Monday, December 27, 2010

ಪತ್ರಕರ್ತರು ಮತ್ತು ನಾಯಿಗಳು...

ಇವರು ಕಾವಲು ನಾಯಿಗಳಾಗಬೇಕಿತ್ತು. ಆದರೆ, ನಾಯಿಗಳಾಗಿದ್ದಾರೆ. ಹರ್ಕೊಂಡು ತಿನ್ನುತ್ತಿದ್ದಾರೆ. ವಸೂಲಿ ವೀರರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಾರೆ... 

ಹೀಗೆಂದವರು ಚಿತ್ರದುರ್ಗದ ಮುರುಘರಾಜೇಂದ್ರ ಶರಣರು.

ಈ ಮಾತಿಗೆ ಇಬ್ಬರು ಹಿರಿಯ ಪತ್ರಕರ್ತರು ವಿಭಿನ್ನ ವರಸೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ಪ್ರಜಾವಾಣಿಯ ಸಹಸಂಪಾದಕ ಪದ್ಮರಾಜ ದಂಡಾವತಿ, ಮತ್ತೊಬ್ಬರು ಈಗಷ್ಟೇ ಸಮಯ ಚಾನಲ್ ಸೇರಿರುವ ಶಶಿಧರ ಭಟ್ಟರು. ಇಬ್ಬರೂ ತದ್ವಿರುದ್ಧವಾಗಿ ಬರೆದಿದ್ದಾರೆ. ಇಬ್ಬರೂ ಬೇರೆ ಬೇರೆ ನೆಲೆಯಲ್ಲಿ ನಿಂತು ಮಾತನಾಡಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ, ಪ್ರತಿಕ್ರಿಯೆಗೆ ಭಿನ್ನ ಭಿನ್ನ ಆಯಾಮಗಳೂ ಇರುತ್ತವೆ. ಇಬ್ಬರ ಲೇಖನಗಳು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ಪದ್ಮರಾಜ ದಂಡಾವತಿಯವರು ಮುರುಘರಾಜೇಂದ್ರ ಶರಣರ ಬೆನ್ನಿಗೆ ನಿಂತಿದ್ದಾರೆ. ಅವರನ್ನು ಬೆಂಬಲಿಸಿರುವುದು ಮಾತ್ರವಲ್ಲ, ಪತ್ರಕರ್ತರ ಕ್ಷಮೆ ಕೋರಿದ್ದೂ ತಪ್ಪು ಎಂಬಂತೆ ಮಾತನಾಡಿದ್ದಾರೆ.

ದಂಡಾವತಿಯವರದು ಹಳೆ ಕಾಲದ ತಾತಂದಿರ, ಅಜ್ಜಿಯಂದಿರ ಶೈಲಿ. ‘ನಮ್ಮ ಕಾಲ ಹಿಂಗಿತ್ತು ಕಣ್ರೀ, ಈಗ ಹೆಂಗಾಯ್ತು ನೋಡಿ ಎನ್ನುವ ಹಳಹಳಿಕೆ. ಸಮಾಜ ಬದಲಾದಂತೆ ಪತ್ರಕರ್ತರು, ಪತ್ರಿಕಾ ವೃತ್ತಿಯ ಪರಿಭಾಷೆಗಳೂ ಬದಲಾಗಿವೆ. ಇದನ್ನು ಭ್ರಷ್ಟಾಚಾರಕ್ಕೆ ಸೀಮಿತಗೊಳಿಸಿ ಹೇಳುವ ಹಾಗೂ ಇಲ್ಲ.

ಹಾಗೆಂದ ಮಾತ್ರಕ್ಕೆ ಪತ್ರಿಕಾ ಸಮೂಹ ಸಂಪೂರ್ಣ ಭ್ರಷ್ಟವಾಗಿದೆ ಎಂಬ ನಿರ್ಣಯಕ್ಕೆ ಬರುವುದೂ ಸಾಧ್ಯವಿಲ್ಲ. ಭ್ರಷ್ಟರಾಗಿರುವವರು ಕೆಲವೇ ಕೆಲವು ಪರ್ಸೆಂಟ್ ಜನ. ಸ್ವತಃ ಪ್ರಜಾವಾಣಿಯಂಥ ಪತ್ರಿಕೆಯ ನೇತೃತ್ವ ವಹಿಸಿರುವ ದಂಡಾವತಿಯವರಿಗೆ ಇದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಆದರೂ ಅವರು ಯಾಕೆ ಇಡೀ ಪತ್ರಿಕಾಸಮೂಹವನ್ನುದ್ದೇಶಿಸಿ ಮುರುಘಾ ಶರಣರು ಹೇಳಿದ ಮಾತುಗಳನ್ನು ಸಮರ್ಥಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಆತ್ಮಾವಲೋಕನ ಬೇಕು ನಿಜ, ಆದರೆ ದಂಡಾವತಿಯವರದು ಆತ್ಮಾವಲೋಕನದ ಗೆರೆಯನ್ನು ದಾಟಿ ಆತ್ಮನಿಂದನೆಯ ಬಡಬಡಿಕೆಗಳಂತೆ ಕಾಣುತ್ತದೆ.
ಶರಣರು ಇಡೀ ಪತ್ರಿಕಾ ಸಮೂಹವನ್ನು ಕಟಕಟೆಗೆ ನಿಲ್ಲಿಸಿದರೆ, ದಂಡಾವತಿಯವರು ಕರಿಕೋಟು ತೊಟ್ಟುಕೊಂಡು ಶರಣರ ಪರ ವಕಾಲತ್ತಿಗೆ ನಿಂತಿದ್ದಾರೆ.

ಶರಣರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದಕ್ಕೆ ಅವರು ಪ್ರಚಾರವನ್ನೇಕೆ ನಿರೀಕ್ಷಿಸಬೇಕು? ಪತ್ರಕರ್ತರಿಗೆ ದುಡ್ಡು ಕೊಟ್ಟು ಕರೆಸಿಕೊಳ್ಳುವ ಅಭ್ಯಾಸವನ್ನೇಕೆ ಬೆಳೆಸಿಕೊಳ್ಳಬೇಕಿತ್ತು? ಕಾರು ಕೊಟ್ಟು ಕಳಿಸುವ ತೆವಲು ಯಾಕೆ ಬೇಕಿತ್ತು? ಶರಣರೇನು ರಾಜಕಾರಣಿಗಳೇ? ಚುನಾವಣೆಗೆ ನಿಲ್ಲಬೇಕೆ? ಇಲ್ಲವಾದಲ್ಲಿ ಅವರಿಗೆ ಪ್ರಚಾರದ ಹಂಗೇಕೆ? ಅಷ್ಟಕ್ಕೂ ಸ್ವಾಮೀಜಿ ಎಂದರೇನು? ಎಲ್ಲವನ್ನೂ ತೊರೆದು ನಿಂತವರಲ್ಲವೇ? ಒಬ್ಬ ನಿಜವಾದ ಸಂನ್ಯಾಸಿ ಪ್ರಚಾರ ಹುಚ್ಚಿಗೆ ಸಿಕ್ಕುಬಿದ್ದರೆ ಆತನ ಸಂನ್ಯಾಸಕ್ಕೇನು ಬೆಲೆಬಂತು? ಇಂಥ ಪ್ರಶ್ನೆಗಳನ್ನು ಕರಿಕೋಟು ಧರಿಸಿದ ದಂಡಾವತಿಯವರು ಶರಣರನ್ನೂ ಕೇಳಬಹುದಿತ್ತು, ಕೇಳಲಿಲ್ಲ.

ಇನ್ನು ಶಶಿಧರ ಭಟ್ಟರು ಬೇರೆಯದೇ ಆದ ವರಸೆಯಲ್ಲಿ ಬರೆದಿದ್ದಾರೆ. ಅವರಿಗೆ ಶರಣರ ಮೇಲೆ ಕೋಪ ಬಂದಂತಿದೆ. ಹೀಗಾಗಿ ತುಸು ಹೆಚ್ಚಾಗಿಯೇ ಹರಿಹಾಯ್ದಿದ್ದಾರೆ. ಆದರೆ ಈ ರೀತಿಯ ಕೋಪ ಶರಣರಿಗೆ, ಅವರಂಥವರಿಗೆ ತಾಕುವುದು ಮುಖ್ಯ. ಯಾಕೆಂದರೆ ಸಾರಾಸಗಟಾಗಿ ಒಂದು ಸಮೂಹವನ್ನು ನಿಂದಿಸುವ ಮುನ್ನ ಅಲ್ಲಿ ಪ್ರಾಮಾಣಿಕರೂ ಇರುತ್ತಾರೆ, ನಿಜವಾದ ವೃತ್ತಿಪರತೆಯನ್ನು ಮೈಗೂಡಿಸಿಕೊಂಡ ಸಜ್ಜನರೂ ಇರುತ್ತಾರೆ ಎಂಬುದನ್ನು ಶರಣರು ಅರಿತುಕೊಳ್ಳಲು ಇಂಥ ಪ್ರತಿಕ್ರಿಯೆಗಳು ಅನುವು ಮಾಡಿಕೊಡುತ್ತದೆ. ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು, ಪದವಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಯಡಿಯೂರಪ್ಪನವರನ್ನು ಸಮರ್ಥಿಸಿದ ಮುರುಘಾ ಶರಣರಿಗೆ ಪತ್ರಕರ್ತರನ್ನು ಭ್ರಷ್ಟರೆಂದು ಹಣಿಯಲು ನೈತಿಕ ಧೈರ್ಯ ಎಲ್ಲಿಂದ ಬಂತು ಎಂಬ ಬಹುಮುಖ್ಯವಾದ ಪ್ರಶ್ನೆಯನ್ನು ಭಟ್ಟರು ಎತ್ತಿದ್ದಾರೆ.

ಇಬ್ಬರೂ ಮರೆತ ಕೆಲವು ಮಾತುಗಳಿವೆ. ಇವತ್ತು ಪತ್ರಕರ್ತರಿಗೆ ಮುನ್ನ ಅವರು ಪ್ರತಿನಿಧಿಸುವ ಸಂಸ್ಥೆಗಳ ಮ್ಯಾನೇಜ್‌ಮೆಂಟ್‌ಗಳೇ ಭ್ರಷ್ಟವಾಗಿವೆ. ಸರ್ಕಾರದ ಪರವಾಗಿರಿ, ವಿರುದ್ಧವಾಗಿರಿ ಎಂದು ಸ್ಪಷ್ಟವಾಗಿ, ನೇರವಾಗಿ ಸೂಚಿಸುವ ಮಾಧ್ಯಮ ಸಂಸ್ಥೆಗಳ ಧಣಿಗಳಿದ್ದಾರೆ. ತುಂಡು ಜಮೀನಿಗಾಗಿ (ತುಂಡು ಎಂದರೆ ಎಕರೆಗಟ್ಟಲೆ) ಸರ್ಕಾರದ ಮುಖ್ಯಸ್ಥರ ಹಿಂದೆ ಬಾಲ ಅಲ್ಲಾಡಿಸುತ್ತ, ಇಡೀ ಪತ್ರಿಕೆಯನ್ನೇ ಸರ್ಕಾರದ ಸುಪರ್ದಿಗೆ ಕೊಡುವ ಮಹಾನುಭಾವರಿದ್ದಾರೆ.

ಈಗೀಗ ಮಾಧ್ಯಮ ಸಂಸ್ಥೆಗಳನ್ನು ಆರಂಭಿಸುತ್ತಿರುವವರೆಲ್ಲ ರಾಜಕಾರಣಿಗಳು. ಭ್ರಷ್ಟಾಚಾರವಿಲ್ಲದೆ ಬದುಕಿ ಅಭ್ಯಾಸವಿಲ್ಲದವರು.
ಒಲೆ ಹೊತ್ತಿ ಉರಿದರೆ ನಿಲಬಹುದು, ಧರೆ ಹೊತ್ತಿ ಉರಿದರೆ ನಿಲಬಹುದೆ?

ಇಬ್ಬರೂ ಪತ್ರಕರ್ತರು ಈ ಪ್ರಶ್ನೆಯನ್ನೂ ಕೇಳಿದ್ದರೆ ಚೆನ್ನಾಗಿತ್ತು. ಆದರೆ ಅವರ ಅನಿವಾರ್ಯ ಸಂಕಟಗಳನ್ನೂ ಅರ್ಥ ಮಾಡಿಕೊಳ್ಳೋಣ, ಬಿಡಿ.

ಏನದರೂ ಇರಲಿ. ಮುರುಘಾ ಶರಣರು ನೀಡಿದಂಥ ಹೇಳಿಕೆಗಳಂಥವರು ಹೊರಬಂದಾಗ ಪತ್ರಕರ್ತರು ಸುಮ್ಮನಿರುವುದೇ ಹೆಚ್ಚು. ಹೀಗಿರುವಾಗ ಈ ಇಬ್ಬರು ಹಿರಿಯರು ಮಾತನಾಡಿದ್ದಾರೆ. ಅವರನ್ನು ಅಭಿನಂದಿಸೋಣ.

5 comments:

 1. Why my comment wasn't published. Who told you it is PUBLICITY MEDIA..?
  Most of scribes thinks like that. And, used to say that why should I give publicity to him ?!
  Is writing news is publicity ? Then what is wrong in selling that space?

  ReplyDelete
 2. ಪದ್ಮರಾಜ ದಂಡಾವತಿಯವರ ಲೇಖನದಲ್ಲಿ ಆತ್ಮಶೋಧನೆ ಇದೆ. ಶಶಿಧರ ಭಟ್ಟರ ವಾದ ಸರಿಯಿಲ್ಲ. ಅವರು ಹೇಳುತ್ತಿರುವುದು ಹೇಗಿದೆಯೆಂದರೆ ‘ಪತ್ರಕರ್ತರು ನಾಯಿಗಳೇ ಇರಬಹುದು. ಆದರೆ, ಅದನ್ನು ಹೇಳಲು ಮುರುಘಾ ಶರಣರಿಗೆ ಅರ್ಹತೆಯಿಲ್ಲ’ ಎನ್ನುವಂತಿದೆ.

  ಧನ್ಯವಾದಗಳು.

  ReplyDelete
 3. ಪದ್ಮರಾಜದಂಡಾವತಿ 'ಸಂತ'ನಂತೆ ಮಾತನಾಡಿರುವುದು ಸರಿಯಲ್ಲ, ಮಾಧ್ಯಮ ಲೋಕಕ್ಕೆ ಇವತ್ತು ಎಂತಹವರು ಬಂದಿದ್ದಾರೆ, ಮತ್ತು ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದ್ದಾರೆ, ಅಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ವ್ಯಕ್ತಿತ್ವಗಳು ಎಂತಹವು, ಅವರ ಬುದ್ದಿಮಟ್ಟ, ಈಗೋ ಎಂತಹದು ಎಂಬುದು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತೆ. ಪದ್ಮರಾಜ ದಂಡಾವತಿ ಸಹಾ ಇಂತಹದ್ದರಿಂದ ಹೊರತಾದ ವಿಶೇಷ ವ್ಯಕ್ತಿಯೇನಲ್ಲ,ಇರಲಿ ಮುರುಘಾ ಶರಣರು ಮಾಧ್ಯಮ ಮಿತ್ರರ ಬಗ್ಗೆ ನಿರ್ಲಜ್ಜತೆಯಿಂದ ಮಾತನಾಡಿರುವುದು ಖಂಡನೀಯ, ಮಾಧ್ಯಮಲೋಕದಲ್ಲಿ 'ಪತ್ರಕರ್ತ'ರೆಂಬ ಹೆಸರಿನಲ್ಲಿ ಕೆಲವು ಮಂದಿ ಚಾಲ್ತಿಯಲ್ಲಿದ್ದು ಕೆಟ್ಟ ಹೆಸರು ಬರಲು ಕಾರಣರಾಗಿದ್ದಾರೆ ಹಾಗಂತ ಶರಣರು ಸಾರ್ವಜನಿಕವಾಗಿ ತನ್ನ ಸ್ಥಾನಮಾನಗಳನ್ನು ಅರಿಯದೇ ಕಾಮ-ಕ್ರೋಧ-ಲೋಭ-ಮದ-ಮಾತ್ಸರ್ಯದ ಪ್ರತಿನಿಧಿಯಂತೆ ಪತ್ರಕರ್ತ ಸಮೂಹದ ವಿರುದ್ದ ಮಾತನಾಡಿರುವುದು ವಿಷಾಧನೀಯಕರ ಸಂಗತಿ. ಪತ್ರಕರ್ತರನ್ನು ತಮ್ಮ ತೀಟೆಗಳನ್ನು ಬೇಕೆಂದಾಗ ಬಳಸಿಕೊಂಡು ತೀರಿಸಲು ಅಲ್ಲ ಎಂಬುದನ್ನು ಖಾಕಿ-ಖಾವಿ-ಖಾದಿಗಳು ಅರಿಯಬೇಕು ಅಲ್ಲವೇ?

  ReplyDelete
 4. it is nice to visit this blog. a blog to review present day media was necessary at this juncture. Regarding this debate on Sharana's speech - according to my observation - sharana is probably is one among the swamijis who got highest publicity in media. His speech in Shimoga shows his thirst for publicity. it is sad that the person who talks of corruption in journalism supports the corrupt chief minister.
  Being a swamiji can't he criticise the CM for his lust for money.
  it is sad that a senior journalist has come in support of this sharana. in a way this journalist also supported corruption of the government by denying coverage to stories, that exposed yeddyurappa's real face.

  ReplyDelete
 5. Your media system is more corrupt than any other institution. Politician agree that they are corrupt. But, media preaches one thing and do just opposite.

  ReplyDelete