ಸಜ್ಜನಿಕೆಯ ನಿರ್ಗಮನ: ಎಂ.ಪಿ. ಪ್ರಕಾಶ್ ನಿಧನದ ಕುರಿತು ಹೊಸದಿಗಂತದ ಮುಖಪುಟದ ಹೆಡ್ಡಿಂಗ್ ಇದು. ಇವತ್ತಿನ ರಾಜಕಾರಣ ಸಜ್ಜನಿಕೆಯನ್ನು ಮರೆತುಹೋಗಿದೆ. ಹೊಡಿ, ಬಡಿ, ಕತ್ತರಿಸು ಶೈಲಿಯ ರಾಜಕೀಯ ಮುಖಂಡರೇ ಮುನ್ನೆಲೆಗೆ ಬಂದಿದ್ದಾರೆ. ಪ್ರಕಾಶ್ ಸಜ್ಜನಿಕೆಯ ರಾಜಕಾರಣದ ಕೊನೆಯ ಕೊಂಡಿ. ಹೀಗಾಗಿ ಹೊಸದಿಗಂತ ಕೊಟ್ಟ ತಲೆಬರಹ ಅರ್ಥಪೂರ್ಣವಾಗಿತ್ತು.
ಹೊಸದಿಗಂತದ ನಾಲ್ಕು ಪುಟಗಳಲ್ಲಿ ಎಂ.ಪಿ.ಪ್ರಕಾಶ್ ಕುರಿತ ಸುದ್ದಿಗಳು ಹರಡಿಕೊಂಡಿವೆ. ಕವರೇಜು ಚೆನ್ನಾಗಿದೆ. ಪತ್ರಿಕೆಯ ಘೋಷಿತ ನಿಲುವಿನಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲದಿದ್ದರೂ ರೀಲಾಂಚ್ ಆದ ಮೇಲೆ ಪತ್ರಿಕೆಯ ವಿನ್ಯಾಸ ಸೊಗಸಾಗಿದೆ.
ಎಂ.ಪಿ.ಪ್ರಕಾಶ್ ನಿಧನದ ಕುರಿತಾದ ಸುದ್ದಿಯಲ್ಲಿ ಎಲ್ಲ ಪತ್ರಿಕೆಗಳನ್ನು ಮೀರಿಸಿರುವುದು ಕನ್ನಡಪ್ರಭ. ವಿಶ್ವೇಶ್ವರ ಭಟ್ಟರ ಕುಸುರಿ ಕೆಲಸ ಪ್ರಕಾಶಮಾಯ ಎಂಬ ಹೆಡ್ಡಿಂಗಿನಲ್ಲೇ ಗೋಚರಿಸುತ್ತದೆ. ವಿಶ್ವೇಶ್ವರ ಭಟ್ಟರು ತಮ್ಮ ಹೊಸ ಇನ್ನಿಂಗ್ಸ್‌ನ್ನು ಭರ್ಜರಿಯಾಗಿಯೇ ಆರಂಭಿಸಿರುವುದಕ್ಕೆ ಒಳಪುಟಗಳಲ್ಲೂ ಸಾಕ್ಷಿ ದೊರೆಯುತ್ತದೆ. ಅದಕ್ಕೆ ತಕ್ಕ ಬೆಂಬಲವೂ ಅವರ ಹೊಸ ಒಡನಾಡಿಗಳಿಂದ ದೊರೆತಿರುವುದು ಎದ್ದು ಕಾಣುತ್ತದೆ.
ಪ್ರಜಾವಾಣಿಯಲ್ಲಿ ಎಂ.ಪಿ.ಪ್ರಕಾಶ್ ತೀರಿಕೊಂಡ ಸುದ್ದಿ ಮುಖಪುಟದಲ್ಲಿ ಪ್ರಕಟವಾಗೇ ಇಲ್ಲ. ಬದಲಾಗಿ ಪ್ರೇಮ್ ಕುಮಾರ್ ಹರಿಯಬ್ಬೆ ಕಟ್ಟಿಕೊಟ್ಟಿರುವ ವ್ಯಕ್ತಿ ಚಿತ್ರ ಕಾಣಿಸಿಕೊಂಡಿದೆ. ಬಹುಶಃ ಬೆಳಿಗ್ಗೆಯಿಂದ ನ್ಯೂಸ್ ಚಾನೆಲ್‌ಗಳಲ್ಲಿ ಸುದ್ದಿ ಹರಿದಾಡಿದ ಪರಿಣಾಮ ನಿಧನದ ಸುದ್ದಿ ಪ್ರಜಾವಾಣಿಗೆ ಹಳೆಯ ಸುದ್ದಿ ಎನಿಸಿರಬಹುದು. ಕವರೇಜ್‌ನಲ್ಲೂ ಅಂಥ ವಿಶೇಷಗಳೇನೂ ಇಲ್ಲ. ಹರಿಯಬ್ಬೆ ಲೇಖನವೊಂದೇ ಹೈಲೈಟ್, ಉಳಿದ ಸುದ್ದಿ-ಬರಹಗಳು ಪ್ರಕಾಶ್‌ಗೆ ನ್ಯಾಯ ಕೊಟ್ಟಂತೆ ಕಾಣುವುದಿಲ್ಲ.
ವಿಜಯ ಕರ್ನಾಟಕ ಒಂದು ಪೂರ್ಣ ಪುಟವನ್ನು ಪ್ರಕಾಶ್ ಕುರಿತ ಸುದ್ದಿ ಬರಹಗಳಿಗೆ ಮೀಸಲಿಟ್ಟಿದೆ. ಆದರೂ ಕನ್ನಡಪ್ರಭ-ಹೊಸದಿಗಂತಗಳಿಗೆ ಹೋಲಿಸಿದರೆ ಅಂಥ ವಿಶೇಷಗಳೇನೂ ಇಲ್ಲ. ಸಜ್ಜನ ನಿರ್ಗಮನ ಎಂಬ ಹೆಡ್ಡಿಂಗ್‌ನೊಂದಿಗೆ ಕಾಣಿಸಿಕೊಂಡಿರುವ ಉದಯವಾಣಿ ಒಂದು ಪುಟವನ್ನು ಪ್ರಕಾಶ್ ಕುರಿತ ಸುದ್ದಿಗಳಿಗೆ ಮೀಸಲಿಟ್ಟಿವೆ. ಅಲ್ಲೂ ಸಹ ಅಂತಹ ವಿಶೇಷ ಪ್ರಯತ್ನಗಳೇನೂ ಕಾಣಿಸುವುದಿಲ್ಲ.
ಇಂಟರ್‌ನೆಟ್‌ನಲ್ಲಿ ಎಂ.ಪಿ.ಪ್ರಕಾಶ್ ಕುರಿತು ಸುದ್ದಿ-ಚಿತ್ರಗಳು ಗಮನ ಸೆಳೆದವು. ಚುರುಮುರಿ ಎರಡು ಪ್ರತ್ಯೇಕ ಲೇಖನಗಳನ್ನು ಪ್ರಕಟಿಸಿತು. ಅವಧಿಯ ಚಿತ್ರ ನಮನ ಚೆನ್ನಾಗಿತ್ತು. ಎನ್‌ಎಎಂ ಇಸ್ಮಾಯಿಲ್ ಎಂದೋ ಬರೆದ ಲೇಖನವನ್ನು ಪ್ರಕಟಿಸಿದ ಕೆಂಡಸಂಪಿಗೆ ಸಮಯಪ್ರಜ್ಞೆಯನ್ನು ಮರೆಯಿತು, ನಂತರ ತಿದ್ದಿಕೊಂಡು ಕುಂವೀ, ರಂಜಾನ್ ದರ್ಗಾ ಬರೆದ ಲೇಖನಗಳನ್ನು ಪ್ರಕಟಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿತು.
ಹಿಂದೆಲ್ಲ ನಿಧನದ ಸುದ್ದಿಗಳಿಗೆ ಪತ್ರಿಕೆಗಳಲ್ಲಿ ಅಂಥ ಮಹತ್ವವೇನೂ ಇರುತ್ತಿರಲಿಲ್ಲ. ಆದರೆ ಈಗ ಪೈಪೋಟಿ ಕಾಣಿಸಿಕೊಂಡಿದೆ. ಡಾ. ರಾಜಕುಮಾರ್ ತೀರಿಕೊಂಡಾಗ ಕನ್ನಡಪ್ರಭ (ಎಚ್.ಆರ್.ರಂಗನಾಥ್ ಸಂಪಾದಕರಾಗಿದ್ದಾಗ) ಇಡೀ ಪತ್ರಿಕೆಯಲ್ಲಿ ಆ ಸುದ್ದಿಯ ಹೊರತಾಗಿ ಬೇರೇನನ್ನೂ ಪ್ರಕಟಿಸದೆ ದಾಖಲೆ ಸೃಷ್ಟಿಸಿತ್ತು. ತೇಜಸ್ವಿ ನಿಧನರಾದಾಗ ಈ ಟಿವಿಯ ಅರ್ಧ ಗಂಟೆ ಬುಲೆಟಿನ್‌ನಲ್ಲಿ ತೇಜಸ್ವಿ ಹೊರತಾಗಿ ಬೇರೆ ಯಾವ ಸುದ್ದಿಯನ್ನೂ ಬಿತ್ತರಿಸದೆ ಅವತ್ತಿನ ಸುದ್ದಿ ವಿಭಾಗದ ಮುಖ್ಯಸ್ಥ ಜಿ.ಎನ್.ಮೋಹನ್ ಹೊಸ ಪರಂಪರೆ ಶುರು ಮಾಡಿದ್ದರು. ಇತ್ತೀಚಿಗೆ ಭೀಮಸೇನ ಜೋಷಿ ನಿಧನರಾದಾಗಲೂ ಕನ್ನಡ ಪತ್ರಿಕೆಗಳು ಅತ್ಯಂತ ಶ್ರದ್ಧೆಯಿಂದ ಪುಟಗಟ್ಟಲೆ ಸುದ್ದಿಯನ್ನು ನೀಡಿದ್ದವು. ಸಂಗೀತ ಕ್ಷೇತ್ರದ ದಿಗ್ಗಜರಿಂದಲೇ ಬರೆಯಿಸಿ ಓದುಗರನ್ನು ತಲುಪಿದ್ದವು.
ಮಹತ್ವದ ವ್ಯಕ್ತಿಗಳು ಸಾವಿಗೀಡಾದಾಗ ಅವರ ಒಟ್ಟು ಬದುಕನ್ನು ಬಿಂಬಿಸುವ ಸುದ್ದಿ-ಬರಹಗಳನ್ನು ಓದುಗ ನಿರೀಕ್ಷಿಸುತ್ತಾನೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಸಂಪ್ರದಾಯಗಳನ್ನು ಮುರಿಯಬೇಕಾಗುತ್ತದೆ. ಈ ಮೀರುವ ಗುಣವನ್ನು ಒಳಗೊಂಡವನೇ ಯಶಸ್ವಿ ಪತ್ರಕರ್ತ ಆಗಲು ಸಾಧ್ಯ ಅಲ್ಲವೇ?
ಮರೆತಿದ್ದ ಮಾತು: ಸಾಹಿತ್ಯ ಸಮ್ಮೇಳನಕ್ಕೆ ಬಾರದವರಿಗೆ ಅವರದೇ ಆದ ವೈಯಕ್ತಿಕ ಕಾರಣಗಳಿರುತ್ತವೆ, ಫೈನ್. ಆದರೆ ನಾಗರಾಜ್ ವಸ್ತಾರೆ ಎಂಬ ವಿಚಿತ್ರ ಮನುಷ್ಯನಿಗೆ ಸಾಹಿತ್ಯ ಸಮ್ಮೇಳನಕ್ಕೆ ತಾನೇಕೆ ಹೋಗಲಿಲ್ಲ ಎಂಬ ತನ್ನ ಸಮಸ್ಯೆಯೇ ಸಾರ್ವತ್ರಿಕ ಸಮಸ್ಯೆಯಾಗಿದೆ. ಸುವರ್ಣ ನ್ಯೂಸ್‌ನ ಮೆಗಾಫೈಟ್‌ನಲ್ಲಿ ಈತ ಹೇಳಿದ್ದು ಇನ್ನೂ ವಿಚಿತ್ರವಾಗಿತ್ತು. ಕನ್ನಡವನ್ನೇ ಫ್ರೆಂಚ್ ಭಾಷೆಯಂತೆ ಮಾತನಾಡುವ ಈತ ಸಾಹಿತ್ಯ ಸಮ್ಮೇಳನಕ್ಕೆ ಬರಲು ನಿಮ್ಮ ಕಡೆ ನನಗೇನು ಆಫರ್ ಏನಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕೇಳಿದ್ದರು! ವಿಶೇಷವೆಂದರೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಶಂಕರ್ ಪ್ರಕಾಶ್ ಜತೆ ಅದ್ಭುತವಾಗಿ ನಿರೂಪಿಸಿದ್ದು ಆತನ ಪತ್ನಿ ಅಪರ್ಣ!
ಸ್ವಾಮಿ
ReplyDeleteಕೆಂಡಸಂಪಿಗೆ ನಿನ್ನೆ ಇಸ್ಮಾಯಿಲ್ ಬರಹ ಹಾಕಿರಲಿಲ್ಲ.ಕುಂ.ವೀ ಹಾಗೂ ದರ್ಗಾ ಬರಹ ಮಾತ್ರ ಹಾಕಿದ್ದೆವು.ಇಸ್ಮಾಯಿಲ್ ಬರಹ ನಿಮಗೆ ಹೇಗೆ ಮುಖಪುಟದಲ್ಲಿ ಗೋಚರಿಸಿತೋ ಅರಿವಾಗಲಿಲ್ಲ!
-ರಶೀದ್
ಸಂಪಾದಕೀಯದ ಸಂಪಾದಕರೇ,
ReplyDeleteಎಂಪಿ ಪ್ರಕಾಶ್ ನಿಧನವಾತರ್ೆಯ ವಿಮಶರ್ೆಯಲ್ಲಿ ಉದಯವಾಣಿ ಬಗ್ಗೆ ನಿಮಗಿರುವ ಉಪೇಕ್ಷೆ ಎದ್ದು ಕಾಣುತ್ತದೆ. ಕೇವಲ ಮಣಿಪಾಲ ಆವೃತ್ತಿಯನ್ನು ನೋಡಿಕೊಂಡು .....ಸಜ್ಜನ ನಿರ್ಗಮನ ಎಂಬ ಹೆಡ್ಡಿಂಗ್‌ನೊಂದಿಗೆ ಕಾಣಿಸಿಕೊಂಡಿರುವ ಉದಯವಾಣಿ ಒಂದು ಪುಟವನ್ನು ಪ್ರಕಾಶ್ ಕುರಿತ ಸುದ್ದಿಗಳಿಗೆ ಮೀಸಲಿಟ್ಟಿವೆ. ಅಲ್ಲೂ ಸಹ ಅಂತಹ ವಿಶೇಷ ಪ್ರಯತ್ನಗಳೇನೂ ಕಾಣಿಸುವುದಿಲ್ಲ....ಎಂದು ವಿಮಶರ್ೆ ಮಾಡಿರುತ್ತೀರಿ. ನೀವು ಬೆಂಗಳೂರಿನಲ್ಲಿರುವವರಾಗಿದ್ದರೆ ಅಥವಾ ಇ-ಪೇಪರ್ ನೋಡುವವರಾಗಿದ್ದರೆ ಉದಯವಾಣಿಯ ಬೆಂಗಳೂರು ಆವೃತ್ತಿಯನ್ನೂ ನೋಡಬೇಕಿತ್ತು. ಅದರಲ್ಲಿ ಮುಖಪುಟದಲ್ಲಿನ ವಿಶೇಷ ಪ್ರಯತ್ನವಲ್ಲದೆ 5 ಮತ್ತು 6 ವಿಶೇಷ ಪುಟಗಳು ಹಾಗೂ ಸಂಪಾದಕೀಯ ಪುಟವನ್ನೂ ಎಂಪಿ ಪ್ರಕಾಶ್ ಅವರಿಗೆ ಮೀಸಲಿಡಲಾಗಿದೆ. ಪ್ರಕಾಶ್ ಕುರಿತ ಬರಹಗಳು, ಬರಹಗಾರರ ಗುಣಮಟ್ಟ, ವೈವಿಧ್ಯ ಹಾಗೂ ಒಳನೋಟಗಳು, ಹೆಚ್ಚುವರಿ ಮಾಹಿತಿಗಳು ಉಳಿದ ಪತ್ರಿಕೆಗಳಿಗಿಂತ ಹೆಚ್ಚೇ ಎನ್ನುವಂತಿದೆ ಹಾಗೂ ಅದರಲ್ಲಿ ವಿಶೇಷ ಪ್ರಯತ್ನ ಎದ್ದುಕಾಣುತ್ತದೆ.
ಇಂಥ ವರದಿಗಳನ್ನು ಬರೆಯುವ ಮುನ್ನ ಎಲ್ಲಾ ಪತ್ರಿಕೆಗಳನ್ನು, ಎಲ್ಲಾ ಆವೃತ್ತಿಗಳನ್ನು ನೋಡಬೇಕಾಗಿ ವಿನಂತಿ.
ನನ್ನ ಅಭಿಪ್ರಾಯದಲ್ಲಿ ಸ0ಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಾಶ ಅವರ ಬಗ್ಗೆ ಸಮಗ್ರವಾದ ವಿವರ ಮೂಡಿ ಬ0ದಿದೆ. ಇ0ದಿಗೂ ನಮ್ಮ ಉತ್ತರ ಕರ್ನಾಟಕದಲ್ಲಿ ಮು0ಜಾನೆ ಮ0ಡಕ್ಕಿ/ಅವಲಕ್ಕಿ ಯ ಜೊತೆಗೆ ಬಹುತೇಕ ಜನ ಸ0ಯುಕ್ತ ಕರ್ನಾಟಕ್ವವನ್ನೇ ಓದುತ್ತಾರೆ.ಆದರೆ ಲೇಖಕರು ಪತ್ರಿಕೆಯನ್ನು ಲೆಕ್ಖಕ್ಕೇ ತೆಗೆದುಕೊ0ಡಿಲ್ಲ ಹುನಸವಾಡಿ ರಾಜನ್ ಹಾಗೂ ವ್ಹಿ ಯೆನ್ ಸುಬ್ಬಾರಾವ್ ಅವರು ಪ್ರಕಾಶ ಅವರ ಬಗ್ಗೆ ಬರೆದ ಲೇಖನಗಳು ಮನ ಮುಟ್ಟುವ0ತಿವೆ.
ReplyDeleteಕಳೆದ 78 ವರ್ಷಗಳಿಂದ ಕರ್ನಾಟಕದ ಹಿತ ಕಾಪಾಡಿದ ಪತ್ರಿಕೆಯಾವುದಾದರೂ ಇದ್ದರೆ ಅದು ಸಂಯುಕ್ತ ಕರ್ನಾಟಕ ಒಂದೇ. ಪ್ರಕಾಶ ನಿಧನರಾದ ದಿನ ಮುಖಪುಟ ನೋಡಿದಿರಾ. ಮೊದಲು ಅದನ್ನ ಮಾಡಿ. ಸಮಾಜದ ಪ್ರಕಾಶಕ್ಕೆ ಕತ್ತಲು ಅಂತ ಹೆಡ್ಡಿಂಗ್ ಇದೆ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಏಳು ಬೀಳುಗಳ ನಡುವೆ ಸಾಗಿದ ಪತ್ರಿಕೆ ಇಂದಿಗೂ ಯಾರನ್ನು ಹೀನಾಯವಾಗಿ ದೂಷಿಸಿದೆ ತನ್ನ ಕಾರ್ಯ ಮಾಡುತ್ತಿದೆ. ಆದರೂ ನಿಮ್ಮಗಳ ಪೊರೆ ಬಂದಿರುವ ಕಣ್ಣಿಗೆ ಅದು ಕಾಣಲೇಯಿಲ್ಲ. ನನಗನ್ನಿಸುವ ಮಟ್ಟಿಗೆ ನೀವು ಅದನ್ನೆ ಓದಿ ಈಗ ಬರಿತಿರೋದು...
ReplyDelete