ಯರ ಕತೆ? ಪತ್ರಿಕೋದ್ಯಮ ವಿದ್ಯಾರ್ಥಿಯಾದಾಗಿನಿಂದಲೂ ಹಾಡ್ಯ ಬರವಣಿಗೆಯ ಹುಚ್ಚು ಹಿಡಿಸಿಕೊಂಡವರು. ಶಿವಮೊಗ್ಗದಲ್ಲಿ ವರದಿಗಾರನಾಗಿದ್ದಾಗ ಸಾಕಷ್ಟು ಹೆಸರು ಮಾಡಿದ್ದ ಹಾಡ್ಯ ಬೆಂಗಳೂರಿಗೆ ಬಂದ ನಂತರ ಸಪ್ಪೆಯಾದರು. ಮುಖ್ಯ ವರದಿಗಾರರಾದ ಮೇಲಂತೂ, ಅವರು ಬರೆದದ್ದು ಕಡಿಮೆ, ಬರೆಸಿದ್ದು ಹೆಚ್ಚು. ಮುಖ್ಯ ವರದಿಗಾರನ ಹುದ್ದೆಯನ್ನು ಅವರು ಎಷ್ಟು ತೀವ್ರವಾಗಿ ಹಚ್ಚಿಕೊಂಡಿದ್ದರು ಎಂಬುದಕ್ಕೆ ಇದು ಸಾಕ್ಷಿ. ಹೊಸ ಸಂಪಾದಕರು ಬಂದರು ಎಂದು ಕೆ.ಶಿವಸುಬ್ರಹ್ಮಣ್ಯ ಏನೋ ರಾಜೀನಾಮೆ ಕೊಟ್ಟರು, ಹಾಡ್ಯ ಹಾಗೆ ಮಾಡಲು ಸಾಧ್ಯವೇ? ಹೀಗೆ ಅಲ್ಲಿ ಹೇಳಿಕೊಳ್ಳಲಾಗದ ಸಂಕಟದಲ್ಲಿರುವವರು ಅನೇಕ ಮಂದಿ.

ಕಾರ್ಟೂನಿಸ್ಟ್ ಎಸ್.ವಿ ಪದ್ಮನಾಭ ಈ ಹಿಂದೆ ಭಟ್ಟರ ಜೊತೆ ವಿಜಯ ಕರ್ನಾಟಕದಲ್ಲಿ ಇದ್ದವರು. ಅಲ್ಲಿಂದ ಹೊರಟು ಕನ್ನಡಪ್ರಭ ಸೇರಿದ್ದರು. ಈಗ ಮತ್ತದೇ ಭಟ್ಟರ ಜೊತೆ ಕೆಲಸ ಮಾಡಬೇಕು! ಡಾ.ವೆಂಕಟೇಶ್ ರಾವ್ ಸದ್ಯ ಕನ್ನಡಪ್ರಭದ ಮ್ಯಾಗಜೀನ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಗಿಂಡಿಮಾಣಿ ರಾಧಾಕೃಷ್ಣ ಭಡ್ತಿ ಭಟ್ಟರ ಗ್ಯಾಂಗ್ ಸೇರುವುದು ಖಾಯಂ. ಹಾಗಾದರೆ, ಡಾಕ್ಟ್ರು ಅದೇ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವೇ? ಅಥವಾ ಸ್ಟೆತಸ್ಕೋಪ್ ಹೆಗಲಿಗೇರಿಸಿಕೊಂಡು ಹೊರಡಬೇಕೆ?

ಭಟ್ಟರ ತಂಡ ಸೇರಿಕೊಳ್ಳಲು ವಿಜಯ ಕರ್ನಾಟಕದ ಕೆಲ ವರದಿಗಾರರು ಬಂದರೂ ಆಶ್ಚರ್ಯವಿಲ್ಲ.  ವಿನಾಯಕ ಭಟ್ ಮೂರೂರು ಈಗಾಗಲೇ ವಿಕ ಬಿಟ್ಟು ಕಪ್ರ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇಂಥವರ ದೊಡ್ಡ ಪಟ್ಟಿಯೇ ವಿಕದಲ್ಲಿ ತಯಾರಾಗುತ್ತಿದೆ. ಹಾಗಾದಾಗ, ಈಗಾಗಲೇ ಕನ್ನಡಪ್ರಭದಲ್ಲಿರುವವರ ಪರಿಸ್ಥಿತಿ ಏನು? ಗಿರೀಶ್ ಬಾಬು ಪ್ರತಿಭಾವಂತ. ಈ ಹಿಂದೆ ಕೆಲವೇ ದಿನಗಳ ಮಟ್ಟಿಗೆ ವಿಜಯ ಕರ್ನಾಟಕಕ್ಕೆ ಹೋಗಿ ಹಿಂದಿರುಗಿದವರು. ಶಿವಕುಮಾರ್ ಬೆಳ್ಳಿತಟ್ಟೆ ವಿಜಯ ಕರ್ನಾಟಕದಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ಬೇರೆಡೆಗಳಲ್ಲಿ ತಿರುಗಾಡಿ ಅನಿವಾರ್ಯ ಕಾರಣಗಳಿಂದ ಮತ್ತೆ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದವರು. ಕೆಲವೇ ತಿಂಗಳುಗಳ ಹಿಂದೆ ವಿಜಯ ಕರ್ನಾಟಕವನ್ನು ಎರಡನೇ ಬಾರಿಗೆ ತೊರೆದು ಕನ್ನಡಪ್ರಭ ಸೇರಿದ್ದರು. ಅವರ ದುಗುಡವೇನು?

ರಂಗನಾಥ್ ದೊಡ್ಡ ತಂಡವನ್ನು ಎತ್ತಿಕೊಂಡು ಸುವರ್ಣ ನ್ಯೂಸ್ ಸೇರಿದಾಗ ಕನ್ನಡಪ್ರಭವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದು ಇದೇ ಬಳಗ. ಕ್ರೆಡಿಟ್ಟು ಶಿವಸುಬ್ರಹ್ಮಣ್ಯರಿಗೆ ಮಾತ್ರವಲ್ಲ, ಈ ಎಲ್ಲರಿಗೂ ಸೇರುತ್ತದೆ. ಯಾವುದೇ ಒಬ್ಬ ಸಂಪಾದಕ, ಅಥವಾ ಮುಖ್ಯ ವರದಿಗಾರರ ಜೊತೆ ಗುರುತಿಸಿಕೊಳ್ಳದೆ ಸ್ವತಂತ್ರವಾಗಿದ್ದುಕೊಂಡು ವೃತ್ತಿ ಜೀವನದಲ್ಲಿ ಸಕ್ರಿಯವಾಗಿದ್ದ ಇಂತಹ ಪತ್ರಕರ್ತರಿಗೆ ಹೀಗೆ ನಾನಾ ಸಂಕಟಗಳು. ಅವರು ಯಾರೊಂದಿಗೂ ಗುರುತಿಸಿಕೊಳ್ಳದೇ ಹೋದದ್ದು ತಪ್ಪೆ? ಇಲ್ಲಿರುವ ಅನೇಕರು ಮನಸ್ಸು ಮಾಡಿದ್ದರೆ ರಂಗನಾಥ್ ಜೊತೆ ಸುವರ್ಣ ನ್ಯೂಸ್ ಸೇರಬಹುದಿತ್ತು. ಆ ಸಂದರ್ಭದಲ್ಲಿ ಹೊಸ ದಿನಪತ್ರಿಕೆಯ ಐಡಿಯಾವೂ ರಂಗ-ರವಿ ಟೀಮಿಗೆ ಇದ್ದಿದ್ದರಿಂದ ಇನ್ನೊಂದಿಷ್ಟು ಜನರು ಅವರೊಂದಿಗೆ ಬಂದಿದ್ದರೂ ಅವರೆಲ್ಲರನ್ನೂ ಕರೆದೊಯ್ಯುತ್ತಿದ್ದರು. ಆದರೆ ಈ ಹುಡುಗರು ಹೋಗಲಿಲ್ಲ. ಸಂಸ್ಥೆಗೆ ನಿಷ್ಠರಾಗಿ ಉಳಿದರು.

ಈಗ ಇವರಿಗೆ ಅಗ್ನಿಪರೀಕ್ಷೆ. ಏನೇನು ಬದಲಾವಣೆಗಳಾಗುತ್ತವೋ? ಯಾರ‍್ಯಾರನ್ನು ಹೊರಗೆ ಕಳಿಸಲಾಗುತ್ತದೋ? ಯಾರ ಕೈಗಳ ಕೆಳಗೆ ಕೆಲಸ ಮಾಡಬೇಕಾಗುತ್ತದೋ? ವಿಶ್ವೇಶ್ವರ ಭಟ್ಟರು ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಆತಂಕ-ದುಗುಡವನ್ನು ದೂರ ಮಾಡುತ್ತಾರಾ? ಅಥವಾ ತಮ್ಮ ಟೀಮಿಗಾಗಿ ಇವರೆಲ್ಲರನ್ನೂ ಮೂಲೆಗೆ ತಳ್ಳುತ್ತಾರಾ? ಕಾದು ನೋಡಬೇಕು.

ಒಟ್ಟಿನಲ್ಲಿ ಏನೇ ಇರಲಿ. ಈ ಎಲ್ಲ ಪತ್ರಕರ್ತರ ವೃತ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಿರಲಿ. ಎಲ್ಲಾ ಬದಲಾವಣೆಗಳ ಮಧ್ಯೆ ಅವರು ಉತ್ಸಾಹ ಕಳೆದುಕೊಳ್ಳದಿರಲಿ. ಏಕೆಂದರೆ ಮಾಧ್ಯಮರಂಗ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಇಂತಹ ಕೆಳ ಹಂತದ ನೂರಾರು ಪ್ರಾಮಾಣಿಕ ಪತ್ರಕರ್ತರಿಂದ. ಅವರ ಆತ್ಮಗೌರವ ಉಳಿಯಲಿ.

Monday, February 7, 2011

ಕನ್ನಡಪ್ರಭದ ವಿಶ್ವೇಶ್ವರ ಭಟ್ಟರಿಗೆ ಶುಭವಾಗಲಿ...



ಸುದ್ದಿ ಈಗ ಅಧಿಕೃತ. ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದ್ದಾರೆ. ವಿಜಯ ಕರ್ನಾಟಕದಿಂದ ಹೊರಬಂದ ನಂತರ ಸುಮಾರು ಎರಡು ತಿಂಗಳು ಕಾಲ ಅಳೆದು ಸುರಿದು ಕಡೆಗೂ ಭಟ್ಟರು ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿಗೆ ಭಟ್ಟರ ಜೀವನದ ಹೊಸ ಆಯಾಮ ಶುರು ಆದಂತಾಗಿದೆ.

ನಿಮಗೆ ಗೊತ್ತಿದೆ, ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಸೇರುವ ಸುದ್ದಿಯನ್ನು ಮೊದಲು ಬ್ರೆಕ್ ಮಾಡಿದ್ದು ಸಂಪಾದಕೀಯ. ನಾವು ಇದನ್ನು ಬರೆದಾಗ ಭಟ್ಟರು ಕನ್ನಡಪ್ರಭ ಸೇರಬಹುದು ಎಂಬ ಊಹೆಯನ್ನೂ ಯಾರೂ ಮಾಡಿರಲಿಲ್ಲ. ಯಾಕೆಂದರೆ ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಶಿವಸುಬ್ರಹ್ಮಣ್ಯ ಶ್ರದ್ಧೆಯಿಂದ ಪತ್ರಿಕೆಯನ್ನು ಲೀಡ್ ಮಾಡಿದ್ದರು.

ನಾವು ಈ ವಿಷಯವನ್ನು ಹೇಳಿದಾಗ ಬಂದ ಪ್ರತಿಕ್ರಿಯೆಗಳೂ ಸಹ ಸುದ್ದಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದವು. ಇದು ಸಂಪಾದಕೀಯದ ಬ್ಲಂಡರ್ ಎಂದು ಹೇಳಿದ್ದರು ಓದುಗರೊಬ್ಬರು. ಟೆಸ್ಟಿಂಗ್ ಎಂದು ಮಾರ್ಮಿಕವಾಗಿ ಮತ್ತೊಬ್ಬರು ಕಮೆಂಟ್ ಹಾಕಿದ್ದರು. ಸಂಪಾದಕೀಯ ಅನ್ನೋ ಪದಕ್ಕೆ ತಕ್ಕಂತೆ ಬರೀರಿ, ರ‍್ಯೂಮರ್ ಬರೀಬೇಡಿ ಎಂದು ಒಬ್ಬರು ತಾಕೀತು ಮಾಡಿದ್ದರು. ಹೀಗೆ ನಮ್ಮನ್ನು ಹಣಿದವರೆಲ್ಲ ನಮ್ಮ ಓದುಗರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ದೂರದಲ್ಲೆಲ್ಲೋ ಒಂದು ಅಂತರ್ಲಿಂಗಿಯೊಂದು ಏನ್ರೀ ಇದು, ಅಸಹ್ಯ ಇಂಥ ಸುದ್ದಿ ಹಬ್ಬಿಸುವ ವ್ಯಕ್ತಿಗಳನ್ನು ಹಿಡಿದು ತದುಕಬೇಕು ಎಂದು ವಿಕಾರವಾಗಿ ಕಿರುಚಿದ್ದೂ ನಮ್ಮ ಗಮನಕ್ಕೆ ಬಂದಿತ್ತು.

ನಂತರ ಈ ಸುದ್ದಿ ಕೆಲ ದಿನಗಳ ನಂತರ ಹಾಯ್ ಬೆಂಗಳೂರಿನಲ್ಲೂ ಪ್ರಕಟವಾದಾಗ ಇರಬಹುದೇನೋ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇದೀಗ ಸುದ್ದಿ ಅಧಿಕೃತವಾಗಿದೆ. ಇಷ್ಟು ದಿನ ಕಾಯಿಸಿದಕ್ಕೆ ಸಾರಿ, ಸಾರಿ ಅಂಡ್ ಸಾರಿ ಎಂದು ಇಂದು ಬೆಳಿಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಬರೆಯುವ ಮೂಲಕ ಭಟ್ಟರು ತಮ್ಮ ಹೊಸಮನೆಯ ಗೃಹಪ್ರವೇಶವನ್ನು ಸಾರಿದ್ದರು.

ಮೊದಲೇ ಹೇಳಿದಂತೆ ಭಟ್ಟರ ವೃತ್ತಿ ಬದುಕಿನ ಹೊಸ ಆಯಾಮ. ಹೆಚ್ಚು ಬರೆಯುವ ಸಂಪಾದಕ ಎಂದು ಖ್ಯಾತಿಯಾದವರು ಅವರು. ಬೇರೆ ಬೇರೆ ಕಾರಣಗಳಿಂದಾಗಿ ಭಟ್ಟರು ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಬಹಳಷ್ಟು ಜನರಲ್ಲಿತ್ತು. ವಿಶೇಷವಾಗಿ ಪತ್ರಕರ್ತರು ಈ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದರು.

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದರು. ಅದರರ್ಥ, ಅವರೊಂದಿಗೆ ತ್ಯಾಗರಾಜ್, ಪ್ರತಾಪ ಸಿಂಹ, ರಾಧಾಕೃಷ್ಣ ಬಡ್ತಿ ಅವರುಗಳೂ ಕನ್ನಡಪ್ರಭ ಸೇರುತ್ತಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ವಿಜಯ ಕರ್ನಾಟಕದಿಂದ ಇನ್ನೊಂದಿಷ್ಟು ಮಂದಿ ಹೊರಬಂದು ಭಟ್ಟರ ತೆಕ್ಕೆಗೆ ಸೇರಿದರೂ ಆಶ್ಚರ್ಯವಿಲ್ಲ.

ಏನಾದರೂ ಇರಲಿ. ವಿಶ್ವೇಶ್ವರ ಭಟ್ಟರು ಕನ್ನಡಪ್ರಭವನ್ನು ಜನಮುಖಿಯಾಗಿ ಬೆಳೆಸಲಿ. ಹಿಂದೆ ವಿಜಯಕರ್ನಾಟಕವನ್ನು ಕೋಮುವಾದಿಗಳ ಕೈಯಲ್ಲಿನ ಅಸ್ತ್ರವನ್ನಾಗಿ ಮಾಡಿದಂತೆ ಕನ್ನಡಪ್ರಭವನ್ನೂ ಮಾಡದಿರಲಿ. ಭಟ್ಟರನ್ನು ಬೇರೆ ಬೇರೆ ಕಾರಣಗಳಿಗೆ ಇಷ್ಟಪಡುವವರು ಇದ್ದೇ ಇದ್ದಾರೆ. ಇವರಲ್ಲಿ ಹಿಂದುತ್ವವಾದಿ ಅತಿರೇಕಿಗಳೂ ಇದ್ದಾರೆ, ಪ್ರಗತಿಪರರೂ ಇದ್ದಾರೆ. ಆಯ್ಕೆಯ ಸಂದರ್ಭದಲ್ಲಿ ಅವರ ಒಳಮನಸ್ಸು, ಆತ್ಮಸಾಕ್ಷಿ ಜಾಗೃತವಾಗಲಿ.

ಭಟ್ಟರಿಗೆ ಶುಭಾಶಯಗಳು.

ಭಟ್ಟರ ಕನ್ನಡಪ್ರಭ ಸೇರ್ಪಡೆಯ ಸುದ್ದಿಯ ಜೊತೆಜೊತೆಯಲ್ಲೇ ಶಿವಸುಬ್ರಹ್ಮಣ್ಯ ರಾಜೀನಾಮೆ ನೀಡಿದ ಸುದ್ದಿಯೂ ಹೊರಬರುತ್ತಿದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಯನ್ನು ನಿಭಾಯಿಸಿದ ಶಿವಸುಬ್ರಹ್ಮಣ್ಯ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಹಾಗೆ ನೋಡಿದರೆ, ಅವರು ಅಷ್ಟಾಗಿ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಲಾರರು. ಊರಿನಲ್ಲಿ ಇರುವ ಅಡಿಕೆ ತೋಟ, ತಮ್ಮ ಆಸಕ್ತಿಯ ಕ್ಷೇತ್ರವಾದ ವೈಲ್ಡ್ ಲೈಫ್ ಫೋಟೋಗ್ರಫಿ ಅವರನ್ನು ಕ್ರಿಯಾಶೀಲರನ್ನಾಗಿ ಇಡುತ್ತದೆ. ಆದರೆ ಕನ್ನಡ ಪತ್ರಿಕಾರಂಗಕ್ಕೆ ಈ ಪ್ರತಿಭೆ ಬೇಕು, ಹೀಗಾಗಿ ಅವರೂ ಸಹ ಮೇನ್‌ಸ್ಟ್ರೀಮಿನಲ್ಲಿರಲಿ ಎಂಬುದು ಸಂಪಾದಕೀಯದ ಹಾರೈಕೆ.

ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತಾ?

ಪ್ರಜಾವಾಣಿ ಸಂಪಾದಕೀಯ ಧೋರಣೆ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ನಿಮಗನ್ನಿಸುತ್ತದೆಯೇ? ಎಂಬ ಪ್ರಶ್ನೆಯಿಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಓಟು ಮಾಡಿದವರ ಸಂಖ್ಯೆ ಹೆಚ್ಚು. ೨೬೪ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಪೈಕಿ ೧೩೫ ಮಂದಿ ಪ್ರಜಾವಾಣಿ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ಹೇಳಿದ್ದಾರೆ. ೧೦೦ ಮಂದಿ ಇದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿದ್ದಾರೆ. ಗೊತ್ತಿಲ್ಲ ಎಂದು ಹೇಳಿದವರು ೨೭ ಮಂದಿ.

ಶೇ.೫೧ರಷ್ಟು ಮಂದಿಗೆ ಪ್ರಜಾವಾಣಿ ಬದಲಾವಣೆ ಆಗಿರುವುದು ಮನವರಿಕೆ ಆಗಿದ್ದರೆ, ಶೇ.೩೭ ರಷ್ಟು ಜನರು ಇದನ್ನು ಒಪ್ಪುವುದಿಲ್ಲ. ಗೊತ್ತಿಲ್ಲ ಅನ್ನುವವರು ಶೇ.೧೦ರಷ್ಟಿದ್ದಾರೆ. ಮತ ಚಲಾಯಿಸಿದ ಎಲ್ಲರಿಗೂ ಥ್ಯಾಂಕ್ಸ್. ಪ್ರಜಾವಾಣಿ ಹೇಗಿರಬೇಕು ಎಂಬುದು ಸದ್ಯಕ್ಕೆ ಕಾಲ-ದೇಶಗಳೇ ಉತ್ತರ ಕೊಡಬೇಕು.

ಈ ವಾರದ ಸಮೀಕ್ಷೆ ಜನಶ್ರೀ ಎಂಬ ಹೊಸ ನ್ಯೂಸ್ ಚಾನಲ್ ಕುರಿತಾಗಿದೆ. ಬಳ್ಳಾರಿ ರೆಡ್ಡಿಗಳು ಆರಂಭಿಸುತ್ತಿರುವ ಕನ್ನಡ ನ್ಯೂಸ್ ಚಾನಲ್ ಜನಶ್ರೀ. ಇದಕ್ಕೆ  ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ನೇತೃತ್ವ ವಹಿಸಿಕೊಂಡಿದ್ದಾರೆ. ರವಿ ಬೆಳಗೆರೆ ಮತ್ತು ರೆಡ್ಡಿಗಳ ನಡುವಿನ ಸುಮಧುರ ಸಂಬಂಧ ಎಲ್ಲರಿಗೂ ಗೊತ್ತಿರುವಂಥದ್ದೇ. ರವಿ ಬೆಳಗೆರೆ ಪತ್ರಕರ್ತನ ವ್ಯಾಪ್ತಿಯನ್ನು ಮೀರಿ ರೆಡ್ಡಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣ ನಡೆಸಿದವರು. ಶ್ರೀರಾಮುಲು ಅವರನ್ನು ಇವತ್ತಿಗೂ ತನ್ನ ತಮ್ಮ ಎಂದೇ ಬೆಳಗೆರೆ ಹೇಳಿಕೊಳ್ಳುತ್ತಾರೆ.

ಹೀಗಾಗಿ ಬೆಳಗೆರೆ ಜನಶ್ರೀ ನೇತೃತ್ವ ವಹಿಸಿರುವುದು ಅಚ್ಚರಿಯ ಬೆಳವಣಿಗೆಯೇನಲ್ಲ. ಆದರೆ ಕನ್ನಡದಲ್ಲಿ ಆರಂಭವಾಗುತ್ತಿರುವ ಇನ್ನೊಂದು ನ್ಯೂಸ್ ಚಾನಲ್ ಸಕ್ಸಸ್ ಆಗುವುದು ಅಷ್ಟು ಸುಲಭದ ಮಾತೇನಲ್ಲ. ಈಗಾಗಲೇ ಟಿವಿ೯, ಸಮಯ, ಸುವರ್ಣ ನ್ಯೂಸ್, ಉದಯ ನ್ಯೂಸ್ ಚಾನಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜನಶ್ರೀಗೂ ವೀಕ್ಷಕ ವಲಯದಲ್ಲಿ ಸ್ಪೇಸ್ ಸಿಗಬಹುದಾ?
ಇನ್ನು ರವಿ ಬೆಳಗೆರೆ ಯಶಸ್ವಿ ಪತ್ರಕರ್ತ ಮತ್ತು ಪತ್ರಿಕೋದ್ಯಮಿ ಎಂಬುದೇನೋ ನಿಜ. ಆದರೆ ಈ ಯಶಸ್ಸು ಜನಶ್ರೀಯಲ್ಲಿ ಮುಂದುವರೆಯುತ್ತದೆ ಎಂದು ಸಾರಾಸಗಟಾಗಿ ಹೇಳಲಾಗದು.

ಸವಾಲುಗಳು ನೂರಾರಿವೆ. ಮೊಟ್ಟ ಮೊದಲನೆಯದಾಗಿ ಚಾನಲ್ ರೆಡ್ಡಿಗಳದು ಎಂಬ ಕಾರಣಕ್ಕೇ ಜನರು ಅಸಡ್ಡೆ ತೋರಬಹುದಾದ ಸಂಭವವಿದೆ. ರವಿ ಬೆಳಗೆರೆಯ ಶೋಗಳನ್ನು ಜನ ನೋಡಬಹುದು ಎಂದಿಟ್ಟುಕೊಳ್ಳೋಣ, ಉಳಿದ ಕಾರ್ಯಕ್ರಮಗಳ ಕಥೆ? ಹೇಳಿ ಕೇಳಿ ಇದು ಸುದ್ದಿವಾಹಿನಿ. ರಾಜಕೀಯ ಸುದ್ದಿಗಳಲ್ಲಿ ರೆಡ್ಡಿಗಳ ವೃತ್ತಾಂತವೇ ಕಂಗೊಳಿಸತೊಡಗಿದರೆ ಅದನ್ನು ಯಾರು ತಾನೇ ನೋಡುತ್ತಾರೆ?

ಇದನ್ನೆಲ್ಲ ಮೀರಿ ರವಿ ಬೆಳಗೆರೆ ಏನನ್ನಾದರೂ ಹೊಸತನ್ನು ಕೊಡಲು ಸಾಧ್ಯವೇ? ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ನಿಮಗನ್ನಿಸುತ್ತದೆಯೇ? ಹೌದು, ಇಲ್ಲ, ಗೊತ್ತಿಲ್ಲ ಎಂಬ ಮೂರು ಉತ್ತರಗಳು ನಿಮಗಾಗಿ. ದಯಮಾಡಿ ಓಟ್ ಮಾಡಿ. ಅಂದ ಹಾಗೆ ಜನಶ್ರೀ ನ್ಯೂಸ್ ಚಾನಲ್ ಫೆ.೧೮ರಂದು ಆರಂಭಗೊಳ್ಳಲಿದೆ.

ಕೊನೆ ಕುಟುಕು: ರವಿ ಬೆಳಗೆರೆ ಜನಶ್ರೀ ಸೇರುತ್ತಿರುವ ಕುರಿತು ಫೇಸ್‌ಬುಕ್‌ನಲ್ಲಿ ಓದುಗರೊಬ್ಬರು ಬರೆದ ಅಭಿಪ್ರಾಯ ಹೀಗಿದೆ. Inmele tvli Hi Blore!! Beligge 8 kke Khas bhat, Madhyana 2 kke Bottom Item, Sanje 7ge Hello, rathri malago hothalli love lovike & Midnightnalli Keli !

Saturday, February 5, 2011

ಮೂಲಭೂತವಾದಿಗಳನ್ನೂ, ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವತಂತ್ರ ಬುದ್ಧಿಜೀವಿ..


ಪ್ರಜಾವಾಣಿ ಪತ್ರಕರ್ತರಿಗೆ ಪುಸ್ತಕಸುಗ್ಗಿಯ ಕಾಲ. ಸದಾ ಕ್ರಿಯಾಶೀಲರಾಗಿರುವ ಲಕ್ಷ್ಮಣ್ ಕೊಡಸೆ ಇತ್ತೀಚಿಗೆ ತಮ್ಮ ಕೃತಿಗಳನ್ನು ಹೊರತಂದರು. ಅದರ ಬೆನ್ನಲ್ಲೇ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮವೂ ಬಿಡುಗಡೆಯಾಯಿತು. ಇದೀಗ ವ್ಯಂಗ್ಯಚಿತ್ರಕಾರ ಮಹಮದ್ ಸರದಿ. ಅವರ ವ್ಯಂಗ್ಯ (ವಿ)ಚಿತ್ರ ಸಂಕಲನ ಫೆ.೧೦ರಂದು ಬಿಡುಗಡೆಯಾಗುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕೃತಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.

ಮಹಮ್ಮದ್ ಪ್ರಜಾವಾಣಿಯ ಬಹುದೊಡ್ಡ ಆಸ್ತಿ. ಸಾವಿರ ಮಾತುಗಳಲ್ಲಿ ಹೇಳುವುದನ್ನು ಕೆಲವೇ ಗೆರೆಗಳಲ್ಲಿ ಹೇಳುವ ಕಲೆ ಮಹಮ್ಮದ್‌ಗೆ ಸಿದ್ಧಿಸಿದೆ. ಅವರು ಬರೆದ ಹಲವು ಚಿತ್ರಗಳನ್ನು ಮರೆಯುವುದು ಸಾಧ್ಯವೇ ಇಲ್ಲ.

ರಾಜಕೀಯ ಜಟಾಪಟಿ, ವಿವಾದಗಳಿದ್ದ ಸಂದರ್ಭದಲ್ಲಿ ಇವತ್ತು ಮಹಮ್ಮದ್ ಕಾರ್ಟೂನ್ ನೋಡಿದ್ರಾ ಎಂಬ ಮಾತಿನೊಂದಿಗೇ ಪತ್ರಕರ್ತರ ಸಂಭಾಷಣೆ ಶುರುವಾಗುತ್ತಿತ್ತು.

ಮಹಮ್ಮದ್ ಇದೇ ಕ್ರಿಯಾಶೀಲತೆ, ಮೊನಚು, ಬೆರಗು ಕಾದಿಟ್ಟುಕೊಳ್ಳಲಿ ಎಂದು ಹಾರೈಸೋಣ.

ಮಹಮ್ಮದ್‌ರ ಪುಸ್ತಕಕ್ಕೆ ಹೆಸರಾಂತ ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಬೆನ್ನುಡಿ ಬರೆದಿದ್ದಾರೆ. ಅವರು ಎಲ್ಲರ ಮನಸಿನಲ್ಲಿ ಇದ್ದುದನ್ನೇ ಹೇಳಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ. ಇದನ್ನು ನಾವು ನೋಡಿದ್ದು ಚಿಂತನ ಪುಸ್ತಕ ಎಂಬ ಬ್ಲಾಗ್‌ನಲ್ಲಿ. ಹೊಸ ಪುಸ್ತಕಗಳ ಕುರಿತು ಈ ಬ್ಲಾಗ್‌ನಲ್ಲಿ ಸಾಕಷ್ಟು ಮಾಹಿತಿಗಳಿವೆ.

ಓವರ್ ಟು ನಟರಾಜ್ ಹುಳಿಯಾರ್...

ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧಪಕ್ಷಗಳಾಗುವ ಈ ಕೆಟ್ಟಕಾಲದಲ್ಲಿ ಮಹಮ್ಮದ್, ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ.


ಭಾರತದ ಮುಖ್ಯ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಮಾರಿಯೋ ಮಿರಾಂಡ, ಆರ್.ಮೂರ್ತಿ, ಥರದ ವ್ಯಾಪಕ ಬೌದ್ಧಿಕ ಸಿದ್ಧತೆಯುಳ್ಳ ವ್ಯಂಗ್ಯಚಿತ್ರಕಾರರಾಗಿ ಮಹಮ್ಮದ್ ವಿಕಾಸಗೊಳ್ಳುತ್ತಿದ್ದಾರೆ. ಅಷ್ಟೇ ಮುಖ್ಯವಾಗಿ ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗು ಏಕಕಾಲಕ್ಕೆ ಮೂಲಭೂತವಾದಿಗಳನ್ನೂ, ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ.


 ನಾನು ಹದಿಹರಯದಿಂದಲೂ ಗಮನಿಸಿರುವ ಕನ್ನಡ ವ್ಯಂಗ್ಯಚಿತ್ರಕಾರರು ವಿಚಿತ್ರ ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಮಹಮ್ಮದ್ ಮಾತ್ರ ಈ ಬಗೆಯ ಅನೇಕ ಅಪಾಯಗಳಿಂದ ಪಾರಾಗಲೆತ್ನಿಸಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಸಾಧ್ಯವಾದಷ್ಟೂ ವಸ್ತುನಿಷ್ಠವಾಗಿ ಭಾರತದ ಘಟನಾವಳಿಗೆ ಪ್ರತಿಕ್ರಿಯಿಸಿರುವ ಆರ್.ಕೆ.ಲಕ್ಷ್ಮಣ್‌ರಂತೆ ಮಹಮದ್ ಕೂಡ ಕರ್ನಾಟಕದ ಹಾಗೂ ಒಟ್ಟಾರೆ ಜಗತ್ತಿನ ವಿದ್ಯಮಾನಗಳನ್ನು ವ್ಯಾಖ್ಯಾನಿಸಿದ್ದಾರೆ.

ರವಿ ಹೆಗಡೆ ಹೊರಟರು, ಉಳಿದ ೨೫ ಪತ್ರಕರ್ತರ ಕಥೆ?


ಕನ್ನಡ ಮಾಧ್ಯಮ ರಂಗದಲ್ಲಿ ಇಂಟರೆಸ್ಟಿಂಗ್ ಆದ ವಿದ್ಯಮಾನಗಳು ಘಟಿಸುತ್ತಿವೆ. ರವಿ ಬೆಳಗೆರೆ ಜನಶ್ರೀಗೆ ಅಧಿಕೃತವಾಗಿ ಸೇರ್ಪಡೆಯಾಗಿರುವುದು ಒಂದು ವಿಶೇಷವಾದರೆ, ವಿಶ್ವೇಶ್ವರ ಭಟ್ಟರು ಹೊಸ ಪ್ರಭೆಯೊಂದಿಗೆ ರೀಲಾಂಚ್ ಆಗುತ್ತಿರುವುದು ಮತ್ತೊಂದು ವಿಶೇಷ.

ಈ ನಡುವೆ ರವಿ ಹೆಗಡೆ ಉದಯವಾಣಿಗೆ ಸೇರುತ್ತಿರುವುದು ಎಲ್ಲರ ಹುಬ್ಬೇರಿಸಿದೆ. ಎಲ್ಲವೂ ಎಚ್.ಆರ್.ರಂಗನಾಥ್-ರವಿ ಹೆಗಡೆ ಅಂದುಕೊಂಡಂತೆ ಆಗಿದ್ದರೆ ರಾಜೀವ್ ಚಂದ್ರಶೇಖರ್ ಅವರ ಸುವರ್ಣ ನ್ಯೂಸ್ (ಸುವರ್ಣ ಕರ್ನಾಟಕ ಅಲ್ಲ.) ಪತ್ರಿಕೆ ಇಷ್ಟೊತ್ತಿಗೆ ಆರಂಭವಾಗಬೇಕಿತ್ತು. ಕಳೆದ ವರ್ಷ ಫೆ.೩ರಂದೇ ಏಷಿಯಾನೆಟ್ ನ್ಯೂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸುವರ್ಣ ನ್ಯೂಸ್ ಎಂಬ ಟೈಟಲ್ ಪಡೆದುಕೊಂಡಿತ್ತು.

ಆದರೆ ಬೇರೆಯದೇ ವಿದ್ಯಮಾನಗಳು ನಡೆದುಹೋದವು. ರಾಜೀವ್ ಚಂದ್ರಶೇಖರ್ ಸುವರ್ಣ ನ್ಯೂಸ್ ಆರಂಭಿಸುವ ಆಲೋಚನೆ ಬಿಟ್ಟು, ಕನ್ನಡಪ್ರಭದ ಶೇರುಗಳನ್ನು ಪಡೆದರು.

ಸುವರ್ಣ ನ್ಯೂಸ್ ಪತ್ರಿಕೆಗಾಗಿಯೇ ಕನ್ನಡಪ್ರಭದಿಂದ ಕರೆತಂದ ವರದಿಗಾರರು, ಉಪಸಂಪಾದಕರು, ಡಿಜೈನರುಗಳು ಹಾಗೇ ಉಳಿದುಕೊಂಡರು. ಇವರ ಸಂಖ್ಯೆ ೨೫ಕ್ಕೂ ಹೆಚ್ಚು. ಪತ್ರಿಕೆ ಶುರುವಾಗದೆ, ಕೆಲಸ ಇಲ್ಲದೆ ಸಿಕ್ಕಿಬಿದ್ದ ಈ ಪತ್ರಕರ್ತರು ಕಳೆದ ಒಂದು ವರ್ಷದಿಂದ ಕಂಗಾಲಾಗಿ ಹೋಗಿದ್ದಾರೆ. ಸಂಬಳವೇನೋ ಬರುತ್ತದೆ, ಕೆಲಸವೇ ಇಲ್ಲದೆ ಹೋದರೆ? ಕೆಲಸವಿಲ್ಲದೇ ಇರುವ ಉದ್ಯೋಗಿಗಳನ್ನು ಸಂಸ್ಥೆ ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ? ಇದ್ದಕ್ಕಿದ್ದಂತೆ ಕೆಲಸ ಬಿಟ್ಟು ಹೋಗಿ ಎಂದು ಫರ್ಮಾನು ಹೊರಡಿಸಿದರೆ?

ಒಂದು ಹಂತದಲ್ಲಿ ಈ ಸಿಬ್ಬಂದಿ ಮತ್ತೆ ಕನ್ನಡಪ್ರಭಕ್ಕೆ ಸಾಮೂಹಿಕ ವಲಸೆ ಹೋಗುವ ನಿರ್ಧಾರಕ್ಕೂ ಬಂದಿದ್ದರು. ಹೇಗೂ ಕನ್ನಡಪ್ರಭದಲ್ಲೂ ರಾಜೀವ್ ಚಂದ್ರಶೇಖರ್ ಅವರು ಶೇರ್ ಹೋಲ್ಡರ್. ಹೀಗಾಗಿ ಮರಳಿ ಗೂಡಿಗೆ ಹೋಗುವುದು ಅಷ್ಟು ಕಷ್ಟವೂ ಆಗಿರಲಿಲ್ಲ.

ಆದರೆ ವಿಜಯಕರ್ನಾಟಕದಲ್ಲಿ ಆದ ಕ್ಷಿಪ್ರಕ್ರಾಂತಿ ಹೊಸ ಈಕ್ಷೇಷನ್‌ಗಳನ್ನು ಹುಟ್ಟುಹಾಕಿತು. ಕನ್ನಡಪ್ರಭದಲ್ಲಿ ವಿಶೇಷ ಬೆಳವಣಿಗೆಗಳು ಸಂಭವಿಸಲಾರಂಭಿಸಿದವು. ಹೀಗಾಗಿ ರವಿ ಹೆಗಡೆ ಟೀಮು ಮತ್ತೆ ಕನ್ನಡಪ್ರಭಕ್ಕೆ ವಾಪಾಸು ಹೋಗುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.

ಈ ನಡುವೆ ಉದಯವಾಣಿ ಹೊಸದಾಗಿ ಇನ್ನಷ್ಟು ಆವೃತ್ತಿಗಳನ್ನು ತೆರೆದು ರೀಲಾಂಚ್ ಆಗಲು ಹೊರಟಿತು. ಉದಯವಾಣಿಗೀಗ ಹೊಸ ಸಿಬ್ಬಂದಿಗಳು ಬೇಕು. ಹೀಗಾಗಿ ರವಿ ಹೆಗಡೆ ಅಲ್ಲಿಗೆ ಹೋಗುತ್ತಿದ್ದಾರೆ. ರವಿ ಹೆಗಡೆಯವರೇನೋ ಉದಯವಾಣಿಗೆ ಹೋಗುತ್ತಾರೆ, ಜತೆಗಿರುವ ೨೫+ ಸಿಬ್ಬಂದಿ? ಅವರೂ ಹೋಗುತ್ತಾರಾ? ಹೋದರೆ ಉದಯವಾಣಿಯಲ್ಲಿ ಆಗುವ ಅಲ್ಲೋಲ ಕಲ್ಲೋಲಗಳೇನು? ರವಿ ಜತೆಯಲ್ಲಿ ಹೋಗುವವರು ಬೆಂಗಳೂರು ಬಿಟ್ಟು ಬೇರೆ ಬೇರೆ ಬ್ಯೂರೋಗಳಲ್ಲಿ ಕೆಲಸ ಮಾಡಲು ತಯಾರಾಗಿದ್ದಾರಾ? ಹೊಸಬರಿಗಾಗಿ ಉದಯವಾಣಿಯ ಮೂಲನಿವಾಸಿಗಳೇ ಹೊರಗಿನ ಬ್ಯೂರೋಗಳಿಗೆ ಹೋಗುವ ತ್ಯಾಗ ಮಾಡಬಲ್ಲರಾ? ಬಿರುಸಿನ ಚರ್ಚೆಗಳು ನಡೆಯುತ್ತಿವೆ.

ಇನ್ನು ಕನ್ನಡಪ್ರಭದಲ್ಲಿ ನಡೆಯುತ್ತಿರುವ ವಿಶೇಷ ಬೆಳವಣಿಗೆಗಳು ಸಹ ಆಸಕ್ತಿದಾಯಕವಾಗಿವೆ. ರಾಜೀವ್ ಚಂದ್ರಶೇಖರ್ ಕನ್ನಡಪ್ರಭವನ್ನು ಪೂರ್ಣ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿದ್ದಾರೆ ಎಂಬ ಸುದ್ದಿಯಿದೆ. ಹಾಗೇನಾದರೂ ಆದರೆ ಕ್ವೀನ್ಸ್ ರಸ್ತೆಯ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದಿಂದ ಕನ್ನಡಪ್ರಭ ಹೊರಗೆ ಬರುವುದು ಖಚಿತ. ಕನ್ನಡಪ್ರಭವನ್ನು ರೇಸ್‌ಕೋರ್ಸ್ ರಸ್ತೆಯ ತಮ್ಮ ಹೊಸ ಕಟ್ಟಡಕ್ಕೆ ರಾಜೀವ್ ಶಿಫ್ಟ್ ಮಾಡುತ್ತಾರಾ? ಕಾದು ನೋಡಬೇಕು.

ಕನ್ನಡಪ್ರಭದಲ್ಲಿ ಆಗುತ್ತಿರುವ ಇನ್ನಷ್ಟು ವಿಶೇಷ ಬೆಳವಣಿಗೆಗಳು ಏನು ಎಂದು ನೀವು ಕೇಳಬಹುದು. ಅದನ್ನು ಸಂಪಾದಕೀಯ ಬಹಳ ಹಿಂದೆಯೇ ಹೇಳಿದೆ. ನಾವು ಮೊದಲು ಈ ಸುದ್ದಿಯನ್ನು ಬ್ರೆಕ್ ಮಾಡಿದಾಗ ಮೂಗು ಮುರಿದವರೇ ಹೆಚ್ಚು. ಇನ್ನೂ ಸ್ವಲ್ಪ ದಿನ ತಡೀರಿ. ಎಲ್ಲವೂ ನಿಚ್ಚಳವಾಗಲಿದೆ.

ಕೊನೆ ಕುಟುಕು: ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಅವರ ಕೆನ್ನೆಗೆ ಬಾರಿಸುತ್ತೇನೆ ಎಂದು ಪ್ರತಾಪ ಸಿಂಹ ಫೇಸ್‌ಬುಕ್‌ನಲ್ಲಿ ಆರ್ಭಟಿಸಿದ್ದಾರೆ. ಒಂದು ಬೆತ್ತಲೆ ಜಗತ್ತು ಪುಸ್ತಕ ಕೊಂಡವರಿಗೆ ಕಪಾಳಮೋಕ್ಷ ಉಚಿತ ಎಂಬುದು ಪ್ರತಾಪಸಿಂಹನ ಪಬ್ಲಿಷರುಗಳ ಹೊಸ ಆಫರ್ ಇರಬಹುದೇ?

Friday, February 4, 2011

ರವಿ ಬೆಳಗೆರೆ ಹೊಸ ಇನ್ನಿಂಗ್ಸ್ ಶುರು!


ರವಿ ಬೆಳಗೆರೆ ಜನಶ್ರೀ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಷ್ಟು ದಿನ ಜನಶ್ರೀಯಲ್ಲಿ ಬೆಳಗೆರೆ ಕೇವಲ ಸಲಹೆಗಾರರಾಗಿ ಇರುತ್ತಾರೆ ಎಂಬ ಮಾತಿತ್ತು. ಆದರೀಗ ಅವರೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.

ಹೀಗಂತ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ರವಿ ಬೆಳಗೆರೆ ಕನ್ನಡದ ಅತ್ಯಂತ ಪ್ರತಿಭಾವಂತ ಪತ್ರಕರ್ತ. ಮಾಧ್ಯಮದ ಎಲ್ಲ ರೀತಿಯ ಪ್ರಯೋಗಗಳಿಗೂ ಒಡ್ಡಿಕೊಂಡವರು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಟ್ಯಾಬ್ಲ್ಯಾಡ್, ಟಿವಿ, ರೇಡಿಯೋ.. ಎಲ್ಲ ಕಡೆ ಕೈಯಾಡಿಸಿದವರು. ಸಿನಿಮಾಗಳಲ್ಲೂ ಲಕ್ಕು ಕುದುರುತ್ತಾ ನೋಡಿ ವಾಪಾಸು ಬಂದವರು. ಇದೀಗ ಅವರು ಜನಶ್ರೀ ಚಾನೆಲ್ ಹೆಡ್ ಆಗಿ ಕುಳಿತುಕೊಳ್ಳುವುದರೊಂದಿಗೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ರವಿ ಬೆಳಗೆರೆ ಅತಿ ಹೆಚ್ಚು ವಿವಾದಗಳಿಗೆ ಗುರಿಯಾದವರು. ಅವರ ಇಡೀ ವೃತ್ತಿ ಜೀವನದ ತುಂಬ ವಿವಾದಗಳೇ ತುಂಬಿಕೊಂಡಿವೆ. ಹಾಯ್ ಬೆಂಗಳೂರು ಮೂಲಕ ಸಾಕಷ್ಟು ಜನರನ್ನು ಎದುರು ಹಾಕಿಕೊಂಡು, ಅದನ್ನು ದಕ್ಕಿಸಿಕೊಂಡ ಬೆಳಗೆರೆ ತಮ್ಮದೇ ಕನಸಿನ ಪ್ರಾರ್ಥನಾ ಸ್ಕೂಲು ಕಟ್ಟಿಕೊಂಡರು. ಅದನ್ನು ಬೆಳೆಸಿದರು.

ಬೆಳಗೆರೆಗೆ ಟಿವಿ ಮಾಧ್ಯಮ ಒಗ್ಗಿ ಬರುತ್ತದಾ ಎಂಬುದು ಸದ್ಯದ ಪ್ರಶ್ನೆ. ಈ ಟಿವಿಯಲ್ಲಿ ಅವರು ನಡೆಸುತ್ತಿದ್ದ ಕ್ರೈಂ ಡೈರಿ ಪಾಪ್ಯುಲರ್ ಕಾರ್ಯಕ್ರಮವಾಗಿತ್ತು. ಈ ಟಿವಿಯಲ್ಲೇ ನಡೆಸಿಕೊಡುವ ಎಂದೂ ಮರೆಯದ ಹಾಡು ಕಾರ್ಯಕ್ರಮದಿಂದಲೂ ಅವರು ಹೆಸರು ಗಳಿಸಿದ್ದರು.

ಈಗ ನ್ಯೂಸ್ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಲ್ಲಿ ನೂರು ಸವಾಲುಗಳಿವೆ. ಪ್ರತಿ ದಿನ ಸಂಜೆ ಒಂದು ಶೋ ನಡೆಸುತ್ತೇನೆ, ಬೆಳಿಗ್ಗೆಯೂ ಒಂದು ಶೋ ಇರುತ್ತದೆ ಎನ್ನುತ್ತಿದ್ದಾರೆ ಬೆಳಗೆರೆ. ಅದಕ್ಕೆ ಸಮಯ ಎಲ್ಲಿಂದ ತರುತ್ತಾರೆ? ಈ ನಡುವೆ ಹಾಯ್ ಬೆಂಗಳೂರ್ ಕಥೆ ಏನು?

ಈ ನಡುವೆ ಬೆಳಗೆರೆ ಕುರಿತಾಗೇ ಒಂದು ನಾಟಕ ತಯಾರಾಗಿದೆಯಂತೆ, ಒಂದು ಸಿನಿಮಾ ತಯಾರಾಗುತ್ತದಂತೆ, ಒಂದು ಪುಸ್ತಕ ಬರೆಯಲಾಗುತ್ತಿದೆಯಂತೆ.

ಅಂದ್ರ ಒಟ್ಟಾರೆಯಾಗಿ ಈಗ ರವಿ ಬೆಳಗೆರೆ ಕಾಲ.

ಬೆಳಗೆರೆಯವರಿಗೆ, ಅವರು ಮುನ್ನಡೆಸುತ್ತಿರುವ ಜನಶ್ರೀ ಚಾನಲ್‌ಗೆ ಒಳ್ಳೆಯದಾಗಲಿ. ಚಾನಲ್ ನಿಷ್ಪಕ್ಷಪಾತವಾಗಿರಲಿ, ಜನಮುಖಿಯಾಗಿರಲಿ ಎಂದು ಹಾರೈಸೋಣ.

ಆಲ್ ದಿ ಬೆಸ್ಟ್ ಬೆಳಗೆರೆ ಅಂಡ್ ಟೀಮ್.

ಕೊನೆ ಕುಟುಕು: ಈ ವಾರದ ಹಾಯ್ ಬೆಂಗಳೂರಿನ ಮೀಡಿಯಾ ಮಸಾಲಾದಲ್ಲಿ ರವಿ ಹೆಗಡೆ ಉದಯವಾಣಿ ಸೇರಿದ್ದನ್ನು, ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರುತ್ತಿರುವುದನ್ನು ಬೆಳಗೆರೆ ಬರೆದಿದ್ದಾರೆ. ಯಾಕೋ ಏನೋ ಸ್ವತಃ ರವಿ ಬೆಳಗೆರೆ ಜನಶ್ರೀ ಸೇರುತ್ತಿರುವುದನ್ನು ಬರೆಯಲು ಮರೆತುಬಿಟ್ಟಿದ್ದಾರೆ.

Thursday, February 3, 2011

ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು!


ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು. ಈಗ ನೋಡಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಹೇಗೆ ನಮ್ಮ ಕನ್ನಡದ ಪತ್ರಿಕೆಗಳು ಪ್ರಕಟಿಸಿದವು ಎಂಬುದೇ ಸಾಕಷ್ಟು ಕುತೂಹಲಕರವಾಗಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ನಡೆಸಿದವರು ಭಯೋತ್ಪಾದಕರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನವಾದರೂ ನಮ್ಮ ಪತ್ರಿಕೆಗಳಿಗೆ ಆತ ಕೇವಲ ವ್ಯಕ್ತಿ ಮಾತ್ರ. ಹಿಂದೆಲ್ಲ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಗಳು ಬಂದಾಗ ಬಂಧನಕ್ಕೊಳಗಾದ ವ್ಯಕ್ತಿಗೆ ಶಂಕಿತ ಭಯೋತ್ಪಾದಕ ಎಂಬ ವಿಶೇಷಣ ಹಚ್ಚಿ ಬರೆಯಲಾಗುತ್ತಿತ್ತು. ಹೀಗೆ ಬಂಧನಕ್ಕೊಳಗಾದವರೆಲ್ಲ ಮುಸ್ಲಿಮರೆ ಆಗಿದ್ದರು. ಪ್ರವೀಣ್ ಮುತಾಲಿಕ್ ವಿಷಯದಲ್ಲಿ ಮಾತ್ರ ಅದು ಕಾಣೆಯಾಗಿದೆ, ಯಾಕೆ? ಆತನಿಗೆ ಯಾರೂ ಶಂಕಿತ ಭಯೋತ್ಪಾದಕ ಎಂದು ಬರೆಯಲಿಲ್ಲವೇಕೆ?

ಭಯೋತ್ಪಾದನಾ ಚಟುವಟಿಕೆ ನಡೆಸಿದ ಮುಸ್ಲಿಮರನ್ನು ಮುಸ್ಲಿಂ ಭಯೋತ್ಪಾದಕ ಎಂದು ಕರೆಯುವುದಾದರೆ, ಕರ್ನಾಟಕದ ಮಟ್ಟಿಗೆ ಬಂಧನಕ್ಕೊಳಗಾದ ಮೊದಲ ಶಂಕಿತ ಹಿಂದೂ ಭಯೋತ್ಪಾದಕ ಪ್ರವೀಣ್ ಮುತಾಲಿಕ್. ಆದರೆ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅವಕಾಶಗಳಿದ್ದರೂ ಯಾಕೆ ಆ ಕೆಲಸವನ್ನು ಪತ್ರಿಕೆಗಳು ಮಾಡಲಿಲ್ಲ?

ಫೆ.೨ರ ಎಲ್ಲ ಪತ್ರಿಕೆಗಳನ್ನು ಒಮ್ಮೆ ತಿರುವಿ ನೋಡಿ. ವಿಜಯ ಕರ್ನಾಟಕದಲ್ಲಿ ಮೊದಲ ಪುಟದಲ್ಲೇ ವರದಿ ಪ್ರಕಟವಾಗಿದೆ. ಬಹುಶಃ ವಿಜಯ ಕರ್ನಾಟಕ ಬದಲಾಗಿರುವುದಕ್ಕೆ ಇದು ಸಾಕ್ಷಿಯಿರಬಹುದು. ಕನ್ನಡಪ್ರಭದ ೮ನೇ ಪುಟದಲ್ಲಿ ಐದು ಸಾಲಿನ ವರದಿ ಬಂದಿದ್ದರೆ, ಉದಯವಾಣಿ, ಸಂಯುಕ್ತ ಕರ್ನಾಟಕಗಳಲ್ಲಿ ಸುದ್ದಿಯೇ ಇಲ್ಲ. ಪ್ರಜಾವಾಣಿ ಬೆಳಗಾವಿ ಮತ್ತು ಮುಂಬೈ ಡೇಟ್‌ಲೈನ್‌ಗಳಲ್ಲಿ ಎರಡು ಸಿಂಗಲ್ ಕಾಲಂ ಸುದ್ದಿಗಳು ಪ್ರಕಟಗೊಂಡಿವೆ. ಪಾಪ, ಅವರಿಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿರಲಿಲ್ಲ.

ಇನ್ನುಳಿದಂತೆ ಮುತಾಲಿಕ್ ಬಂಧನವನ್ನು ಅಗ್ರ ಸುದ್ದಿ ಮಾಡಿರುವುದು ವಾರ್ತಾಭಾರತಿ ಪತ್ರಿಕೆ ಮಾತ್ರ.

ಈ ಕುರಿತು ವಾರ್ತಾಭಾರತಿ ಅಭಿಮಾನಿಗಳ ಬಳಗ ಎಂಬ ಬ್ಲಾಗ್‌ನಲ್ಲಿ ಇನ್ನಷ್ಟು ವಿಶ್ಲೇಷಣೆಗಳಿವೆ. ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಮ್ಮ ಪತ್ರಿಕೆಗಳು ಹೇಗೆ ವರ್ತಿಸಿದ್ದವು ಎಂಬುದರ ಕುರಿತೂ  ಈ ಬ್ಲಾಗ್‌ನಲ್ಲಿ ಬೆಳಕು ಚೆಲ್ಲಲಾಗಿದೆ. ಒಮ್ಮೆ ಆ ಬ್ಲಾಗ್ ನೋಡಿ ಬನ್ನಿ. ಈ ಬ್ಲಾಗ್ ಕೊಂಡಿಯನ್ನು ಕಳುಹಿಸಿದ ಗೆಳೆಯರಿಗೆ ಧನ್ಯವಾದ.

ಪ್ರೊ. ಬರಗೂರು ರಾಮಚಂದ್ರಪ್ಪ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಹಿಂದೆಲ್ಲ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಲೇ ಎಲ್ಲ ಭಯೋತ್ಪಾದಕರು ಮುಸ್ಲಿಮರು ಎಂದು ವಾದ ಮಾಡುತ್ತಿದ್ದರು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಎಲ್ಲ ಭಯೋತ್ಪಾದಕರು ಮುಸ್ಲಿಮರಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದರು.

ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು, ಇದೇ ಕೃತ್ಯ ಮಾಡಿದ ಹಿಂದೂಗಳಲ್ಲ ಎಂಬುದು ನಮ್ಮ ಪತ್ರಿಕೆಗಳ ನಿಲುವಾಗಿರಬಹುದು.

ನಮ್ಮ ಮೀಡಿಯಾಗಳು ಇಂಥ ಬೇಜವಾಬ್ದಾರಿ ನಿಲುವನ್ನು ಬದಲಿಸಿಕೊಳ್ಳಲು ಇದು ಸಕಾಲ.

ವಿಮರ್ಶೆಗೆ ಹೊರತಾಗಿದ್ದು ಯಾವುದೂ ಇಲ್ಲ!


ವಿಮರ್ಶೆಗೆ ಹೊರತಾದದ್ದು ಯಾವುದೂ ಇಲ್ಲ. ಹಾಗೆ ಇರಲೂಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡವಳಿಕೆಯನ್ನು ವಿಮರ್ಶೆ ಮಾಡಲೆಂದೇ ನ್ಯಾಯಾಂಗ ಇದೆ. ಈ ಮೂರೂ ಅಂಗಗಳು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರೆ, ಪ್ರತಿಕ್ರಿಯಿಸಬೇಕಾದದ್ದು ಮಾಧ್ಯಮ. ಆ ಕಾರಣಕ್ಕೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ. ಮಾಧ್ಯಮವೇ ತಪ್ಪೆಸಗಿದರೆ?

ಉತ್ತರ ಸರಳ. ಮಾಧ್ಯಮ ತಪ್ಪೆಸಗಿದರೆ ಪ್ರಜಾಪ್ರಭುತ್ವಕ್ಕೆ ಐದನೇ ಆಯಾಮವನ್ನು ಸೇರಿಸಲಾಗುವುದಿಲ್ಲ. ಹಾಗಾಗಿ ಮಾಧ್ಯಮವೇ ಅದಕ್ಕೊಂದು ದಾರಿ ಕಂಡುಕೊಳ್ಳಬೇಕು. ಸರಕಾರ ಮೂಗು ತೂರಿಸಲು ಬಿಡಬಾರದು. ಶತಮಾನಗಳ ಇತಿಹಾಸ ಇರುವ ಮಾಧ್ಯಮ ಕ್ಷೇತ್ರ ಆಗಾಗ ತನ್ನನ್ನು ತಾನು ಟೀಕೆಗೆ ಗುರಿಯಾಗಿಸಿಕೊಂಡಿದೆ. ಒಂದು ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆ ವಿರುದ್ಧ ಇನ್ನೊಂದು ಮಾಧ್ಯಮ ಸಂಸ್ಥೆ ವರದಿ ಮಾಡಿದ ಉದಾಹರಣೆಗಳಿವೆ. ಆದರೆ ಅಂತಹ ವಿಮರ್ಶೆಗಳೂ ವಸ್ತುನಿಷ್ಠವಾಗಿರುತ್ತದೆ ಎಂದು ಹೇಳಲಾಗದು.

ಹೀಗಿರುವಾಗ ಮಾಧ್ಯಮ ಸಂಸ್ಥೆಗಳು ತಮ್ಮ ನಿಲುವುಗಳನ್ನು ವಿಮರ್ಶೆಗೆ ಒಡ್ಡಲು ತಮ್ಮ ವ್ಯಾಪ್ತಿಯಲ್ಲಿಯೇ ದಾರಿ ಕಂಡುಕೊಳ್ಳಬೇಕಾದ ಅಗತ್ಯವಿದೆ. ಮುಂದುವರಿದ ದೇಶ ಅಮೆರಿಕಾದ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ಮಿಡಿಯಾ ಬೀಟ್ ವರದಿಗಾರರಿದ್ದಾರೆ. ಅದಕ್ಕೆ ಒಬ್ಬ ಮುಖ್ಯಸ್ಥ ಮತ್ತು ಅವರ ಅಡಿ ಒಂದಿಷ್ಟು ವರದಿಗಾರರು. ಅವರ ಕೆಲಸ ಮಾಧ್ಯಮ ಕ್ಷೇತ್ರದ ಆಗುಹೋಗುಗಳನ್ನು ವರದಿ ಮಾಡುವುದು. ಪತ್ರಿಕೆ ಪ್ರಸರಣ, ಲಾಭ ನಷ್ಟ, ಸಂಪಾದಕೀಯ ಧೋರಣೆ, ಆಗಾಗ ಬದಲಾಗುವ ಸಂಪಾದಕೀಯ ನಿಲುವುಗಳು, ಸರಕಾರದಿಂದ ಪತ್ರಿಕೆ ಪಡೆದ ಲಾಭ - ಹೀಗೆ ಎಲ್ಲವೂ ಅಲ್ಲಿ ವರದಿಯಾಗುತ್ತವೆ. ಮುಖ್ಯವಾಗಿ ಮಾಧ್ಯಮವೂ ಇತರೆ ಎಲ್ಲಾ ಕ್ಷೇತ್ರಗಳಂತೆ, ಹಾಗಾಗಿ ಓದುಗ ಮಹಾಶಯನಿಗೆ ಅದರ ವಿವರಗಳನ್ನು ತಿಳಿಸುವುದು ಅಗತ್ಯ ಎನ್ನುವುದು ಅಲ್ಲಿಯ ದೇಶದ ಮಾಧ್ಯಮಗಳ ನಂಬಿಕೆ. ಅಷ್ಟೇ ಅಲ್ಲ ಕೆಲ ಸಂದರ್ಭಗಳಲ್ಲಿ ಪತ್ರಿಕೆ ಒಳಗಿನ ಹಗರಣಗಳನ್ನು ಅದೇ ಪತ್ರಿಕೆ ತನಿಖೆ ಮಾಡಿ ವರದಿ ಮಾಡಿದ ಉದಾಹರಣೆಗಳೂ ಇವೆ ಎಂದರೆ ಅನೇಕರಿಗೆ ಅಚ್ಚರಿಯಾಗಬಹುದು.

ಭಾರತದ ಮಾಧ್ಯಮ ಕ್ಷೇತ್ರ ಇನ್ನೂ ಈ ಮಟ್ಟಿಗಿನ ಆತ್ಮವಿಮರ್ಶೆಗೆ ತನ್ನನ್ನು ಈಡು ಮಾಡಿಕೊಂಡಿಲ್ಲ. ಕೆಲ ತಪ್ಪು ಅಥವಾ ಹಗರಣಗಳ ಕಾರಣ ವರದಿಗಾರರನ್ನೋ, ಸಂಪಾದಕರನ್ನೋ ಕಂಪನಿ ಬಿಟ್ಟು ಹೋಗಿ ಎಂದಿರಬಹುದು. ಆದರೆ ಅವರು ಪತ್ರಿಕೆ/ಮಾಧ್ಯಮ ಸಂಸ್ಥೆ ಬಿಡಬೇಕಾದ ಪ್ರಸಂಗ ಎದುರಾದದ್ದು ಏಕೆ ಎನ್ನುವುದನ್ನು ಓದುಗರಿಗೆ ಎಂದೂ ಹೇಳುವುದಿಲ್ಲ. ಕಾರಣ ಬಹಳಷ್ಟು ಭಾರತೀಯ ಪತ್ರಕರ್ತರು ತಾವು ಓದುಗರಿಗೆ ಉತ್ತರದಾಯಿ ಎಂದು ಒಪ್ಪುವುದೇ ಇಲ್ಲ. ವಿಚಿತ್ರ ಎಂದರೆ, ಪತ್ರಿಕೆಗೆ ಹೊಸ ಸಂಪಾದಕರು ನೇಮಕಗೊಂಡಾಗ ಅವರ ಸಾಧನೆಗಳನ್ನು ಫೋಟೋ ಸಮೇತ ಸ್ವಾಗತಿಸುವ ಪತ್ರಿಕೆಗಳು, ಅದೇ ಸಂಪಾದಕರು ಹೊರ ನಡೆದಾಗ ಓದುಗರಿಗೆ ಅದನ್ನು ಹೇಳಬೇಕೆಂಬ ಕನಿಷ್ಟ ಸೌಜನ್ಯವನ್ನೂ ತೋರುವುದಿಲ್ಲ. ಆದರೆ ಪ್ರಜಾಪ್ರಭುತ್ವದ ಮೊದಲ ಮೂರು ಅಂಗಗಳಲ್ಲಿ ಈ ತೊಂದರೆ ಇಲ್ಲ. ಅಲ್ಲಿಯ ಘಟನೆಗಳನ್ನು ಓದುಗರು ತಿಳಿಯಲು ಅವಕಾಶ ಇದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪತ್ರಿಕೋದ್ಯಮಕ್ಕೇಕೆ ಈ ಮಡಿವಂತಿಕೆ? ಹೀಗಿದ್ದರೂ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಬಹುದೆ?

ಯಾರಾದರೂ ತಮ್ಮ ಧೋರಣೆಗಳನ್ನು, ತಮ್ಮ ಮಾಧ್ಯಮಸಂಸ್ಥೆಯ ನಿಲುವುಗಳನ್ನು ಟೀಕಿಸಿದರೆ ನಮ್ಮ ಪತ್ರಕರ್ತರು ಅಸಹನೆಗೆ ಒಳಗಾಗುತ್ತಾರೆ. ಧ್ವನಿ ಎತ್ತಿದವರ ಕತ್ತು ಹಿಚುಕುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯುತ್ತವೆ. ಯಾಕೆಂದರೆ ಬಹಳಷ್ಟು ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ತಾವು ವಿಮರ್ಶಾತೀತರೆಂಬ ಭ್ರಮೆಯಲ್ಲಿದ್ದಾರೆ. ಅವರು ಮೊದಲು ಆ ಭ್ರಮೆ ಬಿಟ್ಟರೆ ಪತ್ರಿಕೋದ್ಯಮಕ್ಕೆ ಒಳಿತು.

ಕೆಲ ವರ್ಷಗಳ ಹಿಂದೆ ಅಲ್ಲಲ್ಲಿ ಮಾಧ್ಯಮ ಕುರಿತ ತೆಳು ವಿಮರ್ಶೆಗೆ ಅವಕಾಶ ಇತ್ತು. ಟಿವಿ ಲೋಕದ ಬಗ್ಗೆ ದಿವಸ್ಪತಿ ಹೆಗಡೆ ಬರೆಯುತ್ತಿದ್ದರು. ಆದರೆ ಪತ್ರಿಕೆಗಳ ಬಗ್ಗೆ ಯಾವ ಗಂಭೀರ ಅಂಕಣವೂ ಪ್ರಕಟವಾದದ್ದಿಲ್ಲ. ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಜಿ.ಎನ್.ಮೋಹನ್ ಬರೆಯುತ್ತಿದ್ದ ಮೀಡಿಯಾ ಮಿರ್ಚಿ ಎಂಬ ಅಂಕಣ ಯಾವುದೇ ಪತ್ರಿಕೆಯ ಧೋರಣೆಗಳ ಬಗ್ಗೆ ಚರ್ಚೆಗೆ ಕೈ ಹಾಕಲೇ ಇಲ್ಲ. ಕೇವಲ ಹೆಸರಿಗಷ್ಟೆ ಮಿರ್ಚಿ. ಖಾರವೇ ಇಲ್ಲ. ಪತ್ರಕರ್ತನೊಬ್ಬನ ಆತ್ಮಕಥನದ ಹಾಗಿತ್ತು ಅಂಕಣ. ಆ ಅಂಕಣವೂ ಇತ್ತೀಚೆಗೆ ಕಾಣುತ್ತಿಲ್ಲ. ಹೀಗಾಗಿ ಮೀಡಿಯಾಗಳ ಕುರಿತು ಮೀಡಿಯಾಗಳಲ್ಲಿ ಚರ್ಚೆ ಜೀರೋ ಆಗಿದೆ.

ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ವಿಮರ್ಶೆ ಎಲ್ಲಿಯೂ ಕಾಣ ಸಿಗುತ್ತಿಲ್ಲ. ಏಕೆ ಹೀಗೆ? ಪತ್ರಿಕಾಲಯಗಳು ಇತ್ತ ಯೋಚಿಸಲಿ. ಊರ ಗಟಾರಗಳು ಕೊಳೆತು ನಾರುತ್ತಿವೆ ಎನ್ನುವ ಮಂದಿ, ಮನೆಯ ಬಾತ್ ರೂಂ ಕಡೆಯೂ ಆಗಾಗ ಗಮನ ಹರಿಸುತ್ತಿರಬೇಕು ಅಲ್ಲವೇ?

Tuesday, February 1, 2011

ಕೇಶವಕೃಪದ ಸೇವೆಗೆ ನಿಂತ ಪ್ರಜಾವಾಣಿ!


ಚರ್ಚ್ ದಾಳಿ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗ ವಿಚಾರಣೆ ನಡೆಸಿ ನೀಡಿದ ಅಂತಿಮ ವರದಿಯ ಕುರಿತಾಗಿ ಪತ್ರಿಕೆಗಳಲ್ಲಿ ಹಲವು ಬಗೆಯ ಸಂಪಾದಕೀಯಗಳು ಬಂದಿವೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯವೆಂದರೆ ವರದಿಯಲ್ಲ. ಸಮಕಾಲೀನ ವಿದ್ಯಮಾನಗಳಿಗೆ ಆಯಾ ಪತ್ರಿಕೆ ಸ್ಪಂದಿಸುವ, ತನ್ನ ನಿಲುವನ್ನು ಸ್ಪಷ್ಟಪಡಿಸುವ ವೇದಿಕೆ. ಒಂದು ಪತ್ರಿಕೆಯ ಸಂಪಾದಕೀಯವನ್ನು ಓದುತ್ತಿದ್ದಂತೆ, ಆ ಪತ್ರಿಕೆಯ ತಾತ್ವಿಕ ನಿಲುವು ಎಂಥದ್ದು ಎಂಬುದು ಬಹಿರಂಗವಾಗುತ್ತದೆ.

ಸೋಮಶೇಖರ್ ಆಯೋಗದ ವರದಿ ಕುರಿತಾಗಿ ಕರ್ನಾಟಕದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸಂಪಾದಕೀಯವನ್ನು ಗಮನಿಸಿ. ಅದು ವರದಿಯ ಧಾಟಿಯಲ್ಲಿ ಆರಂಭವಾಗುತ್ತದೆ. ಹಾಗೇ ಮುಂದೆ ಸಾಗುತ್ತದೆ. (ಓದುಗರ ಅನುಕೂಲಕ್ಕಾಗಿ ಪತ್ರಿಕೆಯ ಸಂಪಾದಕೀಯದ ಸಾಲುಗಳನ್ನು ಬೋಲ್ಡ್ ಅಕ್ಷರಗಳಲ್ಲಿ ಪ್ರಕಟಸಿದ್ದೇವೆ.)

ಮಂಗಳೂರಿನ ದಾಳಿಯ ಬಗೆಗೆ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಅವರನ್ನು ಹೊಣೆಯನ್ನಾಗಿಸಿರುವುದನ್ನು ಬಿಟ್ಟರೆ, ಈ ದಾಳಿಯಲ್ಲಿ ಸಂಘಪರಿವಾರದ ಸಂಘಟನೆಗಳು ಭಾಗಿಯಾಗಿಲ್ಲ ಎನ್ನುವ ಆಯೋಗದ ನಿಲುವು ಪ್ರತಿಪಕ್ಷಗಳಲ್ಲಿ, ಜಾತ್ಯತೀತ ಮತ್ತು ಪ್ರಗತಿಪರ ಸಂಘಟನೆಗಳಲ್ಲಿ ತೀವ್ರ ಅಸಮಾಧಾನ ತಂದಿದೆ. ಆಯೋಗದ ವರದಿ ಪಕ್ಷಪಾತಿಯಾಗಿದೆ ಎನ್ನುವ ಕಟು ಟೀಕೆಗಳು ಕೇಳಿ ಬರುತ್ತಿವೆ.

ಸರಿ ಸ್ವಾಮಿ, ಇದೆಲ್ಲವನ್ನು ನಿಮ್ಮ ಪತ್ರಿಕೆಯ ವರದಿಗಳಲ್ಲೇ ಓದಿದ್ದೇವಲ್ಲ, ಸಂಪಾದಕೀಯದಲ್ಲೂ ಪುನರಾವರ್ತನೆ ಯಾಕೆ? ಪ್ರತಿಪಕ್ಷಗಳು, ಜಾತ್ಯತೀತ-ಪ್ರಗತಿಪರ ಸಂಘಟನೆಗಳಲ್ಲಿ ಅಸಮಾಧಾನ ಮೂಡಿಸಿರುವುದು ನಿಜ, ನಿಮಗೇನನ್ನಿಸುತ್ತದೆ? ಅದನ್ನು ಹೇಳಬೇಕಲ್ಲವೇ?

ಇನ್ನೊಂದು ವಾಕ್ಯ ಗಮನಿಸಿ: ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರು, ಆಯೋಗದ ವರದಿಯ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವುದರಲ್ಲಿ ರಾಜಕೀಯ ಉದ್ದೇಶ ಇರುವುದನ್ನು ತಳ್ಳಿಹಾಕಲಾಗದು.

ಯಾಕೆ ರಾಜಕೀಯ ಉದ್ದೇಶವನ್ನೇ ಗ್ರಹಿಸಿದಿರಿ? ರಾಜಕೀಯ ಉದ್ದೇಶಕ್ಕೆ ಹೊರತಾದ ಅಂಶಗಳೂ ಇರಬಹುದಲ್ಲವೆ?

ಚರ್ಚ್‌ಗಳ ಮೇಲೆ ಹಿಂದೂ ಮೂಲಭೂತವಾದಿಗಳು ಮತ್ತು ಕೋಮುವಾದಿ ದುಷ್ಟ ಶಕ್ತಿಯ ಗುಂಪುಗಳು ದಾಳಿ ನಡೆಸಿವೆ ಎನ್ನುವ ಶಂಕೆಯನ್ನು ಆಯೋಗ ವ್ಯಕ್ತಪಡಿಸಿದೆ. ಆದರೆ ಈ ದುಷ್ಟ ಶಕ್ತಿಯ ಗುಂಪುಗಳು ಯಾವುವು ಎಂಬುದನ್ನು ಆಯೋಗವು ತನ್ನ ವಿಚಾರಣೆಯಿಂದ ಪತ್ತೆಹಚ್ಚಲು ಆಗಿಲ್ಲದಿರುವುದು ದುರದೃಷ್ಟಕರ ಎಂದು ನೀವೇ ಗುರುತಿಸಿದ್ದೀರಿ. ಯಾವ ಗುಂಪುಗಳು ಇದನ್ನು ಮಾಡಿವೆ ಎಂಬುದನ್ನು ಕಂಡುಹಿಡಿಯಲು ಸಿಬಿಐ ತನಿಖೆ ನಡೆಸಬೇಕು ಎಂದು ಮೊಯ್ಲಿ ಹೇಳಿದ್ದರೆ ಅದರಲ್ಲಿ ರಾಜಕೀಯ ವಾಸನೆಯನ್ನು ಏಕೆ ಹುಡುಕಬೇಕು?

ಮತ್ತೊಂದು ಅಬ್ಸರ್‌ವೇಷನ್: ಈ ಘಟನೆಗಳು ನಡೆದಾಗ ಅದಕ್ಕೆಲ್ಲ ರಾಜ್ಯ ಸರ್ಕಾರ, ಬಿಜೆಪಿ ಮತ್ತು ಸಂಘಪರಿವಾರಗಳೇ ಕಾರಣ ಎಂದು ಬೊಬ್ಬೆ ಹಾಕಿದ ಪ್ರತಿ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು, ಆಯೋಗದ ಮುಂದೆ ಪ್ರಮಾಣ ಪತ್ರ ಸಲ್ಲಿಸದೆ ವಿಚಾರಣೆ ವೇಳೆ ಯಾವುದೇ ಸಾಕ್ಷ್ಯ ನೀಡದೇ ಹೋದುದು ಅವುಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಇದು ಇನ್ನೊಂದು ವಿಚಿತ್ರ ಬಗೆಯ ವಾದ. ಈ ಪುಗಸಟ್ಟೆ ಬೋಧನೆ ಯಾರನ್ನು ಮೆಚ್ಚಿಸಲು? ಇದನ್ನು ಬರೆದವರು ಬೊಬ್ಬೆ ಎಂಬ ಪದವನ್ನು ಬಳಸಿರುವುದರ ಹಿನ್ನೆಲೆಯಲ್ಲೇ ಅವರ ಮನಸ್ಥಿತಿ ಏನೆಂಬುದನ್ನು ಗ್ರಹಿಸಬಹುದು. ಸಂಘಪರಿವಾರದ ಮುಖಂಡರೇ ತಾವೇದಾಳಿಯನ್ನು ಸಂಘಟಿಸಿದ್ದು ಎಂದು ಬೊಬ್ಬೆ ಹೊಡೆದಿದ್ದರು. ಅದನ್ನು ಕೇಳಿಯೂ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಸುಮ್ಮನಿರಬೇಕಿತ್ತೆ? ಬೊಬ್ಬೆ ಹಾಕಬಾರದಿತ್ತೆ?

ಆಯೋಗದ ಮುಂದೆ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಪ್ರಮಾಣಪತ್ರ ಸಲ್ಲಿಸದೆ, ಸಾಕ್ಷ್ಯ ಒದಗಿಸದೆ ಬೇಜವಾಬ್ದಾರಿ ತೋರಿವೆ ಎಂಬುದು ಇನ್ನೊಂದು ಆರೋಪ. ದಾಳಿಗೆ ಒಳಗಾದ ಕ್ರಿಶ್ಚಿಯನ್ ಸಮುದಾಯದ ಸಂಘಟನೆಗಳು, ಚರ್ಚ್ ಮುಖ್ಯಸ್ಥರು, ಸಾರ್ವಜನಿಕರು ಸಾಕ್ಷ್ಯಗಳನ್ನು ಕೊಟ್ಟಿಲ್ಲವೇ? ವಿಚಾರಣೆಯಲ್ಲಿ ಹಾಜರಾಗಿ ತಮ್ಮ ಮೇಲಾದ ದೌರ್ಜನ್ಯದ ವಿವರಗಳನ್ನು ದಾಖಲಿಸಿರಲಿಲ್ಲವೇ? ದಾಳಿಗೊಳಗಾದವರ ಸಾಕ್ಷ್ಯಗಳೇ ಇರುವಾಗ ಮೂರನೆಯವರ ಸಾಕ್ಷ್ಯಗಳು ಏಕೆ ಬೇಕು?

ಈ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಮತ್ತು ಸಂಘಪರಿವಾರವನ್ನು ವಿರೋಧಿಸುವ ಏಕೈಕ ದುರುದ್ದೇಶದಿಂದ ಆರೋಪಗಳನ್ನು ಮಾಡಿವೆ ಎನ್ನುವುದು ಸಾಬೀತಾದಂತಾಗಿದೆ ಎಂದು ಈ ಸಂಪಾದಕೀಯದಲ್ಲಿ ಅಂತಿಮ ತೀರ್ಪು ನೀಡಲಾಗಿದೆ.

ಹಾಗಿದ್ದರೆ ಭಜರಂಗದಳದ ಆಗಿನ ಸಂಚಾಲಕ ಮಹೇಂದ್ರ ಕುಮಾರ್ ಇದನ್ನು ನಾವೇ ಮಾಡಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದು ಸುಳ್ಳೇ? ತನ್ನ ಕೃತ್ಯಗಳನ್ನು ಸಂಘಟನೆಯೇ ಸಮರ್ಥಿಸಿಕೊಂಡ ನಂತರವೂ ಅನುಮಾನ ಎಲ್ಲಿ ಉಳಿಯಿತು? ದಾಳಿ ಎಸಗಿದವರೇ ಒಪ್ಪಿಕೊಂಡ ನಂತರ, ಅವರ ವಿರುದ್ಧ ನೀಡುವ ಹೇಳಿಕೆ ದುರುದ್ದೇಶದ ಆರೋಪ ಹೇಗಾಗುತ್ತದೆ?

ಹಾಗಂತ ಈ ಸಂಪಾದಕೀಯ ಪ್ರಕಟಗೊಂಡಿರುವುದು ಬೇರೆ ಯಾವ ಪತ್ರಿಕೆಯಲ್ಲೂ ಅಲ್ಲ, ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿಯಲ್ಲಿ. ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಮತ್ತು ಸಂಘಪರಿವಾರವನ್ನು ವಿರೋಧಿಸುವ ಏಕೈಕ ದುರುದ್ದೇಶದಿಂದ ಆರೋಪಗಳನ್ನು ಮಾಡಿವೆ ಎನ್ನುವುದು ಸಾಬೀತಾಗಿದೆ ಎಂದು ಹೇಳುವ ಮೂಲಕ ಪ್ರಜಾವಾಣಿ ಸಹ ಕೇಶವಕೃಪದ ಸೇವೆಗೆ ನಿಂತಿದೆ. ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಗತಿಪರರನ್ನು, ಬುದ್ಧಿಜೀವಿಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಆ ರೋಗ ಪ್ರಜಾವಾಣಿಗೂ ಅಂಟಿಕೊಂಡಿದೆ.

ಇದು ಪ್ರಜಾವಾಣಿ ಈಗ ಬಂದು ತಲುಪಿರುವ ಸ್ಥಿತಿ.

ಮರೆತಿದ್ದ ಮಾತು: ಪ್ರಜಾವಾಣಿ ತನ್ನ ನಿಲುವು ಬದಲಿಸಿದೆಯೇ ಎಂಬ ಪ್ರಶ್ನೆ ಇಟ್ಟುಕೊಂಡು ನಡೆಸುತ್ತಿರುವ ಸಮೀಕ್ಷೆ ಸಾಗಿದೆ. ಇನ್ನೂ ಓಟ್ ಮಾಡದವರು ಮರೆಯದೆ ಮಾಡಿ. ನಿಮ್ಮ ಕಂಪ್ಯೂಟರ್‌ನಿಂದ ನೀವು ಒಂದು ಬಾರಿ ಮಾತ್ರ ಓಟ್ ಮಾಡಬಹುದು. ನಿಮ್ಮ ಓಟನ್ನು ಬದಲಿಸುವ ಅವಕಾಶವೂ ನಿಮಗಿದೆ.

ಹಂಪಿ ಉತ್ಸವ: ಲೊಳಲೊಟ್ಟೆ ಇದು ಲೊಳಲೊಟ್ಟೆ


ಹಂಪಿ ಉತ್ಸವಕ್ಕೆ ವೈಭವದ ತೆರೆ ಬಿದ್ದಿದೆ. ಹಂಪಿ ಉತ್ಸವದಲ್ಲಿ ದಿಢೀರನೆ ಎದ್ದುನಿಂತ ಬಣ್ಣ ಬಣ್ಣದ ಬೆಳಕು, ಅಬ್ಬರ ಎಲ್ಲವನ್ನೂ ಕಳೆದುಕೊಂಡು ಕಲ್ಲುಬಂಡೆಗಳು ಪುನಃ ಮಹಾಮೌನಕ್ಕೆ ಶರಣಾಗಿವೆ.

ಮೂರುದಿನದ ಉತ್ಸವದಲ್ಲಿ ಬಿದ್ದಿರುವ ಕಸದರಾಶಿಯನ್ನು ಜಾಡಮಾಲಿಗಳು ಸ್ವಚ್ಛಗೊಳಿಸುತ್ತಿದ್ದಾರೆ. ಇತಿಹಾಸದ ಕಸವನ್ನು ದುಡಿಯುವ ಜನ ವರ್ತಮಾನದ ಪೂರಕೆಯಿಂದ ಸ್ವಚ್ಛಗೊಳಿಸುತ್ತಲೇ ಬಂದಿದ್ದಾರೆ. ಎಲ್ಲವನ್ನೂ ನೋಡುತ್ತಲೇ ಬಂದ ತುಂಗಾಭದ್ರೆ ಎಲ್ಲವನ್ನೂ ಒಡಲಲ್ಲಿ ಹುದುಗಿಸಿಟ್ಟುಕೊಂಡು ನಿರುಮ್ಮಳವಾಗಿ, ನಿತ್ಯನೂತನ ಚೈತನ್ಯದಾಯಿಕೆಯಾಗಿ ಹರಿಯತ್ತಾ ಇದ್ದಾಳೆ.

ಹಂಪಿ ಉತ್ಸವ ನೀಡಿದ ಸಂದೇಶವಾದರೂ ಏನು? ಈ ಪ್ರಶ್ನೆಯನ್ನು ಮಾಧ್ಯಮಗಳಾದರೂ ಕೇಳಬೇಕಿತ್ತು. ಅವು ಕೇಳಲೇ ಇಲ್ಲ. ಉತ್ಸವದುದ್ದಕ್ಕೂ ಕಾಡಿದ ಅನೇಕ ಪ್ರಶ್ನೆಗಳಿಗೆ ಮಾಧ್ಯಮಗಳು ಮುಖಾಮುಖಿ ಆಗಲೇ ಇಲ್ಲ. ಕ್ಲೀಷೆಯಾಗಿರುವ ಪದಪುಂಜಗಳನ್ನು ಬಳಿಸಿ, ಸ್ಥಳೀಯ ಪೇಜುಗಳನ್ನು ತುಂಬಿಸಲು ಹಗಲು-ರಾತ್ರಿ ಹೆಣಗಿದ ಮಾಧ್ಯಮದವರನ್ನು ನೋಡಿದರೆ ಗಣಿ ಕಾರ್ಮಿಕರು ನೆನಪಾಗುತ್ತಿದ್ದರು.

೩೦೦ ಎಕರೆ ಪ್ರದೇಶದಲ್ಲಿ ೩೦೦ ಕೋಟಿ ರೂ. ಹಣದಲ್ಲಿ ನಿರ್ಮಾಣವಾಗುವ ಥೀಮ್ ಪಾರ್ಕು ಯಾವ ಉದ್ದೇಶ ಹೊಂದಿದೆ. ಅದರ ಘನ ಸಾಧನೆ ಏನು? ಅದಕ್ಕೂ ಈ ಹಂಪಿಗೂ ಇರುವ ಸಂಬಂಧವಾದರೂ ಏನು? ವಿಜಯನಗರ ಪಟ್ಟಣವನ್ನು ಪುನಃ ಕಟ್ಟುವ ಅಗತ್ಯ ಏನಿದೆ? ಇಂತಹ ಪ್ರಶ್ನೆಗೆ ಮಾಧ್ಯಮಗಳು ಮುಖಾಮುಖಿ ಆಗಬೇಕಿತ್ತು. ಗಣಿಗಾರಿಕೆಯ ಅಬ್ಬರದಲ್ಲಿ ಹಂಪಿ-ಹೊಸಪೇಟೆಗಳಷ್ಟೇ ಅಲ್ಲದೆ ಇಡೀ ಬಳ್ಳಾರಿ ಜಿಲ್ಲೆ ಅನುಭವಿಸುತ್ತಿರುವ ಪ್ರಾಕೃತಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳೇನು? ಅವುಗಳಿಗೆ ಉತ್ತರವೇನು? ಕನ್ನಡದ ಶ್ರೇಷ್ಠ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಗೆ ಗಣಿಧೂಳಿನಿಂದ ಮುಕ್ತಿ ಯಾವಾಗ? ಈ ಪ್ರಶ್ನೆಗಳು ಪ್ರಸ್ತುತವಾಗಿರಲಿಲ್ಲವೇ?

ಅದು ಹೋಗಲಿ, ಮೂರು ದಿನ ಉತ್ಸವದಲ್ಲಿ ಎಲ್ಲವೂ ಶ್ರೀಕೃಷ್ಣದೇವರಾಯ ಮುಖ್ಯವೇದಿಕೆಗೆ ಸೀಮಿತವಾದರೆ ಉಳಿದ ವೇದಿಕೆಗಳ ಗತಿ ಏನು? ಅಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ, ಜನರ ಸ್ಪಂದನೆ ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಲೇ ಇಲ್ಲ. ಮುಖ್ಯವೇದಿಕೆಯಲ್ಲಿ ಲೇಸರ್ ಬೆಳಕಿನ ಸಂಭ್ರಮ. ಹೀಗಾಗಿ, ಬೆಳಕಿದ್ದಲ್ಲಿ ವರದಿ ಎನ್ನುವಂತೆ ಆಯಿತು.

ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ತಾಲೂಕು ವರದಿಗಾರರನ್ನು ಇತರ ವೇದಿಕೆಗಳಿಗೆ ಸಾಗಹಾಕಿ ವರದಿ ಮಾಡಿಸಿ, ಪೇಜು ತುಂಬಿಸಿದವು. ಜಿಲ್ಲಾ ವರದಿಗಾರು, ಅವರಿಗಿಂತ ಹಿರಿಯರು ಮುಖ್ಯವೇದಿಕೆಯಲ್ಲೇ ಝಂಡಾ ಹೂಡಿದ್ದರು.

ಮೂರು ದಿನವೂ ಉತ್ಸವದಲ್ಲಿದ್ದ ಕವಿ ಚೆನ್ನವೀರ ಕಣವಿಯನ್ನು ಮಾತನಾಡಿಸಿದ ಸಂಯುಕ್ತ ಕರ್ನಾಟಕ ಉತ್ಸವದಲ್ಲಿ ವಿಚಾರ ಬೇಡವೇ? ಉತ್ಸವದ ನಡೆ ಯಾವ ಕಡೆ? ಎನ್ನುವ ಅತ್ಯಗತ್ಯ ಪ್ರಶ್ನೆಗಳ ಮೂಲಕ ಉತ್ಸವದ ಸಾಕ್ಷಿ ಪ್ರಜ್ಞೆಯನ್ನು ಹಿಡಿದಿಡುವ ಪ್ರಯತ್ನವನ್ನು ತನ್ನ ಮಿತಿಯಲ್ಲಿ ಆದರೂ ಮಾಡಿತು. ಉಳಿದ ಪತ್ರಿಕೆಗಳು ಅದನ್ನೂ ಮಾಡಲಿಲ್ಲ. ಪ್ರಜಾವಾಣಿಯು ಉತ್ಸವದ ಕೊನೆಯ ದಿನ, ಲೈಟ್ ಟು ಹಂಪಿ ವಿಶೇಷ ವರದಿ ಮಾಡಿದರೂ ಅದು ಕೂಡಾ ಅಧಿಕಾರಿಗಳು ನೀಡಿದ ಪ್ರೆಸ್‌ನೋಟಿನಂತಿತ್ತು. ಹಂಪಿಯಲ್ಲಿ ಹಗಲು ಏಕಾಂಗಿಯಾಗಿ ಸಂಚರಿಸುವುದೇ ಆಪಾಯ ಆಗಿರುವಾಗ ರಾತ್ರಿ ಜನ ಬಂದು ಹೇಗೆ ನೋಡುತ್ತಾರೆ? ರಾತ್ರಿ ಪುನಃ ಅವರು ಹೊಸಪೇಟೆಗೆ ಹೋಗುವುದು ಹೇಗೆ? ವಾಹನ ವ್ಯವಸ್ಥೆ ಎಲ್ಲಿದೆ ಎಂದು ಕೇಳಿಕೊಂಡಿದ್ದರೆ ಹೊಸ ಲೈಟ್ ಕಾಣುತ್ತಿತ್ತು. ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ ಎನ್ನುವಂತೆ ಮಾಧ್ಯಮಗಳು ಎಲ್ಲವನ್ನೂ ಲೈಟ್ ಆಗಿ ತೆಗೆದುಕೊಂಡವು.

ತೆಲುಗು ನಟಿ ಶ್ರೇಯಾ ಕನ್ನಡ ಹಾಡಿಗೆ, ಆ ಹಾಡಿಗೆ ಸಂಬಂಧವಿಲ್ಲದಂತೆ ನರ್ತಿಸಿದ್ದನ್ನೇ ವರ್ಣಿಸಿ ಬರೆದು ದಣಿದ ಪತ್ರಕರ್ತರು, ಸಾಂಸ್ಕೃತಿಕ ವರದಿಗಾರಿಕೆ ಅನ್ನುವುದು ಕನ್ನಡ ಪತ್ರಿಕೆಗಳಲ್ಲಿ ಇದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದರು.

ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್ ಆವರಣದಲ್ಲಿರುವ ವೇದಿಕೆಯ ಕಾರ್ಯಕ್ರಮಗಳು ಕೇಳಲಾರದಂತೆ ಅಲ್ಲಿಯ ಸನಿಹದಲ್ಲಿದ್ದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೆಂಬ ರಾಕ್ಷಸನ ಅಟ್ಟಹಾಸ ನಡೆದಿತ್ತು. ಇದು ಒಟ್ಟು ಹಂಪಿ ಉತ್ಸವದ ರೂಪಕವಾಗಿತ್ತು. ಇನ್ನು ಪಿಸು ಮಾತುಗಳಿಗೆ, ಸೂಕ್ಷ್ಮತೆಗೆ, ಚರ್ಚೆ, ಸಂವಾದಕ್ಕೆ, ವಿಚಾರಕ್ಕೆ ಇನ್ನೆಲ್ಲಿ ಜಾಗ?

ವಿಜಯನಗರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಅಷ್ಟದಿಗ್ಗಜರ ಕವಿಗಳ ಸಾಲಿನಲ್ಲಿ ನಿಲ್ಲದೆ, ಅರಸನ ದಾಸರಾಗದೇ ಕನಕ-ಪುರಂದರರು ವಿಜಯನಗರದ ರಾಜಬೀದಿಯಲ್ಲಿ ನಿಂತು ಲೊಳಲೊಟ್ಟೆ ಇದು ಲೊಳಲೊಟ್ಟೆ ಎಂದು ಹಾಡಿದ್ದರು. ಈ ಕಾಲದಲ್ಲೂ ಅದೇ ಧ್ವನಿ ಹಂಪಿಯ ಕಲ್ಲು ಬಂಡೆಗಳಲ್ಲಿ ಪ್ರತಿಧ್ವನಿಸಿದವು. ಇದನ್ನು ಕೇಳುವ ಕಿವಿ ಕಿವುಡಾಗಿದೆ. ಕಣ್ಣು ಕುರುಡಾಗಿದೆ. ಬಾಯಿ ಸತ್ತು ಹೋಗಿದೆ. ಗ್ಲಾಮರ್ ಆಕರ್ಷಣೆಗಾಗಿ ನಡೆದ ಎರವಲು ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಕನ್ನಡ ಸಂಸ್ಕೃತಿ ಇಲ್ಲಿ ನೇಪಥ್ಯಕ್ಕೆ ಸರಿಯಿತು.

ಇದನ್ನೆಲ್ಲ ಹೇಳಬೇಕಾದವರು ಯಾಕೋ ಏನೋ ಹೇಳಲೇ ಇಲ್ಲ.