Friday, June 24, 2011

ರಾಜಕೀಯ ಪಕ್ಷಗಳ ಬಾಡಿಗೆ ಬಂಟರೇ ಪ್ರೇಕ್ಷಕರಾಗಿರುವ ಶಿವಪ್ರಸಾದ್ ಶೋ!

ಇಂಗ್ಲಿಷ್ ಚಾನಲ್‌ಗಳು ನಡೆಸುವ ಸಂವಾದ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಕರಿಸಿ ಕನ್ನಡ ನ್ಯೂಸ್ ಚಾನಲ್‌ಗಳೂ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನಾಲ್ಕೈದು ಮಂದಿ ಅತಿಥಿಗಳು, ಸುಮಾರು ಐವತ್ತು ಮಂದಿ ಪ್ರೇಕ್ಷಕರು ಇಂಥ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಸುವರ್ಣ ನ್ಯೂಸ್‌ನಲ್ಲಿ ಮೆಗಾ ಫೈಟ್ ಎಂಬ ಹೆಸರಿನಲ್ಲಿ ಹಿಂದೆ ರಂಗನಾಥ್ ಭಾರದ್ವಾಜ್ ಈ ಕಾರ್ಯಕ್ರಮ ನಡೆಸುತ್ತಿದ್ದರು. ನಂತರ ಅದನ್ನು ಹಮೀದ್ ಪಾಳ್ಯ ಮುಂದುವರೆಸಿದರು. ಟಿವಿ೯ ವಾಹಿನಿಯಲ್ಲಿ ಇದೇ ತರಹದ ಕಾರ್ಯಕ್ರಮ ನಡೆಸುವವರು ಶಿವಪ್ರಸಾದ್.

ಸಾಧಾರಣವಾಗಿ ರಾಜಕಾರಣಕ್ಕೆ ಸಂಬಂಧಿಸಿದ ವಿಷಯಗಳನ್ನೇ ಚರ್ಚೆಗೆ ಆಯ್ದುಕೊಳ್ಳಲಾಗುತ್ತದೆ. ಇತರ ವಿಷಯಗಳ ಚರ್ಚೆಯೂ ಇರುತ್ತದೆ. ಇಲ್ಲಿ ಪ್ರೇಕ್ಷಕರು ಎಂದರೆ ಜನಸಾಮಾನ್ಯರು ಎಂದರ್ಥ. ರಾಜಕೀಯ ಪಕ್ಷಗಳ ನಿಲುವನ್ನು ಹೇಳಲು ಅತಿಥಿಗಳಾಗಿ ರಾಜಕೀಯ ನಾಯಕರೇ ಇರುತ್ತಾರೆ. ಇವರನ್ನು ಪ್ರಶ್ನಿಸುವವರು ಸಹಜವಾಗಿಯೇ ನಿರೂಪಕರು ಮತ್ತು ಜನಸಾಮಾನ್ಯ ಪ್ರೇಕ್ಷಕರು.

ಆದರೆ ಶಿವಪ್ರಸಾದರ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರು ಜನಸಾಮಾನ್ಯರಲ್ಲ. ರಾಜಕೀಯ ಪಕ್ಷಗಳ ಬಾಡಿಗೆ ಬಂಟರು. ಇದು ನಮ್ಮ ಆರೋಪವಲ್ಲ. ಸ್ವತಃ ಶಿವಪ್ರಸಾದ್ ಅವರೇ ಈ ವಾರದ ಚರ್ಚೆಯಲ್ಲಿ ಬಹಿರಂಗಪಡಿಸಿದ ರಹಸ್ಯ.
ಸಾಧಾರಣವಾಗಿ ರಾಜಕೀಯ ಸಂಬಂಧಿ ಚರ್ಚೆಗಳಲ್ಲಿ ಪ್ರೇಕ್ಷಕರು ಅತಿಥಿಗಳ ಮೇಲೆ ಹರಿಹಾಯುವುದು, ಪ್ರೇಕ್ಷಕರೇ ಪರಸ್ಪರ ದೂಷಿಸಿಕೊಳ್ಳುವುದು, ಒಮ್ಮೊಮ್ಮೆ ಇದು ಹೊಡೆದಾಟದ ಹಂತಕ್ಕೂ ತಲುಪುವುದನ್ನು ನಾವು ನೋಡಿದ್ದೇವೆ. ನೀವು ಗಮನಿಸಿರಬಹುದು, ಇಂಥ ಸಂಘರ್ಷದ ಕ್ಲಿಪ್ಪಿಂಗ್‌ಗಳನ್ನೇ ಪ್ರೊಮೋಗಳಲ್ಲಿ ಬಳಸಲಾಗುತ್ತದೆ. ಅದರರ್ಥ ಚಾನಲ್‌ಗಳಿಗೆ ಇಂಥ ದೃಶ್ಯಗಳು ಬೇಕು ಮತ್ತು ಬೇಕೇಬೇಕು. ಸಾಮಾನ್ಯ ಜನರು ಬಂದು ಗದ್ದಲ ಮಾಡುತ್ತಾರೆ ಎಂದು ನಂಬುವಂತಿಲ್ಲ, ಹೀಗಾಗಿ ಅವರಿಗೆ ರಾಜಕೀಯ ಪಕ್ಷಗಳ ಪುಡಾರಿಗಳೇ ಬೇಕು.

ಬಿಜೆಪಿಯ ಧನಂಜಯ ಕುಮಾರ್, ಕಾಂಗ್ರೆಸ್‌ನ ಬಿ.ಎಲ್.ಶಂಕರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್ ಮತ್ತು ಓರ್ವ ಜ್ಯೋತಿಷಿ ಭಾಗವಹಿಸಿದ್ದ ಶಿವಪ್ರಸಾದ್ ಶೋನಲ್ಲಿ ಆಣೆ-ಪ್ರಮಾಣದ ಚರ್ಚೆ ನಡೆಯುತ್ತಿತ್ತು. ಬಿಜೆಪಿಯವರು ಮಾಡಿದ ಎಂಥದ್ದೇ ಪಾಪವನ್ನಾದರೂ ಸರಿ ಅದನ್ನು ಸಮರ್ಥಿಸಿಕೊಳ್ಳಲು ಸದಾ ತುದಿಗಾಲಲ್ಲಿ ನಿಲ್ಲುವ ಧನಂಜಯ ಕುಮಾರ್ ಯಾಕೋ ಅಪ್ ಸೆಟ್ ಆದಂತಿತ್ತು. ಪ್ರೇಕ್ಷಕರ ಕಡೆಯಿಂದ ಕೇಳಿಬಂದ ಮಾತುಗಳಿಗೆ ಅವರು ರಾಂಗ್ ಆಗಿ, ನಾಲಿಗೆ ಬಿಗಿ ಹಿಡಿದು ಮಾತನಾಡ್ರೀ ಎಂದು ಕಿರುಚುತ್ತಿದ್ದರು.

ಆದರೂ ಪ್ರೇಕ್ಷಕರ ಮಾತಿನ ಕೂರಂಬು ತಿವಿಯತೊಡಗಿದಾಗ ಹತಾಶರಾದ ಧನಂಜಯ ಕುಮಾರ್, ಅಲ್ರೀ ಶಿವಪ್ರಸಾದ್ ಹೀಗೆ ಒಂದೇ ಮಾಬ್ ತಂದು ಕೂರಿಸುವುದು ಸರಿನಾ? ಎಂದು ಪ್ರಶ್ನಿಸಿದರು.

ಶಿವಪ್ರಸಾದ್ ಈ ಆರೋಪವನ್ನು ಸೀರಿಯಸ್ಸಾಗಿ ತೆಗೆದುಕೊಂಡೇಬಿಟ್ಟರು. ನೋಡಿ ಸ್ವಾಮಿ, ನಿಮ್ಮ ಪಕ್ಷದ ಪಿಆರ್‌ಓ ಇದ್ದಾರಲ್ಲ, ಶಿವಾನಂದ್ ಅಂತ ಅವರಿಗೆ ಹತ್ತು ಸರ್ತಿ ಫೋನ್ ಮಾಡಿದೆವು. ಏನು ಕೆಲಸ ಮಾಡ್ತಾರೋ ಏನೋ ಅವರು. ಉತ್ತರ ಕೊಡಲಿಲ್ಲ. ಕಡೆಗೆ ನಾನೇ ಒಂದು ಎಸ್‌ಎಂಎಸ್ ಮಾಡಿದೆ. ನೀವು ನಮ್ಮ ಕರೆಗೆ ಉತ್ತರಿಸುತ್ತಿಲ್ಲ. ನೀವು ಕಳುಹಿಸುವ ಜನ ಇಲ್ಲದೆಯೇ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಟಿವಿ೯ ಜತೆಗೆ ನಿಮ್ಮ ಅಸಹಕಾರಕ್ಕೆ ಧನ್ಯವಾದಗಳು ಅಂತ ಎನ್ನುತ್ತ ತಮ್ಮ ಮೊಬೈಲ್ ಹೊರತೆಗೆದು ಸೆಂಟ್ ಮೆಸೇಜ್ ತೋರಿಸಿಯೇ ಬಿಟ್ಟರು.

ಅಲ್ಲಿಗೆ ಶಿವಪ್ರಸಾದ್ ಅವರ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರನ್ನು ಕಳುಹಿಸುವ ಹೊಣೆ ರಾಜಕೀಯ ಪಕ್ಷಗಳಿಗೇ ಸೇರಿದ್ದು ಎಂದಾಯಿತು. ಇವತ್ತಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪಿಆರ್‌ಓಗಳು ಮಾತ್ರ ತಮ್ಮ ಬಂಟರನ್ನು ಕಳುಹಿಸಿರಬಹುದು. ಹೀಗಾಗಿಯೇ ಧನಂಜಯ ಕುಮಾರ್ ಅಪ್‌ಸೆಟ್ ಆಗಿದ್ದಿರಬಹುದು.

ಹಾಗಿದ್ದ ಮೇಲೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಬಾಡಿಗೆ ಬಂಟರನ್ನು ಸಾಮಾನ್ಯ ಪ್ರೇಕ್ಷಕರು ಎಂಬಂತೆ ಬಿಂಬಿಸುವುದು ಏಕೆ? ಸಭಿಕರ ಆಸನಗಳನ್ನು ಮೂರು ವಿಭಾಗ ಮಾಡಿ, ಮೂರು ರಾಜಕೀಯ ಪಕ್ಷಗಳಿಗೆ ಹಂಚಿ, ಪ್ರತಿ ಭಾಗದಲ್ಲೂ ಆಯಾ ರಾಜಕೀಯ ಪಕ್ಷದ ಬಾವುಟ ನೆಟ್ಟು ಕಾರ್ಯಕ್ರಮ ನಡೆಸಬಹುದಲ್ಲ?

ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವ ರಾಜಕೀಯ ಪಕ್ಷದ ಕಾರ್ಯಕರ್ತರೂ ಅಲ್ಲದ ಸಾಮಾನ್ಯ ಜನರು ಭಾಗವಹಿಸಲು ಯಾಕೆ ಅವಕಾಶ ನೀಡುವುದಿಲ್ಲ? ಅಥವಾ ಇದೇ ಪ್ರಶ್ನೆಯನ್ನು ಇನ್ನೊಂದು ರೂಪದಲ್ಲಿ ಕೇಳುವುದಾದರೆ ರಾಜಕೀಯ ಪಕ್ಷಗಳ ನಿಲುವು ಹೇಳಲು ರಾಜಕಾರಣಿಗಳೇ ಅತಿಥಿಗಳಾಗಿರುವಾಗ ಪ್ರೇಕ್ಷಕರ ರೂಪದಲ್ಲಿ ರಾಜಕಾರಣಿಗಳ ಭಕ್ತರು, ಪುಡಿಗಳೇ ಬೇಕೆ?

ಎಲ್ಲರೂ ಬೇರೆ ಬೇರೆ ರಾಜಕೀಯ ಪಕ್ಷಗಳ ಹಿಂಬಾಲಕರೇ ಆಗಿರುವಾಗ ನೀವು ನಡೆಸುವ ಚರ್ಚೆ ವಸ್ತುನಿಷ್ಠವಾಗಿರಲು ಹೇಗೆ ಸಾಧ್ಯ? ಜನಸಾಮಾನ್ಯರ ಮಾತುಗಳನ್ನು ಆಡುವವರು ಯಾರು? ಅದು ಬೇಡ ಅನ್ನುವುದಾದರೆ ಇಂಥ ಚರ್ಚೆ ನಡೆಸುವ ಅಗತ್ಯವಾದರೂ ಏನು? ಅದನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಹೇರುವುದಾದರೂ ಯಾಕೆ?

ಶಿವಪ್ರಸಾದ್ ಏನೇ ಕಾರ್ಯಕ್ರಮ ಮಾಡಿದರೂ ಹೋಮ್ ವರ್ಕ್ ಮಾಡಿಯೇ ಮಾಡುತ್ತಾರೆ. ಶ್ರದ್ಧೆ ಮತ್ತು ಶ್ರಮ ಎರಡನ್ನೂ ವಿನಿಯೋಗಿಸುವುದು ಕಣ್ಣಿಗೆ ಕಾಣುತ್ತದೆ. ಆದರೆ ತಮ್ಮ ಕಾರ್ಯಕ್ರಮಕ್ಕೆ ರಾಜಕೀಯ ಪಕ್ಷಗಳ ಬಂಟರನ್ನು ಕರೆಸಿ ಪ್ರೇಕ್ಷಕರನ್ನಾಗಿಸುವ ಅನಿವಾರ್ಯತೆ ಏನು ಎಂಬುದಕ್ಕೆ ಅವರೇ ಉತ್ತರಿಸಬೇಕು.

ಇವತ್ತಿನ ಎಪಿಸೋಡ್ ನೋಡಿದ ಮೇಲೆ ಇಂಥ ಕಾರ್ಯಕ್ರಮಗಳ ನಿರ್ಮಾಪಕರ ಮೇಲೆ ಸಿಟ್ಟೂ ಬರುತ್ತಿಲ್ಲ, ಬೇಸರವೂ ಆಗುತ್ತಿಲ್ಲ, ಕನಿಕರವಾಗುತ್ತಿದೆ.

17 comments:

  1. ಥೂ..ಛಿ...ಅಸಹ್ಯ

    ReplyDelete
  2. ಇಂಥ ಕಾರ್ಯಕ್ರಮಗಳಿಗೆ ಆಯಾ ಪಕ್ಷದ ಮುಖಂಡ/PRO ಗಳೇ ವೀಕ್ಷಕರನ್ನು
    ಹಿಡಿದು ತರುತ್ತಾರೆ ಎಂಬುದು ಅಸಹ್ಯದ ಸಂಗತಿ.ಹೀಗಾದರೆ ಅದನ್ನು ಚರ್ಚೆ ಎಂದು ಕರೆಯಲಾಗದು.
    ಅದಿರಲಿ,ಒಂದುವೇಳೆ TVಯವರು ಪ್ರಾಮಾಣಿಕವಾಗಿಯೇ ಆಸಕ್ತಿಯಿರುವ ವೀಕ್ಷಕರನ್ನು ಕರೆತರುತ್ತಾರೆ ಎಂದು ಭಾವಿಸಿದರೂ ಕೂಡ ಅವರು ಹ್ಯಾಗೆ ಆಹ್ವಾನ ನೀಡುತ್ತಾರೆ ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ.ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಿಗೆ TV ಯವರು ''ಆಸಕ್ತಿಯುಳ್ಳವರು apply ಮಾಡಿ" ಅಂತ ಜಾಹೀರಾತು ನೀಡುತ್ತಾರೋ?
    ಅಥವಾ ತಮಗೆ ಒಳಗೊಳಗೇ ಪರಿಚಯವಿದ್ದ ಸ್ನೇಹಿತರಿಗೆ ಫೋನ್ ಮಾಡಿ ಕರೆಸಿಕೊಳ್ತಾರೋ?
    ಅಥವಾ ಅಂಥ ಕಾರ್ಯಕ್ರಮ ಶುರುವಾಗುವ ಸಮಯದಲ್ಲಿ studio ಹೊರಗಡೆ ಯಾರು ಓಡಾಡ್ತಿರ್ತಾರೋ ಅಂಥವರನ್ನೆಲ್ಲ ಒಟ್ಟುಗೂಡಿಸಿ "ಹೀಗೀಗೆ.." ಅಂಥ ಅರ್ಜೆಂಟಾಗಿ ವಿವರಿಸಿ ಅವರನ್ನೆಲ್ಲ ತಂದು ಕೂಡಿಸ್ತಾರೋ..?
    ಯಾರಾದ್ರು ಹೇಳ್ತೀರಾ ಪ್ಲೀಸ್?

    -ರಾಘವೇಂದ್ರ ಜೋಶಿ

    ReplyDelete
  3. by & large tv9 system is ok. shivu ..............!

    ReplyDelete
  4. ಛೀ! ಕರ್ಮಕಾಂಡ.........

    ReplyDelete
  5. ಟಿವಿ 9 ನ ಈ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ.. ಪಕ್ಷದ ಕಾರ್ಯಕರ್ತರನ್ನು ಕರೆತಂದು ಪ್ರೋಗ್ರಾಮ್ ಮಾಡಿ ಅದನ್ನು ಜನಸಾಮಾನ್ಯರ ಧ್ವನಿ ಎಂದು ತೋರಿಸುವುದು ನಿಜಕ್ಕೂ ಹಾಸ್ಯಾಸ್ಪದ..ಸಂಪಾದಿಕೀಯ ಇಂತಹ ಒಂದು ವಿಷಯದ ಮೇಲೆ ಬೆಳಕು ಚೆಲ್ಲಿರುವುದು ನಿಜಕ್ಕೂ ಶ್ಲಾಘನೀಯ...

    ReplyDelete
  6. ಕಾವಿ, ಕಾಕಿ, ಕಾದಿ, ಇವುಗಳ ಜೊತೆಗೆ ಮತ್ತೊಂದು ಮಾದ್ಯಮ..!!!
    ಈ ನಾಲಕ್ಕೂ ನಮ್ಮ ದೇಶವನ್ನು ಅದೋಗತಿಗೆ ತಳ್ಳುತ್ತಿವೆ...

    ReplyDelete
  7. TV9 may be most popular News Channel, but there is no credibility.

    ReplyDelete
  8. ರಾಘವೇಂದ್ರ ಜೋಷಿಯವರೇ.. ಕೆಲವು ತಿಂಗಳ ಹಿಂದೆ ನ್ಯೂಸ್ ಚಾನೆಲ್ ಒಂದರಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸುವ ಗೆಳೆಯನೊಬ್ಬನಿಂದ ಫೋನ್ ಕಾಲ್ ಬಂತು. "ಗುರೂ ಪ್ರೋಗ್ರಾಂಗೆ ಒಂದಷ್ಟು ಆಡಿಯೆನ್ಸ್ ಬೇಕು ನಿನ್ ಫ್ರೆಂಡ್ಸ್ ಕಳಿಸ್ತೀಯಾ, ಅವರಿಗೆ ಮಧ್ಯಾನ ಊಟ ಜೊತೆಗೆ ತಲೆಗೆ ನೂರು ರೂಪಾಯಿ ಕೊಡ್ತೀವಿ ಅಂತ" ನನಗೆ ನಗು ಬಂದರೂ ಸಾವರಿಸಿಕೊಂಡು.. ಈ ಪೇಯ್ಡ್ ಆಡಿಯೆನ್ಸ್ ಇಟ್ಟುಕೊಂಡು ಅದಿನ್ನೆಂತಾ ಡಿಬೇಟ್ ಮಾಡ್ತಾರೆ ಇವರು ನೋಡೋಣ ಅಂತ ನನ್ನ ಪರಿಚಿತರಲ್ಲಿ ಇಬ್ಬರನ್ನು ಎತ್ತಾಕಿಕೊಂಡು ಟಿವಿ ಚಾನಲ್ ಸ್ಟುಡಿಯೋಗೆ ಹೋದೆ. ಅಲ್ಲಿ ಆಗಲೇ ಪೇಯ್ಡ್ ಆಡಿಯೆನ್ಸ್ ಗಳ ಸಮೂಹವೇ ನೆರೆದಿತ್ತು. ಅವರಲ್ಲಿ ಒಂದಷ್ಟು ಜನರ ಮಾತುಕತೆಗಳು ಹೀಗಿದ್ದವು. "ಮ್ಯಾಗಡೆ ಉಪ್ಪಿಟ್ಟು ಕೊಟ್ರಲ್ಲ.. ಅದಕ್ಕೆ ಅವರೆಕಾಳು ಹಾಕಿದ್ರು ಕಣೆ, ಸಂಜೆಗೆ ನಾನೂ ಮಾಡಬೇಕು" " ನಮ್ಮುನ್ನೇನೂ ಕೊಶ್ಚನ್ ಮಾಡಲ್ವ ಅಲ್ವಾ ಗುರೂ.. ಕ್ಯಾಮರಾ ನಮ್ ಕಡೀಕೆ ಬತ್ತಿದದಂಗೆ ಹಲ್ಲು ಬಿಡದು, ಎಲ್ಲಾರೂ ಕೂಗಿದ್ರೆ ನಾವೂ ಜೋರಾಗಿ ಕೂಗೋದು ಅಷ್ಟೇ ತಾನೇ" "ಮಧ್ಯಾನಗಂಟ ಇದ್ದು ಕೊಡಾ ಕಾಸು ತಗಂಡು ಫಸ್ಟ್ ಶೋಗಾದ್ರೂ ಹೋಗಬೇಕಮ್ಮ", "ಅತ್ತೇ.. ಬುಧವಾರ ಬತ್ತದಂತೆ ಪ್ರೋಗ್ರಾಮು.. ಚಿಕ್ಕಪ್ಪುಂಗೆ ಹೇಳುಬುಡ್ರಿ ಅವುರು ಮದುವೆಗೆ ಕೊಡಿಸಿದ ಕಾಸಿನಸರ ಹಾಕ್ಕೆಂಡು ಇದೀನಿ, ನೋಡಕೇಳ್ರಿ ಅವುರಿಗೆ ".. ಇಂಥಹ ಪ್ರಬುದ್ಧರನ್ನು ಪ್ರತಿಕ್ರಿಯೆ ನೀಡುವ ಜಾಗದಲ್ಲಿ ಕೂರಿಸಿ ಕಾರ್ಯಕ್ರಮ ಶುರುವಾಯಿತು. ಅದು ಗಣಿ ಗದ್ದಲದ ಕುರಿತ ಚರ್ಚೆ. ಅಲ್ಲಿಯೂ ಈ "ಪ್ರಬುದ್ಧ"ರ ಜೊತೆಯಲ್ಲಿ ರಾಜಕೀಯ ಕಾರ್ಯಕರ್ತರ ದಂಡೊಂದಿತ್ತು. ಅಲ್ಲಿ ಅವರ ಪಕ್ಷಕ್ಕೆ ಮರ್ಮಕ್ಕೆ ತಾಗುವಂತೆ ಎದುರು ಪಕ್ಷದವರು ಅಂದರೆ ಇವರು ಹೋ ಅಂತ ಕಿರುಚುತ್ತಿದ್ದರು. "ಪ್ರಬುದ್ಧರೂ" ಆಗಾಗ್ಗೆ ತಮ್ಮ ಅವಕಾಶಗಳನ್ನು ಅನುಸರಿಸಿ ಕೋರಸ್ ಸೇರಿಸುತ್ತಿದ್ದರು. ತಂತ್ರಜ್ಞರ, ನಿರೂಪಕರ ಮತ್ತು ಮಾತುಗಾರರ ಹೊರತುಪಡಿಸಿ ಇಡೀ ಸ್ಟುಡಿಯೋ ವಿದೂಷಕರ ಸಂತೆಯಂತೆ ಆಗಿ ಹೋಗಿತ್ತು. ಅಂತೂ ಇಂತೂ ಪ್ರೋಗ್ರಾಂ ಮುಗೀತು.. ನನಗೆ ಫೋನ್ ಮಾಡಿದ ಗೆಳೆಯನಿಗೆ ಏನೋ ಮಾರಾಯ ಇದೂ.. ಆರ್ಕೆಸ್ಟ್ರಾ ಆಡಿಯೆನ್ಸ್ ಗೂ ಡಿಬೇಟ್ ಆಡಿಯೆನ್ಸ್ ಗೂ ವ್ಯತ್ಯಾಸ ಇಲ್ಲವೇನಯ್ಯ.. ಅಂತ ಅಂದು ಟಿವಿಯವರ ನೂರು ರುಪಾಯಿಯನ್ನು ನಿರಾಕರಿಸಿ ವಾಪಸ್ ಬಂದೆ. ಇದು ಇವತ್ತಿನ ಡಿಬೇಟ್ ಪ್ರೋಗ್ರಾಂಗಳ ಸದ್ಯದ ಪರಿಸ್ಥಿತಿ. ಇವುಗಳಿಂದ ಇನ್ನೆನನ್ನು ತಾನೇ ನಿರೀಕ್ಷಿಸಲು ಸಾಧ್ಯ ಜೋಷಿಯವರೇ.. - ಟಿ.ಕೆ. ದಯಾನಂದ

    ReplyDelete
  9. kulitu 24 ghante news noduva janaranna bakra madtive ea news channelgalu

    ReplyDelete
  10. ನಿಮ್ಮ ರಾಜಕೀಯ ವರದಿಗಳನ್ನು ಗಮನಿಸಿದರೆ... ಯಾಕೊ ಪಕ್ಷಪಾತ ವಾಸನೆ ಬಡಿಯುತ್ತದೆ....

    ಅಲ್ಲಿ ಕರೆಸಿರೋದು ಪಕ್ಷದ spoke person ಅವರು ತಮ್ಮ ಪಕ್ಷದ ಪರವಾಗಿ ಮಾತಾಡಬೇಕು...ಹಾಗು ಮಾತಾಡ್ತಾರೆ... ಆದ್ರೆ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಮಾತ್ರ ಕರೆಸಿದ್ದು ತಪ್ಪು....

    ವಿಜಯ್ ಮಂಗಳೂರು...

    ReplyDelete
  11. ಇಂಗ್ಲೀಷ್ ಚಾನೆಲ್ನವರು ಪ್ರೇಕ್ಷಕರನು ಇಂಟರ್ ಆಕ್ಟಿವ್ ಮಾಡಲು ಫೇಸಬುಕ್ ಅಥವಾ ಟ್ವಿಟತ್ ಮೊರೆಹೋಗುತ್ತಾರೆ
    ಪಾಪ್ ಟಿವಿ೯ ಪಾಲಿಗೆ ಧನಂಜಯ ಕುಮಾರ್, ದತ್ತಾ ಹಾಗೂ ಶಂಕರ್ ಮೇಲೆ ಅವಲಂಬಿತರಾಗಬೇಕು.
    ಇದೊಂಥರಾ ಪೂರ್ವಪಾವತಿ ಚರ್ಚೆ ಇದನ್ನು ನೋಡುವುದು ವೇಸ್ಟ. ನಾನು ಟಾಟಾ ಸ್ಕೈ ಹೊಂದಿರುವೆ ಅದರಲ್ಲಿ
    ಸುವರ್ಣ ನ್ಯೂಸ್, ಸಮಯ, ಜನಶ್ರೀ ಕೊಡುತ್ತಿಲ್ಲ ಅದರ ಬಗ್ಗೆ ಅವರಿಗೆ ದೂರು ಸಲ್ಲಿಸಿದ್ದೆ ಆದರೆಈಗ ಅವರಿಗೆ
    ಧನ್ಯವಾದ ಹೇಳಬೇಕು ಇನ್ನೂ ಕೆಟ್ಟ ಚರ್ಚೆ ನೋಡುವುದು ತಪ್ಪಿಸಿದ್ದಕ್ಕೆ...!

    ReplyDelete
  12. @ಸಂಪಾದಕೀಯ,
    ಸುದ್ದಿ ವಾಹಿನಿಗಳ ಚರ್ಚೆ-ಸಂವಾದಗಳು ಟೈಂಪಾಸ್ ಎನ್ನುವಂತಿರುತ್ತವೆ ವಿನಹ ವಿಚಾರ ಪ್ರಚೋದಕವಾಗಿ ಮೂಡಿಬರುವಲ್ಲಿ ಎಡವುತ್ತಿವೆ, prepaid Audience tv9 ಗೆ ಮಾತ್ರ ಸೀಮಿತವಾದಂತಿಲ್ಲ ಎಲ್ಲಾ ಸುದ್ದಿ ವಾಹಿನಿಗಳದ್ದು ಇದೇ ಕಥೆ.. ಸಂವಾದ ಗೋಷ್ಠಿಗಳಲ್ಲಿ ಬೇರೆ ಬೇರೆ ಆಕರ್ಷಣೆಗಳನ್ನಿಟ್ಟು, ಗಲಾಟೆ ಮಾಡಿಸಿ ಅದನ್ನು ನೈಜವೆನ್ನುವಂತೆ ನಿರ್ಮಾಣ ಮಾಡಿ ವೀಕ್ಷಕರಿಗೆ ತೋರಿಸಲಾಗುತ್ತಿದೆ. ಅಕಸ್ಮಿಕವಾಗಿ ಶಿವಪ್ರಸಾದ್ ಅದನ್ನು ಬಹಿರಂಗಪಡಿಸಿದ್ದಾರಷ್ಟೇ.. ಇದಕ್ಕೆ ಅವರ ಮೇಲಿನ ಒತ್ತಡವು ಇರಬಹುದು ಅಂತ ಅನ್ನಿಸುತ್ತೆ. ಸುದ್ದಿಗಳ ಬೈಟ್ ತೆಗೆದುಕೊಳ್ಳುವಾಗಲು ಮುಂಚಿತವಾಗಿ trial ಮಾಡಿ ತೆಗೆದುಕೊಳ್ಳುತ್ತಾರೆ ಇದು ಹಾಸ್ಯಾಸ್ಪದವೇ ಸರಿ

    ReplyDelete
  13. NOT ONLY GOVERNMENTS AND POLITICAL PARTIES AND POLITICIANS, EVEN MEDIA IS CORRUPT IN INDIA.ALL ARE BUSY IN AMASSING QUICK MONEY IN CRORE. EVEN GOD CAN NOT HELP THIS COUNTRY.

    ReplyDelete
  14. uttama samajakkagi tv9 endu gamanisidaga....yava samaja tv9 nirmisalu horatide....endu tiliyabahudu...TRP hechchisikollalu.....ee reeti aggada nadavalike....charchegalli bhagavahisuva sabhya prekshkarige mujugara untu maduvanthaddu.....

    ReplyDelete
  15. T.k.ದಯಾನಂದ ಅವರೇ,
    ನನ್ನ doubtsಗಳಿಗೆ ಸರಿಯಾಗಿಯೇ ಪರಿಹಾರ ನೀಡಿದ್ದೀರಿ.
    ಧನ್ಯವಾದಗಳು. :-)
    so,ಇಲ್ಲಿಗೆ ಬಂತು ನಮ್ಮ ಮೀಡಿಯಾಗಳ ದುಸ್ಥಿತಿ.
    ಎಂತಾ ಮಾಡೋದು ಹೇಳಿ,ಕರ್ಮ ಕರ್ಮ!

    ReplyDelete
  16. It is true in the case of all other chnls also. They also do the same procedure. but the difference is they usually hide this procedure. but this time shivaprasad revealed it thats all.

    ReplyDelete