Wednesday, March 9, 2011

ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ...


ಇದು ಮೀಡಿಯಾ ಸಂಬಂಧಿ ಬ್ಲಾಗ್. ಹೀಗಾಗಿ ಇಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಮೀಡಿಯಾ ಸಂಬಂಧಿಯಾಗೇ ಇರಬೇಕು ಎಂಬುದು ನಮಗೆ ನಾವೇ ವಿಧಿಸಿಕೊಂಡ ಕಟ್ಟಳೆ. ಡಾ.ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತ ಆಕ್ಷೇಪಣೆಯೂ ಸಹ ಈ ಮೀಡಿಯಾ ಪರಿಧಿಯೊಳಗೇ ನಾವು ಬರೆದ ಪ್ರತಿಕ್ರಿಯೆಯಾಗಿತ್ತು. ಚಿದಾನಂದಮೂರ್ತಿಯಂಥವರು ಏನನ್ನು ಬರೆದರೂ ಅವರ ಘನತೆ, ಗೌರವದ  ಕಾರಣಕ್ಕಾಗಿ ಪತ್ರಿಕೆಗಳು ಪ್ರಕಟಿಸಿಬಿಡುವ ಸಾಧ್ಯತೆಗಳಿರುತ್ತದೆ. ಗೋರಿಪಾಳ್ಯದ ಕುರಿತ ವರ್ಣನೆ ಯಾವುದೇ ಪತ್ರಿಕೆಯಲ್ಲೂ ಪ್ರಕಟಣೆಗೆ ಯೋಗ್ಯವಾಗಿರಲಿಲ್ಲ ಎಂಬುದು ನಮ್ಮ ನಿಲುವು. ಆದರೆ ಚಿದಾನಂದಮೂರ್ತಿಯವರು ಪ್ರಸ್ತಾಪಿಸಿದ ಮತಾಂತರ ಮತ್ತು ಗೋಹತ್ಯಾನಿಷೇಧದ ಮೂಲ ವಿಷಯವನ್ನು ನೀವು ಚರ್ಚೆಗಿಡಬೇಕಿತ್ತು ಎಂಬುದು ಹಲವರ ಒತ್ತಾಯವಾಗಿತ್ತು. ಹೀಗಾಗಿ ಆ ಒತ್ತಾಯಗಳಿಗೆ ಉತ್ತರರೂಪವಾಗಿ ನೈಜ ಹಿಂದುತ್ವವಾದಿಗಳು, ಹುಸಿ ಹಿಂದುತ್ವವಾದಿಗಳು ಎಂಬ ಲೇಖನ ಪ್ರಕಟಿಸಿದ್ದೆವು.

ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಬ್ಲಾಗ್‌ನಲ್ಲೂ, ಫೇಸ್‌ಬುಕ್‌ನಲ್ಲೂ ಬಿಸಿಬಿಸಿಯಾದ ವಾಗ್ವಾದ ನಡೆದಿದೆ. ಕೆಲವರಿಗೆ ನಾವು ಬಳಸಿದ ನೈಜ, ಹುಸಿ ಹಿಂದುತ್ವವಾದ ಎಂಬ ಪ್ರಯೋಗವೇ ಅಚ್ಚರಿ ಹುಟ್ಟಿಸಿದೆ. ಕೆಲವರು ಅಕಾರಣವಾಗಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ನೀವು ಎಷ್ಟು ಧರ್ಮಗ್ರಂಥಗಳನ್ನು ಓದಿದ್ದೀರಿ ಎಂದು ಸವಾಲು ಒಡ್ಡುವ ಧಾಟಿಯಲ್ಲಿ ಮಾತನಾಡಿದ್ದಾರೆ. ವಿವೇಕಾನಂದರು ವಿಶ್ವವೇದಿಕೆಯಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮ ಯಾವುದು ಎನ್ನುವುದರ ಕುರಿತು ಕೆಲವರಿಗೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ.

ಚರ್ಚೆ ಹೀಗೆ ಅಪೂರ್ಣವಾಗುವುದು ಬೇಡ ಎಂಬುದು ನಮ್ಮ ನಿಲುವು. ಹಾಗಂತ ನಾವಾಗಲಿ ಇಲ್ಲಿ ಪ್ರತಿಕ್ರಿಯಿಸಿದವರಾಗಲಿ ನಮಗನ್ನಿಸಿದ್ದನ್ನು ಬರೆದು ಅಂತಿಮ ಜಡ್ಜ್‌ಮೆಂಟ್ ಕೊಡುವುದೂ ಸರಿಯಲ್ಲ. ಹೀಗಾಗಿ ಈ ಚರ್ಚೆಯನ್ನು ತಾರ್ಕಿಕವಾಗಿ ಕೊನೆಗೊಳಿಸಲು ನಾವು ಸ್ವಾಮಿ ವಿವೇಕಾನಂದರ ಮೊರೆ ಹೋಗುವುದೇ ವಾಸಿ ಎಂದುಕೊಂಡಿದ್ದೇವೆ.

ಸ್ವಾಮಿ ವಿವೇಕಾನಂದರು ವೇದಾಂತವನ್ನು ಒಪ್ಪಿ ಅನುಸರಿಸಿದವರು. ವೇದಾಂತಕ್ಕೆ ಮಾತ್ರ ವಿಶ್ವಧರ್ಮವಾಗುವ ಹಕ್ಕಿದೆ ಎಂದು ವಿವೇಕಾನಂದರು ಬಲವಾಗಿ ನಂಬಿದ್ದರು. ವೇದಾಂತ ವ್ಯಕ್ತಿಯನ್ನು ಬೋಧಿಸುವುದಿಲ್ಲ, ತತ್ವವನ್ನು ಬೋಧಿಸುತ್ತದೆ. ವ್ಯಕ್ತಿಯ ಮೇಲೆ ನಿಂತ ಧರ್ಮಕ್ಕೆ ತತ್ವದ ಮೇಲೆ ನಿಂತ ಧರ್ಮ ಸಾಟಿಯಾಗಲಾರದು ಎಂದು ಅವರು ಹೇಳುತ್ತಿದ್ದರು. ಆದರೆ ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ ಎಂದು ವಿವೇಕಾನಂದರು ಹೇಳಿದ್ದರು. ಹಾಗೇನಾದರೂ ಆದಲ್ಲಿ ಧರ್ಮ ಮತ್ತು ಅಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ, ಇದು ಪೂರ್ಣ ನಾಶವಾದರೆ ಸೃಷ್ಟಿಯೇ ನಾಶವಾಗುವುದು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ವಿವೇಕಾನಂದರು ವೇದಾಂತಕ್ಕೆ ವಿಶ್ವಧರ್ಮವಾಗುವ ಹಕ್ಕಿದೆ ಎಂದು ಹೇಳುತ್ತಲೇ, ಭಾರತದಲ್ಲಿ ಅನುಷ್ಠಾನದಲ್ಲಿದ್ದ ಹಿಂದೂ ಧರ್ಮದ ಹುಳುಕುಗಳ ಕುರಿತು ಚಿಂತಿತರಾಗಿದ್ದರು. ಆ ಹುಳುಕುಗಳು ಇಂದಿಗೂ ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆದುಕೊಂಡು ಬಂದಿದೆ ಎಂಬುದು ನೋವಿನ ಸಂಗತಿ. ದೀನದರಿದ್ರರ ಉದ್ಧಾರವಾಗಬೇಕು ಎಂಬುದು ವಿವೇಕಾನಂದರ ತೀವ್ರ ತುಡಿತವಾಗಿತ್ತು. ಈ ಉದ್ಧಾರವು ಗುಡಿ, ಚರ್ಚು, ಮಸೀದಿಗಳಿಂದ ಆಗದು ಎಂಬುದನ್ನು ಅವರು ಅಂದೇ ಸಾರಿದ್ದರು. ಪುರೋಹಿತರು, ಪಾದ್ರಿಗಳು, ಮುಲ್ಲಾಗಳಿಂದ ಎಲ್ಲ ಧರ್ಮಗಳು ಬಿಡುಗಡೆಯಾಗಬೇಕು ಎಂದು ಅವರು ಬಯಸಿದ್ದರು. ಇದನ್ನೇ ಜಡಗೊಂಡ ಧರ್ಮಗಳು ಎಂದು ನಾವು ಹೇಳಿದ್ದು. ಈ ಕಾರಣಕ್ಕಾಗಿಯೇ ಧರ್ಮಗಳು ಪರಿಷ್ಕಾರಗೊಳ್ಳಬೇಕು ಎಂದು ನಾವು ಬರೆದಿದ್ದೆವು.

ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂಬ ಕ್ಲೀಶೆಯ ವಾಕ್ಯವೊಂದನ್ನು ನಾವು ಆಗಾಗ ಹೇಳುತ್ತಿರುತ್ತೇವೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಧರ್ಮಗಳು ಬೆಳೆಯುವಾಗ ಅನುಸರಿಸಿದ ಮಾರ್ಗಗಳನ್ನು ಗಮನಿಸಿದರೆ ಇವು ಧರ್ಮಗಳೋ ಅಧರ್ಮಗಳೋ ಎನಿಸುತ್ತದೆ. ವಿವೇಕಾನಂದರು ಈ ಕುರಿತು ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳು ಹೇಗೆ ಬೆಳೆದವು ಎಂಬುದರ ಕುರಿತು ಅವರು ಸ್ಪಷ್ಟವಾಗಿ, ಕಟುವಾಗಿ ಹೇಳಿದ್ದಾರೆ. ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ. ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು. ಈ ಕಾರಣದಿಂದಲೇ ಚಿಕಾಗೋದಲ್ಲಿ ಅವರು ‘ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದ ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲ ಹಿಂಸೆಯಿಂದ ತುಂಬಿಸಿರುವುವು. ಹಲವು ವೇಳೆ ನರರಕ್ತವನ್ನು ತೋಯಿಸಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಇಂಥ ಉಗ್ರ ಧಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು. ಎಂದು ಹೇಳಿದ್ದರು.

ಎಲ್ಲ ಧರ್ಮಗಳ ಕುರಿತೂ ವಿವೇಕಾನಂದರು ಮಾತನಾಡಿದ್ದಾರೆ. ಮತಾಂತರ, ಆಹಾರ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆ, ಭಾಷೆ-ಕಲೆ, ದುರ್ಬಲರ ಅಭಿವೃದ್ಧಿ, ಮೀಸಲಾತಿ ಇತ್ಯಾದಿ ಎಲ್ಲ ವಿಷಯಗಳ ಕುರಿತೂ ತಮ್ಮ ಸ್ಪಷ್ಟ ನಿಲುವುಗಳನ್ನು ಮಂಡಿಸಿದ್ದಾರೆ. ವಿವೇಕಾನಂದರ ಈ ಎಲ್ಲ ವಿಚಾರಗಳನ್ನು ಇನ್ನು ಐದಾರು ಪೋಸ್ಟ್‌ಗಳಲ್ಲಿ ಮಂಡಿಸುತ್ತ ಹೋಗುತ್ತೇವೆ. ಅವು ಎಲ್ಲರಿಗೂ, ಎಲ್ಲ ವಿವಾದಗಳಿಗೂ ಉತ್ತರವಾಗಬಹುದು ಎಂಬುದು ನಮ್ಮ ನಂಬಿಕೆ.

ದಯಮಾಡಿ ಕೆಲವರಲ್ಲಿ ಒಂದು ಮನವಿ. ವಿವೇಕಾನಂದರನ್ನೂ ನಿಂದಿಸುವ ಕೆಲಸವನ್ನು ಯಾರೂ ಮಾಡಬೇಡಿ. ಈಗಾಗಲೇ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅಂಥವರನ್ನು ನಿಂದಿಸಿಯಾಗಿದೆ. ವಿವೇಕಾನಂದರ ಕುರಿತೂ ಇಂಥ ಮಾತುಗಳು ಬೇಡ. ನಿಜ, ವಿವೇಕಾನಂದರ ನುಡಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ಅದು ಅನಿವಾರ್ಯ. ಮಹಾತ್ಮರ ನುಡಿಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಲ್ಲೂ ಬರಲಿ.

ಅಂದಹಾಗೆ ಮುಂದೆ ಪ್ರಕಟವಾಗಲಿರುವ ವಿವೇಕಾನಂದರ ಎಲ್ಲ ಮಾತುಗಳನ್ನು ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಪ್ರಕಟಿಸಿರುವ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯಿಂದ ಆಯ್ದುಕೊಳ್ಳಲಿದ್ದೇವೆ. ಒಟ್ಟು ಹತ್ತು ಸಂಪುಟಗಳ ಕೃತಿಶ್ರೇಣಿಯಿದು. ಇಲ್ಲಿ ಉಲ್ಲೇಖಿಸಿದ ಸಾಲುಗಳು ಯಾವ ಸಂಪುಟದ ಯಾವ ಪುಟದಿಂದ ಆಯ್ದುಕೊಂಡಿದ್ದೇವೆ ಎಂಬುದನ್ನು ದಾಖಲಿಸುತ್ತೇವೆ. ಕುತೂಹಲವಿದ್ದವರು ಪರಿಶೀಲಿಸಬಹುದು.

ವಿವೇಕಾನಂದರನ್ನು ಓದುವ ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ.

Tuesday, March 8, 2011

ಮೀಡಿಯಾಗಳಲ್ಲಿ ಮಹಿಳೆಯರ ಯುಗ ಆರಂಭವಾಗಿದೆ...


ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮೀಡಿಯಾಗಳ ವಿಷಯಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಹೆಣ್ಣುಮಕ್ಕಳು ಸಂತೋಷಪಡುವುದಕ್ಕೆ ಕಾರಣಗಳಿವೆ. ಇವತ್ತು ಕರ್ನಾಟಕದ ಮೀಡಿಯಾಗಳಲ್ಲಿ ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವುದು ಬರಿಯ ಕಣ್ಣಿಗೆ ಕಾಣುತ್ತಿದೆ. ನಿಜ, ಪತ್ರಿಕೆಗಳ ಮಟ್ಟಿಗೆ ಹೇಳುವುದಾದರೆ, ಮಹಿಳೆಯರ ಪಾಲ್ಗೊಳ್ಳುವಿಕೆ ಇವತ್ತಿಗೂ ಹೇಳಿಕೊಳ್ಳುವಂತೇನಿಲ್ಲ. ಆದರೆ, ಟೀವಿಗಳಲ್ಲಿ ಹೆಣ್ಣುಮಕ್ಕಳು ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು.

ಇವತ್ತು ನ್ಯೂಸ್ ಚಾನಲ್‌ಗಳಲ್ಲಿ ನಿರೂಪಕಿಯರು ಮಾತ್ರವಲ್ಲ, ವರದಿಗಾರರು ಹಾಗು ಇತರ ತಾಂತ್ರಿಕ ಆಯ್ಕೆಗಳಲ್ಲೂ ಮಹಿಳೆಯರು ಮುಂದಿದ್ದಾರೆ. ಈ ಟ್ರೆಂಡ್ ಹೀಗೆ ಮುಂದುವರೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಅದು ಹಾಗೇ ಮುಂದುವರೆಯಲಿ ಎಂದು ಹಾರೈಸೋಣ.

ಹಾಗೆ ಸುಮ್ಮನೆ ಟಿವಿ ನಿರೂಪಕಿಯರ ಕುರಿತು ಒಂದು ಟಿಪ್ಪಣಿ ಇಲ್ಲಿ ಒದಗಿಸಿದ್ದೇವೆ. ಇವರ ಪೈಕಿ ಯಾರು ಹೆಚ್ಚು ಇಷ್ಟವಾಗುತ್ತಾರೆ, ದಯವಿಟ್ಟು ಹೇಳಿ. ನೀವು ಇಷ್ಟಪಡುವ ನಿರೂಪಕಿ ಈ ಪಟ್ಟಿಯಲ್ಲಿಲ್ಲದಿದ್ದರೂ ಪರವಾಗಿಲ್ಲ ಅವರ ವಿಶೇಷತೆ ಕುರಿತು ಬರೆದು ಹೇಳಿ.

ಟಿವಿ ೯
ಉಷಾ: ಸ್ಪಷ್ಟ ಭಾಷೆ, ಗಂಭೀರ ಮುಖಭಾವ, ಹೇಳುವುದನ್ನು ಅತ್ಯಂತ ನಿಚ್ಚಳವಾಗಿ ತಿಳಿಸುತ್ತಾರೆ. ತೊದಲುವ ಮಾತೇ ಇಲ್ಲ. ಅಗತ್ಯ ಇರುವ ಕಡೆ ನಗುವನ್ನು ಚೆಲ್ಲುತ್ತಾರೆ.
ಶೀತಲ್: ತುಂಟತನದ ಛಾಯೆ. ಖುಷಿ ಕೊಡುವ ಆತ್ಮವಿಶ್ವಾಸ. ಅಕಸ್ಮಾತ್ ತಪ್ಪು ಆದರೂ ತಿದ್ದಿಕೊಳ್ಳುವ ಸಮಯಸ್ಪೂರ್ತಿ. ಕಣ್ಣು ಮಿಟುಕಿಸಿ ಮಾತಾಡುವುದು ವಿಶೇಷತೆ.
ಸಮೀನ: ಶುದ್ಧ ಕನ್ನಡ, ಸ್ಪಷ್ಟ ಉಚ್ಛಾರ. ಯಾವ ಕಾರ್ಯಕ್ರಮ ಕೊಟ್ಟರೂ ನಿರರ್ಗಳವಾಗಿ ಮಾತಾಡುವ ಸ್ಥೈರ್ಯ.
ರಾಧಿಕ: ಗಂಭೀರತೆಯೇ ಪ್ಲಸ್ ಪಾಯಿಂಟ್. ಸುಂದರವಾಗಿ ನಕ್ಕು ಇಡೀ ಪರಿಸರವನ್ನು ಆಹ್ಲಾದಕರಗೊಳಿಸುವ ಕಲೆಗಾರಿಕೆ ಇದೆ. ಮಾತಿನ ಶೈಲಿ ಚಂದ. ವಿಷಯ ಮಂಡನೆಯು ಸಹ ಜನರನ್ನು-ಅತಿಥಿಗಳನ್ನು ಆಕರ್ಷಿಸುತ್ತದೆ.

ಸುವರ್ಣ ನ್ಯೂಸ್
ಸುಕನ್ಯ: ಮೃದುವಾದ ಭಾಷೆ, ಆಪ್ತವೆನ್ನಿಸುವ ಶೈಲಿ. ತಪ್ಪು ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಲ್ಲ. ಎಲ್ಲಾ ವಿಷಯಗಳಿಗೂ ಫಿಟ್ ಅಂಡ್ ಪರ್ಫೆಕ್ಟ್
ಭಾವನ: ಮಾತು ಪರವಾಗಿಲ್ಲ. ಧ್ವನಿ  ಕೇಳಲು ಆರಾಮ. ಕೊಟ್ಟ ಕೆಲಸ ನೀಟಾಗಿ ಮಾಡುವ ಉತ್ಸಾಹ ಇದೆ. ಅತಿ ಅನ್ನಿಸದ ವರ್ತನೆ
ರಾಧ ಹಿರೇಗೌಡರ್: ಕ್ರೈಂ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಶೈಲಿ . ಅದಕ್ಕೆ ಬೇಕಾದ ಖಡಕ್ ಶೈಲಿ ಆಕೆಯಲ್ಲಿದೆ. ಇದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತದೆ. ಇತ್ತೀಚಿಗೆ ಕ್ರಿಕೆಟ್‌ಗೂ ಸೈ ಎನಿಸಿಕೊಂಡಿದ್ದಾರೆ.
ಶ್ವೇತ: ಚಂದದ ಭಾಷೆ. ಸ್ವಲ್ಪ ಮೂಗಿನಲ್ಲಿ ಮಾಡ್ತಾರೆ ಎಂದು ಅನ್ನಿಸಿದ್ರೂ ಭಾಷೆಯನ್ನೂ ಆರಾಮವಾಗಿ ಬಳಸಿಕೊಳ್ತಾರೆ. ಜನರನ್ನು ಆಕರ್ಷಿಸಲು ಅಗತ್ಯವಾದ ಆಂಗಿಕ ಶೈಲಿ ಇದೆ.

ಉದಯ
ಅನುಪಮ: ಮುದ್ದು ಮುದ್ದಾಗಿ ನಗ್ತಾ ಮಾತಾಡ್ತಾರೆ. ಆ ನಗು ಆಕೆಯ ಮೊದಲ ಪ್ಲಸ್ ಪಾಯಿಂಟ್. ಭಾಷೆಯ ಬಳಕೆಯಲ್ಲೂ ಪಳಗಿದ್ದಾರೆ. ಎಲ್ಲಿ  ಪಾಸ್ ಕೊಡಬೇಕು, ಕೊಡಬಾರದು ಎನ್ನುವ ಸಾಮಾನ್ಯ ಜ್ಞಾನ ಆಕೆಗಿದೆ. ಸಂದರ್ಶನದಲ್ಲಿ ಯಾವ ರೀತಿ ಅತಿಥಿಗಳ ಜೊತೆ ಹರಟಬೇಕು ಎಂದು ತಿಳಿದಿದೆ.
ಹೇಮಲತಾ: ಕೊಟ್ಟ  ಕಾರ್ಯಕ್ರಮ ಯಾವುದೇ ಆಗಿದ್ದರೂ ನಿಭಾಯಿಸುವ ಚಾಕಚಕ್ಯತೆ ಈಕೆಗಿದೆ. ಜನರನ್ನು ಯಾವ  ರೀತಿ ಆಕರ್ಷಿಸಬೇಕು ಎನ್ನುವ ಬಗ್ಗೆ ಚೆನ್ನಾಗಿ ತಿಳಿದಿದೆ. ಮಾತು ಬೋರ್ ಹೊಡಿಸಲ್ಲ. ಎಳೆಯುವ ಸ್ವಭಾವ ಇಲ್ಲ.

ಕಸ್ತೂರಿ
ಲಕ್ಷ್ಮಿ ಮನಮೋಹನ್:  ಒಬ್ಬ ನಿರೂಪಕಿಗೆ ಇರಬೇಕಾದ ಎಲ್ಲಾ ಪ್ಲಸ್ ಪಾಯಿಂಟ್‌ಗಳು ಈಕೆಗಿದೆ . ಭಾಷೆ, ಭಾವ, ನಗು, ಡ್ರಸ್ ಸೆನ್ಸ್, ಸಭ್ಯತೆ , ವೀಕ್ಷಕರನ್ನು ಆಕರ್ಷಿಸುವ  ರೀತಿ...

ಸಮಯ 
ಮಂಜುಳ: ಮಾತಿನ ಶೈಲಿ ಇಷ್ಟವಾಗುತ್ತದೆ. ಆಂಗಿಕ ವರ್ತನೆ ಬೋರ್ ಹೊಡಿಸಲ್ಲ. ನಸುನಗುತ್ತಾ  ಮಾತನಾಡುವ ರೀತಿ ಸಹ ಇಷ್ಟ  ಆಗುತ್ತೆ.

ಈಟೀವಿ  ಕನ್ನಡ 
ಅನು ಪ್ರಭಾಕರ್: ಅತಿಥಿಗಳು ಹೇಳುವುದನ್ನು ಕೇಳುವ ಸಹನೆ ಇದೆ. ಹೆಚ್ಚು ಸ್ಟೈಲಿಶ್. ಮಾತು ಹಾಗೂ ಉಡುಪು ಸಹ ಆಕರ್ಷಕ. ತನ್ನ ಮುಕ್ತ ನಗುವಿನಿಂದ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವ ಕಲೆ ಗೊತ್ತಿದೆ.

ಜೀ ಕನ್ನಡ 
ಮಾಳವಿಕ ಅವಿನಾಶ್: ಮಾತು ಸ್ಪಷ್ಟ. ಹೇಳುವುದನ್ನು ಅಚ್ಚುಕಟ್ಟಾಗಿ ತಿಳಿಸಿ ಬಿಡುವ ರೀತಿ. ಮಾತಿನ ಶೈಲಿ ಚಂದ

ಜನಶ್ರೀ 
ಸಾಹಿತ್ಯ: ಸುಂದರ ಮೋಹಕ ನಗೆ. ಮಾತು ಚಂದ. ವೀಕ್ಷಕರು ಆಕರ್ಷಿತರಾಗುವುದಕ್ಕೆ  ಅಗತ್ಯ ಇರುವ ಗಂಭೀರವಾದ ಮಾತಿನ ಶೈಲಿ ಗಮನ ಸೆಳೆಯುತ್ತದೆ. ಪ್ರತಿಭಾವಂತೆ.
ಸುಗುಣ: ವೀಕ್ಷಕರನ್ನು ಹಿಡಿಟ್ಟುಕೊಳ್ಳುವ  ಧ್ವನಿ. ವಾಯ್ಸ್ ಮಾಡ್ಯುಲೇಶನ್ ತುಂಬಾ ಚೆನ್ನಾಗಿ ಗೊತ್ತಿದೆ. ಮಾತು ಸ್ಪಷ್ಟ ಸುಂದರ. ಪರದೆಯ ಹಿಂದೆಯೂ ಮಾತಾಡುತ್ತಾರೆ, ಹಿಂದೆಯೂ ಮಾತಾಡುತ್ತಾರೆ. ಎರಡಕ್ಕೂ ಸೈ.

ಇವರುಗಳು ಹೆಚ್ಚು ಜನರ ಗಮನ ಸೆಳೆದವರು. ನೀವೇನಂತೀರಿ? ಈ ಬಾರಿ ಪೋಲ್ ಮಾಡುತ್ತಿಲ್ಲ. ಹಾಗೇ ಕಮೆಂಟ್ ಹಾಕಿ. ನಾವು ಉಲ್ಲೇಖಿಸದವರ ಕುರಿತೂ ದಯಮಾಡಿ ಗಮನಕ್ಕೆ ತನ್ನಿ.

Monday, March 7, 2011

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆಯುವುದು ನೈತಿಕವೇ?


ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮುನ್ನಾದಿನವಾದ ಇಂದು ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯೊಂದನ್ನು ಗಮನಿಸಿ.

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕನೋರ್ವ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳಿಗೆ ನೀಡಿದ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಆಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುರಿತು ವರದಿಯೊಂದು ಪ್ರಕಟವಾಗಿದೆ.

ಇದೇ ಪ್ರಕರಣ ಸಂಬಂಧಿಸಿದಂತೆ ನಿನ್ನೆಯ ದಿ ಹಿಂದೂ ಹಾಗು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲೂ ಪ್ರತ್ಯೇಕ ವರದಿಗಳು ಪ್ರಕಟಗೊಂಡಿದ್ದವು. ಆ ವರದಿಗಳನ್ನೂ ಒಮ್ಮೆ ಗಮನಿಸಿ.

ಒಂದು ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ. ಲೈಂಗಿಕ ಕಿರುಕುಳ ಅನುಭವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯ ಹೆಸರನ್ನು ಪ್ರಜಾವಾಣಿ ಸ್ಪಷ್ಟವಾಗಿ ಬರೆದಿದೆ. ಇದು ಅನೈತಿಕ ಹಾಗು ಬೇಜವಾಬ್ದಾರಿಯ ಪತ್ರಿಕಾ ನೀತಿ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಹೆಸರನ್ನು ಬರೆಯಬಾರದು ಎಂಬ ಕಾನೂನು ಎಲ್ಲೂ ಇಲ್ಲ ಎಂಬುದೇನೋ ನಿಜ. ಆದರೆ ಪತ್ರಕರ್ತರು ಮೊದಲಿನಿಂದಲೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವ ಪರಿಪಾಠ ಇಟ್ಟುಕೊಂಡಿಲ್ಲ. ಅದಕ್ಕೆ ಕಾರಣಗಳನ್ನು ಹೊಸದಾಗಿ ಹೇಳಬೇಕಾಗೂ ಇಲ್ಲ. ಹೀಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ನಂತರವೂ ಇದೇ ಸಮಾಜದ ನಡುವೆ ಬದುಕಬೇಕು. ಎಲ್ಲರ ಇರಿಯುವ ಕಣ್ಣುಗಳನ್ನು ಎದುರಿಸಬೇಕು. ಮಡಿವಂತ ಸಮಾಜದ ಕುಹಕ, ನಿಂದನೆಗಳನ್ನು ಎದುರಿಸಬೇಕು. ಅವರು ಬದುಕಬೇಕೆಂದರೆ, ಇಂಥ ಎಲ್ಲ ವ್ಯವಸ್ಥೆಯ ನಡುವೆಯೇ ಬದುಕಬೇಕು, ಅದು ಸಾಧ್ಯವಾಗದಿದ್ದರೆ ಅವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.

ಈ ಮಹಿಳೆಯರ ಪ್ರಾಣ ಮತ್ತು ಮಾನ ಎರಡೂ ಮುಖ್ಯವಾದ್ದರಿಂದ ಪತ್ರಿಕೆಗಳು ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವುದಿಲ್ಲ. ಬರೆದರೂ ಬೇರೆ ಹೆಸರನ್ನು ಬರೆದು ಹೆಸರು ಬದಲಾಯಿಸಲಾಗಿದೆ ಎಂದು ಬ್ರಾಕೆಟ್‌ನಲ್ಲಿ ಬರೆಯುವ ಪರಿಪಾಠವನ್ನು ಪಾಲಿಸಿಕೊಂಡುಬರಲಾಗುತ್ತಿದೆ. ಇದಕ್ಕೆ ಪ್ರಜಾವಾಣಿಯೂ ಹೊರತೇನಲ್ಲ. ಇಂಥ ಪ್ರಕರಣಗಳ ಕುರಿತು ವರದಿ ಮಾಡುವಾಗ ಪ್ರಜಾವಾಣಿ ಕೂಡ  ಇಂಥ ನೈತಿಕ ಸಂಹಿತೆಯನ್ನು ಇಟ್ಟುಕೊಂಡೇ ವರದಿ ಮಾಡುತ್ತಿತ್ತು.

ಆದರೆ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿನಿಯ ವಿಷಯದಲ್ಲಿ ಹಾಗೆ ಆಗಿಲ್ಲ. ಆಕೆಯ ಹೆಸರನ್ನು ನಿಚ್ಚಳವಾಗಿ ಬರೆಯಲಾಗಿದೆ. ಮಾತ್ರವಲ್ಲ, ಆಕೆಯ ಪೂರ್ಣ ವಿಳಾಸವನ್ನೂ, ಆಕೆಯ ಪತಿಯ ಹೆಸರು ಮತ್ತು ಆತ ಎಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ.

ನಿನ್ನೆ ದಿ ಹಿಂದೂ ಪತ್ರಿಕೆ ಹಾಗು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟಗೊಂಡಿರುವ ವರದಿಗಳಲ್ಲಿ ಎಲ್ಲೂ ಸಹ ನೊಂದ ಮಹಿಳೆಯ ಹೆಸರನ್ನಾಗಲಿ, ವಿಳಾಸವನ್ನಾಗಿ ದಾಖಲಿಸಿಲ್ಲ. ಹಾಗಿರುವಾಗ ಪ್ರಜಾವಾಣಿ ಯಾಕೆ ದಿಕ್ಕು ತಪ್ಪಿದೆ?

ಪ್ರಜಾವಾಣಿಯಂಥ ಸೆನ್ಸಿಬಲ್ ಪತ್ರಿಕೆ ಹೀಗೆ ಮಾಡೋದು ಎಷ್ಟು ಸರಿ? ಇದು ನಮ್ಮ ಪ್ರಶ್ನೆ.


ನಂತರ ಸೇರಿಸಿದ್ದು:
ಈ ಪೋಸ್ಟ್ ಪ್ರಕಟಗೊಂಡ ಕೆಲಕ್ಷಣಗಳಲ್ಲೇ ಫೇಸ್‌ಬುಕ್‌ನಲ್ಲಿ ಹರ್ಷವರ್ಧನ ಶೀಲವಂತ್,  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲೂ ಇದೇ ರೀತಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆದಿರುವುದನ್ನು ಗಮನಕ್ಕೆ ತಂದಿದ್ದಾರೆ. ಕೆಲವು ಆವೃತ್ತಿಗಳಲ್ಲಿ ಆಕೆಯ ಭಾವಚಿತ್ರ ಕೂಡ ಪ್ರಕಟವಾಗಿದೆ. ಬೆಂಗಳೂರು ಆವೃತ್ತಿಯಲ್ಲಿ ಫೋಟೋ ಪ್ರಕಟವಾಗಿಲ್ಲ, ಆದರೆ ಮಹಿಳೆಯ ಹೆಸರು ಸಮೇತ ಬರೆಯಲಾಗಿದೆ. ಇದೇ ಟಿಓಐ ತನ್ನ ಒಳಪುಟಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಾನಾ ಲೇಖನಗಳನ್ನು ಪ್ರಕಟಿಸಿದೆ. ಕನ್ನಡಪ್ರಭದಲ್ಲೂ ಈ ಕುರಿತು ಪ್ರಕಟವಾಗಿರುವ ಸುದ್ದಿಯಲ್ಲೂ ಮಹಿಳೆಯ ಹೆಸರನ್ನು ಪ್ರಕಟಿಸಲಾಗಿದೆ. ಇನ್ನೂ ಹಲವು ಪತ್ರಿಕೆಗಳಲ್ಲಿ ಇದೇ ರೀತಿ ಪ್ರಕಟವಾಗಿರಬಹುದು. ಆದರೆ ಪತ್ರಿಕೆಗಳಿಗೆ ಮಹಿಳೆ ಕೂಡ ಮಾರಾಟದ ಸರಕಾಗಿ ಹೋದರೆ ಹೇಗೆ ಎಂಬ ಪ್ರಶ್ನೆಗೆ ಮೀಡಿಯಾ ಮಂದಿ ತುರ್ತಾಗಿ ಗಮನಹರಿಸಬೇಕಾಗಿದೆ.

Sunday, March 6, 2011

ಭಟ್ಟರೇ, ಇದು ಕ್ರಿಯೇಟಿವಿಟಿ ಅನ್ನಿಸಿಕೊಳ್ಳಲ್ಲ...


....ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಕೀಪರ್‌ಗೆ ಮೊದಲು ಕಾಣುವುದು ಎದುರಿಗಿರುವ ಸ್ಟಂಪ್, ನಂತರ ಕಾಣುವುದು ಆಟಗಾರರ ಪೃಷ್ಠ. ಹೀಗೆ ಆಟಗಾರರ ಹಿಂಭಾಗವನ್ನು ನೋಡುತ್ತ ನೋಡುತ್ತ ತನ್ನ ಮನಸ್ಸನ್ನೇ ಬದಲಾಯಿಸಿಕೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸ್ಟೀವನ್ ಡೇವಿಸ್ ತಾನು ಸಲಿಂಗಕಾಮಿ ಎಂದು ಸ್ಪಷ್ಟಪಡಿಸಿದ್ದಾರೆ.....

ಇಂಥ ಕೀಳು ಅಭಿರುಚಿಯ ಸಾಲುಗಳು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಬಹುದಾ? ಟ್ಯಾಬ್ಲಾಯ್ಡುಗಳೂ ಬರೆಯಲು ಹಿಂದೆ ಮುಂದೆ  ನೋಡುವ ಇಂಥ ಸಾಲುಗಳು ಪ್ರಕಟವಾಗಿರುವುದು ಕನ್ನಡಪ್ರಭ ಪತ್ರಿಕೆಯಲ್ಲಿ. ಇದು ಪ್ರಕಟವಾಗಿರುವುದು ಮಾ.೧ರ ಕನ್ನಡಪ್ರಭ ಸಂಚಿಕೆಯಲ್ಲಿ.

ಸಲಿಂಗ ಕಾಮವನ್ನು ಅಪರಾಧವಲ್ಲ ಎಂದು ನಮ್ಮ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಆದರೂ ಸಲಿಂಗ ಕಾಮವನ್ನು ಖಂಡತುಂಡವಾಗಿ ವಿರೋಧಿಸುವವರೇ ಬಹುಸಂಖ್ಯೆಯಲ್ಲಿರುವ ನಾಡು ನಮ್ಮದು. ಅದನ್ನು ಒಪ್ಪುವ ಕೆಲವೇ ಕೆಲವರು ನಮ್ಮ ಸಮಾಜದಲ್ಲಿ ಇರಬಹುದು. ಆದರೆ ಆದರ ಕುರಿತು ವರದಿ ಮಾಡುವಾಗ ಇಂತಹ ಭಾಷೆಯನ್ನು ಅದೂ ಮನೆಮಂದಿಯೆಲ್ಲರೂ ಓದುವ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಬಳಸಿದ್ದನ್ನು ಒಪ್ಪುವವರು ಮಾತ್ರ ಬಹುಶ: ಯಾರೂ ಇರಲಾರರು.

ಬಹುಶ: ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ರ ಗಮನಕ್ಕೂ ಇಂದು ಬಂದಿರದೇ ಪ್ರಕಟವಾಗಿರುವ ಸಾಧ್ಯತೆ ಇದೆ. ಆದರೆ ವರದಿಗಾರ ಅತ್ಯುತ್ಸಾಹದಿಂದ ಬರೆದಿರಬಹುದಾದ ಈ ವರದಿಯನ್ನು ಗಮನಿಸಲು ಮೇಲ್‌ಸ್ತರದ ಸಂಪಾದಕೀಯ ಸಿಬ್ಬಂದಿ ಇರಲಿಲ್ಲವೇ?

ಕನ್ನಡಪ್ರಭಕ್ಕೆ ಬಂದ ವಿಶ್ವೇಶ್ವರ ಭಟ್ಟರು ತಮ್ಮ ಕ್ರಿಯೇಟಿವಿಟಿಯ ಪ್ರಯೋಗವನ್ನು ಅಲ್ಲಿ ಮಾಡುತ್ತಿದ್ದಾರೆ. ಓದುಗರಿಂದ ಶೀರ್ಷಿಕೆಗಳನ್ನು ಆಹ್ವಾನಿಸಿ, ಅವುಗಳಲ್ಲೇ ಒಂದನ್ನು ಆಯ್ಕೆ ಮಾಡಿ ಪ್ರಕಟಿಸಿದ್ದು ಒಂದು ವಿಶೇಷ ಪ್ರಯೋಗ. ಆದರೆ ಕ್ರಿಯೇಟಿವಿಟಿಯ ಹೆಸರಿನಲ್ಲಿ ಡಬ್ಬಲ್ ಮೀನಿಂಗ್ ನುಸುಳಿ ಬಂದರೆ ಅದನ್ನು ಮಾನವಂತರು ಸಹಿಸುವುದಿಲ್ಲ ಎಂಬುದನ್ನು ಭಟ್ಟರು ಗಮನಿಸಬೇಕು.

ಹಾಗೆ ನೋಡಿದರೆ ವಿಶ್ವೇಶ್ವರ ಭಟ್ಟರ ವೆಬ್‌ಸೈಟ್‌ನ ಕೇಳ್ರಪ್ಪೋ ಕೇಳಿ ಅಂಕಣದಲ್ಲೂ ಇಂಥ ಅಸಹ್ಯಗಳು ನುಸುಳಿದ್ದವು. ಆ ಕುರಿತು ನಾವು ಹಿಂದೆಯೇ ಬರೆದಿದ್ದೆವು.

ಈ ಕೆಲವು ಪ್ರಶ್ನೋತ್ತರಗಳನ್ನು ಗಮನಿಸಿ:

ಪ್ರಶ್ನೆ: ಪ್ರತಾಪ ಸಿಂಹ ನಿಜಕ್ಕೂ ಚಡ್ಡಿನಾ?
ಉತ್ತರ: ಆತ ಚಡ್ಡಿ ಹೌದೋ ಅಲ್ಲವೋ ಎಂಬುದನ್ನು ನೀವೇ ನಿರ್ಧರಿಸಬೇಕು. ಆದರೆ ಅವನು ತನ್ನ ಅಂಕಣದಲ್ಲಿ ಎಲ್ಲರ ಚಡ್ಡಿಯನ್ನು ಬಿಚ್ಚುವುದರಿಂದ ಬೆತ್ತಲೆ ಜಗತ್ತು ಅಂತ ಹೆಸರಿಟ್ಟುಕೊಂಡಿದ್ದಾನೆ.

ಪ್ರಶ್ನೆ: ರವಿ ಕಂಡಿದ್ದು ಎಂಬ ಪುಸ್ತಕ ಬರೆಯುತ್ತಿದ್ದೇನೆ, ನಿಮ್ಮ ಸಲಹೆ?
ಉತ್ತರ: ಇನ್ನೂ ಕವರ್ ಪೇಜ್ ಮಾಡಿಸಿರದಿದ್ದರೆ, ರವಿ(ಕೆ)ಯಲ್ಲಿ ಕಂಡಿದ್ದು ಎಂದು ಬದಲಿಸು.

ಪ್ರಶ್ನೆ: ನೀವು ಯಾವತ್ತೂ ಹೆಂಡತಿಯರ ಬಗ್ಗೆಯೇ ವಕ್ರತುಂಡೋಕ್ತಿಯಲ್ಲಿ ಬರೆಯುತ್ತೀರಲ್ಲಾ ಯಾಕೆ?
ಉತ್ತರ: ವಕ್ರ ಆಗಿರುವವರ ಬಗ್ಗೆ ಇನ್ನೆಲ್ಲಿ ಬರೆಯಲಿ?

ನಿಜ, ಇವು ನಗು ತರಿಸುತ್ತದೆ. ಆದರೆ, ನಗು ತರಿಸುವಂಥದ್ದೆಲ್ಲ ಶ್ರೇಷ್ಠವಾದ ಹಾಸ್ಯವಲ್ಲ. ಹಾಸ್ಯಕ್ಕೆ ಸಭ್ಯತೆಯ ಚೌಕಟ್ಟಿದ್ದರೆ ಚಂದ. ಖಾಸಗಿಯಾಗಿ ಆಡುವ ತಮಾಶೆ ಮಾತುಗಳನ್ನು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಬರೆಯುವುದು ಒಳ್ಳೆಯ ಆಲೋಚನೆ ಅಲ್ಲ. ಯಾಕೆಂದರೆ ಪತ್ರಿಕೆ, ಬ್ಲಾಗುಗಳ ಓದುಗರು ಎಲ್ಲರೂ ಇಂಥ ಅಭಿರುಚಿಯನ್ನು ಒಪ್ಪುವವರಲ್ಲ.

ಭಟ್ಟರು ಈ ಕುರಿತು ಸೀರಿಯಸ್ಸಾಗಿ ಯೋಚಿಸುವರೇ?

Saturday, March 5, 2011

ಹೌದು ಕಣ್ರೀ, ಒಂದು ಲಕ್ಷ ಹಿಟ್ಸ್ ದಾಟಿ ಹೋಗಿದ್ದೇವೆ....


ನೀವೂ ಸಹ ಗಮನಿಸಿರಬಹುದು, ಸಂಪಾದಕೀಯದ ಹಿಟ್ಸ್ ಒಂದು ಲಕ್ಷ ದಾಟಿ ಹೋಗಿದೆ. ಇದು ಸಾಧ್ಯವಾಗಿರುವುದು ಕೇವಲ ಎರಡೂವರೆ ತಿಂಗಳಲ್ಲಿ. ಸ್ಪಷ್ಟವಾಗಿ ಹೇಳುವುದಾದರೆ ೭೪ ದಿನಗಳಲ್ಲಿ. ಸರಾಸರಿ ದಿನವೊಂದಕ್ಕೆ ೧೩೪೦ ಹಿಟ್ಸ್. ಒಟ್ಟು ಪ್ರಕಟವಾದ ಪೋಸ್ಟುಗಳು ೯೦. ಅವುಗಳನ್ನು ಬಂದು ಓದಿದವರು ೬೩ ದೇಶಗಳ ಓದುಗರು. ೮೦೦ಕ್ಕೂ ಹೆಚ್ಚು ಪ್ರಕಟಿತ ಕಮೆಂಟುಗಳು..

ಇದನ್ನು ಆರಂಭಿಸಿದಾಗ ಈ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡವರಲ್ಲ ನಾವು. ಮೀಡಿಯಾಗಳ ಕುರಿತು ಒಂದಿಷ್ಟು ಬರೀಬೇಕು ಅಂತಂದುಕೊಂಡು ಬರೆಯಲಾರಂಭಿಸಿದೆವು. ನೀವು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದಿರಿ. ಈ ೭೪ ದಿನಗಳಲ್ಲಿ ನಮ್ಮನ್ನು ಹೊಗಳಿದವರು, ಪ್ರೋತ್ಸಾಹಿಸಿದವರು, ತಿದ್ದಿದವರು, ಟೀಕಿಸಿದವರು, ಬೈದವರು, ಕುಹಕವಾಡಿದವರು, ಜಗಳಕ್ಕೆ ನಿಂತವರು, ಒಂದು ಕೈ ನೋಡ್ಕೊಂಡೇ ಬಿಡ್ತೀವಿ ಎಂದು ಬೆದರಿಸಿದವರು, ದಾರಿ ತಪ್ಪಿಸಲು ಯತ್ನಿಸಿದವರು, ಗೊತ್ತಾಯ್ತು ಬಿಡ್ರೀ ನೀವು ಇಂಥವರ ಕಡೆಯವರು ಎಂದು ಮೂಗು ಮುರಿದವರು, ಕಮೆಂಟು ಪ್ರಕಟಿಸಲಿಲ್ಲವೆಂದು ಮುನಿಸಿಕೊಂಡವರು... ಇವರ ಸಂಖ್ಯೆ ಈಗ ಲೆಕ್ಕಕ್ಕೆ ಸಿಕ್ಕುತ್ತಿಲ್ಲ.

ಸಂಪಾದಕೀಯ ಎಂಬ ವಿಲಕ್ಷಣ ಹೆಸರಿನ ಈ ಬ್ಲಾಗ್ ಆರಂಭಿಸಿದ ಕಾಲದಲ್ಲಿ ಹೀಗೆ ಬರೆದುಕೊಂಡಿದ್ದೆವು:
ಪತ್ರಕರ್ತರು ಪ್ರಶ್ನಾತೀತರೆ? ಪ್ರಶ್ನಾತೀತರೆನಿಸಿಕೊಳ್ಳಲು ಅವರಿಗಿರುವ ವಿಶೇಷ ಅರ್ಹತೆಗಳಾದರೂ ಏನು? ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ, ಅಧಿಕಾರಿಗಳಾಗಲಿ, ನ್ಯಾಯಾಧೀಶರಾಗಲಿ, ಪತ್ರಕರ್ತರಾಗಲಿ ಪ್ರಶ್ನಾತೀತರಾಗಿಹೋದರೆ ಆಗುವ ಸಮಸ್ಯೆಗಳೇನು? ಇನ್ನುಳಿದವರನ್ನೆಲ್ಲ ಪ್ರಶ್ನಿಸಲು ಪತ್ರಕರ್ತರಿದ್ದಾರೆ ನಿಜ, ಆದರೆ ಪತ್ರಕರ್ತರನ್ನು ಪ್ರಶ್ನಿಸುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ನಾವು ಸಂಪಾದಕೀಯದ ಮೂಲಕ ಪತ್ರಕರ್ತರಿಗೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಒಂದು ಸಣ್ಣ ಪ್ರಯತ್ನವಷ್ಟೆ ನಮ್ಮದು. ಇವತ್ತು ಮಾಧ್ಯಮ ಕ್ಷೇತ್ರವನ್ನು ರಾಡಿಯೆಬ್ಬಿಸಿರುವುದು ಭ್ರಷ್ಟಾಚಾರ ಮಾತ್ರವಲ್ಲ. ಧರ್ಮಾಂಧತೆ ಮತ್ತು ಜಾತೀಯತೆಗಳು ಮೇರೆ ಮೀರಿವೆ. ರಾಜಕಾರಣಿಗಳಿಗಿಂತ ಹೆಚ್ಚು ಜಾತೀಯತೆಯನ್ನು ಪತ್ರಕರ್ತರೇ ಪ್ರದರ್ಶಿಸುತ್ತಿದ್ದಾರೆ. ರಾಜಕಾರಣಿಗಳಿಗಾದರೋ ಎಲ್ಲ ಜಾತಿಯವರ ಓಟು ಬೇಕು. ಪತ್ರಕರ್ತರಿಗೆ ಆ ಕಷ್ಟವೂ ಇಲ್ಲವಲ್ಲ! ಒಂದಂತೂ ಸ್ಪಷ್ಟಪಡಿಸುತ್ತೇವೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ಒಲವೂ ಇಲ್ಲ. ನಮಗೆ ಇಂಥದ್ದು ಅಂಥದ್ದು ಅನ್ನುವ ಇಸಂಗಳು ಇಲ್ಲ. ನಮಗೆ ಸರಿ ಅಲ್ಲ ಅನ್ನಿಸಿದ್ದನ್ನು ಹೇಳುತ್ತೇವೆ, ನಾವು ಹೇಳಿದ್ದು ಸರಿಯಿಲ್ಲ ಎಂಬ ಅಭಿಪ್ರಾಯವಿರುವವರೂ ಪ್ರತಿಕ್ರಿಯೆ ನೀಡಬಹುದು. ಎಲ್ಲ ಮೀಡಿಯಾ ಕಚೇರಿಗಳ ಟೇಬಲ್ಲುಗಳಲ್ಲೂ ನಾವಿದ್ದೇವೆ. ಸತ್ಯ ಹೇಳುತ್ತೇವೆ ಎಂಬ ವಿಶ್ವಾಸದಲ್ಲಿ ಸಾಕಷ್ಟು ಮಾಹಿತಿಗಳನ್ನು ಇ-ಮೇಲ್ ಮೂಲಕವೂ ಅಪರಿಚಿತ ಗೆಳೆಯರು ಕಳುಹಿಸುತ್ತಿದ್ದಾರೆ. ಇದು ಒಂದು ಸಣ್ಣ ಆಂದೋಲನ. ಮಾಧ್ಯಮರಂಗ ಪರಿಶುದ್ಧವಾಗಿರಬೇಕು ಎಂದು ಬಯಸುವವರೆಲ್ಲ ಇದರಲ್ಲಿ ಪಾಲ್ಗೊಳ್ಳಬಹುದು.

ಈ ಮಾತುಗಳಿಗೆ ಇವತ್ತಿಗೂ ನಾವು ಬದ್ಧವಾಗಿದ್ದೇವೆ. ಈ ಬ್ಲಾಗ್ ಮೂಲಕ ನಾವು ಮಾತ್ರ ಮಾತನಾಡುತ್ತಿಲ್ಲ. ಭಿನ್ನ ಭಿನ್ನ ಧ್ವನಿಗಳನ್ನೂ ಸಹ ಇಲ್ಲಿ ಕಾಣಿಸುತ್ತಿದ್ದೇವೆ. ನಾವು ಅಂದುಕೊಂಡಿದ್ದೇ ಸತ್ಯ ಎಂಬ ಬೌದ್ಧಿಕ ಅಹಂಕಾರವಾಗಲಿ, ಇನ್ನೊಬ್ಬರ ನಿಲುವುಗಳನ್ನು ಗೌರವಿಸಬಾರದು ಎಂಬ ಅಸಡ್ಡೆಯಾಗಲಿ ನಮಗಿಲ್ಲ. ಹೀಗಾಗಿ ನಮ್ಮನ್ನು ಕಟುವಾಗಿ ಟೀಕಿಸಿದ ಕಮೆಂಟುಗಳೂ ಇಲ್ಲಿ ಪ್ರಕಟಗೊಂಡಿವೆ.

ಸಂಪಾದಕೀಯದ ಕುರಿತು ಸುದ್ದಿಮನೆಗಳಲ್ಲಿ ಆಗುತ್ತಿರುವ ಚರ್ಚೆ, ಅದರ ಪರಿಣಾಮಗಳ ಕುರಿತು ನಾವೇನನ್ನೂ ಹೇಳಲು ಹೋಗುವುದಿಲ್ಲ. ಹಾಗೆ ಬೆನ್ನು ಚಪ್ಪರಿಸಿಕೊಳ್ಳುವ ಅಭ್ಯಾಸವೂ ನಮಗಿಲ್ಲ. ಸಂಪಾದಕೀಯ ಎಲ್ಲ ಕಡೆಯೂ ಬೇರೆ ಬೇರೆ ಸ್ವರೂಪಗಳಲ್ಲಿ ಇದೆ ಎಂದಷ್ಟೇ ಹೇಳಲು ಬಯಸುತ್ತೇವೆ.

ನಮ್ಮ ನಿಮ್ಮ ಅನುಬಂಧ ಹೀಗೆ ಮುಂದುವರೆಯಲಿ ಎಂಬ ಬಯಕೆ ನಮ್ಮದು. ಹೀಗೇ ಪ್ರತಿಕ್ರಿಯಿಸುತ್ತಿರಿ. ಇದರಿಂದೇನೋ ಕ್ರಾಂತಿಯಾದೀತು ಎಂಬ ಹುಚ್ಚುಭ್ರಮೆಯೇನು ನಮಗಿಲ್ಲ. ಸಾಗಬೇಕಾದ ಹಾದಿ ಇನ್ನೂ ದೂರವಿದೆ. ದಾರಿಗುಂಟ ನೀವಿರುತ್ತೀರೆಂಬ ವಿಶ್ವಾಸವಿದೆ.

ಕಡೆಯದಾಗಿ ನೀವು ಪದೇ ಪದೇ ಕೇಳುವ ಒಂದು ಪ್ರಶ್ನೆ. ಅದಕ್ಕೆ ಸದ್ಯಕ್ಕೆ ಉತ್ತರಿಸುವುದಿಲ್ಲ. ಈಗ ಉತ್ತರಿಸದೇ ಇರುವುದಕ್ಕೂ ಒಂದು ಬಲವಾದ ಕಾರಣವಿದೆ. ಮುಂದೆ ನಾವು ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭ ಬರುತ್ತದಲ್ಲ, ಆ ಸಂದರ್ಭಕ್ಕೂ ಒಂದು ಮಹತ್ವವಿರುತ್ತದೆ. ಪ್ಲೀಸ್ ಆ ಪ್ರಶ್ನೆಯೊಂದನ್ನು ಈಗ ಕೇಳಬೇಡಿ.

ನಮಗೂ ಹೇಳೋದು ಸಾಕಷ್ಟಿದೆ, ಸದ್ಯಕ್ಕೆ ಇಷ್ಟು ಸಾಕು, ಮತ್ತೆ ಮತ್ತೆ ಸಿಕ್ತಾ ಇರೋಣ.

ಸಂಪಾದಕೀಯ ಕುರಿತು ನಿಲುಮೆಯಲ್ಲಿ ಕಂಡಿದ್ದು....


ಸಂಪಾದಕೀಯ ಕುರಿತು ನಿಲುಮೆ ಬ್ಲಾಗ್‌ನಲ್ಲಿ ಕೃಷ್ಣ ಬಂಗೇರ ಬರೆದಿದ್ದಾರೆ. ಲೇಖನದ ಪೂರ್ಣಪಾಠ ಇಲ್ಲಿದೆ.


ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?

- ಕೃಷ್ಣ ಬಂಗೇರ
ಮೀಡಿಯಾ ಅಂದ್ರೆ ಹಾಗೆ. ಹೊರಗಿನ ಎಲ್ಲರ ವಿಷಯನ ಇವರು ಜಗತ್ತಿಗೆ ಸಾರುತ್ತಿದ್ರೂ ಹೊರಗಿನ ಜನಕ್ಕೆ ಸುದ್ದಿಮನೆಯೊಳಗಿನ ಕಥೆಗಳು ತಿಳಿಯೋದೆ ಇಲ್ಲ. ಅಲ್ಲೂ ಇರುವ ದ್ವೇಷ, ಕುಹಕ, ಸ್ವಜನಪಕ್ಷಪಾತ ಇಂಥ ವಿಷಯಗಳು ಸಾಮಾನ್ಯ ಜನರ ಪಾಲಿಗೆ ರಾಜರಹಸ್ಯಗಳು. ಅಂಥ ಮೀಡಿಯಾ ಎಂಬೋ ಮೀಡಿಯಾದ ನಡುಮನೆಯಿಂದಲೇ ಅಲ್ಲಿನ ಸುದ್ದಿಗಳನ್ನು ಹೊರಜಗತ್ತಿಗೆ ಹರಾಜಗೊಳಿಸಿದ್ದು ಸಂಪಾದಕೀಯ ಎಂಬ ಸುದ್ದಿಮನೆಯ ಒಳಗಿನ ಕಥೆಗಳನ್ನು ಹೇಳುವ ಬ್ಲಾಗು.ಹುಟ್ಟಿ ಅತಿ ಕಡಿಮೆ ಅವಧಿಯಲ್ಲೇ ಮಾಡಿದ ಮೋಡಿ ಕಡಿಮೆಯೇನಿಲ್ಲ. ಹತ್ತಿರಹತ್ತಿರ ಲಕ್ಷ ಹಿಟ್ಸ್ ಗಳ ಸಮೀಪದಲ್ಲಿರುವ ಈ ಬ್ಲಾಗು ಕೆಲವರ ಮುಖದಲ್ಲಿ ಬೆವರು ತರಿಸಿದಂತೂ ಹೌದು.ಈಗ ಸುದ್ದಿಮನೆಯ ಜನ ಪಿಟಿಐ ನ್ಯೂಸ್ ಆದ್ರೂ ಮರೆತರೂ ಆದ್ರೆ ದಿನಕ್ಕೊಮ್ಮೆಯಾದ್ರೂ ಈ ಬ್ಲಾಗ್ ನೊಳಗೆ ಇಣಕೋದು ತಪ್ಪಿಸೋದಿಲ್ಲ. ಇದೇ ಅಲ್ವೇನ್ರೀ ಜನಪ್ರಿಯತೆ ಅಂದ್ರೆ! ಇಂಥ ಎಷ್ಟೋ ಮಾಧ್ಯಮ ವಿಷಯಗಳನ್ನು ಚರ್ಚೆ ಮಾಡೋ ಬ್ಲಾಗುಗಳು ಬಂದು ಹೋಗಿವೆ. ಆದರೆ ಸಾಮಾಜಿಕ ಕಾಳಜಿಯ ಜೊತೆಗೆ ವಿಷಯದ ಆಳ ಅಗಲಗಳನ್ನು ಸಂಪಾದಕೀಯದಷ್ಟು ಚೆಂದದಲ್ಲಿ,ಸೆನ್ಸಿಬಲ್ ಆಗಿ ಹೇಳಿದ ಬ್ಲಾಗು ಮತ್ತೊಂದಿಲ್ಲ.

ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು  ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ.

ಅದೆಲ್ಲ ಇರಲಿ ನಾನು ಹೇಳಹೊರಟ ವಿಷಯ ಮರೆತೆ ಬಿಟ್ಟೆ.ಮೊನ್ನೆಯೇ ಈ ವಿಷಯ ಬರೆಯಬೇಕು ಅಂತಿದ್ದೆ ಆದ್ರೆ ಏನೋನೋ ಕೆಲಸ ತಗುಲಿ ಹಾಕಿಕೊಂಡು ಬಿಡುವಾದದ್ದೇ ಈಗ ನೋಡಿ.ಹೀಗೆ ಸಂಪಾದಕೀಯದ ಹಳೆ ಪೋಸ್ಟ್ ಗಳಲ್ಲಿ ಕಣ್ಣಾಡಿಸುವಾಗ “ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು.” ಅಂತ ಹೇಳುತ್ತಾ ಸಂಪಾದಕೀಯ ತಂಡ, ‘ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು!’ ಅನ್ನೋ ವಿಷಯದ ಕುರಿತ ವಿಶ್ಲೇಷಣೆ ಪ್ರಕಟಿಸಿತ್ತು.ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಕನ್ನಡ ಪತ್ರಿಕೆಗಳು ಪ್ರಕಟಿಸುವಾಗ ತೋರಿದ ವಿಶೇಷತೆಯನ್ನ ಬಿಮ್ಬಿಸುತಿತ್ತು ಆ ಲೇಖನ.

ವೆಲ್, ಮಾಧ್ಯಮಗಳೆಲ್ಲ ಹೀಗೆ ಒಮ್ಮಗ್ಗುಲಿಗೆ ನಿಂತಾಗ ಬೇರೆಯದ್ದೇ ಆದ ದೃಷ್ಟಿಕೋನದಿಂದ ಮಂಗಳೂರಿನಿಂದ ಪ್ರಕಟವಾಗುವ ವಾರ್ತಾಭಾರತಿ ಪತ್ರಿಕೆಯು ವಿಶೇಷ ಅಸ್ಥೆಯಿಂದ ಬರೆದ ಲೇಖನವನ್ನು ಸಂಪಾದಕೀಯ ಕೋಟ್ ಮಾಡಿ ಬೆಂಬಲಕ್ಕೆ ನಿಂತದ್ದು  ವಾ.ಭಾ  ವಿಶೇಷತೆಗೆ ಬೆಲೆ ತಂದ್ದಿತ್ತು. ಈ ಕುರಿತಾಗಿ ಸಂಪಾದಕೀಯದ ನಿರ್ಭಿಡೆಯ ವಿಶ್ಲೇಷಣೆಯಂತೂ ಅದ್ಭುತವಾಗಿತ್ತು. 
ಅದೇ ತರಹ ಸನ್ನಿವೇಶ ಮತ್ತೊಮ್ಮೆ ಕ್ರಿಯೇಟ್ ಆದದ್ದೂ ಗೋಧ್ರಾ ಹತ್ಯಾಕಾಂಡದ ತೀರ್ಪು ಬಂದಾಗ. ಇಲ್ಲೂ ವಾರ್ತಾಭಾರತಿ ತನ್ನ ವಿಶೇಷ ದೃಷ್ಟಿಕೋನದಿಂದ ಈ ಸುದ್ದಿಯನ್ನು ಬರೆಯಿತು.ಸಂಪಾದಕೀಯ ಈ ವಿಷಯವನ್ನು ತನ್ನ ಚರ್ಚೆಗೆ ಎತ್ತಿಕೊಳ್ಳಬಹುದೆಂದು ನಾನು ಕಾಯುತ್ತಿದ್ದೆ.ಆದರೆ ಸಂಪಾದಕೀಯದಿಂದ ಈ ಮುಖ್ಯ ಸಂಗತಿ ಕಣ್ತಪ್ಪಿದ್ದು ವಿಶೇಷ. ಇದರಿಂದ ನಷ್ಟವಾದದ್ದು ಸಂಪಾದಕೀಯದ ವಿಶ್ಲೇಷಣೆಗಾಗಿ ಕಾದುಕೂತ ನಮ್ಮಂಥ ಸಾಮಾನ್ಯ ಜನರಿಗೆ.
ಸಂಪಾದಕೀಯದ ಕಣ್ತಪ್ಪಿದ ವಿಶೇಷತೆ ಜನರ ಕಣ್ತಪ್ಪದಿರಲಿ ಅನ್ನುವ ಉದ್ದೇಶದಿಂದ ಇದನ್ನ ನಾನು ಬರೆಯುತಿದ್ದೇನೆ. ರೈಲಿಗೆ ಬೆಂಕಿ ಹಚ್ಚಿದ್ದು ಆಕಸ್ಮಿಕವಲ್ಲ,ಅದು ಪೂರ್ವಯೋಜಿತ.ಈ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಮುಂದೆ ನಿರ್ಧರಿಸಲಾಗುವುದು ಎಂದು ಕೋರ್ಟ್ ತೀಪಿತ್ತಿದೆ ಎಂದು ವಿಜಯಕರ್ನಾಟಕ,ಪ್ರಜಾವಾಣಿ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳು ಮುಖಪುಟದಲ್ಲಿಯೇ ಬ್ಯಾನರ್ ಹೆಡ್ ಲೈನ್ ಜೊತೆಗೆ ಸುದ್ದಿ ಮಾಡಿದ್ದವು. ಆದರೆ ವಾರ್ತಾ ಭಾರತೀಯ ‘ಸಂಪಾದಕೀಯ’ ಪುಟದಲ್ಲಿ ‘ಗೋದ್ರಾ ರೈಲಿಗೆ ಬೆಂಕಿ ಬಿದ್ದಿದ್ದು ಆಕಸ್ಮಿಕವೋ,ಪೂರ್ವ ಯೋಜಿತವೋ ಇನ್ನೂ ಇತ್ಯರ್ಥವಾಗಿಲ್ಲ’ ಅಂತ ಬರೆದಿದ್ದಾರೆ!
ಉಳಿದೆಲ್ಲ ಪತ್ರಿಕೆಗಳು ಗೋದ್ರಾ ರೈಲಿಗೆ ಬೆoಕಿ ಹಚ್ಚಿದ್ದು ಪಿತೂರಿ ಅಂತ ಕೋರ್ಟ್ ತೀರ್ಪಿನಲ್ಲಿ ಹೇಳಿದೆ, ೩೧ ಜನರ ದೋಷಿಗಳೆಂದು ಪರಿಗಣಿಸಿ, ೬೩ ಜನರನ್ನ ಖುಲಾಸೆಗೊಳಿಸಿದೆ ಅಂತಲೇ ಬರೆದಿವೆ.ಈ ಸುದ್ದಿಗಳಲ್ಲಿ ಯಾವ ಸುದ್ದಿ ಸರಿ? ಉಳಿದ ಪತ್ರಿಕೆಗಳದ್ದೋ ಅಥವಾ ವಾರ್ತಾ ಭಾರತಿಯವರದ್ದೋ?

Friday, March 4, 2011

ಸಂಸ್ಕೃತಿಯನ್ನು ವಾಣಿಜ್ಯೀಕರಿಸಿಕೊಳ್ಳುವುದು ರೋಗದ ಮಾರ್ಗ...


ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಾರೆ. ನಾರಾಯಣಮೂರ್ತಿಯವರಿಂದ ಸಮ್ಮೇಳನ ಉದ್ಘಾಟಿಸುವ ಸರ್ಕಾರದ ನಿಲುವು ಈಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ, ಟಿವಿ ಚಾನಲ್‌ಗಳಲ್ಲಿ, ಇ-ಮ್ಯಾಗಜೀನ್‌ಗಳಲ್ಲಿ, ಬ್ಲಾಗ್‌ಗಳಲ್ಲಿ, ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ, ಎಸ್‌ಎಂಎಸ್‌ಗಳಲ್ಲಿ ಬಿರುಸಿನ ಚರ್ಚೆ ನಡೆದಿದೆ.

ಈ ಕುರಿತು ಸಂಪಾದಕೀಯವೂ ಒಂದು ಚರ್ಚೆ ನಡೆಸಬೇಕು ಎಂಬುದು ಹಲವರ ಬೇಡಿಕೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಕುವೆಂಪು ವಿಶ್ವವಿದ್ಯಾಲಯದ ಡಾ. ಕಿರಣ್ ಎಂ.ಗಾಜನೂರು ಬರೆದ ಒಂದು ಟಿಪ್ಪಣಿಯನ್ನು ನಿಮ್ಮ ಮುಂದಿರಿಸಿದ್ದೇವೆ. ಎಲ್ಲರ ಅಭಿಪ್ರಾಯಗಳಿಗೂ ಸ್ವಾಗತ. ಆದರೆ, ವೈಯಕ್ತಿಕ ನಿಂದನೆ, ಕುಹಕದ ಪ್ರತಿಕ್ರಿಯೆಗಳು ಬೇಡ. ಇಂಥವನ್ನು ಪ್ರಕಟಿಸುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸುತ್ತೇವೆ. ನಿಮ್ಮ ಪ್ರತಿಕ್ರಿಯೆ ವಸ್ತುನಿಷ್ಠವಾಗಿರಲಿ, ಹೊಸ ಹೊಳಹುಗಳನ್ನು ನೀಡುವಂತಿರಲಿ, ಸಂದರ್ಭೋಚಿತವಾಗಿರಲಿ.

ಡಾ.ಕಿರಣ್ ಅವರ ಪ್ರತಿಕ್ರಿಯೆ ಇಲ್ಲಿದೆ.

ಕಿರಣ್ ಗಾಜನೂರ್
ಒಂದು ಅರ್ಥದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಮೂಲ ಉದ್ದೇಶ ಕರ್ನಾಟಕವನ್ನು, ಕನ್ನಡ ಸಂಸ್ಕೃತಿಯನ್ನು ಬೌದ್ಧಿಕವಾಗಿ, ಆಕರ್ಷಕವಾಗಿ ಹೊರಜಗತ್ತಿನ ಮುಂದೆ ಮಂಡಿಸುವುದಾಗಿದೆ. ಆದರೆ ಮಂಡಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಬಹಳ ಪ್ರಮುಖ. ಅದಕ್ಕೆ ಉತ್ತರವಾಗಿ ನಾರಾಯಣ ಮೂರ್ತಿಯವರಂತಹ ಒಬ್ಬ ಆಧುನಿಕ (ಬಂಡವಾಳ ಶಾಹಿ) ವ್ಯಾಪಾರಿ ಸಮ್ಮೆಳನವನ್ನು ಉದ್ಘಾಟಿಸಿದರೆ ಸಮ್ಮೇಳನದ ಉದ್ದೇಶ ಈಡೇರಬಹುದು ಎಂದು ಸರ್ಕಾರ ಚಿಂತಿಸಿದಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬರಗೂರು ಅವರು ಎತ್ತಿರುವ ತಾತ್ವಿಕ ಭಿನ್ನಾಭಿಪ್ರಾಯ ಒಂದು ನೆಲೆಯಿಂದ ಬಹಳ ಮಹತ್ವವಾದುದು. ಅಂದರೆ ಒಂದು ಭಾಷೆ, ಸಂಸ್ಕೃತಿ ತನ್ನನ್ನು ತಾನು ಹೊರಜಗತ್ತಿಗೆ ವಾಣಿಜ್ಯೀಕರಿಸಿಕೊಳ್ಳುವುದು ಸುಲಭ. ಆದರೆ ಅದು ರೋಗದ ಮಾರ್ಗ. ಒಂದು ನಾಡು ತನ್ನಲ್ಲಿರುವ ಕಲೆ, ಜೀವನಕ್ರಮದ ಉತ್ಸವಗಳನ್ನೂ ವಾಣಿಜ್ಯೀಕರಿಸಿ ಅದನ್ನು ರಫ್ತು ಮಾಡಲು ಪ್ರಯತ್ನಿಸುವುದು ಅಗ್ಗದ ದಾರಿ. ಮತ್ತು ಅಂತಹ ಒಂದು ಸಮಾರಂಭಕ್ಕೆ ಜಗತ್ತಿನ ವಾಣಿಜ್ಯೀಕರಣದ ರೂವಾರಿ ನಾರಾಯಣ ಮೂರ್ತಿಯಂತಹವರನ್ನು ಕರೆಸುವುದು ಇನ್ನು ಅಗ್ಗದ ದಾರಿ. ಇದನ್ನೆ ಬರಗೂರು ಅವರು ಇದು ಆತ್ಮಗೌರವದ ಪ್ರಶ್ನೆ ಎಂದು ಕರೆದಿದ್ದು ಎಂದು ನನಗೆ ಅನ್ನಿಸುತ್ತದೆ. ವಿಶ್ವಕನ್ನಡ ಸಮ್ಮೇಳನದ ಮುಖ್ಯ ಉದ್ದೇಶ ಜಾಗತೀಕರಣದ ಬಿರುಗಾಳಿಗೆ, ವ್ಯಾಪಾರಿ ಪ್ರಪಂಚದ ಏಕರೂಪದ ಸಂಸೃತಿಯ ನಿರ್ಮಾಣದ ಮೂಢತನಕ್ಕೆ ವೇದಿಕೆ (ಸಂಸ್ಕೃತಿಯನ್ನೆ ವ್ಯಾಪಾರಿ ಸರಕಾಗಿಸಿ) ಒದಗಿಸುವುದಲ್ಲ. ಬದಲಾಗಿ ಕನ್ನಡವನ್ನು, ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯನ್ನು ಇಲ್ಲಿನ ಜನಜೀವನವನ್ನು ಜಗತ್ತಿಗೆ ತಲುಪಿಸಿ ಜಗತ್ತು ಇಲ್ಲಿಂದ ಈ ನೆಲದಿಂದ ಕಲಿಯುವುದು ಏನಿದೆ ಎಂಬುದನ್ನು ತೋರಿಸುವ ಉದ್ದೇಶ ಹೊಂದಬೇಕು. ಅದಕ್ಕೆ ಬರಗೂರು ಹೇಳಿದಂತೆ ಸಾಹಿತ್ಯದ ಹಿನ್ನೆಲೆಯ ವ್ಯಕ್ತಿ ಸಮ್ಮೇಳನ ಉದ್ಘಾಟಿಸಿದರೆ ಸೂಕ್ತ ಎಂಬುದು ನನ್ನ ಅಭಿಪ್ರಾಯ.

                                                                         -Dr. Kiran.M Gajanur, 
                                                                         R.T.A.In Political Science,
                                                                         Directorate of Distance Education
                                                                         Kuvempu university

ಕ್ಯಾಮೆರಾ ಪರ್ಸನ್ ಒಬ್ಬರ ನೆನಪುಗಳ ಶವಯಾತ್ರೆ....


ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಇವನಿಗೆ ಯಾರ‍್ಯಾರೋ ನೆನಪಾಗುತ್ತಾರೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನು ಬಿಟ್ಟು ಬಂದ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಬೆಂಗಳೂರೆಂಬ ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ ಕ್ಯಾಮೆರಾ ಕೊಟ್ಟು, ಕ್ಯಾಮೆರಾ ಮ್ಯಾನ್ ಅನ್ನೋ ಲೇಬಲ್ ಹಚ್ಚಲಾಗಿತ್ತು. ವಾಹಿನಿಯೊಂದರ ಕ್ರೈಂ ಕಾರ್ಯಕ್ರಮಕ್ಕೆ ಕ್ಯಾಮೆರಾ ಪರ್ಸನ್. ಜೋಡಿಯಾಗಿ ಒಬ್ಬ ವರದಿಗಾರ. ಸುಮ್ಮನೆ ಕುಳಿತ ಇವನಿಗೆ ಏನೇನೋ ನೆನಪಾಗುತ್ತದೆ.

*

ಬಿಳಿ ಬಣ್ಣದ ಕಾಟನ್ ಸೀರೆ ಉಟ್ಟವಳ ಮುಖದಲ್ಲಿ ಅನುಭವದ ಗಾಂಭೀರ್ಯವನ್ನು ಮರೆಮಾಚಿದ ಆತಂಕದ ಛಾಯೆ. ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯೆ. ಜೀವನದುದ್ದಕ್ಕೂ ತಿಂಗಳಿಗೊಮ್ಮೆ ಬರುವ ಪಗಾರದ ಹೊರತು ನಯಾಪೈಸೆ ಹೆಚ್ಚಿಗೆ ಮುಟ್ಟದ ಆಕೆ ಕೈಗಳು ಕಂಪಿಸುತ್ತಿದ್ದವು. ಹಿಂದಿನ ದಿನವಷ್ಟೆ ಸಂತಾನಹರಣ ಶಸ್ತ್ರಚಿಕಿತ್ಸೆಯೊಂದು ಕೈಕೊಟ್ಟು ಎರಡು ಮಕ್ಕಳ ತಾಯಿಯೊಬ್ಬಳು ಆಸ್ಪತ್ರೆಯಲ್ಲೇ ಅಸುನೀಗಿಬಿಟ್ಟಿದ್ದಳು. ವೈದ್ಯೆಯ ಪಾಲಿಗೆ ಅವತ್ತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕೋರ್ಟ್‌ಮಾರ್ಷಲ್ ಆಗಿತ್ತು. ಆತಂಕ, ಪಾಪಪ್ರಜ್ಞೆ, ದುಃಖ, ವೇದನೆಗಳ ನಡುವೆಯೇ ಆಕೆ ಕ್ಯಾಮೆರಾ ಎದುರು ಕುಳಿತು ಸೆರಗು ಸರಿಪಡಿಸಿಕೊಂಡು, ಚಾನಲ್ ಲೋಗೋ ಹಿಡಿದು ಕುಳಿತಿದ್ದ ಇವನ ಮುಖ ನೋಡಿದರು. ಬಹುಶಃ ಕೊನೆಯ ಮಗನ ನೆನಪಾಗಿರಬೇಕು.

ಕೇಳಿದ ಪ್ರಶ್ನೆಗಳಿಗೆ, ಮೈಮೇಲೆ ಬಂದ ಆರೋಪಗಳಿಗೆ ಉತ್ತರ ಕೊಡಲು ಹೆಣಗಾಡಿ, ಕಣ್ಣು ತುಂಬಿ ಬಂದ ನೀರನ್ನು ತಡೆಹಿಡಿದು ನಾಲ್ಕಾರು ನಿಮಿಷದ ಕ್ಲಾರಿಫಿಕೇಶನ್ ಕೊಟ್ಟಿದ್ದಾಯಿತು. ಧುತ್ತೆಂದು ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಉತ್ತರವಿಲ್ಲ ಅಂತ ನಿರ್ಧರಿಸಿಯಾದ ಮೇಲೆ, ಇನ್ನು ನಾನು ಜೀವನದಲ್ಲಿ ಸ್ಟೆತಸ್ಕೋಪ್ ಮುಟ್ಟಲ್ಲ. ಈವರೆಗೆ ಯಾವುದೋ ಹಳ್ಳಿಗಳಲ್ಲಿ, ತಾಂಡಗಳಲ್ಲಿ ಲಕ್ಷಾಂತರ ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೆ. ಈಗ ಎಲ್ಲವೂ ಮಣ್ಣುಪಾಲಾಗಿಹೋಯ್ತು ಅಂತ ಹೇಳಿ ಕಣ್ಣೀರು ಒರೆಸಿಕೊಂಡಿದ್ದರು ತಾಯಿ ಹೃದಯದ ಆ ಮಹಿಳಾ ವೈದ್ಯೆ. ಆಕೆ ತನ್ನ ಮೇಲಾಧಿಕಾರಿಗೆ ಯಾವತ್ತು ರೇಶ್ಮೆ ಸೀರೆ, ಬಂಗಾರ ಬಳೆಯನ್ನು ಕಪ್ಪ ಸಲ್ಲಿಸಿರಲಿಲ್ಲ. ತನ್ನ ವೃತ್ತಿ ಬದುಕಿನಲ್ಲಿ ಖಾಸಗಿ ಆಸ್ಪತ್ರೆಗೆ ವಿಸಿಟಿಂಗ್ ಡಾಕ್ಟರ್ ಆಗಿ ಹೋಗಿರಲಿಲ್ಲ.

ಇದೆಲ್ಲ ಕಳೆದು ಮೂರು ತಿಂಗಳ ನಂತರ ಒಂದು ಶುಕ್ರವಾರ ಇವನಿಗೆ ಅವರ ನೆನಪಾಗುತ್ತದೆ. ಅವರ ನಂಬರ್ ಹುಡುಕಿ, ಹೇಗಿದ್ದೀರಾ ಮೇಡಂ? ಅಂದ. ಅತ್ತ ಕಡೆಯಿಂದ ಅಣೆಕಟ್ಟು ಒಡೆದಂತಾಗಿ ಅಳು ಮಾತ್ರ ಕೇಳಿಸತೊಡಗಿತು. ಇವನ ಎದೆಯಲ್ಲಿ ಯಾಕೋ ಚಳುಕ್ಕೆಂದ ಭಾವ. ಆಕೆ ತೀರಿಕೊಂಡಿದ್ದು ಇಂತಹದೆ ಒಂದು ಶುಕ್ರವಾರ, ಹಾಗಾಗಿ ಅವತ್ತಿಂದ ಪ್ರತಿ ವಾರ ದೇವರ ಬಳಿ ಬಂದು ಅಳುವ ಕೆಲಸವಾಗುತ್ತಿದೆ. ಇದರಿಂದ ನನಗೆ ಹೊರಬರಲು ಆಗುತ್ತಿಲ್ಲ ಎಂದ ಅವರು ಮತ್ತೆ ಅಳುತ್ತಾರೆ.
ಅವತ್ತವಳು ಗಂಡನಿಗೆ ಗೊತ್ತಿಲ್ಲದೆ ತನ್ನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಬೆಳೆಯುತ್ತಿದೆ ಎಂಬ ವಿಷಯವನ್ನು ಪ್ರಾಮಾಣಿಕವಾಗಿ ತಿಳಿಸಿದ್ದರೆ ಸಾಕಿತ್ತು. ಆಕೆಯ ಸಂಸಾರ-ಪ್ರಾಣ ಎರಡು ಉಳಿಯುತ್ತಿತ್ತು. ಏನ್ಮಾಡೋದು ಎಲ್ಲಾ ನನ್ನ ಗ್ರಹಚಾರ. ಅವಳ ಸಾವಿಗಾಗಿ ನಾನು ಇವತ್ತು ಕಣ್ಣೀರು ಹಾಕುತ್ತಿದ್ದೇನೆ ಎಂದವರು ಸುದೀರ್ಘ ನಿಟ್ಟುಸಿರು ತೆಗೆಯುತ್ತಾರೆ. ಮಳೆ ನಿಂತ ಹೋದ ಮೇಲೂ ಹನಿ ಉದುರುವಂತೆ ನಡುನಡುವೆ ಬಿಕ್ಕುತ್ತಾರೆ.

ಸುಮ್ಮನೆ ಕುಳಿತ ಇವನಿಗೆ ಆಗಾಗ ಆಕೆಯ ದೇವರ ಪಟದ ಎದುರು ಕಣ್ಣೀರಾಗುತ್ತಿರುವ ಅವರ ನೆನಪಾಗುತ್ತದೆ.

*

ಅದೊಂದು ಮನಕಲಕುವ ದೃಶ್ಯ. ಹೆತ್ತ ತಾಯಿಯ ಹೆಣದ ಮುಂದೆ ಮಾಂಸದ ಮುದ್ದೆಯಂತೆ ಕುಳಿತ ಆ ಯುವತಿಯ ಅಳು ಮುಗಿಲು ಮುಟ್ಟಿತ್ತು. ಶಾಮಿಯಾನ ಹಾಕಿ, ಅದರ ಮುಂದೆ ಸಾವನ್ನು ಸಾರಲೆಂದೇ ಹೊಗೆಯಾಡುವ ಕೊಳ್ಳಿ ಇರಿಸಿದ್ದರು. ಅಲ್ಲಿ ಐವತ್ತರ ಆಸುಪಾಸಿನ, ಬೆಳ್ಳಗಿನ ಹೆಂಗಸೊಬ್ಬಳ ಶವ ಇಡಲಾಗಿತ್ತು. ಶವದ ಸುತ್ತ ಹಾಕಿದ್ದ ಬಾಡಿಗೆ ಕುರ್ಚಿಗಳ ಕೊನೆಯ ಸಾಲಿನಲ್ಲಿ ಒಂದಷ್ಟು ಹೆಂಗಸರು ಮ್ಲಾನವಾದ ಮುಖಮಾಡಿಕೊಂಡು ಕುಳಿತಿದ್ದರು. ಅಲ್ಲಿಗೆ ಬಂದಿಳಿಯಿತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ. ಒಂದಷ್ಟು ಆತಂಕ, ಮತ್ತೊಂದಿಷ್ಟು ಕರ್ತವ್ಯ ಪ್ರಜ್ಞೆಯಿಂದ ಪೂರಕ ವಾತಾವರಣಕ್ಕಾಗಿ ಕಾದ ಇವನು ಆಕೆ ಮುಂದೆ ಮೈಕ್ ಹಿಡಿದ. ಮಾತನಾಡಲೇಬೇಕಾದ ಅನಿವಾರ್ಯತೆಯನ್ನು ಕ್ಯಾಮೆರಾ ಸೆರೆಹಿಡಿಯುತ್ತಿತ್ತು. ನಮ್ಮ ಅಪ್ಪನೆ ಅಮ್ಮನನ್ನ ಕೊಂದಿದ್ದು. ಅವನಿಗೆ ಮತ್ತೊಬ್ಬಳು ಹೆಂಡತಿ ಇದ್ದಾಳೆ ಅಂತೆಲ್ಲಾ ಹೇಳುತ್ತಾ ಕಣ್ಣಲ್ಲಿ ತುಂಬಿದ್ದ ನೀರನ್ನು ಹೊರಗೆಡವಿದಳು.

 ಅದೇ ಹೊತ್ತಿಗೆ ಪಕ್ಕದ ಪೊಲೀಸ್ ಠಾಣೆಯಲ್ಲಿ, ಪೊಲೀಸರು ತಂದುಕೊಟ್ಟಿದ್ದ ಚಿತ್ರಾನ್ನ ತಿನ್ನುತ್ತಿದ್ದ ಆ ಮಹಾತಂದೆ. ಆತ ಕೊಲೆಗಾರ ಇರಲಿಕ್ಕಿಲ್ಲ ಅಂತ ಪ್ರಾಥಮಿಕ ತನಿಖೆಯಲ್ಲೇ ಪೊಲೀಸರಿಗೂ ಮನವರಿಕೆಯಾಗಿತ್ತು. ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕಂಡಿದ್ದೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆದು ಎದುರಿಗೆ ಕೂರಿಸಿಕೊಂಡರು. ಕೂದಲೇ ಇಲ್ಲದ ತಮ್ಮ ತಲೆಯ ಮೇಲೆ ಪೊಲೀಸ್ ಹ್ಯಾಟು ಹಾಕಿಕೊಂಡು ಖಾಲಿ ತಲೆ ತೋರಿಸಬ್ಯಾಡ್ರಪ್ಪೋ.. ಅಂದರು. ಅಷ್ಟೊತ್ತಿಗೆ ಅವರು ಕುಳಿತಿದ್ದ ಕಚೇರಿಯ ಎಲ್ಲಾ ಕಿಟಕಿ, ಬಾಗಿಲುಗಳನ್ನ ತೆಗೆದು, ಅವರ ಮುಖಕ್ಕೆ ಬೆಳಕು ಬೀಳಿಸಿ, ಇದ್ದದರಲ್ಲೇ ಒಳ್ಳೆಯ ಫ್ರೇಮಿನ ನಡುವೆ ಅವರನ್ನ ಕೂರಿಸಲಾಯಿತು. ಅದಕ್ಕೂ ಮುನ್ನ ಎದ್ದು ಹೋದವರು ಮುಖ ತೊಳೆದು, ತೆಳುವಾದ ಪೌಡರ್ ಲೇಪಿಸಿಕೊಂಡಿದ್ದರಿಂದ ಚಂದದ ಸುವಾಸನೆ ಘಮ್ ಎನ್ನುತ್ತಾ ಅಲ್ಲಿದ್ದವರ ಮೂಗಿಗೆ ಬಡಿಯುತ್ತಿತ್ತು. ಕ್ಯಾಮೆರಾ ಚಾಲೂ ಆಗುತ್ತಿದ್ದಂತೆ ತಮ್ಮೆಲ್ಲಾ ಪಾಂಡಿತ್ಯವನ್ನು ಉಪಯೋಗಿಸಿ, ಅವರು ವರದಿ ನೀಡಿದರು. ಪೇದೆಯೊಬ್ಬ ತಂದಿಟ್ಟ ಟೀ ಕುಡಿದು, ಇನ್ನೇನು ಪ್ಯಾಕ್ ಅಪ್ ಅನ್ನಬೇಕು, ಹ್ಹಾ ಹ್ಹಾ ಹ್ಹಾ ಅಂತ ಜೋರಾದ ನಗೆ ನಗುತ್ತಾ ಸ್ವಲ್ಪ ರಿವೈಂಡ್ ಮಾಡಿ ತೋರಿಸ್ರಪ್ಪಾ..ಚಂದ ಕಾಣ್ತಿನಾ ಹೆಂಗೆ ಅಂದುಬಿಟ್ಟರು ಆ ಪ್ರಾಮಾಣಿಕ, ದಕ್ಷ ಅಧಿಕಾರಿ. ಇದೊಂದು ಅನಿವಾರ್ಯ ಕರ್ಮ ಅಂದುಕೊಂಡು ಅವರಿಗೆ ತೋರಿಸಿ ಹೊರಬರುವ ಹೊತ್ತಿಗೆ ಆಕೆಯ ಶವವನ್ನು ಮಾವಿನ ಕಟ್ಟಿಗೆ ಮೇಲಿಟ್ಟು ಬೆಂಕಿ ಹಚ್ಚಲಾಗಿತ್ತು.

ಸುಮ್ಮನೆ ಕುಳಿತ ಇವನಿಗೆ ಹೆಣದ ಮುಂದೆ ರೋಧಿಸುತ್ತಿದ್ದ ಯುವತಿ ಹಾಗೂ ಪೊಲೀಸ್ ಠಾಣೆಯಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ತಂದೆಯ ನೆನಪಾಗುತ್ತದೆ.

*

ಆಕೆ ಇನ್ನೂ ಅಪ್ರಾಪ್ತ ವಯಸ್ಸಿನ ಹುಡುಗಿ. ಆಕೆಯ ತಾಯಿ ಹಾಗೂ ಮಲತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಕೊಳಗೇರಿ ಅಂತ ಕರೆಯಬಹುದಾದ ಪ್ರದೇಶದಲ್ಲಿತ್ತು ಅವರ ಮನೆ. ಮಹಾಪಾತಕವೊಂದು ಈ ಕುಟುಂಬದ ಪಾಲಿಗೆ ಜರುಗಿ ಹೋಗಿತ್ತು. ಅಪಾರ್ಟ್‌ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಈ ಹದಿನಾಲ್ಕರ ಹುಡುಗಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಪಕ್ಕದ ಮನೆಯ ದುರುಳನೊಬ್ಬ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದ. ಅಂದು ತಂದೆ ತಾಯಿ ಒಬ್ಬಳೇ ಮಗಳನ್ನು ಬಿಟ್ಟು ದೂರ ಊರಿಗೆ ಹೋಗಿದ್ದರು ಎಂಬುದು ಬೇಜವಾಬ್ದಾರಿ ಅನ್ನಿಸುತ್ತಿತ್ತಾದರೂ, ಅದು ಪುಟ್ಟ ವಯಸ್ಸಿನ ಹುಡುಗಿಯಿಂದ ಭಾರಿ ದಂಡವನ್ನೇ ಕಟ್ಟಿಸಿತ್ತು. ಆದರೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಪುಟ್ಟ ವಯಸ್ಸಿನ ಹುಡುಗಿ ಆತನೊಂದಿಗೆ ಮುಂಚಿನಿಂದಲೆ ಸಂಬಂಧ ಹೊಂದಿದ್ದಳು ಅಂತ ಷರಾ ಬರೆದು ಮುಗಿಸುವ ತವಕದಲ್ಲಿದ್ದರು. ಹಾಗಂತ ಬಂದ ಮಾಹಿತಿಯನ್ನು ಹಿಡಿದುಕೊಂಡು, ಶಿಥಿಲಾವಸ್ಥೆಯಲ್ಲಿದ್ದ ಅವರ ಮನೆಗೆ ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಬಂದಾಗ ತಾಯಿ ಮಗಳಿಬ್ಬರು ಒಬ್ಬರಿಗೊಬ್ಬರು ಆತುಕೊಂಡು ಭೀಕರವಾಗಿ ಅಳುತ್ತಿದ್ದರು.

ಮನೆಯ ಬಡತನ, ಅವರ ದೌರ್ಭಾಗ್ಯವನ್ನು ಕ್ಯಾಮೆರಾ ಕಣ್ಣು ನಿಧಾನವಾಗಿ ಚಿತ್ರೀಕರಿಸಿಕೊಂಡಿತು. ಆದರೂ ಹರಿದುಹೋಗಿದ್ದ ಗೋಡೆಗಳನ್ನು ಮರೆಮಾಚಿ, ಮನೆಯಲ್ಲಿ ಇಲ್ಲದ ಬೆಳಕನ್ನು ಕೃತಕವಾಗಿ ಸೃಷ್ಟಿಸಿ ತಾಯಿ ಮಗಳಿಬ್ಬರನ್ನ ಕೂರಿಸಿ ಮಾತನಾಡಿಸಲಾಯಿತು. ಟೇಪು ಸುತ್ತಿಯಾಗುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಆ ತಾಯಿಯ ಕಂಕುಳಲ್ಲಿದ್ದ ಒಂದು ವರ್ಷದ ಕಂದಮ್ಮ ಹಸಿವೆಯಿಂದ ಅಳಲಾರಂಭಿಸಿತು. ಮೊದಲೆ ಹಂಚಿಕಡ್ಡಿಯಂತಾಗಿದ್ದ ತಾಯಿ ಮೊಲೆಹಾಲು ಇಲ್ಲದ ಕಾರಣಕ್ಕೇನೋ, ಬಿಸಿ ನೀರನ್ನು ಆರಿಸಿ ಕಂದಮ್ಮನ ಬಾಯಿಗೆ ಬಿಡಲಾರಂಭಿಸಿದಳು. ಇದನ್ನು ನೋಡುತ್ತಿದ್ದ ಅವರಿಬ್ಬರ ಹೊಟ್ಟೆತೊಳೆಸಿದಂತಾಗಿ, ಸಮಸ್ಥ ದೌರ್ಭಾಗ್ಯಗಳೂ ಕಣ್ಣೆದುರು ವಿಕಟವಾಗಿ ನಕ್ಕಂತಾಗಿ ಮನೆಯಿಂದ ಹೊರಬಂದರು. ಮಧ್ಯಾಹ್ನದ ಊಟಕ್ಕೆಂದು ಬೆಳಗ್ಗೆ ಮಾಡಿದ ನೂರು ರೂಪಾಯಿ ಸಾಲದಲ್ಲಿ ಉಳಿದ ತೊಂಭತ್ತು ರೂಪಾಯಿಯನ್ನು ತಾಯಿಯ ಮುಂದಿಟ್ಟು ಹೊರಬಂದವರಿಗೆ ಹಗಲೇ ಕಂಡ ದುಸ್ವಪ್ನದಿಂದ ಚೇತರಿಸಿಕೊಳ್ಳುವುದಕ್ಕೆ ಸಮಯ ಬೇಕಾಯಿತು. ಇದಾದ ವಾರದ ನಂತರ ಆ ತಾಯಿಮಗಳ ಟೇಪು ಆಫೀಸಿನ ಮೂಲೆಯಲ್ಲಿ ಬಿದ್ದಿದ್ದು ಕಂಡುಬಂತು.

ಸುಮ್ಮನೆ ಕುಳಿತ ಇವನಿಗೆ ಮಾನಭಂಗಕ್ಕೀಡಾದ ಆ ಹುಡುಗಿ, ಕಂಕುಳಲ್ಲಿದ್ದ ಕಂದಮ್ಮನ ಬಾಯಿಗೆ ಬಿಸಿನೀರು ಬಿಡುತ್ತಿದ್ದ ಆ ತಾಯಿಯ ನೆನಪಾಗುತ್ತದೆ.

*

ಜನಜಂಗುಳಿಯ ಟ್ರಾಫಿಕ್ ದಾಟಿಕೊಂಡು ಪಾತಕ ಕಾರ್ಯಕ್ರಮದ ಕ್ಯಾಮೆರಾ ಆ ಏರಿಯಾ ತಲುಪುವ ಹೊತ್ತಿಗೆ ಪೊಲೀಸರು ಹೆಣವನ್ನು ಶವಪರೀಕ್ಷೆಗೆಂದು ಆಸ್ಪತ್ರ್ರೆಗೆ ಸಾಗಿಸಿದ್ದರು. ಜನನಿಬಿಡ ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೆಯೇ ಇದ್ದವು. ರಸ್ತೆಯ ಇಕ್ಕೆಲಗಳಲ್ಲಿ, ಅವರವರ ಮನೆಯ ಬಾಲ್ಕನಿಗಳಲ್ಲಿ ನಿಂತಿದ್ದ ಜನ ತಮ್ಮೆದುರೇ ಆದ ಘಟನೆಯನ್ನು ಕಣ್ಣೆವೆ ಮುಚ್ಚದೆ ನೋಡಿದ್ದರು. ಅಲ್ಲಿ ನಡೆದದ್ದು ಏನು ಎಂದರೆ ಯಾವನೋ ಒಬ್ಬನನ್ನು, ಯಾರೋ, ಯಾವುದೋ ಕಾರಣಕ್ಕೆ ನಡುಬೀದಿಯಲ್ಲಿ ಕತ್ತರಿಸಿ ಹಾಕಿದ್ದರು. ಆ ಹೊತ್ತಿಗೆ ಶಾಲೆಗೆ ಮಕ್ಕಳನ್ನು ಬಿಡಲು ಹೊರಟವರು, ಮುಂಜಾನೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರು, ಮನೆಯ ಮುಂದೆ ಹಿಂದಿನ ದಿನ ತೊಳೆದ ಹಸಿ ಬಟ್ಟೆಯನ್ನು ಹರಡುತ್ತಿದ್ದ ಗೃಹಿಣಿಯರು, ಹೀಗೆ ಅಲ್ಲಿದ್ದ ಪ್ರತಿಯೊಬ್ಬರು ಘಟನೆಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದರು.

ಕ್ಯಾಮೆರಾ ಕೊಲೆಯಾದ ಜಾಗವನ್ನು ಚಿತ್ರೀಕರಿಸಿಕೊಂಡು, ನಡೆದ ಘಟನೆಯನ್ನು ಪ್ರಾಮಾಣಿಕವಾಗಿ ವಿವರಿಸುವ ದನಿಗಾಗಿ ಹುಡುಕಾಡುತ್ತಿತ್ತು. ಅಷ್ಟೊತ್ತಿಗಾಗಲೇ ಇಂತಹ ಹಲವಾರು ಕ್ಯಾಮೆರಾಗಳಿಗೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ ಗೃಹಿಣಿಯ ಮುಂದೆ ಮೈಕ್ ಇಟ್ಟು ಪ್ರಶ್ನೆಯೊಂದನ್ನ ಹಾಕಲಾಯಿತು. ಆಕೆ ಹೇಳಿದ್ದಿಷ್ಟು...

ನಾನು ಮನೆಯ ಮುಂದೆ ಬಟ್ಟೆ ಹರಡುತ್ತಿದ್ದೆ. ಜನ ಕೂಗಿಕೊಂಡರು. ತಿರುಗಿ ನೋಡಿದರೆ, ಅದೇ ಆ ದೇವಸ್ಥಾನವಿದೆಯಲ್ಲ, ಅದರ ಎದುರಿಗೆ ಒಬ್ಬ ಓಡಿಕೊಂಡು ಬಂದು ಬಿದ್ದು ಬಿಟ್ಟ. ಅವನ ಹಿಂದೆ ಮಚ್ಚು ಲಾಂಗುಗಳನ್ನು ಹಿಡಿದುಕೊಂಡು ನಾಲ್ಕಾರು ಜನ ಅಟ್ಟಿಸಿಕೊಂಡು ಬರುತ್ತಿದ್ದರು. ಅವನು ಕೆಳಗೆ ಬೀಳುತ್ತಿದ್ದಂತೆ ಅವರೆಲ್ಲಾ ಅವನ ಮೇಲೆ ಲಾಂಗು ಬೀಸಿ ಓಡಿಹೋದರು. ಸ್ವಲ್ಪ ಹೊತ್ತು ಒದ್ದಾಡಿದ ಅವನು ನಂತರ ಸುಮ್ಮನಾದ. ಯಾರೋ ಪೊಲೀಸರಿಗೆ ಫೋನ್ ಮಾಡಿದರು. ಅವರು ಬಂದು ಹೆಣ ತೆಗೆದುಕೊಂಡು ಹೋದರು. ಎಲ್ಲಾ ಟೀವಿಲಿ ನೋಡಿದಂಗೆ ಆಯ್ತು.

ಸುಮ್ಮನೆ ಕುಳಿತ ಇವನಿಗೆ ಟೀವಿಯ ನೆನಪಾಗುತ್ತದೆ.

(ಇದು ಪತ್ರಕರ್ತರೊಬ್ಬರು ಕಳಿಸಿದ ಬರಹ. ಈ ಅನುಭವ ಯಾರದ್ದಾದರೂ ಆಗಿರಬಹುದಾದ್ದರಿಂದ ಹೆಸರು ಹಾಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ ಅವರು.)

Thursday, March 3, 2011

ಚಿದಾನಂದರಿಗೆ ಆಗಿದ್ದು ಅವಮಾನವಾದರೆ, ಚಂಪಾರಿಗೆ ಆಗಿದ್ದು ಅವಮಾನವಲ್ಲವೆ?


ಆದಿಕವಿ ಪಂಪ ಪ್ರಶಸ್ತಿ ಅಂತ್ಯ ಕವಿ ಚಂಪಾಗೆ ಏಕಿಲ್ಲ? ಎಂಬ ವಿಶೇಷ ಸುದ್ದಿ ನಿನ್ನೆ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ. ಕನ್ನಡಪ್ರಭದ ಸಹಾಯಕ ಸಂಪಾದಕ ಪಿ.ತ್ಯಾಗರಾಜ್ ಇದನ್ನು ಬರೆದಿದ್ದಾರೆ. ಕನ್ನಡಪ್ರಭ ಇವತ್ತಿನ ಸಂಚಿಕೆಯಲ್ಲಿ ಈ ವರದಿಯ ಕುರಿತು ಕೆಲವು ಪ್ರತಿಕ್ರಿಯೆಗಳನ್ನೂ ಪ್ರಕಟಿಸಲಾಗಿದೆ.

ಇತ್ತೀಚಿಗಷ್ಟೆ ಡಾ.ಎಂ.ಚಿದಾನಂದ ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರು ವಿವಾದಕ್ಕೆ ಗುರಿಯಾಗಿದ್ದರು. ಈ ಸಂಬಂಧ ದೊಡ್ಡ ಹಾಹಾಕಾರವೇ ಉಂಟಾಯಿತು. ಪ್ರಜಾವಾಣಿ ಪತ್ರಿಕೆ ಮೊದಲು ಈ ವಿವಾದದ ಕುರಿತು ಸ್ಪಂದಿಸಿ, ಹಲವು ಗಣ್ಯರನ್ನು ಮಾತನಾಡಿಸಿ ರಾಜ್ಯಪಾಲರ ನಡೆಯ ಕುರಿತು ಬೆಳಕು ಚೆಲ್ಲಿತು. ನಂತರ ಇತರ ಮೀಡಿಯಾಗಳು ಸಹ ಈ ಕುರಿತು ಹೆಚ್ಚು ಪ್ರಚಾರ ನೀಡಿದವು.

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಅನಾರೋಗ್ಯವಿದ್ದರೂ ಕವಿಗೋಷ್ಠಿಗೆ ಬಂದಿದ್ದೇನೆ, ಇದನ್ನು ಹೇಳಲೇಬೇಕು ಎಂದು ಇಲ್ಲಿಗೆ ಬಂದೆ ಎಂದು ಅವರು ವಿಷಯದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದ್ದರು. ಅದಾದ ನಂತರ ಒಂದಷ್ಟು ಪ್ರತಿಭಟನೆಗಳೂ ನಡೆದವು. ಸಾಹಿತ್ಯ ಸಮ್ಮೇಳನದ ಸಮಾರೋಪದ ಹೊತ್ತಿಗೆ ಒಂದಷ್ಟು ಜನ  ಭಿತ್ತಿಪತ್ರಗಳನ್ನು ಹಿಡಿದು ನಿಂತು ಸಮ್ಮೇಳನದಲ್ಲಿ ರಾಜ್ಯಪಾಲರ ತೀರ್ಮಾನದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರವಾಗಬೇಕು ಎಂದು ಪ್ರತಿಭಟಿಸಿದರು. ಸಮ್ಮೇಳನದ ವೇದಿಕೆಯಲ್ಲಿ ಈ ಕುರಿತು ನಿರ್ಣಯವೂ ಅಂಗೀಕಾರವಾಯಿತು.

ಈಗ ಚಂಪಾ ಸರದಿ. ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರ ಕ್ರಮ ಇಡೀ ರಾಜ್ಯಕ್ಕಾದ ಅವಮಾನವಾದರೆ ಚಂಪಾ ಅವರಿಗೆ ಪಂಪ ಪ್ರಶಸ್ತಿ ಕೊಡಲು ಒಪ್ಪದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕ್ರಮ ರಾಜ್ಯಕ್ಕೆ ಮಾಡಿದ ಅಪಮಾನವಲ್ಲವೆ?

ಈ ಎರಡೂ ಘಟನೆಗಳಿಗೆ ಏನಾದರೂ ವ್ಯತ್ಯಾಸವಿದೆಯೇ? ಹಾಗೆ ನೋಡಿದರೆ, ಗೌರವ ಡಾಕ್ಟರೇಟ್‌ಗಿಂತ ಪಂಪ ಪ್ರಶಸ್ತಿಯೇ ದೊಡ್ಡದು. ಸಿಂಡಿಕೇಟ್ ನಿರ್ಧಾರವನ್ನು ತಳ್ಳಿಹಾಕುವ ಅಧಿಕಾರ ರಾಜ್ಯಪಾಲರಿಗಿರುತ್ತದೆ. ಆದರೆ ಗಣ್ಯರ ಸಮಿತಿ ಪಂಪ ಪ್ರಶಸ್ತಿಗೆ ಒಬ್ಬ ಹಿರಿಯ ಸಾಹಿತಿಯನ್ನು ಆಯ್ಕೆ ಮಾಡಿದ ನಂತರ ಅದನ್ನು ತಿರಸ್ಕರಿಸುವ ನೈತಿಕ ಅಧಿಕಾರ ಒಬ್ಬ ಮುಖ್ಯಮಂತ್ರಿಗೆ ಇರುವುದಿಲ್ಲ.

ಚಿದಾನಂದಮೂರ್ತಿಗಳ ಚಿಂತನೆಗಳ ಬಗ್ಗೆ ತೀವ್ರಸ್ವರೂಪದ ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಸಹ, ಅವರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಹಿನ್ನೆಲೆಯಲ್ಲಿ  ಡಾಕ್ಟರೇಟ್  ತಡೆಹಿಡಿದದ್ದು ತಪ್ಪು ಎಂದರು. ಇದೇ ಮಾನದಂಡವಿಟ್ಟುಕೊಂಡು ಚಂಪಾ ಕುರಿತು ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಮುಖ್ಯಮಂತ್ರಿಗಳ ನಿಲುವನ್ನು ಖಂಡಿಸಬೇಕಿತ್ತಲ್ಲವೇ? ಅಷ್ಟಕ್ಕೂ ಕನ್ನಡ ಸಾಹಿತ್ಯಕ್ಕೆ, ಚಳವಳಿಗೆ ಚಂಪಾ ಅವರ ಕೊಡುಗೆಯೇನು ಕಡಿಮೆಯೇ?

ಚಿದಾನಂದ ಮೂರ್ತಿಗಳ ವಿಷಯದಲ್ಲಿ ಎದ್ದ ವಿವಾದ, ಹಾಹಾಕಾರ ಈಗೇಕೆ ಆಗುತ್ತಿಲ್ಲ? ಯಾಕೆ ಡಾ.ಯು.ಆರ್.ಅನಂತಮೂರ್ತಿ ಮೌನವಾಗಿದ್ದಾರೆ? ಯಾಕೆ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಭಿತ್ತಿ ಪತ್ರ ಹಿಡಿದು ತಂದವರು ಎಲ್ಲಿ ಹೋದರು? ಮೈಸೂರು ಚೌಕದಲ್ಲಿ ಪ್ರತಿಭಟನೆ ನಡೆಸಿದವರೇಕೆ ಬಾಯಿಬಿಡುತ್ತಿಲ್ಲ?

ಬೇರೆಯವರ ವಿಷಯ ಹಾಗಿರಲಿ, ಕನ್ನಡಪ್ರಭ ಹೊರತುಪಡಿಸಿ ಉಳಿದ ಮೀಡಿಯಾಗಳು ಯಾಕೆ ಸುಮ್ಮನಿವೆ? ಇದು ಕನ್ನಡಪ್ರಭ ಹೊರಗೆ ತೆಗೆದ ಸುದ್ದಿ ಎಂಬ ಕಾರಣಕ್ಕೆ ಈ ಮೌನವೇ? ಯಾರು ಬೆಳಕಿಗೆ ತಂದರೇನು ಸುದ್ದಿ ಸುದ್ದಿಯೇ ಅಲ್ಲವೇ? ಇದರಲ್ಲಿ ಎಂಥ ಇಗೋಯಿಸಂ?

ಒಂದು ವೇಳೆ ಇದೇ ಕಾರಣಕ್ಕೆ ಬೇರೆ ಮಾಧ್ಯಮಗಳು ಪಂಪ ಪ್ರಶಸ್ತಿ ಕುರಿತ ವಿವಾದವನ್ನು ನಿರ್ಲಕ್ಷಿಸುತ್ತಿದ್ದರೆ, ಈ ಹುಸಿಪ್ರತಿಷ್ಠೆಯನ್ನು ಈ ಮೀಡಿಯಾಗಳು ಬಿಡುವುದು ಯಾವಾಗ?

Wednesday, March 2, 2011

ನೈಜ ಹಿಂದುತ್ವವಾದಿಗಳು... ಹುಸಿ ಹಿಂದುತ್ವವಾದಿಗಳು...




Dude you are making allegations against a person but not addressing the issues raised by him. What's wrong in being pro-hindu? Even the mahatma said "I am proud to be a Hindu." Now would you say that a Hindu can't be secular? Secularism doesn't mean that you should not practice any religion, it means having tolerance towards the other religions. Would you say that no forced religion conversion is going on in the country? You have all problems with saffron band but you are dumb about others. In a secular country(?) there's a political party called Muslim League. When ML is not wrong why or how the others are wrong? Recently you media people made a huge cry against hindu terrorists but at the same time you are dumb about Afzal Guru. A terrorist is a terrorist. You(media) mention about hindu terrorists but when the terrorist belongs to someother religion you say that terrorists do not have any religion. Why such double standards?

                                                                                              - Ravi Sondur


ರವಿ ಸೊಂಡೂರ್ ಎಂಬುವವರು ಸಂಪಾದಕೀಯದ ಪೋಸ್ಟ್ ಒಂದಕ್ಕೆ ಫೇಸ್‌ಬುಕ್‌ನಲ್ಲಿ ನೀಡಿರುವ ಪ್ರತಿಕ್ರಿಯೆ ಇದು. ಇಂಥ ವಿಷಯಗಳಿಗೆ ಸಂಬಂಧಿಸಿದ ಕೆಲವು ಪ್ರತಿಕ್ರಿಯೆಗಳು ಓದುವುದಕ್ಕೂ ಅಸಹ್ಯವೆನಿಸುತ್ತದೆ, ಹೀಗಾಗಿ ಅವುಗಳಿಗೆ ಪ್ರತಿಕ್ರಿಯೆ ನೀಡಬೇಕೆನಿಸುವುದಿಲ್ಲ. ಆದರೆ ರವಿ ಸೊಂಡೂರ್ ಸಹನೀಯವಾದ ಭಾಷೆಯನ್ನು ಬಳಸಿದ್ದಾರೆ. ಹೀಗಾಗಿ ಅವರಿಗೆ ಉತ್ತರಿಸಬೇಕು ಅನ್ನಿಸಿದೆ.

ಡಾ.ಎಂ.ಚಿದಾನಂದ ಮೂರ್ತಿಯವರು ಇತ್ತೀಚಿಗೆ ಬರೆದ ಒಂದು ಓದುಗರ ಪತ್ರ ಹಾಗು ಪತ್ರಿಕಾಗೋಷ್ಠಿಯೊಂದರಲ್ಲಿ ಬಳಸಿದ ಭಾಷೆಯ ಕುರಿತಾಗಿ ಎರಡು ಪ್ರತ್ಯೇಕ ಪೋಸ್ಟ್‌ಗಳನ್ನು ಪ್ರಕಟಿಸಿದ್ದೆವು. ಈ ಎರಡರ ಕುರಿತಾಗಿ ಹಲವರಿಗೆ ಆಕ್ಷೇಪಣೆಗಳಿವೆ. ಬಹುಮುಖ್ಯವಾದ ಆಕ್ಷೇಪವೆಂದರೆ ಚಿದಾನಂದಮೂರ್ತಿಯವರು ಎತ್ತಿದ ಮತಾಂತರದ ಮೂಲ ಪ್ರಶ್ನೆಯನ್ನೇಕೆ ನೀವು ಚರ್ಚೆಯ ವಿಷಯವಾಗಿಸಿಲ್ಲ ಎಂಬುದು. ರವಿಯವರ ಆಕ್ಷೇಪವೂ ಅಲ್ಲಿಂದಲೇ ಶುರುವಾಗುತ್ತದೆ.

ಒಂದನ್ನು ಸ್ಪಷ್ಟಪಡಿಸಲೇಬೇಕು. ಮತಾಂತರದ ಕುರಿತ ಚರ್ಚೆ ನಮ್ಮ ಉದ್ದೇಶವಾಗಿರಲಿಲ್ಲ. ಚಿದಾನಂದ ಮೂರ್ತಿಯವರು ತಮ್ಮ ಓದುಗರ ಪತ್ರದಲ್ಲಿ ಒಂದು ಸಮುದಾಯದ ಕುರಿತಾಗಿ ಬಳಸಿದ ವಾಕ್ಯಗಳು ಗಾಬರಿ ಹುಟ್ಟಿಸುವಂತಿತ್ತು. ಇಂಥ ಜನಾಂಗೀಯ ದ್ವೇಷದ ಮಾತುಗಳನ್ನು ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಒಪ್ಪಲು ಸಾಧ್ಯವಿಲ್ಲ. ಇದಾದ ನಂತರ ಅವರು ಕ್ರಿಶ್ಚಿಯನ್ನರೇ ಕೋಮುವಾದಿಗಳು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ ಮಾತನ್ನೂ ಸಹ ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ಮತಾಂತರ, ಗೋಹತ್ಯೆ ನಿಷೇಧದ ಕುರಿತು ಚಿದಾನಂದ ಮೂರ್ತಿಯವರಾಗಲಿ, ಈ ಕುರಿತು ಕಾಳಜಿ ಹೊಂದಿರುವ ಯಾವುದೇ ಸಂಘಟನೆ-ವ್ಯಕ್ತಿಗಳಾಗಲಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲು ಅವರು ಸ್ವತಂತ್ರರು. ಅದರಲ್ಲಿ ಎರಡು ಮಾತಿಲ್ಲ. ಪ್ರತಿಭಟನೆಗೆ ನಾನಾ ಬಗೆಯ ಮಾರ್ಗಗಳು ಇವೆ. ಆದರೆ ಇದೇ ನೆಪವನ್ನಿಟ್ಟುಕೊಂಡು ಮೂರನೇ ದರ್ಜೆಯ ಬಾಲಿಷ ಹೇಳಿಕೆಗಳನ್ನು ಚಿದಾನಂದಮೂರ್ತಿಯವರಂಥ ಹಿರಿಯರು ನೀಡಬಹುದೆ? ಕಸದ ಬುಟ್ಟಿಗೆ ಲಾಯಕ್ಕಾದ ಇಂಥ ಓದುಗರ ಪತ್ರಗಳನ್ನು ಪತ್ರಿಕೆಗಳು ಪ್ರಕಟಿಸಬೇಕೆ ಎಂಬುದಷ್ಟೆ ನಮ್ಮ ಪ್ರಶ್ನೆಯಾಗಿತ್ತು.

ಹಿಂದುತ್ವವಾದಿಯಾಗಿರುವುದರಲ್ಲಿ ಯಾವ ತಪ್ಪಿದೆ ಎಂದು ರವಿ ಸೊಂಡೂರ್ ಪ್ರಶ್ನಿಸುತ್ತಾರೆ. ಯಾವ ತಪ್ಪೂ ಇಲ್ಲ ಎಂಬುದು ನಮ್ಮ ಉತ್ತರ. ಹಿಂದುತ್ವವಾದಿಗಳು ಇಸ್ಲಾಂ, ಕ್ರಿಶ್ಚಿಯನ್ ದ್ವೇಷಿಗಳಾಗಿದ್ದರೆ ಆಗ ಸಮಸ್ಯೆ ಉದ್ಭವಿಸುತ್ತದೆ. ಅದೇ ರೀತಿ ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂಗಳ ದ್ವೇಷಿಯಾದರೂ ಅದು ಸಮಸ್ಯೆಯೇ ಆಗಿರುತ್ತದೆ. ನಿಜವಾದ ಹಿಂದುತ್ವವಾದಿಗಳು ಈ ಬಗೆಯ ಪರಧರ್ಮ ವಿರೋಧಿ ನೆಲೆಯಿಂದಲೇ ಉದ್ಭವಿಸಬೇಕಾಗಿಲ್ಲ. ಎಲ್ಲ ಹಿಂದುತ್ವವಾದಿಗಳು ಈ ಬಗೆಯ ದ್ವೇಷವನ್ನು ಬೆಳೆಸಿಕೊಂಡಿದ್ದರೆ ಭಾರತ ದೇಶ ಇಷ್ಟು ಹೊತ್ತಿಗೆ ಒಡೆದು ಚೂರುಚೂರಾಗಬೇಕಿತ್ತು.

ಹಿಂದೂಗಳು ಸೆಕ್ಯುಲರ್ ಅಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಹಿಂದೂಗಳಲ್ಲಿ ಒಂದು ಸಣ್ಣ ಪ್ರಮಾಣದ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಸೆಕ್ಯುಲರ್ ಆಗಿದ್ದಾರೆ. ಇವರೇ ನಿಜವಾದ ಹಿಂದೂಗಳು.

ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದು ಯಾವ ಹಿಂದೂ ಧರ್ಮವನ್ನು ಎಂಬುದನ್ನು ನಾವು ಮೊದಲು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ವಿವೇಕಾನಂದರನ್ನು ನಿಜವಾದ ಹಿಂದುತ್ವದ ಮುಖವಾಣಿಯನ್ನಾಗಿ ನಾವು ಗ್ರಹಿಸಬೇಕು. ವೇದಾಂತದ ಮೆದುಳು, ಇಸ್ಲಾಂನ ದೇಹ ಎರಡೂ ಒಂದಾದರೆ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂದು ಹೇಳಿದವರು ವಿವೇಕಾನಂದರು. ಮಾಂಸದಂಗಡಿಗಳನ್ನು, ಹಸಿರು ಧ್ವಜಗಳನ್ನು ನೋಡಿ ಖಿನ್ನತೆಗೆ ಒಳಗಾಗುವರಿಗೆ ಇದು ಅರ್ಥವಾಗುವುದು ಹೇಗೆ? ಇವತ್ತು ಸ್ವಾಮಿ ವಿವೇಕಾನಂದರೇ ಸೊ ಕಾಲ್ಡ್ ಹಿಂದುತ್ವವಾದಿಗಳಿಗೆ ಬೇಕಾಗಿಲ್ಲ, ಅದು ನಿಜವಾದ ಸಮಸ್ಯೆಗೆ ಕಾರಣ.

ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಮಹಾತ್ಮಗಾಂಧಿಯವರೇ ಹೇಳಿದ್ದರು ಎಂದು ರವಿ ಹೇಳುತ್ತಾರೆ. ಇಂಥ ಹೆಮ್ಮೆಯ ಹಿಂದೂವನ್ನು ಕೊಂದವರೂ ಹಿಂದೂ ಮೂಲಭೂತವಾದಿಗಳು ಎಂಬುದನ್ನು ಮರೆಯುವಂತಿಲ್ಲ. ಗಾಂಧೀಜಿಯವರ ಹಿಂದೂ ಧರ್ಮವೇ ಬೇರೆ, ಅವರನ್ನು ಕೊಂದವರ ಹಿಂದೂ ಧರ್ಮವೇ ಬೇರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ತೀರಾ ಅಗತ್ಯ. ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಸರಿಯಾದ ಅರ್ಥದಲ್ಲಿ ಗೊತ್ತುಮಾಡಿಕೊಳ್ಳುವುದೂ ಸಹ ಅನಿವಾರ್ಯ.

ದೇಶದಲ್ಲಿ ಬಲವಂತದ ಮತಾಂತರ ನಡೆಯುತ್ತಿಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಮತಾಂತರ-ಧರ್ಮಾಂತರಗಳು ಕಾಲಕಾಲಕ್ಕೆ ಸಮಾಜದಲ್ಲಿ ಸಂಭವಿಸಿಕೊಂಡು ಬರುವ ಸಹಜ ಪ್ರಕ್ರಿಯೆಗಳು. ಇಡೀ ಜಗತ್ತಿನಲ್ಲಿ ಎಲ್ಲೆಡೆ ಇಂಥವು ನಡೆದುಕೊಂಡೇ ಬಂದಿರುವುದನ್ನು ನಾವು ನೋಡಿದ್ದೇವೆ, ಭಾರತವೂ ಇದಕ್ಕೆ ಹೊರತೇನಲ್ಲ.

ಆದರೆ ಬಲವಂತದ ಮತಾಂತರ ಎಂಬುದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುತ್ತದೆ. ಆಮಿಷದಿಂದ ನಡೆಸುವ ಮತಾಂತರವೂ ಬಹಳ ಸ್ಪಷ್ಟವಾಗಿ ವಂಚನೆಯೇ ಆಗುತ್ತದೆ. ಬಲವಂತದ ಮತಾಂತರವನ್ನಾಗಲಿ, ಆಮಿಷದಿಂದ ನಡೆಯುವ ಮತಾಂತರವನ್ನಾಗಲಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ, ಸಮರ್ಥಿಸಿಕೊಳ್ಳಲೂಬಾರದು. ಕ್ರಿಶ್ಚಿಯನ್ನರ ಕೆಲವು ಸಣ್ಣ ಪಂಥಗಳು ಇಂಥ ಕ್ರಿಯೆಗಳಲ್ಲಿ ತೊಡಗಿವೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಪದೇಪದೇ ಕೇಳಿಬರುತ್ತಿದೆ. ಇಂಥವು ನಡೆಯುತ್ತಿದ್ದರೆ, ಅದನ್ನು ತಡೆಯಲು ನಮ್ಮಲ್ಲಿ ಇರುವ ಲಭ್ಯ ಕಾನೂನುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಹೊರತಾಗಿ ಚರ್ಚ್‌ಗಳ ಮೇಲೆ ದಾಳಿ ನಡೆಸುವುದು, ಏಸುಮೂರ್ತಿಯನ್ನು ಭಗ್ನಗೊಳಿಸುವುದು, ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸುವುದರಿಂದ ಮತಾಂತರವನ್ನು ತಡೆಗಟ್ಟುತ್ತೇವೆ ಎನ್ನುವುದು ಮೂರ್ಖತನ. ಹಾಗೆ ಮಾಡುವವರು ನೈಜ ಹಿಂದುತ್ವವಾದಿಗಳಾಗಲು ಹೇಗೆ ಸಾಧ್ಯ? ಇಂಥ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಿಶ್ಚಿಯನ್ನರು ಪ್ರತಿಭಟಿಸಿದರೆ ಅದರಿಂದ ಚಿದಾನಂದಮೂರ್ತಿಯಂಥವರು ಯಾಕಷ್ಟು ಕಳವಳಕ್ಕೆ ಈಡಾಗುತ್ತಾರೆ? ಯಾಕೆ ಅವರ ಕಣ್ಣಿಗೆ ಹೀಗೆ ಪ್ರತಿಭಟಿಸಿದವರೆಲ್ಲ ಕೋಮುವಾದಿಗಳ ಹಾಗೆ ಕಾಣುತ್ತಾರೆ? ಇದು ನಮ್ಮ ಪ್ರಶ್ನೆ.

ಸೆಕ್ಯುಲರ್ ದೇಶದಲ್ಲಿ ಮುಸ್ಲಿಂ ಲೀಗ್‌ನಂಥ ಪಕ್ಷಗಳೂ ಇವೆ, ಅವುಗಳ ಕುರಿತು ಇಲ್ಲದ ಆಕ್ಷೇಪ ಇತರ ಪಕ್ಷಗಳ (ಬಹುಶಃ ಬಿಜೆಪಿ-ಶಿವಸೇನೆ ಇರಬಹುದು) ಮೇಲೆ ಏಕೆ ಎಂದು ರವಿ ಪ್ರಶ್ನಿಸುತ್ತಾರೆ. ಮುಸ್ಲಿಂ ಲೀಗ್ ಪಕ್ಷವನ್ನು ಈ ದೇಶದ ಮುಸ್ಲಿಮರೆಲ್ಲ ಒಪ್ಪಿಕೊಂಡಿಲ್ಲ. ಹಾಗೆ ಒಪ್ಪಿಕೊಂಡಿದ್ದರೆ ಅದು ಸಹ ಒಂದು ರಾಷ್ಟ್ರೀಯ ಪಕ್ಷವಾಗಿರುತ್ತಿತ್ತು, ಕೇರಳದ ಯಾವುದೋ ಮೂಲೆಗೆ ಸೀಮಿತವಾಗಬೇಕಿರಲಿಲ್ಲ. ಧರ್ಮದ ನೆಲೆಯಲ್ಲಿ ಸ್ಥಾಪನೆಯಾಗುವ ರಾಜಕೀಯ ಪಕ್ಷಗಳು ಅಪಾಯಕಾರಿ. ಅದಕ್ಕೆ ಮುಸ್ಲಿಂ ಲೀಗೂ ಹೊರತಲ್ಲ, ರವಿ ಅವರು ಸೂಚಿಸುವ ಇತರ ಪಕ್ಷಗಳೂ ಹೊರತಲ್ಲ.

ಇನ್ನು ಭಯೋತ್ಪಾದನೆಯ ಕುರಿತೂ ರವಿ ಹೇಳುತ್ತಾರೆ. ಅವರ ಪ್ರಶ್ನೆಯಲ್ಲೇ ಉತ್ತರವಿದೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದು ಸೆಕ್ಯುಲರಿಸ್ಟರ ನಂಬಿಕೆ. ಭಯೋತ್ಪಾದಕರೆಲ್ಲ ಮುಸ್ಲಿಮರು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಈಗ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅಫ್ಜಲ್ ಗುರು, ಸಾಧ್ವಿ ಪ್ರಜ್ಞಾಸಿಂಗ್, ಕಸಬ್, ಆಸೀಮಾನಂದ ಎಲ್ಲರೂ ಒಂದೇ ತಳಿಯವರು. ಧರ್ಮದ ಆಫೀಮನ್ನು ಮೈಗೇರಿಸಿಕೊಂಡು ಅಮಾಯಕರ ಬಲಿ ತೆಗೆದುಕೊಂಡವರು. ದೇಶದ ಕಾನೂನು ಇವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಶಿಕ್ಷೆಯನ್ನು ಕೊಡಬೇಕು, ಕೊಡುತ್ತದೆ. ರವಿ ಅವರು ಹೇಳುವಂತೆ ಮೀಡಿಯಾಗಳು ಡಬಲ್ ಸ್ಟಾಂಡರ್ಡ್ ಇಟ್ಟುಕೊಳ್ಳುವುದು ಬೇಡ ಎಂದು ನಾವೂ ಹೇಳುತ್ತಿದ್ದೇವೆ. ಇಸ್ಲಾಂ ಭಯೋತ್ಪಾದನೆ ಎಂದು ನೀವು ಹೇಳುವುದಾದರೆ ಹಿಂದೂ ಭಯೋತ್ಪಾದನೆ ಎಂದೂ ಸಹ ಹೇಳಬೇಕಾಗುತ್ತದೆ. ಹೇಳುವುದಿದ್ದರೆ ಎರಡನ್ನೂ ಹೇಳಿ. ಇಲ್ಲದಿದ್ದರೆ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಒಪ್ಪಿಕೊಂಡು ಭಯೋತ್ಪಾದಕರನ್ನು ಧರ್ಮದ ಹೆಸರಲ್ಲಿ ಗುರುತಿಸಬೇಡಿ ಎಂಬುದು ನಮ್ಮ ಸಲಹೆ. ರವಿ ಅವರ ಮಾತು ಕೂಡ ಇದನ್ನು ಸಮರ್ಥಿಸುತ್ತದೆ.
ರವಿ ಸೊಂಡೂರ್

ಎಲ್ಲ ಧರ್ಮಗಳೂ ಜಡವಾಗಿ ಹೋಗಿವೆ. ಕಾಲ ಬದಲಾದಂತೆ ಧರ್ಮಗಳೂ ಅಪ್‌ಡೇಟ್ ಆಗಬೇಕಿತ್ತು. ಆದರೆ ಧರ್ಮಗಳು ನಿಂತಿರುವುದು ಎಂದೋ ಯಾರೋ ಕಟ್ಟಿಕೊಟ್ಟ ಸೂತ್ರಗಳನ್ನು ಹಿಡಿದು. ನಾವು ಕುರುಡಾಗಿ ಅವುಗಳಿಗೆ ತಲೆಯೊಡ್ಡಿದ್ದೇವೆ. ಈ ಸೂತ್ರಗಳೇ ಇಂದು ನಮ್ಮ ಕೊರಳಿಗೆ ಉರುಳಾಗಿವೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳೂ ಇಂದು ಜಡವಾಗಿವೆ. ಚಲನಶೀಲತೆಯಿಲ್ಲದ ಧರ್ಮಗಳು ನಮ್ಮನ್ನು ಬೌದ್ಧಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಸಲಾರವು. ಇವತ್ತು ಕೋಮುವಾದ, ಭಯೋತ್ಪಾದನೆ, ಬಲವಂತದ ಮತಾಂತರ ಮತ್ತಿತರ ಸಮಸ್ಯೆಗಳಿಗೆ ಇದು ಮೂಲ. ಧರ್ಮದ ವ್ಯಾಖ್ಯೆಗಳನ್ನು ಪುನರ್ ನಿರ್ಮಿಸಿಕೊಳ್ಳದ ಹೊರತು, ಎಲ್ಲ ಧರ್ಮಗಳ ಒಳಗಿನ ಪುರೋಹಿತಶಾಹಿ ಯಥಾಸ್ಥಿತಿವಾದಿಗಳನ್ನು ಹೊರಗೆ ಎಸೆಯದ ಹೊರತು ಈ ಸಮಸ್ಯೆಗಳು ಪರಿಹಾರವಾಗದು.

ಅದನ್ನೇ ವಿವೇಕಾನಂದರು ಪ್ರತಿಪಾದಿಸಿದ್ದರು. ಈ ದೇಶದ ಅಮಾಯಕ ಜನರ ಪ್ರಾಣ ಹಿಂಡುತ್ತಿರುವ ಪುರೋಹಿತಶಾಹಿಗಳನ್ನು ಒದ್ದೋಡಿಸದ ಹೊರತು ದೇಶ ಉದ್ಧಾರವಾಗಲಾರದು ಎಂದು ಅವರು ಗುಡುಗಿದ್ದರು. ವಿವೇಕಾನಂದರು ಹೇಳಿದಂತೆ ಯಥಾಸ್ಥಿತಿವಾದಿ ಶಕ್ತಿಗಳನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು, ಬೌದ್ಧರು, ಜೈನರು ಮತ್ತು ಎಲ್ಲರೂ ತಮ್ಮ ತಮ್ಮ ಧರ್ಮಗಳಿಂದ ಉಚ್ಛಾಟಿಸಬೇಕಿದೆ.

ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.