Wednesday, June 15, 2011

ಕಾರ್ಗತ್ತಲಲ್ಲಿ ಮರೆಯಾದ ಜ್ಯೋತಿರ್ಮಯ್ ಡೇ...



ವೃತ್ತಿನಿಷ್ಠೆ, ಪ್ರಾಮಾಣಿಕತೆ, ನಿಷ್ಠುರತೆ, ನಿಸ್ವಾರ್ಥತೆಯ ಮೌಲ್ಯಗಳಿಗೆ ಈ ದೇಶದ ಭೂಗತಜಗತ್ತು-ರಾಜಕೀಯ-ಪೋಲೀಸ್‌ವ್ಯವಸ್ಥೆಗಳ ಮೈತ್ರಿಕೂಟ ಮತ್ತೊಂದು ಬಲಿ ಪಡೆದಿದೆ. ಅದು ಜ್ಯೋತಿರ್ಮಯ್ ಡೇ ಅವರ ಕಗ್ಗೊಲೆಯ ರೂಪದಲ್ಲಿ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಈ ದೇಶದಲ್ಲಿ ಇಂತಹ ಮೌಲ್ಯಗಳನ್ನು ಎತ್ತಿಹಿಡಿಯುವ ಪತ್ರಕರ್ತರು ಎಂತಹಾ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಜ್ಯೋತಿರ್ಮಯ್ ಡೇಯವರ ಹತ್ಯೆ ಬಿಚ್ಚಿಟ್ಟಿದೆ. ಎಲ್ಲಕ್ಕಿಂತ ವಿಷಾದದ ಸಂಗತಿ ಎಂದರೆ ಅವರ ಹತ್ಯೆಯಾದ ಬಳಿಕ ಅಧಿಕಾರಸ್ಥರು, ಅಧಿಕಾರಿಗಳು ಆಡುತ್ತಿರುವ ನಾಟಕಗಳು. ಸೋನಿಯಾ, ಮನಮೋಹನರಾದಿಯಾಗಿ ಎಲ್ಲರೂ ಕಣ್ಣೀರಿಟ್ಟರು, ಎಂಥಾ ಮನುಷ್ಯ. ಹೀಗಾಗಬಾರದಿತ್ತು, ಛೆ! ಎಂದು ಮಿಡೀಯಾಗಳ ಮುಂದೆ ಮರುಗಿದರು. ಆದರೆ, ತನಿಖಾವರದಿ ಬರೆದ ಕಾರಣಕ್ಕೆ ಸ್ಥಾಪಿತ ಹಿತಾಸಕ್ತಿಗಳ ಕ್ರೌರ‍್ಯಕ್ಕೆ ಪ್ರಾಣವನ್ನೇ ತೆರಬೇಕಾಗಿ ಬಂದಿರುವ ಈ ಸರ್ವತಂತ್ರ ರಾಷ್ಟ್ರದಲ್ಲಿರುವ ದುಸ್ಥಿತಿಯ ಬಗ್ಗೆ ಯಾರೂ ಮಾತಾಡಲಿಲ್ಲ. ತಮ್ಮದೇ ಪಕ್ಷದ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್‌ಗೆ ಹೇಳಿ ಡೇ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಇವರ ಕೈಯಿಂದಸಾಧ್ಯವಿರಲಿಲ್ಲವೇ?

ಇಡೀ ದೇಶದ ಪತ್ರಕರ್ತ ಸಮುದಾಯ ಒಕ್ಕೊರಲಿನಿಂದ ಡೇ ಹತ್ಯೆಯನ್ನು ಕೂಡಲೇ ಸಿಬಿಐಗೊಪ್ಪಿಸಿ ಎಂದು ಹೇಳಿದರೂ ಅದಾಗದು  ಎಂದು ದಾರ್ಷ್ಟ್ಯ ಪ್ರದರ್ಶಿಸುತ್ತಿರುವ ಚವಾಣ್ ಹಿಂದಿನ ಶಕ್ತಿಗಳಾವುವು? ಇಂತದನ್ನು ತಡೆಯಲು ಹೊಸ ಕಾನೂನು ರಚಿಸುವ ಮಾತನ್ನಾಡುತ್ತಿದ್ದಾರೆ ಇವರು. ಇರುವ ಕಾನೂನುಗಳನ್ನೇ ಸರಿಯಾಗಿ ಬಳಸಲಾರದ ಇವರ ಕೈಯಲ್ಲಿ ಹೊಸ ಕಾನೂನು ಏನು ಮಾಡಲು ಸಾಧ್ಯ? ಹೀಗೆ ದೇಶ ಕಂಡ ಅತ್ಯುತ್ತಮ ತನಿಖಾ ವರದಿಗಾರನೊಬ್ಬ ಗುಂಡಿನ ದಾಳಿಗೆ ಹತನಾದಾಗ ಸತ್ಯವನ್ನು ಬಯಲಿಗೆಳೆಯಬಯಸುವ ಸಾವಿರಾರು ಯುವಪತ್ರಕರ್ತರಿಗೆ ಉಳಿಯುವ ಭರವಸೆಯಾದರೂ ಏನು? ಕೊಲೆಮಾಡಿದವರನ್ನು ಕೂಡಲೇ ಹಿಡಿಯಲಾಗದಿದ್ದರೂ ಕನಿಷ್ಠ ಪಕ್ಷ ಗಂಭೀರ ತನಿಖೆ ನಡೆಸುವ ಬದ್ಧತೆಯನ್ನಾದರೂ ಸರ್ಕಾರ ತೋರಿದ್ದರೆ ದೇಶದ ಸಂವಿಧಾನ ತನ್ನ ೧೯(೧) (ಎ) ವಿಧಿಯಾನುಸಾರ ಕೊಡಮಾಡಿರುವ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಿಂಚಿತ್ತಾದರೂ ಘನತೆ ಇರುತ್ತಿತ್ತು. ಆದರೆ ಇಲ್ಲಿ ನಡೆಯುತ್ತಿರುವುದೇನು?

ಅವರು ಕಮಾಂಡರ್ ಡೇ.

ಪತ್ರಕರ್ತರ ಬಳಗದಲ್ಲಿ ಟೇಯವರ ಹತ್ತಿರದವರೆಲ್ಲಾ ಕಮಾಂಡರ್ ಡೇ ಎಂದೇ ಕರೆಯುತ್ತಿದ್ದರು. ಜೆ.ಡೇ. ಎಂಬ ಹೆಸರಿನಲ್ಲಿ ಅವರ ಎಲ್ಲಾ ಬರೆಹಗಳು ಪ್ರಕಟವಾಗುತ್ತಿದ್ದವು. ಇಪ್ಪತ್ತು ವರ್ಷಗಳ ಹಿಂದೆ ಹಿಂದೂಸ್ತಾನ್ ಲಿವರ್ ಮೂಲಕ ತಮ್ಮ ವೃತಿಜೀವನಕ್ಕೆ ಕಾಲಿರಿಸಿದ್ದ ಡೇ ಹವ್ಯಾಸಿ ಛಾಯಾಗ್ರಾಹಕರಾಗಿದ್ದವರು. ಅದರಲ್ಲೂ ವನ್ಯಜೀವಿಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ಅವರಿಗೆ. ಹೀಗೆ ಎಲ್ಲೆಲ್ಲಿ ವನ್ಯಜೀವಿಗಳಿಗಳಿವೆಯೋ ಅಲ್ಲೆಲ್ಲ ಛಾಯಾಗ್ರಹಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವನ್ಯಪ್ರಣಿಗಳ ಬದುಕನ್ನು ಮನುಷ್ಯ ಸಮಾಜ ಕಿತ್ತುಕೊಳ್ಳುತ್ತಿರುವ ಕುರಿತು ಬಹಳ ನೋವಾಗುತ್ತಿತ್ತವರಿಗೆ. ಮಹಾರಾಷ್ಟ್ರ ಸರ್ಕಾರವು ರಾಷ್ಟ್ರೀಯ ಉದ್ಯಾನ ಎಂದು ಮೀಸಲಿಟ್ಟಿದ್ದ ಜಾಗವನ್ನೇ ವಾಣಿಜ್ಯ ಕಾರಣಗಳಿಗಾಗಿ ಬಳಸಿಕೊಳ್ಳಲೆತ್ನಿಸಿದಾಗ ತಡೆಯಲಾಗದೇ ಆ ಕುರಿತು ಒಂದು ವಿವರವಾದ ಲೇಖನ ಬರೆದರು. ಇದು ಡೇ ಬರೆದ ಮೊತ್ತಮೊದಲ ತನಿಖಾ ವರದಿ. ಈ ವರದಿ ಪ್ರಕಟವಾದಾದ್ದೇ ತಡ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲವಾಗಿ ಸರ್ಕಾರ ಮುಖಭಂಗವನ್ನೆದುರಿಸಬೇಕಾಯಿತು.

ನಂತರದಲ್ಲಿ ಡೇಯವರು ಅಫ್ಟರ್‌ನೂನ್ ಡಿಸ್ಪಾಚ್ ಹಾಗೂ ಕೊರಿಯರ್ ಎಂಬ ಪತ್ರಿಕೆಗಳಿಗೆ ಫೋಟೋಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದರು. ನಂತರ ಮಿಡ್ ಡೇ ಪತ್ರಿಕೆಗೆ ಫ್ರೀಲ್ಯಾನ್ಸ್ ಪತ್ರಕರ್ತರಾದರು. ಕೊನೆಗೆ ಅವರು ಪೂರ್ಣಾವಧಿ ಪತ್ರಕರ್ತನಾಗಿ ಕಾರ್ಯಾರಂಭ ಮಾಡಿದ್ದು ೧೯೯೬ರಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಮೂಲಕ. ಅಲ್ಲಿ ಆವರ ಆಸಕ್ತಿ ವಿಷಯ ಕ್ರೈಂ ರಿಪೋರ್ಟಿಂಗ್ ಆಗಿತ್ತು. ಮುಂಬೈಯಂಥ ಮುಂಬೈಯಲ್ಲಿ ಕ್ರೈಂ ರಿಪೋರ್ಟಿಂಗ್ ಎಂದರೆ ಮಕ್ಕಳಾಟಿಕೆಯೇ? ಯಾವ ಗಲ್ಲಿಯಲ್ಲಿ ಎಡವಿದರೂ ಹೋಗಿ ಬೀಳುವುದು ದಾವೂದ್ ಇಬ್ರಾಹಿಂ ಇಲ್ಲವೇ ಚೋಟಾ ಶಕೀಲ್ ಕಾಲಬುಡದಲ್ಲೇ. ಅಲ್ಲಿ ಬಾಯಿ ಮಾತನಾಡುವುದಿಲ್ಲ. ಬಂದೂಕು ಮಾತನಾಡುತ್ತವೆ!. ಆದರೂ ಅಂಜದೇ ಭೂಗತ ಜಗತ್ತಿನ ಅಪರಾಧಗಳ ಕುರಿತು, ಅದು ಹೊರಗಿನ ಅಧಿಕಾರಸ್ಥರೊಂದಿಗೆ ಹೊಂದಿರುವ ನಂಟಿನ ಕುರಿತು ತನಿಖಾ ವರದಿ ಆರಂಭಿಸಿದ ಡೇ ಅದರಲ್ಲಿ ಪಕ್ಕಾ ವೃತಿಪರತೆ ಮೆರೆದರು. ಮುಂದೆ ೨೦೦೫ರಲ್ಲಿ ಎಕ್ಸ್‌ಪ್ರೆಸ್‌ನ್ನು ಬಿಟ್ಟು ಹಿಂದೂಸ್ತಾನ್ ಟೈಮ್ಸ್ ಸೇರಿದರು. ನಂತರ ಅದನ್ನೂ ಬಿಟ್ಟು ಮತ್ತೆ ತಾವು ಆರಂಭದಲ್ಲಿ ವೃತ್ತಿಯನ್ನಾರಂಭಿಸಿದ್ದ ಮಿಡ್‌ಡೇಯಲ್ಲಿ ಹಿರಿಯ ವಿಶೇಷ ತನಿಖಾ ವರದಿ ಸಂಪಾದಕರಾಗಿ ಸೇರಿಕೊಂಡರು.

ಡೇ, ಎರಡು ದಶಕಗಳಿಂದ ಅವರು ತನಿಖಾ ಪತ್ರಿಕೋದ್ಯಮವನ್ನು ಆವಾಹಿಸಿಕೊಂಡುಬಿಟ್ಟಿದ್ದರು. ದೇಶದ ಭೂಗತ ಲೋಕ ರಾಜಕಾರಣದ ರಾಜಧಾನಿಯೇ ಆಗಿರುವ ಮುಂಬೈನ ಭೂಗತ ಲೋಕದ ಅಣುರೇಣುಗಳನ್ನೂ ಬಲ್ಲವರಾಗಿದ್ದರವರು. ಆದರೆ ಒಮ್ಮೆಯೂ ತಮ್ಮ ವರದಿಗಳ ಮೂಲವನ್ನು ಅಪ್ಪಿತಪ್ಪಿಯೂ ಬಿಟ್ಟುಕೊಡದ ವೃತಿಪರತೆ ಅವರದು. ಈ ಕ್ಷೇತ್ರದಲ್ಲಿ ತಾವು ಗಳಿಸಿಕೊಂಡ ಅಪಾರ ಅನುಭವಗಳ ಮೂಸೆಯಲ್ಲಿ ಖಲಾಸ್ ಮತ್ತು ಝೀರೋ ಡಯಲ್: ದ ಡೇಂಜರಸ್ ವರ್ಲ್ಡ್ ಆಫ್ ಇನ್‌ಫಾರ್ಮರ‍್ಸ್ ಎಂಬೆರಡು ಕೃತಿಗಳನ್ನೂ ಬರೆದಿದ್ದರು.

ಮುಂಬೈ ಭೂಗತ ಜಗತ್ತಿನೊಂದಿಗೇ ನೇರ ಸಂಪರ್ಕ ಹೊಂದಿದ್ದರೂ, ಪತ್ರಿಕಾ ಲೋಕದಲ್ಲಿ ಪ್ರಸಿದ್ಧಿ ಪಡೆದಿದ್ದರೂ ಎಂದೂ ಅಹಂನಿಂದ ಬೀಗಿದವರಲ್ಲ ಡೇ. ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು, ಡೇಯವರ ಆಪ್ತ ಸ್ನೇಹಿತರು ಹೇಳುವ ಪ್ರಕಾರ ಅವರೊಬ್ಬ ಅತ್ಯಂತ ವಿನಮ್ರ ಮನುಷ್ಯ. ತಮ್ಮೆದುರಿಗಿರುವವರು ಹಿರಿಯ ಕಿರಿಯರು ಎಂದು ಭಾವಿಸದೇ ಇಂದೇ ಬಗೆಯಲ್ಲ್ಲೂ ಕಾಣುವ ವಿನಯವಂತಿಕೆ ಅವರದ್ದು. ಯಾರಾದರೂ ಕಷ್ಟದಲ್ಲಿರುವವರು ಕಂಡರೆ ಮಮ್ಮಲ ಮರುಗಿ ಕೂಡಲೇ ತನ್ನಿಂದಾದ ಸಹಾಯಕ್ಕೆ ಹೊರಡುವ ಉದಾತ್ತ ವ್ಯಕ್ತಿತ್ವ ಡೇಯವರದ್ದು. ಯಾರಿಗೆ ಏನೇ ಆದರೂ ಓಡಿ ಹೋಗಿ ಸಹಾಯಕ್ಕೆ ನಿಲ್ಲುತ್ತಿದ್ದ ನಿನ್ನನ್ನು ಉಳಿಸಲು ಯಾರೂ ಬರಲಿಲ್ಲವಲ್ಲೋ..... ಎಂದು ಡೇಯವರ ತಾಯಿ ಬೀನಾ ಡೇ ಮೊನ್ನೆ ಅವರ ಶವಕ್ಕೆ ಮುಖವಿಟ್ಟು ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದದ್ದು ಅದಕ್ಕೇನೆ.

ಇತ್ತೀಚೆಗೆ ಡೇ ಬರೆಯತೊಡಗಿದ್ದು ಮುಂಬೈಯಲ್ಲಿ ಮೇರೆ ಮೀರಿದ್ದ ಆಯಿಲ್ ಮಾಫಿಯಾದ ಬಗ್ಗೆ. ಅದರಲ್ಲೂ ಭೂಗತ ಲೋಕದ ದೊರೆಗಳು ಸೇರಿಕೊಂಡು ಡೀಸೆಲ್ ಕಲಬೆರೆಕೆ ಮಾಡುತ್ತಿದ್ದ ವಿಷಯಗಳ ಕುರಿತಾಗಿ ತನಿಖಾವರದಿ ಬರೆಯತೊಡಗಿದ್ದರು. ಈ ಮಾಫಿಯಾದಲ್ಲಿ ಭೂಗತ ಕ್ರಿಮಿನಲ್‌ಗಳೊಂದಿಗೆ ಹೊರಜಗತ್ತಿನ ಅಧಿಕಾರಶಾಹಿ ಶಾಮೀಲಾಗಿರುವ ಚಿತ್ರಣವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಸಾವಿರಾರು ಕೋಟಿ ರೂಪಾಯಿಯ ವ್ಯವಹಾರಗಳಲ್ಲಿ ತೊಡಗಿರುವ ಒಂದು ಕ್ರಿಮಿನಲ್ ವ್ಯವಸ್ಥೆ ಇದನ್ನು ಹೇಗೆ ತಾನೇ ಸಹಿಸೀತು ಹೇಳಿ. ಪ್ರಾಯಶಃ ಇವರ ಮೇಲೆ ನೀಡಿದ್ದ ಸುಪಾರಿಗೆ ಅವರ ಲಾಭದ ಒಂದಂಶದ ಪಾಲೂ ಆಗಿರಲಿಕ್ಕಿಲ್ಲ. ಅಂದು ಮುಂಬೈನ ಘಾಟ್‌ಕೋಪರ್‌ನ ಅಮೃತನಗರದಲ್ಲಿರುವ ತನ್ನ ತಾಯಿಯ ಮನೆಯಿಂದ ತಾನು ಪೊವಾಯಿಯಲ್ಲಿ ಪತ್ನಿ ಹಾಗೂ ಪತ್ರಕರ್ತೆ ಶುಭಾಶರ್ಮರೊಂದಿಗೆ ವಾಸಿಸುತ್ತಿದ್ದ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಮಧ್ಯಾಹ್ನ ೨.೪೫ಕ್ಕೆ ಇವರ ಹಿಂದಿನಿಂದ ಬೈಕಿನಲ್ಲಿ ಬಂದ ಪಾತಕಿಗಳು ಹಾರಿಸಿದ ಗುಂಡಿಗೆ ಡೇ ಹಿಡಿತ ತಪ್ಪಿ ಬಿದ್ದಿದ್ದಾರೆ. ಅವರು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಮತ್ತೂ ಎಂಟು ಗುಂಡುಗಳು ಇವರ ಶರೀರವನ್ನು ಬಗೆದಿವೆ. ಕೂಡಲೇ ಸ್ಥಳೀಕರು ಕೂಗಿಕೊಂಡದ್ದು ಕೇಳಿ ಪಾತಕಿಗಳು ಓಟಕಿತ್ತಿದಾರೆ. ಇನ್ನು ಜೀವ ಹಿಡಿದುಕೊಂಡಿದ್ದ ಡೇಯವರನ್ನು ಕೂಡಲೇ ಅಲ್ಲಿದ್ದವರು ಹತ್ತಿರದ ಪೂವಾಯಿ ಪಾಲಿಕ್ನಿಕ್‌ಗೆ ಕರೆದೊಯ್ದರೂ ಅಲ್ಲಿದ್ದ ವೈದ್ಯರು ತಮ್ಮಲ್ಲಿ ಅವರ ಶುಷ್ರೂಷೆಗೆ ಬೇಕಾದ ಸಾಧನಗಳಿಲ್ಲವೆಂದು ಹೇಳಿ ತುರ್ತುಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊನೆಗೆ ಹಿರಾನಂದಿನಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಡೇ ಯವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆಗ ಸರಿಯಾಗಿ ೩ಗಂಟೆ ೫ ನಿಮಿಷ.

ವ್ಯವಸ್ಥೆಯ ದೋಷಗಳನ್ನು ತಮ್ಮ ತನಿಖಾ ವರದಿಗಳ ಮೂಲಕ ತೋರಿಸಲು ಯತ್ನಿಸಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಪತ್ರಕರ್ತರಲ್ಲಿ ಡೇ ಮೊದಲಿಗರೂ ಅಲ್ಲ. ಕೊನೆಯವರೂ ಅಲ್ಲ. ಈ ವರ್ಷದಲ್ಲೇ ಮೂವರು ಪತ್ರಕರ್ತರು ಕೊಲೆಗೀಡಾಗಿದ್ದಾರೆ. ಈ ಹತ್ಯೆಗಳಲ್ಲದೆ ಪತ್ರಕರ್ತರ ಮೇಲೆ ದೊಡ್ಡ ಮಟ್ಟದಲ್ಲಿ ಹಲ್ಲೆಗಳಾದ ೧೪ ಪ್ರಕರಣಗಳು ದಾಖಲಾಗಿವೆ.

೨೦೧೦ರ ಡೆಸೆಂಬರ್ ೨೦ ರಂದು ಛತ್ತೀಸ್‌ಗಢದ ಬಿಲಾಸ್‌ಪುರದ ದೈನಿಕ್ ಭಾಸ್ಕರ್ ಪತ್ರಿಕೆಯ ಸುಶಿಲ್ ಪಾಠಕ್‌ರನ್ನು ಅವರು ತಡರಾತ್ರಿ ಪಾಳಿ ಮುಗಿಸಿ ಮನೆಗೆ ಮರಳುವಾಗ ಪಾತಕಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ವಿಲಾಸ್‌ಪುರ ಪ್ರೆಸ್‌ಕ್ಲಬ್‌ನ ಪ್ರಧನ ಕಾರ್ಯದರ್ಶಿಯೂ ಆಗಿದ್ದ ಇವರ ಹತ್ಯೆ ಕುರಿತು ತನಿಖೆ ನಡೆಸುವ ಆಶ್ವಾಸನೆಯನ್ನು ಯಥಾಪ್ರಕಾರ ನೀಡಲಾಗಿತ್ತು. ಇದುವರೆಗೂ ಅಂತಹ ಯಾವ ಕುರುಹುಗಳೂ ಕಂಡುಬಂದಿಲ್ಲ. ಕೊನೆಗೆ ಪತ್ರಕರ್ತ ಸಮೂಹದಿಂದ ವ್ಯಾಪಕ ಟೀಕೆ ಒತ್ತಾಯ ಬಂದ ನಂತರ ಮುಖ್ಯಮಂತ್ರಿ ರಮಣ್‌ಸಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಾರೆ.

೨೦೧೧ರ ಜನವರಿ ೨೩ರಂದು ರಾಯ್‌ಪುರದ ನಯೀ ದುನಿಯಾ ಪತ್ರಿಕೆಯ ವರದಿಗಾರ ಉಮೇಶ್ ರಜಪೂತ್‌ರನ್ನೂ ದುಷ್ಕರ್ಮಿಗಳು ಹತ್ಯೆಗೈದಿದದರು. ಅವರ ಶವದ ಪಕ್ಕದಲ್ಲಿ ಖಬರ್ ಚಾಪಾ ಬಂದ್ ನಹೀ ಕರೋಗೆ ತೊ ಮಾರೆ ಜಾವೋಗೆ (ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸದಿದ್ದಲ್ಲಿ ಕೊಲೆಯಾಗ್ತೀರಿ) ಎಂಬ ಎಚ್ಚರಿಕೆಯನ್ನೂ ಉಳಿದ ಪತ್ರಕರ್ತರಿಗೆ ಬಿಟ್ಟು ಹೋಗಿದ್ದರು.

ಜನವರಿ ತಿಂಗಳಲ್ಲಿ, ಭುವನೇಶ್ವರದ ಶಹೀದ್‌ನಗರದ ಡಿಸಿಪಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯೊಂದರಲ್ಲಿ ಭಾಗವಹಿಸಲು ಹೊರಟಿದ್ದ ಧರಿತ್ತಿ ಪತ್ರಿಕೆಯ ವರದಿಗಾರ ಸೋಮನಾಥ್ ಸಾಹು ಎಂಬುವವರನ್ನು ತಡೆದು ನಿಲ್ಲಿಸಿ ಪೋಲೀಸರ ವಿರುದ್ಧ ಏನಾದರೂ ಬರೆದರೆ ಹುಷಾರ್ ಎಂದು ಧಮಕಿ ಹಾಕಲಾಗಿತ್ತು.

ಫೆಬ್ರವರಿಯಲ್ಲಿ ಒರಿಸ್ಸಾದ ಸಂವಾದ್ ದಿನಪತ್ರಿಕೆಯ ವರದಿಗಾರ ರಜತ್ ರಂಜನ್ ಸಿಂಗ್ ಮೇಲೆ ಆಡಳಿತದಲ್ಲಿರುವ ಬಿಜು ಜನತಾದಳದ ಪೀಪ್ಲಿಯ ಮುಖಂಡ ಸೈಖ್ ಬಾಬುವಿನ ಬೆಭಲಿಗರು ಮಾಡಿದರೆನ್ನಲಾದ ಹಲ್ಲೆಯಲ್ಲಿ ರಜತ್ ಮೂಳೆ ಮುರಿಯಲಾಗಿತ್ತು.

ಫೆಬ್ರವರಿಯಲ್ಲೇ, ಎಂಬಿಸಿ ಟಿವಿಯ ವರದಿಗಾರ ಕಿರಣ್ ಕನುಂಗೋ ಕಾಗೂ ಕೆಮೆರಾ ಮನ್ ಜೆನಾ ಮೇಲೆ ಅದೇ ಬಿಜೆಡೆ ಪಕ್ಷದ ಕಾರ್ಯಕರ್ತರು ಬಾಂಕಿಯಲ್ಲಿ ಹಲ್ಲೆ ನಡೆಸಿದ್ದರು. ಅದೇ ದಿನ ಪ್ರತ್ಯೇಕ ಘಟನೆಯೊಂದರಲ್ಲಿ ಓಟಿವಿ ವರದಿಗಾರ ಎನ್.ಎಂ.ವೈಶಾಖ್ ಹಾಗೂ ಅವರ ಕೆಮೆರಾ ಮನ್ ಅನುಪ್ ರಾಯ್ ಎಂಬುವವರ ಮೇಲೆ ಇವರು ಸ್ಥಳಿಯ ಜನರು ಉದ್ಯೋಗ, ಪರಿಹಾರಕ್ಕಾಗಿ ಐಒಸಿಎಲ್ ಗೇಟಿನ ಹೊರಗೆ ಮುಷ್ಕರ ನಡೆಸುತ್ತಿದ್ದುದನ್ನು ಸೆರೆಹಿಡಿಯುತ್ತಿದ್ದಾಗ ಸಮಾಜವಿರೋಧಿ ಶಕ್ತಿಗಳು ಹಲ್ಲೆ ನಡೆಸಿದ್ದರು.

ಫೆಬ್ರವರಿಯಲ್ಲಿ ಎನ್‌ಡಿಟಿವಿಯ ವದರಿಗಾರರು ಮತ್ತು ಕೆಮೆರಾಮನ್‌ಗಳು ಗುಜರಾತ್‌ನ ಮುಂಡ್ರಾದಲ್ಲಿ ಕಂಪನಿಯೊಂದು ಬಂದರು ನಿರ್ಮಿಸಲು ಮ್ಯಾಂಗ್ರೋ ಕಾಡುಗಳನ್ನು ನಾಶ ಮಾಡುತ್ತಿದ್ದುದರ ಬಗ್ಗೆ ಚಿತ್ರೀಕರಿಸಿಕೊಳ್ಳುತ್ತಿದ್ದಾಗ ಆದಾನಿ ಗ್ರೂಪ್‌ನ ಗೂಂಡಾಗಳು ಹಿಡಿದು ಕಟ್ಟಿಹಾಕಿ ಹಲ್ಲೆ ನಡೆಸಿದ್ದರು.

ಏಪ್ರಿಲ್‌ನಲ್ಲಿ, ಒಡಿಯಾ ದಿನಪತ್ರಿಕೆಯಾದ ಸೂರ್ಯಪ್ರಭದ ಪ್ರಕಾಶಕರಾದ ವಿಕಾಸ್ ಸ್ವೈನ್‌ರನ್ನು ಅವರ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟಣೆಗೊಂಡ ಕಾರಣಕ್ಕಾಗಿ ಪೋಲೀಸರು ಮನಬಂದಂತೆ ನಿಂದಿಸಿದ್ದರು. ಇದಕ್ಕೂ ಮುನ್ನ ಕಳೆದ ಸೆಪ್ಟೆಂಬರ್‌ನಲ್ಲಿ ವಿಕಾಸ್‌ರನ್ನು ಪೋಲೀಸರನ್ನು ಬಂಧಿಸಿದ್ದರು. ಆಗ ಪತ್ರಕರ್ತರು ತೀವ್ರವಾಗಿ ಪ್ರತಿಭಟಿಸಿದ್ದ ಮೇಲೂ ಮತ್ತೆ ಅವರನ್ನು ಮಾನಸಿಕ ಹಿಂಸೆಗೆ ಗುರಿಪಡಿಸಿದ್ದಾರೆ.

ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ಬರ್ದ್‌ವಾನ್‌ನಲ್ಲಿ ಸಿಪಿಎಂ ಬೆಂಬಲಿಗರು ಮೂವರು ಪತ್ರಕರ್ತರನ್ನು ಥಳಿಸಿದ್ದರು.

ಮೇ ೩ ರಂದು (ಅಂದೇ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ) ಗೀವಾದಲ್ಲಿ ಪತ್ರಕರ್ತ ಗ್ಯಾರಿ ಅಜಾವೆಡೋ ಎಂಬುವವರನ್ನು ಕಾವೇರಂನ ಗಣಿ ಕಂಪನಿಯೊಂದರ ಸಿಬ್ಬಂದಿಗಳು ಬಂಧಿಸಿದ್ದರು. ಅಲ್ಲಿ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಹೋರಾಟವನ್ನು ವರದಿ ಮಾಡಲು ಗ್ಯಾರಿ ತೆರಳಿದ್ದರು.

ಮೇ ೮ ರಂದು ಅರುಣಾಚಲ್ ಪ್ರದೇಶದ ಇಟಾನಗರದಲ್ಲಿ ಅರುಣಾಚಲ ಪ್ರದೇಶ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ನಾಬುಮ್ ತುಕಿಯ ಬೆಂಬಲಿಗರು ಸ್ಥಳೀಯ ಪಿಟಿಐ ಕಛೇರಿ ಹಾಗೂ ಅರುಣಾಚಲ್ ಪ್ರಂಟ್ ಪತ್ರಿಕಾ ಕಛೇರಿಗಳನ್ನೂ ಒಳಗೊಂಡಂತೆ ಹಲವಾರು ಮಾಧ್ಯಮ ಕಛೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ತಮ್ಮ ನಾಯಕನ ಬಗ್ಗೆ ಪ್ರಕಟವಾಗಿದ್ದ ವರದಿಯೇ ಅದಕ್ಕೆ ಕಾರಣವಾಗಿತ್ತು.

ಮೇ ೧೯ರಂದು ಮಿಡ್ ಡೇಯ ವರದಿಗಾರ ತಾರಾಕಾಂತ್ ದ್ವಿವೇದಿ (ಪರಿಚಿತ ಹೆಸರು - ಅಕೇಲಾ)ಯವರನ್ನು ಅಫಿಷಿಯಲ್ ಸೀಕ್ರೆಟ್ಸ್ ಕಾಯ್ದೆಯ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರದ ರೈಲ್ವೇ ಪೋಲೀಸರು ಒಂದು ವರ್ಷದ ಹಿಂದೆ ಪ್ರಕಟವಾಗಿದ್ದ ಲೇಖನವೊಂದರ ನೆಪವೊಡ್ಡಿ ಬಂಧಿಸಿದ್ದರು. ಸೆಪ್ಟೆಂಬರ್ ೨೫ರ ಉಗ್ರರ ದಾಳಿಯ ದಿನ ರೈಲ್ವೆ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರಗಳ ಕಳಪೆಯಾಗಿದ್ದವು ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತು. ಈ ತಾರಾಕಾಂತ್‌ರನ್ನು ಬಂಧನದಿಂದ ಬಿಡುಗಡೆಗೊಳಿಸಲು ಜ್ಯೋತಿರ್ಮಯ್ ಡೇ ಬಹಳಷ್ಟು ಪ್ರಯಾಸ ಪಟ್ಟಿದ್ದರು.

ಮೇ ೨೧ರಂದು ಕೇರಳದ ಮಾತೃಭೂಮಿ ಪತ್ರಿಕೆಯ ವರದಿಗಾರ ವಿ.ಬಿ.ಉನ್ನಿಧನ್ ಅವರ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿತ್ತು.

ವ್ಯವಸ್ಥೆಯ ನಾಲ್ಕನೆಯ ಸ್ಥಂಭ (ಫೋರ್ತ್ ಎಸ್ಟೇಟ್) ಎಂದೇ ಕರೆಯಲ್ಪಡುವ ಪತ್ರಿಕಾ ರಂಗದಲ್ಲಿ  ಜ್ಯೋತಿರ್ಮಯ್‌ರಂತವರು ವೃತಿಪರತೆ, ನಿಷ್ಠುರತೆ, ಪ್ರಾಮಾಣಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿ ವ್ಯವಸ್ಥೆಯನ್ನು ಸಹ್ಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಅದೇ ವ್ಯವಸ್ಥೆ ಅಂತಹವರ ಬಲಿಯನ್ನೇ ಸದಾ ಕೇಳುತ್ತಿರುತ್ತದೆ. ಎಂಥಹ ವಿಪರ‍್ಯಾಸ!

4 comments:

  1. ಹರ್ಷಾರವರೇ,
    ದೂರದ ದೊಡ್ಡ ಪತ್ರಿಕೆಗಳನ್ನು ಪ್ರಸಾ್ತಪಿಸಿದ್ದೀರೆ ಹೊರತು ಕನ್ನಡದ ಮಾಧ್ಯಮಗಳ ಮೇಲೆ ನಡೆದ ದಾಳಿಯನ್ನು ಒಂದೂ ಕೂಡಾ ಪ್ರಸಾ್ತಪಿಸಿಲ್ಲವಲ್ಲ. ಹತ್ತಿರದ ಕೇರಳದವರೆಗೂ ಬಂದೀರಿ, ಆದರೆ ಕರ್ನಾಟಕದಲ್ಲಿ ನ ಮಾಧ್ಯಮಗಳಿಗೆ ಯಾವುದೇ ಆತಂಕವಿಲ್ಲವೆಂದು ಕೊಂಡಂತಿದೆ. ಇತ್ತೀಚೆಗೆ ಮಂಗಳೂರಿನ ಪತ್ರಿಕಾ ಕಚೇರಿಗಳ ಮೇಲೆ ನಡೆದ ದಾಳಿ ಅದು ಪತ್ರಿಕಾ ಸಾ್ವತಂತ್ರ್ಯವನ್ನು ದಮನಿಸುವ ಕೆಲಸವಲ್ಲವೇ ? ಕೇವಲ ದೊಡ್ಡ ಪತ್ರಿಕೆಗಳ ಪತ್ರಕರ್ತರ ಮೇಲೆ ನಡೆಯುವ ದಾಳಿ ಮಾತ್ರವೇ ಪತ್ರಿಕಾ ರಂಗದ ಮುಕ್ತ ಸಾ್ವತಂತ್ರ್ಯಕ್ಕೆ ದಕ್ಕೆಯಾಗುವುದೆಂದು ಭಾವಿಸಿದ್ದೀರಾ? ಕೇವಲ ದೊಡ್ಡವರ ಕುರಿತೇ ಅಳಲು ತೋಡಿಕೊಂಡಂತಿದೆ

    ReplyDelete
  2. e elladara naduve Mangalore patrakarta B V Seetaram avara mele nadeda dourjanyavannu lekhakaru mareta hagide...

    ReplyDelete
  3. And the most distrubing this is the behaviour of Mid Day newspaper. When I took very next day paper it has a smalls article on it but they never missed to publish "Mid Day Babe" images and all sort of such images and Tips on better sex and alcohol columns.

    This is the way how todays newpapaers are making business. Even though their one senior and good friend lost his lives on the duty they took as if nothing happend and published same craps as Mid Day Babe and tips on sex!!

    Hats off to Mid Day!!

    ReplyDelete
  4. ಎಲ್ಲರೂ ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು ಬಯಸುವವರೇ. ಪತ್ರಿಕೋದ್ಯಮದಲ್ಲಿ ಬೇರೂರುತ್ತಿರುವ ಭ್ರಷ್ಟಾಚಾರದ ಕುರಿತು ಪ್ರಧಾನಿಯಾದಿಯಾಗಿ ಪ್ರತಿಯೊಬ್ಬರೂ "ರೀಮು"ಗಳಟ್ಟಲೇ ತೌಡು ಕುಟ್ಟುವವರೇ. ಆದರೆ, ಎಂಥ ಪರಿಸ್ಥಿತಿಯಲ್ಲಿ ಒಬ್ಬ ಪತ್ರಕರ್ತ ಕಾರ್ಯನಿರ್ವಹಿಸುತ್ತಾನೆ ಎಂಬುದರ ಮಾಹಿತಿ ಯಾರಿಗೂ ಬೇಡ. ಪತ್ರಿಕೆಗಳು, ಮಾಧ್ಯಮಗಳು ಭ್ರಷ್ಟಗೊಳ್ಳುತ್ತಿರುವುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರಮಾಣಿಕವಾಗಿ ಕರ್ತವ್ಯ ನಿಭಾಯಿಸುವ ಅವಕಾಶವನ್ನು ಅಲ್ಲಿಯ ವ್ಯವಸ್ಥೆಯೇ ನೀಡುತ್ತಿಲ್ಲ. ಪ್ರತಿಯೊಂದರಲ್ಲೂ ರಾಜಿ-ಕಾಬೂಲಿ. ಹರಿವ ನೀರಿಗೆ ಎದೆಗೊಟ್ಟರೆ ಬೀದಿ ಬದಿಯ ಹೆಣ. ಇಂಥ ಪರಿಸ್ಥಿತಿಯಲ್ಲಿ ಯಾರು ತಾನೇ ಪ್ರಮಾಣಿಕವಾಗಿದ್ದು, ತಮ್ಮನ್ನೂ ತಮ್ಮನ್ನು ನಂಬಿದವರನ್ನೂ ತೊಂದರೆಗೀಡು ಮಾಡಿಕೊಳ್ಳಲು ಬಯಸುತ್ತಾರೆ? ಇದು ಮಾಹಿತಿ ಹಕ್ಕು ಕಾರ್ಯಕರ್ತರಿಗೂ ಅನ್ವಯಿಸುತ್ತದೆ. ಕಂಡದ್ದನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುತ್ತೇನೆ ಎಂದು ಕೈಯಲ್ಲಿ ಲೇಖನಿ ಹಿಡಿದು, ಮಾಹಿತಿ ಹಕ್ಕು ಅರ್ಜಿಯನ್ನು ಹಿಡಿದು ಹೊರಡುವವರ ಪಾಡಿದು. ಇದರಲ್ಲಿ ತನ್ನ ಪಾತ್ರವಿಲ್ಲ ಎಂದ ಮೇಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಕ್ಕೇಕೆ ಸರ್ಕಾರಕ್ಕೆ ಹಿಂಜರಿಕೆ? ಅಷ್ಟರ ಮಟ್ಟಿನ ಮನುಷ್ಯತ್ವಕ್ಕೂ ಬರವೇ ರಾಜ್ಯದ ಚುಕ್ಕಾಣಿಯನ್ನು ಹಿಡಿದ ಸರ್ಕಾರದಲ್ಲಿ? ಕಾರಣವಿಷ್ಟೇ, ಪ್ರಕರಣದ ಎಳೆ ಹಿಡಿದು ಹೊರಟರೆ ತಮ್ಮದೇ ಸಂಪುಟದ ಯಾರದಾದರೂ ಪೈಜಾಮದ ಲಾಡಿ ಸಿಕ್ಕೀತು ಎನ್ನುವ ಭಯ. ಇದು ಮಹಾರಾಷ್ಟ್ರ ಸರ್ಕಾರದ ಆತಂಕ ಮಾತ್ರವಲ್ಲ, ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಲೋಕಸಭೆಯ ಚುನಾವಣೆಯ ತನಕ ಪ್ರತಿಯೊಂದು ಚುನಾವಣೆಯನ್ನೂ ಅನಧಿಕೃತ ಮೂಲಗಳಿಂದ ಕ್ರೋಢೀಕರಿಸಲಾದ ಸಂಪನ್ಮೂಲವನ್ನು ಬಳಸಿಕೊಂಡೇ ಎದುರಿಸುವ ಪ್ರತಿಯೊಂದು ಪಕ್ಷದ ಸಮಸ್ಯೆ ಇದು. ಇದಕ್ಕೆ ಪರಿಹಾರವನ್ನು ಎಲ್ಲಿ ಹುಡುಕುವುದು? ಅರುಣ್‌ ಕಾಸರಗುಪ್ಪೆ

    ReplyDelete