ಜನಸಾಮಾನ್ಯರಿಗೆ ಯಾವ ಜ್ಞಾನಕ್ಕೂ ಹಕ್ಕಿರಲಿಲ್ಲ. ವೇದದ ಒಂದು ಪದ ಅವನ ಕಿವಿಗೆ ಬಿದ್ದರೆ ಘೋರ ದಂಡನೆ ಅವನಿಗೆ ಕಾದಿತ್ತು. ಪುರಾತನ ಹಿಂದೂಗಳು ಕಂಡುಹಿಡಿದ ಅಧ್ಯಾತ್ಮಿಕ ಸತ್ಯಗಳನ್ನೊಳಗೊಂಡ ವೇದವನ್ನು ಪುರೋಹಿತರು ರಹಸ್ಯವಾಗಿಟ್ಟರು. ಕೊನೆಗೆ ಇದನ್ನು ಸಹಿಸಲು ಆಗದ ಒಬ್ಬನು ಕಾಣಿಸಿಕೊಂಡ. ಅವನಿಗೆ ಬುದ್ಧಿ ಇತ್ತು. ಶಕ್ತಿ ಇತ್ತು. ಅವನ ಹೃದಯ ವಿಶಾಲವಾದ ಆಕಾಶದಷ್ಟು ಅಸೀಮವಾಗಿತ್ತು. ಜನರು ಪುರೋಹಿತರನ್ನು ಅನುಸರಿಸುತ್ತಿದ್ದುದನ್ನು ಅವನು ಕಂಡ. ಪುರೋಹಿತರು ಅಧಿಕಾರದ ಮದದಲ್ಲಿ ಮುಳುಗಿಹೋಗಿದ್ದರು. ಇದನ್ನು ಹೇಗಾದರೂ ನಿವಾರಿಸಬೇಕೆಂದು ಅವನು ಯತ್ನಿಸಿದ. ಯಾರ ಮೇಲೂ ಅವನಿಗೆ ಅಧಿಕಾರ ಬೇಕಿರಲಿಲ್ಲ. ಜನರ ಮಾನಸಿಕ ಮತ್ತು ಧಾರ‍್ಮಿಕ ಬಂಧನಗಳನ್ನು ಕಳಚಲು ಅವನು ಯತ್ನಿಸಿದ. ಅವನ ಹೃದಯ ವಿಶಾಲವಾಗಿತ್ತು. ನಮ್ಮಲ್ಲಿ ಸುತ್ತಲಿರುವ ಹಲವರಿಗೆ ಹೃದಯ ಇರಬಹುದು. ನಾವೂ ಇತರರಿಗೆ ಸಹಾಯ ಮಾಡಲು ಯತ್ನಿಸಬಹುದು. ಆದರೆ ಬುದ್ಧಿ ಇಲ್ಲ. ಇತರರಿಗೆ ಹೇಗೆ ಸಹಾಯ ಮಾಡಬಹುದೋ ಅಂತಹ ಮಾರ್ಗ ಗೊತ್ತಿಲ್ಲ. ಆದರೆ ಆತ ಜೀವಿಗಳ ಬಂಧನವನ್ನು ಹೇಗೆ ಖಂಡಿಸಬಹುದು ಎಂಬ ಮಾರ್ಗವನ್ನು ಕಂಡುಹಿಡಿದ. ಮನುಷ್ಯ ಏತಕ್ಕೆ ವ್ಯಥೆ ಪಡುವನು ಎಂಬುದನ್ನು ಕಂಡುಹಿಡಿದ. ಅವನು ಮಹಾಜ್ಞಾನಿ, ಅನುಭಾವಿ; ಎಲ್ಲವನ್ನೂ ಅವನು ಅನುಷ್ಠಾನಕ್ಕೆ ತಂದ. ಭೇದಭಾವವಿಲ್ಲದೆ ಅದನ್ನು ಎಲ್ಲರಿಗೂ ಬೋಧಿಸಿ ನಿರ್ವಾಣ ಸುಖವನ್ನು ಹೇಗೆ ಪಡೆಯಬೇಕೆಂಬುದನ್ನು ತೋರಿದ. ಅವನೇ ಬುದ್ಧ.೧
ಬುದ್ಧ ವೇದಕ್ಕಾಗಲಿ, ಜಾತಿಗಾಗಲೀ, ಪುರೋಹಿತರಿಗಾಗಲೀ ಆಚಾರಕ್ಕಾಗಲೀ ಬಾಗಲಿಲ್ಲ. ವಿಚಾರ ನಮ್ಮನ್ನು ಒಯ್ಯುವವರೆಗೆ ನಿರ್ಭಯವಾಗಿ ಅದನ್ನು ಅನುಸರಿಸಿ ಎಂದನು. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಪ್ರಪಂಚದಲ್ಲಿ ಸರ್ವರ ಮೇಲೆಯೂ ಪ್ರೇಮ ಇದ್ದಂತಹ ಮತ್ತೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ. ಬುದ್ಧ ಧಾರ್ಮಿಕ ಪ್ರಪಂಚದಲ್ಲಿ ವಾಷಿಂಗ್‌ಟನ್ ಇದ್ದಂತೆ.೨
ಪ್ರಪಂಚಕ್ಕೆ ಒಂದು ಪರಿಪೂರ್ಣವಾದ ನೀತಿಯನ್ನು ಕೊಟ್ಟವರಲ್ಲಿ ಬುದ್ಧನೇ ಮಾನವಕೋಟಿಯಲ್ಲಿ ಮೊದಲಿಗನು. ಅವನು ಒಳ್ಳ್ಳೆಯದಕ್ಕಾಗಿ ಒಳ್ಳಯವನಾಗಿದ್ದನು. ಪ್ರೀತಿಗಾಗಿ ಪ್ರೀತಿಸುತ್ತಿದ್ದನು.೩
ಬೌದ್ಧಧರ್ಮ ಆಹುತಿಯನ್ನು ಸ್ವೀಕರಿಸುವ ದೇವತೆಗಳ ಸಿಂಹಾಸನವನ್ನು ಕದಲಿಸಿ ಅವರನ್ನು ಸ್ವರ್ಗಧಾಮದಿಂದ ಉರುಳಿಸಿತ್ತು. ದೇವತೆಗಳ, ಬ್ರಹ್ಮನ ಅಥವಾ ಇಂದ್ರನ ಪದವಿಗಿಂತ, ಬುದ್ಧನಾಗುವುದು ಉತ್ತಮ ಪದವಿ. ಬ್ರಹ್ಮ ಮತ್ತು ಇಂದ್ರ- ಇವರು ಮಾನವದೇವನಾದ ಬುದ್ಧನ ಪದತಲದಲ್ಲಿ ಪ್ರಾರ್ಥಿಸಲು ತಮ್ಮಲ್ಲಿ ಸ್ಪರ್ಧಿಸುವರು. ಪ್ರತಿಯೊಬ್ಬ ಮಾನವನಿಗೂ ಬುದ್ಧನ ಸ್ಥಿತಿಯನ್ನು ಪಡೆಯುವುದಕ್ಕೆ ಅಧಿಕಾರವಿದೆ. ಈ ಜನ್ಮದಲ್ಲಿಯೇ ಎಲ್ಲರಿಗೂ ಇದಕ್ಕೆ ಅವಕಾಶವಿದೆ. ದೇವತೆಗಳ ಆಧಾರದ ಮೇಲೆ ನಿಂತ ಪುರೋಹಿತರ ಮೇಲ್ಮೆ ಮಾಯವಾಯಿತು.೪
ಬುದ್ಧ ಸಾಯುವಾಗಲೂ ತಾನು ಪ್ರತ್ಯೇಕ ಎಂದು ಒಪ್ಪಿಕೊಳ್ಳಲಿಲ್ಲ. ನಾನು ಅದಕ್ಕಾಗಿ ಅವನನ್ನು ಆರಾಧಿಸುವುದು. ನೀವು ಕರೆಯುತ್ತಿರುವ ಕ್ರಿಸ್ತ ಬುದ್ಧ ಎಂಬುವು ಸಾಕ್ಷಾತ್ಕಾರದ ಕೆಲವು ಅವಸ್ಥೆಗಳ ಹೆಸರುಗಳು ಮಾತ್ರವಾಗಿವೆ. ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಆತ ಪ್ರಪಂಚದ ಇತರ ಗುರುಗಳೆಲ್ಲರಿಗಿಂತ ಹೆಚ್ಚಾಗಿ ಬೋಧಿಸಿದನು. ಅವನು ನಮ್ಮನ್ನು ತೋರಿಕೆಯ ವ್ಯಕ್ತಿತ್ವದ ಬಂಧನದಿಂದ ಪಾರು ಮಾಡಿದುದು ಮಾತ್ರವಲ್ಲ, ದೇವರುಗಳೆಂಬ ಅಗೋಚರ ವ್ಯಕ್ತಿಗಳ ಹಿಡಿತದಿಂದ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ. ನಿರ್ವಾಣವೆಂಬ ಆ ಅವಸ್ಥೆಯನ್ನು ಪಡೆಯಲು ಎಲ್ಲರಿಗೂ ಆಹ್ವಾನವಿತ್ತ. ಎಲ್ಲರೂ ಒಂದು ದಿನ ಅದನ್ನು ಪಡೆಯಲೇಬೇಕು, ಅದೇ ಮಾನವನ ಪರಮ ಗುರಿ.೫
ಜಾತಿಯನ್ನು ಒಪ್ಪಿಕೊಳ್ಳದ, ಭರತಖಂಡದ ಶ್ರೇಷ್ಠ ತತ್ತ್ವಜ್ಞಾನಿಯಾಗಿದ್ದವನು ಬುದ್ಧನೊಬ್ಬನೇ. ಅವನ ಅನುಯಾಯಿಗಳಲ್ಲಿ ಒಬ್ಬನೂ ಕೂಡ ಈಗ ಭರತಖಂಡದಲ್ಲಿಲ್ಲ. ೬
೧. ವಿವೇಕಾನಂದರ ಕೃತಿಶ್ರೇಣಿ, ಸಂಪುಟ: ೨, ಪುಟ: ೩೨೪
೨. ಸಂಪುಟ: ೮, ಪುಟ: ೮೦
೩. ಸಂಪುಟ: ೮, ಪುಟ: ೫೬
೪. ಸಂಪುಟ: ೨, ಪುಟ: ೧೯೬
೫. ಸಂಪುಟ: ೨, ಪುಟ: ೩೩೪
೬. ಸಂಪುಟ: ೮, ಪುಟ: ೫೪