Saturday, January 22, 2011

ಅದಿರು ಕಳ್ಳತನ: ಪೂರ್ತಿ ಡೀಟೇಲ್ಸ್ ಇಲ್ಲಿದೆ...


ಸ್ವಲ್ಪ ಫಾಲೋ ಅಪ್ ಮಾಡ್ತೀರಾ ಸರ್ ಎಂದು ರಾಜ್ಯದ ಮಾಧ್ಯಮ ಲೋಕದ ದಿಗ್ಗಜರನ್ನು ಮನವಿ ಮಾಡಿಕೊಂಡಿದ್ದೆವು. ಆದರೆ ಯಾರೂ ಫಾಲೋ ಅಪ್ ಮಾಡಿದ ಹಾಗೆ ಕಾಣುತ್ತಿಲ್ಲ. ಹೀಗಾಗಿ ಸಂಪಾದಕೀಯ ತಂಡವೇ ಸುದ್ದಿಯ ಆಳ-ಅಗಲವನ್ನು ಕೆದಕಿ ಮಾಹಿತಿಗಳನ್ನು ಸಂಗ್ರಹಿಸಿದೆ. ಅದನ್ನು ಓದುಗರ ಮುಂದೆ ಇಡುತ್ತಿದ್ದೇವೆ.

ನಾವು ಹೇಳುತ್ತಾ ಇರುವುದು ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅದಿರು ಹರಾಜಿನ ವಿಷಯ. ಇದನ್ನು ಓದುವ ಮುನ್ನ ನಮ್ಮ ಹಳೆಯ ಪೋಸ್ಟ್ ಅದಿರು ಮಾಯ-ಸುದ್ದಿ ಮಂಗಮಾಯವನ್ನು ಮತ್ತೊಮ್ಮೆ ಓದಿ ಬನ್ನಿ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆಗೆ ಅತ್ಯಂತ ಕಡಿಮೆ ಬೆಲೆಯ ಹರಾಜಿನ ಕುರಿತು ಹೈಕೋರ್ಟ್‌ನಲ್ಲಿ ಓರ್ವರು ಆಕ್ಷೇಪ ಎತ್ತಿದ ಪರಿಣಾಮ ನ್ಯಾಯಾಲಯ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು, ನಂತರ ಅದು ತೆರವು ಸಹ ಆಯಿತು. ಅದಾದ ನಂತರ ಏನಾಯಿತು ಎಂಬುದೇ ಸಾಕಷ್ಟು  ಕುತೂಹಲಕರವಾಗಿದೆ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆ ೧೮ ಕೋಟಿ ರೂ.ಗಳಿಗೆ ಹರಾಜು ಪಡೆದಿದ್ದೇನೋ ನಿಜ. ಇದಕ್ಕಾಗಿ ಮೊದಲ ಕಂತಾಗಿ ಶೇ.೨೫ರಷ್ಟು ಹಣ ಅಂದರೆ, ೪,೭೦,೯೬,೫೦೦ ರೂ.ಗಳನ್ನು ಪಾವತಿಸಿತ್ತು. ಇನ್ನೂ ಮೂರು ಕಂತುಗಳಲ್ಲಿ ಬಾಕಿ ಹಣವನ್ನು ಪಾವತಿಸಬೇಕಿತ್ತು.

ಆದರೆ ಸಂಗ್ರಹಿಸಿಡಲಾಗಿದ್ದ ಅದಿರಿನ ಪೈಕಿ ಅರ್ಧಕ್ಕೂ ಹೆಚ್ಚು (ಸಿಓಡಿ ತನಿಖೆಯೇ ಇದನ್ನು ಹೇಳಿದೆ.) ನಾಪತ್ತೆಯಾಗಿತ್ತು. ಪೂರ್ತಿ ಅದಿರು ದೊರೆಯುವವರೆಗೂ ಉಳಿದ ಹಣವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತು. ಆದರೆ ಸರಿಯಾದ ಅವಧಿಯಲ್ಲಿ ಕಂತು ಪಾವತಿಸಲಿಲ್ಲ ಎಂಬ ಕಾರಣಕ್ಕೆ ಹರಾಜನ್ನು ರದ್ದುಗೊಳಿಸಿ ಹೊಸದಾಗಿ ಹರಾಜು ನಡೆಸಲು ಅಧಿಕಾರಿಗಳು ನಿರ್ಧರಿಸಿದರು. ಈ ಸಂಬಂಧ ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಸಂಸ್ಥೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ದಾವೆ ಹೂಡಿತು. ರಿಟ್ ಪಿಟಿಷನ್ ಸಂಖ್ಯೆ 5124/ 2010(GM-MM-S)

ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದವರು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳು, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳ್ಳಾರಿ ಜಿಲ್ಲೆಯ ಉಪ ನಿರ್ದೇಶಕರು.

ಅದಿರು ಕಳ್ಳತನವಾಗಿರುವುದನ್ನು ಮುಚ್ಚಿಹಾಕಲು ಮರುಹರಾಜು ನಡೆಸಲು ಯತ್ನಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು. ಅದಿರು ನಾಪತ್ತೆ ಪ್ರಕರಣದ ಸತ್ಯಾಂಶಗಳನ್ನು ಅರಿಯಲು ನ್ಯಾಯಾಲಯದ ಆದೇಶದ ಮೇರೆಗೆ ಸಿಓಡಿ ತನಿಖೆಯೂ ನಡೆಯಿತು.

ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಮತ್ತು ಬಿ.ಎಸ್.ಪಾಟೀಲ ಅವರನ್ನು ಒಳಗೊಂಡ ವಿಭಾಗೀಯ ಪೀಠ ೨೦೧೦ರ ಫೆಬ್ರವರಿ ೧೯ರಂದು ತೀರ್ಪನ್ನು ನೀಡಿತು.

ಹೈಕೋರ್ಟ್ ವಿಭಾಗೀಯ ಪೀಠದ ಅಂತಿಮ ಆದೇಶದಲ್ಲಿ ಸಿಓಡಿ ತನಿಖೆ ವರದಿಯ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ:


...It is clear from the previous proceedings and from terms of the report filed by the COD referred to in the previous order passed by this court that considerable quantity is missing from the iron ore stacked in the lands.... (Page No.8)


...As regards the huge quantity of iron ore stacked in different lands found missing. we would like to make it clear that the authorities are duty bound to examine as to under what circumstances such lapse took place. In the light of the report submitted by the COD, we direct the Director of Mines and Geology, based on the exact quantity of material that will be auctioned in the proposed auction, to find out how much material falls short compared to what was stacked earlier and auctioned previously. The responsibility has to be fixed with regard to the missing quantity by conductiong necessary enquiry agaisnt the authorities and persons concerned....... (Page No. 8 & 9)


ಇಷ್ಟು ದೊಡ್ಡ ಪ್ರಮಾಣದ ಅದಿರು ನಾಪತ್ತೆಯಾಗಿರುವುದು ನಿಜ ಎಂಬುದು ಸಿಓಡಿ ತನಿಖೆಯಿಂದೇನೋ ಬಯಲಾಗಿದೆ. ಇಂಥ ದೊಡ್ಡ ಪ್ರಮಾದ ನಡೆಯಲು ಕಾರಣಕರ್ತರಾದ, ಜವಾಬ್ದಾರಿ ಹೊರಬೇಕಾದವರ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವೂ ಆದೇಶಿಸಿದೆ.

ಕದ್ದವರು ಯಾರು? ಕದ್ದವರಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು ಯಾರು?  ಇನ್ನೂ ಬಯಲಾಗಿಲ್ಲ. ಚಿತ್ರಕೂಟ ಸಂಸ್ಥೆಗೇನೋ ತಾನು ಕಟ್ಟಿದ್ದ ಮೊದಲ ಕಂತಿನ ಹಣ ನ್ಯಾಯಾಲಯದ ಆದೇಶದಿಂದಾಗಿ ವಾಪಾಸು ದೊರೆತಿದೆ.

ಆದರೆ ಮಾಯವಾದ ಅದಿರಿನ ಕಥೆ? ಅದಕ್ಕೆ ಉತ್ತರದಾಯಿಗಳು ಯಾರು?

ಹೊಟ್ಟೆಪಾಡಿಗಾಗಿ ಮನೆಗಳ್ಳತನ ಮಾಡುವವನನ್ನು ಹಿಡಿದರೆ ಅದು ಸುದ್ದಿಯಾಗುತ್ತದೆ, ಅವನಿಗೆ ಜೈಲೂ ಆಗುತ್ತದೆ. ಕೋಟಿಗಟ್ಟಲೆ ನುಂಗಿದವರು ಆರಾಮವಾಗಿ ಇರುತ್ತಾರೆ. ಈ ಪ್ರಕರಣದಲ್ಲಿ ಅದು ಗಂಭೀರವಾದ ಸುದ್ದಿಯೂ ಆಗಲಿಲ್ಲ. ಇದು ಅತ್ಯಂತ ನೋವಿನ ವಿಚಾರ.

2 comments:

  1. For God's sake (Sorry for using such an erratic word but have no option other than this to express my anguish on this)it is better if it left untouched as either no individual or any people's forum else media house taking this issue to the further. But, my sincere advice is to u is that u people at least send the documents to the Lokayukta. or as u may have contact with the mediapeople u may approach the person u trust with. otherwise it will remain the same.

    ReplyDelete
  2. ಗತಕಾಲದ 2010ನೇ ಇಸವಿಯಲ್ಲಿ ಅಂತರಜಾಲದ ಸುದ್ದಿ ಮಾದ್ಯಮದಲ್ಲಿ ಓದಿದ ನೆನಪುಗಳು.

    ಕರ್ನಾಟಕದ ನೈಸರ್ಗಿಕ ಸಂಪತ್ತಿನ ಲೂಟಿ, ಅದರಲ್ಲಿ ಬಿಜಿಪಿ ಸರ್ಕಾರದ ಸಚಿವತ್ರಯರೇ “ಮೃಷ್ಠಾನ್ನ ಬೋಜನ”ಕ್ಕೆ ಯಾವ ಎಗ್ಗು ಸಗ್ಗು ಇಲ್ಲದೇ ಕುಂತು ಬಿಟ್ಟಿರುವುದು…… ಅದಕ್ಕೆ ಬಿಜೆಪಿಯ ಅಖಿಲ ಭಾರತ ಮುಖಂಡರ ಕೃಪಾ ಪೋಷಣೆ, ಅದರಲ್ಲೂ ಸುಶ್ಮಾ ತಾಯಿಯ ಆಶೀರ್ವಾದ… ಮತ್ತು ಸಂಘ ಪರಿವಾರದ ಅಭಯ.

    -ಪ. ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete