Tuesday, March 22, 2011

ರಮ್ಯಾ-ಗಣೇಶ್ ಜಗಳದ ಬೆಂಕಿಗೆ ಗಾಳಿ ಹಾಕಿದವರು ಯಾರು?


ನಟಿ ರಮ್ಯಾ ಹಾಗು ನಿರ್ಮಾಪಕ ಗಣೇಶ್ ನಡುವಿನ ಜಗಳ ಇಡೀ ಕನ್ನಡ ಸಿನಿಮಾರಂಗವನ್ನೇ ಎರಡು ಭಾಗವಾಗಿ ವಿಂಗಡಿಸಿದೆ. ಒಂದೆಡೆ ಕಲಾವಿದರ ಸಂಘ ಮತ್ತೊಂದೆಡೆ ನಿರ್ಮಾಪಕರ ಸಂಘ ತೊಡೆ ತಟ್ಟಿ ನಿಂತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ನಿಂತು ಏನೂ ಮಾಡಲಾಗದೆ ಒದ್ದಾಡುತ್ತಿದೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅಬ್ಬರಿಸುತ್ತಿದ್ದರೆ, ಅತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ನಾನೇ ಹೈಕಮಾಂಡ್ ಎಂದು ರೋಧಿಸುತ್ತಿದ್ದಾರೆ.

ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?

ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್‌ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್‌ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.

ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.

ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್‌ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್‌ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.

ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್‌ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.

ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.

ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.

ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್‌ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.

ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?

ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?

Saturday, March 19, 2011

ಕನ್ನಡಪ್ರಭ ನೆನೆದು ಉಮಾಪತಿಯವರು ಬರೆದ ವಿದಾಯ ಪತ್ರ...


ಕನ್ನಡಪ್ರಭದ ಜೊತೆಗಿನ ಕರುಳಬಳ್ಳಿಯನ್ನು ಕಡೆಗೂ ಕಡಿದುಕೊಂಡಿದ್ದೇನೆ. ರಾಜೀನಾಮೆ ಅಂಗೀಕಾರ ಆಗಿದೆ.

ಮನಸ್ಸು ಭಾರ. ಒಳಗೇ ಸುಡುವ ದುಗುಡ.... ಇಪ್ಪತ್ತಾರು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ನನ್ನನ್ನು ನೆಲೆ ನಿಲ್ಲಿಸಿ ನೀರು ಗೊಬ್ಬರ ಎರೆದ ನನ್ನ ಕನ್ನಡಪ್ರಭ... ಮೈಸೂರು ವಿ.ವಿ.ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಮೊದಲ ವರ್ಷ ಇಂಟರ್ನ್‌ಶಿಪ್ ಮಾಡಲು ಬಂದಾಗಲೇ ವಿಶೇಷ ವರದಿಯನ್ನು ನನ್ನ ಕೈಯಿಂದ ಬರೆಯಿಸಿ ಮುಖಪುಟದಲ್ಲಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಉದ್ಯೋಗ ನೀಡ್ತೇವೆ ಬರ್ತೀಯಾ ಎಂದು ಕರೆದು ತಬ್ಬಿಕೊಂಡು ಸದಾ ಬೆನ್ನು ತಟ್ಟಿದ ಕನ್ನಡಪ್ರಭ... 

ಖಾದ್ರಿ ಶಾಮಣ್ಣ, ಕೆ.ಸತ್ಯನಾರಾಯಣ, ವೈಯೆನ್ಕೆ, ಅವರಿಂದ ಮೊದಲಾಗಿ ರಾಮಪ್ರಸಾದ್, ಗರುಡನಗಿರಿ ನಾಗರಾಜ, ಹಿರಿಯಣ್ಣ ಡಿ.ಮಹದೇವಪ್ಪ, ನಾಡಿಗೇರ ಶ್ರೀಕಾಂತ, ಪಟ್ಟಾಭಿರಾಮನ್, ಕಳಾವರ ನರಸಿಂಹಶೆಟ್ಟಿ, ಭಾಷ್ಯಂ ಸಂಪತ್ತಯ್ಯಂಗಾರ್, ಸಂಪಿಗೆ ಸುಬ್ಬಣ್ಣ, ಮೇನಕಾ ಆಫೀಸಿನಲ್ಲೊಂದು ಸುಪ್ರಭಾತದ ಚಪ್ಪಲ್ಲಿ ಸೀತಾರಾಂ, ಟಿ.ಜಿ.ಅಶ್ವತ್ಥನಾರಾಯಣ, ಮರಡಿಹಳ್ಳಿ ಶ್ರೀಧರಮೂರ್ತಿ ಶ್ರೀಹರ್ಷ, ಜಿ.ಎಸ್.ಸದಾಶಿವ, ಪಾರ್ಥಸಾರಥಿ, ಜಯರಾಮ ಅಡಿಗ, ಶಶಿಧರ ಭಟ್, ರವಿ ಬೆಳಗೆರೆ, ಪ.ಸ.ಕುಮಾರ್, ಎಚ್.ಆರ್.ರಂಗನಾಥ್, ರವಿ ಹೆಗಡೆ, ಶಿವಸುಬ್ರಹ್ಮಣ್ಯ, ಮಲ್ಲಿಕಾರ್ಜುನಯ್ಯ, ಮನೋಹರ ಯಡವಟ್ಟಿ, ಎಸ್ಕೆ ಶ್ಯಾಮಸುಂದರ್, ಉದಯ ಮರಕಿಣಿ, ಜೋಗಿ, ಸುಧಾಕರ ದರ್ಭೆ, ಶಿವಶಂಕರ್ ಅವರಿದ್ದ ಕನ್ನಡಪ್ರಭ....

ಕಾರ್ಡ್‌ಬೋರ್ಡ್ ಗೋಡೆಯ ಆ ಬದಿಯಲ್ಲಿ ವಿ.ಎನ್.ಸುಬ್ಬರಾವ್, ಇ.ರಾಘವನ್, ಟಿ.ಜೆ.ಎಸ್. ಜಾರ್ಜ್, ಕೆ.ಎಸ್. ಸಚ್ಚಿದಾನಂದಮೂರ್ತಿ, ಅರಕಲಗೂಡು ಸೂರ್ಯಪ್ರಕಾಶ್, ಇಂಟೂರಿ ಚಂದ್ರಮೌಳಿ, ಗಿರೀಶ್ ನಿಕಮ್, ಕೆ.ವಿ.ರಮೇಶ್, ರಾಮಕೃಷ್ಣ ಉಪಾಧ್ಯಾಯ, ನಚ್ಚಿ ಅರ್ಥಾತ್ ನರಸಿಂಹ ಚಕ್ರವರ್ತಿ, ಶ್ರೀನಿವಾಸ ಸಿರ್ನೂರ್ಕರ್, ಬಾಲು, ಮುಂತಾದ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯರು- ಸಂಗಾತಿಗಳ ಸಹವಾಸವನ್ನು ಕಟ್ಟಿ ಕೊಟ್ಟ ಕನ್ನಡಪ್ರಭ.... 

ದಿಲ್ಲಿಗೆ ಹರಸಿ ಕಳಿಸಿ ನನ್ನ ದಿಗಂತಗಳನ್ನು ವಿಸ್ತರಿಸಿದ ಕನ್ನಡಪ್ರಭ....ನೆರೆಯ ನಾಡಿನ ರಾಜಧಾನಿಯಲ್ಲಿ ಕನ್ನಡ ಛಾನೆಲ್‌ನ ಸುದ್ದಿ ವಿಭಾಗದ ಸೂತ್ರ ಹಿಡಿದು ಭ್ರಮ ನಿರಸನಗೊಂಡ ದಿನಗಳಲ್ಲಿ  ತಾಯಿಯಂತೆ ಕರೆದು ಮತ್ತೆ ಮಡಿಲಿಗಿರಿಸಿಕೊಂಡ ಕನ್ನಡಪ್ರಭ... ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳನ್ನು ಒದಗಿಸಿಕೊಟ್ಟು ಅವರಿಂದ ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡಪ್ರಭ.....

ಇಂತಪ್ಪ ಕನ್ನಡಪ್ರಭ ಇಂದು ಬದಲಾವಣೆಯ ಗಾಳಿಗೆ ಒಡ್ಡಿಕೊಂಡಿದೆ. ಅದರ ಜೀವಕೋಶಗಳ ಡಿಎನ್‌ಎ ವಿನ್ಯಾಸಕ್ಕೆ ಹೊಸ ರೂಪ. ಹೊಸ ಹೊರಳು. ಅಂಗಳದಲ್ಲಿ ಹರಿದ ಹೊಸ ನೀರು.. ಬೀಸಿದ ಹೊಸ ಗಾಳಿ....ಹೊತ್ತಿರುವ ಹೊಸ ಕಾವು ಬೆಳಕನ್ನೂ ನೀಡಲಿ. 

ನಾಡಿನ ಪತ್ರಿಕೋದ್ಯಮದ ಪ್ರಖರ ಸಾಕ್ಷಿಪ್ರಜ್ಞೆಯಿಂತಿರುವ ನಮ್ಮ ಹೆಮ್ಮೆಯ ಕೆ.ಸತ್ಯನಾರಾಯಣ ಇನ್ನೂ ಕನ್ನಡಪ್ರಭದಲ್ಲಿ ಬರೆಯುತ್ತಿದ್ದಾರೆ. ಹಳೆಯ ಕನ್ನಡಪ್ರಭದ ಅಳಿದುಳಿದ ಈ ಏಕೈಕ ಹೆಗ್ಗುರುತು ಇನ್ನೂ ಅಳಿಸಿಲ್ಲ. ಟಿ.ಜೆ.ಎಸ್. ಜಾರ್ಜ್ ಅವರ ಅಂಕಣಕ್ಕೆ ಹೊಸ ಹುಮ್ಮಸ್ಸಿನ ಡಿಸ್ಪ್ಲೇ  ಕೂಡ ಗಮನಾರ್ಹ. 

ಅಂದ ಹಾಗೆ ಬನ್ನಿ ಜೊತೆಗೆ ಕೆಲಸ ಮಾಡೋಣ ಎಂದು ಗೌರವಾನ್ವಿತ ಹಿರಿಯರೊಬ್ಬರು ದಿಲ್ಲಿಗೆ ಫೋನ್ ಮಾಡಿ ಕರೆದ ಹೊತ್ತಿನಲ್ಲಿ ಬದಲಾವಣೆಯ ಚಿತ್ರದ ರೂಪ ರೇಖೆಗಳು ನಿಚ್ಚಳ ಆಗಿರಲಿಲ್ಲ. ಹೀಗಾಗಿ ನಾನು ಹೊರಬಿದ್ದದ್ದು ಬದಲಾವಣೆ ವಿರುದ್ಧ ಎಂಬ ತಾಂತ್ರಿಕ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲ.

ನುರಿತ ಹಿರಿಯ ಕಸಬುದಾರ ಇ.ರಾಘವನ್ ಚುಕ್ಕಾಣಿ ಹಿಡಿದಿರುವ  ವಿಜಯ ಕರ್ನಾಟಕ ನನ್ನ ಸದ್ಯದ ಹೊಸ ನಾವೆ.

(ಇದು ಉಮಾಪತಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು. ನಿಷ್ಕಲ್ಮಶ ಮನಸ್ಸುಗಳಿಗೆ ಒಂದು ಸಂಸ್ಥೆಯೊಂದಿಗಿನ ಭಾವನಾತ್ಮಕ ನಂಟು ಹೇಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಉಮಾಪತಿಯವರು ತಮ್ಮ ಹೊಸ ನಾವೆಯ ಮೂಲಕ ಹೊಸ ಲೋಕವನ್ನು ನಮಗೆ ಪರಿಚಯಿಸುತ್ತ ಹೋಗಲಿ ಎಂದು ಆಶಿಸುತ್ತಾ, ಅವರಿಗೆ ಶುಭ ಕೋರುತ್ತೇವೆ.)

ಸುದ್ದಿ ಮನೆಗಳಲ್ಲಿ ಏನೇನಾಗ್ತಾ ಇದೆ.. ಮತ್ತೊಂದು ರೌಂಡು...


ಜಿ.ಎನ್.ಮೋಹನ್ ಒಮ್ಮೆ ಮೀಡಿಯಾ ಮಿರ್ಚಿಯಲ್ಲಿ ಬರೆದಿದ್ದ ಸಾಲುಗಳು ಇವು.

ಒಂದು ದಿನ ಪ್ರೆಸ್ ಕ್ಲಬ್ ನಲ್ಲಿ ನಾವೇ ಮುಂದೆ ನಿಂತು ಬೇರೊಬ್ಬರ ಕಾನ್ಫೆರೆನ್ಸ್ ಏರ್ಪಡಿಸಿದ್ದೆವು. ಬಂದ ಪತ್ರಕರ್ತರಿಗೆಲ್ಲಾ ಒಂದೊಂದು ಗಿಫ್ಟ್ ಪ್ಯಾಕ್ ಕೈಯಲ್ಲಿಡ್ತಾ ಇದ್ದೆವು. ಆಗ ಕನ್ನಡಪ್ರಭದ ಡಿ ಉಮಾಪತಿ ಎದುರಾದರು. ಅವರ ಕೈಗೂ ಒಂದು ಗಿಫ್ಟ್ ಇಡಲು ಹೋದೆ. ತಕ್ಷಣ ನೋ ಅಂತ ಗದರಿಕೊಂಡವರೇ ಧಡ ಧಡ ಮೆಟ್ಟಲಿಳಿದು ಹೋದರು. ಗಿಫ್ಟ್ ನ ಸರಿ ತಪ್ಪಿನ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಳ್ಳದೇ  ಇದ್ದ ನನಗೆ ಈ ಘಟನೆ ಒಳಗಣ್ಣನ್ನು ತೆರೆಸಿತು. ಗಿಫ್ಟ್ ನಿರಾಕರಣೆ ಆಂದೋಲನದಲ್ಲಿ ನಾನೂ ಒಬ್ಬನಾಗಿ ಹೋದೆ.

ಮಾಧ್ಯಮರಂಗದಲ್ಲಿ ಶುದ್ಧಹಸ್ತರು, ನಿಸ್ಪೃಹರು ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಮೌಲ್ಯ, ಆದರ್ಶಗಳೆಲ್ಲ ಸತ್ತು ಹೋಗುತ್ತಿವೆ ಎಂದು ಕೊರಗುತ್ತಿರುವ ಈ ಸಂದರ್ಭದಲ್ಲೂ ಇಂಥವರು ಮಾಧ್ಯಮ ರಂಗಕ್ಕೆ ಸಂಜೀವಿನಿಯಂತೆ ಇದ್ದೇ ಇರುತ್ತಾರೆ.

ಯಾಕೆ ಈ ವಿಷಯವನ್ನಿಲ್ಲಿ ಹೇಳಿದೆವೆಂದರೆ ಕನ್ನಡಪ್ರಭದ ಡಿ.ಉಮಾಪತಿ ಸುದ್ದಿಯಲ್ಲಿದ್ದಾರೆ. ಹಾಗೆ ನೋಡಿದರೆ ಅವರು ಪದೇ ಪದೇ ಮಾಧ್ಯಮ ಸಂಸ್ಥೆಗಳನ್ನು ಬದಲಿಸಿದವರಲ್ಲ. ಸುಮಾರು ೨೦ ವರ್ಷಗಳ ಕಾಲ ಕನ್ನಡಪ್ರಭದ ಭಾಗವಾಗಿದ್ದವರು ಅವರು. ದಿಲ್ಲಿ ವರದಿಗಾರರಾಗಿ ಹೋದ ಕನ್ನಡ ಪತ್ರಕರ್ತರ ಸಾಲಿನಲ್ಲಿ ಮೊದಲು ಕಾಣಿಸುವವರೇ ಉಮಾಪತಿ. ಕನ್ನಡ ಪತ್ರಕರ್ತರ ಪಾಲಿಗೆ ದಿಲ್ಲಿ ಎಂದರೆ ಉಮಾಪತಿ ಅನ್ನುವ ಹಾಗೆ ಅವರು ಇದ್ದರು. ಕನ್ನಡಿಗರ ಪಾಲಿಗೆ ಉಮಾಪತಿಯವರೇ ದಿಲ್ಲಿಯನ್ನು ನೋಡುವ ಕಣ್ಣಾಗಿದ್ದರು.

ಡಿ.ಉಮಾಪತಿ ಈಗ ಕನ್ನಡಪ್ರಭ ತೊರೆದಿದ್ದಾರೆ ಎಂಬ ಸುದ್ದಿ ಬಂದಿದೆ. ಅವರು ವಿಜಯ ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಬಹುತೇಕ ಖಚಿತ ಸಂಗತಿ. ಅವರಿಗೆ ಶುಭವಾಗಲಿ, ತಮ್ಮಂಥ ನೂರಾರು ಪತ್ರಕರ್ತರನ್ನು ಅವರು ಬೆಳೆಸುವಂತಾಗಲಿ.

ಕರ್ನಾಟಕದ ಮಾಧ್ಯಮ ರಂಗದಲ್ಲಿ ಹೊಸಹೊಸ ಸುದ್ದಿಗಳು ಚಾಲ್ತಿಯಲ್ಲಿವೆ. ಸುವರ್ಣ ನ್ಯೂಸ್‌ನ ಚಾನಲ್ ಹೆಡ್ ಎಚ್.ಆರ್.ರಂಗನಾಥ್ ರಾಜೀನಾಮೆ ಕೊಟ್ಟೇ ಹೋದರು ಎಂಬಂಥ ಸುದ್ದಿ ಹರಡಿತ್ತು (ಹರಡಿಸಲಾಗಿತ್ತು). ರಂಗನಾಥ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡ ನಂತರ ಸುದ್ದಿಯೂ ತಣ್ಣಗಾಗಿದೆ.

ಸಮಯ ಟಿವಿಯನ್ನು ಹಾಸನದ ಸಚಿನ್ ಎಂಬುವವರು ಕೊಳ್ಳುತ್ತಿರುವುದು ಪಕ್ಕಾ ಆಗಿದೆ. ಇವರಿಗೆ ಸಚಿವ ಮುರುಗೇಶ್ ನಿರಾಣಿ ಸಾಥ್ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಈ ಡೀಲಿನ ಹಿಂದಿದ್ದಾರೆ ಎಂಬ ಸುದ್ದಿ ಇದೆ. ಅಲ್ಲಿಗೆ ಎಚ್.ಡಿ.ಕುಮಾರಸ್ವಾಮಿಯವರ ಅವಳಿ ಚಾನಲ್ ಕನಸು ಕೈಗೂಡಲಾರದು.

ಪತ್ರಕರ್ತರ ವಲಸೆ ಕಾರ್ಯ ಇನ್ನೂ ಸಣ್ಣಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಸೃಜನಶೀಲ ಲೇಖಕಿ, ಸೂಕ್ಷ್ಮ ಮನಸ್ಸಿನ ಚೇತನಾ ತೀರ್ಥಹಳ್ಳಿ ಕನ್ನಡಪ್ರಭ ಬಿಟ್ಟು ವಿಜಯ ನೆಕ್ಸ್ಟ್ ಸೇರಿ ಸುಮಾರು ದಿನಗಳಾದವು. ಟೈಮ್ಸ್ ಬೋಧಿವೃಕ್ಷ ಅವರಿಗೆ ಹೊಸ ಹುರುಪನ್ನು ನೀಡಲಿ ಎಂಬುದು ನಮ್ಮ ಹಾರೈಕೆ.

ಜನಶ್ರೀಯಿಂದ ಧ್ಯಾನ್ ಪೂಣಚ್ಚ ಹೊರಬಿದ್ದಿದ್ದಾರೆ. ಜನಶ್ರೀ ಪಾಲಿಗೆ ಇದು ಮೊದಲ ವಿಕೆಟ್ ಪತನ. ಧ್ಯಾನ್ ಹಿಂದೆ ವಿಜಯ ಕರ್ನಾಟಕದಲ್ಲಿದ್ದವರು. ಏನೋ ಸಣ್ಣಪುಟ್ಟ ಕಿರಿಕ್ಕು ನಡೆದು ಧ್ಯಾನ್‌ರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿದೆ. ರಾಮನಗರಕ್ಕೆ ಹೋಗಲೊಲ್ಲದ ಧ್ಯಾನ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ, ಕನ್ನಡಪ್ರಭದಿಂದ ವಿಜಯ ಕರ್ನಾಟಕಕ್ಕೆ ಕೆಲವರು ವಲಸೆ ಹೋಗಬಹುದು ಎಂಬುದು ವದಂತಿ.  ಉದಯವಾಣಿಗೆ ಇನ್ನಷ್ಟು ಮಂದಿ ಸುವರ್ಣನ್ಯೂಸ್‌ನಿಂದ ಬಂದು ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.

ಇನ್ನು ವಿಜಯ ಸಂಕೇಶ್ವರರ ಪತ್ರಿಕೆ ಇನ್ನೇನು ಶುರುವಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಸ್ತೂರಿ ನ್ಯೂಸ್ ಚಾನಲ್ ಆಗುವುದಕ್ಕೆ ದಿನಗಣನೆ ಆರಂಭವಾಗಿದೆ.

ಈಗಷ್ಟೆ ಮುಗಿದ ವಿಶ್ವಕನ್ನಡ ಸಮ್ಮೇಳನದ ಪುನರಾವಲೋಕನ ಸಂಚಿಕೆಯನ್ನು ಸಿದ್ಧ ಮಾಡಿ ಉಸ್ಸಪ್ಪಾ ಎಂದು ಸುಸ್ತಾಗಿರುವ ಜಿ.ಎನ್.ಮೋಹನ್ ಯಾವುದಾದರೂ ನ್ಯೂಸ್ ಚಾನಲ್‌ಗೆ ಹೆಡ್ ಆಗಲಿ ಅನ್ನೋದು ಅವರ ಸಮಸ್ತ ಅಭಿಮಾನಿಗಳ ಸುವರ್ಣ ಕನಸು. ಆದರೆ ಮೋಹನ್ ಸ್ಥಾವರವಾಗದೆ ಜಂಗಮವಾಗೇ ಇರೋಣ ಅಂದುಕೊಂಡಿದ್ದರೆ ಅಭಿಮಾನಿಗಳ ಬಯಕೆ ಠುಸ್ ಅನ್ನುವುದೂ ಸಹಜವೇ.

ಕನ್ನಡಪ್ರಭ ಬಿಟ್ಟ ನಂತರ ಶಿವಸುಬ್ರಹ್ಮಣ್ಯ ಒಂದು ರೌಂಡು ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಿದ್ದಾರೆ. ಮಾಧ್ಯಮ ರಂಗವೇ ಹೆಚ್ಚು ವೈಲ್ಡ್ ಆಗಿ ಅವರಿಗೆ ಈಗ ಕಾಣುತ್ತಿರಬಹುದು. ರಂಗನಾಥ್ ಭಾರದ್ವಾಜ್ ಅವರ ಸಿನಿಮಾ ಶೂಟಿಂಗು ಇನ್ನೂ ಮುಗಿದ ಹಾಗೆ ಕಾಣುತ್ತಿಲ್ಲ. ಬೇಗ ಮತ್ತೆ ವಾಪಾಸು ಬರ‍್ತೀನಿ ಅಂತ ಅವರು ತಮ್ಮ ಗೆಳೆಯರಿಗೆ ಎಸ್‌ಎಂಎಸ್ ಕಳುಹಿಸುತ್ತಿರಬಹುದು.

ಹೊಸದಾಗಿ ಬರುವ ಚಾನಲ್‌ಗೆ ನಾನೇ ಹೆಡ್ಡು ಎಂದು ಬಿಡಿಎ ಸೈಟು ಪತ್ರಕರ್ತರೊಬ್ಬರು ಕೋಟು ಸರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ಚಾನಲ್ ನಂ.೧ ಮಾಡಲು ಟಿಆರ್‌ಪಿಯನ್ನೂ ರಿಗ್ ಮಾಡಿದರೆ ಹೇಗೆ ಎಂದು ಅವರು ಒಬ್ಬ ಫಲ ಜ್ಯೋತಿಷಿ, ಒಬ್ಬ ಗ್ರಹ ಜ್ಯೋತಿಷಿ, ಒಬ್ಬ ವಾಸ್ತುತಜ್ಞ, ಒಬ್ಬ ವಾಮಾಚಾರ ತಜ್ಞರನ್ನು ಕೂರಿಸಿಕೊಂಡು ಡಿಸ್ಕಷನ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೆ. ಯಾರ ಸಲಹೆ ನಿಕ್ಕಿಯಾಗುತ್ತೋ ಶಿವನೇ ಬಲ್ಲ.

ಕಡೆಯದಾಗಿ ನಮ್ಮ ಅಂತರ್ಲಿಂಗಿ. ಅದು ಎಲ್ಲಿ ಏನಾಗಿ ಹೋಯಿತೋ ಏನೋ? ದೂರದಿಂದ ಅಣ್ಣೋ, ಅಕ್ಕೋ ಅನ್ನುವ ಧ್ವನಿ ಕ್ಷೀಣವಾಗುತ್ತಲೇ ಇದೆ. ಅದಕ್ಕೆ ನಮ್ಮ ಸಂತಾಪಗಳು.

ಮಾಂಸಾಹಾರ, ಶಾಖಾಹಾರ ಕುರಿತು ವಿವೇಕಾನಂದರ ನಿಲುವು...


ಟೀಕೆಗಳಿಗೆ ಗಮನಕೊಡದೆ ನಿನಗಿಷ್ಟ ಬಂದಷ್ಟು ಮೀನು ತೆಗೆದುಕೊ. ದೇಶವೆಲ್ಲಾ ಒಂದೇ ತರಕಾರಿಯಲ್ಲಿ ಜೀವಿಸುವ, ಅಜೀರ್ಣದಿಂದ ನರಳುವ ಬಾಬಾಜಿಗಳಿಂದ ತುಂಬಿಹೋಗಿದೆ. ಸತ್ವಗುಣದ ಚಿಹ್ನೆಯೇ ಇಲ್ಲ. ಬರೇ ತಮಸ್ಸು, ಮೃತ್ಯುವಿನ ಛಾಯೆ. ನಗುಮುಖ, ಅಭಯೋತ್ಸಾಹ, ತೃಪ್ತಿ, ಉತ್ಕಟ ಚಟುವಟಿಕೆ ಇವೆಲ್ಲಾ ಸತ್ವ ಗುಣದ ಪರಿಣಾಮ. ಸೋಮಾರಿತನ, ಆಲಸ್ಯ, ಉತ್ಕಟ ಮೋಹ, ನಿದ್ರೆ ಇವೆಲ್ಲಾ ತಾಮಸ ಚಿಹ್ನೆ..... ಈಗ ರಾಜಸ ಸ್ವಭಾವ ಬಹಳ ಬೇಕಾಗಿದೆ. ನೀನು ಸತ್ವಗುಣಗಳೆಂದು ತಿಳಿದಿರುವವರಲ್ಲಿ ಶೇಕಡಾ ೯೦ ಮಂದಿ ಘೋರ ತಾಮಸದಿಂದ ಆವೃತರಾಗಿದ್ದಾರೆ. ತೀವ್ರವಾದ ರಾಜಸಿಕ ಶಕ್ತಿಯ ಉದ್ದೀಪವಾಗಬೇಕು. ಇಡೀ ದೇಶವೆಲ್ಲಾ ತಮೋಗುಣದಿಂದ ಆಚ್ಛಾದಿತವಾಗಿದೆ. ದೇಶದಾದ್ಯಂತ ಜನರಿಗೆಲ್ಲಾ ಆಹಾರಬೇಕು, ಬಟ್ಟೆ ಬೇಕು, ದೇಶ ಜಾಗೃತಗೊಳ್ಳಬೇಕು. ಚಟುವಟಿಕೆಯಿಂದ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಇಲ್ಲದಿದ್ದಲ್ಲಿ ಅವರು ಮತ್ತಷ್ಟು ಜಡರಾಗಿ ಮರಕಲ್ಲುಗಳಾಗುತ್ತಾರೆ. ಆದ್ದರಿಂದಲೇ ಹೆಚ್ಚು  ಮಾಂಸ ಮೀನು ತಿನ್ನಬೇಕೆಂದು ನಾನು ಹೇಳುವುದು. ೧

ಸಸ್ಯಾಹಾರದ ವಿಷಯದಲ್ಲಿ ನಾನು ಹೇಳುವುದು ಇದು. ಮೊದಲು ನನ್ನ ಗುರುಗಳು (ಶ್ರೀರಾಮಕೃಷ್ಣ ಪರಮಹಂಸರು) ಶಾಖಾಹಾರಿಗಳಾಗಿದ್ದರು. ಆ ಮಹಾಕಾಳಿಗೆ ನೈವೇದ್ಯ ಮಾಡಿದ ಮಾಂಸವನ್ನು ಕೊಟ್ಟರೆ ಅದನ್ನು ಶಿರಕ್ಕೆ ತಾಗಿಸುತ್ತಿದ್ದರು. ಪ್ರಾಣಿಗಳನ್ನು ಕೊಲ್ಲುವುದು ನಿಸ್ಸಂದೇಹವಾಗಿ ಕೆಟ್ಟದ್ದು. ಆದರೆ ರಸಾಯನಶಾಸ್ತ್ರದ ಅಭಿವೃದ್ಧಿಯೊಂದಿಗೆ ಎಲ್ಲಿಯವರೆವಿಗೆ ಸಸ್ಯಾಹಾರವನ್ನು ಮನುಷ್ಯನ ಶರೀರಕ್ಕೆ ಒಗ್ಗುವಂತೆ  ಮಾಡಿಲ್ಲವೋ ಅಲ್ಲಿಯವರೆವಿಗೂ ಮಾಂಸವನ್ನು ತಿನ್ನದೆ ವಿಧಿಯ ಇಲ್ಲ. ಈಗಿನ ವಾತಾವರಣಕ್ಕೆ ಸರಿಯಾಗಿ ಎಲ್ಲಿಯವರೆವಿಗೂ ಮನುಷ್ಯ ರಾಜಸಿಕ (ಚಟುವಟಿಕೆಯ) ಜೀವನವನ್ನು ನಡೆಸಬೇಕೋ, ಅಲ್ಲಿಯವರೆವಿಗೂ ಮಾಂಸಾಹಾರದ ಮೂಲಕವಲ್ಲದೆ ಬೇರೆ ದಾರಿಯಿಲ್ಲ. ಅಶೋಕ ಚಕ್ರವರ್ತಿ ಕತ್ತಿಯ ಬಲದಿಂದ ಲಕ್ಷಾಂತರ ಪ್ರಾಣಿಯ ಬಲಿಯನ್ನೇನೋ ನಿಲ್ಲಿಸಿದನು. ಆದರೆ ಸಾವಿರ ವರ್ಷದ ಗುಲಾಮಗಿರಿ ಅದಕ್ಕಿಂತ ಭಯಂಕರವಲ್ಲವೇ? ಕೆಲವು ಕುರಿಗಳ ಪ್ರಾಣವನ್ನು ಕಾಪಾಡುವುದೋ ಅಥವಾ ಅದರ ಬದಲು ಒಬ್ಬನ ಹೆಂಡತಿ ಮಕ್ಕಳ ಪ್ರಾಣವನ್ನು ಕಾಪಾಡಲು ಅಶಕ್ತನಾಗಿ ಆಹಾರವನ್ನು ತನ್ನ ಮಕ್ಕಳಿಗೋಸುಗವಾಗಿ ಅದನ್ನು ಲೂಟಿ ಮಾಡುವ ದರೋಡೆಕಾರರಿಂದ ತಪ್ಪಿಸುವುದಕ್ಕೆ ಅಶಕ್ತನಾಗುವುದೋ, ಇವೆರಡರಲ್ಲಿ ಯಾವುದು ಘೋರ ಪಾತಕ? ಬೇಕಾದರೆ, ದೈಹಿಕ ಕಷ್ಟದ ಮೂಲಕವಾಗಿ ತಮ್ಮ ಜೀವನೋಪಾಯವನ್ನು ಯಾರು ಸಂಪಾದಿಸುವುದಿಲ್ಲವೋ ಅಂತಹ ಮೇಲಿನವರ್ಗಕ್ಕೆ ಸೇರಿದ ಹತ್ತಾರು ಮಂದಿ ಮಾಂಸಾಹಾರವನ್ನು ಬಿಡಲಿ. ಆದರೆ ಯಾರು ತಮ್ಮ ಆಹಾರವನ್ನು ಹಗಲೂ ರಾತ್ರಿ ಬೆವರು ಸುರಿಸಿ ಸಂಪಾದನೆ ಮಾಡಬೇಕೊ ಅವರ ಮೇಲೆ ಶಾಖಾಹಾರವನ್ನು ಬಲವಂತ ಮಾಡುವುದೇ ನಮ್ಮ ದೇಶದ ಸ್ವಾತಂತ್ರ್ಯ ಹಾನಿಗೆ ಒಂದು ಕಾರಣ. ಒಳ್ಳೆಯ ಮತ್ತು ದೇಹ ಪೋಷಕವಾದ ಆಹಾರ ಏನು ಮಾಡಬಲ್ಲದು ಎಂಬುದಕ್ಕೆ ಜಪಾನೇ ಒಂದು ಉದಾಹರಣೆ. ೨

ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸಂನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡಿಗೆ ಮಾಡುತ್ತಿದ್ದರು ಎಂದು ವೇದದಲ್ಲಿ ನೀನು ಓದುವೆ. ನಮ್ಮದು ಕೃಷಿ ಪ್ರಧಾನ ಜೀವನವಾದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕಾಲ ಕ್ರಮೇಣ ದನದ ಜಾತಿಯೇ ನಾಶವಾಗುವುದೆಂದು ತಿಳಿದು ಗೋಹತ್ಯೆ ಮಹಾಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ೩

ಮಾಂಸಾಹಾರವನ್ನು ಸ್ವೀಕರಿಸುವುದು ಒಳ್ಳೆಯದೇ ಕೆಟ್ಟದೇ ಅಥವಾ ಬರೀ ಶಾಖಾಹಾರದ ಮೇಲೆ ಜೀವಿಸಬೇಕೇ, ಮಾಂಸಾಹಾರದಿಂದ ಪ್ರಯೋಜನ ಉಂಟೆ? ಎಂಬುದರ ಮೇಲೆ ಹಲವು ಭಿನ್ನಾಭಿಪ್ರಾಯಗಳಿವೆ.... ರಾಮ, ಕೃಷ್ಣ ಮುಂತಾದವರೆಲ್ಲಾ ಮದ್ಯ ಮಾಂಸವನ್ನು ಸೇವಿಸುತ್ತಿದ್ದರೆಂಬುದನ್ನು ರಾಮಾಯಣ, ಮಹಾಭಾರತದಲ್ಲಿ ನೋಡುತ್ತೇವೆ.

ಸೀತಾಮಾದಾಯ ಬಾಹುಭ್ಯಾಂ ಮಧುಮೈರೇಯಕಂ ಶುಚಿ|
ಪಾಯಯಾಮಾಸ ಕಾಕುತ್ಸ್ಥಃ ಶಚೀಮಿಂದ್ರೋ ಯಥಾಮೃತಮ್
ಮಾಂಸಾನಿ ಚ ಸುಮೃಷ್ಟಾನಿ ವಿವಿಧಾನಿ ಫಲಾನಿ ಚ|
ರಾಮಸಾಭ್ಯವಹಾರಾರ್ಥಂ ಕಿಂಕರಾಸ್ತೂರ್ಣಮಾಹರನ್||
-ರಾಮಾಯಣ, ಉತ್ತರಕಾಂಡ.(೪೨)
(ಶ್ರೀರಾಮ ಸೀತೆಯನ್ನು ಎರಡೂ ಬಾಹುಗಳಿಂದಲೂ ಆಲಂಗಿಸಿ ಶುದ್ಧ ಮೈರೇಯ ಮದ್ಯವನ್ನು, ಇಂದ್ರ ಶಚಿಗೆ ಅಮೃತವನ್ನು ನೀಡುವಂತೆ ನೀಡಿದನು. ಪರಿಚಾರಕರು ಹಲವು ಬಗೆಯ ಮಾಂಸವನ್ನು ಮತ್ತು ಫಲಗಳನ್ನು ಬಡಿಸಿದರು)

ಸುರಾಘಟಸಹಸ್ರೇಣ ಮಾಂಸಭೂತೌದನೇನ ಚ|
ಯಕ್ಷ್ಯೇತ್ವಾಂ ಪ್ರೀಯತಾಂ ದೇವಿ ಪುರೀಂ ಪುನರುಪಾಗತಾ||
-ರಾಮಾಯಣ, ಅಯೋಧ್ಯಕಾಂಡ (೫೨)
(ಮಹಾತಾಯಿ ಗಂಗೆ, ದಯೆತಾಳು. ನಾನು ಹಿಂತಿರುಗಿ ಬರುವಾಗ ಸಾವಿರ ಮದ್ಯದ ಹಂಡೆ, ಬೇಕಾದಷ್ಟು ಮಾಂಸದೊಂದಿಗೆ ಬೇಯಿಸಿದ ಅನ್ನವನ್ನು ನಿನಗೆ ಅರ್ಪಿಸುತ್ತೇನೆ) ಎಂದು ಸೀತಾದೇವಿ ಗಂಗಾನದಿಯನ್ನು ದಾಟುವ ಕಾಲದಲ್ಲಿ ಪ್ರಾರ್ಥಿಸುವಳು.)

ಉಚೌಮಧ್ವಾಸವಕ್ಷೀವಾವುಭೌ ಚಂದನರೂಪಿತೌ|
ಸ್ವಗ್ವನೌವರಸ್ತ್ರೌತೌ ದಿವ್ಯಾಭರಣಭೂಷಿತೌ||
-ಮಹಾಭಾರತ, ಉದ್ಯೋಗಪರ್ವ (ಅಧ್ಯಾಯ ೫೮-೫)
(ನಾನು, ಕೃಷ್ಣಾರ್ಜುನರಿಬ್ಬರೂ ಗಂಧ ಲೇಪಿಸಿಕೊಂಡು ಪುಷ್ಪದಿಂದ ಅಲಂಕೃತರಾಗಿ ಸುಂದರ ವಸ್ತ್ರಗಳನ್ನು ಧರಿಸಿ ಮಧ್ವಾಸವನ್ನು ಸೇವಿಸಿದ್ದುದನ್ನು ಕಂಡೆನು).

ಹಿಂದೂ ಮತ್ತು ಚೀಣಿಯರನ್ನು ನೋಡಿ, ಅವರು ಎಷ್ಟು ಬಡವರಾಗಿರುವರು ಎನ್ನುವರು. ಅವರು ಮಾಂಸ ತಿನ್ನುವುದಿಲ್ಲ. ಅಕ್ಕಿ ಮತ್ತು ಸಿಕ್ಕಿದ ಕೆಲವು ತರಕಾರಿಯ ಮೇಲೆ ಜೀವಿಸುವುದರಿಂದ ಇಂತಹ ದುಸ್ಥಿತಿಯಲ್ಲಿರುವರು. ಹಿಂದೆ ಜಪಾನಿಯರೂ ಅದೇ ಸ್ಥಿತಿಯಲ್ಲಿದ್ದರು. ಆದರೆ ಮಾಂಸಾಹಾರಕ್ಕೆ ಪ್ರಾರಂಭಿಸಿದೊಡೆನೆಯೇ ಅವರ ಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಇಂಡಿಯಾ ಸೈನ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಭಾರತೀಯರು ಸಿಪಾಯಿಗಳಾಗಿರುವರು. ಅವರಲ್ಲಿ ಬಲಾಢ್ಯರಾದ ಸಿಕ್ಕರು ಮತ್ತು ಗೂರ್ಕರು ಎಂದೂ ಶಾಖಾಹಾರಿಗಳಲ್ಲ. ಯಾರು ಅಧ್ಯಾತ್ಮಿಕ ಜೀವನವನ್ನು ನಡೆಸಬೇಕೆಂದು ಇಚ್ಛಿಸುವರೋ ಅವರಿಗೆ ಶಾಖಾಹಾರ ಒಳ್ಳೆಯದು. ಆದರೆ ಯಾರು ಹಗಲು ರಾತ್ರಿ ಜೀವನದಲ್ಲಿ ದುಡಿಯಬೇಕೋ ಅವರು ಮಾಂಸಹಾರವನ್ನು ಸೇವಿಸಬೇಕು. ಎಲ್ಲಿಯವರೆವಿಗೂ ಸಮಾಜದಲ್ಲಿ ಬಲವಂತನಿಗೆ ಜಯವೆಂಬುದು ಇದೆಯೋ ಅಲ್ಲಿಯವರೆವಿಗೂ ಮಾಂಸಾಹಾರಿಯಾಗಿರಬೇಕು. ಇಲ್ಲದೆ ಇದ್ದರೆ ದುರ್ಬಲರು ಬಲಾಢ್ಯರ ಪಾದದ ಅಡಿಗೆ ಸಿಕ್ಕಿ ನಾಶವಾಗುವುದು. ಎಲ್ಲೋ ಕೆಲವರಿಗೆ ಶಾಖಾಹಾರದಿಂದ ಪ್ರಯೋಜನವನ್ನು ಹೇಳಿದರೆ ಸಾಲದು. ಒಂದು ದೇಶವನ್ನು ಮತ್ತೊಂದು ದೇಶದೊಂದಿಗೆ ಹೋಲಿಸಿ ನಿರ್ಣಯಕ್ಕೆ ಬನ್ನಿ. ೪

೧. ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೧೦, ಪುಟ: ೨೩೬
೨. ಸಂಪುಟ ೭, ಪುಟ: ೧೨೫
೩. ಸಂಪುಟ ೫, ಪುಟ: ೬೬
೪. ಸಂಪುಟ ೨, ಪುಟ: ೧೪೧-೪೩

Friday, March 18, 2011

ವಿಜ್ಞಾನ ಲೇಖಕರ ಹೇಳಿಕೆಯೂ, ನಮ್ಮ ಪ್ರತಿಭಟನೆಯೂ...


ಪ್ರಳಯ, ಸುನಾಮಿ, ಭೂಕಂಪ, ಸೂಪರ್ ಮೂನ್ ಇತ್ಯಾದಿ ವಿಷಯಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ಯಾರು? ವಿಜ್ಞಾನಿಗಳಲ್ಲವೇ? ನಿಜ, ನೈಸರ್ಗಿಕ ವಿಕೋಪಗಳು ಮನುಷ್ಯನ ಅಂಕೆಯನ್ನು ಮೀರಿದ್ದು. ವಿಜ್ಞಾನಿಗಳೂ ಸಹ ಇಂಥವನ್ನು ತಡೆಯುವಲ್ಲಿ ಬಹಳಷ್ಟು ಸಂದರ್ಭದಲ್ಲಿ ಅಸಹಾಯಕರು. ಆದರೆ ಯಾವ ವಿಕೋಪ ಯಾಕೆ ಸಂಭವಿಸಿತು ಎಂಬುದನ್ನು ಸ್ಪಷ್ಟವಾಗಿ ಆಧಾರಸಹಿತವಾಗಿ ಹೇಳಬಲ್ಲವರು ವಿಜ್ಞಾನಿಗಳು. ಜನರಲ್ಲಿ ಆಗಾಗ ಹುಟ್ಟಿಕೊಳ್ಳುವ ಭಯವನ್ನು ನಿವಾರಿಸಬೇಕಾದವರೂ ಸಹ ವಿಜ್ಞಾನಿಗಳೇ.

ಆದರೆ ಈಗ ನೋಡಿ, ನಮ್ಮ ಎಲೆಕ್ಟ್ರಾನಿಕ್ ಮೀಡಿಯಾಗಳು ಏನೇ ಆದರೂ ಜ್ಯೋತಿಷಿಗಳನ್ನು ಕರೆಸಿ ಮಾತಾಡಿಸುವುದನ್ನು ರೂಢಿ ಮಾಡಿಕೊಂಡಿವೆ. ದಿನಪತ್ರಿಕೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಎಲ್ಲ ಜ್ಯೋತಿಷಿಗಳು ವಂಚಕರೇನಲ್ಲ. ಕೆಲವರು ತಾವು ಶಾಸ್ತ್ರೀಯವಾಗಿ ಕಲಿತದ್ದರ ಆಧಾರದ ಮೇಲೆ ಹೇಳುತ್ತಾರೆ. ಅದನ್ನು ನಂಬುವುದು, ಬಿಡುವುದು ಕೇಳುವವರಿಗೆ ಬಿಟ್ಟಿದ್ದು. ಆದರೆ ಟಿಆರ್‌ಪಿ ಆಸೆಗಾಗಿ ಚಾನಲ್‌ಗಳು ಜನರನ್ನು ಹೆದರಿಸಲೆಂದೇ ಜ್ಯೋತಿಷಿಗಳನ್ನು ಬಳಸಿಕೊಳ್ಳುತ್ತಿವೆ. ಹೀಗೆ ಹೆದರಿಸುವ, ಹೊಲಸಾಗಿ ಬೈಯುವ ನರೇಂದ್ರ ಶರ್ಮ ಅಂಥವರಿಗೆ ವಿಪರೀತ ಡಿಮ್ಯಾಂಡು ಹುಟ್ಟಿಕೊಂಡಿದೆ.

ಕರ್ನಾಟಕದಲ್ಲಿ ಸಾಕಷ್ಟು ಮಂದಿ ವಿಜ್ಞಾನಸಂಬಂಧಿ ಲೇಖನಗಳನ್ನು ಬರೆಯುವವರಿದ್ದಾರೆ.  ಇವರಿಂದ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯಿಸುವ, ಚಾನಲ್‌ಗಳಲ್ಲಿ ಮಾತನಾಡಿಸುವ ಕೆಲಸ ನಮ್ಮ ಮೀಡಿಯಾಗಳಿಂದ ಆಗಬೇಕಿದೆ. ಹಾಗಾದಾಗ ಜನರಲ್ಲಿ ಇರುವ ಭಯವೂ ನಿವಾರಣೆಯಾಗುತ್ತದೆ. ಆದರೆ ಬೆದರಿಸುವುದರಿಂದಲೇ ಟಿಆರ್‌ಪಿ ಗಿಟ್ಟುವುದರಿಂದ, ಭಯ ನಿವಾರಿಸುವವರ ಮಾತುಗಳು ಚಾನಲ್‌ಗಳಿಗೆ ಬೇಕಾಗಿಲ್ಲದಂತಾಗಿದೆ.

ಇಲ್ಲಿ ವಿಜ್ಞಾನ ಲೇಖಕರುಗಳಾದ ನಾಗೇಶ್ ಹೆಗಡೆ, ಡಾ. ಬಿ.ಎಸ್.ಶೈಲಜಾ, ಟಿ.ಆರ್.ಅನಂತರಾಮು, ಡಾ.ಎಚ್.ಆರ್.ಕೃಷ್ಣಮೂರ್ತಿ, ಹಾಲ್ದೊಡ್ಡೇರಿ ಸುಧೀಂದ್ರ, ಕೊಳ್ಳೇಗಾಲ ಶರ್ಮ ಅವರುಗಳು ನೀಡಿರುವ ಪತ್ರಿಕಾ ಹೇಳಿಕೆಯೊಂದು ಇದೆ. ಇದು ಪತ್ರಿಕೆಗಳ ವಾಚಕರ ವಾಣಿಗೆ ಸೀಮಿತವಾಗುವುದು ಬೇಡ. ನಮ್ಮ ಪತ್ರಿಕೆಗಳು ನಾಳೆಯೇ ಜಾಹೀರಾತಿನ ಸ್ವರೂಪದಲ್ಲಿ ಮುಖಪುಟದಲ್ಲೇ ಇದನ್ನು ಪ್ರಕಟಿಸುವುದು ಸಾಮಾಜಿಕ ಕಾಳಜಿಯ ದೃಷ್ಟಿಯಲ್ಲಿ ಒಳ್ಳೆಯದು. ಕಡೆಯ ಪಕ್ಷ ನಾಳೆಯಾದರೂ ಜನರು ನೆಮ್ಮದಿಯಿಂದ ಇರುತ್ತಾರೆ.

ಹಾಗೆಯೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಪೊಳ್ಳು ಜ್ಯೋತಿಷಿಗಳನ್ನು ಪ್ರದರ್ಶಿಸುವ ಬದಲು ವಿಜ್ಞಾನಿಗಳನ್ನು, ವಿಜ್ಞಾನ ಲೇಖಕರನ್ನು ಕರೆದು ಮಾತನಾಡಿಸಿ ಜನರಲ್ಲಿರುವ ಭೀತಿಯನ್ನು ನಿವಾರಿಸುವಂತಾಗಬೇಕು.

ಇಲ್ಲಿ ಪ್ರಕಟಗೊಂಡಿರುವ ವಿಜ್ಞಾನ ಲೇಖಕರ ಪತ್ರಿಕಾ ಪ್ರಕಟಣೆಯನ್ನು ಹಾಲ್ದೊಡ್ಡೇರಿ ಸುಧೀಂದ್ರ ಅವರು ಸಂಪಾದಕೀಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಮೌಢ್ಯವನ್ನೇ ವೈಭವೀಕರಿಸುತ್ತಿರುವ ಮೀಡಿಯಾಗಳ ವಿರುದ್ಧ ನಮ್ಮ ಪ್ರತಿಭಟನೆ ಜಾರಿಯಲ್ಲಿರುತ್ತದೆ.

ಮುಂಡೇವು ಹಾವು ತಿನ್ನುತ್ತಾವೆ ಕಣ್ರೀ, ಅದಕ್ಕೆ ಸುನಾಮಿ ಬಂತು...


ಜಪಾನ್‌ನಲ್ಲಿ ಭೂಕಂಪ, ಸುನಾಮಿ ಇತ್ಯಾದಿಗಳೆಲ್ಲ ಯಾಕಾಯ್ತು ಗೊತ್ತಾ? ಮುಂಡೇವು ಹಾವು ತಿನ್ನುತ್ತಾರೆ ಕಣ್ರೀ. ಹಾವು ಅಂದ್ರೆ ದೇವರು. ಇವರು ಹಾವು ತಿನ್ನೋದರಿಂದನೇ ಸುನಾಮಿ ಆಗಿದ್ದು...

ಇದನ್ನು ಹೇಳಿದವರು ಯಾರು ಅಂತ ತುಂಬ ಕಷ್ಟದಿಂದ ಊಹೆ ಮಾಡಬೇಕಾಗಿಲ್ಲ. ಹೀಗೆಲ್ಲ ಮಾತನಾಡಬಲ್ಲವ ಕರ್ನಾಟಕದಲ್ಲಿ ಈಗ ವರ್ಲ್ಡ್ ಫೇಮಸ್ಸು. ಆತ ಬ್ರಹ್ಮಾಂಡವನ್ನೇ ಅಗೆದು, ಅರೆದು ಕುಡಿದಾತ. ಟಿವಿಗಳಲ್ಲಿ ಆತ ಮಾತನಾಡಲು ಕುಳಿತನೆಂದರೆ ಕುರ್ಚಿಯೇ ಬೆಚ್ಚುತ್ತದೆ. ಸ್ಟುಡಿಯೋದ ಹೈವೋಲ್ಟೇಜ್ ಲೈಟುಗಳೇ ಮಂಕಾಗಿಬಿಡುತ್ತವೆ. ಕೆನ್ನೆಗೆ, ಇಡೀ ಮುಖಕ್ಕೆ, ಕೈಗೆ ಅರಿಶಿನ ಮೆತ್ತಿಕೊಂಡ ಪರಿಣಾಮ ಇಡೀ ದೇಹವೇ ಹಳದಿಯಾಗಿ ಸುತ್ತಲೂ ಒಂದು ಪ್ರಭಾವಲಯ ನಿರ್ಮಾಣವಾದಂತೆ ತೋರುತ್ತದೆ. ಕಣ್ಣುಗಳು ವಿಕ್ಷಿಪ್ತ, ಬಾಯಿ ಬಿಟ್ಟರೆ ಬೆಳಕಿನ ವೇಗದಲ್ಲಿ ನಾಲಗೆ ಹೊರಳುತ್ತದೆ. ಎದೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಳ್ಳುತ್ತಾನೆ. ಒಂದರಲ್ಲಿ ತ್ರಿಶೂಲದ ಹಾಗೆ ಇರುವ ಒಂದು ಐಟಮ್ ಇರುತ್ತೆ. ಜಗತ್ತು ಪ್ರಳಯಕ್ಕೆ ಸಿಕ್ಕಿ ಭಸ್ಮವಾದರೂ ಈತನನ್ನು ಆ ಐಟಮ್ ಕಾಪಾಡಬಹುದೇನೋ?

ನೋಡ್ತಾ ಇರಿ, ಜಗನ್ಮಾತೆ ಭೂಲೋಕಕ್ಕೆ ಕಾಲಿಡುತ್ತಾ ಇದ್ದಾಳೆ. ಹಾಗಂತ ನನಗೆ ಅಪ್ಪಣೆಯಾಗಿದೆ. ಏನೂ ಆಗದೇ ಇರಲಿ ಅಂತ ಶ್ರೀಲಂಕಾಗೆ ನಾನು ಮತ್ತು ನನ್ನಂತಹ ಕೆಲವು ಸಾಧುಸಂತರು ಹೋಗಿ ದೀಪ ಹಚ್ಚಿ, ಪೂಜೆ ಸಲ್ಲಿಸಿ ಬಂದಿದ್ದೇವೆ. ಅವಳು ಕಾಲಿಡುವಾಗ ಏನೂ ಆಗಬಾರದು. ಅದಕ್ಕಾಗಿ ಯಾಗ ಮಾಡ್ತಾ ಇದ್ದೇನೆ. ನೀವು ಸಹ ಈ ಯಾಗದಲ್ಲಿ ಪಾಲ್ಗೊಳ್ಳಬಹುದು. ಫೀಜು ಇಷ್ಟೇನೆ. ಈ ನಂಬರ್‌ಗೆ ಫೋನ್ ಮಾಡಿ... ಅನ್ನುತ್ತೆ ಬ್ರಹ್ಮಾಂಡ ಸ್ವಾಮಿ. ಎಷ್ಟು ಜನ ಫೋನ್ ಮಾಡಿದ್ರು. ಎಷ್ಟು ದುಡ್ಡು ವಸೂಲಿಯಾಯ್ತು ಅಂತ ಚಾನಲ್‌ನವರನ್ನು ಕೇಳಿ ನೋಡಿ. ಆಕಾಶದ ಮೂಲೆಯಲ್ಲೆಲ್ಲೋ ಇರುವ ಗ್ರಹವೊಂದನ್ನು ತೋರಿಸುವಂತೆ ಕೈ ಎತ್ತರಿಸುತ್ತಾರೆ.

ಪ್ರಳಯ ಆಗೋದು ಗ್ಯಾರೆಂಟಿ. ಒಂದೊಂದಾಗಿ ಎಲ್ಲ ದೇಶಗಳು ಮುಳುಗಿ ಹೋಗುತ್ತವೆ. ಎಲ್ಲ ಮುಳುಗಿದ ಮೇಲೆ ಉಳಿಯೋದು ಬೆಳಗಾವಿಯ ಒಂದು ಹಳ್ಳಿ ಮಾತ್ರ. ಮೊದಲು ಇಡೀ ಪ್ರಪಂಚದಲ್ಲಿ ವಿದ್ಯುತ್ ಹೊರಟು ಹೋಗುತ್ತೆ. ಆಗ ಮುಂಡೇವಕ್ಕೆ ಒಲೆ-ಸೌದೆಯೇ ಗತಿ ಎಂದು ಹೆದರಿಸುತ್ತೆ ಸ್ವಾಮಿ. ಕರೆಕ್ಟಾಗಿ ಎಷ್ಟನೇ ತಾರೀಕು ಪ್ರಳಯ ಆಗುತ್ತೆ ಹೇಳಿ ಎಂದರೆ, ಯಾವುದೋ ಒಂದು ಡೇಟು ಹೇಳಿ ಅವತ್ತಿನಿಂದ ಶುರುವಾಗುತ್ತೆ ನೋಡ್ತಾ ಇರಿ ಅನ್ನುತ್ತೆ.

ಅವತ್ತು ಪ್ರಳಯ ತಪ್ಪಿಸೋದಕ್ಕೆ ಐದು ಎಣ್ಣೆಯ ದೀಪ ಹಚ್ಚಿ ಅಂತ ಹೇಳಿದೆ. ಎಲ್ಲ ಕಡೇನೂ ದೀಪ ಹಚ್ಚಿದ್ರಿ. ಆದರೆ ಎಷ್ಟು ಜನ ನಿಜವಾದ ಭಕ್ತಿಯಿಂದ ದೀಪ ಹಚ್ಚಿದ್ರಿ ಹೇಳಿ. ಬಹಳಷ್ಟು ಜನ ಕಾಟಾಚಾರಕ್ಕೆ ಮಾಡಿದ್ರಿ. ಇದೊಂದು ಮಾಡಬೇಕು, ಅದಕ್ಕೆ ಮಾಡೋಣ ಅಂತ ಮಾಡಿದ್ರಿ ಎಂದು ತನ್ನ ಮಾತು ಕೇಳಿದ ಭಕ್ತಗಣವನ್ನೂ ವಿಚಿತ್ರ ಮ್ಯಾನರಿಸಂನಿಂದ ನಿಂದಿಸುತ್ತೆ ಸ್ವಾಮಿ.

ಸ್ವಾಮಿ ಈಗ ಜನತಾ ದರ್ಶನ ಮಾಡಲು ಹೊರಟಿದೆಯಂತೆ. ಅದು ಬೆಂಗಳೂರಿನಿಂದಲೇ ಶುರು. ಪ್ರಳಯ ಕುರಿತು ಯಾರ‍್ಯಾರ ಮನಸ್ಸಿನಲ್ಲಿ ಏನೇನು ಪ್ರಶ್ನೆಗಳಿವೆಯೋ ಅದಕ್ಕೆಲ್ಲ ಸ್ವಾಮಿ ಉತ್ತರಕೊಡುತ್ತೆ. ಕಾರ್ಯಕ್ರಮದ ಜಾಹೀರಾತು ಜೋರಾಗೇ ನಡೀತಾ ಇದೆ. ಹೀಗಾಗಿ ಜನರ ನೂಕುನುಗ್ಗಲಾಗಿ ಲಾಠಿ ಚಾರ್ಜ್ ನಡೆದು, ಅಲ್ಲೇ ಒಂದು ಮಿನಿ ಪ್ರಳಯ ಆದರೂ ಆಶ್ಚರ್ಯ ಇಲ್ಲ.

ಸ್ವಾಮಿ ದೇವ-ದೇವತೆಯರನ್ನೆಲ್ಲ ತನ್ನ ಕ್ಲಾಸ್‌ಮೇಟ್‌ಗಳೋ, ಜಿಗ್ರಿ ದೋಸ್ತ್‌ಗಳೋ ಎಂಬಂತೆ ಮಾತನಾಡುತ್ತದೆ. ಅವರ ಜತೆ ಮಾತಾಡಿ ಎಲ್ಲ ಸಾಲ್ವ್ ಮಾಡ್ತೀನಿ ಅಂತ ಭಕ್ತರನ್ನು ಹೆದರಿಸುತ್ತೆ. ಒಂದೊಂದು ಸರ್ತಿ ಇದು ಸೈಂಟಿಸ್ಟ್ ಥರ ಮಾತಾಡೋಕ್ಕೆ ಶುರು ಮಾಡುತ್ತೆ. ನಾಗೇಶ್ ಹೆಗಡೆ, ಸುಧೀಂದ್ರ ಹಾಲ್ದೊಡ್ಡೇರಿ ಥರದವರು ಇವನ ಖಗೋಳಶಾಸ್ತ್ರದ ವರ್ಣನೆಯನ್ನು ನೋಡಿದರೆ ಮೂರ್ಛೆ ಹೋಗಿಬಿಡುವ ಸಾಧ್ಯತೆಗಳಿರುವುದರಿಂದ ಅವರು ನೋಡದೆ ಇರುವುದು ವಾಸಿ.

ಗ್ರಹಗತಿ ಬದಲಾದಂತೆ ಚಾನಲ್‌ನಿಂದ ಚಾನಲ್‌ಗೆ ಹಾರುತ್ತ ಇದ್ದ ಸ್ವಾಮಿ ಈಗ ಸಮಯ ನ್ಯೂಸ್ ಚಾನಲ್‌ಗೂ ವಕ್ಕರಿಸಿಕೊಂಡ ಹಾಗೆ ಕಾಣುತ್ತಿದೆ. ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿ ಎಲ್ಲ ನೈಸರ್ಗಿಕ ಆಪತ್ತಿನ ವಿಷಯ ಬಂದಾಗಲೆಲ್ಲ ಸಮಯದವರಿಗೆ ಈ ಸ್ವಾಮಿಯ ಎಕ್ಸ್‌ಪರ್ಟ್ ಗೆಸ್ಟು. ಟಿಆರ್‌ಪಿಯ ಆಸೆಗಾಗಿ ಅವರಿಗೆ ಈ ಸ್ವಾಮಿಯೇ ಬೇಕು.

ಎರಡು ಇನ್ನೋಸೆಂಟ್ ಪ್ರಶ್ನೆಗಳು: ಸೂಪರ್ ಮೂನ್ ಬ್ರಹ್ಮಾಂಡ ಸ್ವಾಮಿಗಿಂತ ದೊಡ್ಡದಾಗಿ ಕಾಣುತ್ತಾ? ಸೂಪರ್ ಮೂನ್ ಈ ಸ್ವಾಮಿಗಿಂತ ಡೇಂಜರ್ರಾ?

Thursday, March 17, 2011

ಪ್ಯಾಟೆ ಹುಡ್ಗೀರು: ನೋಟೀಸು ಕೊಟ್ಟರೆ ಸಾಕೆ? ಈ ಅಸಹ್ಯ ನಿಲ್ಲಬೇಡವೇ?


ಒಂದು ಸಮಾಧಾನದ ಸುದ್ದಿ ಬಂದಿದೆ. ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಶೋನಲ್ಲಿ ಬಾಲಕನೊಬ್ಬನ್ನು ಹಿಂಸಿಸಿದ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರತಿಕ್ರಿಯಿಸಿದ್ದು, ಚಾನಲ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ.

ದಟ್ಸ್ ಕನ್ನಡ ಈ ಕುರಿತು ವಿವರವಾಗಿ ವರದಿ ಮಾಡಿದೆ. ಆಯೋಗದ ಸದಸ್ಯ ವಾಸುದೇವ್ ಶರ್ಮ ಪ್ರತಿಕ್ರಿಯೆ ನೀಡಿದ್ದು, ತಮಾಷೆಗಾಗಿ ಕೂಡಾ ಮಕ್ಕಳನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸುವಂತಿಲ್ಲ. ಅದರಲ್ಲೂ ಲಕ್ಷಾಂತರ ಮಂದಿ ನೋಡುವ ರಿಯಾಲಿಟಿ ಶೋನಲ್ಲಿ ಈ ರೀತಿ ತೋರಿಸಿ ಯಾವ ಸಂಸ್ಕೃತಿ ಬೆಳೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿರುವ ಬಾಗಲ ಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಗ್ರಾಮ ಪಂಚಾಯತಿ, ಮಕ್ಕಳ ಕಲ್ಯಾಣ ಸಮಿತಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಬಾಲಕನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ಪಷ್ಟನೆಯನ್ನು ಕೋರಲಾಗಿದೆ. ಬಾಲಕನ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಈ ಬಗ್ಗೆ ತುರ್ತು ಚರ್ಚೆ ನಡೆಸಿ, ಮುಂದಿನ ಕ್ರಮ ಜರಗಿಸುವುದಾಗಿ ವಾಸುದೇವ ಶರ್ಮಾ ಹೇಳಿದ್ದಾರೆ.

ಇಷ್ಟಾದರೆ ಸಾಕೆ? ಈ ಅನೈತಿಕ ಕಾರ್ಯಕ್ರಮ ಮುಂದುವರೆಯಬೇಕೆ? ಆಯೋಗವೇನೋ ತನಿಖೆ ನಡೆಸುತ್ತದೆ. ಆದರೆ ಇಂಥ ಆಯೋಗಗಳಿಗೆ ನೀಡಿರುವ ಅಧಿಕಾರವಾದರೂ ಎಷ್ಟು? ಇದು ಕ್ರಿಮಿನಲ್ ಆರೋಪವಾದ್ದರಿಂದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕಲ್ಲವೇ?

ಇಷ್ಟೆಲ್ಲ ಆದರೂ ಬೇರೆ ಮೀಡಿಯಾಗಳು ಸುಮ್ಮನಿರುವುದೇಕೆ? ತಪ್ಪು ಮಾಡಿರುವುದೂ ಒಂದು ಮೀಡಿಯಾ ಎಂಬ ಕಾರಣಕ್ಕಾಗಿಯೇ?

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ರಿಯಾಲಿಟಿ ಶೋನ ಎರಡನೇ ಆವೃತ್ತಿ ಈಗ ನಡೆಯುತ್ತಿದೆ. ಮೊದಲ ಆವೃತ್ತಿಯ ನಂತರ ಇದೇ ಪ್ರಕಾರದ ಬೇರೆ ರಿಯಾಲಿಟಿ ಶೋಗಳನ್ನು ಸುವರ್ಣ ಟಿವಿ ನಡೆಸಿತ್ತು. ಆದರೆ ಟಿಆರ್‌ಪಿಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕ್ಲಿಕ್ ಆಗಿದ್ದರಿಂದ ಈಗ ಎರಡನೇ ಆವೃತ್ತಿ ನಡೆಸುತ್ತಿದೆ.

ಎರಡನೇ ಆವೃತ್ತಿಗಾಗಿ ಕಾರ್ಯಕ್ರಮದ ನಿರ್ಮಾಪಕರು ಆಯ್ದುಕೊಂಡಿದ್ದು ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮ. ಇದು ರಿಯಾಲಿಟಿ ಶೋ ಆದರೂ, ಇಲ್ಲಿ ಎಲ್ಲವೂ ಸ್ಕ್ರಿಪ್ಟ್‌ನಂತೆಯೇ ನಡೆಯುತ್ತದೆ. ಎಲ್ಲ ರಿಯಾಲಿಟಿ ಶೋಗಳೂ ವೀಕ್ಷಕರ ಕಣ್ಣಿಗೆ ಮಣ್ಣೆರಚುತ್ತಲೇ ಬಂದಿವೆ. ಈ ಶೋನಲ್ಲಿ ನಡೆಯುತ್ತಿರುವುದು ಒಂದೊಂದು ಅನಾಹುತವಲ್ಲ.

ಶೋನಲ್ಲಿ ಉತ್ತರ ಕರ್ನಾಟಕದ ಹೆಣ್ಣಮಕ್ಕಳು ಸ್ವಭಾವತಃ ಒರಟು ಎಂದು ಬಿಂಬಿಸಲಾಗಿದೆ. ನಗರಗಳಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ಹಳ್ಳಿಯ ಮನೆಗಳಲ್ಲಿ ಬಿಟ್ಟು ಅವರನ್ನು ಗೋಳುಹುಯ್ದುಕೊಳ್ಳಲಾಗುತ್ತದೆ. ತಪ್ಪು ಮಾಡಿದರಿಗೆ ಕೊಡುವ ಶಿಕ್ಷೆಯೋ ಕ್ರೂರ. ತಪ್ಪು ಮಾಡಿದ ಒಬ್ಬಾಕೆಯನ್ನು ವಯಸ್ಸಾದ ಹಳ್ಳಿ ಮಹಿಳೆಯೊಬ್ಬಳು ಹೊಡೆಯುವ, ಉರಿಯುವ ಕೊಳ್ಳಿಯಿಂದ ತಿವಿಯಲು ಬರುವ ದೃಶ್ಯಗಳು ಪ್ರಸಾರವಾಗಿವೆ. ಒಂದು ಹೆಣ್ಣುಮಗಳಿಗೆ ಬಲವಂತವಾಗಿ ಒಂದು ಕಪ್‌ನಷ್ಟು ಗಂಜಲವನ್ನು ಕುಡಿಸಲಾಗಿದೆ. ಹಸಿ ಮೀನನ್ನು ಇಡಿಯಾಗಿ ತಿನ್ನಿಸಲಾಗಿದೆ. ಮೆಣಸಿನಕಾಯಿಯನ್ನು ತಿನ್ನಿಸಿದ ಪರಿಣಾಮವಾಗಿ ಒಬ್ಬಾಕೆ ಆಸ್ಪತ್ರೆ ಸೇರಬೇಕಾಯಿತು. ಒಬ್ಬಾಕೆಗೆ ಕೊಟ್ಟ ಶಿಕ್ಷೆ ಏನು ಗೊತ್ತೆ? ಇಡೀ ದಿನ ಒಂದು ಹಸುವಿನ ಜತೆ ಇರಬೇಕು. ಅದು ಸೆಗಣಿ ಹಾಕಿದಾಗ ಅದು ಕೆಳಕ್ಕೆ ಬೀಳದಂತೆ ಕೈಯಲ್ಲಿ ಹಿಡಿಯಬೇಕು! ಎಂಥ ಸ್ಯಾಡಿಸ್ಟ್‌ಗಳಿರಬೇಕು ಇವರು?

ಇಲ್ಲಿ ಪ್ರಶ್ನೆಗಳು ಸಾವಿರ ಇದೆ. ದುಡ್ಡಿನ ಆಸೆಗಾಗಿ ಶೋಗೆ ಬಂದಿರುವ ಹುಡುಗಿಯರಿಗೆ ಹಿಂಸೆ ಕೊಡಿಸಿರುವುದು ಹಳ್ಳಿಯ ಹೆಣ್ಣುಮಕ್ಕಳಿಂದ. ಅದೇನು ಆ ಹೆಣ್ಣುಮಕ್ಕಳು ತಾವೇ ತಾವಾಗಿ ಕೊಟ್ಟ ಹಿಂಸೆಯಲ್ಲ. ಎಲ್ಲವೂ ಕಾರ್ಯಕ್ರಮದ ನಿರ್ದೇಶಕರ ಆಣತಿಯಂತೆ ನಡೆದಿರುತ್ತದೆ. ಹೀಗೆ ಹಳ್ಳಿ ಹೆಣ್ಣಮಕ್ಕಳನ್ನು ಒರಟರಂತೆ ಚಿತ್ರಿಸುವುದು ಯಾವ ನ್ಯಾಯ?

ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು. ಹೀಗಿರುವಾಗ ಹಸಿ ಮೀನನ್ನು ತಿನ್ನಿಸುವುದು ಎಷ್ಟು ಸರಿ? ಮಾಂಸಾಹಾರಿಗಳಾದರೂ ಹಸಿ ಮೀನನ್ನು ತಿನ್ನಲು ಒಪ್ಪುತ್ತಾರೆಯೇ? ಗಂಜಲವನ್ನು ಬಲವಂತವಾಗಿ ಕುಡಿಸುವುದು ಸರಿಯೆ?

ಈ ಕಾರ್ಯಕ್ರಮ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ. ಬಾಲಕನನ್ನು ಬೆತ್ತಲೆಗೊಳಿಸಿದ ಘಟನೆ ಕೇವಲ ಆ ಹುಡುಗನಿಗೆ ನೀಡಿದ ಹಿಂಸೆ ಮಾತ್ರವಲ್ಲ, ಅದನ್ನು ನೋಡಿದ ಎಲ್ಲ ವೀಕ್ಷಕರಿಗೂ ಕೊಟ್ಟ ಹಿಂಸೆ. ಇದನ್ನು ನೋಡಿರಬಹುದಾದ ಮಕ್ಕಳ ಮನಸ್ಸುಗಳಿಗೆ ಎಂಥ ಆಘಾತವಾಗಿರಬಹುದು ಎಂಬುದನ್ನೂ ನಾವು ಗಮನಿಸಬೇಕಾಗುತ್ತದೆ.

ಇಂಥ ಅಸಹ್ಯ ಬೇಕೆ?

ಈ ಅಸಹಾಯಕ ಸಂದರ್ಭದಲ್ಲೂ ಮೌನೇಶ್ ವಿಶ್ವಕರ್ಮ ತಾವು ನೋಡಿದ್ದನ್ನು ದಾಖಲಿಸಿ, ಸುದ್ದಿ ಮಾಡಿದ್ದಾರೆ. ಅದನ್ನು ವಾರ್ತಾಭಾರತಿ ಪ್ರಕಟಿಸಿದೆ. ಅದರ ಪರಿಣಾಮವಾಗಿಯೇ ಮಕ್ಕಳ ಆಯೋಗ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಮೌನೇಶ್ ಹಾಗು ವಾರ್ತಾಭಾರತಿಗೆ ಅಭಿನಂದನೆಗಳು.

ಈ ವಿಷಯವನ್ನು ವೆಬ್ ಸೈಟ್, ಬ್ಲಾಗ್, ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಚರ್ಚಿಸಿದ ಎಲ್ಲರಿಗೂ ಅಭಿನಂದನೆಗಳು. ಇಂಥ ಸಂದರ್ಭಗಳಲ್ಲಿ ಸಾತ್ವಿಕ ಆಕ್ರೋಶವನ್ನಾದರೂ ವ್ಯಕ್ತಪಡಿಸುವ ವೈಯಕ್ತಿಕ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರೋಣ. ಮನುಷ್ಯತ್ವವನ್ನೇ ಮರೆತ ಸಿನಿಕರಿರುವ ಈ ಕಾಲದಲ್ಲಿ ಇಷ್ಟೊಂದು ಜೀವಗಳು ಆ ಬಾಲಕನ ಪರವಾಗಿ ಚಡಪಡಿಸಿರುವುದೇ ಸಮಾಧಾನದ ಸಂಗತಿ, ಇದು ಹೊಸ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಲಿ.

Wednesday, March 16, 2011

ಐಆರ್‌ಎಸ್ ಸರ್ವೆ: ವಿಜಯ ಕರ್ನಾಟಕವೇ ನಂ.೧


ಐಆರ್‌ಎಸ್ ನಾಲ್ಕನೇ ಹಾಗು ಕಡೆಯ ತ್ರೈಮಾಸಿಕ ಸರ್ವೆಯ ಫಲಿತಾಂಶವೂ ಹೊರಬಂದಿದೆ. ಎಂದಿನಂತೆ ವಿಜಯ ಕರ್ನಾಟಕವೇ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಪ್ರಥಮ ಸ್ಥಾನದ ಜತೆಜತೆಗೆ ಅದು ಶೇ.೧.೫ರಷ್ಟು ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕದ ಓದುಗರ ಸಂಖ್ಯೆ ೩೪.೨೫ ಲಕ್ಷವಾಗಿದ್ದರೆ, ಅದು ಈಗ ೩೪.೭೫ ಲಕ್ಷಕ್ಕೆ ಏರಿದೆ. ಮೂರನೇ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕ ೧.೮೭ ಲಕ್ಷ ಓದುಗರನ್ನು ಹೊಸದಾಗಿ ಪಡೆದಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ೫೪,೦೦೦ ಓದುಗರನ್ನು ಕಳೆದುಕೊಂಡಿತ್ತು.

ಪ್ರಜಾವಾಣಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದು ಕಳೆದ ತ್ರೈಮಾಸಿಕದಲ್ಲಿ ಗಣನೀಯ ಪ್ರಗತಿಯನ್ನು ದಾಖಲಿಸಿದೆ. ಈ ಬಾರಿ ೨.೭ ಲಕ್ಷ ಹೊಸ ಓದುಗರನ್ನು ಅದು ಗಳಿಸಿಕೊಂಡಿದೆ. ಪ್ರಜಾವಾಣಿ ಓದುಗರ ಸಂಖ್ಯೆ ಈಗ ೩೧.೮೦ ಲಕ್ಷಕ್ಕೆ ಏರಿದೆ. ಮೂರನೇ ತ್ರೈಮಾಸಿಕದಲ್ಲೂ ಪ್ರಜಾವಾಣಿ ಭರ್ಜರಿ ಪ್ರಗತಿ ಕಂಡು ೩.೪೫ ಲಕ್ಷ ಓದುಗರನ್ನು ಪಡೆದುಕೊಂಡಿತ್ತು, ಎರಡನೇ ತ್ರೈಮಾಸಿಕದಲ್ಲೂ ೩.೨೪ ಲಕ್ಷ ಹೊಸ ಓದುಗರನ್ನು ಗಳಿಸಿಕೊಂಡಿತ್ತು. ಒಟ್ಟಾರೆಯಾಗಿ ಪ್ರಜಾವಾಣಿಗೆ ಈ ವರ್ಷ ಭರ್ಜರಿ ಪ್ರಗತಿಯ ವರ್ಷ. ಶೇ.೪೧.೯ರಷ್ಟು ಬೆಳವಣಿಗೆಯನ್ನು ಅದು ದಾಖಲಿಸಿದೆ. ಒಂಭತ್ತು ಲಕ್ಷಕ್ಕೂ ಹೆಚ್ಚು ಓದುಗರನ್ನು ಅದು ಸೇರ್ಪಡೆಗೊಳಿಸಿಕೊಂಡಿದೆ.

ಮೂರನೇ ಸ್ಥಾನದಲ್ಲಿದ್ದ ಸಂಯುಕ್ತ ಕರ್ನಾಟಕವನ್ನು ಕನ್ನಡಪ್ರಭ ಪತ್ರಿಕೆ ಹಿಂದೆ ಸರಿಸಿ, ತಾನು ಆ ಸ್ಥಾನಕ್ಕೇರಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಕನ್ನಡಪ್ರಭ ಶೇ. ೧೦.೯ರಷ್ಟು ಭರ್ಜರಿ ಪ್ರಗತಿ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ೧೨.೩೭ ಲಕ್ಷ ಹೊಸ ಓದುಗರನ್ನು ದಾಖಲಿಸಿಕೊಂಡಿರುವ ಕನ್ನಡಪ್ರಭ ಕಳೆದ ತ್ರೈಮಾಸಿಕದಲ್ಲೂ ೧೧.೧೫ ಲಕ್ಷ ಓದುಗರನ್ನು ಪಡೆಯುವ ಮೂಲಕ ಭರ್ಜರಿ ಪೈಪೋಟಿ ಆರಂಭಿಸಿತ್ತು. ಈ ವರ್ಷ ಕನ್ನಡಪ್ರಭ ಓದುಗರ ಸಂಖ್ಯೆ ಶೇ.೬೫.೨ರಷ್ಟು ಏರಿಕೆ ಕಂಡಿದೆ.

ಸಂಯುಕ್ತ ಕರ್ನಾಟಕ ಮೂರನೇ ಸ್ಥಾನವನ್ನು ಕಳೆದುಕೊಂಡಿದ್ದರೂ ಅದೂ ಸಹ ಶೇ.೫.೪ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಉದಯವಾಣಿ ಐದನೇ ಸ್ಥಾನವನ್ನು ಗಳಿಸಿದೆ. ಉದಯವಾಣಿ ಸಹ ೪೧,೦೦೦ ಹೊಸ ಓದುಗರನ್ನು ಈ ತ್ರೈಮಾಸಿಕದಲ್ಲಿ ಪಡೆದುಕೊಂಡಿದೆ.

ಇನ್ನು ಇಂಗ್ಲಿಷ್ ಪತ್ರಿಕೆಗಳ ಪೈಕಿ ಟೈಮ್ಸ್ ಆಫ್ ಇಂಡಿಯಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಂಡಿದೆ.

ರಿಯಾಲಿಟಿ ಶೋ ಹೆಸರಿನಲ್ಲಿ ಬಾಲಕನ ಮೇಲೆ ದೌರ್ಜನ್ಯ


ಪತ್ರಕರ್ತ ಮೌನೇಶ್ ವಿಶ್ವಕರ್ಮ, ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೋನಲ್ಲಿ ಬಾಲಕನೊಬ್ಬನನ್ನು ಅಮಾನವೀಯವಾಗಿ ಹಿಂಸಿಸುವ ಕಾರ್ಯಕ್ರಮ ಪ್ರಸಾರವಾಗಿರುವ ಕುರಿತು ಲೇಖನವೊಂದನ್ನು ಬರೆದು ಗಮನ ಸೆಳೆದಿದ್ದಾರೆ. ಇದು ಅವರ ಬ್ಲಾಗ್ ಮೌನವೇ ರಾಗದಲ್ಲೂ ಪ್ರಕಟಗೊಂಡಿದೆ.

ಮೌನೇಶ್ ಅವರ ಲೇಖನವನ್ನು ಗಮನಿಸಿದರೆ, ರಿಯಾಲಿಟಿ ಶೋ ಹೆಸರಿನಲ್ಲಿ ನಡೆಯುತ್ತಿರುವ ಕುಚೇಷ್ಟೆಗಳು ಯಾವ ಹಂತ ತಲುಪಿದೆ ಎಂಬುದು ಅರ್ಥವಾಗುತ್ತದೆ.

ಮೌನೇಶ್ ಗಮನಿಸಿರುವ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ.

ಬಾಗಲಕೋಟೆಯ ಕೆರ್‌ಕಲ್ ಮಟ್ಟಿ ಎಂಬ ಹಳ್ಳಿಯ ಮನೆಯೊಂದರಲ್ಲಿ ಸುಮಾರು ೬ ವರ್ಷದ ಪುಟ್ಟ ಬಾಲಕನೊಬ್ಬನೊಂದಿಗೆ ವಾಗ್ವಾದಕ್ಕಿಳಿಯುವ ಪ್ಯಾಟಿ ಹುಡ್ಗಿಯರಿಬ್ಬರು, ಬಾಲಕನ ಅಂಗಿಯ ಬಟನ್‌ಗಳನ್ನು ತೆಗೆಯುತ್ತಾರೆ, ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಇಬ್ಬರೂ ಸೇರಿ ಬಾಲಕ ಧರಿಸಿದ್ದ ಪ್ಯಾಂಟ್ ಅನ್ನು ಎಳೆದು ತೆಗೆಯುತ್ತಾರೆ. ಬಾಲಕ ಸಿಟ್ಟಿನಿಂದ ಹುಡ್ಗೀರ ವರ್ತನೆಗೆ ಪ್ರತಿರೋಧ ತೋರುತ್ತಾನಾದರೂ ಲೆಕ್ಕಿಸದ ಹುಡ್ಗೀರು ಬಾಲಕನ ಎರಡೂ ಕೈಗಳನ್ನು ಹಿಂದಕ್ಕೆ ಹಿಡಿದುಕೊಂಡು ಬಾಲಕ ಧರಿಸಿದ್ದ ಚಡ್ಡಿಯನ್ನೂ ಎಳೆಯುತ್ತಾರೆ, ತುದಿ ಕತ್ತರಿಸುತ್ತೇನೆ ಎಂದೆಲ್ಲಾ ಹೊಲಸು ಮಾತನಾಡುತ್ತಾರಲ್ಲದೆ, ಈ ದೃಶ್ಯದುದ್ದಕ್ಕೂ ಬಾಲಕನನ್ನು ಅವಾಚ್ಯವಾಗಿ ನಿಂದಿಸುವ ಮಾತುಗಳು ಕೇಳಿ ಬರುತ್ತದೆ.
ವಿವಸ್ತ್ರಗೊಂಡ ಬಾಲಕನನ್ನು ಇಬ್ಬರು ಯುವತಿಯರು ಜೋರಾಗಿ ನಕ್ಕು ಅವಮಾನಿಸುತ್ತಾರಲ್ಲದೆ, ಈಗೆಲ್ಲಿ ನಿನ್ನ ಪೊಗರು ಎಂಬೆಲ್ಲಾ ಅರ್ಥ ಬರುವಂತೆ ಮಾತನಾಡುವ ಸನ್ನಿವೇಶಗಳು ಮುಂದಿನ ದೃಶ್ಯಗಳಲ್ಲಿ ಅಡಕವಾಗಿದೆ. ಕೊನೆಯಲ್ಲಿ ಹುಡ್ಗೀರ ವರ್ತನೆಗೆ ಆಕ್ರೋಶಗೊಂಡ ಬಾಲಕ ಕತ್ತಿ ಹಿಡಿದು ಹುಡುಗಿಯರನ್ನು ಬೆದರಿಸಿ ಬೆನ್ನಟ್ಟುವ ದೃಶ್ಯಗಳನ್ನು ವಾಹಿನಿಯು ಹೊಡಿ ಮಗ.. ಹೊಡಿ ಮಗಾ ಹಿನ್ನೆಲೆ ಹಾಡಿನೊಂದಿಗೆ ಪ್ರಸಾರ ಮಾಡಿದೆ.
ಮೌನೇಶ್ ವಿಶ್ವಕರ್ಮ

ಇದು ಯಾವ ಸೀಮೆಯ ರಿಯಾಲಿಟಿ ಶೋ? ಇದು ಮಗುವಿನ ಮೇಲೆ ನಡೆಸಿದ ಅತ್ಯಾಚಾರವಲ್ಲವೆ? ಲೈಂಗಿಕ ಕಿರುಕುಳವಲ್ಲವೆ? ಕಾರ್ಯಕ್ರಮ ನಿರ್ಮಾಪಕರು, ಚಾಲನ್ ಮುಖ್ಯಸ್ಥರು ಹಾಗು ಮಗುವಿಗೆ ಹಿಂಸೆ ಕೊಟ್ಟ ಹುಡುಗಿಯರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕಲ್ಲವೆ?

ಒಂದು ವೇಳೆ ಮಗುವನ್ನು ಅಭಿನಯಿಸುವಂತೆ ಹೇಳಿ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೆಂಥ ಕೀಳು ಬಗೆಯ ಅಭಿರುಚಿ? ಹಣಕ್ಕಾಗಿ ಟಿವಿ ವಾಹಿನಿಗಳು ಇಷ್ಟು ಪಾತಾಳಕ್ಕೆ ಇಳಿಯಬಹುದೆ?

ಇದನ್ನೆಲ್ಲ ದೂಸ್ರಾ ಮಾತನಾಡದೆ ಸಹಿಸಿಕೊಳ್ಳುತ್ತಿರುವ ನಮ್ಮ ಬಗೆಯೇ ನಮಗೆ ಅಸಹ್ಯ ಮೂಡುವಂತಾಗಿದೆ. ನಾವು ಇಷ್ಟೊಂದು ಇನ್‌ಸೆನ್ಸಿಟಿವ್ ಆಗಿ ಹೋಗಿದ್ದೇವೆಯೇ?

Tuesday, March 15, 2011

ಎಚ್ಚರಿಕೆ, ಸಂಭೋಗ ಮಾಡುವುದಕ್ಕೆ ಮುನ್ನ ಕನ್ನಡಪ್ರಭವನ್ನೊಮ್ಮೆ ಓದಿಕೊಳ್ಳಿ...


ರಾತ್ರಿ ಮೊದಲನೇ ಯಾಮದಲ್ಲಿ ಅಂದರೆ ಸಂಜೆ ೬ರಿಂದ ೯ರವರೆಗೆ ಸಂಭೋಗ ನಡೆಸಿದರೆ, ಅದೃಷ್ಟಹೀನರು, ಅಲ್ಪಾಯುಷಿಗಳು, ದುಷ್ಟರು, ತಾಮಸ ಗುಣವುಳ್ಳವರು ಜನಿಸುವರು.


ಎರಡನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೯ರಿಂದ ೧೨ರವರೆಗಿನ ಸಂಭೋಗದಿಂದ ಮಧ್ಯಮ ಆಯುಷ್ಯವುಳ್ಳವರು, ದರಿದ್ರರು, ಅನಾರೋಗ್ಯದಿಂದ ನರಳುವವರು, ಮತಿಹೀನರು, ದುರದೃಷ್ಟವಂತರು ಜನಿಸುವರು.


ಮೂರನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೧೨ರಿಂದ ೩ ಗಂಟೆಯವರೆಗಿನ ಸಂಭೋಗದಿಂದ ಪೂರ್ಣ ಆಯುಷ್ಯವಂತರು, ಧರ್ಮನಿಷ್ಠರು, ಐಶ್ವರ್ಯವಂತರು, ವಿವೇಕಶಾಲಿಗಳು, ರೂಪವಂತರು, ರಜೋಗುಣ-ಸತ್ಯಗುಣಪ್ರಧಾನರು ಜನಿಸುವರು.


ನಾಲ್ಕನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೩ರಿಂದ ೬ ಗಂಟೆಯವರೆಗಿನ ಸಂಭೋಗದಿಂದ ವಿದ್ಯಾವಂತರು, ಶಾಂತಸ್ವಭಾವದವರು, ಧೈರ್ಯ ಸಾಮರ್ಥ್ಯವುಳ್ಳವರು, ಅದೃಷ್ಟಶಾಲಿಗಳು, ವೈದಿಕ ಜ್ಞಾನವುಳ್ಳವರು, ವೇದಪಾರಂಗತರು, ಐಶ್ವರ್ಯವಂತರು, ಸತ್ವಗುಣ ಪ್ರಧಾನರು ಜನಿಸುವರು.


ಒಳ್ಳೆ ಮಕ್ಕಳು ಹುಟ್ಟಬೇಕೆಂದರೆ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರಗಳಂದೇ ಸಂಭೋಗ ನಡೆಸಬೇಕು.


ಸಂಜೆ ೬ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ದಂಪತಿಗಳು ಎಷ್ಟೇ ಮೂಡ್ ಬಂದರೂ ಸೇರಲೇಕೂಡದು. ಆಮೇಲೆ ನೋಡಿ, ಪ್ರಶಸ್ತ ಮುಹೂರ್ತ. ಭಾನುವಾರ, ಮಂಗಳವಾರ, ಶನಿವಾರಗಳು ಪೂರ್ಣ ರಜಾಕಾಲ.

ಇದೆಲ್ಲವನ್ನು ಹೇಳುತ್ತಾ ಇರುವುದು ಇವತ್ತಿನ ಕನ್ನಡಪ್ರಭ. ಆ ಪತ್ರಿಕೆಯ ಭವಿಷ್ಯ ಎಂಬ ಸಪ್ಲಿಮೆಂಟು ಇಂಥ ಬೋಧನೆಗಳನ್ನು ಉಣಬಡಿಸುತ್ತಿದೆ. ವೈದಿಕ ಸಂಸ್ಕೃತಿಯಲ್ಲಿ ದಾಂಪತ್ಯ ರಹಸ್ಯ ಎಂಬುದು ಲೇಖನದ ಶೀರ್ಷಿಕೆ. ಬರೆದವರು ಕೆ.ಎನ್.ಸಂಜೀವಮೂರ್ತಿ ಎಂಬ ಮಹಾನುಭಾವರು.

ಇದು ಎಷ್ಟು ಅಮೂಲ್ಯ ದಾಖಲೆಯೆಂದರೆ ಹೊಸದಾಗಿ ಮದುವೆಯಾದವರಿಗೆ ಸಾಕ್ಷಾತ್ ಧರ್ಮಗ್ರಂಥವಿದ್ದಂತೆ. ದಂಪತಿಗಳು ಇದನ್ನು ಕೋಷ್ಟಕ ರೂಪದಲ್ಲಿ ತಯಾರು ಮಾಡಿ ಮಲಗುವ ಕೋಣೆಯಲ್ಲಿ ಅಂಟಿಸಿಕೊಳ್ಳುವುದು ಒಳ್ಳೆಯದು. ಒಂದು ಸಾಫ್ಟ್‌ವೇರ್ ತಯಾರಿಸಿ ಕಂಪ್ಯೂಟರ್‌ನಲ್ಲಿ ಹೂಡಿ ಸುಮ್ನೆ ಟೈಮ್ ಎಂಟರ್ ಮಾಡಿದರೆ ಹುಟ್ಟು ಮಗು ಎಂಥದ್ದಾಗುತ್ತದೆ ಎಂಬುದನ್ನು ಕಂಡುಹಿಡಿಯುವಂತಾಗಬೇಕು. ನಂತರ ಸಂಭೋಗ ಮಾಡಬೇಕೋ ಬೇಡವೋ ಎಂದು ಡಿಸೈಡ್ ಮಾಡಿಕೊಳ್ಳಬಹುದು. ಮೊಬೈಲ್‌ಗೆ, ಐಪಾಡ್‌ಗೆ ಫೀಡ್ ಮಾಡಿ, ಪ್ರಶಸ್ತ ಸಮಯಕ್ಕೆ ಅವುಗಳೇ ಸರಿಯಾಗಿ ಅಲಾರಾಂ ಹೊಡೆಯುವಂತೆ ಮಾಡಿದರೂ ನಡೆಯುತ್ತದೆ. ಹೇಗೂ ಇದು ಎಲ್ಲರಿಗೂ ಅನ್ವಯಿಸುವುದರಿಂದ ಕೂಡುವುದಕ್ಕೆ ಪ್ರಶಸ್ತ ಸಮಯ ಬಂದಾಗ ಫೇಸ್‌ಬುಕ್‌ನ ಸ್ಟೇಟಸ್ ಮೇಲೆ ಅದನ್ನು ಅಪ್‌ಲೋಡ್ ಮಾಡಿದರೆ ಎಲ್ಲ ಗೆಳೆಯರಿಗೂ ಅನುಕೂಲವಾಗುತ್ತದೆ. ಬ್ಲಾಗು, ವೆಬ್‌ಸೈಟುಗಳಲ್ಲೂ ಕೂಡಬೇಕಾದ ಸಮಯದ ಒಂದು ಕ್ಯಾಲೆಂಡರ್ ತಯಾರಿಸಿ ಅಂಟಿಸಿಕೊಂಡರೆ ಓದುಗರಿಗೂ ಮಹದುಪಕಾರವಾಗುತ್ತದೆ.

ಯಾರಾದ್ರೂ ಅದೃಷ್ಟಹೀನರೆಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಿ, ಬದಲಾಗಿ ನಿಮ್ಮ ಅಪ್ಪ-ಅಮ್ಮಂಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಿ. ಸೇರಬಾರದ ಸಮಯಕ್ಕೆ ಸೇರಿದ್ದರಿಂದಲೇ ಅವರು ಅದೃಷ್ಟಹೀನರಾಗಿದ್ದು! ಅದೇ ರೀತಿ ನೀವು ಐಶ್ವರ್ಯವಂತರಾಗಿದ್ದರೆ ಅದಕ್ಕೆ ನೀವು ಕಾರಣರಲ್ಲ, ನಿಮ್ಮ ಅಪ್ಪ-ಅಮ್ಮ ಸೇರಿದ ಘಳಿಗೆ ಕಾರಣ. ಹೀಗಾಗಿ ಅಪ್ಪ-ಅಮ್ಮಂಗೆ ಒಂದು ಥ್ಯಾಂಕ್ಸ್ ಹೇಳಿ.

ಯಾಕೆ ಸಂಜೆಯಿಂದ ರಾತ್ರಿ ೧೨ರವರೆಗೆ ಕೂಡಲೇಬಾರದು. ಕೂಡಿದರೆ ಯಾಕೆ ಅದೃಷ್ಟಹೀನ, ದರಿದ್ರ, ಮತಿಹೀನ, ಅಲ್ಪಾಯುಷಿ, ದುಷ್ಟ, ತಾಮಸ ಗುಣದ ಮಕ್ಕಳು ಹುಟ್ಟುತ್ತಾರೆ? ಏನಾದರೂ ಈ ಲೇಖನದಲ್ಲಿ ವೈಜ್ಞಾನಿಕ ಸಮರ್ಥನೆಗಳು ಇವೆಯಾ?

ಖಂಡಿತಾ ಹಾಗೆಲ್ಲ ಪ್ರಶ್ನೆ ಕೇಳಕೂಡದು. ಇದೆಲ್ಲ ವೈದಿಕ ಸಂಸ್ಕೃತಿಯಲ್ಲಿ ಇದೆಯಂತೆ. ಹಾಗೆ ಇದ್ದ ಮೇಲೆ ಯಾರೂ ಅದನ್ನು ಪ್ರಶ್ನಿಸಕೂಡದು. ಋಷಿಮೂಲ, ನದಿಮೂಲ ಕೇಳಬಾರದು. ಪ್ರಶ್ನಿಸಿದವರ ತಲೆ ಸಾವಿರ ಹೋಳಾಗಿ ಹೋಗಲಿ.

ಇಷ್ಟೆಲ್ಲ ಹೇಳಿದ ಮೇಲೂ ಕೊನೆಗೂ ಉಳಿಯುವ ಪ್ರಶ್ನೆ:

ಪತ್ರಕರ್ತರು ಅಪ್‌ಡೇಟ್ ಆಗೋದು ಅಂದ್ರೆ ಹಿಂಗೇನಾ?

ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದ್ರಲ್ಲ, ಇದನ್ನೇ ಮಾಡೋದಕ್ಕೆ ಹೊರಟಿದ್ದಾ ನೀವು?

ಹೀಗೂ ಉಂಟೆ?