Wednesday, April 6, 2011

ಕಾರ್ಗಿಲ್ ಯುದ್ಧವೂ, ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದವೂ....


ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು...

ಹೀಗೆ ಬರೆದದ್ದು ನಮ್ಮ ಹೆಮ್ಮೆಯ ಪ್ರಜಾವಾಣಿ. (ಮಾರ್ಚ್ ೩೧, ಅಗ್ರಸುದ್ದಿ)

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಿಂದೆಂದಿಗಿಂತಲೂ ಮೀಡಿಯಾ ಹೈಪ್ ಇದ್ದದ್ದು ನಿಜ. ಬಹುತೇಕ ಮಾಧ್ಯಮಗಳು ಇದನ್ನು ಯುದ್ಧ-ಸಮರ ಎಂದು ಬಿಂಬಿಸಿದ್ದೂ ನಿಜ. ಆದರೆ ಮೊಹಾಲಿಯ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವ ದಾರ್ಷ್ಟ್ಯವನ್ನು ಯಾರೂ ತೋರಿಸಿರಲಿಲ್ಲ. ಅದನ್ನು ಮಾಡಿದ್ದು ಪ್ರಜಾವಾಣಿ.

ಹಾಗಂತ ಇದನ್ನು ಬರೆದವರು ನಿನ್ನೆ ಮೊನ್ನೆ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿಸಿರಕ್ತದ ಪತ್ರಕರ್ತರೇನೂ ಅಲ್ಲ. ಕ್ರೀಡೆಯ ಬಗ್ಗೆ ಗೊತ್ತಿಲ್ಲದ ರಾಜಕೀಯ ವರದಿಗಾರರೂ ಅಲ್ಲ. ಹೀಗೆ ಅಗ್ರ ಸುದ್ದಿಯನ್ನು ಬರೆದವರು ಗೋಪಾಲಕೃಷ್ಣ ಹೆಗಡೆ. ಅವರು ಹಿರಿಯರು, ಪ್ರಜಾವಾಣಿಯಲ್ಲಿ ವರ್ಷಾನುವರ್ಷ ಕ್ರೀಡಾ ವರದಿಗಾರರಾಗೇ ಹೆಸರು ಮಾಡಿದವರು. ಅವರೀಗ ಸ್ಥಾನಿಕ ಸಂಪಾದಕರು. ಸದ್ಯದಲ್ಲೇ ಪ್ರಜಾವಾಣಿಯಲ್ಲಿ ಅವರು ಮಹತ್ವದ ಹುದ್ದೆಯನ್ನು ಅಲಂಕರಿಸಲಿರುವವರು.

ಒಂದೇ ವಾಕ್ಯಕ್ಕೆ ನೂರೆಂಟು ತಕರಾರುಗಳಿವೆ. ಅದನ್ನೆಲ್ಲ ಹೇಳುವ ಮುನ್ನ ಇದೇ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಚಿಂತಕ ಶಿವಸುಂದರ್ ಬರೆದ ಒಂದು ಪುಟ್ಟ ಪತ್ರವನ್ನೊಮ್ಮೆ ಓದಿಕೊಳ್ಳಿ. (ಏಪ್ರಿಲ್, ೧)

ಬದಲಾಗುತ್ತಿರುವ ರಾಜಕಾರಣಕ್ಕೆ ತಕ್ಕಂತೆ ಕ್ರೀಡಾ ಮನೋಧರ್ಮವೂ ಬದಲಾಗುತ್ತಿದೆ. ಅಥವಾ ಬದಲು ಮಾಡಲಾಗುತ್ತಿದೆ. ಭಾರತ-ಪಾಕಿಸ್ತಾನದ ನಡುವಿನ ಒಂದು ಕ್ರಿಕೆಟ್ ಪಂದ್ಯವನ್ನು ಎರಡು ರಾಷ್ಟ್ರಗಳ ನಡುವೆ ನಡೆಯಲಿರುವ ನಾಲ್ಕನೇ ಸಮರವೇನೋ ಎಂಬಂತೆ ಮಾಧ್ಯಮಗಳು ಒಂದು ಉನ್ಮಾದವನ್ನೇ ಸೃಷ್ಟಿಸಿದ್ದು ದುರದೃಷ್ಟಕರ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಗೆ ಭಾಷಿಕರ, ಧಾರ್ಮಿಕರ ಅಥವಾ ದೇಶಪ್ರೇಮದ ಪ್ರತಿಷ್ಠೆಯ ಪ್ರಶ್ನೆ ಲಗಾಯಿಸಿಬಿಟ್ಟರೆ ಅದು ಸಾಯುತ್ತದೆ. ಭಾಷೆ, ಧರ್ಮ ಮತ್ತು ದೇಶದ ಹೆಸರಲ್ಲಿ ಜನರನ್ನು ಒಡೆದು ಆಳುವ ರಾಜಕಾರಣಕ್ಕೆ ಕ್ರೀಡೆ ಮತ್ತು ಜನ ಬಲಿಪಶುಗಳಾಗುತ್ತಾರೆ. ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಕಾರ್ಗಿಲ್ ಯುದ್ಧ ಎಂದು ವರ್ಣಿಸಿದ ಮಾಧ್ಯಮಗಳ ನಿಲುವು ವಿಚಿತ್ರ.

ಒಂದು ವಿಶೇಷವನ್ನು ನೀವು ಗಮನಿಸಲೇಬೇಕು. ಮೊಹಾಲಿ ಪಂದ್ಯವನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸಿ ಗೋಪಾಲಕೃಷ್ಣ ಹೆಗಡೆ ಅಗ್ರಸುದ್ದಿ ಬರೆದ ಮರುದಿನವೇ ಶಿವಸುಂದರ್ ಅವರ ಪತ್ರ ವಾಚಕರ ವಾಣಿಯಲ್ಲಿ ಪ್ರಕಟಗೊಂಡಿದೆ. ಹೀಗೆ ಪತ್ರ ಪ್ರಕಟಿಸುವ ಮೂಲಕ ಪ್ರಜಾವಾಣಿ ಒಂದು ಸಣ್ಣ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರಬಹುದೇ? ಅದಕ್ಕೂ ಮುನ್ನ ಸಂಪಾದಕೀಯ ಸಭೆಯಲ್ಲಿ ಈ ಕುರಿತು ಒಂದು ಚರ್ಚೆ ನಡೆದಿರಬಹುದೆ? ಗೊತ್ತಿಲ್ಲ.

ಆದರೆ ವಿಶ್ವಕಪ್ ಪಂದ್ಯಾವಳಿಯ ವರದಿಗಾರಿಕೆಯ ನೇತೃತ್ವ ವಹಿಸಿದ್ದಂತಿದ್ದ ಗೋಪಾಲಕೃಷ್ಣ ಹೆಗಡೆಯವರು ಬರೆಯುತ್ತಾ ಬಂದಿದ್ದೆಲ್ಲ ಇಂಥದ್ದೇ ಮಾತುಗಳು. ಮಾ.೨೯ರ ಪ್ರಜಾವಾಣಿಯಲ್ಲಿ ಕ್ರಿಕೆಟ್ ರಾಯಭಾರ; ಮುಳ್ಳಿನ ಗುಲಾಬಿ ಎಂಬ ಶೀರ್ಷಿಕೆಯಲ್ಲಿ ಹೆಗಡೆಯವರ ವಿಶ್ಲೇಷಣೆಯೊಂದು ಪ್ರಕಟವಾಗಿತ್ತು. ಪ್ರಜಾವಾಣಿ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುವ ಪರಂಪರೆ ಇಟ್ಟುಕೊಂಡಿಲ್ಲ. ಈಗ್ಗೆ ಹತ್ತು ವರ್ಷಗಳ ಕೆಳಗೆ ಯಾವ ಪತ್ರಿಕೆಯೂ ಸುದ್ದಿಯನ್ನು ಎಡಿಟೋರಿಯಲೈಸ್ ಮಾಡುತ್ತಿರಲಿಲ್ಲ. ಸುದ್ದಿ ಸುದ್ದಿಯಂತಿರುತ್ತಿತ್ತು ಅಷ್ಟೆ. ನಂತರ ಕನ್ನಡಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳು ಅಂತ ಪ್ರಯೋಗಗಳನ್ನು ಮಾಡಿದವು, ಈಗಲೂ ಮಾಡುತ್ತಿವೆ.

ಆದರೆ ಗೋಪಾಲಕೃಷ್ಣ ಹೆಗಡೆಯವರ ಅಗ್ರ ಸುದ್ದಿ, ಪ್ರಜಾವಾಣಿಯ ಸಂಪಾದಕೀಯದಂತೆ ಮುಖಪಟದಲ್ಲಿ ಪ್ರಕಟಗೊಂಡಿತು. ಅದು ನಿಜಕ್ಕೂ ಒಬ್ಬ ಕ್ರೀಡಾ ವರದಿಗಾರ ಬರೆಯಬಹುದಾಗಿದ್ದ ಸುದ್ದಿಯೇ? ಹೋಗಲಿ, ರಾಜಕೀಯ ವರದಿಗಾರನಾದರೂ ಅಂಥ ಸುದ್ದಿ ಬರೆಯುವುದು ಸರಿಯೇ? ಪ್ರಜಾವಾಣಿ ಸಂಪಾದಕೀಯ ಬಳಗವೇ ಚರ್ಚೆ ನಡೆಸಬೇಕು.

ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದ ಅವರೆಲ್ಲ ವರದಿಗಳಲ್ಲೂ ಖಾಯಂ ಆಗೇ ಇದ್ದಿದ್ದನ್ನು ಪ್ರಜಾವಾಣಿ ಓದುಗರು ಗಮನಿಸಿರಬಹುದು.

ಇದು ಮಿನಿ ಫೈನಲ್ ಅಲ್ಲ, ಮಹಾಯುದ್ಧ. ಭಾರತ ಮತ್ತು ಆಸ್ಟ್ರೇಲಿಯ ನಡುವಣ ಮದ್ದು ಗುಂಡಿಲ್ಲದ ಸಮರ... ಎಂದು ಅವರು ಭಾರತ-ಆಸ್ಟ್ರೇಲಿಯಾ ಪಂದ್ಯದ ದಿನವೂ ಬರೆದಿದ್ದರು.

ಯಾಕೀ ಯುದ್ಧೋನ್ಮಾದ? ಏನಿದರ ಹಿನ್ನೆಲೆ? ಕ್ರೀಡೆಗೂ ಯುದ್ಧಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ? ಕಾರ್ಗಿಲ್ ಸಮರಕ್ಕೆ ಮೊಹಾಲಿ ಪಂದ್ಯವನ್ನು ಹೋಲಿಸುವ ಗೋಪಾಲಕೃಷ್ಣ ಹೆಗಡೆಯವರು ಎಂದಾದರೂ ನಿಜವಾದ ರಣರಂಗ ಹೇಗಿರುತ್ತದೆ ಎಂದು ನೋಡಿದ್ದಾರಾ? ಬ್ಯಾಟು, ಬಾಲುಗಳು ಎಂದಾದರೂ ಫಿರಂಗಿ, ಬಾಂಬುಗಳಾಗಲು ಸಾಧ್ಯವೇ? ಯುದ್ಧದಲ್ಲಿ ಸತ್ತ ಸೈನಿಕರಿಗೆ ಯಕಶ್ಚಿತ್ ಕ್ರೀಡಾಳುಗಳನ್ನು ಹೋಲಿಸಲು ಸಾಧ್ಯವೇ?

ಸಹಸ್ತಾರು ಜನರ ರಕ್ತ ಚೆಲ್ಲಾಡುವ ಯುದ್ಧವನ್ನೂ ಸಹ ಫ್ಯಾಂಟಸಿಯೆಂಬಂತೆ ಭಾವಿಸುವವರಷ್ಟೇ ಹೀಗೆ ಲಘುವಾಗಿ ಒಂದು ನಿರ್ದಿಷ್ಟ ಪಂದ್ಯವನ್ನು ಒಂದು ನಿರ್ದಿಷ್ಟ ಯುದ್ಧಕ್ಕೆ ಹೋಲಿಸುವುದು ಸಾಧ್ಯವಲ್ಲವೆ?

ಒಂದು ವೇಳೆ ಪಾಕಿಸ್ತಾನವೇ ಪಂದ್ಯ ಗೆದ್ದಿದ್ದರೆ ಗೋಪಾಲಕೃಷ್ಣ ಹೆಗಡೆ ಏನು ಬರೆಯುತ್ತಿದ್ದರು? ಹಡಗಿನ ಮೂಲಕ ಮುಂಬೈಗೆ ನುಗ್ಗಿ ನೂರಾರು ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಂತೆ ಪಾಕಿಸ್ತಾನಿ ಆಟಗಾರರು ಭಾರತ ತಂಡವನ್ನು ಸರ್ವನಾಶಗೊಳಿಸಿದರು ಎಂದು ಬರೆಯುತ್ತಿದ್ದರೇ?

ಗೋಪಾಲಕೃಷ್ಣ ಹೆಗಡೆಯವರಿಗೆ ಶುಭವಾಗಲಿ, ಅವರ ಯುದ್ಧೋನ್ಮಾದ ಇನ್ನಾದರೂ ಕಡಿಮೆಯಾಗಲಿ.

34 comments:

 1. ಸಣ್ಣ ವಿಷಯವನ್ನು ಇಷ್ಟು ದೊಡ್ಡದಾಗಿ ವಿರೋಧಿಸಬೇಕೇ? ಪಾಕಿಸ್ಥಾನದ ಆಟಗಾರರನ್ನು ಮಹಾನ್ ಸಾಧುಗಳಂತೆ ಚಿತ್ರಿಸಿದ್ದೀರಿ. ಶಹೀದ್ ಆಫ್ರಿದಿ ಇಲ್ಲಿ ಮಜಾ ಮಾಡಿ ತಿರುಗಿ ತನ್ನ ತಿರುಕ ದೇಶಕ್ಕೆ ಹೋದಮೇಲೆ "ಭಾರತದವರು ಮುಸಲ್ಮಾನರು ಮತ್ತು ಪಾಕಿಸ್ಥಾನಿಗಳಷ್ಟು ದೊಡ್ಡ ಹೃದಯದವರಲ್ಲ" ಅಂತ ಬಡಬಡಿಸಲಿಲ್ಲವೇ? ನಿಮಗೆ ಅಂಥವರ ಮೇಲೆ ಸಹಾನುಭೂತಿಯಿದ್ದರೆ ಪಾಕಿಗಳನ್ನು ಇನ್ನಷ್ಟು ತೆಗಳಿ ಅವನ ಮಾತನ್ನು ನಿಜ ಮಾಡಿ (ನಿಮ್ಮ ಸಣ್ಣತನವನ್ನು ತೋರಿಸಿ ಅವನ ಮಾತನ್ನು ನಿಜವಾಗಿಸಿ).

  ReplyDelete
 2. Hegde, through his reports, exhibited his poor writing skill. He is as bad as a junior most sports writer. If you analyse his reports, one will easily observe incoherent sentence structure. A few sentences were exact translation of some agency copies. Feel sorry for Prajavani for having such a poor reporter in the top position.

  ReplyDelete
 3. ಪ್ರಶಾಂತApril 6, 2011 at 2:58 PM

  ಧೋನಿಯ ಬಾಲ ಮಿಸ್ ಆಗಿದೆ!

  ReplyDelete
 4. @ ಮಹೇಶ್ ಪ್ರಸಾದ್ ನೀರ್ಕಜೆ
  ನಿಮ್ಮದು ಚೀಪ್ ಕಮೆಂಟ್. ಪಾಕಿಸ್ತಾನದ ಆಟಗಾರರನ್ನು ಮಹಾನ್ ಸಾಧುಗಳಂತೆ ಚಿತ್ರಿಸಿದ್ದೀರಿ ಎಂದು ಬರೆದಿದ್ದೀರಿ. ಇಲ್ಲಿ ಪಾಕಿಸ್ತಾನಿ ಆಟಗಾರರ ಕುರಿತು ಏನನ್ನೂ ಬರೆದಿಲ್ಲ. ನಿಮ್ಮ ಕಲ್ಪನಾ ಶಕ್ತಿ ಭಯಾನಕವಾಗಿದೆ.
  @ ಪ್ರಶಾಂತ,
  ಪ್ರಜಾವಾಣಿಯಲ್ಲಿ ಯಾವಾಗಲೂ ಧೋನಿಯ ಬಾಲ ಮಿಸ್ ಆಗಿರುತ್ತದೆ. (ಅದು ಅವರ ಸ್ಟೈಲ್ ಶೀಟ್) ಬಹುಶಃ ಸಂಪಾದಕೀಯ ಅದನ್ನು ಕೋಟ್ ಮಾಡುವಾಗ ಇಲ್ಲೂ ಮಿಸ್ ಆಗಿದೆ.

  ReplyDelete
 5. ಪ್ರಜಾವಾಣಿಯ ಕ್ರಿಕೆಟ್ ವರದಿಗಳ ಬಗ್ಗೆ 'ಸಂಪಾದಕೀಯ' ಬರೆದಿರುವುದು ಸರಿಯಾಗೇ ಇದೆ. ಇಂಥ ಬಾಲಿಶ ವರದಿಗಳು ಪ್ರಜಾವಾಣಿಯಂಥ ಪತ್ರಿಕೆಗೆ ಶೋಭೆ ತರುವಂಥದ್ದಲ್ಲ.

  ReplyDelete
 6. ಅದೇಕೋ, ನಂಗೆ ಈ ಬಾರಿಯ ವಿಶ್ವಕಪ್‌‌ ವಿಜಯವನ್ನು ಸಂಭ್ರಮಿಸಲು ಸಾಧ್ಯವಾಗಲೇ ಇಲ್ಲ. ಒಂದು ಪಂದ್ಯ ಗೆದ್ದ ಮಾತ್ರಕ್ಕೆ ಇಡೀ ದೇಶವೇ ಹಗಲು ರಾತ್ರಿ ಸಂಭ್ರಮಿಸುವಷ್ಟು ವಿಶೇಷವೇನೂ ನನ್ನ ಕಣ್ಣಿಗೆ ಬೀಳಲಿಲ್ಲ. ಕ್ರಿಕೆಟ್‌‌ನಲ್ಲಿ ವಿಶ್ವಕಪ್‌ಗಳನ್ನು ಗೆದ್ದ ಮಾತ್ರಕ್ಕೆ ಓಲಂಪಿಕ್ಸ್‌ನಲ್ಲಿನ ಹೀನಾಯ ಸೋಲಿನ ಅವಮಾನ ಕಡಿಮೆಯಾಗುವುದಿಲ್ಲ. ಹಾಕಿ ತಂಡದವರು ತಮಗೆ ಸಂಬಳವೇ ಸಿಗುತ್ತಿಲ್ಲ ಎಂದು ಕಣ್ಣೀರು ಇಡುವುದೂ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂ, ಅಲ್ಲಿ ಆಡಿ ಗೆದ್ದವರು ಬಿಸಿಸಿ ಎಂಬ ಶ್ರೀಮಂತ ಕ್ರೀಡಾ ಸಂಸ್ಥೆಯ ಸಿರಿವಂತ ನೌಕರರಾಗಿ ಕಾಣುತ್ತಾರೆಯೇ ವಿನಾ, ಅಖಂಡ ಭಾರತವನ್ನು ಪ್ರತಿನಿಧಿಸುವ ಕ್ರೀಡಾಳುಗಳು ಎಂದೆನಿಸುವುದಿಲ್ಲ. ಈಗ ಕ್ರಿಕೆಟ್‌ ಒಂದು ಕ್ರೀಡೆಯಾಗಿ ಉಳಿದಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನವನ್ನು ಒಡಲಲ್ಲಿಟ್ಟುಕೊಂಡಿರುವ ಒಂದು ಉದ್ಯಮ. ಒಂದು ಕ್ರೀಡಾ ತಂಡವಾಗಿ ಅವರು ಮಾಡಿರುವ ಸಾಧನೆಯನ್ನು ಒಪ್ಪಿಕೊಳ್ಳುತ್ತಲೇ, ಕ್ರಿಕೇಟ್‌ನ ಕ್ರೀಡಾ ವಸಹಾತುಶಾಹಿಯನ್ನು ವಿರೋಧಿಸಬೇಕಿದೆ.

  ReplyDelete
 7. ಕ್ರೀಡೆಗಳನ್ನು ಯುದ್ಧಕ್ಕೆ ಹೋಲಿಸುವ ಕ್ರೀಡಾಳುಗಳನ್ನು ಸೈನಿಕರಿಗೆ ಹೋಲಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಕ್ರೀಡೆ , ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಕಲೆಗಳನ್ನು ಅದರ ಪಾಡಿಗೆ ಬಿಟ್ಟು ಬಿಡಿ . ಇವುಗಳಿಗೆ ಗಡಿಗಳಿಲ್ಲ. ಇಂದಿಗೂ ಪಾಕಿಗಳಿಗೆ ಮನೋರಂಜನೆ ಕೊಡುತ್ತಿರುವುದು ನಮ್ಮ ಬಾಲಿವುಡ್ ಚಿತ್ರಗಳು. ರಾಜಕಾರಣ ಮತ್ತು ಪ್ರಚೋದನೆಗಾಗಿ ಕ್ರೀಡೆಗಳನ್ನು ಪರೋಕ್ಷವಾಗಿ ಬಳಸುವುದು ಖಂಡಿತ ತಪ್ಪು.

  ಅಂದ ಹಾಗೆ ಇವೆಲ್ಲದರ ನಡುವೆ ಪಾಕ್ ನಾಯಕ ಶಾಹಿದ್ ಆಫ್ರಿದಿ ತನ್ನ ದೇಶಕ್ಕೆ ಹೋಗಿ ಮತ್ತೆ ಭಾರತದ ವಿರುದ್ಧ ಕ್ಯಾತೆ ತೆಗೆದ್ದದ್ದು ಆತನ ಸಣ್ಣತನವನ್ನು ತೋರಿಸುತ್ತದೆ. "ಭಾರತದವರು ಮುಸಲ್ಮಾನರು ಮತ್ತು ಪಾಕಿಸ್ಥಾನಿಗಳಷ್ಟು ದೊಡ್ಡ ಹೃದಯದವರಲ್ಲ" ಎಂಬ ಆತನ ಹೇಳಿಕೆ ನೋಡಿದರೆ ತನ್ನ ಸೋಲನ್ನು ಮರೆಮಾಚಲು ಈ ರೀತಿಯ ಭಾರತ ವಿರೋಧಿ ಹೇಳಿಕೆ ಕೊಟ್ಟು ತನ್ನ ಪಾಕಿಸ್ತಾನಿ ರಾಜಕೀಯ ಬುದ್ಧಿಯನ್ನು ತೋರಿಸಿದ್ದಾನೆ ಎಂದೆನಿಸುತ್ತದೆ. ಭಾರತೀಯರ ಹೃದಯ ವೈಶಾಲ್ಯದ ಬಗ್ಗೆ ವಿಶ್ವಕ್ಕೆ ಈತನ ಸರ್ಟಿಫಿಕೆಟ್ ಅವಶ್ಯಕತೆಯಿಲ್ಲ . ಸರ್ವೋಜನ ಸುಖಿನೋ ಬವಂತು ಎಂದ ನಾಡು ನಮ್ಮದು . ಈ ಆಫ್ರಿದಿ ನಮ್ಮ ಅಡ್ವಾಣಿಯವರನ್ನು ಒಂದು ಉದಾಹರಣೆಯಾಗಿ ತೆಗೆದು ಕೊಂಡಿದ್ದರೂ ಬಹುಶ ಈ ಮಾತು ಆಡುತ್ತಿರಲಿಲ್ಲ ಅಂತ ಕಾಣುತ್ತೆ. ಅಪ್ಪಟ ಭಾರತ ವಿರೋಧಿಯಾಗಿದ್ದ , ಇಸ್ಲಾಂ ಮೂಲಭೂತವಾದಿ ಸಿದ್ಧಾಂತವನ್ನು ತನ್ನ ತಲೆಯಲ್ಲಿ ತುಂಬಿಕೊಂಡಿದ್ದ ದೇಶ ವಿಭಜಿಸಿದ ಜಿನ್ನಾನನ್ನು ನಮ್ಮ ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಜಾತ್ಯಾತೀತವಾದಿ ಎನ್ನಲಿಲ್ಲವೇ . ಈ ಬಗ್ಗೆ ಆಫ್ರಿದಿ ಏನೆನ್ನುತ್ತಾರೆ ? ಜನರು ಪ್ರಜ್ಞಾವಂತರಾದಷ್ಟೂ ಜನ ನಾಯಕರು ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ ...

  ReplyDelete
 8. its purely youthful write up not more than. only cynics raise comments. S, its a victory can be comparable to Kargil war.

  ReplyDelete
 9. ಬರಹಗಳು ರೆಟರಿಕ್ಸ್ ತುಂಬಿಕೊಂಡಿರದಿದ್ದರೆ ಅವು ಪತ್ರಿಕಾ ಬರಹಗಳೇ ಅಲ್ಲ ಎಂಬ ಯೋಚನೆಗಳ ಪರಿಣಾಮಗಳಿವು.ಪತ್ರಿಕೋದ್ಯಮದ ಭಾಷೆಯ ಬಗ್ಗೆ ಹಲವು ನೆಲೆಗಳಲ್ಲಿ ಗಂಭೀರವಾದ ಚರ್ಚೆ-ಚಿಂತನೆ ನಡೆಯಬೇಕಾಗಿದೆ.ಇಂಥ ಉನ್ಮಾದಕ ಬಿಲ್ದ್ ಅಪ್ ನೋಡಿ ಕೇಳಿ ಕೊನೆಗೆ ಪಾಕಿಸ್ತಾನ್ ಕ್ರಿಕೆಟ್ ತಂಡದ ನಾಯಕ ಭಾರತೀಯ ಮಾಧ್ಯಮಗಳ ಈ ಧೋರಣೆಯನ್ನು ನಕಾರಾತ್ಮಕ ಎಂದು ವ್ಯಾಖ್ಯಾನಿಸುವಂತಾಯಿತು.ಟಿವಿ ವಾರ್ತಾವಾಹಿನಿಗಳ ಭಾಷೆ ಇನ್ನೂ ಮಜವಾಗಿರುತ್ತದೆ.ಅದ್ಯಾವ್ನೋ ತೆಲಗಿ ಅನ್ನೋ ಕೇಡಿಯನ್ನ ವಾರ್ತಾ ವಾಚಕಿಯರು ಬಾಯ್ತುಂಬ ’ಛಾಪಾಕಾಗದ ಹಗರಣದ ರೂವಾರಿ’ಎನ್ನುತ್ತಿದ್ದರು!

  ReplyDelete
 10. ಪ್ರಜಾವಾಣಿಯಲ್ಲಿ ಅಕ್ಷರ ಲೇಖನ ಬಂದಾಗಲೇ ನಮಗೆಲ್ಲಾ ಆ ಪತ್ರಿಕೆ ಮೇಲಿದ್ದ ಪ್ರೀತಿ, ನಿರೀಕ್ಷೆ ಕಡಿಮೆಯಾಗಿವೆ. ಎಷ್ಟೋಂದು ದಶಕಗಳಿಂದ ಈ ನೆಲದ ತಳಸಮುದಾಯಗಳು ಈ ಪತ್ರಿಕೆಯನ್ನು ತಮ್ಮದೆಂಬಷ್ಟು ಪ್ರೀತಿಯಿಂದ ಕಂಡಿದ್ದಕ್ಕೆ ಈ ಪತ್ರಿಕೆ ಸರಿಯಾದ ಬಲುವಳಿ ನೀಡಿದೆ. ಅಕ್ಷರಗಳಿಗೂ ಚೆಡ್ಡಿ ತೊಡಿಸಹೊರಟಿರುವವರು ಪ್ರಜಾವಾಣಿಯಲ್ಲೂ ತೂರಿಕೊಂಡಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. 'ವಿಶ್ವಕಪ್ಪನ್ನು ಗೆದ್ದದ್ದು ಭಾರತವಲ್ಲ; ಭಾರತದ ಕ್ರಿಕೆಟ್ ತಂಡ' ನಮ್ಮಂಥವರಿಗೆ ಮಾಡಲು ತುಂಬಾ ಕೆಲಸಗಳಿವೆ.

  ReplyDelete
 11. ಉನ್ಮಾದಕ್ಕೆ ಸಿಲುಕಿ ಕ್ರಿಕೆಟ್ ಕುರಿತ ಸುದ್ದಿಯನ್ನು ಕಾರ್ಗಿಲ್ ಯುದ್ದಕ್ಕೆ ಹೋಲಿಸಿ ಬರೆಯುವ ಅಗತ್ಯ ಖಂಡಿತಾ ಇರಲಿಲ್ಲ.. ಆದರೂ ಪ್ರಜಾವಾಣಿಯಲ್ಲಿ ಇತ್ತೀಚೆಗೆ ಪದ್ಮರಾಜದಂಡಾವತಿ, ದಿನೇಶ್ ಅಮೀನ್ ಮಟ್ಟು, ಜಿಕೆ ಹೆಗಡೆ ಮತ್ತು ಕೆಲವು ಜಿಲ್ಲಾ ವರದಿಗಾರರು ಬಿಂದಾಸ್ ಶೈಲಿಯ ಬರಹ ಬರೆಯುತ್ತಿರುವುದು ಮತ್ತು ಅದು ಅತಿರೇಕದ ಪರಮಾವಧಿಯಂತೆ ಕಾಣುತ್ತಿರುವುದು ವಿಷಾಧದ ಸಂಗತಿಯೇ ಹೌದು

  ReplyDelete
 12. @ಅಶ್ರಫ್ :
  {ಕ್ರೀಡೆಗಳನ್ನು ಯುದ್ಧಕ್ಕೆ ಹೋಲಿಸುವ ಕ್ರೀಡಾಳುಗಳನ್ನು ಸೈನಿಕರಿಗೆ ಹೋಲಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ}
  ಮೂಲ ಲೇಖನದಲ್ಲಿ ಈ ಹೋಲಿಕೆ ಕ್ರೀಡಾ ಮನೋಭಾವದಲ್ಲಷ್ಟೇ ಇತ್ತು. ಈ ಹೋಲಿಕೆ ಒಂಥರಾ ಮೆಟಫರ್ ಇದ್ದ ಹಾಗೆ. ಸಂಪಾದಕೀಯ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡು ಏನೇನೋ ಅರ್ಥ ಕಲ್ಪಿಸಿಕೊಂಡಂತಿದೆ.

  ಉಳಿದಂತೆ ನಿಮ್ಮ ಮಾತು ಹೆಚ್ಚು ಅರ್ಥಗರ್ಭಿತವೂ ಸಮಂಜಸವೂ ಆಗಿದೆ.

  ಧನ್ಯವಾದ.

  ReplyDelete
 13. ಯಾರು ಏನೇ ಬರೆಯಲಿ, ಒಂದಂತೂ ನಿಜ. ಭಾರತದಲ್ಲಿ ಕ್ರಿಕೆಟ್ ಅತಿಯಾಗಿದೆ. ಪಂದ್ಯವನ್ನು ಯುದ್ಧಕ್ಕೆ ಹೋಲಿಸುವವರು, ಭಾರತದ ತಂಡವನ್ನು ಬೆಂಬಲಿಸದವರನ್ನು ದೇಶದ್ರೋಹಿಗಳೆಂದು ತೆಗಳುವುದು, ದೇಶಪ್ರೇಮವೆಂದರೆ ಕ್ರಿಕೆಟ್ ಅಂದುಕೊಂಡವರನಡುವೆ ಬೇರೆ ಕ್ರೀಡೆಗಳು ಬದುಕುವುದಂತೂ ಅನುಮಾನ.
  ಜನಸಾಮನ್ಯರು ತಮಗೇ ಕಿರೀಟ ಬಂದಂತೆ ಹುಚ್ಚೆದ್ದು ಕುಣಿದು, ಪಟಾಕಿ ಸುಟ್ಟರು, ರಾಜಕಾರಣಿಗಳು ಒಬ್ಬರಮೇಲೊಬ್ಬರಂತೆ ಗೆದ್ದ ತಂಡಕ್ಕೆ ಬಹುಮಾನವನ್ನು ಘೋಷಿಸಿ ತಮ್ಮ ದೇಶಪ್ರೇಮವನ್ನು ಮೆರೆದರು.
  ಇವೆಲ್ಲರ ನಡುವೆ ಕೋಟಿ, ಕೋಟಿ ಹಣಗಳಿಸಿದ ಆಟಗಾರರು, ಪ್ರಾಯೋಜಕರು... ಇವರೆಲ್ಲಾ ಗೆಲ್ಲುವ ಒಂದೊಂದು ರುಪಾಯಿಯೂ ತನ್ನ ಜೇಬಿನಿಂದ ನೇರವಾಗಿಯೋ, ಸುತ್ತಿ ಬಳಸಿಯೋ ಸೋರಿದ್ದು ಎಂಬುದನ್ನು ತಿಳಿದೋ.. ತಿಳಿಯದೆಯೋ ಕುಳಿತ ಶ್ರೀಸಾಮಾನ್ಯ....

  ReplyDelete
 14. "ತೊಂಡೆಯಂಥಾ ತುಟಿ" ಎಂದರೆ ತುಟಿಯ ಬದಲಾಗಿ ತೊಂಡೆ ಹಣ್ಣು ಇದೆ ಎಂದಾಯಿತೇ? ಇಲ್ಲವೆಂದಾದಲ್ಲಿ "ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು" ಎಂದರೆ ಭಾರತದ ಟೀಮ್ ಪಾಕಿಸ್ಥಾನದ ಟೀಮಿನ ಜೊತೆ ಕಾರ್ಗಿಲ್ ಯುಧ್ಧ ಮಾಡಿದಂತೆ ಹೇಗೆ ಆಗುತ್ತದೆ?

  ಮೆಟಫರ್ ನ ಕನಿಷ್ಟ ಜ್ನಾನ ಇಲ್ಲದವರಿಂದ ಬರೆದ ಬರಹ ಇದು.

  ReplyDelete
 15. ಗಿರಿ : ಕ್ರಿಕೆಟ್ ನ ಹುಚ್ಚು ಅತಿಯಾಗಿರುವುದು ನಿಜ. ಆದರೆ ಈ ಬರಹ ಆ ಹುಚ್ಚಿನ ಬಗ್ಗೆ ಅಲ್ಲ. ಇದು ಕಾರ್ಗಿಲ್ ಯುಧ್ಧದ ಬಗ್ಗೆ.

  ReplyDelete
 16. @ Mahesh prasad : Yes there is nothing wrong in using "metaphor" or "simile" in any story. our electronic medias were exaggerating the issue and they called the cricket match itself as war or great war. but prajavaani article was different from it. those lines are really a simile, a kind of metaphor. sampadakiya "failed to perceive the figurative expression of the line!." I guess they really do not know anything about metaphor or they are such a poor readers who are not able to perceive the "figure of speech" of the lines.

  ReplyDelete
 17. ಮೇಲಿನ ಕಾಮೆಂಟ್ ಬಗ್ಗೆ : ನನ್ನದೂ ಅದೇ ಅಭಿಪ್ರಾಯ. ಕ್ರಿಕೆಟ್ ಅತಿರೇಕವನ್ನು ಯಾರೂ ಇಲ್ಲವೆಂದಾಗಲೀ ಅಥವ ಸಮರ್ಥನೆಯನ್ನಾಗಲೀ ಮಾಡುತ್ತಿಲ್ಲ. ಅದರ ಹುಚ್ಚಿನಲ್ಲಿ ಬೇರೆ ಕ್ರಿಡೆಗಳು ಮಸುಕಾಗಿರುವುದೂ ನಿಜ. ಆದರೆ ಈ ಬರಹ ಮಾತ್ರ ಬೇರೆ ಇನ್ನೇನನ್ನೋ ಹೇಳಹೊರಟಿದೆ.

  ReplyDelete
 18. ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್ನು ಸಮರ್ಥಿಸಿದ್ದಾರಲ್ಲಾ.. ಅವರು ಹೇಳಲಿ ಹೌದೇ.. ಕ್ರಿಕೆಟ್ಟನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವುದು ದೊಡ್ಡ ಜ್ಞಾನವೇ..? ಕನ್ನಡದಲ್ಲಿ ಬೇರೆ ಮೆಟಫರ್ ಗಳು ಸಿಗಲಾರವೇ..? ಆಹಾ ಎಂಥಾ ದೇಶಪ್ರೇಮಿಗಳಿವರು ಧನ್ಯೆ ಭಾರತಾಂಭೆ ಧನ್ಯೆ...

  ReplyDelete
 19. ಮಾ.ಸು.ಮಂಜುನಾಥApril 6, 2011 at 11:15 PM

  ಕ್ರೀಡೆಯನ್ನ ಯುದ್ಧಕ್ಕೆ ಹೋಲಿಸುವುದರ ಬಾಲಿಶತನವನ್ನ ನೋಡುವುದರ ಬದಲಾಗಿ ವ್ಯಾಕರಣ ಶುದ್ಧಿ ಬಗ್ಗೆ ಪ್ರಸ್ತಾಪ ಅಗತ್ಯವಿತ್ತೆ.

  ReplyDelete
 20. ನನಗನಿಸುತ್ತದೆ, ಆಫ್ರಿದಿ ಹೇಳಿದ್ದು ಸರಿಯಾಗಿಯೇ ಇದೆ. ಆಫ್ರಿದಿ ಮತ್ತು ಅವನ ಬಳಗ ಅತ್ಯಂತ ಸಂಯಮದಿಂದ ಆಟವನ್ನು ಸ್ವೀಕರಿಸಿತ್ತು. ಸೋಲು ಗೆಲುವನ್ನು ಅವರು ಸ್ವೀಕರಿಸಿದ ರೀತಿ ಮೆಚ್ಚುವಂತಿತ್ತು. ಗೀಲಾನಿ ಕೂಡ ಭಾರತಕ್ಕೆ ಆಗಮಿಸಿದ್ದು, ತಂಡ ಸೋಲುತ್ತದೆ ಎಂದು ತಿಳಿದೂ ಕೊನೆಯವರೆಗೆ ಪಂದ್ಯವನ್ನು ವೀಕ್ಷಿಸಿದ್ದು, ಇವೆಲ್ಲವೂ ಆ ದೇಶದ ಸೌಜನ್ಯವನ್ನು ಹೇಳುತ್ತದೆ. ಇದೆ ಸಂದರ್ಭದಲ್ಲಿ ಭಾರತದ ಮಿಡಿಯಾ ಪಾಕ್ ಎನ್ನುವ ಅತಿಥಿ ತಂಡವನ್ನು ಶತ್ರುವೆಮ್ಬಂತೆ ವರದಿಯಲ್ಲಿ ಬಿಂಭಿಸಿ ಬರೆದದ್ದು...ಬಿಜೆಪಿ ಶಿವಸೆನೆಯಂತಹ ನಾಯಕರ ಹೇಳಿಕೆ ಆಫ್ರಿದಿ ಮನ ನೋಯಿಸಿರಬಹುದು. ಅಂದ ಹಾಗೆ...ಇದೆ ಆಫ್ರಿದಿ...ಫೈನಲ್ನಲ್ಲಿ ಭಾರತ ಗೆಲ್ಲಲಿ ಎಂದು ಹೇಳಿಕೆ ನೀಡಿರೂದನ್ನು ನಾವು ಮರೆಯಬಾರದು. ಅವನ ದೇಶದಲ್ಲಿ ನಿಂತು ಭಾರತಕ್ಕೆ ಶುಭಾಷಯ ಹೇಳಿರೋದು ಸಣ್ಣ ವಿಷಯವಲ್ಲ.. ಪಾಕಿಸ್ತಾನಿಯರು ಸಕಲ ದುಷ್ಟ ಗುಣ ಹೊಂದಿದವರು, ನಾವು ಭಾರತೀಯರು ದೇವರ ಅಪರವತಾರಾ ಎಂದು ಭಾವಿಸಿ, ಭ್ರಮಿಸಿ ಹೇಳಿಕೆ ನೀಡೂದು ಹಾಸ್ಯಾಸ್ಪದ.-ಸಮೀರ್

  ReplyDelete
 21. ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್‌ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು...


  "ವೀರಾವೇಶ" is the keyword of this sentence. it is no where said that that cricket match is Kargil war oR it is like kargil war. note this.

  ವೀರಾವೇಶ of Indian army is referred to explain the ವೀರಾವೇಶ of cricket team or sports spirit. In otherwords ವೀರಾವೇಶ of cricket team is compared to ವೀರಾವೇಶ of those days Indian army. An example of metaphoric simile. If sampaadakiya keeps on writing like this,without any valid reason, it can be considered as,: "ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿದಂತೆ!."

  ReplyDelete
 22. @ ಮಹೇಶ್ ಪ್ರಸಾದ ನೀರ್ಕಜೆ,
  ಮೆಟಫರ್ ಬಳಕೆ ತಪ್ಪೇನಲ್ಲ. ಆದರೆ ಯಾವುದನ್ನು ಎಲ್ಲಿ ಬಳಸಬೇಕು ಅನ್ನುವ ವಿವೇಕ ಇರಬೇಕು. ಚಿನ್ನ, ಅಮೇಧ್ಯ ಎರಡರ ಬಣ್ಣವೂ ಒಂದೇ. ಚಿನ್ನವನ್ನು ಮೆಟಫರ್ ಆಗಿ ಬಳಸುವ ಕಡೆ ಅಮೇಧ್ಯವನ್ನು ಬಳಸಿದರೆ? ನಿಮಗೆ ಅದೂ ಸರಿಯೆನ್ನಿಸಿದರೆ ಯಾರು ಏನು ಮಾಡಲು ಸಾಧ್ಯ?

  ReplyDelete
 23. ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್ನು ಸಮರ್ಥಿಸಿದ್ದಾರಲ್ಲಾ.. ಅವರು ಹೇಳಲಿ ಹೌದೇ.. ಕ್ರಿಕೆಟ್ಟನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವುದು ದೊಡ್ಡ ಜ್ಞಾನವೇ..? ಕನ್ನಡದಲ್ಲಿ ಬೇರೆ ಮೆಟಫರ್ ಗಳು ಸಿಗಲಾರವೇ..? ಆಹಾ ಎಂಥಾ ದೇಶಪ್ರೇಮಿಗಳಿವರು ಧನ್ಯೆ ಭಾರತಾಂಭೆ ಧನ್ಯೆ...

  @Hulikunte Murthy: you could come up with some points, and make your argument healthier. It is the term "ವೀರಾವೇಶ" which has been referred there. come up with more points, not with discursive talk .

  ReplyDelete
 24. ಅನಾನಿಮಸ್ ಹೆಸರಲಿ ಕಾಮೆಂಟಿಸುವ ವೀರರಿಗೆ ನನ್ನದೊಂದು ಧಿಕ್ಕಾರವಿರಲಿ.

  ReplyDelete
 25. ಮಾ.ಸು.ಮಂಜುನಾಥ said...

  ಕ್ರೀಡೆಯನ್ನ ಯುದ್ಧಕ್ಕೆ ಹೋಲಿಸುವುದರ ಬಾಲಿಶತನವನ್ನ ನೋಡುವುದರ ಬದಲಾಗಿ ವ್ಯಾಕರಣ ಶುದ್ಧಿ ಬಗ್ಗೆ ಪ್ರಸ್ತಾಪ ಅಗತ್ಯವಿತ್ತೆ.

  @ ma su manjunath: hello sir, Here we are not talking about grammar correction!. metaphors, simile,hyperbole, personification and other kind of figures of speech are all part of language. they whelm naturally in any language. As the term says they are figurative expression of speech. Grammar nowhere comes here.

  ReplyDelete
 26. ಇಲ್ಲಿ ಒಂದಂಶ ಗಮನಿಸಬೇಕು.
  ಕ್ರಿಕೆಟ್ ಆಟಗಾರರನ್ನು ಸ್ವಾತಂತ್ರ್ಯ ಯೋಧರಂತೆ ಚಿತ್ರಿಸಿದ್ದು ಟಿ.ವಿ. ಚಾನೆಲ್'ಗಳು. ನೂರಾರು ದೇಶಗಳನ್ನು ಒಳಗೊಂಡ ಈ ಪ್ರಪಂಚದಲ್ಲಿ ಕೆಲವೇ ದೇಶಗಳು ಪಾಲ್ಗೊಳ್ಳುವ ಟೂರ್ನಿ ವಿಶ್ವಕಪ್ ಹೇಗಾಗುತ್ತದೆ?
  ಇನ್ನು ಆಟಗಾರರೋ ಹಣಕ್ಕಾಗಿ ಬಾಯಿ ಬಿಡುವಂಥವರು. ಒಂದು ವೇಳೆ ಮೈಮೇಲೆ ಜಾಹೀರಾತು ಬರೆಸಿ, ಬೆತ್ತಲೆಯಾಗಿ ಕ್ರಿಕೆಟ್ ಆಡಿರಿ ಎಂದರೂ ಆಡುವವರೇ ಅವರು.
  ಸೆಮಿಫೈನಲ್, ಫೈನಲ್ ಪಂದ್ಯದ ಹಿಂದಿನ ದಿನದಿಂದಲೇ ಟಿವಿಗಳಲ್ಲಿ ಪ್ಯಾನೆಲ್ ಡಿಸ್ಕಶನ್ ಆರಂಭ. ಸಾಲದ್ದಕ್ಕೆ ಸಿನಿಮಾ ತಾರೆಯರು ಬೇರೆ! ಟಾಸ್ ಗೆದ್ದರೂ ಬ್ರೇಕಿಂಗ್ ನ್ಯೂಸ್; ಔಟ್ ಆದರೂ ಬ್ರೇಕಿಂಗ್ ನ್ಯೂಸ್. 4/6 ಹೊಡೆದರೂ ಬ್ರೇಕಿಂಗ್ ನ್ಯೂಸ್. ಬೌದ್ಧಿಕ ದಿವಾಳಿತನಕ್ಕೆ ಹೇಳಿ ಮಾಡಿಸಿದ ಹೆಸರು ಈ ಟಿವಿ ಚಾನೆಲ್'ಗಳು.
  ಇದರಿಂದ ಸಾಮಾನ್ಯ ಜನತೆಗೆ ಏನುಪಯೋಗ? ಈ ಪ್ರಶ್ನೆ ಸಿನಿಕತನದ್ದು ಎನಿಸಬಹುದು. ಆದರೆ ವಾಸ್ತವದತ್ತ ಗಮನ ಹರಿಸಬೇಕಲ್ಲವೇ?
  ಕೊನೆಯದಾಗಿ: ಮುಖ್ಯಮಂತ್ರಿಗಳು ವಿಜೇತ ತಂಡಕ್ಕೆ ಸೈಟ್ ಕೊಡುವುದಾಗಿ ಘೋಷಿಸಿದರು. ಎಲ್ಲರೂ ಅದನ್ನು ಬರೆದಿದ್ದೇ ಬರೆದಿದ್ದು. ಆದರೆ ಕನ್ನಡ ಪ್ರಭ ಮಾತ್ರ ಪದಕ ಪಡೆದವರಿಗೆ ಈವರೆಗೆ ಸಿಗದ ಸೈಟ್ ಬಗ್ಗೆ ವರದಿ ಮಾಡಿದ್ದು ಸ್ತುತ್ವಾರ್ಹ.
  - ಪುರುಷೋತ್ತಮ

  ReplyDelete
 27. what afridi told abt Indian media is 100% right. y can't u it as challenge n review ur credibilty.
  all agree that Indian media are corrupt and exaggerate the things. But, when Afridi said it mattered u the most. thats why afridi told Indians do not have large heart

  ReplyDelete
 28. @ Ashraf Manjrabad.. dont show ur immaturity commenting like this. were u there when Jinna was there? don't believe what u read in news papers or in primary schools

  ReplyDelete
 29. many electronic media telecasted anti pakistan campaign during the match fuelling communalism in the minds of Indian people. Don't u agree?

  i agree what Afridi said abt indian media, third country intervention in both country's affair etc etc

  ReplyDelete
 30. on April 3, afridi had also flayed Pak media for a question. Thats why he clarified why u r against India n all? He is sensible person

  ReplyDelete
 31. If you fight here, there is nothing going to happen... So why don't you people use your energy for other good works?

  ReplyDelete
 32. Gopala hegde is a poor writer. Why do u people scratch ur head more on his writing.

  ReplyDelete
 33. ನಿಮಗೆ ಪ್ರಜಾವಾಣಿ ಮೇಲೆ ಏನೋ ಹಳೆಯ ಕೋಪ ಇದ್ದಂತಿದೆ. ಆ ಪತ್ರಿಕೆಯಲ್ಲಿ ಬಂದ ಎಲ್ಲದಕ್ಕೂ ಏನಾದರೊಂದು ತಕರಾರು ತೆಗೆಯುತ್ತೀರಿ. ಪತ್ರಿಕೆಯೊಂದರಲ್ಲಿ ನೆಟ್ಟಗೆ ಕೆಲಸ ಮಾಡಲಾಗದ ಗುಂಪು ನಿಮ್ಮದಿರಬಹುದು ಎಂಬ ಸಂಶಯಗಳನ್ನು ಓದುಗರಲ್ಲಿ ಹುಟ್ಟು ಹಾಕುತ್ತಿದ್ದೀರಿ.

  ReplyDelete
 34. ಸಂಶಯಗಳನ್ನು ಓದುಗರಲ್ಲಿ ಹುಟ್ಟು ಹಾಕುತ್ತಿದ್ದೀರಿ..nO.not at all only for you anonymous swayamsevak of MG road

  ReplyDelete