Saturday, August 6, 2011

ಜ್ಯೋತಿಷ್ಯ, ಜಗದೀಶ್ ಶೆಟ್ಟರ್, ಜನಶ್ರೀ ಚಾನಲ್ ಇತ್ಯಾದಿ...

ಇವತ್ತಿನ ಉದಯವಾಣಿಯಲ್ಲಿ ವಿಜಯ್ ಮಲಗಿಹಾಳ ಬರೆದ ವಿಶೇಷ ವರದಿಯೊಂದು ಗಮನ ಸೆಳೆಯುವಂತಿದೆ. ಹೋಮ, ಹವನ ಮಾಡಿಸುವಂತೆ ಶೆಟ್ಟರ್‌ಗೆ ಕಾಟ ಎಂಬ ಶೀರ್ಷಿಕೆಯ ವರದಿ ಇದು. ಮುಖ್ಯಮಂತ್ರಿ ಹುದ್ದೆ ಪಡೆಯುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡ ಜಗದೀಶ್ ಶೆಟ್ಟರ್ ಅವರಿಗೆ ಹೋಮ-ಹವನ ಮಾಡಿಸಿ, ನಿಮಗೆ ಸಿಎಂ ಹುದ್ದೆ ಸಿಗುತ್ತದೆ ಎಂದು ಜ್ಯೋತಿಷಿಗಳು ಕಾಟ ಕೊಡುತ್ತಿದ್ದಾರಂತೆ.

ಇಂಟರೆಸ್ಟಿಂಗ್ ಅಂದರೆ ಜಗದೀಶ್ ಶೆಟ್ಟರ್ ಈ ಜ್ಯೋತಿಷಿಗಳನ್ನು ಕ್ಯಾರೇ ಅನ್ನುತ್ತಿಲ್ಲ ಎನ್ನುವ ಮಾಹಿತಿ ಈ ವರದಿಯಲ್ಲಿದೆ. ಅವರು ವೈಯಕ್ತಿಕ ಮಟ್ಟದ ಪೂಜೆ, ಧಾರ್ಮಿಕ ನಂಬಿಕೆಗಳಲ್ಲೇ ತೃಪ್ತರು. ಧಾರ್ಮಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಒಲ್ಲರು. ಅವರು ಹೇಳುವುದನ್ನು ಗಮನಿಸಿ.

ನನಗೆ ಮೊದಲಿನಿಂದಲೂ ಈ ಜ್ಯೋತಿಷ್ಯ, ಹೋಮ, ಹವನ ಮತ್ತಿತರ ಪೂಜಾ ವಿಧಿ ಕೈಗೊಳ್ಳುವುದರಲ್ಲಿ ನಂಬಿಕೆಯಿಲ್ಲ. ಇದುವರೆಗೆ ನಾನು ಯಾವ ಹೋಮ, ಹವನ ಮಾಡದೆ ಈ ಸ್ಥಾನದವರೆಗೆ ಬಂದಿದ್ದೇನೆ. ಮುಂದೆ ಬರಬೇಕಾದ್ದು ಬಂದೇ ಬರುತ್ತದೆ. ಅದಕ್ಕಾಗಿ ಈ ರೀತಿಯ ವಿಶೇಷ ಪ್ರಯತ್ನ ಮಾಡುವುದು ನನ್ನ ಮನಸ್ಸಿಗೆ ಒಪ್ಪುವುದಿಲ್ಲ.

ರಾಜಕಾರಣದಲ್ಲಿ ಈಗ ಜ್ಯೋತಿಷಿಗಳ ದರ್ಬಾರು ದಿನೇದಿನೇ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ಜಗದೀಶ್ ಶೆಟ್ಟರ್ ಅಂಥವರು ಇರುವುದೇ ಸಂತೋಷದ ವಿಷಯ. ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿಗಳ ನಡುವೆ ಜಗದೀಶ್ ಶೆಟ್ಟರ್ ತಮ್ಮ ವೈಯಕ್ತಿಕ ನಿಲುವನ್ನು ಕಾಪಾಡಿಕೊಂಡು ಬಂದಿರುವುದು ಆಶ್ಚರ್ಯ. ಯಾಕೆಂದರೆ ಅಧಿಕಾರ ಸ್ಥಾನದಲ್ಲಿರುವವರ ಮೇಲೆ ಜ್ಯೋತಿಷ್ಯದ ಮೊರೆ ಹೋಗುವ, ಹೋಮ-ಹವನ, ಮಾಟ-ಮಂತ್ರ ಮಾಡಿಸುವ ಒತ್ತಡ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ದುರ್ಬಲ ಮನಸ್ಸಿನವರು ಸುಲಭವಾಗಿ ಬಲಿಯಾಗುತ್ತಾರೆ. ಶೆಟ್ಟರ್ ಅಂಥವರಲ್ಲ ಅನ್ನುವುದು ಸಂತೋಷದ ವಿಷಯ. ಸೋನಿಯಾ ಗಾಂಧಿ ಗುಣಮುಖರಾಗಲೆಂದು ಜನಾರ್ದನ ಪೂಜಾರಿಯಂಥ ಹಿರಿಯ ರಾಜಕಾರಣಿ ಉರುಳು ಸೇವೆ ಮಾಡುವ ಸಾರ್ವಜನಿಕ ಮನರಂಜನೆಯಲ್ಲಿ ತೊಡಗಿರುವಾಗ ಶೆಟ್ಟರ್ ರಂಥವರು ಭರವಸೆ ಮೂಡಿಸುತ್ತಾರೆ.

***

ನಿಮಗೆ ಗೊತ್ತು, ಈ ಬ್ಲಾಗ್ ನಲ್ಲಿ ನಾವು ಪದೇಪದೇ ಕಪಟ ಜ್ಯೋತಿಷಿಗಳ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮಾಧ್ಯಮಗಳಲ್ಲಿ ಜ್ಯೋತಿಷಿಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಚಾನಲ್‌ಗಳೂ ದಿನವನ್ನು ಆರಂಭಿಸುವುದೇ ಜ್ಯೋತಿಷಿಗಳ ಮೂಲಕ. ನ್ಯೂಸ್ ಚಾನಲ್‌ಗಳಂತೂ ಏನೇ ವಿವಾದ ಎದ್ದರೂ ಮೂರ‍್ಲಾಲ್ಕು ಜ್ಯೋತಿಷಿಗಳನ್ನು ಹಿಡಿದು ತಂದು ಚರ್ಚೆ ಆರಂಭಿಸುತ್ತವೆ. ನಮಗೂ ಟೀಕಿಸಿ ಸಾಕಾಗಿ ಹೋಗಿದೆ. ನಾಯಿ ಬಾಲ ನೆಟ್ಟಗಾಗುವುದಿಲ್ಲ.

ಆದರೆ ಒಂದು ಆಶಾದಾಯಕ ಬೆಳವಣಿಗೆಯನ್ನು ನಿಮಗೆ ಹೇಳಲೇಬೇಕು. ಜನಶ್ರೀ ಚಾನಲ್ ಮಾತ್ರ ಜ್ಯೋತಿಷಿಗಳನ್ನು ಮೈಮೇಲೆ ಬಿಟ್ಟುಕೊಂಡಿಲ್ಲ. ಜ್ಯೋತಿಷಿಗಳನ್ನು ಬಳಸಿಕೊಳ್ಳದೇ ಆ ಚಾನಲ್ ಮುಂದುವರೆಯುತ್ತಿದೆ. ಇತರ ಚಾನಲ್‌ಗಳಲ್ಲಿ ಜ್ಯೋತಿಷಿಗಳು ಪದ್ಮಾಸನ ಹಾಕಿ ಕುಳಿತು ಪ್ರವಚನ ನಡೆಸುವ ಸಮಯಕ್ಕೆ ಸರಿಯಾಗಿ ಜನಶ್ರೀ ಚಾನಲ್ ನಿರುದ್ಯೋಗಿ ಯುವಕ-ಯುವತಿಯರಿಗೆ ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ ಎಂಬುದನ್ನು ಹೇಳುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಬೊಗಳೆ ಜ್ಯೋತಿಷ್ಯವನ್ನು ಪ್ರಸಾರ ಮಾಡಿ ಜನರ ತಲೆಕೆಡಿಸುವ ಬದಲು ನಿರುದ್ಯೋಗಿ ಯುವಸಮುದಾಯದ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ತನ್ನ ಆದ್ಯತೆಗಳೇನು ಎಂಬುದನ್ನು ಅದು ಸ್ಪಷ್ಟಪಡಿಸಿಕೊಂಡಿದೆ.

ಜನಶ್ರೀಯನ್ನು ಮೆಚ್ಚಿಕೊಳ್ಳುವುದಕ್ಕೆ ಇನ್ನಷ್ಟು ಕಾರಣಗಳೂ ಇವೆ. ಕಳೆದ ಹದಿನೈದು ದಿನಗಳ ರಾಜಕೀಯ ವಿಪ್ಲವಗಳ ಸಂದರ್ಭದಲ್ಲಿ ಜನಶ್ರೀ ಸುದ್ದಿ ಮತ್ತು ವಿಶ್ಲೇಷಣೆಯನ್ನು ನಿರ್ವಹಿಸಿದ ರೀತಿ ಸೊಗಸಾಗಿತ್ತು. ಚಾನಲ್‌ನ ಮುಖ್ಯಸ್ಥ ಅನಂತ ಚಿನಿವಾರ್ ನಡೆಸುವ ಚರ್ಚೆಗಳು ಗಮನ ಸೆಳೆಯುವಂತಿದ್ದವು. ಚಾನಲ್‌ನ ಒಡೆಯರು ರೆಡ್ಡಿ ಸೋದರರಾಗಿದ್ದರೂ, ಅವರ ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಕಾರ್ಯಕ್ರಮ ನಡೆಸುವಲ್ಲಿ ಅವರು ಯಶಸ್ವಿಯಾದರು.

ನಿಮಗೆ ನೆನಪಿರಬಹುದು. ಜನಶ್ರೀ ಶುರುವಾಗುವ ಹೊತ್ತಿನಲ್ಲಿ ಇದೂ ಸಹ ಕಸ್ತೂರಿ ವಾಹಿನಿಯಂತೆ ತನ್ನ ಮಾಲಿಕರ ಒಲವು-ನಿಲುವುಗಳನ್ನು ಬಿಂಬಿಸುವ ಚಾನಲ್ ಆಗಬಹುದು ಎಂದು ಅನುಮಾನಪಟ್ಟಿದ್ದೆವು. ಆದರೆ ಅದನ್ನು ಸುಳ್ಳು ಮಾಡುವಲ್ಲಿ ಜನಶ್ರೀ ತಂಡ ಯಶಸ್ವಿಯಾಗಿದೆ.

ಅಪ್ಪಂದಿರ ದಿನದಂದು ಅನಂತ್ ಚಿನಿವಾರ್ ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪತ್ರಕರ್ತ ಬಿ.ವಿ.ವೈಕುಂಠರಾಜು, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮಕ್ಕಳನ್ನು ( ಚುಕ್ಕಿ, ಸನತ್ ಕುಮಾರ್, ಮಹಿಮಾ ಪಟೇಲ್) ಕೂರಿಸಿಕೊಂಡು ಒಂದು ವಿಶೇಷ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮನಮುಟ್ಟುವಂತಿತ್ತು. ಸಂಜೆ ಶ್ರೀ ಲಕ್ಷ್ಮಿ ನಡೆಸಿಕೊಡುವ ವಿಶೇಷ ಕಾರ್ಯಕ್ರಮವೂ ಆಸಕ್ತಿದಾಯಕವಾಗಿರುತ್ತದೆ. ಇಂಥ ಹಲವು ವಿಶೇಷಗಳು ಜನಶ್ರೀಯಲ್ಲಿದೆ. ಹೀಗಾಗಿಯೇ ಅದು ದಿನೇದಿನೇ ತನ್ನ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಜನಶ್ರೀ ತಂಡಕ್ಕೆ ಅಭಿನಂದನೆಗಳು ಹಾಗು ವಿಶೇಷವಾಗಿ ಜ್ಯೋತಿಷಗಳನ್ನು ಸೇರಿಸಿಕೊಳ್ಳದ ಅವರ ನಿಲುವಿಗೆ ಕೃತಜ್ಞತೆಗಳು.

ಕೊನೆಕುಟುಕು: ಜನಶ್ರೀ ಬಳ್ಳಾರಿ ರೆಡ್ಡಿಗಳ ತುತ್ತೂರಿಯಾಗಿಲ್ಲ ಎಂಬುದೇನೋ ನಿಜ. ಒಂದು ವೇಳೆ ಹಾಗೆ ಆಗಿದ್ದರೆ ಜನಶ್ರೀ ತಂಡ ಹುಚ್ಚಾಸ್ಪತ್ರೆಗೆ ಸೇರಬೇಕಿತ್ತು. ಯಾಕೆಂದರೆ, ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವವರೆಗೂ ಅವರ ಜತೆಯಲ್ಲೇ ಇದ್ದ ಜನಾರ್ದನರೆಡ್ಡಿ ಸಂಜೆ ಹೊತ್ತಿಗೆ ಜಗದೀಶ್ ಶೆಟ್ಟರ್ ಕ್ಯಾಂಪ್ ಸೇರಿಕೊಂಡಿದ್ದರು!

8 comments:

  1. ಜೈ ಜನಶ್ರೀ.....

    ಮುಂದೆ ಬರಲಿರುವ ರಂಗಣ್ಣರ ಕದಂಬ 24*7 ಕೂಡ ಜ್ಯೋತಿಷ್ಯದವರನ್ನು ದೂರ ಇಟ್ಟಿರಲಿ ಎಂದು ಬಯಸುತ್ತೇವೆ.......

    ReplyDelete
  2. ಬಹುಷ ಜನಶ್ರೀಯಲ್ಲಿ ಜ್ಯೋತಿಷಿಗಳ ಕಾಟ ಆರಂಭವಾಗದಿರುವುದಕ್ಕೆ ಅನಂತ್ ಚಿನಿವಾರರೇ ಮುಖ್ಯ ಕಾರಣವಿರಬೇಕು. ಒಬ್ಬ ಉತ್ತಮ ಬರಹಗಾರರಾಗಿದ್ದ ಚಿನಿವಾರರು ಪತ್ರಿಕೆಗಳ ತೊರೆದು ಟಿ.ವಿ ಗೆ ಬಂದಿದ್ದು ಒಂದಷ್ಟು ಬೇಸರ ಮೂಡಿಸಿತ್ತು. ಈಗ ಬೇರೆ ಟಿ.ವಿ ಯವರಿಗಿಂತ ಭಿನ್ನವಾಗಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಸಂತಸದ ವಿಷಯ. ಇಂಥ ಕಾರ್ಯಕ್ರಮಗಳ ಟಿ.ಆರ್.ಪಿ ಹೆಚ್ಚಿಸುವ ಜವಾಬುದಾರಿ ವೀಕ್ಷಕರದು.
    ಅಶೋಕ್.

    ReplyDelete
  3. ಮಾನ್ಯರೇ,
    ನಿಜಕ್ಕೂ 'ಜನಶ್ರೀ' ಚಾನೆಲ್ ಜನ`ಶ್ರೀಸಾಮಾನ್ಯ'ನ ಚಾನೆಲ್ ಆಗಿದೆ. ಆದಾಗ್ಯೂ ಇನ್ನಷ್ಟು ಹೊಸತನ, ತನ್ನತನ, ನೈಜತನ ಇನ್ನಿತರತನಗಳು ಮೈಗೂಡಿಸಿಕೊಂಡಲ್ಲಿ ಕನ್ನಡಿಗರ ನಂ.1ಚಾನೆಲ್ ಆಗುತ್ತೆ. ನೀವು ಹೇಳಿದಂತೆ 'ಶ್ರೀಲಕ್ಷ್ಮೀ' `ಸಂಗೀತಾ' ಮತ್ತು 'ಸಾಹಿತ್ಯ'ನಡೆಸಿಕೊಡುವ ಕಾರ್ಯಕ್ರಮ ಮತ್ತು ಪ್ರೆಸೆಂಟೇಷನ್ ತುಂಬಾನೇ ಚೆನ್ನಾಗಿರುತ್ತದೆ. ಮತ್ತೊಂದು ವಿಷ್ಯ ಅಂತಂದ್ರೆ ಕದಂಬ 24*7 ಬಂದು `ನಾನಿರುವುದೇ ನಿಮಗಾಗಿ' ನೆನಪಿಸುವಂತೆ -->ಪಲ್ಲವರು, ಚಾಲುಕ್ಯರನ್ನು ಓಡಿಸಲಿ ಎಂದು ನಾವು ಆಶಿಸುತ್ತೇವೆ.
    ಅವರನ್ನು ಓಡಿಸುವ ಬದಲು ಓಟದ ಸ್ಪರ್ಧೆಯಲ್ಲಿ ಕದಂಬ ಮುಂದೆ ಇರದಿರಲಿ ಎಂಬ ಹಾರೈಕೆಗಳೂ ಈ ವೇಳೆ ಪ್ರಸ್ತುತ ಅಂತನ್ಸುತ್ತೆ...!

    ReplyDelete
  4. ಮಾನ್ಯರೇ,
    ಟಿ.ವಿ. ವಾಹಿನಿಗಳ ಕುರಿತು ನೀವು ಬರೆಯುವಂತಹದ್ದು ಮತ್ತು ಕಳಕಳಿ ಮೆಚ್ಚವಂತಹುದ್ದೇ, ಆದರೆ ಇವೊತ್ತು ನಮ್ ಕನ್ನಡ ಚಾನೆಲ್ ಗಳಿಗೆ ಏನು ಧಾಡಿ ಬಡಿದಿದೆ ಅಂತಾ ಕೇಳಬೇಕಾಗಿದೆ. ಅದೇ ಟಿವಿ9 ತೆಲುಗಿನಲ್ಲಿ ಗಣಿ ಧೂಳು ಮತ್ತು ಅಬ್ಬರದ ಬಗ್ಗೆ 2ದಿನದ ಕೆಳಗೆ ವಿಸ್ತ್ರತ ವಿವರವಾದ 1ಸ್ಟೋರಿ ತೋರಿಸಲಾಯಿತು. ಅದೇ ವರದಿ ಕನ್ನಡದ ಯಾವ ಚಾನೆಲ್ ನಲ್ಲಿ ಇರಲಿ ಕನ್ನಡ ಟಿವಿ9ನಲ್ಲಿಯೂ ಬರಲಿಲ್ಲ? ಻ನ್ನೊದು ಬೇಸರದ ಸಂಗತಿಯೇ ಹೌದು. 800ರೂ. ಟನ್ ಇದ್ದ ಻ದಿರು 8000ಕ್ಕೆ ಏರಿದ ಬಗೆ ಹಾರಿದ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸಿದರೂ ಎಂದರೆ ತೆಲುಗು ಗೊತ್ತಿಲ್ಲದವರಿಗೂ ಅರ್ಥವಾಗುವಂತಿತ್ತು. ಆದರೆ ನಮ್ ಕನ್ನಡದ ಕಂದಗಳು ಮಾಡ್ತಿರೋ ವರದಿನೋ ಅವರ ಮುಖಾನೋ? ಶಿವನೆ ಯಾರಾದರೂ ಈ ಚಾನೆಲ್ ನೋರಿಗೆ ಹೇಗೆ ವರದಿ ಮಾಡಬೇಕು ಅನ್ನೋದು ಹೇಳಿಕೊಡಬಾರದೇ? ಅಂತನ್ಸಿಸ್ದೆ ಇರೊಲ್ಲ ಛೇ.. ನಿಜಕ್ಕೂ ಕೆ. ಚಾನಲ್ ಗಳು ನೋಡೋಕೆ ಬೇಸರ ಆಗುತ್ತೆ ಇದ್ದುದ್ದರಲ್ಲಿಯೇ ಈಟಿವಿ/ಉದಯ ವಾರ್ತೆಗಳು ಲೈಕ್ ಮಾಡಬಹುದು ತಪ್ಪಿದರೆ ಡಿಡಿ ಚಂದನ ಮಾತ್ರ ಎವರ್ ಗ್ರೀನ್ ಅಂತ್ಲ ಹೇಳಬೇಕಾಗುತ್ತೆ ...

    ReplyDelete
  5. very true Janashri is very good news channel.. after TV9 we prefer only Janashri


    Suvarna seems to have biased... target one person an attack!!

    How about SAMAYA...?? well, I wish them all the best!!

    ReplyDelete
  6. ಜ್ಯೋತಿಷ್ಯದ ಕಾರ್ಯಕ್ರಮಗಳನ್ನು ಸಾರಾಸಗಟಾಗಿ ತೆಗಳುವ ಬದಲು
    ನೀವು ಉಲ್ಲೀಕಿಸಿದಂತೆ ಕಪಟ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ತಡೆಯೋದು ಒಳ್ಳೆಯದು ಜೋತಿಷ್ಯ ಶಾಸ್ತ್ರವನ್ನು ತಮ್ಮ ಬರೀ ಹಣ ಮಾಡುವದಕ್ಕಾಗಿ ಬಳಸಿಕೊಲ್ಲುತ್ತಿರುವ್ಬುದು ನಿಜಕ್ಕೂ ವಿಷಾದಕರ ಆದರೆ ಜ್ಯೋತಿಷ್ಯ ಶಾಶ್ತ್ರದ ನಿಜವಾದ ವೈಜ್ಞಾನಿಕ ಹಿನ್ನೆಲೆ ಏನು ಎಂದು ವಿಶ್ಲೇಷಿಸುವುದು ಹೆಚ್ಚು ಸೂಕ್ತ ಅನ್ನೋದು ನನ್ನ ವಯ್ಯಕ್ತಿಕ ಅಭಿಪ್ರಾಯ

    ReplyDelete
  7. ಇಂತಹದೆ ಗಟ್ಟಿ ನಿಲುವುಗಳಿಂದ ಜನಶ್ರೀ ಎತ್ತೆತ್ತರಕ್ಕೆರಲಿ, ಮುಗ್ದ ಜನತೆಗೆ ಮೌಡ್ಯ ಹಂಚುವ ಕೆಲಸ ಎಂದೂ ಮಾಡದಿರಲಿ, ನಮ್ಮೀ ಬಾಂದವ್ಯ ಹೀಗೆ ಇರಲಿ ಎಂದೆಂದೂ, ಶೆಟ್ಟರ್ ಗೆ ಜಯವಾಗಲಿ

    ReplyDelete
  8. Sir ,
    'ಜನಶ್ರೀ' ಚಾನೆಲ್ ಜನ`ಶ್ರೀಸಾಮಾನ್ಯ'ನ ಚಾನೆಲ್ ಆಗಿದೆ. ಆದಾಗ್ಯೂ ಇನ್ನಷ್ಟು ಹೊಸತನ, ತನ್ನತನ, ನೈಜತನ ಇನ್ನಿತರತನಗಳು ಮೈಗೂಡಿಸಿಕೊಂಡಲ್ಲಿ ಕನ್ನಡಿಗರ ನಂ.1ಚಾನೆಲ್ ಆಗುತ್ತೆ.ಇಲ್ಲಿ ಮುಖ್ಯವಾಗಿ ಅನಂತ ಚಿನಿವಾರ್ ಅವರ ಸರಳತನ,ತಮ್ಮ ಚಾನಲ್ ನ ಎಲ್ಲರನ್ನು ಒಟ್ಟಿಗೆ ಸಮಾನವಾಗಿ ಕಾಣುವುದು ಈ ಚಾನೆಲ್ ವೇಗವಾಗಿ ಬೆಳೆಯಲು ಕಾರಣ ಎನ್ನಬಹುದು. ಉಳಿದ ಚಾನೆಲು ರಾಜಕರಣಿಗಳ ಎಂಜಲಿಗೆ ಬಾಯಿ ಹಾಕುತ್ತಾರೆ.ಇದು ಇಲ್ಲಿ ಕಾಣ ಸಿಕ್ಕಿಲ ಅದು ಸಂತೋಷದ ಸಂಗತಿ.ಚಾನೆಲ್ ಇನ್ನೂ ಎತ್ತರಕ್ಕೆ ಬಳೆಯಲಿ..ಜೈ ಜನರ ಶ್ರೀ...

    ReplyDelete