Tuesday, March 15, 2011

ಮೌಢ್ಯ ಮತ್ತು ಜ್ಯೋತಿಷ್ಯಗಳ ಕುರಿತು ವಿವೇಕಾನಂದರು...


ಸತ್ಯವನ್ನು ಮಾತ್ರ ನಂಬುವುದು ನಮ್ಮ ಕರ್ತವ್ಯ. ಮೂಢನಂಬಿಕೆಗಳನ್ನು ಅಥವಾ ಹಿಂದಿನಿಂದ ಬಂದ ಕಂದಾಚಾರಗಳನ್ನು ವಿವೇಚನೆ ಇಲ್ಲದೆ ನಂಬುವುದು ನಮ್ಮಲ್ಲಿ ಎಷ್ಟು ಬಲವಾಗಿದೆ ಎಂದರೆ, ನಾವು ಮುಂದೆ ಹೋಗದಂತೆ ಇಲ್ಲಿಯೇ ನಮ್ಮ ಕೈಕಾಲುಗಳನ್ನು ಕಟ್ಟಿದಂತೆ ಆಗಿಹೋಗಿದೆ. ಏಸುಕ್ರಿಸ್ತ, ಮಹಮ್ಮದ್ ಮುಂತಾದ ಮಹಾಪುರುಷರೂ ಇಂತಹ ಹಲವು ಮೂಢನಂಬಿಕೆಗಳನ್ನು ನಂಬಿದ್ದರು. ಅವರೂ ಕೂಡ ಅವುಗಳಿಂದ ಪಾರಾಗಿಲ್ಲ. ನಿಮ್ಮ ದೃಷ್ಟಿ ಯಾವಾಗಲೂ ಸತ್ಯದ ಕಡೆಯೇ ಇರಬೇಕು, ಎಲ್ಲ ಬಗೆಯ ಮೂಢನಂಬಿಕೆಗಳನ್ನೂ ನಿರ್ಲಕ್ಷಿಸಬೇಕು.೧

ಅಧ್ಯಾತ್ಮಿಕ ಭಾವನೆಯಿಂದ ಪ್ರಪಂಚವನ್ನು ಗೆಲ್ಲುವುದೆಂದರೆ ಜೀವದಾನ ಮಾಡುವಂತಹ ಮಹಾಭಾವನೆಯನ್ನು ಹೊರಗೆ ಕಳುಹಿಸಬೇಕು. ಶತಮಾನಗಳಿಂದ ಆಲಂಗಿಸಿದ, ಕೆಲಸಕ್ಕೆ ಬಾರದ ಮೂಢನಂಬಿಕೆಗಳನ್ನು ಕಳುಹಿಸುವುದಲ್ಲ, ಇಂತಹ ಕಳೆಯನ್ನು ನಮ್ಮ ದೇಶದಿಂದಲೇ ಕಿತ್ತು ಆಚೆಗೆ ಒಗೆಯಬೇಕು. ಅವು ಎಂದಿಗೂ ನಾಶವಾಗಲಿ; ಅವೇ ಜನಾಂಗದ ಅಧೋಗತಿಗೆ ಕಾರಣ. ಅವು ನಮ್ಮನ್ನು ಹುಚ್ಚರನ್ನಾಗಿ ಮಾಡುವುದು. ಯಾವ ಮಿದುಳು ಉದಾತ್ತ ಉಚ್ಛಭಾವನೆ ಆಲೋಚಿಸಲಾರದೋ, ತನ್ನ ಸ್ವಾತಂತ್ರ್ಯವನ್ನೆಲ್ಲ ಕಳೆದುಕೊಂಡಿದೆಯೋ, ಧರ್ಮದ ಹೆಸರಿನಲ್ಲಿರುವ ಕೆಲಸಕ್ಕೆ ಬಾರದ ಮೂಢನಂಬಿಕೆಗಳನ್ನೆಲ್ಲಾ ಸ್ವೀಕರಿಸಿ ವಿಷರೂಪಕ್ಕೆ ಬರುತ್ತಿದೆಯೋ ಅಂತಹ ಮಿದುಳು ಉಳ್ಳವರ ಹತ್ತಿರ ಬಹಳ ಜಾಗರೂಕರಾಗಿರಬೇಕು.

ಭರತ ಖಂಡದಲ್ಲಿ ನಮ್ಮ ಕಣ್ಣೆದುರು ಕಾಣುವಂತೆಯೇ ಹಲವು ಅಪಾಯಗಳಿವೆ. ಇತ್ತ ಬಂದರೆ ಹುಲಿ, ಅತ್ತ ಸರಿದರೆ ದರಿ ಎಂಬಂತೆ ಇರುವ ಎರಡು ದೋಷಗಳೇ ಶುದ್ಧ ಜಡವಾದ ಮತ್ತು ಅದಕ್ಕೆ ವಿರುದ್ಧವಾದ ಮೂಢನಂಬಿಕೆಗಳು. ಇವುಗಳಿಂದ ನಾವು ಪಾರಾಗಬೇಕು. ಪಾಶ್ಚಾತ್ಯ ಜ್ಞಾನ ಸುರೆಯನ್ನು ಹೀರಿ ತಾನು ಸರ್ವಜ್ಞ ಎಂದು ಮನುಷ್ಯ ಹೇಳಿಕೊಳ್ಳುವನು. ಹಿಂದಿನ ಋಷಿಗಳನ್ನು ಅಣಕಿಸುವನು. ಅವನ ಪಾಲಿಗೆ ಭಾರತೀಯ ಭಾವನೆಯೆಲ್ಲ ಕೆಲಸಕ್ಕೆ ಬಾರದುದು. ತತ್ವ ಕೇವಲ ಹಸುಳೆಗಳ ಹರಟೆ, ಧರ್ಮ ಮೂಢರ ನಂಬಿಕೆಯಾಗಿದೆ. ಮತ್ತೊಂದು ಅತಿರೇಕಕ್ಕೆ ಹೋಗುವ ಕೃತಕ ವಿದ್ಯಾವಂತನಿರುವನು. ಪ್ರತಿಯೊಂದು ಶಕುನವನ್ನು ಶಾಸ್ತ್ರೀಯವಾಗಿ ವಿವರಿಸಲು ಯತ್ನಿಸುವನು. ತನ್ನ ವಿಚಿತ್ರ ಜಾತಿಗೆ, ದೇವರಿಗೆ, ಹಳ್ಳಿಗೆ ಸೇರಿದ ಪ್ರತಿಯೊಂದು ಮೂಢನಂಬಿಕೆಗೂ ದಾರ್ಶನಿಕ, ತಾತ್ವಿಕ ಮತ್ತು ಇನ್ನೂ ಎಂತಹದೋ ವಿವರಣೆ ಕೊಡಲು ಯತ್ನಿಸುವನು. ಅವನಿಗೆ ಪ್ರತಿಯೊಂದು ಗ್ರಾಮದ ಆಚಾರವೂ ಒಂದು ವೇದವಾಕ್ಯ. ಅದನ್ನು ಜಾರಿಗೆ ತರುವುದರ ಮೇಲೆ ತಮ್ಮ ಜನಾಂಗದ ಜೀವನ ನಿಂತಿದೆ ಎಂದು ಭಾವಿಸುವನು. ನೀವು ಆಗ ತುಂಬಾ ಜೋಪಾನವಾಗಿರಬೇಕು.

ನೀವೆಲ್ಲಾ ಇಂತಹ ಮೂರ್ಖರಾಗುವುದಕ್ಕಿಂತ ಶುದ್ಧ ನಾಸ್ತಿಕರಾಗುವುದು ಮೇಲು. ನಾಸ್ತಿಕ ಜೀವಂತವಾಗಿರುವನು. ಅವನಿಂದ ಏನಾದರೂ ಉಪಯೋಗ ಪಡೆಯಬಹುದು. ಮೂಢನಂಬಿಕೆ ಪ್ರವೇಶಿಸಿದರೆ ತಲೆ ಕೆಡುವುದು, ಹುಚ್ಚನಾಗುವನು. ಅವನತಿ ಪ್ರಾರಂಭವಾಗುವುದು. ಇವೆರಡರಿಂದಲೂ ಪಾರಾದ ನಿರ್ಭೀತ ಸಾಹಸಿಗಳು ನಮಗೆ ಬೇಕಾಗಿರುವುದು. ನಮಗೆ ಇಂದು ಬೇಕಾಗಿರುವುದು ರಕ್ತದಲ್ಲಿ ಪುಷ್ಟಿ, ನರಗಳಲ್ಲಿ ಶಕ್ತಿ, ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಕೆಲಸಕ್ಕೆ ಬಾರದ ಜೊಳ್ಳು ಭಾವನೆಗಳಲ್ಲ. ಇವುಗಳನ್ನು ನಿರಾಕರಿಸಿ, ಎಲ್ಲಾ ರಹಸ್ಯಗಳನ್ನು ನಿರಾಕರಿಸಿ. ರಹಸ್ಯಾಚರಣೆ ಮತ್ತು ಮೂಢನಂಬಿಕೆ ಯಾವಾಗಲೂ ದುರ್ಬಲತೆಯ ಚಿಹ್ನೆ; ಅವನತಿ ಮತ್ತು ಮೃತ್ಯು ಚಿಹ್ನೆ. ಜೋಪಾನವಾಗಿರಿ. ಧೀರರಾಗಿ, ನಿಮ್ಮ ಕಾಲ ಮೇಲೆ ನಿಲ್ಲಿ. ಎಷ್ಟೋ ಮಹದಾಲೋಚನೆಗಳಿವೆ, ಅದ್ಭುತ ಭಾವನೆಗಳಿವೆ. ನಮಗೆ ಈಗ ಪ್ರಪಂಚ ತಿಳಿದಿರುವ ಮಟ್ಟಿಗೆ ಅದನ್ನು ಅತೀಂದ್ರಿಯವೆನ್ನಬಹುದು. ಆದರೆ ಇದರಲ್ಲಿ ಯಾವುದೊಂದು ರಹಸ್ಯವಿಲ್ಲ. ಧಾರ್ಮಿಕ ಸತ್ಯ ರಹಸ್ಯವೆಂದಾಗಲೀ ಅಥವಾ ಹಿಮಾಲಯದ ಮೇಲೆ ಇರುವ ಕೆಲವು ಗುಪ್ತ ಸಂಸ್ಥೆಗಳಿಗೆ ಆ ಸತ್ಯ ಮೀಸಲು ಎಂದಾಗಲೀ ನಮ್ಮ ಧರ್ಮದಲ್ಲಿ ಎಂದೂ ಬೋಧಿಸಿಲ್ಲ. ನಾನು ಹಿಮಾಲಯದಲ್ಲಿದ್ದೆ. ನಾನು ಸಂನ್ಯಾಸಿ. ಕಳೆದ ಹದಿನಾಲ್ಕು ವರ್ಷಗಳಿಂದಲೂ ಸಂಚರಿಸುತ್ತಿರುವೆನು. ಈ ರಹಸ್ಯ ಎಲ್ಲಿಯೂ ಇಲ್ಲ. ಈ ಮೂಢನಂಬಿಕೆಯನ್ನು ಹಿಂಬಾಲಿಸಬೇಡಿ. ಅದಕ್ಕಿಂತ ನೀವು ಶುದ್ಧ ನಾಸ್ತಿಕರಾಗುವುದು ನಿಮಗೆ ಮತ್ತು ದೇಶಕ್ಕೆ ಒಳ್ಳೆಯದು.

ನಾಸ್ತಿಕತೆಯಲ್ಲಾದರೂ ಸ್ವಲ್ಪ ಶಕ್ತಿ ಇದೆ. ಆದರೆ ಮೂಢನಂಬಿಕೆಯಲ್ಲಿರುವುದು ಅವನತಿ ಮತ್ತು ಮರಣ ಮಾತ್ರ. ಬಲಾಢ್ಯರು ಇಂತಹ ಮೂಢನಂಬಿಕೆ ಮೇಲೆ ಕಾಲಕಳೆಯುವುದು, ಕೆಲಸಕ್ಕೆ ಬಾರದ ಕುಲಗೆಟ್ಟ ಆಚಾರಗಳನ್ನೆಲ್ಲಾ ವಿವರಿಸುವುದಕ್ಕೆ ಉಪಕಥೆಗಳನ್ನು ಕಲ್ಪಿಸುವುದು ಮಾನವಕೋಟಿಗೆ ನಾಚಿಗೆಗೇಡು. ನಿಜವಾಗಿ ನಮ್ಮಲ್ಲಿ ಹಲವು ಮೂಢನಂಬಿಕೆಗಳಿವೆ. ದೇಹದಲ್ಲಿ ಎಷ್ಟೋ ವ್ರಣಗಳಿವೆ; ಅವನ್ನು ಕತ್ತರಿಸಬೇಕು; ನಾಶಮಾಡಬೇಕು. ಅವುಗಳಿಂದ ನಮ್ಮ ಸಂಸ್ಕೃತಿ, ಧರ್ಮ, ಅಧ್ಯಾತ್ಮ ನಾಶವಾಗುವುದಿಲ್ಲ. ಧರ್ಮದ ಮುಖ್ಯ ತತ್ವಗಳೆಲ್ಲಾ ಸುರಕ್ಷಿತವಾಗಿರುವುವು. ಕೆಲಸಕ್ಕೆ ಬಾರದ ಈ ವ್ರಣಗಳನ್ನು ಎಷ್ಟು ಬೇಗ ತೊಡೆದುಹಾಕಿದರೆ ಅಷ್ಟು ಒಳ್ಳೆಯದು, ಅಷ್ಟು ಆಧ್ಯಾತ್ಮಿಕ ನಿಯಮಗಳು ಪ್ರಕಾಶಿಸುವುವು.೨

ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.೩

ಪುರೋಹಿತರು ಮಾಮೂಲಿನಂತೆ ಏನನ್ನೋ ಹೇಳಿ ಏನನ್ನೋ ನಿರೀಕ್ಷಿಸುವರು. ಜನರು ಆಕಾಶವನ್ನೇ ನೋಡುತ್ತ ಪ್ರಾರ್ಥಿಸುವರು. ಪುರೋಹಿತರಿಗೆ ದಕ್ಷಿಣೆ ಕೊಡುವರು. ಮಾಸಗಳು ಕಳೆದಂತೆ ಅವರು ಇನ್ನೂ ಆಕಾಶವನ್ನು ನೋಡುತ್ತಿರುವರು, ದಕ್ಷಿಣೆ ಕೊಡುವರು, ಪ್ರಾರ್ಥಿಸುವರು. ಇದನ್ನು ಕುರಿತು ಯೋಚಿಸಿ ನೋಡಿ! ಇದೊಂದು ಹುಚ್ಚಲ್ಲವೇ? ಮತ್ತೇನು? ಇದಕ್ಕೆ ಕಾರಣರು ಯಾರು? ನೀವು ಮತ್ತೊಬ್ಬನಿಗೆ ಕೊಟ್ಟ ಪ್ರತಿಯೊಂದು ದುರ್ಬಲ ಆಲೋಚನೆಗೂ ಬಡ್ಡಿ ಸಹಿತ ಅನುಭವಿಸಬೇಕಾಗಿದೆ.೪

ಮಂತ್ರವಾದಿಗಳ ಮತ್ತು ಮೋಸಗಾರರ ಕೈಗೆ ಬೀಳುವುದಕ್ಕಿಂತ ಯಾವುದರಲ್ಲಿಯೂ ನಂಬದೇ ಸಾಯುವುದೇ ಮೇಲು.೫

೧. ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ-೨, ಪುಟ-೨೮೪
೨. ಸಂಪುಟ-೫, ಪುಟ-೧೭೩-೧೭೫
೩. ಸಂಪುಟ-೮, ಪುಟ-೨೪೩-೨೪೪
೪. ಸಂಪುಟ-೪, ಪುಟ-೨೯೯
೫. ಸಂಪುಟ-೫, ಪುಟ-೪೩೯

Monday, March 14, 2011

ಏನೇನೂ ಮಾಡೋದು ಬೇಡ, ಕನಿಷ್ಠ ಓದುಗರಿಗೆ ಉತ್ತರದಾಯಿಗಳಾಗಿ...


ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದೆ ಕನ್ನಡಪ್ರಭ. ಅದು ಈಗ ಸಿಕ್ಕಾಪಟ್ಟೆ ಪಾಪ್ಯುಲರ್ ಸ್ಲೋಗನ್ ಆಗಿಹೋಗಿದೆ. ಈ ವಾಕ್ಯವನ್ನು ಅವರವರ ಭಕುತಿಗೆ, ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು. ಕೆಲವರಿಗೆ ಅದು ತುಂಬಾ ಸೀರಿಯಸ್ಸಾದ ಸ್ಟೇಟ್‌ಮೆಂಟು, ಹಲವರಿಗೆ ತಮಾಶೆಯ, ಗೇಲಿಯ ವಿಷಯ. ಮತ್ತೆ ಕೆಲವರಿಗೆ ಧಮಕಿಯ ಹಾಗೆ ಕೇಳಿಸುತ್ತಿದ್ದರೆ, ಇನ್ನೂ ಕೆಲವರಿಗೆ ರೋಮಾಂಚನಕಾರಿ ಉದ್ವೇಗವನ್ನು ತಂದುಕೊಟ್ಟಿದೆ.

ಅದು ಸರಿ, ಕನ್ನಡ ಮಾಧ್ಯಮರಂಗ ನಿಜಕ್ಕೂ ಏನೇನ್ ಮಾಡಬೇಕು? ನಾವು, ನೀವು ಸೇರಿ ಒಂದು ಪಟ್ಟಿಯನ್ನು ಮಾಡಿದರೆ, ಇವರೆಲ್ಲಾ ಅದನ್ನು ಒಪ್ಪಿಕೊಳ್ಳುತ್ತಾರಾ? ಎಲ್ಲವನ್ನೂ ಬೇಡ, ಕೆಲವನ್ನಾದರೂ ಒಪ್ಪಿಕೊಳ್ಳುತ್ತಾರಾ?

ನಿಜವಾಗಲೂ ಇರುವ ಸಮಸ್ಯೆ ಉತ್ತರದಾಯಿತ್ವದ್ದು. ಮೀಡಿಯಾಗಳು ಉತ್ತರದಾಯಿಗಳಾಗಿವೆ ಎಂದು ನಿಮಗನ್ನಿಸುತ್ತದೆಯೇ? ಕನಿಷ್ಠ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುವವರು, ದೂರವಾಣಿ ಕರೆ ಮಾಡಿ ಮಾತನಾಡುವವರು ಇದ್ದಕ್ಕಿದ್ದಂತೆ ಈ ವಾಹಿನಿಗಳನ್ನೇ ನೇರವಾಗಿ ಪ್ರಶ್ನಿಸುವುದನ್ನು ನಾವು ಆಗಾಗ ನೋಡುತ್ತಾ ಇರುತ್ತೇವೆ.

ಆದರೆ ಪತ್ರಿಕೆಗಳು? ಪತ್ರಿಕೆಗಳು ಎಂದಾದರೂ ಇಂಥ ಓದುಗರ ವಿಮರ್ಶೆಗೆ, ಟೀಕೆಗಳಿಗೆ ಒಡ್ಡಿಕೊಂಡಿದ್ದನ್ನು ಗಮನಿಸಿದ್ದೀರಾ? ಒಡ್ಡಿಕೊಂಡಿದ್ದರೂ ಅದು ತುಂಬಾ ಅಪರೂಪವಲ್ಲವೇ? ಹಾಗೆ ನೋಡಿದರೆ ಅಂತರ್ಜಾಲ ಮಾಧ್ಯಮದಲ್ಲಿ ಓದುಗರಿಗೆ ತಮಗೆ ಸರಿಯಲ್ಲ ಅನ್ನಿಸಿದ್ದನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುತ್ತದೆ. ಒಮ್ಮೊಮ್ಮೆ ಈ ಸ್ವಾತಂತ್ರ್ಯ ದುರುಪಯೋಗವಾಗುವದೂ ಉಂಟು. ಆದರೆ ಪ್ರಶ್ನಿಸುವ ಕೆಲಸವಂತೂ ಇಲ್ಲಿ ನಿರಂತರವಾಗಿರುತ್ತದೆ. ಆದರೆ ಪತ್ರಿಕೆಗಳಲ್ಲಿ?

ಹಿಂದೆ ವಡ್ಡರ್ಸೆ ರಘುರಾಮಶೆಟ್ಟರು ಮುಂಗಾರು ಪತ್ರಿಕೆಯನ್ನು ನಡೆಸುತ್ತಿದ್ದಾಗ, ಓದುಗರ ಜತೆ ಮುಖಾಮುಖಿಯಾಗುವ ವಿಶೇಷ ಪ್ರಯೋಗವೊಂದನ್ನು ಮಾಡಿದ್ದರು. ಓದುಗರಿಂದಲೇ ಪ್ರಶ್ನೆಗಳನ್ನು ಆಹ್ವಾನಿಸಿ, ಅವುಗಳಿಗೆ ಉತ್ತರ ಕೊಡುವ ಪರಿಪಾಠವನ್ನು ಆರಂಭಿಸಿದ್ದರು. ಪತ್ರಿಕೆಯ ನೀತಿ-ನಿಲುವು, ಒಪ್ಪು-ತಪ್ಪುಗಳ ಕುರಿತು ಓದುಗರು ನೇರವಾಗಿ ಪ್ರಶ್ನಿಸಬಹುದಿತ್ತು. ಇವುಗಳಿಗೆ ವಡ್ಡರ್ಸೆ ಅವರೇ ಉತ್ತರ ಕೊಡುತ್ತಿದ್ದರು. ಈಗ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿರುವ ಪ್ರಭು ಚಾವ್ಲಾ ಕೂಡ ಇಂಥ ಒಂದು ಪ್ರಯೋಗವನ್ನು ನಡೆಸುತ್ತಿದ್ದಾರೆ.

ಕನ್ನಡ ಪತ್ರಿಕೆಗಳು ಇಂಥ ಕೆಲಸವನ್ನು ಆರಂಭಿಸಬಹುದಲ್ಲವೇ?

ಓದುಗರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ಪ್ರಸರಣಾ ಸಂಖ್ಯೆಯೊಂದೇ ಮಾನದಂಡ ಎಂದು ಬಹಳಷ್ಟು ಮಂದಿ ಪತ್ರಕರ್ತರು ಭಾವಿಸಿದ್ದಾರೆ. ಆದರೆ ಅದು ಅರೆಸತ್ಯ. ಜನರಿಗೆ ಆಪ್ತವಾಗಬಹುದಾದ, ಇಷ್ಟವಾಗಬಹುದಾದ ಪತ್ರಿಕೆಗಳು ಇವತ್ತಿನ ಮಾರುಕಟ್ಟೆ ಪ್ರಪಂಚದಲ್ಲಿ ಸೋತ ಉದಾಹರಣೆಗಳೂ ಇವೆ. ಅದಕ್ಕೆ ಮಾರುಕಟ್ಟೆ ವಿಭಾಗದ ವೈಫಲ್ಯವೂ ಕಾರಣವಾಗಿರಬಹುದು. ನಿಜಕ್ಕೂ ಶ್ರೇಷ್ಠವಲ್ಲದ ಪತ್ರಿಕೆ ಕೇವಲ ಮಾರುಕಟ್ಟೆ ತಂತ್ರದಿಂದಲೇ ಜನರನ್ನು ಅತಿ ಹೆಚ್ಚು ತಲುಪಬಹುದು. ನಮ್ಮ ಪತ್ರಿಕೆಗಳು ಓದುಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವ ಸಾಧ್ಯತೆಯೂ ಇದೆಯಲ್ಲವೆ?

ಒಂದು ಸಣ್ಣ ಉದಾಹರಣೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪತ್ರಕರ್ತರನ್ನು ಓದುಗರು ಪ್ರಶ್ನಿಸಬೇಕು ಎಂದು ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿ ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ದಂಡಾವತಿಯವರಿಗೆ ಪತ್ರಿಕೆಗಳ ಬೆಲೆಯ ಕುರಿತೇ ತಕರಾರಿದೆ. ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಪತ್ರಿಕೆಗಳನ್ನು ೩೦ ರೂಪಾಯಿ ಕೊಟ್ಟು ಓದುಗರು ಕೊಂಡುಕೊಳ್ಳುತ್ತಾರೆ. ಆದರೆ ಇರುವ ಮೂರು ರೂಪಾಯಿ ಬೆಲೆಯನ್ನೇ ಇಳಿಸಿ ಎನ್ನುತ್ತಾರೆ. ಪತ್ರಿಕೆಯ ಉತ್ಪಾದನಾ ವೆಚ್ಚವನ್ನಾದರೂ ಓದುಗರು ಕೊಡುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದಾಗಿ ಏನಾಗುತ್ತದೆ ಎಂದು ಯಾರಾದರೂ ಪ್ರಶ್ನಿಸಬಹುದು. ಇದರಿಂದ ಕನಿಷ್ಠ ಮ್ಯಾನೇಜ್‌ಮೆಂಟ್‌ಗಳ ಜಾಹೀರಾತು ದಾಹವಾದರೂ ಕಡಿಮೆಯಾಗಬಹುದು, ಕಾಸಿಗಾಗಿ ಸುದ್ದಿ ತರಹದ ಅನೈತಿಕ ಮಾರ್ಗಗಳಿಗೆ ಪತ್ರಿಕೆಗಳು ಮೊರೆ ಹೋಗುವುದು ತಪ್ಪುತ್ತದೆ ಎಂಬುದು ನಮ್ಮ ಅನಿಸಿಕೆ.

ಆದರೆ ದಂಡಾವತಿಯವರು ಹೇಳುತ್ತಿರುವ ವಿಷಯಗಳ ಕುರಿತು ಎಲ್ಲಿ ಚರ್ಚೆ ನಡೆಯುತ್ತಿದೆ? ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚಕ್ಕೆ ಸರಿಯಾಗಿ ಅಂದರೆ ಸುಮಾರು ೧೦ ರೂಪಾಯಿ ಬೆಲೆ ನಿಗದಿಪಡಿಸಿದರೆ ಜನರು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆಯೇ? ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಹಾಲಿನ ದರ ದುಪ್ಪಟ್ಟಾಗಿದೆ, ವಿದ್ಯುತ್ ಬೆಲೆ ಗಗನ ಮುಟ್ಟಿದೆ, ಪೆಟ್ರೋಲ್ ದರ ಕೈಗೆ ನಿಲುಕುತ್ತಿಲ್ಲ. ಹಾಗಂತ ಜನರು ಕಾಫಿ, ಟೀ ಕುಡಿಯುವುದನ್ನು ಬಿಟ್ಟಿದ್ದಾರೆಯೇ? ವಿದ್ಯುತ್ ಉಪಯೋಗ ನಿಲ್ಲಿಸಿದ್ದಾರೆಯೇ? ವಾಹನಗಳನ್ನು ಓಡಿಸುವುದನ್ನು ಬಿಟ್ಟಿದ್ದಾರೆಯೇ? ಹಾಗಿದ್ದ ಮೇಲೆ ಪತ್ರಿಕಾ ಸಂಸ್ಥೆಗಳು ಯಾಕೆ ಬೆಲೆ ಏರಿಸದೆ, ಅಡ್ಡದಾರಿಗಳನ್ನೇ ನೆಚ್ಚಿಕೊಂಡಿವೆ?

ಇಂಥ ಎಲ್ಲ ವಿಷಯಗಳ ಕುರಿತಾಗಿ ಮಾಧ್ಯಮಸಂಸ್ಥೆಗಳು ತಮ್ಮ ಅನ್ನದಾತರಾದ ಓದುಗರೊಂದಿಗೆ ಒಂದು ಅರ್ಥಪೂರ್ಣ ಸಂವಾದ ನಡೆಸಿವೆಯೇ? ಓದುಗರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸಿವೆಯೇ? ಹೋಗಲಿ, ಪತ್ರಿಕೆಗಳ ಮಾಲಿಕರ ವಿಷಯ ಬೇಡ, ಪತ್ರಕರ್ತರಾದರೂ ಇಂಥ ವಿಷಯಗಳ ಕುರಿತು ಓದುಗರ ಜತೆ ಸಂವಾದ ನಡೆಸಲು ಮುಂದಾಗಬೇಡವೇ?

ರಘುರಾಮಶೆಟ್ಟರು ನಡೆಸಿದ ಪ್ರಯೋಗವನ್ನು ಕನ್ನಡ ಪತ್ರಿಕೆಗಳ ಸಂಪಾದಕರು ಯಾಕೆ ಮಾಡಬಾರದು? ಹೀಗೆ ಓದುಗರಿಗೆ ತಾವು ಉತ್ತರದಾಯಿಗಳು ಎಂದು ಪ್ರಕಟಪಡಿಸುವುದರಿಂದ ಪತ್ರಿಕೆಗಳ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆಯಲ್ಲವೆ? ಓದುಗರ ಒಳಗೊಳ್ಳುವಿಕೆಯಿಂದಾಗಿ ಅವರಿಗೂ ಒಂದು ರೀತಿಯ ಕಂಫರ್ಟ್ ದೊರೆಯುತ್ತದಲ್ಲವೇ?

****
ಇಷ್ಟನ್ನು ಹೇಳುತ್ತ, ನಮ್ಮ ಓದುಗರೊಂದಿಗೆ ತಿಂಗಳಿಗೊಮ್ಮೆ ಸಂವಾದ ನಡೆಸುವ ಆಲೋಚನೆಯನ್ನು ಮುಂದಿಡುತ್ತಿದ್ದೇವೆ. ಇದು ಪ್ರಶ್ನೋತ್ತರದ ಮಾದರಿಯಲ್ಲಿರದೆ ಆಪ್ತ ಸಂವಹನದ ಹಾಗಿರಲಿ ಎಂಬುದು ನಮ್ಮ ಬಯಕೆ.

ನಿಮಗೆ ಏನನ್ನಿಸುತ್ತದೋ ಅದನ್ನು ಕೇಳಿ, ಹೇಳಿ. ಉತ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.

ಕೆಲವರು ತಮ್ಮ ಕಮೆಂಟ್‌ಗಳಲ್ಲೇ ಪ್ರಶ್ನೆಗಳನ್ನು ಮಾಡಿದ್ದಾರೆ. ಅಪರೂಪಕ್ಕೊಮ್ಮೊಮ್ಮೆ ಉತ್ತರಿಸಲು ಪ್ರಯತ್ನಿಸಿದ್ದೇವೆ. ಆದರೆ ಈ ಕ್ರಿಯೆ ಪ್ರತಿಕ್ರಿಯೆಗಳು ತುಂಬಾ ಸಮಯವನ್ನು ಬೇಡುತ್ತದೆ. ಅಷ್ಟು ಸಮಯ ನಮಗೆ ನಿಜಕ್ಕೂ ಇಲ್ಲ ಎಂದು ವಿನಯದಿಂದ ಹೇಳಬಯಸುತ್ತೇವೆ. ನಿಮ್ಮ ಮಾತುಗಳನ್ನು ಮೇಲ್ ಮಾಡಿದರೆ ಒಳಿತು. ನಿಮ್ಮ ಹೆಸರನ್ನು ಪ್ರಕಟಿಸುವುದು ಬೇಡ ಎಂದರೆ ಪ್ರಕಟಿಸುವುದಿಲ್ಲ.

ನಮಗೆ ಮೀಡಿಯಾಗಳ ಕುರಿತು ಎಲ್ಲವೂ ಗೊತ್ತಿದೆ ಎಂದೇನೂ ಅಲ್ಲ. ನಮಗೆ ಗೊತ್ತಿಲ್ಲದ್ದನ್ನು ನೀವು ಹೇಳಿ, ನಮಗೆ ಗೊತ್ತಿರುವುದನ್ನು ನಾವು ಹೇಳುತ್ತೇವೆ. ಸಂವಾದವನ್ನು ಅರ್ಥಪೂರ್ಣವಾಗಿ ನಡೆಸೋಣ.

ಕೊನೆಕುಟುಕು: ವಿಶ್ವಕನ್ನಡ ಸಮ್ಮೇಳನದ ಸಮೂಹ ಮಾಧ್ಯಮ ಗೋಷ್ಠಿಯಲ್ಲಿ ಕಾಣೆಯಾಗಿದ್ದು ಕನ್ನಡ ಅಂತರ್ಜಾಲ ಮಾಧ್ಯಮ. ಗೋಷ್ಠಿ ಆಯೋಜಿಸಿದವರಿಗೆ ಅಂತರ್ಜಾಲವೂ ಒಂದು ಮಾಧ್ಯಮ ಎಂಬುದು ಗೊತ್ತೇ ಇಲ್ಲವೇನೋ?

Sunday, March 13, 2011

ವಿ.ಕ.ಸಮ್ಮೇಳನ ಮಾಧ್ಯಮ ಗೋಷ್ಠಿ: ಕುರುಡನ ಹೆಗಲ ಮೇಲೆ ಹೆಳವ!


ಪ್ರಿಯ ಸಂಪಾದಕೀಯ,
ವಿಶ್ವ ಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿಯ ಕುರಿತಾಗಿ ಬರೆದು ಕುತೂಹಲ ಮೂಡಿಸಿದ್ದಿರಿ. ಹೀಗಾಗಿ ನಾನೂ ಆಸಕ್ತಿಯಿಂದ ಅಲ್ಲಿಗೆ ಹೋಗಿದ್ದೆ. ತುಂಬಾ ನಿರಾಸೆಯಾಯಿತು. ಮಾಧ್ಯಮರಂಗಕ್ಕೆ ಹೊಸದಿಕ್ಕು ಕೊಡುವ ಮಾತು ಇರಲಿ, ಭಾಷಣಕಾರರೇ ದಿಕ್ಕು ತಪ್ಪಿ ನಿಂತಿದ್ದನ್ನು ಕಂಡೆ.

ಉದ್ಘಾಟಕ ಹುಣಸವಾಡಿ ರಾಜನ್ ಅವರದೇ ಮೊದಲ ಭಾಷಣ. ತುಂಬ ಆಸಕ್ತಿಯಿಂದಲೇ ಅವರು ಗೋಷ್ಠಿಗೆ ಬಂದ ಹಾಗಿತ್ತು. ಆದರೆ ಅವರು ಏನನ್ನು ಹೇಳಬಯಸುತ್ತಿದ್ದಾರೆ ಅನ್ನೋದೇ ಗೊತ್ತಾಗದಷ್ಟು ಅವರ ಭಾಷೆ ಸಂಕೀರ್ಣವಾಗಿತ್ತು. ಇವತ್ತಿನ ಮಾಧ್ಯಮರಂಗದ ಕಾರ‍್ಯನಿರ್ವಹಣೆ ಕುರಿತು ಅವರಿಗೆ ತೀವ್ರವಾದ ಆಕ್ಷೇಪ, ಸಿಟ್ಟು ಇದ್ದಂತಿತ್ತಾದರೂ ಆ ಅಸಮಾಧಾನಗಳಿಗೆ ಮೂರ್ತ ರೂಪ ಕೊಡುವುದರಲ್ಲಿ ಅವರು ವಿಫಲರಾದರು. ಒಂದೊಂದು ಸರ್ತಿ ಅವರು ತಮ್ಮೊಳಗೆ ತಾವು ಮಾತನಾಡಿಕೊಂಡಂತೆ ಅನಿಸುತ್ತಿತ್ತು. ಮೀಡಿಯಾ ಜಗತ್ತಿಗೆ ಜನರೇ ಪಾಠ ಕಲಿಸಬೇಕು ಎಂಬಂಥ ಮಾತುಗಳನ್ನು ಆಡಿದ ರಾಜನ್, ಈ ಸಿಟ್ಟಿಗೆ ಕಾರಣ ಏನು ಎಂಬುದನ್ನು ಬಿಡಿಸಿ ಹೇಳಬೇಕಿತ್ತು.

ಇದ್ದಿದ್ದರಲ್ಲಿ ವಿವೇಕದಿಂದ ಮಾತನಾಡಿದವರು ಪದ್ಮರಾಜ ದಂಡಾವತಿ. ಅವರಿಗೆ ತಾವು ಏನನ್ನು ಮಾತನಾಡುತ್ತಿದ್ದೇನೆ ಎಂಬುದರ ಕುರಿತು ಸ್ಪಷ್ಟತೆ ಇತ್ತು. ಆದರೆ ಎಲ್ಲೋ ಒಂದೆಡೆ ಅವರು ಪೊಲಿಟಿಕಲಿ ಕರೆಕ್ಟ್ ಆದ ನಿಲುವುಗಳನ್ನು ಧರಿಸುತ್ತಿದ್ದಾರೇನೋ ಎನಿಸಿತು. ಇವತ್ತಿನ ಮಾಧ್ಯಮ ರಂಗದ ಸಮಸ್ಯೆಗಳಿಗೆ ಅವರು ಹುಡುಕಿಕೊಂಡ ಕಾರಣ ಸಮಾಜದಲ್ಲೇ ಇತ್ತು. ಹಿಂದೆ ಚಳವಳಿಗಳಿದ್ದವು, ಆದರ್ಶಗಳಿದ್ದವು. ಇವತ್ತು ಅವೇನೂ ಇಲ್ಲ. ಮಾಧ್ಯಮ ರಂಗ ಪ್ರವೇಶಿಸುತ್ತಿರುವವರಿಗೆ ಸಾಹಿತ್ಯದ ಓದಿನ ಹಿನ್ನೆಲೆಯಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಎಲ್ಲ ಪಕ್ಷಗಳೂ ಭ್ರಷ್ಟವಾಗಿವೆ. ಭ್ರಷ್ಟಾಚಾರದ ಪ್ರಮಾಣ ಭಯಾನಕವಾಗಿ ಬೆಳೆದಿದೆ ಎಂಬುದನ್ನು ಅವರು ಸೋದಾರಣವಾಗಿ ವಿವರಿಸಿದರು.

ದಂಡಾವತಿಯವರು ನಾಲ್ಕು ಬಹುಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಪತ್ರಕರ್ತರ ಭ್ರಷ್ಟಾಚಾರ ಕುರಿತಂತೆ ಅವರು ಮಾತನಾಡಿದರು. ಈ ಭ್ರಷ್ಟಾಚಾರವು ಹಲವು ಸ್ವರೂಪಗಳಲ್ಲಿ ಪ್ರಕಟವಾಗುತ್ತಿರುವುದನ್ನು ಸೂಚ್ಯವಾಗಿ ಹೇಳಿದರು. ಹಾಗೆಯೇ ಕಾಸಿಗಾಗಿ ಸುದ್ದಿ ಕುರಿತು ಮಾತನಾಡಿದರು. ಟಿವಿ ಮಾಧ್ಯಮಗಳ ಸುದ್ದಿ ಹಸಿವೆಯಿಂದಾಗಿ ಗಂಡಹೆಂಡತಿ ಜಗಳಗಳು, ಚಪ್ಪಲಿಯೇಟುಗಳು ಟೆಲಿಕಾಸ್ಟ್ ಆಗುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. ಪತ್ರಕರ್ತರೇ ಸುದ್ದಿಗಳನ್ನು ಸೃಷ್ಟಿಸುತ್ತಿರುವ ಕುರಿತು ಅವರಿಗೆ ಆತಂಕವಿತ್ತು.  ಇನ್ನು ಮಾಧ್ಯಮ ಸಂಸ್ಥೆಗಳ ಒಡೆತನ ರಾಜಕಾರಣಿಗಳ ಪಾಲಾಗುತ್ತಿರುವ ಕುರಿತು ಅವರು ಮಾತನಾಡಿದರು. ಮಾಧ್ಯಮರಂಗದ ವೈಫಲ್ಯಗಳ ಹೊಣೆಯನ್ನು ಅವರು ಓದುಗರ ಮೇಲೂ ಹೊರಿಸಿದರು. ಓದುಗರು ಪ್ರಶ್ನಿಸುತ್ತಿಲ್ಲ ಎಂಬುದು ಅವರ ಆತಂಕ. ಕನಿಷ್ಠ ನಮ್ಮಿಂದ ತಪ್ಪಾದಾಗ ಒಂದು ಪತ್ರ ಬರೆಯಿರಿ, ಫೋನ್ ಮಾಡಿ ಎಂದು ಅವರು ನೆರೆದಿದ್ದವರನ್ನು ವಿನಂತಿಸಿದರು. ಪತ್ರ, ಫೋನು ಇರಲಿ ಒಮ್ಮೊಮ್ಮೆ ತಲೆತಲೆ ಚಚ್ಚಿಕೊಂಡ್ರೂ ಪತ್ರಕರ್ತರು ಬದಲಾಗೋದಿಲ್ಲ ಎಂಬುದನ್ನು ಅವರಿಗೆ ಹೇಳಬೇಕೆನಿಸಿತು.

ನಂತರ ಶ್ರವ್ಯ ಮಾಧ್ಯಮದ ಕುರಿತು ಸಿ.ಯು.ಬೆಳ್ಳಕ್ಕಿ ಒಂದಷ್ಟು ಹೊತ್ತು ಮಾತನಾಡಿದರು. ಆಮೇಲೆ ವಿಶ್ವೇಶ್ವರ ಭಟ್ಟರ ರಂಗಪ್ರವೇಶ. ಭಟ್ಟರು ಏನೇನ್ ಮಾತಾಡ್ತಾರೆ, ನೋಡೇ ಬಿಡೋಣ ಅಂತ ತುಂಬ ಜನ ಬಂದಿದ್ದರು. ಆದರೆ ಅವರ ಭಾಷಣ ನೀರಸ. ನವತಂತ್ರಜ್ಞಾನದಲ್ಲಿ ಪತ್ರಿಕೆಗಳು ಎಂಬ ವಿಷಯದ ಕುರಿತು ಭಟ್ಟರು ಮಾತನಾಡಿದರು. ಸಮೂಹ ಮಾಧ್ಯಮ: ಸಾಮಾಜಿಕ ಕಾಳಜಿ ಎಂಬ ಗೋಷ್ಠಿಯ ವಿಷಯದಿಂದ ಭಟ್ಟರು ಬಹುದೂರವೇ ಉಳಿದುಬಿಟ್ಟರು. ಇಮೇಲು, ಟ್ವಿಟರ್ರು, ಫೇಸ್‌ಬುಕ್‌ಗಳನ್ನೇ ಅವರು ತುಂಬ ಹಚ್ಚಿಕೊಂಡಂತೆ ಕಂಡಿತು. ಪತ್ರಕರ್ತರು ಅಪ್‌ಡೇಟ್ ಆಗುತ್ತಾ ಇರಬೇಕು ಎಂಬುದು ಅವರ ಇಡೀ ಭಾಷಣದ ಒಂದು ಸಾಲಿನ ಹೂರಣ.

ವಿದ್ಯುನ್ಮಾನ ಮಾಧ್ಯಮದ ಕುರಿತು ಮಾತನಾಡಬೇಕಿದ್ದ ಹಮೀದ್ ಪಾಳ್ಯ, ಗೋಷ್ಠಿ ಸಂಚಾಲನೆ ನಡೆಸಬೇಕಿದ್ದ ಎಚ್.ಆರ್.ರಂಗನಾಥ್ ಇಬ್ಬರೂ ನಾಪತ್ತೆಯಾಗಿದ್ದರು. ಬಹುಶಃ ಅವರು ಸುವರ್ಣನ್ಯೂಸ್‌ನಲ್ಲಿ ಜುಗಲ್‌ಬಂದಿ ಮಾಡುತ್ತಿದ್ದರೇನೋ? ಇವರಿಬ್ಬರ ಅನುಪಸ್ಥಿತಿಯಿಂದಾಗಿ ಟಿವಿಗಳ ಕುರಿತು ಪ್ರಮುಖ ವಿಷಯಗಳು ಪ್ರಸ್ತಾಪವಾಗಲೇ ಇಲ್ಲ. ಇಬ್ಬರೂ ಬರದೇ ಹೋಗಿದ್ದಕ್ಕೆ ಸಂಘಟಕರೂ ಕಾರಣ ಹೇಳಲಿಲ್ಲ. ಅವರು ಗೋಷ್ಠಿಗೆ ಬರಲು ಒಪ್ಪಿದ್ದರೆ? ಒಪ್ಪಿರದಿದ್ದರೆ ಹೆಸರು ಹಾಕುವ ಅಗತ್ಯವೇನು? ಒಪ್ಪಿದ್ದರೆ ಗೋಷ್ಠಿಗೆ ಗೈರುಹಾಜರಾಗಿದ್ದೇಕೆ? ಏನೇನೂ ಗೊತ್ತಾಗಲಿಲ್ಲ.

ಲಕ್ಷ್ಮಣ್ ಹೂಗಾರ್ ತೂಕಡಿಸುವಂತೆ ಮಾಡಿದ್ದ ಗೋಷ್ಠಿಯಲ್ಲಿ ಸಣ್ಣಗೆ ಸರಪಟಾಕಿ ಹಚ್ಚಿದರು. ಎಲ್ಲೋ ಒಂದೆಡೆ ಅವರು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮತ್ತು ತಾವು ಪ್ರತಿನಿಧಿಸುವ ವಾಹಿನಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದಂತೆ ಕಂಡರೂ, ಕಡಿಮೆ ಅವಧಿಯಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದರು.

ಸಮ್ಮೇಳನಕ್ಕೆ ಎನ್.ಆರ್.ನಾರಾಯಣಮೂರ್ತಿ ಉದ್ಘಾಟಕರಾಗುವ ಸಂಬಂಧ ಬರಗೂರು ರಾಮಚಂದ್ರಪ್ಪ ಎತ್ತಿದ ಆಕ್ಷೇಪ, ಅದರಿಂದ ಹುಟ್ಟಿಕೊಂಡ ವಿವಾದಗಳನ್ನು ಅವರು ಪ್ರಸ್ತಾಪಿಸಿದರು. ಬರಗೂರು ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ, ಅವರಿಗನ್ನಿಸಿದ್ದನ್ನು ಹೇಳಿದ್ದಾರೆ. ಅದಕ್ಕೆ ದೊಡ್ಡ ಚರ್ಚೆಯ ರೂಪ ಕೊಡಬೇಕಿತ್ತೆ ಎಂದು ನೇರವಾಗಿ ವಿಶ್ವೇಶ್ವರ ಭಟ್ಟರನ್ನು ಪ್ರಶ್ನಿಸಿದರು. ಪ್ರಶ್ನೆಗಳು ಪದ್ಮರಾಜ ದಂಡಾವತಿಯವರಿಗೂ ಇತ್ತು. ಎಂ.ಪಿ.ಪ್ರಕಾಶ್ ನಿಧನರಾದಾಗ ಅಷ್ಟು ದೊಡ್ಡ ಸಾಂಸ್ಕೃತಿಕ, ರಾಜಕೀಯ ಮುಖಂಡನ ಸಾವಿನ ಸುದ್ದಿಯನ್ನು ಒಳಪುಟಕ್ಕೆ ತಳ್ಳಿದ್ದು ಸರಿಯೇ ಎಂದು ಪ್ರಶ್ನಿಸಿದರು. ಪ್ರಶ್ನೆಯನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬಹುದಿದ್ದ ದಂಡಾವತಿ ನಂತರ ಒರಟಾಗಿ ಪ್ರತಿಕ್ರಿಯಿಸಿದ್ದು ಸರಿಯೆನ್ನಿಸಲಿಲ್ಲ.

ಹೂಗಾರ್ ಬಹುಮುಖ್ಯವಾಗಿ ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯ ಇಲ್ಲದೇ ಇರುವ ಕುರಿತು ಪ್ರಸ್ತಾಪಿಸಿದರು. ಸಾಮಾಜಿಕ ನ್ಯಾಯವೇ ಇಲ್ಲದ ಮೀಡಿಯಾಗಳು ಸಾಮಾಜಿಕ ಕಾಳಜಿಯನ್ನು ತೋರುವುದು ಹೇಗೆ ಸಾಧ್ಯ ಎಂಬುದು ಅವರ ಮೂಲಭೂತ ಪ್ರಶ್ನೆಯಾಗಿತ್ತು. ಮಠಗಳಿಗೆ ಕೋಟ್ಯಂತರ ಹಣ ಕೊಟ್ಟರೂ ಮೀಡಿಯಾಗಳು ಯಾಕೆ ಸುಮ್ಮನಿವೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ಜಗದೀಶ್ ಕೊಪ್ಪ ತಮಗೆ ಕೊಟ್ಟ ಎರಡು ನಿಮಿಷಗಳಲ್ಲಿ ಎರಡು ದೃಷ್ಟಾಂತಗಳನ್ನು ಉದಾಹರಿಸಿ, ಸೊಗಸಾಗಿ ತಾವು ಹೇಳಬೇಕಾಗಿದ್ದನ್ನು ಹೇಳಿದರು. ಪಿ.ಸಾಯಿನಾಥ್ ಅವರು ಎರಡು ವರ್ಷದ ಹಿಂದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಊರಿಗೆ ಭೇಟಿ ಕೊಟ್ಟಾಗ, ರೈತನ ಹೆಂಡತಿಯನ್ನು  ಮಾತನಾಡಿಸಿ ಹೋಗಿದ್ದರು. ಜೊತೆಯಲ್ಲಿದ್ದ ಜಗದೀಶ್ ಕೊಪ್ಪ ಸಹ ಅದನ್ನು ವರದಿ ಮಾಡಿದ್ದರು.  ಎರಡು ವರ್ಷಗಳ ನಂತರ ಅದೇ ಮಹಿಳೆಯನ್ನು  ಕಂಡು ಆಕೆಗೆ ಸರ್ಕಾರ ಕೊಡುವ ಪಡಿತರ ವಿವರ ಪಡೆದು, ಜೈಲಿನ ಖೈದಿಗಳಿಗೂ  ಇದಕ್ಕಿಂತ ಉತ್ತಮ ಆಹಾರ ದೊರೆಯುತ್ತಿದೆ ಎಂದು ಸಾಯಿನಾಥ್ ವರದಿ ಮಾಡಿದ್ದರು. ನಾನು ಇಷ್ಟು ವರ್ಷಗಳ ಕಾಲ ಮಣ್ಣು ಹೊತ್ತಿದ್ದಷ್ಟೇ, ನಿಜವಾದ ಪತ್ರಕರ್ತನ ಕೆಲಸ ಮಾಡಲಿಲ್ಲ ಎಂದು ಹೇಳಿದ ಅವರ ಆತ್ಮಾವಲೋಕನದ ಮಾತುಗಳು ಕನ್ನಡ ಮಾಧ್ಯಮರಂಗ ಸಾಗಬೇಕಾದ ಹಾದಿಯ ಒಳನೋಟಗಳನ್ನು ನೀಡಿತು.

ಪ್ರೇಕ್ಷಕರ ಸಾಲಿನಲ್ಲಿ ಮೂಲೆಯಲ್ಲಿ ಒಂದು ಕಡೆ ಹಿರಿಯ ಪತ್ರಕರ್ತ ಈಶ್ವರ ದೈತೋಟ (ವಿಜಯ ಕರ್ನಾಟಕದ ಮೊದಲ ಸಂಪಾದಕರು) ಕುಳಿತುಕೊಂಡಿದ್ದರು. ಅವರನ್ನು ಯಾರು ಗಮನಿಸಲಿಲ್ಲ.

ಹುಣಸವಾಡಿ ರಾಜನ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುರುಡನ ಹೆಗಲ ಮೇಲೆ ಹೆಳವ ಕುಳಿತಿದ್ದಾನೆ, ದಾರಿ ಎಲ್ಲಿದೆ ಎಂದು ಅಡಿಗರ ಕವಿತೆಯ ಸಾಲು ಉದ್ಧರಿಸಿ, ಮಾತು ಮುಗಿಸಿದರು. ಇಲ್ಲಿ ಕುರುಡರು ಯಾರು? ಹೆಳವರು ಯಾರು? ಎನ್ನುವುದಕ್ಕೆ ಈ ವಿಚಾರ ಸಂಕಿರಣವೇ ಒಂದು ಸಾಕ್ಷಿಯಾಗಿದ್ದು ವಿಚಿತ್ರವಾದರೂ ಸತ್ಯವಾಗಿತ್ತು.

ಗಾಂಧಿಭವನದಲ್ಲಿ ನಡೆದ ಈ ಗೋಷ್ಠಿಗೆ ಜನರೇನೋ ತಂಡೋಪತಂಡವಾಗಿ ಬಂದು, ಇಡೀ ಹಾಲ್ ಭರ್ತಿಯಾಗಿತ್ತು. ಆದರೆ ನಿಜವಾಗಿಯೂ ಇಲ್ಲಿ ನಡೆದದ್ದು ಮಾಧ್ಯಮರಂಗದ ಆತ್ಮಾವಲೋಕನವೇ? ಇಂಥ ಸ್ವಗತ, ಗೊಣಗಾಟ, ಹಳಹಳಿಕೆಗಳಿಂದ ಏನಾದರೂ ಪ್ರಯೋಜನವಿದೆಯೇ?

ಆದರೂ, ಸಂಪಾದಕೀಯಕ್ಕೊಂದು ಥ್ಯಾಂಕ್ಸ್ ಹೇಳಲೇಬೇಕು. ಯಾಕೆ ಏನು ಅಂತ ಈ ವರದಿಯನ್ನು ಮತ್ತೊಮ್ಮೆ ಓದಿದರೆ ಗೊತ್ತಾಗುತ್ತದೆ.

-ಓರ್ವ ಪತ್ರಕರ್ತ

ವಿವೇಕಾನಂದರು ಕಂಡ ಪುರೋಹಿತಶಾಹಿ ಮತ್ತು ಅಸ್ಪೃಶ್ಯತೆ


ನೀಚರೂ, ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ೪೦೦ ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೀಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಪುರೋಹಿತರ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧಜನರನ್ನು ಆ ದೇವರೇ ಕಾಪಾಡಬೇಕು.೧

ಭರತಖಂಡದಲ್ಲಿ ಧರ್ಮವೇನಾದರೂ ಉಳಿದುಕೊಂಡಿರುವುದೆಂದು ತಿಳಿದುಕೊಂಡಿರುವೆಯೇನು? ಜ್ಞಾನ, ಭಕ್ತಿ, ಯೋಗಗಳ ಮಾರ್ಗವೆಲ್ಲ ಹೋಯಿತು. ಈಗ ಉಳಿದಿರುವುದು ಒಂದೇ ಧರ್ಮ. ಅದೇ ಮುಟ್ಟಬೇಡ, ಮುಟ್ಟಬೇಡ ಎಂಬುದು. ಪ್ರಪಂಚವೆಲ್ಲಾ ಮೈಲಿಗೆ, ನಾನೊಬ್ಬನೇ ಮಡಿ! ಆಹಾ! ಎಷ್ಟು ತಿಳಿಯಾದ ಬ್ರಹ್ಮಜ್ಞಾನ! ೨

ಭಯಂಕರವಾದ ಕೆಸರಗುಂಡಿ ಮುಂದೆ ಇದೆ ಜೋಪಾನ! ಅನೇಕರು ಅದರಲ್ಲಿ ಬಿದ್ದು ಸಾಯುವರು. ಆ ಕೆಸರೇ ಇದು. ಅದೇನೆಂದರೆ ವರ್ತಮಾನ ಕಾಲದ ಹಿಂದೂಗಳ ಧರ್ಮ ವೇದದಲ್ಲಿಲ್ಲ, ಪುರಾಣದಲ್ಲಿಲ್ಲ, ಭಕ್ತಿಯಲ್ಲಿಲ್ಲ ಅಥವಾ ಮುಕ್ತಿಯಲ್ಲಿಲ್ಲ. ಆ ಧರ್ಮವೆಲ್ಲಾ ಅಡಿಗೆ ಮಾಡುವ ಪಾತ್ರೆಯೊಳಗೆ ಪ್ರವೇಶಿಸಿದೆ. ಇಂದಿನ ಹಿಂದೂ ಧರ್ಮ ಜ್ಞಾನಮಾರ್ಗವೂ ಅಲ್ಲ, ಭಕ್ತಿಮಾರ್ಗವೂ ಅಲ್ಲ. ಅದರ ಧರ್ಮವೇ ಅಸ್ಪೃಶ್ಯತೆ, ಅಸ್ಪೃಶ್ಯತೆ ಎಂಬ ಕುರುಡು ಧರ್ಮದಲ್ಲಿ ನಿಮ್ಮ ಜೀವನ ಹಾಳಾಗದಿರಲಿ. ಜೋಪಾನವಾಗಿ ನೋಡಿಕೊಳ್ಳಿ. ಆತ್ಮವತ್ ಸರ್ವಭೂತೇಷು. ಎಲ್ಲ ಭೂತಗಳಲ್ಲೂ ಒಂದೇ ಆತ್ಮವನ್ನು ನೋಡಬೇಕೆಂಬ ಉಪದೇಶ ಗ್ರಂಥದಲ್ಲೇ ಕೊನೆಗಾಣಬೇಕೆ? ಹಸಿದವನಿಗೆ ಒಂದು ತುತ್ತು ಅನ್ನವನ್ನು ಕೊಡದವರು ಮೋಕ್ಷವನ್ನು ಹೇಗೆ ಕೊಟ್ಟಾರು? ಮತ್ತೊಬ್ಬರ ಉಸಿರಿನ ಸೋಂಕಿನಿಂದಲೇ ಇವರು ಪಾಪಿಗಳಾದರೆ ಇನ್ನೊಬ್ಬರನ್ನು ಹೇಗೆ ಶುದ್ಧಿ ಮಾಡುವರು? ಅಸ್ಪೃಶ್ಯತೆ ಎಂಬುದು ಒಂದು ತರಹದ ಮನೋರೋಗ.೩

ಪ್ರಪಂಚದ ಯಾವ ಧರ್ಮವೂ ಹಿಂದೂಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ. ಅಲ್ಲಿರುವ ಸಂಪ್ರದಾಯಶರಣರದು, ಪುರೋಹಿತರದು, ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನಗಳನ್ನು ಸೃಷ್ಟಿಸುವ ಠಕ್ಕರದು.೪

ಪುರೋಹಿತರು ಎಷ್ಟು ಕೂಗಾಡಿದರೇನು? ಜಾತಿ ಎಂಬುದು ಸಮಾಜದಲ್ಲಿ ಒಂದು ಆಂತರಿಕ ಭಾಗ. ಹಿಂದೆ ಅದು ವಿಕಾಸವಾಗುತ್ತಿತ್ತು; ಈಗ ಅದು ಘನೀಭೂತವಾಗಿರುವುದು. ಈ ಕಟ್ಟಿನ ಕೆಲಸ ಮುಗಿದು, ಅದರ ದುರ್ಗಂಧದಿಂದ ಭಾರತದ ವಾತಾರವರಣವೆಲ್ಲ ತುಂಬಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಕಟ್ಟು ತಾನೇ ಮಾಯವಾಗುವುದು. ಅಮೆರಿಕಾ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ತಾನು ಮನುಷ್ಯನೆಂಬುದು ಗೊತ್ತು. ಇಂಡಿಯಾ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಯೂ ತಾನು ಸಮಾಜದ ಗುಲಾಮನೆಂದು ತಿಳಿದುಕೊಂಡಿರುವನು. ಬೆಳವಣಿಗೆಗೆ ಬೇಕಾಗಿರುವುದು ಮುಖ್ಯವಾಗಿ ಸ್ವಾತಂತ್ರ್ಯ. ಅದು ಮಾಯವಾದರೆ ಅವನತಿಯೇ ಫಲ.೫

ಹಿಂದೂಗಳೆಲ್ಲರೂ ಅಣ್ಣತಮ್ಮಂದಿರು, ಮುಟ್ಟಬೇಡ ಮುಟ್ಟಬೇಡ ಎಂದು ಹೇಳಿ ಹೇಳಿ ನಾವೇ ಅವರನ್ನು ಕೀಳುಮಾಡಿ ಕೂರಿಸಿದ್ದೇವೆ. ಇದೇ ದೇಶದ ಹೀನತೆ, ಭೀರುತೆ, ಮೂರ್ಖತೆ, ಕಾಪುರುಷತೆ, ಇವುಗಳ ಪರಾಕಾಷ್ಠೆಯಲ್ಲಿ ಪರಿಣಮಿಸಿದೆ. ಇವರನ್ನು ಮೇಲಕ್ಕೆ ಎತ್ತಬೇಕು. ಅಭಯದ ಮಾತನ್ನೂ ಹೇಳಬೇಕು. ನೀವೂ ನಮ್ಮ ಹಾಗೆ ಮನುಷ್ಯರು, ನಿಮಗೂ ನಮ್ಮ ಹಾಗೆ ಎಲ್ಲ ಅಧಿಕಾರವೂ ಇದೆ ಎಂದು ಹೇಳಬೇಕು.೬

ನಾಡು ಬದುಕಿರುವುದೇ ದೀನರ ಜೋಪಡಿಗಳಲ್ಲಿ ಎಂಬುದನ್ನು ಜ್ಞಾಪಕದಲ್ಲಿಡಿ. ಅಯ್ಯೋ! ಆದರೆ ಅವರಿಗೆ ಯಾರೂ ಸಹಾಯ ಮಾಡಿಲ್ಲ. ಅವರನ್ನು ಮೇಲೆತ್ತಬಲ್ಲಿರಾ? ಅವರೊಂದಿಗೆ ಬಂದಿರುವ ಅಧ್ಯಾತ್ಮಿಕ ಪ್ರವೃತ್ತಿಯನ್ನು ನಾಶಮಾಡದೆ, ಕಳೆದುಕೊಂಡ ವ್ಯಕ್ತಿತ್ವವನ್ನು ಅವರಿಗೆ ಪುನಃ ಕೊಡಬಲ್ಲಿರಾ? ಸ್ವಾತಂತ್ರ್ಯದಲ್ಲಿ, ಕ್ರಿಯೆಯಲ್ಲಿ ಶಕ್ತಿಯಲ್ಲಿ ಪಾಶ್ಚಾತ್ಯರನ್ನೂ ಕೂಡ ಮೀರಿಸಿ, ಅದೇ ಸಮಯದಲ್ಲಿ ಧಾರ್ಮಿಕ ಸಂಸ್ಕೃತಿ ಸ್ವಭಾವದಲ್ಲಿ ಪೂರ್ಣ ಭಾರತೀಯರಾಗಬಲ್ಲಿರಾ?... ಪ್ರಾಣ ಹೋದರೂ ಸರಿ, ದೀನರಿಗೆ, ದಲಿತರಿಗೆ ದಯೆ ತೋರುವುದು ನಮ್ಮ ಗುರಿ. ೭

೧. ವಿವೇಕಾನಂದರ ಕೃತಿಶ್ರೇಣಿ ಸಂಪುಟ-೬, ಪುಟ ಸಂಖ್ಯೆ: ೬೬
೨. ಸಂಪುಟ-೬, ಪುಟ ಸಂಖ್ಯೆ: ೨೭೦-೨೭೧
೩. ಸಂಪುಟ-೬, ಪುಟ ಸಂಖ್ಯೆ: ೩೭೩
೪. ಸಂಪುಟ-೬, ಪುಟ ಸಂಖ್ಯೆ: ೮೬
೫. ಸಂಪುಟ-೬, ಪುಟ ಸಂಖ್ಯೆ: ೧೦೧
೬. ಸಂಪುಟ-೧೦, ಪುಟ ಸಂಖ್ಯೆ: ೧೧೭-೧೧೮
೭. ಸಂಪುಟ-೬, ಪುಟ ಸಂಖ್ಯೆ: ೧೧೧-೧೧೨

Saturday, March 12, 2011

ವಿವೇಕಾನಂದರು ಕಂಡ ಧರ್ಮಗಳು ಮತ್ತು ಧರ್ಮಗ್ರಂಥಗಳು...


ಧರ್ಮ ನಮಗೆ ಕೇವಲ ಯುಕ್ತಿಯ ಒಪ್ಪಿಗೆಮಾತು. ಮತ್ತೇನೂ ಅಲ್ಲ. ಯಾರು ಚೆನ್ನಾಗಿ ಮಾತನಾಡಬಲ್ಲರೋ ಅವರನ್ನು ಧಾರ್ಮಿಕರೆಂದು ಅನೇಕವೇಳೆ ಭಾವಿಸುವೆವು. ಆದರೆ ಧರ್ಮ ಅದಲ್ಲ. ಧರ್ಮವೆಂದರೆ ಕೇವಲ ಸುಂದರ ಪದಸಂಯೋಜನೆಯ ಮತ ಸಿದ್ಧಾಂತ ಎಂದು ತಿಳಿದಿರುವ ಮಾತಿನಮಲ್ಲರಿಂದ ಬಹುದೂರ ಹೋಗಬೇಕು.೧

ಯಾರಿಗೆ ಧರ್ಮವೆಂದರೆ ಯುಕ್ತಿಯ ಆಧಾರದಮೇಲೆ ಒಂದು ಒಪ್ಪಿಗೆ ಅಥವಾ ವಿರೋಧವನ್ನು ಸೂಚಿಸುವುದಾಗಿದೆಯೋ, ಯಾರಿಗೆ ತಮ್ಮ ಪುರೋಹಿತರು ಹೇಳುವ ಕೆಲವು ವಿಷಯಗಳನ್ನು ನಂಬುವುದಾಗಿದೆಯೋ, ಯಾರಿಗೆ ಧರ್ಮವೆಂದರೆ ತಮ್ಮ ಜನಾಂಗವೇ ನಂಬಿಕೊಂಡಿರುವ ಕೆಲವು ಭಾವನೆ ಮತ್ತು ಮೂಢನಂಬಿಕೆಗೆ ಸಂಪೂರ್ಣ ಒಪ್ಪಿಗೆಯನ್ನು ಕೊಡುವುದಾಗಿದೆಯೋ ಅವರು ಅಂತಹ ಭಾವನೆಗಳಿಂದ ಪಾರಾಗಬೇಕು. ಅವುಗಳನ್ನೆಲ್ಲ ಮೀರಿ ಹೋಗಬೇಕು. ಮಾನವ ಕೋಟಿಯನ್ನು ಬೆಳಕಿನೆಡೆಗೆ ಮುಂದುವರೆಯುತ್ತಿರುವ ಒಂದು ಬೃಹತ್ ಜೀವಿಗಳ ವ್ಯೂಹ ಎಂದು ಭಾವಿಸಬೇಕು.೨

ಧರ್ಮ ಬಾಯಿ ಮಾತಲ್ಲ; ನಂಬಿಕೆಯಲ್ಲ, ಸಿದ್ಧಾಂತವಲ್ಲ ಅಥವಾ ಅದೊಂದು ಕೋಮುವಾರು ಭಾವನೆಯೂ ಅಲ್ಲ. ಧರ್ಮ ಕೋಮುಗಳಲ್ಲೂ ಸಂಘಗಳಲ್ಲೂ ಜೀವಿಸಲಾರದು. ಆತ್ಮನಿಗೂ ದೇವರಿಗೂ ಇರುವ ಸಂಬಂಧ ಇದು. ಇದನ್ನು ಒಂದು ಸಂಘವಾಗಿ ಹೇಗೆ ಮಾಡಬಹುದು? ಆನಂತರ ಇದೊಂದು ವ್ಯಾಪಾರವಾಗುವುದು. ಎಲ್ಲಿ ವ್ಯಾಪಾರ ದೃಷ್ಟಿ ಇದೆಯೋ, ಧರ್ಮದಲ್ಲಿ ವ್ಯಾಪಾರ ನಿಯಮಗಳಿವೆಯೋ ಅಲ್ಲಿ ಅಧ್ಯಾತ್ಮಿಕತೆ ಕೊನೆಗಾಣುವುದು. ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ. ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ; ಅದು ಗ್ರಂಥದಲ್ಲಿಲ್ಲ. ಮಾತಿನಲ್ಲಿಯೂ ಇಲ್ಲ. ಉಪವಾಸದಲ್ಲಿಯೂ ಇಲ್ಲ ಅಥವಾ ಸಂಸ್ಥೆಯಲ್ಲಿಯೂ ಇಲ್ಲ. ೩

ಪ್ರತಿಯೊಂದು ಧರ್ಮವೂ ತಮ್ಮ ಸಿದ್ಧಾಂತವೇ ಸತ್ಯ ಎಂದು ಸಾಧಿಸುವುದು. ಇದು ಮಾತ್ರವಲ್ಲ, ಯಾರು ಇದನ್ನು ನಂಬುವುದಿಲ್ಲವೋ ಅವರು ಘೋರ ನರಕಕ್ಕೆ ಹೋಗಬೇಕು ಎನ್ನುವುದು. ತಮ್ಮಂತೆ ಇತರರೂ ನಂಬುವಂತೆ ಬಲಾತ್ಕಾರ ಮಾಡುವುದಕ್ಕೂ, ಬಲಪ್ರಯೋಗಕ್ಕೂ ಕೆಲವರು ಹಿಂಜರಿಯುವುದಿಲ್ಲ. ಇದು ದುಷ್ಟತನದಿಂದ ಅಲ್ಲ, ಮತಭ್ರಾಂತಿ ಎಂಬ ಮಾನವನ ಮಿದುಳಿನ ಒಂದು ಜಾಡ್ಯದ ಪರಿಣಾಮದಿಂದ. ಈ ಮತಭ್ರಾಂತರು ತುಂಬ ಪ್ರಾಮಾಣಿಕರು. ಮನುಷ್ಯರಲ್ಲೇ ನಿಷ್ಕಪಟಿಗಳು. ಆದರೆ ಅವರು ಹುಚ್ಚರಂತೆ ಜವಾಬ್ದಾರಿ ಇಲ್ಲದವರು. ಮತಭ್ರಾಂತಿ ಎಂಬುದೊಂದು ಬಹಳ ಅಪಾಯಕರವಾದ ರೋಗ. ಮಾನವನ ಹೀನಸ್ವಭಾವವೆಲ್ಲ ಇದರಿಂದ ಜಾಗೃತವಾಗುವುದು. ಕೋಷಿಷ್ಠರು, ಉದ್ವೇಗಪರವಶರಾಗಿ ವ್ಯಾಘ್ರಗಳಂತೆ ಆಗುವರು.೪

ಧರ್ಮದ ವಿಷಯದಲ್ಲಿ ಎರಡು ಅತಿರೇಕಗಳಿವೆ. ಒಬ್ಬನು ನಾಸ್ತಿಕ. ಮತ್ತೊಬ್ಬನು ಧರ್ಮಾಂಧ. ನಾಸ್ತಿಕನಲ್ಲಿ ಸ್ವಲ್ಪ ಒಳ್ಳೆಯದು ಇದೆ. ಆದರೆ ಧರ್ಮಾಂಧನಾದರೋ ಕೇವಲ ಸ್ವಾರ್ಥಿ. ೫

ದೇವರ ಹೆಸರಿನಲ್ಲಿ ಏತಕ್ಕೆ ಇಷ್ಟೊಂದು ಅಶಾಂತಿ, ಕಲಹ? ದೇವರ ಹೆಸರಿನಲ್ಲಿ ಹರಿಸಿರುವಷ್ಟು ರಕ್ತವನ್ನು ಬೇರಾವ ಕಾರಣದಿಂದಲೂ ಹರಿಸಿಲ್ಲ. ಏಕೆಂದರೆ ಜನರು ಧರ್ಮದ ಮೂಲಕ್ಕೆ ಹೋಗಲಿಲ್ಲ. ಅವರ ಪೂರ್ವಿಕ ಆಚಾರ ವ್ಯವಹಾರಗಳಿಗೆ ಒಪ್ಪಿಗೆ ನೀಡುವುದರಲ್ಲಿಯೇ ತೃಪ್ತರಾಗಿದ್ದರು. ಉಳಿದವರು ಕೂಡ ಹಾಗೆಯೇ ಮಾಡಬೇಕೆಂದು ತಿಳಿದಿದ್ದರು. ಕಪಟಿಯಾಗುವುದಕ್ಕಿಂತ ಖಂಡಿತವಾಗಿಯೂ ನಾಸ್ತಿಕನಾಗಿರುವುದು ಮೇಲು.೬

ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟು ಮಾಡಿವೆ. ಹಲವು ದೋಷಯುಕ್ತ ಸಿದ್ಧಾಂತಗಳಿಗೆ ಅವೇ ಕಾರಣ. ಸಿದ್ಧಾಂತಗಳೆಲ್ಲ ಗ್ರಂಥದಿಂದ ಬರುವುವು. ಮತಾಂಧತೆ, ಅನ್ಯಧರ್ಮೀಯರನ್ನು ಹಿಂಸಿಸುವುದು, ಇವಕ್ಕೆಲ್ಲ ಗ್ರಂಥಗಳೇ ಕಾರಣ. ಇಂದಿನ ಕಾಲದಲ್ಲಿ ಗ್ರಂಥಗಳು ಎಲ್ಲ ಕಡೆಯಲ್ಲಿಯೂ ಕಪಟಿಗಳನ್ನು ಉಂಟುಮಾಡುತ್ತಿರುವುದು. ಹೊರದೇಶಗಳಲ್ಲಿಯೂ ಇರುವ ಕಪಟಿಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯವಾಗುತ್ತದೆ.೭

೧. ವಿವೇಕಾನಂದರ ಕೃತಿಶ್ರೇಣಿ ಸಂಪುಟ ೩, ಪುಟ ಸಂಖ್ಯೆ ೧೧೩
೨. ಸಂಪುಟ ೪, ಪುಟ ಸಂಖ್ಯೆ ೪೪೬
೩. ಸಂಪುಟ ೨, ಪುಟ ಸಂಖ್ಯೆ ೩೯೭
೪. ಸಂಪುಟ ೩, ಪುಟ ಸಂಖ್ಯೆ ೨೫೪
೫. ಸಂಪುಟ ೧೦, ಪುಟ ಸಂಖ್ಯೆ ೫೪೦
೬. ಸಂಪುಟ ೧, ಪುಟ ಸಂಖ್ಯೆ ೧೭೫-೧೭೬
೭. ಸಂಪುಟ ೫, ಪುಟ ಸಂಖ್ಯೆ ೪೨೦

Friday, March 11, 2011

ವಿವೇಕಾನಂದರ ವಿಚಾರಗಳ ಒಳಗೆ ಪ್ರವೇಶಿಸುವ ಮುನ್ನ...


ಅವರು ಸ್ವಾಮಿ ವಿವೇಕಾನಂದರು. ೧೮೯೩ನೇ ಸೆಪ್ಟೆಂಬರ್ ೧೧ರಂದು ಚಿಕಾಗೋದಲ್ಲಿ ನಡೆದ ಸರ್ವಧರ್ಮಗಳ ವಿಶ್ವವೇದಿಕೆಯಲ್ಲಿ ಸಹೋದರರೆ ಮತ್ತು ಸಹೋದರಿಯರೆ ಎಂದು ಸಂಬೋಧಿಸಿದಾಗ ನೆರೆದಿದ್ದ ಏಳು ಸಾವಿರಕ್ಕೂ ಹೆಚ್ಚು ಜನರು ಎದ್ದುನಿಂತು ಕರತಾಡನ ಮಾಡಿ, ಹರ್ಷೋದ್ಘಾರ ಮೊಳಗಿಸಿದ್ದರು. ಆ ವೇದಿಕೆಯಲ್ಲಿ ವಿವೇಕಾನಂದರು ಆಡಿದ ಮಾತುಗಳು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಈತನ ವಾಣಿಯಲ್ಲಿ ಹೊಮ್ಮುವ ವಿಚಾರಗಳನ್ನು ಕೇಳಿದ ನಂತರ, ಇಂತಹ ಘನಪಂಡಿತರಿರುವ ದೇಶಕ್ಕೆ ಮಿಷನರಿಗಳನ್ನು ಕಳುಹಿಸುವುದು ಎಂತಹ ಮೂರ್ಖತನ ಹಾಗು ಅವಿವೇಕ ಎಂದು ಅಮೆರಿಕಾದ ಅತ್ಯಂತ ಪ್ರತಿಷ್ಠಿತ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ತನ್ನ ಮುಖಪುಟದಲ್ಲಿ ಬರೆದು ಗೌರವ ಸಲ್ಲಿಸಿತ್ತು.

ವಿವೇಕಾನಂದರು ಹುಟ್ಟಿದ್ದು ಜನವರಿ, ೧೨, ೧೮೬೩ರಂದು. ಕ್ಷತ್ರಿಯ ಕುಲದಲ್ಲಿ ವಿಶ್ವನಾಥದತ್ತ ಹಾಗು ಭುವನೇಶ್ವರಿ ಅವರಿಗೆ ಜನಿಸಿದ ನರೇಂದ್ರನಾಥದತ್ತ ವಿವೇಕಾನಂದರಾಗಿ ಬೆಳೆದು, ಜಗತ್ತಿನ ಶ್ರೇಷ್ಠ ಸಂನ್ಯಾಸಿಯಾದ ಇತಿಹಾಸವೇ ರೋಮಾಂಚನಕಾರಿ. ೧೮೮೧ರಲ್ಲಿ ವಿವೇಕಾನಂದರು ಶ್ರೀ ರಾಮಕೃಷ್ಣಪರಮಹಂಸರನ್ನು ಮೊದಲು ಭೇಟಿ ಮಾಡಿದರು. ಅವರ ಅನುಯಾಯಿಯಾದರು. ನಂತರ ಪರಮಹಂಸರು ಇಹಲೋಕ ತ್ಯಜಿಸಿದ ನಂತರ ೧೮೮೬ರ ಆಗಸ್ಟ್ ೧೫ರಂದು ವಿವೇಕಾನಂದರು ಸಂನ್ಯಾಸ ಸ್ವೀಕರಿಸಿದರು.

ನಾನು ಎರಡು ಪ್ರಪಂಚಗಳ ನಡುವೆ ನಿಲ್ಲಬೇಕಾಯಿತು. ಒಂದುಕಡೆ, ನನ್ನ ತಾಯಿ ಮತ್ತು ಸಹೋದರರು ಪ್ರಾಣ ಹೋಗುವವರೆಗೆ ಉಪವಾಸ ಮಾಡುವುದನ್ನು ನೋಡಬೇಕಾಗಿತ್ತು. ಮತ್ತೊಂದೆಡೆ ಈ ಮಹಾಪುರುಷ ಪರಮಹಂಸರ ಸಂದೇಶವನ್ನು ಭರತಖಂಡದ ಉದ್ಧಾರಕ್ಕೆ, ಜಗತ್ತಿನ ಉದ್ಧಾರಕ್ಕೆ ಬೋಧಿಸಬೇಕು, ಕಾರ‍್ಯರೂಪಕ್ಕೆ ತರಬೇಕು. ಆದ ಕಾರಣ ಹಲವು ದಿನಗಳು ಹಲವು ತಿಂಗಳು ಮನಸ್ಸಿನಲ್ಲಿ ಹೋರಾಟ ಮೊದಲಾಯಿತು. ಕೆಲವು ವೇಳೆ ಹಗಲು ರಾತ್ರಿ ಐದಾರು ದಿನ ಎಡೆಬಿಡದೆ ಪ್ರಾರ್ಥಿಸುತ್ತಿದ್ದೆ. ಅಬ್ಬ! ಆ ದಿನಗಳ ವ್ಯಥೆ! ನಾನೊಂದು ನರಕದಲ್ಲಿ ವಾಸಿಸುತ್ತಿದ್ದೆ. ಸ್ವಾಭಾವಿಕವಾದ ಬಾಲ್ಯಪ್ರೇಮ ನನ್ನನ್ನು ಮನೆಕಡೆಗೆ ಸೆಳೆಯುತ್ತಿತ್ತು. ಯಾರು ನನ್ನ ಹತ್ತಿರದ ಬಂಧುಗಳೋ ನನ್ನ ಪ್ರೀತಿಗೆ ಪಾತ್ರರೋ ಅವರು ವ್ಯಥೆ ಪಡುವುದನ್ನು ನನಗೆ ನೋಡಲು ಸಾಧ್ಯವಾಗಲಿಲ್ಲ.

ಮಹಾತ್ಮರೆಲ್ಲ ಅನುಭವಿಸಿದ್ದು ಇದೇ ನೋವನ್ನು. ಕಡೆಗೆ ವಿವೇಕಾನಂದರು ತೀರ್ಮಾನವೊಂದಕ್ಕೆ ಬಂದು ತ್ಯಾಗವೊಂದಕ್ಕೆ ಸಿದ್ಧವಾಗುತ್ತಾರೆ. ತಾಯಿ ಮತ್ತು ಇಬ್ಬರು ಸಹೋದರರನ್ನು ಬಿಟ್ಟು ಹೊರನಡೆಯುತ್ತಾರೆ. ನಂತರವೂ ಅವರು ಅನುಭವಿಸಿದ್ದು ಕಷ್ಟಗಳ ನರಕವನ್ನೇ.  ಆದರೂ ಅವರು ಇಡೀ ಭಾರತವನ್ನು ಸುತ್ತಿದರು. ದೇಶದ ಜನರು ಪಡುತ್ತಿರುವ ಬವಣೆಗಳನ್ನು ಎಳೆಎಳೆಯಾಗಿ ಅರ್ಥ ಮಾಡಿಕೊಂಡಿದ್ದರು. ನಾಡಿನ ಜನರು ಬಡತನ, ಅಜ್ಞಾನ, ರೋಗಗಳಿಂದ ನರಳುತ್ತಿರುವುದನ್ನು ಕಣ್ಣಾರೆ ಕಂಡು ನೊಂದಿದ್ದರು. ಜನರು ಮೌಢ್ಯಗಳ ದಾಸರಾಗಿರುವುದನ್ನು ಅವರು ಮಮ್ಮಲ ಮರುಗಿದ್ದರು.

ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಬಂಡೆಯ ಮೇಲೆ ಕುಳಿತು ಧ್ಯಾನಗೈದು ಕಂಡುಕೊಂಡ ಸತ್ಯಗಳೇನು?

ತಾಯಿ, ನಿನ್ನ ಸೌಂದರ್ಯವನ್ನು ಕುರೂಪಗೈದವರನ್ನು ಮನ್ನಿಸು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಹಿಂದೂ, ಮುಸಲ್ಮಾನ, ಪಾರಸಿ, ಕ್ರೈಸ್ತ ಇನ್ನೂ ನೂರಾರು ಭೇದಗಳನ್ನು ಕಲ್ಪಿಸಿ ಕೆಟ್ಟರು. ಗೊಡ್ಡು ಪದ್ಧತಿಯನ್ನೇ ಧರ್ಮವೆಂದು ಬೋಧಿಸಿ ನಿನ್ನನ್ನು ಪರಕೀಯರಿಗೆ ದಾಸಿಯನ್ನಾಗಿಸಿದರು. ನಿನ್ನ ಐಶ್ವರ್ಯ, ವಿದ್ವತ್ತು, ಧರ್ಮ ಎಲ್ಲಿ ಹೋಯಿತು? ಪುರೋಹಿತರ ಉಪಟಳದಿಂದ, ಜಾತಿಭೇದಗಳ ಕ್ರೌರ್ಯದಿಂದ, ಪಾಮರರ ಮೂರ್ಖತನದಿಂದ ಸರ್ವವೂ ನಾಶವಾಯಿತು. ಮುಷ್ಟಿ ಹಿಡಿಯದಂತೆ ಅಂಗಲಾಚಿ ಬೇಡುವಂತೆ ಮಾಡಿದ್ದೇವೆ. ಅಂಗೈಯಲ್ಲೆ ಅನಂತವನ್ನು ತೋರಿಸಿದ್ದೇವೆ. ಮೋಸ, ಮೋಸ, ಮೋಸ ಎಲ್ಲೆಲ್ಲೂ ಮೋಸ, ವಂಚನೆ.
ನಾನು ಧೃತಿಗಟ್ಟ ದರಿದ್ರರಿಗೆ ನೇರವಾಗಿ ಧೈರ್ಯ ತುಂಬುತ್ತೇನೆ. ಅವರ ಸೇವೆ ಮಾಡುತ್ತೇನೆ. ಪಶುತ್ವಕ್ಕಿಳಿದಿರುವವರನ್ನು ಕನಿಷ್ಠ ಮನುಷ್ಯತ್ವಕ್ಕೆ ಎತ್ತುತ್ತೇನೆ. ನನ್ನ ಕಡೆಯ ಉಸಿರಿರುವವರೆಗೆ ಭರತಮಾತೆಯ ದಾಸ್ಯವನ್ನು ತೊಡೆಯಲು ತುಡಿದು ದುಡಿಯುತ್ತೇನೆ. ಅದಕ್ಕಾಗಿಯೇ ಮಡಿಯುತ್ತೇನೆ.

ವಿವೇಕಾನಂದರು ಹಾಗೆಯೇ ಬದುಕಿದರು. ಅವರು ಮರಣಿಸಿದ್ದು ೧೯೦೨ರ ಜುಲೈ ೪ರಂದು. ಬದುಕಿದ್ದು ಕೇವಲ ೩೯ ವರ್ಷಗಳು ಮಾತ್ರ. ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು ತಿಳಿಯುವುದಕ್ಕೆ ಮತ್ತೊಬ್ಬ ವಿವೇಕಾನಂದ ಇದ್ದರೆ ಅವನಿಂದ ಮಾತ್ರ ಸಾಧ್ಯ ಎಂದು ಸಾಯುವ ಮುನ್ನ ಅವರು ಹೇಳಿದ್ದರು.

ನಾವು ಭಾರತೀಯರು, ವಿವೇಕಾನಂದರನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಯಾಕೆಂದರೆ ನಮ್ಮೊಳಗಿನ ವಿವೇಕಾನಂದ ಇನ್ನೂ ಜಾಗೃತಗೊಂಡೇ ಇಲ್ಲ.

ಇನ್ನು ಕೆಲವು ದಿನಗಳು ವಿವೇಕಾನಂದರ ವಾಣಿಗಳನ್ನೇ ಈ ಬ್ಲಾಗ್‌ನಲ್ಲಿ ನೋಡಲಿದ್ದೀರಿ. ಸಮಕಾಲೀನ ಸಮಸ್ಯೆ, ಗೊಂದಲಗಳಿಗೆ ವಿವೇಕಾನಂದರ ಮಾತುಗಳಲ್ಲಿ ಉತ್ತರ ಹುಡುಕುವ ಸಣ್ಣ ಪ್ರಯತ್ನ ಇದು.

ವಿವೇಕಾನಂದರು ಒಂದೆಡೆ ಹೇಳುತ್ತಾರೆ,

ನನ್ನ ಸ್ವಂತ ಇಚ್ಛೆಯೊಂದು ಇದೆ. ಸ್ವಲ್ಪ ಅನುಭವವೂ ಇದೆ. ಪ್ರಪಂಚಕ್ಕೆ ಕೊಡಬೇಕಾದ ಒಂದು ಸಂದೇಶವೂ ಇದೆ. ಅದನ್ನು ದಯಾ ದಾಕ್ಷಿಣ್ಯವಿಲ್ಲದೆ, ಮುಂದೆ ಏನಾಗಬಲ್ಲುದು ಎಂಬುದನ್ನು ಗಮನಿಸದೆ ಸಾರುತ್ತೇನೆ. ಸುಧಾರಕರಿಗೆ, ನಾನು ಅವರಿಗಿಂತ ದೊಡ್ಡ ಸುಧಾರಕ ಎಂದು ಹೇಳುತ್ತೇನೆ. ಅವರು ಚೂರುಪಾರುಗಳನ್ನು ಸುಧಾರಿಸಲು ಯತ್ನಿಸುವವರು. ನನಗೆ ಆಮೂಲಾಗ್ರ ಸುಧಾರಣೆ ಬೇಕು. ಮಾರ್ಗದ ಕುರಿತು ನಮ್ಮಲ್ಲಿ ವ್ಯತ್ಯಾಸವಿದೆ. ಅವರದು ಧ್ವಂಸಮಾರ್ಗ. ನನ್ನದು ನಿರ್ಮಾಣಮಾರ್ಗ.  ನಾನು ಸುಧಾರಣೆಯಲ್ಲಿ ನಂಬುವುದಿಲ್ಲ, ಬೆಳವಣಿಗೆಯಲ್ಲಿ ನಂಬುತ್ತೇನೆ. ನಾನು ದೇವರಸ್ಥಾನದಲ್ಲಿ ನಿಂತು ಸಮಾಜಕ್ಕೆ ಹೀಗೆ ಚಲಿಸಬೇಕು ಎಂದು ಅಪ್ಪಣೆ ಮಾಡಲಾರೆ.

ನಮ್ಮ ಆಯ್ಕೆಯೂ ನಿರ್ಮಾಣ ಮಾರ್ಗವೇ ಆಗಿರಬೇಕು ಅಲ್ಲವೇ?

Wednesday, March 9, 2011

ವಿ.ಕ. ಸಮ್ಮೇಳನಕ್ಕೆ ಹೊರಟು ನಿಂತ ಮಾಧ್ಯಮ ಮಂದಿಗೆ ಕೆಲವು ವಿನಂತಿ


ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ನಿರೀಕ್ಷೆಯಂತೆ ಮಾಧ್ಯಮಗಳ ಕುರಿತೂ ಒಂದು ಗೋಷ್ಠಿ ಏರ್ಪಾಡಾಗಿದೆ.  ಗೋಷ್ಠಿ ನಡೆಯುತ್ತಿರುವುದು ೧೨ರಂದು ಗಾಂಧಿಭವನದಲ್ಲಿ ಮಧ್ಯಾಹ್ನ ೨-೩೦ಕ್ಕೆ. ಸಮೂಹ ಮಾಧ್ಯಮ: ಸಾಮಾಜಿಕ ಕಾಳಜಿ ಎಂಬುದು ಗೋಷ್ಠಿಯ ವಿಷಯ. ಗೋಷ್ಠಿಯಲ್ಲಿ ಕನ್ನಡ ಮಾಧ್ಯಮಗಳ ಘಟನಾನುಘಟಿಗಳೇ ಭಾಗವಹಿಸುತ್ತಿದ್ದಾರೆ. ಒಂದೊಳ್ಳೆಯ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.

ಸದ್ಯದ ಸನ್ನಿವೇಶದಲ್ಲಿ ಮಾಧ್ಯಮಗಳ ಸಾಮಾಜಿಕ ಕಾಳಜಿ ಕುರಿತು ಚರ್ಚೆಯಾಗಲೇಬೇಕಾದ ಹಲವಾರು ವಿಷಯಗಳಿವೆ. ಇದು ಭಾಗವಹಿಸುವ ಗಣ್ಯ ಪತ್ರಕರ್ತರಿಗೂ ಗೊತ್ತಿದೆ. ಹಾಗಿದ್ದಾಗ್ಯೂ ಪ್ರಮುಖ ವಿಷಯಗಳು ಮರೆಯಾಗದಿರಲಿ ಎಂಬುದು ನಮ್ಮ ಅಪೇಕ್ಷೆ. ಈ ಹಿನ್ನೆಲೆಯಲ್ಲಿ ಕೆಲವು ಗಂಭೀರ ಅಂಶಗಳ ಕುರಿತು ಕೆಲವು ಟಿಪ್ಪಣಿಗಳನ್ನು ಮಾಡಲು ಪ್ರಯತ್ನಿಸಿದ್ದೇವೆ. ಈ ಕುರಿತು ದಯವಿಟ್ಟು ಚರ್ಚೆ ಮಾಡಿ ಎಂದು ಈ ಎಲ್ಲರಲ್ಲೂ ನಾವು ವಿನಂತಿಸಿಕೊಳ್ಳುತ್ತೇವೆ.

ಅಗ್ಗದ ಜನಪ್ರಿಯತೆಯ ಹಂಗು ಬೇಕೆ?
ಇವತ್ತು ಸುದ್ದಿಯೂ ಕೂಡ ಮಾರಾಟದ ಸರಕು. ಪತ್ರಿಕೆ-ಚಾನಲ್‌ಗಳೂ ಕೂಡ ಅಪ್ಪಟ ಉದ್ಯಮಗಳು. ಹೀಗಾಗಿ ಸಾಮಾಜಿಕ ಕಾಳಜಿ ಹಿನ್ನೆಲೆಗೆ ಸರಿದಿದೆ. ವಿಶೇಷವಾಗಿ ಟೀವಿ ಮಾಧ್ಯಮವಂತೂ ದಾರಿ ತಪ್ಪಿ ನಿಂತಿದೆ. ಯಾವುದು ಟಿಆರ್‌ಪಿ ತಂದುಕೊಡುತ್ತದೋ ಅದಷ್ಟೇ ಸುದ್ದಿ ಎನ್ನುವಂತಾಗಿದೆ. ಇದು ದಿನೇ ದಿನೇ ಅಪಾಯಕಾರಿ ಹಂತ ತಲುಪುತ್ತಿದೆ. ಟಿಆರ್‌ಪಿಯ ಕಾರಣಕ್ಕಾಗಿ ಮನೆಮನೆಯ ಜಗಳ ಟಿವಿ ಪರದೆಗಳ ಮೇಲೆ ಬಂದಿದೆ. ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಪರಿಪಾಠ ಟಿವಿಗಳಿಂದಲೇ ಜನಪ್ರಿಯವಾಗಿದೆ. ಸಮೂಹ ಮಾಧ್ಯಮಗಳಿಗೆ ಈ ಜನಪ್ರಿಯತೆಯ ಹಂಗು ಬೇಕೆ?

ಸುದ್ದಿಯಲ್ಲೂ ತಾರತಮ್ಯ ಸರಿಯೇ?
ಒಂದು ಬಡಕುಟುಂಬದ ಹುಡುಗಿ ಅತ್ಯಾಚಾರ, ಕೊಲೆಗೆ ಒಳಗಾದರೆ ಅದು ಎಲ್ಲೋ ಮೂಲೆಯಲ್ಲಿ ಪ್ರಕಟಗೊಂಡು ಮರೆಯಾಗಿಬಿಡುತ್ತದೆ. ಆದರೆ ದೊಡ್ಡ ಕುಟುಂಬದ, ದೊಡ್ಡ ಉದ್ಯೋಗದ, ದೊಡ್ಡ ಸಮಾಜದ ಹೆಣ್ಣುಮಗಳಿಗೆ ಇದೇ ಆದರೆ, ಅದು ವರ್ಷಗಟ್ಟಲೆ ಸುದ್ದಿಯಲ್ಲಿರುತ್ತದೆ. ಈ ತಾರತಮ್ಯ ಏಕೆ? ಜೀವಗಳಿಗೆ ಪತ್ರಕರ್ತರು ಹೀಗೆ ಪ್ರತ್ಯೇಕವಾಗಿ ಬೆಲೆ ಕಟ್ಟುವುದು ಸರಿಯೇ?

ಮಾಧ್ಯಮಸಂಸ್ಥೆಗಳ ಮಾಲಿಕತ್ವ ರಾಜಕಾರಣಿಗಳ ಕೈಗೆ
ಇವತ್ತು ಮಾಧ್ಯಮ ಸಂಸ್ಥೆಗಳ ಮಾಲಿಕತ್ವವನ್ನು ಪಡೆಯುವುದರತ್ತ ರಾಜಕಾರಣಿಗಳು ಚಿತ್ತ ಹರಿಸಿದ್ದಾರೆ. ಈಗಾಗಲೇ ಕರ್ನಾಟಕದ ಕೆಲವು ಮಾಧ್ಯಮಗಳ ರಾಜಕಾರಣಿಗಳ ತೆಕ್ಕೆಗೆ ಬಂದಿವೆ. ಇನ್ನಷ್ಟು ಇದೇ ಹಾದಿಯಲ್ಲಿವೆ. ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಳ್ಳುವ ಉದ್ದೇಶ ಬಹಳ ಸ್ಪಷ್ಟವಾಗಿ ಸುದ್ದಿಯ ಮೇಲೆ ನಿಯಂತ್ರಣ ಹೊಂದುವುದು. ಈ ಟ್ರೆಂಡ್ ಹೀಗೇ ಮುಂದುವರೆದರೆ ಅಪಾಯಕಾರಿಯಾದ ಸನ್ನಿವೇಶ ಸೃಷ್ಟಿಯಾಗಿ, ಪತ್ರಕರ್ತರು ನೇರವಾಗಿ ರಾಜಕಾರಣಿಗಳ ಪರಿಚಾರಕರಾಗಬೇಕಾಗುತ್ತದೆ. ಇದು ಬೇಕೆ?

ಸುದ್ದಿಗಾಗಿ ಕಾಸು, ಎಷ್ಟು ನೈತಿಕ?
ಕಾಸಿಗಾಗಿ ಸುದ್ದಿ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಕನ್ನಡದ ಬಹುತೇಕ ಪತ್ರಿಕೆಗಳು ಕಾಸಿಗಾಗಿ ಸುದ್ದಿಯನ್ನು ಪ್ರಕಟಿಸುತ್ತಿವೆ. ಮಾಧ್ಯಮರಂಗದ ಅಂತಃಸತ್ವವನ್ನೇ ಇದು ಹಾಳುಗೆಡವಿದೆ. ಜಾಹೀರಾತುದಾರರೂ ಸಹ ಇಂದು ಸುದ್ದಿಯಲ್ಲೂ ಫೇವರ್ ಬಯಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಸಿಗಾಗಿ ಸುದ್ದಿ ಕುರಿತು ಕುರಿತು ಕನ್ನಡ ಮಾಧ್ಯಮ ರಂಗ ತನ್ನ ಸ್ಪಷ್ಟ ನಿಲುವನ್ನು ಪ್ರಕಟಪಡಿಸಬೇಕಲ್ಲವೇ?

ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?
ಮೀಡಿಯಾ ಕಚೇರಿಗಳಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಬಹಳಷ್ಟು ಸಮುದಾಯಗಳಿಗೆ ಇಲ್ಲಿ ಪ್ರಾತಿನಿಧ್ಯವೇ ಇಲ್ಲ. ಸಣ್ಣಪುಟ್ಟ ಸಮುದಾಯಗಳಂತೂ ಕಾಣಿಸಿಕೊಳ್ಳುವುದೇ ಇಲ್ಲ. ಎಲ್ಲ ಸಮುದಾಯಗಳ ಪಾಲ್ಗೊಳ್ಳುವಿಕೆ ಇಲ್ಲದೇ ಹೋದರೆ ಮೀಡಿಯಾಗಳು ಪರಿಪೂರ್ಣವಾಗಿ ಸಮಾಜವನ್ನು ಧ್ವನಿಸಲು ಸಾಧ್ಯವೇ? ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?

ನೊಂದ ಹೆಣ್ಣುಮಕ್ಕಳ ಹೆಸರು, ಫೋಟೋ ಪ್ರಕಟಿಸುವುದು ಸರಿಯೇ?
ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಹಿಂಸೆಯನ್ನು ಅನುಭವಿಸಿದ ಹೆಣ್ಣುಮಕ್ಕಳ ಹೆಸರನ್ನು ಬರೆಯಬಾರದು ಎಂಬುದು ಪತ್ರಕರ್ತರು ಪಾಲಿಸಿಕೊಂಡು ಬಂದ ನೈತಿಕ ನಡಾವಳಿ. ಪ್ರೆಸ್‌ಕೌನ್ಸಿಲ್‌ನಂಥ ಸಂಸ್ಥೆಗಳು ಸಹ ಈ ವಿಷಯದಲ್ಲಿ ಹಲವು ಬಾರಿ ಮಾರ್ಗದರ್ಶನ ಮಾಡಿವೆ. ಆದರೆ ಇತ್ತೀಚಿಗೆ ಈ ಪರಿಪಾಠವನ್ನು ಗಾಳಿಗೆ ತೂರಲಾಗಿದೆ. ಟಿವಿ ಮಾಧ್ಯಮಗಳಂತೂ ನೊಂದ ಮಹಿಳೆಯ ಮುಖವನ್ನು ಮಾಸ್ಕ್ ಕೂಡ ಮಾಡದೆ ಆಕೆಯ ಭವಿಷ್ಯವನ್ನು ಹಾಳುಗೆಡವುತ್ತಿವೆ. ಇದು ಸರಿಯೇ?

ಕೋಮುವಾದದ ವಿಷಪ್ರಾಶನ ಬೇಕೆ?
ಕೆಲವು ಪತ್ರಿಕೆಗಳು ಇತ್ತೀಚಿನ ದಿನಗಳಲ್ಲಿ ಕೋಮುವಿಷವನ್ನು ಉಣಬಡಿಸುವ ಲೇಖನ, ಅಂಕಣಗಳನ್ನು ಮೇಲಿಂದ ಮೇಲೆ ಪ್ರಕಟಿಸಿ, ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವುತ್ತಿವೆ. ಇದು ಅವುಗಳಿಗೆ ಅಗ್ಗದ ಜನಪ್ರಿಯತೆಯನ್ನೂ ತಂದುಕೊಡುತ್ತಿದೆ. ಕೆಲವು ಪತ್ರಿಕೆಗಳಂತೂ ಬುದ್ಧಿಜೀವಿ, ಸಾಹಿತಿ, ಜಾತ್ಯತೀತ ಮತ್ತಿತರ ಶಬ್ದಗಳಿಗೆ ಕಳಂಕ ಹಚ್ಚುವ ಯತ್ನ ನಡೆಸುತ್ತಿವೆ. ಕನ್ನಡದ ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ಲೇಖನವೊಂದರಿಂದಾಗಿ ಕೋಮು ದಳ್ಳುರಿ ಹತ್ತುರಿದು, ಇಬ್ಬರ ಸಾವಿಗೂ ಕಾರಣವಾಗಿತ್ತು. ಪತ್ರಕರ್ತರಿಗೆ ಒಂದು ನೀತಿಸಂಹಿತೆ ಬೇಡವೇ?

ಪ್ರಶಸ್ತಿ, ಕೆಟಗರಿ ಸೈಟಿನ ಹುಚ್ಚು ಬಿಡಿಸಬೇಡವೇ?
ಪತ್ರಕರ್ತರನ್ನು ತಮ್ಮ ಕೈವಶ ಮಾಡಿಕೊಳ್ಳಲೆಂದೇ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಜಿ ಕೆಟಗರಿ ಬಿಡಿಎ ಸೈಟು ಇತ್ಯಾದಿಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕೆಲವು ಪತ್ರಕರ್ತರಿಗಂತೂ ಬಿಡಿಎ ಸೈಟು ಗಳಿಸುವುದೇ ಜೀವಮಾನದ ದೊಡ್ಡ ಗುರಿಯೆನ್ನಿಸಿದೆ. ಕೆಲವರು ಜಾಣತನದಿಂದ ತಂದೆ, ತಾಯಿ, ಪತ್ನಿ, ಸಹೋದರ ಹೀಗೆ ಬೇರೆಯವರ ಹೆಸರಲ್ಲಿ ಸೈಟು ಗಿಟ್ಟಿಸುತ್ತಿದ್ದಾರೆ. ಸಾಕಷ್ಟು ಮಂದಿ ಸುಳ್ಳು ಅಫಿಡೆವಿಟ್ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಈ ಅನೈತಿಕ ದಂಧೆಯನ್ನು ತಡೆಗಟ್ಟುವುದು ಹೇಗೆ?

ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?
ಮಾಧ್ಯಮರಂಗದಲ್ಲಿ ಭ್ರಷ್ಟಾಚಾರವಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿರುವ ವಿಷಯ. ಪತ್ರಕರ್ತರ ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೆ ದೂರು ಹೋಗುವಷ್ಟು ಇದು ಬೆಳೆದು ನಿಂತಿದೆ. ನೈತಿಕ ಪೊಲೀಸುಗಿರಿ ಮಾಡುವ ಪತ್ರಕರ್ತರು ಭ್ರಷ್ಟಾಚಾರದಿಂದ ಮುಕ್ತರಾಗಿರಬೇಕು ಎಂದು ಸಮಾಜ ಬಯಸುತ್ತದೆ. ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?

ಇವೆಲ್ಲವೂ ನಮಗೆ ಈ ಕ್ಷಣಕ್ಕೆ ತೋಚಿದ್ದು. ನಿಮಗನ್ನಿಸಿದ್ದನ್ನೂ ಹೇಳಿ. ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿ ಯಶಸ್ವಿಯಾಗಲಿ, ಅದು ಮಾಧ್ಯಮರಂಗಕ್ಕೆ ಒಂದು ಹೊಸದಿಕ್ಕನ್ನು ತೋರಿಸುವಂತಾಗಲಿ.

ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ...


ಇದು ಮೀಡಿಯಾ ಸಂಬಂಧಿ ಬ್ಲಾಗ್. ಹೀಗಾಗಿ ಇಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಮೀಡಿಯಾ ಸಂಬಂಧಿಯಾಗೇ ಇರಬೇಕು ಎಂಬುದು ನಮಗೆ ನಾವೇ ವಿಧಿಸಿಕೊಂಡ ಕಟ್ಟಳೆ. ಡಾ.ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತ ಆಕ್ಷೇಪಣೆಯೂ ಸಹ ಈ ಮೀಡಿಯಾ ಪರಿಧಿಯೊಳಗೇ ನಾವು ಬರೆದ ಪ್ರತಿಕ್ರಿಯೆಯಾಗಿತ್ತು. ಚಿದಾನಂದಮೂರ್ತಿಯಂಥವರು ಏನನ್ನು ಬರೆದರೂ ಅವರ ಘನತೆ, ಗೌರವದ  ಕಾರಣಕ್ಕಾಗಿ ಪತ್ರಿಕೆಗಳು ಪ್ರಕಟಿಸಿಬಿಡುವ ಸಾಧ್ಯತೆಗಳಿರುತ್ತದೆ. ಗೋರಿಪಾಳ್ಯದ ಕುರಿತ ವರ್ಣನೆ ಯಾವುದೇ ಪತ್ರಿಕೆಯಲ್ಲೂ ಪ್ರಕಟಣೆಗೆ ಯೋಗ್ಯವಾಗಿರಲಿಲ್ಲ ಎಂಬುದು ನಮ್ಮ ನಿಲುವು. ಆದರೆ ಚಿದಾನಂದಮೂರ್ತಿಯವರು ಪ್ರಸ್ತಾಪಿಸಿದ ಮತಾಂತರ ಮತ್ತು ಗೋಹತ್ಯಾನಿಷೇಧದ ಮೂಲ ವಿಷಯವನ್ನು ನೀವು ಚರ್ಚೆಗಿಡಬೇಕಿತ್ತು ಎಂಬುದು ಹಲವರ ಒತ್ತಾಯವಾಗಿತ್ತು. ಹೀಗಾಗಿ ಆ ಒತ್ತಾಯಗಳಿಗೆ ಉತ್ತರರೂಪವಾಗಿ ನೈಜ ಹಿಂದುತ್ವವಾದಿಗಳು, ಹುಸಿ ಹಿಂದುತ್ವವಾದಿಗಳು ಎಂಬ ಲೇಖನ ಪ್ರಕಟಿಸಿದ್ದೆವು.

ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಬ್ಲಾಗ್‌ನಲ್ಲೂ, ಫೇಸ್‌ಬುಕ್‌ನಲ್ಲೂ ಬಿಸಿಬಿಸಿಯಾದ ವಾಗ್ವಾದ ನಡೆದಿದೆ. ಕೆಲವರಿಗೆ ನಾವು ಬಳಸಿದ ನೈಜ, ಹುಸಿ ಹಿಂದುತ್ವವಾದ ಎಂಬ ಪ್ರಯೋಗವೇ ಅಚ್ಚರಿ ಹುಟ್ಟಿಸಿದೆ. ಕೆಲವರು ಅಕಾರಣವಾಗಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ನೀವು ಎಷ್ಟು ಧರ್ಮಗ್ರಂಥಗಳನ್ನು ಓದಿದ್ದೀರಿ ಎಂದು ಸವಾಲು ಒಡ್ಡುವ ಧಾಟಿಯಲ್ಲಿ ಮಾತನಾಡಿದ್ದಾರೆ. ವಿವೇಕಾನಂದರು ವಿಶ್ವವೇದಿಕೆಯಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮ ಯಾವುದು ಎನ್ನುವುದರ ಕುರಿತು ಕೆಲವರಿಗೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ.

ಚರ್ಚೆ ಹೀಗೆ ಅಪೂರ್ಣವಾಗುವುದು ಬೇಡ ಎಂಬುದು ನಮ್ಮ ನಿಲುವು. ಹಾಗಂತ ನಾವಾಗಲಿ ಇಲ್ಲಿ ಪ್ರತಿಕ್ರಿಯಿಸಿದವರಾಗಲಿ ನಮಗನ್ನಿಸಿದ್ದನ್ನು ಬರೆದು ಅಂತಿಮ ಜಡ್ಜ್‌ಮೆಂಟ್ ಕೊಡುವುದೂ ಸರಿಯಲ್ಲ. ಹೀಗಾಗಿ ಈ ಚರ್ಚೆಯನ್ನು ತಾರ್ಕಿಕವಾಗಿ ಕೊನೆಗೊಳಿಸಲು ನಾವು ಸ್ವಾಮಿ ವಿವೇಕಾನಂದರ ಮೊರೆ ಹೋಗುವುದೇ ವಾಸಿ ಎಂದುಕೊಂಡಿದ್ದೇವೆ.

ಸ್ವಾಮಿ ವಿವೇಕಾನಂದರು ವೇದಾಂತವನ್ನು ಒಪ್ಪಿ ಅನುಸರಿಸಿದವರು. ವೇದಾಂತಕ್ಕೆ ಮಾತ್ರ ವಿಶ್ವಧರ್ಮವಾಗುವ ಹಕ್ಕಿದೆ ಎಂದು ವಿವೇಕಾನಂದರು ಬಲವಾಗಿ ನಂಬಿದ್ದರು. ವೇದಾಂತ ವ್ಯಕ್ತಿಯನ್ನು ಬೋಧಿಸುವುದಿಲ್ಲ, ತತ್ವವನ್ನು ಬೋಧಿಸುತ್ತದೆ. ವ್ಯಕ್ತಿಯ ಮೇಲೆ ನಿಂತ ಧರ್ಮಕ್ಕೆ ತತ್ವದ ಮೇಲೆ ನಿಂತ ಧರ್ಮ ಸಾಟಿಯಾಗಲಾರದು ಎಂದು ಅವರು ಹೇಳುತ್ತಿದ್ದರು. ಆದರೆ ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ ಎಂದು ವಿವೇಕಾನಂದರು ಹೇಳಿದ್ದರು. ಹಾಗೇನಾದರೂ ಆದಲ್ಲಿ ಧರ್ಮ ಮತ್ತು ಅಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ, ಇದು ಪೂರ್ಣ ನಾಶವಾದರೆ ಸೃಷ್ಟಿಯೇ ನಾಶವಾಗುವುದು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ವಿವೇಕಾನಂದರು ವೇದಾಂತಕ್ಕೆ ವಿಶ್ವಧರ್ಮವಾಗುವ ಹಕ್ಕಿದೆ ಎಂದು ಹೇಳುತ್ತಲೇ, ಭಾರತದಲ್ಲಿ ಅನುಷ್ಠಾನದಲ್ಲಿದ್ದ ಹಿಂದೂ ಧರ್ಮದ ಹುಳುಕುಗಳ ಕುರಿತು ಚಿಂತಿತರಾಗಿದ್ದರು. ಆ ಹುಳುಕುಗಳು ಇಂದಿಗೂ ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆದುಕೊಂಡು ಬಂದಿದೆ ಎಂಬುದು ನೋವಿನ ಸಂಗತಿ. ದೀನದರಿದ್ರರ ಉದ್ಧಾರವಾಗಬೇಕು ಎಂಬುದು ವಿವೇಕಾನಂದರ ತೀವ್ರ ತುಡಿತವಾಗಿತ್ತು. ಈ ಉದ್ಧಾರವು ಗುಡಿ, ಚರ್ಚು, ಮಸೀದಿಗಳಿಂದ ಆಗದು ಎಂಬುದನ್ನು ಅವರು ಅಂದೇ ಸಾರಿದ್ದರು. ಪುರೋಹಿತರು, ಪಾದ್ರಿಗಳು, ಮುಲ್ಲಾಗಳಿಂದ ಎಲ್ಲ ಧರ್ಮಗಳು ಬಿಡುಗಡೆಯಾಗಬೇಕು ಎಂದು ಅವರು ಬಯಸಿದ್ದರು. ಇದನ್ನೇ ಜಡಗೊಂಡ ಧರ್ಮಗಳು ಎಂದು ನಾವು ಹೇಳಿದ್ದು. ಈ ಕಾರಣಕ್ಕಾಗಿಯೇ ಧರ್ಮಗಳು ಪರಿಷ್ಕಾರಗೊಳ್ಳಬೇಕು ಎಂದು ನಾವು ಬರೆದಿದ್ದೆವು.

ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂಬ ಕ್ಲೀಶೆಯ ವಾಕ್ಯವೊಂದನ್ನು ನಾವು ಆಗಾಗ ಹೇಳುತ್ತಿರುತ್ತೇವೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಧರ್ಮಗಳು ಬೆಳೆಯುವಾಗ ಅನುಸರಿಸಿದ ಮಾರ್ಗಗಳನ್ನು ಗಮನಿಸಿದರೆ ಇವು ಧರ್ಮಗಳೋ ಅಧರ್ಮಗಳೋ ಎನಿಸುತ್ತದೆ. ವಿವೇಕಾನಂದರು ಈ ಕುರಿತು ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳು ಹೇಗೆ ಬೆಳೆದವು ಎಂಬುದರ ಕುರಿತು ಅವರು ಸ್ಪಷ್ಟವಾಗಿ, ಕಟುವಾಗಿ ಹೇಳಿದ್ದಾರೆ. ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ. ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು. ಈ ಕಾರಣದಿಂದಲೇ ಚಿಕಾಗೋದಲ್ಲಿ ಅವರು ‘ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದ ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲ ಹಿಂಸೆಯಿಂದ ತುಂಬಿಸಿರುವುವು. ಹಲವು ವೇಳೆ ನರರಕ್ತವನ್ನು ತೋಯಿಸಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಇಂಥ ಉಗ್ರ ಧಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು. ಎಂದು ಹೇಳಿದ್ದರು.

ಎಲ್ಲ ಧರ್ಮಗಳ ಕುರಿತೂ ವಿವೇಕಾನಂದರು ಮಾತನಾಡಿದ್ದಾರೆ. ಮತಾಂತರ, ಆಹಾರ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆ, ಭಾಷೆ-ಕಲೆ, ದುರ್ಬಲರ ಅಭಿವೃದ್ಧಿ, ಮೀಸಲಾತಿ ಇತ್ಯಾದಿ ಎಲ್ಲ ವಿಷಯಗಳ ಕುರಿತೂ ತಮ್ಮ ಸ್ಪಷ್ಟ ನಿಲುವುಗಳನ್ನು ಮಂಡಿಸಿದ್ದಾರೆ. ವಿವೇಕಾನಂದರ ಈ ಎಲ್ಲ ವಿಚಾರಗಳನ್ನು ಇನ್ನು ಐದಾರು ಪೋಸ್ಟ್‌ಗಳಲ್ಲಿ ಮಂಡಿಸುತ್ತ ಹೋಗುತ್ತೇವೆ. ಅವು ಎಲ್ಲರಿಗೂ, ಎಲ್ಲ ವಿವಾದಗಳಿಗೂ ಉತ್ತರವಾಗಬಹುದು ಎಂಬುದು ನಮ್ಮ ನಂಬಿಕೆ.

ದಯಮಾಡಿ ಕೆಲವರಲ್ಲಿ ಒಂದು ಮನವಿ. ವಿವೇಕಾನಂದರನ್ನೂ ನಿಂದಿಸುವ ಕೆಲಸವನ್ನು ಯಾರೂ ಮಾಡಬೇಡಿ. ಈಗಾಗಲೇ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅಂಥವರನ್ನು ನಿಂದಿಸಿಯಾಗಿದೆ. ವಿವೇಕಾನಂದರ ಕುರಿತೂ ಇಂಥ ಮಾತುಗಳು ಬೇಡ. ನಿಜ, ವಿವೇಕಾನಂದರ ನುಡಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ಅದು ಅನಿವಾರ್ಯ. ಮಹಾತ್ಮರ ನುಡಿಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಲ್ಲೂ ಬರಲಿ.

ಅಂದಹಾಗೆ ಮುಂದೆ ಪ್ರಕಟವಾಗಲಿರುವ ವಿವೇಕಾನಂದರ ಎಲ್ಲ ಮಾತುಗಳನ್ನು ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಪ್ರಕಟಿಸಿರುವ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯಿಂದ ಆಯ್ದುಕೊಳ್ಳಲಿದ್ದೇವೆ. ಒಟ್ಟು ಹತ್ತು ಸಂಪುಟಗಳ ಕೃತಿಶ್ರೇಣಿಯಿದು. ಇಲ್ಲಿ ಉಲ್ಲೇಖಿಸಿದ ಸಾಲುಗಳು ಯಾವ ಸಂಪುಟದ ಯಾವ ಪುಟದಿಂದ ಆಯ್ದುಕೊಂಡಿದ್ದೇವೆ ಎಂಬುದನ್ನು ದಾಖಲಿಸುತ್ತೇವೆ. ಕುತೂಹಲವಿದ್ದವರು ಪರಿಶೀಲಿಸಬಹುದು.

ವಿವೇಕಾನಂದರನ್ನು ಓದುವ ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ.

Tuesday, March 8, 2011

ಮೀಡಿಯಾಗಳಲ್ಲಿ ಮಹಿಳೆಯರ ಯುಗ ಆರಂಭವಾಗಿದೆ...


ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮೀಡಿಯಾಗಳ ವಿಷಯಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಹೆಣ್ಣುಮಕ್ಕಳು ಸಂತೋಷಪಡುವುದಕ್ಕೆ ಕಾರಣಗಳಿವೆ. ಇವತ್ತು ಕರ್ನಾಟಕದ ಮೀಡಿಯಾಗಳಲ್ಲಿ ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವುದು ಬರಿಯ ಕಣ್ಣಿಗೆ ಕಾಣುತ್ತಿದೆ. ನಿಜ, ಪತ್ರಿಕೆಗಳ ಮಟ್ಟಿಗೆ ಹೇಳುವುದಾದರೆ, ಮಹಿಳೆಯರ ಪಾಲ್ಗೊಳ್ಳುವಿಕೆ ಇವತ್ತಿಗೂ ಹೇಳಿಕೊಳ್ಳುವಂತೇನಿಲ್ಲ. ಆದರೆ, ಟೀವಿಗಳಲ್ಲಿ ಹೆಣ್ಣುಮಕ್ಕಳು ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು.

ಇವತ್ತು ನ್ಯೂಸ್ ಚಾನಲ್‌ಗಳಲ್ಲಿ ನಿರೂಪಕಿಯರು ಮಾತ್ರವಲ್ಲ, ವರದಿಗಾರರು ಹಾಗು ಇತರ ತಾಂತ್ರಿಕ ಆಯ್ಕೆಗಳಲ್ಲೂ ಮಹಿಳೆಯರು ಮುಂದಿದ್ದಾರೆ. ಈ ಟ್ರೆಂಡ್ ಹೀಗೆ ಮುಂದುವರೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಅದು ಹಾಗೇ ಮುಂದುವರೆಯಲಿ ಎಂದು ಹಾರೈಸೋಣ.

ಹಾಗೆ ಸುಮ್ಮನೆ ಟಿವಿ ನಿರೂಪಕಿಯರ ಕುರಿತು ಒಂದು ಟಿಪ್ಪಣಿ ಇಲ್ಲಿ ಒದಗಿಸಿದ್ದೇವೆ. ಇವರ ಪೈಕಿ ಯಾರು ಹೆಚ್ಚು ಇಷ್ಟವಾಗುತ್ತಾರೆ, ದಯವಿಟ್ಟು ಹೇಳಿ. ನೀವು ಇಷ್ಟಪಡುವ ನಿರೂಪಕಿ ಈ ಪಟ್ಟಿಯಲ್ಲಿಲ್ಲದಿದ್ದರೂ ಪರವಾಗಿಲ್ಲ ಅವರ ವಿಶೇಷತೆ ಕುರಿತು ಬರೆದು ಹೇಳಿ.

ಟಿವಿ ೯
ಉಷಾ: ಸ್ಪಷ್ಟ ಭಾಷೆ, ಗಂಭೀರ ಮುಖಭಾವ, ಹೇಳುವುದನ್ನು ಅತ್ಯಂತ ನಿಚ್ಚಳವಾಗಿ ತಿಳಿಸುತ್ತಾರೆ. ತೊದಲುವ ಮಾತೇ ಇಲ್ಲ. ಅಗತ್ಯ ಇರುವ ಕಡೆ ನಗುವನ್ನು ಚೆಲ್ಲುತ್ತಾರೆ.
ಶೀತಲ್: ತುಂಟತನದ ಛಾಯೆ. ಖುಷಿ ಕೊಡುವ ಆತ್ಮವಿಶ್ವಾಸ. ಅಕಸ್ಮಾತ್ ತಪ್ಪು ಆದರೂ ತಿದ್ದಿಕೊಳ್ಳುವ ಸಮಯಸ್ಪೂರ್ತಿ. ಕಣ್ಣು ಮಿಟುಕಿಸಿ ಮಾತಾಡುವುದು ವಿಶೇಷತೆ.
ಸಮೀನ: ಶುದ್ಧ ಕನ್ನಡ, ಸ್ಪಷ್ಟ ಉಚ್ಛಾರ. ಯಾವ ಕಾರ್ಯಕ್ರಮ ಕೊಟ್ಟರೂ ನಿರರ್ಗಳವಾಗಿ ಮಾತಾಡುವ ಸ್ಥೈರ್ಯ.
ರಾಧಿಕ: ಗಂಭೀರತೆಯೇ ಪ್ಲಸ್ ಪಾಯಿಂಟ್. ಸುಂದರವಾಗಿ ನಕ್ಕು ಇಡೀ ಪರಿಸರವನ್ನು ಆಹ್ಲಾದಕರಗೊಳಿಸುವ ಕಲೆಗಾರಿಕೆ ಇದೆ. ಮಾತಿನ ಶೈಲಿ ಚಂದ. ವಿಷಯ ಮಂಡನೆಯು ಸಹ ಜನರನ್ನು-ಅತಿಥಿಗಳನ್ನು ಆಕರ್ಷಿಸುತ್ತದೆ.

ಸುವರ್ಣ ನ್ಯೂಸ್
ಸುಕನ್ಯ: ಮೃದುವಾದ ಭಾಷೆ, ಆಪ್ತವೆನ್ನಿಸುವ ಶೈಲಿ. ತಪ್ಪು ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಲ್ಲ. ಎಲ್ಲಾ ವಿಷಯಗಳಿಗೂ ಫಿಟ್ ಅಂಡ್ ಪರ್ಫೆಕ್ಟ್
ಭಾವನ: ಮಾತು ಪರವಾಗಿಲ್ಲ. ಧ್ವನಿ  ಕೇಳಲು ಆರಾಮ. ಕೊಟ್ಟ ಕೆಲಸ ನೀಟಾಗಿ ಮಾಡುವ ಉತ್ಸಾಹ ಇದೆ. ಅತಿ ಅನ್ನಿಸದ ವರ್ತನೆ
ರಾಧ ಹಿರೇಗೌಡರ್: ಕ್ರೈಂ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಶೈಲಿ . ಅದಕ್ಕೆ ಬೇಕಾದ ಖಡಕ್ ಶೈಲಿ ಆಕೆಯಲ್ಲಿದೆ. ಇದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತದೆ. ಇತ್ತೀಚಿಗೆ ಕ್ರಿಕೆಟ್‌ಗೂ ಸೈ ಎನಿಸಿಕೊಂಡಿದ್ದಾರೆ.
ಶ್ವೇತ: ಚಂದದ ಭಾಷೆ. ಸ್ವಲ್ಪ ಮೂಗಿನಲ್ಲಿ ಮಾಡ್ತಾರೆ ಎಂದು ಅನ್ನಿಸಿದ್ರೂ ಭಾಷೆಯನ್ನೂ ಆರಾಮವಾಗಿ ಬಳಸಿಕೊಳ್ತಾರೆ. ಜನರನ್ನು ಆಕರ್ಷಿಸಲು ಅಗತ್ಯವಾದ ಆಂಗಿಕ ಶೈಲಿ ಇದೆ.

ಉದಯ
ಅನುಪಮ: ಮುದ್ದು ಮುದ್ದಾಗಿ ನಗ್ತಾ ಮಾತಾಡ್ತಾರೆ. ಆ ನಗು ಆಕೆಯ ಮೊದಲ ಪ್ಲಸ್ ಪಾಯಿಂಟ್. ಭಾಷೆಯ ಬಳಕೆಯಲ್ಲೂ ಪಳಗಿದ್ದಾರೆ. ಎಲ್ಲಿ  ಪಾಸ್ ಕೊಡಬೇಕು, ಕೊಡಬಾರದು ಎನ್ನುವ ಸಾಮಾನ್ಯ ಜ್ಞಾನ ಆಕೆಗಿದೆ. ಸಂದರ್ಶನದಲ್ಲಿ ಯಾವ ರೀತಿ ಅತಿಥಿಗಳ ಜೊತೆ ಹರಟಬೇಕು ಎಂದು ತಿಳಿದಿದೆ.
ಹೇಮಲತಾ: ಕೊಟ್ಟ  ಕಾರ್ಯಕ್ರಮ ಯಾವುದೇ ಆಗಿದ್ದರೂ ನಿಭಾಯಿಸುವ ಚಾಕಚಕ್ಯತೆ ಈಕೆಗಿದೆ. ಜನರನ್ನು ಯಾವ  ರೀತಿ ಆಕರ್ಷಿಸಬೇಕು ಎನ್ನುವ ಬಗ್ಗೆ ಚೆನ್ನಾಗಿ ತಿಳಿದಿದೆ. ಮಾತು ಬೋರ್ ಹೊಡಿಸಲ್ಲ. ಎಳೆಯುವ ಸ್ವಭಾವ ಇಲ್ಲ.

ಕಸ್ತೂರಿ
ಲಕ್ಷ್ಮಿ ಮನಮೋಹನ್:  ಒಬ್ಬ ನಿರೂಪಕಿಗೆ ಇರಬೇಕಾದ ಎಲ್ಲಾ ಪ್ಲಸ್ ಪಾಯಿಂಟ್‌ಗಳು ಈಕೆಗಿದೆ . ಭಾಷೆ, ಭಾವ, ನಗು, ಡ್ರಸ್ ಸೆನ್ಸ್, ಸಭ್ಯತೆ , ವೀಕ್ಷಕರನ್ನು ಆಕರ್ಷಿಸುವ  ರೀತಿ...

ಸಮಯ 
ಮಂಜುಳ: ಮಾತಿನ ಶೈಲಿ ಇಷ್ಟವಾಗುತ್ತದೆ. ಆಂಗಿಕ ವರ್ತನೆ ಬೋರ್ ಹೊಡಿಸಲ್ಲ. ನಸುನಗುತ್ತಾ  ಮಾತನಾಡುವ ರೀತಿ ಸಹ ಇಷ್ಟ  ಆಗುತ್ತೆ.

ಈಟೀವಿ  ಕನ್ನಡ 
ಅನು ಪ್ರಭಾಕರ್: ಅತಿಥಿಗಳು ಹೇಳುವುದನ್ನು ಕೇಳುವ ಸಹನೆ ಇದೆ. ಹೆಚ್ಚು ಸ್ಟೈಲಿಶ್. ಮಾತು ಹಾಗೂ ಉಡುಪು ಸಹ ಆಕರ್ಷಕ. ತನ್ನ ಮುಕ್ತ ನಗುವಿನಿಂದ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವ ಕಲೆ ಗೊತ್ತಿದೆ.

ಜೀ ಕನ್ನಡ 
ಮಾಳವಿಕ ಅವಿನಾಶ್: ಮಾತು ಸ್ಪಷ್ಟ. ಹೇಳುವುದನ್ನು ಅಚ್ಚುಕಟ್ಟಾಗಿ ತಿಳಿಸಿ ಬಿಡುವ ರೀತಿ. ಮಾತಿನ ಶೈಲಿ ಚಂದ

ಜನಶ್ರೀ 
ಸಾಹಿತ್ಯ: ಸುಂದರ ಮೋಹಕ ನಗೆ. ಮಾತು ಚಂದ. ವೀಕ್ಷಕರು ಆಕರ್ಷಿತರಾಗುವುದಕ್ಕೆ  ಅಗತ್ಯ ಇರುವ ಗಂಭೀರವಾದ ಮಾತಿನ ಶೈಲಿ ಗಮನ ಸೆಳೆಯುತ್ತದೆ. ಪ್ರತಿಭಾವಂತೆ.
ಸುಗುಣ: ವೀಕ್ಷಕರನ್ನು ಹಿಡಿಟ್ಟುಕೊಳ್ಳುವ  ಧ್ವನಿ. ವಾಯ್ಸ್ ಮಾಡ್ಯುಲೇಶನ್ ತುಂಬಾ ಚೆನ್ನಾಗಿ ಗೊತ್ತಿದೆ. ಮಾತು ಸ್ಪಷ್ಟ ಸುಂದರ. ಪರದೆಯ ಹಿಂದೆಯೂ ಮಾತಾಡುತ್ತಾರೆ, ಹಿಂದೆಯೂ ಮಾತಾಡುತ್ತಾರೆ. ಎರಡಕ್ಕೂ ಸೈ.

ಇವರುಗಳು ಹೆಚ್ಚು ಜನರ ಗಮನ ಸೆಳೆದವರು. ನೀವೇನಂತೀರಿ? ಈ ಬಾರಿ ಪೋಲ್ ಮಾಡುತ್ತಿಲ್ಲ. ಹಾಗೇ ಕಮೆಂಟ್ ಹಾಕಿ. ನಾವು ಉಲ್ಲೇಖಿಸದವರ ಕುರಿತೂ ದಯಮಾಡಿ ಗಮನಕ್ಕೆ ತನ್ನಿ.

Monday, March 7, 2011

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆಯುವುದು ನೈತಿಕವೇ?


ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮುನ್ನಾದಿನವಾದ ಇಂದು ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯೊಂದನ್ನು ಗಮನಿಸಿ.

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕನೋರ್ವ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳಿಗೆ ನೀಡಿದ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಆಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುರಿತು ವರದಿಯೊಂದು ಪ್ರಕಟವಾಗಿದೆ.

ಇದೇ ಪ್ರಕರಣ ಸಂಬಂಧಿಸಿದಂತೆ ನಿನ್ನೆಯ ದಿ ಹಿಂದೂ ಹಾಗು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲೂ ಪ್ರತ್ಯೇಕ ವರದಿಗಳು ಪ್ರಕಟಗೊಂಡಿದ್ದವು. ಆ ವರದಿಗಳನ್ನೂ ಒಮ್ಮೆ ಗಮನಿಸಿ.

ಒಂದು ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ. ಲೈಂಗಿಕ ಕಿರುಕುಳ ಅನುಭವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯ ಹೆಸರನ್ನು ಪ್ರಜಾವಾಣಿ ಸ್ಪಷ್ಟವಾಗಿ ಬರೆದಿದೆ. ಇದು ಅನೈತಿಕ ಹಾಗು ಬೇಜವಾಬ್ದಾರಿಯ ಪತ್ರಿಕಾ ನೀತಿ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಹೆಸರನ್ನು ಬರೆಯಬಾರದು ಎಂಬ ಕಾನೂನು ಎಲ್ಲೂ ಇಲ್ಲ ಎಂಬುದೇನೋ ನಿಜ. ಆದರೆ ಪತ್ರಕರ್ತರು ಮೊದಲಿನಿಂದಲೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವ ಪರಿಪಾಠ ಇಟ್ಟುಕೊಂಡಿಲ್ಲ. ಅದಕ್ಕೆ ಕಾರಣಗಳನ್ನು ಹೊಸದಾಗಿ ಹೇಳಬೇಕಾಗೂ ಇಲ್ಲ. ಹೀಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ನಂತರವೂ ಇದೇ ಸಮಾಜದ ನಡುವೆ ಬದುಕಬೇಕು. ಎಲ್ಲರ ಇರಿಯುವ ಕಣ್ಣುಗಳನ್ನು ಎದುರಿಸಬೇಕು. ಮಡಿವಂತ ಸಮಾಜದ ಕುಹಕ, ನಿಂದನೆಗಳನ್ನು ಎದುರಿಸಬೇಕು. ಅವರು ಬದುಕಬೇಕೆಂದರೆ, ಇಂಥ ಎಲ್ಲ ವ್ಯವಸ್ಥೆಯ ನಡುವೆಯೇ ಬದುಕಬೇಕು, ಅದು ಸಾಧ್ಯವಾಗದಿದ್ದರೆ ಅವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.

ಈ ಮಹಿಳೆಯರ ಪ್ರಾಣ ಮತ್ತು ಮಾನ ಎರಡೂ ಮುಖ್ಯವಾದ್ದರಿಂದ ಪತ್ರಿಕೆಗಳು ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವುದಿಲ್ಲ. ಬರೆದರೂ ಬೇರೆ ಹೆಸರನ್ನು ಬರೆದು ಹೆಸರು ಬದಲಾಯಿಸಲಾಗಿದೆ ಎಂದು ಬ್ರಾಕೆಟ್‌ನಲ್ಲಿ ಬರೆಯುವ ಪರಿಪಾಠವನ್ನು ಪಾಲಿಸಿಕೊಂಡುಬರಲಾಗುತ್ತಿದೆ. ಇದಕ್ಕೆ ಪ್ರಜಾವಾಣಿಯೂ ಹೊರತೇನಲ್ಲ. ಇಂಥ ಪ್ರಕರಣಗಳ ಕುರಿತು ವರದಿ ಮಾಡುವಾಗ ಪ್ರಜಾವಾಣಿ ಕೂಡ  ಇಂಥ ನೈತಿಕ ಸಂಹಿತೆಯನ್ನು ಇಟ್ಟುಕೊಂಡೇ ವರದಿ ಮಾಡುತ್ತಿತ್ತು.

ಆದರೆ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿನಿಯ ವಿಷಯದಲ್ಲಿ ಹಾಗೆ ಆಗಿಲ್ಲ. ಆಕೆಯ ಹೆಸರನ್ನು ನಿಚ್ಚಳವಾಗಿ ಬರೆಯಲಾಗಿದೆ. ಮಾತ್ರವಲ್ಲ, ಆಕೆಯ ಪೂರ್ಣ ವಿಳಾಸವನ್ನೂ, ಆಕೆಯ ಪತಿಯ ಹೆಸರು ಮತ್ತು ಆತ ಎಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ.

ನಿನ್ನೆ ದಿ ಹಿಂದೂ ಪತ್ರಿಕೆ ಹಾಗು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟಗೊಂಡಿರುವ ವರದಿಗಳಲ್ಲಿ ಎಲ್ಲೂ ಸಹ ನೊಂದ ಮಹಿಳೆಯ ಹೆಸರನ್ನಾಗಲಿ, ವಿಳಾಸವನ್ನಾಗಿ ದಾಖಲಿಸಿಲ್ಲ. ಹಾಗಿರುವಾಗ ಪ್ರಜಾವಾಣಿ ಯಾಕೆ ದಿಕ್ಕು ತಪ್ಪಿದೆ?

ಪ್ರಜಾವಾಣಿಯಂಥ ಸೆನ್ಸಿಬಲ್ ಪತ್ರಿಕೆ ಹೀಗೆ ಮಾಡೋದು ಎಷ್ಟು ಸರಿ? ಇದು ನಮ್ಮ ಪ್ರಶ್ನೆ.


ನಂತರ ಸೇರಿಸಿದ್ದು:
ಈ ಪೋಸ್ಟ್ ಪ್ರಕಟಗೊಂಡ ಕೆಲಕ್ಷಣಗಳಲ್ಲೇ ಫೇಸ್‌ಬುಕ್‌ನಲ್ಲಿ ಹರ್ಷವರ್ಧನ ಶೀಲವಂತ್,  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲೂ ಇದೇ ರೀತಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆದಿರುವುದನ್ನು ಗಮನಕ್ಕೆ ತಂದಿದ್ದಾರೆ. ಕೆಲವು ಆವೃತ್ತಿಗಳಲ್ಲಿ ಆಕೆಯ ಭಾವಚಿತ್ರ ಕೂಡ ಪ್ರಕಟವಾಗಿದೆ. ಬೆಂಗಳೂರು ಆವೃತ್ತಿಯಲ್ಲಿ ಫೋಟೋ ಪ್ರಕಟವಾಗಿಲ್ಲ, ಆದರೆ ಮಹಿಳೆಯ ಹೆಸರು ಸಮೇತ ಬರೆಯಲಾಗಿದೆ. ಇದೇ ಟಿಓಐ ತನ್ನ ಒಳಪುಟಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಾನಾ ಲೇಖನಗಳನ್ನು ಪ್ರಕಟಿಸಿದೆ. ಕನ್ನಡಪ್ರಭದಲ್ಲೂ ಈ ಕುರಿತು ಪ್ರಕಟವಾಗಿರುವ ಸುದ್ದಿಯಲ್ಲೂ ಮಹಿಳೆಯ ಹೆಸರನ್ನು ಪ್ರಕಟಿಸಲಾಗಿದೆ. ಇನ್ನೂ ಹಲವು ಪತ್ರಿಕೆಗಳಲ್ಲಿ ಇದೇ ರೀತಿ ಪ್ರಕಟವಾಗಿರಬಹುದು. ಆದರೆ ಪತ್ರಿಕೆಗಳಿಗೆ ಮಹಿಳೆ ಕೂಡ ಮಾರಾಟದ ಸರಕಾಗಿ ಹೋದರೆ ಹೇಗೆ ಎಂಬ ಪ್ರಶ್ನೆಗೆ ಮೀಡಿಯಾ ಮಂದಿ ತುರ್ತಾಗಿ ಗಮನಹರಿಸಬೇಕಾಗಿದೆ.