Thursday, December 30, 2010

ವಿಶ್ವಾಸಾರ್ಹ ಪತ್ರಿಕೆಗೊಂದು ವಿಶ್ವಾಸಾರ್ಹತೆಯ ಸವಾಲು!

ಮಾನ್ಯ ಸಂಪಾದಕರೆ,
ನಿಮ್ಮದು ನಿಜಕ್ಕೂ ವಿಶ್ವಾಸಾರ್ಹವಾದ ಪತ್ರಿಕೆ. ವೈಯಕ್ತಿಕವಾಗಿ ನಿಮ್ಮ ಹಾಗು ನಿಮ್ಮ ಪತ್ರಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳಿಲ್ಲ. ಆದರೂ ನಿಮ್ಮದು ದೊಡ್ಡ ಸಂಸ್ಥೆ. ಅಲ್ಲೊಂದು ಇಲ್ಲೊಂದು ಭ್ರಷ್ಟ ಸಂತತಿ ಹಾಗೂ ಹೀಗೂ ಸ್ಥಾಪಿಸಿಕೊಳ್ಳುವುದು ಸಹಜ. ಈಗ ನಿಮ್ಮ ಗಮನಕ್ಕೆ ತರುತ್ತಿರುವುದೂ ಸಹ ಇಂಥದೇ ಸಂತತಿಯ ಕುರಿತು.

ವಿಜಯ ಕರ್ನಾಟಕವನ್ನು ನೋಡಿ, ಅಲ್ಲಿ ಕ್ಲೀನಿಂಗ್ ಕೆಲಸ ಚೆನ್ನಾಗಿಯೇ ನಡೆಯುತ್ತಿದೆ. ಅಂಥದ್ದು ನಿಮ್ಮಲ್ಲೂ ಮತ್ತೆಲ್ಲಾ ಮಾಧ್ಯಮ ಸಂಸ್ಥೆಗಳಲ್ಲೂ ಆಗಬೇಕು ಎಂಬುದೇ ನಮ್ಮ ಕಾಳಜಿ. ಇದು ಆಗದ ಹೊರತು ಪತ್ರಕರ್ತರಿಗೆ ಅಂಟಿರುವ ಭ್ರಷ್ಟಾಚಾರದ ರೋಗ ವಾಸಿಯಾಗುವುದಿಲ್ಲ. ವಾಸಿಯಾಗದೆ ಇದ್ದರೆ ಮುರುಘ ರಾಜೇಂದ್ರ ಶರಣರಂಥವರು ಪತ್ರಕರ್ತರನ್ನು ಕಿತ್ತು ತಿನ್ನುವ ನಾಯಿಗಳು ಎಂದು ಬೈಯುವುದೂ ತಪ್ಪುವುದಿಲ್ಲ. ನಿಮ್ಮದೇ ಪತ್ರಿಕೆಯ ಹಿರಿಯ ಪತ್ರಕರ್ತರು, ಹೌದು, ನಾವು ನಾಯಿಗಳೇ ಸರಿ ಎಂಬಂತೆ ಆತ್ಮನಿಂದನೆ ಮಾಡಿಕೊಳ್ಳುವುದೂ ತಪ್ಪುವುದಿಲ್ಲ. ಸದ್ಯಕ್ಕೆ ಪತ್ರಕರ್ತರನ್ನು ಕಿತ್ತು ತಿನ್ನುವ ನಾಯಿಗಳು ಎಂದು ಕರೆಯಲಾಗಿದೆ, ಮುಂದೆ ಹುಚ್ಚು ನಾಯಿಗಳು, ಕಂತ್ರಿ ನಾಯಿಗಳು, ಕಜ್ಜಿ ನಾಯಿಗಳು ಎಂದು ಕರೆಯುವಂತಾಗಬಾರದಲ್ಲವೆ?

ನಿಮ್ಮ ಗಮನಕ್ಕೆ ತರಲು ಬಯಸಿರುವ ವಿಷಯವನ್ನು ಪ್ರಸ್ತಾಪಿಸಬಯಸುತ್ತೇವೆ. ಇದು ಕಳೆದ ಆಗಸ್ಟ್ ತಿಂಗಳಲ್ಲಿ ನಡೆದದ್ದು. ಗುಲ್ಬರ್ಗ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸಂದರ್ಭದ ಕಥೆ ಇದು. ಈ ಕುರಿತು ನಿಮಗೆ ಒಟ್ಟು ಮೂರು ಪ್ರತ್ಯೇಕ ದೂರುಗಳು ಬಂದಿವೆ. ಆ ಕುರಿತು ನೀವು ತನಿಖೆ ಆರಂಭಿಸಿದ್ದೀರೋ ಇಲ್ಲವೋ ಎಂಬುದು ಇನ್ನೂ ಗೊತ್ತಾಗಬೇಕಿದೆ.

ಮೊದಲ ದೂರಿನ ಪ್ರಕಾರ ನಿಮ್ಮ ಬ್ಯೂರೋ ಮುಖ್ಯಸ್ಥರೊಬ್ಬರು ಜೆಡಿಎಸ್ ಅಭ್ಯರ್ಥಿಯ ಪುತ್ರನಿಂದ ಎರಡು ಲಕ್ಷ ರೂ.ಗಳನ್ನು ಚುನಾವಣಾ ಪ್ಯಾಕೇಜ್ ಹಣವಾಗಿ ಪಡೆದಿದ್ದಾರೆ. ಎರಡು ಲಕ್ಷ ರೂ.ಗಳಿಗೆ ಅವರು ರಿಲೀಸ್ ಆರ್ಡರ್ ಕೂಡ ಕೊಟ್ಟಿದ್ದಾರೆ. ಆದರೆ ಕೊಟ್ಟಿರುವುದು ಕೇವಲ ೯೭,೮೦೮ ರೂ.ಗಳಿಗೆ ರಸೀದಿ ಮಾತ್ರ. (ರಸೀದಿಗಳ ವಿವರ: ರಸೀದಿ ಸಂಖ್ಯೆ ೨೦೬ರಲ್ಲಿ ೧೨,೮೮೦ ರೂ, ರಸೀದಿ ಸಂಖ್ಯೆ ೨೧೩ರಲ್ಲಿ ೧೨,೮೮೦ ರೂ., ರಸೀದಿ ಸಂಖ್ಯೆ ೨೧೫ರಲ್ಲಿ ೧೧,೨೭೦ರೂ., ರಸೀದಿ ಸಂಖ್ಯೆ ೨೧೬ರಲ್ಲಿ ೧೨,೮೮೮ ರೂ., ಮತ್ತು ರಸೀದಿ ಸಂಖ್ಯೆ ೨೨೫ರಲ್ಲಿ ೪೭,೮೯೮ ರೂ.) ಉಳಿದ ಒಂದು ಲಕ್ಷಕ್ಕೂ ಮಿಕ್ಕಿದ ಹಣ ಏನಾಯಿತು?

ದೂರು ಹೇಳುವ ಪ್ರಕಾರ ನಿಮ್ಮ ಬ್ಯೂರೋ ಮುಖ್ಯಸ್ಥರು ಇಟ್ಟ ಡಿಮ್ಯಾಂಡ್ ೫ ಲಕ್ಷ ರೂಪಾಯಿಗಳದ್ದು. ಆದರೆ ಅಷ್ಟೊಂದು ಕೊಡಲು ಸಾಧ್ಯವಿಲ್ಲವೆಂದು ಅಭ್ಯರ್ಥಿಯ ಪುತ್ರ ಕೊಟ್ಟಿದ್ದು ಐನೂರು ರೂಪಾಯಿಗಳ ನಾಲ್ಕು ಬಂಡಲ್‌ಗಳು; ಎಂದರೆ ೨ ಲಕ್ಷ ರೂಪಾಯಿಗಳು.

ಒಂದು ಲಕ್ಷ ರೂಪಾಯಿ ನಿಮ್ಮ ಸಂಸ್ಥೆಗೆ ದೊಡ್ಡ ಹಣವೇನೂ ಅಲ್ಲ. ಆದರೆ ಈ ಅವ್ಯವಹಾರದಿಂದ ಪತ್ರಿಕೆಯ ವರ್ಚಸ್ಸಿಗೆ ಆಗುವ ಹಾನಿಯನ್ನು ಭರಿಸುವುದು ಹೇಗೆ? ಇದನ್ನು ನೀವೇ ಯೋಚಿಸಬೇಕು.

ಇನ್ನೊಂದು ಪ್ರತ್ಯೇಕ ದೂರನ್ನು ನೀಡಿರುವವರು ಕಾಂಗ್ರೆಸ್ ಪಕ್ಷದವರು. ಇದೇ ಚುನಾವಣೆಯ ಸಂದರ್ಭದಲ್ಲಿ ೭೦ ಸಾವಿರ ರೂಪಾಯಿಗಳನ್ನು ಇದೇ ಬ್ಯೂರೋ ಮುಖ್ಯಸ್ಥರು ಪಡೆದಿದ್ದಾರೆ ಎಂಬುದು ಅವರ ದೂರು. ಮೂರನೇ ದೂರು ಕೊಟ್ಟಿರುವವರು ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದವರು. ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಪ್ಯಾಕೇಜ್ ಸುದ್ದಿಗಾಗಿ ೨ ಲಕ್ಷ ರೂಪಾಯಿಗಳನ್ನು ಪಡೆಯಲಾಗಿದೆ ಎಂಬುದು ದೂರಿನ ಸಾರಾಂಶ. ಹಣ ನೀಡಿಕೆ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಉದ್ಯೋಗಿಯೊಬ್ಬರೂ ಇದ್ದರು ಎಂದು ದೂರು ಹೇಳುತ್ತದೆ.

ದೂರು ಕೊಟ್ಟ ಎಲ್ಲರದೂ ಒಂದೇ ಬೇಡಿಕೆ. ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂಬುದು. ತನಿಖೆ ನಡೆಸಲು ಅನುಕೂಲವಾಗುವಂತೆ ಹಣ ಕೊಟ್ಟವರ ಮೊಬೈಲ್ ಸಂಖ್ಯೆಗಳನ್ನೂ ಅವರು ನೀಡಿದ್ದಾರೆ. ಮಾತ್ರವಲ್ಲದೆ ಕೆಲವು ಕೆಲವು ಆಡಿಯೋ ಸಂಭಾಷಣೆಯ ಟೇಪ್ ಕೂಡ ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲ ದೂರುಗಳನ್ನು ಗಮನಿಸಿದರೆ ‘ದಾಲ್ ಮೇ ಕುಚ್ ಕಾಲಾ ಹೈ ಎಂದು ಅನ್ನಿಸುತ್ತದೆ. ಯಾರೋ ವೈಯಕ್ತಿಕ ದ್ವೇಷದಿಂದ ನೀಡಿರುವ ದೂರುಗಳ ಹಾಗೆ ಇವು ಕಾಣುವುದಿಲ್ಲ. ಎಲ್ಲೆಲ್ಲಿ ಎಷ್ಟು ಹಣವನ್ನು ಕೊಡಲಾಗಿದೆ, ಹಣ ಸ್ವೀಕರಿಸಲು ಯಾವ ಯಾವ ಸ್ಥಳಗಳನ್ನು ನಿಗದಿಪಡಿಸಲಾಗಿತ್ತು ಎಂಬುದನ್ನೂ ಸಹ ದೂರಿನಲ್ಲಿ ಬರೆಯಲಾಗಿದೆ.

ತಾವು ಕ್ರಮ ಕೈಗೊಳ್ಳದೇ ಹೋದಲ್ಲಿ ರಾಜ್ಯದ ಪ್ರಮುಖ ಪತ್ರಕರ್ತರಿಗೆ, ಲೋಕಾಯುಕ್ತರಿಗೆ, ಪ್ರಮುಖ ರಾಜಕೀಯ ಮುಖಂಡರಿಗೂ ದೂರಿನ ಪ್ರತಿಯನ್ನು ಕಳುಹಿಸುವುದಾಗಿ ದೂರುದಾರರು ಹೇಳಿಕೊಂಡಿದ್ದಾರೆ.

ಇದು ನಿಜಕ್ಕೂ ನಿಮ್ಮ ಸಂಸ್ಥೆಯ ವರ್ಚಸ್ಸಿಗೆ ಘಾಸಿಯಾಗುವಂಥದ್ದು. ಇಂಥದ್ದನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ನಿಮ್ಮ ಜವಾಬ್ದಾರಿಯೇ ಆಗಿದೆ. ನಿಮ್ಮ ತನಿಖೆಯಲ್ಲಿ ನಿಮ್ಮ ಬ್ಯೂರೋ ಮುಖ್ಯಸ್ಥರು ನಿರ್ದೋಷಿ ಎಂದು ಸಾಬೀತಾದರೆ ಸಂತೋಷ. ಆದರೆ ತನಿಖೆಯಂತೂ ನಡೆಯಲೇಬೇಕಲ್ಲವೆ?

ಇದನ್ನು ಹೇಗೆ ನಿಭಾಯಿಸುತ್ತೀರೋ ನೋಡಿ.

ಅಭಿಮಾನ ಹಾಗು ಗೌರವಪೂರ್ವಕವಾಗಿ
ನಿಮ್ಮ ಪತ್ರಿಕೆಯ ಓದುಗರು

9 comments:

 1. the editor should consider this seriously and take necessary action. If it is not true, he should disprove it.

  ReplyDelete
 2. is it true?
  something is rotten in the field of journalism. editors and owners of all media houses should act.

  ReplyDelete
 3. yaru guru, aa mahashaya? avra hesru heli.

  ReplyDelete
 4. govt officers have threat of Lokayukta. these journalists are free. even lokayukta can't act on them. and, seldom those bribe journalists come out in public

  ReplyDelete
 5. ನೀವು ಏನನ್ನು, ಯಾವ ಪತ್ರಿಕೆ, ಯಾವ ಬ್ಯೂರೋ ಕುರಿತು ಹೇಳುತ್ತಾ ಇದ್ದೀರಿ ಎನ್ನುವುದು ಸ್ಪಷ್ಟವಾಗಿ ತಿಳಿಯಿತು. ಸಂಪಾದಕರು ಕ್ರಮ ಕೈಗೊಳ್ಳಲಿ. ಇಲ್ಲವಾದರೆ ವಿಶ್ವಾಸಾರ್ಹತೆ ಎಂಬ ಪದಕ್ಕೆ ಅರ್ಥವಿರುವುದಿಲ್ಲ.

  ReplyDelete
 6. ಇದು ನಿಜಕ್ಕೂ ಸವಾಲು. ಪತ್ರಿಕೆ ಮಾಲೀಕರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಕಾದು ನೋಡೋಣ. ಸುದ್ದಿಯೇ ಆಗದ ಇಂಥ ಸುದ್ದಿಯನ್ನು ಹೆಕ್ಕಿ ಪ್ರಕಟಿಸಿದ್ದಕ್ಕೆ ಅಭಿನಂದನೆಗಳು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಇದು ಎಂದೋ ಆಗಬೇಕಿತ್ತು. ಎಲ್ಲರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪತ್ರಕರ್ತರೂ ಕ್ಲೀನ್ ಹ್ಯಾಂಡ್ ಆಗಿರಬೇಕು ಎಂದು ಸಮಾಜ ಬಯಸುವುದರಲ್ಲಿ ತಪ್ಪೇನಿದೆ? ನಿಮ್ಮ ಈ ಆಂದೋಲನಕ್ಕೆ ನನ್ನ ಬೆಂಬಲವಿದೆ.

  ReplyDelete
 7. Please put an email to contact you people. I 've some documents to send.
  -Ramakrishna

  ReplyDelete
 8. Editor should act.

  ReplyDelete
 9. This comment has been removed by a blog administrator.

  ReplyDelete