Saturday, March 12, 2011

ವಿವೇಕಾನಂದರು ಕಂಡ ಧರ್ಮಗಳು ಮತ್ತು ಧರ್ಮಗ್ರಂಥಗಳು...


ಧರ್ಮ ನಮಗೆ ಕೇವಲ ಯುಕ್ತಿಯ ಒಪ್ಪಿಗೆಮಾತು. ಮತ್ತೇನೂ ಅಲ್ಲ. ಯಾರು ಚೆನ್ನಾಗಿ ಮಾತನಾಡಬಲ್ಲರೋ ಅವರನ್ನು ಧಾರ್ಮಿಕರೆಂದು ಅನೇಕವೇಳೆ ಭಾವಿಸುವೆವು. ಆದರೆ ಧರ್ಮ ಅದಲ್ಲ. ಧರ್ಮವೆಂದರೆ ಕೇವಲ ಸುಂದರ ಪದಸಂಯೋಜನೆಯ ಮತ ಸಿದ್ಧಾಂತ ಎಂದು ತಿಳಿದಿರುವ ಮಾತಿನಮಲ್ಲರಿಂದ ಬಹುದೂರ ಹೋಗಬೇಕು.

ಯಾರಿಗೆ ಧರ್ಮವೆಂದರೆ ಯುಕ್ತಿಯ ಆಧಾರದಮೇಲೆ ಒಂದು ಒಪ್ಪಿಗೆ ಅಥವಾ ವಿರೋಧವನ್ನು ಸೂಚಿಸುವುದಾಗಿದೆಯೋ, ಯಾರಿಗೆ ತಮ್ಮ ಪುರೋಹಿತರು ಹೇಳುವ ಕೆಲವು ವಿಷಯಗಳನ್ನು ನಂಬುವುದಾಗಿದೆಯೋ, ಯಾರಿಗೆ ಧರ್ಮವೆಂದರೆ ತಮ್ಮ ಜನಾಂಗವೇ ನಂಬಿಕೊಂಡಿರುವ ಕೆಲವು ಭಾವನೆ ಮತ್ತು ಮೂಢನಂಬಿಕೆಗೆ ಸಂಪೂರ್ಣ ಒಪ್ಪಿಗೆಯನ್ನು ಕೊಡುವುದಾಗಿದೆಯೋ ಅವರು ಅಂತಹ ಭಾವನೆಗಳಿಂದ ಪಾರಾಗಬೇಕು. ಅವುಗಳನ್ನೆಲ್ಲ ಮೀರಿ ಹೋಗಬೇಕು. ಮಾನವ ಕೋಟಿಯನ್ನು ಬೆಳಕಿನೆಡೆಗೆ ಮುಂದುವರೆಯುತ್ತಿರುವ ಒಂದು ಬೃಹತ್ ಜೀವಿಗಳ ವ್ಯೂಹ ಎಂದು ಭಾವಿಸಬೇಕು.

ಧರ್ಮ ಬಾಯಿ ಮಾತಲ್ಲ; ನಂಬಿಕೆಯಲ್ಲ, ಸಿದ್ಧಾಂತವಲ್ಲ ಅಥವಾ ಅದೊಂದು ಕೋಮುವಾರು ಭಾವನೆಯೂ ಅಲ್ಲ. ಧರ್ಮ ಕೋಮುಗಳಲ್ಲೂ ಸಂಘಗಳಲ್ಲೂ ಜೀವಿಸಲಾರದು. ಆತ್ಮನಿಗೂ ದೇವರಿಗೂ ಇರುವ ಸಂಬಂಧ ಇದು. ಇದನ್ನು ಒಂದು ಸಂಘವಾಗಿ ಹೇಗೆ ಮಾಡಬಹುದು? ಆನಂತರ ಇದೊಂದು ವ್ಯಾಪಾರವಾಗುವುದು. ಎಲ್ಲಿ ವ್ಯಾಪಾರ ದೃಷ್ಟಿ ಇದೆಯೋ, ಧರ್ಮದಲ್ಲಿ ವ್ಯಾಪಾರ ನಿಯಮಗಳಿವೆಯೋ ಅಲ್ಲಿ ಅಧ್ಯಾತ್ಮಿಕತೆ ಕೊನೆಗಾಣುವುದು. ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ. ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ; ಅದು ಗ್ರಂಥದಲ್ಲಿಲ್ಲ. ಮಾತಿನಲ್ಲಿಯೂ ಇಲ್ಲ. ಉಪವಾಸದಲ್ಲಿಯೂ ಇಲ್ಲ ಅಥವಾ ಸಂಸ್ಥೆಯಲ್ಲಿಯೂ ಇಲ್ಲ.

ಪ್ರತಿಯೊಂದು ಧರ್ಮವೂ ತಮ್ಮ ಸಿದ್ಧಾಂತವೇ ಸತ್ಯ ಎಂದು ಸಾಧಿಸುವುದು. ಇದು ಮಾತ್ರವಲ್ಲ, ಯಾರು ಇದನ್ನು ನಂಬುವುದಿಲ್ಲವೋ ಅವರು ಘೋರ ನರಕಕ್ಕೆ ಹೋಗಬೇಕು ಎನ್ನುವುದು. ತಮ್ಮಂತೆ ಇತರರೂ ನಂಬುವಂತೆ ಬಲಾತ್ಕಾರ ಮಾಡುವುದಕ್ಕೂ, ಬಲಪ್ರಯೋಗಕ್ಕೂ ಕೆಲವರು ಹಿಂಜರಿಯುವುದಿಲ್ಲ. ಇದು ದುಷ್ಟತನದಿಂದ ಅಲ್ಲ, ಮತಭ್ರಾಂತಿ ಎಂಬ ಮಾನವನ ಮಿದುಳಿನ ಒಂದು ಜಾಡ್ಯದ ಪರಿಣಾಮದಿಂದ. ಈ ಮತಭ್ರಾಂತರು ತುಂಬ ಪ್ರಾಮಾಣಿಕರು. ಮನುಷ್ಯರಲ್ಲೇ ನಿಷ್ಕಪಟಿಗಳು. ಆದರೆ ಅವರು ಹುಚ್ಚರಂತೆ ಜವಾಬ್ದಾರಿ ಇಲ್ಲದವರು. ಮತಭ್ರಾಂತಿ ಎಂಬುದೊಂದು ಬಹಳ ಅಪಾಯಕರವಾದ ರೋಗ. ಮಾನವನ ಹೀನಸ್ವಭಾವವೆಲ್ಲ ಇದರಿಂದ ಜಾಗೃತವಾಗುವುದು. ಕೋಷಿಷ್ಠರು, ಉದ್ವೇಗಪರವಶರಾಗಿ ವ್ಯಾಘ್ರಗಳಂತೆ ಆಗುವರು.

ಧರ್ಮದ ವಿಷಯದಲ್ಲಿ ಎರಡು ಅತಿರೇಕಗಳಿವೆ. ಒಬ್ಬನು ನಾಸ್ತಿಕ. ಮತ್ತೊಬ್ಬನು ಧರ್ಮಾಂಧ. ನಾಸ್ತಿಕನಲ್ಲಿ ಸ್ವಲ್ಪ ಒಳ್ಳೆಯದು ಇದೆ. ಆದರೆ ಧರ್ಮಾಂಧನಾದರೋ ಕೇವಲ ಸ್ವಾರ್ಥಿ.

ದೇವರ ಹೆಸರಿನಲ್ಲಿ ಏತಕ್ಕೆ ಇಷ್ಟೊಂದು ಅಶಾಂತಿ, ಕಲಹ? ದೇವರ ಹೆಸರಿನಲ್ಲಿ ಹರಿಸಿರುವಷ್ಟು ರಕ್ತವನ್ನು ಬೇರಾವ ಕಾರಣದಿಂದಲೂ ಹರಿಸಿಲ್ಲ. ಏಕೆಂದರೆ ಜನರು ಧರ್ಮದ ಮೂಲಕ್ಕೆ ಹೋಗಲಿಲ್ಲ. ಅವರ ಪೂರ್ವಿಕ ಆಚಾರ ವ್ಯವಹಾರಗಳಿಗೆ ಒಪ್ಪಿಗೆ ನೀಡುವುದರಲ್ಲಿಯೇ ತೃಪ್ತರಾಗಿದ್ದರು. ಉಳಿದವರು ಕೂಡ ಹಾಗೆಯೇ ಮಾಡಬೇಕೆಂದು ತಿಳಿದಿದ್ದರು. ಕಪಟಿಯಾಗುವುದಕ್ಕಿಂತ ಖಂಡಿತವಾಗಿಯೂ ನಾಸ್ತಿಕನಾಗಿರುವುದು ಮೇಲು.

ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟು ಮಾಡಿವೆ. ಹಲವು ದೋಷಯುಕ್ತ ಸಿದ್ಧಾಂತಗಳಿಗೆ ಅವೇ ಕಾರಣ. ಸಿದ್ಧಾಂತಗಳೆಲ್ಲ ಗ್ರಂಥದಿಂದ ಬರುವುವು. ಮತಾಂಧತೆ, ಅನ್ಯಧರ್ಮೀಯರನ್ನು ಹಿಂಸಿಸುವುದು, ಇವಕ್ಕೆಲ್ಲ ಗ್ರಂಥಗಳೇ ಕಾರಣ. ಇಂದಿನ ಕಾಲದಲ್ಲಿ ಗ್ರಂಥಗಳು ಎಲ್ಲ ಕಡೆಯಲ್ಲಿಯೂ ಕಪಟಿಗಳನ್ನು ಉಂಟುಮಾಡುತ್ತಿರುವುದು. ಹೊರದೇಶಗಳಲ್ಲಿಯೂ ಇರುವ ಕಪಟಿಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯವಾಗುತ್ತದೆ.

೧. ವಿವೇಕಾನಂದರ ಕೃತಿಶ್ರೇಣಿ ಸಂಪುಟ ೩, ಪುಟ ಸಂಖ್ಯೆ ೧೧೩
೨. ಸಂಪುಟ ೪, ಪುಟ ಸಂಖ್ಯೆ ೪೪೬
೩. ಸಂಪುಟ ೨, ಪುಟ ಸಂಖ್ಯೆ ೩೯೭
೪. ಸಂಪುಟ ೩, ಪುಟ ಸಂಖ್ಯೆ ೨೫೪
೫. ಸಂಪುಟ ೧೦, ಪುಟ ಸಂಖ್ಯೆ ೫೪೦
೬. ಸಂಪುಟ ೧, ಪುಟ ಸಂಖ್ಯೆ ೧೭೫-೧೭೬
೭. ಸಂಪುಟ ೫, ಪುಟ ಸಂಖ್ಯೆ ೪೨೦