Wednesday, July 13, 2011

ಹೋದಷ್ಟೇ ವೇಗವಾಗಿ ವಾಪಾಸು ಬಂದ ಮಾಳವಿಕಾ: ನಮ್ಮದೊಂದಿಷ್ಟು ಉದ್ರಿ ಸಲಹೆಗಳು...

ಬದುಕು ಜಟಕಾ ಬಂಡಿಯ ಜಡ್ಜ್ ಸಾಹೇಬರಾದ ಶ್ರೀಮತಿ ಮಾಳವಿಕಾ ಅವಿನಾಶ್ ವಾಕ್ ಔಟ್ ಮಾಡಿದಷ್ಟೇ ವೇಗವಾಗಿ ಮತ್ತೆ ವಾಪಾಸು ಬಂದಿದ್ದಾರೆ. ಅಲ್ಲಿಗೆ ಅವರು ಜಗಳ ಮಾಡಿಕೊಂಡು ಒದ್ದಾಡುತ್ತಿರುವ ಕರ್ನಾಟಕದ ಜನರನ್ನು ಕೈಬಿಡಲಿಲ್ಲ ಎಂದಾಯಿತು. ಅವರದು ಮಾತೃಹೃದಯ, ಹೀಗಾಗಿ ಕಾರ್ಯಕ್ರಮ ನಡೆಸೋದಿಲ್ಲ ಎಂದು ಹೇಳಿದ ಮರುದಿನವೇ ನಿರ್ಧಾರ ಬದಲಿಸಿ ಬಂದು ತಮ್ಮ ಅಸಾಮಾನ್ಯ ಜನಪರ ಕಾಳಜಿಯನ್ನು ಮರೆದಿದ್ದಾರೆ. ಇನ್ನೇನು ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇ ಹೂಡಬಹುದಾಗಿದ್ದ ತಮ್ಮ ಭಕ್ತವೃಂದವನ್ನು ಕಾಪಾಡಿದ್ದಾರೆ. ಅವರ ಮನೋಭಿಲಾಶೆಯನ್ನು ಈಡೇರಿಸಿದ್ದಾರೆ. ಅವರಿಗೆ ದೇವರು ಸಕಲ ಸನ್ಮಂಗಳವನ್ನೂ ಉಂಟು ಮಾಡಲಿ.

ಹೇಗೂ ಮಾಳವಿಕಾ ವಾಪಾಸು ಬಂದಿದ್ದಾರೆ. ನಿನ್ನೆ ಎಪಿಸೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಅವರು ಕಿತ್ತಾಡುತ್ತಿದ್ದ ಗಂಡ-ಹೆಂಡಿರನ್ನು ಒಂದು ಮಾಡಿ ಕಳುಹಿಸುವ ಮಹತ್ಕಾರ್ಯ ಮಾಡಿದ್ದಾರೆ. ನಿನ್ನೆ ಕಹಿ ಅನುಭವವಾಗಿತ್ತು, ಇವತ್ತು ಮನಸ್ಸಿಗೆ ಸಮಾಧಾನವಾಗುವ ಸಿಹಿ ಘಟನೆ ನಡೆದಿದೆ ಎಂದು ಅವರು ರೋಮಾಂಚಿತರಾಗಿದ್ದಾರೆ. ಜಟಕಾ ಬಂಡಿ ಇನ್ನಷ್ಟು ವೇಗವಾಗಿ ಮುಂದೆ ಸಾಗಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ಬಡಜನರಿಗೆ ಅನುಕೂಲವಾಗುವಂತೆ ಮಾಡಲು ಒಂದಷ್ಟು ಉದ್ರಿ ಸಲಹೆಗಳನ್ನು ಕೊಡೋಣ ಅನ್ನುವ ಆಲೋಚನೆ ನಮ್ಮದು. ಕೊಟ್ಟ ಸಲಹೆಗಳನ್ನು ತೆಗೆದುಕೊಳ್ಳೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಸಲಹೆಗಳು ಇಂತಿವೆ.

೧. ಜಟಕಾ ಬಂಡಿಯಲ್ಲಿ ಬಂದು ಕೂರುವ ಜನ ಸಂಸ್ಕಾರವಿಲ್ಲದವರು. ಹೀಗಾಗಿ ಹೊಡೆದಾಡುತ್ತಾರೆ, ಅದೂ ಚಪ್ ಚಪ್ಪಲಿಯಲ್ಲೇ ಕಾದಾಡುತ್ತಾರೆ. ಹೀಗಾಗಿ ಗಲಭೆ ನಿಯಂತ್ರಿಸಲು ಒಂದು ರ‍್ಯಾಪಿಡ್ ಆಕ್ಷನ್ ಫೋರ್ಸ್‌ನ ತುಕಡಿಯನ್ನು ಪರ‍್ಮನೆಂಟಾಗಿ ಶೂಟಿಂಗ್ ಸ್ಥಳದಲ್ಲಿ ನಿಯೋಜಿಸುವುದು ಒಳ್ಳೆಯದು. ಇಲ್ಲಿ ಹೊಡೆದಾಡುವವರು ಮಹಿಳೆಯರೂ ಆಗಿರುವುದರಿಂದ ಮಹಿಳಾ ಪೊಲೀಸರ ಒಂದು ತಂಡವನ್ನೂ ಸಹ ಇಟ್ಟುಕೊಳ್ಳುವುದು ಒಳ್ಳೆಯದು. ಸಂಭವನೀಯ ಗಲಭೆ ತಪ್ಪಿಸಲು ಪೊಲೀಸರು ಅಶ್ರುವಾಯು, ಮದ್ದುಗುಂಡು ಸೇರಿದಂತೆ ಎಲ್ಲ ಶಸ್ತ್ರಾಸ್ತ್ರಗಳಿಂದ ಸನ್ನದ್ಧರಾಗಿರುವುದು ಒಳ್ಳೆಯದು. ಹೀಗೆ ಶೂಟಿಂಗ್ ಸ್ಥಳದಲ್ಲೇ ಪೊಲೀಸರನ್ನು ಇಟ್ಟುಕೊಳ್ಳುವುದರಿಂದ ಪದೇ ಪದೇ ಪೊಲೀಸರಿಗೆ ಫೋನ್ ಮಾಡಿ ಕರೆಸುವ ತಾಪತ್ರಯ ತಪ್ಪುತ್ತದೆ.

. ಜಟಕಾ ಬಂಡಿಯಲ್ಲಿ ಜನರು ಆವೇಶಕ್ಕೆ ಬಿದ್ದು ಪರಸ್ಪರ ಹಲ್ಲೆ ಮಾಡಿಕೊಳ್ಳುವ, ಕೊಲೆ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಗಾಯಾಳುಗಳಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಒಂದು ಮೊಬೈಲ್ ಆಸ್ಪತ್ರೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಒಬ್ಬ ವೈದ್ಯಾಧಿಕಾರಿ, ಮತ್ತೊಬ್ಬ ಫಿಜಿಷಿಯನ್, ಇನ್ನೊಬ್ಬ ಆರ್ಥೋಪೆಡಿಷಿನ್ ಜತೆಗೆ ಒಂದಷ್ಟು ಜನ ನರ್ಸುಗಳನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳುವುದು ಅಪೇಕ್ಷಿತ. ಸ್ಥಳದಲ್ಲೇ ಎಕ್ಸ್‌ರೇ, ಸಿಟಿ ಸ್ಕಾನ್ ಥರಹದ ಸೌಲಭ್ಯಗಳಿದ್ದರೆ ಇನ್ನೂ ಒಳ್ಳೆಯದು.

೩. ಕೌಟುಂಬಿಕ ಕೋರ್ಟುಗಳು, ಮಹಿಳಾ ಸಹಾಯವಾಣಿಗಳಲ್ಲಿ ಸಾವಿರಾರು ಕೇಸುಗಳು ಪೆಂಡಿಂಗಾಗಿವೆ. ಹೀಗೆ ಬಾಕಿ ಉಳಿದ ಕೇಸುಗಳನ್ನು ಜಟಕಾ ಬಂಡಿಯ ಕೋರ್ಟಿಗೆ ವರ್ಗಾಯಿಸಲು ಕೋರಿ ಸರ್ಕಾರಕ್ಕೆ ಮತ್ತು ರಾಜ್ಯ ಮುಖ್ಯ ನ್ಯಾಯಾಧೀಶರಿಗೆ ಒಂದು ಅರ್ಜಿ ಹಾಕಿ, ಕೇಸುಗಳನ್ನು ಪಡೆದು ಬಗೆಹರಿಸುವ ಕಡೆ ಯೋಚನೆ ಮಾಡಬಹುದು.

. ಜಟಕಾ ಬಂಡಿಯೂ ಒಂದು ಬಗೆಯ ಕೋರ್ಟ್ ಸ್ವರೂಪದಲ್ಲಿರುವುದರಿಂದ ಇದಕ್ಕೆ ಕಾನೂನು ಮಾನ್ಯತೆಯನ್ನು ದಕ್ಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ಈಗ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗುತ್ತಿರುವ ಹಾಗೆ ನ್ಯಾಯಾಂಗ ಕ್ಷೇತ್ರದಲ್ಲಿ ಖಾಸಗಿ ಕೋರ್ಟುಗಳು. ಹೇಗಿದೆ ಐಡಿಯಾ? ಹಾಗೆಯೇ ಜಟಕಾ ಬಂಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಬರುವವರಿಗೆ ತಮ್ಮ ಪರವಾಗಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸುವುದು ಸೂಕ್ತ.

. ಜಟಕಾ ಬಂಡಿಯ ಜಡ್ಜು ಮಾಳವಿಕಾ ಅವರ ಗೌರವವನ್ನು ಹೆಚ್ಚಿಸುವ ಸಲುವಾಗಿ ಅವರಿಗೆ ಹೊಸಬಗೆಯ ಡ್ರೆಸ್ ನೀಡುವುದು ಒಳ್ಳೆಯದು. ಜಡ್ಜುಗಳು ಧರಿಸುವ ನಿಲುವಂಗಿ ಅಥವಾ ಧರ್ಮಾಧಿಕಾರಿಗಳು ಬಳಸುವ ಉಡುಗೆ ಸೂಕ್ತವಾಗಬಹುದು. ಜಟಕಾ ಬಂಡಿ ಓಡಿಸುವವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು.

೬. ಜಟಕಾ ಬಂಡಿಯಲ್ಲಿ ಆಗಾಗ ಮಾರಾಮಾರಿ ನಡೆಯುವ ಸಾಧ್ಯತೆಗಳಿರುವುದರಿಂದ ಮಾಳವಿಕಾ ವಾಕ್ ಔಟ್ ಮಾಡುವ ಬಗೆಬಗೆಯ ದೃಶ್ಯಗಳನ್ನು ಮೊದಲೇ ಚಿತ್ರೀಕರಿಸಿಕೊಂಡು ಲೈಬ್ರರಿಯಲ್ಲಿಟ್ಟುಕೊಂಡರೆ ಅದನ್ನು ಬೇಕಾದಾಗಲೆಲ್ಲ ಬಳಸಬಹುದು.

೭. ಜಟಕಾ ಬಂಡಿಯಲ್ಲಿ ಹಂತಹಂತವಾಗಿ ಸಿವಿಲ್ ವ್ಯಾಜ್ಯಗಳನ್ನೂ ಬಗೆಹರಿಸಲು ಯತ್ನಿಸಬಹುದು. ಈಗ ಈ ಕೆಲಸವನ್ನು ಹಾಲಿ-ಮಾಜಿ ಭೂಗತ ದೊರೆಗಳು, ಕಾರ್ಪೊರೇಟರ್‌ಗಳು, ಹಾಲಿ-ಮಾಜಿ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಜಟಕಾ ಬಂಡಿ ಈ ಕೆಲಸವನ್ನು ಕೈಗೆತ್ತಿಕೊಂಡರೆ ಇವರೆಲ್ಲರ ಕೆಲಸ ಸುಲಭವಾಗುತ್ತದೆ.

. ಹಿಂದೆಲ್ಲಾ ಕೋರ್ಟುಗಳಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಪ್ರಕರಣಗಳು ನಡೆದಿವೆ. ಜಟಕಾ ಬಂಡಿಯಲ್ಲಿ ಏನೇನೋ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಡ್ಜು ಸಾಹೇಬರಿಗೆ ಸಶಸ್ತ್ರ ಅಂಗರಕ್ಷಕರನ್ನು ಒದಗಿಸುವುದು ಸೂಕ್ತ.

ಇನ್ನೂ ಸಾಕಷ್ಟು ಸಲಹೆಗಳನ್ನು ಕೊಡಬಹುದು. ಆದರೆ ನಮ್ಮ ಓದುಗರು ಜಾಣರು. ಅವರೂ ಸಹ ಇನ್ನೊಂದಿಷ್ಟು ಉದ್ರಿ ಸಲಹೆಗಳನ್ನು ಕೊಡಬಲ್ಲವರಾದ್ದರಿಂದ ಇಲ್ಲಿಗೆ ನಿಲ್ಲಿಸಿದ್ದೇವೆ.

19 comments:

  1. ಸಲಹೆಗಳು ತುಂಬಾ ಚೆನ್ನಾಗಿವೆ.

    ReplyDelete
  2. ಬದುಕು ಜಟಕಾಬಂಡಿ ಕಾರ್ಯಕ್ರಮ ಪ್ರಸಾರವಾಗುವಾಗ ಟಿವಿಯನ್ನೇ ಚಚ್ಚಿ ಬಿಸಾಡುವಷ್ಟು ನಮ್ಮ ಸೈರಣೆ ಮುಗಿದಿರುತ್ತದೆ. ಕೈಯಲ್ಲಿ ಟಿವಿ ಚಚ್ಚಲು ಹೋಗಿ ನಮಗೇ ವಿದ್ಯುದಾಘಾತವಾಗುವುದರಿಂದ ಮಾನ್ಯ ರಾಜ್ಯ ಸರ್ಕಾರವು ಟಿವಿ ಇರುವ ಪ್ರತಿ ಮನೆಗೆ ಒಂದು ಲೋಡು ಇಟ್ಟಿಗೆಗಳನ್ನು ಪೂರೈಸಬೇಕು, ಟಿವಿಯನ್ನು ಇಟ್ಟಿಗೆಗಳನ್ನು ಎಸೆದು ಕುಟ್ಟಿ ಪುಡಿ ಮಾಡಿದ ನಂತರ ಉಳಿಯುವ ಇಟ್ಟಿಗೆಗಳನ್ನು ಜಟಕಾಬಂಡಿಯ ಮಾರಾಮಾರಿ ಕುಟುಂಬಗಳಿಗೆ ಫ್ಯಾಮಿಲಿಗಿಷ್ಟು ಎಂಬಂತೆ ಸರಾಗವಾಗಿ ಹೊಡೆದಾಡಿಕೊಳ್ಳಲು ಅನುಕೂಲವಾಗುವಂತೆ ತಲೆಗಿಷ್ಟು ಎಂಬ ಲೆಕ್ಕದಲ್ಲಿ ವಿಲೇವಾರಿ ಮಾಡಬಹುದು. ನ್ಯಾಯಾಲಯದ ನೋಟಿಸುಗಳಿಗೆ ಉತ್ತರಿಸದೆ ಕದ್ದು ಮುಚ್ಚಿ ತಿರುಗಾಡುತ್ತಿರುವ ಜಟಕಾಬಂಡಿ ಚಾಲಕರಿಗೆ ವೇಷ ಮರೆಸಿಕೊಳ್ಳಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ "ವಿಶೇಷ ಬುರ್ಖಾ" ವಿತರಿಸಬೇಕು. ಪಲ್ಲಂಗೇಶ್ವರ ನಿತ್ಯಾನಂದೂದೂ ಒಂದು ಎಪಿಸೋಡು ಆದರೆ ಚೆನ್ನ. ಪಾಪ ಇತ್ತಾಗೆ ಪೋಲೀಸರು, ಅತ್ತಾಗೆ ನ್ಯಾಯಾಲಯ ಮತ್ತೊಂದೆಡೆ ಮೀಡಿಯಾದ ಜಲ್ಲಿಕಲ್ಲುಗಳ ಏಟು ತಿಂದು, ಕಡೆಗೂ ಕುದುರೆ ಕೈಲೂ ಒದೆಸಿಕೊಂಡು, ವಿರಹವೇದನೆಯಲ್ಲಿ ಎದೆ ಹಿಡಿದುಕೊಂಡು ಬಿಡದಿಯ ಸುತ್ತಲೂ ಹಗಲು ಮೋಹಿನಿಯಂತೆ ಸುತ್ತುವ ನಿತ್ಯಾನಂದೂರ ಕಷ್ಟಗಳೂ ಜಟಕಾಬಂಡಿಯೊಳಗೆ ಬಗೆಹರಿಯಲಿ, ಎಲ್ಲಕ್ಕಿಂತ ಮೊದಲು ಮಾಳವಿಕಾ ಮೇಡಂರಿಗೆ ಒಂದು ಸೆಲ್ಫ್ ಲೋಡಿಂಗ್ ರೈಫಲ್ ಕೊಟ್ಟರೆ ಚೆನ್ನ.. ಮಾರಾಮಾರಿದಾರರು ಯಾವ ಟೈಮಿನಲ್ಲಿ ಜಡ್ಜುಗಳತ್ತ ನುಗ್ಗುತ್ತಾರೋ ಹೇಳಲು ಬರುವುದಿಲ್ಲ, ಆತ್ಮರಕ್ಷಣೆ ಮಾಡಿಕೊಳ್ಳಲು ಕಾರ್ಯಕ್ರಮದ ಜಡ್ಜುಗಳಿಗೆ ಅವಕಾಶ ನೀಡಬೇಕು. ಅಗತ್ಯ ಬಿದ್ದಾಗ ಸರಕ್ಕನೆ ವಾಕೌಟ್ ಮಾಡಲು ಅನುಕೂಲವಾಗುವಂತೆ ಒಂದು ಕುದುರೆಯನ್ನು ಸ್ಟುಡಿಯೋದ ಬಾಗಿಲ ಬಳಿಯೇ ನಿಲ್ಲಿಸತಕ್ಕದ್ದು (ಟೈಮಿಗೆ ಸರಿಯಾಗಿ ಆಟೋನೂ ಸಿಗಲ್ಲ ನೋಡಿ) ಟಿ.ಕೆ. ದಯಾನಂದ

    ReplyDelete
  3. ಹೋದೆಯಾ ಸನಿ(ಸಂಕಟ ನಿವಾರಕಿಯ ಸಂಕ್ಷಿಪ್ತ ರೂಪ)ಅಂದ್ರೆ, ಬಂದೆ ನೆಕ್ಸ್ಟ್ ಎಪಿಸೋಡಲ್ಲಿ ಅಂತ ಬಂದೇ ಬಿಡ್ತಲ್ಲ ಈಯಮ್ಮ..

    ReplyDelete
  4. ಧರ್ಮದರ್ಶಿಗಳು, ಈ ಬೃಹತ್ ಬ್ರಹ್ಮಾಂಡದ ಪ್ರಕಾಂಡ ಪಂಡಿತರೂ ಆದ ನರೇಂದ್ರ ಶರ್ಮ ಮತ್ತು ನಮ್ಮ ಕರ್ನಾಟಕದ ಬಿಡದಿಯನ್ನು ರಾತ್ರೋ ರಾತ್ರಿ (ಕು)ಖ್ಯಾತಿಯ ಉತ್ತುಂಗಕ್ಕೆ ಏರಿಸಿದ ನಿತ್ಯಾನಂದ ಸ್ವಾಮಿಗಳು ಈಗಾಗಲೇ ಈ ಕಾರ್ಯಕ್ರಮದಲ್ಲಿ ದರ್ಶನ ನೀಡಿ ಕನ್ನಡ ಕುಲಕೋಟಿಯನ್ನು ಆಶೀರ್ವದಿಸಿದ್ದಾರೆ. ಮಾಳವಿಕಾ ಮೇಡಮ್ ಅವರು ತಮ್ಮ ಪ್ರಭಾವವನ್ನು ಬಳಸಿ ಆ ಮಹಾನುಭಾವರನ್ನು ಆಗಾಗ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕನ್ನಡಿಗರನ್ನು ಉದ್ಧರಿಸಬೇಕು.

    ReplyDelete
  5. ಬಡವರ ಬದುಕೆ ಇವರಿಗೆ ಬಂಡವಾಳ. ಅಮಾಯಕ ಜನ ಏನೋ ನಮ್ಮ ಸಮಸ್ಯೆಗಳು ಬಗೆಹರಿಯಬಹುದು ಎಂದು ನೂರು ಆಸೆಗಳನ್ನು ಕಟ್ಟಿಕೊಂಡು ಟಿವಿ ಕಟಕಟೆಗೆ ಬರುತ್ತಾರೆ. ಆದರೆ ಟಿವಿ ರಿಯಾಲಿಟಿ ಶೋಗಳು ಮಾಡುವುದೇ ಬೇರೆ. ಕಾರ್ಯಕ್ರಮಗಳಿಗೆ ಬರುವವರನ್ನು ಉದ್ರೇಕಿಸುತ್ತಾರೆ. ಅವರು ಜಗಳವಾಡಲಿ ಎಂದು ಕಾಯುತ್ತಿರುತ್ತಾರೆ. ತಮಗೆ ಬೇಕಾದಂತೆ ಚಿತ್ರಿಸಿಕೊಂಡು, ಬೇಕಾದ ದೃಶ್ಯಗಳನ್ನು ತೋರಿಸುತ್ತಾರೆ. ತಮ್ಮ ಟಿಆರ್ಪಿ ಹಾಗೂ ಬಂಡವಾಳ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಾ ತಿಳಿಯದ ಅಮಾಯಕ ಜನ ಹಿಂಗು ತಿಂದ ಮಂಗನಂತಾಗುತ್ತಾರೆ. ತಮಗೆ ಗೊತ್ತಿಲ್ಲದೆಯೇ ಮನೆಯ ಗುಟ್ಟನ್ನು ರಟ್ಟು ಮಾಡಿಕೊಂಡು ಬೀದಿಪಾಲಾಗುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಥೆ ಅಲ್ಲ ಜೀವನ, ಜೀ ಟಿ.ವಿಯ ಬದುಕು ಜಟಕಾ ಬಂಡಿ ಈ ಕಾರ್ಯಕ್ರಮಗಳಿಂದ ಸಂಸಾರಗಳು ಹಾಳಾಗುತ್ತಿವೆಯೇ ಹೊರತು, ಜನತೆಗೆ ಎಳ್ಳಷ್ಟೂ ಒಳಿತಾಗುತ್ತಿಲ್ಲ. ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬಾರದು.

    ReplyDelete
  6. Eega Udaya Music chanel allo haadugala madye prema prakaranagaLige counseling shuru aagide ...

    ReplyDelete
  7. ಇಡೀ ಕರ್ನಾಟಕ ಜನತೆ ಮಾಳವೀಕ ನಮ್ಮ ಮನೆ ಮಗಳು ಎಂಬಂತೆ ಭಾವಿಸಿದ್ದರು. ಅಭಿಮಾನ ತೋರುತ್ತಿದ್ದರು. ಆದರೆ ಕೇವಲ ಬಂಡವಾಳಕ್ಕಾಗಿ ನಡೆಯುತ್ತಿರುವ ಬದುಕು ಜಟಕಾ ಬಂಡಿ ಕಾರ್ಯಕ್ರಮದ ನಡೆಸಿಕೊಡಲು ಮುಂದಾದ ನಂತರ ಮಾಳವೀಕ ಮೇಲೆ ಇದ್ದ ಭಾವನೆ ಹಾಗೂ ಅಭಿಮಾನ ಎರಡೂ ಕಡಿಮೆಯಾಗಿದೆ. ಟಿ.ವಿಯಲ್ಲಿ ಆಕೆಯ ಮುಖವನ್ನು ಕಂಡರೆ ಆಪ್ತತೆ ಬದಲಿಗೆ ವಾಕರಿಗೆಯಾಗುತ್ತಿದೆ. ನಮ್ಮ ಮನೆ ಮಗಳು ಎಂದು ಭಾವಿಸಿದ್ದು ಇದೇ ಮಾಳವೀಕನಾ ಎಂಬ ಅನುಮಾನವೇಳುತ್ತದೆ. ಅಥವಾ ಈ ಕಲಾವಿದರೆಲ್ಲಾ ಇಷ್ಟೇನಾ ದುಡ್ಡೊಂದು ಕೊಟ್ಟರೆ ಎಲ್ಲವನ್ನೂ ಮರೆತುಬಿಡುವ ಸ್ಥಿತಿಗೆ ತಲುಪಿದ್ದಾರಾ? ಎಲ್ಲಾ ಕ್ಷೇತ್ರಗಳು ಕಮರ್ಷಿಯಲ್ ಆದಂತೆ ಕಲೆಯ ಮಹತ್ವವನ್ನು ಮರೆತು ಕಲಾವಿದರೂ ಕೂಡ ಕೇವಲ ಕಮರ್ಷಿಯಲ್ ಆಗುತ್ತಿದ್ದಾರಾ?
    ಮಾಳವೀಕ ನಮ್ಮ ಮನೆ ಹುಡುಗಿ ಎಂದು ಇಲ್ಲಿಯವರೆಗೆ ಪ್ರೀತಿ ತೋರಿದ ತಪ್ಪಿಗೆ ಮಾಳವೀಕ ಕೊಡುತ್ತಿರುವ ಕೊಡುಗೆ ಬದುಕು ಜಟಕಾ ಬಂಡಿ. ಬಡವರ ಬದುಕನ್ನು ಬೀದಿಯಲ್ಲಿ ಬಿಕರಿಗಿಟ್ಟಿರುವ ಜಿ.ಕನ್ನಡ ವಾಹಿನಿ ಹಾಗೂ ಮಾಳವೀಕಾಗೆ ಧಿಕ್ಕಾರವಿರಲಿ.
    ಮಾಳವೀಕಾ ನಿನಗೊಂದು ಉದ್ರಿ ಸಲಹೆ: ಮಾಳವೀಕ ದಯವಿಟ್ಟು ನಿನ್ನ ಕುಟುಂಬದ ಕಲಹಗಳೇನಾದರೂ ಇದ್ದರೇ ಅವುಗಳನ್ನೂ ಕೂಡ ಬದುಕು ಜಟಕಾ ಬಂಡಿ ಕಟಕಟೆಗೆ ತೆಗೆದುಕೊಂಡು ಬಾ. ಆಗ ನೀನು ಯಾವ ರೀತಿ ನ್ಯಾಯದಾನ ಮಾಡುತ್ತೀಯ ಎಂದು ನೋಡುವ ಕುತೂಹಲ ಕನ್ನಡಿಗರದ್ದಾಗಿದೆ. ಜೊತೆಗೆ ಹೊಡೆದಾಟ ಬಡಿದಾಟಗಳಿದ್ದರೆ ಮೊದಲೇ ಹೇಳಿಬಿಡು. ನಿನ್ನ ಕಟಕಟೆಯಲ್ಲಿ ಕೇವಲ ಬಡವರ ಬದುಕಿನ ಬಡಿದಾಟಗಳನ್ನು ನೋಡಿ ಬೇಜಾರಾಗಿರುವ ಜನಕ್ಕೆ ಇದರಿಂದ ಅನುಕೂಲವಾಗಲಿದೆ. ನಿನ್ನಂತಹ ಸ್ಥಿತಿವಂತರ ಮನೆಯಲ್ಲೂ ಬೀದಿ ಜಗಳಗಳು ನಡೆಯುತ್ತವೆ. ಬಡವನಿರಲಿ ಬಲ್ಲಿದನಿರಲಿ ಬದುಕಿನ ಬಂಡಿಯಲ್ಲಿ ಜಂಜಾಟ, ಹೊಡೆದಾಟ, ಬಡಿದಾಟ ಎಲ್ಲವೂ ಸಾಮಾನ್ಯ. ಅವುಗಳನ್ನು ಮೀರಿ ಸಾಗಿದಾಗ ಮಾತ್ರ ಜೀವನ ಸುಗಮವಾಗಿರುತ್ತದೆ. ಅದನ್ನು ಬಿಟ್ಟು ಬದುಕು ಜಟಕಾ ಬಂಡಿಯ ಕಟಕಟೆಯೇರಿದರೆ ಬದುಕು ಬೀದಿಪಾಲಾಗುತ್ತದೆ
    ಎಂಬುದು ಜನಕ್ಕೆ ಅರ್ಥವಾಗುತ್ತದೆ. ದಯವಿಟ್ಟು ಮೊದಲು ಆ ಕೆಲಸ ಮಾಡಿ.

    ReplyDelete
  8. ha ha>>keep it up

    ReplyDelete
  9. ನ್ಯಾಯಾಧೀಶರಿಗೆ ಕೆಂಪು ದೀವದ ಕಾರು,ಅಂಗರಕ್ಷಕರಾಗಿ ಬ್ಲಾಕ್ ಕ್ಯಾಟ್ ಗಳ ದಂಡು, ಛತ್ರ, ಚಾಮರ ಪರಾಕು ಹೇಳುವುದಕ್ಕೆ ಒಂದಷ್ಟು ವಂದಿಮಾಗಧರನ್ನು ಒದಗಿಸಿದರೆ ನೋಡುವುದಕ್ಕೆ ಶೋಭಾಯಮಾನವಾಗಿರುತ್ತೆ.

    ReplyDelete
  10. These are all gimmicks for TRP. You are also fooled by them.

    ReplyDelete
  11. ನನ್ನದೂ ಒಂದಿಷ್ಟು ಸಲಹೆಗಳಿವೆ. ಪರಾಂಬರಿಸಬೇಕಾಗಿ ವಿನಂತಿ:
    ೧) ಪ್ರತಿಯೊಂದು ಕುಟುಂಬದ ನೋವನ್ನು ನೋಡುತ್ತಾ, ಕೇಳುತ್ತಾ ಕೂರುವ ಮಾಳವಿಕಾ ಅವರಿಗೆ ಆಗಾಗ ಮುಖ ಹಿಂಡಿದಂತೆ ಮಾಡಿ ತಮ್ಮೊಳಗಿನ ನೋವನ್ನೂ "ಅಭಿನಯಿಸಿ" ತೋರಿಸಬೇಕಾದ ಅವಶ್ಯಕತೆ ಇರುವುದರಿಂದ ದಯವಿಟ್ಟು ರೇಶ್ಮೆ ಸೀರೆ ಉಟ್ಟುಕೊಂಡು ಸುಮ್ಮನೇ ಕುಳಿತರೂ ಮುಖದ ಮೇಲೆ ನೋವು ಕಾಣುವಂತೆ ಮೇಕಪ್‌ ಮಾಡಿಸುವುದು. (ರಜನಿಕಾಂತ್‌ರ ಸಿನೆಮಾಗಳಿಗೆ ಮೇಕಪ್‌ ಮಾಡುವವರನ್ನೇ ಬಳಸಿಕೊಂಡರೆ ಚೆನ್ನ. ತುಸು ದುಬಾರಿಯಾದರೂ ಕಾರ್ಯಕ್ರಮದ ಟಿಆರ್‌ಪಿಗೆ ಹೋಲಿಸಿದರೆ ಅದು ಅಸಾಧ್ಯವೇನಲ್ಲ!)
    ೨) ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟಕ್ಕೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು. ಪ್ರತಿ ದಿನವೂ ಹೊಡೆದಾಡಿಕೊಳ್ಳುವ ಮತ್ತು ಹಾಗೆ ಮಾಡುವುದರ ಮೂಲಕ ರಾಜ್ಯದ ಮರ್ಯಾದೆಯನ್ನು ಹರಾಜಿಗಿಟ್ಟಿರುವ ಮಂತ್ರಿವರ್ಯರ ಹೊಡೆದಾಟ ಒಂದೇ ಕಾರ್ಯಕ್ರಮದಲ್ಲಿ, ಸಾಧ್ಯವಾದರೆ ಒಂದೇ ಕಂತಿನಲ್ಲಿ ಬಗೆ ಹರಿದರೆ ಕನ್ನಡದ ಜನತೆ ಮಾಳವಿಕಾ ಅವರಿಗೆ ಚಿರಋಣಿಯಾಗಿರುತ್ತಾರೆ.
    ೩) ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವವರಿಗೆ ಒಂದು ದಿವಸ ಮುಂಚಿತವಾಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಬಳಿ ಹೊಡೆದಾಟದ ತರಬೇತಿ ನೀಡುವುದು. ಜೀವನದ ಜಂಜಾಟದಲ್ಲಿ ನೊಂದ ಆ ಜನತೆಗೂ ತಮ್ಮೊಳಗಿನ ಆಕ್ರೋಶವನ್ನು ಹೊರ ಹಾಕಲು ಒಂದು "ವೀರೋಚಿತ" ಮಾರ್ಗ ದೊರೆತಂತಾಗುತ್ತದೆ ಮಾತ್ರವಲ್ಲ ಕಣ್ಣೀರನ್ನೇ ನೆಚ್ಚಿಕೊಂಡ ಕಾರ್ಯಕ್ರಮಕ್ಕೂ ಒಂದು ಬಗೆಯ ಕ್ಷಾತ್ರೀಯ ತೇಜಸ್ಸು ಲಭಿಸುತ್ತದೆ.
    ೪) ಕೇವಲ ಮುಖ ಹಿಂಡುವುದು, ವಾಕ್‌ ಮಾಡುವುದು ಎಷ್ಟು ದಿನ ನಡೆದೀತು? ಆದ್ದರಿಂದ ಈಗಾಗಲೇ ಜನಮನಗೆದ್ದ ಮಾಳವಿಕಾ ಅವರು ಕೆಲವೊಮ್ಮೆ, ಸಂದರ್ಭಾನುಸಾರವಾಗಿ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದೂ ಟಿಆರ್‌ಪಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದಕ್ಕೆ ಬೇಕಾದರೆ ಮುಖ್ಯಮಂತ್ರಿಗಳಿಂದ ತರಬೇತಿ ಪಡೆಯಬಹುದು.
    - ಅರುಣ್‌ ಕಾಸರಗುಪ್ಪೆ

    ReplyDelete
  12. ಕುರಿಯಾಗುವವರು ಇರುವವರೆಗೆ ಕುರಿಮಾಡುವವರು ಇದ್ದೇ ಇರುತ್ತಾರೆ.

    ReplyDelete
  13. this is expected..we all knew that malavika will come back again she is goin to continue this worst progrmme again..channel should stop this kind of programmes...

    ReplyDelete
  14. ನಿಮ್ಮ ಈ ಲೇಖನ ಓದಿ ನಕ್ಕು ನಕ್ಕು ಸಾಕಾಯಿತು. ಇನ್ನು ಮುಂದೆ ಹಾಸ್ಯಕ್ಕಾಗಿ ಬೇರೆಲ್ಲೂ ಹೋಗಬೇಕಾಗಿಲ್ಲ. ಸಂಪಾದಕೀಯ ಓದಿದರೆ ಸಾಕೆನಿಸಿತು.

    ReplyDelete
  15. zee kannada channelenavarige enaagideyo gottilla..ellaroo asahya pado innondu latest news andre avru tamma dance india dance anno programmenalli maria susairaj anno kolegaduk natimaniyanna tandu kunisutta iddare..adar bharjari prachaar kooda eggillade saagide..idakke enannabeko..kannada kulkotiyanna aa devare kapaadabeku...

    ReplyDelete
  16. malavika eleksan genadru ninthkothidyenakka?

    ReplyDelete
  17. ಮಹಾನ್ ಪಂಡಿತರೂ ಮೇಧಾವಿಯೂ ಸ್ವತಹ ಕಾನೂನು ಪದವೀಧರರೂ ಆದ ಮಾಳವಿಕ ಮೇಡಂಗೆ ನಮ್ಮದೂ ಒಂದು ಉಚಿತ ಉದ್ರಿ ಏನು ಅಂತಂದ್ರೆ, ಜೂಟ್ ಸಿನಿಮಾ ನಾಯಕಿಯಾದ ಮರಿಯಾ ಸೂಸೈರಾಜ್ ಅನ್ನು ಹಾಗೂ ಜೈಲಿನಲ್ಲಿರುವ ಅವಳ ಪ್ರಿಯತಮನನ್ನು ತಮ್ಮ ಜಟಕಾ ಬಂಡಿ ಕಾರ್ಯಕ್ರಮಕ್ಕೆ ಕರೆತಂದು ನೀರಜ್ ಗ್ರೋವರ್ನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿಬಿಡಿ ಮೇಡಂ. ಮುಂಬೈ ಜನ ನಿಮ್ಮನ್ನೂ ಯಾವತ್ತೂ ಮರೆಯುವುದಿಲ್ಲ.

    ReplyDelete