Thursday, February 10, 2011

೨೫೦ ರೂ. ಕೊಡಿಸಿ: ಪ್ರವಾ ಬ್ಯೂರೋ ಮುಖ್ಯಸ್ಥರ ಆರ್ತನಾದ


 ನನ್ನ ಕಾರಿನ ಆಂಟೆನಾವನ್ನು ಯಾರೋ ಕಿಡಿಗೇಡಿಗಳು ಮುರಿದಿದ್ದಾರೆ. ನನಗೆ ನಮ್ಮ ಪತ್ರಿಕೆಯ ಸರ್ಕ್ಯುಲೇಷನ್ ವಿಭಾಗದಲ್ಲಿ ಕೆಲಸ ಮಾಡುವ ಒಬ್ಬ ಹುಡುಗನ ಮೇಲೆ ಡೌಟು. ಅವನನ್ನು ಕರೆಸಿ ವಿಚಾರಣೆ ನಡೆಸಿ, ನನಗೆ ಆಗಿರುವ ೨೫೦ ರೂ. ನಷ್ಟವನ್ನು ತುಂಬಿಸಿಕೊಡಿ.

ಹೀಗಂತ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುವುದು ಪ್ರಜಾವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಬಿ.ವಿ.ಮಹೇಶ್ಚಂದ್ರ. ಕೊಟ್ಟ ದೂರು ಹಾಗೂ ಹೀಗೂ ಹೊರಜಗತ್ತಿಗೆ ಗೊತ್ತಾಗಿ ಕರಾವಳಿಯ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ.

ಕದ್ರಿ ಠಾಣೆಯಲ್ಲಿ ಮಹೇಶ್ಚಂದ್ರ ದಾಖಲಿಸಿರುವ ದೂರಿನ ಪ್ರಕಾರ ಘಟನೆ ನಡೆದಿರುವುದು ಜನವರಿ ೨೨ರಂದು. ಮಹೇಶ್ಚಂದ್ರ ಅವರ ನೀಲಿ ಬಣ್ಣದ ಆಲ್ಟೋ ಕಾರು (ಕೆ.ಎ.೧೩- ಎಂ ೪೮೦೪) ಪ್ರಜಾವಾಣಿ ಕಚೇರಿಯ ಮುಂದೆ ನಿಲ್ಲಿಸಲಾಗಿತ್ತು. ಸಂಜೆ ಹೊತ್ತಿಗೆ ಕಾರಿನ ರೇಡಿಯೋ ಆಂಟೆನಾವನ್ನು ಯಾರೋ ಕಿಡಿಗೇಡಿಗಳು ಮುರಿದಿದ್ದರು.

ಈ ಬಗ್ಗೆ ಮಹೇಶ್ಚಂದ್ರ ಶಾನೆ ತಲೆಕೆಡಿಸಿಕೊಂಡು ತನಿಖೆ ನಡೆಸಿದರು. ಕಚೇರಿ ಪಕ್ಕದ ಹೊಟೇಲ್‌ನಲ್ಲಿ ಕೆಲಸ ಮಾಡುವ ಹುಡುಗರು ಈ ಕೆಲಸ ಮಾಡಿರಬಹುದು ಎಂಬುದು ಅವರಿಗೆ ಹೊಳೆದ ಮೊದಲ ಅನುಮಾನ. ಆದರೆ ಅವರೇ ಅದು ನಿರಾಧಾರ ಎಂಬ ತೀರ್ಮಾನಕ್ಕೆ ಬರುತ್ತಾರೆ.

ನಂತರ ಮಹೇಶ್ಚಂದ್ರ ಅವರ ನೆನಪಿಗೆ ಬರುವುದು ಸರ್ಕ್ಯುಲೇಷನ್ ವಿಭಾಗದಲ್ಲಿ ನಡೆದ ಕೋಳಿಕದನ. ಅಲ್ಲಿ ಹಿರಿಯ ವ್ಯವಸ್ಥಾಪಕ ಕೃಷ್ಣ ನಾಯರಿಗೂ ಎಕ್ಸಿಕ್ಯೂಟಿವ್ ಉದಯಕುಮಾರ್ ಎಂಬುವವರಿಗೂ ಜಟಾಪಟಿ. ಉದಯಕುಮಾರ್ ಪರವಾಗಿ ಅವರ ಕೈ ಕೆಳಗೆ  ಕೆಲಸ ಮಾಡುವ ಅಜಯ್ ಎಂಬ ಹುಡುಗ ನಿಂತಿದ್ದ. ಕೃಷ್ಣ ನಾಯರಿಗೂ ಬೆದರಿಕೆ ಒಡ್ಡಿದ್ದನಂತೆ. ಇದೇ ಹಿನ್ನೆಲೆಯಲ್ಲಿ ತಮ್ಮ ಕಾರಿನ ಆಂಟೆನಾ ಮುರಿದದ್ದೂ ಅಜಯ ಎಂಬ ಈ ಹುಡುಗನೇ ಎಂಬ ತೀರ್ಮಾನಕ್ಕೆ ಮಹೇಶ್ಚಂದ್ರ ಬಂದಿದ್ದಾರೆ.

ಓಡಿ ಬಂದು ಕದ್ರಿ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ದಾಖಲಾಗಿದೆ. ಪೊಲೀಸರು ಅಜಯ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಏನಪ್ಪಾ, ಆಂಟೆನಾ ಮುರಿದಿದ್ದು ನೀನಾ ಎಂದು ಪ್ರಶ್ನಿಸಿದ್ದಾರೆ. ಆ ಹುಡುಗ ಆಣೆ, ಭಾಷೆ ಮಾಡಿ, ಸ್ವಾಮಿ ಈ ಕೃತ್ಯಮಾಡಿದ್ದು ನಾನಲ್ಲ, ಒಂದು ವೇಳೆ ನಾನೇ ಮಾಡಿದ್ದು ಎಂದಾದರೆ ಬನ್ನಿ ಶರವು ಮಹಾಗಣಪತಿ ದೇವಸ್ಥಾನಕ್ಕೆ, ಅಲ್ಲಿ ೨೫೦ ರೂಪಾಯಿ ಇಡುತ್ತೇನೆ, ತೆಗೆದುಕೊಂಡು ಹೋಗಲು ಹೇಳಿ ಅವರಿಗೆ ಎಂದು ಸವಾಲು ಒಡ್ಡಿದ್ದಾನೆ.

ಮಹೇಶ್ಚಂದ್ರ ಶರಾವು ಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ೨೫೦ ರೂ. ಪರಿಹಾರ ತೆಗೆದುಕೊಂಡು ಬರುತ್ತಾರಾ ಅಥವಾ ಧರ್ಮಸ್ಥಳದ ಅಣ್ಣಪ್ಪಸ್ವಾಮಿಯ ಬಳಿ ಹೋಗಿ ಆಂಟೆನಾ ಮುರಿದವರ ಕೈ ಮುರಿದುಹೋಗಲಿ ಎಂದು ಬೇಡಿಕೊಂಡು ಕಾಣಿಕೆ ಸಲ್ಲಿಸಿ ಬರುತ್ತಾರಾ? ಅವರೇ ಹೇಳಬೇಕು.

ಹೇಳಿ ಕೇಳಿ, ಮಹೇಶ್ಚಂದ್ರ ಪ್ರಜಾವಾಣಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥ. ಆ ಹುದ್ದೆಗೊಂದು ಘನತೆಯಿದೆ. ಒಂದು ವೇಳೆ ಅಜಯನೇ ಈ ಕೆಲಸ ಮಾಡಿದ್ದರೂ ಆತನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಅವರಿಗೆ ಎಲ್ಲ ಅವಕಾಶ ಇತ್ತು. ಇಂತಹ ಘಟನೆಗಳು ನಡೆದಾಗ ಆಂತರಿಕವಾಗಿ ವಿಚಾರಣೆ ನಡೆಸುವ ಪರಿಪಾಠ ಎಲ್ಲ ಕಚೇರಿಗಳಲ್ಲೂ ಇರುತ್ತದೆ. ಅದಕ್ಕೊಂದು ವ್ಯವಸ್ಥೆಯೂ ಇರುತ್ತದೆ. ಆದರೆ ೨೫೦ ರೂ. ಪರಿಹಾರ ಕೊಡಿಸಿ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದು ಮಂಗಳೂರಿನ ಮಾಧ್ಯಮ ವಲಯದಲ್ಲಿ ಖಂಡಾಪಟ್ಟೆ ಸುದ್ದಿಯಾಗಿ, ಕೆಲವರು ಮುಸಿಮುಸಿ ನಗುತ್ತಿದ್ದರೆ, ಮತ್ತೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಅಂದ ಹಾಗೆ ಮಹೇಶ್ಚಂದ್ರ ಈ ಹಿಂದೆ ವಿಜಯ ಕರ್ನಾಟಕದಲ್ಲಿ ನಂತರ ಕಸ್ತೂರಿಯಲ್ಲಿ ಕೆಲಸ ಮಾಡಿದ್ದರು. ಇದೀಗ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

4 comments:

  1. ಅದ್ಯಾವ ಆಧಾರದ ಮೇಲೆ ಈ ವ್ಯಕ್ತಿಗೆ ಪ್ರಜಾವಾಣಿ ಮಂಗಳೂರು ಬ್ಯೂರೊ ಚೀಫ್ ಕೆಲಸ ನೀಡಿದ್ದಾರೋ? ನನಗನಿಸುತ್ತದೆ ಆ ಕುರ್ಚಿಯಲ್ಲಿಯೇ ಏನೋ ಸಮಸ್ಯೆ ಇದೆ. ಈ ಹಿಂದೆ ಇದೇ ಕುರ್ಚಿ ಅಲಂಕರಿಸಿದ್ದ ಒಬ್ಬರು ಭ್ರಷ್ಟಾಚಾರಕ್ಕಾಗಿ ಮಂಗಳೂರು ಮಾಧ್ಯಮ ವಲಯದಲ್ಲಿ ಸುದ್ದಿ ಮಾಡಿದ್ದರೆ, ಮತ್ತೆ ಬಂದ ಇನ್ನೊಬ್ಬರು ತನ್ನ ಮೇಲ್ಜಾತಿ ಪ್ರೇಮ ಮತ್ತು ಸಂಘ ಪರಿವಾರದ ಪರ ಹೊಂದಿದ್ದ ತೀವ್ರ ಒಲವಿನಿಂದಾಗಿ ಬೇಗನೇ ಈ ಕುರ್ಚಿಯನ್ನು ಕಳೆದುಕೊಂಡರು. ಇವರಲ್ಲಿ ಬಾಲಕೃಷ್ಣ ಹೊಸಂಗಡಿ ಸ್ವಲ್ಪ ಪರವಾಗಿಲ್ಲ ಎನಿಸಿಕೊಂಡಿದ್ದರು.

    ReplyDelete
  2. ಪಾಪ...!
    ಇದಕ್ಕಿಂತ ಹೆಚ್ಚಿಗೆ ಹೇಳುವುದೂ ಪಾಪವೆ...!!

    ReplyDelete
  3. ನಾಡಿನ ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಬಂದರು ನಗರದ ಕಡಲದಂಡೆಯ ಸೀಮಾರೇಖೆ ಮೀರಿ ವಿದೇಶದ ಕನ್ನಡಿಗರ ಗಮನ ಸೆಳೆದ ಪ್ರಬಲ (ಕೇವಲ ಇನ್ನೂರ ಐವತ್ತು ರುಪಾಯಿ ಮೂಲ್ಯದ ) ತುಂಡಾದ ಕಾರಿನ ಆಂಟೆನಾ ವೃತಾಂತ.!

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  4. ಇದಕಿಂತ ನಾಚಿಕೆಗೇಡು ಕೆಲ್ಸ ಇಲ್ಲ ...............

    ReplyDelete