Saturday, June 11, 2011

ಕನ್ನಡ ಕಲಿಕೆಯೂ, ಬೆಂಗಳೂರು ಮಿರರ್ ಎಂಬ ಪತ್ರಿಕೆಯೂ....


ಸೋಷಿಯಲ್ ನೆಟ್ ವರ್ಕ್ ಸೈಟುಗಳಲ್ಲಿ ಇರುವ ಅತಿಯಾದ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿ ಬಳಸಿಕೊಳ್ಳುವವರ ಸಂಖ್ಯೆಗೇನು ಕೊರತೆಯಿಲ್ಲ. ಕೊಳಕರು ಇಲ್ಲಿ ಸುಲಭವಾಗಿ ಬಯಲಾಗುತ್ತಾರೆ. ಯಾಕೆಂದರೆ ಕೊಳಕನ್ನು ಹಾಗೆ ಮುಚ್ಚಿಟ್ಟುಕೊಳ್ಳುವುದು, ಹತ್ತಿಕ್ಕಿಕೊಳ್ಳುವುದು ಕಷ್ಟದ ಕೆಲಸ. ಬಾಬಾ ರಾಮದೇವರ ಮ್ಯಾಚ್ ಫಿಕ್ಸಿಂಗ್ ಸತ್ಯಾಗ್ರಹದ ಕುರಿತು ಬರೆದ ನಂತರ ನಮ್ಮ ಫೇಸ್‌ಬುಕ್‌ನಲ್ಲೂ ಇಂಥವರು ಕೊಳಕರು ತಮ್ಮ ಹುಳುಕುಗಳನ್ನೆಲ್ಲ ಪ್ರದರ್ಶಿಸಿದರು. ಅನಿವಾರ್ಯವಾಗಿ ಕನಿಷ್ಠ ೧೦ ಜನರನ್ನು ಬ್ಲಾಕ್ ಮಾಡಿ ದೂರವಿಡಬೇಕಾಯಿತು.

ಯಾಕೆ ಈ ಪ್ರಸ್ತಾಪ ಮಾಡಬೇಕಾಯಿತು ಎಂದರೆ, ಮೂಲತಃ ಚಂಡಿಗಢದವನಾಗಿದ್ದು ಸದ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಾಬಿನ್ ಚುಗ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಕನ್ನಡ ಕಲಿಕೆ ಕಡ್ಡಾಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ಬರೆದುಕೊಂಡು ಫಜೀತಿಗೆ ಸಿಲುಕಿದ್ದಾನೆ.

ಇದನ್ನು ಶುರು ಮಾಡಿದವರು ಬೆಂಗಳೂರು ಮಿರರ್ ಎಂಬ ಪತ್ರಿಕೆಯೋರು. ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಪರಭಾಷಿಗರು ಕಡ್ಡಾಯವಾಗಿ ಕನ್ನಡ ಕಲಿತುಕೊಳ್ಳುವಂಥ ಕಾನೂನೊಂದನ್ನು ರೂಪಿಸಬೇಕು ಎಂಬ ಅಂಶವೂ ವರದಿಯಲ್ಲಿತ್ತು. ಈ ವರದಿಯನ್ನು ಕುರಿತಾಗಿ ಮಿರರ್ ವರದಿಯೊಂದನ್ನು ಪ್ರಕಟಿಸಿತು.

ಇಂಗ್ಲಿಷ್ ಪತ್ರಿಕೆಗಳಿಗೆ ಪರಭಾಷಾ ಓದುಗರನ್ನು ಓಲೈಸುವ ವಿಚಿತ್ರ ಖಾಯಿಲೆ ಮೊದಲಿನಿಂದಲೂ ಇದೆ. ಪರಭಾಷಿಗರನ್ನು ಓಲೈಸಲು ಕನ್ನಡಿಗರನ್ನು ಹಣಿಯುವ ಅವಕಾಶವನ್ನು ಈ ಪತ್ರಿಕೆಗಳು ಯಾವತ್ತೂ ಕಳೆದುಕೊಂಡೇ ಇಲ್ಲ. ಟೈಮ್ಸ್ ಆಫ್ ಇಂಡಿಯಾ ಮೊದಲಿನಿಂದಲೂ ಇದನ್ನು ಮಾಡುತ್ತಲೇ ಬಂದಿದೆ. ಹಿರಿಯಣ್ಣನ ಚಾಳಿ ಮನೆ ಮಕ್ಕಳಿಗೆಲ್ಲ ಬಂದಿದೆ. ಮಿರರ್ ಕೂಡ ಅದನ್ನೇ ಮಾಡಲು ಹೋಗಿದೆ.

ವರದಿಯ ಇತರ ಅಂಶಗಳಿಗಿಂತ ಮಿರರ್ ಹೆಚ್ಚು ಒತ್ತು ನೀಡಿರುವುದು ಈ ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ. ಈ ಮೂಲಕ ಬೆಂಗಳೂರಿನಲ್ಲಿರುವ ಪರಭಾಷಿಗರನ್ನು ಪ್ರಚೋದಿಸುವ ಉದ್ದೇಶ ಮಿರರ್‌ಗೆ ಇತ್ತಾ, ಗೊತ್ತಿಲ್ಲ. ಆದರೆ ಬೆಂಗಳೂರು ಮಿರರ್‌ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾಗಿರುವ ಕಮೆಂಟುಗಳನ್ನು ನೋಡಿದರೆ ಈ ಉದ್ದೇಶ ಇದ್ದಿರಬೇಕು ಎಂಬುದು ಸ್ಪಷ್ಟವಾಗಿದೆ. ಕೆಲವು ಕನ್ನಡ ಪರ ಅಂತರ್ಜಾಲಿಗರ ಪ್ರಕಾರ ಕನ್ನಡಿಗರನ್ನು ನಿಂದಿಸುವ ಕಮೆಂಟುಗಳನ್ನು ಹಾಗೆ ಬಿಟ್ಟಿರುವ ಪತ್ರಿಕೆ, ಕನ್ನಡಿಗರ ಪ್ರತಿಕ್ರಿಯೆಗಳಿಗೆ ಕತ್ತರಿ ಆಡಿಸಿದೆ.

ಅಲ್ಲಿ ಕಮೆಂಟು ಮಾಡಿರುವವರು, ಮಿರರ್‌ನಂಥ ಪತ್ರಿಕೆಗಳ ಪತ್ರಕರ್ತರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಹೊರರಾಜ್ಯಗಳಿಂದ ಇಲ್ಲಿ ಬಂದು ನೆಲೆ ನಿಂತವರು ಕನ್ನಡ ಭಾಷೆ ಕಲಿತು ಇಲ್ಲಿಯವರೊಂದಿಗೆ ಬೆರೆಯಬೇಕು ಎಂದು ಅಪೇಕ್ಷಿಸುವುದು ಅಪರಾಧವೂ ಅಲ್ಲ, ಅನೈತಿಕವೂ ಅಲ್ಲ. ಭಾರತ ಒಂದು ಗಣರಾಜ್ಯ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಯಾರು ಬೇಕಾದರೂ ಎಲ್ಲಾದರೂ ಬದುಕಬಹುದು ಎಂಬುದು ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯ. ಯಾರು, ಎಲ್ಲಿ, ಹೇಗೆ ಬೇಕಾದರೂ ಬದುಕಬಹುದು ಎಂದು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿಲ್ಲ.

ಕನ್ನಡಿಗರಿಗೆ ಅಗತ್ಯವಿಲ್ಲದ ಹಿಂದಿ ಭಾಷೆಯನ್ನು ಕನ್ನಡಿಗರು ಕಡ್ಡಾಯವಾಗಿ ಕಲಿಯುತ್ತಿದ್ದಾರೆ. ಯಾವುದೋ ರಾಜ್ಯದ ಒಂದು ಭಾಷೆಯನ್ನು ನಾವು ತ್ರಿಭಾಷಾ ಸೂತ್ರ ಒಪ್ಪಿಕೊಂಡ ಒಂದೇ ಕಾರಣಕ್ಕೆ ಕಡ್ಡಾಯವಾಗಿ ಕಲಿಯುತ್ತಿರುವಾಗ, ಹೊರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯಲಿ ಎಂದರೆ ಯಾಕೆ ಇಂಗ್ಲಿಷ್ ಪತ್ರಿಕೆಗಳು ಎಗರಾಡುತ್ತವೆ? ಕನ್ನಡಿಗರ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಇದೇ ಇಂಗ್ಲಿಷ್ ಪತ್ರಿಕೆಗಳು ಯಾಕೆ ಪ್ರಶ್ನಿಸುವುದಿಲ್ಲ? ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಏನನ್ನೇ ಮಾಡಿದರೂ ಇಂಗ್ಲಿಷ್ ಪತ್ರಿಕೆಗಳಿಗೆ ಅದು ಅಪ್ರಿಯವಾಗಿ ಕಾಣುತ್ತದೆ. ಯಾಕೆ ಇಂಥ ನಿಲುವು? ಏನಿದರ ಮರ್ಮ.

ಕನ್ನಡಿಗರು ಉದಾರವಾಗಿ ಹೊರಗಿನಿಂದ ಬಂದವರ ಭಾಷೆಗಳನ್ನು ಕಲಿಯುತ್ತಿರುವಾಗ, ಹೊರಗಿನಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿಯಬಾರದೇ? ತಮಿಳುನಾಡಿನಂಥ ರಾಜ್ಯಗಳಲ್ಲೂ ಉತ್ತರ ಭಾರತೀಯರು ತಮಿಳು ಕಲಿಯದೆ ಬದುಕಬಲ್ಲರೆ? ನಿಜ, ಭಾಷೆಯನ್ನು ಯಾರ ಮೇಲೂ ಹೇರಲಾಗದು. ಕಡ್ಡಾಯಗೊಳಿಸುವುದರಿಂದ ಸಮಸ್ಯೆ ಬಗೆ ಹರಿದೀತೆಂದೂ ಸಹ ಹೇಳುವಂತಿಲ್ಲ. ಆದರೆ ಈಗ ಇಂಗ್ಲಿಷ್ ಮೀಡಿಯಾ ಎಬ್ಬಿಸಿರುವ ಹುಯಿಲು ಪರಭಾಷಿಗರು ಕನ್ನಡ ಕಲಿಯಬೇಕೆಂದು ಹೇಳಲೇಬಾರದೆಂದು ನಿರ್ದೇಶಿಸುವಂತಿದೆ.

ಇಂಥ ಸಂದರ್ಭದಲ್ಲಿ ರಾಬಿನ್ ಚುಗ್ ತರಹದವರು ಎದ್ದು ನಿಲ್ಲುತ್ತಾರೆ. ಹಿಂದೆ ಸಾಸ್ಕೆನ್ ಎಂಬ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕನ್ನಡವನ್ನು ಗೇಲಿ ಮಾಡುವ ನಕಲಿ ರಾಷ್ಟ್ರಗೀತೆ ಬರೆದು, ಅದನ್ನು ಕನ್ನಡಿಗರಿಂದ ಹಾಡಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ವಿದೇಶೀಯನೊಬ್ಬ ಕನ್ನಡಿಗರ ಪ್ರತಿಭಟನೆಯಿಂದ ವಾಪಾಸು ಅವನ ದೇಶಕ್ಕೆ ಹೋಗಬೇಕಾಯಿತು. ಕನ್ನಡಿಗರ ಹಾಗು ದಕ್ಷಿಣ ಭಾರತೀಯರ ಆಚಾರ-ವಿಚಾರಗಳ ಕುರಿತು ಗೇಲಿ ಮಾಡಿದ್ದ ಇನ್ನೊಬ್ಬ ಟೆಕಿಯೊಬ್ಬ ತನ್ನ ರೇಸಿಸ್ಟ್ ನಿಲುವುಗಳಿಗಾಗಿ ಹೊರಹೋಗಬೇಕಾಯಿತು.

ಈಗ ರಾಬಿನ್ ಚುಗ್ ಸರದಿ.

31 comments:

  1. ಕನ್ನಡೇತರರು ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕು ಎನ್ನುವ ಕನ್ನಡ ಅಭಿವೃದ್ದಿ ಪ್ರಾದಿಕಾರದ ಹೇಳಿಕೆಗೆ FUCKOFF ಎಂದು ಫೇಸ್-ಬುಕ್ ನಲ್ಲಿ ಕನ್ನಡದ ಮೇಲಿರುವ ಅಸಡ್ಡೆಯನ್ನು ತೋರಿಸುವ ಬೆಂಗಳೂರಿನ ಹಾಲಿಡೇ ಐಕ್ಯು ಸಂಸ್ಥೆಯ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ವಲಸೆಗಾರ ರಾಬಿನ್ ಚುಗ್ಹ್ ನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಬೆಂಗಳೂರಿನ ಕನ್ನಡಿಗರಿಗೆ FUCKOFF ಎಂದು ಹೇಳಿದರೆ ಆಶ್ಚರ್ಯವೇನಿಲ್ಲ.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  2. If Sampadakeeya would not have posted it in its blog its would have been a closed affair between Robin Chugg and his friends in Facebook.

    Sampadakeeya also wants to fry its nuts in the heat created by Robin.

    And in what way its different from News Channels sensationalizing the news to increase its viewers and sampadakeeya bringing one persons personal Facebook page to public domain and making public angry against one individual?
    You can see the number "Freinds" jumping in facebook everytime Sampadakeeya takes up something heated topic like Dubbing in Kannada film industry!

    ReplyDelete
  3. ನವೀನ್ ರವರೇ,
    ನಿಮ್ಮ ಸಮಸ್ಯೆ ಏನು ಅಂತ ಅರ್ಥ ಆಗಲಿಲ್ಲ. ರಾಬಿನ್ ಚುಗ್ ಎಂಬ ವ್ಯಕ್ತಿಯಾಗಲೀ, ಅವನ ಕಮೆಂಟ್ ಆಗಲಿ ನಮಗೆ ಮುಖ್ಯವಲ್ಲ. ಹೊರ ರಾಜ್ಯದವರು ಕನ್ನಡಿಗರ ಮತ್ತು ಕನ್ನಡ ಭಾಷೆಯ ಕುರಿತಾಗಿ ತಾಳುತ್ತಿರುವ ಅಸಹನೆಯ ನಿಲುವುಗಳನ್ನು ವಿವರಿಸಲು ಆತ ಒಂದು ಉದಾಹರಣೆ ಮಾತ್ರ. ನಾವು ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿರುವುದು ಇಂಗ್ಲಿಷ್ ಪತ್ರಿಕೆಗಳ ಕನ್ನಡ ವಿರೋಧಿ ನಿಲುವನ್ನು. ಅದು ವಿಸ್ತ್ರತವಾಗಿ ಚರ್ಚೆ ಆಗಬೇಕಿರುವ ವಿಷಯ.
    ನಾವು ನಮ್ಮ ಬ್ಲಾಗ್ ನಲ್ಲಿ ನೀವು ಹೇಳುವ ಹೀಟೆಡ್ ಟಾಪಿಕ್ ಗಳನ್ನು ಪ್ರಸ್ತಾಪಿಸಬಾರದು ಎಂಬುದು ನಿಮ್ಮ ನಿಲುವೇ?

    ReplyDelete
  4. sampadakeeya, it is nice to see that u have written a article on this topic, its not a one individual who say something stupid like that, there are many, but to teach a lesson robin has to be punished. I hope sampadakeeya would do this job, alerting the concerned persons,if guy like robin can put comments on public site and left by doing nothing to him, then every one will start to scold kannada,
    Jai karnataka mathe (nana computer nalli kannada illa adhake englishnalli barede

    ReplyDelete
  5. ಇದೆ ತಾರತಮ್ಯದ ಧೊರಣೆಯಿಂದಾಗಿ ನಾನು ಟೈಮಸ್ ಆಫ಼್ ಇಂಡಿಯಾ ಪತ್ರಿಕೆಯನ್ನು ತರಿಸುವುದನ್ನೆ ನಿಲ್ಲಿಸಿಬಿಟ್ಟೆ. ಇವರಿಗೆ ಪರಭಾಷೆಯವರನ್ನು ಮೆಚ್ಚಿಸುವುದೆ ದ್ಯೆಯವಾಗಿದೆ

    --Girish

    ReplyDelete
  6. good job Sampadakeeya....

    I think "KALIKE" word doesnot have any meaning in kannada..."KALIYUVIKE" is the correct word. Please do verify... In every medium it is used frequently.. Please verify

    ReplyDelete
  7. ವಿಶ್ಲೇಷಣೆ ಚೆನ್ನಾಗಿದ್ದು..

    ReplyDelete
  8. Dear Sampadakeeya Team

    Latest Status : Migrant software engineer Robin Chugh of Holidayiq has removed the post "‘Non-Kannadigas will have to learn the language in a year’, News - City - Bangalore Mirror,Bangalore" from his face book .

    Further posted as shown below:
    Robin Chugh: I apologize if by any mistake I have shown disrespect to Kannada Language. My intentions were not to hurt anybody's sentiments or anything of that sort. I have always loved Bangalore and its language, people and culture and keep loving it.

    --------------
    P.RAMACHANDRA,
    Assistant Resident Engineer
    Ras Laffan New Ship Repair Yard, Marine Works
    COWI A/S
    P.O. Box 23800, Doha - Qatar

    ReplyDelete
  9. ಪ್ರಶಾಂತ_ಸೊರಟೂರJune 11, 2011 at 7:53 PM

    ಇಂಗ್ಲೀಷ ಪತ್ರಿಕೆಗಳು ಈ ರೀತಿ "ಕನ್ನಡ" ವಿರೋಧಿ ಲೇಖನಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ನಿಲ್ಲಿಸಬೇಕು.
    ಇನ್ನು, ಇತ್ತೀಚಿಗೆ ಕನ್ನಡ ದಿನಪತ್ರಿಕೆಗಳೂ ಇಂಗ್ಲೀಷನ್ನು ಹಿರಿತನದಲ್ಲಿ ಕೂರಿಸಿ, ಬರವಣಿಗೆಯ ಪ್ರತಿ ಹಂತದಲ್ಲೂ ಕನ್ನಡಕ್ಕೆ ಇಂಗ್ಲೀಷ್ ಬೆರಿಸುತ್ತಾ ಇರೋದು, ನೋವಿನ ಸಂಗತಿ.
    times of India ನಡೆಸುತ್ತಿರುವ ವಿಜಯ ಕರ್ನಾಟಕದ ಪುರವಣಿಗೆಗಳ ಹೆಸರು ಗಮನಿಸಿದರೆ ಸಾಕು ಇದರರ್ಥವಾಗುತ್ತೆ.

    ಈ ಕಡೆ ಗಮನಸೆಳೆದದಕ್ಕೆ "ಸಂಪಾದಕೀಯ"ಕ್ಕೆ ಧನ್ಯವಾದಗಳು.


    ವಂದನೆಗಳು,
    ಪ್ರಶಾಂತ ಸೊರಟೂರ

    ReplyDelete
  10. ಕನ್ನಡ ಕಲಿಯಲು ಇಷ್ಟವಿಲ್ಲದ್ದಿದ್ದರೆ ನಮ್ಮ ಕನ್ನಡ ಭೂಮಿಯನ್ನು ಬಿಟ್ಟು ತೊಲಗಲಿ.

    ReplyDelete
  11. ಅವನ್ ಪ್ರೊಫೈಲಿನಲ್ಲಿ ಬೈದಾಯಿತು, ಕೊನೆಗೆ ಅವನ ಮೊಬೈಲಿಗೆ ಫೋನ್ ಮಾಡಿ ಎಚ್ಚರಿಕೆಯನ್ನೂ ಕೊಟ್ಟಾಯಿತು, ಅ೦ತಿಮವಾಗಿ ಅವನು ಆ ಕಾಮೆ೦ಟನ್ನು ತೆಗೆಯಲು ಒಪ್ಪಿದ, ತೆಗೆದ ನ೦ತರ ತಪ್ಪೊಪ್ಪಿಗೆಯನ್ನೂ ಹಾಕಿದ್ದಾನೆ. ಎತ್ತಲಿ೦ದ ಯಾರು, ಯಾವಾಗ ಬ೦ದು ಬಾರಿಸುತ್ತಾರೋ ಎ೦ದು ಹೆದರಿ ನಡುಗುತ್ತಿದ್ದಾನೆ. ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಇದೊ೦ದು ಪಾಠವಾಗಬೇಕು.

    ReplyDelete
  12. ಪರಭಾಷಿಕರು ಕನ್ನಡ ಕಲಿಯುವುದು ಕಡ್ಡಾಯವಾಗಬೇಕು ಎನ್ನುವ ಚಂದ್ರು ಹಾಗೂ ಸಂಪಾದಕೀಯ ಬಳಗದ ವಾದ ರಾಬಿನ್ ಚಗ್ ಅವರ ಹೇಳಿಕೆಯಷ್ಟೇ ಬಾಲಿಶ ಹಾಗೂ ಹಾಸ್ಯಾಸ್ಪದವಾಗಿದೆ .. ಅಲ್ಲದೇ ಸಂವಿಧಾನ ವಿರೋಧಿಯಾಗಿದೆ.. ರಾಬಿನ್ ಚಾಗ್ ಅವರ ಹೇಳಿಕೆ ಖಂಡನೀಯ.. ಬೆಂಗಳೂರು ಮಿರರ್ ಪತ್ರಿಕೆಯವರ ದುರುದ್ದೇಶವೂ ಖಂಡನೀಯ .. ಆದರೆ ಕೆಲವು ಉತ್ತಮ ಲೇಖನ ಬರೆದಿರುವ ಈ ಬ್ಲೋಗ್ ನ ಲೇಕಖರಿಗೆ ಸಂವಿಧಾನದ ಸಾಮಾನ್ಯ ಜ್ಞಾನ ಇಲ್ಲದಿರುವುದು ಖೇದ ತರುತ್ತಿದೆ.. ಯಾರು ಬೇಕಾದರೂ ಎಲ್ಲಾದರೂ ಬದುಕಬಹುದು ಎಂಬುದು ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯದಲ್ಲಿ ಯಾರೂ ನಿಮ್ಮ ಮೇಲೆ ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಹೇರುವಂತಿಲ್ಲ ಎನ್ನುವುದೂ ಅಡಕವಾಗಿದೆ. ಪರಸ್ಪರ ಗೌರವ ಹಾಗೂ ಪ್ರೀತಿ ಭಾರತೀಯರ ನಡುವೆ ಇರಬೇಕೆಂದು ಸಂವಿಧಾನದ ಆಶಯವಾಗಿದೆ. ರಾಬಿನ್ ಚಾಕ್ ಹಾಗೂ ಮಿರರ್ ಪತ್ರಿಕೆಯ ಬೇಜವಾಬ್ದಾರಿ ಇದಕ್ಕೆ ಎಷ್ಟು ಮಾರಕವೋ ಕಡ್ಡಾಯವಾಗಿ ಕನ್ನಡ ಕಲಿಯಿರಿ ಎಂಬ ಹಠವೂ ಅಷ್ಟೇ ಮಾರಕ.
    ಕನ್ನಡ ಕಡ್ಡಾಯವಾಗಿ ಕಲಿಯಬೇಕೆಂಬ ಆಜ್ಞೆ ಹೊರಡಿಸುವುದರಿಂದ ಪರಭಾಷಿಕಾರಲ್ಲಿ ಕನ್ನಡ ಕಲಿಯಬೇಕೆಂಬ ಪ್ರೀತಿ ಮೂಡುವುದಿಲ್ಲ ಯಾಕೆ ಕಲಿಯಬೇಕೆಂಬ ಧೋರಣೆ ಹುಟ್ಟಿದರೂ ಆಶ್ಚರ್ಯವಿಲ್ಲ..ತಮಿಳು ನಾಡಿಗೆ ಹೋದಾಗ ಅಲ್ಲಿನ ಜನರ ನಡವಳಿಕೆ ಇಂದ ನಮಗೆ ತಮಿಳು ಕಲಿಯುವ ಅನಿವಾರ್ಯತೆ ಉಂಟಾಗುತ್ತದೆಯೇ ಹೊರತೂ ಅಲ್ಲೂ ನಿಮ್ಮ ಮೇಲೆ ಸರಕಾರ ತಮಿಳು ಹೇರುವುದಿಲ್ಲ.. ಆಧುನಿಕತೆಯ ಸೋಂಕಿನೊಂದಿಗೆ ಅಲ್ಲಿಯೂ ಜನರಲ್ಲಿ ಹಿಂದಿನ ಕರ್ಮಠ ತಮಿಳು ಪ್ರೇಮ ಇಂದು ಕಾಣಿಸುತ್ತಿಲ್ಲ
    ಇನ್ನು ನಮ್ಮ ಮೇಲೆ ಹಿಂದಿ ಹೆರಲಾಗಿದೆ ಎಂಬ ವಾದವೂ ಅಸಂಬದ್ಧ.. ಹಿಂದಿ ಉಪಯೋಗಿಸುವವರ ಸಂಖ್ಯೆ ಇಂದಾಗಿ ರಾಷ್ಟ್ರಭಾಷೆ ಎಂಬ ಸ್ಥಾನ ಅದಕ್ಕೆ ಇದೆಯಾದರೂ ಸಂವಿಧಾನ ಪ್ರಕಾರ ೮ ನೇ ಪರಿಚ್ಛೇದ ದಲ್ಲಿರುವ ಎಲ್ಲಾ ಭಾಷೆಗಳಿಗೆ ಭಾರತದಲ್ಲಿ ಸಮಾನವಾದ ಸ್ಥಾನವಿದೆ. ಲೋಕಸಭೆಯಲ್ಲಿ ನಮ್ಮ ಸಂಸದರಿಗೆ ಕನ್ನಡದಲ್ಲಿ ಮಾತನಾಡಲು ಎಲ್ಲ ಹಕ್ಕಿದೆ.. ಅವರು ಮಾತನಾಡುವುದಿಲ್ಲ ಎನ್ನುವುದು ಬೇರೆ ವಿಷಯ. ಇನ್ನು ಹಿಂದಿ ಕಲಿಯುವುದರಿಂದ ನೀವು ಉತ್ತರ ಭಾರತಕ್ಕೆ ಹೋದಾಗ ನಿಮಗೆ ಅನುಕೂಲವಾಗುತ್ತದೆಯೇ ಹೊರತು ಹಿಂದಿ ಭಾಷೆ ನಿಮ್ಮಿಂದಾಗಿ ಬದುಕಿಲ್ಲ
    ಇನ್ನು ಪರಭಾಷೆಯನ್ನು ಕಲಿಯುವ ಕನ್ನಡಿಗರದು ವಿಶಾಲ ಮನೋಭಾವವೋ ಅಲ್ಲ ದಾಸ್ಯ ಮನೋಭಾವವೋ ಎಂಬುದು ನಮ್ಮ ಅನುಮಾನ.. ಯಾಕೆಂದರೆ ಮನೆಯಲ್ಲಿ ಮಕ್ಕಳೊಂದಿಗೆ ಮಾತನಾಡಲು ಹಿಡಿದು ಮಾಲ್ ಗಳಲ್ಲಿ ಖರೀದಿ ಮಾಡುವವರೆಗೆ ನಮ್ಮ ಕನ್ನಡಿಗರು ಇಂಗ್ಲೀಶ್ ಭಾಷೆಯಲ್ಲಿ ಮಾತನಾಡುತ್ತಾರೆಯೇ ಹೊರತು ಅಪ್ಪಿ ತಪ್ಪಿಯೂ ಕನ್ನಡ ಬಳಸುವುದಿಲ್ಲ. ನಮ್ಮ ಮನೆಯ ಕೊಳಚೆಯಿಂದಾಗಿ ಬರುವ ದುರ್ನಾತಕ್ಕೆ ಪರರನ್ನು ದೂರಿದರೆ ಏನು ಪ್ರಯೋಜನ.
    ಇನ್ನು ನಿಮ್ಮ ವಾದದ ಮುಂದುವರಿದ ಭಾಗವಾಗಿ ಮಂಗಳೂರಿನವರು ನಮ್ಮಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ತುಳು ಕಲಿಯಬೇಕೆಂದು ದನಿ ಎತ್ತಿದರೂ ಆಶ್ಚರ್ಯವಿಲ್ಲ..
    ತಕ್ಕಮಟ್ಟಿಗಾದರೂ neutral ಅನ್ನಬಹುದಾದ ಒಂದು ಚೌಕಟ್ಟಿಗೆ ಒಳಪಟ್ಟಿದ್ದ ಈ ಬ್ಲಾಗ್ ನಲ್ಲಿ ನೀವು ಕನ್ನಡದ ವಿಷಯದಲ್ಲಿ Playing to the gallery ಎನ್ನಬಹುದಾದ ವಾದ ಮಂಡಿಸಿರುವುದು ವಿಷಾದನೀಯ.

    ReplyDelete
  13. ಕನ್ನಡ ಇಲ್ಲದವರು ಕೆಳಗಿನ ಲಿಂಕ್ ಉಪಯೋಗಿಸಿ ಬರಯಬಹುದು.
    http://www.quillpad.in/editor.html
    ಸಾಂಪದಕೀಯವರೇಚೆನ್ನಾಗಿ ಬರೆದೀರಿ. ರಾಬಿನ್ ಚಗ್ ನವರು ಮಾಡಿದು ತಪ್ಪು ಎಂಬ ತಿಳಿವಳಿಕೆ ಈಗ ಅವರ ಎಲ್ಲಾ ಗೆಳೆಯರಿಗೆ ಆಗಿರಬಹುದು. ಅವರ ಈಗಿನ ಸ್ಟೇಟಸ್ ನೋಡಿದರೆ ಅವರಿಗೆ ತಪ್ಪಿನ ಅರಿವಾಗಿದೆ ಅಂತ ಕಾಣುತ್ತೆ. ಅವರನ್ನು ಕ್ಷಮಿಸಾ ಬಹುದು ಅಂತ ನನಗೆ ಕಾಣಿಸುತದೆ.

    ReplyDelete
  14. good job sampadakeeya,

    ಒಂದು ವರ್ಷದ ಮೇಲೆ ಯಾರು ಕೆಲಸ ಅರಿಸಿ ಬರುವವರು ಕಡ್ಡಾಯ ವಾಗಿ ಕನ್ನಡ ಕಲಿಯಲೇ ಬೇಕು, ಜೊತೆಗೆ ರೋಬಿನ್ ರಂತೆ ಉದ್ಧಟತನ ತೋರುವವರ ಮೇಲೆ ಕ್ರಮ ಜರುಗಿಸಬೇಕು.

    ReplyDelete
  15. ಬೆಂಗಳೂರಿನಲ್ಲಿ ಇರುವ ಕನ್ನಡೇತರರು ಕನ್ನಡ ಕಲಿಯ ಬೇಕು, ಮಾತಾಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ , ಅದೇ ಬೆಂಗಳೂರಿನಲ್ಲಿ ಇರುವ ಕನ್ನಡಿಗರು ಕನ್ನಡ ಮಾತನಾಡಬೇಕು ಎನ್ನಬೇಕಾಗಿದೆ. ಬಹಳ ಜನ ಕನ್ನಡಿಗರು ದಿನ ನಿತ್ಯದ ಚಟುವಟಿಕೆ ಗಳಲ್ಲಿ, ಅಂಗಡಿ , ವ್ಯಾಪಾರ, ವ್ಯವಹಾರ ಗಳಲ್ಲಿ ಕನ್ನಡ ಬಳಸುವುದೇ ಇಲ್ಲ. ತೀರಾ ಕನ್ನಡದವರ ಚಪ್ಪಲಿ ಅಂಗಡಿ, ಮಾರ್ಕೆಟ್ ಗಳಲ್ಲಿ ಕೂಡ ಇಂಗ್ಲಿಷ್, ಹಿಂದಿ ಮಾತನಾಡುವ ಕನ್ನಡಿಗರನ್ನು ನಾನು ನೋಡಿದ್ದೇನೆ. ಚಪ್ಪಲಿ ಅಂಗಡಿಯ ಹುಡುಗರಿಗೆ ಇಂಗ್ಲಿಷ್ ಬಾರದು ಎಂದು ಅರಿವಾದೊಡನೆ ಇವರು ಹಿಂದಿ ಗೆ ಹೊರಳುತ್ತಾರೆಯೇ ಹೊರತು ಕನ್ನಡ ಮಾತನಾಡುವುದಿಲ್ಲ. ಮಕ್ಕಳೊಂದಿಗೆ ಖರೀದಿಗೆ ಬರುವ ಇವರು, ಮಕ್ಕಳೊಂದಿಗೂ ಸಂವಹಿಸುವುದು ಇಂಗ್ಲಿಷ್ ನಲ್ಲೆ. ಎಲ್ಲೊ ಒಮ್ಮೆ ಒಂದು ಕನ್ನಡ ಪದ ಇವರ ಬಾಯಿಯಿಂದ ಬರುತ್ತದೆ. ಆಗ ಗೊತ್ತಾಗುತ್ತದೆ, ಇವರು ಕನ್ನಡಿಗರು ಎಂದು. ಮೊದಲು ಇಂತಹವರು ಬದಲಾಗಬೇಕು ಅಲ್ಲವೇ. ಆಮೇಲೆ ಕನ್ನಡೇತರರಿಗೆ ಕನ್ನಡ ಕಲಿಸುವ ಮಾತು.
    ತಮಿಳರು ತಮಿಳು ಮಾತನಾಡಲು ಅಂಜುವುದಿಲ್ಲ. ತೆಲುಗು ಜನರು ಕೂಡ ತಮ್ಮ ತಮ್ಮಲ್ಲಿ ತೆಲುಗಲ್ಲೇ ಮಾತನಾಡುತ್ತಾರೆ. ಹಾಗಾಗಿಯೇ ನಮಗೆ ಬೆಂಗಳೂರಿನಲ್ಲಿ ರಸ್ತೆ ಗೆ ಕಾಲಿಟ್ಟೊಡನೆ ಬೇರೆಲ್ಲ ಭಾಷೆಗಳು ಕೇಳುತ್ತವೆ. ಆದರೆ ಎಲ್ಲಾದರು ಇಂಗ್ಲಿಷ್ ಕೇಳುತ್ತಿದೆಯೇ? ಹಾಗಾದರೆ ಅದು ನಮ್ಮ " ಬೆಂಗಳೂರಿನ ಕನ್ನಡಿಗರೇ !" ಬೆಂಗಳೂರಿನ ಕನ್ನಡಿಗರಿಗೆ ಏಕೆ ಕನ್ನಡ ಮಾತನಾಡಲು ಈ ಅಂಜಿಕೆ, ಹೇಸಿಗೆ ಎಲ್ಲ? ಬೆಂಗಳೂರು ಬಿಟ್ಟು ಹೊರಗೆ ಬೇರೆಲ್ಲ ಜಿಲ್ಲೆ ಗಳಿಗೆ ಹೋಗಿ ನೋಡಿ. ಎಲ್ಲಿಯೂ ಕನ್ನಡ ಮರೆಯಾಗಿಲ್ಲ. ದೋಷ ವಿರುವುದು, ನಮ್ಮಲ್ಲಿ. "ನಮ್ಮ ಬೆಂಗಳೂರಿನ ಕನ್ನಡಿಗರಲ್ಲಿ." ಅದನ್ನು ಸರಿಪಡಿಸುವಲ್ಲಿ ಕಾರ್ಯ ಪ್ರವೃತ್ತರಾಗ ಬೇಕಿದೆ.
    - ವಂದನ ಐತ್ಹಾಳ

    ReplyDelete
  16. ಬರಿಯ ಇಂಗ್ಲೀಷ್ ಪತ್ರಿಕೆಗಳನ್ನು ದೂರಿ ಪ್ರಯೋಜನವಿಲ್ಲ. ನಮ್ಮ ಕನ್ನಡ ಟಿ.ವಿ. ಚಾನೆಲ್ ಗಳೇ ಕನ್ನಡವನ್ನು ನಿರ್ಲಕ್ಷಿಸುವ ಕೆಲಸವನ್ನು ತುಂಬ ಶ್ರದ್ಧೆಯಿಂದ ಮಾಡುತ್ತಿವೆ. ನಿರೂಪಕರಿಗಾಗಲೀ, ಸಂದರ್ಶನಗಳಲ್ಲಿ ಹಾಗೂ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುವ ನಟ, ನಟಿಯರಿಗಾಗಲೀ ಕನ್ನಡವೆಂದರೆ ಯಾಕಿಷ್ಟು ಅಸಡ್ಡೆ?
    ಚೆಂದದ ಕನ್ನಡದಲ್ಲಿ ಮಾತಾಡಲು ಏನು ರೋಗ ಇವರಿಗೆ?

    ReplyDelete
  17. I am copy-pasting below my comments in the matter that I had expressed in the concerned pages on the matter. This is what I personally feel.
    1)When Mr Robin Chugh has expressed his apologies for his mistake in so many words and from the bottom of his heart, it is sensible to forgive him. Let him learn Kannada and speak it fluently.

    2)ಇಂಥ ಪ್ರವೃತ್ತಿಗಳ ಕುರಿತು ಕನ್ನಡಿಗರು ತುಸು ಜಾಗ್ರತರಾಗಿದ್ದು ಸಂಘಟಿತ ಪ್ರಯತ್ನ ಮಾಡಿದರೆ ಅದರ ಬಿಸಿ ಹೇಗೆ ತಾಕುತ್ತದೆ ಎಂಬುದು ಇದರಿಂದ ಸಾಬೀತಾಯಿತು.ಸ್ನೇಹಿತರೆ ಒಬ್ಬ ವ್ಯಕ್ತಿ ಕ್ಷಮಿಸಿ ಎಂದಾಗ ಕ್ಷಮಿಸುವದು ನಮ್ಮ ಧರ್ಮ, ಕನ್ನಡದತ್ತ ಅನ್ಯಭಾಷಿಕರನ್ನು ಪ್ರೀತಿಯಿಂದಲೇ ತರೋಣ..ಸಾರ್ವಜನಿಕವಾಗ...ಿ ಅವರನ್ನು ಕ್ಷಮಿಸಿದ ಕುರಿತು ಸಾರುವ ಮುನ್ನ ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕದ ಸೂತ್ರಧಾರರು ಒಂದು ಒಕ್ಕಣೆಯನ್ನು ಸಿದ್ಧಗೊಳಿಸಿ ಹೇಗೆ ಇಂಥ ಅಗೌರವಗಳು ನಮಗೆ ಅಸ್ವೀಕಾರಾರ್ಹ ಎಂಬುದನ್ನು ಸ್ಪಷ್ಟ ಪಡಿಸಿದರೆ ಇಂಥಾ ಇತರರಿಗೂ ಪಾಠವಾಗುತ್ತದೆ.

    ReplyDelete
  18. ಸಂಧ್ಯಾJune 12, 2011 at 7:32 PM

    ವಿಶು ಅವರೆ,
    ನಿಮಗೆ ತಮಿಳುನಾಡಿನಲ್ಲಿ ತಮಿಳು ಕಲಿಯಬೇಕಾದ ಅನಿವಾರ್ಯತೆ ಇದೆ ಅನ್ನಿಸಿತು..ಹಾಗೇ ಡೆಲ್ಲಿಗೋ, ಉತ್ತರಪ್ರದೇಶಕ್ಕೋ ಹೋದರೆ ಹಿಂದಿ ಕಲಿಯುವ ಅನಿವಾರ್ಯತೆ ಇದೆಯಲ್ಲವೆ? ಸಂವಿಧಾನದ ಪ್ರಕಾರ ನಾವು ಹಿಂದಿ ಕಲಿಯುವಂತೆಯೇ ಉತ್ತರಭಾರತದಲ್ಲಿ ಒಂದಾದರೂ ದಕ್ಷಿಣದ ಭಾಷೆ ಕಲಿಯಬೇಕೆಂದು ಇದೆ... ಆದ್ರೆ ಈ ರೀತಿ ನಡೀತಾನೇ ಇಲ್ಲ. ನಮ್ಗೆ ಶಾಲೆಲಿ ಹಿಂದಿಕಲ್ಸಿಲ್ದಿದ್ರೆ ಹಿಂದಿ ಯಾಕ್ ಕಲೀತಿದ್ವಿ? ಇಲ್ಲಿನವರಿಗೆ ಅದರ ಉಪಯೋಗ ಏನು? ಕರ್ನಾಟಕದ ಮಕ್ಕಳಿಗೆ ಮಾತ್ರ ಇಂತಹ ಹೊರೆ ಯಾಕೆ?

    ReplyDelete
  19. ಇವೆ ಜಾಬ್ ಗಳು ಕನ್ನಡಡವರಿಗೆ..ಸಿಕ್ಕರೆ.. ಇದೆಲ್ಲ ಸ್ಟೇಟಸ್ ಪುರಾಣ ಯಾಕ್ರೀ ಬೇಕು...

    ಅಂಗೆಯ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗಾಯತು... ನಮ್ಮ ದರ್ಮಕ್ಕೆ..

    ReplyDelete
  20. ವಿಶು ಅವರೇ,
    ಒತ್ತಾಯದ ಮೂಲಕ ಒಂದು ಬಾಷೆಯನ್ನು ಕಲಿಸಲಾಗದು ಎಂಬ ನಿಮ್ಮ ವಾದ ಒಪ್ಪುವಂತದ್ದು.
    ನೀವು ಎತ್ತಿದ ಇನ್ನೂ ಕೆಲವು ವಿಷಯಗಳ ಬಗ್ಗೆ ನನ್ನ ನಿಲುವು ಇಂತಿದೆ.
    ೧. ಹಿಂದಿಗೆ ರಾಷ್ಟ್ರಭಾಷೆ ಎಂಬ ಸ್ಥಾನವಿದೆ ಎಂದು ನೀವು ಹೇಳಿದ್ದೀರ. ಹಿಂದಿಗೆ ರಾಷ್ಟ್ರಭಾಷೆ ಎಂಬ ಸ್ಥಾನವನ್ನು ಎಲ್ಲೂ ಕೊಡಲಾಗಿಲ್ಲ.
    ೨. "ಹಿಂದಿ ಕಲಿಯುವುದರಿಂದ ಉತ್ತರ ಭಾರತಕ್ಕೆ ಹೋದಾಗ ಅನುಕೂಲವಾಗುತ್ತದೆ". ಹೌದು. ತಮಿಳು ಕಲಿತರೆ ತಮಿಳುನಾಡಿಗೆ ಹೋದಾಗ, ತೆಲುಗು ಕಲಿತರೆ ಅಂದ್ರ ಪ್ರದೇಶಕ್ಕೆ ಹೋದಾಗ, ಫ್ರೆಂಚ್ ಕಲಿತರೆ ಫ್ರಾನ್ಸ್ ಹೋದಾಗ ಅನುಕೂಲವಾಗುತ್ತದೆ.
    ಹಾಗಂತ, ಎಲ್ಲಾ ಬಾಷೆ ಕಲಿಯುತ್ತಾ ಕೂರಲಾಗದು. ಒಂದೊಮ್ಮೆ, ಬೇರೆ ಜಾಗಕ್ಕೆ ಹೋಗಿ ನೆಲೆಸುವ ಅವಶ್ಯಕತೆ ಬಂದರೆ, ಅಲ್ಲಿಯ ಬಾಷೆಯನ್ನು ಕಲಿಯುವ ಪ್ರಯತ್ನ ಅನುಕೂಲದ್ದು. "ಹಿಂದಿ ಕಲಿಯುವುದರಿಂದ ಉತ್ತರ ಭಾರತಕ್ಕೆ ಹೋದಾಗ ಅನುಕೂಲವಾಗುತ್ತದೆ" ಎಂದು ಹೇಳುತ್ತಾ, ಎಂದಿಗೂ ಕನ್ನಡ ನಾಡನ್ನು ಬಿಟ್ಟು ಹೊರ ಹೋಗದ ಜನರಿಗೂ ಹಿಂದಿ ಕಲಿಕೆ ಕಡ್ಡಾಯವೆಂಬಂತೆ ಮಾಡಿರೋದು ಯಾವ ಉದ್ದೇಶದಿಂದ? ಶಿಕ್ಷಣ, ಉದ್ಯೋಗ, ಕೇಂದ್ರ ಸರಕಾರದ ಜೊತೆ ವಹಿವಾಟು, ಇಲ್ಲೆಲ್ಲಾ ಹಿಂದಿ ಬಳಕೆಗೆ ಒತ್ತು ಕೊಡುವುದು, ಹಿಂದಿಯೇತರರು ಹಿಂದಿ ಕಲಿಯಲಿ ಎಂಬ ಮನಸ್ತಿತಿಯಿಂದಲೇ. ನಮ್ಮ ಮೇಲೆ, ಒತ್ತಾಯವಾಗಿ ಹಿಂದಿ ಹೇರಲಾಗುತ್ತಿದೆ ಎಂದೇ ಹೇಳಬಹುದು. ಈ ಒತ್ತಾಯವನ್ನು ಬಿಟ್ಟು, ಆಸಕ್ತಿ ಇದ್ದವರು ಮಾತ್ರ ಕಲಿಯಲು ಬೇಕಾದ ಏರ್ಪಾಡು ಮಾಡುವುದು ಒಳಿತು.
    ೩. "ಮಂಗಳೂರಲ್ಲಿ ಕೆಲಸ ಮಾಡುವವರು, ತುಳು ಕಲಿಯಲಿ" ಎಂಬ ಕೂಗು ಏಳಬಹುದು ಎಂದು ನೀವು ಹೇಳಿದ್ದೀರ. ಮಂಗಳೂರಲ್ಲಿ ನೆಲೆಸುವವರು, ತುಳು ಕಲಿಯದೇ ಉಳಿದರೆ, ಅಲ್ಲಿಯೂ ಇಂತಹ ಕೂಗು ಏಳಬಹುದು.
    ಮಂಗಳೂರಿಗೆ ವಲಸೆ ಹೋದವರು, ತುಳು ಕಲಿಯುವುದೇ ಸ್ವಾಬಾವಿಕವಾದುದು. ಬೆಂಗಳೂರಿಗೆ ವಲಸ ಹೋದವರು, ಕನ್ನಡ ಕಲಿಯುವುದೇ ಸ್ವಾಬಾವಿಕವಾದುದು, ಚೆನ್ನೈಗೆ ವಲಸೆ ಹೋದವರು ತಮಿಳು ಕಲಿಯುವುದೇ ಸ್ವಾಬಾವಿಕವಾದುದು. ಇವತ್ತಿನ ಹೊಸ ಏರ್ಪಾಡುಗಳಿಂದಾಗಿ, ತಲೆಮಾರುಗಳಿಂದ ಇಲ್ಲಿಯೇ ಇದ್ದು ಬೆಳೆದ ಬಾಷೆಗಳು ತಮ್ಮ ಊರುಗಳಿಂದಲೇ ಮಾಸಿ ಹೋಗಬಾರದು ಅಲ್ಲವೇ?

    ReplyDelete
  21. ಪ್ರಶಾಂತ_ಸೊರಟೂರJune 13, 2011 at 7:07 PM

    ಈ ಕೆಳಗಿನದನ್ನು ಮಿರರ್ ನ "ಹೇಳಿಕೆ ಡಬ್ಬಿಗೆ" ಸೇರಿಸಿದ್ದೆ. ಪರವಾಗಿಲ್ಲ ಅದಕ್ಕೆ ಕತ್ತರಿ ಹಾಕಲಿಲ್ಲ.
    ---------------
    Bangalore Mirror, Please stop using such articles to sell your paper.
    the way article/statement is presented looks like intention was to en cash emotion about language rather than providing the information to readers.
    regards, Prashant S
    Prashant Dated : Saturday, June 11, 201107:45 PM
    -------------------

    ReplyDelete
  22. ಯಾರು ಯಾವುದೇ ಭಾಷೆಯನ್ನೂ ಬೇಕಾದರೂ ಕಲಿಯಲಿ. ಅದರಲ್ಲೇಕೆ ಇಷ್ಟು ಸಂಕುಚಿತತೆ. ಎಷ್ಟು ಭಾಷೆ ಕಲಿಯುತ್ತೆವೋ ಅಷ್ಟು ಜಗತ್ತು ನಮ್ಮದಾಗುತ್ತದೆ. ಹೇರುವಿಕೆ ಬೇಡ. ಆದರೆ ಕಲಿಯುವಿಕೆ ಇರಲಿ. ಹೆಚ್ಹು ಭಾಷೆಗಳನ್ನು ಕಲಿತು ಹೆಚ್ಹು ಜಗತ್ತನ್ನು, ಜನರನ್ನು ನಮದಾಗಿಸಿಕೊಳ್ಳೋಣ.-sameer

    ReplyDelete
  23. ಮಾನ್ಯ ಪ.ರಾಮಚಂದ್ರ ಅವರಿಗೊಂದು ಪ್ರಶ್ನೆ: ಒಬ್ಬ ಉತ್ತರ ಭಾರತೀಯ ಕನ್ನಡ ಕಲಿಯಬೇಕೆಂದು ಕಮೆಂಟು ಮಾಡುವ ತಾವು, ದೋಹಾದಲ್ಲಿ ಅರೆಬಿಕ್ ಕಲಿತ್ತಿದ್ದೀರಾ ಸ್ವಾಮೀ? ತಮ್ಮ ಮಕ್ಕಳು ಅರೆಬಿಕ್ ಕಲಿಯುತ್ತಿದ್ದಾರೆಯೇ? ನಾಳೆ ಅರಬ್ ಸಂಸ್ಥಾನದ ಪ್ರಾಂತ್ಯಗಳು ತಮ್ಮಲ್ಲಿರುವ ಎಲ್ಲಾ ವಿದೇಶೀ ಕೆಲಸಗಾರರು ಅರಬ್ ಭಾಷೆಯನ್ನು ಒಂದು ವರ್ಷದೊಳಗೆ ಕಲಿಯಬೇಕೆಂದರೆ ತಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಬೆಂಗಳೂರಿನ ಕೆಲ ಕಟ್ಟಾ ಕನ್ನಡ ಅಂಧಾಭಿಮಾನಿಗಳಿಗೆ non-Kannadigas ಒಂಥರಾ soft target. ಹಿಂದೆ ಮಾರ್ವಾಡಿಗಳು ಟಾರ್ಗೆಟ್, ಈಗ ಸಾಫ್ಟವೇರ್ ಇಂಜಿನಿಯರುಗಳು. ಆದರೆ ಯಾವುದೋ ವಿದೇಶದಲ್ಲಿ ದುಡಿಯುವ ತಮ್ಮಂತಹ ಸಾತ್ವಿಕರೂ, ೨೧ನೇ ಶತಮಾನದಲ್ಲಿ ಒಂಥರಾ irrelevant ಆಗಿರುವ "ಬೆಂಗಳೂರಿನಲ್ಲಿ ಕನ್ನಡೇತರರು ಕನ್ನಡ ಕಲಿಯಬೇಕು" ಎಂದು ಒತ್ತಾಯ ಮಾಡುವುದು hypocritical ಅಲ್ಲವೇ? ಇವತ್ತು ಅದು, ನಾಳೆ "ಬೆಂಗಳೂರಿನಲ್ಲಿ ಕನ್ನಡೇತರರು ನಾನ್ ಪರೋಟಾ / ಪಿಜ್ಜಾ ತಿನ್ನಬಾರದು, ಇಡ್ಲಿ ಉಪ್ಪಿಟ್ಟು ಮಾತ್ರ ತಿನ್ನಬೇಕು" ಎನ್ನುತ್ತೀರೇನೋ? ತಮ್ಮಂತಹ ಭಾಷಾಂಧರಿಗೂ ತಾಲಿಬಾನಿಗಳಂತಹ ಮತಾಂಧರಿಗೂ ವ್ಯತ್ಯಾಸವೇನು? ದೋಹಾದಲ್ಲಿದ್ದುಕ್ಕೊಂಡು ಕನ್ನಡ ಅಂತರ್ಜಾಲದಲ್ಲಿ ಸಕ್ರಿಯರಾಗಿರುವ ತಮ್ಮ ಕನ್ನಾಡಾಭಿಮಾನ ಮೆಚ್ಚಬೇಕಾದದ್ದೇ. ಆದರೆ ಯಾರೋ ಯಕ:ಶ್ಚಿತ್ ಫೇಸ್ ಬುಕ್ ಕಮೆಂಟು ಮಾಡಿದರೆಂದು ಅವರನ್ನು harass ಮಾಡುವುದು, ಅವನೆಲ್ಲಿ ಕೆಲಸ ಮಾಡುತ್ತಿದ್ದಾನೆ (ನಿಜಕ್ಕೂ ಅವನ ಕಂಪೆನಿ ಹೆಸರು ಬರೆಯುವ ಅಗತ್ಯವೇನಿತ್ತು?) - ಇದೆಲ್ಲಾ ಯಾಕೆ ಸ್ವಾಮೀ? ಇದೆಲ್ಲಾ ತಮ್ಮಂತಹ ಸಹೃದಯರಿಗೆ ಶೋಭೆ ತರುವಂತಹದಲ್ಲ - especially when you yourself is working in Gulf and has not learnt Arabic! ನನ್ನ ಮಾತಿನಿಂದೇನೇದಾರು ನೋವಾದರೆ ಕ್ಷಮಿಸಿ. ಗೌರವಪೂರ್ವಕ ನಮಸ್ಕಾರ ಪುರಂದರ ಬೊಡಿಚಿ, ಮಂಗಳೂರು

    ReplyDelete
  24. For Sri. Purandara Bodichi,Mangalore.

    ನಿಮ್ಮ ಪ್ರತಿಸ್ಪಂದನಕ್ಕೆ ಇಂಗ್ಲಿಶ್ ನಲ್ಲಿ ಉತ್ತರ ಕೊಟ್ಟದಕ್ಕೆ ಕ್ಷಮೆ ಇರಲಿ.

    In a democratic country each individual has right to express his/her views on any subject

    It is possible convey one's view without using derogatory comments and unparliamentary language and I had pointed on the derogatory comments and unparliamentary language of migrant software engineers on Kannada language.

    I trust the pointing of derogatory comments and unparliamentary language on Kannada language from a Non Resident Kannadiga is not a sin.

    Regards

    P.Ramachandra
    Ras Laffan, Qatar

    ReplyDelete
  25. ಶ್ರೀ Anonymous...ತಮ್ಮ ಬರಹದ ಕೊನೆಯಲ್ಲಿ ಪುರಂದರ ಬೊಡೆಚಿ ಎಂಬ ಹೆಸರು ಕಾಣಿಸಿಕೊಂಡಿರುವುದರಿಂದ ತಮ್ಮ ಹೆಸರು ಅದೇ ಆಗಿರಬಹುದೆಂದು ಊಹಿಸಿ ಈ ಉತ್ತರ ಬರೆಯುತ್ತಿದ್ದೇನೆ. ತಾವು ದೋಹಾದಲ್ಲಿರುವ ಪ. ರಾಮಚಂದ್ರ ರವರಿಗೊಂದು ಪ್ರಶ್ನೆ ಇಟ್ಟಿದ್ದೀರಿ ಅಂದರೆ ತಾವು ದೋಹಾ ದಲ್ಲಿದ್ದುಕೊಂಡು ಅರೇಬಿಕ್ ಕಲಿತಿದ್ದೀರಾ? ಅರೇಬಿಕ್ ಸಂಸ್ಥಾನದವರು ಒಂದು ವರ್ಷದಲ್ಲಿ ವಿದೇಶದ ಕಾರ್ಮಿಕರು ಅರೇಬಿಕ್ ಕಲಿಕೆ ಕಡ್ಡಾಯ ವೆಂದರೆ ತಾವು ಏನು ಮಾಡುತ್ತೀರಿ.. ಕಲಿಯುತ್ತೀರಾ? ಎಂದೆಲ್ಲಾ ತಮ್ಮ ಪ್ರಶ್ನೆಗಳು...ತಮ್ಮಂತಹ ಭಾಷಾಂಧರಿಗೂ.. . ಕನ್ನಡ ಅಂಧಾಭಿಮಾನಿಗಳಿಗೂ... ಎಂಬ ವಾಕ್ಯವನ್ನು ಕೂಡಾ ಸೇರಿಸಿದ್ದೀರಿ.

    ಶ್ರೀಯುತ ಪುರಂದರ ಬೋಡೆಚಿಯವರೇ... ತಮ್ಮ ಬರಹ ನೋಡುವಾಗ ತಮಗೆ ಅರಬ್ ರಾಷ್ಟ್ರಗಳ ಹಾಗೂ ಅಲ್ಲಿನ ಕಟ್ಟುನಿಟ್ಟಿನ ಕಾನೂನುಗಳ ಬಗ್ಗೆ ಕಿಂಚಿತ್ತೂ ಜ್ಞಾನ ಇದ್ದಂತಿಲ್ಲ ವೆಂಬುದನ್ನು ಯಾರೂ ಅರ್ಥಮಾಡಿಕೊಳ್ಳಬಹುದು. ಇಲ್ಲಿನ ಸರಕಾರ ನಾಳೆ ಏನಾದರೂ ಇಲ್ಲಿ ನೆಲಸಿರುವ ಅಥವಾ ಉದ್ಯೋಗ ಮಾಡುತ್ತಿರುವ ವಿದೇಶದ ಜನತೆಯಲ್ಲರೂ ಕಡ್ಡಾಯವಾಗಿ ಅರೇಬಿಕ್ ಕಲಿಯಲೇ ಬೇಕು ಎಂಬ ಆಜ್ಞೆ ಹೊರಡಿಸಿದರೆ ಅದರಂತೆ ಪ್ರತಿಯೊಬ್ಬರೂ ಕಲಿಯಲೇಬೇಕು...ಅನ್ಯಮಾತಿಲ್ಲ. ಅಲ್ಲಿ ಯಾರಾದರೂ Robin Chugh ನಂತವರು ಆ ಆಜ್ಞೆಯ ಬಗ್ಗೆ Fuck-off ಎಂದನೆಂದಾದರೆ ಅದೇ ತಕ್ಷಣ ಆತನನ್ನು ಹಿಡಿದು ಒಳದಬ್ಬುವುದೇ ಅಲ್ಲದೆ ಆತನ ಮೇಲೆ ಅದೆಂತಹಾ ತೀವ್ರವಾದ ಆಪಾದನೆಯ ಪಾಶ ಬೀಳಬಹುದೆಂಬುದನ್ನು ಯಾರಿಂದಲೂ ಊಹಿಸಲೂ ಆಗದು. ಅರೇಬಿಕ್ ದೇಶಗಳಲ್ಲಿ ಸ್ಥಳೀಯರ ಭಾಷೆ, ರೀತಿನೀತಿ, ಅವರ ಸಂಸ್ಕ್ರತಿ, ಉಡುಗೆತೊಡುಗೆ, ಆಚಾರವಿಚಾರ ಅವರಿಗೆ ಸಂಬಂಧಪಟ್ಟ ಇನ್ಯಾವುದೇ ವಿಷಯದಲ್ಲಿಯೂ ಯಾರೊಬ್ಬರೂ ಸೊಲ್ಲೆತ್ತುವಂತಿಲ್ಲ. ಸೊಲ್ಲೆತ್ತಿದರೆ ಮುಗಿಯಿತು!!

    ಅದೇ ರೀತಿ ಸೌದಿ ಅರೇಬಿಯಾದಲ್ಲಿ ಸೌದಿಯೇತರ ಮಹಿಳೆಯರು ಕೂಡಾ ಕಡ್ಡಾಯವಾಗಿ ಬುರ್ಖಾ ಧರಿಸಲೇ ಬೇಕು(ಮುಖವೊಂದನ್ನು ತೆರೆದಿಡಬಹುದು) ಎಂಬ ಕಾನೂನು ಜಾರಿಯಲ್ಲಿದೆ. ಅದರಂತೆ ಪ್ರತಿಯೊಬ್ಬ ಸ್ತ್ರೀಯೂ ಬುರ್ಖಾ ಧರಿಸಲೇ ಬೇಕು. ಅದುಮಾತ್ರವಲ್ಲದೆ ಪುರುಷರು ಚಿನ್ನದ ಆಭರಣ ಧರಿಸುವಂತೆಯೇ ಇಲ್ಲ, ನಮ್ಮಧಾರ್ಮಿಕ ಪದ್ದತಿಗಳಾದ ಹಣೆಯಲ್ಲಿ ಗಂಧ, ಕೊರಳಲ್ಲಿ, ಕೈಯಲ್ಲಿ ಸಾಂಪ್ರದಾಯಿಕ ನೂಲು ಇತರ ವಸ್ತುಗಳನ್ನು ಧರಿಸುವಂತೆಯೇ ಇಲ್ಲ. ನಮ್ಮ ಜೇಬಿನಲ್ಲಿರುವ ಪರ್ಸ್ ಗಳಲ್ಲಿ ಕೂಡಾ ದೇವ ದೇವತೆಗಳ ಫೋಟೋವನ್ನು ಇಟ್ಟುಕೊಳ್ಳುವಂತಿಲ್ಲ. ಮಾನ್ಯರೇ, ಅಲ್ಲಿ ಕೆಲಸ ಮಾಡಬೇಕಿದ್ದರೆ ಅಲ್ಲಿನ ಕಾನೂನು ಕಾಯಿದೆಗಳಿಗೆ ಗೌರವವನ್ನು ವಿನಮ್ರತೆ, ವಿಧೇಯತೆಯಿಂದ ನೀಡಲೇಬೇಕು. ಅದಲ್ಲದಿದ್ದರೆ ಅಲ್ಲಿಂದ ಸೀದಾ ಜೈಲಿಗೆ ಅಥವಾ ಅವರವರ ದೇಶಗಳಿಗೆ ತಕ್ಷಣವೇ Fuck-off ಆಗಬೇಕಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಕೇವಲ ಕನ್ನಡ ಕಲಿಯಬೇಕು ಅಂದಿದ್ದಕ್ಕೆ ಈ ವ್ಯಕ್ತಿ ಕನ್ನಡಿಗರ ಮನನೋಯುವಂತಹ ಮಾತಾಡಿದ್ದು ಸರಿಯೆಂದು ತಮಗನಿಸುತ್ತಿದೆಯೇ? ನಮ್ಮ ಭಾಷೆ ಕನ್ನಡವನ್ನು ಮನಸಾರೆ ಪ್ರೀತಿಸುವುದು ಭಾಷಾಂಧತೆಯೇ? ಅಂತವರು ಅಂಧಾಭಿಮಾನಿಗಳೇ?

    ಸ್ವಾಮೀ...ಚೀಲವೊಂದನ್ನು ಹಿಡಿದು ಹೊಟ್ಟೆಪಾಡಿಗಾಗಿ ಮುಂಬಯಿ ತಲಪಿದ ಯಾವುದೇ ವ್ಯಕ್ತಿ ಕೇವಲ ಒಂದೆರಡು ತಿಂಗಳಲ್ಲಿಯೇ ಹಿಂದಿ ಕಲಿತುಕೊಳ್ಳುತ್ತಾನೆ. ಕಲಿಯಲೇಬೇಕು... ಇಲ್ಲವಾದರೆ ಅಲ್ಲಿ ಅವನ ಬದುಕೇ ದುಸ್ತರವಾಗುತ್ತದೆ. ಅದಲ್ಲದೆ ಅವನೊಬ್ಬ "ಮದ್ರಾಸಿ"ಎಂಬ ಬಿರುದು ಕೂಡಾ ಸ್ಥಳೀಯರಿಂದ ದೊರಕುತ್ತದೆ. ಪ್ರಿಯರೇ... ನಾವು ದೇಶದಿಂದ ದೂರ ನೆಲಸಿರುವವರು. ದೇಶದೊಳಗಿರುವ ತಮ್ಮಂತವರಿಗೆ ಭಾಷಾಪ್ರೇಮ ಖಂಡಿತಾ ಇಲ್ಲದಿದ್ದರೂ ನಾವು ನಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುತ್ತೇವೆ. ಅಂತಿರುವಾಗ ನಮ್ಮ ಭಾಷೆಯ ಬಗ್ಗೆ ಯಾರೋ ಒಬ್ಬ ಅಸಭ್ಯವಾಗಿ ವರ್ತಿಸಿದಾಗ ಮನಕ್ಕೆ ನೋವಾಗುವುದು ಸಹಜತಾನೆ? ಅದಕ್ಕಾಗಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುವುದು ಸ್ವಾಭಾವಿಕ ತಾನೇ?

    -ವಿಜಯ್ ಬಾರ್ಕೂರು, ಕತಾರ್.

    ReplyDelete
  26. @ purandara bodichi,
    ಭಾಷೆಯನ್ನು ಪ್ರೀತಿಸುವವರನ್ನು ನೀವು ತಾಲಿಬಾನ್ ಗಳು ಎಂದು ಕರೆಯುವುದಾದರೆ, ನೂರಕ್ಕೆ 99ರಷ್ಟು ಮಂದಿ (ನಿಮ್ಮಂಥವರನ್ನು ಬಿಟ್ಟು) ಎಲ್ಲರನ್ನೂ ತಾಲಿಬಾನ್ ಗಳೆಂದು ಕರೆಯಬೇಕಾಗುತ್ತದೆ. ನಿಮಗೆ Fuck off ಎಂದು ಬರೆದವನ ಮೇಲೆ ಯಾವ ಆಕ್ಷೇಪಣೆಯೂ ಇಲ್ಲ, ಆದರೆ ಅದಕ್ಕೆ ಉತ್ತರಿಸಿದವರ ಮೇಲೆ ಮಾತ್ರ ಇದೆ. ಇದೆಂಥ ಹಿಪೋಕ್ರಸಿ? ನೀವೇ ಹಿಪೋಕ್ರಟ್ ಆಗಿರುವಾಗ ಬೇರೆಯವರನ್ನೇಕೆ ಹಿಪೋಕ್ರಟ್ ಎಂದು ಕರೆಯುತ್ತೀರಿ?
    - ರಮೇಶ್ ನಡುಗದ್ದೆ

    ReplyDelete
  27. ಸನ್ಮಾನ್ಯ ಬೋಡಿಚಿಯವರೇ, "ನಾಳೆ ಅರಬ್ ಸಂಸ್ಥಾನದ ಪ್ರಾಂತ್ಯಗಳು ತಮ್ಮಲ್ಲಿರುವ ಎಲ್ಲಾ ವಿದೇಶೀ ಕೆಲಸಗಾರರು ಅರಬ್ ಭಾಷೆಯನ್ನು ಒಂದು ವರ್ಷದೊಳಗೆ ಕಲಿಯಬೇಕೆಂದರೆ" ಎಂದು ನೀವು ಸರಿಯಾದ ಪಾಯಿಂಟನ್ನೇ ಎತ್ತಿದ್ದೀರಿ. ಆದರೆ ಹಾಗೆ ಕಾನೂನಿನ್ನೂ ಬಂದಿಲ್ಲವಲ್ಲ. ಬಂದರೆ ಆಗ ಅಲ್ಲಿರುವವರು ಫಕ್ ಆಫ಼್ ಅನ್ನುವರೆಂದು ಅಥವ ಅಂದು ಬದುಕುವರೆಂದು ನಿಮಗನ್ನಿಸುತ್ತದೆಯೇ? ಅಲ್ಲಿಯ ತಲೆದಂಡದ ನ್ಯಾಯವನ್ನು ನಾನೆಂದಿಗೂ ಸಮರ್ಥಿಸಲಾರೆ ಹಾಗೆಂದು ನಮಗೆ ಫ಼**ಫ಼್ ಅನ್ನುವವನಿಗೆ ಅದಕ್ಕೆ ಅನುವು ಮಾಡಿಕೊಟ್ಟು ನಿಲ್ಲುವುದಂತೂ ಸಾಧ್ಯವಿಲ್ಲದ ಮಾತು ಅಲ್ಲವೇ? ಅಥವ ಹೌದೋ!!!

    @ ವಿಜಯ್ ಬಾರ್ಕೂರು,

    "ಚೀಲವೊಂದನ್ನು ಹಿಡಿದು ಹೊಟ್ಟೆಪಾಡಿಗಾಗಿ ಮುಂಬಯಿ ತಲಪಿದ ಯಾವುದೇ ವ್ಯಕ್ತಿ ಕೇವಲ ಒಂದೆರಡು ತಿಂಗಳಲ್ಲಿಯೇ ಹಿಂದಿ ಕಲಿತುಕೊಳ್ಳುತ್ತಾನೆ" - ಆದರೆ ಮುಂಬಯಿಯ ಸ್ಥಳೀಯಭಾಷೆ ಮರಾಠಿ; ಅಲ್ಲಿ ಬಂದು ಹಿಂದಿಯ ಜೋರು ತೋರಿಸುವ ಮಂದಿಯ ಬಗ್ಗೆ ಅಲ್ಲಿಯ ಸ್ಥಳೀಯರಿಗೂ ನಮ್ಮಷ್ಟೇ ಅಸಹನೆಯಿದೆ. ಅಲ್ಲಿ ಹೋಗಿ ಹಿಂದೀ ಕಲಿಯುವ ವ್ಯಕ್ತಿ ನಮ್ಮಲ್ಲಿಯೂ ಅದನ್ನೇ ಕಲಿಯಬಹುದು ಅಲ್ಲವೇ? ಆದರೆ ನಮ್ಮ ನಿಲುವು, ಅವನು ಕನ್ನಡ ಕಲಿಯಬೇಕೆಂಬುದು (ಹಾಗೇ ಮುಂಬಯಿಯಲ್ಲಿ ಮರಾಠಿಯನ್ನು)

    ReplyDelete
  28. @ Priyank

    "ಹಿಂದಿಗೆ ರಾಷ್ಟ್ರಭಾಷೆ ಎಂಬ ಸ್ಥಾನವನ್ನು ಎಲ್ಲೂ ಕೊಡಲಾಗಿಲ್ಲ" ಎಂದು ನೀವು ಹೇಳಿದ್ದೀರಿ. ರಾಷ್ಟ್ರಭಾಷೆ ಎಂದರೆ ಏನು? ಯಾವುದು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯೋ ಅದು, ಅಲ್ಲವೇ? ಸಂಬಂಧಪಟ್ಟ ಕಾನೂನುಗಳು ಇಲ್ಲಿವೆ ನೋಡಿ:

    ಸಂವಿಧಾನ - ಭಾಗ XVII, ಕಲಮು 343-351 ಪ್ರಕಾರ ಕೇಂದ್ರದ ಅಧಿಕೃತ ಭಾಷೆ ಹಿಂದಿ. ಮತ್ತೆ ಈ ಬಹುಸಂಸ್ಕೃತಿಹೊಂದಿದ ಭಾರತದ ಎಲ್ಲ ಘಟಕಗಳಲ್ಲೂ ಹಿಂದಿಯೇ ಸಂವಹನದ ಮಾಧ್ಯಮವಾಗುವಂತೆ ಹಿಂದಿಯನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಚಾರಮಾಡುವುದು ಕೇಂದ್ರದ ಜವಾಬ್ದಾರಿಯೆನ್ನುತ್ತದೆ, ಕಲಮು 351 ("It shall be the duty of the Union to promote the spread of the Hindi language, to develop it so that it may serve as a medium of expression for all the elements of the composite culture of India").

    1967ರಲ್ಲಿ ಕೊನೆಯ ತಿದ್ದುಪಡಿಗೊಳಗಾದ "ಅಧಿಕೃತ ಭಾಷಾ ಕಾಯ್ದೆ 1963" ಹಿಂದಿಯ ಬಗ್ಗೆ ವಿಶೇಷ ಕಲಮುಗಳನ್ನು ಹೊಂದಿದೆ (ಹಿಂದಿಯೂ ಕನ್ನಡದಂತೆಯೇ ಮತ್ತೊಂದು ಭಾಷೆಯಾಗಿದ್ದರೆ ಈ ವಿಶೇಷ ಕಲಮುಗಳ ಅಗತ್ಯವೇನಿತ್ತು). ಈ ಕಾಯ್ದೆಯಲ್ಲಿ ಕಾಣುವ ಒಟ್ಟಾರೆ ಅಭಿಪ್ರಾಯ ಇಷ್ಟು: ಹಿಂದಿ ಕೇಂದ್ರ ಮತ್ತು ಹಿಂದೀ ರಾಜ್ಯಗಳ ಅಧಿಕೃತ ಭಾಷೆ. ಕೇಂದ್ರ ಮತ್ತು ಹಿಂದಿಯೇತರ ರಾಜ್ಯಗಳ ನಡುವಿನ ವ್ಯವಹಾರಗಳು ಇಂಗ್ಲಿಷಿನಲ್ಲಿರಬಹುದು, ಆದರೆ ಅದರೊಡನೆ ಹಿಂದೀ ತರ್ಜುಮೆಯನ್ನೂ ಲಗತ್ತಿಸತಕ್ಕದ್ದು. ಕಲಮು 5 ರ ಪ್ರಕಾರ ಕೇಂದ್ರದ ಎಲ್ಲ ಕಾಯ್ದೆಗಳನ್ನೂ ಹಿಂದಿಗೆ ತರ್ಜುಮೆಗೊಳಿಸಿ ಪ್ರಕಟಿಸಬೇಕು (ಬೇರೆಲ್ಲ ಭಾಷೆಗಳಲ್ಲೂ ಅಲ್ಲ!). ಮತ್ತೆ ಕಲಮು 6 ರ ಪ್ರಕಾರ ಹಿಂದಿಯೇತರ ರಾಜ್ಯಗಳ ಎಲ್ಲ ಕಾಯ್ದೆ/ನಿಯಮಗಳೂ ಇಂಗ್ಲಿಷಿನೊಡನೆಯೇ ಹಿಂದಿಗೂ ತರ್ಜುಮೆಗೊಳ್ಳತಕ್ಕದ್ದು

    ಮತ್ತೆ ಗಾಯದ ಮೇಲಿನ ಸ್ವಲ್ಪ ಉಪ್ಪು ಸವರಿಕೊಳ್ಳೋಣವೇ? ಇಲ್ಲಿ ನೋಡಿ. ಇದೇ ಕಾಯ್ದೆಯಡಿ ರಚಿತವಾದ (1987ರಲ್ಲಿ ತಿದ್ದುಪಡಿಗೊಂಡ)"ಅಧಿಕೃತ ಭಾಷಾ ನಿಯಮಾವಳಿ 1976"ರ ನಿಯಮ 1 ಉಪನಿಯಮ 2, ಈ ನಿಯಮಾವಳಿಯಿಂದ ತಮಿಳುನಾಡನ್ನು ಹೊರತುಪಡಿಸುತ್ತದೆ (They shall extend to the whole of India, except the State of Tamilnadu)!!!

    ReplyDelete
  29. for All d above commentors - no one seems - to realize this again - dont you think below lines have an action in it ?

    ಇವೆ ಜಾಬ್ ಗಳು ಕನ್ನಡಡವರಿಗೆ..ಸಿಕ್ಕರೆ.. ಇದೆಲ್ಲ ಸ್ಟೇಟಸ್ ಪುರಾಣ ಯಾಕ್ರೀ ಬೇಕು...

    ಅಂಗೆಯ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗಾಯತು... ನಮ್ಮ ದರ್ಮಕ್ಕೆ..

    ReplyDelete
  30. ಮಂಜುನಾಥ ಅವರೇ,
    ಅದಿಕೃತ ಸಂವಹನ ಬಾಷೆಯೇ ರಾಷ್ಟ್ರಬಾಷೆ ಆಗಬೇಕು ಅಂತಿಲ್ಲ ಆಲ್ವಾ.
    ಕೇಂದ್ರ ಸರಕಾರವು, ಇಂಗ್ಲೀಷು ಮತ್ತು ಹಿಂದಿ ಬಾಷೆಗಳಲ್ಲಿ ವಹಿವಾಟು ಮಾಡುತ್ತದೆ. ಹಾಗಾಗಿ, ನಮ್ಮಲ್ಲಿ ಇಂಗ್ಲೀಷು ಮತ್ತು ಹಿಂದಿ ಎರಡೂ ರಾಷ್ಟ್ರಬಾಷೆ ಎಂದುಕೊಳ್ಳಬೇಕಾ?

    ReplyDelete
  31. @ Priyank, "ಅಂದುಕೊಳ್ಳಬೇಕು" ಅಂತ ನಾನು ಹೇಳುತ್ತಿಲ್ಲ. ಈ ಬಗ್ಗೆ ನಿಮ್ಮಷ್ಟೇ ಅಸಹನೆ ನನಗೂ ಇದೆ. ನಾನು ತೋರಿಸಿದ್ದು ಕಾನೂನಿನ ವಿಷಯವನ್ನು ಮಾತ್ರ. ಹಿಂದಿ ಅಧಿಕೃತ ಸಂವಹನ ಭಾಷೆ, ಹಿಂದಿಯೇತರ ರಾಜ್ಯಗಳು ತಮ್ಮ ಸಂವಹನದೊಂದಿಗೆ ಇಂಗ್ಲಿಷಿನೊಂದಿಗೆ ಹಿಂದಿಯನ್ನೂ ಬಳಸಬೇಕು, ಕೇಂದ್ರಸರ್ಕಾರವು ಹಿಂದೀ ಪ್ರಚಾರದಲ್ಲಿ ಉನ್ನತ ಕಾಳಜಿ ವಹಿಸಬೇಕು ಮತ್ತು ಈ ಎಲ್ಲ ನಿಯಮಗಳಿಂದ ತಮಿಳುನಾಡನ್ನು ಮುಕ್ತಗೊಳಿಸಲಾಗಿದೆ - ಇವು ಸಂವಿಧಾನದ, ಮತ್ತು ಅದರಡಿಯಲ್ಲಿ ರಚಿತವಾದ ಭಾಷಾಕಾಯ್ದೆ/ನಿಯಮಗಳ ಆಶಯ. ಇಷ್ಟೆಲ್ಲಾ ಸವಲತ್ತುಗಳು ರಾಷ್ಟ್ರಭಾಷೆಗಲ್ಲದೆ ಮತ್ತಾವುದಕ್ಕೆ? ಅದಕ್ಕೇ ಸಹಜವಾಗಿಯೇ ಹಿಂದೀ ಬಹುಮತದ ಕೇಂದ್ರ ಸರ್ಕಾರಗಳು ಇಲಾಖೆಗಳು ಹಿಂದಿಯನ್ನು ರಾಷ್ಟ್ರಭಾಷೆಯೆಂದು ಬಿಂಬಿಸಿವೆ. ಈ ಆಶಯ ಸಂವಿಧಾನಕ್ಕಿಲ್ಲದಿದ್ದರೆ ಇಷ್ಟೆಲ್ಲ ಸವಲತ್ತುಗಳು ಹಿಂದಿಗೆ ಇರುತ್ತೇ? ಅದನ್ನು "ರಾಷ್ಟ್ರಭಾಷೆ"ಯೆಂದು ಎಲ್ಲೂ ಘೋಷಿಸಿಲ್ಲದಿರಬಹುದು, ಹಾಗೆಂದಮಾತ್ರಕ್ಕೆ ಈ ವಸ್ತುಸ್ಥಿತಿ ನಿಮಗೆ ಒಪ್ಪಿಗೆಯೇ? ನಾನು ಹೇಳಿದ್ದು ಅದನ್ನು, ಅಷ್ಟೇ.

    ReplyDelete