Friday, December 23, 2011

ನಿಮ್ಮ ನೆರವು ಅವರನ್ನು ತಲುಪಿದೆ...

ಕೆಜಿಎಫ್ ನ ಮಲಸಂತ್ರಸ್ಥರಿಗಾಗಿ ವರ್ತಮಾನ ಬಳಗ ನಡೆಸಿದ ಮಾನವೀಯ ಯತ್ನಕ್ಕೆ ಅಭಿನಂದನೆಗಳು. ವರ್ತಮಾನದ ಅಪೀಲನ್ನು ಸಂಪಾದಕೀಯದಲ್ಲೂ ಪ್ರಕಟಿಸಿದ್ದೆವು. ಸಾಕಷ್ಟು ಓದುಗರು ಸ್ಪಂದಿಸಿದ್ದಾರೆ. ಆ ಎಲ್ಲರಿಗೂ ಧನ್ಯವಾದಗಳು. ಕೆಲವು ಫೊಟೋಗಳು ಮತ್ತು ದಯಾನಂದ್ ಬರೆದ ಒಂದು ಟಿಪ್ಪಣಿ ಇಲ್ಲಿದೆ.
                                                                     -ಸಂಪಾದಕೀಯ


ವರ್ತಮಾನದ ಕರೆಗೆ ಓಗೊಟ್ಟ ಸಹೃದಯ ಜೀವಪರ ಬಂಧುಗಳಿಗೆ ಕೆಜಿಎಫ್‌ನ ಮಲಸಂತ್ರಸ್ಥರ ನೆನಕೆಗಳು ಸಲ್ಲುತ್ತಿವೆ. ವ್ಯವಸ್ಥೆ, ಅಧಿಕಾರ ಮತ್ತು ಸಮಕಾಲೀನ ನ್ಯಾಯ ನಿರಾಕರಣೆಯ ಅಡಕತ್ತರಿಗೆ ಸಿಕ್ಕಿಬಿದ್ದಿದ್ದ ಈ ಸಂತ್ರಸ್ಥರ ಹಸಿವಿನ ಸಂಕಷ್ಟವನ್ನು ನೀಗಲು ಜೊತೆ ನಿಲ್ಲೋಣ ಎಂಬ ವರ್ತಮಾನದ ಕರೆಗೆ ಅದೆಷ್ಟೋ ಮಂದಿ ಮುಂದೆ ಬಂದರು. ನಾವು ಒಂದು ಕ್ವಿಂಟೋಲ್, ಎರಡು ಕ್ವಿಂಟೋಲ್ ಅಕ್ಕಿ ಕೊಡಿಸುತ್ತೇವೆ ಅಂದವರು ಸುಮಾರು ಮಂದಿ. ಬ್ಯಾಂಕ್ ಅಕೌಂಟಿಗೆ ಒಬ್ಬರ ನಂತರ ಒಬ್ಬರಂತೆ ಹಣವನ್ನು ಸಂದಾಯ ಮಾಡಿದರು. ಕೆಲವರು ಚೆಕ್ ಕಳಿಸಿಕೊಟ್ಟರು, ಇನ್ನು ಹಲವು ಗೆಳೆಯರು/ಗೆಳತಿಯರು ನೇರವಾಗಿಯೇ ಬಂದು ನಮ್ಮ ಪಾಲಿದು ಎಂದು ಧನಸಹಾಯ ಮಾಡಿದರು. ಹೀಗೆ ಒಟ್ಟು ಸಂಗ್ರಹವಾದ ಹಣ ೩೫ ಸಾವಿರ ರೂಪಾಯಿಗಳು. ಕ್ವಿಂಟೋಲ್ ಲೆಕ್ಕದ ಅಕ್ಕಿ ಮೂಟೆಗಳನ್ನು ಕೆಜಿಎಫ್ ಗೆ ಸಾಗಿಸುವುದು ತಾರ್ಕಿಕವಾಗಿ ಅಸಾಧ್ಯವಾದ ಕೆಲಸವೆಂಬ ಕಾರಣಕ್ಕೆ ಸಂಗ್ರಹಗೊಂಡ ಹಣದಲ್ಲಿಯೇ ಕೆಜಿಎಫ್‌ನಲ್ಲಿಯೇ ಒಂದಷ್ಟು ಆಹಾರ ಸಾಮಗ್ರಿಯನ್ನು ಖರೀದಿಸಿ ನೀಡುವುದೆಂದು ತೀರ್ಮಾನವಾಯಿತು.

ಜೀವಪರ ನಿಲುಮೆಯ ಗೆಳೆಯ ಗೆಳತಿಯರು ಹೊಂದಿಸಿಕೊಟ್ಟ ಈ ಹಣವನ್ನು ತೆಗೆದುಕೊಂಡು ಕಳೆದ ಭಾನುವಾರ ಕೆಜಿಎಫ್‌ಗೆ ಭೇಟಿ ನೀಡಲಾಯಿತು. ಪತ್ರಕರ್ತ ಗೆಳೆಯರಾದ ದಿನೇಶ್, ಪ್ರವೀಣ್ ಸೂಡರೊಟ್ಟಿಗೆ ಮಧ್ಯಾಹ್ನದ ಹೊತ್ತಿಗೆ ಕೆಜಿಎಫ್ ತಲುಪಿದಾಗ ಅಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಕೆಜಿಎಫ್‌ನ ಮಾಜಿ ಗಣಿ ಕಾರ್ಮಿಕರೂ, ಪ್ರಸ್ತುತ ಮಲ ಹೊರುವ ವೃತ್ತಿಗೆ ಬಿದ್ದು ಜೀವಗಳನ್ನು ಅಡವಿಟ್ಟು ಬದುಕುತ್ತಿದ್ದ ಕಾರ್ಮಿಕರೂ ಆದ ವೈ.ಜೆ. ರಾಜೇಂದ್ರ, ವಕೀಲ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತೆ ಪದ್ಮ ಮತ್ತು ಕೋಲಾರದ ಎಡಪಂಥದ ಸಂಘಟನೆಗಳ ಸಮ್ಮುಖದಲ್ಲಿ ಸಭೆ ಸೇರಿದ್ದರು. ಅವರೊಟ್ಟಿಗೆಯೇ ಕುಳಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವಲ್ಲಿ ಭಾಗಿಯಾಗಿ ಸಭೆ ಮುಗಿಯುವಷ್ಟರಲ್ಲಿ ಕತ್ತಲಾಗತೊಡಗಿತ್ತು.

ಸಭೆ ಮುಗಿಸಿ ಬಂದ ಪದ್ಮಾ ಮತ್ತು ಪ್ರಭುರವರೊಟ್ಟಿಗೆ ಕೆಜಿಎಫ್‌ನ ಮಾರುಕಟ್ಟೆಗೆ ತೆರಳಿ ಅಲ್ಲಿನ ೫೦ ಕುಟುಂಬಗಳಿಗೆ ನಮ್ಮ ಬಳಿ ಸಂಗ್ರಹವಾದ ೩೫ ಸಾವಿರದ ಮಿತಿಯಲ್ಲಿ ಯಾವ ಬಗೆಯಲ್ಲಿ ನೆರವು ನೀಡಬಹುದೆಂದು ಕೂಡಿ ಕಳೆದು ಲೆಕ್ಕಾಚಾರ ಮಾಡಿದಾಗ ಒಟ್ಟು ೫೦ ಕುಟುಂಬಗಳಿಗೂ ಪ್ರತೀ ಕುಟುಂಬಕ್ಕೂ ೨೫ ಕೇಜಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬಹುದೆಂದು ನಿಷ್ಕರ್ಷೆಯಾಯಿತು. ಅದರಂತೆ ೧೨೫೦ ಕಿಲೋ ಅಕ್ಕಿಯನ್ನು ೨೫ ಕೇಜಿ ಚೀಲದಂತೆ ಖರೀದಿಸಿ ಅಲ್ಲಿಂದ ಒಂದು ಸರಕುಸಾಗಣೆಯ ವಾಹನದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ವಾಸಿಸುವ ಪ್ರದೇಶವಾದ ಕೆನಡೀಸ್ ಲೈನ್‌ಗೆ ಕೊಂಡೊಯ್ದೆವು.

ಅಲ್ಲಿ ಒಟ್ಟು ೫೦ ಕುಟುಂಬಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಿ ಒಬ್ಬೊಬ್ಬರ ಹೆಸರನ್ನೂ ಕರೆದು ಅವರಿಗೆ ಪ್ರತೀ ಮನೆಗೆ ೨೫ ಕೇಜಿ ಅಕ್ಕಿಯಂತೆ ವಿತರಣೆ ಮಾಡಲಾಯಿತು. ತಕ್ಷಣಕ್ಕೆ ದೊರೆತ ಈ ಬಗೆಯ ನೆರವಿನಿಂದ ಕಾರ್ಮಿಕರಲ್ಲಿ ಕೆಲವರು ಭಾವುಕರಾಗಿದ್ದರು, ಕೊಟ್ಟವರು ಯಾರೋ ಏನೋ ಗೊತ್ತಿಲ್ಲ ಅವರ ಜೀವಕ್ಕೆ ಒಳ್ಳೆಯದಾಗಲೆಂಬ ಹರಕೆ ಸಂತ್ರಸ್ಥ ಕಾರ್ಮಿಕರದ್ದಾಗಿತ್ತು. ಎಲ್ಲರ ಮುಖದಲ್ಲೂ ಹಸಿವಿನಿಂದ ತಾತ್ಕಾಲಿಕವಾಗಿಯಾದರೂ ತಪ್ಪಿಸಿಕೊಂಡೆವಲ್ಲ ಎಂಬ ಸಮಾಧಾನವಿತ್ತು. ಅಕ್ಕಿ ಖರೀದಿಗೆ ೩೦ ಸಾವಿರ ರೂಗಳನ್ನು ವ್ಯಯಿಸಿ ಊಟ, ಕಾರಿನ ಪೆಟ್ರೋಲು, ಸರಕುಸಾಗಣೆ ವಾಹನದ ಬಾಡಿಗೆ ಎಲ್ಲವೂ ಕಳೆದು ಇನ್ನೂ ಮೂರೂವರೆ ಸಾವಿರದಷ್ಟು ಹಣ ಹಾಗೆಯೇ ಉಳಿದಿತ್ತು. ಅದರಲ್ಲಿ ಎಣ್ಣೆ ಖರೀದಿಸಿ ವಿತರಿಸುವ ಯೋಜನೆ ಹಾಕಿಕೊಂಡೆವಾದರೂ ಅದಕ್ಕೆ ಮೂರೂವರೆ ಸಾವಿರ ಕಡಿಮೆ ಬೀಳುತ್ತದೆಂಬ ಕಾರಣಕ್ಕೆ ಸುಮ್ಮನಾದೆವು.

ಉಳಿದಿರುವ ಮೂರೂವರೆ ಸಾವಿರ ರೂಗಳ ಜೊತೆಗೆ ಬೆಂಗಳೂರಿನ ಕೆಲವರು ಅಕ್ಕಿ ಕೊಡಿಸುವ ಭರವಸೆ ನೀಡಿದ್ದರು, ಅದನ್ನು ಮತ್ತೆ ತೆಗೆದುಕೊಂಡು ಇದೇ ಬಗೆಯ ಸಂಕಷ್ಟಕ್ಕೆ ಸಿಲುಕಿರುವ ಕೆಜಿಎಫ್‌ನ ಬಿ. ಬ್ಲಾಕ್ ಮತ್ತು, ಬೇರ್ಶಾಪ್ ಪ್ರದೇಶಗಳಿಗೆ ತಲುಪಿಸುವ ಯೋಜನೆಯನ್ನು ಯೋಜಿಸಿದೆವು. ರಾತ್ರಿ ಹತ್ತರವರೆಗೂ ಅಕ್ಕಿ ವಿತರಣೆಯ ಕೆಲಸದಲ್ಲಿ ಮಗ್ನವಾಗಿದ್ದ ನಮ್ಮ ತಂಡ ವಿತರಣೆಯ ಜವಾಬ್ದಾರಿ ನಿರ್ವಹಿಸಿದ ಮೇಲೆ, ನಿಮ್ಮೊಟ್ಟಿಗೆ ನಾವಿದ್ದೇವೆ, ನೀವು ಒಂಟಿಯಲ್ಲ, ಬೆಂಗಳೂರಿನ ಒಂದು ಪಡೆಯೇ ನಿಮ್ಮೊಟ್ಟಿಗೆ ಇರುತ್ತದೆ, ನಿಮ್ಮ ಹೋರಾಟವನ್ನು ಮುಂದುವರೆಸಿ, ಯಶಸ್ಸು ಸಿಗಲಿ ಎಂದು ಹಾರೈಸಿ ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ ೨ ಗಂಟೆಯಾಗಿತ್ತು. ವರ್ತಮಾನದೊಟ್ಟಿಗೆ ಕೈ ಜೋಡಿಸಿದ ಎಲ್ಲರ ನೆರವಿಗೂ ಸಾರ್ಥಕತೆ ಮೂಡಿದ ಸಮಾಧಾನ ನಮಗಿತ್ತು.

ಮಾನವೀಯ ನೆರವು ನೀಡಿದವರ ಪಟ್ಟಿ ಇಲ್ಲಿದೆ.
ವರ್ತಮಾನ ಬಳಗ- ೫೦೦೦
ರಾಮಕೃಷ್ಣ ಎಂ. -೧೦೦೦೦
ಮಾನಸ ನಾಗರಾಜ್- ೫೦೦
ಅನಾಮಧೇಯ-೧ -೧೦೦೦
ಎಸ್.ವಿಜಯ, ಮೈಸೂರು -೧೦೦೦
ಸ್ವರ್ಣಕುಮಾರ್ ಬಿ.ಎ. -೧೫೦೦
ಬಿ. ಶ್ರೀಪಾದ ಭಟ್ -೨೦೦೦
ಅನಾಮಧೇಯ -೨ -೫೦೦
ಅಕ್ಷತಾ, ಶಿವಮೊಗ್ಗ -೧೦೦೦
ಸಂದೀಪ್ / ರಾಘವೇಂದ್ರ ಸಿ.ವಿ.- ೨೦೦೦
ಪಿ.ರಂಗನಾಥ -೨೦೦೦
ತ್ರಿವೇಣಿ ಟಿ.ಸಿ. -೧೦೦೦
ಅವಿನಾಶ ಕನ್ನಮ್ಮನವರ -೫೦೦
ಸತೀಶ್ ಗೌಡ ಬಿ.ಎಚ್. -೫೦೦
ಆರ್.ಕೆ.ಕೀರ್ತಿ -೧೦೦೦
ಬಿ. ಸಣ್ಣೀರಪ್ಪ (ಕ.ರ.ವೇ.) -೫೦೦
ಸಿ.ವಿ. ದೇವರಾಜ್ (ಕ.ರ.ವೇ.) -೧೦೦೦
ನಂದಿನಿ ಎ.ಡಿ. -೫೦೦
ಕಾರ್ತಿಕ್ ಡಿ.ಪಿ.- ೧೫೦೦
ಶಿವಕುಮಾರ್ ದಂಡಿಗೆ ಹಳ್ಳಿ -೨೦೦೦
ಮಹೇಶ್ ಕೆ. -೧೦೦ ಕೆಜಿ ಅಕ್ಕಿ

-ಟಿ.ಕೆ.ದಯಾನಂದ್


ಹೆಚ್ಚಿನ ವಿವರಗಳಿಗಾಗಿ ವರ್ತಮಾನ ವೆಬ್ ಸೈಟ್ ಗೆ ಭೇಟಿ ನೀಡಿ.

Thursday, December 22, 2011

ಸಂಪಾದಕೀಯಕ್ಕೆ ಒಂದು ವರ್ಷ: ಎಲ್ಲರಿಗೂ ನಮ್ಮ ಪ್ರೀತಿ ಸಲ್ಲುತ್ತದೆ


ಸಂಪಾದಕೀಯಕ್ಕೆ ಇವತ್ತಿಗೆ ಸರಿಯಾಗಿ ಒಂದು ವರ್ಷ ತುಂಬಿತು. ಒಂದು ಕ್ಷಣ ತಿರುಗಿ ಒಮ್ಮೆ ನೋಡಿದಾಗ ಒಂದು ವರ್ಷ ಆಗೇ ಹೋಯ್ತಾ ಅನಿಸುವುದುಂಟು. ಹೀಗೊಂದು ಬ್ಲಾಗ್ ಮಾಡುವ ಯೋಚನೆ ಹುಟ್ಟಿದ್ದು ಅಚಾನಕ್ಕಾಗಿ. ಇಷ್ಟು ಗಂಭೀರವಾಗಿ ಮುಂದುವರೆಸಿಕೊಂಡು ಹೋಗುತ್ತೀವೆಂಬ ಖಚಿತ ವಿಶ್ವಾಸವೂ ಆಗ ಇರಲಿಲ್ಲ. ಆದರೆ ಇದು ತನ್ನ ಪಾಡಿಗೆ ತಾನು ಬೆಳೆದುಕೊಂಡು ಬಂತು.

ತನ್ನ ಪಾಡಿಗೆ ತಾನು ಬೆಳೆಯುತ್ತ ಬಂತು ಎನ್ನುವುದಕ್ಕಿಂತ ಇದನ್ನು ಬೆಳೆಸಿದ್ದೇ ನೀವು ಎಂದರೆ ತಪ್ಪಾಗಲಿಕ್ಕಿಲ್ಲ. ಇದೊಂದು ಸಂಪಾದಕೀಯಕ್ಕಾಗಿ ತುಂಬಾ ಜನರು ಕಾದು ಕುಳಿತಿದ್ದರೇನೋ ಎಂಬಂತೆ ಇದ್ದವು ಪ್ರತಿಕ್ರಿಯೆಗಳು. ನಿಮ್ಮ ಪ್ರತಿಕ್ರಿಯೆಗಳೇ ನಮ್ಮನ್ನು ಬೆಳೆಸುತ್ತಾ ಬಂದವು. ನಮ್ಮಿಂದ ಅಸಾಧ್ಯವಾದದ್ದು ಎಂದು ಭಾವಿಸಿದ್ದನ್ನೆಲ್ಲ ನೀವು ನಿರೀಕ್ಷಿಸಿದಿರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಇದನ್ನು ರೂಪಿಸಲು ನಾವು ನಮ್ಮ ವ್ಯಾಪ್ತಿಯನ್ನೂ ಮೀರಿ ಹೆಣಗುತ್ತ ಬಂದೆವು. ಈಗ ನಿಂತು ಯೋಚಿಸಿದರೆ ಒಂದು ಧನ್ಯತಾ ಭಾವ, ಒಂದು ಸುದೀರ್ಘ ನಿಟ್ಟುಸಿರು.

ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು.

ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. ಸಂಪಾದಕೀಯದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.

ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.

ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ.

ಈ ಒಂದು ವರ್ಷದಲ್ಲಿ ಸಾವಿರಾರು ಮಂದಿ ಸಂಪಾದಕೀಯದ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ನಮ್ಮೊಂದಿಗೆ ಒಡನಾಡಿದ್ದಾರೆ. ಬಹುತೇಕರು ಮೀಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಲವಾರು ಮಂದಿ ಸಂಪಾದಕೀಯದಲ್ಲಿ ಬರೆದಿದ್ದಾರೆ. ಸಾಕಷ್ಟು ಮಂದಿ ಜಗಳವಾಡಿದ್ದಾರೆ. ಮುನಿಸಿಕೊಂಡು ಹೋದವರೂ ಇದ್ದಾರೆ. ಎಲ್ಲರ ಮೇಲೂ ನಮಗೆ ಪ್ರೀತಿ ಮತ್ತು ಪ್ರೀತಿಯಷ್ಟೇ ಇದೆ ಎಂದು ಪ್ರೀತಿಯಿಂದಲೇ ಹೇಳಲು ಬಯಸುತ್ತೇವೆ.

ಇಲ್ಲಿನ ಲೇಖನಗಳಲ್ಲಿ ಒಂದಕ್ಷರವೂ ತಪ್ಪಾಗಿರಬಾರದು ಎಂದು ನಿರೀಕ್ಷಿಸುವವರಿದ್ದಾರೆ. ಸಣ್ಣ ತಪ್ಪಾದರೂ ಕಾಲಕಾಲಕ್ಕೆ ತಿದ್ದುತ್ತಾ ಬಂದವರೂ ಇದ್ದಾರೆ. ಬ್ಲಾಗ್ ಶುರು ಮಾಡಿದ ಸಂದರ್ಭದಿಂದ ಇದುವರೆಗೆ ನಮ್ಮನ್ನು ಹುರಿದುಂಬಿಸುತ್ತ ಬಂದ ಕನ್ನಡದ ವೆಬ್ ಸೈಟ್‌ಗಳು, ಬ್ಲಾಗರ್‌ಗಳ ಪ್ರೀತಿಯೂ ದೊಡ್ಡದು. ಅವರನ್ನು ನೆನೆಯದೇ ಇದ್ದರೆ ಅಪಚಾರವಾದೀತು.

ಬಹುಶಃ ಮೀಡಿಯಾ ಕುರಿತು ಈ ಒಂದು ವರ್ಷದಲ್ಲಿ ಸಾಕಷ್ಟು ಮಾತನಾಡಿದ್ದೇವೆ. ಪದೇಪದೇ ಹೇಳಿದ್ದನ್ನೇ ಹೇಳುವುದರಲ್ಲಿ ಅರ್ಥವೂ ಇರುವುದಿಲ್ಲ. ಇನ್ನು ಇತರ ಕ್ಷೇತ್ರಗಳ ಕುರಿತೂ ಇಲ್ಲಿ ಬರೆಯುತ್ತಾ ಹೋಗಬೇಕು ಎಂದು ಯೋಜಿಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಆದ್ಯತೆ ಮೀಡಿಯಾ ಆಗಿರುತ್ತದೆ ಎಂಬುದಂತೂ ಸ್ಪಷ್ಟ.

ಸಂಪಾದಕೀಯದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ.

ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಿ ವಿರಮಿಸುತ್ತಿದ್ದೇವೆ. ಒಳ್ಳೆಯದಿರಲಿ, ಕೆಟ್ಟದ್ದಿರಲಿ, ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದು ಮುಜುಗರದ ವಿಷಯ. ನಿಮಗೇನನ್ನಿಸುತಿದೆ? ಮರೆಯದೇ ಹೇಳಿ ಹೋಗಿ. ಒಂದು ಸಾಲಾದರೂ ಬರೆದು ಹೋಗಿ. ಈ ಬಾಂಧವ್ಯ ಹೀಗೇ ಮುಂದುವರೆಯಲಿ ಎಂದು ಮತ್ತೆ ಮತ್ತೆ ಕೋರುತ್ತೇವೆ.

ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು.

Tuesday, December 6, 2011

ಕೆಜಿಎಫ್‌ನ ಮಲಸಂತ್ರಸ್ಥರು: ದಯಾನಂದ್ ಬರೆದ ಕರಳು ಹಿಂಡುವ ವಾಸ್ತವಗಳು...


ಈ ನೆಲದ ಹಿರಿಮೆ ಮತ್ತು ಔನ್ನತ್ಯವನ್ನು ಹಾಡಿಹೊಗಳುವಾಗಲೆಲ್ಲ ಮೈಸೂರು ಪೇಟ, ಕೊಡವರ ದಿರಿಸು ಮತ್ತು ಕೋಲಾರದ ಕೆಜಿಎಫ್‌ನ ಚಿನ್ನದ ಗಣಿಯ ಪ್ರಸ್ತಾಪವಿಲ್ಲದೆ ಆ ಸಾಲು ಕೊನೆಯಾಗುವುದೇ ಇಲ್ಲ. ಒಂದನೇ ತರಗತಿಯಿಂದ ನಾವೆಲ್ಲರೂ ಓದಿಕೊಂಡ ಒಟ್ಟು ರಾಜ್ಯದ ಬೋಪರಾಕು ಗೀತೆಗಳು ಕನ್ನಡನಾಡು ಚಿನ್ನದ ಬೀಡು ಎಂಬ ಮೂರುಪದಗಳನ್ನು ನಮ್ಮ ನಾಲಿಗೆಯ ಮೇಲೆ ಮುದ್ರಿತವಾದಂತೆ ಇನ್ನೂ ಹಾಗೆಯೇ ಉಳಿಸಿಕೊಂಡಿರುವ ನಾಡಪ್ರೀತಿಯುಳ್ಳ ಜನ ನಾವು.

ಜನಸಾಮಾನ್ಯರು, ಸಾಹಿತಿಗಳು, ಪದ್ಯಗಾರರು, ಸಿನಿಮಾದವರು, ಸಾಂಸ್ಕೃತಿಕ ಕಲಾವಿದರು, ಹಾಡುಗಾರರು, ಹೋರಾಟಗಾರರು, ಭಾಷಾಪ್ರೇಮಿಗಳು, ಪತ್ರಕರ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಇನ್ನಿತರ ಕ್ಷೇತ್ರಗಳ ಎಲ್ಲರೆಂದರೆ ಎಲ್ಲರಿಗೂ ಚಿನ್ನದಗಣಿಯೂರು ನಮ್ಮ ಪಕ್ಕದ್ದೇ ಊರು ಎಂಬಷ್ಟು ಪರಿಚಿತ. ಕಣ್ಣಿಂದ ನೋಡದಿದ್ದರೂ ಯಾರಿಗೂ ಈ ನಗರ ಅಪರಿಚಿತವೇನಲ್ಲ. ಅದು ಅಂಥ ಮಟ್ಟಿಗೆ ನಮ್ಮ ಸ್ಮೃತಿಯೊಳಗೆ ನುಗ್ಗಿರುವ ಚಿನ್ನದೂರು. ಹೆಸರು ಕೋಲಾರ ಗೋಲ್ಡ್ ಫೀಲ್ಡ್ ಎನ್ನುವ ಕೆಜಿಎಫ್ ಎಂಬ ಪುಟ್ಟ ಊರು. ಅಲ್ಲಿ ಟನ್ನುಗಟ್ಟಲೆ ಚಿನ್ನ ಸಿಗುತ್ತದೆ, ಅದು ರಾಜ್ಯದ ಪ್ರಾಕೃತಿಕ ಸಂಪತ್ತಿನ ಹಿರಿಮೆಗೆ ಕಿರೀಟಗಳನ್ನು ಜೋಡಿಸಿದೆ, ಅಂತರರಾಷ್ಟ್ರೀಯಮಟ್ಟದಲ್ಲಿ ನಮ್ಮ ನಾಡಿಗೆ ಖ್ಯಾತಿ ತಂದುಕೊಟ್ಟಿದೆ.. ಎಲ್ಲವೂ ಗೊತ್ತು ಸರಿ, ಇಷ್ಟೆಲ್ಲ ಖ್ಯಾತಿಗಳನ್ನು ತಂದುಕೊಟ್ಟ ಈ ಊರಿನಲ್ಲಿರುವ ಚಿನ್ನ ಬಗೆದವರು, ಸುರಂಗಗಳೊಳಗೆ ನುಗ್ಗಿ ಜೀವ ಅಡವಿಟ್ಟು ಮಿರುಗುವ ಲೋಹವನ್ನು ಲಾರಿಗಳಲ್ಲಿ ತಂದು ಸುರಿದವರು, ಎಣಿಸಲಾಗದಷ್ಟು ಹನಿ ಬೆವರನ್ನು ಬಸಿದವರು ಈ ಊರಿನ ಚಿನ್ನದಗಣಿಯಲ್ಲಿ ಕಾರ್ಮಿಕರಾಗಿ ದುಡಿದ ಶ್ರಮಿಕರು. ಈ ಬೆವರಿನೊಡೆಯರ ದುಮ್ಮಾನಗಳನ್ನು ನಾವೂ ಸೇರಿದಂತೆ ಯಾರೂ ತಲೆಗೆ ತಂದುಕೊಳ್ಳಲಿಲ್ಲ. ಸಾವಿರಾರು ಅಡಿಗಳ ಆಳದಿಂದ ಈ ಶ್ರಮಿಕರು ತಂದು ಸುರಿದ ಚಿನ್ನವಷ್ಟೇ ನಮಗೆಲ್ಲರಿಗೂ ಹಿರಿಮೆಯ ದ್ಯೋತಕವಾಯಿಯಿತೇ ವಿನಃ, ಚಿನ್ನತಂದವರು ಎಲ್ಲಿಯೂ ನಮಗೆ ನೆನಪಾಗಲೇ ಇಲ್ಲ. ಯಾವ ಪುಸ್ತಕವೂ, ಯಾವ ಹಾಡೂ, ಯಾವ ಬರಹವೂ ನೆನಪಿಸಿಕೊಳ್ಳಲೇ ಇಲ್ಲ.

ಈಗಲಾದರೂ ಅವರನ್ನು ನೆನಪಿಸಿಕೊಳ್ಳಲೇಬೇಕಾದ ಬರ್ಬರತೆಯ ಪ್ರಸಂಗವೊಂದರಲ್ಲಿ ಅವರನ್ನಿಂದು ಮುಖಾಮುಖಿಯಾಗಬೇಗಾದ ಸಂದರ್ಭವೊಂದು ನಮ್ಮೆದುರು ಕೋರೆಹಲ್ಲು ಝಳಪಿಸುತ್ತ ಇವತ್ತು ನಿಂತಿದೆ. ಈ ಶ್ರಮಿಕರಿಂದು ಹೊಟ್ಟೆಗೆ ಎರಡು ಹನಿಯ ಗಂಜಿಯೂ ಸಿಗದೆ, ಹಸಿವಿನ ಕಾರಣಕ್ಕೆ ಯಾವತ್ತೋ ಒಂದು ದಿನ ಬರಬಹುದಾದ ಸಾವನ್ನು ನಿಟ್ಟಿಸುತ್ತ ನೆಲಕಚ್ಚಿಹೋಗಿದ್ದಾರೆ.

ಕೆಜಿಎಫ್ ನ ಮಲಹೊರುವ ಜನಗಳ ವಿಷಯ ಎಲ್ಲರಿಗೂ ಗೊತ್ತಿರುವ ಕಾರಣಕ್ಕೆ ಅದನ್ನು ಮತ್ತೆ ಮತ್ತೆ ನೆನಪಿಸಬೇಕಾದ ಪ್ರಮೇಯದಿಂದ ತಪ್ಪಿಸಿಕೊಂಡು ಅವರಿಂದು ತಲುಪಿರುವ ಹಸಿವಿನ ಪ್ರಪಾತದೊಳಗೆಯೇ ಅವರನ್ನು ಮಾತಾನಾಡಿಸಬೇಕಾದ ಬರ್ಬರತೆಯ ಪರಿಸ್ಥಿತಿಗೆ ಯಾರನ್ನು ದೂರುವುದು? ಸರ್ಕಾರವನ್ನು ದೂರಿದ್ದಾಯಿತು, ಅಧಿಕಾರಿಗಳನ್ನು ದೂರಿದ್ದಾಯಿತು, ವ್ಯವಸ್ಥೆಯನ್ನು ದೂರಿದ್ದಾಯಿತು, ಇದೆಲ್ಲ ಇದಾದ ಮೇಲೂ ಅಲ್ಲಿ ೩ ಹೆಣಗಳು ಮಲದಗುಂಡಿಯೊಳಗೆ ಅನ್ನ ಹುಡುಕಲೋಸುಗ ಇಳಿದು ಜೀವ ತೆತ್ತಿದ್ದೂ ಆಯಿತು.

ಸಾಮಾಜಿಕ ನ್ಯಾಯವೆಂಬ ಹಸಿದ ಹುಲಿಯನ್ನು ಅವಕಾಶವಾದಿಗಳು ಸಾಕುಪ್ರಾಣಿಯನ್ನಾಗಿ ಪರಿವರ್ತಿಸಿದ ಮೇಲೆ ಹುಲಿಯೂ ಮಿಸುಕಾಡುತ್ತಿಲ್ಲ. ನೆತ್ತಿ ಸವರುವ ಯಜಮಾನರೆದುರು ಅದೀಗ ತಲೆಯಾಡಿಸಿಕೊಂಡು ಕೂರುವ ಪೆಟ್ ಅನಿಮಲ್ ನಂತೆ ನ್ಯಾಯದ ಪರಿಕಲ್ಪನೆಯನ್ನೇ ಕೆಜಿಎಫ್‌ನಲ್ಲಿ ಅಣಕಿಸಲಾಯಿತು. ಚಿನ್ನದಗಣಿ ಕಾರ್ಮಿಕರ ಕೆಜಿಎಫ್ ನಲ್ಲಿ ಇವತ್ತು ಪ್ರಜಾಪ್ರಭುತ್ವ, ನ್ಯಾಯ, ಸಮಾನತೆ, ಬಡವರೆಡೆಗಿನ ಬದ್ದತೆಗಳು ಎಂಬ ವಿಷಯಗಳಿಗೆ ಆಸ್ಪದವೇ ಇಲ್ಲವೆಂಬ ಮಟ್ಟಿಗೆ ಅಲ್ಲಿ ನರಕವೂ, ಪಿಶಾಚಿಗಳಂತಹ ಪ್ರತಿನಿಧಿಗಳೂ ಒಟ್ಟಿಗೆ ಕೈಜೋಡಿಸಿದ್ದಾರೆ. ಸತ್ತವರ ಪರವಾಗಿ ಪ್ರಶ್ನೆ ಕೇಳಿದವರ ಮೇಲೆ ಲಾಠಿಚಾರ್ಜು ಮಾಡಿಸುವ ಜಿಲ್ಲಾಧಿಕಾರಿ, ನ್ಯಾಯ ಕೇಳಿದ ಹೋರಾಟಗಾರರ ಮೇಲೆ ಕೇಸು ಜಡಿಯುವ ಎಸ್.ಪಿ, ಪರಿಹಾರದ ಚೆಕ್ ವಿತರಿಸಲು ಬಂದು ನೊಂದವರ ಮೇಲೆಯೇ ಬೀದಿಗೂಂಡಾಗಳೂ ನಾಚುವಂತೆ ಹಲ್ಲೆ ಮಾಡುವ ಮಾಜಿ ಸಚಿವ, ಬಾಯ್ ಬಿಟ್ಟರೆ ಸುಳ್ಳು ಹೇಳುವ ಮುನಿಸಿಪಾಲಿಟಿಯ ಆಯುಕ್ತ, ಮಾಧ್ಯಮಗಳ ಜೊತೆ ಮಾತನಾಡಿದರೆ ಕೈಕಾಲು ಮುರಿಯುತ್ತೇವೆ ಎಂದು ರೌಡಿಗಳನ್ನು ಛೂ ಬಿಡುವ ಲೂಟಿಕೋರರು, ಇವೆಲ್ಲವುಗಳನ್ನೂ ಬಡವರ ಪ್ರಶ್ನೆಗಳನ್ನು ದಮನಿಸಲು ಬಳಸಿದ ಜಿಲ್ಲಾಡಳಿತವು ಈಗ ಬೀದಿಬೀದಿಗಳಲ್ಲಿ ಮಲಹೊರುವುದು ನಿಷಿದ್ಧ ಎಂಬ ಬೋರ್ಡು ಜಡಿದು ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಮಲಹೊರುವುದು ನಿಷೇಧವಾಯಿತು, ಸಂತೋಷ. ಆದರೆ ಮಲ ಹೊರುವವರ ಮುಂದಿನ ಬದುಕೇನು, ಅವರ ಪುನರ್ವಸತಿಗೆ ತೆಗೆದುಕೊಳ್ಳುವ ಕ್ರಮಗಳೇನು ಎಂಬ ಬಗ್ಗೆ ಬೋರ್ಡು ಜಡಿದು ಮಾನ ಉಳಿಸಿಕೊಂಡವರ ಬಳಿ ಯಾವ ಉತ್ತರವೂ ಇಲ್ಲ. ೫-೧೦ ಸಾವಿರದ ಸಾಲ ಕೊಡುತ್ತೇವೆ, ಅದನ್ನು ತೀರಿಸಿ ಎಂಬ ಬೆದರಿಕೆಯಂತಹ ಪುನರ್ವಸತಿಗೆ ಮಲಹೊರುವ ಬಡಜನರು ಇನ್ನಷ್ಟು ಗಾಬರಿ ಬಿದ್ದಿದ್ದಾರೆ. ಏಕೆಂದರೆ ಇವರು ತೆಗೆದುಕೊಂಡೇ ಇರದ ಸಾಲ ತೀರಿಸಲು ಈ ಬಡವರ ಮನೆಗಳಿಗೆ ನೋಟೀಸುಗಳು ಬರುತ್ತಿವೆ. ಖೋಟಾ ದಾಖಲೆ ಸೃಷ್ಟಿಸಿ ಇವರ ಹೆಸರಿನಲ್ಲಿ ಮಜಾ ಉಡಾಯಿಸಿದವರು ಈಗ ನಾಪತ್ತೆ.

ಪರಿಣಾಮ ಊಹೆಗೆ ಸಿಲುಕದಷ್ಟು ಕ್ರೂರ ಪರಿಸ್ತಿತಿಯಾಗಿ  ಕೆಜಿಎಫ್ ನಲ್ಲಿ ಹಸಿವು ಪ್ರತ್ಯಕ್ಷವಾಗಿದೆ. ದಿನಬೆಳಗಾದರೆ ಅನ್ನ ಕೇಳುವ ಹೊಟ್ಟೆಗೆ ಉತ್ತರಿಸಲು ಹಣ, ಕೆಲಸ ಎರಡೂ ಇಲ್ಲದ ಕೆನಡೀಸ್ ಲೈನ್ ನ ಕುಟುಂಬಗಳು ಮನೆಯಲ್ಲಿದ್ದ ಒಂದಷ್ಟು ಪಾತ್ರೆ ಪಗಡೆಗಳನ್ನು ಮಾರಿ ಒಂದಷ್ಟು ದಿನ ಅನ್ನದ ಬಣ್ಣವನ್ನು ಕಂಡಿವೆ. ಪಾತ್ರೆಗಳು ಇಳಿಮುಖವಾಗುತ್ತ ಈಗ ಮಾರಲಿಕ್ಕೂ ಮತ್ತೇನೂ ಉಳಿಯದೆ ಮತ್ತದೇ ಹಸಿವಿನ ಭೂತದ ಬಾಯಿಗೆ ಮಕ್ಕಳುಮರಿಗಳು, ವೃದ್ಧರು, ಅಸಹಾಯಕರು, ರೋಗಪೀಡಿತರು ಬಿದ್ದಿದ್ದಾರೆ. ಹಸಿವು ಮತ್ತು ರೋಗ್ ಹೊಡೆತಕ್ಕೆ ಪಾಲ್ ರಾಜ್ ಎಂಬ ಮಧ್ಯವಯಸ್ಕ ಶ್ರಮಿಕರೊಬ್ಬರು ಕಳೆದ ಹತ್ತು ದಿನಗಳ ಹಿಂದೆ ಜೀವವನ್ನೂ ತೆತ್ತಾಗಿದೆ. ಪ್ರಸ್ತುತ ಈ ಜನರಿಗೆ ಗೊತ್ತಿರುವುದು ಮೂರೇ ವಿಷಯ. ಹಸಿವು ಹಸಿವು ಮತ್ತು ಹಸಿವು.
       
ಗೆಳೆಯರೇ ಒಂದು ರಾಜ್ಯ, ಒಂದು ಸರ್ಕಾರ, ಒಂದು ವ್ಯವಸ್ಥೆ ಎಷ್ಟೆಲ್ಲ ಪೈಶಾಚಿಕವಾಗಿ ವರ್ತಿಸಬೇಕೋ ಅಷ್ಟೆಲ್ಲ ವರ್ತನೆಗಳೂ ಈ ಮಲಹೊರುವ ಬಡವರ ಮೇಲೆ ಪ್ರಯೋಗವಾಗಿ ಹೋದ ಮೇಲೆ ಇಷ್ಟರಲ್ಲೇ ಒಬ್ಬೊಬ್ಬರಾಗಿ ಈ ಊರಿನಿಂದ ಒಂದೊಂದೇ ಜೀವಗಳು ಮಣ್ಣುಸೇರಲು ಸಿದ್ದಗೊಂಡ ಮೇಲೆ ನಮ್ಮೆದುರು ಒಂದು ಪ್ರಶ್ನೆಯನ್ನು ಇಟ್ಟುಕೊಳ್ಳಬಹುದೇ? ಅಲ್ಲೆಲ್ಲೋ ಸುನಾಮಿ ಹೊಡೆದರೆ ಇಲ್ಲಿಂದ ಅಕ್ಕಿಧಾನ್ಯಗಳನ್ನು ಕಳಿಸಿದವರು ನಾವು, ಪ್ರವಾಹ ಬಂದಿದ್ದು ನಮ್ಮೂರಿಗೇ ಎಂಬಂತೆ ಸಿಕ್ಕ ಬಸ್ಸು ಹತ್ತಿಕೊಂಡು ನೊಂದವರಿಗೆ ಕೈಲಾದ ನೆರವು ಕೊಟ್ಟವರು ನಾವು, ಕಛ್, ಗುಜರಾತು ಭೂಕಂಪಗಳ ಸಂತ್ರಸ್ತರಿಗೆ ಬೀದಿಬೀದಿ ಸುತ್ತಿ ಬಟ್ಟೆ ಬರೆ ಸಂಗ್ರಹಿಸಿಕೊಟ್ಟವರು ನಾವು. ಇವತ್ತು ನಮ್ಮ ಸರ್ಕಾರವೇ, ನಮ್ಮ ತೆರಿಗೆಯ ಹಣದಲ್ಲೇ ಮೋಜು ಉಡಾಯಿಸುತ್ತಿರುವ ಅಧಿಕಾರಿಗಳು ನಾಡಿಗೆ ಚಿನ್ನ ಬಗೆದುಕೊಟ್ಟ ಈ ಶ್ರಮಿಕರನ್ನು ಮಲ ಹೊರಲು ಬಿಟ್ಟದ್ದೇ ಅಲ್ಲದೇ, ಅವರೆಲ್ಲರೂ ಸತ್ತರೆ ಮಲಹೊರುವವರ ಸಮಸ್ಯೆ ಇಲ್ಲವಾಗಿಬಿಡುತ್ತದೆ ಎಂಬ ಉದ್ದೇಶಿತ ಪಿತೂರಿಯ ಕಾರಣಕ್ಕೆ ಸಾಮೂಹಿಕವಾಗಿ ಇವರನ್ನು ಹಸಿವಿನ ಪ್ರಪಾತಕ್ಕೆ ದೂಡಿ ತಮಾಷೆ ನೋಡುತ್ತ ಕೈ ಬಿಟ್ಟಿದೆ.

ದೂರದಲ್ಲಿದ್ದವರಿಗೆ ನೊಂದ ನಮ್ಮ ಎದೆಗೂಡು ನಮ್ಮದೇ ಜನರು, ಮಕ್ಕಳು ವೃದ್ಧರು, ನಿಸ್ಸಹಾಯಕರ ಹಸಿವನ್ನು ನೋಡುತ್ತ ಕೂರುವುದು ನಮ್ಮ ಮನುಷ್ಯತ್ವದ ಕೆನ್ನೆಗೆ ಬಿದ್ದ ಏಟೆಂದು ಅನಿಸವುದಿಲ್ಲವೇ. ಎಲ್ಲರೂ ಕೈ ಬಿಟ್ಟ ಈ ಬಡವರ ಹಸಿವಿಗೆ ಹೆಗಲು ಕೊಡುವುದು ನಮ್ಮ ಜವಾಬ್ದಾರಿಯಲ್ಲವೇ, ಸಮಾಜವೊಂದರ ತಳಸ್ಥರದಲ್ಲಿದ್ದೂ ಈ ನಾಡಿಗೆ ಚಿನ್ನದ ನಾಡೆಂದು ಹೆಸರು ತಂದುಕೊಟ್ಟ ಕಷ್ಟಜೀವಿಗಳ ಹಸಿವಿಗೆ ಇಷ್ಟಾದರೂ ಉತ್ತರಿಸುವುದು ನಮ್ಮ ಕರ್ತವ್ಯವಲ್ಲವೆ? ಒಟ್ಟು ವ್ಯವಸ್ಥೆಯೇ ಕೈಬಿಟ್ಟ ಈ ಬಡಜನರ ಜೊತೆಗೆ ಹೆಗಲು ಕೊಡುವುದು ನಮ್ಮ ಕರ್ತವ್ಯವೆಂದು ಅಂದುಕೊಂಡ ಸಮಾನಮನಸ್ಕರ ಗೆಳೆಯ ಗುಂಪೊಂದು ಕೆಜಿಫ್ ನಲ್ಲಿನ ಹಸಿವುಪೀಡಿತರ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆಗಳು ಆಗುವವರೆಗೆ ಗಂಜಿಕೇಂದ್ರವನ್ನು ನಡೆಸುವ ಮೂಲಕ ನಮ್ಮ ಜವಾಬ್ದಾರಿ ನಿರ್ವಹಣೆಗೆ ಮುಂದಾಗಿದ್ದೇವೆ. ಎಲ್ಲರೂ ಕೈಲಾದಷ್ಟು ಹಣಕಾಸನ್ನು ಒಟ್ಟುಗೂಡಿಸಿಕೊಂಡು ಕೆಜಿಎಫ್‌ಗೆ ತೆರಳಲು ನಿರ್ಧಾರವಾಗಿದೆ. ಇದರ ಜವಾಬ್ದಾರಿಯನ್ನು ವೃತ್ತಿಯಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ, ಜನಪರ ಕಾಳಜಿಯ ಚಿಂತಕ ರವಿಕೃಷ್ಣಾರೆಡ್ಡಿ ತಮ್ಮ ವರ್ತಮಾನ ಬಳಗದ ಮೂಲಕ ಆರಂಭಿಸಿದ್ದಾರೆ.

ಜೀವಪರತೆಯ ಆಶಯವನ್ನು ಬೆಂಬಲಿಸುವ ಸಹೃದಯರು, ಹಸಿವುರಹಿತ ನಾಡಿನ ನಿರ್ಮಾಣದಲ್ಲಿ ಹೆಗಲು ಜೋಡಿಸುವ ಸಮಾನ ಮನಸ್ಕರ ನೆರವೂ ಇದಕ್ಕೆ ಬೇಕಿದೆ. ಇಚ್ಛೆಯುಳ್ಳವರು ನಮ್ಮೊಡನೆ ಬರಹುದು. ಬರಲಾಗದ ಜೀವಪರರು ತಮ್ಮಿಂದ ಆದಷ್ಟು ಮಟ್ಟಿಗೆ ಧನಸಹಾಯವನ್ನು ಮಾಡಬೇಕೆಂದು ವಿನಂತಿಸುತ್ತೇವೆ. ಸಂಗ್ರಹಗೊಂಡ ಪ್ರತಿಯೊಂದು ಪೈಸೆಯ ಲೆಕ್ಕವನ್ನೂ ಪಾರದರ್ಶಕವಾಗಿ ಜನರ ಮುಂದೆ ಇಡುವ ಮೂಲಕ ನೆರವಾದವರನ್ನು ಸ್ಮರಿಸುವುದು ನಮ್ಮ ಉದ್ದೇಶವೂ ಆಗಿದೆ. ಮುಂದೊಂದು ದಿನ ಚಿನ್ನದನಾಡು ಎಂಬ ಪದ ಕೇಳಿದಾಗ ಈ ಶ್ರಮಿಕರಿಗೆ ಒಂದು ಕಾಲದಲ್ಲಿ ಹೆಗಲು ಕೊಟ್ಟಿದ್ದೆವು, ಹಸಿವು ನೀಗಿದ ಕೂಸೊಂದರ ನಗೆಯಲ್ಲಿ ನಮ್ಮದೂ ಒಂದು ಬೆಂಬಲವಿತ್ತು ಎಂಬ ಸಮಾಧಾನವನ್ನಷ್ಟೇ ನಿಮ್ಮ ಬೆಂಬಲ ಮತ್ತು ನೆರವು ನೀಡಬಲ್ಲುದು. ಹೆಗಲು ಕೊಡಿ ಗೆಳೆಯರೇ/ಗೆಳತಿಯರೇ. ಇದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ.

-ಟಿ.ಕೆ. ದಯಾನಂದ



ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ (ಟಿ.ಕೆ.ದಯಾನಂದ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ. ಚೆಕ್ ಕಳುಹಿಸುವವರು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಚೆಕ್ ಟಿ.ಕೆ.ದಯಾನಂದ ರ ಹೆಸರಿನಲ್ಲಿರಲಿ.


ವರ್ತಮಾನ
ನಂ. ೪೦೦, ೨೩ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು - ೫೬೦೦೭೬
ದೂ: ೦೮೦-೨೬೭೮೩೩೨೯

Monday, December 5, 2011

ವರ್ತಮಾನದ ಕರೆಗೆ ಓಗೊಡೋಣ ಬನ್ನಿ, ಮಲಸಂತ್ರಸ್ಥರಿಗೆ ನೆರವಾಗೋಣ...


ನೆರೆ ಸಂತ್ರಸ್ಥರು ನಿಮಗೆ ಗೊತ್ತು, ಬರ ಸಂತ್ರಸ್ಥರು, ಮಲ ಸಂತ್ರಸ್ಥರು ನಿಮಗೆ ಗೊತ್ತೆ? ಕೆಜಿಎಫ್‌ಗೆ ಹೋಗಿದರೆ ಈ ಮಲಸಂತ್ರಸ್ಥರು ನಿಮಗೆ ಕಾಣಬಹುದು. ಬದುಕಿನುದ್ದಕ್ಕೂ ಊರಿನ ಮಲದ ಗುಂಡಿಯೊಳಗೆ ಇಳಿದು ಶುದ್ಧಗೊಳಿಸಿದವರು ಇವರು. ಸಾಮಾಜಿಕ ಸಂಘಟನೆಗಳ ಸತತ ಹೋರಾಟದಿಂದ ಈಗ ಮಲಹೊರುವ ಕಾಯಕವನ್ನು ನಿಷೇಧಿಸಲಾಗಿದೆ. ಆದರೆ ಅದೇ ಸಮಯಕ್ಕೆ ಈ ಕುಟುಂಬಗಳ ಹೊಣೆ ಹೊರಬೇಕಾದವರು ಸುಮ್ಮನಿದ್ದಾರೆ. ಈ ಕುಟುಂಬಗಳಿಗೆ ಅಗತ್ಯವಿರುವ ತಕ್ಷಣದ ನೆರವನ್ನು ನೀಡಲು ವರ್ತಮಾನ ಬಳಗ ಮುಂದೆ ಬಂದಿದೆ. ವರ್ತಮಾನದ ಈ ಕರೆಗೆ ನಾವೆಲ್ಲ ಸ್ಪಂದಿಸಬೇಕಿದೆ. ಹಿಂದೆ ಹಾನಗಲ್‌ನ ಪೌರಕಾರ್ಮಿಕಳೊಬ್ಬಳ ಮಗನ ಕಷ್ಟಕ್ಕೆ ಕರಗಿ ಸಂಪಾದಕೀಯದ ಮನವಿಗೆ ಸ್ಪಂದಿಸಿದವರು ನೀವು. ಈಗಲೂ ನಿಮ್ಮಿಂದ ಅದೇ ನಿರೀಕ್ಷೆ ನಮ್ಮದು. 
                                                                                  -ಸಂಪಾದಕೀಯ

ವರ್ತಮಾನ ಬಳಗದ ಮನವಿಯ ಸಾರಾಂಶ ಈ ಕೆಳಗಿನಂತಿದೆ.


ಕೆಜಿಎಫ್ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಘಟಿಸಿದ ಸಾವುಗಳು ನಿಮಗೆ ನೆನಪಿರಬಹುದು. ಕಕ್ಕಸ್ಸು ಗುಂಡಿ ಶುಚಿಗೊಳಿಸಲು ಹೋದ ಐವರು ಅಸುನೀಗಿದ್ದಾರೆ. ಇದೇ ಕೆಲಸದಿಂದಾಗಿ ಅಂಟಿಸಿಕೊಂಡ ನಾನಾ ರೋಗಗಳಿಂದ ಸತ್ತವರೆಷ್ಟೋ, ಲೆಕ್ಕ ಇಟ್ಟವರಾರು? ಇನ್ನು ಕೆಲವರು ರೋಗಗಳಿಂದ ಬಳಲುತ್ತಿದ್ದಾರೆ.

ದುಡಿವವರನ್ನು ಕಳೆದುಕೊಂಡ ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸಾಲು ಸಾಲು ಸಾವುಗಳ ನಂತರ ಸ್ಥಳೀಯ ಸಂಸ್ಥೆ ಎಚ್ಚರಗೊಂಡು ಮಲಹೊರುವ ಪದ್ಧತಿ ನಿರ್ಮೂಲನೆಗೆ ಶತಪ್ರಯತ್ನ ಮಾಡುತ್ತಿದೆ. ಮಲದ ಗುಂಡಿಗಳನ್ನು ಶುಚಿ ಮಾಡಲು ಯಾರೂ ಇವರನ್ನು ಕರೆಯಬಾರದು ಎಂದು ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಅದೇ ಆಡಳಿತದ ಜವಾಬ್ದಾರಿಯಾಗಿದ್ದು ದುಡಿಯುವ ಕೈಗಳನ್ನು ಮತ್ತು ದುಡಿಮೆಯನ್ನು ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕೊಡಿಸಬೇಕಾದ್ದು. ಇದುವರೆಗೂ ಅದು ಈಡೇರಿಲ್ಲ. ಭರವಸೆ ನೀಡಿದ್ದಾರೆ. ಈಡೇರುವುದು ಎಂದೋ?
ಆದರೆ ಅಲ್ಲಿಯವರೆಗೆ??

ಪಿಯುಸಿಎಲ್ ಮತ್ತಿತರ ಸಂಘಟನೆಗಳ ಸತತ ಒತ್ತಡದ ಫಲವಾಗಿ, ವೈ.ಜೆ.ರಾಜೇಂದ್ರ, ದಯಾನಂದ್, ಚಂದ್ರಶೇಖರ್, ಪದ್ಮ ಮೊದಲಾದ ಸಾಮಾಜಿಕ ಹೋರಾಟಗಾರರ ಪ್ರಯತ್ನದಿಂದಾಗಿ ಕೆಜಿಎಫ್‌ನಲ್ಲಿ ಈಗ ಮನುಷ್ಯರೇ ಮಲಹೊತ್ತುವ ಕಾರ್ಯಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಇದರ ಜತೆಜತೆಗೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಜಿಲ್ಲಾಡಳಿತ ಮಾತ್ರ ನಿಧಾನಗತಿ ಅನುಸರಿಸುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಈಗ ತತ್ವಾರ.

ಸದ್ಯಕ್ಕೆ ಅವರಿಗೆ ಆದಾಯದ ಮೂಲವೇ ಇಲ್ಲ. ಪರ್ಯಾಯ ಉದ್ಯೋಗ ಕಲ್ಪಿಸುವವರೆಗಾದರೂ ಆ ಕಾಲೋನಿಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅನ್ನ ನೀಡಬೇಕಾದ ಜವಾಬ್ದಾರಿ ಆಡಳಿತದದ್ದು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ನಾಗರಿಕ ಸಮಾಜವೂ ಜವಾಬ್ದಾರಿ ಮರೆತರೆ? ನಮ್ಮ ಮನೆಯ ಮಲದ ಗುಂಡಿಗಳು ತುಂಬಿಕೊಂಡಾಗ, ನಗರಸಭೆ, ಪುರಸಭೆಗಳನ್ನು ನಂಬಿಕೊಳ್ಳದೆ ನಾವು ಇಂತಹವರ ಮೊರೆ ಹೋಗಿದ್ದೆವು, ಅವರನ್ನು ಗುಂಡಿಯೊಳಗೆ ಇಳಿಸಿ ಮೇಲೆ ಮೂಗು ಮುಚ್ಚಿ ನಿಂತಿದ್ದೆವು. ಅವರು ಅಂಟಿಸಿಕೊಂಡ ರೋಗಗಳಿಗೆ, ತೆತ್ತ ಜೀವಕ್ಕೆ ಸರಕಾರ ಅಷ್ಟೇ ಅಲ್ಲ, ನಾವೂ ಹೊಣೆ.

ವರ್ತಮಾನ ಬಳಗ ಹೀಗೊಂದು ಆಲೋಚನೆ ಮಾಡಿದೆ. ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು (editor@vartamaana.com)

ವರ್ತಮಾನ ಬಳಗ ೫,೦೦೦ ರೂಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತದೆ.

ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ.

ನಮಸ್ಕಾರ
ವರ್ತಮಾನ ಬಳಗ.

ವರ್ತಮಾನದಲ್ಲಿ ಈ ಮೂಲ ಲೇಖನ ಓದಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:


Saturday, December 3, 2011

ಮಾನವಂತ ಬ್ರಾಹ್ಮಣರು, ಸ್ವಾಭಿಮಾನಿ ಶೂದ್ರರೂ ಒಟ್ಟಿಗೆ ನಿಲ್ಲಬೇಕಾದ ಕಾಲವಿದು...


೧೯೭೪ರಲ್ಲಿ ಆರಂಭಗೊಂಡ ಬರಹಗಾರರ ಒಕ್ಕೂಟದ ಕಾಲದ ಮಾತಿದು. ಬರಹಗಾರರ ಒಕ್ಕೂಟ ಬ್ರಾಹ್ಮಣೇತರ ಆಂದೋಲನವಾಗಿ ಹೊರಹೊಮ್ಮಿತ್ತು. ಬ್ರಾಹ್ಮಣರೆಂಬ ಕಾರಣಕ್ಕೆ ಯು.ಆರ್.ಅನಂತಮೂರ್ತಿ ಅವರನ್ನು ಮೈಸೂರಿನಲ್ಲಿ ನಡೆದ ಒಕ್ಕೂಟದ ಸಮಾವೇಶಕ್ಕೆ ಕರೆಯಲಾಗಿರಲಿಲ್ಲ. ಇದನ್ನು ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ಆ ಘಟನೆಯ ಕುರಿತು ಅನಂತಮೂರ್ತಿ ಹೀಗೆ ನೆನಪಿಸಿಕೊಳ್ಳುತ್ತಾರೆ:

ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕೆ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ನನ್ನ ಜತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್‌ನಲ್ಲಿ ಸೀದಾ ಏಳನೇ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ...'

ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.... ಸುಮಾರು ೧೯೬೭ರಲ್ಲಿ ಎಂದು ನೆನಪಾಗುತ್ತದೆ: ಗತಿಸಿದ ಶಿವರಾಮ ಐತಾಳ್‌ರಿಗೆ ಉತ್ತರವಾಗಿ ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯಾಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ‍್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ....*

****

ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ? ಎಂಬ ಈ ಹಿಂದಿನ ಲೇಖನಕ್ಕೆ ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಅವುಗಳಲ್ಲಿ ಅತಿಹೆಚ್ಚು ಗಮನಸೆಳೆದಿದ್ದು ವಸುಮತಿ ಭಾಸ್ಕರ್ ಅವರ ಪ್ರತಿಕ್ರಿಯೆ. Its very true, as a bramhin( though don't like to announce it) I protest this, for the same reason me and my husband stopped going to these kind of temples and that's what we could do, unfortunately.

ಲೇಖನದಲ್ಲಿ ಮಾನವಂತ ಬ್ರಾಹ್ಮಣರೆಂದು ಪ್ರಸ್ತಾಪಿಸಿದ್ದು ವಸುಮತಿ ಅಂಥವರನ್ನೇ. ಇಂಥವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದರಿಂದಲೇ ಸಮಾಜ ಇಷ್ಟಾದರೂ ಸ್ವಾಸ್ಥ್ಯವನ್ನು ಹೊಂದಿದೆ. ವಸುಮತಿಯವರನ್ನೂ ಅವರ ಪರಂಪರೆಯ ಎಲ್ಲರನ್ನೂ ಪ್ರೀತಿಯಿಂದ ಅಭಿನಂದಿಸೋಣ.

ಬ್ರಾಹ್ಮಣ್ಯದ ವಿರುದ್ಧದ ಹೋರಾಟಗಳು, ಚಳವಳಿಗಳು ಸಾಕಷ್ಟು ಸಂದರ್ಭದಲ್ಲಿ ಬ್ರಾಹ್ಮಣದ್ವೇಷಿಯಂತಲೇ ಬಿಂಬಿಸಿಕೊಳ್ಳಲ್ಪಟ್ಟಿದ್ದು ನಿಜಕ್ಕೂ ದುರಂತ. ಹೀಗಾದಾಗ ಇನ್ನಷ್ಟು ಧ್ರುವೀಕರಣ ಆಗುವ ಅಪಾಯವೇ ಹೆಚ್ಚು. ಬರಹಗಾರರ ಒಕ್ಕೂಟದ ಸಂದರ್ಭದಲ್ಲಿ ಲಂಕೇಶರೇನೋ ಅನಂತಮೂರ್ತಿಯವರ ಬಳಿ ಖಾಸಗಿಯಾಗಿ ಬಂದು, ನಮ್ಮಿಂದ ಅತಿರೇಕವಾದರೂ ನೀವು ಬ್ರಾಹ್ಮಣವಾದಿಯಾಗಬೇಡಿ ಎಂದು ಹೇಳಿದರು. ಆದರೆ ಮಾನವೀಯವಾಗಿ ಯೋಚಿಸಬಲ್ಲ ಉಳಿದ ಬ್ರಾಹ್ಮಣರಿಗೆ ಯಾರೂ ಇದನ್ನು ಹೇಳಿರುವುದು ಅಸಾಧ್ಯ. ಬಹುಶಃ ಅನಂತಮೂರ್ತಿ ಹೇಳಬಯಸಿದ್ದ ಆತಂಕದ ಪ್ರಶ್ನೆಗಳಲ್ಲಿ ಇದೂ ಒಂದಿರಬಹುದು.

ನಾವು ಯಾವುದನ್ನು ಪುರೋಹಿತಶಾಹಿ ಎಂದು ಕರೆಯುತ್ತಿದ್ದೇವೋ ಅದು ಬ್ರಾಹ್ಮಣ ಜಾತಿಗೆ ಸೀಮಿತವಾಗಿ ಹೇಳುವ ಕಾಲ ಎಂದೋ ಮುಗಿದುಹೋಯಿತು. ಎಲ್ಲ ಸಮುದಾಯಗಳಲ್ಲೂ ಒಂದೊಂದು ಪುರೋಹಿತ ವರ್ಗ ಎದ್ದು ನಿಂತಿದೆ. ಬ್ರಾಹ್ಮಣ ಪುರೋಹಿತಶಾಹಿಗಳಷ್ಟೆ ಅಥವಾ ಒಮ್ಮೊಮ್ಮೆ ಅದಕ್ಕಿಂತ ಹೆಚ್ಚಿನ ಪ್ರತಿಗಾಮಿತನಗಳನ್ನು ಶೂದ್ರ ಪುರೋಹಿತ ವರ್ಗ ಪ್ರದರ್ಶಿಸುತ್ತಿವೆ. ಮನುಗಳು ಈಗ ಬ್ರಾಹ್ಮಣರಲ್ಲಿ ಮಾತ್ರವಿಲ್ಲ, ಶೂದ್ರರಲ್ಲೂ ಇದ್ದಾರೆ. ಇವರು ಬ್ರಾಹ್ಮಣ ಮನುಗಳಿಗಿಂತ ಅಪಾಯಕಾರಿಯಾಗಿದ್ದಾರೆ.

ಆಧುನಿಕ ಪುರೋಹಿತಶಾಹಿಗಳು ಮಠಾಧೀಶರು. ಜಾತಿಗಳನ್ನು ಇವತ್ತು ಮಠಗಳು ಬಲಪಡಿಸುತ್ತಿವೆ. ಅದಕ್ಕೆ ಸಾವಿರಾರು ಸಾಕ್ಷಿಗಳು ನಮ್ಮ ಮುಂದಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ೧೦೫ ವರ್ಷಗಳ ನಡೆದಾಡುವ ದೇವರು ಬಂದೇಬಿಟ್ಟರು. ಬೇರೆ ಬೇರೆ ಕಾರಣಗಳಿಗಾಗಿ ನಾಡು ಗೌರವಿಸುವ ಈ ಮಹಾತ್ಮರನ್ನು ಟೀಕಿಸುವುದು ನಮ್ಮ ಉದ್ದೇಶವಲ್ಲ. ಜಾತಿಯ ತಂತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಹೇಳುವ ಪ್ರಯತ್ನವಷ್ಟೇ ನಮ್ಮದು.

ಜಾತಿವಾದಿಗಳಾಗಲು ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು ಎಂದು ಅನಂತಮೂರ್ತಿ ಅಂದು ನುಡಿದಿದ್ದರು. ಆದರೆ ಇವತ್ತಿನ ಸಾಮಾಜಿಕ-ರಾಜಕೀಯ ಚಿತ್ರಣವನ್ನು ಗಮನಿಸಿದರೆ ಈ ಮಾತನ್ನು ಅವರು ಅಷ್ಟು ಧೈರ್ಯದಿಂದ ಹೇಳಲಾರರು ಎಂದೆನಿಸುತ್ತದೆ.  ಕೊನೇಪಕ್ಷ ಶೇಕಡಾವಾರು ಪ್ರಮಾಣವನ್ನು 20-25ಕ್ಕೆ ಇಳಿಸಬಹುದೇನೋ?

ಮಡೆಸ್ನಾನದ ವಿಷಯವನ್ನು ಜಾತಿಯ ಕಣ್ಣಿನಲ್ಲಿ ನೋಡದೆ ಒಟ್ಟು ಪುರೋಹಿತಶಾಹಿಯ ಕ್ರೌರ್ಯದ ರೂಪವನ್ನಾಗಿಯೇ ನಾವು ನೋಡಬೇಕು. ಇಲ್ಲವಾದಲ್ಲಿ ಮಡೆಸ್ನಾನ ವಿರೋಧಿ ಚಳವಳಿಯೂ ಬ್ರಾಹ್ಮಣ ವಿರೋಧಿ ಚಳವಳಿಯ ಹಾಗೆ ಕಾಣಿಸಿ, ತನ್ನಿಂತಾನೇ ದುರ್ಬಲಗೊಳ್ಳುವ ಸಾಧ್ಯತೆಗಳು ಇರುತ್ತವೆ. ನಿಜ, ಸುರೇಶ್ ಕುಮಾರ್, ಆಚಾರ್ಯರಂಥ ಬ್ರಾಹ್ಮಣರು ಮಡೆಸ್ನಾನವನ್ನು ಸಮರ್ಥಿಸಿಕೊಂಡು ಮಾತನಾಡಿರಬಹುದು, ಅದಕ್ಕೆ ಅವರದೇ ಆದ ರಾಜಕೀಯ ಕಾರಣಗಳೂ ಇರುತ್ತವೆ. ಪೇಜಾವರರಂಥವರು ತಟಸ್ಥ ನಿಲುವು ತಳೆಯುವುದರಲ್ಲೂ ಅಪ್ಪಟ ರಾಜಕೀಯ ತಂತ್ರಗಾರಿಕೆಯೇ ಇರಬಹುದು. ಹಾಗೆಂದ ಮಾತ್ರಕ್ಕೆ ಇಡೀ ಬ್ರಾಹ್ಮಣ ಸಮುದಾಯ ಇದನ್ನು ಬೆಂಬಲಿಸುತ್ತದೆ ಎಂದು ಕುರುಡಾಗಿ ನಂಬುವಂತೆ ಇಲ್ಲ. ಅದು ಸಮಂಜಸವೂ ಅಲ್ಲ.

ಇವತ್ತು ಹಿಂದುಳಿದ ಸಮುದಾಯಗಳು ಸಾಮಾಜಿಕ ಮಾನ್ಯತೆಗಳಿಗಾಗಿ ಬ್ರಾಹ್ಮಣರನ್ನು ಅನುಸರಿಸಲು ಯತ್ನಿಸುತ್ತಿವೆ. ಹಿಂದಿನಿಂದಲೂ ಇದು ನಡೆದುಕೊಂಡುಬಂದಿದೆ. ತಮ್ಮ ತಮ್ಮ ಜಾತಿಗೆ ಸ್ಥಾನಮಾನ ತಂದುಕೊಳ್ಳಲು ಇವು ಸಾಹಸ ಪಡುತ್ತವೆ. ಸಹಜವಾಗಿಯೇ ಬ್ರಾಹ್ಮಣ್ಯದ ಕೊಳೆಯನ್ನೇ ಇವೂ ಕೂಡ ಹೊತ್ತುಕೊಂಡು ಸಾಗುತ್ತಿವೆ. ಹೀಗಾಗಿ ಮಡೆಸ್ನಾನ, ಪಂಕ್ತಿಭೇದದಂಥವು ಅವುಗಳಿಗೆ ಅವಮಾನದ, ಅನಾಗರಿಕ ಆಚರಣೆ ಅನಿಸದೆ ನಂಬಿಕೆಯ ಪ್ರಶ್ನೆಯಾಗಿ ಉಳಿದುಕೊಂದಿವೆ.

ಜಾತಿ ಮೇಲ್ದರ್ಜೀಕರಣದ (ಪ್ರಮೋಷನ್) ಆಸೆಯನ್ನು ತೊರೆಯದ ಹೊರತು ಇವುಗಳಿಗೆ ಬಿಡುಗಡೆಯಂತೂ ಇಲ್ಲ. ಬಿಡುಗಡೆ ಪಡೆಯುವ ಹೊರತಾಗಿ ಇವು ವರ್ಣಾಶ್ರಮ ವ್ಯವಸ್ಥೆಯ ನರಕದಲ್ಲೇ ಕೊಳೆತು ಹೋಗುತ್ತವೆ. ಇದನ್ನು ಗೊತ್ತು ಮಾಡಿಸುವವರು ಯಾರು? ಜಾತಿ ಸಂಘಟನೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದುಳಿದ ಸಮುದಾಯಗಳು ಕರ್ನಾಟಕದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಉದಾಹರಣೆಯೇನಾದರೂ ಇದೆಯೇ? ದಲಿತರಿಗಾದರೋ ದಲಿತ ಸಂಘರ್ಷ ಸಮಿತಿ ಕೊಂಚಮಟ್ಟಿಗೆ ಬಿಡುಗಡೆಯ ಮಾರ್ಗವಾಯಿತು, ಹಿಂದುಳಿದವರಿಗೆ?

ಇವತ್ತು ಅತ್ಯಗತ್ಯವಾಗಿ ಎರಡು ಹಂತದ ಚಟುವಟಿಕೆಗಳು ಏಕಕಾಲಕ್ಕೆ ಘಟಿಸಬೇಕಿದೆ. ಒಂದು, ಹಿಂದುಳಿದ ಸಮುದಾಯಗಳು ಜಾತಿ ಶ್ರೇಣೀಕರಣದ ಅಸಹ್ಯದಿಂದ ಹೊರಗೆ ಬಂದು ಮೌಢ್ಯಕ್ಕೆ ದಾಸರಾಗುವುದನ್ನು ಬಿಡಬೇಕಿದೆ. ಮೇಲ್ವರ್ಗದ ಜನರು ಜಾತಿಯನ್ನು ಬಿಟ್ಟುಕೊಟ್ಟು ಜೀವಪರರಾಗುವುದನ್ನು ಕಲಿಯಬೇಕಿದೆ.

ಒಂದು ಘಟನೆಯನ್ನು ನೆನಪಿಸಿಕೊಳ್ಳೋಣ. ದಲಿತ ಸಂಘರ್ಷ ಸಮಿತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಒಮ್ಮೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿತ್ತು. ಅಂದು ಊರೂರುಗಳಲ್ಲಿ ದಲಿತಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ ಎಂದು ಊರಿನ ಎಲ್ಲ ಜಾತಿ ಸಮುದಾಯದವರನ್ನು ಆಹ್ವಾನಿಸಿದರು. ಹೊಸಬಗೆಯ ಈ ಚಳವಳಿ ಗಮನಾರ್ಹ ಯಶಸ್ಸನ್ನು ಕಂಡಿತ್ತು. ಆಗ ದೇವನೂರು ಮಹದೇವ ಹೇಳಿದ ಒಂದು ಮಾತು ನಮ್ಮ ಎಲ್ಲ ಪ್ರಗತಿಪರ ಚಳವಳಿಗಳಿಗೂ ಅಂತರಾತ್ಮದ ಧ್ವನಿಯಾಗಬೇಕಿತ್ತು. ದೇವನೂರು ಹೀಗೆಂದಿದ್ದರು: ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು.' **

ಮಡೆಸ್ನಾನ-ಪಂಕ್ತಿಭೇದದ ವಿಷಯದಲ್ಲಿ ಬಿಡುಗಡೆ ಶೂದ್ರರಿಗೂ ಬೇಕಿದೆ, ಬ್ರಾಹ್ಮಣರಿಗೂ ಬೇಕಿದೆ. ಇದಕ್ಕಾಗಿ ಬ್ರಾಹ್ಮಣರಲ್ಲಿನ ಮಾನವಂತರು, ಇತರ ಶೂದ್ರರೊಳಗಿನ ಸ್ವಾಭಿಮಾನಿಗಳು ಎದ್ದುನಿಲ್ಲಬೇಕಿದೆ. ಎಲ್ಲರೂ ಒಟ್ಟಾಗಿಯೇ ಇದನ್ನು ಅಂತ್ಯಗೊಳಿಸಬೇಕಿದೆ. ಜಾತಿಗಳು ಸಂಘರ್ಷಕ್ಕೆ ಇಳಿದಾಗಲೆಲ್ಲ ಧ್ರುವೀಕರಣ ಬಲವಾಗಿಯೇ ನಡೆಯುತ್ತದೆ. ಇಂಥ ಧ್ರುವೀಕರಣದ ಸಂದರ್ಭದಲ್ಲಿ ಹೆಚ್ಚು ನಷ್ಟಕ್ಕೆ ಒಳಗಾಗುವವು ಹಿಂದುಳಿದ ಜಾತಿಗಳೇ ಎಂಬುದನ್ನು ಯಾರೂ ಮರೆಯುವಂತಿಲ್ಲ.

ನಮ್ಮೊಳಗಿನ ಜೀವಚೈತನ್ಯದ ಮಾತು ಕೇಳಬೇಕಾದ ಕಾಲವಿದು. ಈ ಕರೆಗೆ ಓಗೊಡದಿದ್ದಲ್ಲಿ ಈ ಸಮಾಜ ಹೀಗೇ ಮುಂದುವರೆಯುತ್ತದೆ. ನಾವು ಎಂಜಲೆಲೆಗಳ ಮೇಲೆ ಉರುಳಾಡಿಕೊಂಡೇ ಸಾಯುತ್ತೇವೆ.

* ಪ್ರೊಫೆಸರ್ ಎಂಡಿಎನ್-ನೆನಪಿನ ಸಂಪುಟ
** ಈಗ ಅಳುವವರೂ ಇಲ್ಲ...! -ಲೇ: ಎನ್.ಎಸ್.ಶಂಕರ್

Friday, December 2, 2011

ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?


ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶಿವರಾಮು ಮತ್ತು ಸಂಗಡಿಗರನ್ನು ಸುಬ್ರಹ್ಮಣ್ಯ ದೇವಸ್ಥಾನದ ಕೆಲವು ಗೂಂಡಾಗಳು ಹಿಡಿದು ಥಳಿಸಿದ್ದಾರೆ. ಈ ಅನಾಚಾರವನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಮಡೆಸ್ನಾನವೆಂಬ ಅನಾಗರಿಕ ಆಚರಣೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಡಿ.೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಲವು ಸಂಘಟನೆಗಳು ಇಡೀ ದಿನದ ಪ್ರತಿಭಟನೆಯನ್ನು ನಡೆಸುತ್ತಿವೆ.

ಮಡೆಸ್ನಾನದ ಬಗ್ಗೆ ಸಂಪಾದಕೀಯದಲ್ಲೂ ಬರೆಯಿರಿ ಎಂದು ಹಲವು ಗೆಳೆಯರು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಜನವರಿ-ಫೆಬ್ರವರಿ ತಿಂಗಳಲ್ಲಿ ಇದೇ ಬ್ಲಾಗ್‌ನಲ್ಲಿ ಮಡೆಸ್ನಾನದ ಕುರಿತು ವಿಸ್ತ್ರತ ಚರ್ಚೆ ನಡೆದದ್ದನ್ನು ನೀವು ಗಮನಿಸಿರಬಹುದು. ಒಂದು ಪುಸ್ತಕಕ್ಕಾಗುವಷ್ಟು ಚರ್ಚೆ ಇಲ್ಲಿ ನಡೆದಿದೆ.

ಹೊಸದಾಗಿ ಈಗ ಶುರುವಾಗಿರುವ ಚರ್ಚೆಯಲ್ಲೂ ಹೊಸ ವಿಷಯಗಳೇನೂ ಇಲ್ಲ. ಮಡೆಸ್ನಾನ ಎನ್ನುವುದು ನಂಬಿಕೆಯನ್ನು ಆಧರಿಸಿ ನಡೆಯುವ ಸಂಪ್ರದಾಯ. ಅದನ್ನು ಆಚರಿಸುವವರಿಗೆ ಇಲ್ಲದ ಸಮಸ್ಯೆ ವಿರೋಧಿಸುವವರಿಗೆ ಯಾಕೆ ಎಂಬುದು ಹಲವರ ಪ್ರಶ್ನೆ. ಇದಕ್ಕಾಗಿ ಯಥಾಪ್ರಕಾರ ತರ್ಕದ ಸಮರ್ಥನೆಗಳು.

ಮಡೆಸ್ನಾನದ ವಿಷಯ ಜಾತಿಯನ್ನು ಮೀರಿದ್ದು. ಬ್ರಾಹ್ಮಣರು ತಿಂದ ಎಂಜಲೆಲೆಗಳ ಮೇಲೆ ಇತರ ಜಾತಿಗಳ ಜನರು ಹೊರಳಾಡುವುದು ನಡೆದುಕೊಂಡು ಬಂದಿರುವ ಕೊಳಕು ಸಂಪ್ರದಾಯ. ಹಾಗಂತ ಲಿಂಗಾಯತರು, ಒಕ್ಕಲಿಗರು ಅಥವಾ ಇನ್ಯಾವ ಜಾತಿಯವರು ಉಂಡ ಎಲೆಗಳ ಮೇಲೂ ಇತರ ಜಾತಿಗಳು ಹೊರಳಾಡುವಂತಾಗಬಾರದು. ಮಡೆಸ್ನಾನದಲ್ಲಿ ಭಾಗವಹಿಸುವವರು ಮಲೆಕುಡಿಯ ಎಂಬ ಜಾತಿಯವರೇ ಹೆಚ್ಚು ಎಂಬ ಮಾಹಿತಿ ಇದೆ. ಆದರೆ ಇತ್ತೀಚಿಗೆ ಎಲ್ಲ ಜಾತಿಯವರೂ ಈ ಹೀನ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ಸ್ವತಃ ಬ್ರಾಹ್ಮಣರೂ ಇದ್ದಾರೆ ಎಂಬ ಮಾತುಗಳೂ ಇವೆ.

ತಾವು ಉಂಡೆದ್ದ ನಂತರ ತಮ್ಮ ಎಂಜಲೆಲೆಯ ಮೇಲೆ ಮನುಷ್ಯರು ಉರುಳಾಡುತ್ತಾರೆ ಎಂಬ ವಿಷಯ ಉಂಡವರಿಗೇ ಹೇವರಿಕೆ ಹುಟ್ಟಿಸಬೇಕು. ತಮ್ಮ ಎಂಜೆಲೆಲೆಯ ಮೇಲೆ ಕೆಳಜಾತಿಯವರು ಉರುಳಾಡಿದರೆ ಅದು ಯಾವ ಗೌರವವನ್ನೂ, ಹೆಮ್ಮೆಯನ್ನೂ ತರಲಾರದು ಎಂದು ಅವರಿಗೆ ಅನ್ನಿಸಬೇಕು. ತದನಂತರ ಉರುಳಾಡಿದವರಿಗೆ ಅದು ಅಸಹ್ಯ ಎನ್ನಿಸಬೇಕು. ಇಲ್ಲಿ ಉರುಳಾಡುತ್ತಿರುವವರಿಗೆ ಅದು ತಮಗೆ ಯಾವುದೋ ಸಮಸ್ಯೆಯನ್ನು ನಿವಾರಿಸುವ ಸಂಪ್ರದಾಯವಾಗಿ ಕಾಣಿಸಿರುವುದೇ ದುರಂತ.

ಎಂಜಲೆಲೆಗಳಿಗೆ ಔಷಧೀಯ ಗುಣವಿರುತ್ತದೆ, ಖಾಯಿಲೆ ಗುಣಪಡಿಸುತ್ತದೆ ಎಂಬ ಮೌಢ್ಯವೂ ಇಲ್ಲಿನ ಜನರಲ್ಲಿದೆ. ಹಾಗೆ ಎಂಜಲೆಲೆಗಳಿಗೆ ಔಷಧೀಯ ಗುಣಗಳಿದ್ದರೆ ಕಲ್ಯಾಣಮಂಟಪಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ನಂತರ ಉಂಡ ಎಲೆಗಳ ಮೇಲೆ ಜನರೇಕೆ ಉರುಳಾಡುವುದಿಲ್ಲ? ಅಷ್ಟೇಕೆ ತಮ್ಮದೇ ಮನೆಯಲ್ಲಿ ಒಬ್ಬರು ತಿಂದುಂಡ ಎಲೆಯ ಮೇಲೆ ಇನ್ನೊಬ್ಬರು ಉರುಳಾಡಬಹುದಲ್ಲವೇ?

ವಾದ-ವಿವಾದಗಳು ಏನೇ ಇರಲಿ, ಮಡೆಸ್ನಾನ ಹಿಂದೆ ದೇವಸ್ಥಾನಗಳ ಮುಂದೆ ನಡೆಯುತ್ತಿದ್ದ ಬೆತ್ತಲೆ ಸೇವೆಯಷ್ಟೆ ಅಸಹ್ಯ. ಬೆತ್ತಲೆ ಸೇವೆ ನಿಷೇಧವಾದ ಮೇಲೆ ಮಡೆಸ್ನಾನವೂ ನಿಷೇಧವಾಗಬೇಕು.

ಅದಕ್ಕೂ ಮುನ್ನ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿಭೇದ ನಿಷೇಧವಾಗಬೇಕು. ಬ್ರಾಹ್ಮಣರಿಗೊಂದು ಪಂಕ್ತಿ, ಬ್ರಾಹ್ಮಣೇತರರಿಗೆ ಒಂದು ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಕರ್ನಾಟಕದ ಹಲವಾರು ದೇವಸ್ಥಾನಗಳಲ್ಲಿವೆ. ಸರ್ಕಾರದ ಅಧೀನದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲೂ ಈ ನೀಚ ಸಂಪ್ರದಾಯ ಜಾರಿಯಲ್ಲಿದೆ. ಇದು ಅನಾಗರಿಕ ಮಾತ್ರವಲ್ಲ, ಸಂವಿಧಾನ ವಿರೋಧಿಯೂ ಹೌದು. ಇದನ್ನು ಸಾಂಪ್ರದಾಯಿಕ ಪಂಕ್ತಿ, ಸಾರ್ವಜನಿಕ ಪಂಕ್ತಿ ಎಂದು ಪೇಜಾವರ ಸ್ವಾಮೀಜಿಯವಂಥವರು ಸಮರ್ಥಿಸಿಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ಸಹಬಾಳ್ವೆ ನಮ್ಮಿಂದ ಸಾಧ್ಯವಾಗದಿದ್ದರೆ ಮನುಷ್ಯರಾಗಿದ್ದುಕೊಂಡು ಪ್ರಯೋಜನವೇನು?

ಮಡೆಸ್ನಾನ-ಪಂಕ್ತಿಭೇದದಂಥ ಸಂಪ್ರದಾಯಗಳು ಇವತ್ತಿನ ದಿನಮಾನದಲ್ಲಿ ಸಾಕಷ್ಟು ಬ್ರಾಹ್ಮಣರಿಗೇ ಮುಜುಗರ ಹುಟ್ಟಿಸುವ ಆಚರಣೆಗಳು. ಇದನ್ನು ಮಾನವಂತ ಬ್ರಾಹ್ಮಣರು ಒಪ್ಪುವುದೂ ಇಲ್ಲ. ಪಂಕ್ತಿಭೇದದ ಕಾರಣಕ್ಕೆ ದೇವಸ್ಥಾನಗಳಲ್ಲಿ ಊಟ ಮಾಡದೇ ಹೊರಬರುವ ಜೀವಪರ ಬ್ರಾಹ್ಮಣರೂ ಇದ್ದಾರೆ. ಹಾಗೆಯೇ ಪಂಕ್ತಿಭೇದದ ಕಾರಣಕ್ಕೆ ಪ್ರತಿಭಟನಾರ್ಥವಾಗಿ ಈ ದೇವಸ್ಥಾನಗಳಲ್ಲಿ ಊಟ ಮಾಡದ ಶೂದ್ರರೂ ಇದ್ದಾರೆ.

ಇದೆಲ್ಲವನ್ನೂ ಜಾತಿಯ ಚೌಕಟ್ಟಿನಿಂದ ಮೀರಿ ನೋಡಿದಾಗ ಮಾತ್ರ ನಮ್ಮೊಳಗಿನ ಮಾನವೀಯತೆ ಎದ್ದುನಿಲ್ಲಬಹುದು. ವರ್ಣಾಶ್ರಮದ ಕಾಲ ಆಗಿಹೋಗಿದೆ. ಇನ್ನೂ ಅದೇ ಅಸಹ್ಯದಲ್ಲಿ ಜೋತು ಬೀಳುವುದು ಬ್ರಾಹ್ಮಣರಿಗಾಗಲೀ, ಶೂದ್ರರಿಗಾಗಲೀ ಶ್ರೇಯಸ್ಕರವಲ್ಲ. ಅದು ಯಾವ ಜಾತಿ-ಜನಾಂಗವನ್ನೂ ಪುರೋಗಾಮಿಯಾಗಿ ಬೆಳೆಸುವುದಿಲ್ಲ.

ಮನುಷ್ಯ-ಮನುಷ್ಯರಲ್ಲಿ ಕಂದಕ ಮೂಡಿಸುವ ನೀಚ ಆಚರಣೆಗಳನ್ನು ಸರ್ಕಾರ-ಸಮಾಜ ಕಿತ್ತುಹಾಕದ ಹೊರತು ಇಂಥವುಗಳಿಂದ ಬಿಡುಗಡೆಯೂ ಇಲ್ಲ. ಮಡೆಸ್ನಾನದ ಪ್ರಸ್ತಾಪ ಆಗುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳಿಂದ ಪಂಕ್ತಿಭೇದದ ಅನಿಷ್ಠವನ್ನೂ ಅಳಿಸುವ ಸಂಬಂಧ ಬ್ರಾಹ್ಮಣ-ಶೂದ್ರಾದಿ ಜಾತಿಗಳ ಜನರು ಚಿಂತಿಸಬೇಕಿದೆ. ಪಂಕ್ತಿಭೇದವೂ ಅಸ್ಪೃಶ್ಯತೆಯ ಪರೋಕ್ಷ ಆಚರಣೆಯಾದ್ದರಿಂದ ಅದಕ್ಕೆ ಸಂವಿಧಾನ ವಿರೋಧಿಯೂ ಆಗುತ್ತದೆ. ಹೀಗಾಗಿ ಅದನ್ನೂ ಕಿತ್ತುಹಾಕುವ ಕೆಲಸ ಶೀಘ್ರವೇ ಆಗಬೇಕಿದೆ.

ಪ್ರಶಸ್ತಿ-ಪ್ರತಿಭಟನೆ: ಒಂದು ಪುಟ್ಟ ಪ್ರತಿಕ್ರಿಯೆ


ಮಾನ್ಯರೆ,

ಇಂದು ಮುಂಜಾನೆ ಪತ್ರಿಕೆ ತೆರೆಯುತ್ತಿದ್ದಂತೆ ಗಮನ ಸೆಳೆದಿದ್ದು ಎರಡು ಸುದ್ದಿಗಳು. ಎರಡೂ ಕೂಡ ಪತ್ರಿಕೋದ್ಯಮಕ್ಕೆ ಕುರಿತಾದ, ಒಂದೇ ನಮೂನೆಯ ಅಂಶವನ್ನು ಪ್ರತಿಪಾದಿಸುತ್ತಿದ್ದವು. ಒಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದ ಚಿತ್ರ ಸುದ್ದಿಯಾದರೆ ಮತ್ತೊಂದು ಶಿವಮೊಗ್ಗದಲ್ಲಿನ ನಕಲಿ ರೋಲ್ ಕಾಲ್ ಪತ್ರಕರ್ತರ ವಿರುದ್ಧ ಕಾರ್ಯನಿರತ ಪತ್ರಕರ್ತರ ಪ್ರತಿಭಟನೆ. ಇದಕ್ಕೆ ಕಾರ್ಯ ಮರೆತವರ ವಿರುದ್ಧ ಕಾರ್ಯನಿರತರ ಪ್ರತಿಭಟನೆ ಎಂದು ಹೆಡ್ಡಿಂಗ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ವಿಷಯ ಅದಲ್ಲ.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಹೆಸರಿದ್ದ ಪ್ರಜಾವಾಣಿಯ ಅಂಕಣಕಾರ ದಿನೇಶ್ ಅಮೀನಮಟ್ಟು ಅವರು ಪ್ರಶಸ್ತಿ ಸ್ವೀಕರಿಸಲಿಲ್ಲ. ಅದಕ್ಕೆ ವೈಯುಕ್ತಿಕವಾಗಿ ಅವರು ನೀಡುತ್ತಿರುವ ಕಾರಣ ಅನಾರೋಗ್ಯ. ಅದು ಅವರ ಅನಾರೋಗ್ಯವೋ ಪತ್ರಿಕೋದ್ಯಮದ ಅನಾರೋಗ್ಯವೋ ತಿಳಿದಿಲ್ಲ. ಬಹುಶಃ ಅಮಿನಮಟ್ಟು ಬರವಣಿಗೆಯನ್ನು ಗಮನಿಸಿದ ಯಾರಿಗೇ ಆಗಲಿ ಈ ಕುರಿತು ಸಂದೇಹ ಬರುವುದು ಸಹಜ. ಹಾಗಾಗಿ ಅವರೇ ಈ ಕುರಿತು ತಮ್ಮ ಅಂತರಾಳದ ನಿರ್ಧಾರದ ಬಗ್ಗೆ ಅನಾವರಣ ಮಾಡಿದರೆ ಚೆನ್ನಾಗಿರುತ್ತಿತ್ತು. ಇವತ್ತಿನ ಯುವ ಪತ್ರಕರ್ತರಿಗೆ, ಭ್ರಷ್ಟರಾಗದೆ ತೊಳಲಾಡುತ್ತಿರುವವರಿಗೆ ಇದು ಜೀವನ ಪ್ರೀತಿ ಜೊತೆಗೆ ಪತ್ರಿಕೋದ್ಯಮದ ಬಗ್ಗೆ ಮಮಕಾರ ಬೆಳೆಸಬಲ್ಲದು ಎಂಬುದು ನಂಬಿಕೆ.

ಉಳಿದಿದ್ದು ಶಿವಮೊಗ್ಗ ಪತ್ರಕರ್ತರ ಪ್ರತಿಭಟನೆ ಸುದ್ದಿ. ಸಂಪಾದಕೀಯದಲ್ಲಿ ಶಿವಮೊಗ್ಗ ಪತ್ರಕರ್ತರ ಸೈಟು ಹಗರಣದ ಬಗ್ಗೆ ಪತ್ರಿಕಾ ಮಿತ್ರ ಹರ್ಷ ಕುಗ್ವೆ ಪ್ರಸ್ತಾಪಿಸಿದ್ದು ನಿಮಗೆ ನನಪಿರಬಹುದು. ಈಗಿನ ಪ್ರತಿಭಟನೆಯ ಮೂಲಸೆಲೆ ಅಲ್ಲಿಂದ ಆರಂಭವಾಗುತ್ತದೆ. ಅದು ಮತ್ತೊಂದು ಕತೆ.

ಸದ್ಯ ಕಾರ್ಯನಿರತ ಪತ್ರಕರ್ತ ಮಿತ್ರರು ಶಿವಮೊಗ್ಗದಲ್ಲಿ ಪತ್ರ್ರಕರ್ತರ ಹೆಸರಿನ ಬ್ಲಾಕ್ ಮೇಲ್ ವಸೂಲಿ ವೀರರ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರ ಅದರ ನೇತ್ರೃತ್ವದಲ್ಲಿರುವ ಮುಂಚೂಣಿ ಪತ್ರಕರ್ತ ಮಿತ್ರರ ಹೆಸರೀಗ ಕೆಎಚ್‌ಬಿ ಸೈಟ್ ಹಂಚಿಕೆ ವಿವಾದದಲ್ಲಿ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿದ್ದು ಇತ್ತೀಚೆಗೆ ಒಂಭತ್ತು ಮಂದಿಯ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಈ ಎಫ್‌ಐಆರ್ ದಾಖಲಿಸಲು ಕೋರ್ಟು ಒಂದು ವರ್ಷದ ಹಿಂದೆಯೇ ಆದೇಶಿಸಿತ್ತು ಎಂಬ ಸುದ್ದಿ ಇದೆ. ಎಲ್ಲಿಗೆ ಬಂತು ಜಿಲ್ಲಾ ಪತ್ರಿಕೋದ್ಯಮ..??

ವಂದನೆಗಳೊಂದಿಗೆ
ಒಬ್ಬ ಯುವ ಪತ್ರಕರ್ತ