Monday, January 17, 2011

ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು...

...ಸ್ವತಃ  ಅವಮಾನವನ್ನು ಅನುಭವಿಸುತ್ತಿದ್ದಾನೆಂದು ಹೇಳಲಾಗುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆ ಹೋದರೆ, ಅದನ್ನು ಅವಮಾನ ಎಂದು ಕರೆಯುವುದು ಕಷ್ಟವೇ ಸರಿ...... ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು ಅವನಿಗೆ ಅವಮಾನವಾಗುತ್ತಿದೆ ಎಂದು ತೀರ್ಮಾನಿಸಲಾಗದು...

ಇಂಥ ಅದ್ಭುತ ಮನೋವೈಜ್ಞಾನಿಕ ಸತ್ಯಗಳನ್ನು ಹೇಳುತ್ತಿರುವವರು ಕೆ.ವಿ.ಅಕ್ಷರ. ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟದ ಅಗ್ರ ಲೇಖನದಲ್ಲಿ ಇಂಥ ದಿವ್ಯಜ್ಞಾನವನ್ನು ಅವರು ಉಣಬಡಿಸಿದ್ದಾರೆ. ಲೇಖನದ ಶೀರ್ಷಿಕೆ: ಹರಕೆ ಹರಾಜು- ಯಾವುದು ಸಹಜ? ಯಾವುದು ಅವಮಾನ?

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ಹಾಗು ಐಪಿಎಲ್ ಹರಾಜು ಇವರೆಡರನ್ನೂ ತೌಲನಿಕವಾಗಿ ವಿಮರ್ಶಿಸಿ ಅಕ್ಷರ ಅವರು ಮೇಲಿನ ನಿರ್ಧಾರಕ್ಕೆ ತಲುಪಿದ್ದಾರೆ. ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡಿದ್ದು ಮತ್ತು ಐಪಿಎಲ್‌ನಲ್ಲಿ ಆಟಗಾರರನ್ನು ಹರಾಜು ಹಾಕಿದ್ದು ಇವರೆಡರಲ್ಲಿ ಯಾವುದು ಹೆಚ್ಚು ಆದ್ಯತೆಯ ಸುದ್ದಿಯಾಗಬೇಕಿತ್ತು ಎಂಬ ಪ್ರಶ್ನೆಯನ್ನು ಮಾಧ್ಯಮಲೋಕಕ್ಕೆ ಎಸೆದಿದ್ದಾರೆ. ಉತ್ತರವೂ ಅವರ ಲೇಖನದಲ್ಲೇ ಇದೆ.

ಅಕ್ಷರ ಅವರು ತಮ್ಮ ವಾದ ಸಮರ್ಥನೆಗೆ ಒಂದು ಕೆಟ್ಟ, ಬಾಲಿಷ ದೃಷ್ಟಾಂತವನ್ನೂ ಕೊಟ್ಟಿದ್ದಾರೆ. ದೃಷ್ಟಾಂತವೂ ಸಹ ಮಡೆ ಸ್ನಾನದ ಪರವಾಗಿಯೇ ವಕಾಲತ್ತು ವಹಿಸುತ್ತದೆ. ಆದರೂ ಅವರು ಲೇಖನದ ಅಂತ್ಯದಲ್ಲಿ ಯಾವುದು ಸಹಜ, ಯಾವುದು ಅವಮಾನ ಎಂಬ ತೀರ್ಮಾನವನ್ನೇನು ಹೇಳಿಲ್ಲ ಎಂದು ಜಾಣತನದಲ್ಲೋ, ಅಪರಾಧಿಪ್ರಜ್ಞೆಯಲ್ಲೋ ಗೊಣಗಿರುವುದೂ ಕೇಳುತ್ತದೆ.  ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನದಿಂದ ಈ ಬರಹಕ್ಕೆ ತೊಡಗಿದ್ದೇನೆ. ಅದೇನಾದರೂ ನಿಜವಾಗಿದ್ದರೆ, ನಮ್ಮ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ ಎಂದು ಸಂಪೂರ್ಣ ಗೊಂದಲಮಯವಾಗಿ ಹೇಳುವ ಅಕ್ಷರ ಇಡೀ ಲೇಖನದಲ್ಲಿ ಮಡೆಸ್ನಾನವನ್ನು ಯಾವುದೋ ಸಂಸ್ಕೃತಿ ವಿಮರ್ಶೆಯ ಧಾಟಿಯಲ್ಲಿ ಸಮರ್ಥನೆ ಮಾಡಿಕೊಂಡಿರುವುದು ಮಾತ್ರ ಎದ್ದು ಕಾಣುತ್ತದೆ.

ಅಕ್ಷರ ಅವರಿಗೆ ವಾಪಾಸು ಒಂದು ದೃಷ್ಟಾಂತ ಹೇಳೋಣ. ಒಂದು ಹಳ್ಳಿಯಲ್ಲಿ ಒಬ್ಬ ದಲಿತನಿದ್ದಾನೆ. ಅವನಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಕಾಸು ಕೊಟ್ಟರೂ ಹೊಟೆಲಿನಲ್ಲಿ ಕಾಫಿ, ತಿಂಡಿ ಕೊಡುವುದಿಲ್ಲ. ಅದು ಅವನಿಗೆ ಅಭ್ಯಾಸವಾಗಿದೆ. ಅವನಿಗೆ ಅದು ಅವಮಾನ ಅಂತಲೂ ಅನಿಸುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಅವಮಾನ ಆಗುತ್ತಿದೆ ಎಂಬುದನ್ನು ನಿರಾಕರಿಸಲಾಗುತ್ತದೆಯೇ? ಅವಮಾನವನ್ನು ನಿರ್ಧರಿಸಬೇಕಾದವನು ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ಎನ್ನುವುದಾದರೆ ಅಸ್ಪೃಶ್ಯತೆಯೂ ಅವಮಾನ ಎಂದು ಹೇಳಲಾಗದು. ಯಾಕೆಂದರೆ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಸಮುದಾಯಗಳಲ್ಲಿ ಬಹುತೇಕರು ತಾವು ಅನುಭವಿಸುತ್ತಿರುವುದು ಅವಮಾನ ಎಂಬುದನ್ನೇ ಗೊತ್ತುಮಾಡಿಕೊಳ್ಳದ ಮುಗ್ಧರು.

ಅಕ್ಷರ ಅವರಿಗೆ ಇಂಥ ಬೇಸಿಕ್ ವಿಷಯಗಳು ಅರ್ಥವಾಗುವುದಿಲ್ಲವೇ? ಜನ ಇದನ್ನೆಲ್ಲ ಅರ್ಥಮಾಡಿಕೊಳ್ಳದಷ್ಟು ದಡ್ಡರು ಎಂದು ಅವರು ಭಾವಿಸಿದ್ದಾರೆಯೇ? ಅವಮಾನವೆಂಬುದು ಒಂದು ಕಾಲದೇಶಾಧೀನ ಸಾಂಸ್ಕೃತಿಕ ಪರಿಕಲ್ಪನೆಯೇ ಹೊರತು ಸಾರ್ವತ್ರಿಕವಾಗಿ ಸಾರ್ವಕಾಲಿಕವಾಗಿ ನಿರ್ವಚಿತವಾದ ಒಂದು ಸ್ಥಿತಿಯಲ್ಲ ಎಂಬಂಥ ಜಾಣ ವಾಕ್ಯಗಳ ಮೂಲಕ ಅವರು ಓದುಗರನ್ನು ಅರೆಕ್ಷಣ ಮೈಮರೆಸಿ ತನ್ನ ತೆಕ್ಕೆಗೆ ತಂದುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆಯೇ? ಮಡೆಸ್ನಾನವನ್ನು ಬೆಂಬಲಿಸುವುದರ ಮೂಲಕ ಅವರು ಮನುಷ್ಯನನ್ನು ಅಪಮಾನಕ್ಕೆ ಒಳಪಡಿಸುವ ಎಲ್ಲ ರೀತಿಯ ಮೌಢ್ಯ, ಕಂದಾಚಾರಗಳನ್ನು ಸಮರ್ಥಿಸುತ್ತಿದ್ದಾರೆಯೇ? ಇದು ಅಕ್ಷರ ಅವರು ಕಂಡುಕೊಂಡಿರುವ ಬೆತ್ತಲೆ ಜಗತ್ತೇ?

ಐಪಿಎಲ್ ಹರಾಜು ಗುಲಾಮಗಿರಿಯ ಸಂಕೇತ ನಿಜ. ಅಕ್ಷರ ಅವರು ಹೇಳುವಂತೆಯೇ ಪ್ರಾಚೀನ ರೋಮಿನ ಅನಾಗರಿಕ ಮನಸ್ಥಿಯು ಇನ್ನೂ ಮುಂದುವರೆದಿರುವುದರ ಸಂಕೇತ ಎಂದೂ ಭಾವಿಸೋಣ. ಆದರೆ ಐಪಿಎಲ್ ಹರಾಜಿಗೂ ಮಡೆ ಸ್ನಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಐಪಿಎಲ್ ಹರಾಜನ್ನೇ ವಿರೋಧಿಸಲು ಅಕ್ಷರ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದಿತ್ತು. ಯಾಕೆ ಮಡೆಸ್ನಾನದ ವಿಷಯವನ್ನು ಇಲ್ಲಿ ತಳುಕು ಹಾಕಲು ಯತ್ನಿಸುತ್ತಿದ್ದಾರೆ. ಮಡೆಸ್ನಾನದ ಅನಾಗರಿಕ, ಅಮಾನವೀಯ ಸಂಪ್ರದಾಯವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ಅಗತ್ಯವಾದರೂ ಏನಿತ್ತು? ಅದರಲ್ಲೂ ಪ್ರಜಾವಾಣಿಯಂಥ ಪ್ರಗತಿಪರ ಪತ್ರಿಕೆಯನ್ನು ಇದಕ್ಕೆ ಬಳಸಿಕೊಳ್ಳುವ ಹಕೀಕತ್ತಾದರೂ ಏನು? ಪ್ರಜಾವಾಣಿಯಾದರೂ ಇಂಥ ಅಮಾನವೀಯ (ಈ ಪದವನ್ನು ಅತ್ಯಂತ ನಿಷ್ಠುರವಾಗಿ, ಪ್ರಜ್ಞಾಪೂರ್ವಕವಾಗಿಯೇ ಬಳಸಿದ್ದೇವೆ.) ಲೇಖನವನ್ನು ಪುರವಣಿಯಲ್ಲಿ ಪ್ರಕಟಿಸುವ ಅಗತ್ಯವಾದರೂ ಏನಿತ್ತು?

ಮಡೆಸ್ನಾನದ ಅಸಹ್ಯಗಳ ವಿರುದ್ಧ ಕನ್ನಡ ಪತ್ರಿಕೆಗಳು ಸರಣಿಯಂತೆ ಬರೆದವು. ಈ ವಿಷಯದಲ್ಲಿ ಯಾರೂ ಹಿಂದೆ ಬೀಳಲಿಲ್ಲ. ಇದು ಕೆ.ವಿ.ಅಕ್ಷರ ಅಂಥವರಿಗೆ ಅಸಹನೆ ಹುಟ್ಟಿಸಿರಬಹುದಾ? ಯಾಕಾದರೂ ಇಂಥ ಅಸಹನೆ ಅವರಿಗೆ ಹುಟ್ಟಿತು?

ನೀನಾಸಂ ಮೂಲಕ ಹೆಗ್ಗೋಡನ್ನು ಜಗತ್ತಿನ ರಂಗಭೂಮಿಯ ನಕಾಶೆಯಲ್ಲಿ ಎದ್ದು ಕಾಣುವಂತೆ ರೂಪಿಸಿದವರು ಕೆ.ವಿ.ಸುಬ್ಬಣ್ಣ. ಅವರ ಕಾಲಾನಂತರ ಅಕ್ಷರ ನೀನಾಸಂನ ರೂವಾರಿಯಾಗಿದ್ದಾರೆ. ಈಗಲೂ ಸಂಸ್ಕೃತಿ ಶಿಬಿರಗಳು ಪ್ರತಿವರ್ಷ ನಡೆಯುತ್ತವೆ.

ಮುಂದಿನ ಸಂಸ್ಕೃತಿ ಶಿಬಿರದ ಥೀಮ್ ‘ಹರಕೆ-ಹರಾಜು ಎಂದಿರಬಹುದೇ?

14 comments:

 1. Present PV magazine in charge had Simma like peoples of VK connections. Thats why such things are printed. On the other hand there was hidden agenda of exposing Akshara

  ReplyDelete
 2. ಬೆತ್ತಲೆ ಸೇವೆ ಮಾಡುವ ಹೆಣ್ಣುಮಕ್ಕಳಿಗೂ ತಾವು ಬೆತ್ತಲೆಯಾಗುವುದು ಅವಮಾನ ಅನ್ನಿಸುವುದಿಲ್ಲ.
  ಅಕ್ಷರ ಅವರು ಬೆತ್ತಲೆ ಸೇವೆಯನ್ನೂ ಸಮರ್ಥಿಸುತ್ತಾರೆಯೇ?

  ReplyDelete
 3. ಅಕ್ಷರ ಅವರ ಲೇಖನವನ್ನು ಓದಿದೆ. ಪುರೋಹಿತಶಾಹಿ ಮನಸ್ಥಿತಿಯವರಷ್ಟೆ ಇಂಥ ಲೇಖನವನ್ನು ಬರೆಯಬಲ್ಲರು. ಪ್ರಜಾವಾಣಿಯಲ್ಲಿ ಇಂಥ ಲೇಖನವನ್ನು ನಿರೀಕ್ಷಿಸಿರಲಿಲ್ಲ.

  ReplyDelete
 4. ಹೌದು ಮತ್ತೆ.ಅಕ್ಷರ ಹೇಳುವದು ನಿಜ.ಬ್ರಾಹ್ಮಣರೋ ಇನ್ನಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮುಖಾಂತರ ತನಗೆ ಅವಮಾನ ಆಗುತ್ತದೆ ಎಂದು ತೀರ್ಮಾನಿಸುವವನು ಕೊನೆಗೂ ಆ ಅವಮಾನಿತನೇ ಆಗಿರಬೇಕು. ನಗ್ನವಾಗಿ ಬೇವಿನುಡುಗೆ ಉಟ್ಟು ಹರಕೆ ತೀರಿಸುವದು ಅವಮಾನಕರ ಎಂದು ಸ್ವತ: ಬೇವಿನ ತೊಪ್ಪಲು ಮೆತ್ತಿಕೊಂಡು ಹೋಗುವಾಕೆಗೆ ಅನಿಸಬೇಕು.ಪಶ್ಚಿಮದ ಎನಲೈಟನ್ಮೆಂಟ್ ಪ್ರೇರಿತ ಮೌಲ್ಯಪ್ರಜ್ನೆಯಿಂದ ಯಾಕೆ ನಿಮ್ಮಂಥ ಪ್ರಗತಿಪರರು ಅದನ್ನು ಅವಮಾನಕರ, ಅನಾಗರಿಕ ಅಂತೆಲ್ಲಾ ಹೇಳಿ ಅಕ್ಷರರಂಥ ಪ್ರಕಾಂಡ ಪಂಡಿತರನ್ನು ಕೆರಳಿಸಿ ಇಂಥ ಅತಿಬೌದ್ಧಿಕ ಲೇಖನ ಬರೆಯಲು ಹಚ್ಚುತ್ತೀರಿ? ಅದಕ್ಕಿಂತ ಐಪಿಎಲ್ ಹರಾಜಿನಂಥ ಸಂಗತಿಗಳನ್ನು ಅತ್ಯಂತ ಘೋರ, ಅವಮಾನಕಾರಿ ಎಂಬುದಾಗಿ ಗೋಳಾಡಿ ಅಕ್ಷರರಂಥ ಕಾಲಶೇಷಗಳನ್ನು ಸಂಪ್ರೀತಗೊಳಿಸಬೇಕು......

  ReplyDelete
 5. ಪ್ರಜಾವಾಣಿ FAST FILLING THE SLOT OF VK, a saffron mouth piece...

  ReplyDelete
 6. Hello everybody,

  3-4 bere bere vishYa galannu, onde chaukattinalli noduvudu yestu sari? made snaana balavanta da kaarya alla. there is no force involved in this. made snaana, ondu nambike. adu mooda nambike yo prabhuddha nambikeyo..avaravara aalochanege bittaddu!. aadare asprushyathe was not voluntary action, rather it was a compulsion. Avamaana means, obba vyakthi ya maana vannu pariganisadiruvudu, agaurava toruvudu, totally maana tegeyuvudu..yendartha. Taanaagiye obba vyakthi jaari biddare adu avana maana tegedanteye?! asprushyathe annu avamaana anna bahude horathu made snaana vannu alla.

  ReplyDelete
 7. ಮೊದಲನೆಯದಾಗಿ ಈ ಬ್ಲಾಗರ್ ತಾನು ಮಹಾನ್ ಬುದ್ಧಿವಂತ ಎಂಬ ಕಲ್ಪನೆಯಿಂದ ಹೊರ ಬರಬೇಕು. 2. ಸುಬ್ರಮಣ್ಯಕ್ಕೆ ಹೋಗಿ ವಾಸ್ತವ ಏನು ಎಂದು ನೋಡಬೇಕು. 3. ಪತ್ರಿಕೆ ಎಂದರೆ ಅನಂತ ಮೂರ್ತಿ, ಸೋನಿಯಾಗಳು ಹೇಳಿದ್ದನ್ನು, ನಿಮ್ಮಂತಹ ಸೋಗಲಾಡಿಗಳು ಬರೆದದ್ದನ್ನು ಮಾತ್ರ ಪ್ರಿಂಟ್ ಮಾಡಲು ಅದು ಬ್ಲಾಗ್ ಅಲ್ಲ ಎಂಬುದನ್ನು ಕಲಿಯಬೇಕು.

  ReplyDelete
 8. ಅಕ್ಷರ ಅವರ ಲೇಖನ ಅವರ ನೈಜ ಮನಸ್ಥಿಯನ್ನು ಹೊರಹಾಕುವಂತಿದೆ. ಆದರೆ ಅದನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಸ್ವಲ್ಪ ಹಿಂಜರಿಕೆ ತೋರಿದ್ದಾರೆ. ಆದರೂ ಓದುಗರು ಅದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ.

  ReplyDelete
 9. ದುಡ್ಡಿಗಾಗಿ ಯಾವುದೇ ಕೆಲಸ ಮಾಡಿದರೂ ಅದು ಮೂಢನಂಬಿಕೆಯಾಗಲಿ, ಅಪಮಾನಕರವಾದದ್ದೆಂದಾಗಲಿ ಅನ್ನಿಸಿಕೊಳ್ಳುವುದಿಲ್ಲ. ಅದೇ ಬರೀ ನಂಬಿಕೆಗಾಗಿ ಏನಾದರೂ ಕೆಲಸ ಮಾಡಿದರೆ ಅದು ಮೂಢನಂಬಿಕೆಯೆನಿಸಿಕೊಳುವ ಅಪಾಯ ಇದೆ.

  ReplyDelete
 10. ಅಕ್ಷರ ಅವರ ವಾದದ ಬಗ್ಗೆ ನಿಮಗನಿಸುವುದನ್ನು ಹೇಳಬಹುದು. ಆದರೆ ಪ್ರಜಾವಾಣಿ ಲೇಖನ ಪ್ರಕಟಿಸಿದ್ದೇ ತಪ್ಪು; ಹಾಗೆ ಮಾಡಿದ್ದರಿ೦ದ ಅದು "ವಿಜಯಕರ್ನಾಟಕದ ತಮ್ಮ” ಎ೦ಬಿತ್ಯಾದಿ ತೀರ್ಪುಗಳು ಕೇಸರಿ ಮನೊಭಾವದಷ್ಟೇ ಅಪಾಯಕಾರಿ.

  ReplyDelete
 11. yes. this blogger is really confused. He is mixing up too many issues..seeing it in his own angle. He is very much biased. Madesnaana, un touchablity are two different issues. It seems Mr Akshara s views are beyond his reach of understand. We expect more mature kind of, unbiased articles from this blogger.

  ReplyDelete
 12. @Anonymous
  ಭಲೇ ಚತುರ ಕಣ್ರೀ ನೀವು. ಮಡೆ ಸ್ನಾನ ಮತ್ತು ಐಪಿಎಲ್ ಎರಡನ್ನೂ ಹೋಲಿಸಿ ಅಕ್ಷರ ಬರೆದಾಗ ನಿಮಗೆ ಅದು ಮಿಕ್ಸಿಂಗ್ ಅಪ್ ಟೂ ಮೆನಿ ಇಶ್ಯೂಸ್ ಅನಿಸಲಿಲ್ಲ. ಅಸ್ಪೃಶ್ಯತೆಯ ಕುರಿತು ಈ ಬ್ಲಾಗರ್ ಬರೆದ ತಕ್ಷಣ ಮಿಕ್ಸಿಂಗ್ ಅಪ್ ಎಂದು ಗೋಗರೆಯುತ್ತೀರಿ. ಇದು ನಿಮ್ಮ ಹಿಪಾಕ್ರಸಿ, ಇದು ನಿಮ್ಮ ಅಸಲಿ ರೂಪ. ಅಸ್ಪೃಶ್ಯತೆಯ ಬಗ್ಗೆ ಯಾರೇ ಬರೆದರೂ ನಿಮ್ಮಂಥ ಕೆಲವರು ಹೀಗೆ ಒದರಾಡುವುದನ್ನು ನೋಡಿದ್ದೇವೆ. ನೀವು ಅವರಲ್ಲೊಬ್ಬರು ಅಷ್ಟೆ. ಅಕ್ಷರ ಬರೆದಿರುವ ಲೇಖನ ಅರ್ಥಮಾಡಿಕೊಳ್ಳಲು ಮಹಾನ್ ಪಾಂಡಿತ್ಯ ಏನೂ ಬೇಕಾಗಿಲ್ಲ. ಮಡೆಸ್ನಾನದ ಎಂಜಲೆಲೆಯ ಕೊಳೆತ ವಾಸನೆ ಅವರ ಲೇಖನದಿಂದ ಹೊರಡುತ್ತಿದೆ, ಅಷ್ಟೆ.

  ReplyDelete
 13. he is `akshara' an illiterate!?


  -A literate

  ReplyDelete