Monday, September 12, 2011

ವರ್ತಮಾನ, ವರದಿಗಾರ ಮತ್ತು ಕಾಲಂ೯ ಬಗ್ಗೆ ಒಂದಿಷ್ಟು...


ರವಿಕೃಷ್ಣಾರೆಡ್ಡಿ ನಿಮಗೆ ಗೊತ್ತು. ಅಮೆರಿಕದಿಂದ ರವಿ ಎಂಬುದು ಅವರ ಬ್ಲಾಗು. ಅಮೆರಿಕದಲ್ಲಿ ಕೆಲಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರೆಡ್ಡಿ ಬೆಂಗಳೂರಿಗೆ ವಾಪಾಸು ಬಂದಿದ್ದಾರೆ. ನಿಮಗೆ ಹಿಂದೆ ಹೇಳಿದ ಹಾಗೆ ಅವರು ಚಿತ್ರದುರ್ಗದಲ್ಲಿ ನಡೆದ ಮಾಧ್ಯಮಗೋಷ್ಠಿಯೊಂದರಲ್ಲಿ ಪರ್ಯಾಯ ಮಾಧ್ಯಮವನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದ್ದರು. ಹೇಳಿದ್ದನ್ನು ಮಾಡುವವರ ಪೈಕಿ ರೆಡ್ಡಿಯವರೂ ಒಬ್ಬರು. ರಾಜ್ಯವೆಲ್ಲ ಸುತ್ತಿ ವರ್ತಮಾನ ಎಂಬ ವೆಬ್‌ಸೈಟ್ ಅಣಿಗೊಳಿಸಿದ್ದಾರೆ. ಈಗಾಗಲೇ ಹಲವು ಜನಪರ ಮನಸ್ಸುಗಳು ರೆಡ್ಡಿಯವರ ಈ ಪ್ರಯತ್ನದಲ್ಲಿ ಕೈ ಜೋಡಿಸಿವೆ. ಹೀಗಾಗಿ ವರ್ತಮಾನ ಸೊಗಸಾಗಿ ಮೂಡಿಬರುತ್ತಿದೆ.
ರವಿಕೃಷ್ಣಾ ರೆಡ್ಡಿ

ಅಣ್ಣಾ ಹಜಾರೆ ಆಂದೋಲನದ ಸಂದರ್ಭದಲ್ಲಿ ರವಿ ಕೃಷ್ಣಾರೆಡ್ಡಿ ಆ ಆಂದೋಲನದ ಭಾಗವೇ ಆಗಿ, ಚಳವಳಿಯ ಬಗ್ಗೆ ಅಶಾದಾಯಕ ಮಾತುಗಳನ್ನು ಆಡಿದ್ದರು. ಆದರೆ ವರ್ತಮಾನದಲ್ಲಿ ಹಜಾರೆ ಚಳವಳಿಯನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುವ ಲೇಖನಗಳನ್ನೂ ಪ್ರಕಟಿಸಿದರು. ಭಿನ್ನ ಧ್ವನಿಗಳನ್ನೂ ಗೌರವಿಸುವುದು ಪ್ರಜಾಪ್ರಭುತ್ವ ಶೈಲಿಯ ಮಾರ್ಗ.

ಏನನ್ನೇ ಮಾಡು, ಒಳ್ಳೆಯದನ್ನೇ ಮಾಡು ಎಂಬುದು ರೆಡ್ಡಿಯವರು ಪ್ರಕಟಿಸಿರುವ ಹೊಸ ಪುಸ್ತಕದ ಹೆಸರು. ರೆಡ್ಡಿಯವರದು ನಿಗಿನಿಗಿ ಕೆಂಡದಂಥ ಆದರ್ಶದ ಬದುಕು. ಅವರು ಏನನ್ನೇ ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾರೆ ಎಂಬ ನಂಬುಗೆ ನಮ್ಮದು. ವರ್ತಮಾನ ನಿಮಗೂ ಇಷ್ಟವಾಗುತ್ತದೆ. ನಮ್ಮ ಎಲ್ಲ ಓದುಗರೂ ತಪ್ಪದೇ ವರ್ತಮಾನವನ್ನೂ ಓದಬೇಕೆಂಬುದು ನಮ್ಮ ಮನವಿ.

****

ಕುಮಾರ ರೈತ ನಿಮಗೆ ಗೊತ್ತು. ಕೃಷಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಮತ್ತು ಶ್ರದ್ಧೆಯುಳ್ಳವರು. ಆದರೆ ದುರ್ಘಟನೆಯೊಂದರ ಕಾರಣಕ್ಕೆ ಸುದ್ದಿಯಾದವರು. ಅವರ ಮೇಲೆ ಇದೇ ಬಳ್ಳಾರಿಯ ಗಣಿದಂಧೆಕೋರರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಬಳ್ಳಾರಿಯ ಗಣಿ ಮಾಫಿಯಾದ ಕುರಿತು ಅವರು ಮುಲಾಜಿಲ್ಲದಂತೆ ವರದಿ ಮಾಡಿದ್ದಕ್ಕೆ ದೊರಕಿದ ಶಿಕ್ಷೆ ಇದು. ದುರಂತವೆಂದರೆ ಅವರ ನೆರವಿಗೆ ಕೆಲ ಬಳ್ಳಾರಿ ಪತ್ರಕರ್ತರನ್ನು ಬಿಟ್ಟರೆ ಬೇರೆ ಯಾರೂ ನಿಲ್ಲಲೇ ಇಲ್ಲ.

ಕುಮಾರ ರೈತ
ಗಣಿ ಮಾಫಿಯಾದಿಂದ ಹಲ್ಲೆಗೊಳಗಾದರೂ ಕುಮಾರ ರೈತ ತಾನು ನೆಚ್ಚಿಕೊಂಡ ಜೀವನಾದರ್ಶನವನ್ನು ಬಿಟ್ಟುಕೊಡಲಿಲ್ಲ. ಯಾರಿಗೂ ತಲೆಬಾಗಲೂ ಇಲ್ಲ. ಅಫಘಾತಕ್ಕೆ ಒಳಗಾಗಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ಅವರನ್ನು ದುಡಿಸಿಕೊಳ್ಳುತ್ತಿದ್ದ ಚಾನಲ್ ಅವರ ಕೈ ಹಿಡಿಯಲಿಲ್ಲ. ಆದರೂ ಅವರು ವಿಚಲಿತರಾಗಲಿಲ್ಲ.

ಕುಮಾರ ರೈತ ಅವರೀಗ ವರದಿಗಾರ ಎಂಬ ವೆಬ್ ಸೈಟ್ ನಡೆಸುತ್ತಿದ್ದಾರೆ. ಸದ್ಯಕ್ಕೆ ಅವರೊಬ್ಬರೇ ಬರೆಯುತ್ತಿದ್ದಾರೆ, ಬಹುಶಃ ಮುಂದೆ ಅವರ ಗೆಳೆಯರು ಜತೆಗೂಡಬಹುದೇನೋ? ವರದಿಗಾರನನ್ನೂ ಆಗಾಗ ಭೇಟಿ ಮಾಡಿ ಎಂಬುದು ನಮ್ಮ ಕೋರಿಕೆ.

****

ಸಂಪಾದಕೀಯ ಶುರುವಾದಮೇಲೆ ಹಲವಾರು ಮೀಡಿಯಾ ಬ್ಲಾಗ್ ಗಳು ಹುಟ್ಟಿಕೊಂಡವು. ಕೆಲವು ಹುಟ್ಟಿಕೊಂಡಷ್ಟೇ ವೇಗದಲ್ಲಿ ಸತ್ತುಹೋದವು. ವೈಯಕ್ತಿಕ ಸಿಟ್ಟಿಗೆ, ಸೇಡಿಗೆ ಮೀಸಲಾದವು ಕೆಲವು. ಆದರೆ ಕಾಲಂ೯ ಎಂಬ ಬ್ಲಾಗ್ ನೀವು ನೋಡಿರಬಹುದು. ಅದು ಯಾರ ಚಾರಿತ್ರ್ಯವಧೆಗೂ ಕೈ ಹಾಕದೆ, ಯಾರ ಮೇಲೂ ಪೂರ್ವನಿರ್ಧಾರಿತ ಸಿಟ್ಟನ್ನು ಪ್ರಕಟಿಸದೆ ವಸ್ತುನಿಷ್ಠವಾಗಿ ಬರೆಯತೊಡಗಿತು.

ಕಾಲಂ ೯ ಯಾರು ನಡೆಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಆದರೆ ಹೇಳುವುದನ್ನು ಚುಟುಕಾಗಿ, ಸಮರ್ಥವಾಗಿ, ಮನಮುಟ್ಟುವಂತೆ ಹೇಳುವುದು ಅವರಿಗೆ ಗೊತ್ತು. ಅದಕ್ಕಾಗಿ ಅವರಿಗೆ ಅಭಿನಂದನೆ.

ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬ ಕಾಲಂ೯ರ ಹೊಸ ಲೇಖನವನ್ನು ಗಮನಿಸಿ. ಕನ್ನಡ ಮೀಡಿಯಾ ಜಗತ್ತು ಎಂಥ ಪಾತಾಳಕ್ಕೆ ಇಳಿಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಮೀಡಿಯಾಗಳಿಗೆ ಇನ್ನು ಪತ್ರಕರ್ತರು ಬೇಕಾಗೇ ಇಲ್ಲ. ಗುಲಾಮಗಿರಿ ಮಾಡುವ ಕೂಲಿಕಾರ್ಮಿಕರಷ್ಟೇ ಬೇಕು. ಇದು ವಾಸ್ತವ. ಕಾಲಂ೯ ಬ್ಲಾಗ್ ನೋಡಿ ಎಂದು ನಮ್ಮ ಓದುಗರಿಗೆ ವಿನಂತಿಸುತ್ತೇವೆ.

ಈ ನಡುವೆ ಫೇಸ್‌ಬುಕ್ ನಲ್ಲಿ ನಾನಾ ತರಹದ ಗುಂಪುಗಳು. ಲಘುಹರಟೆಯಿಂದ ಹಿಡಿದು ಅಂತಾರಾಷ್ಟ್ರೀಯ ಸಮಸ್ಯೆಗಳ ಗಂಭೀರ ಚರ್ಚೆಯವರೆಗೆ ಎಲ್ಲವೂ ಅಲ್ಲಿ ಲಭ್ಯ. ನಮ್ಮ ಗೆಳೆಯರು ಈಗಾಗಲೇ ಮೂವತ್ತು-ಮೂವತ್ತೈದು ಗುಂಪಿಗೆ ನಮ್ಮನ್ನು ಸೇರಿಸಿಕೊಂಡಿದ್ದಾರೆ.  ಒಮ್ಮೊಮ್ಮೆ ಬ್ಲಾಗ್‌ಗಿಂತ ಹೆಚ್ಚು ಚರ್ಚೆ ಅಲ್ಲೇ ನಡೆಯುತ್ತಿದೆ. ಈಗಾಗಲೇ ನಮ್ಮ ಸ್ನೇಹಿತರ ಸಂಖ್ಯೆ ೪೫೦೦ ದಾಟಿದೆ. ಇನ್ನು ಐನೂರು ಮಂದಿಯನ್ನಷ್ಟೆ ಗೆಳೆಯರನ್ನಾಗಿ ಪಡೆಯಬಹುದು. ನೀವಿನ್ನೂ ಫೇಸ್‌ಬುಕ್‌ನಲ್ಲಿ ಗೆಳೆಯರಾಗಿಲ್ಲದಿದ್ದರೆ ಖಂಡಿತ ಬಂದು ಗೆಳೆಯರಾಗಿ. ( https://www.facebook.com/profile.php?id=100000684598704 )

ವರ್ತಮಾನ, ವರದಿಗಾರ, ಕಾಲಂ೯ರಂಥ ಬ್ಲಾಗು, ವೆಬ್‌ಸೈಟುಗಳಿಂದ ನಮ್ಮ ಕೆಲಸವೂ ಹಗುರವಾಗಿದೆ. ಪರ್ಯಾಯ ಮಾಧ್ಯಮ ಬಲಶಾಲಿಯಾಗಿ ಬೆಳೆಯಬೇಕಿದೆ. ಅದು ಅಭಿಪ್ರಾಯ ರೂಪಿಸುವಷ್ಟು ಶಕ್ತಿಯನ್ನು ಗಳಿಸಿಕೊಳ್ಳಬೇಕಿದೆ. ದಾರಿಗುಂಟ ನೀವಿರುತ್ತೀರಿ ಎಂಬ ನಂಬುಗೆ ನಮಗಿದೆ. ಪ್ರೀತಿ ಹೀಗೇ ಸದಾ ಇರಲಿ.

7 comments:

  1. ಇದನ್ನು ಓದಿದರೆ ನೀವು ಯಾಕೋ ರಿಟೈರ್ಡ್ ಮೆಂಟ್ ತೆಗೆದುಕೊಳ್ಳೋ ಪ್ಲಾನ್ ಹಾಕಿರೋ ಹಾಗೆ ಕಾಣಿಸುತ್ತಿದೆ. ಬೇರೆಯವರ ಹೆಗಲ ಮೇಲೆ ಜವಾಬ್ದಾರಿ ಹೊರಿಸಿ ಸೈಲೆಂಟಾಗಿಬಿಡೋಣ ಎಂಬ ಆಲೋಚನೆಯೇ? ಅದೆಲ್ಲ ಆಗದು, ಇನ್ನೂ ನೂರು ಬ್ಲಾಗು, ವೆಬ್ ಸೈಟು ಬಂದರೂ ಸಂಪಾದಕೀಯ ಸಂಪಾದಕೀಯನೇ. ಅದು ಮಾತ್ರ ಮುಂದುವರೆಯಲೇಬೇಕು.

    ReplyDelete
  2. ಎಂದೂ ಅತಿರೇಕಕ್ಕೆ ಒಳಗಾಗದ ಸಂಪಾದಕೀಯ ತನ್ನ ದೋಣಿಯ ಪಾಲುದಾರ ಬ್ಲಾಗ್ ಗಳನ್ನು ಗುರುತಿಸಿ,ಸದಭಿರುಚಿಯ ಆಸಕ್ತ ಓದುಗರಿಗೆ ಪರಿಚಯಿಸುವ ವೈಶಾಲ್ಯತೆಯನ್ನು ಮೆರೆದುದಕ್ಕೆ ಅಭಿನಂದನೆಗಳು.
    ಯಾರೇ ಏನೆ ಮಾಡಿದರೂ ಅದು ಸತ್ಯವನ್ನು ಬಹಿರಂಗಗೊಳಿಸುವ. ಒಳಿತನ್ನು ಪಸರಿಸುವಂತಾಗಬೆಕಿದೆ. ಯಾರದೋ ಕಾಲನ್ನೆಳೆಯಲು, ಮತ್ಯಾವುದೋ ಭಟ್ಟಂಗಿತನಕ್ಕೆ ಬೆಂಬಲ ಸೂಚಿಸಲೋ ಬಳಕೆಯಾಗುವ ಕೆಲ ಅನಿಷ್ಟ ಬ್ಲಾಗ್ ಗಳ ನಡುವೆ ಸಾಮಾಜಿಕ ಆಯಾಮಗಳೊಂದಿಗೆ, ಸಕಾಲಿಕ ಪ್ರಜ್ಙೆ ಮೆರೆವ ಇಂತಹ ಬ್ಲಾಗುಗಳನ್ನು ಯಾರೆ ನಡೆಸಲಿ...ನನ್ನಂತಹ ಒಂದಷ್ಟು ಮನಸ್ಸುಗಳು ಅವುಗಳನ್ನ ಬೆಂಬಲಕ್ಕೆ, ಪ್ರೋತ್ಸಾಹಕ್ಕೆ ಹಾತೊರೆಯುತ್ತವೆ.

    ReplyDelete
  3. ಸಂಪಾದಕೀಯದಂತಹ ಸೂಕ್ಷ್ಮ ಕಣ್ಣಿನ ಗಳೆಯರೊಡನ ಇನ್ನಷ್ಟು ಮತ್ತಷ್ಟು ಅಂತಹ ಕಣ್ಣುಗಳು ಬೆಳೆಯುತ್ತಿರುವುದು ಶುಭಸೂಚನೆಯಂತಿದೆ. ಚಾನೆಲ್ ಗೆ ವರ್ಷ ತುಂಬಿದ ಬ್ಲೂಪರ್ ಗಳಲ್ಲಿ ಕೆಕರುಮಕರಾಗಿ ಆಡುತ್ತ ನಿಪ್ಪಲ್ ಚಪ್ಪರಿಸೋ ಚೈಲ್ಡು ಚಿಲ್ಟೂಗಳ ನಡುವೆ ಇಂಥಹವರು ಪ್ರಬುದ್ಧರೆನಿಸುತ್ತಾರೆ. ಇಂಥಹವರ ಸಂಖ್ಯೆ ಇನ್ನಷ್ಟು ಮತ್ತಷ್ಟು ಬೆಳೆಯಲಿ. ಚೈಲ್ಡು ಚಿಲ್ಟೂಗಳು ತೊಟ್ಟಿಲಿಂದ ಎದ್ದುಬಂದು ಇನ್ನಾದರೂ ದೊಡ್ಡವರಾಗಲಿ. ಟಿ.ಕೆ. ದಯಾನಂದ

    ReplyDelete
  4. ಈ ರೀತಿಯ ಬರಹಗಳು ನಿಮ್ಮಿ೦ದ ಇನ್ನೂ ಬರಲಿ. ಆದರೆ ದಯವಿಟ್ಟು ಬಹಿರ೦ಗವಾಗಿ ಬರೆಯಿರಿ. ಅಲ್ಲದೇ ನಿಮ್ಮನ್ನು ಟೀಕಿಸುವವರನ್ನೂ ಪ್ರಕಟಿಸಿ.

    ReplyDelete
  5. ದಿನೇಶ್ ಕುಕ್ಕುಜಡ್ಕSeptember 13, 2011 at 6:00 PM

    ಸದಭಿರುಚಿಯ ತಾಣಗಳು ಎಲ್ಲೇ ಇರಲಿ, ನಾವೂ ಒತ್ತಾಸೆಯಾಗಿರೋಣ. ಮಾಧ್ಯಮ ರಂಗದೆಲ್ಲೆಡೆ ಒಬ್ಬರನ್ನೊಬ್ಬರು ಅನುಮಾನದ ಕಣ್ಣಲ್ಲೆ ನೋಡುವಂತಾದ ಈ ವೈಪರೀತ್ಯದ ಗಳಿಗೆಯಲ್ಲಿ " ಕುಮಾರರೈತ"ರಂಥ ಅಪ್ಪಟ ಚಿಗುರುಗಳ ಸಂಖ್ಯೆ ಸಾವಿರವಾಗಲೆಂದು ಹಾರೈಸೋಣ. ಎಷ್ಟು ಕಲ್ಮಾಡಿ-ಜನಾರೆಡ್ಡಿ-ದರ್ಶನ್ ಗಳೇ ವಿಜೃಂಭಿಸಲಿ, ಸಮುದಾಯವನ್ನು ಎಚ್ಚರಿಸುವ ನಮ್ಮ ಪಾಲಿನ ಕೈಂಕರ್ಯಕ್ಕಾಗಿ ಇರುವೆಡೆಗಳಿಂದಲೇ ಪರಸ್ಪರ "ಇ-ಕೈ" ಜೋಡಿಸೋಣ. ಚಿಂತನೆಗಳನ್ನು ಜೀವಂತವಾಗಿಡೋಣ.ಪರಸ್ಪರ ಪ್ರೀತಿಸೋಣ.
    -ದಿನೇಶ್ ಕುಕ್ಕುಜಡ್ಕ

    ReplyDelete
  6. ದುಡ್ಡಿಗಾಗಿ ಸುದ್ದಿಯ ಜಾಯಮಾನದವರಲ್ಲ ಗೆಳೆಯ ರೈತ, ಸಮಾಜಮುಖಿ ಕಾಳಜಿ, ದಿಟ್ಟ ವರದಿಗಳ ಛಾಪು ಮೂಡಿಸಿ ಎತ್ತರೆತ್ತರೆಕ್ಕೆರಲಿ ಕಾಲ0 9

    ReplyDelete
  7. ಇಂತಹ ಜನಪರ ಕಾಳಜಿಯುಳ್ಳ ಪತ್ರಕರ್ತರ ಹಾಗು ಪತ್ರಿಕೆಗಳ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸೋಣ.

    ReplyDelete