ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದರು ಕುವೆಂಪು. ನಿರಂಕುಶಮತಿ ಎಂಬ ಪದವನ್ನು ಅವರು ಇತ್ಯಾತ್ಮಕ ನೆಲೆಯಲ್ಲಿ ಬಳಸಿದ್ದರು. ನಿಮ್ಮ ಮತಿಯು ನಿಮ್ಮ ಹಿಡಿತದಲ್ಲಿರಲಿ, ಅದನ್ನು ಇತರರು ಆಳುವುದು ಬೇಡ ಎಂಬುದು ಅವರ ಸೂಚನೆಯಾಗಿತ್ತು. ಬುದ್ಧಿ ಮತ್ತು ವಿವೇಕವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಳ್ಳುವುದು ಅಗತ್ಯ.
ನಿರಂಕುಶಮತಿಗಳಾಗುವುದೆಂದರೆ ಪ್ರಶ್ನಿಸುವುದು ಮತ್ತು ಎಲ್ಲವನ್ನು ತನ್ನ ಅರಿವಿನ ಬೆಳಕಲ್ಲಿ ಸಾಣೆ ಹಿಡಿದು ನೋಡುವುದು. ತನ್ಮೂಲಕ ಮೌಢ್ಯವೇ ಮೊದಲಾದ ಬಂಧನಗಳಿಂದ ಬಿಡುಗಡೆ ಹೊಂದುವುದು. ಗುಡಿ, ಚರ್ಚು, ಮಸಜೀದುಗಳ ಬಿಟ್ಟು ಹೊರಬನ್ನಿ ಎಂದು ಕುವೆಂಪು ಅವರು ಕರೆ ನೀಡಿದ್ದೂ ಈ ನೆಲೆಯಲ್ಲೇ.
ಇವತ್ತೇನಾಗಿದೆ ನೋಡಿ.
ಯಾವ ಮೌಢ್ಯ, ಕಂದಾಚಾರಗಳನ್ನು ಬಿಟ್ಟು ನಾವು ಇಷ್ಟೊತ್ತಿಗಾಗಲೇ ಬಹುದೂರ ಸಾಗಬೇಕಿತ್ತೋ, ಅದೇ ಮೌಢ್ಯದ ಕೂಪದಲ್ಲಿ ಹಿಂದೆಂದಿಗಿಂತಲೂ ಉಸಿರುಗಟ್ಟುವಂತೆ ಸಿಕ್ಕಿಬಿದ್ದಿದ್ದೇವೆ. ಮೌಢ್ಯದ ಹೊಸಹೊಸ ರೂಪಗಳು ಪ್ರತ್ಯಕ್ಷವಾಗಿವೆ ಮತ್ತು ಬಲಿಷ್ಠವಾಗಿ ಬೆಳೆದು ನಿಂತಿವೆ.
ಟಿವಿ ಚಾನಲ್‌ಗಳಲ್ಲಿ ದಿನ ಬೆಳಗಾದರೆ ಬಂದು ಕೂರುವ ಚಿತ್ರವಿಚಿತ್ರ ವೇಷಧಾರಿ ಜ್ಯೋತಿಷಿಗಳು ಅಳ್ಳೆದೆಯ ಜನರನ್ನು, ಅದರಲ್ಲೂ ವಿಶೇಷವಾಗಿ ದುರ್ಬಲ ಮನಸ್ಸಿನ ಹೆಣ್ಣುಮಕ್ಕಳನ್ನು ವಶೀಕರಣಗೊಳಿಸಿಕೊಂಡಿದ್ದಾರೆ. ಅತ್ತೆ-ಸೊಸೆ ಧಾರಾವಾಹಿ ಮಿಸ್ ಮಾಡಿಕೊಂಡರೂ ಅವರು ಈ ಜ್ಯೋತಿಷಿಗಳ ದುರ್ಬೋಧೆಯನ್ನು ಕಳೆದುಕೊಳ್ಳಲಾರರು. ಅವರು ಹೇಳಿದ್ದೇ ವೇದವಾಕ್ಯ. ತೋರಿಸಿಕೊಟ್ಟಿದ್ದೇ ಮಾರ್ಗ.
ಅದಕ್ಕೆ ನಾವು ಕೇಳಿದ್ದು ಟಿವಿ ಚಾನಲ್‌ಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಇರಬೇಡವೇ ಎಂದು.
ನಿಜ, ದೇವರು-ದೆವ್ವ-ಜ್ಯೋತಿಷ್ಯ-ಮಾಟ-ಮಂತ್ರ ಇತ್ಯಾದಿಗಳು ಅವರವರ ನಂಬಿಕೆಗಳಿಗೆ ಸಂಬಂಧಿಸಿದ್ದು. ಜ್ಯೋತಿಷ್ಯ ಕೇಳಿ ಹಲವರಿಗೆ ಸಮಾಧಾನವೂ ಆಗಬಹುದೇನೋ? ಇದೆಲ್ಲವೂ ಖಾಸಗಿಯಾದ ವಿಷಯಗಳು. ಆದರೆ ಇದ್ಯಾವುದೂ ಖಾಸಗಿಯಾಗಿ ಉಳಿದಿಲ್ಲ.
ಹಿಂದೆ ಕವಡೆ ಹಾಕಿ ಜ್ಯೋತಿಷ್ಯ ಹೇಳುವ ಗಿಳಿಶಾಸ್ತ್ರದವರೇ ಹೆಚ್ಚಿದ್ದರು. ಅವರು ಕಡಿಮೆ ಅಪಾಯಕಾರಿಗಳು. ಆದರೆ ಇಂದು ಲ್ಯಾಪ್‌ಟಾಪ್ ಹಿಡಿದು ಟಿವಿ ಸ್ಟುಡಿಯೋಗಳಲ್ಲಿ ಕೂರುತ್ತಿರುವ ಜ್ಯೋತಿಷಿಗಳು ಹೆಚ್ಚು ಅಪಾಯಕಾರಿಗಳು. ಯಾಕೆಂದರೆ ಇವರ ಜ್ಯೋತಿಷ್ಯಕ್ಕೆ ಲ್ಯಾಪ್‌ಟಾಪ್‌ನ ಮೂಲಕ ವೈಜ್ಞಾನಿಕ ಸ್ಪರ್ಶವೂ ಲಭ್ಯವಾದಂತೆ ಜನರಿಗೆ ತೋರುತ್ತದೆ.
ಗಮನಿಸಿ ನೋಡಿ. ದಿನನಿತ್ಯ ಟಿವಿಗಳಲ್ಲಿ ಲೈವ್ ಶೋ ನಡೆಸುವ ಜ್ಯೋತಿಷಿಗಳು ಕರೆ ಮಾಡಿದವರ ಜನ್ಮ ದಿನಾಂಕ ಕೇಳುತ್ತಾರೆ. ಅದನ್ನು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಎಂಟರ್ ಮಾಡುತ್ತಾರೆ. ಕ್ಷಣಾರ್ಧದಲ್ಲಿ ಅವರಿಗೆ ಕರೆ ಮಾಡಿದ ವ್ಯಕ್ತಿಯ ಪೂರ್ತಿ ಜಾತಕವೇ ಲಭ್ಯವಾಗಿಬಿಡುತ್ತದೆ. ಯಾವ ವ್ಯವಹಾರಕ್ಕೆ ಕೈ ಹಾಕಿದರೂ ಕೈ ಹತ್ತುತ್ತಿಲ್ಲ, ನಂಬಿದವರೆಲ್ಲ ಕೈ ಬಿಟ್ಟರು, ಮನಸ್ಸಿನಲ್ಲಿ ಏನೋ ಒಂದು ತರಹದ ವೇದನೆ, ಮನೆಯಲ್ಲಿ ಕಿರಿಕಿರಿ, ಕಷ್ಟಗಳು ಒಂದಾದ ಹಿಂದರಂತೆ ಬರುತ್ತವೆ... ಹೌದೋ, ಅಲ್ವೋ ಎಂದು ಪ್ರಶ್ನಿಸಿಬಿಡುತ್ತಾರೆ. ಆ ಕಡೆಯಿಂದ ಹೌದು ಸ್ವಾಮೀಜಿ ಎಂಬ ಧ್ವನಿ ಕೇಳಿಬರುತ್ತದೆ.
ಎಲ್ಲ ಚೆನ್ನಾಗಿದ್ದವನು ಯಾಕೆ ಜಾತಕ ಕೇಳಲು ಬಯಸುತ್ತಾನೆ? ಎಲ್ಲರ ಬದುಕಿನಲ್ಲೂ ಇಂಥ ನೋವು ಇದ್ದೇ ಇರುತ್ತದೆ. ಮನೆಯಲ್ಲಿ ಕಿರಿಕಿರಿ, ಕಷ್ಟಗಳು ಮಾಮೂಲು. ಅದನ್ನೇ ಜ್ಯೋತಿಷಿ ಹೇಳಿದ ತಕ್ಷಣ ಸ್ವಾಮಿಗಳಿಗೆ ನನ್ನ ವಿಷಯ ಎಲ್ಲ ಗೊತ್ತು ಎಂದು ಮುಗ್ಧ ವ್ಯಕ್ತಿ ನಂಬಿಬಿಡುತ್ತಾನೆ.
ಎಲ್ಲ ಚಾನಲ್‌ಗಳಲ್ಲೂ ಇದೇ ಕಥೆ. ಜ್ಯೋತಿಷಿಗಳ ಫೋನ್ ನಂಬರು, ವಿಳಾಸ ಕಡೆಯಲ್ಲಿ ಪ್ರಸಾರವಾಗುತ್ತದೆ. ಯಾರ ಭವಿಷ್ಯ ಏನಾಗುತ್ತೋ ಏನೋ, ಜ್ಯೋತಿಷಿಗಳ ಬಾಳು ಬಂಗಾರವಾಗಿಬಿಡುತ್ತದೆ.
ನ್ಯೂಸ್ ಚಾನಲ್‌ಗಳನ್ನು ಗಮನಿಸಿ. ಅಲ್ಲೂ ಸಹ ಜ್ಯೋತಿಷಿಗಳಿಗೆ ಬೇಡಿಕೆ. ಮೊನ್ನೆ ದಾವಣಗೆರೆಯಲ್ಲಿ ಕಾಲೇಜು ಒಂದರ ಬಳಿ ಯಾರೋ ಮಾಟ ಮಾಡಿಸಿಟ್ಟಿದ್ದರಂತೆ. ನ್ಯೂಸ್ ಚಾನಲ್‌ಗಳಿಗೆ ಸುದ್ದಿಯ ಹಬ್ಬ. ಅದೂ ಪ್ರೇಮಿಗಳ ದಿನದ ಮುನ್ನಾದಿನ ಈ ಘಟನೆ ನಡೆದಿದ್ದರಿಂದ ಅದಕ್ಕೆ ಹೊಸ ಬಣ್ಣವನ್ನೂ ಬಳಿಯಲಾಯಿತು. ಆ ಕುರಿತು ಸ್ಟುಡಿಯೋಗಳಲ್ಲಿ ಲೈವ್ ಚರ್ಚೆ. ಯಾರೋ ಭಗ್ನ ಪ್ರೇಮಿಯೇ ಇದನ್ನು ಮಾಡಿಸಿದ್ದಾನೆ ಎಂಬುದು ಸುದ್ದಿಯ ಹೂರಣ. ಸುವರ್ಣ ನ್ಯೂಸ್‌ನ ಚರ್ಚೆಯಲ್ಲಿ ಇದ್ದ ಎಚ್.ಆರ್.ರಂಗನಾಥ್, ನೋಡಿ, ಯುವ ಜನಾಂಗ ಎಂಥ ಅಪಾಯಕಾರಿಯಾದ ಮೌಢ್ಯದ ಕಡೆ ಹೋಗುತ್ತಿದೆ ಎಂದು ಆತಂಕದಿಂದ ಹೇಳಿದರು. ಯಾರೋ ಒಬ್ಬ ತಲೆಕೆಟ್ಟವನು ತನ್ನ ಪ್ರಿಯತಮೆಯನ್ನು ಒಲಿಸಿಕೊಳ್ಳಲು ಮಾಟ ಮಾಡಿಸಿದ್ದರೆ, ಅದನ್ನು ಸಾರ್ವತ್ರೀಕರಣಗೊಳಿಸಿ ಯಾಕೆ ಮಾತಾಡ್ತೀರಿ ರಂಗಣ್ಣಾ ಎಂದು ಕೇಳಬೇಕೆನಿಸುತ್ತದೆ. ಸ್ಟುಡಿಯೋದಲ್ಲಿ ಜ್ಯೋತಿಷಿಗಳು, ವಾಮಾಚಾರ ತಜ್ಞರನ್ನು ಕೂರಿಸಿಕೊಂಡಿದ್ದನ್ನು ಸಮರ್ಥಿಸಿಕೊಳ್ಳಲು ಅವರು ಹೀಗೆಲ್ಲ ಮಾತನಾಡಲೇಬೇಕು ಎಂಬುದು ನೆನಪಾದಾಗ ಅವರ ಅಸಹಾಯಕತೆ ನೆನೆದು ಬೇಸರವಾಗುತ್ತದೆ.
ಹೀಗೆ ಚಾನಲ್‌ಗಳಿಂದಲೇ ಪ್ರಸಿದ್ಧಿಗೆ ಬಂದ ಜ್ಯೋತಿಷಿಗಳ ಸಂಖ್ಯೆ ಏರುತ್ತಲೇ ಇದೆ. ನಟಿಯೊಬ್ಬಳ ವಿವಾಹದ ಮುಹೂರ್ತ ನಿಗದಿ ಮಾಡಿದ ಜ್ಯೋತಿಷಿಯೊಬ್ಬನಿಗೆ ಚಾನಲ್ ಒಂದು ಪ್ರಚಾರ ಕೊಟ್ಟ ಪರಿಣಾಮ ಆತ ಎಷ್ಟು ವೇಗವಾಗಿ ಬೆಳೆದನೆಂದರೆ ಆತ ಈಗ ಜ್ಯೋತಿಷ್ಯದ ಜತೆಗೆ ರಾಜಕೀಯ ದಳ್ಳಾಳಿ ಕೆಲಸವನ್ನೂ, ಹೈಟೆಕ್ ವೇಶ್ಯಾವಾಟಿಕೆಯನ್ನೂ ನಡೆಸುತ್ತಾನೆ. ಹತ್ತು ಸಾವಿರ ರೂಪಾಯಿಯ ಉಂಗುರವೊಂದನ್ನು ಶೂನ್ಯದಲ್ಲಿ ತೆಗೆದು ಕೊಡುವ ಈತ, ತನ್ನ ಗ್ರಾಹಕನಿಂದ ಕೋಟಿಗಟ್ಟಲೆ ಸುಲಿಯಲು ಸಂಚು ರೂಪಿಸಿರುತ್ತಾನೆ. ತನಗೆ ಬಗ್ಗದವರನ್ನು, ಒಮ್ಮೆ ತನ್ನ ತೆಕ್ಕೆಯಲ್ಲಿ ಸಿಕ್ಕಿಬಿದ್ದವರನ್ನು ಬ್ಲಾಕ್‌ಮೇಲ್ ಮಾಡುವ ತಂತ್ರವೂ ಈತನಿಗೆ ಗೊತ್ತು.
ಟಿವಿಯಲ್ಲಿ ಕಾಣಿಸಿಕೊಂಡ ಎಲ್ಲ ಮುಖಗಳಿಗೂ ರೇಟಿಂಗು ಜಾಸ್ತಿಯಾಗಿದೆ. ಕೆಲವರನ್ನು ಭೇಟಿಯಾಗುವುದಕ್ಕೆ ತಿಂಗಳುಗಟ್ಟಲೆ ಕಾಯಬೇಕು. ಕನ್ಸಲ್ಟಿಂಗ್ ಫೀಜೇ ಸಾವಿರಗಟ್ಟಲೆ ಇರುತ್ತದೆ. ಹೀಗೆ ದುಡ್ಡು ತೆತ್ತು ಬಂದವರಿಗೆ ಸಮಾಧಾನ ಸಿಗುತ್ತಾ, ಸಮಸ್ಯೆಗಳು ಪರಿಹಾರ ಆಗುತ್ತಾ? ಉತ್ತರ ಕೊಡುವವರು ಯಾರು?
ಮಾಟಗಾರರು, ಜ್ಯೋತಿಷಿಗಳು, ವಾಮಾಚಾರ ಪಂಡಿತರಿಗೆ ಕೊಟ್ಟಷ್ಟು ಅವಕಾಶವನ್ನು ನಮ್ಮ ಚಾನಲ್‌ಗಳು ವಿಜ್ಞಾನಿಗಳಿಗೆ ಕೊಟ್ಟಿವೆಯೇ? ಯಾರಾದರೂ ಒಬ್ಬ ವಿಜ್ಞಾನಿಯನ್ನು ಜನರ ಮನಸ್ಸಲ್ಲಿ ಉಳಿಯುವಂತೆ ಪರಿಚಯಿಸುವ ಕೆಲಸ ಇವುಗಳಿಂದಾಗಿದೆಯೇ?
ಇವತ್ತು ಕೃಷಿ ಬಜೆಟ್ ನಡೆಯುತ್ತಿದೆ. ಎಷ್ಟು ಚಾನಲ್‌ಗಳಲ್ಲಿ ಈ ಕುರಿತು ಗಂಭೀರವಾದ ಚರ್ಚೆಗಳು ನಡೆದವು? ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ಕೃಷಿ ವಿಜ್ಞಾನಿಗಳನ್ನು ಕರೆದು ಒಳ್ಳೆಯ ಕಾರ್ಯಕ್ರಮವೊಂದನ್ನು ನಡೆಸಿದರು. ಇಂಥವು ಅಲ್ಲೊಂದು ಇಲ್ಲೊಂದು ನಡೆದಿರಬಹುದು. ಆದರೆ ದೇಶದಲ್ಲೇ ಮೊದಲ ಬಾರಿಗೆ ಮಂಡನೆಯಾಗಲಿದ್ದ ಕೃಷಿ ಬಜೆಟ್ ಕುರಿತು ಜನರ ಮನಸ್ಸಿನಲ್ಲಿದ್ದ ಕುತೂಹಲ, ನಿರೀಕ್ಷೆಗಳಿಗೆ ಪೂರಕವಾಗಿ ಇನ್ನಷ್ಟು ವ್ಯಾಪಕವಾದ ಕಾರ್ಯಕ್ರಮಗಳನ್ನು ನಡೆಸಬಹುದಿತ್ತಲ್ಲವೇ?
ವಿಜ್ಞಾನಿಗಳಿಂದ ಚಾನಲ್‌ಗಳಿಗೆ ಟಿಆರ್‌ಪಿ ಹುಟ್ಟೋದಿಲ್ಲ. ಜ್ಯೋತಿಷಿಗಳಿಂದ ಹುಟ್ಟುತ್ತದೆ. ಹೀಗಾಗಿ ಅವರ ಆಯ್ಕೆ ಜ್ಯೋತಿಷಿಗಳೇ ಆಗಿರುತ್ತಾರೆ ಎಂಬುದು ಸರಳವಾದ ಉತ್ತರ.
ಆದರೆ ಒಂದು ತಲೆಮಾರಿನ ಜನರನ್ನು ಮೌಢ್ಯದ ಪಾತಾಳಕ್ಕೆ ತಳ್ಳಿದ ಮಹಾವಂಚನೆಯನ್ನು ಮಾಡುತ್ತಿದ್ದೇವೆ ಎಂಬ ಪಾಪಪ್ರಜ್ಞೆಯಾದರೂ ಇವರನ್ನು ಕಾಡಬಾರದೇ?
ಏನಂತೀರಿ?
ಸಾರ್ ಇದೆಲ್ಲಾ ಕೋಣನ ಮುಂದೆ ಕಿನ್ನರಿ ಬಾರಿಸಿದಹಾಗೆ.......
ReplyDeleteಯಾರು ತಲೆ ಕೆಡಿಸಿಕೊಳ್ಳೋದಿಲ್ಲ ಅವ್ರ್ ಕೆಲಸ ಅವರು ಮಾಡ್ತಾರೆ.....
ಇದಕ್ಕೆ ಒಂದು ಕೊನೆ ಅಂತ ಇದೆಯಾ??????????????
ನೀವು ಹೇಳಿದ್ದೆಲ್ಲವೂ ಸರಿಯಾಗಿಯೇ ಇದೆ. ಮೊದಲೆಲ್ಲಾ ಆಫೀಸ್ಸಿಗೆ ಹೊರಡೋ ಟೈಮಲ್ಲಿ ಚಾನೆಲ್ ಗಳಲ್ಲಿ ಬರುತ್ತಿದ್ದ ಸಿನಿಮಾ ಹಾಡು ಕೇಳಿಕೊಳ್ಳುತ್ತಾ ರೆಡಿಯಾಗುತ್ತಿದೆ. ಈಗ ಯಾವ ಚಾನೆಲ್ ಹಾಕಿದ್ರು ನಾನಾ ಗಾತ್ರದ ಜ್ಯೋತಿಷಿಗಳು ಮೇಕಪ್ ಮಾಡಿಕೊಂಡು ಕೂತಿರುತ್ತಾರೆ. ಕೆಲವೊಮ್ಮೆ ತಮಾಷೆಯಂತೆ ಕಾಣುವ ಅವರ ಡೈಲಾಗ್ ಗಳು ಗಂಭೀರವಾಗಿ ಯೋಚಿಸಿದಾಗ ಆತಂಕಕಾರಿಯಾಗಿ ಕಾಣಿಸುತ್ತವೆ. ಸರಿಯಾಗಿ ಮಾತನಾಡುವ ಸಂಸ್ಕೃತಿ ಇಲ್ಲದ ನರೇಂದ್ರ ಬಾಬು ಶರ್ಮನಂತವನ ಪ್ರಲಾಪವನ್ನ ಭಗದ್ಗೀತೆಯೇನೋ ಎಂಬಂತೆ ಮಹಿಳೆಯರು ತನ್ಮಯರಾಗಿ ಕೇಳುತ್ತಾರೆ. ಸಿನಿಮಾವೊಂದರಲ್ಲಿ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಕತ್ತೆ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುವ ಪಾತ್ರ ಮಾಡಿರುವ ನರೇಂದ್ರ ಶರ್ಮನನ್ನ ನೋಡಿದ್ರೆ ನಗು ಬರುತ್ತೆ. ಇವರೆಲ್ಲರ ಯೋಗ್ಯತೆ ಏನು? ಇವರಲ್ಲಿ ಯಾವನಿಗಾದರೂ ಒಂದು ಇರುವೆ ಗಾತ್ರದ ಸಮಸ್ಯೆ ಬಗೆ ಹರಿಸುವ ಶಕ್ತಿ ಇದೆಯಾ ಅಂತ ಯಾರೂ ಯೋಚಿಸುವುದಿಲ್ಲ. ಟಿ.ಆರ್.ಪಿ.ಯೇ ಎಲ್ಲವೂ ಆಗಿರುವಾಗ ಚಾನೆಲ್ಗಳಿಗೆ ಉಳಿದಿದ್ದನ್ನು ಕಟ್ಟಿಕೊಂಡು ಏನಾಗಬೇಕಿದೆ ಹೇಳಿ. ಬಹುಶ: ಚಾನೆಗಳ ಛೀಫ್ ಗಳಿಗೆ ಬುದ್ದಿ ಕರುಣಿಸಲು ಯಾವುದಾದರೂ ಹೋಮವಿದೆಯಾ ಅಂತ ನರೇಂದ್ರ ಬಾಬು ಶರ್ಮನನ್ನು ಕೇಳಿ. ಒಂದು ಹೋಮ ಮಾಡಿಸೋದರಿಂದ ಮಾತ್ರ ಜ್ಯೋತಿಷಿಗಳಿಂದ ಜನರಿಗೆ ಮುಕ್ತಿ ಕೊಡಿಸಬಹುದೇನೋ ಅನ್ನಿಸುತ್ತದೆ.
ReplyDeletewonderful piece of article..sir.. first time in sampadakiya. seems , it is not written by regular writer of sampadakiya! it is good, thought provoking, liberal, and unbiased. keep it up.
ReplyDeleteಅನಂತ್ ಅವರೇ, ಕೊನೆ ಹಾಡಲು ಸಾಧ್ಯವಿಲ್ಲ ಅಂತ ನಿರಾಶರಾಗೋದು ಬೇಡ... "ಅವ್ರಿಗೆ ಎಷ್ಟು ಹೇಳಿದ್ರೂ ಅಷ್ಟೇ, ನನ್ನೊಬ್ಬನಿಂದ ಏನಾಗುತ್ತೆ" ಅಂತ ಸುಮ್ಮನಾದರೆ ಅದು ನಮ್ಮ ಮೂರ್ಖತನವಾದೀತು. ನಾವು ಬದಲಾದರೆ ಸಮಾಜವೂ ನಿಧಾನವಾಗಿಯಾದರೂ ಬದಲಾಗೇ ಆಗುತ್ತೆ,ಆಗಲೇ ಬೇಕು. ನಾವೂ ಸಮಾಜದ ಒಂದು ಭಾಗವೇ ಅಲ್ಲವೇ...?!
ReplyDeletehudugeeru, jeans aadru hakikollali, chudidar adru haki kollali, eevayya, avaranna nododyakante?! ivana character yenthadu? modalu yaradru vicharisi , avana jaataka eeche tegeya barade?
ReplyDeleteಇಲ್ಲಿ ರಂಗಣ್ಣನೂ, ಶಶಿಯಣ್ಣನೂ, ಶಿವಣ್ಣನೂ, ರವಿಯಣ್ಣನೂ ಸ್ಟುಡಿಯೋದಲ್ಲಿ ಎಷ್ಟೇ ಹಾರಾಡಿದರೂ ಅಸಹಾಯಕರು. ಏಕೆಂದರೆ ಮಾಧ್ಯಮಗಳ ಮಾಲೀಕತ್ವ ಇರುವುದು ಭಾಷೆ, ಸಂಸ್ಕೃತಿ ಗೊತ್ತಿಲ್ಲದವರ ಕೈಯಲ್ಲಿ. ಸಾಮಾಜಿಕ ಕಳಕಳಿ ನಿಮಗೆ ನಮಗೆ ಅಷ್ಟೆ. ಅವರಿಗೆ ಒಟ್ನಲ್ಲಿ ಲಾಭ ಬರುತ್ತಿರಬೇಕು.. ಅವರಿಗೆ ಅದು ವ್ಯಾಪಾರ, ಪ್ರತಿಷ್ಠೆ.
ReplyDeleteಇಲ್ಲಿ ನಾವು ಕುರಿಗಳಾಗಿರೋದ್ರಿಂದಲೇ ಜ್ಯೋತಿಷಿಗಳು, ರಾಜಕಾರಣಿಗಳು, ಅಧಿಕಾರಶಾಹಿಗಳು ನಮ್ಮನ್ನ ಕಾಯುತ್ತಿದ್ದಾರೆ...ಒಂದೇ ಒಂದು ಸಲ ನಾವು ಕರಿಗಳಾಗಿ ಸೊಂಡಿಲಿನಿಂದ ಅವರನ್ನ ಎತ್ತಿ ಬೀಸಾಕಬೇಕು..ಆಗ ಅವರಿಗೆ ಬುದ್ಧಿ ಬರುತ್ತೆ..ಅಂತಹ ಕಾಲ ಬೇಗ ಬರಲಿ...
ReplyDelete"ಇಲ್ಲಿ ರಂಗಣ್ಣನೂ, ಶಶಿಯಣ್ಣನೂ, ಶಿವಣ್ಣನೂ, ರವಿಯಣ್ಣನೂ ಸ್ಟುಡಿಯೋದಲ್ಲಿ ಎಷ್ಟೇ ಹಾರಾಡಿದರೂ ಅಸಹಾಯಕರು." - ಈ ಮಾತನ್ನು ಖಂಡಿತವಾಗಿಯೂ ಒಪ್ಪಲಾಗುವುದಿಲ್ಲ. ಮಾಧ್ಯಮಗಳ ಮಾಲೀಕರು ಇಂಥದೇ ಕಂಟೆಂಟನ್ನು, ಹೀಗೇ ಪ್ರಸ್ತುತಿ ಮಾಡಬೇಕೆಂದು ತಾಕೀತು ಮಾಡುವುದಿಲ್ಲ. ಬಹಳಷ್ಟು ನಿರೂಪಕರು ವಾಸ್ತು-ಬೊಗಳೆಯವರನ್ನು, ಪವಾಡ ಪುರುಷರನ್ನು ಮುಂದೆ ಕೂಡಿಸಿಕೊಂಡು ‘ಎಲ್ಲೋ ಒಂದು ಕಡೆ ಜನ ವಿಜ್ಞಾನವನ್ನು ನಂಬಲಾಗದೆ, ಜ್ಯೋತಿಷ್ಯ-ವಾಸ್ತುಗಳೇ ತಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರವೆಂದು ಭಾವಿಸುವ ಪರಿಸ್ಥಿತಿ ಬಂದಿದೆ’ ಎಂದು ಷರಾ ಬರೆದುಬಿಡುತ್ತಿದ್ದಾರೆ. ಇಲ್ಲಿ ಲಾಭವಾಗುತ್ತಿರುವುದು ಮಾಲೀಕರಿಗಷ್ಟೇ ಅಲ್ಲ, ಕೆಲವು ~ಆಂಕರ್‌ಗಳಿಗೂ ಹೆಚ್ಚು ಲಾಭವಾಗುತ್ತಿದೆ. ತಮ್ಮ ಸ್ವಂತ ಜ್ಯೋತಿಷ್ಯ-ವಾಸ್ತು ಸಮಸ್ಯೆಗಳನ್ನು ‘ಜಗದ್ವಿಖ್ಯಾತ’ರಿಂದ ಪುಕ್ಕಟೆ ಪರಿಹಾರ ಮಾಡಿಸಿಕೊಳ್ಳುವುದು, ಆತ್ಮೀಯರಿಗೆ ‘ಪುನರ್ಜನ್ಮದ ಏಜೆಂಟ’ರ ಭೆಟ್ಟಿ ಮಾಡಿಸುವುದು, ರಾಜಕಾರಿಣಿಗಳ ಸಾಮಿಪ್ಯವನ್ನು ಇವರೆಲ್ಲರ ಮುಖೇನ ಮಾಡಿಕೊಳ್ಳುವುದು..ಮತ್ತಿತರ ಚಿಲ್ಲರೆ ಕೆಲಸ ಮಾಡಿಸಿಕೊಳ್ಳುವುದು .... ಈ ಸಮಾಜಕ್ಕೆ ಬಡಿದಿರುವ ಅತಿ ದೊಡ್ಡ ಅನಿಷ್ಟವೆಂದರೆ ಖಾಸಗಿ ಟೀವಿ ಚಾನೆಲ್‍ಗಳು. ಈ ನಿಟ್ಟಿನಲ್ಲಿ ದೂರದರ್ಶನ ಚಂದನ ಎಷ್ಟೋ ಸಹ್ಯವಾಗಿದೆ.
ReplyDeleteOn a lighter note, check this :)
ReplyDeletehttp://www.youtube.com/watch?v=JIY4hwKUacs&feature=related
ಇಲ್ಲಿ ನನ್ನದೇ ಒಂದು ಅನುಭವವನ್ನು ಹೇಳಬೇಕೆನಿಸುತ್ತದೆ... ಒಂದು ಕನ್ನಡ ಚಾನೆಲ್ಲಿಗೆ ಅರ್ಧ ಘಂಟೆಯಾದರೂ ವಿಜ್ಞಾನದ ಕಾರ್ಯಕ್ರಮ ಮಾಡ್ರೀ ಅಂತ ದುಂಬಾಲುಬಿದ್ದು ಬೇಕಾದ ಎಲ್ಲ ವೀಡಿಯೋ ಕ್ಲಿಪ್ಪಿಂಗು (ಎಚ್‌ಡಿ ವೀಡಿಯೋ), ಬ್ಯಾಕ್‌ಗ್ರೌಂಡ್ ಮಾಹಿತಿ ಅಷ್ಟನ್ನೂ ಕೊಟ್ಟಿದ್ದೆ. ನನಗೆ ದುಡ್ಡು ಮಾತ್ರವಲ್ಲ ಕ್ರೆಡಿಟ್ ಕೊಡದಿದ್ದರೂ ನಡೆಯುತ್ತೆ ಅಂತಲೂ ಹೇಳಿದ್ದೆ. ವಿಜ್ಞಾನದ ಕಾರ್ಯಕ್ರಮಾನಾ ಸಾರ್ ಅಂದವರು ಅದರ ಕಡೆ ತಿರುಗಿಯೂ ನೋಡಲಿಲ್ಲ :-)
ReplyDeleteya that is true...if there is holiday or any festival... if we wanna see any programme on TV. these foretellers occupy the tv wholeday....
ReplyDeleteCould anybody tell in which kannada movies Narendra Babu Sharma acted?
ReplyDeletePlease.........