ಮಹಾಜನಗಳೇ, ಕೇಳಿರಿ, ಕೇಳಿರಿ.
ಹೊಸದೊಂದು ಮೆಷಿನ್ನು ಬಂದಿದೆ. ಬಟ್ಟೆ ಒಗೆಯೋದಕ್ಕೆ, ಅಕ್ಕಿ ರುಬ್ಬೋದಕ್ಕೆ, ಹಣ್ಣು ಹಿಂಡುವುದಕ್ಕೆ ಮೆಷಿನ್ನು ಬಂದ ಹಾಗೆ ಈಗ ವಾಸ್ತು ನೋಡೋದಕ್ಕೂ ಮೆಷಿನ್ನು ಬಂದಿದೆ. ಹೆಸರು ವೈದಿಕ್ (ವೇದಿಕ್) ಔರಾ ಸ್ಕ್ಯಾನಿಂಗ್ ಮೆಷಿನ್. ಭಲರೇ, ಬಪ್ಪರೇ.
ಮೆಷಿನ್ನಿನ ಕುರಿತು ನಾವು ಏನನ್ನಾದರೂ ಹೇಳುವ ಮೊದಲು ಇಲ್ಲಿರುವ ಇಮೇಜನ್ನು ಒಮ್ಮೆ ಕ್ಲಿಕ್ ಮಾಡಿ ಮನಸ್ಸು ಭರ್ತಿ ಓದಿಕೊಂಡುಬಿಡಿ. ನಾವಂತೂ ಓದಿ ಖುಷಿಯಾಗಿದ್ದೀವಿ, ನೀವು ಓದಿ ಖುಷಿಯಾಗಿಬಿಡಿ.
ಇಷ್ಟು ದಿನ ವಿಚಾರವಾದಿಗಳೆಂಬ ಅಡ್ಡಕಸುಬಿಗಳು ವಾಸ್ತುವನ್ನೇ ಅವೈಜ್ಞಾನಿಕ, ಮೌಢ್ಯ, ಹಣ ಗಳಿಸುವ ದಗಲ್ಬಾಜಿ ತಂತ್ರ ಎಂದು ಜರೆಯುತ್ತಿದ್ದರು. ಆದರೆ ಸಂಶೋಧಕರೊಬ್ಬರು ವಾಸ್ತು ಕಂಡು ಹಿಡಿಯುವುದಕ್ಕೂ ಮೆಷಿನ್ನು ಕಂಡುಹಿಡಿದು, ಅದಕ್ಕೂ ವೈಜ್ಞಾನಿಕತೆಯ ಮೆರುಗು ನೀಡಿದ್ದಾರೆ. ಎಲ್ಲರೂ ಉಘೇ ಉಘೇ ಅಂತನ್ನಿ. ವಿಚಾರವಾದಿಗಳ ಮನೆ ಹಾಳಾಗಿ ಹೋಗಲಿ.
ಇದು ಟ್ಯೂಬ್ ಲೈಟ್ ಬಣ್ಣ ಹೊಂದಿರುವ ಸಣ್ಣ ಜೋಡಿ ಯಂತ್ರವಂತೆ. ಯಾವುದೇ ಕಾರಣಕ್ಕೂ ಮೆಷಿನ್ನಿನಲ್ಲಿ ಏನಿದೆ? ಅದು ಹೇಗೆ ವಾಸ್ತು ಕಂಡುಹಿಡಿಯುತ್ತದೆ ಎಂದು ಅಪ್ಪಿತಪ್ಪಿಯೂ ಕೇಳಬೇಡಿ, ನಿಮ್ಮ ತಲೆ ಸಿಡಿದು ಸಾವಿರ ಹೋಳಾದೀತು, ಎಚ್ಚರಿಕೆ. ವೈದಿಕ್ ಮೆಷಿನ್ನು ನಂಬಿಕೆಯ ಆಧಾರದ ಮೇಲೆ ನಿಂತಿದೆ. ಅದನ್ನು ಪ್ರಶ್ನಿಸಕೂಡದು, ಹುಶಾರ್!
ಈ ಮೆಷಿನ್ನನ್ನು ಕೈಯಲ್ಲಿ ಹಿಡಿದುಕೊಂಡು ಕಟ್ಟಡದಲ್ಲಿ ದೋಷವಿರುವ ಕಡೆ ಹೋಗಿ ನಿಂತರೆ ಅದು ಓಪನ್ ಆಗುವುದಿಲ್ಲ, ದೋಷವಿಲ್ಲದೇ ಇದ್ದರೆ ಓಪನ್ ಆಗಿಬಿಡುತ್ತೆ. ವಾರೆವ್ಹಾ, ಎಂಥ ಮೆಷಿನ್ನು, ಏನು ಕಥೆ? ದೇಶ ಉದ್ಧಾರವಾಗಲು ಇನ್ನೇನು ಬೇಕು.
ಈಗ ನೋಡಿ, ಈ ಯಂತ್ರ ಪತ್ರಕರ್ತರಿಗೂ ತುಂಬಾ ಯೂಸ್‌ಫುಲ್ ಆಗುತ್ತೆ. ಕಚೇರಿಯಲ್ಲಿ ಯಾವುದಾದರೂ ಸೆಕ್ಷನ್ನಿನಲ್ಲಿ ಸಮಸ್ಯೆ ಆದ್ರೆ ಮೆಷಿನ್ನು ಹಿಡಿದು ನಿಂತರೆ ಸಾಕು, ಅದು ಓಪನ್ ಆಗೋದಿಲ್ಲ. ಆಮೇಲೆ ಅಲ್ಲೊಂದು ದೇವರ ಫೋಟೋ ತಗುಲಿಸಿಬಿಡೋದು. ಮತ್ತೆ ಮೆಷಿನ್ನು ಹಿಡಿದು ನಿಂತರೆ ಅದು ಓಪನ್ ಆಗುತ್ತೆ. ಅಲ್ಲಿಗೆ ಪ್ರಾಬ್ಲಮ್ ಸಾಲ್ವ್!
ಯಾವುದಾದರೂ ಸಪ್ಲಿಮೆಂಟು ವಾಸ್ತುಪ್ರಕಾರ ಸರಿ ಇದೆಯೋ ಇಲ್ಲವೋ ಎಂಬುದನ್ನೂ ಈ ಮೆಷಿನ್ನು ಕಂಡುಹಿಡಿಯಬಹುದು. ಒಂದು ಸಪ್ಲಿಮೆಂಟಿನ ಎದುರು ಮೆಷಿನ್ನು ಹಿಡಿಯೋದು, ಓಪನ್ ಆಗಲಿಲ್ಲ ಅಂದ್ರೆ ಕಾಲ-ದೇಶದ ಅಗತ್ಯಕ್ಕೆ ತಕ್ಕಂತೆ ಸಪ್ಲಿಮೆಂಟೇ ಬದಲಾಯಿಸೋದು. ಹೇಗಿದೆ ಐಡಿಯಾ?
ಕೆಲವು ಪತ್ರಿಕೆಗಳಲ್ಲಿ ಲೀಡ್ ಸುದ್ದಿ ಏನನ್ನು ಮಾಡೋದು ಎಂಬೋದೇ ಸಮಸ್ಯೆ. ಇನ್ನು ಆ ಸಮಸ್ಯೆನೂ ಖಲ್ಲಾಸ್. ನಾಲ್ಕು ಸುದ್ದಿಗಳ ಪ್ರಿಂಟ್ ಔಟ್‌ಗಳನ್ನು ನಾಲ್ಕು ಟೇಬಲ್‌ಗಳ ಮೇಲೆ ಪ್ರತ್ಯೇಕವಾಗಿ ಇಡೋದು. ಒಂದೊಂದೇ ಟೇಬಲ್ ಬಳಿ ಹೋಗಿ ಮೆಷಿನ್ನು ಹಿಡಿಯೋದು. ಯಾವ ಸುದ್ದಿ ಎದುರು ಮೆಷಿನ್ನು ಓಪನ್ ಆಗುತ್ತೋ ಅದೇ ಲೀಡ್ ಸುದ್ದಿ! ಎಂಥ ಸೂಪರ್ ಪ್ರಯೋಗ ಅಲ್ವಾ?
ಹಾಗಂತ ಕೆಡವಿ ಕಟ್ಟದ ಸರಳ ವಾಸ್ತುತಜ್ಞ ಎಂಬ ಶೀರ್ಷಿಕೆಯಲ್ಲಿ ಇಂಥ ಮೆಷಿನ್ನಿನ ಮಹಿಮೆಯ ಕುರಿತ ಲೇಖನ ಪ್ರಕಟಿಸಿರೋದು ಪ್ರಜಾವಾಣಿ. ಇದನ್ನು ನಾವು ಓದಿದ್ದು ಬಳ್ಳಾರಿಯಲ್ಲಿ. ಅಂದ್ರೆ ಅಲ್ಲಿನ ಎಡಿಷನ್‌ನಲ್ಲಿ ಅದು ಬಂದಿದೆ.( ೬-೨-೨೦೧೧ರ ಭಾನುವಾರ ಮೂರನೇ ಪುಟ)
ಈ ಸುದ್ದಿಯನ್ನು ಮೂರ‍್ನಾಲ್ಕು ಜಿಲ್ಲೆಯವರು ಮಾತ್ರ ಓದಿದ್ದಾರೆ. ಹಾಗೆ ನೋಡಿದರೆ ವಾಸ್ತು ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇರೋದು ಬೆಂಗಳೂರಿನಲ್ಲಿ. ಹೀಗಾಗಿ ಆಲ್ ಎಡಿಷನ್‌ನಲ್ಲಿ ಅದರಲ್ಲೂ ಬೆಂಗಳೂರು ಎಡಿಷನ್‌ನಲ್ಲಿ ಇದು ಪ್ರಕಟವಾಗಿದ್ದರೆ ಎಷ್ಟೊಂದು ಜನರಿಗೆ ಅನುಕೂಲವಾಗುತ್ತಿತ್ತು ಅಲ್ವೇ? ಮೆಷಿನ್ನು ಕಂಡುಹಿಡಿದ ಮಹಾಜ್ಞಾನಿ ಎನ್.ಪಿ.ಅನಂತರಾಮ ಭಟ್ಟರಿಗೆ ಎಷ್ಟೊಂದು ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದರು, ಎಷ್ಟು ಡಿಮ್ಯಾಂಡು ಸೃಷ್ಟಿಯಾಗುತ್ತಿತ್ತು? ಲೇಖನದಲ್ಲಿ ಪ್ರಕಟಗೊಂಡಿರುವ ಅವರ ಮೊಬೈಲ್ ನಂಬರಿಗೆ, ಇ-ಮೇಲ್ ಐಡಿಗೆ ಅದೆಷ್ಟು ಆರ್ಡರುಗಳು ಸಿಕ್ಕಿ ಅವರ ಬದುಕು ಪಾವನವಾಗುತ್ತಿತ್ತು?
ತಡೀರಿ, ನಾವು ನಮ್ಮ ಬ್ಲಾಗ್‌ಪೇಜ್ ಓಪನ್ ಮಾಡಿ, ಭಟ್ಟರ ಕೈಯಲ್ಲಿ ಮೆಷಿನ್ನು ಹಿಡಿಸಿ ನಮ್ಮ ಬ್ಲಾಗಿನ ವಾಸ್ತು ಸರಿ ಇದೆಯೋ ಇಲ್ಲವೋ ಚೆಕ್ ಮಾಡಿಸಿಬಿಡ್ತೀವಿ.
ವಾಸ್ತು ಶಾಸ್ತ್ರಕ್ಕೆ ಜಯವಾಗಲಿ, ಹೊಸ ಮೆಷಿನ್ನಿಗೆ ಜಯವಾಗಲಿ.
ನಿಜವಾಗಿಯೂ ಅದ್ಭುತ ಸಂಶೋಧನೆ.ಮಹತ್ತರ ಬರಹ. ಇಂತಹ ಸಂಶೋಧನೆಯನ್ನು ಕಂಡು ಹಿಡಿದು ಜಗತ್ತಿಗೆ ತಿಳಿಸಿದ ಪತ್ರಕರ್ತರಿಗೆ ಜೋಹಾರು! ಈ ಯಂತ್ರ ಪತ್ತೆ ಮಾಡಿದವರು ಎಲ್ಲ ಕನ್ನಡ ಟೀವಿ ಚಾನೆಲ್ಗಳ ಬೆಳಿಗ್ಗೆಯ ಕಾರ್ಯಕ್ರಮದಲ್ಲಿ ವಾಸ್ತು ಸಲಹೆ ನೀಡಲು ಅರ್ಹತೆ ಪಡೆದಿರುವುದರಿಂದ ಕೂಡಲೇ ಚಾನೆಲ್ ಗಳು ಈ ಯಂತ್ರ ಹಾಗೂ ಯಂತ್ರ ಕಂಡು ಹಿಡಿದ ಮಹಾಜ್ಞಾನಿಯ ಲೈವ್ ಕಾರ್ಯಕ್ರಮ ಪ್ರಸಾರ ಮಾಡುವುದು ಲೇಸು.
ReplyDelete-ಹೀಗೊಬ್ಬ ಪತ್ರಕರ್ತ