Sunday, October 23, 2011

ಎಬಿಸಿ ವರದಿಯೂ, ಕನ್ನಡ ಪತ್ರಿಕೆಗಳ ಪೈಪೋಟಿಯೂ...


ವಿಜಯ ಸಂಕೇಶ್ವರರ ಬಹುನಿರೀಕ್ಷೆಯ ದಿನಪತ್ರಿಕೆ ವಿಜಯ ವಾಣಿ ಆರಂಭವಾಗುವುದಕ್ಕೆ ಇನ್ನು ಎರಡು ಮೂರು ತಿಂಗಳಷ್ಟೇ ಬಾಕಿ ಉಳಿದಿದೆ. ಬರುವ ಜನವರಿಯಲ್ಲೇ ಪತ್ರಿಕೆ ಆರಂಭವಾಗುವ ಸಾಧ್ಯತೆಗಳು ಇವೆ. ಹಾಗಾಗಿ ಬರುವ ವರ್ಷ ಕನ್ನಡ ಪತ್ರಿಕೆಗಳ ನಡುವೆ ಹೊಸದೊಂದು ಪೈಪೋಟಿಯ ಕಾಲ ಆರಂಭವಾಗಲಿದೆ. ಸಂಕೇಶ್ವರರ ವಿಜಯವಾಣಿ ಹತ್ತು ಆವೃತ್ತಿಗಳೊಂದಿಗೆ ಆರಂಭವಾಗುವ ಮುನ್ಸೂಚನೆ ಇರುವುದರಿಂದ ಅದು ನೇರವಾಗಿ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಗೇ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇದು ಗಂಭೀರವಾದ ಪರಿಣಾಮ ಬೀರುವುದು ಉದಯವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಿಗೆ ಎನ್ನುವುದು ನಿಸ್ಸಂದೇಹ.

ಸದ್ಯಕ್ಕೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಒಟ್ಟು ಪ್ರಸಾರ ಸಂಖ್ಯೆ ಎಬಿಸಿ ವರದಿಯ ಪ್ರಕಾರ ಹದಿನೈದರಿಂದ ಹದಿನಾರು ಲಕ್ಷ ಮಾತ್ರ. ಇತರ ಭಾಷೆಗಳಿಗೆ ಹೋಲಿಸಿದರೆ ಇದು ಕಡಿಮೆ. ಕರ್ನಾಟಕದಲ್ಲಿ ಪತ್ರಿಕೆ ಕೊಂಡು ಓದುವವರ ಸಂಖ್ಯೆ ಕಡಿಮೆ. ಇಲ್ಲದಿದ್ದರೆ ಐದು ಕೋಟಿಗೂ ಮೀರಿದ ಜನಸಂಖ್ಯೆಗೆ ಕನಿಷ್ಠ ೪೦ ಲಕ್ಷವಾದರೂ ಪತ್ರಿಕೆಗಳು ಖರ್ಚಾಗಬೇಕಿತ್ತು. ವಿಜಯವಾಣಿ ಹೊಸ ಓದುಗರನ್ನು ಪಡೆದು ಅಖಾಡಕ್ಕೆ ಇಳಿದರೆ ಅದು ಕನ್ನಡ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಂಡು ಬೆಳೆದರೆ? ಇತರ ಪತ್ರಿಕೆಗಳು ಬೆದರಿರುವುದು ಇದೇ ಕಾರಣಕ್ಕೆ.

ಸದ್ಯಕ್ಕೆ ಕನ್ನಡ ಪತ್ರಿಕೋದ್ಯಮದಲ್ಲಿ ನಂ.೧ ಪಟ್ಟಕ್ಕೆ ಸ್ಪರ್ಧೆ ಇರುವುದು ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಗಳ ನಡುವೆ ಮಾತ್ರ. ಮೊದಲ ಸ್ಥಾನದಲ್ಲಿರುವ ವಿಜಯ ಕರ್ನಾಟಕದ ಪ್ರಸಾರ ಸಂಖ್ಯೆಗಿಂದ ಪ್ರಜಾವಾಣಿಯ ಪ್ರಸಾರ ಸಂಖ್ಯೆ ಎಬಿಸಿ ಜನವರಿ-ಜೂನ್-೨೦೧೧ರ ವರದಿ ಪ್ರಕಾರ ೫೪ಸಾವಿರದಷ್ಟು ಮಾತ್ರ ಕಡಿಮೆ ಇದೆ. ಇದನ್ನು ಮೀರಲು ಸಾಧ್ಯವಾದರೆ ಪ್ರಜಾವಾಣಿ ಮತ್ತೆ ತನ್ನ ನಂ.೧ ಸ್ಥಾನವನ್ನು ಪಡೆಯಲಿದೆ. ಎಬಿಸಿ ವರದಿ ಪ್ರಕಾರ ೨೦೧೧ ಜನವರಿ-ಜೂನ್ ಅವಧಿಯಲ್ಲಿ ಪ್ರಜಾವಾಣಿ ಒಂದು ಸಾವಿರರಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲಷ್ಟೇ ಸಾಧ್ಯವಾಗಿದೆ. ಇದೇ ಸಮಯದಲ್ಲಿ ವಿಜಯ ಕರ್ನಾಟಕ ತನ್ನ ೫೦೦೦ದಷ್ಟು ಪ್ರಸಾರ ಸಂಖ್ಯೆ ಕಳೆದುಕೊಂಡಿದೆ.

ಮೂರನೇ ಸ್ಥಾನದಲ್ಲಿರುವ ಉದಯವಾಣಿಗೂ ಪ್ರಜಾವಾಣಿಗೂ ನಡುವಿನ ಅಂತರ ಗಣನೀಯ ಪ್ರಮಾಣದ್ದಾಗಿದೆ. ಮೂರನೇ ಸ್ಥಾನದಲ್ಲಿರುವ ಉದಯವಾಣಿಗಿಂತ ಸುಮಾರು ೨,೮೦,೦೦೦ದಷ್ಟು ಪ್ರಜಾವಾಣಿಯ ಪ್ರಸಾರ ಸಂಖ್ಯೆ ಹೆಚ್ಚು. ಉದಯವಾಣಿಯ ಮಟ್ಟಿಗೆ ಖುಷಿಯ ಬೆಳವಣಿಗೆ ಏನೆಂದರೆ ಈ ವರ್ಷದ ಪ್ರಥಮಾರ್ಧದಲ್ಲಿ ಅದು ಶೇ.೮ರಷ್ಟು ಪ್ರಸಾರ ಸಂಖ್ಯೆಯ ಬೆಳವಣಿಗೆಯನ್ನು ಕಂಡಿದೆ. ಇದು ಇತರ ಎಲ್ಲ ಪತ್ರಿಕೆಗಳಿಗಿಂತ ಹೆಚ್ಚು. ಸರಿಸುಮಾರು ೨೧ ಸಾವಿರದಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಉದಯವಾಣಿ ಸಫಲವಾಗಿದೆ.

ನಾಲ್ಕನೇ ಸ್ಥಾನದಲ್ಲಿರುವ ಕನ್ನಡಪ್ರಭ ಪತ್ರಿಕೆ ಉದಯವಾಣಿಗಿಂತಲೂ ೫೪ ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿದೆ. ಆದರೂ ಶೇ.೪ರಷ್ಟು ಬೆಳವಣಿಗೆ ಸಾಧಿಸಲು ಅಂದರೆ ಸುಮಾರು ೯,೦೦೦ ಹೆಚ್ಚು ಪ್ರಸಾರ ಸಂಖ್ಯೆಯನ್ನು ಹೊಂದಲು ಕನ್ನಡಪ್ರಭ ಯಶಸ್ವಿಯಾಗಿದೆ. ಇನ್ನು ಕನ್ನಡಪ್ರಭಕ್ಕಿಂತ ೩೫ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿರುವ ಸಂಯುಕ್ತ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಎಬಿಸಿ ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ನಿಖರವಾಗಿ ಹೇಳುತ್ತದೆ. ಅದು ಪತ್ರಿಕೆಗಳ ಪ್ರಿಂಟಿಂಗ್ ಸೆಕ್ಷನ್‌ಗಳಿಗೇ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಹೀಗಾಗಿ ಎಬಿಸಿ ನೀಡುವ ಅಂಕಿಅಂಶಗಳು ಅತ್ಯಂತ ವಿಶ್ವಾಸಾರ್ಹವಾಗಿರುತ್ತದೆ.

ಕನ್ನಡ ಪತ್ರಿಕೆಗಳ ೨೦೧೧ರ ಪ್ರಥಮಾರ್ಧದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಬಹುಶಃ ದ್ವಿತೀಯಾರ್ಧದಲ್ಲೂ ಅಂಥ ಬದಲಾವಣೆಗಳು ಕಾಣಿಸುವ ಸಾಧ್ಯತೆ ಕಡಿಮೆ. ಆದರೆ ವಿಜಯವಾಣಿ ಬಂದ ನಂತರ ಒಂದಷ್ಟು ಬದಲಾವಣೆ ಆಗೇತೀರುತ್ತದೆ ಎಂಬ ಮಾತು ಮಾಧ್ಯಮ ಪಂಡಿತರಲ್ಲಿದೆ.

ತಿಮ್ಮಪ್ಪ ಭಟ್ಟರು ವಿಜಯವಾಣಿ ಆರಂಭಕ್ಕೆ ಮುನ್ನ ಬೇಕಿರುವ ಎಲ್ಲ ಪೂರ್ವಸಿದ್ಧತೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ. ಹಲವು ಪತ್ರಿಕೆಗಳಿಗಿಂದ ಗುಳೆ ಹೋಗುವ ಕಾರ್ಯ ನಿಧಾನವಾಗಿ ಆರಂಭವಾಗಿದೆ. ಉದಯವಾಣಿಯಿಂದ ಕೆಲವರು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ಒಳ್ಳೆ ಹೆಸರು ಮಾಡಿರುವ, ಅಪಾರ ಶ್ರದ್ಧೆಯ ಹಿರಿಯ ವರದಿಗಾರ ರುದ್ರಣ್ಣ ಹರ್ತಿಕೋಟೆ ವಿಜಯವಾಣಿಯ ಪ್ರಮುಖ ಹುದ್ದೆಗೆ ತೆರಳಲಿದ್ದಾರೆ. (ಮುಖ್ಯ ವರದಿಗಾರ?) ಇನ್ನೂ ಯಾರ‍್ಯಾರು ಹೋಗುತ್ತಾರೋ ಕಾದು ನೋಡಬೇಕು.

ಮುಂದಿನ ವರ್ಷ ಕನ್ನಡ ಪತ್ರಿಕೆಗಳ ನಡುವೆ ಪೈಪೋಟಿಯಂತೂ ನಿಜ. ವಿಜಯ ಕರ್ನಾಟಕ ತನ್ನ ನಂ.೧ ಸ್ಥಾನ ಕಳೆದುಕೊಳ್ಳುತ್ತಾ? ಪ್ರಜಾವಾಣಿ ನಂ.೧ ಪಟ್ಟಕ್ಕೆ ಏರುತ್ತಾ? ವಿಜಯ ವಾಣಿ ಎಷ್ಟು ಎತ್ತರ ಏರಲು ಸಾಧ್ಯ?

ಅಷ್ಟಕ್ಕೂ ವಿಜಯವಾಣಿ ಇತರ ಪತ್ರಿಕೆಗಳ ಓದುಗರನ್ನು ಸೆಳೆದುಕೊಂಡರೆ, ಯಾವ ಪತ್ರಿಕೆ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ? ಸಂಕೇಶ್ವರರೇ ಸ್ಥಾಪಿಸಿದ ವಿಜಯ ಕರ್ನಾಟಕವೇ? ಒಂದು ಕಾಲದಲ್ಲಿ ಸಂಕೇಶ್ವರರ ನೆಚ್ಚಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು ನೇತೃತ್ವ ವಹಿಸಿರುವ ಕನ್ನಡಪ್ರಭವೇ? ಮಣಿಪಾಲದ ನೆರಳಿನಿಂದ ಹೊರಬಂದು ಬೆಂಗಳೂರಿನಲ್ಲಿ ಪ್ರಬಲವಾಗಿ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸುತ್ತಿರುವ ಉದಯವಾಣಿಯೇ? ಅಥವಾ ತನ್ನ ಸಾಂಪ್ರದಾಯಿಕ ಓದುಗರನ್ನು ತೀವ್ರವಾಗಿ ನೆಚ್ಚಿಕೊಂಡಿರುವ ಪ್ರಜಾವಾಣಿಯೇ?

ಕಾದು ನೋಡೋಣ.

7 comments:

  1. ಇಂತಹ ವರದಿಗಳಿಗಾಗಿ ನಾವು ಸಂಪಾದಕೀಯವನ್ನು ಇಷ್ಟ ಪಡುತ್ತೇವೆ. ಮಾಧ್ಯಮಗಳಲ್ಲಿ ನಡೆಯುವ ಬದಲಾವಣೆಗಳ ಬಗ್ಗೆ ನಮಗೆ ಕುತುಹಲ, ಅದನ್ನು ಉಣಬಡಿಸುವ ನಿಮಗೆ ಧನ್ಯವಾದಗಳು. ಅದನ್ನು ಬಿಟ್ಟು ಯಾವಗ್ಲು ಬಲಪಂತೀಯ ವಿರೋಧಿ ಧೋರಣೆಯ ಪೋಸ್ಟ್ ಗಳನ್ನು ಮಾಡ್ತೀರಲ್ಲ!
    ರಾಜಕೀಯ ವರದಿ, ರಾಜಕೀಯ ಚರ್ಚೆಗಳು ಮುಂತಾದವುಗಳಿಗೆ ನೂರಾರು ಬ್ಲಾಗ್ ಗಳು ಸಾಮಜಿಕ ತಾಣಗಳಿವೆ ಅಲ್ಲೆಲ್ಲ ಬೇಕಾದಷ್ಟು ಚರ್ಚೆ ನಡೆಯುತ್ತೆ. ಲೇಖನಗಳಿಗೆ ನಿಮ್ಮ ವಿಚಾರಧಾರೆ ಯನ್ನು ತುರುಕಿ ಪಕ್ಷಪಾತಿಯಾಗಿ ಬರೆದು ಪೋಸ್ಟ್ ಮಾಡಿದರೆ ನಿಮಗು ರಾಜಕೀಯ ಪಕ್ಷದ ಪ್ರಣಾಳಿಕೆಗೂ ವ್ಯತ್ಯಾಸವೇನಿದೆ?
    ನಿಮ್ಮ ಬ್ಲಾಗ್ ಉದ್ದೇಶಕ್ಕೆ ತದ್ವಿರುದ್ದ ವಾಗಿ ನಡೆದುಕೊಳ್ಳುವ ಇಚ್ಚೆ ನಿಮಗಿದ್ದರೆ ನಮ್ಮದೇನು ಅಡ್ಡಿಯಿಲ್ಲ.
    - ಮಾರಣ್ಣ ವಡ್ಡರ್

    ReplyDelete
  2. In the same line please bring into light the certain papers mix of news with "views", using cartoons of Jail, sleeping on ICU, using word as Nataka as if these papers have the copy of medical reports etc. Especially Kannadaprabha has become so much cynic now we hardly see news without negative cynicism view in that paper. No surprise if its readership will loose even further from where it is right now.

    Naveen

    ReplyDelete
  3. ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್. ಕದನ ಕುತೂಹಲವಿರುವುದು ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ನಡುವೆ ಯಾರು ಗೆಲ್ಲಬಹುದು ಎಂಬುದರ ಕುರಿತು. ಪ್ರಜಾವಾಣಿ ನಂ.1 ಪಟ್ಟಕ್ಕೆ ಏರಲೇಬೇಕೆಂದು ಸಾಕಷ್ಟು ಸಿದ್ಧತೆ ನಡೆಸಿದೆ. ಬಳ್ಳಾರಿಯಲ್ಲಿ ಆವೃತ್ತಿ ಆರಂಭಿಸಲು ಹೊರಟಿದೆ ಎಂಬ ಸುದ್ದಿ ಇದೆ. ನಂ.1 ಪಟ್ಟ ಹೋಗಲಿದೆ ಎನಿಸಿದರೆ ಟೈಮ್ಸ್ ನವರು ಏನು ಮಾಡುತ್ತಾರೆ ನೋಡಬೇಕು.

    ReplyDelete
  4. ಸುಮಾರು 65 ವರುಷದಿಂದ ಕರುನಾಡಿ ವಿಶ್ವಾಸವನ್ನು ಹೊಂದಿರುವ 'ಪ್ರಜಾವಾಣಿ'
    ಓದುಗರು ನಿಜವಾಗಲು ಅದರ ವಿಶ್ವಾಸಯುಕ್ತ ಸುದ್ದಿಯನ್ನು ಬಲ್ಲವರು. ಅದಕ್ಕಾಗಿಯೆ ಯಾರು ಏನೇ ಮಾಡಿದರು ಅವರು ಬೇರೆ ಪತ್ರಿಕೆಗೆ ಬದಲಾಗರು. ಒಂದು ನಿಜವಾದ ನಿವಾದ ಅಂಶ ವನ್ನು ಗಮನಿಸಿದರೆ. ವಿಜಯ ಕರ್ನಾಟಕ ಪತ್ರಿಕೆ 2000 ದಲ್ಲಿ ಆರಬವಾಯಿತು. ಎಲ್ಲರೂ ತಿಳದಿರುವುದು ವಿಕೆ ಬಂದನಂತರ 'ಪ್ರಜಾವಾಣಿ' ಕಡಿಮೆಯಾಗಿದೆ ಎಂದು ಆದರೆ ಎಬಿಸಿ ಪ್ರಕಾರ ಅಂದು'ಪ್ರಜಾವಾಣಿ' ಪ್ರಸಾರ ಸಂಖ್ಯೆ ಜುಲ್ಐ ಡಿಸೆಂಬರ್ 3,38,913. ಆದರೆ ಇಂದು 'ಪ್ರಜಾವಾಣಿ' ಪ್ರಸಾರ ಸಂಖ್ಯೆ 5,18,000 ಅಂದರೆ ಸುಮಾರು 1,80,000 ಪ್ರತಿಗಳು ವಿಕೆ ಬಂದ ಮೇಲೆ ಹೆಚ್ಚಾಗಿದೆ. ಅದರ ನಿಜಾವಾದ ಓದುಗರು ಯಾವಾಗಲು ಅದರ
    ಬೆನ್ನೆಲುಬು. ಆಡಂಬರದ, ಅತಿರೇಕದ, ಆದಾರವಿಲ್ಲದ ಯಾವುದೇಸುದ್ದಿಗಳು 'ಪ್ರಜಾವಾಣಿ' ಯಿಂದ ಯಾವಾಗಲು ದೂರ.

    ReplyDelete
  5. its fact, journalism is not only circulation and TRP goods its one of major role for society, know a days there is no meaning for journalism i never see for p.sainath in nalayak journalists and budding journalists they only think for jumping one media to another media because package. dirty fellows

    ReplyDelete
  6. ಸಂಕೇಶ್ವರರ ಹೊಸ ಪತ್ರಿಕೆಯಿಂದ ವಿಜಯ ಕರ್ನಾಟಕಕ್ಕೆ ಹೆಚ್ಚಿನ ಪೆಟ್ಟು ಬೀಳುವ ಸಂಭವವಿದೆ. ಸಂಕೇಶ್ವರರು ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಾದ್ದರಿಂದ ಈಗ ಸಂಘದ ಪರವಿರುವ ಓದುಗರು ವಿಜಯ ಕರ್ನಾಟಕದಿಂದ ಸಂಕೇಶ್ವರರ ಪತ್ರಿಕೆಗೆ ಬದಲಾಗುವ ಸಾಧ್ಯತೆ ಇದೆ. ಅಲ್ಲದೆ ಈಗ ವಿಜಯ ಕರ್ನಾಟಕದ ವಿತರಣ ಜಾಲವೂ ಸಂಘ ಪರ ಒಲವಿರುವ ವ್ಯಕ್ತಿಗಳ ಕೈಯಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿ ಸಂಕೇಶ್ವರರ ಪತ್ರಿಕೆ ಕಡೆಗೆ ವಿತರಣ ಜಾಲ ವಾಲುವ ಸಾಧ್ಯತೆ ಕಂಡು ಬರುತ್ತದೆ.-ಆನಂದ ಪ್ರಸಾದ್

    ReplyDelete