ಹರ್ಷ ಕುಮಾರ್ ಕುಗ್ವೆ |
ಈ ಪ್ರಳಯದ ಥಿಯರಿಗಳು ಹುಟ್ಟಿಕೊಂಡಿದ್ದು ಹೇಗೆ? ಇದರಲ್ಲಿನ ಮಿಥ್ ಗಳೇನು ಎಂಬುದರ ಕುರಿತು ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಬಹಳ ಹಿಂದೆಯೇ 2009ರ ನವೆಂಬರ್ ನಲ್ಲಿ ಬರೆದಿದ್ದರು. ಆ ಲೇಖನ ಪ್ರಸ್ತುತವಾಗಿರುವುದರಿಂದ ಅದನ್ನು ಸಂಪಾದಕೀಯದಲ್ಲಿ ಪ್ರಕಟಣೆಗಾಗಿ ಕಳುಹಿಸಿದ್ದಾರೆ. ಅದು ಇಲ್ಲಿದೆ, ಒಮ್ಮೆ ಓದಿ.
ಹರ್ಷಕುಮಾರ್ ಕುಗ್ವೆ ಮೂಲತಃ ಶಿವಮೊಗ್ಗದವರು.ಈಗ ಸಂಡೇ ಇಂಡಿಯನ್ ಪತ್ರಿಕೆಯ ವರದಿಗಾರರಾಗಿದ್ದಾರೆ. ಕೆಂಡುಸಿರು ಅವರ ಬ್ಲಾಗ್.

೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ ದಿನವೇ ಡೂಮ್ಸ್ ಡೇ ೨೦೧೨. ಅದು ಭೂಮಂಡಲದ ಅಂತ್ಯದ ದಿನ..... ಈ ಬಗೆಯ ಊಹಾಪೋಹಗಳು ಈಗಾಗಲೇ ನಮ್ಮ ಇಡೀ ಜಗತ್ತಿನಾದ್ಯಂತ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಂಡು ಬಿಟ್ಟಿವೆ. ಅದರ ಈ ಕುರಿತ ಸಾವಿರಾರು ಸಂಖ್ಯೆಯ ಅಂತರ್ಜಾಲ ತಾಣಗಳಿಂದ, ಟಿ.ವಿ೯ ನ ಹೀಗೂ ಉಂಟೆ?! ಯಂತಹ ಕಾರ್ಯಕ್ರಮಗಳಿಂದ, ಕೆಲವು ಧಾರ್ಮಿಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳಿಂದ, ಹೀಗೆ ನಾನಾ ಮೂಲಗಳಿಂದ ಈ ತಥಾಕಥಿತ ಪ್ರಳಯದ ಕುರಿತ ವಿಷಯಗಳನ್ನು ಓದಿ, ಕೇಳಿ ಜನರು ತೀವ್ರ ಆತಂಕ, ಕುತೂಹಲಗಳಿಗೊಳಗಾಗಿದ್ದಾರೆ. ಬೆಂಗಳೂರಿನ ಹತ್ತಿರ ಚಿಕ್ಕಗುಬ್ಬಿಯಲ್ಲಿರುವ ಮಾನಸ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಕೃಷ್ಣಾನಂದ ಎಂಬ ಸ್ವಾಮಿ ೨೦೧೨ ನೇ ಇಸವಿಯಲ್ಲಿ ನಡೆಯಬಹುದಾದ ಘಟನೆಗಳನ್ನು ತಮ್ಮ ದಿವ್ಯದರ್ಶನದ ಸಹಾಯದಿಂದ, ೨೦೧೨-ಎಂಡ್ ಆರ್ ಬಿಗಿನಿಂಗ್ ಎಂಬ ಕೃತಿಯನ್ನು ಬರೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕು, ಶಿವಪುರದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ಕಾಲಜ್ಞಾನ ನಿರ್ಣಯ ಕರ್ಮಕಾಂಡ ಅಂತ್ಯಕಾಲ ಎಂಬ ಡಿವಿಡಿಯನ್ನೂ ತಂದಿದ್ದಾನೆ.
ಜಗತ್ತು ಮುಳುಗಿ ಹೋಗುವ ಪ್ರಳಯದ ಭೀತಿಯನ್ನು ಹಲವಾರು ಪ್ರಳಯಾಂತಕರು ಹಿಂದಿನಿಂದಲೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಈ ಹಿಂದೆ ೧೯೯೯ ರಲ್ಲಿಯೂ ಜನರು ಪ್ರಳಯದ ಭೀತಿಗೆ ಒಳಗಾಗಿದ್ದರು. ಅದೇ ರೀತಿ ಇದೀಗ ೨೦೧೨ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎನ್ನಲು ಹಲವಾರು ವೈಜ್ಞಾನಿಕ ಸಮರ್ಥನೆಗಳನ್ನು ಬೇರೆ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕ್ರಿ.ಶ.೨೫೦ರಿಂದ ಕ್ರಿ.ಶ.೯೦೦ ರ ಅವಧಿಯಲ್ಲಿ ರಚಿಸಲಾದ ಮಾಯಾ ನಾಗರೀಕತೆಯ ಜನರ ಕ್ಯಾಲೆಂಡರ್ ೨೧.೧೨.೨೦೧೨ಕ್ಕೆ ಕೊನೆಗೊಳ್ಳುತ್ತದೆ ಎಂಬುದು ಒಂದು. ಇದೇ ಹೊತ್ತಿಗೆ ಭೂಮಿಯು ಕ್ಷೀರ ಪಥದ ಕೇಂದ್ರದೊಳಕ್ಕೆ ಪ್ರವೇಶ ಪಡೆಯುತ್ತದೆಂದೂ, ಅದನ್ನನುಸರಿಸಿ ಭೂಮಿಯ ಮೆಲೆ ಹಲವಾರು ಪರಿವರ್ತನೆಗಳಾಗುತ್ತವೆ ಎಂದೂ ಹೇಳಲಾಗುತ್ತಿದೆ. ಇದರ ಜೊತೆಗೆ ಭೂಮಿಯ ಮೆಲೆ ಕ್ಷುದ್ರಗ್ರಹಗಳು ಅಪ್ಪಳಿಸುತ್ತವೆಂದೂ, ಭೂಮಿಯ ಧೃವಗಳು ಅದಲು ಬದಲಾಗುತ್ತವೆಂದೂ ಹೇಳಲಾಗುತ್ತಿದೆ. ಭೂಮಿಯ ಮೆಲೆ ರಹಸ್ಯ ಗ್ರಹವೊಂದು ಎರಗಲಿದೆ ಎಂದೂ ನಂಬಲಾಗುತ್ತಿದೆ. ಎಲ್ಲಾ ನಾಶವಾದ ಮೇಲೆ ಬದುಕುವ ಕೆಲವೇ ಸಜ್ಜನರು ಮಾತ್ರ ನಂತರದಲ್ಲಿ ಕೇವಲ ಬೆಳಕನ್ನು ಮಾತ್ರ ಸೇವಿಸಿ ಬದುಕುತ್ತಾರೆನ್ನುವ ಕಥೆಗಳನ್ನೂ ಹರಿಬಿಡಲಾಗುತ್ತದೆ. ಮೇಲೆ ತಿಳಿಸಿದ ಕರ್ನಾಟಕದ ಸ್ವಾಮಿಗಳು ಜನರು ಆಧ್ಯಾತ್ಮಿಕ ಚಿಂತನೆಗೆ ತೊಡಗಿಕೊಂಡಲ್ಲಿ ಮಾತ್ರ ಜನರು ಉಳಿದುಕೊಳ್ಳಬಹುದೆಂದು ಉಚಿತ ಸಲಹೆಗಳನ್ನೂ ನೀಡತೊಡಗಿದ್ದಾರೆ. ನುಡಿದಿದ್ದಾರೆ. ಪ್ರಳಯದ ಕುರಿತೇ ಕೆಲವಾರು ಹಾಲಿವುಡ್ ಸಿನಿಮಾಗಳೂ ಬಿಡುಗಡೆಯಾಗುತ್ತಿವೆ. ಪ್ರಳಯ ಅಥವಾ ಭೂಮಿಯ ಅಂತ್ಯದ ಕುರಿತ ಇಂತಹ ವಿಚಾರಗಳನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಅಥವಾ ತಳ್ಳಿ ಹಾಕುವ ಮುನ್ನ ಈ ಕುರಿತು ಪ್ರಚಲಿತದಲ್ಲಿರುವ ಕೆಲ ಊಹಾಪೋಹಗಳನ್ನು ಅಥವಾ ಮಿಥ್‌ಗಳನ್ನು ಪರಿಶೀಲಿಸೋಣ.
ಮಿಥ್೧ : ಮಾಯನ್ ಕ್ಯಾಲೆಂಡರ್ ಪ್ರಕಾರ ಜಗತ್ತು ಅಂತ್ಯಗೊಳ್ಳುತ್ತದೆ.

ಮಾಯನ್ನರು ತಮ್ಮ ಸಂಖ್ಯಾಶಾಸ್ತ್ರಗಳಲ್ಲಿ ೧೩ ಹಾಗೂ ೨೦ನ್ನು ಮೂಲ ಘಟಕಗಳನ್ನಾಗಿಟ್ಟುಕೊಳ್ಳುತ್ತಿದ್ದರು ೨೦೧೨ರ ಡಿಸೆಂಬರ್ ೨೧ಕ್ಕೆ ಅವರ ಕ್ಯಾಲೆಂಡರ್ ಪ್ರಕಾರ ೧೩ ಬಕ್ಟುನ್‌ಗಳು ಮುಗಿಯುತ್ತವೆ . ಆದಿನವನ್ನು ೧೩.೦.೦.೦.೦.ಗೆ ಎಂದು ಓದಬೇಕಾಗುತ್ತದೆ. ಮಾಯಾ ಜನರ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ಆರಂಭವಾದ ಆಗಸ್ಟ್೧೧, ೩೧೧೪ಕ್ರಿ.ಪೂ.ದಿಂದ ೫೧೨೬ವರ್ಷಗಳಾಗುತ್ತದೆ.. ಇಲ್ಲಿ ಗಮನಿಸಬೆಕಾದುದು ಏನೆಂದರೆ ಈ ದಿನಕ್ಕೆ ಮಾಯಾ ಜನರು ಮಾಡಿಕೊಂಡಿದ್ದ ಕ್ಯಾಲೆಂಡರ್ ಅವಧಿಯು ಒಂದು ಮಹಾಚಕ್ರ್ರವನ್ನು ಪೂರೈಸುತ್ತದೆ. ಅಂದರೆ ಅದರ ಅರ್ಥ ಅದರ ಮರು ದಿನವು ಮಾಯನ್ನರ ಪ್ರಕಾರ ಮತ್ತೆ .೦.೦.೦.೦.೦ಎಂದು ಆರಂಭವಾಗುತ್ತದೆ. ನಮ್ಮ ಪ್ರಕಾರ ಡಿಸೆಂಬರ್ ೩೧ರ ನಂತರ ಜನವರಿ ೧ ಆರಂಭವಾಗುವುದಿಲ್ಲವೇ ಹಾಗೆ. ಇದರಾಚೆಗೂ ಹಲವು ಪಂಡಿತರು ಮಾಯನ್ನರ ಕ್ಯಾಲೆಂಡರ್‌ನ ಒಂದು ಮಹಾಚಕ್ರವು ಮುಗಿಯುವುದು ೨೦ ಬಕ್ತುನ್‌ಗಳಿಗೆ ಎಂದೂ ವಾದಿಸುತ್ತಾರೆ. ಆದರೆ ಮಾಯನ್ನರು ಎಲ್ಲೂ ಆ ದಿನವೇ ಜಗತ್ತಿನ ಅಂತ್ಯವಾಗುತ್ತದೆ ಎಂದು ಹೇಳಿರಲಿಲ್ಲ. ಜಗತ್ತು ಮುಂದೊಮ್ಮೆ ಮುಗಿದುಬಿಡುತ್ತದೆ ಎಂದು ಮಾಯಾ ಜನರು ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ. ಇಂದಿಗೂ ಅಮೆರಿಕಾದಲ್ಲಿ ಬದುಕುತ್ತಿರುವ ಮಾಯಾ ಜನರೇ ಜಗತ್ತಿನ ಅಂತ್ಯದ ಬಗೆಗಿನ ಈ ಪ್ರಚಾರವನ್ನು ನಂಬುವುದಿಲ್ಲ. ಆದರೆ ಕೆಲವು ಸ್ವಾರ್ಥ ಹಿತಾಸಕ್ತಿಗಳು ಮಾಯಾ ಕ್ಯಾಲೆಂಡರ್‌ನ್ನು ಕಪೋಲ ಕಲ್ಪಿತ ಜಗತ್ತಿನ ಅಂತ್ಯ ದೊಂದಿಗೆ ಸಂಬಂಧ ಕಲ್ಪಿಸಿ ಭಾರೀ ಪ್ರಚಾರ ಪಡಿಸುತ್ತಿದ್ದಾರೆ.
ಮಿಥ್ ಎರಡು: ಪ್ರತ್ಯೇಕಗೊಳ್ಳುವ ಖಂಡಗಳು ನಾಗರೀಕತೆಯನ್ನು ನಾಶ ಮಾಡುತ್ತವೆ.
ಪ್ರಳಯಾಂತಕರ ಪ್ರಕಾರ ಭೂಮಿಯ ಕೇಂದ್ರದಲ್ಲಿರುವ ದ್ರವ - ಲೋಹದ ಹೊರ ಕವಚದ ಮೇಲಿರುವ ಭೂಮಿಯ ಮೇಲ್ಪದರಗಳು ತಿರುಗಿಕೊಂಡು ಬಿಡುತ್ತವೆ. ಭಾರೀ ಪ್ರಮಾಣದ ಸೌರ ವಿಕಿರಣಗಳು ಹಾಗೂ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ನ ಪರಿಣಾಮವಾಗಿ ಭೂಮಿಯ ಗುರುತ್ವಾಕರ್ಷಣೆಯ ಮೇಲಾಗುವ ಪರಿಣಾಮದಿಂದಾಗಿ ಭೂಮಿಯ ಧೃವಗಳು ಅದಲು ಬದಲಾಗಿ ಬಿಡುತ್ತದೆ ಎಂದು ಅವರ ಅಂಬೋಣ. ಇತ್ತೀಚೆಗೆ ಮಿಡುಗಡೆಯಾಗಿರುವ ೨೦೧೨ ಎಂಬ ಹಾಲಿವುಡ್ ಸಿನೆಮಾದಲ್ಲೂ ಇದನ್ನು ಭಯನಕವಾಗಿ ತೋರಿಸಲಾಗಿದೆ. ಈ ಧೃವ ಸ್ಥಳಾಂತರದಿಂದ ಹಲವು ಖಂಡಗಳು ಸಾಗರಗಳಲ್ಲಿ ಮುಳುಗುತ್ತವೆ, ಭಾರೀ ಸುನಾಮಿಗಳು, ಭೂಕಂಪಗಳಾಗುತ್ತವೆ ಎಂದು ಹೇಳಲಾಗುತ್ತವೆ. ಆದರೆ ನಾಸಾದ ವಿಜ್ಙಾನಿಗಳು ಹಾಗೂ ಜಗತ್ತಿನ ಹಲವಾರು ಖಗೋಳ ಶಾಸ್ತ್ರೀಯ ಸಂಶೋಧನೆಗಳು ಈ ಬಗೆಯ ದಿಢೀರ್ ಬೆಳವಣಿಗೆಗಳನ್ನು ಸ್ಪಷ್ಠವಾಗಿ ತಳ್ಳಿ ಹಾಕಿವೆ. ಭೂಮಿಯ ಇತಿಹಾಸದಲ್ಲಿ ಖಂಡಗಳು ಕೋಟ್ಯಾಂತರ ವರ್ಷಗಳಿಂದಲೂ ಸರಿಯುತ್ತಿವೆ. ಹಾಗೆಯೇ ಭೂಮಿಯ ಧೃವಗಳೂ ಬದಲಾಗುತ್ತವೆ. ಆದರೆ ಈ ಬೆಳವಣಿಗೆಗಳು ಅರಿವಿಗೇ ಬರದಷ್ಟು ನಿಧಾನ ಗತಿಯಲಿ ಸಾವಿರಾರು ವರ್ಷಗಳವರೆಗೆ ನಡೆಯುತ್ತಿರುತ್ತವೆ. ಹಾಗೆಯೇ ಸೂರ್ಯನಿಂದ ಭೂಮಿಯ ರಚನೆಯನ್ನೇ ಪ್ರಭಾವಿಸುವಷ್ಟು ತೀವ್ರವಾದ ವಿಕಿರಣಗಳಾಗಲೀ, ಸೌರ ಬಿರುಗಳಾಗಲೀ ಇದುವರೆಗೂ ಯಾರ ಅರಿವಿಗೂ ಬಂದಿಲ್ಲ.
ಮಿಥ್ ಮೂರು: ಗಾಲೆಕ್ಟಿಕ್ ಅಲೈನ್‌ಮೆಂಟ್ ಜಗತ್ತನ್ನು ನಾಶಗೊಳಿಸುತ್ತದೆ.
ಗ್ಯಾಲೆಕ್ಟಿಕ್ ಅಲೈನ್‌ಮೆಂಟ್(galactic alignment) ಎಂದರೆ ನಮ್ಮ ಗ್ರಹವಾದ ಭೂಮಿ, ನಕ್ಷತ್ರವಾದ ಸೂರ್ಯ ಹಾಗೂ ನಾವಿರುವ ಗ್ಯಾಲಾಕ್ಸಿಯಾದ ಕ್ಷೀರಪಥ ಗ್ಯಾಲಾಕ್ಷಿಯ ಕೇಂದ್ರಗಳು ತಮ್ಮ ತಂತಮ್ಮ ಪ್ರದಕ್ಷಿಣೆಯ ಪ್ರಕ್ರಿಯೆಯಲ್ಲಿ ಗ್ಯಾಲಾಕ್ಷಿಯ ಸಮಭಾಜಕ ವೃತ್ತದಲ್ಲಿ ಒಂದೇ ಸರಳರೇಖೆಯಲ್ಲಿ ಜೋಡಣೆಯಾಗುವುದು. ನಮ್ಮ ಭೂಮಿಯು ಸೂರ್ಯನ ಸುತ್ತಲೂ ಹೇಗೆ ಪ್ರದಕ್ಷಿಣೆ ಹಾಕುತ್ತದೆಯೋ ಹಾಗೆಯೇ ಸೂರ್ಯನೂ ತನ್ನ ಪರಿವಾರದ ಸದಸ್ಯರೊಂದಿಗೆ( ಸೌರವ್ಯೂಹ) ಕ್ಷೀರಪಥದ ಸುತ್ತಲೂ ತಿರುಗುತ್ತಿರುತ್ತದೆ ತಾನೆ?. ಸಾಮಾನ್ಯವಾಗಿ ಇಂತಹ ಒಂದು ಅಲೈನ್‌ಮೆಂಟ್ ಭೂಮಿಯಿಂದ ನಿಂತು ನೋಡಿದಾಗ ಆಗಾಗ ಸಂಭವಿಸುತ್ತಲೇ ಇರುತ್ತದೆ. ಇವನ್ನೇ ನಾವು ಮಕರ ಸಂಕ್ರಾಂತಿ ಅಥವಾ ದಕ್ಷಿಣಾಯಣ ಸಂಕ್ರಮಣ (ಸು.ಜೂ೨೧ಕ್ಕೆ) ಹಾಗೂ ಕರ್ಕಾಟಕ ಸಂಕ್ರಾಂತಿ ಅಥವಾ ಉತ್ತರಾಯಣ ಸಂಕ್ರಮಣ (ಸು.ಡಿಸೆಂಬರ್ ೨೨ಕ್ಕೆ) ಎಂದು ಕರೆಯುತ್ತೇವೆ. ೧೯೯೮ ರಲ್ಲಿ ನಡೆದ ಈ ಬಗೆಯ ಅಲೈನ್‌ಮೆಂಟ್ ಸರಳರೇಖೆಗೆ ಬಹುತೇಕ ಹತ್ತಿರವಿತ್ತು. ಆದರೆ ಈಗ ಸಂಭವಿಸುತ್ತದೆ ಎಂದು ಹೇಳಲಾಗುತ್ತಿರುವುದು ಸೂರ್ಯ ಹಾಗೂ ಭೂಮಿಗಳು ಕ್ಷೀರಪಥದ ಕೇಂದ್ರವನ್ನೇ ಪ್ರವೇಶ ಮಾಡಿಬಿಡುತ್ತವೆ ಎಂದು ಹೆಳಲಾಗುವ ಗ್ಯಾಲೆಕ್ಟಿಕ್ ಅಲೈನ್‌ಮೆಂಟು. ಸೂರ್ಯನು ಇಡೀ ಕ್ಷೀರಪಥ ಗ್ಯಾಲಕ್ಸಿಯನ್ನು ಒಂದು ಬಾರಿ ಸುತ್ತುಹೊಡೆಯಲು ತೆಗೆದುಕೊಳ್ಳುವ ಸಮಯ ಸು.೨೨೦ ಮಿಲಿಯನ್ ವರ್ಷಗಳು. ಇಂತಾದ್ದರಲ್ಲಿ ಅದು ಗ್ಯಾಲಕ್ಸಿಯ ಕೇಂದ್ರವನ್ನು ತಲುಪಲು ಅದೆಷ್ಟೋ ಲಕ್ಷ ವರ್ಷಗಳೇ ಬೇಕಾಗುತ್ತದೆ. ಅದು ಯವಾಗ ಎನ್ನುವುದು ಇದುವರೆಗೆ ಖಗೋಳಶಾಸ್ತ್ರಜ್ಞರ ಅರಿವಿಗೂ ನಿಲುಕಿಲ್ಲ. ಬರುವ ಡಿಸೆಂಬರ್ ೨೧ ಕ್ಕೇ ಅಂತಹ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ ಸಂಭವಿಸಿಬಿಡುತ್ತದೆ ಎಂದು ನಮ್ಮ ಕವಡೆ ಶಾಸ್ತ್ರಿಗಳು ಹಾಗೂ ಟಿ.ಆರ್‌ಪಿ. ರೇಟ್ ಹೆಚ್ಚಿಸಿಕೊಳ್ಳಲು ಏನಾದರೂ ಮಾಡಲು ತಯಾರಿರುವ TV9 ನಂತಹ ಚಾನಲ್‌ಗಳು ಬೊಬ್ಬೆ ಹೊಡೆಯುತ್ತಿರುವುದರಲ್ಲಿ ಜನರನ್ನು ಆತಂಕದಲ್ಲಿ ಮುಳುಗಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಹಿತಾಸಕ್ತಿ ಮಾತ್ರವೇ ಕಾಣುತ್ತಿದೆ. ಈಗ ಮಾಯನ್ ಕ್ಯಾಲೆಂಡರ್‌ಗೂ, ಡಿಸೆಂಬರ್‌ನ ಉತ್ತರಾಯಣ ಸಂಕ್ರಮಣಕ್ಕೂ ಈ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್‌ಗೂ ಬೇಕಂತಲೇ ಅನಗತ್ಯವಾಗಿ ಸಂಬಂಧ ಕಲ್ಪಿಸಲಾಗುತ್ತಿದೆ ಅಷ್ಟೆ.
ಮಿಥ್ ನಾಲ್ಕು: ರಹಸ್ಯ ಗ್ರಹ ಎಕ್ಸ್ ಭೂಮಿಗೆ ಅಪ್ಪಳಿಸುತ್ತದೆ.
ಪ್ಲಾನೆಟ್ ಎಕ್ಸ್ ಅಥವಾ ನಿಬಿರು ಎಂಬ ರಹಸ್ಯ ಗ್ರಹವೊಂದು ಭೂಮಿಗೆ ಅದೆಲ್ಲಿಂದಲೋ ಬಂದು ಭೂಮಿಗೆ ಅಪ್ಪಳಿಸಲಿದೆ ಎಂಬುದು ಮತ್ತೊಂದು ಮಿಥ್ಯೆ. ಇದರೊಂದಿಗೆ ಹಲವು ಕ್ಷುದ್ರ ಆಕಾಶಕಾಯಗಳು, ಉಲ್ಕೆಗಳು, ಅಥವಾ ಧೂಮಕೇತು ಭೂಮಿಗೆ ಬಡಿದು ಭೂಮಿಯನ್ನು ಛಿದ್ರ ಮಾಡಿಬಿಡುತವೆ ಎಂದೂ ಹೇಳಲಾಗುತ್ತದೆ. ಈ ಕುರಿತು ಅಮೆರಿಕದ ಬಹ್ಯಾಕಾಶ ಸಂಸ್ಥೆ ನಾಸಾದ ಖಗೋಳಜೀವಿಜ್ಞಾನಿ ಮೋರಿಸನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಹೇಳಬಹುದಾದ ಒಂದೇ ಉತ್ತರವೆಂದರೆ ಇಲ್ಲ ಅಂತಾದ್ದೇನೂ ಆಗುವುದಿಲ್ಲ ಎನ್ನುತ್ತಾರೆ. ನಿಜವೆಂದರೆ ಈ ನಿಬಿರು ರಹಸ್ಯ ಗ್ರಹದ ಕುರಿತ ಪುಕಾರನ್ನು ೨೦೦೩ ರಲ್ಲೇ ಹರಿಬಿಡಲಾಗಿತ್ತು. ಆದರೆ ಆ ಪ್ರಚಾರವು ಕೊನೆಗೆ ಸುಳ್ಳು ಎಂದು ಸಾಬೀತಾಗಿತ್ತು. ಅಂತಹ ಯಾವುದಾದರೂ ಆಕಾಶಕಾಯವು ಇನ್ನು ಮೂರೇ ವರ್ಷಗಳಲ್ಲಿ ಭೂಮಿಯನ್ನು ಸಮೀಪಿಸುವುದಾದಲ್ಲಿ ಅದು ಇಷ್ಟು ಹೊತ್ತಿಗಾಗಲೇ ಸೌರವ್ಯೂಹವನ್ನು ಪ್ರವೇಶಿಸಿರಬೇಕಿತ್ತು ಹಾಗೂ ಅದು ಬರಿಗಣ್ಣಿಗೆ ಕಾಣಿಸಬೇಕಿತ್ತು ಎಂದು ಮೋರಿಸನ್ ಹೇಳುತ್ತಾರೆ. ಈಗ್ಗೆ ಹಲವಾರು ವರ್ಷಗಳಿಂದಲೂ ಸೌರವ್ಯೂಹದಾಚೆಗೂ ಆಕಾಶವನ್ನು ವೀಕ್ಷಿಸುತ್ತಿರುವ ಭಾರೀ ಗಾತ್ರದ ಟೆಲೆಸ್ಕೋಪುಗಳಿಗಾಗಲೀ, ಕೃತಕ ಉಪಗ್ರಹಗಳಿಗಾಗಲೀ ಕಾಣದ ಈ ಆಕಾಶಕಾಯಗಳು ನಮ್ಮ ನಡುವಿನ ಪ್ರಳಯಾಂತಕರಿಗೆ ಅದು ಹೇಗೆ ಕಂಡಿವೆ ಎಂದೇ ತಿಳಿಯುವುದಿಲ್ಲ.
ಮಿಥ್ ಐದು: ಸೌರ ಬಿರುಗಾಳಿಯು ಭೂಮಿಯನ್ನು ತೀವ್ರವಾಗಿ ದಾಳಿಮಾಡಲಿದೆ.
ಸಾಮಾನ್ಯವಾಗಿ ಸೂರ್ಯನಿಂದ ಭೂಮಿಗೆ ಹಲವು ಬಗೆಯ ವಿಕಿರಣಗಳು ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹನಿಕಾರಕವಾದವುಗಳನ್ನು ಭೂಮಿಯ ವಾಯುಮಂಡಲದಲ್ಲಿರುವ ಓಝೋನ್ ಪದರವು ತಡೆಯುತ್ತದೆ. ಹಾಗೆಯೇ ಕೆಲವು ವಿಕಿರಣಗಳು ತೀವ್ರ ಸ್ವರೂಪದಲ್ಲಿದ್ದು ಭೂಮಂಡಲವನ್ನು ತಾಕುವುದೂ ಉಂಟು. ಆದರೆ ಇಂದು ಪ್ರಳಯಾಂತಕರು ಹೇಳುವ ರೀತಿಯಲ್ಲಿ ಇಡೀ ಭೂಮಿಯನ್ನೇ ಗುಡಿಸಿ ಹಾಕಬಲ್ಲಂತಹ ಸೌರ ಬಿರುಗಾಳಿಯೇನೂ ಭೂಮಿಯನ್ನು ತಾಕುವ ಯವುದೇ ಸಾಧ್ಯತೆಗಳಿಲ್ಲ. ಅಥವಾ ಇಂತಹ ವಾದಕ್ಕೆ ಪುಷ್ಠಿ ನೀಡುವ ಯಾವುದೇ ಸಾಕ್ಷ್ಯಗಳೂ ಇಲ್ಲ. ಇದೊಂದು ಊಹಾಪೋಹವಷ್ಟೇ. ಇಂದು ಭೂಮಿಯಲ್ಲಿ ಹಸಿರುಮನೆ ಅನಿಲಗಳ ಹೆಚೆಚ್ಚು ಹೊರಸೂಸುವಿಕೆಯಿಂದ ಓಝೋನ್ ಪದರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಭೂಗ್ರಹದ ತಾಪಮನವು ಹೆಚ್ಚಾಗುತ್ತಿರುವುದೂ ಸತ್ಯ. ಆದರೆ ಈ ವಿದ್ಯಮಾನಗಳಿಗೂ ಇಂಟರ್‌ನೆಟ್, ಸಿನೆಮಾ ಟೀವಿ ಪ್ರಚಾರಗಳ ಪ್ರಳಯ, ಡೂಮ್ಸ್ ಡೇ ಅಥವಾ ಅಪೋಕ್ಯಾಲಿಪ್ಸ್ ಅರ್ಥಾತ್ ಜಗತ್ತಿನ ಅಂತ್ಯ ದಂತಹ ಕಟ್ಟುಕಥೆಗಳಿಗೂ ಯಾವುದೇ ಸಂಬಂಧವಿಲ್ಲ.
ಈ ಮೇಲಿನ ಮಿಥ್‌ಗಳಲ್ಲದೇ ಜಗತ್ತಿನ ನಾಶದ ಕುರಿತು ಇನ್ನೂ ಹಲವಾರು ಬಗೆಯ ಊಹಾಪೋಹಗಳಿವೆ. ನ್ಯಾನೋತಂತ್ರಜ್ಞಾನವು ಮಿತಿಮೀರಿ ನಿಯಂತ್ರಣಕ್ಕೇ ಸಿಗದೇ ಹೋಗುವ ಗ್ರೇ ಗೂ(grey goo) ಇಂತದೇ ಇನ್ನೊಂದು ಪ್ರಚಾರ. ಇದರ ಪ್ರಕಾರ ಸ್ವಯಂ ದ್ವಿಗುಣಗೊಳ್ಳುವ ರೋಬೋಟ್‌ಗಳು ಮನುಷ್ಯ ಕುಲವನ್ನೇ ನಾಶ ಮಡಿಬಿಡುತ್ತವಂತೆ. ಮಾನವ ನಿರ್ಮಿತ ಸೂಪರ್ ಕಂಪ್ಯೂಟರ್‌ಗಳು ಮನುಷ್ಯನ ಶೋಷಣೆಯನ್ನು ತಾಳದೆ ದಂಗೆ ಎದ್ದುಬಿಡುತ್ತವೆ ಎನ್ನುವುದು ಇನ್ನೊಂದು ಊಹೆ. ಹೀಗೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ತಲೆಕೆಟ್ಟ ಪ್ರಳಯದ ವಾದಗಳನ್ನು ಹುಟ್ಟಿಹಾಕಬಹುದು. ದುರಂತವೆಂದರೆ ಇಂದು ಚಾಲ್ತಿಯಲ್ಲಿರುವ ಈ ಪ್ರಳಯದ ಸಿದ್ಧಾಂತಗಳನ್ನು ಪ್ರಚಾರ ಮಾಡುವವರು ಯವಾಗಲೂ ಒಂದಷ್ಟು ವಿಜ್ಞಾನದ ವಿಷಯಗಳನ್ನೂ ತಮ್ಮ ಕುತರ್ಕಗಳಿಗೆ ಸೇರಿಸಿಬಿಟ್ಟಿರುತ್ತಾರೆ. ಆಗ ವಿದ್ಯಾವಂತ ಜನರೂ ಸಹ ನಿಜವೆನೋ? ಎಂದುಕೊಂಡು ಆತಂಕಗಳಿಗೀಡಾಗುತ್ತಾರೆ. ಈ ಬಗೆಯ ಪ್ರಳಯದ ಪ್ರಚಾರಕ್ಕೆ ಭಯಗೊಂಡು ಸಾಯಲು ಅಣಿಯಾದ ಕೆಲವರು ನಾಸಾದಂತಹ ವೈಜ್ಞಾನಿಕ ಸಂಸ್ಥೆಗಳ ಪ್ರಯತ್ನದಿಂದ ಬದುಕಿ ಉಳಿದಿದ್ದಾರೆ. ಆದರೆ ಬದುಕಿನಲ್ಲಿ ಸರಿಯಾದ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವವರು ಈ ಬಗೆಯ ಪುಕಾರುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಪ್ರಳಯಭೀತಿಯ ಉದ್ದಿಮೆ.

Harsha@9449423060
ಈ ಲೇಖನ ಯೂನಿಕೋಡಿಗೆ ಕನ್ವರ್ಟ್ ಆದಂತಿಲ್ಲ. ಬರಹದಲ್ಲಿದೆ. ಇಲ್ಲಿಂದ ಕಾಪಿ ಮಾಡಿಕೊಂಡು ವರ್ಡ್ ಪ್ಯಾಡಿಗೆ ಪೇಸ್ಟ್ ಮಾಡಿ ಬರಹ ಫಾಂಟ್ ಹಾಕಿ ಓದಬೇಕು.
ReplyDeleteyava bhashe adu? enu gottagta illa font change maadi plz
ReplyDelete@ ಜೋಗಿ,
ReplyDeleteಸರಿಪಡಿಸಿದ್ದೇವೆ ಸರ್.
Timely writing. ಮನುಷ್ಯನ ಆತಂಕ ಹಾಗೂ ದೌರ್ಬಲ್ಯಗಳನ್ನೂ ತಮ್ಮ TRP ಉದ್ಧೀಪನಕ್ಕೆ ಬಳಸಿಕೊಳ್ಳುವ ಮನಸ್ಥಿತಿಯೇ ಹೇಸಿಗೆ ಹುಟ್ಟಿಸುವಂಥದ್ದು. ಕಾಲ ಕಳೆದಂತೆ ಮೌಢ್ಯ ಯಾವ್ಯಾವ ರೂಪದಲ್ಲಿ ನಮ್ಮೆದುರು ಪವಡಿಸುತ್ತಿದೆ ನೋಡಿ! ಸಮಾಜದಲ್ಲಿ ವೈಜ್ಞಾನಿಕ ಮನಸ್ಸು ಪಕ್ವಗೊಂಡಂತೆ ಬುಡಕಳೆದುಕೊಳ್ಳಬೇಕಾಗಿದ್ದ ಮೂಢನಂಬಿಕೆಗಳೆಲ್ಲಾ ಇನ್ಯಾವುದೋ ರೂಪದಲ್ಲಿ ಇನ್ಯಾರದೂ ಖಜಾನೆ ತುಂಬಿಸುತ್ತಿವೆ. ನರೇಂದ್ರಸ್ವಾಮಿಯಂಥ ತಲೆಮಾಸಿದ ಪಡಪೋಷಿ ಜ್ಯೋತಿಷಿಗಳು ಪ್ರಳಯದ ಭೀತಿಯನ್ನು ಬಿತ್ತಿ ಫಸಲು ತೆಗೆಯುತ್ತಿರುವ ಇಂಥ ಸಂದರ್ಭದಲ್ಲಿ ಇಂಥದ್ದೊಂದು ಲೇಖನದ ಅವಶ್ಯಕತೆ ಇತ್ತು. ಹರ್ಷ ಅವರಿಗೆ ಹಾಗೂ ಇದನ್ನು ಪ್ರಕಟಿಸಿದ ’ಸಂಪಾದಕೀಯ’ಕ್ಕೆ ಧನ್ಯವಾದಗಳು. ಅರುಣ್ ಕಾಸರಗುಪ್ಪೆ.
ReplyDeleteಸಮಯೋಚಿತವಾದ ಚಿಂತನೆ. ನಿಮ್ಮಮಂತೆ ಎಲ್ಲರೂ ಯೋಚಿಸುವು ಮಾರ್ಗವನ್ನು ಕಂಡುಕೊಳ್ಳಲಿ ಎಂಬುದು ನನ್ನ ಹಂಬಲ .'ಹರ್ಷ' ಹಾಗು ’ಸಂಪಾದಕೀಯ’ಕ್ಕೆ ಧನ್ಯವಾದಗಳು.
ReplyDeleteHarsha olle kelsa madidri...sampadakiyakku thanks. janarannu echarisuva kelsa nadeyali
ReplyDelete-Chitra santhosh
Good work... bro
ReplyDeletenice writing harsha
ReplyDeleteHi Harsha sir Nimma Article Thumba Channagide... nimma baravanigeya chanakshatana heege munduvareyali.........
ReplyDelete