Sunday, April 10, 2011

ವಿ ದ ಪೀಪಲ್ ಆಫ್ ಇಂಡಿಯಾ, ಮಾಡಬೇಕಾಗಿರುವುದೇನು?


ಜನ ಲೋಕಪಾಲ್ ಮಸೂದೆಗಾಗಿ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಅಣ್ಣಾ ಹಜಾರೆ ದೇಶದ ಹೊಸ ಹೀರೋ ಆಗಿ ಆವಿರ್ಭವಿಸಿದ್ದಾರೆ. ದೇಶಾದ್ಯಂತ ಅಣ್ಣಾ ಹೋರಾಟಕ್ಕೆ ಧ್ವನಿಗೂಡಿಸಿದವರೆಲ್ಲ ಸಂಭ್ರಮಾಚರಿಸಿದ್ದಾರೆ. ಇದು ಹೊಸ ಆಶಾವಾದಕ್ಕೆ ಕಾರಣವಾಗಿದೆ. ಏಕಾಏಕಿ ಉದ್ಭವಿಸಿದ ಒಂದು ಜನಾಂದೋಲನ ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ವಿವರಿಸಿದೆ. ನಿಜ, ಜಡಗಟ್ಟಿದ್ದ ವ್ಯವಸ್ಥೆಯ ವಿರುದ್ಧ ಈ ಬೆಳವಣಿಗೆ ಒಂದು ಸಂಚಲನವನ್ನಂತೂ ಸೃಷ್ಟಿಸಿದೆ.

ಜನ ಲೋಕಪಾಲ್ ಮಸೂದೆ ಜಾರಿಗೆ ಬರಬಹುದು, ಅಲ್ಲಿಗೆ ಅಣ್ಣಾ ಹಜಾರೆಯವರ, ನಮ್ಮೆಲ್ಲರ ಹೋರಾಟವೂ ಯಶಸ್ವಿಯಾಗಬಹುದು. ಅಷ್ಟಕ್ಕೇ ಭ್ರಷ್ಟಾಚಾರ ಸಂಪೂರ್ಣ ನಾಶವಾಗಿಬಿಡುವುದೇ? ದಿನ ಬೆಳಗಾಗುವುದರೊಳಗೆ ಭ್ರಷ್ಟರೆಲ್ಲ ಜೈಲು ಸೇರಿಬಿಡುತ್ತಾರೆಯೇ? ನಮ್ಮಲ್ಲಿ ವರದಕ್ಷಿಣೆಯನ್ನು ತಡೆಗಟ್ಟುವುದಕ್ಕೆ ಪರಿಣಾಮಕಾರಿಯಾದ ಕಾನೂನುಗಳಿಗೆ, ಅಸ್ಪೃಶ್ಯತೆಯನ್ನು ಕಿತ್ತು ಹಾಕಲು ಗಂಭೀರವಾದ ಕಾಯ್ದೆಗಳಿವೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ನಮ್ಮ ಕಾನೂನುಗಳು ಸಕ್ಷಮವಾಗೇ ಇದೆ. ಆದರೆ ವರದಕ್ಷಿಣೆ ನಿಂತಿದೆಯೇ? ಅಸ್ಪೃಶ್ಯತೆ ತೊಲಗಿದೆಯೇ?

ಯಾವ ಜನ ಲೋಕಪಾಲ್ ವ್ಯವಸ್ಥೆಗಾಗಿ ನಾವು ಒಕ್ಕೊರಲಿನಿಂದ ಕೂಗಿಡುತ್ತಿದ್ದೇವೆಯೋ, ಅದರ ಭಾಗಶಃ ಆಶಯಗಳನ್ನು ಈಡೇರಿಸುವ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿದೆ, ಕ್ರಿಯಾಶೀಲವಾಗಿದೆ. ಅದು ತನ್ನ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದೆ. ಹಾಗಿದ್ದಾಗ್ಯೂ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.೧ ಪಟ್ಟ ಪಡೆದುಕೊಂಡಿದ್ದು ಹೇಗೆ?

ನಿಜ, ನಾವು ಸಿನಿಕರಾಗೋದು ಬೇಡ. ನಿರಾಶಾವಾದಿಗಳಂತೂ ಖಂಡಿತಾ ಆಗಬೇಕಿಲ್ಲ. ಆದರೆ ವಾಸ್ತವನ್ನು ಮರೆಯುವುದು ಮೂರ್ಖತನ. ಭ್ರಮೆಗಳಲ್ಲಿ ತೇಲಾಡುವುದು ನಮಗೆ ಅಂಟಿದ ಜಾಡ್ಯ. ಸಮೂಹ ಸನ್ನಿಗಳಿಗೆ ಒಳಗಾಗುವುದು ನಮ್ಮ ದೌರ್ಬಲ್ಯ. ಇವುಗಳನ್ನು ಮೀರಿ ಯೋಚಿಸಿದರೆ, ನಾವು ಮಾಡಬೇಕಾಗಿರುವ ಸಾಕಷ್ಟು ಕೆಲಸಗಳೂ ಕಣ್ಣಿಗೆ ಕಾಣಿಸಬಹುದು.

ಜೆಪಿ ಚಳವಳಿ ಹಾಗು ರೈತ ಸಂಘಟನೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದ ದಿನಗಳನ್ನು ನೆನಪಿಸಿಕೊಳ್ಳೋಣ. ಅಂದು ಚಳವಳಿಯಲ್ಲಿ ತೊಡಗಿದ್ದವರು ವೈಯಕ್ತಿಕ ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಂಡಿದ್ದರು. ಬಹುತೇಕರು ಆಡಂಬರದ ಮದುವೆಗಳನ್ನು ಧಿಕ್ಕರಿಸಿದರು, ಸರಳವಾಗಿ ಮದುವೆಯಾದರು. ಯಾರೂ ಯಾರಿಗೂ ಯಾವ ಕಾರಣಕ್ಕೂ ಒಂದು ರೂಪಾಯಿ ಲಂಚ ಕೊಟ್ಟವರಲ್ಲ. ಅದ್ದೂರಿ ಮದುವೆಗಳು ತಮ್ಮ ಸಂಬಂಧಿಕರದ್ದೇ ನಡೆದರೂ ಅಲ್ಲಿಗೆ ಹೋದವರಲ್ಲ. ಇದೆಲ್ಲವೂ ಚಳವಳಿಗಾರರಲ್ಲಿ ಒಂದು ನೈತಿಕ ಶಕ್ತಿಯನ್ನು ತಂದುಕೊಟ್ಟಿತ್ತು. ಹೀಗಾಗಿಯೇ ರೈತ ಚಳವಳಿಗಾರರು ಭ್ರಷ್ಟ ಅಧಿಕಾರಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ಎದುರಿಸುತ್ತಿದ್ದರು. ಪ್ರೊ.ಎಂ.ಡಿ.ಎನ್. ಅವರಂತೂ ಭ್ರಷ್ಟರ ಕೆನ್ನೆಗೆ ಬಾರಿಸುತ್ತಿದ್ದ ಘಟನೆಗಳನ್ನೂ ಈ ಹಿನ್ನೆಲೆಯಲ್ಲೇ ನಾವು ಅರ್ಥೈಸಿಕೊಳ್ಳಬೇಕು.

ಚಳವಳಿಯ ನಿಜವಾದ ಶಕ್ತಿಯೇ ಚಳವಳಿಗಾರರ ನೈತಿಕತೆ. ಅದು ಉಳಿಯದ ಹೊರತು ಚಳವಳಿಯೂ ಉಳಿಯದು. ಹಾಗಿದ್ದಲ್ಲಿ ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ ಏನು ಮಾಡಬಹುದು? ಅಣ್ಣಾ ಹಜಾರೆಯವರ ಚಳವಳಿಯನ್ನು ಜೀವಂತವಾಗಿ ಉಳಿಸಿಕೊಳ್ಳಲೇಬೇಕೆಂದಿದ್ದರೆ ಚಳವಳಿಗಾರರು ಇಟ್ಟುಕೊಳ್ಳಲೇಬೇಕಾದ ಕನಿಷ್ಠ ಸಾಮಾಜಿಕ ಪ್ರಜ್ಞೆಯಾದರೂ ಏನು? ಕೆಲವನ್ನು ನಾವು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ, ನಮಗೆ ಚೆನ್ನಾಗಿ ಗೊತ್ತು, ನಮ್ಮ ಓದುಗರು ಇದನ್ನು ವಿಸ್ತರಿಸುತ್ತಾರೆ.

೧. ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ್ ಬರಬೇಕೆಂದು ಆಗ್ರಹಿಸುವ ನಾವು ನಮ್ಮ ಎದೆಯ ಒಳಗಿನ ಲೋಕಪಾಲರನ್ನು ಮೊದಲು ಜಾಗೃತಗೊಳಿಸಬೇಕು. ಪ್ರತ್ಯಕ್ಷ ಹಾಗು ಪರೋಕ್ಷ ರೂಪದಲ್ಲಿ ಲಂಚವನ್ನು ಪಡೆಯುವುದಾಗಲೀ, ಕೊಡುವುದಾಗಲೀ ಮಾಡುವುದಿಲ್ಲವೆಂದು ಮೊದಲು ಪ್ರತಿಜ್ಞೆ ಮಾಡಬೇಕು. ಸಂದರ್ಭ ಎದುರಾದಾಗ ಒಬ್ಬನೇ/ಒಬ್ಬಳೇ ಆದರೂ ಸಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ನಾವು ತೋರಬೇಕು. ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು.

೨. ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಇದು ಸದ್ಯದ ಸ್ಥಿತಿಯಲ್ಲಿ ಇರುವ ಶ್ರೇಷ್ಠ ವಿಧಾನ. ನಾವು ಪ್ರಜಾಪ್ರಭುತ್ವದ ಬಲವರ್ಧನೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸವನ್ನಷ್ಟೇ ಮಾಡಬೇಕಿದೆ. ಹಾಗಿರುವಾಗ ನಾವು ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ರಾಜಕಾರಣಿಗಳನ್ನು ಮೂದಲಿಸುವ, ನಿಂದಿಸುವ ಮಧ್ಯಮ, ಮೇಲ್‌ಮಧ್ಯಮ, ಶ್ರೀಮಂತ ಜನವರ್ಗ ಮತದಾನದ ಸಂದರ್ಭದಲ್ಲಿ ಮನೆ ಬಿಟ್ಟು ಹೊರಬರುವುದಿಲ್ಲ. ಮತದಾನ ಮಾಡದೇ ಇರುವುದಕ್ಕೆ ಅದೇ ಚರ್ವಿತ ಚರ್ವಣ ಕಾರಣಗಳನ್ನು ಕೊಡುತ್ತೇವೆ. ಇದು ಬದಲಾಗಬೇಕು. ಪ್ರಜಾಪ್ರಭುತ್ವದ ಬಹುಮುಖ್ಯ ಸಾಧನವಾದ ಚುನಾವಣೆಗಳನ್ನು ನಾವು ಬಳಸಿಕೊಳ್ಳಬೇಕು. ಹಣಕ್ಕಾಗಿ, ಆಮಿಷಗಳಿಗಾಗಿ ಬಲಿಯಾಗದೆ ಮತ ಚಲಾಯಿಸಬೇಕು, ಭ್ರಷ್ಟಾಚಾರವಿಲ್ಲದಂತೆ ಚುನಾವಣೆ ನಡೆಯುವ ಪರಿಸ್ಥಿತಿಯನ್ನು ಸೃಷ್ಟಿಸಬೇಕು. ಹಾಗಾದಾಗ ಪ್ರಾಮಾಣಿಕರೂ ರಾಜಕಾರಣದಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

೩. ಭ್ರಷ್ಟಾಚಾರ ಈಗ ಮೊದಲಿನ ಸ್ವರೂಪದಲ್ಲಿ ಇಲ್ಲ. ಬಹುತೇಕ ಸಂದರ್ಭಗಳಲ್ಲಿ ಕೊಡುವವರು ಪಡೆದುಕೊಳ್ಳುವವರಷ್ಟೇ ನೀಚರಾಗಿದ್ದಾರೆ. ಕೊಡುವವರಿಗೆ ಕೊಡುವುದಕ್ಕೆ ಕಾರಣವೂ ಇರುತ್ತದೆ. ನಿಯಮ ಬಾಹಿರವಾಗಿ ಕೆಲಸ ಆಗಬೇಕೆಂದು ಬಯಸುವವನು ಲಂಚ ಕೊಡುತ್ತಾನೆ. ಆತ ಲಂಚ ಪಡೆಯಲು ಹಿಂಜರಿಯುವವನನ್ನೂ ಭ್ರಷ್ಟನನ್ನಾಗಿಸುತ್ತಾನೆ. ಹೀಗಾಗಿ ಲಂಚ ಪಡೆಯುವುದು ಎಷ್ಟು ಅನೈತಿಕವೋ, ಕೊಡುವುದೂ ಅನೈತಿಕ ಎಂಬುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು.

೪. ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುವ ನಮ್ಮ ಕೊಳ್ಳುಬಾಕತನವನ್ನು ಈಗಲಾದರೂ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳ ಆಕರ್ಷಣೆಗಳಿಂದ ಬಚಾವಾಗಬೇಕು. ಅದ್ದೂರಿ ಮದುವೆ-ಮುಂಜಿ ಇತ್ಯಾದಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು, ಅಂಥವುಗಳಿಗೆ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು.

೫. ಭ್ರಷ್ಟಾಚಾರವನ್ನು ಇಂದು ಜಾತೀಯತೆ ಪೋಷಿಸುತ್ತಿದೆ. ಎರಡರ ಮಿಶ್ರಣ ಭೀಕರವಾದ ಸಾಮಾಜಿಕ ಅವನತಿಗೆ ಕಾರಣವಾಗುತ್ತಿದೆ. ಮುಖ್ಯಮಂತ್ರಿ, ಮಂತ್ರಿ ನಮ್ಮ ಜಾತಿಯವರೆಂಬ ಕಾರಣಕ್ಕೆ ಪೋಷಿಸುವ, ಸಮರ್ಥಿಸುವ, ಬೆಂಬಲಿಸುವ ಧೋರಣೆಯನ್ನು ನಾವು ಮೊದಲು ಕೈಬಿಡಬೇಕು. ಎಲ್ರೂ ತಿಂದಿಲ್ವೇನ್ರೀ, ನಮ್ಮವನಲ್ವಾ, ಇವನೂ ತಿನ್ನಲಿ ಬಿಡಿ ಎಂದು ಸಾಮಾನ್ಯ ಜನರೂ ವಿಕೃತ ಜಾತೀಯತೆ ಪ್ರದರ್ಶಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಹೋಗಬೇಕು. ನಾವು ಕಟ್ಟಿಕೊಂಡಿರುವ ಅನೈತಿಕ ಜಾತಿಕೂಟಗಳನ್ನು ವಿಸರ್ಜಿಸಬೇಕು, ಅವುಗಳನ್ನು ಜಾತ್ಯತೀತ ವೇದಿಕೆಗಳನ್ನಾಗಿ ಪುನರ್ ರೂಪಿಸಬೇಕು. ಭ್ರಷ್ಟರೆಂದು ಗೊತ್ತಿದ್ದೂ ತಮ್ಮ ಜಾತಿಯವನನ್ನು ಮಂತ್ರಿ, ಮುಖ್ಯಮಂತ್ರಿ ಮಾಡಲು ಯತ್ನಿಸುವ, ಅವರ ಸ್ಥಾನಮಾನಗಳನ್ನು ಉಳಿಸಲು ಕುತಂತ್ರಗಳನ್ನು ನಡೆಸುವ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರನ್ನು, ಮಠಾಧೀಶರನ್ನು, ಬೊಗಳೆ ಸ್ವಾಮೀಜಿಗಳನ್ನು ಧಿಕ್ಕರಿಸಬೇಕು.

೬. ನಾವು, ನಮ್ಮ ಮಕ್ಕಳು ವರದಕ್ಷಿಣೆ ಪಡೆಯುವುದಿಲ್ಲ, ಮತ್ತು ಕೊಡುವುದಿಲ್ಲ ಎಂದು ತೀರ್ಮಾನಕ್ಕೆ ಬರಬೇಕು. ವರದಕ್ಷಿಣೆ ಪಡೆಯುವುದು ಅತ್ಯಂತ ಹೀನ ಆಚರಣೆ ಎಂದು ಪಡೆಯುವವರಿಗೇ ಅನ್ನಿಸುವಂತೆ ಮಾಡುವ ಪ್ರಜ್ಞೆಯನ್ನು ನಾವು ಮೂಡಿಸಬೇಕು. ಇದು ರಾತ್ರೋರಾತ್ರಿ ಆಗುವ ಕೆಲಸವೇನಲ್ಲ, ಆದರೆ ಅದು ಎಂದಾದರೂ ಆಗಲೇಬೇಕು.

೭. ದೇಶಭಕ್ತಿ ಎಂದರೆ ಭಾರತ ತಂಡ ಕ್ರಿಕೆಟ್‌ನಲ್ಲಿ ಗೆದ್ದಾಗ ಆಚರಿಸುವಂಥದ್ದಲ್ಲ. ದೇಶವನ್ನು ಪರಿಪೂರ್ಣವಾದ ಅರ್ಥದಲ್ಲಿ ಪುನರ್‌ನಿರ್ಮಿಸುವ ಹೊಣೆಗಾರಿಕೆ ಎಲ್ಲರಿಗೂ ಇರುತ್ತದೆ. ನಮ್ಮ ಸಹ ದೇಶವಾಸಿಯೊಬ್ಬ ಸಮಸ್ಯೆಗೆ ಸಿಲುಕಿದಾಗ ಆತನಿಗೆ ಸಹಕರಿಸುವುದು ನಿಜವಾದ ದೇಶಸೇವೆ. ವೃದ್ಧ ಹೋರಾಟಗಾರ ಅಣ್ಣಾ ಹಜಾರೆ ಉಪವಾಸಕ್ಕೆ ಕುಳಿತಾಗ ನಮಗೆ ಆದ ತಳಮಳವೇ ತಿನ್ನಲು ಏನೇನೂ ಇಲ್ಲದೇ ಬದುಕುತ್ತಿರುವ, ಅನಿವಾರ್ಯ ಉಪವಾಸಕ್ಕೆ ಒಳಗಾಗಿರುವನ್ನು ನೆನೆದಾಗಲೂ ಆಗಬೇಕು. ದೇಶದ ಬಹುಪಾಲು ಜನರು ಉಪವಾಸವಿರುವುದನ್ನು ನಾವು ನೋಡಿಯೂ ನೋಡದಂತಿದ್ದರೆ ನಮ್ಮದು ಯಾವ ದೇಶಭಕ್ತಿ? ದೇಶದ ಬಹುಪಾಲು ದಲಿತರು ಇನ್ನೂ ಅಸ್ಪೃಶ್ಯತೆಯ ನರಕದಲ್ಲಿ, ಪ್ರತ್ಯೇಕ ಕಾಲನಿಗಳಲ್ಲಿ, ಮುಟ್ಟಿಸಿಕೊಳ್ಳದಂತೆ, ಯಾರೂ ಕಣ್ಣಿಗೂ ಬೀಳಲಾಗದಂತೆ ಬದುಕುತ್ತಿದ್ದರೆ, ಅದನ್ನು ನೋಡಿ ನಮ್ಮಲ್ಲಿ ಯಾವ ಭಾವನೆಯೂ ಹುಟ್ಟದಿದ್ದರೆ ನಮ್ಮದು ಎಂಥ ದೇಶಭಕ್ತಿ? ಅಂಥ ದೇಶಭಕ್ತಿಗೆ ಯಾವ ಅರ್ಥವೂ ಇಲ್ಲ. ಪರಿಶುದ್ಧ ಸಮಾಜವನ್ನು ಕಟ್ಟಬಯಸುವ ನಾವು ಎಲ್ಲ ರೀತಿಯ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಬೇಕು. ಭ್ರಷ್ಟಾಚಾರವನ್ನು, ಕಪ್ಪುಹಣವನ್ನು ವಿರೋಧಿಸುವುದೆಂದರೆ ಸಂಪತ್ತಿನ ಹಂಚಿಕೆಯನ್ನು ಬೆಂಬಲಿಸುವುದು. ದುಡಿಮೆ ಮತ್ತು ದುಡಿಮೆಯ ವ್ಯಾಖ್ಯೆಗಳನ್ನು ಬದಲಿಸುವುದು. ದೈಹಿಕ ಶ್ರಮದ ದುಡಿಮೆಗೂ ಸರಿಯಾದ ಪ್ರತಿಫಲ ದೊರೆಯುವಂತೆ ನೋಡಿಕೊಳ್ಳುವುದು. ಆ ಕಡೆ ನಮ್ಮ ಗಮನಹರಿಸಬೇಕಾಗುತ್ತದೆ.

೮. ಕಡೆಯದಾಗಿ ನಮ್ಮ ಮೀಡಿಯಾಗಳು. ಬಹುತೇಕ ಮೀಡಿಯಾಗಳು ಕಪಟಿಯಾಗಿವೆ. ಜನರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡಿವೆ. ಅವುಗಳು ನಮ್ಮ ಭಾವನೆಗಳನ್ನು, ನೋವನ್ನು, ತವಕ-ತಲ್ಲಣಗಳನ್ನು ತಮ್ಮ ಮಾರಾಟದ ಸರಕನ್ನಾಗಿ ಮಾಡಿಕೊಂಡಿವೆ. ಮೀಡಿಯಾಗಳು ಹಾಗು ಎಲ್ಲ ಖಾಸಗಿ ಸಂಸ್ಥೆಗಳನ್ನೂ ಸಹ ಜನ ಲೋಕಪಾಲ್‌ನಂಥ ಸಂಸ್ಥೆಯ ಅಧೀನಕ್ಕೆ ತರುವ ಕೆಲಸವೂ ಆಗಬೇಕಿದೆ.

ನಾವು ಕನಿಷ್ಠ ಮಟ್ಟದ ನೈತಿಕ ಸಂಹಿತೆಗಳನ್ನು ಅಳವಡಿಸಿಕೊಳ್ಳದೇ ಹೋದಲ್ಲಿ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಜೈ ಅನ್ನುವ ನಮ್ಮ ಕೈಗಳಲ್ಲಿ ಯಾವ ಶಕ್ತಿಯೂ ಇರುವುದಿಲ್ಲ. ಹಾಗೆ ಮಾಡುವುದು ಆತ್ಮಘಾತಕತನ. ಯಾರೂ ಸಹ ತಮ್ಮನ್ನು ತಾವು ಭ್ರಷ್ಟಾಚಾರಿಗಳೆಂದು ಕರೆದುಕೊಳ್ಳುವುದಿಲ್ಲ. ಆದ್ದರಿಂದಲೇ ಎಲ್ಲರೂ ಭ್ರಷ್ಟಾಚಾರಕ್ಕೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಕನಿಷ್ಠ ಹೀಗೆ ಕೂಗಿದ ಮಾತ್ರಕ್ಕಾದರೂ ಭ್ರಷ್ಟಾಚಾರಿಗಳು ಬದಲಾದರೆ ಅದು ಒಂದು ಪವಾಡವಾಗುತ್ತದೆ. ಇಂಥ ಪವಾಡಗಳಿಗೆ ಕಾಯುವುದು ಮೂರ್ಖತನ.

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಕೊನೆಯ ಮಾತು: ಬ್ರಹ್ಮಾಂಡ ಶರ್ಮನೂ ಸೇರಿದಂತೆ ಎಲ್ಲ ಟಿವಿ ಜ್ಯೋತಿಷಿಗಳ ವಿರುದ್ಧದ ನಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ. ಅನೇಕ ಉಪಯುಕ್ತ ಸಲಹೆಗಳು ಬಂದಿವೆ. ಈ ವಾರ ಆ ಕೆಲಸವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳೋಣವೆಂದುಕೊಂಡಿದ್ದೇವೆ. ನಮ್ಮ ಓದುಗರ ಪೈಕಿ ಕನಿಷ್ಠ ಶೇ.೫೦ ರಷ್ಟು ಮಂದಿಯಾದರೂ ಈ ಪುಟ್ಟ ಅಭಿಯಾನವನ್ನು ಬೆಂಬಲಿಸಿದರೆ ಏನಾದರೂ ಬದಲಾವಣೆ ತರಬಹುದೇನೋ? ಜೊತೆಗಿರುತ್ತೀರಿ ತಾನೆ?

Friday, April 8, 2011

ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ... ಎದ್ದು ನಿಂತಿದ್ದೇವೆ..


ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...

ದಿಢೀರಂತ ಎದ್ದು ಕೂತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ಹಿಡಿದು ದಿಲ್ಲಿಯ ಜಂತರ್‌ಮಂತರ್‌ವರೆಗೆ ನಮ್ಮದೇ ಹಿಂಡು, ಕೈಯಲ್ಲಿ ರಾಷ್ಟ್ರಧ್ವಜ, ಎದೆಯಲ್ಲಿ ದೇಶಪ್ರೇಮ. ಮೊಂಬತ್ತಿ ಹಿಡಿದು ನಾವು ಹೊರಟವೆಂದರೆ ಸಾಕು ಮೀಡಿಯಾಗಳ ಸಾಲುಸಾಲು ಓಬಿ ವ್ಯಾನುಗಳು. ನಾವು ಭ್ರಷ್ಟಾಚಾರದ ವಿರುದ್ಧ ಗಾಂಧಿಗಿರಿ ನಡೆಸುವವರು, ದಂಗೆ ಎದ್ದವರು. ಎರಡನೇ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದವರು...

ಇಷ್ಟು ವರ್ಷ ನಮಗೆ ಗಡದ್ದು ನಿದ್ದೆ ನೋಡಿ. ನಿದ್ರಿಸಿದ್ದು ಸಾಕಾಯಿತು, ಈಗ ಎದ್ದು ನಿಂತಿದ್ದೇವೆ, ದೇಶಸೇವೆಗಾಗಿ. ಹಾಗೆ ನೋಡಿದ್ರೆ ಇದೊಂದು ವಿಷಯದಲ್ಲಿ ಮಾತ್ರ ನಮಗೆ ನಿದ್ದೆ. ಬೇರೆ ಎಲ್ಲೆಡೆ ನಾವು ಜಾಗೃತರಾಗಿರುತ್ತೇವೆ, ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತೇವೆ. ನಮಗೆ ಆಚರಿಸಲು ಒಂದು ಈವೆಂಟು ಬೇಕು ಅಷ್ಟೆ. ಕಡಲೆಕಾಯಿ ಪರಿಷೆ, ಕೇಕ್ ಶೋ, ಉಕ್ಕಿನ ಹಕ್ಕಿಗಳ ಏರ್ ಶೋ, ಸಾಹಿತ್ಯ ಸಮ್ಮೇಳನ ಇತ್ಯಾದಿ ಏನೇ ನಡೆದರು ಮಕ್ಕಳು ಮರಿಗಳೊಂದಿಗೆ ನಾವು ಹಾಜರ್. ಅಷ್ಟೇ ಏಕೆ ಬ್ರಹ್ಮಾಂಡದ ನರೇಂದ್ರ ಶರ್ಮ ಡೋಂಗಿ ಪ್ರವಚನ ಕೊಡುತ್ತಾನೆ ಎಂದರೂ ನಾವು ಕಿಕ್ಕಿರಿದು ನೆರೆಯುತ್ತೇವೆ. ನಾವೇ ಗಣಪತಿ, ಜೀಸಸ್ ಹಾಲು ಕುಡಿದರೆಂದು ಪುಕಾರು ಹಬ್ಬಿಸಿ ಜಾತ್ರೆ ಮಾಡಿದವರು. ನಾವೇ ನಮ್ಮ ನಮ್ಮ ಮನೆಗಳ ಮೇಲೆ ನಾಳೆ ಬಾ ಎಂದು ಭೂತಪ್ರೇತಗಳನ್ನುದ್ದೇಶಿಸಿ ಬರೆದುಕೊಂಡವರು. ನಾವು ಎಲ್ಲ ಕಡೆಯಲ್ಲೂ ಇದ್ದೇವೆ. ಸಮೂಹ ಸನ್ನಿ ಎಂದರೆ ನಮಗೆ ಬಲು ಪ್ರೀತಿ. ಅಲ್ಲೆಲ್ಲ ನಾವಿರುತ್ತೇವೆ. ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...

ಇಷ್ಟು ವರ್ಷ ಬೇಕಾಯ್ತು ನೋಡಿ ಅಣ್ಣಾ ಹಜಾರೆಯವರ ಹೋರಾಟದ ಬದುಕನ್ನು ಅರ್ಥಮಾಡಿಕೊಳ್ಳಲು. ಆತ ಹಳ್ಳಿಯೊಂದರಲ್ಲಿ ಮಾಡಿದ ಜೀವಂತ ಪವಾಡ ಅರಿತುಕೊಳ್ಳಲು ಇಷ್ಟು ಕಾಲ ಬೇಕಾಯ್ತು. ಇಷ್ಟು ವರ್ಷ ನಾವು ಬೂದಿ, ಉಂಗುರ ಮಂತ್ರಿಸಿ ಕೊಡುವ ಪವಾಡ ನಡೆಸುವ ಬಾಬಾಗಳ ಹಿಂದೆ ಇದ್ದವರು. ಈಗಲೂ ಅಂಥವರಿಗೆ ನಾವೇ ಆಶ್ರಯದಾತರು. ಈಗ ಅಣ್ಣಾ ಹಜಾರೆಯ ಮಾತು ಬಂದಿದೆ. ಹಿಂದೆ ಮಸುಕು ಮಸುಕಾಗಿ ಈ ಹೆಸರನ್ನು ಕೇಳಿದ್ದ ನೆನಪು. ಆದರೆ ಈಗ ನಮಗೆ ಆತನಲ್ಲಿ ಇನ್ನೊಬ್ಬ ಗಾಂಧಿ ಕಾಣಿಸುತ್ತಿದ್ದಾರೆ. ನಾವು ಒಕ್ಕಟ್ಟಾಗಿ ಚೀರುತ್ತಿದ್ದೇವೆ, ಅಣ್ಣಾ ಹಜಾರೆ ಜಿಂದಾಬಾದ್.

ನಮಗೆ ಹೋರಾಟ, ಚಳವಳಿ ಇದೆಲ್ಲ ಅಪರಿಚಿತ ಶಬ್ದಗಳು ಕಣ್ರೀ. ಹಿಂದೆಲ್ಲ ಒಂದು ಹೋರಾಟದ ಮೆರವಣಿಗೆ ಹೋದರೆ ಮುಸಿಮುಸಿ ನಗುತ್ತಿದ್ದವರು ನಾವು, ಇದೆಲ್ಲ ಕೆಲಸವಿಲ್ಲದವರು ಮಾಡುವ ಪ್ರಹಸನ ಎಂದೇ ಭಾವಿಸಿದ್ದವರು. ಪ್ರತಿಭಟನೆ ಮಾಡೋರೆಲ್ಲ ಪುಂಡರು-ಪೋಕರಿಗಳು ಎಂದೇ ಭಾವಿಸಿದವರು ನಾವು. ನಮಗೆ ಸಮಸ್ಯೆಗಳು ಉದ್ಭವಿಸಿದಾಗಲೆಲ್ಲ ಈ ಪ್ರತಿಭಟನಾಕಾರರು ಎಲ್ಲಿ ಸತ್ತು ಹೋದರೋ ಎಂದು ಬೈದುಕೊಂಡವರು.

ಏನೇನೋ ನಡೆದು ಹೋದರೂ ನಾವು ಕದಲಲಿಲ್ಲ. ಈಗ ಎದ್ದು ನಿಂತಿದ್ದೇವೆ. ಸಾವಿರ ಸಾವಿರ ರೈತರು ಇದೇ ನಾಡಿನಲ್ಲಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಂಡರು ಸತ್ತರು. ನಮಗೆ ಅದು ಸುದ್ದಿಯೂ ಅನಿಸಲಿಲ್ಲ. ರೈತರು ಸತ್ತ ಮೇಲೆ ಕೂಲಿಕಾರ್ಮಿಕರು ಏನಾಗಲು ಸಾಧ್ಯ? ಅವರೂ ಸತ್ತರು, ಲೆಕ್ಕ ಯಾರ ಬಳಿಯಲ್ಲೂ ಇಲ್ಲ. ರೈತರ ಜಮೀನನ್ನು ಕಿತ್ತು ನಮ್ಮದೇ ಸರ್ಕಾರಗಳು ದೊಡ್ಡ ದೊಡ್ಡ ಕಾರ್ಪರೇಟ್ ಸಂಸ್ಥೆಗಳಿಗೆ ಕೊಟ್ಟಾಗಲೂ ನಾವು ಕೊಸರಾಡಲಿಲ್ಲ, ಮಿಸುಕಾಡಲಿಲ್ಲ. ನಮ್ಮದೇ ಸಹೋದರರಂಥ ದೀನದಲಿತರಿಗೆ ಮಲ ತಿನ್ನಿಸಿದಾಗ, ಉಚ್ಚೆ ಕುಡಿಸಿದಾಗ, ಜೀವಂತ ಸುಟ್ಟು ಹಾಕಿದಾಗ ನಾವು ಮಾತನಾಡಲೇ ಇಲ್ಲ. ರೈತರು ಬಂದು ಬೀದಿಯಲ್ಲಿ ಟೊಮೋಟೋ, ಹಸಿಮೆಣಸಿನ ಕಾಯಿ ಚೆಲ್ಲಿದಾಗ ಯಾಕೆ ಹಾಗೆ ಮಾಡಿದರೆಂದೂ ನಾವು ತಲೆಕೆಡಿಸಿಕೊಳ್ಳಲಿಲ್ಲ. ನಾವು ಮಂದಿರ-ಮಸೀದಿ ಎಂದು ನಮ್ಮಲ್ಲೇ ಹೊಡೆದಾಡಿಕೊಂಡು ಸತ್ತೆವು, ನಮ್ಮದೇ ದೇಶದಲ್ಲಿ ಬಾಂಬುಗಳು ಸಿಡಿದವು. ಅವುಗಳಿಗೆ ನೂರಾರು ಮಂದಿ ಸತ್ತರು. ಸತ್ತವರಲ್ಲಿ, ಸಾಯಿಸಿದವರಲ್ಲಿ ಎಲ್ಲಾ ಧರ್ಮದವರೂ ಇದ್ದರು. ನಮ್ಮ ಕೋಮುದ್ವೇಷಕ್ಕೆ ನಾವೇ ಬಲಿಯಾಗಿಹೋದೆವು. ಇದು ಸರಿಯಲ್ಲ ಎಂದು ನಮಗೆ ಆಗ ಅನ್ನಿಸಿರಲಿಲ್ಲ. ಆದರೆ ಹಾಗಂತ ನಮ್ಮನ್ನು ಯಾರೂ ದೂಷಿಸಬೇಡಿ, ಕಡೆಗಾದರೂ ನಾವು ಎಚ್ಚೆತ್ತಿದ್ದೇವೆ, ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಬೇಡಿ.

ದೇಶಭಕ್ತಿ ಅಂದ್ರೆ ನಮಗೆ ನೆನಪಾಗುವುದು ಕ್ರಿಕೆಟ್ಟು ಕಣ್ರೀ. ಅದರಲ್ಲೂ ನಮ್ಮ ಬಿಸಿಸಿಐ ತಂಡ ಪಾಕಿಸ್ತಾನದ ತಂಡದ ಮೇಲೆ ಗೆದ್ದರೇ ನಮ್ಮ ದೇಶಭಕ್ತಿ ಸಾರ್ಥಕವಾಗೋದು. ಕ್ರಿಕೆಟ್‌ನ ದೈತ್ಯರಾದ, ಸತತ ಮೂರು ಸರ್ತಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮೇಲೆ ನಮ್ಮ ತಂಡ ಗೆದ್ದಾಗ ನಾವು ಒಂದೇ ಒಂದು ಪಟಾಕಿ ಹೊಡೆಯದೆ ಸುಮ್ಮನಿದ್ದೆವು. ಆಮೇಲೆ ನೋಡಿದ್ರಾ, ಪಾಕಿಸ್ತಾನ ಮೇಲೆ ಗೆದ್ದಾಗ ನಮ್ಮ ದೇಶಭಕ್ತಿ ಹೇಗೆ ಎದ್ದು ನಿಲ್ತು ಅಂತಾ. ವಿ ಸೆಲೆಬ್ರೇಟೆಡ್ ಇನ್ ಪ್ಯಾಷನ್. ರಾತ್ರಿ ಇಡೀ ಕುಡಿದೆವು, ಕೈಯಲ್ಲಿ ಬಾವುಟ. ರಸ್ತೆರಸ್ತೆಯಲ್ಲೂ ನಮ್ಮ ಕಿರುಚಾಟ, ಜಯಘೋಷ. ಶ್ರೀಲಂಕಾ ಮೇಲೆ ಫೈನಲ್ ನಡೆದು ರಾವಣಾಸುರರ ಮೇಲೆ ರಾಮನ ಬಳಗ ಗೆದ್ದಾಗ (ಹೀಗಂತ ಬರೆದದ್ದು ನಮ್ಮ ಮೀಡಿಯಾಗಳು) ಅವನ್ಯಾರೋ ಯುವರಾಜಸಿಂಗ್ ರಾಷ್ಟ್ರಬಾವುಟವನ್ನೇ ಹೊದ್ದು ಅದರಲ್ಲೇ ಮೂಗು ಮುಸುಡಿ ಒರೆಸಿಕೊಂಡು ವಿಜೃಂಭಿಸುತ್ತಿದ್ದ. ನಾವು ಅವನ ಅನುಯಾಯಿಗಳು. ಕುಡಿದು ತಟ್ಟಾಡುತ್ತಲೇ ಬಾವುಟ ಹಿಡಿದು ರಸ್ತೆಯಲ್ಲಿ ಪೆರೇಡು ನಡೆಸಿದೆವು. ಬಾಯಲ್ಲಿ ಹೊಲಸು ಮಾತು, ಬೈಗುಳ. ಆದರೂ ನಮ್ಮ ರಾಷ್ಟ್ರಭಕ್ತಿಯನ್ನು ಯಾವುದೇ ಕಾರಣಕ್ಕೂ ಅನುಮಾನಿಸಬೇಡಿ.

ಅಸಲಿಗೆ ನಮಗೆ ಲೋಕಪಾಲ್ ಮಸೂದೆ ಅಂದ್ರೆ ಏನು ಅಂತಾನೇ ಗೊತ್ತಿಲ್ಲ. ಜನಲೋಕಪಾಲ್ ಅಂದ್ರೂನು ಗೊತ್ತಿಲ್ಲ. ತಿಳಿದುಕೊಂಡು ನಮಗೆ ಏನೂ ಆಗಬೇಕಾಗೂ ಇಲ್ಲ. ಸುಮ್ಮಸುಮ್ಮನೆ ಈ ಪ್ರಶ್ನೆ ಕೇಳಿಕೊಂಡರೆ ನಮಗೆ ನಾವು ಸಿನಿಕರಾಗಿಬಿಡುತ್ತೀವಿ ನೋಡಿ. ಅದಕ್ಕೆ ಆ ಕಡೆ ಯೋಚಿಸುತ್ತಿಲ್ಲ ನಾವು. ನಮಗೆ ಇಮ್ಮೀಡಿಯಟ್ಟಾಗಿ ಭ್ರಷ್ಟಾಚಾರ ಸಂಪೂರ್ಣ ತೊಲಗಿಬಿಡಬೇಕು. ಅದಕ್ಕಾಗಿ ನಾವು ಅಣ್ಣಾ ಹಜಾರೆಯವರ ಬೆನ್ನಿಗೆ ನಿಂತುಬಿಟ್ಟಿದ್ದೇವೆ.

ಅಣ್ಣಾ ಆಂದೋಲನಕ್ಕೆ ಈಗ ಯಾರ‍್ಯಾರು ಬೆಂಬಲ ಕೊಡ್ತಿದ್ದಾರೆ ನೋಡಿದ್ರಾ? ಭ್ರಷ್ಟಾಚಾರದ ಭೀಕರ ರೂಪಗಳನ್ನು ಪ್ರದರ್ಶಿಸಿದವರೆಲ್ಲ ಅಣ್ಣಾ ಹಜಾರೆಗೆ ಜೈ ಅನ್ನುತ್ತಿದ್ದಾರೆ. ಆ ಕಡೆಯೂ ನಮ್ಮ ಗಮನವಿಲ್ಲ. ಬೆಂಬಲ ಯಾರು ಕೊಟ್ಟರೆ ಏನು ಅಲ್ಲವೇ?

ಒಮ್ಮೊಮ್ಮೆ ನಾವೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇವೆ ಅನಿಸುವುದುಂಟು. ಇದೇ ಪೊಲಿಟಿಷಿಯನ್ಸ್ ಬಂದು ವೋಟು ಕೇಳಿದಾಗ ಮೂಗುತಿ, ಬೆಳ್ಳಿ ದೀಪ ಪಡೆದವರು ನಾವೇ ಅಲ್ಲವೇ? ನಮ್ಮನೇಲಿ ಒಟ್ಟು ಎಂಟು ವೋಟು. ಬರೋಬ್ಬರಿ ಎಂಟು ಸಾವಿರ ಮಡಗಿ ಹೋಗಿ ಎಂದು ಹೇಳಿದವರೂ ನಾವೇ ಅಲ್ಲವೇ? ಯಾವ ಸರ್ಕಾರಗಳ ವಿರುದ್ಧ ನಾವು ಗುಟುರು ಹಾಕುತ್ತಿದ್ದೇವೋ ಅವರನ್ನೆಲ್ಲ ಚುನಾಯಿಸಿ ಕಳುಹಿಸಿದವರೂ ನಾವೇ ಅಲ್ಲವೇ?

ಅದಷ್ಟೇ ಏಕೆ? ಈಚೀಚಿಗೆ ಲಂಚ ಕೊಡುವುದೂ ನಮಗೆ ಘನತೆಯ ವಿಷಯ, ನಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳುವ ವಿಧಾನ. ಕೊಡುವವರೇ ಇಲ್ಲದಿದ್ದರೆ ತೆಗೆದುಕೊಳ್ಳುವವರು ಎಲ್ಲಿರುತ್ತಿದ್ದರು? ನಮಗೆ ಆ ಕ್ಷಣಕ್ಕೆ ನಮ್ಮ ಕೆಲಸಗಳಾಗಬೇಕು ಅಷ್ಟೆ. ಅದಕ್ಕಾಗಿ ನಾವು ಲಂಚ ಕೊಟ್ಟವರು. ಲಂಚ ಕೊಡುವುದೂ ಭ್ರಷ್ಟಾಚಾರ ಮಾಡಿದಂತೆಯೇ ಅಂತ ನಮಗೆ ಅನ್ನಿಸಿದ್ದಿಲ್ಲ. ಆದರೂ ನಮ್ಮನ್ನೂ ಸಹ ಭ್ರಷ್ಟಾಚಾರಿಗಳು ಅನ್ನೋದು ಇಟ್ಸ್ ಅನ್‌ಫೇರ್ ಯು ನೋ.

ಈಗ ನೋಡಿ ನಮ್ಮ ಬೆಂಬಲಕ್ಕೆ ಮೀಡಿಯಾಗಳು ನಿಂತುಬಿಟ್ಟಿವೆ. ಏನು ಕವರೇಜು, ಏನು ಘೋಷಣೆ? ಭ್ರಷ್ಟಾಚಾರ ವಿರುದ್ಧ ನಮ್ಮ ಅಭಿಯಾನ ಎಂದೇ ಮೀಡಿಯಾಗಳು ಹೇಳಿಕೊಳ್ಳುತ್ತಿವೆ. ಡಿ.ರಾಜನನ್ನು ಮಂತ್ರಿ ಮಾಡಿ ಎಂದು ದಳ್ಳಾಳಿ ಕೆಲಸ ಮಾಡಿದ ಬರ್ಖಾದತ್ ಎನ್‌ಡಿಟಿವಿಯಲ್ಲಿ ಆವೇಶಭರಿತವಾಗಿ ಮಾತನಾಡುತ್ತಿದ್ದರೆ ನಮ್ಮ ನರನಾಡಿಗಳಲೆಲ್ಲ ಭ್ರಷ್ಟರ ವಿರುದ್ಧ ಸಿಟ್ಟು ಹರಿಯುತ್ತದೆ. ಅತ್ತ ನೀರಾ ರೇಡಿಯೋ ಟೇಪು ಹಗರಣದಲ್ಲಿ ಕೇಳಿಬಂದ ಮತ್ತೊಂದು ಹೆಸರು ಪ್ರಭುಚಾವ್ಲಾ ಹೊಸ ಸಂಡೇ ಪೇಪರ್ ಮಾಡಿಕೊಂಡು ಇಂಡಿಯನ್ ಎಕ್ಸ್‌ಪ್ರೆಸ್ ಉದ್ಧಾರ ಮಾಡುತ್ತಿದ್ದಾರೆ. ಇಲ್ಲೂ ಅಷ್ಟೆ. ಸುಳ್ಳು ಅಫಿಡೇವಿಟ್ಟು ಕೊಟ್ಟು ಬಿಡಿಎ ಸೈಟು ಹೊಡೆದುಕೊಂಡವರು, ಬಿಡಿಎ ಸೈಟಿಗಾಗಿ ಹೆಂಡತಿಗೆ ಸುಳ್ಳೇ ಸುಳ್ಳು ಡೈವೋರ್ಸು ಕೊಟ್ಟವರೆಲ್ಲ ಕನ್ನಡ ಮೀಡಿಯಾಗಳಲ್ಲಿದ್ದಾರೆ. ಟ್ರಾನ್ಸ್‌ಫರ್ ದಂಧೆ ನಡೆಸುವವರು, ಅಧಿಕಾರಿಗಳ ಬಳಿ ಮಾಮೂಲಿ ಫಿಕ್ಸು ಮಾಡಿಕೊಂಡವರು, ಬ್ಲಾಕ್‌ಮೇಲು ಮಾಡುವವರು ಎಲ್ಲರೂ ಇದ್ದಾರೆ. ಎಲ್ಲರೂ ಸೇರಿಯೇ ಇವತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಅವರೊಬ್ಬರಿದ್ದಾರೆ ಉದ್ಯಮಿ ಕಂ ಮೀಡಿಯಾ ಕಿಂಗ್. ಸದ್ಯಕ್ಕೆ ಎರಡು ಚಾನಲ್‌ಗಳನ್ನು ನಡೆಸುತ್ತಿದ್ದಾರೆ. ಈಗ ಅವರು ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಅವರ ಮೀಡಿಯಾಗಳು ಕೂಡ ಭ್ರಷ್ಟಾಚಾರ ವಿರೋಧಿ ರಥಗಳನ್ನು ತಯಾರುಮಾಡಿ ಊರೂರು ಸುತ್ತಿಸುತ್ತಿವೆ. ಆದರೆ ಆ ಉದ್ಯಮಿ ರಾಜ್ಯಸಭೆಗೆ ಆಯ್ಕೆಯಾಗುವಾಗ ಶಾಸಕರನ್ನು ಖರೀದಿ ಮಾಡಿಯೇ ಮತಗಳನ್ನು ಗಳಿಸಿದ್ದು. ಯಾರ‍್ಯಾರಿಗೆ ಎಷ್ಟು ಎಷ್ಟು ಕೊಟ್ಟೆ ಎಂದು ಅವರು ಹೇಳಿಯಾರೆ? ಕೋಟಿಗಟ್ಟಲೆ ಹಣ ಲಂಚ ತಿನ್ನಿಸಿ ರಾಜ್ಯಸಭೆಗೆ ಹೋದವರು ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟುತ್ತಾರೆ, ನಾವು ಅದನ್ನೆಲ್ಲ ಮನ್ನಿಸಿ ಅವರ ಮೀಡಿಯಾ ಸಂಸ್ಥೆಗಳು ನಡೆಸುವ ಆಂದೋಲನದಲ್ಲಿ ಭಾಗವಹಿಸುತ್ತೇವೆ.

ಅದೆಲ್ಲ ಹಾಗಿರಲಿ ಬಿಡಿ, ನಾವು ವೈಯಕ್ತಿಕ ಮಟ್ಟದಲ್ಲಾದರೂ ಶುದ್ಧ ನೈತಿಕತೆಯನ್ನು ಅನುಸರಿಸಿದವರಲ್ಲ. ಇನ್ನೂ ಡೌರಿಗಳಿಲ್ಲದೆ ನಮ್ಮ ಮನೆಗಳ ಮದುವೆಗಳು ನಡೆಯೋದಿಲ್ಲ. ಡೌರಿ ಕೂಡ ಲಂಚದ ಹೀನಾತಿಹೀನ ರೂಪ ಅನ್ನೋದನ್ನು ನಾವು ಇನ್ನೂ ಒಪ್ಪಿಕೊಂಡಿಲ್ಲ. ಸರ್ಕಾರಿ ಅಧಿಕಾರಿ ಗಂಡನ್ನು ಹುಡುಕುವಾಗಲೂ ನಾವು ಸೆಲೆಕ್ಟಿವ್ ಆಗಿರ‍್ತೇವೆ. ನಮಗೆ ಮೇಷ್ಟ್ರು, ಪಾಷ್ಟ್ರು ಆಗಿಬರೋದಿಲ್ಲ, ಮೇಲ್ ಕಮಾಯಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಯೇ ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತೇವೆ. ನಮ್ಮ ಮಕ್ಕಳಿಗೆ ಫ್ಯೂಚರ್‌ನಲ್ಲಿ ತೊಂದರೆಯಾಗಬಾರದು ನೋಡಿ.

ನಮಗೆ ಸರ್ಕಾರಿ ಕಚೇರಿಗಳಲ್ಲಿ ಕ್ಯೂಗಳಲ್ಲಿ ನಿಂತು ಅಭ್ಯಾಸವಿಲ್ಲ. ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತೆ ನೋಡಿ. ಅದಕ್ಕಾಗಿ ಸಂಬಂಧಪಟ್ಟವರ ಕೈ ಬಿಸಿ ಮಾಡುತ್ತೇವೆ. ನಮ್ಮ ಕೆಲಸ ಆಗಿ ಹೋಗುತ್ತವೆ. ಹಾಗಂತ ಇಂಥ ಸಣ್ಣಪುಟ್ಟ ಲಂಚ ಕೊಡೋದ್ರಿಂದ ದೇಶ ಕೆಟ್ಟುಹೋಗಿದೆ ಎಂದು ನಾವು ನಂಬೋದಿಲ್ಲ ಬಿಡಿ.

ಈಗ ಅಣ್ಣಾ ಹಜಾರೆ ಉಪವಾಸಕ್ಕೆ ಕೂತಿದ್ದಾರೆ. ನಾವು ಮೆರವಣಿಗೆ ಹೊಂಟಿದ್ದೇವೆ. ಫ್ರೀಡಂ ಪಾರ್ಕ್ ಸುತ್ತ ಬಹುಶಃ ನಾಳೆಯಿಂದ ಬತ್ತಾಸು, ಖರ್ಜೂರ, ರೆಡಿಮೇಡ್ ಶರ್ಟುಗಳು, ತರಕಾರಿ ಹೆಚ್ಚುವ ಉಪಕರಣಗಳು, ಪೀಪಿ-ಬಲೂನುಗಳು ಮಾರಾಟಕ್ಕೆ ಬಂದರೂ ಆಶ್ಚರ್ಯವಿಲ್ಲ. ಹಾಗಾದಲ್ಲಿ ನಾವು ನಮ್ಮ ಮಕ್ಕಳು ಮರಿಗಳನ್ನೂ ಇಲ್ಲಿಗೆ ಕರೆದುಕೊಂಡುಬರಬಹುದು. ದೇಶಸೇವೆಯ ಜತೆಗೆ ಶಾಪಿಂಗೂ ನಡೆದುಹೋಗುತ್ತದೆ.

ಅಣ್ಣಾ ಹಜಾರೆಯವರಿಗೆ ಜಯವಾಗಲಿ, ಭ್ರಷ್ಟಾಚಾರ ತೊಲಗಲಿ.

ವಿ ದ ಪೀಪಲ್ ಆಫ್ ಇಂಡಿಯಾ ಈಗ ಎದ್ದು ನಿಂತಿದ್ದೇವೆ. ಮೊಂಬತ್ತಿಗಳು ನಮ್ಮ ಕೈಗಳಲ್ಲಿ ಕರಗಿ ಹೋಗುತ್ತಿವೆ.

ಅಣ್ಣಾ ಹಜಾರೆ ಆಂದೋಲನ:ಅಮೃತ್ ಬರೆದ ಕಾರ್ಟೂನ್

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಆಂದೋಲನದ ಹಿನ್ನೆಲೆಯಲ್ಲಿ  ಅಮೃತ್ ವಿ. ಕಳುಹಿಸಿರುವ ವ್ಯಂಗ್ಯ ಚಿತ್ರ  ಇಲ್ಲಿದೆ.

Thursday, April 7, 2011

ಕ್ಯಾಂಟೀನ್ ನೀರು ಕುಡಿದು ಪತ್ರಕರ್ತರು ಅಸ್ವಸ್ಥರಾದರು...


ಒಂದು ವಿಷಾದದ ಸಂಗತಿಯನ್ನು ನಿಮಗೆ ಹೇಳಲೇಬೇಕು. ಇದು ನಡೆದಿರುವುದು ಸುಮಾರು ೧೫ ದಿನಗಳ ಹಿಂದೆ. ಪ್ರಮುಖ ಪತ್ರಿಕಾಸಂಸ್ಥೆಯೊಂದರ ಕ್ಯಾಂಟೀನ್‌ನಲ್ಲಿ ಸಂಭವಿಸಿದ ಅವಘಡವಿದು.

ಕುಡಿವ ನೀರಿಗೆ ಕೊಚ್ಚೆ ನೀರು ಮಿಶ್ರಣಗೊಂಡಿತು. ಬಹುಶಃ ಕುಡಿಯುವ ನೀರಿನ ಪೈಪು ಒಡೆದು, ಒಳಚರಂಡಿಯ ನೀರು ಪೈಪಿನೊಳಗೆ ನುಗ್ಗಿರಬಹುದು. ಅದೇ ನೀರು ಕ್ಯಾಂಟೀನ್‌ಗೂ ಸರಬರಾಜಾಯಿತು. ಇದನ್ನು ಅರಿಯದ ಪತ್ರಕರ್ತರು ಎಂದಿನಂತೆ ನೀರು, ಮಜ್ಜಿಗೆ ಕುಡಿದರು. ಕೆಲವೇ ಕ್ಷಣಗಳಲ್ಲಿ ಅನೇಕರು ಆಸ್ಪತ್ರೆ ಸೇರಿದರು. ಕಚೇರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಕುಡಿವ ನೀರಿನಿಂದ ಈ ಸಮಸ್ಯೆ ಆಗಿಲ್ಲ ಎಂದು ತೋರಿಸಲು ತಾವೆ ಒಂದು ಲೋಟ ಮಜ್ಜಿಗೆ ಕುಡಿದರು. ಅವರೂ ಚಿಕಿತ್ಸೆ ಮೊರೆ ಹೋಗಬೇಕಾಯ್ತು.

ಹಿರಿಯ ಪತ್ರಕರ್ತರನೇಕರು ಆಸ್ಪತ್ರೆಗೆ ದಾಖಲಾಗಿ ಎರಡು ಮೂರು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಯಿತು. ಮತ್ತೆ ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು. ವಯಸ್ಸಾದಂತೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಈ ಕೊಳಕು ನೀರು ಕುಡಿದು ಸಮಸ್ಯೆ ಅನುಭವಿಸಿದವರ ಪೈಕಿ ಬಹುತೇಕರು ಹಿರಿಯ ಪತ್ರಕರ್ತರು.

ಇವತ್ತಿನ ಕಾಲಮಾನದಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲದೇ ಹೋದರೆ ಬರುವ ಖಾಯಿಲೆಗಳು ಒಂದೊಂದಲ್ಲ. ಹೀಗಾಗಿ ಮನೆಗಳಲ್ಲಿ ಸಹ ಎಂಥದ್ದೇ ನೀರಾದರೂ ಶುದ್ಧೀಕರಿಸಿ ಕುಡಿಯಲಾಗುತ್ತದೆ. ಇದಕ್ಕಾಗಿಯೇ ಪ್ಯೂರ್ ಇಟ್, ಅಕ್ವಾಗಾರ್ಡ್ ತರಹದ ವ್ಯವಸ್ಥೆಗಳನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಮುಖ ಪತ್ರಿಕಾ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಇಂಥ ವ್ಯವಸ್ಥೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ಕ್ಯಾಂಟೀನ್‌ನಲ್ಲಿ ಹೀಗೆ ಶುದ್ಧೀಕರಿಸದ ನೀರನ್ನು ನೀಡುವುದೇ ಅಪರಾಧ. ಆದರೆ ಇಲ್ಲಿ ಅವಘಡ ಸಂಭವಿಸಿಹೋಗಿದೆ. ಇಂಥದ್ದು ಮತ್ತೆ ಮತ್ತೆ ನಡೆಯಬಾರದು.

ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಹೀಗೆ ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗುವ ಸುದ್ದಿಯನ್ನು ಇದೇ ಪತ್ರಕರ್ತರು ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಗಳಲ್ಲಿ ಬರೆಯುತ್ತಾರೆ, ಬರೆಯಬೇಕಾಗುತ್ತದೆ. ಆದರೆ ಪತ್ರಕರ್ತರೇ ಇಂಥ ಸಂದರ್ಭಕ್ಕೆ ಸಿಲುಕಿದರೆ ಅದು ನಮ್ಮ ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸುದ್ದಿಯೂ ಆಗುವುದಿಲ್ಲ.

ಸದ್ಯಕ್ಕೆ ಯಾರ ಜೀವಕ್ಕೂ ಅಪಾಯವಾಗಿಲ್ಲ. ಇಂಥ ಘಟನೆ ಮರುಕಳಿಸದಿರಲಿ, ಎಲ್ಲರೂ ಬೇಗ ಪೂರ್ಣ ಗುಣಮುಖರಾಗಲಿ ಎಂದು ಆಶಿಸೋಣ.

Wednesday, April 6, 2011

ಕಾರ್ಗಿಲ್ ಯುದ್ಧವೂ, ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದವೂ....


ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು...

ಹೀಗೆ ಬರೆದದ್ದು ನಮ್ಮ ಹೆಮ್ಮೆಯ ಪ್ರಜಾವಾಣಿ. (ಮಾರ್ಚ್ ೩೧, ಅಗ್ರಸುದ್ದಿ)

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಿಂದೆಂದಿಗಿಂತಲೂ ಮೀಡಿಯಾ ಹೈಪ್ ಇದ್ದದ್ದು ನಿಜ. ಬಹುತೇಕ ಮಾಧ್ಯಮಗಳು ಇದನ್ನು ಯುದ್ಧ-ಸಮರ ಎಂದು ಬಿಂಬಿಸಿದ್ದೂ ನಿಜ. ಆದರೆ ಮೊಹಾಲಿಯ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವ ದಾರ್ಷ್ಟ್ಯವನ್ನು ಯಾರೂ ತೋರಿಸಿರಲಿಲ್ಲ. ಅದನ್ನು ಮಾಡಿದ್ದು ಪ್ರಜಾವಾಣಿ.

ಹಾಗಂತ ಇದನ್ನು ಬರೆದವರು ನಿನ್ನೆ ಮೊನ್ನೆ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿಸಿರಕ್ತದ ಪತ್ರಕರ್ತರೇನೂ ಅಲ್ಲ. ಕ್ರೀಡೆಯ ಬಗ್ಗೆ ಗೊತ್ತಿಲ್ಲದ ರಾಜಕೀಯ ವರದಿಗಾರರೂ ಅಲ್ಲ. ಹೀಗೆ ಅಗ್ರ ಸುದ್ದಿಯನ್ನು ಬರೆದವರು ಗೋಪಾಲಕೃಷ್ಣ ಹೆಗಡೆ. ಅವರು ಹಿರಿಯರು, ಪ್ರಜಾವಾಣಿಯಲ್ಲಿ ವರ್ಷಾನುವರ್ಷ ಕ್ರೀಡಾ ವರದಿಗಾರರಾಗೇ ಹೆಸರು ಮಾಡಿದವರು. ಅವರೀಗ ಸ್ಥಾನಿಕ ಸಂಪಾದಕರು. ಸದ್ಯದಲ್ಲೇ ಪ್ರಜಾವಾಣಿಯಲ್ಲಿ ಅವರು ಮಹತ್ವದ ಹುದ್ದೆಯನ್ನು ಅಲಂಕರಿಸಲಿರುವವರು.

ಒಂದೇ ವಾಕ್ಯಕ್ಕೆ ನೂರೆಂಟು ತಕರಾರುಗಳಿವೆ. ಅದನ್ನೆಲ್ಲ ಹೇಳುವ ಮುನ್ನ ಇದೇ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಚಿಂತಕ ಶಿವಸುಂದರ್ ಬರೆದ ಒಂದು ಪುಟ್ಟ ಪತ್ರವನ್ನೊಮ್ಮೆ ಓದಿಕೊಳ್ಳಿ. (ಏಪ್ರಿಲ್, ೧)

ಬದಲಾಗುತ್ತಿರುವ ರಾಜಕಾರಣಕ್ಕೆ ತಕ್ಕಂತೆ ಕ್ರೀಡಾ ಮನೋಧರ್ಮವೂ ಬದಲಾಗುತ್ತಿದೆ. ಅಥವಾ ಬದಲು ಮಾಡಲಾಗುತ್ತಿದೆ. ಭಾರತ-ಪಾಕಿಸ್ತಾನದ ನಡುವಿನ ಒಂದು ಕ್ರಿಕೆಟ್ ಪಂದ್ಯವನ್ನು ಎರಡು ರಾಷ್ಟ್ರಗಳ ನಡುವೆ ನಡೆಯಲಿರುವ ನಾಲ್ಕನೇ ಸಮರವೇನೋ ಎಂಬಂತೆ ಮಾಧ್ಯಮಗಳು ಒಂದು ಉನ್ಮಾದವನ್ನೇ ಸೃಷ್ಟಿಸಿದ್ದು ದುರದೃಷ್ಟಕರ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಗೆ ಭಾಷಿಕರ, ಧಾರ್ಮಿಕರ ಅಥವಾ ದೇಶಪ್ರೇಮದ ಪ್ರತಿಷ್ಠೆಯ ಪ್ರಶ್ನೆ ಲಗಾಯಿಸಿಬಿಟ್ಟರೆ ಅದು ಸಾಯುತ್ತದೆ. ಭಾಷೆ, ಧರ್ಮ ಮತ್ತು ದೇಶದ ಹೆಸರಲ್ಲಿ ಜನರನ್ನು ಒಡೆದು ಆಳುವ ರಾಜಕಾರಣಕ್ಕೆ ಕ್ರೀಡೆ ಮತ್ತು ಜನ ಬಲಿಪಶುಗಳಾಗುತ್ತಾರೆ. ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಕಾರ್ಗಿಲ್ ಯುದ್ಧ ಎಂದು ವರ್ಣಿಸಿದ ಮಾಧ್ಯಮಗಳ ನಿಲುವು ವಿಚಿತ್ರ.

ಒಂದು ವಿಶೇಷವನ್ನು ನೀವು ಗಮನಿಸಲೇಬೇಕು. ಮೊಹಾಲಿ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸಿ ಗೋಪಾಲಕೃಷ್ಣ ಹೆಗಡೆ ಅಗ್ರಸುದ್ದಿ ಬರೆದ ಮರುದಿನವೇ ಶಿವಸುಂದರ್ ಅವರ ಪತ್ರ ವಾಚಕರ ವಾಣಿಯಲ್ಲಿ ಪ್ರಕಟಗೊಂಡಿದೆ. ಹೀಗೆ ಪತ್ರ ಪ್ರಕಟಿಸುವ ಮೂಲಕ ಪ್ರಜಾವಾಣಿ ಒಂದು ಸಣ್ಣ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರಬಹುದೇ? ಅದಕ್ಕೂ ಮುನ್ನ ಸಂಪಾದಕೀಯ ಸಭೆಯಲ್ಲಿ ಈ ಕುರಿತು ಒಂದು ಚರ್ಚೆ ನಡೆದಿರಬಹುದೆ? ಗೊತ್ತಿಲ್ಲ.

ಆದರೆ ವಿಶ್ವಕಪ್ ಪಂದ್ಯಾವಳಿಯ ವರದಿಗಾರಿಕೆಯ ನೇತೃತ್ವ ವಹಿಸಿದ್ದಂತಿದ್ದ ಗೋಪಾಲಕೃಷ್ಣ ಹೆಗಡೆಯವರು ಬರೆಯುತ್ತಾ ಬಂದಿದ್ದೆಲ್ಲ ಇಂಥದ್ದೇ ಮಾತುಗಳು. ಮಾ.೨೯ರ ಪ್ರಜಾವಾಣಿಯಲ್ಲಿ ಕ್ರಿಕೆಟ್ ರಾಯಭಾರ; ಮುಳ್ಳಿನ ಗುಲಾಬಿ ಎಂಬ ಶೀರ್ಷಿಕೆಯಲ್ಲಿ ಹೆಗಡೆಯವರ ವಿಶ್ಲೇಷಣೆಯೊಂದು ಪ್ರಕಟವಾಗಿತ್ತು. ಪ್ರಜಾವಾಣಿ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುವ ಪರಂಪರೆ ಇಟ್ಟುಕೊಂಡಿಲ್ಲ. ಈಗ್ಗೆ ಹತ್ತು ವರ್ಷಗಳ ಕೆಳಗೆ ಯಾವ ಪತ್ರಿಕೆಯೂ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುತ್ತಿರಲಿಲ್ಲ. ಸುದ್ದಿ ಸುದ್ದಿಯಂತಿರುತ್ತಿತ್ತು ಅಷ್ಟೆ. ನಂತರ ಕನ್ನಡಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳು ಅಂತ ಪ್ರಯೋಗಗಳನ್ನು ಮಾಡಿದವು, ಈಗಲೂ ಮಾಡುತ್ತಿವೆ.

ಆದರೆ ಗೋಪಾಲಕೃಷ್ಣ ಹೆಗಡೆಯವರ ಅಗ್ರ ಸುದ್ದಿ, ಪ್ರಜಾವಾಣಿಯ ಸಂಪಾದಕೀಯದಂತೆ ಮುಖಪಟದಲ್ಲಿ ಪ್ರಕಟಗೊಂಡಿತು. ಅದು ನಿಜಕ್ಕೂ ಒಬ್ಬ ಕ್ರೀಡಾ ವರದಿಗಾರ ಬರೆಯಬಹುದಾಗಿದ್ದ ಸುದ್ದಿಯೇ? ಹೋಗಲಿ, ರಾಜಕೀಯ ವರದಿಗಾರನಾದರೂ ಅಂಥ ಸುದ್ದಿ ಬರೆಯುವುದು ಸರಿಯೇ? ಪ್ರಜಾವಾಣಿ ಸಂಪಾದಕೀಯ ಬಳಗವೇ ಚರ್ಚೆ ನಡೆಸಬೇಕು.

ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದ ಅವರೆಲ್ಲ ವರದಿಗಳಲ್ಲೂ ಖಾಯಂ ಆಗೇ ಇದ್ದಿದ್ದನ್ನು ಪ್ರಜಾವಾಣಿ ಓದುಗರು ಗಮನಿಸಿರಬಹುದು.

ಇದು ಮಿನಿ ಫೈನಲ್ ಅಲ್ಲ, ಮಹಾಯುದ್ಧ. ಭಾರತ ಮತ್ತು ಆಸ್ಟ್ರೇಲಿಯ ನಡುವಣ ಮದ್ದು ಗುಂಡಿಲ್ಲದ ಸಮರ... ಎಂದು ಅವರು ಭಾರತ-ಆಸ್ಟ್ರೇಲಿಯಾ ಪಂದ್ಯದ ದಿನವೂ ಬರೆದಿದ್ದರು.

ಯಾಕೀ ಯುದ್ಧೋನ್ಮಾದ? ಏನಿದರ ಹಿನ್ನೆಲೆ? ಕ್ರೀಡೆಗೂ ಯುದ್ಧಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ? ಕಾರ್ಗಿಲ್ ಸಮರಕ್ಕೆ ಮೊಹಾಲಿ ಪಂದ್ಯವನ್ನು ಹೋಲಿಸುವ ಗೋಪಾಲಕೃಷ್ಣ ಹೆಗಡೆಯವರು ಎಂದಾದರೂ ನಿಜವಾದ ರಣರಂಗ ಹೇಗಿರುತ್ತದೆ ಎಂದು ನೋಡಿದ್ದಾರಾ? ಬ್ಯಾಟು, ಬಾಲುಗಳು ಎಂದಾದರೂ ಫಿರಂಗಿ, ಬಾಂಬುಗಳಾಗಲು ಸಾಧ್ಯವೇ? ಯುದ್ಧದಲ್ಲಿ ಸತ್ತ ಸೈನಿಕರಿಗೆ ಯಕಶ್ಚಿತ್ ಕ್ರೀಡಾಳುಗಳನ್ನು ಹೋಲಿಸಲು ಸಾಧ್ಯವೇ?

ಸಹಸ್ತಾರು ಜನರ ರಕ್ತ ಚೆಲ್ಲಾಡುವ ಯುದ್ಧವನ್ನೂ ಸಹ ಫ್ಯಾಂಟಸಿಯೆಂಬಂತೆ ಭಾವಿಸುವವರಷ್ಟೇ ಹೀಗೆ ಲಘುವಾಗಿ ಒಂದು ನಿರ್ದಿಷ್ಟ ಪಂದ್ಯವನ್ನು ಒಂದು ನಿರ್ದಿಷ್ಟ ಯುದ್ಧಕ್ಕೆ ಹೋಲಿಸುವುದು ಸಾಧ್ಯವಲ್ಲವೆ?

ಒಂದು ವೇಳೆ ಪಾಕಿಸ್ತಾನವೇ ಪಂದ್ಯ ಗೆದ್ದಿದ್ದರೆ ಗೋಪಾಲಕೃಷ್ಣ ಹೆಗಡೆ ಏನು ಬರೆಯುತ್ತಿದ್ದರು? ಹಡಗಿನ ಮೂಲಕ ಮುಂಬೈಗೆ ನುಗ್ಗಿ ನೂರಾರು ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಂತೆ ಪಾಕಿಸ್ತಾನಿ ಆಟಗಾರರು ಭಾರತ ತಂಡವನ್ನು ಸರ್ವನಾಶಗೊಳಿಸಿದರು ಎಂದು ಬರೆಯುತ್ತಿದ್ದರೇ?

ಗೋಪಾಲಕೃಷ್ಣ ಹೆಗಡೆಯವರಿಗೆ ಶುಭವಾಗಲಿ, ಅವರ ಯುದ್ಧೋನ್ಮಾದ ಇನ್ನಾದರೂ ಕಡಿಮೆಯಾಗಲಿ.

Monday, April 4, 2011

ಈ ಎಲ್ಲ ಥ್ಯಾಂಕ್ಸ್‌ಗಳೂ ನಿಮಗೇ ಸೇರುತ್ತವೆ...

ಸಂಪಾದಕೀಯದ ಕೆಲವು ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡ ಕೆಲವರು ಥ್ಯಾಂಕ್ಸ್ ಹೇಳಿದ್ದಾರೆ. ಈ ಎಲ್ಲ ಧನ್ಯವಾದಗಳೂ ಓದುಗರಾದ ನಿಮಗೇ ಸಲ್ಲುತ್ತವೆ. ಅಂದ ಹಾಗೆ ಸಂಪಾದಕೀಯದಲ್ಲಿ ಬರೆಯುವ, ಪಾಲ್ಗೊಳ್ಳುವ ಮೂಲಕ ಇದನ್ನು ಮತ್ತಷ್ಟು ಉತ್ತಮ ಚರ್ಚಾವೇದಿಕೆಯನ್ನಾಗಿಸಿದ ಈ ಎಲ್ಲರಿಗೂ ನಮ್ಮ ಧನ್ಯವಾದಗಳು. ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು-ಸಂ

ನನ್ನ ಬಗೆಗೆ ಒಳ್ಳೆಯ ಮಾತನಾಡಿ ಬೆನ್ನು ತಟ್ಟಿ ಪ್ರೀತಿ ತೋರಿರುವ ಎಲ್ಲ ಹಿರಿಯ ಕಿರಿಯ ಮಿತ್ರರಿಗೆ ಕೃತಜ್ಞತೆಗಳು. ತಮ್ಮ ಸದ್ಭಾವನೆಯನ್ನು ಹೀಗೆಯೇ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಆದರಗಳೊಂದಿಗೆ
-ಡಿ.ಉಮಾಪತಿ 


Thanks for each one in the Editorial Team
It is my legitimate duty. Let us work together to recognize, uphold and to protect the rights of children (lesser human beings in this society) .If possible,  all of us can meet once  to draft the guidelines in a collective process and the same can be finalized later. I believe your rich experience and insights will bring value addition to the process
-Dr. Niranjanradhya.V.P

Namaste
It is nice that u hv pblshd it. Thanks for your support.
I got so many mails from media ppl.I really needed that.
nalme,
-CheThana Therthahalli

ಸಂಪಾದಕೀಯದಲ್ಲಿ ಅಂಕಣಗಳ ಬಗೆಗಿನ ಲೇಖನ ಓದಿ ಬಹಳ ಮಂದಿ ಮಿತ್ರರು ಪ್ರತಿಕ್ರಿಯಿಸಿದ್ದಾರೆ.. ಅಂಕಣಕಾರರು.. ರೀ, ನಿಮ್ಮ grading ನಲ್ಲಿ ನಮ್ಮನ್ನು  ಎಲ್ಲಿಟ್ಟಿದ್ದೀರಿ ಅಂತ ತಮಾಷೆ ಮಾಡಿದರು. ಯಾವ ಪತ್ರಿಕೆ ಉದ್ದೇಶ ಇಟ್ಕೊಂಡು ಬರೆದಿರಿ ಅಂತ ಗೊತ್ತು ಅಂತ ಆತ್ಮೀಯ ಗೆಳೆಯರೊಬ್ಬರು ಹೇಳಿದರು. ಅನೇಕರು ಮಾಧ್ಯಮದ ಗೆಳೆಯರು ವೈಯುಕ್ತಿಕ ಫೋನ್ ಮೆಸೇಜ್ ಮಾಡಿ, thanku  , ನಮಗೆ ಹೇಳಲು ಆಗದ್ದು.. ನೀವಾದ್ರು ಹೇಳಿದ್ರಿ ಅಂತ ತಮ್ಮ ಅಸಹಾಯಕತೆ ತೋಡಿಕೊಂಡರು.. ನಿಜವಾಗಿ ಹೇಳಬೇಕೆಂದರೆ, ನಾನು ಯಾರನ್ನೂ ಉದ್ದೇಶ ಇಟ್ಟುಕೊಂಡು ಬರೆದಿಲ್ಲ. ನನ್ನ ಸಂಕಟ ಓದುಗಳಾಗಿ ಹಂಚಿಕೊಂಡೆ ಅಷ್ಟೇ. ಇಷ್ಟು ಜನರಲ್ಲಿ ಅದು ಇತ್ತು ಅಂತ ಈಗ ಗೊತ್ತಾಯಿತು. specific ಆಗಿ ಬರೆಯಬೇಕಿತ್ತು ಎಂದು, ಅಂದರು ಕೆಲವರು.. ಎಲ್ಲಾರೂ ನಮ್ಮವರೇ..  ಯಾರನ್ನೂ ಹೆಸರಿಸುವುದು ಬೇಡ ಅನ್ನಿಸಿತು. sportive  ಆಗಿ ತೊಗೋತಾರೆ ಅಂದ್ರೆ ಖಂಡಿತ ಉದಾಹರಣೆ ಸಹ ಕೊಡಬಹುದು.. ಇದು ಸೂಕ್ಷ್ಮವಿಚಾರ. ಎಲ್ಲರಿಗೂ ಅರ್ಥ ಆಗಿದೆ ಎಂದು ಭಾವಿಸುತ್ತೇನೆ. ಸಂಪಾದಕೀಯ ತಂಡ ಅಂಕಣ ಮೌಲ್ಯ ಮಾಪನ ಮಾಡಬೇಕು ಮತ್ತು ಹೇಗೆ ಅಂತ ಓದುಗರು ಹೇಳಿರುವುದು ಸಂತೋಷ  ತಂದಿತು. ಪ್ರತಿಕ್ರಿಯೆ ನೀಡಿದ ಎಲ್ಲ ಸ್ನೇಹಿತರಿಗೂ ಕೃತಜ್ಞತೆಗಳು  ಸಂಪಾದಕೀಯ ಬಳಗಕ್ಕೆ ಥ್ಯಾಂಕ್ಸ್. ನಮಸ್ಕಾರ

-ಬಿ.ಕೆ. ಸುಮತಿ

ಸಂಪಾದಕೀಯ ಬ್ಲಾಗ್ ಸಂಪಾದಕರಿಗೆ,
ಅಂಕಣ ಕುರಿತ ನನ್ನ ಬರಹ ಪ್ರಕಟಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ನನ್ನ ಬರಹಗಳಿಗೆ ನೀವು ನೀಡುತ್ತಿರುವ ಉತ್ತೇಜನಕ್ಕೆ ಮನಸ್ಸು ತುಂಬಿ ಬಂದಿದೆ.
-ಆನಂದ್ ಪಾಟೀಲ್

Sunday, April 3, 2011

ಕನ್ನಡದಲ್ಲಿ ಮಹಿಳೆಯರು ಬರೆದ ಅಂಕಣಗಳು...


ಕನ್ನಡ ಪತ್ರಿಕಾರಂಗದ ಅಂಕಣಕಾರರನ್ನು ಕುರಿತು ಬರೆದಿದ್ದ ಆನಂದ್ ಪಾಟೀಲ್, ಮಹಿಳಾ ಅಂಕಣಕಾರ್ತಿಯರನ್ನೂ ನೆನಪಿಸಿಕೊಂಡು ಬರೆದಿದ್ದಾರೆ. ಹಾಗೆಯೇ ಅವರ ಮೊದಲ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಒಂದು ಚುಟುಕು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.


ಅಂದ ಹಾಗೆ, ಆನಂದ್ ಪಾಟೀಲ್ ಮೂಲತಃ ಬೆಳಗಾವಿಯವರು. ಅರ್ಥಶಾಸ್ತ್ರ ಮತ್ತು ಸಮೂಹ ಮಾಧ್ಯಮ ವಿಷಯಗಳಲ್ಲಿ ಎರಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೇರ ನೇಮಕಾತಿ ಮೂಲಕ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ಅಧಿಕಾರಿಯಾಗಿ ಸೇರ್ಪಡೆ. ಸದ್ಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೇವೆ. ಮಾಧ್ಯಮ, ಹಿಂದೂಸ್ತಾನಿ ಸಂಗೀತ, ಚಿತ್ರಕಲೆ ಇವರ ಆಸಕ್ತಿಯ ವಿಷಯಗಳು. -ಸಂ

ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣಗಳನ್ನು ಕುರಿತು ಬರೆಯುವಾಗ ಮಹಿಳೆಯರು ಬರೆದ ಅಂಕಣಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಬೇಕು. ಪುರುಷರಿಗೆ ಹೋಲಿಸಿದರೆ ಅವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

ಕನ್ನಡದಲ್ಲಿ  ಪ್ರಥಮ ಅಂಕಣಕಾರ್ತಿ ಬಹುಶಃ ಆರ್. ಕಲ್ಯಾಣಮ್ಮ ಅವರೇ ಇರಬಹುದು. ಅವರು ತಾವು ಸಂಪಾದಕಿಯಾಗಿದ್ದ  ಸರಸ್ವತಿ  ಮಾಸಪತ್ರಿಕೆಯಲ್ಲಿ ಪ್ರತೀ ತಿಂಗಳು ಅಂಕಣ ಬರೆಯುತ್ತಿದ್ದರು. ನಂಜನಗೂಡು ತಿರುಮಲಾಂಬ ಅವರು ಅಂಕಣ ಬರೆದರೇ ಎನ್ನುವುದು ನನಗೆ ತಿಳಿಯದು. ಶ್ಯಾಮಲಾಬಾಯಿ, ಸರಸ್ವತಿಬಾಯಿ ರಾಜವಾಡೆ, ಸರೋಜಿನಿ ಮಹಿಷಿ ಮೊದಲಾದ ಇನ್ನಿತರ ಹಿರಿಯ ಪತ್ರಕರ್ತೆಯರ ಅಂಕಣ ಬರಹದ ಬಗ್ಗೆಯೂ ಹೆಚ್ಚು ತಿಳಿಯಬೇಕಿದೆ.

ಅನುಪಮಾ ನಿರಂಜನ ಅವರು ಪ್ರಜಾವಾಣಿ ಸೇರಿ ಅನೇಕ ಪತ್ರಿಕೆಗಳಿಗೆ ಆರೋಗ್ಯ ಕುರಿತ ಪ್ರಶ್ನೋತ್ತರ ಅಂಕಣ ಬರೆದರು. ಉಷಾ ನವರತ್ನರಾಮ್ ಅವರು ತಾವು ಸಂಪಾದಕಿಯಾಗಿದ್ದ ಗೆಳತಿ ಮಾಸಪತ್ರಿಕೆಯಲ್ಲಿ ಅಂಕಣ, ಪ್ರಶ್ನೋತ್ತರ ಅಂಕಣ ಬರೆದರು.

ಹಿರಿಯ ಪತ್ರಕರ್ತೆ ವಿಜಯಾ ಅವರು ಉದಯವಾಣಿ, ರೂಪತಾರ ಪತ್ರಿಕೆಗಳಿಗೆ ಬಹಳ ಕಾಲ ಅಂಕಣ ಬರೆಯುತ್ತಿದ್ದರು. ಮಾತಿನಿಂದ ಲೇಖನಿಗೆ ಎಂಬುದು ಅವರ ಒಂದು ಅಂಕಣದ ಹೆಸರು. ಸಿನೆಮಾ ಕುರಿತ ಅಂಕಣಗಳೂ ಸೇರಿ ಹಲವಾರು ಅಂಕಣ ಬರೆದರು.

ತರಂಗದ ಸಂಪಾದಕಿ ಸಂಧ್ಯಾ ಪೈ ಪ್ರಿಯ ಓದುಗ ನಿರಂತರ ಬರೆಯುತ್ತಿದ್ದಾರೆ. ಉದಯವಾಣಿಯ ಸಂಪಾದಕಿಯಾಗಿದ್ದ ಆರ್. ಪೂರ್ಣಿಮಾ ಅರ್ಧ ಜಗತ್ತು, ಮಣ್ಣಿನ ಕಣ್ಣು, ಕಂಡದ್ದು ಕೇಳಿದ್ದು ಮತ್ತು ಎಂಥದು ಮಾರಾಯ್ತಿ!  ಮುಂತಾದ ಅಂಕಣಗಳನ್ನು ಬರೆದರು. ಸಂಯುಕ್ತ ಕರ್ನಾಟಕದಲ್ಲಿ ಸ್ಥಾನಿಕ ಸಂಪಾದಕಿಯಾಗಿದ್ದ ಕೆ.ಎಚ್. ಸಾವಿತ್ರಿ ಜೀವನ್ಮುಖಿ ಮತ್ತು ಸಿನೆಮಾ ಅಂಕಣಗಳನ್ನು ಬರೆದರು. ಕನ್ನಡಪ್ರಭದಲ್ಲಿ ಯಶೋಧ ಅಂಕಣ ಬರೆದರು.

ವೈದೇಹಿ ಮೊದಲು ಲಂಕೇಶ್ ಪತ್ರಿಕೆಯಲ್ಲಿ, ಈಗ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದಾರೆ. ಪ್ರತಿಭಾ ನಂದಕುಮಾರ್ ಕನ್ನಡಪ್ರಭದಲ್ಲಿ ಕೆಲವು ವರ್ಷ ಅನುದಿನದ ಅಂತರಗಂಗೆ ಎಂಬ ಹೆಸರಿನ ಅಂಕಣ ಬರೆದರು. ಉದಯವಾಣಿಯಲ್ಲಿ ಎಚ್.ಎಸ್. ಶ್ರೀಮತಿ ಗೌರಿದುಃಖ ಅಂಕಣ ಬರೆದರು. ಕೆ.ಎಂ. ವಿಜಯಲಕ್ಷ್ಮಿ ಕನ್ನಡದ ಮೊದಲ ಲೇಖಕಿಯರನ್ನು ಕುರಿತ ಅಂಕಣ ಬರೆದಿದ್ದಾರೆ. ನೇಮಿಚಂದ್ರ ಮತ್ತೆ ಉದಯವಾಣಿಯಲ್ಲಿ ಅಂಕಣ ಬರೆಯುತ್ತಿದ್ದಾರೆ. ಟೈಮ್ಸ್ ಕನ್ನಡದಲ್ಲಿ ಸಂಧ್ಯಾ ರೆಡ್ಡಿ ಕೆಲಕಾಲ ಬರೆದರು. ಪ್ರಜಾವಾಣಿಯಲ್ಲಿ ವಿಜಯಲಕ್ಷ್ಮಿ ಬಾಳೇಕುಂದ್ರಿ, ರೂಪ ಹಾಸನ ಅಂಕಣ ಬರೆದರು. ಈಗ ಪ್ರಾಧ್ಯಾಪಕಿ ಆರ್. ಇಂದಿರಾ ಒಳ್ಳೆಯ ಅಂಕಣ ಬರೆಯುತ್ತಿದ್ದಾರೆ.

ಸುಧಾ ಮೂರ್ತಿ ಮೊದಲು ವಿಜಯಕರ್ನಾಟಕದಲ್ಲಿ, ಈಗ ಕನ್ನಡ ಪ್ರಭದಲ್ಲಿ ಅಂಕಣ ಬರೆಯುತ್ತಿದ್ದಾರೆ. ಗುಲಾಬಿ ಬಿಳಿಮಲೆ, ಟೀನಾ ಕೆಲಕಾಲ ಅಂಕಣ ಬರೆದರು. ವೀಣಾ ಬನ್ನಂಜೆ ಅಂಕಣ ಕನ್ನಡಪ್ರಭದಲ್ಲಿ ಬರುತ್ತಿದೆ. ಸಿನೆಮಾದಲ್ಲಿ ಇನ್ನೂ ಹಲವು ಅಂಕಣಕಾರ್ತಿಯರಿದ್ದಾರೆ.

ಪ್ರಶ್ನೋತ್ತರ ಅಂಕಣಗಳಲ್ಲಿ ಹೇಮಲತಾ ಮಹಿಷಿ, ಗೀತಾ ಕೃಷ್ಣಮೂರ್ತಿ ಅವರ ಕಾನೂನು ಕುರಿತ ಅಂಕಣಗಳಿವೆ. ಪ್ರಭಾ ಮೂರ್ತಿ ಕೂಡ ಬರೆದಿದ್ದಾರೆ.

ಆರೋಗ್ಯ ಅಂಕಣಗಳಲ್ಲಿ ಪದ್ಮಿನಿ ಪ್ರಸಾದ್ ಅವರ ಲೈಂಗಿಕ ಆರೋಗ್ಯ ಕುರಿತ ಅಂಕಣವಿದೆ. ಶಮಂತಕಮಣಿ ನರೇಂದ್ರನ್, ಲೀಲಾವತಿ ದೇವರಾಜ್, ವಸುಂಧರಾ ಭೂಪತಿ, ಕೆ. ಪೂರ್ಣಿಮಾ ಭಟ್, ಕೆ. ಜಯಲಕ್ಷ್ಮಿ, ಹೇಮಾ ದಿವಾಕರ್ ಮುಂತಾದ ಅನೇಕ ವೈದ್ಯರು ಆರೋಗ್ಯ ಅಂಕಣಗಳನ್ನು ಬರೆದಿದ್ದಾರೆ.

ಈ ಪಟ್ಟಿಗೆ ಇನ್ನಷ್ಟು ಅಂಕಣಕಾರ್ತಿಯರು ಸೇರುವ ನಿರೀಕ್ಷೆಯಿದೆ.

****

ನನ್ನ ಬರಹಕ್ಕೆ ಹಳೆಯ ಅಂಕಣಗಳ ನೆನಪಿನ ಸುರಳಿಯನ್ನು ಬಿಚ್ಚುವ ಉದ್ದೇಶ ಇದೆಯೇ ಹೊರತು ಖಂಡಿತ ವಿಮರ್ಶೆ ಮಾಡುವ ಉದ್ದೇಶ ಇಲ್ಲ. ನಿಜ ಹೇಳಬೇಕೆಂದರೆ ಇದೊಂದು ಕನ್ನಡದ ಹಳೆಯ ಪತ್ರಿಕಾ ಅಂಕಣಗಳ ಅನೌಪಚಾರಿಕ ಪಟ್ಟಿ. ಹೊಸ ಅಂಕಣಗಳ ಬಗ್ಗೆ ಸಾಂದರ್ಭಿಕವಾಗಿ ಮಾತ್ರ ಹೇಳಲಾಗಿದೆ. ಈ ಪಟ್ಟಿ ನಿಜವಾಗಿ ಪರಿಪೂರ್ಣವಲ್ಲ. ಸಿಕ್ಕಷ್ಟು ದಾಖಲಿಸಿದ್ದೇನೆ. ನಿರುದ್ದೇಶವಾಗಿ ಕೆಲವೊಂದು ಹೆಸರುಗಳು ಬಿಟ್ಟುಹೋಗಿರಬಹುದು. ಅವುಗಳನ್ನು ಯಾರು ಬೇಕಾದರೂ ಸೇರಿಸಿ ಉಪಕರಿಸಬಹುದು. ಇದರ ಪ್ರಯೋಜನ ಎಲ್ಲರಿಗೆ ಆಗುತ್ತದೆ ಅಲ್ಲವೇ?

ಪ್ರೊ. ಜಿ.ವಿ. ಅವರು ಬಹುಕಾಲ ಪ್ರಜಾವಾಣಿಯಲ್ಲಿ ಬರೆದ ಭಾಷೆ ಕುರಿತ ಇಗೋ ಕನ್ನಡ ಒಂದು ಅತಿ ಉಪಯುಕ್ತ, ಅನನ್ಯ ಅಂಕಣವೆನ್ನುವುದರಲ್ಲಿ ಅನುಮಾನವೇ ಇಲ್ಲ. ಇತರ ಭಾಷೆಗಳಲ್ಲೂ ಇಂಥ ಅಂಕಣ ಅಪರೂಪ. ಕೆ.ವಿ. ನಾರಾಯಣ ಅವರ ಪದಸಂಪದ ಕೆಲಕಾಲ ಬಂದ ಅಂಕಣ. ಬಹಳ ಹಿಂದೆ, ಗುಲ್ವಾಡಿ ಅವರು ಸಂಪಾದಕರಾಗಿದ್ದಾಗ, ತರಂಗದಲ್ಲಿ ಹಂಪನಾ ಅವರು ಕೆಲಕಾಲ ಕನ್ನಡ ಪದಗಳ ಬಗ್ಗೆ ಅಂಕಣ ಬರೆದಿದ್ದರು.

ಪ್ರೊ ಎಸ್‌ಕೆಆರ್ ಅವರು ಸುಧಾ ವಾರಪತ್ರಿಕೆಯಲ್ಲಿ ಅಂಕಣ ಬರೆದರು. ಮತ್ತೆ ಇನ್ನಾವ ಪತ್ರಿಕೆಯಲ್ಲಿ ಬರೆದರೋ ಯಾರಾದರೂ ತಿಳಿಸಿದರೆ ಉಪಕಾರ ಆಗುತ್ತದೆ.

ವಿಜಯಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ತಾವೂ ಹೆಚ್ಚು ಅಂಕಣಗಳನ್ನು ಬರೆದರು ಮತ್ತು ಇತರರಿಂದ ವೈವಿಧ್ಯಮಯವಾದ ಅಂಕಣಗಳನ್ನು ಬರೆಸಿದ ಬಗ್ಗೆ ಅನುಮಾನವಿಲ್ಲದೆ ನನ್ನ ಪ್ರಶಂಸೆ ಇದೆ. ಕನ್ನಡಪ್ರಭದಲ್ಲಿ ಆ ಒಳ್ಳೆಯ ಸಂಪ್ರದಾಯ ಮುಂದುವರಿಸಲಾಗಿದೆ. ನನ್ನ ಸಂಪ್ರಬಂಧದಲ್ಲಿ ಅದರ ಬಗ್ಗೆ ಚರ್ಚೆ ಮಾಡಿಯೇ ಮಾಡುತ್ತೇನೆ.

ಇದು ಅಂಕಣಗಳನ್ನು ಕುರಿತ ವಿಮರ್ಶಾ ಲೇಖನ ಅಲ್ಲ ಎಂದು ಹೇಳಿದರೂ, ಕ್ವಾಲಿಟಿ ಮತ್ತು ಕಮಿಟ್ ಮೆಂಟ್ ಮುಂತಾದ ಪದಗಳನ್ನು ಹೇಳುವ ಉದ್ದೇಶ ತಿಳಿಯುತ್ತಿಲ್ಲ. ನನ್ನ ಪ್ರಯತ್ನದ ಹಿಂದೆ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂಬ ಪ್ರಾಮಾಣಿಕ ಕಾಳಜಿಯಿದೆ.

ಮಹಿಳೆಯರ ಅಂಕಣಗಳ ಪಟ್ಟಿಗೆ ಗೌರಿ ಲಂಕೇಶ್ ಅವರು ರಾಜಕೀಯ ಸಾಮಾಜಿಕ ವಿಷಯಗಳ ಬಗ್ಗೆ ಬರೆಯುವ "ಕಂಡದ್ದು" ಅಂಕಣ, ವಿಜಯಕರ್ನಾಟಕದಲ್ಲಿ ನಟಿ ಮಾಳವಿಕಾ ಬರೆದ ಅಂಕಣ ಮತ್ತು ಕನ್ನಡಪ್ರಭದಲ್ಲಿ ನಿರೂಪಕಿ ಅಪರ್ಣಾ ಬರೆದ ಅಂಕಣ- ಇವುಗಳನ್ನು ಸೇರಿಸಬೇಕು.

ಇನ್ನು ಕನ್ನಡದಲ್ಲಿ ವಾರಭವಿಷ್ಯ ಹೇಳುವ ಅಂಕಣಗಳೇ ಬಹಳಷ್ಟಿವೆ. ಕೆಲವು ಪತ್ರಿಕೆಗಳಲ್ಲಿ ದಶಕಗಳಿಂದ ಬರೆಯುವವರಿದ್ದಾರೆ.

ವಿಜ್ಞಾನ- ತಂತ್ರಜ್ಞಾನ ಕುರಿತ ಅಂಕಣಗಳನ್ನು ಕೊಳ್ಳೇಗಾಲ ಶರ್ಮ, ಕೈವಾರ ಗೋಪಿನಾಥ್, ಹಾಲ್ದೊಡ್ಟೇರಿ ಸುಧೀಂದ್ರ, ಟಿ.ಆರ್. ಅನಂತರಾಮು, ಅಶೋಕ್ ಕುಮಾರ್ ಮೊದಲಾದವರು ಬರೆಯುತ್ತಿದ್ದಾರೆ.

ಭಾರತ ಗೆದ್ದ ವಿಶ್ವಕಪ್: ಪ್ರಕಾಶ್ ಶೆಟ್ಟಿ ಕುಂಚದ ಕಣ್ಣಲ್ಲಿ...


ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದೆ. ಈ ಸಂಬಂಧ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಸಂಪಾದಕೀಯಕ್ಕಾಗಿ ಕಳುಹಿಸಿರುವ ಚಿತ್ರ ಇಲ್ಲಿದೆ.

Saturday, April 2, 2011

ಪತ್ರಕರ್ತರ ಮಂತ್ರಿ ಮಂಡಲ ಹೀಗಿರಬಹುದೇ? ಮೂರ್ಖರ ದಿನದ ವಿಶೇಷ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ರಾಜಕೀಯ ಪಕ್ಷ ಕಟ್ಟಿದರೆ? ಪತ್ರಕರ್ತರ ಈ ರಾಜಕೀಯ ಪಕ್ಷ ಅಧಿಕಾರಕ್ಕೂ ಬಂದರೆ? ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ಮೂರ್ಖರ ದಿನಾಚರಣೆಗಾಗಿ ನಮ್ಮ ಅನಾಮಿಕ ಓದುಗರೊಬ್ಬರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.

ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
ವಿಶ್ವೇಶ್ವರ ಭಟ್: ಮಾಹಿತಿ ತಂತ್ರಜ್ಞಾನ
ಇ.ರಾಘವನ್: ಹಣಕಾಸು, ಕಂದಾಯ
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ರವಿ ಬೆಳಗೆರೆ: ಶಿಕ್ಷಣ ಮತ್ತು ಆರೋಗ್ಯ
ಅನಂತ ಚಿನಿವಾರ್: ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ರಾಧಾಕೃಷ್ಣ ಬಡ್ತಿ: ನೀರಾವರಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಕೆ.ಎನ್.ನಾಗೇಶ್(ಸಮಯ): ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಹುಣಸವಾಡಿ ರಾಜನ್: ಸಹಕಾರ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ಅಬುಸಲಾಮ್ ಪುತ್ತಿಗೆ: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಯೋಜನೆ, ಅಂಕಿ-ಸಂಖ್ಯೆ, ನಗರಾಭಿವೃದ್ಧಿ, ಬಿಡಿಎ
ಲೋಕೇಶ್ ಕಾಯರ್ಗ: ಬಂದರು, ಮೀನುಗಾರಿಕೆ
ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ 
ಮನೋಜ್ (ಕಸ್ತೂರಿ): ಕಾರ್ಮಿಕ
ಅಬ್ಬೂರು ರಾಜಶೇಖರ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ

ಎಲ್ಲ ಸರಿ, ಮುಖ್ಯಮಂತ್ರಿ ಯಾರು ಅಂತಾನೇ ಹೇಳಲಿಲ್ಲ ಅಂದಿರಾ? ಮುಖ್ಯಮಂತ್ರಿ ಕುರ್ಚಿಯನ್ನು ಬಿ.ಎಸ್.ಯಡಿಯೂರಪ್ಪನವರು ಬಿಟ್ಟುಕೊಡುವುದುಂಟೇ? ಅವರೂ ಸಹ ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯಾದರೂ, ಪಕ್ಷ ಸೇರಿ ಅವರೇ ಮುಖ್ಯಮಂತ್ರಿಯಾಗುತ್ತಾರೆ.

ಇನ್ನು ಇಂಧನ ಇಲಾಖೆಗೆ ಮಂತ್ರಿ ಯಾರು ಅಂತನೂ ಕೇಳಬೇಡಿ. ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಶೋಭಾ ಇಲ್ಲದಿದ್ದರೆ ಹೇಗೆ? ಅವರೂ ಸಹ ಪತ್ರಕರ್ತರಾಗಿ ರೂಪಾಂತರಗೊಳ್ಳುತ್ತಾರೆ ಬಿಡಿ.

ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.

Thursday, March 31, 2011

ಇದೀಗ ಬಂದ ಸುದ್ದಿ: ಹಮೀದ್ ಸುವರ್ಣ ನ್ಯೂಸ್ ಮುಖ್ಯಸ್ಥ


ಹಮೀದ್ ಪಾಳ್ಯ ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇದುವರೆಗೆ ಈ ಜವಾಬ್ದಾರಿ ಹೊತ್ತಿದ್ದ ಎಚ್. ಆರ್ ರಂಗನಾಥ್ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆ ಹಲವು ದಿನಗಳಿಂದ ಗಾಳಿಯಲ್ಲಿತ್ತು. ಇದೀಗ ಸುದ್ದಿಯಾಗಿದೆ.

ಈ ಸುದ್ದಿ ಹಮೀದ್ ಹಾಗೂ ರಂಗನಾಥ್ ರವರ ವೃತ್ತಿಜೀವನದ ಬಹುಮುಖ್ಯ ಘಟ್ಟವನ್ನು ಸೂಚಿಸುತ್ತದೆ. ಹಿಂದೆ ರಂಗನಾಥ್ ಸುವರ್ಣ ಸೇರಿದಾಗ, ಅಂದಿನ ಮುಖ್ಯಸ್ಥ ಶಶಿಧರ ಭಟ್ ಸಂಪಾದಕೀಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಅದು ಕೆಲವೇ ಕಾಲದವರೆಗೆ. ಈಗ ಕಾಲ ಚಕ್ರ ಮತ್ತೊಂದು ಸುತ್ತು ಮುಗಿಸಿದೆ.ಇದು ಹಮೀದ್ ಕಾಲ.

ನೋ ಡೌಟ್ ಹಮೀದ್ ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಆಂಕರ್‌ಗಳಲ್ಲಿ ಒಬ್ಬರು. ಅವರನ್ನು ಪತ್ರಕರ್ತ ಎನ್ನುವುದಕಿಂತ, ಉತ್ತಮ ಆಂಕರ್ ಎಂದು ಗುರುತಿಸಿದ್ದೇ ಹೆಚ್ಚು. ಪತ್ರಕರ್ತನಾಗಿ, ಸುದ್ದಿ ಮುಖ್ಯಸ್ಥನಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ರಂಗನಾಥ್ ಅವರ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯೆಂದರೆ ಅವರು ಜುಗಲ್ ಬಂದಿ ಮತ್ತು ಪಬ್ಲಿಕ್ ವಾಯ್ಸ್ ಕಾರ್ಯಕ್ರಮಗಳನ್ನು ಮುಂದುವರೆಸಲಿದ್ದಾರೆ. ಎರಡೂ ಕಾರ್ಯಕ್ರಮಗಳು  ಸುವರ್ಣ ನ್ಯೂಸ್ ನಲ್ಲಿ ಜನಪ್ರಿಯವಾಗಿವೆ. ರಂಗನಾಥ್ ಇಲ್ಲದ ದಿನಗಳಲ್ಲಿ ಈ ಕಾರ್ಯಕ್ರಮಗಳು ಬೋರ್ ಹೊಡೆಸುತ್ತಿದ್ದವು. ಇತ್ತೀಚಿಗೆ ಜುಗಲ್ ಬಂದಿಯಲ್ಲಿ ರಂಗನಾಥ್ ಕಾಣಿಸಿಕೊಂಡಿದ್ದು ಕಡಿಮೆ. ಬೇರೆ ಯಾವುದೇ ಹೊಣೆಗಳು ಇಲ್ಲದೇ ಇರುವುದರಿಂದ ಇನ್ನು ಮುಂದೆ ಅವರು ಕಾಣಿಸಿಕೊಳ್ಳಬಹುದು.

ಇದೇನೇ ಇರಲಿ, ರಂಗನಾಥ್ ಇಷ್ಟು ಬೇಗ ಸುವರ್ಣ ನ್ಯೂಸ್‌ನ ಮುಖ್ಯಸ್ಥನ ಹುದ್ದೆಯಿಂದ ಹಿಂದೆ ಸರಿಯಬೇಕಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಸುವರ್ಣಕ್ಕೆ ಕನ್ನಡಪ್ರಭದಿಂದ ವಲಸೆ ಬಂದಾಗ ರಂಗನಾಥ್ ಅತ್ಯುತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು. ಅದುವರೆಗೆ ಟಿವಿ೯ಗೆ ಯಾವ ರೀತಿಯಲ್ಲೂ ಒಂದು ಸ್ಪರ್ಧೆ ಅನ್ನುವುದೇ ಇರಲಿಲ್ಲ. ರಂಗನಾಥ್ ವೃತ್ತಿಪರತೆ ಇಲ್ಲಿ ಕೆಲಸ ಮಾಡಿತು. ಸುವರ್ಣ ನ್ಯೂಸ್‌ಗೂ ವೀಕ್ಷಕರು ಹುಟ್ಟಿಕೊಂಡರು.

ಕಳೆದ ಆರೇಳು ತಿಂಗಳಿನಿಂದ ಕನ್ನಡ ಮಾಧ್ಯಮ ರಂಗದಲ್ಲಿ ವಿಪರೀತ ಬದಲಾವಣೆಗಳು ನಡೆದವು. ಸುವರ್ಣ ನ್ಯೂಸ್ ಪತ್ರಿಕೆ ಆರಂಭಿಸಿಬೇಕಿದ್ದ ರಾಜೀವ್ ಚಂದ್ರಶೇಖರ್, ಇದ್ದಕ್ಕಿದ್ದಂತೆ ಕನ್ನಡಪ್ರಭದ ಶೇರುಗಳನ್ನು ಕೊಂಡುಕೊಂಡರು. ಟೈಮ್ಸ್ ಸಂಸ್ಥೆಯಿಂದ ವಿಶ್ವೇಶ್ವರ ಭಟ್ ಹೊರಬಂದರು.  ಕನ್ನಡಪ್ರಭಕ್ಕೆ ಸಂಪಾದಕರೂ ಆದರು. ಸುವರ್ಣ ನ್ಯೂಸ್‌ನ ಸಂಪಾದಕರಾಗಬೇಕಿದ್ದ ರವಿ ಹೆಗಡೆ ಉದಯವಾಣಿಗೆ ಸಂಪಾದಕರಾದರು. ಕನ್ನಡಪ್ರಭ ಮತ್ತು ಉದಯವಾಣಿಗಳ ಸಂಪಾದಕರಾಗಿದ್ದ ಶಿವಸುಬ್ರಹ್ಮಣ್ಯ ಹಾಗು ತಿಮ್ಮಪ್ಪ ಹೆಗಡೆ ಉದ್ಯೋಗ ಕಳೆದುಕೊಂಡರು.

ಈಗ ರಂಗನಾಥ್ ಸರದಿ. ರಂಗನಾಥ್ ಅವರು ಕಸ್ತೂರಿ ನ್ಯೂಸ್ ಚಾನಲ್‌ಗೆ ಮುಖ್ಯಸ್ಥರಾಗಿ ಹೋಗುತ್ತಾರೆ ಎಂಬ ವದಂತಿಗಳಿದ್ದವು. ಆದರೆ ಅವರು ಸದ್ಯಕ್ಕೆ ಸುವರ್ಣದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮುಂದೆ ಏನೇನಾಗುತ್ತದೋ ಯಾರು ಬಲ್ಲರು?

ಹಮೀದ್ ಪಾಳ್ಯ ಅವರಿಗೆ ನಮ್ಮ ಶುಭಾಶಯಗಳು.

ಅಂದಹಾಗೆ, ಕನ್ನಡಪ್ರಭಕ್ಕೆ ಕೆ.ವಿ.ಪ್ರಭಾಕರ್ ಮತ್ತು ರಾಘವೇಂದ್ರ ಭಟ್ ಸೇರ್ಪಡೆಯಾಗಿದ್ದಾರೆ. ಇಬ್ಬರೂ ವಿಜಯ ಕರ್ನಾಟಕದಲ್ಲಿದ್ದರು. ಭಟ್ಟರ ಹಳೆಯ ಒಡನಾಡಿಗಳು. ಕೆ.ವಿ.ಪ್ರಭಾಕರ್ ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರೂ ಹೌದು. ಇಬ್ಬರೂ ಈಗ ವಿಕ ತೊರೆದು ಕಪ್ರ ಸೇರಿಕೊಂಡಿದ್ದಾರೆ.  ಈ ಸುದ್ದಿಯನ್ನು ವಿಶ್ವೇಶ್ವರ ಭಟ್ಟರು ತಮ್ಮ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.  ಅಲ್ಲಿಗೆ ಭಟ್ಟರೊಂದಿಗೆ ಜತೆಗೂಡಿದವರ ಸಂಖ್ಯೆ ಈಗ ಆರಕ್ಕೆ ಏರಿದೆ.