Monday, May 23, 2011

ಜಗತ್ತು ಜೀವಂತವಾಗಿದೆ, ಪ್ರಳಯ ಸಿದ್ಧಾಂತಿಗಳು ಬೆತ್ತಲಾಗಿದ್ದಾರೆ


ಅನಾಹುತಕಾರಿ ಪ್ರಳಯ ಸಿದ್ಧಾಂತಿಗಳು ಮತ್ತೆ ಬೆತ್ತಲಾಗಿದ್ದಾರೆ. ಮೇ.೨೧ಕ್ಕೆ ಜಗತ್ತು ಸರ್ವನಾಶವಾಗಲಿದೆ, ಹಾಗಂತ ಬೈಬಲ್‌ನಲ್ಲಿ ಬರೆಯಲಾಗಿದೆ ಎಂದು ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದ್ದವರಿಗೆ ಈಗ ಮುಖವಿಲ್ಲ. ಇಂಥವರನ್ನು ನಂಬುವ ಅಮಾಯಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮುಂದೆಯಾದರೂ ಇಂಥವರ ಮಾತನ್ನು ನಂಬುವುದನ್ನು ಈ ಜನರು ಬಿಡುತ್ತಾರಾ? ಖಂಡಿತಾ ಇಲ್ಲ.


ಕ್ಯಾಲಿಫೋರ್ನಿಯಾದ ಫ್ಯಾಮಿಲಿ ರೇಡಿಯೋ ನೆಟ್‌ವರ್ಕ್ ಮೂಲಕ ೮೯ ವರ್ಷದ ನಿವೃತ್ತ ಸಿವಿಲ್ ಇಂಜಿನಿಯರ್ ಕ್ಯಾಂಪಿಂಗ್ ಈ ಪ್ರಳಯದ ವಾದವನ್ನು ಮಂಡಿಸಿದ್ದ.  ಈ ರೇಡಿಯೋ ನೆಟ್‌ವರ್ಕ್ ಅಮೆರಿಕದಾದ್ಯಂತ ಸುಮಾರು ೧೫೦ ರೇಡಿಯೋ ಸ್ಟೇಷನ್‌ಗಳನ್ನು ಹೊಂದಿದೆಯಲ್ಲದೆ, ಯೂರೋಪ್‌ನ ಹಲವು ದೇಶಗಳಲ್ಲೂ ತನ್ನ ಜಾಲವನ್ನು ಹೊಂದಿತ್ತು.


ಮೇ.೨೧ರ ಸಂಜೆ ೬ ಗಂಟೆಗೆ ಜಗತ್ತು ಅಂತ್ಯಗೊಳ್ಳಲಿದೆ ಎಂದು ಈ ರೇಡಿಯೋ ಒಂದು ವರ್ಷದಿಂದ ಪ್ರಚಾರ ನಡೆಸಿತ್ತು. ಇದನ್ನು ನಂಬಿಕೊಂಡೇ ೨೦೧೨ಕ್ಕೆ ಜಗತ್ತು ಕೊನೆಗೊಳ್ಳಲಿದೆ ಎನ್ನುತ್ತಿದ್ದವರು ನಂತರ ಈ ವರ್ಷವೇ ಮೇ.೨೧ಕ್ಕೆ ಎಲ್ಲ ಮುಗಿಯುತ್ತದೆ ಎಂದು ಹೇಳಲಾರಂಭಿಸಿದ್ದರು. ವಿಚಿತ್ರವೆಂದರೆ ಇದನ್ನು ಕೋಟ್ಯಂತರ ಜನರು ಪ್ರಳಯ ಆಗೇ ತೀರುತ್ತದೆ ಎಂದುಕೊಂಡಿದ್ದರು.


ಕ್ಯಾಂಪಿಂಗ್ ಇದೇ ರೀತಿ ೧೯೯೪ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳಿದ್ದ. ಆಗಲೂ ಸಹ ಬೈಬಲ್‌ನಲ್ಲಿ ಹಾಗೆ ಬರೆಯಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ. ೧೯೯೪ರಲ್ಲಿ ಏನೂ ಆಗದೇ ಹೋದಾಗ, ನನ್ನ ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಪ್ರಳಯ ಆಗೋದು ೨೦೧೧ರ ಮೇ.೨೧ರಂದು ಎಂದು ಪ್ರಳಯದ ದಿನಾಂಕವನ್ನು ಮುಂದಕ್ಕೆ ಹಾಕಿದ್ದ.


ಈಗ ಫ್ಯಾಮಿಲಿ ರೇಡಿಯೋ ಹೇಳಿದ್ದೆಲ್ಲ ಠುಸ್ ಆಗಿದೆ. ಆದರೆ ತಮಾಶೆಯೆಂದರೆ ಡೊನೇಷನ್ ಗಳ ಮೂಲಕ ಸಂಗ್ರಹಿಸಿದ ಹಣದಿಂದ ರೇಡಿಯೋ ಆಸ್ತಿಪಾಸ್ತಿ ಮಾತ್ರ ಗಗನಕ್ಕೇರಿದೆ. ಅದರ ಆಸ್ತಿ ಮೌಲ್ಯ ಈಗ ೧೦೪ ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು.


ಈ ಪ್ರಳಯದ ಸಿದ್ಧಾಂತವನ್ನು ಹಿಡಿದು ಎಳೆದಾಡಿದ್ದು ನಮ್ಮ ಸುವರ್ಣ ನ್ಯೂಸ್ ಚಾನಲ್. ಕಳೆದ ಮೂರು ತಿಂಗಳಿನಿಂದಲೂ ಸುವರ್ಣ ನ್ಯೂಸ್‌ನಲ್ಲಿ ಈ ಸಂಬಂಧ ವಿಶೇಷ ಕಾರ್ಯಕ್ರಮಗಳು ನಡೆದವು. ಈತ ೯೪ರಲ್ಲಿ ಹೇಳಿದ್ದೆಲ್ಲ ಸುಳ್ಳಾಗಿದೆ ಎಂದು ಹೇಳುತ್ತಲೇ ಸುವರ್ಣದವರು ಪ್ರಳಯದ ಹೊಸ ಥಿಯರಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸಿದ್ದು ನಿಜ.


ಇದಕ್ಕಿಂತ ಮಹತ್ವದ ಮತ್ತೊಂದು ವಿಷಯವೆಂದರೆ ಜೀ ಟಿವಿಯ ಬ್ರಹ್ಮಾಂಡ ಪ್ರಭು ನರೇಂದ್ರ ಸ್ವಾಮಿ ತನ್ನ ಪ್ರಳಯದ ಸಿದ್ಧಾಂತವನ್ನು ಕಡ ತಂದಿದ್ದೂ ಸಹ ಇದೇ ಕ್ರಿಶ್ಚಿಯನ್ ಗುಂಪುಗಳ ಪ್ರಚಾರದಿಂದ. ಈತನೂ ಸಹ ಮೇ. ೪ನೇ ತಾರೀಖು ಜಗನ್ಮಾತೆ ಭೂಮಿಗೆ ಬರುತ್ತಾಳೆ, ಆಮೇಲೆ ನೋಡ್ತಾ ಇರಿ, ಆಗಬಾರದ್ದೆಲ್ಲ ಆಗುತ್ತದೆ ಎಂದು ವಟಗುಡುತ್ತಿದ್ದ. ಯಾವಾಗ ನಾವೆಲ್ಲರೂ ಒಂದೇ ಸಮನೆ ಈತನ ಕುಚೇಷ್ಟೆಗಳ ವಿರುದ್ಧ ತಿರುಗಿಬಿದ್ದವೋ ಇದ್ದಕ್ಕಿದ್ದಂತೆ ಜಗನ್ಮಾತೆಯ ಹೆಸರನ್ನು ಹೇಳುವುದನ್ನೇ ಬಿಟ್ಟ. ಪ್ರಳಯದ ಮಾತೂ ಸಹ ನಿಲ್ಲಿಸಿಬಿಟ್ಟ.


ಈಗ ಕ್ಯಾಂಪಿಂಗ್ ಮತ್ತು ಅವನ ಸಹಚರರು ಹೇಳಿದ್ದು ಸುಳ್ಳಾಗಿದೆ. ಕೋಟ್ಯಂತರ ಜನರನ್ನು ಭಯದಲ್ಲಿ ಮುಳುಗಿಸಿದ ಈ ಜನರನ್ನು ಜೀವನಪೂರ್ತಿ ಜೈಲಿನಲ್ಲಿ ಇಡಬೇಕಾಗಿದ್ದು ಅಮೆರಿಕದ ಕೆಲಸ. ಯಾವ ದೇಶದಲ್ಲೇ ಆಗಲಿ, ಇಂಥ ಬುರುಡೆ ಜ್ಯೋತಿಷಿಗಳು, ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ಅವರನ್ನು ಜೈಲಿಗೆ ತಳ್ಳುವ ಕೆಲಸ ಆಗಬೇಕು. ಹಾಗಾದರೆ ಇಂಥವರ ಉಪಟಳ ಸ್ವಲ್ಪ ಮಟ್ಟಿಗೆ ತಗ್ಗಬಹುದೇನೋ?

Saturday, May 21, 2011

ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...

ಇದೆಲ್ಲವೂ ಶುರುವಾಗಿದ್ದು ರಾಘವ್ ಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಕಳುಹಿಸುವುದರೊಂದಿಗೆ. ಯೂ ಟೂಬ್‌ನ ಒಂದು ಲಿಂಕ್ ಕಳುಹಿಸಿದ್ದ ರಾಘವ್ ಅದನ್ನು ಶೇರ್ ಮಾಡಲು ವಿನಂತಿಸಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದಲ್ಲದೆ ಅದನ್ನು ಬ್ಲಾಗ್‌ನಲ್ಲೂ ಪ್ರಕಟಿಸಿದೆವು. ಸೂಕ್ಷ್ಮ ಮನಸ್ಸಿನ ಗೆಳೆಯರನೇಕರು ಅತ್ಯಂತ ಕಾಳಜಿಯಿಂದ ಪ್ರತಿಕ್ರಿಯಿಸಿದ್ದರು. ಎಲ್ಲರಿಗೂ ಆ ಹುಡುಗನ ಭವಿಷ್ಯದ ಕುರಿತು ಆತಂಕವಿತ್ತು. ಎಲ್ಲರ ಮಾತು ಕೇಳಿದ ನಂತರ ವಿಡಿಯೋದಲ್ಲಿ ಕಾಣಿಸಿಕೊಂಡ ಆ ಹುಡುಗನನ್ನು ಒಮ್ಮೆ ಭೇಟಿ ಮಾಡಲೇಬೇಕು ಎಂದನ್ನಿಸತೊಡಗಿತ್ತು. ಅದಕ್ಕಾಗಿ ತಡ ಮಾಡುವುದು ಬೇಡವೆಂದು ಗುರುವಾರ ರಾತ್ರಿ ಹಾನಗಲ್ ಕಡೆಗೆ ಹೊರಟೇಬಿಟ್ಟೆವು.

ಪ್ರಭಾಕರನಿಗೆ ಸಂಪಾದಕೀಯದ ಸ್ವೀಟು
ಹುಡುಗನ ಭೇಟಿಯಾಗುತ್ತಿದ್ದಂತೆ ನಾವು ಏನೇನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆವು. ಮೊದಲು ಆ ಹುಡುಗನ ಮತ್ತು ಆತನ ಕುಟುಂಬದ ಕುರಿತು ಪೂರ್ಣ ಮಾಹಿತಿ ಪಡೆಯಬೇಕು. ಹುಡುಗನಿಗೊಂದು ಸೈಕಲ್ ಕೊಡಿಸಬೇಕು. ಆತನ ತಾಯಿಯ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು. ತಹಸೀಲ್ದಾರ್ ಕಚೇರಿಗೆ ಹೋಗಿ ಜಾತಿ ಪ್ರಮಾಣ ಪತ್ರವನ್ನು ಮಾಡಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಲೆಯವರನ್ನು ಸಂಪರ್ಕಿಸಿ ಸೈಕಲ್ ಕೊಡದೇ ಇರಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು, ಆತನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗಬೇಕು.. ಇತ್ಯಾದಿ ಯೋಚನೆಗಳಿದ್ದವು.

ಅದೆಲ್ಲ ಸರಿ, ಹೇಗೆ ಹುಡುಕುವುದು ಆತನನ್ನು? ಇದಕ್ಕಾಗಿ ನಾವು ಯು ಟೂಬ್ ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದವರನ್ನೇ ಕೇಳಬೇಕಿತ್ತು, ಕೇಳಿದೆವು. ವಿಡಿಯೋ ಅಪ್ ಲೋಡ್ ಮಾಡಿದವರು ರಾಘವ್ ಅವರೇ ಆಗಿದ್ದರು. ಹೀಗಾಗಿ ಕೆಲಸ ಸಲೀಸಾಯಿತು. ಆದರೆ ರಾಘವ್ ಅವರಿಗೆ ಹುಡುಗನ ಕುರಿತು ಸಂಪೂರ್ಣ ಮಾಹಿತಿ ಇರಲಿಲ್ಲ. ಅವರ ಸ್ನೇಹಿತ ಟಿ.ಕೆ.ದಯಾನಂದ್ ಅವರು ತಮ್ಮ ಸ್ನೇಹಿತ ಚಂದ್ರು ಅವರೊಂದಿಗೆ ಈ ಕಿರುಚಿತ್ರ ಮಾಡಿದ್ದರು. ದಯಾನಂದ್ ಕೂಡ ಪತ್ರಕರ್ತರು. ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡಿ ನಂತರ ಟಿವಿ ವಾಹಿನಿಯಲ್ಲೂ ದುಡಿದು ಈಗ ಬಡಜನರ ಬದುಕಿನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಮಲ ಹೊರುವವರ ಕುರಿತು ಅಧ್ಯಯನ ನಡೆಸುವ ಸಂದರ್ಭದಲ್ಲಿ ಹಾನಗಲ್ ಬಸ್ ನಿಲ್ದಾಣದಲ್ಲಿ ಈ ಹುಡುಗ ಅವರ ಕಣ್ಣಿಗೆ ಬಿದ್ದಿದ್ದ. ನಂತರ ರಾಘವ್ ಅವರಿಂದ ವಿಷಯ ತಿಳಿದ ದಯಾನಂದ್ ಹುಡುಗನ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಸ್ಥಳೀಯರಿಬ್ಬರ ದೂರವಾಣಿ ಸಂಖ್ಯೆಗಳನ್ನೂ ನೀಡಿದ್ದರು. ಹೀಗಾಗಿ ನಾವು ಸುಲಭವಾಗಿ ಹುಡುಗನ ಸಂಬಂಧಿಗಳನ್ನು ಸಂಪರ್ಕಿಸಲು ಸಾಧ್ಯವಾಯಿತು.

ಶುಕ್ರವಾರ ಬೆಳಿಗ್ಗೆ ೯-೩೦ರ ಹೊತ್ತಿಗೆ ಹಾನಗಲ್ ತಲುಪಿದಾಗ ಆಗಲೇ ಬಿಸಿಲು ತಾರಕಕ್ಕೇರುತ್ತಿತ್ತು. ಹಳೆ ಬಸ್ ನಿಲ್ದಾಣದಲ್ಲಿ ಇಳಿದುಕೊಳ್ಳಲು ಆ ಹುಡುಗನ ಸಂಬಂಧಿ ಸೂಚಿಸಿದ್ದರು. ಅಲ್ಲೇ ಇಳಿದೆವು. ಭೇಟಿಯಾಯಿತು. ಹೊಟ್ಟೆ ವಿಪರೀತ ಹಸಿಯುತ್ತಿದೆ ಎಂದು ಅವರಿಗೆ ಹೇಳಿ ಪಕ್ಕದಲ್ಲೇ ಇದ್ದ ಹೊಟೇಲ್ ಹೊಕ್ಕು ಕುಳಿತೆವು. ನಮಗೆ ಅಲ್ಲೇ ಮೊದಲ ಶಾಕ್. ನಾವು ಯಾವ ಹುಡುಗನನ್ನು ಹುಡುಕಿಕೊಂಡು ಅಷ್ಟು ದೂರ ಬಂದಿದ್ದೆವೋ ಅದೇ ಹುಡುಗ ಸೊಂಟಕ್ಕೊಂದು ಹಸಿರು ಬಣ್ಣದ ಟವಲ್ ಕಟ್ಟಿಕೊಂಡು ಅದೇ ಹೋಟೆಲ್‌ನಲ್ಲಿ ಪ್ಲೇಟು, ಲೋಟ ತೆಗೆದು ಟೇಬಲ್ ಒರೆಸುತ್ತಿದ್ದುದನ್ನು ನೋಡಿದೆವು. ಅವನೇ ನಾವು ವಿಡಿಯೋದಲ್ಲಿ ನೋಡಿದ ಲೋಕೇಶ. ಅವನ ನಿಜ ಹೆಸರು ಪ್ರಭಾಕರ ಹರಿಜನ.

ಎಷ್ಟೇ ಹಠ ಮಾಡಿದರೂ ಪ್ರಭಾಕರನ ಸಂಬಂಧಿ ನಮ್ಮಿಂದ ತಿಂಡಿಯ ಹಣ ನೀಡಲು ಬಿಡಲಿಲ್ಲ. ಪ್ರಭಾಕರನನ್ನು ನಾವು ಅಲ್ಲಿಂದ ಕರೆದುಕೊಂಡು ಸೀದಾ ಕಲ್ಲಹಕ್ಕಲದ ಹರಿಜನಕೇರಿಗೆ ಹೊರಟೆವು. ಮೊದಲು ಆತನ ತಾಯಿಯೊಂದಿಗೆ ನಾವು ಮಾತನಾಡಬೇಕಿತ್ತು.

ಕಲ್ಲಹಕ್ಕಲದ ಆ ಮನೆ ಸುಮಾರು ೧೦ ಅಡಿ ಅಗಲ, ೧೦ ಅಡಿ ಉದ್ದದ ಪುಟ್ಟ ಗೂಡು. ಒಳಗೆ ಕಾಲಿಡುತ್ತಿದ್ದಂತೆ ಪಕ್ಕದ ಮನೆಯಿಂದ ಪ್ರಭಾಕರನೇ ಹೋಗಿ ಕುರ್ಚಿಗಳನ್ನು ತಂದು ಹಾಕಿದ. ಮನೆಯಲ್ಲಿ ಪ್ರಭಾಕರನ ತಂಗಿ ಶಿಲ್ಪ, ತಮ್ಮ ಸಂದೇಶ, ಅಜ್ಜಿ ಭೀಮಮ್ಮ ಇದ್ದರು. ಶಿಲ್ಪ ೮ನೇ ತರಗತಿ ಪಾಸಾಗಿ ಈಗ ೯ಕ್ಕೆ ಕಾಲಿಟ್ಟಿದ್ದಾಳೆ. ಸಂದೇಶ ಐದನೇ ತರಗತಿಯಲ್ಲಿ ಓದುತ್ತಾನೆ. ಅಜ್ಜಿ ಭೀಮಮ್ಮಗೆ ಸುಮಾರು ೮೦ ವರ್ಷಗಳಾಗಿರಬಹುದು. ಆಕೆಗೆ ತಲೆ ಅಲ್ಲಾಡುವ ಖಾಯಿಲೆಯಿದೆ. (ಪಾರ್ಕಿನ್‌ಸನ್)

ನಾವು ಹೋಗಿ ಕುಳಿತ ಹತ್ತು ನಿಮಿಷಕ್ಕೆ ಪ್ರಭಾಕರನ ತಾಯಿ, ಮನೆಯೊಡತಿ ಶಾಂತವ್ವ ಬಂದರು. ಅವರು ಪುರಸಭೆಯಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಾರೆ. ಗಟಾರಗಳನ್ನು ಬಾಚಿ ಶುದ್ಧ ಮಾಡುವುದು ಆಕೆಯ ಕಾಯಕ. ಈ ಪುಟ್ಟ ಮನೆಯನ್ನು ಶಾಂತವ್ವ ಮತ್ತು ಮಕ್ಕಳು ಚೊಕ್ಕಟವಾಗಿಟ್ಟುಕೊಂಡಿದ್ದಾರೆ.

ಮನೆಯ ಮೂಲೆಯಲ್ಲಿ ಒಂದು ಕೋಳಿ ಸಿಟ್ಟಿನಿಂದ ಕೂಗುತ್ತಿತ್ತು. ನಾವು ದಿಢೀರನೆ ಬಂದ ಕಾರಣಕ್ಕೆ ಶಿಲ್ಪ ಕೋಳಿ ಮತ್ತು ಅದರ ಮರಿಗಳನ್ನು ಒಂದು ಕುಕ್ಕೆಯಡಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಳು. ಆದರೆ ಕೋಳಿ ಒಲ್ಲೆಯೆನ್ನುತ್ತಿತ್ತು. ಯಾಕೆಂದರೆ ಅದರ ಒಂದು ಮರಿಯ ಕಾಲು ಮುರಿದುಹೋಗಿತ್ತು. ಆ ಮರಿಯನ್ನು ಮುಟ್ಟಲೂ ಸಹ ತಾಯಿ ಕೋಳಿ ಬಿಡುತ್ತಿರಲಿಲ್ಲ. ಹೋಗಲಿ ತಾಯಿಯನ್ನೇ ಮೊದಲು ಮುಚ್ಚಿ ಹಾಕೋಣವೆಂದರೆ ಅದು ಶಿಲ್ಪಳನ್ನು ಕುಕ್ಕಲು ಬರುತ್ತಿತ್ತು.

ಮಾಲತೇಶ ನಗರವಾಗಿ ಬದಲಾಗಿರುವ ಕಲ್ಲಹಕ್ಕಲ ಬಡಾವಣೆ
ನಮ್ಮ ಮಾತುಕತೆ ಶುರುವಾಯಿತು. ನಾವು ಬಂದ ಉದ್ದೇಶವನ್ನು ಮೊದಲು ನಿವೇದಿಸಿಕೊಂಡೆವು. ತಾಯಿ ಶಾಂತವ್ವ ತನ್ನ ಕಥೆ ಹೇಳುತ್ತಾ ಹೋದರು. ಮೊದಲ ಮಗನೇ ಪ್ರಭಾಕರ. ಸಿನಿಮಾ ನಟ ಟೈಗರ್ ಪ್ರಭಾಕರ್ ಅವರ ಅಭಿಮಾನಿಯಾಗಿದ್ದ ಹನುಮಂತಪ್ಪ ಅವರು ಮಗನಿಗೆ ಪ್ರಭಾಕರ್ ಹೆಸರನ್ನೇ ಇಟ್ಟಿದ್ದರು. ಸಂದೇಶ ಚಿಕ್ಕ ಮಗುವಿದ್ದಾಗಲೇ ಹನುಮಂತಪ್ಪ ತೀರಿಕೊಂಡಿದ್ದರು. ಶಾಂತವ್ವಳ ಪಾಲಿಗೆ ಅದು ಹೆಸರು ಗೊತ್ತಿಲ್ಲದ ಖಾಯಿಲೆ. ಹನುಮಂತಪ್ಪ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಪುಟ್ಟಪುಟ್ಟ ಮಕ್ಕಳೊಂದಿಗೆ ಶಾಂತವ್ವ ವಿಧವೆ ಪಟ್ಟವನ್ನು ಹೊತ್ತಾದ ಮೇಲೆ ಆಕೆಯ ಮೈದುನನೇ ಮನೆಯಿಂದ ಆಚೆ ಕಳುಹಿಸುತ್ತಾನೆ. ಅಲ್ಲಿಂದ ಆಕೆಯ ಸಂಘರ್ಷದ ಬದುಕು ಆರಂಭವಾಗುತ್ತದೆ. ಹೇಗೋ ಹಠ ಹಿಡಿದು ಪುರಸಭೆಯಲ್ಲೇ ಗುತ್ತಿಗೆ ನೌಕರಿ ಹಿಡಿಯುತ್ತಾರೆ. ಸಾಲ ಮಾಡಿ, ಕಲ್ಲಹಕ್ಕಲ ಹರಿಜನಕೇರಿಯಲ್ಲೇ ಒಂದು ಸಣ್ಣ ಗೂಡು ಕಟ್ಟಿಕೊಳ್ಳುತ್ತಾರೆ. ಸಾಲಕ್ಕಾಗಿ ಅವರು ನೌಕರಿಯ ಪಗಾರ ಬಂದು ಬೀಳುವ ಬ್ಯಾಂಕಿನ ಪಾಸ್ ಬುಕ್ ಅನ್ನೇ ಅಡವಿಡುತ್ತಾರೆ. ಮನೆಯ ಸಾಲ-ಬಡ್ಡಿಯನ್ನು ಪ್ರತಿತಿಂಗಳೂ ತೀರಿಸುತ್ತ ಉಳಿದ ಹಣದಲ್ಲಿ  ಬದುಕು ಸಾಗಿಸುತ್ತಾರೆ.

ನಮಗೆ ಇದ್ದ ಕುತೂಹಲದ ಪ್ರಶ್ನೆಗಳನ್ನು ಒಂದೊಂದಾಗಿ ಕೇಳುತ್ತಾ ಹೋದೆವು. ಶಾಂತವ್ವಳ ಮನೆಯಲ್ಲಿ ಈಗ ಬೆಳಕು ಮೂಡಿದೆ. ಆಕೆಯ ಮನೆಗೆ ವಿದ್ಯುತ್ ಸಂಪರ್ಕವಿದೆ. ಒಂದು ಟ್ಯೂಬ್ ಲೈಟು ಇಡೀ ಮನೆಯನ್ನು ಬೆಳಗುತ್ತದೆ. ಮಿಕ್ಕಂತೆ ರೇಡಿಯೋ, ಟಿವಿ ಇತ್ಯಾದಿ ಯಾವುದೂ ಇದ್ದ ಹಾಗೆ ಕಾಣಲಿಲ್ಲ.

ನಮಗೆ ತುಂಬ ಪ್ರಮುಖವಾಗಿ ಕಾಡುತ್ತಿದ್ದ ಪ್ರಶ್ನೆ ಜಾತಿಪ್ರಮಾಣ ಪತ್ರದ್ದು. ಅದನ್ನೂ ಸಹ ಈಗ ಪಡೆಯಲಾಗಿದೆ. ಆದರೆ ಪ್ರಭಾಕರನಿಗೆ ಕಳೆದ ವರ್ಷ ಸ್ಕಾಲರ್‌ಶಿಪ್ ಕೊಟ್ಟಿಲ್ಲ. ಪ್ರಭಾಕರನಿಗಾಗಲೀ, ಶಿಲ್ಪಳಿಗಾಗಲಿ ಸರ್ಕಾರದ ಬೈಸಿಕಲ್ ಯೋಜನೆ ತಲುಪಿಲ್ಲ. ಇಬ್ಬರಿಗೂ ಒಂದೊಂದು ಸೈಕಲ್ ಸಿಗಬೇಕಿತ್ತು. ಆದರೆ ಅದು ದೊರಕಿಲ್ಲ. ನಮಗೆ ಗೊತ್ತಾದ ಮಾಹಿತಿ ಪ್ರಕಾರ ಜಾತಿಪ್ರಮಾಣ ಪತ್ರ ಸೈಕಲ್ ಪಡೆಯಲು ಬೇಕಾಗೇ ಇಲ್ಲ. ಇವರಿಬ್ಬರಿಗೂ ಸಹಜವಾಗಿಯೇ ಸೈಕಲ್ ಸಿಗಬೇಕಿತ್ತು. ಸೈಕಲ್‌ಗಳು ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ. ಹೀಗಾಗಿ ಸಾಕಷ್ಟು ಮಕ್ಕಳು ವಂಚಿತರಾಗಿದ್ದಾರೆ ಎಂಬುದು ಸ್ಥಳೀಯರ ಮಾತು. ಪ್ರಭಾಕರನ ಶಾಲೆಗೆ ರಜೆ. ಶಾಲೆ ಆರಂಭವಾದ ಮೇಲೆ ಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಈ ಕುರಿತು ಪೂರ್ಣ ಮಾಹಿತಿ ದೊರೆಯಬಹುದು. ಶಿಲ್ಪ ಮತ್ತು ಸಂದೇಶರಿಗೆ ಕಳೆದ ಸರ್ತಿ ಸ್ಕಾಲರ್‌ಶಿಪ್ ಸಿಕ್ಕಿದೆ. ಆದರೆ ಪ್ರಭಾಕರನಿಗೆ ಸಿಕ್ಕಿಲ್ಲ. ತಂದೆಯ ಜಾತಿ ಸರ್ಟಿಫಿಕೇಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಅದನ್ನು ತಡೆಹಿಡಿಯಲಾಗಿದೆ ಎಂಬುದು ಮನೆಯವರ ಮಾತು. ಯಾಕೆ ಹೀಗಾಯಿತು ಎಂಬುದನ್ನು ಶಾಲೆಯ ಮುಖ್ಯಸ್ಥರನ್ನು ಕೇಳಿದರೆ ಗೊತ್ತಾಗಬಹುದು.

ಪ್ರಭಾಕರನಿಗೆ ಓದುವ ಆಸಕ್ತಿಯಿದೆ. ಆದರೆ ತಾಯಿಯ ಕಷ್ಟಗಳನ್ನು ಅವನಿಂದ ನೋಡಲಾಗುತ್ತಿಲ್ಲ. ಅದಕ್ಕಾಗಿ ಈಗ ಹೊಟೇಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಾನೆ. ತಿಂಗಳಿಗೆ ನಾಲ್ಕು ನೂರು ರೂಪಾಯಿ ಪಗಾರ. ಬೆಳಿಗ್ಗೆ ೮ರಿಂದ ರಾತ್ರಿ ೮ರವರೆಗೆ ೧೨ ತಾಸಿನ ಬಿಡುವಿಲ್ಲದ ಕೆಲಸ. ೮ನೇ ತರಗತಿಯಲ್ಲಿ ಅವನು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಜೂನ್ ಆರಂಭದಲ್ಲೇ ಮತ್ತೆ ಪರೀಕ್ಷೆಗಳು. ಪಾಸಾದರೆ ೯ನೇ ತರಗತಿಯಲ್ಲಿ ಮುಂದುವರೆಯುತ್ತಾನೆ, ಇಲ್ಲವಾದಲ್ಲಿ ಹೊಟೇಲ್ ಕಾಯಕ ಮುಂದುವರೆಯುತ್ತದೆ.

ಶಾಂತವ್ವ, ಪ್ರಭಾಕರ ಎಲ್ಲ ವಿಷಯಗಳನ್ನು ಹೇಳಿಕೊಂಡರು. ನಾವು ಆತನಿಗೆ ಅವನದೇ ವಿಡಿಯೋ ತೋರಿಸಿದೆವು. ನೋಡನೋಡುತ್ತಿದ್ದಂತೆ ಕೇರಿಯ ಹುಡುಗರೆಲ್ಲ ಅಲ್ಲಿ ಮುತ್ತಿಕೊಂಡರು. ಭಂಗಿ ಸಮುದಾಯದವರ ಒಟ್ಟು ೧೫ ಕುಟುಂಬಗಳು ಅಲ್ಲಿವೆ. ಎಲ್ಲರೂ ಒಂದೇ ಕುಟುಂಬದಂತೆ ಅಲ್ಲಿ ವಾಸಿಸುತ್ತಾರೆ. ಶಾಂತವ್ವ ಏನೇ ಬಡತನವಿದ್ದರೂ ಮಕ್ಕಳ ಓದಿಗೆ, ಬಟ್ಟೆ ಬರೆಗೆ, ಹೊಟ್ಟೆಗೆ ಕೊರತೆ ಮಾಡಿಲ್ಲ. ಛಲಕ್ಕೆ ಬಿದ್ದವಳಂತೆ ಮಕ್ಕಳನ್ನು ಸಾಕುತ್ತಿದ್ದಾರೆ, ಕಾಪಾಡಿಕೊಳ್ಳುತ್ತಿದ್ದಾರೆ. ಆಕೆಗೆ ಒಂದೇ ಸಂಕಟ. ಮಗ ಇಷ್ಟು ಚಿಕ್ಕ ವಯಸ್ಸಿಗೆ ದುಡಿಯಬೇಕಾ? ಅವನ ಓದು ಹಾಳಾಗುತ್ತಿರುವುದೇ ನನ್ನ ಹಾಳು ಕಷ್ಟಗಳಿಂದ ಎಂಬುದು.

ಒಂದು ಪಾಸ್‌ಬುಕ್ ಅಡಕ್ಕೆ ಇಟ್ಟಾಗಿತ್ತು. ಯಾವುದಾದರೂ ಬ್ಯಾಂಕಿನಲ್ಲಿ ಇನ್ನೊಂದು ಅಕೌಂಟು ಇದೆಯಾ ಎಂದು ಪ್ರಶ್ನಿಸಿದಾಗ ಶಾಂತವ್ವಗೆ ನೆನಪಾಗಿದ್ದು ಕರ್ನಾಟಕ ಬ್ಯಾಂಕಿನ ಅಕೌಂಟು. ಅದರ ಪಾಸ್ ಬುಕ್ ತರಿಸಿದೆವು. ಅದು ಯಾವತ್ತೋ ಸತ್ತು ಹೋದಂತಿತ್ತು.

ಹೊಸ ಸೈಕಲ್ ಮೇಲೆ ಪ್ರಭಾಕರನ ಸವಾರಿ
ಪ್ರಭಾಕರ ಮತ್ತವನ ತಾಯಿಯನ್ನು ಕರೆದುಕೊಂಡು ಅಲ್ಲಿನ ಕರ್ನಾಟಕ ಬ್ಯಾಂಕ್‌ಗೆ ತೆರಳಿದೆವು. ಶಾಂತವ್ವಳ ಅಕೌಂಟಿಗೆ ಒಂದಷ್ಟು ಹಣ ತುಂಬಿ ಅದನ್ನು ಮತ್ತೆ ಜೀವಂತಗೊಳಿಸಲಾಯಿತು. ಹೊಸ ಪಾಸ್‌ಬುಕ್ ಕೂಡ ದೊರೆಯಿತು. ನೋಡವ್ವ, ನಮ್ಮ ಸ್ನೇಹಿತರು ಭಾಳ ಜನ ಇದ್ದಾರೆ. ಅವರಲ್ಲಿ ಕೆಲವರು ನಿಮಗೆ ಸಹಾಯ ಮಾಡಬಹುದು. ಅದಕ್ಕಾಗಿ ಈ ಅಕೌಂಟು ಎಂದಾಗ ಶಾಂತವ್ವಳ ಬಾಯಿಂದ ಮಾತೇ ಹೊರಡಲಿಲ್ಲ.

ಹೊರಗೆ ಬ್ಯಾಂಕಿನ ಬಾಗಿಲಿನಲ್ಲಿ ನಿಂತು ಮಾತನಾಡುತ್ತಿದ್ದಾಗ ಊರಿನ ಹಿರಿಯರೊಬ್ಬರು ಸಿಡುಕಿದರು. ಅಡ್ಡ ಯಾಕೆ ನಿಂತಿದ್ದೀ ಎಂಬುದು ಅವರ ತಕರಾರು, ಸಿಡುಕು. ಹೋಗು, ಆ ಮೂಲೆಲಿ ನಿಂತುಕೊ ಹೋಗ್ ಎಂದು ದಬಾಯಿಸಿ ಆ ಸಜ್ಜನರು ಹೊರಟುಹೋದರು. ಶಾಂತವ್ವಳಂಥವರ ಜಾಗ ಎಲ್ಲಿ ಎಂಬುದನ್ನು ಇಂಥವರು ನಿರ್ಧರಿಸುತ್ತಲೇ ಬಂದಿದ್ದಾರೆ, ಆ ವಿಷಯ ಬಿಡಿ.

ನಂತರ ನಾವು ಹೋಗಿದ್ದು ಸೈಕಲ್ ಅಂಗಡಿಗೆ. ಹಾನಗಲ್‌ಗೆ ಬಂದ ಕೂಡಲೇ ನಾವು ವಿಚಾರಿಸಿದ್ದು ಇಲ್ಲಿ ಸೈಕಲ್ ಅಂಗಡಿ ಇದೆಯೇ ಎಂದು. ಸೈಕಲ್ ಅಂಗಡಿಯಲ್ಲಿ ಇದ್ದಿದ್ದೇ ಎರಡು ವೆರೈಟಿ ಸೈಕಲ್‌ಗಳು. ಒಂದನ್ನು ಆಯ್ಕೆ ಮಾಡಿ ಟೈರುಗಳಿಗೆ ಬ್ಲೋ ಹೊಡೆಸಿ ಪ್ರಭಾಕರನ ಕೈಗೆ ಕೊಟ್ಟಾಗ ಅವನು ಸ್ಥಬ್ದನಾಗಿದ್ದ. ನಡುಗುವ ಕೈಗಳಿಂದ ಸೈಕಲ್ ಹಿಡಿಯಲು ಯತ್ನಿಸಿ ಸೋತ. ನಂತರ ಆತನ ಸೋದರ ಸಂಬಂಧಿಯ ಕೈಗೆ ಸೈಕಲ್ ಒಪ್ಪಿಸಿ ಹೊರಟೆವು. ಪ್ರಭಾಕರ ಮತ್ತೆ ಸೈಕಲ್ ಹಿಡಿದು ಓಡಿಸುವಂತಾಗಿದ್ದು ಒಂದು ಗಂಟೆ ಕಳೆದ ನಂತರವೇ.

ನಮಗೆ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸವೇನೂ ಉಳಿದಿರಲಿಲ್ಲ. ಕೆಇಬಿಯಲ್ಲೂ ಕೆಲಸವಿರಲಿಲ್ಲ. ಎಲ್ಲವನ್ನೂ ಶಾಂತವ್ವಳೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮತ್ತೆ ಮನೆಗೆ ಹೊರಟೆವು. ಒಂದಷ್ಟು ಸಿಹಿ ತಂದು ಅಲ್ಲಿದ್ದವರಿಗೆಲ್ಲ ಕೊಡಿಸಿದೆವು. ಪ್ರಭಾಕರ ತನ್ನ ಹೊಸ ಸೈಕಲ್ ಏರಿ ಒಂದು ರೌಂಡು ಬಂದ. ನಮ್ಮ ಖುಷಿಗಾಗಿ ಒಂದೆರಡು ಫೋಟೋಗಳನ್ನು ತೆಗೆದಿದ್ದಾಯಿತು.

ಮನೆಯೊಳಗೆ ಬಂದು ಕುಳಿತು, ಅಲ್ಲಿನ ಕತ್ತಲಿಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳುವಷ್ಟರಲ್ಲಿ ೮೦ರ ವೃದ್ಧೆ ಭೀಮವ್ವ ಕಾಲಿಗೆ ಬಿದ್ದುಬಿಡೋದೆ? ಆಕೆಯ ಆ ಪ್ರತಿಕ್ರಿಯಿಂದ ಘಾಸಿಗೊಂಡು, ಆಕೆಯನ್ನು ಹಿಡಿದೆತ್ತಿ, ಆಕೆಯ ಕಾಲಿಗೆರಗಿ ಪ್ರತಿಯಾಗಿ ನಮಸ್ಕರಿಸಿ, ನೀವು ಹಿರಿಯರು ಹೀಗೆಲ್ಲ ಮಾಡಬಾರದು ಎಂದಾಗ ಭೀಮವ್ವ ದೇವರಂತೆ ಬಂದಿರಿ ಎಂದಷ್ಟೇ ಹೇಳಿತು.

ನಿಜ, ಒಬ್ಬ ಪ್ರಭಾಕರನ ಕುಟುಂಬಕ್ಕೆ ಹೀಗೆ ಸಹಾಯ ಮಾಡುವುದರಿಂದ ಇಡೀ ಸಮಾಜ ಉದ್ಧಾರವಾಗುವುದಿಲ್ಲ. ಇಂಥ ಕೋಟ್ಯಂತರ ಪ್ರಭಾಕರಗಳು ನಮ್ಮ ನಡುವೆ ಇದ್ದಾರೆ. ಸಹಾಯಕ್ಕಿಂತ ಅಗತ್ಯವಾಗಿ ಬೇಕಿರುವುದು ಸುಧಾರಣೆ. ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಹುಡುಕಿ ನಾವು ಚಿಕಿತ್ಸೆ ಕೊಡಬೇಕು. ಹೀಗಂದುಕೊಂಡು ಅವರೆಲ್ಲರಿಂದ ಬೀಳ್ಕೊಂಡು ಹೊರಡಲು ಅಣಿಯಾದೆವು.

ಇವರಿಗೆ ತಿನ್ನಲು, ಕುಡಿಯಲು ಏನಾದ್ರೂ ಕೊಡಬಹುದೇ, ಬೇಡವೇ? ಕೊಟ್ಟರೆ ತಗೋತಾರಾ ಇಲ್ವಾ? ಎಂಬ ಅನುಮಾನ ಅವರಿಗೆ. ಅದನ್ನು ಗಮನಿಸಿ ನಾವೇ ಒಂದು ಲೋಟ ನೀರು ಪಡೆದು ಕುಡಿದಾಗ ಅವರಿಗೆ ಅತಿಥಿಗಳನ್ನು ಸತ್ಕರಿಸಿದ ಸಣ್ಣ ಸಮಾಧಾನ. ಮುಂದಿನ ಬಾರಿ ಬಂದಾಗ ಊಟ ಮಾಡೇ ಹೋಗಬೇಕು ಎಂದು ಮನೆಯವರೆಲ್ಲರೂ ಹೇಳಿದಾಗ, ಮುಂದಿನ ಸರ್ತಿ ಊಟಕ್ಕಾಗಿಯೇ ಬರುತ್ತೇವೆ ಎಂದು ಹೇಳಿ ಹೊರಟೆವು.

ಶಾಂತವ್ವ, ಶಿಲ್ಪ, ಭೀಮವ್ವ, ಸಂದೇಶ ಹಾಗು ಪ್ರಭಾಕರ್
ಹಾನಗಲ್‌ನ ಈ ಕುಟುಂಬಕ್ಕೆ ದೊಡ್ಡದಾಗಿ ಎದುರಾಗಿರುವ ಸಂಕಟ ಮನೆಯದ್ದು. ಈಗಿರುವ ಈ ೧೫ ಕುಟುಂಬಗಳಿರುವ ಜಾಗವನ್ನು ರಸ್ತೆಗಾಗಿ ಮೀಸಲಾಗಿಸಲಾಗಿದೆ. ಹೀಗಾಗಿ ಈ ಕುಟುಂಬಗಳನ್ನು  ಇಲ್ಲಿಂದ ಮೂರ‍್ನಾಲ್ಕು ಕಿ.ಮೀ ದೂರದ ನವನಗರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಅಲ್ಲಿ ಇವರಿಗೆ ಇದೇ ರೀತಿ ಒಂದಷ್ಟು ಜಾಗವನ್ನು ನೀಡಬಹುದು. ಆಶ್ರಯ ಯೋಜನೆಯಡಿ ಈ ಕುಟುಂಬಗಳಿಗೆ ಸರ್ಕಾರವೇ ಮನೆ ಕಟ್ಟಿಕೊಡಬಹುದು. ಆದರೆ ಬರಿಯ ಜಾಗ ಕೊಟ್ಟರೆ ಮತ್ತೆ ಮನೆ ಕಟ್ಟಿಕೊಳ್ಳಲು ಹೇಗೆ ಹಣ ಹೊಂದಿಸುವುದು ಎಂಬುದು ಇವರೆಲ್ಲರ ಚಿಂತೆ.

ನಾವೆಲ್ಲರೂ ಸೇರಿ ಒಂದಷ್ಟು ಸಹಾಯ ಮಾಡಿದರೆ ಕನಿಷ್ಠ ಪ್ರಭಾಕರನ ಕುಟುಂಬವಾದರೂ ಸಮಸ್ಯೆಗಳಿಂದ ಮುಕ್ತವಾಗಬಹುದು. ಶ್ರೀಮತಿ ಶಾಂತವ್ವ ಹನುಮಂತಪ್ಪ ಕಲ್ಲಕಲ್ ಅವರ ಹಾನಗಲ್ ಶಾಖೆ ಕರ್ನಾಟಕ ಬ್ಯಾಂಕ್‌ನ ಅಕೌಂಟ್ ಸಂಖ್ಯೆ ೩೦೨೨೫೦೦೧೦೦೭೬೩೨೦೧. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಎಲ್ಲರನ್ನೂ ವಿನಂತಿಸಿಕೊಳ್ಳುತ್ತೇವೆ. ಸಹಾಯ ಮಾಡಲು ಸಾಧ್ಯವಾಗದವರು ಈ ಕುಟುಂಬವನ್ನು ತುಂಬು ಮನಸ್ಸಿನಿಂದ ಹಾರೈಸಿದರೂ ಸಾಕು.

ನಾವು ಮಾಡಬೇಕಿರುವ ಕೆಲಸಗಳು ಇನ್ನೂ ಇವೆ. ಸರ್ಕಾರದ ಒಳ್ಳೆಯ ಯೋಜನೆಗಳಲ್ಲಿ ಒಂದಾದ ಸೈಕಲ್ ಕೊಡುವ ಯೋಜನೆ ಯಾಕಿನ್ನೂ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದರ ಕುರಿತು ಬೆಳಕು ಚೆಲ್ಲಬೇಕು. ಜಾತಿ ಪ್ರಮಾಣಪತ್ರಕ್ಕಾಗಿ ಅಧಿಕಾರಿಗಳು ನೀಡುವ ಕಿರುಕುಳಗಳು ನಿಲ್ಲಬೇಕು. ಇಂಥ ನಿರ್ಗತಿಕ ಜನರನ್ನು ಒಕ್ಕಲೆಬ್ಬಿಸುವಾಗ ಸರಿಯಾದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಹಾಗೆ ನಾವು ನೋಡಿಕೊಳ್ಳಬೇಕು. ಇದು ಕೇವಲ ಹಾನಗಲ್‌ನಲ್ಲಿ ಮಾತ್ರ ಆಗಬೇಕಿರುವ ಕೆಲಸವಲ್ಲ. ಎಲ್ಲೆಡೆ, ಮನುಷ್ಯತ್ವದಲ್ಲಿ ನಂಬಿಕೆ ಉಳ್ಳವರೆಲ್ಲರೂ ಮಾಡಬಹುದಾದ ಕೆಲಸವಿದು. ಆ ಕಡೆ ನಮ್ಮ ಗಮನ ಹರಿಸೋಣ. ಹಾಗೆಯೇ ಈ ಶಾಂತವ್ವಳ ಕುಟುಂಬವನ್ನು ಕನಿಷ್ಠ ೬ ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ, ಅವರ ಪರಿಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ನಿಜ, ಇದು ಪ್ರಭಾಕರ್ ಒಬ್ಬನ, ಒಂದು ಕುಟುಂಬ ಸಮಸ್ಯೆಯಲ್ಲ. ಇಂಥ ಕಡುಕಷ್ಟದಲ್ಲೂ ಮಕ್ಕಳನ್ನು ಓದಿಸಲು ಶಾಂತಮ್ಮ ಬದ್ಧರಾಗಿದ್ದಾರೆ. ಇಂಥವರಿಗೆ ಎಲ್ಲ ಊರುಗಳಲ್ಲೂ ಗುರುತಿಸಿ ಅವರಿಗೆ ಸಹಾಯ ಮಾಡುವಂತಾಗಬೇಕು. ಆ ಕೆಲಸ ಪ್ರಭಾಕರನ ಮೂಲಕವೇ ಆರಂಭವಾಗಲಿ ಎಂದು ನಮ್ಮ ಬಯಕೆ.

ಪ್ರಭಾಕರ ತಂದೆ ಮತ್ತು ಅಜ್ಜಿಯ ಫೋಟೋಗಳು
ಹಾನಗಲ್‌ನಿಂದ ವಾಪಾಸು ಹಾವೇರಿಗೆ ಬಂದು ಹೊಟೆಲ್ ಒಂದರಲ್ಲಿ ಊಟಕ್ಕೆ ಕುಳಿತಾಗ ಸಪ್ಲೈ ಮಾಡಲು ಬಂದಿದ್ದು ಪ್ರಭಾಕರನ ವಯಸ್ಸಿನ ಒಬ್ಬ ಹುಡುಗ. ಸುಮ್ಮನಿರಲಾರದೆ ಅವನ ಪೂರ್ವಾಪರ ವಿಚಾರಿಸಿದೆವು. ಅವನಿಗೂ ತಂದೆಯಿಲ್ಲ. ತಾಯಿಗೆ ಖಾಯಿಲೆ, ದುಡಿಯುವ ಚೈತನ್ಯವಿಲ್ಲ. ೯ನೇ ತರಗತಿ ಪಾಸಾದೆ, ಆದರೆ ತಾಯಿಯನ್ನು ಸಾಕಬೇಕು, ಅದಕ್ಕಾಗಿ ಇಲ್ಲಿ ಕೆಲಸ ಮಾಡುತ್ತೇನೆ. ಕೆಲಸದ ಜತೆಗೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸು ಮಾಡ್ತೀನಿ ಎಂದ ಆ ಹುಡುಗ. ಪಟಪಟನೆ ಮಾತನಾಡಿ, ಈಗ ನಿಮಗೇನು ಕೊಡ್ಲಿ ಸರ್ರಾ, ಖಡಕ್ ರೊಟ್ಟಿ ಐತಿ, ಮೆದು ರೊಟ್ಟಿ ಐತಿ, ಏನು ಕೊಡ್ಲಿ? ಎಂದು ನಿರ್ಭಾವುಕನಾಗಿ ಪ್ರಶ್ನೆ ಹಾಕಿ, ತನಗೆ ಇನ್ನಷ್ಟು ಮಾತನಾಡಲು ಸಮಯವಿಲ್ಲವೆಂದು ಪರೋಕ್ಷವಾಗಿ ಸೂಚಿಸಿದ.

ಕಣ್ಣಲ್ಲಿ ಇನ್ನೊಬ್ಬ ಪ್ರಭಾಕರನ ಚಿತ್ರ ಕುಣಿಯತೊಡಗಿತ್ತು.

ಕಾಲುಮುರಿದ ಮರಿಯ ರಕ್ಷಣೆಗಾಗಿ ಸಿಟ್ಟಿಗೆದ್ದಿದ್ದ ತಾಯಿ ಕೋಳಿ, ದಿಢೀರನೆ ಕಾಲಿಗೆರಗುವ ಮೂಲಕ ಪ್ರತಿಕ್ರಿಯೆ ತೋರಿದ ಭೀಮವ್ವ, ಬ್ಯಾಂಕಿನ ಮುಂಭಾಗ ನಾಯಿಗೆ ಗದರುವಂತೆ ಗದರಿ ಗೊಣಗುತ್ತಾ ಹೋದ ಆ ಮರ್ಯಾದಸ್ಥ, ತಾಯಿನಾ ನಾನೇ ಸಾಕ್ತಿನಿ ಸರ್ರಾ ಎಂದಾ ಹೊಟೇಲ್ ಹುಡುಗ... ಇವರೆಲ್ಲರೂ ಕದಲದ ಚಿತ್ರಗಳಂತೆ ನಮ್ಮ ಕಣ್ಣುಗಳಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನಿಸುತ್ತಿದ್ದಂತೆ ರೈಲ್ವೈ ಸ್ಟೇಷನ್ ಹಾದಿ ಹಿಡಿದೆವು.

ಹಾನಗಲ್ ಎಂಬ ಊರಿನ ಆ ಹೊಳಪುಗಣ್ಣಿನ ಹುಡುಗ ಸೈಕಲ್ ಏರಿ ನಿಂತಾಗ....


ಇವನೇ ನಮ್ಮ ಪ್ರಭಾಕರ. ಪೂರ್ತಿ ಹೆಸರು ಪ್ರಭಾಕರ ಹರಿಜನ. ಹಾನಗಲ್‌ನ ಕಲ್ಲಹಕ್ಕಲದ ಹರಿಜನ ಕೇರಿಯ ಹನುಮಂತಪ್ಪ ಹರಿಜನ ಅವರ ಮೊದಲನೇ ಪುತ್ರ ಈತ. ಹನುಮಂತಪ್ಪ ಈಗ ಇಲ್ಲ, ತೀರಿದ್ದಾರೆ. ತಾಯಿ ಶಾಂತವ್ವ ಮುನಿಸಿಪಾಲಿಟಿ ಗಟಾರ ಬಳಿದು ಈತನನ್ನೂ, ಇನ್ನೆರಡು ಮಕ್ಕಳನ್ನೂ ಮತ್ತು ತನ್ನ ತಾಯಿಯನ್ನೂ ಸಾಕುತ್ತಾಳೆ. ಪ್ರಭಾಕರನ ಕುರಿತಾದ ಒಂದು ಕಿರುಚಿತ್ರ ನೋಡಿ ನಾವೆಲ್ಲರೂ ಆಘಾತಗೊಂಡಿದ್ದೆವು. ನೀವೆಲ್ಲರೂ ಕಾಳಜಿ ತೋರಿದಿರಿ. ಅವನನ್ನು ನೋಡಬೇಕೆಂದು ಹಾನಗಲ್‌ಗೆ ಹೋಗಿ, ಆತನ ಕುಟುಂಬದೊಂದಿಗೆ ಇದ್ದು ಬಂದಿದ್ದೇವೆ.

ಯಾರು ಈ ಹುಡುಗ? ಇವರ ಕುಟುಂಬದ ಕಥೆ ಏನು? ತನ್ನ ತಾಯಿಯ ಸಾಲ ತೀರಿಸಲೆಂದು ಹೊಟೆಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಿರುವ ಈತನನ್ನು ಮತ್ತೆ ಓದಿಗೆ ಹಚ್ಚುವುದು ಹೇಗೆ? ಈತನ ಜಾತಿ ಸರ್ಟಿಫಿಕೇಟ್‌ನ ಕಥೆ ಏನು? ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ನಾವು ಸಣ್ಣದಾಗಿ ಯೋಜಿಸಿರುವುದಾದರೂ ಏನು? ಈ ಎಲ್ಲವನ್ನೂ ನಿಮ್ಮ ಜತೆ ಹೇಳಿಕೊಳ್ಳಬೇಕು. ಹಾಗೆಯೇ ಈತನಿಗೆ ನಿಮ್ಮ ಸಹಾಯವೂ ಬೇಕು.

ಅಂದಹಾಗೆ ಈತನ ಬಳಿ ಈಗಿರುವುದು ಅವನದೇ ಆದ ಹೊಚ್ಚ ಹೊಸ ಸೈಕಲ್. ಅದು ಆ ಹೊಳಪುಗಣ್ಣಿನ ಹುಡುಗನಿಗೆ ನಮ್ಮೆಲ್ಲರ ಪ್ರೀತಿಯ ಕೊಡುಗೆ. ಆ ಕಿರುಚಿತ್ರವನ್ನು ನೋಡಿದಾಗಿನಿಂದ ಸೈಕಲ್ ಎಂಬ ವಸ್ತುವೇ ವ್ಯವಸ್ಥೆಯ ಕ್ರೌರ್ಯದ, ನಮ್ಮ ಅಸಹಾಯಕತೆಯ ಸಂಕೇತದಂತೆ ಕಾಡುತ್ತಿತ್ತು. ಪ್ರಭಾಕರನ ಮೊಗದಲ್ಲಿ ಈಗ ಸಣ್ಣ ಗೆಲುವು, ನಮಗೆ ಪುಟ್ಟ ಖುಷಿ.

ಅವನ ಕುರಿತು, ಅವನ ತಾಯಿಯ ಕುರಿತು, ತಮ್ಮ-ತಂಗಿಯರ ಕುರಿತು ತುಂಬಾ ತುಂಬಾ ಹೇಳುವುದಿದೆ. ರಿಸರ್ವೇಷನ್ ಇಲ್ಲದೆ ರೈಲು ಹಿಡಿಯಬಾರದು. ಹಿಡಿದರೂ ನಿಲ್ಲಲೂ ಜಾಗವಿಲ್ಲದ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಬಾರದು. ಇದನ್ನು ಉಲ್ಲಂಘಿಸಿದರ ಪರಿಣಾಮ ಕೊಂಚ ಆಯಾಸ. ಸ್ವಲ್ಪ ಟೈಮ್ ಕೊಡಿ, ಪ್ಲೀಸ್.

Wednesday, May 18, 2011

ಈ ಲೋಕೇಶನಿಗೆ ನ್ಯಾಯ ಕೊಡಿಸುವಿರಾ ಮಂತ್ರಿ ಮಹೋದಯರೇ?


ಇದು ಒಬ್ಬ ಲೋಕೇಶನ ಕಥೆಯಲ್ಲ. ಇಂಥ ಲಕ್ಷಾಂತರ ಲೋಕೇಶ್‌ಗಳು ಕರ್ನಾಟಕದಾದ್ಯಂತ ಇದ್ದಾರೆ. ಸದ್ಯಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ವಿರೋಧಪಕ್ಷದ ನಾಯಕರುಗಳು ಕನಿಷ್ಠ ಈ ಒಬ್ಬ ಲೋಕೇಶನಿಗಾದರೂ ನ್ಯಾಯ ದೊರಕಿಸಿಕೊಡುವರೆ? ಮಾಸ್ಟರ್ ಕಿಶನ್‌ಗಾಗಿ ನಿಯಮಗಳನ್ನು ಸಡಿಲಿಸಬಲ್ಲವರು, ಈ ಅಸಹಾಯಕ ಜನರಿಗೆ ಜಾತಿ ಸರ್ಟಿಫಿಕೇಟ್, ಇತ್ಯಾದಿಗಳಿಗಾಗಿ ಪೀಡಿಸುವುದನ್ನು ನಿಲ್ಲಿಸುತ್ತಾರಾ? ಇದ್ಯಾವುದೂ ಸಾಧ್ಯವಾಗದಿದ್ದರೆ ಬಡವರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎಂದು ಘೋಷಿಸುವ ಮೂಲಕ ಕಠೋರವಾಸ್ತವವನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿದ್ದಾರೆಯೇ?

ನಮ್ಮ ಮೀಡಿಯಾಗಳಲ್ಲಿ ನಿಜವಾಗಿಯೂ ಪ್ರಧಾನ ಆದ್ಯತೆಯ ವರದಿಯಾಗಬೇಕಿದ್ದ ಇದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಈ ಮನಕಲಕುವ ಕಿರುಚಿತ್ರ ನಿರ್ಮಿಸಿದವರಿಗೆ ಒಂದು ಥ್ಯಾಂಕ್ಸ್. ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

ರಂಗಣ್ಣ ಇಲ್ಲದ ರಾಜಕಾರಣ ಬಿಕ್ಕಟ್ಟು ಮತ್ತು ಖಾಲಿತಲೆಯ ನಿರೂಪಕರು...


ರಾಜ್ಯ ರಾಜಕಾರಣದಲ್ಲಿ ಭರ್ಜರಿ ವಿದ್ಯಮಾನಗಳು. ಸರ್ಕಾರ ವಜಾಗೊಳಿಸಲು, ವಿಧಾನಸಭೆ ಅಮಾನತ್ತಿನಲ್ಲಿಡಲು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸಿನಿಂದಾಗಿ ಕ್ಷಣಕ್ಷಣಕ್ಕೂ ತರೇಹವಾರಿ ಸುದ್ದಿಗಳು, ಬ್ರೆಕಿಂಗ್ ನ್ಯೂಸುಗಳು. ಕರ್ನಾಟಕದ ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಸುದ್ದಿ ಚಾನಲ್‌ಗಳಂತೂ ಎಡೆಬಿಡದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ಆದರೆ, ಕನ್ನಡ ಸುದ್ದಿ ಚಾನಲ್‌ಗಳು ಇಂಥ ವಿದ್ಯಮಾನಗಳನ್ನು ವರದಿ, ವಿಶ್ಲೇಷಣೆ ಮಾಡುವಲ್ಲಿ ಇನ್ನೂ ಸಮರ್ಥವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇಂಥ ಬಿಕ್ಕಟ್ಟನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇರದ ಸುದ್ದಿ ನಿರೂಪಕರು, ಸುತ್ತಮುತ್ತ ನಿಂತವರು ಹೇಳಿದ್ದನ್ನೇ ನಂಬಿ ವರದಿ ಮಾಡುವ ವರದಿಗಾರರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸಂವಿಧಾನದ ೩೫೬ನೇ ಪರಿಚ್ಛೇದ ಅಂದರೆ ಏನು ಎಂದು ಗೊತ್ತಿಲ್ಲದವರು ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಏನನ್ನು ವರದಿ ಮಾಡಲು, ಏನನ್ನು ವಿಶ್ಲೇಷಿಸಲು ಸಾಧ್ಯ?

ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆವು. ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮಾತು ಇನ್ನಷ್ಟು ಪರಿಣಾಮಕಾರಿಯಾಗಿ ಸಾಬೀತಾಯಿತು. ಇಂಗ್ಲಿಷ್ ಸುದ್ದಿವಾಹಿನಿಗಳ ಪತ್ರಕರ್ತರು ತೋರುವ ವೃತ್ತಿಪರತೆಯನ್ನು ರಂಗನಾಥ್ ಸುವರ್ಣದಲ್ಲಿ ತಂದಿದ್ದರು. ಕರ್ನಾಟಕದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಚಾನಲ್‌ಗಳ ಮೊರೆಹೊಗುತ್ತಿದ್ದವರನ್ನು ರಂಗನಾಥ್ ಸೆಳೆದಿದ್ದರು. ಈ ಬಾರಿ ರಂಗನಾಥ್ ಇಲ್ಲದ ಸುವರ್ಣ ನ್ಯೂಸ್ ಇಂಥ ವೃತ್ತಿಪರತೆಯನ್ನು ಕಳೆದುಕೊಂಡಿದ್ದು ವಿಷಾದನೀಯ. ಕನ್ನಡ ವೀಕ್ಷಕರೂ ಸಿಎನ್‌ಎನ್ ಐಬಿಎನ್, ಎನ್‌ಡಿಟಿವಿ, ಟೌಮ್ಸ್ ನೌ ಗಳನ್ನು ನೋಡಿ ಸುದ್ದಿ ದಾಹವನ್ನು ತಣಿಸಿಕೊಳ್ಳಬೇಕಾಯಿತು.

ಹಮೀದ್ ಪಾಳ್ಯ ಮತ್ತು ಗೌರೀಶ್ ಅಕ್ಕಿ ಉತ್ತಮ ನಿರೂಪಕರು ಎಂಬುದೇನೋ ನಿಜ. ಆದರೆ ರಾಜಕೀಯ, ಕಾನೂನು ವಿಶ್ಲೇಷಣೆಯಲ್ಲಿ ಅವರು ಇನ್ನೂ ಎಳಸು ಎಂಬುದು ಸಾಬೀತಾಯಿತು. ಇಬ್ಬರಲ್ಲೂ ಆತ್ಮವಿಶ್ವಾಸದ ಕೊರತೆ ಕಾಣಿಸಿತು. ಬಹಳಷ್ಟು ಸಂದರ್ಭಗಳಲ್ಲಿ ಹಮೀದ್ ಅವರು ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಅವರನ್ನೇ ಅವಲಂಬಿಸಬೇಕಾಯಿತು. ಪ್ರಶಾಂತ್ ದಿಲ್ಲಿ ವಿದ್ಯಮಾನಗಳನ್ನು ಚೆನ್ನಾಗೇನೋ ವಿಶ್ಲೇಷಿಸಿದರು. ಆದರೆ ರಂಗನಾಥ್ ಇದ್ದಿದ್ದರೆ ಅವರಿಂದ ಇನ್ನಷ್ಟು ಹೊರತೆಗೆಸಬಹುದಿತ್ತು ಅನಿಸಿತು.

ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕಾರಣಿಗಳು, ಕಾನೂನು ಪಂಡಿತರ ಜತೆಗಿನ ಚರ್ಚೆಯ ಸಂದರ್ಭದಲ್ಲೂ ಸಹ ರಂಗನಾಥ್ ಠೊಳ್ಳಾಗಿರುವ, ಬುರುಡೆ ಬಿಡುವ ಮಾತುಗಾರರನ್ನು ಬಹಳ ಸುಲಭವಾಗಿ ಬೆತ್ತಲಾಗಿಸುತ್ತಿದ್ದರು. ತಿಳಿವಳಿಕೆ ಇರುವ ಪ್ರಬುದ್ಧರಿಂದ ಸಂದರ್ಭಕ್ಕೆ ಅಗತ್ಯವಾದ, ಸನ್ನಿವೇಶವನ್ನು ಕಟ್ಟಿಕೊಡಬಲ್ಲ ಉತ್ತರಗಳನ್ನು ಹೊರತೆಗೆಸುತ್ತಿದ್ದರು. ಖಚಿತವಾದ ಪ್ರಶ್ನೆಗಳನ್ನು ಎಸೆಯುವ, ದಾರಿ ತಪ್ಪುವ ಉತ್ತರಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸುವ ಜಾಣ್ಮೆ ಮತ್ತು ಧೈರ್ಯವೂ ಅವರಿಗಿತ್ತು. ತಮ್ಮದೇ ವೃತ್ತಿಪರತೆಯನ್ನು ಅವರು ಎಲ್ಲ ಸಿಬ್ಬಂದಿಯಿಂದಲೂ ಬಯಸುತ್ತಿದ್ದರು. ಒಮ್ಮೆಮ್ಮೆ ಲೈವ್ ಕಾರ್ಯಕ್ರಮಗಳಲ್ಲಿ ಅವರು ತಮ್ಮ ವರದಿಗಾರರಿಗೆ ನೀಡುತ್ತಿದ್ದ ಸೂಚನೆಗಳು ಅವರಿಂದ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ವೀಕ್ಷಕರಿಗೂ ಅರ್ಥ ಮಾಡಿಸುತ್ತಿದ್ದವು. ಎಚ್.ಡಿ.ದೇವೇಗೌಡ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಎಸ್.ಬಂಗಾರಪ್ಪ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್.. ಹೀಗೆ ಘಟನಾನುಘಟಿ ನಾಯಕರುಗಳೊಂದಿಗೆ ರಂಗನಾಥ್ ಅತ್ಯಂತ ಆತ್ಮವಿಶ್ವಾಸದಿಂದ ಚರ್ಚೆಗಳನ್ನು ನಡೆಸಬಲ್ಲವರಾಗಿದ್ದರು. ಆದರೆ ರಂಗನಾಥ್ ಇಲ್ಲದ ಸುವರ್ಣದಲ್ಲಿ ಇದೆಲ್ಲವೂ ಈಗ ಕಣ್ಮರೆಯಾಗಿದೆ.

ಬೇರೆ ಚಾನಲ್‌ಗಳಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಏನಿಲ್ಲ. ಇದ್ದಿದ್ದರಲ್ಲಿ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ವಿಶ್ಲೇಷಣೆಗಳು ವಿಷಯದ ಆಳವನ್ನು ತಲುಪುತ್ತಿದ್ದವು. ಟಿವಿ೯ ರಾಜಕಾರಣಿಗಳ ಬೈಟ್‌ಗಳು, ಗ್ರಾಫಿಕ್ ಗಳು, ಪ್ರತಿಭಟನೆಗಳ ಚಿತ್ರಗಳು ಇತ್ಯಾದಿಗಳನ್ನೇ ಹೆಚ್ಚು ನೆಚ್ಚಿಕೊಂಡ ಹಾಗೆ ಕಂಡಿತು.

ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದರಾದರೂ ಉಳಿದ ತಂಡದಿಂದ ಅವರಿಗೆ ತಕ್ಕ ಬೆಂಬಲ ದೊರೆತ ಹಾಗೆ ಕಾಣಲಿಲ್ಲ. ವಿಶೇಷವಾಗಿ ಅವರ ವರದಿಗಾರರು ಇನ್ನೂ ಪಕ್ವವಾಗಿಲ್ಲ. ಭಟ್ಟರು ಪ್ರಶ್ನೆ ಎಸೆಯುತ್ತಿದ್ದಂತೆ ನರ್ವಸ್ ಆಗುವ ವರದಿಗಾರರಿಂದ ಏನನ್ನು ನಿರೀಕ್ಷಿಸಬಹುದು?

ಜನಶ್ರೀಯಲ್ಲಿ ಅನಂತ್ ಚಿನಿವಾರ್ ಅವರ ನಿರ್ವಹಣೆ, ಅವರು ಬಳಸುವ ಭಾಷೆ ಸೊಗಸು. ತಮ್ಮ ವರದಿಗಾರರೊಂದಿಗೆ ಅವರು ಸಂವಹಿಸುವ ರೀತಿ ರಂಗನಾಥ್ ಅವರನ್ನು ನೆನಪಿಗೆ ತರುತ್ತದೆ. ಚರ್ಚೆಯ ಸಂದರ್ಭದಲ್ಲಿ ತುಂಬ ಮುಖ್ಯವಾದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು. ಒನ್ಸ್ ಎಗೇನ್, ಅವರಿಗೂ ಸಹ ತಕ್ಕ ಸಿಬ್ಬಂದಿ ಬೆಂಬಲದ ವ್ಯವಸ್ಥೆ ಇದ್ದ ಹಾಗೆ ಕಾಣಲಿಲ್ಲ.

ಮೊನ್ನೆ ಶಶಿಧರ ಭಟ್ಟರು ತಮ್ಮ ಫೇಸ್‌ಬುಕ್‌ನ ವಾಲ್‌ನಲ್ಲಿ ಉತ್ತಮ ನಿರೂಪಕರು ಸಿಗುತ್ತಿಲ್ಲ, ಉತ್ಸಾಹ ಇರುವವರು ಮುಂದೆ ಬನ್ನಿ ಎಂದು ವಿನಂತಿಸಿದ್ದರು. ಇದು ಕೇವಲ ಸಮಯ ಟಿವಿ ಒಂದರ ಸಮಸ್ಯೆ ಅಲ್ಲ. ಎದುರಿನ ಮಾನಿಟರ್ ಮೇಲೆ ಬರುವ ಸುದ್ದಿ ಸಾಲುಗಳನ್ನು ಓದಲು ತಯಾರಿರುವ ಸಾಲುಸಾಲು ನಿರೂಪಕರು ನಮ್ಮ ಚಾನಲ್‌ಗಳಲ್ಲಿದ್ದಾರೆ. ಇವರುಗಳ ಪೈಕಿ ನೂರಕ್ಕೆ ೯೦ಕ್ಕೂ ಹೆಚ್ಚು ಮಂದಿಗೆ ತಾವೇ ಸ್ವತಃ ನಾಲ್ಕು ಸಾಲು ಸೃಷ್ಟಿಸಿ ಮಾತನಾಡಲು ಬರುವುದಿಲ್ಲ. ಇಂಥವರು ರಾಜಕೀಯ ಬಿಕ್ಕಟ್ಟು, ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ತಾನೇ ಕಾರ್ಯಕ್ರಮಗಳನ್ನು ನಡೆಸಿಕೊಡಬಲ್ಲರು? ನ್ಯೂಸ್ ಚಾನಲ್‌ಗಳು ಎದುರಿಸಬೇಕಿರುವ, ಉತ್ತರ ಕೊಟ್ಟುಕೊಳ್ಳಲೇಬೇಕಿರುವ ಸೀರಿಯಸ್ ಆದ ಪ್ರಶ್ನೆ ಇದು.

ಅಂದ ಹಾಗೆ, ಎಚ್.ಆರ್.ರಂಗನಾಥ್ ಯಾವುದಾದರೂ ನ್ಯೂಸ್ ಚಾನಲ್‌ಗೆ ಬರುವಂತಾಗಲಿ. ನಾವು ಇಂಗ್ಲಿಷ್ ಚಾನಲ್‌ಗಳನ್ನು ನೋಡುವ ಕಷ್ಟವನ್ನು ಅವರು ತಪ್ಪಿಸುವಂತಾಗಲಿ.

Monday, May 16, 2011

ಮುನಿಯಪ್ಪ ಎಂಬ ಆದರ್ಶ, ಅಸಹಾಯಕ ತಂದೆಯ ಕಥೆ ಹುಟ್ಟಿಸಿದ ತಲ್ಲಣಗಳ ಸುತ್ತ...

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ ಎಂಬ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕದ ಲೇಖನ ಓದಿದ ನಂತರ ಅದು ಎಬ್ಬಿಸಿದ ತಲ್ಲಣದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅರಗಿಸಿಕೊಳ್ಳಲು ಸಾಕಷ್ಟು ದಿನಗಳೇಬೇಕು. ಬಹುಶಃ ಇಂಥದ್ದೊಂದು ಲೇಖನವನ್ನು ಓದಿ ಎಷ್ಟು ದಿನಗಳಾಗಿದ್ದವೋ ಎಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ಡಾ.ಆಶಾ ಬೆನಕಪ್ಪ ಈ ಲೇಖನ ಬರೆದಿದ್ದಾರೆ.

ಹೃದ್ರೋಗದಿಂದ ಬಳಲುತ್ತಿರುವ ತನ್ನ ಮಗ ಹನುಮಂತಪ್ಪ ಎಂಬ ಹುಡುಗನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಕೊಪ್ಪಳದ ಬಡರೈತ ಮುನಿಯಪ್ಪ ಅವರನ್ನು ಹತ್ತಿರದಿಂದ ಗಮನಿಸಿ, ಆತನ ಚಟುವಟಿಕೆಗಳನ್ನು ಲೇಖಕಿ ಇಲ್ಲಿ ವರದಿ ಮಾಡುತ್ತ ಹೋಗುತ್ತಾರೆ. ಮುನಿಯಪ್ಪ ತನ್ನ ಮಗನಿಗಾಗಿ ಏನೇನು ಮಾಡುತ್ತಾರೆ, ಮಗ ಸತ್ತ ನಂತರ ಏನು ಮಾಡುತ್ತಾರೆ ಎಂಬುದನ್ನು ಓದುತ್ತಾ ಹೋದರೆ, ನಿಮ್ಮ ಕಣ್ಣುಗಳು ಆರ್ದ್ರವಾಗದೇ ಇರವು. ಮನುಷ್ಯ ಸಂಬಂಧಗಳ ಬೇರುಗಳು ಸಡಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮುನಿಯಪ್ಪ ಮತ್ತು ಹನುಮಂತಪ್ಪ ಎಂಬ ಈ ಅಪ್ಪ ಮಕ್ಕಳು ನಾವು ತಲೆ ಎತ್ತಿ ನೋಡಿದಷ್ಟು ಎತ್ತರಕ್ಕೆ ಬೆಳೆದು ನಿಂತಂತೆ ಅನಿಸುತ್ತದೆ.

ಆಶಾ ಅವರು ಈ ಲೇಖನ ಬರೆಯುವ ಮೂಲಕ ದೂರದೂರಗಳಿಂದ ತಮ್ಮ ಕರುಳ ಸಂಬಂಧಿಗಳ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ಬಾಯಿಸತ್ತ ಬಡವರ ಬದುಕನ್ನೇ ತೆರೆದಿಟ್ಟಿದ್ದಾರೆ. ಪ್ರತಿನಿತ್ಯ ಇಂಥವರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಮುನ್ನ ತಮ್ಮ ಆಸ್ತಿ ಅಡವನ್ನು ಮಾರಿ ಬಂದಿರುತ್ತಾರೆ. ಕೈಗೆ ಸಿಕ್ಕ ಪುಡಿಗಾಸನ್ನು ಚಿನ್ನದ ಹಾಗೆ ಜೋಪಾನ ಮಾಡಿ, ಖರ್ಚು ಮಾಡುತ್ತಾರೆ. ಅರೆಹೊಟ್ಟೆಯಲ್ಲೇ ಎಲ್ಲೋ ಬಿದ್ದುಕೊಂಡು ಕಾಲ ದೂಡುತ್ತಾರೆ. ಅವರಿಗೆ ಯಾವ ರಾಜಕಾರಣಿಯ ಶಿಫಾರಸೂ ಇರುವುದಿಲ್ಲ. ಹೀಗಾಗಿ ಅವರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಕಡಿತವಾಗುವುದಿಲ್ಲ. ಮುಖ್ಯಮಂತ್ರಿಯ ಫಂಡು ತಮ್ಮ ಕೆಲಸಕ್ಕೆ ಬರುತ್ತದೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅವರು ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿ ತಮ್ಮ ಕೆಲಸ ಮಾಡಿಸಿಕೊಳ್ಳಲಾರರು.

ಚಿಕಿತ್ಸೆಗೆ ಹಣ ಹೊಂದಿಸಿಕೊಂಡು ಬರುವಷ್ಟರಲ್ಲೇ ರೋಗಿಯ ಅರ್ಧ ಪ್ರಾಣ ಹೋಗಿರುತ್ತದೆ. ಆಸ್ತಿ ಮಾರಿ ಬಂದ ಹಣ ಕರಗುವಷ್ಟರಲ್ಲಿ ಪೂರ್ಣ ಪ್ರಾಣವೂ ಹೋಗಿಬಿಡುತ್ತದೆ. ಇಂಥವು ದಿನವೂ ನಡೆಯುತ್ತದೆ. ಆದರೆ ಯಾವ ಮಾಧ್ಯಮಗಳಲ್ಲೂ ಇವೆಲ್ಲ ದಾಖಲಾಗುವುದಿಲ್ಲ. ಬಡವರ ಬದುಕು ಅತ್ಯಂತ ಸಸ್ತಾ. ಅವರು ಬದುಕಿದ್ದರೂ ಸುದ್ದಿಯಾಗುವುದಿಲ್ಲ, ಸತ್ತರೂ ಸುದ್ದಿಯಾಗುವುದಿಲ್ಲ. ವಿಧಾನಸೌಧಕ್ಕೆ, ಕಾರ್ಪರೇಷನ್‌ಗೆ, ಐಪಿಎಲ್‌ಗೆ, ಶೇರು ಮಾರುಕಟ್ಟೆಗೆ, ಫ್ಯಾಷನ್ ಶೋಗೆ, ದೊಡ್ಡದೊಡ್ಡ ಸಂಸ್ಥೆಗಳ ಹೊಸ ಪ್ರಾಡಕ್ಟು ಬಿಡುಗಡೆಗಾಗಿ ಪಂಚತಾರಾ ಹೋಟೆಲ್‌ಗಳಿಗೆ, ರಾಜಕೀಯ ಪಕ್ಷಗಳ ಕಚೇರಿಗಳಿಗೆ ವರದಿಗಾರರನ್ನು ನಿಯುಕ್ತಿ ಮಾಡುವ ಮಾಧ್ಯಮಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿಗಾರರನ್ನು ಕಳುಹಿಸುವುದಿಲ್ಲ. ಅಪಘಾತ, ಕೊಲೆ ಇತ್ಯಾದಿಗಳು ನಡೆದು ಮೃತದೇಹಗಳು ಬಂದರೆ ಮಾತ್ರ ಇಲ್ಲಿ ಸುದ್ದಿ, ಮಿಕ್ಕಂತೆ ಇಲ್ಲಿ ನಮ್ಮ ಮೀಡಿಯಾಗಳಿಗೆ ಬೇಕಾದ ಸುದ್ದಿಗಳು ಹುಟ್ಟುವುದಿಲ್ಲ.

ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ನಮ್ಮ ಮೀಡಿಯಾಗಳು ಜಾಹೀರಾತು ಮಾಫಿಯಾದ ಕೈಗೆ ಸಿಕ್ಕವು. ಮೀಡಿಯಾಗಳ ಆದ್ಯತೆಗಳು ಬದಲಾದವು. ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಬದುಕಷ್ಟೇ ಮೀಡಿಯಾಗಳಿಗೆ ಮುಖ್ಯವಾಯಿತು. ಯಾಕೆಂದರೆ ಈ ವರ್ಗದವರೇ ಜಾಹೀರಾತುದಾರರ ಗ್ರಾಹಕರು. ಮೀಡಿಯಾಗಳಲ್ಲಿ ಕೆಲಸ ಮಾಡುವವರೂ ಸಹ ಈ ವರ್ಗಗಳಿಂದ ಬಂದವರೇ ಆಗಿದ್ದರಿಂದ ಸಹಜವಾಗಿ ಅವರು ಈ ಜನರ ಒಲವು-ನಿಲುವುಗಳನ್ನೇ ಪ್ರತಿನಿಧಿಸತೊಡಗಿದರು. ಮೀಡಿಯಾಗಳು ಹೆಚ್ಚು ಹೆಚ್ಚು ನಗರಕೇಂದ್ರಿತವಾದವು. ಹಳ್ಳಿಗಳ ಜನರ ಬದುಕು, ಬವಣೆಗಳಿಗೆ ಅಲ್ಲಿ ಜಾಗವಿಲ್ಲದಂತಾಯಿತು.

ಹಾಗಿದ್ದರೆ ಬಡವರ ಕಥೆಗಳನ್ನು ಹೇಳುವವರು ಯಾರು? ಬಡವರ ಜೋಪಡಿಗಳಲ್ಲಿ ಹುಟ್ಟುವ ಸುದ್ದಿಗಳನ್ನು ಬರೆಯುವವರು ಯಾರು? ನಿಜ ಹೇಳಿ, ನಮ್ಮ ಮೀಡಿಯಾಗಳು ಇವತ್ತಿನ ಪ್ರಜಾಪ್ರಭುತ್ವದ ಕಾಲದಲ್ಲಿ ಸಮಸ್ತ ಜನರ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿವೆಯೇ?

ಪ್ರಜಾವಾಣಿ ಸಾಪ್ತಾಹಿಕದ ಲೇಖನ ನಮ್ಮಲ್ಲಿ ತಲ್ಲಣ ಹುಟ್ಟಿಸುತ್ತದೆ.  ಮನುಷ್ಯ ಸಂಬಂಧಗಳ ಗಾಢತೆಯನ್ನು ಅದು ಪ್ರಭಾವಶಾಲಿಯಾಗಿ ಹೇಳುವುದರಿಂದ ನಮ್ಮ ಒಳಗನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಮುನಿಯಪ್ಪ ಒಂದು ಮಾನವೀಯ ಆದರ್ಶದ ಸಂಕೇತವಾಗಿ ನಮ್ಮ ಕಣ್ಣೆದುರು ಕಾಣುತ್ತಾರೆ. ಇಂಥ ನಿಜಮನುಷ್ಯರ ಸಂಖ್ಯೆ ಹೆಚ್ಚಲಿ. ಮೀಡಿಯಾಗಳ ಕಣ್ಣಿಗೆ ಇಂಥವರು ಆಗಾಗ ಕಾಣಿಸಿಕೊಳ್ಳುವಂತಾಗಲಿ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಮೀಡಿಯಾಗಳು ದಟ್ಟದರಿದ್ರನ, ಕಟ್ಟ ಕಡೆಯ ಮನುಷ್ಯನನ್ನೂ ತಲುಪುವಂತಾಗಲಿ, ಅವರುಗಳ ನಿಷ್ಕಳಂಕ ಬದುಕನ್ನು ಪ್ರತಿಬಿಂಬಿಸುವಂತಾಗಲಿ, ಅವರಿಗೆ ಆಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ಪ್ರತಿಭಟಿಸುವಂತಾಗಲಿ.

ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151&section=54&menuid=13

ಕಪಟ ಜ್ಯೋತಿಷಿಗಳ ವಿರುದ್ಧ ಸುಧೀಂದ್ರ ಹಾಲ್ದೊಡ್ಡೇರಿಯವರು ಬರೆದದ್ದು...


ಜನರನ್ನು ಮೌಢ್ಯದ ಅಂಧಕಾರದಲ್ಲಿ ಮುಳುಗಿಸಲು ಯತ್ನಿಸುತ್ತಿರುವ ಕಪಟ ಜ್ಯೋತಿಷಿಗಳು ಹಾಗು ಅವರಿಗೆ ವೇದಿಕೆ ಒದಗಿಸುತ್ತಿರುವ ಟಿವಿ ಚಾನಲ್‌ಗಳಿಗೆ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಚಾಟಿ ಬೀಸಿದ್ದಾರೆ. ವಿಜಯ ಕರ್ನಾಟಕದಲ್ಲಿ ನೆಟ್ ನೋಟ ಅಂಕಣ ಬರೆಯುವ ಹಾಲ್ದೊಡ್ಡೇರಿಯವರು ಹೇಗೆ ಕಪಟ ಜ್ಯೋತಿಷಿಗಳು ನಮ್ಮ ಮೀಡಿಯಾಗಳಲ್ಲಿ ವಿಜೃಂಭಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭೀತಿಯನ್ನೇ ಸರಕು ಮಾಡಿಕೊಂಡಿರುವ ಮಾಧ್ಯಮಗಳು ಪ್ರಳಯದ ಭಯವನ್ನು ಸೃಷ್ಟಿಸುತ್ತಿರುವ ಕುರಿತು ಅವರು ಈ ಲೇಖನದಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.


ಸುಧೀಂದ್ರ ಹಾಲ್ದೊಡ್ಡೇರಿ
ಕಪಟ ಜ್ಯೋತಿಷಿಗಳ ವಿರುದ್ಧ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಇನ್ನಷ್ಟು ಲೇಖನಗಳು ಬರಬೇಕಿದೆ. ಹಿಂದೆ ಇದೇ ವಿಜಯ ಕರ್ನಾಟಕದಲ್ಲಿ ಲೋಕೇಶ್ ಕಾಯರ್ಗ ತಮ್ಮ ಸಕಾಲಿಕ ಅಂಕಣದಲ್ಲಿ ಬುರುಡೆ ಜ್ಯೋತಿಷಿಗಳ ಕುರಿತು ಬರೆದಿದ್ದರು. ಈಗ ಹಾಲ್ದೊಡ್ಡೇರಿಯವರು ಬರೆದಿದ್ದಾರೆ. ಅಗ್ಗದ ಪ್ರಚಾರಕ್ಕಾಗಿ, ಟಿಆರ್‌ಪಿ ಆಸೆಗಾಗಿ ಜ್ಯೋತಿಷ್ಯದ ಹೆಸರಲ್ಲಿ ದಂಧೆ ನಡೆಸುವವರ ವಿರುದ್ಧ ಇನ್ನಷ್ಟು ವ್ಯಾಪಕವಾಗಿ ಜನಾಭಿಪ್ರಾಯ ರೂಪುಗೊಳ್ಳಬೇಕಿದೆ.


ಹಾಲ್ದೊಡ್ಡೇರಿಯವರಿಗೆ ನಮ್ಮ ಥ್ಯಾಂಕ್ಸ್. ಹಾಗೆಯೇ ವಿಜಯ ಕರ್ನಾಟಕ ಪತ್ರಿಕೆಗೂ ಕೂಡ. ಈ ಕೆಳಗಿನ ಲಿಂಕ್ ಬಳಸಿ ನೀವು ಹಾಲ್ದೊಡ್ಡೇರಿಯವರ ಲೇಖನ ಓದಬಹುದು.
 http://www.vijaykarnatakaepaper.com/pdf/2011/05/16/20110516a_008101002.jpg 
ಅಥವಾ ಇಲ್ಲಿ ಒದಗಿಸಿರುವ ಪಿಡಿಎಫ್ ಚಿತ್ರದ ಮೇಲೂ ಕ್ಲಿಕ್ ಮಾಡಿ ಲೇಖನ ಓದಬಹುದು. 


ಅಂದ ಹಾಗೆ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನದ ಕುರಿತು ಹಾಲ್ದೊಡ್ಡೇರಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು ಹೀಗೆ: ಶ್ಲಾಘನೀಯ ಪ್ರಯತ್ನ, ನಿಮ್ಮೊಂದಿಗಿದ್ದೇನೆ. ಇಂದಿನ ವಿಜಯ ಕರ್ನಾಟಕ ಅಂಕಣ ಲೇಖನದ ಮೂಲಕ ನನ್ನದೊಂದು ಪುಟ್ಟ ಪ್ರಯತ್ನ ನಡೆದಿದೆ.
-ಸಂ

ದಿನೇಶ್ ಅಮೀನ್ ಮಟ್ಟು: ಕನ್ನಡ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಅಪೂರ್ವ ಪತ್ರಕರ್ತ

ದಿನೇಶ್ ಅಮೀನ್ ಮಟ್ಟು
 ಪ್ರಜಾವಾಣಿಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅವರು ೨೦೧೧ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಬರೆದಿರುವ ಲೇಖನ ಇಲ್ಲಿದೆ. ಪಿ.ಲಂಕೇಶರ ನಂತರ ಸಮಕಾಲೀನ ಜಗತ್ತನ್ನು ದಿನೇಶ್ ಅಮೀನ್ ಮಟ್ಟು ಅವರಷ್ಟು ಸೂಕ್ಷ್ಮಜ್ಞತೆಯಿಂದ ದಾಖಲಿಸಿದವರು ವಿರಳ. ಹೊಸ ತಲೆಮಾರಿನ ಪತ್ರಕರ್ತರಿಗೆ ದಿನೇಶ್ ಅವರ ಬರೆಹಗಳು ಪ್ರೇರಣೆಯನ್ನು ನೀಡಬಲ್ಲವು. ಆತ್ಮರತಿಯ, ಸ್ಟಾರ್‌ಗಿರಿಯ ಹಂಗಿಲ್ಲದಂತೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ಕಟ್ಟಿಕೊಡಬಲ್ಲ, ಆ ಮೂಲಕವೇ ಜನಪರವಾದ ಸಂವೇದನೆಗಳನ್ನು ಓದುಗರಲ್ಲಿ ಉದ್ದೀಪಸಬಲ್ಲ ದಿನೇಶ್ ಕನ್ನಡ ಪತ್ರಿಕಾರಂಗದ ಆಸ್ತಿ. ಬಿಳಿಮಲೆಯವರು ಬರೆದಿರುವ ಈ ಲೇಖನ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿರುವ ದಿನೇಶ್ ಅವರು ಅದಕ್ಕೆ ಎಷ್ಟು ಅರ್ಹರು ಎಂಬುದನ್ನು ಸಾಬೀತುಪಡಿಸುತ್ತದೆ. ಸಂಪಾದಕೀಯ ಬಳಗದ ಪರವಾಗಿ ದಿನೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಲೇಖನವನ್ನು ಒದಗಿಸಿದಕ್ಕಾಗಿ ಬಿಳಿಮಲೆ ಅವರಿಗೆ ಥ್ಯಾಂಕ್ಸ್.
-ಸಂಪಾದಕೀಯ

ಪತ್ರಕರ್ತರ ನಡವಳಿಕೆಗಳು ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರೆಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ  ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಉದೀಯಮಾನರಾಗುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: ೧೯೫೯ )  ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್ ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳ, ನೇರ, ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.

ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ಜನ ಶಕ್ತಿ ಬೆಳೆತೆಗೆವ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು ೧೯೮೯ ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ , ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು. ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. ೨೦೦೨ ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು, ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು  ದಿನೇಶ್ ಬರೆದ ಕಣ್ಣೆದುರಿನ ತಳಮಳ (೧೯೯೯), ದೆಹಲಿ ನೋ೧ ( ೨೦೦೮) ಮತ್ತು ನಾರಾಯಣ ಗುರು ( ೨೦೦೯)  ಕೃತಿಗಳನ್ನು ಓದಬೇಕು.

ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ, ದಿನೇಶ್ ಅಮೀನ್ ಅವರು ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, ೨೦೦೫ ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ,  ೨೦೦೬ ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. ೨೦೦೮ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಡಾ.ಪುರುಷೋತ್ತಮ ಬಿಳಿಮಲೆ
ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ಆಳವಾದ ನೆನಪುಗಳನ್ನು ದಿನೇಶ್ ಬಿಟ್ಟು ಹೋಗಿರುವುದಕ್ಕೆ ಕಾರಣ, ಅವರು ತಾವು ನೆಲೆಊರಿದ ಊರಿನ ಪ್ರಾದೇಶಿಕ ಗುಣಗಳನ್ನು ಮತ್ತು ಜನಗಳನ್ನು ಅರ್ಥಮಾಡಿಕೊಂಡ ಬಗೆ. ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ, ಬದಲು ತಾವು ಕೆಲಸ ಮಾಡುತ್ತಿರುವ ಊರಿನ ಸಂವೇದನೆಗಳನ್ನು ಮತ್ತು ಅವುಗ ಸ್ವಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಅನನ್ಯತೆಯನ್ನು ಮರೆಯದೆ ಬರೆಯುತ್ತಾರೆ. ಹೀಗಾಗಿ ಅವರು ಮಂಗಳೂರಿನ  ಬಗ್ಗೆಯೂ, ಹುಬ್ಬಳ್ಳಿಯ ಬಗೆಯೂ ಒಂದೇ ರೀತಿಯಲ್ಲಿ ಬರೆಯುತ್ತಾರೆಂದು ನಮಗೆ ಅನಿಸುವುದಿಲ್ಲ.  ಮಂಗಳೂರಿನ ಬಗ್ಗೆ ಬರೆಯವಾಗ ದಿನೇಶ್‌ಗೆ ಶಿವರಾಮ ಕಾರಂತರು ಆದರ್ಶವಾದರೆ, ಹುಬ್ಬಳ್ಳಿ ಬಗ್ಗೆ ಬರೆಯುವಾಗ ಬೇಂದ್ರೆ ಆದರ್ಶ. ಇದೇ ಅವರ ಲೇಖನಗಳ ಸೃಜನಶೀಲತೆಯ ಗುಟ್ಟು. ಇದು ಇನ್ನೂ ಖಚಿತವಾಗಬೇಕಾದರೆ ನಾವು ಅವರ ದೆಹಲಿ ನೋಟ( ೨೦೦೮) ಕೃತಿಯನ್ನು ಓದಬೇಕು. ದೆಹಲಿ ರಾಷ್ಟ್ರದ ರಾಜಧಾನಿ, ಅಲ್ಲಿಂದ ಕರ್ನಾಟಕದ ಬಗ್ಗೆ ಬರೆಯುವಾಗ ಆ ಬರೆಹಕ್ಕೆ ರಾಷ್ಟ್ರೀಯ ಚೌಕಟ್ಟು ಇರಲೇಬೇಕು. ದೆಹಲಿ ನೋಟದ ಯಾವ ಲೇಖನವೂ ಈ ಚೌಕಟ್ಟನ್ನು ಮೀರಲೇ ಇಲ್ಲವಾದ್ದರಿಂದ ಅವುಗಳಿಗೆ ವಿಶೇಷವಾದ ಶಕ್ತಿ ಪ್ರಾಪ್ತಿಸಿದೆ. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಎಂದು ಕರ್ನಾಟಕದ ಜನರಿಗೆ ಮೊದಲ ಬಾರಿಗೆ ಸವಿಸ್ತಾರವಾಗಿ ತಿಳಿದದ್ದು ದಿನೇಶ್ ಅಂಕಣಗಳನ್ನು ಓದಲಾರಂಭಿಸಿದ ಮೇಲೆಯೇ. ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣವನ್ನು ಅವರು ಪ್ರಖರ ಭಾಷೆಯಲ್ಲಿ ಅಷ್ಟೇ ಸೃಜನಶೀಲವಾಗಿ  ಪ್ರತೀತಗೊಳಿಸಿದರು. ಎಷ್ಟೋ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ದಿನೇಶ ಲೇಖನದಿಂದ ಪ್ರೇರಣೆ ಪಡೆದು ತಮ್ಮ ಹೋರಾಟದ ಹಾದಿಗಳನ್ನು ಹರಿತಗೊಳಿಸಿಕೊಂಡಿದ್ದಾರೆ. ಅವರ ಈಚಿನ ಅಂಕಣ ಅನಾವರಣ ವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯ ಮತ್ತು ತಾಖತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿರಿಸುತ್ತಿದೆ.

ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ. ಅದಕ್ಕಾಗಿ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.

Saturday, May 14, 2011

ಜೆ ಅಕ್ಷರದಿಂದ ಶುರುವಾಗುವ ಎಲ್ಲವೂ ಕೆಟ್ಟದ್ದು ಎನ್ನುತ್ತಾನೆ ಈ ಮಹಾತ್ಮ....


ಇಂಗ್ಲಿಷ್‌ನ ಜೆ ಅನ್ನೋ ಅಕ್ಷರನೇ ಸರಿ ಇಲ್ಲ. ಜಪಾನ್ ಕೂಡ ಜೆ ಅಕ್ಷರದಿಂದ ಶುರುವಾಗುತ್ತೆ. ಅದಕ್ಕೆ ಹಾಗೆಲ್ಲ ಭೂಕಂಪ, ಸುನಾಮಿ ಆಗಿದ್ದು. ಅಲ್ಲೆಲ್ಲ ಹೋಗೋದ್ಯಾಕೆ? ಇಲ್ಲೇ ನಮ್ಮ ಬೆಂಗಳೂರನ್ನೇ ತಗೋಳಿ, ಎಲ್ಲ ದೊಡ್ಡ, ದೊಡ್ಡ ರೌಡಿಗಳು,  ಎಲ್ಲ ಜೆ ಅಕ್ಷರದಿಂದನೇ ಇದಾರೆ. ಉದಾಹರಣೆಗೆ ಜಯರಾಜ್. ನಂಬರ್ ೫ ಮತ್ತು ೭ ಒಟ್ಟಿಗೆ ಇರಬಾರದು. ಅವೆರಡಕ್ಕೂ ಆಗಲ್ಲ. ಅವೆರಡು ಒಟ್ಟಿಗೆ ಇದ್ರೆ ಅನಾಹುತ ಸೃಷ್ಟಿ ಮಾಡಿಬಿಡುತ್ತವೆ.

ಇದನ್ನೆಲ್ಲ ಹೇಳ್ತಾ ಇರುವುದು, ಮೀಡಿಯಾಗಳ ಜ್ಯೋತಿಷ್ಯ ಪ್ರೇಮದಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಯವರ್ಧನ್ ಅನ್ನೋ ಸಂಖ್ಯಾಶಾಸ್ತ್ರ ಪ್ರವೀಣ. ಇವನಿಗೆ ವೇದಿಕೆ ಕಲ್ಪಿಸಿ ಕೊಡುತ್ತಿರುವುದು ಒನ್ಸ್ ಎಗೇನ್ ಸುವರ್ಣ ನ್ಯೂಸ್.

ಜೆ ಅಕ್ಷರದಿಂದ ಬೇರೆ ಯಾವ ದೇಶಗಳ ಹೆಸರು ಇಲ್ಲವೇ? ಹಾಗಿದ್ದರೆ ಜರ್ಮನಿಯಲ್ಲೇಕೆ ಭೂಕಂಪ ಆಗೋಲ್ಲ? ಜೆ ಅಕ್ಷರ  ಬಿಟ್ಟು  ಬೇರೆ ಅಕ್ಷರದಿಂದ ಶುರುವಾಗೋ ಯಾವ ರೌಡಿಗಳು ಈ ಮನುಷ್ಯನ ಕಣ್ಣಿಗೆ ಕಾಣುತ್ತಿಲ್ಲವೇ? ಜ್ಯೋತಿ ಬಾಫುಲೆ,  ಜವಹರಲಾಲ್ ನೆಹರೂ,  ಜಗಜೀವನ್ ರಾಮ್, ಜ್ಯೋತಿ ಬಸು, ಜಿಡ್ಡು ಕೃಷ್ಣಮೂರ್ತಿ, ಜಾರ್ಜ್ ಫರ್ನಾಂಡಿಸ್  ಇವರುಗಳೆಲ್ಲ ಯಾರು? ಇವರೂ ಸಹ ಸಮಾಜದ್ರೋಹಿಗಳ ಹಾಗೆ ಈತನಿಗೆ ಕಾಣಿಸಬಹುದೆ? ಈತನ ಪ್ರಕಾರ ಅ ಅಕ್ಷರ ಕೂಡ ಕೆಟ್ಟದಂತೆ. ಅದಕ್ಕೂ ಏನೋ ಒಂದು ತಲೆ ಬುಡ ಇಲ್ಲದ ವಿವರಣೆ  ಕೊಡುತ್ತಾನೆ. ಏನೋ ಹಾಳು ಬಡಿದುಕೊಂಡು ಹೋಗಲಿ. ಇದು ಅವನ ತಪ್ಪೋ, ಅವನು ನಂಬಿಕೊಂಡಿರುವ ಸಂಖ್ಯಾಶಾಸ್ತ್ರದ ತಪ್ಪೋ ಗೊತ್ತಿಲ್ಲ ಅಂತ ಸುಮ್ಮನೆ ಇರಬಹುದು. ದುರಂತ ಅಂದರೆ, ಸುವರ್ಣದವರು ಇಂಥವನ ಪಕ್ಕ, ರಾಮಕೃಷ್ಣರಾವ್ ಅವರಂಥ ಹಿರಿಯ ವಿಜ್ಞಾನಿಯನ್ನು ಕೂರಿಸಿ ಕಾರ್ಯಕ್ರಮ ನಡೆಸುತ್ತಾರೆ. ಆ ವಿಜ್ಞಾನಿ ಏನೇ ಲಾಜಿಕ್ ಮಾತಾಡಿದ್ರು, ಅದು ಹುಚ್ಚನ ಮುಂದೆ ಮಾತಾಡಿದ ಹಾಗೆ.

ಅಂದ ಹಾಗೆ ಮೇ ೨೧ ಕ್ಕೆ ಪ್ರಳಯ ಆಗುತ್ತೋ ಇಲ್ವೋ ಅನ್ನೋ ಬಗ್ಗೆ ಕಾರ್ಯಕ್ರಮ ಅದು. ಈ ಮನುಷ್ಯನ  ಪ್ರಕಾರ ೨೦೧೯, ತಪ್ಪಿದರೆ ೨೦೨೯ಕ್ಕೆ ಪ್ರಳಯ ಆಗೇ ಆಗುತ್ತಂತೆ. ಕಾರಣ, ನಂಬರ್ ೯!

ಏನಾಗಿದೆ ನಮ್ಮ ಮೀಡಿಯಾಗಳಿಗೆ? ಕೊಂಚವಾದರೂ ಸಂಕೋಚ, ಮುಜುಗರವೂ ಆಗುವುದಿಲ್ಲವೇ? ಇಷ್ಟು ಕಾಲ ನಾವು ಮೀಡಿಯಾಗಳಿಗೆ ಸಾಮಾಜಿಕ ಕಾಳಜಿ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದೆವು? ಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲವೇ ಎಂದು ಈಗ ಪ್ರಶ್ನಿಸಬೇಕಿದೆ. ಹೀಗೆ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಜನರು ಮೀಡಿಯಾಗಳಿಗೇಕೆ ಬರುತ್ತಾರೆ? ಇಂಥದ್ದೇ ಬುರುಡೆ ಜ್ಯೋತಿಷಿಗಳ ಮನೆಗಳಲ್ಲಿ ಅವರ ಸಹಾಯಕರ ಕೆಲಸವನ್ನೇಕೆ ಮಾಡಬಾರದು?

ಮಾತು ಕಟುವೆನ್ನಿಸಿದರೆ ಕ್ಷಮೆ ಇರಲಿ.

ನಾಳೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ...


ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ನಾಳೆ ಮತದಾನ ನಡೆಯಲಿದೆ. ಈ ಚುನಾವಣೆಗಳು ಮುಗಿದ ತರುವಾಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.

ಕಾರ್ಯನಿರತ ಪತ್ರಕರ್ತರ ಸಂಘವೇ ಪತ್ರಕರ್ತರ ಪಾಲಿಗೆ ದೊಡ್ಡ ಸಂಘಟನೆ. ರಾಜ್ಯದ ಎಲ್ಲೆಡೆಯೂ ಇದು ಹರಡಿಕೊಂಡಿದೆ. ಹಲವು ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ ಘಟಕದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ ಇತ್ಯಾದಿಗಳಿಗೆ ಸಿಕ್ಕು ಸಂಘಟನೆ ನಲುಗಿ ಹೋಗಿದೆ. ಸಂಘದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲೂ ಸಹ ಸಾಧ್ಯವಾಗಲಿಲ್ಲ. ಈಗ ಬಾಡಿಗೆ ಕಟ್ಟಡದಲ್ಲಿ ಇರುವ ದುಸ್ಥಿತಿಗೆ ತಲುಪುವಂತಾಗಿದ್ದಕ್ಕೆ ಕಾರಣಗಳನ್ನು ಹುಡುಕಿಕೊಳ್ಳುವ ಗೋಜಿಗೆ ಯಾರೂ ಹೋದಂತಿಲ್ಲ. ಕೇಸು, ಕಟ್ಲೆ, ತಡೆಯಾಜ್ಞೆ ಇತ್ಯಾದಿಗಳಲ್ಲಿ ಮುಳುಗಿ ಹೋದ ಸಂಘ ಉದ್ಧಾರವಾಗುವುದಾದರೂ ಹೇಗೆ?

ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಕೆಲವರು ಛೇಡಿಸುವುದುಂಟು. ಹಿಂದೆ ಗೊತ್ತುಗುರಿಯಿಲ್ಲದಂತೆ ಪತ್ರಕರ್ತರಲ್ಲದವರಿಗೆ ಸದಸ್ಯತ್ವ ಕೊಟ್ಟಿದ್ದರ ಪರಿಣಾಮ ಇದು. ಸಾಕಷ್ಟು ಮಂದಿ ಚುನಾವಣೆಗಳಲ್ಲಿ ಗೆಲ್ಲುವ ಸಲುವಾಗಿ ಮನೆಯವರು, ನೆಂಟರು ಇತ್ಯಾದಿಗಳನ್ನೆಲ್ಲ ಸದಸ್ಯರನ್ನಾಗಿಸಿದ್ದರು. ನಂತರ ಪತ್ರಕರ್ತರಲ್ಲದವರನ್ನು ಕಿತ್ತುಹಾಕಲು ಒಂದು ಹರಸಾಹಸವನ್ನೂ ಮಾಡಲಾಯಿತು. ಆದರೂ ಯೂನಿಯನ್ ಇನ್ನೂ ಒಂದು ಹದಕ್ಕೆ ಬಂದ ಹಾಗಿಲ್ಲ.

ಯೂನಿಯನ್ ನಿಜವಾಗಲೂ ಮಾಡಬೇಕಾಗಿರುವ ಕೆಲಸ ಏನು ಎಂಬುದೇ ಪದಾಧಿಕಾರಿಗಳಿಗೆ ಗೊತ್ತಿದ್ದಂತಿಲ್ಲ. ಅದರ ಕುರಿತು ಕಾಳಜಿಯೂ ಯಾರಲ್ಲೂ ಇದ್ದ ಹಾಗಿಲ್ಲ. ಒಂದು ಉದಾಹರಣೆ: ಸರ್ಕಾರದ ವಾರ್ತಾ ಇಲಾಖೆ ಪತ್ರಕರ್ತರಿಗೆ ನೀಡುವ ಮಾನ್ಯತಾ ಪತ್ರ ಎಷ್ಟು ಜನ ನಿಜವಾದ ಪತ್ರಕರ್ತರಿಗೆ ಸಿಕ್ಕಿದೆ? ಇತ್ತೀಚಿಗೆ ಈ ಮಾನ್ಯತಾ ಪತ್ರ ಪಡೆಯಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನಿಯಮಾವಳಿಗಳನ್ನು ಗಮನಿಸಿದರೆ ಹೊಸದಾಗಿ ಮಾನ್ಯತಾ ಪತ್ರವನ್ನು ಪಡೆಯುವುದು ದುಸ್ಸಾಧ್ಯವೆಂಬುದು ಗೊತ್ತಾಗುತ್ತದೆ. ಈ ಕುರಿತು ಯೂನಿಯನ್ ಧ್ವನಿ ಎತ್ತಿದೆಯೇ?

ಈಗೀಗ ಪತ್ರಿಕಾ ಸಂಸ್ಥೆಗಳು ಪತ್ರಕರ್ತರನ್ನು ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿವೆ. ಒಂದು ವರ್ಷದ ಅವಧಿಗೆ ಮಾತ್ರ ಈ ಗುತ್ತಿಗೆ, ನಂತರ ನವೀಕರಣಗೊಂಡರೆ ಇನ್ನೊಂದು ವರ್ಷ. ಬಾಡಿಗೆ ಮನೆಗಳ ಕರಾರು ಪತ್ರದಂತೆ ಪತ್ರಕರ್ತರ ನೇಮಕಾತಿಯ ಕರಾರು ಇರುತ್ತದೆ. ಬಾಂಡೆಡ್ ಲೇಬರ್‌ಗಳಂತೆ ಪತ್ರಿಕಾ ಸಂಸ್ಥೆಗಳನ್ನು ಪತ್ರಕರ್ತರನ್ನು ಬಳಸಿಕೊಳ್ಳುತ್ತಿವೆ. ಈ ಕುರಿತು ಯೂನಿಯನ್ ಧ್ವನಿಯೆತ್ತಬಹುದಿತ್ತಲ್ಲವೇ?

ಇತ್ತೀಚಿಗೆ ವಿಧಾನಸೌಧ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಾವಳಿ ತಂದಾಗ ಸಂಘಟನೆ ಪ್ರತಿಭಟಿಸಿ, ಸಂಘದ ಗುರುತಿನ ಚೀಟಿ ಇದ್ದವರಿಗೂ ಪ್ರವೇಶ ನೀಡುವ ಕುರಿತು ಆದೇಶ ಹೊರಡಿಸುವಲ್ಲಿ ಯಶಸ್ವಿಯಾಯಿತು. ಇಂಥದಕ್ಕೆ ತೋರುವ ಉತ್ಸಾಹವನ್ನು ಇತರ ಚಟುವಟಿಕೆಗಳಿಗೂ ಯಾಕೆ ಕೊಡುವುದಿಲ್ಲ ಎಂಬುದು ಹಲವರ ಪ್ರಶ್ನೆ. ಪತ್ರಕರ್ತರ ಮೇಲೆ ದಾಳಿಯಾದಾಗ ಒಂದು ಪತ್ರಿಕಾ ಹೇಳಿಕೆ ಕೊಡುವುದು ಮಾತ್ರ ಯೂನಿಯನ್ ಕೆಲಸವೇ?

ಇಂಥ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾಳೆ ಚುನಾವಣೆ. ವಿಶೇಷವೆಂದರೆ ಮೇನ್ ಸ್ಟ್ರೀಮ್ ಎಂದು ಕರೆಯಲ್ಪಡುವ ಪ್ರಮುಖ ದಿನಪತ್ರಿಕೆಗಳ ಪತ್ರಕರ್ತರು ಈ ಕುರಿತು ತಲೆಯೇ ಕೆಡಿಸಿಕೊಂಡಿಲ್ಲ. ಅವರುಗಳಲ್ಲಿ ಬಹುತೇಕರು ಚುನಾವಣೆಯಲ್ಲಿ ಮತ ಚಲಾಯಿಸುವುದೂ ಅನುಮಾನ.

ಪತ್ರಕರ್ತರ ಸಂಘಟನೆಗಳ ಚುನಾವಣೆಗಳಲ್ಲೂ ಜಾತಿ-ಹಣದ ಬಳಕೆ ಹೇರಳವಾಗಿದೆ. ಮೊನ್ನೆ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಜಾತಿಯ ವಿಕೃತ ಸ್ವರೂಪವನ್ನು ಕಂಡವರು ಹೇಸಿಗೆ ಪಟ್ಟುಕೊಂಡಿದ್ದಾಗಿದೆ. ಪ್ರೆಸ್ ಕ್ಲಬ್ ಚುನಾವಣೆಗೂ ಮುನ್ನ ನಡೆದ ಜಾತಿಕೂಟಗಳ ಸಭೆಗಳು, ಅದಕ್ಕೆ ಸ್ಪಾನ್ಸರ್ ಮಾಡಿದ ಆಯಾ ಜಾತಿಯ ರಾಜಕಾರಣಿಗಳು ಮತ್ತವರ ಛೇಲಾಗಳು ಮುಂಬರುವ ದಿನಗಳಲ್ಲಿ ಇನ್ನೇನನ್ನು ಮಾಡುತ್ತಾರೋ ಎಂಬ ಆತಂಕ ಮೂಡಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸಭ್ಯರು ಆಯ್ಕೆಯಾಗಲಿ. ಪತ್ರಕರ್ತರ ನಿಜವಾದ ಸಮಸ್ಯೆಗಳನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿ ಎಂದು ಆಶಿಸೋಣ.