Saturday, July 23, 2011

ಭಟ್ಟರೇಕೆ ವೈರಾಗ್ಯದ ಮಾತುಗಳನ್ನು ಆಡುತ್ತಿದ್ದಾರೆ? ವಿದಾಯದ ಮುನ್ಸೂಚನೆಯೇ?


ಸಮಯ ಚಾನಲ್‌ನ ಮುಖ್ಯಸ್ಥರಾದ ಶಶಿಧರ ಭಟ್ಟರು ರಾಜೀನಾಮೆ ಕೊಟ್ಟು ಹೊರಹೋದರೇ? ಇದ್ದಕ್ಕಿದ್ದಂತೆ ಹೀಗಾಗಲು ಕಾರಣ ಏನು? ಭಟ್ಟರ ಜಾಗಕ್ಕೆ ಬರುವವರು ಯಾರು? ಹೀಗೆ ಒಂದಾದ ಮೇಲೊಂದರಂತೆ ಪ್ರಶ್ನೆಗಳು ಪ್ರೆಸ್‌ಕ್ಲಬ್‌ನ ಕಲ್ಲಿನ ಟೇಬಲ್ಲುಗಳಿಂದ ಎದ್ದು ಸುದ್ದಿಮನೆಗಳಲ್ಲಿ ಓಡಾಡಿ, ಪತ್ರಕರ್ತರ ಮೊಬೈಲುಗಳಲ್ಲಿ ಮೆಸೇಜುಗಳ ಸ್ವರೂಪ ಪಡೆದುಕೊಂಡಿವೆ.

ಹೀಗೆ ಸುದ್ದಿ ಹರಡುವುದಕ್ಕೆ ಕಾರಣವಾಗಿರುವುದು ಫೇಸ್‌ಬುಕ್‌ನಲ್ಲಿ ಭಟ್ಟರು ಬರೆದಿರುವ ಅಮೂರ್ತ ಅರ್ಥವನ್ನು ಧ್ವನಿಸುವ ಒಂದು ಮಾತು.

ವಿದಾಯದ ಜೊತೆಗೆ ನೋವಿರುತ್ತದೆ. ಆದರೆ ವಿದಾಯ ಎಂದರೆ ಬಿಡುಗಡೆ. ಬಿಡುಗಡೆಯ ಸಂತೋಷ ವಿದಾಯದ ನೋವನ್ನು ಮರೆಸುತ್ತದೆ.

ವಿಶೇಷವೆಂದರೆ ಭಟ್ಟರು ಹೀಗೆ ವೈರಾಗ್ಯದ ಮಾತುಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಜೂನ್ ತಿಂಗಳಿಂದೀಚಿಗೆ ಅವರು ಬರೆಯುತ್ತಿರುವುದೆಲ್ಲ ಇದೇ ಮಾದರಿಯ ಸ್ಟೇಟಸ್‌ಗಳು. ಕೆಲವನ್ನು ನೀವೂ ಗಮನಿಸಿ ನೋಡಿ.

ಬದುಕು ಎನ್ನುವುದು ನದಿಯಂತೆ. ಅದು ಹರಿಯುತ್ತಲೇ ಇರಬೇಕು. ಆದರೆ ನದಿಗೆ ಅಣೆಕಟ್ಟುವ ಯತ್ನ ನಡೆಯುತ್ತಲೇ ಇರುತ್ತದೆ. 
ಜಂಗಮತ್ವ ಬದುಕಿಗೆ ಚಲನಶೀಲತೆಯನ್ನು ಕೊಡುತ್ತದೆ. ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ 
ಬದುಕಿನಲ್ಲಿ ಎತ್ತರಕ್ಕೆ ಎರಿದವರಿಗೆ ಬೀಳುವ ಭಯ. ಕೆಳಗೆ ಇರುವವರಿಗೆ ಮೇಲೆರುವ ಕನಸು. ಆದ್ದರಿಂದ ಕೆಳಕ್ಕೆ ಇರುವುದೇ ಒಳ್ಳೆಯದು. 
ಬದುಕು ಹರಿಯುವ ನದಿಯಂತಿರಬೇಕು, ನದಿಗೆ ಅಣೆ ಕಟ್ಟು ಕಟ್ಟು ಕಟ್ಟಬಾರದು, ಆಗಲೇ ಚಂದ.
ಹೀಗೆಲ್ಲ ಬರೆದ ಭಟ್ಟರಿಗೆ ಅವರ ಫೇಸ್‌ಬುಕ್ ಗೆಳೆಯರು ಏನ್ಸಾರ್ ನಿಮ್ಮ ಮಾತು ಕೇಳಿದ್ರೆ, ನೀವು ಸಮಯ ಟಿವಿನೂ ಬಿಡೋ ಹಾಗೆ ಅನ್ನಿಸ್ತಾ ಇದೆ ಎಂದು ನೇರಾನೇರ ಕೇಳಿದ್ದಾರೆ. ಭಟ್ಟರು ಉತ್ತರಿಸಿದ ಹಾಗೆ ಕಾಣುವುದಿಲ್ಲ.

ಸಮಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದೇನೋ ನಿಜ. ಭಟ್ಟರ ಕಾಂಟ್ರಾಕ್ಟ್ ಅವಧಿಯೂ ಮುಗಿಯುತ್ತ ಬಂದಿದೆ ಎಂಬ ಮಾಹಿತಿಯಿದೆ. ಮ್ಯಾನೇಜ್‌ಮೆಂಟ್ ಬದಲಾದ ಮೇಲೆ ಬೇರೆ ಬೇರೆ ತರಹದ ಬದಲಾವಣೆಗಳು ನಡೆಯುತ್ತಲಿವೆ. ಆದರೆ ಭಟ್ಟರು ಅಲ್ಲಿಂದ ಕಾಲ್ತೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆಯೇ?

ಭಟ್ಟರು ಹೊರಹೋದರೆ, ಸಮಯದ ಸಾರಥ್ಯ ವಹಿಸುವವರು ಯಾರು ಎಂಬ ಪ್ರೀ ಮೆಚ್ಯೂರ್ ಪ್ರಶ್ನೆಯೂ ಈಗ ಉದ್ಭವವಾಗಿದೆ. ಮಹತ್ವಾಕಾಂಕ್ಷೆಯ ಜ್ವರದಲ್ಲಿ ಬೇಯುತ್ತಿರುವ ಜೂನಿಯರ್ ಪತ್ರಕರ್ತರೊಬ್ಬರು ಈ ಪೋಸ್ಟಿಗೆ ಫೈಟ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಮೊದಲೇ ಹೇಳಿದಂತೆ ಇದು ಪ್ರೀ ಮೆಚ್ಯೂರ್ ಪ್ರಶ್ನೆ.

ಹಾಗೆ ನೋಡಿದರೆ, ಕನ್ನಡ ಪತ್ರಕರ್ತರ ಪೈಕಿ, ಅತಿ ಹೆಚ್ಚು ಆತ್ಮಾವಲೋಕನದ ಮಾತುಗಳನ್ನು ಆಡಿದವರು ಶಶಿಧರ ಭಟ್ಟರು. ತಮ್ಮ ಬ್ಲಾಗ್ ಕುಮ್ರಿಯ ಮೂಲಕ, ಕಾರ್ಯಕ್ರಮಗಳ ವೇದಿಕೆಗಳಲ್ಲಿ ಭಟ್ಟರು ಆಗಾಗ ಮಾಧ್ಯಮಗಳ ಕುರಿತು ಮಾತನಾಡುತ್ತಲೇ ಬಂದಿದ್ದಾರೆ. ಇತ್ತೀಚಿಗೆಯಂತೂ ಬಹಳ ನಿಷ್ಠುರವಾಗಿಯೇ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತ ಬಂದಿದ್ದಾರೆ. ಮ್ಯಾನೇಜ್‌ಮೆಂಟುಗಳೊಂದಿಗೆ ಹೊಂದಿಕೊಂಡು ಹೋಗದಿದ್ದರೆ ಅವರು ನಮ್ಮನ್ನು ಸಂಸ್ಥೆಯಿಂದ ಹೊರಕಳುಹಿಸುತ್ತಾರೆ ಎಂಬ ಕಟುಸತ್ಯವನ್ನು ನಿರ್ಭಿಡೆಯಿಂದ ಹೇಳುತ್ತ ಬಂದಿದ್ದಾರೆ. ಪತ್ರಕರ್ತರು ಪತ್ರಕರ್ತರಾಗಿದ್ದುಕೊಂಡೇ ರಿಯಲ್ ಎಸ್ಟೇಟ್ ವ್ಯಾಪಾರಿಗಳಾಗಿರುವ, ದಳ್ಳಾಳಿಗಳಾಗಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರದಿಂದಲೇ ರಾಜಕಾರಣಿಯಾದ ಮಾಧ್ಯಮ ಸಂಸ್ಥೆ ಮಾಲೀಕರೊಬ್ಬರನ್ನು ನೇರವಾಗಿ ಜಾಡಿಸಿದ್ದರು. ಹೀಗೆ ಮಾತನಾಡುವ ಸಂದರ್ಭದಲ್ಲಿ ಅವರು ಎಸೆದ ಬಾಣಗಳು ಯಾರ‍್ಯಾರಿಗೆ ತಿವಿದವೋ? ಗೊತ್ತಿಲ್ಲ.

ಭಟ್ಟರು ತಮ್ಮ ಬ್ಲಾಗ್‌ನಲ್ಲಿ ಆಗಾಗ ಹೇಳುತ್ತಾ ಬಂದ ಮಾಧ್ಯಮ-ಪತ್ರಕರ್ತರ ಕುರಿತ ಮಾತುಗಳನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನಿಸಿ.

ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂಥವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,

ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.

ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗೆ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

***

ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.

***
ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ.. 
          ***
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು! 
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.

ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ. 
***

ಮಾಧ್ಯಮದಲ್ಲಿ ಕೆಲಸ ಮಾಡುವವರೂ ಬದಲಾಗಿದ್ದಾರೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಪೂರ್ಣವಾಗಿ ಮಾಧ್ಯಮವನ್ನೇ ನಂಬಿಕೊಂಡು ಬದುಕುತ್ತಿಲ್ಲ. ಬಹಳಷ್ಟು ಜನರಿಗೆ ಬದುಕುವುದಕ್ಕೆ ಬೇರೆ ಬೇರೆ ದಾರಿಗಳಿವೆ. ಕೆಲವರು ಮಾಧ್ಯಮದಲ್ಲಿ ಕೆಲಸ ಮಾಡುವುದು ವಿಸಿಟಿಂಗ್ ಕಾರ್ಡಿಗಾಗಿ. ಇನ್ನೂ ಕೆಲವರಿಗೆ ಇದು ಪಾರ್ಟ್ ಟೈಮ್ ಜಾಬ್.

ನಮ್ಮ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಪತ್ರಿಕೋದ್ಯಮಿಗಳಿದ್ದಾರೆ. ಗಣಿ ನಡೆಸುವ ಮಾಧ್ಯಮದ ವ್ಯಕ್ತಿಗಳಿದ್ದಾರೆ. ಹೋಟೇಲ್, ಬಾರ್ ನಡೆಸುವವರಿದ್ದಾರೆ. ಹಾಗೆ ಸಿನಿಮಾ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತ, ಈ ಬಗ್ಗೆ ಬರೆಯುವ ಪತ್ರಿಕೋದ್ಯಮಿಗಳಿದ್ದಾರೆ. ಹಾಗೆ ಚಿತ್ರನಟರಾಗುವ ಮೆಟ್ಟಿಲಾಗಿ ಮಾಧ್ಯಮವನ್ನು ಬಳಸಿಕೊಳ್ಳುವವರಿದ್ದಾರೆ. ಒಂದು ಬದುಕುವ ದಾರಿಯಾಗಿ ಯಾವ ಕೆಲಸ ಮಾಡುವುದು ತಪ್ಪಲ್ಲ. ಆದರೆ ತಮ್ಮ ಬದುಕುವ ದಾರಿಯಲ್ಲಿ ಮುಂದುವರಿಯಲು ಪತ್ರಿಕೋದ್ಯಮವನ್ನು ಬಳಸಿಕೊಳ್ಳುವುದು ತಪ್ಪು.

ಇದನ್ನೆಲ್ಲ ಯಾಕೆ ಹೇಳುತ್ತಿದ್ದೆನೆಂದರೆ ಪ್ರಾಮಾಣಿಕತೆಯ ಬಗ್ಗೆ ಮಾತನಾಡುತ್ತಿರುವುದರಿಂದ. ನಮ್ಮ ಆಲೋಚನೆಯಲ್ಲಿ ಪ್ರಾಮಾಣಿಕತೆ ಬರಬೇಕೆಂದರೆ ನಮ್ಮ ಸ್ವಂತ ಹಿತಾಸಕ್ತಿ ಇರಕೂಡದು. ನಮ್ಮ ಸ್ಚಂತ ಹಿತಾಸಕ್ತಿ ಇರಕೂಡದು. ಯಾವುದೇ ವಿಚಾರ ಅಥವಾ ಘಟನೆಯಲ್ಲಿ ಅದನ್ನು ವರದಿ ಮಾಡುವವರ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರ ಪಾಲುದಾರಿಕೆ, ಸಹಭಾಗಿತ್ವ ಇರಕೂಡದು. ಈಗ ಬಾರ್ ನಡೆಸುವ ವ್ಯಕ್ತಿ ವರದಿಗಾರನಾಗಿದ್ದರೆ, ಆ ವಿಚಾರ ಬಂದಾಗ ಆತ ಪ್ರಾಮಾಣಿಕ ನಿಲುಮೆ ತೆಗೆದುಕೊಳ್ಳುವುದು ಸಾಧ್ಯವೆ ? ಗಣಿ ಮಾಲಿಕನಾದ ಒಬ್ಬ ವರದಿಗಾರ, ಈ ಬಗ್ಗೆ ಎಷ್ಟರ ಮಟ್ಟಿಗೆ ಪ್ರಾಮಾಣಿಕ ನಿಲುವನ್ನು ಪ್ರದರ್ಶಿಸಬಲ್ಲ ? ಇದರ ಜೊತೆಗೆ ಮಾಧ್ಯಮದ ಆಡಳಿತ ವರ್ಗ ಕೂಡ ಒಂದಲ್ಲ ಒಂದು ಗುಂಪು, ರಾಜಕೀಯ ಪಕ್ಷಗಳ ಜೊತೆ ತನ್ನನ್ನು ಗುರುತಿಸಿಕೊಳ್ಳುತ್ತಿದೆ.

ನೈತಿಕತೆಯ ಸೂಕ್ಷ್ಮವನ್ನು ಮಾಧ್ಯಮ ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮದಲ್ಲಿ ಕೆಲಸ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಆದರೆ ಇಂದು ಮಾಧ್ಯಮ ಜಗತ್ತೂ ಕೂಡ ಸಂಪೂರ‍್ಣವಾಗಿ ಒಂದು ಉದ್ಯಮದಂತೆ ಕೆಲಸ ಮಾಡುತ್ತಿದೆ. ಯಾವುದು ಉದ್ಯಮವಾಗುತ್ತದೆಯೋ ಅಲ್ಲ ಲಾಭ ನಷ್ಟ ಮಾತ್ರ ಗಣನೆಗೆ ಬರುತ್ತದೆ. ಇಲ್ಲಿಯೂ ಅಷ್ಟೇ ಲಾಭ ನಷ್ಟವೇ ಪರಮ. ಸಾರ್ವಜನಿಕ ಹಿತಾಸಕ್ತಿ, ಬಹುಜನ ಹಿತಾಯ ಎಂಬ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ಇದರಿಂದ ಪತ್ರಿಕೋದ್ಯಮದ ನೈತಿಕತೆಯ ನೆಲಗಟ್ಟು ಶಿಥಿಲಗೊಳ್ಳುತ್ತಿದೆ. ಸಮಾಜದ ಫೋರ‍್ಥ್ ಎಸ್ಟೇಟ್, ರಿಯಲ್ ಎಸ್ಟೇಟ್ ಎಜೆಂಟರುಗಳ ತಾಣವಾಗುತ್ತಿದೆ.
***

ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಒಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ಣ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.

ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಭಟ್ಟರು ಸಮಯ ಚಾನಲ್ ತೊರೆಯುವುದು ನಿಶ್ಚಿತವಾದರೆ, ಅದಕ್ಕೆ ಕಾರಣಗಳನ್ನು ಭಟ್ಟರ ಮೇಲಿನ ಮಾತುಗಳಲ್ಲೇ ಹುಡುಕಬಹುದೇನೋ?

10 comments:

  1. bhattara baraha, abhipraya sariyagi ede

    ReplyDelete
  2. ಮಾಧ್ಯಮ ಲೋಕ ಈಗ ಬಹಳಷ್ಟು ಬದಲಾಗಿದೆ. ಇಲ್ಲಿ ಕೂಡಾ ಭ್ರಷ್ಟಾಚಾರ, ಅನಿಷ್ಠ ಜಾತಿ ಪದ್ಧತಿಯ ಅಂಟು ರೋಗ ಮೊದಲಿಗಿಂತ ವ್ಯವಸ್ಥಿತ ಕಾಯಱಚರಣೆ ನಡೆಸಿದೆ. ಜತೆಗೆ, ಇಲ್ಲಿ ಹಣವೇ ಪ್ರದಾನವಾಗಿದೆ. ಹೀಗಾಗಿ, ಪ್ರಮಾಣಿಕರಿಗೆ, ಜನಪರ ಕಾಳಜಿ ಹೊಂದಿರುವವರಿಗೆ ಮತ್ತು ಇನ್ನೂ ಬದ್ಧತೆ ಉಳಿಸಿಕೊಂಡ ವ್ಯಕ್ತಿಗಳಿಗೆ ಇಲ್ಲಿ ಉಸಿರುಗಟ್ಟುವ ವಾತಾವರಣವಿದೆ.

    ReplyDelete
  3. ಸಮಯ ಟಿವಿ ಮೊದಲು ಜಾರಕಿಹೊಳಿ ಗಳಿಗೆ ಸೇರಿತ್ತು..ಈಗ ಆ ಚಾನೆಲ್ ಯಾರ ಒಡೆತನ ಕ್ಕೆ ಬಂದಿದೆ...?
    ಜನಶ್ರೀ ಲಾಸ ದಲ್ಲಿ ನಡೆತಿತೆ ಅದನ್ನು ರೆಡ್ಡಿ ಬ್ರ. ಮಾರುವರಿದ್ದರೆ ಎಂಬ ಸುದ್ದಿ ಇತ್ತು ಅದು ಏನಾಯಿತು ..?
    ರವಿ ಹಾಗು ವಿಶ್ವೇಶ್ವರ್ ನಡುವೆ ಕಂಪ್ರಮೈಸೆ..ಸುದ್ದಿ ಬರುತ್ತಿದೆ..ಇದು ನಿಜವೇ..?

    ವಿಠಲ್ ರಾವ್ ಕುಲಕರ್ಣಿ ಮಲಖೇಡ್

    ReplyDelete
  4. ಲಾಭದ ದೃಷ್ಟಿಕೋನ ಹೊಂದಿರದ, ದೇಶದ ಹಿತ ಹಾಗೂ ಜನಪರ, ಪ್ರಗತಿಪರ ಧೋರಣೆಗಳನ್ನು ಹೊಂದಿರುವ ಪರ್ಯಾಯ ಮಾಧ್ಯಮವನ್ನು ಹುಟ್ಟು ಹಾಕುವ ಅನಿವಾರ್ಯತೆ ಇಂದು ಇದೆ. ಈ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು ಚಿಂತನಶೀಲ ಪತ್ರಕರ್ತರು ಏಕೆ ಯೋಚಿಸುತ್ತಿಲ್ಲ? ಜೀವನೋಪಾಯಕ್ಕಾಗಿ ಬೇರೆ ದೃಢವಾದ ಆಧಾರ ಹೊಂದಿರುವವರು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ. ಹೀಗಿದ್ದಾಗ ಯಾವುದೇ ಮುಲಾಜಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪರ್ಯಾಯ ಮಾಧ್ಯಮವನ್ನು ಹುಟ್ಟು ಹಾಕದೆ ಹೋದರೆ ದೇಶದ ಹಾಗೂ ಜನಪರ ಹಿತಗಳ ಪರ ಕೆಲಸ ಮಾಡಲಾಗದ ಸ್ಥಿತಿ ಮುಂದಿನ ದಿನಗಳಲ್ಲಿ ಬರಲಿರುವುದು ಖಚಿತ.

    ReplyDelete
  5. What he has achieved by joining samaya? One should not forget the debackle of Kaveri and suvarna

    ReplyDelete
  6. ಶಶಿಧರ ಭಟ್ಟರ ಮಾತುಗಳಲ್ಲಿ ಸತ್ಯವಿದೆ. ಪತ್ರಿಕೋಧ್ಯಮದಲ್ಲಿ Critical Insider ಆಗಿ ಗುರುತಿಸಿಕೊಂಡ ಶಶಿಧರ ಭಟ್ಟರದ ಮಾತುಗಳಲ್ಲಿರುವ ವಿಷಾದ ಹಾಗೂ ಭರವಸೆ ಎರಡೂ ಪ್ರಾಮಾಣಿಕ ಎಂದು ನಂಬಲು ನಾನು ಇಷ್ಟಪಡುತ್ತೇನೆ. ನಾವು ಈಗಿರುವ ಕಾಲದ ಮಹಿಮೆ ಹೇಗಿದೆಯೆಂದರೆ ಇಂಥದ್ದೊಂದು ಸ್ವವಿಮರ್ಶೆ ಸಾಧ್ಯವಾಗುವುದೇ ಅತಿ ದೊಡ್ಡ ಪವಾಡ. ಕ್ರಿಯೆಯ ಮಾತು ನಂತರದ್ದು. ಟಿಆರ್‌ಪಿ ಯನ್ನು ನೆಚ್ಚಿಕೊಂಡೇ ತಮ್ಮೆಲ್ಲಾ ಪತ್ರಿಕೋಧ್ಯಮವನ್ನೂ ಜಾರಿಯಲ್ಲಿಡುವ ಜನರ ನಡುವೆ ನಿಂತು ಶಶಿಧರ ಭಟ್ಟರು ಮಾತನಾಡುತ್ತಿದ್ದಾರೆ. ಮುಂದಿನ ಹತ್ತುವರ್ಷಗಳಲ್ಲಿ ಹೀಗೆ ಮಾತನಾಡುವುದೂ ಅಸಾಧ್ಯವಾದೀತು.

    ಅರುಣ್‌ ಕಾಸರಗುಪ್ಪೆ

    ReplyDelete
  7. Want to see Shashidhar bhatt, Ranganath HR, ananth chinivar, and ravi belagere, working together in one single news channel.(Is it possible?!) Atleast these people can bring quality to the product they deliver. they have ethics, knowledge, intelligence and responsibility. and more over they are good readers.
    vandana Ithal

    ReplyDelete
  8. ಪ್ರೀತಿಯ ಶಶಿಧರ್ ಭಟ್ ರವರೇ

    ಸಂಪಾದಕೀಯ ತಾಣದಲ್ಲಿ ತಾವು ಸಮಯ ವಾಹಿನಿ ಬಿಡುತ್ತಿರುವ ಕುರಿತು ಲೇಖನ ಓದಿದೆ ಅಲ್ಲದೆ ತಾವು ತಮ್ಮ ಬ್ಲಾಗ್ ನಲ್ಲಿ ಇಂದಿನ ಪತ್ರಿಕೋದ್ಯಮದ ಕುರಿತು ಬರೆದಿರುವ ನಿಷ್ಟುರ (ವಾಸ್ತವ) ಸತ್ಯಗಳನ್ನು ಓದಿದೆ ತಾವು ದಯವಿಟ್ಟು ಸಮಯ ವಾಹಿನಿಯನ್ನು ಬಿದಬೀಡಿ ಏಕೆಂದರೆ ನೀವೇ ಒಂದು ಕಡೆ ಹೇಳಿರುವಂತೆ ನಿವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಅಲ್ಲದೆ ಚಳುವಳಿಯ ಹಿನ್ನಲೆಯಲ್ಲಿ ಇ ರಂಗವನ್ನು ಅಯ್ಕೆಮದಿಕೊಂಡು ವೃತಿ ಜೀವನ ಆರಂಬಿಸಿದವರು ಅದ್ದರಿಂದ ನಿಮ್ಮಂಥ ವ್ಯಕ್ತಿಗಳ ಮಾರ್ಗದರ್ಶನ ಹಲವರು ಯುವಕರಿಗೆ ಬೇಕಾಗಿದೆ ನೀವು ಹೇಳಬಹುದು ಈಗಿನ ಯುವಕರು ಜಾಗತೀಕರಣದ ಹಿನ್ನೆಲೆಯಿಂದ ಬದುಕನ್ನು, ಮಾಡುವ ಕೆಲಸವನ್ನು ಗುರುತಿಸುತ್ತಿದ್ದಾರೆ ಎಂದು. ಆದರೆ ಎಲ್ಲರು ಹಾಗಿಲ್ಲ ಪತ್ರಿಕೋದ್ಯಮಕ್ಕೆ ಹೋಗಬೇಕು ಅಲ್ಲಿ ನನ್ನ ಆಲೋಚನೆಯ ಮೊಲಕ ಹಲವರು ಬದಲಾವಣೆ ತರಬೇಕು ಎಂದು ಕನಸುಕಾಣುವ ಹಲವರು ಯುವಕರು ನನ್ನ ಸುತ್ತ ಇದ್ದಾರೆ ಅವರಿಗೆಲ್ಲ ನಿಮ್ಮಂಥ ಕೆಲವರೇ ಮಾರ್ಗದರ್ಶಕರು ನನ್ನ ಅನುಭವದಲ್ಲ ಒಂದು ಮಾತು ಹೇಳುತ್ತೇನೆ ಸರ್ ಪ್ರತಿ ವರ್ಷ ನಮ್ಮ ವಿ.ವಿ ಗೆ ಬರುವ ನೂರಾರು ವಿದ್ಯಾರ್ಥಿಗಳು ಬರುತ್ತಾರೆ ಹೋಗುತ್ತಾರೆ ಹಾಗಂತ ಉಪನ್ಯಾಸಕ ಅವರನ್ನೆಲ್ಲ ಎ ಇವರೆಲ್ಲ ಪ್ರತಿ ವರ್ಷ ಬರುವ ವಿದ್ಯಾರ್ಥಿಗಳೇ ಎಂದುಕೊಂಡರೆ ಅವನಾಥ ಮೂರ್ಖ ಮತ್ತೊಬ್ಬನಿಲ್ಲ ಪ್ರತಿವರ್ಷ ಬರುವ ವಿದ್ಯಾರ್ಥಿ ಸಮೂಹದಲ್ಲಿ ಒಬ್ಬನಾದರೂ ಹೊಸ ಆಲೋಚನೆಯ ವ್ಯಕ್ತಿ ಇರಬಹುದು ಅವನನ್ನು ಗುರುತಿಸಿ ಪ್ರೋತ್ಸಾಹಿಸುವುದು ಉಪನ್ಯಾಸಕ ಕೆಲಸವನ್ನು ರೋಮಂಚಕವಗಿಸುತ್ತದೆ. ನಮ್ಮ ಗುರಿ ಕನಸುಗಳಿಲ್ಲದ ಯಂತ್ರಿಕ ಬದುಕಿನ ದೃಷ್ಟಿಯ ನೂರು ವಿದ್ಯಾರ್ಥಿಗಳ ಬದಲಾಗಿ ಹೊಸ ಕನಸು ಕನವರಿಕೆ ಹೊಂದಿರುವ ಒಬ್ಬ/ಇಬ್ಬರು ವಿದ್ಯಾರ್ಥಿ ಆಗಿರಬೇಕು ಅಂತೆಯೇ ಪತ್ರಿಕೋದ್ಯಮಕ್ಕೆ ಬರುವ ಸಾವಿರ ಸಾವಿರ ಜೊಳ್ಳು ಕಾಲುಗಳ ಮದ್ಯೆ ಸಿಗುವ ಗತ್ತಿತಿಕಾಳುಗಳನ್ನು ಒಟ್ಟಾಗಿಸಿ ಯಾರಿಗೆ ಗೊತ್ತು ಇಂದು ನೀವು ಲಂಕೇಶ್ , ಖಾದ್ರಿ ಶಾಮಣ್ಣ, ಅವರನ್ನು ನೆನೆಯುವಂತೆ ನಿಮ್ಮನ್ನು ನೆನೆಯುವ ಹೊಸ ಆಲೋಚನೆಗಳ ಒಂದು ಸದೃಡ ಯುವ ಪಡೆ ಬೆಳೆಯಬಹುದು ಲೆಟ್ಸ್ ಕೀಪ್ ಹೋಪ್ಸ್ ಆಲ್ ದಿ ಬೆಸ್ಟ್


    Dr. Kiran.M Gajanur,
    R.T.A.In Political Science,
    Directorate of Distance Education

    ReplyDelete
  9. ದಿ ಹಿಂದೂ ಪತ್ರಿಕೆ ಬೇರೆ ಪತ್ರಿಕೆಗಳಲ್ಲಿನ ತಪ್ಪುಗಳನ್ನು ಪ್ರಕಟಿಸುವುದಕ್ಕಿಂತ ಮೊದಲೇ ವಾರ್ತಾ ಭಾರತಿ ಮತ್ತು ಕರಾವಳಿ ಅಲೆ ಪತ್ರಿಕೆಗಳು ಈ ಕೆಲಸವನ್ನು ಮಾಡಿದ್ದವು. ಕರಾವಳಿ ಪ್ರದೇಶದಲ್ಲಿ ಉದಯವಾಣಿ ಮತ್ತು ವಿಜಯ ಕರ್ನಾಟಕ, ಸಂಜೆ ಅಲೆಯಂತಹ ಕೋಮುಭಾವನೆ ಪ್ರಚೋದಿಸುವ ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದವು. ಅವು ಅಲ್ಪಸಂಖ್ಯಾತರ ಬಗೆಗಿನ ಸುದ್ದಿಗಳು. ಆಗ ವಾರ್ತಾಭಾರತಿ ಸತ್ಯವರದಿಯನ್ನು ಪ್ರಕಟಿಸಿದ್ದಲ್ಲದೆ, ವಿಜಯ ಕರ್ನಾಟಕದಲ್ಲಿ ಬಂದ ಸುಳ್ಳುಸುದ್ದಿ ಏನು ಎಂಬುದನ್ನು ತಿಳಿಸಿತ್ತು. ಆದರೆ ವಾರ್ತಾ ಭಾರತಿ ಮತ್ತು ಕರಾವಳಿ ಅಲೆ ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ತಾವು ಇದನ್ನು ಗಮನಿಸದೆ ಇರುವುದರಿಂದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ತಮ್ಮ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಸಿದ್ದಾರ್ಥ

    ReplyDelete
  10. --ದಿನೇಶ್ ಕುಕ್ಕುಜಡ್ಕJuly 26, 2011 at 3:09 PM

    ಶರಶಯ್ಯೆಗೂ ಹಿಂದಣ ರಾತ್ರಿ, ಯುದ್ಧ ಶಿಬಿರದಲ್ಲಿ ಮಲಗಿ ಕನವರಿಸುತ್ತಿರುವ ಭೀಷ್ಮನ ಆತ್ಮ ನೇವರಿಕೆಯ ಸ್ವಗತದಂತಿದೆ ಈ ಮಾತುಗಳು. ತೀರ ವಿಪರೀತ ಹೋಲಿಕೆಯೆನಿಸಿದರೂ,ಒಂದು ಕಾಲಘಟ್ಟದ ದಾರುಣತೆ....ಅಸಹಾಯಕವಾಗಿ ಮಲಗಿರುವ ಸಾಕ್ಷಿಪ್ರಜ್ಞೆಯನ್ನು ಚುಚ್ಚುತ್ತಿರುವ ಈ ನಿರ್ದಯ ಚಿತ್ರಕ್ಕೆ ಬೇರ್ಯಾವ ಹೋಲಿಕೆಗಳೂ ಈ ಕ್ಷಣಕ್ಕೆ ಹೊಳೆಯುತ್ತಿಲ್ಲ ನನಗೆ.

    ಹೌದು, ಚಳವಳಿಗಳು ಸಮಾಜದ ಜೀವಂತಿಕೆಯನ್ನು ಸೂಚಿಸುತ್ತವೆ. ವ್ಯಕ್ತಿಸಮುದಾಯವನ್ನು ಹೆಚ್ಚು ಚಲನಶೀಲವನ್ನಾಗಿಸುತ್ತವೆ. ಆ ಸಂದರ್ಭದಲ್ಲಿ ಹುಟ್ಟುವ ಸ್ವಸ್ಥ ಸಮಾಜಧರ್ಮವೊಂದರ ವಿಶಾಲ ಪ್ರತ್ಯುತ್ಪನ್ನದಂತಿರುತ್ತವೆ ಅಲ್ಲಿನ ಮನೋಧರ್ಮಗಳು . ಇತರ ಕ್ಷೇತ್ರಗಳಂತೆ ಮಾಧ್ಯಮ ರಂಗವೂ ಇದಕ್ಕೆ ಹೊರತಾಗಿಲ್ಲವಷ್ಟೆ.

    ನಿಧಾನ......
    ಕಾಲದ ಮೂಸೆಯಲ್ಲಿ ಎಲ್ಲವೂ ಕೊಳೆತು ನಾರುತ್ತಿರುವಂತೆ....... ಇಲ್ಲೂ !

    ರೂಪರ್ಟ್ ಮುರ್ಡೋಕ್ ಹೆಣೆದ ಅನೈತಿಕ ಜಾಲದ ಮಾದರಿಯ ಬಗೆಗಿನ ಮಾತುಗಳು ಮಾಧ್ಯಮ ರಂಗದ ಒಂದು ಕೊನೆಯ ಮಾತಾದೀತು. ಆ ವಿವರಗಳನ್ನು ಸದ್ಯಕ್ಕಲ್ಲೇ ಬಿಟ್ಟು ಅದರ ಇನ್ನೊಂದು ಕೊನೆಯ ಬಗೆಗೆ ಚಿಂತಿಸೋಣ. ಕೊನೆಯೆಂದರೆ ಕೊನೆಯಲ್ಲ. ಒಂದರ್ಥದಲ್ಲಿ ಇದು ಮೂಲ.

    ಹಾಗೆ ನೋಡಿದರೆ ಯಾವ ಚಳವಳಿಯ ನಡುವಿನ ಉತ್ಪನ್ನವೂ ಅಲ್ಲದ- ಯಾವ ಮನುಷ್ಯಪರ ಕಳಕಳಿಯ ಭಾಗವೂ ಅಲ್ಲದ- ವಿಭಿನ್ನ ಓದಿಗೆ ತೆರೆದುಕೊಳ್ಳದ - ಕೇವಲ ತಾಂತ್ರಿಕವಾಗಿಯಷ್ಟೇ ತರಬೇತುಗೊಳಿಸಲ್ಪಟ್ಟ ಒಬ್ಬಾತನಿಗೆ, ಇದ್ದಕ್ಕಿದ್ದಂತೆ ಸಮಾಜದ ಸಾಕ್ಷಿಪ್ರಜ್ಞೆಯ ಸ್ಥಾನ ತುಂಬುವ ಅವಕಾಶ ದೊರೆತಾಗ ಒಮ್ಮೆಲೆ ಉಂಟಾಗುವ ಮೈಮರೆವು- ಈ ವಿಪರೀತಗಳ ಸರಮಾಲೆಯ ಆರಂಭ! ಪತ್ರಕರ್ತನಾಗಿ ಎಳೆತನದ ಹಂತದಲ್ಲಿರುವ ಆ ಅವಸ್ಥೆ , ಮುಂದೆ ಏನೂ ಆಗಬಹುದಾದ ಮುಕ್ತತೆಯನ್ನು ಹೊಂದಿರುತ್ತದಲ್ಲವೇ? ದುರಂತವೆಂದರೆ, ಆತ ಹೊಂದಿರುವ ಸ್ಥಾನ ಆತನನ್ನು ಯಾವ ಸ್ವರೂಪದಲ್ಲಿ ನೋಡಲಿಚ್ಚಿಸುತ್ತದೆಯೋ, ಆತ ಅದರಂತೆ ಬೆಳೆಯದೆ ಇನ್ಯಾವುದೋ ರೀತಿಯಲ್ಲಿ ಅಡ್ಡಾದಿಡ್ಡಿ ಬೆಳೆಯುವುದು! ಒಂದು "ವಿಷನ್" ಇಲ್ಲದ ಬೆಳವಣಿಗೆ, ಅದು ಬೆಳವಣಿಗೆಯಾಗಿರುವುದಿಲ್ಲ.

    ಭಟ್ಟರು ಹೇಳುವ ಅಷ್ಟೂ ಮಾತುಗಳು ಈ ಎಲ್ಲದರ ನಿರ್ದಿಷ್ಟ ವಿವರಗಳೇ! ಮಾಧ್ಯಮ ಹಿಡಿದಿರುವ ಹೊರಳು ದಾರಿಯ ಕಣ್ಣು ಚುಚ್ಚುವ ಬಿಂಬಗಳೇ! ಸಂಘರ್ಷದ ಡೇರೆಯೊಳಗಿನ ನೋವಿನ ಸ್ವಗತಗಳೇ!

    ಇಲ್ಲಿ "ಆತ್ಮಾವಲೋಕನ"ವೆಂಬ ಕ್ಲೀಷೆ ಸದಾ ಅಣಕಿಸುತ್ತಿರುತ್ತದೆ!

    --ದಿನೇಶ್ ಕುಕ್ಕುಜಡ್ಕ

    ReplyDelete