Saturday, February 19, 2011

ಬರೆಯುವವರ ಜಾತಿ, ಬರೆಯದವರ ಜಾತಿ, ಇರೋದು ಎರಡೇ ಜಾತಿ...


ಏನಾದ್ರೂ ಪ್ರಶ್ನೆ ಕೇಳಿ ಅಂತ ಕೇಳಿದೆ ನಿಮ್ಮನ್ನು. ಇದು ಪತ್ರಿಕೆ ತಂಡದ ಸಭೆ. ಏನನ್ನಾದರೂ ಕೇಳಬಹುದಿತ್ತು ನೀವು, ಏನನ್ನೂ ಕೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿ ಇರಬಹುದಾದ ಪ್ರಶ್ನೆಗಳನ್ನು ಊಹಿಸಿ, ನಾನೇ ಎರಡು ಪ್ರಶ್ನೆ ಕೇಳಿಕೊಂಡು ಉತ್ತರ ಕೊಡುತ್ತೇನೆ. 
ನೀವೇನೋ ಬಂದ್ರಿ, ನಿಮ್ಮ ಜತೆ ಸೇರಿಕೊಳ್ಳಲು ಯಾರಾದರೂ ಬರುತ್ತಾರಾ? ಎಂಬುದು ಮೊದಲ ಪ್ರಶ್ನೆ. ಹೌದು, ನಾಲ್ಕು ಮಂದಿ ಬಂದು ಸೇರಿಕೊಳ್ಳುತ್ತಾರೆ-ಇದು ನನ್ನ ಉತ್ತರ. 
ಬರುವವರಿಂದ ನಮಗೆ ಏನಾದರೂ ಸಮಸ್ಯೆನಾ? ಜವಾಬ್ದಾರಿಗಳು ಬದಲಾಗುತ್ತವಾ? ಇದು ಎರಡನೇ ಪ್ರಶ್ನೆ. ಇಲ್ಲ, ಹಾಗೇನೂ ಆಗುವುದಿಲ್ಲ. ಬರುವವರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಯಾರ ಜವಾಬ್ದಾರಿಗಳನ್ನೂ ಬದಲಾಯಿಸುವುದಿಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ- ಇದು ನನ್ನ ಉತ್ತರ. 
ನನಗೆ ಜಾತಿ, ಮತ ಇತ್ಯಾದಿಗಳಿಲ್ಲ. ನನಗೆ ಗೊತ್ತಿರೋದು ಎರಡೇ ಜಾತಿ. ಒಂದು ಬರೆಯುವವರ ಜಾತಿ, ಇನ್ನೊಂದು ಬರೆಯದವರ ಜಾತಿ. ನೀವು ಬರೆಯುವವರ ಜಾತಿನೋ, ಬರೆಯದವರ ಜಾತಿನೋ ಅಂತ ನೀವೇ ತೀರ್ಮಾನ ಮಾಡಿಕೊಳ್ಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಮೂರು ತಿಂಗಳು ಸಮಯ ಕೊಡಿ, ನಾನೇ ಹೇಳುತ್ತೇನೆ. 
ಎಲ್ಲರೂ ಬರೆಯಿರಿ. ನಿಮ್ಮ ಬರವಣಿಗೆ ಸರ್‌ಪ್ರೈಸಿಂಗ್ ಆಗಿರಬೇಕು, ಫ್ರೆಷ್‌ನೆಸ್ ಇರಬೇಕು. ಒಡೆದು ಕಟ್ಟುವ ಕೆಲಸ ನಮ್ಮಿಂದ ಆಗಬೇಕು. ಹಿಂದೆಲ್ಲ ಯಾರಾದರೂ ಸತ್ತರೆ ದೇಹಾಂತ್ಯ ಅಂತನೂ ಬರೆಯುವ ಹಾಗಿರಲಿಲ್ಲ. ಬರೆದರೆ ಏಕೆ ಇಂಥ ಪದ ಪ್ರಯೋಗ ಮಾಡಿದ್ರಿ ಎಂದು ಪ್ರಶ್ನಿಸುತ್ತಿದ್ದರು. ಈಗ ಹಾಗಿಲ್ಲ, ಪ್ರಕಾಶಮಾಯ ಅಂತ ಹೆಡ್ಡಿಂಗು ಕೊಟ್ಟರೆ ಕನಿಷ್ಠ ಐವತ್ತು ಓದುಗರು ಹೆಡ್ಡಿಂಗು ಚೆನ್ನಾಗಿತ್ತು ಅಂತ ಎಸ್‌ಎಂಎಸ್ ಮಾಡ್ತಾರೆ. 
...ಅವರು ಗೊತ್ತಲ್ಲ ನಿಮಗೆ. ಹಿಂದೆ ಅವರು ಪೇಟೆಧಾರಣೆ, ಟ್ರೈನ್ ಟೈಮಿಂಗ್ ಇತ್ಯಾದಿ ಬರೆಯುತ್ತಿದ್ದರು. ಪ್ರತಿಭಾವಂತರು. ಅವಕಾಶ ನೀಡಿದೆ, ಬಳಸಿಕೊಂಡರು. ಅವರು ಬರೆದಷ್ಟು ಅಂಕಣವನ್ನು ಮತ್ತೆ ಯಾರೂ ಬರೆಯಲಿಲ್ಲ. ನಿಮ್ಮಲ್ಲಿ ಯಾರಿಗೆ ಯಾವ ಆಸಕ್ತಿ ಇದೆಯೋ ನನಗೆ ತಿಳಿಸಿ. ಅಂಕಣ ಬರೆಯುವುದಾದರೆ ಬರೆಯಿರಿ. ಎಲ್ಲರಿಗೂ ಇಲ್ಲಿ ಸ್ಪೇಸ್ ಇರುತ್ತದೆ. ಪತ್ರಿಕೆಯಲ್ಲಿ ಕೆಲಸ ಮಾಡುವವರ ಭಾವಚಿತ್ರದ ಜತೆ ಅಂಕಣ, ಲೇಖನ ಬರೆಸಲು ಆರಂಭಿಸಿದ್ದು ನಾನು. ಅದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನಿಮ್ಮಲ್ಲಿ ನನಗಿಂತ ತಿಳಿದವರು ಇರಬಹುದು. ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬದಲಿಸಿ ಕ್ರಾಂತಿ ಮಾಡುವ ಭ್ರಮೆಯೇನು ನನಗಿಲ್ಲ. ನಿಮ್ಮೆಲ್ಲರ ಸಹಕಾರ ನನಗೆ ಬೇಕು. ಎಲ್ಲರೂ ಸೇರಿಯೇ ಪತ್ರಿಕೆಯನ್ನು ಬೆಳೆಸೋಣ. 
ಬರೀತಾ ಹೋಗಿ ನೀವು. ಇಷ್ಟು ಗಂಟೆಗೇ ಬರಬೇಕು, ಇಷ್ಟು ಗಂಟೆಗೇ ಹೋಗಬೇಕು ಎಂಬ ನೌಕರಿ ತರಹ ಪತ್ರಿಕಾವೃತ್ತಿಯಲ್ಲ. ನೀವು ಎಷ್ಟು ಹೊತ್ತು ಹೊರಗಿರುತ್ತೀರೋ, ಅದರಿಂದ ಪತ್ರಿಕೆಗೆ ಅನುಕೂಲವಾಗಬೇಕು. ರಜೆ ಬೇಕು ಅಂದ್ರೆ ತಗೊಳ್ಳಿ, ಒಂದು ವಾರ, ತಿಂಗಳು, ವರ್ಷ... ಎಷ್ಟು ಬೇಕಾದರೂ ತಗೊಳ್ಳಿ. ಒಂದು ವರ್ಷದ ರಜೆ ಆರು ವರ್ಷ ಬರೆಯುವುದಕ್ಕೆ ಸರಕಾಗಬೇಕು. ದೇಶ ಸುತ್ತಿ, ವಿದೇಶಕ್ಕೂ ಹೋಗಿಬನ್ನಿ, ಆದರೆ ನಿಮ್ಮ ಪ್ರವಾಸ, ಅಧ್ಯಯನ ಪತ್ರಿಕೆಗೆ ಎಷ್ಟು ಅನುಕೂಲ ಅನ್ನುವುದಷ್ಟೇ ನನ್ನ ಲೆಕ್ಕಾಚಾರ. 
ಹಿಂದೆ ನಾನು ಯಾರೊಬ್ಬರಿಗೂ ಮೆಮೋ ಕೂಡ ಕೊಟ್ಟವನಲ್ಲ. ಅಂಥದ್ದರಲ್ಲಿ ನನಗೆ ನಂಬಿಕೆಯೂ ಇಲ್ಲ. ಹಾಗಂತ ನಾನು ಪನಿಷ್ ಮಾಡಲ್ಲ ಅಂತಲ್ಲ. ಯಾರಾದ್ರೂ ತಪ್ಪು ಮಾಡಿದರೆ ನನ್ನ ಎದುರು ಅರ್ಧ ಗಂಟೆ ನಿಲ್ಲಿಸಿಕೊಳ್ಳುತ್ತೇನೆ, ಅಷ್ಟು ಶಿಕ್ಷೆ ಸಾಕು ಅಂದುಕೊಳ್ತೀನಿ. 
ತುಂಬಾ ದೊಡ್ಡದೊಡ್ಡವರು ಕುಳಿತು ಹೋದ ಸಂಪಾದಕ ಸ್ಥಾನ ಇದು. ಆ ಜವಾಬ್ದಾರಿ ನನಗಿದೆ, ನಿಭಾಯಿಸುವ ವಿಶ್ವಾಸವೂ ನನಗಿದೆ. 
ಎಲ್ಲರಿಗೂ ಒಳ್ಳೆಯದಾಗಲಿ, ಹೋಗಿಬನ್ನಿ.

                                                                        ****

ಈಗೀಗ ಗಾರ್ಮೆಂಟ್ಸ್ ನೌಕರರಿಗೆ ಇರುವಷ್ಟೂ ಭದ್ರತಾಭಾವ ಪತ್ರಕರ್ತರಿಗಿಲ್ಲ. ದೊಡ್ಡದೊಡ್ಡವರೇ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡುವ ಕಾಲ ಇದು. ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಕಿರಿಯ ಪತ್ರಕರ್ತರಲ್ಲಿ ಅಭದ್ರತಾ ಭಾವ ಮೂಡಿಸಿರುವುದು ಸುಳ್ಳಲ್ಲ. ಹೀಗಿರುವಾಗ ಒಬ್ಬ ಸಂಪಾದಕ ಹೊಸದಾಗಿ ಕೂಡಿಕೊಂಡ ಸಂಸ್ಥೆಯ ಹಳೆಯ ಸಿಬ್ಬಂದಿಯೊಂದಿಗೆ ಇದಕ್ಕಿಂತ ವಿಶ್ವಾಸಪೂರ್ವಕವಾಗಿ ಮಾತನಾಡಲು ಸಾಧ್ಯವೇ? ಹಳೆಯ ಸಿಬ್ಬಂದಿ ಒಳಗಿನ ದುಗುಡ, ಆತಂಕಗಳನ್ನು ತಣಿಸಲು ಇದಕ್ಕಿಂತ ಒಳ್ಳೆಯ ಮಾತುಗಳು ಬೇಕೆ?

ಹೀಗೆಲ್ಲ ತಮ್ಮ ಸಿಬ್ಬಂದಿಯೊಂದಿಗೆ ಮಾತನಾಡಬಲ್ಲ, ನಡೆದುಕೊಳ್ಳಬಲ್ಲ ವಿಶ್ವೇಶ್ವರ ಭಟ್ಟರು ಇಷ್ಟವಾಗುವುದು ಈ ಕಾರಣಗಳಿಗೇ ಅಲ್ಲವೇ?

16 comments:

 1. ಅಂದ್ರೆ ಈ ಸಂಪಾದಕೀಯ ಬರೆಯೋವ್ರು 'ಕನ್ನಡ ಪ್ರಭ'ದಲ್ಲಿದ್ದಾರೇಂತ ಆಯ್ತು...?!

  ReplyDelete
 2. ವಿಶ್ವೇಶ್ವರಭಟ್ಟರ ಬಗ್ಗೆ ಬರೆದಿರುವ ಹೊಗಳಿಕೆ ಚೆನ್ನಾಗಿದೆ.

  ReplyDelete
 3. ಇನ್ನೂ ಎಷ್ಟು ಶೈಲಿಯಲ್ಲಿ ಬರೆಯಲು ಬರುತ್ತೆ ನಿಮಗೆ? ಎಲ್ಲ ಪ್ರಯೋಗ ಮಾಡಿಬಿಡಿ. ತುಂಬ ಚಾಣಾಕ್ಷತನದಿಂದ ಹೇಳುವುದನ್ನು ಹೇಳ್ತೀರಿ. ಹಾವೂ ಸಾಯಲ್ಲ, ಕೋಲೂ ಮುರಿಯಲ್ಲ. ಕೆಲವು ಬಾರಿ ನಿಮ್ಮ ನಿಲುವು ಒಪ್ಪಲು ಸಾಧ್ಯವಾಗದೇ ಇದ್ರೂ ನಿಮ್ಮ ಶೈಲಿ, ಬರವಣಿಗೆಯ ಶಿಲ್ಪ ಇಷ್ಟವಾಗುತ್ತೆ. ಮುಂದುವರೆಯಲಿ.

  ReplyDelete
 4. ಉದಯ ಧರ್ಮಸ್ಥಳFebruary 19, 2011 at 6:32 PM

  ನೀವು ಏನೇ ಹೇಳಿ, ಜಾತಿ ಎಂಬುದು ನಿಜವಾಗಿಯೂ ಅರ್ಥ ಮಾಡಿಕೊಳ್ಳಲು ಹೋಗದ ಸ್ಥಿತಿಯಿದೆ. ನಾನು ನಿಜವಾದ ವಿಚಾರವನ್ನೇ ಹೇಳುತಿದ್ದೇನೆ. ನನ್ನ ಮಾವ ಸುಮಾರು ೪೦ವರ್ಷಗಳ ಹಿಂದೆ ಅತ್ತೆಯನ್ನು ಪ್ರಸವಕ್ಕಾಗಿ ಮಂಗಳೂರಿನ ಒಂದು ಆಸ್ಪತ್ರೆಗೆ ಸೇರಿದ್ದರು. ದಿನ ತುಂಬಿ ಅತ್ತೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರ ಪಕ್ಕದ ಹಾಸಿಗೆಯಲ್ಲಿ ಒಂದು ಮುಸ್ಲಿಂ ಹೆಂಗಸು ಒಂದು ಗಂಡು ಮಗುವಿಗೆ ಜನ್ಮ ನೀಡಿ ಮರಣಿಸಿದಳು. ಆಕೆಯ ಎರಡನೆಯ ಗಂಡನಿಗೆ ಈ ಮಗುವನ್ನು ಸಾಕಲು ಅದ್ಯಾಕೋ ಮನಸಿರಲಿಲ್ಲವೋ ಅಥವಾ ಇನ್ಯಾವುದೋ ಬೇರೆ ಕಾರಣಗಳಿಂದಲೋ ಆತನಿಗೆ ಕೊರಗು ಇದ್ದಂತಿತ್ತು.ಈ ಹೆಂಗಸು ತಲ್ಲಾಕ್ ಪಡೆದು ಮರು ನಿಖ್ಖಾ ಮಾಡಿಕೊಂಡವಳಂತೆ. ಹಾಗಾಗಿ ಈ ಮಗುವಿನ ಬಗ್ಗೆ ಆತನಿಗೆ ಸಮಾಧಾನವಿರಲಿಲ್ಲವಂತೆ.ಆತನಿಗೆ,ಅವಳಲ್ಲಿ ಹುಟ್ಟಿದ ಈ ಗಂಡು ಮಗುವಿನ ಬಗ್ಗೆ ಅದೇನೋ ಸಂದೇಹ ಇತ್ತಂತೆ, ಈ ವಿಚಾರ ಸತ್ತ ಹೆಂಗಸಿನ ಸ್ನೇಹಿತೆಯ ಬಳಿ ಆಕೆ ಹೇಳಿಕೊಂಡಿದ್ದಳಂತೆ.ಹಾಗಾಗಿ ಆಕೆಯ ಕೊನೆಯ ಘಳಿಗೆಯಲ್ಲಿ ಈ ಮಗುವನ್ನು ನನ್ನ ಅತ್ತೆಯ ಮಡಿಲಿಗೆ ಹಾಕಿ ಆಕೆ ಕೊನೆಯುಸಿರು ಎಳೆದಿದ್ದಳು. ನಂತರ ಈ ನನ್ನ ಮಾವನ ಕುಟುಂಬ ಮಂಗಳೂರಿನಿಂದ ಘಟ್ಟ ಹತ್ತಿ ಹೊಸನಗರದ ಬಳಿ ಒಂದು ಹೋಟೆಲ್ ಮಾಡಿಕೊಂಡು ಬದುಕು ಸಾಗಿಸಿದ್ದರು. ಅಲ್ಲಿಂದ ನಂತರ ಬಹಳ ಕಷ್ಟದಿಂದಲೇ ಇದ್ದಾಗಲ್ಲೂ ಕೂಡಾ ಈ ಸಂಗತಿಯನ್ನು ಸ್ವಂತದ ಒಂದಿಬ್ಬರನ್ನು ಬಿಟ್ಟರೆ ಬೇರ್ಯಾರಿಗೂ ಈ ವಿಚಾರ ಗೊತ್ತಾಗಲೇ ಇಲ್ಲ. ಮಾವ ಸಾಲಾಗಿ ಹತ್ತು ಹೆತ್ತರೂ ಈ ಹುಡುಗನೇ ಮನೆಯ ದೊಡ್ಡ ಮಗನಾಗಿ ಇದ್ದಾನೆ. ಈಗ ಆತನಿಗೆ ನಲ್ವತ್ತು ದಾಟಿದೆ. ಮದುವೆಯಾಗಿದೆ, ಮಕ್ಕಳಾಗಿವೆ. ಆತನ ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ. ಆತ ಈಗಲೂ ಮಾವನ ಕುಟುಂಬದಲ್ಲಿ ಹಿರಿಯನಾಗಿಯೇ ಇದ್ದಾನೆ. ಬಹಳ ಕಷ್ಟದಿಂದ ಉಳಿದ ತಮ್ಮ ತಂಗಿಯರನ್ನು ಬೆಳೆಸಿ ಎಲ್ಲರನ್ನೂ ದಾರಿ ತೋರಿಸಿದ್ದಾನೆ. ಅವನಿಗೆ ಯಾವಾಗಲೋ ಒಮ್ಮೆ ಈ ವಿಚಾರದಲ್ಲಿ ಹೇಗೋ ಈ ವಿಚಾರದ ವಾಸ್ನೆ ಬಂದಿತ್ತೆಂದು ಅತ್ತೆ ನನಗೆ ಹೇಳಿದ್ದಿದೆ. ಆದರೆ ಈ ಸಂಬಂಧಗಳಿಂದ ಆಚೆ ಉಳಿದಿದ್ದ ನನಗೆ ಅದು ಬೇಕಾಗಿರಲಿಲ್ಲ. ಆತ ನನ್ನ ಜತೆಗೂ ಕೆಲವು ವರ್ಷ ಇದ್ದ. ಬಹಳ ಪ್ರಾಮಾಣಿಕನಾಗಿ ದುಡಿದಿದ್ದ. ಅವನ ಕಷ್ಟದಲ್ಲಿ ನಾನು, ನನ್ನ ಕಷ್ಟದಲ್ಲಿ ಅವನೂ ಜತೆಗಿದ್ದೆವು.
  ನನಗೆ ಆಗಲೂ ಈಗಾಲೂ ಮುಂದೆಯೂ ಅನಿಸುವುದು. "ಮನುಜರೆಲ್ಲ ಒಂದೆ ಕುಲ, ಮನುಜ ಮತವೊಂದೆ ಮತ" ಬರೆಯುವವರೋ, ಓದುವವರೋ ಮನುಷ್ಯರು ಮಾತ್ರ. ಪ್ರಕೃತಿಯಲ್ಲಿ ಜಾತಿ,ವರ್ಗಗಳನ್ನು ಗುರುತಿಸಲು ಅದರದ್ದೇ ಆದ ವಿಧಾನಗಳಿರುವಂತೆ ನಮ್ಮಲ್ಲೂ ಇದ್ದಾವೆ. ಅತಿರೇಕವಾಗದೆ ಇರುವ ಎಲ್ಲವೂ ಸಹ್ಯ, ಹೊರತಾದರೆ ಅಸಹ್ಯ.

  ReplyDelete
 5. Vijaya Karnataka hugely disappointed . They thought two dozen will follow VBhat. They are in cost cutting mode

  ReplyDelete
 6. baravanigeyannu jaatige holisiruvudu?eshtu sari? ee jaati annuva bhavane yaake? jaatige yake holisidri bareyuva jaati mattu bereyada jaati artha aagilla....naavu manushyaru ashte...

  ReplyDelete
 7. (ಪ್ರಾಯಶಃ ) ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ ಹಾಗಂತ ನಾನು ಪನಿಷ್ ಮಾಡಲ್ಲ ಅಂತೆಲ್ಲ ಹಿಂದೆ ನಾನು ಯಾರೊಬ್ಬರಿಗೂ ಮೆಮೋ ಕೂಡ ಕೊಟ್ಟವನಲ್ಲ , ನಾನೇ ಹೇಳುತ್ತೇನೆ ನಿಮ್ಮಿಂದ ಸಾಧ್ಯವಾಗದಿದ್ದರೆ ಮೂರು ತಿಂಗಳು ಸಮಯ ಕೊಡಿ ಅಂಥದ್ದರಲ್ಲಿ ನನಗೆ ನಂಬಿಕೆಯೂ ಇಲ್ಲ ಎಂಬ ಹೇಳಿಕೆಯೋ ಏನೋ !

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ReplyDelete
 8. ಬರೆಯುವವರ ಜಾತಿ, ಬರೆಯದವರ ಜಾತಿ...! ಏನನ್ನು ಬರೆಯುವವರು, ಮತ್ತು ಏನನ್ನು ಬರೆಯದವರು ಎಂಬ ಪ್ರಶ್ನೆ ಕೂಡ ಪತ್ರಿಕೆಗೆ ಮುಖ್ಯವಾಗುತ್ತದೆ....ಅದು ಜಾತಿಯನ್ನು ಪತ್ರಿಕೆಯಲ್ಲಿ ತಂದು ಹಾಕೆ ಹಾಕುತ್ತದೆ.-raghu

  ReplyDelete
 9. ಭಟ್ಟರ ಜಾಣ್ಮೆ ಮೆಚ್ಚಬೇಕಾದ್ದೆ....ಬ್

  ReplyDelete
 10. @ ರಶ್ಮಿ ಆಳ್ವ,
  ಇಲ್ಲಿ ಹೇಳಿರುವುದು ಪತ್ರಕರ್ತರಿಗೆ ಮಾತ್ರ ಅನ್ವಯಿಸುವ ಮಾತು. ಪತ್ರಕರ್ತರಲ್ಲಿ ಈಗೀಗ ಬರೆಯುವ ಅಭ್ಯಾಸ ಇಟ್ಟುಕೊಳ್ಳದ ಸೋಮಾರಿಗಳೂ ಇದ್ದಾರೆ. ಕೆಲವರಿಗೆ ಒಂದು ವಾಕ್ಯ ಕೂಡ ತಪ್ಪಿಲ್ಲದಂತೆ ಬರೆಯಲು ಬರುವುದಿಲ್ಲ. ಆದರೂ ಹೇಗೋ ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಸಂಪಾದಕರು ತಮ್ಮ ಸಿಬ್ಬಂದಿಗೆ ಹೇಳಿರುವ ಎರಡು ಜಾತಿಗಳನ್ನು ಈ ಅರ್ಥದಲ್ಲಿ ಗ್ರಹಿಸಬೇಕು.

  ReplyDelete
 11. ಭಟ್ಟರ ಒಡ್ಡೋಲಗದಲ್ಲಿ ಸಂಪಾದಕೀಯವೂ ಇದೆಯೇನೋ ಎಂಬ ಭಾವನೆ ಮೂಡಿಸುವ ಬರಹ ಇದು. ಕಪ್ರದ ಸಂಪಾದಕೀಯ ಸಭೆಯಲ್ಲಿ ಆಡಿದ ಮಾತುಗಳು ಫುಲ್ಸ್ಟಾಪ್ ಕೂಡಾ ಮಿಸ್ಸಾಗದಂತೆ ಬರೆಯುವ ನಿಮ್ಮ ನಿಖರತೆ/ಸ್ಪಷ್ಟತೆ/ಗ್ರಹಿಕೆಗೆ ಮೆಚ್ಚಬೇಕು. ಇನ್ನು ಭಟ್ಟರು ಗುರುತಿಸಿರುವ ಜಾತಿಗಳ ಬಗೆಗೆ. ವಿಕದಲ್ಲಿ ಸಿಬ್ಬಂದಿಗಳ ಸಂಖ್ಯೆ ನೂರಾರು ಇದ್ದರೂ ಅಂಕಣ ಬರೆಯುವ 'ಅದೃಷ್ಟ' ಒದಗಿದ್ದು ನಾಲ್ಕೈದು ಮಂದಿಗೆ! ಅಂದರೆ, ಭಟ್ಟರ ಆಡಳಿತದಲ್ಲೇ ವಿಕದಲ್ಲಿ ಬರೆಯದ ಜಾತಿಗೆ ಸೇರಿದ ದೊಡ್ಡ ಗುಂಪೇ ಇತ್ತು. ಅಥವಾ ಹೀಗೂ ಅರ್ಥ ಮಾಡಿಕೊಳ್ಳಬಹುದು: 'ಬರೆಯುವ ಜಾತಿಗೆ' ನಾಲ್ಕು ಜನರು ನನ್ನೊಂದಿಗೆ ಬಂದಿದ್ದಾರೆ. ಮೂರು ತಿಂಗಳ ನಂತರ ಅವರನ್ನು ಆಯಕಟ್ಟಿನ ಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕು. ಅದಕ್ಕೆ ಈಗ ಇರುವವರು ಸಿದ್ಧರಾಗಿ! ಏಕೆಂದರೆ, ಭಟ್ಟರು ಕಪ್ರದಲ್ಲಿ ಈಗ 'ಇವರು ಬರೆಯದ ಜಾತಿಯವರು' ಎಂದು ಫಮರ್ಾನು ಹೊರಡಿಸಿದರೆ ಮುಗಿಯಿತು.
  'ನಿಜ ಸಾ.. ಹೂಂ ಸಾ. ಯೂ ಆರ್ ರೈಟ್ ಸಾ' ಎಂದು ಹೇಳುವ ಭಟ್ಟಂಗಿಗಳ ಸಂಖ್ಯೆಯೂ ದೊಡ್ಡದಿರುತ್ತದೆ. ದೊಡ್ಡವರು ಅಂದರೆ ದೊಡ್ಡ ಸ್ಥಾನವನ್ನು ಅಲಂಕರಿಸಿದವರು ಶಿಷ್ಯ ಕೋಟಿಯೊಂದಿಗೆ ಗುಳೆ ಹೊರಟಾಗ ಎದುರಾಗುವ ಸಮಸ್ಯೆಗಳೇ ಇವು. ಒಟ್ಟಿನಲ್ಲಿ ಮುಂದಿನ ದಿನಗಳು ಬದಲಾವಣೆಯ ದಿನಗಳು

  ReplyDelete
 12. ಚೆನ್ನಾಗಿ ಮಾತನಾಡಿದರೆ ಹಿ೦ದಿನ ಜಾತಕ ಎಲ್ಲಾ ಮರೆತು ಹೋಗುತ್ತದೆ....ಮಾತನಾಡಿದವರು ಇಷ್ಟವಾಗಿ ಬಿಡುತ್ತಾರೆ. ಚರಿತ್ರೆಯುದ್ದಕ್ಕೂ ಕೊನೆಗೂ ಗೆದ್ದದ್ದು ಮಾತನಾಡುವವರೆ.

  ReplyDelete
 13. 'ನಿಜ ಸಾ.. ಹೂಂ ಸಾ. ಯೂ ಆರ್ ರೈಟ್ ಸಾ' ಎಂದು ಹೇಳುವ ಭಟ್ಟಂಗಿಗಳು 'ಕನ್ನಡ ಪ್ರಭ'ದಲ್ಲಿ ಇದ್ದಾರೆ. . .ಭಟ್ಟರ ಜಾಣ್ಮೆ ?

  ReplyDelete
 14. ಭಟ್ಟರ ಮಾತಿಗೆ ಸಂಪಾದಕೀಯವೂ ಮರುಳಾಯಿತ ಅಥವ ಅವರ ಒಡ್ಡೋಲಗದಲ್ಲಿ ಸಂಪಾದಕೀಯದ ಸದಸ್ಯರು ಇರಬಹುದ ಎಂಬ ಅನುಮಾನವನ್ನು ಈ ಲೇಖನ ಹುಟ್ಟು ಹಾಕಿದೆ. ಅನಾಮಧೇಯರು ಹೇಳಿದಂತೆ ಕನಾರ್ಟಕದಲ್ಲಿ ಬರೆಯುವ ಅವಕಾಶ ಪಡೆದವರು ಮೂರು ಮತ್ತೊಂದು ಮಂದಿ. ಅವರ ಪುಸ್ತಕ ತರ್ಜ್ಯಮೆ ಮಾಡಿದವರೆಲ್ಲ ಬರಹಗಾರರು ಅನ್ನಿಸಿಕೊಂಡರು. ಏನೇ ಆಶ್ವಾಸನೆ ಕೊಟ್ಟರೂ ಇಂಕ್ರಿಮೆಂಟ್‌ ಹೆಚ್ಚು ಸಿಗುವುದು ತರ್ಜ್ಯಮೆ ಪತ್ರಕರ್ತರಿಗೆ. ವಿಕದಲ್ಲಿ ಮೊನ್ನೆ, ಮೊನ್ನೆ ಬಂದವರಿಗೆ ಹಳಬರಿಗಿಂತ ಹೆಚ್ಚು ಸಂಬಳ. ಕೀ ಮಾಡುವವರಿಗೆ ಮುಖ್ಯ ಉಪಸಂಪಾದಕರಿಗಿಂತ ಹೆಚ್ಚು ಇಂಕ್ರಿಮೆಂಟು. ಸ್ಥಿತಿ ಹೀಗಿರುವಾಗ ಭಟ್ಟರನ್ನು ಹೇಗೆ ನಂಬಬೇಕು. ಅವರ ಮಾತು ಕಿವಿ ಮೇಲೆ ಹೂವೇ ಸರಿ. ಅದನ್ನು ಸಂಪಾದಕೀಯ ಮುಡಿದುಕೊಂಡಿದ್ದು ವಿಷಾದದ ಸಂಗತಿ

  ReplyDelete
 15. I think this leadership quality of bhat sir had made v.k as no.1 kannada news paper...hope he will do the kannada prabha as no.1 soon..

  ReplyDelete