Saturday, December 3, 2011

ಮಾನವಂತ ಬ್ರಾಹ್ಮಣರು, ಸ್ವಾಭಿಮಾನಿ ಶೂದ್ರರೂ ಒಟ್ಟಿಗೆ ನಿಲ್ಲಬೇಕಾದ ಕಾಲವಿದು...


೧೯೭೪ರಲ್ಲಿ ಆರಂಭಗೊಂಡ ಬರಹಗಾರರ ಒಕ್ಕೂಟದ ಕಾಲದ ಮಾತಿದು. ಬರಹಗಾರರ ಒಕ್ಕೂಟ ಬ್ರಾಹ್ಮಣೇತರ ಆಂದೋಲನವಾಗಿ ಹೊರಹೊಮ್ಮಿತ್ತು. ಬ್ರಾಹ್ಮಣರೆಂಬ ಕಾರಣಕ್ಕೆ ಯು.ಆರ್.ಅನಂತಮೂರ್ತಿ ಅವರನ್ನು ಮೈಸೂರಿನಲ್ಲಿ ನಡೆದ ಒಕ್ಕೂಟದ ಸಮಾವೇಶಕ್ಕೆ ಕರೆಯಲಾಗಿರಲಿಲ್ಲ. ಇದನ್ನು ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ಆ ಘಟನೆಯ ಕುರಿತು ಅನಂತಮೂರ್ತಿ ಹೀಗೆ ನೆನಪಿಸಿಕೊಳ್ಳುತ್ತಾರೆ:

ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕೆ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ನನ್ನ ಜತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್‌ನಲ್ಲಿ ಸೀದಾ ಏಳನೇ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ...'

ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.... ಸುಮಾರು ೧೯೬೭ರಲ್ಲಿ ಎಂದು ನೆನಪಾಗುತ್ತದೆ: ಗತಿಸಿದ ಶಿವರಾಮ ಐತಾಳ್‌ರಿಗೆ ಉತ್ತರವಾಗಿ ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯಾಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ‍್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ....*

****

ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ? ಎಂಬ ಈ ಹಿಂದಿನ ಲೇಖನಕ್ಕೆ ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಅವುಗಳಲ್ಲಿ ಅತಿಹೆಚ್ಚು ಗಮನಸೆಳೆದಿದ್ದು ವಸುಮತಿ ಭಾಸ್ಕರ್ ಅವರ ಪ್ರತಿಕ್ರಿಯೆ. Its very true, as a bramhin( though don't like to announce it) I protest this, for the same reason me and my husband stopped going to these kind of temples and that's what we could do, unfortunately.

ಲೇಖನದಲ್ಲಿ ಮಾನವಂತ ಬ್ರಾಹ್ಮಣರೆಂದು ಪ್ರಸ್ತಾಪಿಸಿದ್ದು ವಸುಮತಿ ಅಂಥವರನ್ನೇ. ಇಂಥವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದರಿಂದಲೇ ಸಮಾಜ ಇಷ್ಟಾದರೂ ಸ್ವಾಸ್ಥ್ಯವನ್ನು ಹೊಂದಿದೆ. ವಸುಮತಿಯವರನ್ನೂ ಅವರ ಪರಂಪರೆಯ ಎಲ್ಲರನ್ನೂ ಪ್ರೀತಿಯಿಂದ ಅಭಿನಂದಿಸೋಣ.

ಬ್ರಾಹ್ಮಣ್ಯದ ವಿರುದ್ಧದ ಹೋರಾಟಗಳು, ಚಳವಳಿಗಳು ಸಾಕಷ್ಟು ಸಂದರ್ಭದಲ್ಲಿ ಬ್ರಾಹ್ಮಣದ್ವೇಷಿಯಂತಲೇ ಬಿಂಬಿಸಿಕೊಳ್ಳಲ್ಪಟ್ಟಿದ್ದು ನಿಜಕ್ಕೂ ದುರಂತ. ಹೀಗಾದಾಗ ಇನ್ನಷ್ಟು ಧ್ರುವೀಕರಣ ಆಗುವ ಅಪಾಯವೇ ಹೆಚ್ಚು. ಬರಹಗಾರರ ಒಕ್ಕೂಟದ ಸಂದರ್ಭದಲ್ಲಿ ಲಂಕೇಶರೇನೋ ಅನಂತಮೂರ್ತಿಯವರ ಬಳಿ ಖಾಸಗಿಯಾಗಿ ಬಂದು, ನಮ್ಮಿಂದ ಅತಿರೇಕವಾದರೂ ನೀವು ಬ್ರಾಹ್ಮಣವಾದಿಯಾಗಬೇಡಿ ಎಂದು ಹೇಳಿದರು. ಆದರೆ ಮಾನವೀಯವಾಗಿ ಯೋಚಿಸಬಲ್ಲ ಉಳಿದ ಬ್ರಾಹ್ಮಣರಿಗೆ ಯಾರೂ ಇದನ್ನು ಹೇಳಿರುವುದು ಅಸಾಧ್ಯ. ಬಹುಶಃ ಅನಂತಮೂರ್ತಿ ಹೇಳಬಯಸಿದ್ದ ಆತಂಕದ ಪ್ರಶ್ನೆಗಳಲ್ಲಿ ಇದೂ ಒಂದಿರಬಹುದು.

ನಾವು ಯಾವುದನ್ನು ಪುರೋಹಿತಶಾಹಿ ಎಂದು ಕರೆಯುತ್ತಿದ್ದೇವೋ ಅದು ಬ್ರಾಹ್ಮಣ ಜಾತಿಗೆ ಸೀಮಿತವಾಗಿ ಹೇಳುವ ಕಾಲ ಎಂದೋ ಮುಗಿದುಹೋಯಿತು. ಎಲ್ಲ ಸಮುದಾಯಗಳಲ್ಲೂ ಒಂದೊಂದು ಪುರೋಹಿತ ವರ್ಗ ಎದ್ದು ನಿಂತಿದೆ. ಬ್ರಾಹ್ಮಣ ಪುರೋಹಿತಶಾಹಿಗಳಷ್ಟೆ ಅಥವಾ ಒಮ್ಮೊಮ್ಮೆ ಅದಕ್ಕಿಂತ ಹೆಚ್ಚಿನ ಪ್ರತಿಗಾಮಿತನಗಳನ್ನು ಶೂದ್ರ ಪುರೋಹಿತ ವರ್ಗ ಪ್ರದರ್ಶಿಸುತ್ತಿವೆ. ಮನುಗಳು ಈಗ ಬ್ರಾಹ್ಮಣರಲ್ಲಿ ಮಾತ್ರವಿಲ್ಲ, ಶೂದ್ರರಲ್ಲೂ ಇದ್ದಾರೆ. ಇವರು ಬ್ರಾಹ್ಮಣ ಮನುಗಳಿಗಿಂತ ಅಪಾಯಕಾರಿಯಾಗಿದ್ದಾರೆ.

ಆಧುನಿಕ ಪುರೋಹಿತಶಾಹಿಗಳು ಮಠಾಧೀಶರು. ಜಾತಿಗಳನ್ನು ಇವತ್ತು ಮಠಗಳು ಬಲಪಡಿಸುತ್ತಿವೆ. ಅದಕ್ಕೆ ಸಾವಿರಾರು ಸಾಕ್ಷಿಗಳು ನಮ್ಮ ಮುಂದಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ೧೦೫ ವರ್ಷಗಳ ನಡೆದಾಡುವ ದೇವರು ಬಂದೇಬಿಟ್ಟರು. ಬೇರೆ ಬೇರೆ ಕಾರಣಗಳಿಗಾಗಿ ನಾಡು ಗೌರವಿಸುವ ಈ ಮಹಾತ್ಮರನ್ನು ಟೀಕಿಸುವುದು ನಮ್ಮ ಉದ್ದೇಶವಲ್ಲ. ಜಾತಿಯ ತಂತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಹೇಳುವ ಪ್ರಯತ್ನವಷ್ಟೇ ನಮ್ಮದು.

ಜಾತಿವಾದಿಗಳಾಗಲು ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು ಎಂದು ಅನಂತಮೂರ್ತಿ ಅಂದು ನುಡಿದಿದ್ದರು. ಆದರೆ ಇವತ್ತಿನ ಸಾಮಾಜಿಕ-ರಾಜಕೀಯ ಚಿತ್ರಣವನ್ನು ಗಮನಿಸಿದರೆ ಈ ಮಾತನ್ನು ಅವರು ಅಷ್ಟು ಧೈರ್ಯದಿಂದ ಹೇಳಲಾರರು ಎಂದೆನಿಸುತ್ತದೆ.  ಕೊನೇಪಕ್ಷ ಶೇಕಡಾವಾರು ಪ್ರಮಾಣವನ್ನು 20-25ಕ್ಕೆ ಇಳಿಸಬಹುದೇನೋ?

ಮಡೆಸ್ನಾನದ ವಿಷಯವನ್ನು ಜಾತಿಯ ಕಣ್ಣಿನಲ್ಲಿ ನೋಡದೆ ಒಟ್ಟು ಪುರೋಹಿತಶಾಹಿಯ ಕ್ರೌರ್ಯದ ರೂಪವನ್ನಾಗಿಯೇ ನಾವು ನೋಡಬೇಕು. ಇಲ್ಲವಾದಲ್ಲಿ ಮಡೆಸ್ನಾನ ವಿರೋಧಿ ಚಳವಳಿಯೂ ಬ್ರಾಹ್ಮಣ ವಿರೋಧಿ ಚಳವಳಿಯ ಹಾಗೆ ಕಾಣಿಸಿ, ತನ್ನಿಂತಾನೇ ದುರ್ಬಲಗೊಳ್ಳುವ ಸಾಧ್ಯತೆಗಳು ಇರುತ್ತವೆ. ನಿಜ, ಸುರೇಶ್ ಕುಮಾರ್, ಆಚಾರ್ಯರಂಥ ಬ್ರಾಹ್ಮಣರು ಮಡೆಸ್ನಾನವನ್ನು ಸಮರ್ಥಿಸಿಕೊಂಡು ಮಾತನಾಡಿರಬಹುದು, ಅದಕ್ಕೆ ಅವರದೇ ಆದ ರಾಜಕೀಯ ಕಾರಣಗಳೂ ಇರುತ್ತವೆ. ಪೇಜಾವರರಂಥವರು ತಟಸ್ಥ ನಿಲುವು ತಳೆಯುವುದರಲ್ಲೂ ಅಪ್ಪಟ ರಾಜಕೀಯ ತಂತ್ರಗಾರಿಕೆಯೇ ಇರಬಹುದು. ಹಾಗೆಂದ ಮಾತ್ರಕ್ಕೆ ಇಡೀ ಬ್ರಾಹ್ಮಣ ಸಮುದಾಯ ಇದನ್ನು ಬೆಂಬಲಿಸುತ್ತದೆ ಎಂದು ಕುರುಡಾಗಿ ನಂಬುವಂತೆ ಇಲ್ಲ. ಅದು ಸಮಂಜಸವೂ ಅಲ್ಲ.

ಇವತ್ತು ಹಿಂದುಳಿದ ಸಮುದಾಯಗಳು ಸಾಮಾಜಿಕ ಮಾನ್ಯತೆಗಳಿಗಾಗಿ ಬ್ರಾಹ್ಮಣರನ್ನು ಅನುಸರಿಸಲು ಯತ್ನಿಸುತ್ತಿವೆ. ಹಿಂದಿನಿಂದಲೂ ಇದು ನಡೆದುಕೊಂಡುಬಂದಿದೆ. ತಮ್ಮ ತಮ್ಮ ಜಾತಿಗೆ ಸ್ಥಾನಮಾನ ತಂದುಕೊಳ್ಳಲು ಇವು ಸಾಹಸ ಪಡುತ್ತವೆ. ಸಹಜವಾಗಿಯೇ ಬ್ರಾಹ್ಮಣ್ಯದ ಕೊಳೆಯನ್ನೇ ಇವೂ ಕೂಡ ಹೊತ್ತುಕೊಂಡು ಸಾಗುತ್ತಿವೆ. ಹೀಗಾಗಿ ಮಡೆಸ್ನಾನ, ಪಂಕ್ತಿಭೇದದಂಥವು ಅವುಗಳಿಗೆ ಅವಮಾನದ, ಅನಾಗರಿಕ ಆಚರಣೆ ಅನಿಸದೆ ನಂಬಿಕೆಯ ಪ್ರಶ್ನೆಯಾಗಿ ಉಳಿದುಕೊಂದಿವೆ.

ಜಾತಿ ಮೇಲ್ದರ್ಜೀಕರಣದ (ಪ್ರಮೋಷನ್) ಆಸೆಯನ್ನು ತೊರೆಯದ ಹೊರತು ಇವುಗಳಿಗೆ ಬಿಡುಗಡೆಯಂತೂ ಇಲ್ಲ. ಬಿಡುಗಡೆ ಪಡೆಯುವ ಹೊರತಾಗಿ ಇವು ವರ್ಣಾಶ್ರಮ ವ್ಯವಸ್ಥೆಯ ನರಕದಲ್ಲೇ ಕೊಳೆತು ಹೋಗುತ್ತವೆ. ಇದನ್ನು ಗೊತ್ತು ಮಾಡಿಸುವವರು ಯಾರು? ಜಾತಿ ಸಂಘಟನೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದುಳಿದ ಸಮುದಾಯಗಳು ಕರ್ನಾಟಕದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಉದಾಹರಣೆಯೇನಾದರೂ ಇದೆಯೇ? ದಲಿತರಿಗಾದರೋ ದಲಿತ ಸಂಘರ್ಷ ಸಮಿತಿ ಕೊಂಚಮಟ್ಟಿಗೆ ಬಿಡುಗಡೆಯ ಮಾರ್ಗವಾಯಿತು, ಹಿಂದುಳಿದವರಿಗೆ?

ಇವತ್ತು ಅತ್ಯಗತ್ಯವಾಗಿ ಎರಡು ಹಂತದ ಚಟುವಟಿಕೆಗಳು ಏಕಕಾಲಕ್ಕೆ ಘಟಿಸಬೇಕಿದೆ. ಒಂದು, ಹಿಂದುಳಿದ ಸಮುದಾಯಗಳು ಜಾತಿ ಶ್ರೇಣೀಕರಣದ ಅಸಹ್ಯದಿಂದ ಹೊರಗೆ ಬಂದು ಮೌಢ್ಯಕ್ಕೆ ದಾಸರಾಗುವುದನ್ನು ಬಿಡಬೇಕಿದೆ. ಮೇಲ್ವರ್ಗದ ಜನರು ಜಾತಿಯನ್ನು ಬಿಟ್ಟುಕೊಟ್ಟು ಜೀವಪರರಾಗುವುದನ್ನು ಕಲಿಯಬೇಕಿದೆ.

ಒಂದು ಘಟನೆಯನ್ನು ನೆನಪಿಸಿಕೊಳ್ಳೋಣ. ದಲಿತ ಸಂಘರ್ಷ ಸಮಿತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಒಮ್ಮೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿತ್ತು. ಅಂದು ಊರೂರುಗಳಲ್ಲಿ ದಲಿತಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ ಎಂದು ಊರಿನ ಎಲ್ಲ ಜಾತಿ ಸಮುದಾಯದವರನ್ನು ಆಹ್ವಾನಿಸಿದರು. ಹೊಸಬಗೆಯ ಈ ಚಳವಳಿ ಗಮನಾರ್ಹ ಯಶಸ್ಸನ್ನು ಕಂಡಿತ್ತು. ಆಗ ದೇವನೂರು ಮಹದೇವ ಹೇಳಿದ ಒಂದು ಮಾತು ನಮ್ಮ ಎಲ್ಲ ಪ್ರಗತಿಪರ ಚಳವಳಿಗಳಿಗೂ ಅಂತರಾತ್ಮದ ಧ್ವನಿಯಾಗಬೇಕಿತ್ತು. ದೇವನೂರು ಹೀಗೆಂದಿದ್ದರು: ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು.' **

ಮಡೆಸ್ನಾನ-ಪಂಕ್ತಿಭೇದದ ವಿಷಯದಲ್ಲಿ ಬಿಡುಗಡೆ ಶೂದ್ರರಿಗೂ ಬೇಕಿದೆ, ಬ್ರಾಹ್ಮಣರಿಗೂ ಬೇಕಿದೆ. ಇದಕ್ಕಾಗಿ ಬ್ರಾಹ್ಮಣರಲ್ಲಿನ ಮಾನವಂತರು, ಇತರ ಶೂದ್ರರೊಳಗಿನ ಸ್ವಾಭಿಮಾನಿಗಳು ಎದ್ದುನಿಲ್ಲಬೇಕಿದೆ. ಎಲ್ಲರೂ ಒಟ್ಟಾಗಿಯೇ ಇದನ್ನು ಅಂತ್ಯಗೊಳಿಸಬೇಕಿದೆ. ಜಾತಿಗಳು ಸಂಘರ್ಷಕ್ಕೆ ಇಳಿದಾಗಲೆಲ್ಲ ಧ್ರುವೀಕರಣ ಬಲವಾಗಿಯೇ ನಡೆಯುತ್ತದೆ. ಇಂಥ ಧ್ರುವೀಕರಣದ ಸಂದರ್ಭದಲ್ಲಿ ಹೆಚ್ಚು ನಷ್ಟಕ್ಕೆ ಒಳಗಾಗುವವು ಹಿಂದುಳಿದ ಜಾತಿಗಳೇ ಎಂಬುದನ್ನು ಯಾರೂ ಮರೆಯುವಂತಿಲ್ಲ.

ನಮ್ಮೊಳಗಿನ ಜೀವಚೈತನ್ಯದ ಮಾತು ಕೇಳಬೇಕಾದ ಕಾಲವಿದು. ಈ ಕರೆಗೆ ಓಗೊಡದಿದ್ದಲ್ಲಿ ಈ ಸಮಾಜ ಹೀಗೇ ಮುಂದುವರೆಯುತ್ತದೆ. ನಾವು ಎಂಜಲೆಲೆಗಳ ಮೇಲೆ ಉರುಳಾಡಿಕೊಂಡೇ ಸಾಯುತ್ತೇವೆ.

* ಪ್ರೊಫೆಸರ್ ಎಂಡಿಎನ್-ನೆನಪಿನ ಸಂಪುಟ
** ಈಗ ಅಳುವವರೂ ಇಲ್ಲ...! -ಲೇ: ಎನ್.ಎಸ್.ಶಂಕರ್

18 comments:

 1. ನಮ್ಮೊಳಗಿನ ಜೀವಚೈತನ್ಯದ ಮಾತು ಕೇಳಬೇಕಾದ ಕಾಲವಿದು. ಈ ಕರೆಗೆ ಓಗೊಡದಿದ್ದಲ್ಲಿ ಈ ಸಮಾಜ ಹೀಗೇ ಮುಂದುವರೆಯುತ್ತದೆ. ನಾವು ಎಂಜಲೆಲೆಗಳ ಮೇಲೆ ಉರುಳಾಡಿಕೊಂಡೇ ಸಾಯುತ್ತೇವೆ.
  ಬ್ರಾಹ್ಮಣ್ಯವನ್ನು, ಪುರೋಹಿತ ಶಾಹಿಯನ್ನು ವಿರೋಧಿಸುವ ಆವೇಶದಲ್ಲಿ ಬ್ರಾಹ್ಮಣರನ್ನು ದ್ವೇಷಿಸುವ ಪ್ರವೃತ್ತಿ ಸರಿಯಲ್ಲ. ವಸುಮತಿ ಭಾಸ್ಕರ್ ರಂತಹ ಅಪ್ಪಟ ಮಾನವತಾವಾದಿಗಳಿಗೆ ನಮಸ್ಕಾರ ... ಮತ್ತು ಅಭಿನಂದನೆಗಳು...

  ReplyDelete
 2. ಮಡೆ ಸ್ನಾನದ ವಿಷಯದಲ್ಲಿಯೂ ಬ್ರಾಹ್ಮಣರನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು, ಬ್ರಾಹ್ಮಣ್ಯ ಎಂದು ಕರೆಯಲಾಗುತ್ತಿರುವುದು ದುರದೃಷ್ಟಕರ. ಶನಿವಾರದ ಕನ್ನಡಪ್ರಭ ಓದಿದರೆ ಮಡೆ ಸ್ನಾನ ಜಾತಿಗೆ ಸೀಮಿತವಲ್ಲ ಎಂಬುದು ತಿಳಿದುಬರುತ್ತದೆ. ಬ್ರಾಹ್ಮಣ ಸಮುದಾಯದವರೂ ಈ ಅನಿಷ್ಟ ಪದ್ಧತಿಯನ್ನು ಆಚರಿಸುತ್ತಿರುವುದು ಇದಕ್ಕೆ ಉದಾಹರಣೆ.
  ಯೂ.ಆರ್. ಅನಂತಮೂರ್ತಿ ಅಂತವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ ಕಾರಣದಿಂದಾದರೂ ಬ್ರಾಹ್ಮಣರ ಮನಃಪರಿವರ್ತನೆಗೆ ಇಳಿಯಬೇಕಿತ್ತು. ಆದರೆ ಅವರೂ ಪ್ರಗತಿಪರ ಎಂಬ ಹಣೆಪಟ್ಟಿಗಾಗಿ ಕೇವಲ ಬ್ರಾಹ್ಮಣರ ವಿರುದ್ಧ ತಿರುಗಿ ನಿಂತರು.
  ಇಲ್ಲಿ ಬ್ರಾಹ್ಮಣರು ಒಂದು ಕಡೆ, ದಲಿತರು ಮತ್ತೊಂದು ಕಡೆ ನಿಂತ ಕಾರಣ ಇಬ್ಬರಲ್ಲೂ ತಾರ್ಕಿಕ ಯೋಚನೆಯುಳ್ಳವರನ್ನು ಸೇರಿಸಿ ಮನಃಪರಿವರ್ತನೆಗಾಗಿ ಯತ್ನ ನಡೆಯಲೇ ಇಲ್ಲ. ಪೇಜಾವರ ಶ್ರೀಗಳು ಅಂತಹ ಆಸೆ ಮೂಡಿಸಿದ್ದರು. ಆದರೆ, ಅವರು ಮಡೆ ಸ್ನಾನದ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸಿದ್ದು ಅವರ ಮೇಲೆ ಇರಿಸಿದ್ದ ಆಶಾಕಿರಣವನ್ನು ಮಬ್ಬಾಗಿಸಿದೆ.
  ಇಂದು ಧಾರ್ಮಿಕವಾದಿಗಳು ಎಂದರೆ ಮೂಢನಂಬಿಕೆಯವರು ಮತ್ತು ಪ್ರಗತಿಪರರು ಎಂದರೆ ನಾಸ್ತಿಕವಾದಿಗಳು ಹಾಗೂ ಬ್ರಾಹ್ಮಣ ವಿರೋಧಿಗಳು ಎಂಬಂತಹ ಚಿಂತನೆ ಹೊರ ಹೊಮ್ಮುತ್ತಿರುವುದು ವಿಷಾದನೀಯ.
  ಇಂದು ದೌರ್ಜನ್ಯದ ವಿರುದ್ಧ ಹೋರಾಟ ನಡೆಯದೆ ಕೇವಲ ಸ್ವಭಾವತಃ ಸೌಮ್ಯವಾದಿಗಳಾದ ಬ್ರಾಹ್ಮಣರ ಮೇಲೆ ಕೆಸರೆರಚುತ್ತಾ ರಾಜಕೀಯ ಲಾಭ ಪಡೆಯುವುದೇ ಕೆಲಸವಾಗಿಬಿಟ್ಟಿದೆ. ಇದರಿಂದ ಹೋರಾಟದ ನೈಜ ಉದ್ದೇಶ ಸಫಲವಾಗುತ್ತಲೇ ಇಲ್ಲ.

  ReplyDelete
 3. ಮೊದಲು ನಮ್ಮ ದೇಶದಲ್ಲಿರುವ ಮೀಸಲಾತಿ, ಜಾತಿ ಆಧಾರದ ವರ್ಗೀಕರಣ, ಬ್ರಾಹ್ಮಣ, ಶೂದ್ರ, ದಲಿತ, ಬಲಿತ, ಅಲ್ಪಸಂಖ್ಯಾತ, ಬಹು ಸಂಖ್ಯಾತ ಎಂಬೆಲ್ಲ ವಿಂಗಡಣೆಗಳು ಹೋಗಲಿ. ಎಲ್ಲವೂ ತನ್ನಿಂತಾನೆ ಸರಿಯಾಗುತ್ತದೆ. ಯಾವುದೇ ಅರ್ಜಿ ಫಾರಂಗಳಲ್ಲಿ ಜಾತಿ, ಧರ್ಮ, ಸಮುದಾಯ ಎಂಬ ಅಂಕಣಗಳನ್ನು ಹೊಡೆದು ಹಾಕಿಸಲು ಸಾಧ್ಯವಿದೆಯಾ? ಸಂವಿಧಾನ ಕರ್ತರು ಒಂದು ಉದ್ದೇಶದಿಂದ ಕೆಲವು ವರ್ಷಕ್ಕಾಗಿ ಆರಂಭಿಸಿದ ಮೀಸಲಾತಿ, ಮೀಸಲು ಕ್ಷೇತ್ರಗಳನ್ನು ತೊಡೆದು ಹಾಕಲು ನಮಗ್ಯಾಕೆ ಸಾಧ್ಯವಾಗುತ್ತಿಲ್ಲ. ಮೀಸಲಾತಿ ಜಾತಿ ಆಧಾರಿತವಾಗಿ ಏಕಿರಬೇಕು?ಎಲ್ಲಾ ಜಾತಿಗಳಲ್ಲೂ ಬಡವರು, ಬಲ್ಲಿದರು, ಸಾತ್ವಿಕರು, ವಂಚಕರು ಇದ್ದೇ ಇರುತ್ತಾರೆ.
  ಯಾವುದೇ ಧರ್ಮ ಜನಾಂಗಕ್ಕೆ ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳುವ ಸ್ವಾತಂತ್ರ್ಯ ಇದೆ. ಆದರೆ ಯಾವುದನ್ನೂ ಒತ್ತಾಯ ಪೂರ್ವಕವಾಗಿ ಮಾಡಿಸಲು ಹಕ್ಕು ಯಾರಿಗೂ ಇರುವುದಿಲ್ಲ. ಅಂತೆಯೇ ಒತ್ತಾಯ ಪೂರ್ವಕವಾಗಿ ಕಸಿದುಕೊಳ್ಳುವ ಹಕ್ಕು ಸಹ ಇರುವುದಿಲ್ಲ. ಒಂದು ಆಚರಣೆ ಇನ್ನೊಬ್ಬರಿಗೆ ತೊಂದರೆಯಾದಾಗ, ಸಮಸ್ಯೆಯಾದಾಗ ಪ್ರತಿಭಟನೆ ಮಾಡವುದು ಸಾಧುವಾಗುತ್ತದೆ.
  ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ ಒಂದು ಪುರಾತನ ಆಚರಣೆ. ಇಲ್ಲಿ ಭೂತಕಟ್ಟುವವರು ನಲಿಕೆ ಜನಾಂಗದವರು. ಅನಾದಿ ಕಾಲದಿಂದಲೂ ಇಲ್ಲಿ ಬ್ರಾಹ್ಮಣರು ಸೇರಿದಂತೆ ಹೆಚ್ಚಿನೆಲ್ಲ ಜಾತಿ ಪಂಗಡಗಳು ಭೂತಾರಾಧನೆಯಲ್ಲಿ ತೊಡಗಿದ್ದಾರೆ. ಪ್ರತಿಭಟನಾಕಾರರಿಗೆ ಈ ಸಂಪ್ರದಾಯಗಳು ಗಮನ ಸೆಳೆದಿಲ್ಲವೇ? ಅದನ್ನು ತೆಗಳುವ/ಹೊಗಳುವ ಮಾತು ಎಲ್ಲಿ ಕೇಳಿ ಬರುತ್ತಿಲ್ಲ ಯಾಕೆ?
  ಅಂದ ಹಾಗೆ ನಾನು ಬ್ರಾಹ್ಮಣನೂ ಅಲ್ಲ, ಶೂದ್ರನೂ ಅಲ್ಲ ಮತ್ತು ಇಂತಹ ಯಾವ ಲೇಬಲ್ ಕೆಳಗೂ ಬರಲು ಇಚ್ಛಿಸುವುದೂ ಇಲ್ಲ.

  ReplyDelete
 4. Why stop at demanding ban on made snana, pankthi bedha?

  Go ahead and demand ban on nudity of Gommateshwara. Ask govt to dress him up and hide nudity. While at it perhaps demand ban on nudity of jain munis too!

  ReplyDelete
 5. ನಿಜಕ್ಕೂ ಆರೋಗ್ಯಕರ ಬರಹ. ಮಡೆ ಸ್ನಾನ ಕುರಿತು ಟಿವಿಯಲ್ಲಿ ಕೆಲ ವಿಚಾರವಾದಿಗಳ ಹಾಗೂ ಪ್ರಗತಿಪರರ ವಿಚಾರ ಕೇಳಿ, ನನಗೆ ಕೆಲ ಅನುಮಾನ ಮುಡಿತು. ಇವರೆಲ್ಲರೂ, ಇಂಥದ್ದೊಂದು ಅನಿಸ್ಟ ಆಚರಣೆ ನಿಷೇಧವಾಗಲಿ ಎಂದು ವಿವೇಕದಿಂದ ವಾದಿಸುವ ಬದಲು, ಬ್ರಾಹ್ಮಣರನ್ನು ಮನಸಾರೆ ಟೀಕಿಸಲು ಹಸಿದು ಕುಳಿತಿದ್ದವರಂತೆ ಕಂಡರು. ಹಿಂದುಳಿದ ಆಯೋಗದಲ್ಲಿ ಕೆಲಸ ಮಾಡಿದವರು ಕೂಡು ಇಂಥಹ ಅವಿವೇಕಿ ಕೃತ್ಯದಲ್ಲಿ ಭಾಗಿಯಾಗಿದ್ದರು ! ದಲಿತರು, ಹಿಂದುಳಿದವರು ಮದೆ ಸ್ನಾನ ಮಾಡುತ್ತಿರುವುದು, ಈ ಎಲ್ಲರಿಗು ಒಳಗೊಳಗೇ ಖುಷಿ ತಂದಿದೆಯೇನೋ ಅನಿಸಿತು. ಅನಿಷ್ಟಕ್ಕೆಲ್ಲ ಶನಿಯೇ ಕಾರಣ ಎಂದು ಭಾವಿಸುವ ಅಂತಹ ತಿಳಿಗೆಡಿಗಳಿಗೆ ಧಿಕ್ಕಾರವಿರಲಿ.
  ಮಂಡ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ, ಜಿಲ್ಲೆಯ ಎಲ್ಲ ಒಕ್ಕಲಿಗರು ಪಶ್ಚಾತಪಕ್ಕಾಗಿ ಉಪವಾಸ ಮಾಡಿ ಎಂದು ಬಹಳ ವರ್ಷಗಳ ಹಿಂದೆ ಡಿ ಆರ್ ನಾಗರಾಜ್ ಹೇಳಿದ ಮಾತು ನೆನಪಾಗುತ್ತಿದೆ. ಇಲ್ಲಿಯೂ ಅಷ್ಟೇ, ವಿಪ್ರರೆ ಊಟ ಮಾಡುವುದಿಲ್ಲ ಎನ್ನುವ ಕೆಲಸ ಮಾಡಬೇಕಿದೆ. ಈ ನೆಪದಲ್ಲಿ, ವಿಪ್ರರನ್ನು ಟೀಕಿಸುವ ಬದಲು, ಮನವೊಲಿಸುವ ಪ್ರಯತ್ನ ನಡೆಯಬೇಕು.
  ಹೌದು, ಗೊತ್ತಿಲ್ಲದೇ ಒಂದು ಸಂಗತಿಯನ್ನು ಕೇಳುತ್ತಿರುವೆ. ಈ ಅನಿಸ್ಟ ಆಚರಣೆ ಬಹಳ ವರ್ಷಗಳಿಂದ ನಡೆಯುತ್ತಿದ್ದರು, ಬುದ್ದಿವಂತ ಜಿಲ್ಲೆಯ ಪ್ರಗತಿಪರರು, ವಿಚಾರವಾದಿಗಳು ಇಲ್ಲಿಯವರೆಗೆ ಏನು ಮಾಡುತ್ತಿದ್ದರು ? ವರ್ಷದಿಂದ ಈಚೆಗೆ, ಏನೋ ಆಗಬಾರದ್ದು ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಯಾಕೆ ?
  -ಪಾರ್ವತಿ ಚೀರನಹಳ್ಳಿ

  ReplyDelete
 6. ಕನ್ನಡ ಪ್ರಭ ಮುಖಪುಟ ನೋಡಿದಿರ?
  ‘‘ಇಲ್ಲಿ ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ!’’ ಎಂಬ ತಲೆಬರಹದಲ್ಲಿ ಲೀಡ್ ಸುದ್ದಿಯೊಂದನ್ನು ಕನ್ನಡ ಪ್ರಭದ ಮುಖಪುಟದಲ್ಲಿ ಪ್ರಕಟಿಸಲಾಗಿದೆ. ತುರುವೇ ಕೆರೆ ಬೇಡೆರಾಯ ಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ಈ ಆಚರಣೆ!! ಹೆಡ್ಡಿಂಗ್‌ನ ಕೆಳಗಡೆ ಹೀಗೊಂದು ಕ್ಲಿಕ್ಕರ್. ಅಂದಹಾಗೆ ಇದನ್ನು ವರದಿ ಮಾಡಿದವರು ‘ಉಗಮ ಶ್ರೀನಿವಾಸ್’.
  ಇಡೀ ವರದಿ ಪರೋಕ್ಷವಾಗಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ಸಮರ್ಥಿಸಲೆಂದೇ ತಯಾರಾಗಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದರೂ ವರದಿಯ ಸತ್ಯಾಂಶದ ಕುರಿತಂತೆ ನನ್ನ ತುಮಕೂರಿನ ಗೆಳೆಯರಲ್ಲಿ ವಿಚಾರಿಸಿದೆ. ಅವರು ಹೇಳಿದ ಸತ್ಯವನ್ನು ಕೇಳಿ ದಂಗಾದೆ.
  ತುಮಕೂರಿನ ನನ್ನ ಗೆಳೆಯ ರಂಗರಾಜು ಇಡೀ ವರದಿ ಸುಳ್ಳು ಎಂದು ಒಂದೇ ವಾಕ್ಯದಲ್ಲಿ ಅಲ್ಲಗಳೆದರು. ಮತ್ತು ಅಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನೂ ಎನ್ನುವುದನ್ನು ಅವರೇ ಕೆಳಗಿನಂತೆ ವಿವರಿಸಿದರು.
  ‘‘ನಮ್ಮಲ್ಲಿ ಕೆಳವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಉರುಳುವಂತಹ ಯಾವುದೇ ಪದ್ಧತಿಯಿಲ್ಲ. ಇದೊಂದು ಕಪೋಲಕಲ್ಪಿತ ವರದಿಯಾಗಿದೆ. ಬ್ಯಾಟರಾಯನ ದೇವಾಲಯಕ್ಕೆ ಎಲ್ಲ್ಲ ವರ್ಗದ ಭಕ್ತರಿದ್ದಾರೆ. ಪ್ರತಿ ವರ್ಷ ಮಾರ್ಚ್ 6ರಂದು ಮಘ ಮಾಸ ಅಶ್ಲೇಷ ನಕ್ಷತ್ರದಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು, ರಥೋತ್ಸವದ ಹಿಂದಿನ ದಿನ ದೇವಾಲಯದ ಒಕ್ಕಲುತನ ಬ್ರಾಹ್ಮಣರು ಸೇರಿ ತಮ್ಮ ತಮ್ಮ ಲ್ಲಿಯೇ ಮಡೆಸ್ನಾನದಂತಹ ಸಂಪ್ರದಾಯ ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮಡೆ ಸ್ನಾನಕ್ಕೆ ಬೇರೆ ವರ್ಗಗಳಿಗೆ ಅವಕಾಶ ವಿದ್ದರೂ ಸಂಪ್ರದಾಯವನ್ನು ಹಾಳುಗೆಡವಿ ವರ್ಗ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಉದ್ದೇಶದಿಂದ ಇದುವರೆಗೂ ಹಿಂದುಳಿದ ವರ್ಗದ ಜನ ಮಡೆ ಸ್ನಾನದಂತಹ ಆಚರಣೆಯಿಂದ ದೂರವೇ ಉಳಿದಿದ್ದಾರೆ. ರಥೋತ್ಸವದ ದಿನ ತೇರು ಎಳೆದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಲು ಅವಕಾಶವಿದೆ ಎಂದು ದೇವಾಲ ಯದ ಅರ್ಚಕ ಶ್ರೀನಿವಾಸ್ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದ ವರದಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವಾಲಯದ ಕಮಿಟಿಯಲ್ಲಿರುವ ಹಿಂದುಳಿದ ವರ್ಗದ ನಿರ್ದೇಶಕರೊಬ್ಬರು, ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳ ನಡುವೆ ಇರುವ ಸೌಹಾದರ್ತೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ವರದಿ ಮಾಡಲಾಗಿದೆ. ಸುಮಾರು 400 ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯವನ್ನು ಬಹಳ ಅಚ್ಚುಕಟ್ಟಾಗಿ ಸಮಾಜದ ಸ್ವಾಸ್ಥ ಹಾಳಾಗದಂತೆ ನಡೆಸಿಕೊಂಡು ಬರಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಮಡೆಸ್ನಾನಕ್ಕೂ, ತುರುವೇಕೆರೆಯ ಬ್ಯಾಟರಾಯನ ದೇವಾಲಯದಲ್ಲಿ ನಡೆಯುವ ಮಡೆಸ್ನಾನಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಇದನ್ನು ವರದಿ ಪ್ರಕಟಿಸುವ ಮುನ್ನ ಯೋಚಿಸಬೇಕಿತ್ತು ಎಂದಿದ್ದಾರೆ.
  ರಥೋತ್ಸವದ ಹಿಂದಿನ ದಿನ ರಾತ್ರಿ ಬ್ರಾಹ್ಮಣ ಜಾತಿಯಲ್ಲಿಯೇ ಹುಟ್ಟಿದ ರೋಗಿಗಳು, ಮಕ್ಕಳಾಗದವರು ಸೇರಿದಂತೆ ಕುಟುಂಬದಲ್ಲಿ ಸಮಸ್ಯೆಯನ್ನು ಹೊಂದಿರುವಂತಹವರು ಬ್ರಾಹ್ಮಣರು ಊಟ ಮಾಡಿದ ಎಂಜಲೆಲೆಯನ್ನು ಎತ್ತಿಹಾಕಿ ನಂತರ ಉರುಳು ಸೇವೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ಯಾವುದೇ ಜಾತಿಗಳ ಜನರಿಗೆ ಅಲ್ಲಿ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ. ಆದರೆ ಇದನ್ನೇ ಕೆಳ ವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣ ಮಡೆಸ್ನಾನ ಎಂದು ಬರೆಯುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ.
  -ಬಿ.ಎಂ.ಬಶೀರ್

  ReplyDelete
 7. "Do Not Hurt the feelings of the believers" ಹೀಗಾಂತ ನಾನ್​ ಹೇಳ್ತಿಲ್ಲ. ಈ ಹಿಂದೆ, ರಾಜ್ಯದ ಗೃಹ ಸಚಿವರಾಗಿದ್ದು, ಅಲ್ಲಿ ಏನೂ ಮಾಡೋಕೆ ಆಗದೆ, ಈಗ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವ ಡಾ. ಆಚಾರ್ಯ ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿರುವುದು.ಛೀ... ಆಚಾರ್ಯ ಅವರಿಗೆ ನಾಚಿಕೆ ಆಗಬೇಕು. ಅಜ್ಞಾನ, ಅಂಧಕಾರವನ್ನು ದೂರ ಮಾಡುವುದು ಶಿಕ್ಷಣದ ಉದ್ದೇಶ. ಸ್ವಾಮಿ ವಿವೇಕಾನಂದರು ಇದನ್ನು ಹೇಳಿದ್ದಾರೆ. ವಿವೇಕಾನಂದರ ಆದರ್ಶ ಪಾಲನೆ ಮಾಡ್ತೀವಿ ಅಂತ ಹೇಳೋ ಅಚಾರ್ಯ ಅವರು, ಈ ಸಂದರ್ಭ ಏಕೆ ವಿವೇಕಾನಂದರನ್ನು ಮರೆತರೋ.. ಅಲ್ಲದೆ, ಶಿಕ್ಷಣ ಇಲಾಖೆಯ ಸಾರಥಿಯಾಗಿ, ಇಂತಹ ಹೇಳಿಕೆಯನ್ನು ದೊಡ್ಡದಾಗಿ ಬರೆಯುವ ಮುನ್ನ ಕೊಂಚ ಯೋಚಿಸಬಾರದಿತ್ತೇ.... ಮಡೆಸ್ನಾನ ಮಾಡುವುಕ್ಕೆ ಮೀಡಿಯಾಗಳು ಅಡ್ಡಿ ಮಾಡ್ತಿವೆ ಅನ್ನೋ ರೀತಿ ಬರ್ದಿದ್ದಾರಲ್ಲಾ.. ಹಾಗಾದ್ರೆ ಇವರು ಏಕೆ ಅದನ್ನು ಮಾಡ್ಬಾರ್ದು.. ಮಡೆಸ್ನಾನದಿಂದ ಪುಣ್ಯ ಬರುತ್ತೆ ಅಂತ ಅವರೇ ನಂಬಿಕೊಂಡಿದ್ದಾರಲ್ಲಾ? ಹಾಗಿದ್ಮೇಲೆ ಮಾಡ್ಲಿ......

  ಆಚಾರ್ಯ ಅವರ ಬ್ಲಾಗ್​ ಅಡ್ರೆಸ್: http://drvsacharya.blogspot.com/

  ReplyDelete
 8. satyansha hora tanda basheer ge dhanyavadagalu. patrikegalu yava reeti janara hadi tappisuttave nodi...

  Yajnesh Bangalore

  ReplyDelete
 9. "ಸಹಜವಾಗಿಯೇ ಬ್ರಾಹ್ಮಣ್ಯದ ಕೊಳೆಯನ್ನೇ ಇವೂ ಕೂಡ ಹೊತ್ತುಕೊಂಡು ಸಾಗುತ್ತಿವೆ" ಎಂದು ಬರೆಯುತ್ತೀರಲ್ಲ. ಹಾಗಿದ್ದರೆ ಬ್ಯಾಹ್ಮಣ್ಯ ಎನ್ನುವುದು ನಿಮ್ಮ ಪ್ರಕಾರ ಕೊಳೆ ಎಂದಾಯಿತು. ಇದೊಂತರಾ ಹೇಗೆ ಅಂದರೆ "ನೀನು ಒಳ್ಳೆ ಬ್ರಾಹ್ಮಣ, ಆದರೆ ನಿನ್ನ ಜಾತಿ ಕೆಟ್ಟದ್ದು ಅಂದ ಹಾಗಾಯಿತು. ಇಂತಹ ವಿಷ ಇಟ್ಟುಕೊಂಡು ಇಂತಹ ಉಪದೇಶದ ಲೇಖನ ಬರೆಯುತ್ತೀರಲ್ಲ.!

  ReplyDelete
 10. ಮಡೇಸ್ನಾನಕ್ಕೆ ಪ್ರಮುಖ ಕಾರಣ ಬ್ರಾಹ್ಮಣ ಅಲ್ಲ, ನಾವೇ.

  ನಮ್ಮಲ್ಲಿರುವ ಮಾನಸಿಕ ಗುಲಾಮಗೀರಿ ಫಲ ಒಬ್ಬ ಗುಲಾಮನಾಗಿರುವುದು. ಮತ್ತೊಂಬ್ಬ ಗುಲಮಾಗಿರಿಯನ್ನು ಸಮರ್ಥಿಸುತ್ತಿರುವುದು.

  ಅನಾದಿ ಕಾಲದಿಂದ ಅನೇಕ ಆನೇಕ ಪದ್ಧತಿಗಳು, ಶೋಷಣೆಗಳು, ಅತ್ಯಚಾರಗಳು ನಡೆಯುತ್ತಲೆ ಇವೆ. ಸ್ವಯಂ ಪ್ರೇರಿತವಾಗಿ ಬ್ರಾಹ್ಮಣ, ವಕ್ಕಲಿಗ, ರೆಡ್ಡಿ, ಕುರುಬ, ನಾಯಕ ಇನ್ನು ಆನೇಕ ಜಾತಿಗಳು ತಮ್ಮ ಶೋಷಣ ಪದ್ಧತಿಗಳನ್ನು ನಿಲ್ಲಿಸಿಲ್ಲ. ಅಥವ ಶೋಷಿತ ಸಮುದಾಯದಿಂದ ಬರುವ ಪತ್ರಿರೋಧಕ್ಕೆ ಶಿವರಾಂರವರಿಗೆ ಆದ ಗತಿಯೇ. ಇದು ಹೊಸದೇನು ಅಲ್ಲವಲ್ಲ. ಒಂದೊಂದು ಜಿಲ್ಲೆಯಲ್ಲೂ ಡಿ.ಎಸ್.ಎಸ್ ಹುಟ್ಟಬೇಕ್ಕಾದರೂ ಶೋಷಣೆಯ ಪರಾಮಾವಧಿಯನ್ನು ದಿಕ್ಕರಿ ಹೊರಟವರನನ್ನು ನಾಶ ಮಾಡಿದ್ದರ ಫಲವೇ ತಾನೆ. ಇತಿಹಾಸದಲ್ಲಿ ಬ್ರಾಹ್ಮಣರು ಅಥವ ಯಾವುದೇ ಶೋಷಣೆ ನಡೆಸುವು ಹಂತದಲ್ಲಿರುವ ಜಾತಿಗಳು ಶೋಷಿತರಿಗೆ ವಿಮೋಚನೆ ನೀಡಬೇಕು ಎಂದು ಸಮುದಾಯವೇ ಒಂದು ಚಳುವಳಿಯನ್ನು ರೂಪಿಸಿದ ಕುರುಗಳು ಉಂಟೆ?.


  ಅಂಬೇಡ್ಕರ್ ರವರ ಹೋರಾಟ ಗುರಿ ಶೋಷಣೆಯಿಂದ ಮುಕ್ತಿಯಾಗುವುದಾದರೆ ಅದೇ ವಿಷವನ್ನು ಗಾಂಧಿ ಸಹ ಹೇಳುತ್ತಾರೆ, ಆದರೆ ತನ್ನ ಅನುಕೂಲ ವ್ಯವಸ್ಥೆಯಲ್ಲಿ ಮಾತ್ರ. ಈ ರೀತಿಯ ಯಾವುದೇ ಪ್ರಸಂಗ/ಘಟನೆ ನಡೆದಾಗ ಪ್ರಗಜ್ಞಾಣವಂತರೆಂದು ಕರೆದುಕೊಳ್ಳುವ ಶೋಷಕ ವರ್ಗದವರು ನಾನು ವಿರೋಧಿಸುತ್ವುತೇವೆ, ಆದರೂ ಒಟ್ಟಾರೇಯಾಗಿ ಬ್ರಾಹ್ಮಣರು ಅಂದು ಬಿಡುತ್ತಾರೆ ಎನ್ನೊ ಅಂಬೋಣ ಯಾವುಗಲೂ ಕಾಣಿಸುತ್ತದೆ. ಇದು ಒಂದು ರೀತಿ 'ಗಾಂಧಿಗೀರಿ'.

  ಸಮಸ್ಯೆ ಇದ್ದಾಗ ಒಟ್ಟಾಗಿ ವಿರೋಧಿಸುವುದು ಮುಖ್ಯ, ಇಂತಹ ಪ್ರತ್ಯೇಕತೆ ಮಾಡುವಂತಹ ಮಾತುಗಳಲ್ಲ. ಇದು ಜಾತಿ ಅಂಟು ಇದರಲ್ಲಿ ಕಾಣಿಸುತ್ತದೆ.

  ಮೊದಲು ನಾವೇ ಬದಲಾಗಬೇಕು. ನಾವೇ ಅದರಲ್ಲಿ ಭಾಗಿಯಾಗದಂತೆ ನಿಲ್ಲಬೇಕು, ಅದು ನಮ್ಮ ಸ್ವಾಭಿಮಾನ. ಇದಕ್ಕೆ ಪ್ರೇರಣೆಯಾಗಿ ಕೆಲಸ ಮಾಡಬೇಕಾಗಿರುವುದ ಈ ಸಮುದಾಯದ ಅನ್ನ ತಿನ್ನುತ್ತಿರು ಇದೇ ಸಮುದಾಯದವರು. ಅದು ಹಿಂದೂಳಿದವರೊ... ದಲಿತರೊ...

  ReplyDelete
 11. ಒಂದು ಭಯವಿದೆ. ನಾಳೆ ಎಲ್ಲವೂ ಅಮೇರಿಕೀಕರಣವಾಗಿ ಪಿಜ್ಜಾ, ಬರ್ಗರ್ ಹೊರತು ಉಳಿದೆಲ್ಲದರ ಸೇವನೆಯೂ ಅಮಾನುಷ ಮೌಡ್ಯ ಎಂಬ ವಾದ ಹುಟ್ಟೀತೆ? ಮೇಲುನೋಟಕ್ಕೆ ಮಡೇ ಸ್ನಾನಕ್ಕೂ ಮೇಲಿನ ಸಂಗತಿಗೂ ನೇರಾನೇರ ಸಂಬಂಧ ಕಾಣದಿರಬಹುದು. ಆದರೆ ಕೆಲವರ ವೈಯಕ್ತಿಕ ನಂಬಿಕೆ, ರೂಢಿಗಳ ಮೇಲಿನ ಸತತ ವೈಚಾರಿಕ ಧಾಳಿ (ಕೆಲವೊಮ್ಮೆ ದೈಹಿಕವೂ ಹೌದು.) ಮೇಲಿನ ಭಯವನ್ನು ಹುಟ್ಟಿಸಿದ್ದಂತೂ ಸತ್ಯ.
  - ಮೀನಾ, ಮೈಸೂರು

  ReplyDelete
 12. ಮಾನವೀಯ ನೆಲೆಯ ಮೇಲೆ ಬರೆದ ಅರ್ಥಪೂರ್ಣ ಮಾತು. ಜಾತೀಯ ಮೀರಿ ನಡೆದ ಚಿಂತನೆ. ಮೆಡೆಸ್ನಾನ ಮಾನವ ವಿರೋಧಿ ಸಂಪ್ರದಾಯ. ಮಂಡೆ ಸರಿ ಇಲ್ಲದ ಅಚಾರ್ಯರಂಥ ಮತೀಯವಾದಿಗಳು ಮಾತ್ರ ಮಡೆಸ್ನಾನದ ಸಂಪ್ರದಾಯಗಳನ್ನು ಬೆಂಬಲಿಸಬಲ್ಲರು. ಪೇಜಾವಾರದಂಥ ಧ್ವಂದವಾದಿಗಳು ಮೌನಾಚರಣೆಯನ್ನು ಮಾಡಬಲ್ಲರು.
  ಮಾನವತಾವಾದಿಗಳೂ ಜಾತಿಮತವನ್ನು ಮೀರಿ ಈ ನಿಲುವಿನ ದೇವಸ್ಥಾನಗಳನ್ನು, ಮಠಗಳನ್ನು ಬಹಿಸ್ಕರಸಬೇಕಾಗಿದೆ. ಮಾನವೀಯ ಧೋರಣೆಗಳನ್ನು ವಿರೋಧಿಸುವ, ಸಂಪ್ರದಾಯದ ಹೆಸರಲ್ಲಿ ದೌರ್ಜನ್ಯವನ್ನು ಬೆಂಬಲಿಸುವ ದೇವಸ್ಥಾನಗಳನ್ನು ವಿರೋಧಿಸುವ ನಿಟ್ಟಿನಲ್ಲಿ ಮಾನವತೆಯ ನಿಲುವಿರುವವರು ಸುಬ್ರಮ್ಮಣ್ಯದ ನೆಲದಲ್ಲಿಯೇ ಮಂಡೆ ಇಲ್ಲದ "ಮಡೆಸ್ನಾನ" ವನ್ನು ವಿರೋಧಿಸುವ ಕಾರ್ಯಕ್ರಮವನ್ನು ಮಾಡಿ ಅಲ್ಲೇ ಸಹಬೋಜನವನ್ನು ಮಾಡೋಣ. ಸಾವಿರಾರು ಸಂಖ್ಯೆಯಲ್ಲಿ ಮಾನವೀಯ ನಿಲುವುಳ್ಳ ಮನುಷ್ಯರಾದ ನಾವು ಜಾತಿ ಮತಗಳನ್ನು ಮೀರಿ ಸೇರೋಣ.
  ತಮ್ಮ ಆದಾಯಗಳಿಗೆ ಕುತ್ತು ಬಂದಾಗ ಮಾತ್ರ ದೇವಸ್ಥಾನ ಮತ್ತು ಮಠಗಳು ಬದಲಾಗುತ್ತವೆ. ಅವರಲ್ಲಿ ಮಾನವೀಯತೆಯ ಸೆಲೆಗಳು ಆದಾಯಕ್ಕೆ ಕುತ್ತು ಬಂದಾಗ ಅರಳುತ್ತವೆ.
  ಜಾತೀಯ ಬೇಧವನ್ನು ಬ್ರಾಹ್ಮಣರೇ ವಿರೋಧಿಸುವ ಲಕ್ಷಣಗಳು ಗೋಚರಿಸಿದಾಗ ತಮ್ಮ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಇವರು ದಲಿತಕೇರಿಗಳಿಗೆ ವಾಕಿಂಗ್ ಹೊರಡುತ್ತಾರೆ. ಭಕ್ತರ ಸಂಖ್ಯೆ ಜಾಸ್ತಿಯಾದರೆ ಆದಾಯ ಜಾಸ್ತಿಯಾಗುತ್ತದೆ.
  ಅದ್ದರಿಂದ ನಾವು ಬೃಹತ್ ಚಳುವಳಿಯನ್ನು ಮಾಡಿ, ಇಂತಹ ದೇವಸ್ಥಾನಗಳನ್ನು ಬಹಿಸ್ಕರಿಸುವಂತೆ ಕರೆನೀಡಿದರೆ ಅವರಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಇದಕ್ಕೆದ್ದಂತೆ ಅವರು ಮಾನವೀಯರಾಗಬಹುದು.

  ReplyDelete
 13. ಮಾನ್ಯರೆ,
  ಬಹಳ ಉತ್ತಮವಾದ, ಒಳ್ಳೆಯ ಒಳನೋಟದಿಂದ ಕೂಡಿದ ಲೇಖನ. ಹಾಗು ಇಲ್ಲಿ ಬಂದ ಹಲವು ಪ್ರತಿಕ್ರಿಯೆಗಳೂ ಸಹ. ಶ್ರೇಷ್ಟತೆ ಎಂಬೋದು ದೊಡ್ಡ ರೋಗವಾಗಿ ಹೋದಾಗ, ಅದು ರೋಗ ಅಂತ ತಿಳಿದಿದ್ದರೂ ಎಲ್ಲರೂ ಆ ರೋಗವನ್ನ ಅಪ್ಪಿಕೊಳ್ಳಲಿಕ್ಕೆ ಹೋಗುತ್ತಾರೆ, ಇದೇ ದೊಡ್ಡ ದುರಂತ. ಮಾನವತ್ವದ ನೆಲೆಯಲ್ಲಿ ಸಮಾಜವನ್ನ, ಮುಖ್ಯವಾಗಿ ಸ್ವಂತ ವ್ಯಕ್ತಿತ್ವವನ್ನ ಕಟ್ಟಲು ತೊಡಗಿದಾಗ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕೀತು.
  ಧನ್ಯವಾದಗಳೊಂದಿಗೆ,
  ಸಾಕ್ಷಿ

  ReplyDelete
 14. ಬರೇ ಮಡೆಸ್ನಾನವಲ್ಲ. ಪ್ರಜ್ಞಾವಂತರು ಮೊಹರಂ ಆಚರಣೆಯ ಸಂದರ್ಭದಲ್ಲಿ ನಡೆಸುವ ಅನಿಷ್ಟ ಆಚರಣೆಗಳಾದ "ಬೆಂಕಿಯ ಮೇಲೆ ನಡೆಯುವಿಕೆ", "ತಮ್ಮ ತಮ್ಮ ಮೈಗಳಿಗೆ ಹೊಡೆದುಕೊಳ್ಳುವಿಕೆ " ಗಳನ್ನೂ ವಿರೋಧಿಸಬೇಕು.

  ReplyDelete
 15. ವಿಚಾರಪೂರ್ಣ ಲೇಖನ. "ನಮ್ಮೊಳಗಿನ ಜೀವಚೈತನ್ಯದ ಮಾತು ಕೇಳಬೇಕಾದ ಕಾಲವಿದು. ಈ ಕರೆಗೆ ಓಗೊಡದಿದ್ದಲ್ಲಿ ಈ ಸಮಾಜ ಹೀಗೇ ಮುಂದುವರೆಯುತ್ತದೆ. ನಾವು ಎಂಜಲೆಲೆಗಳ ಮೇಲೆ ಉರುಳಾಡಿಕೊಂಡೇ ಸಾಯುತ್ತೇವೆ." ಎಂಬ ಮಾತುಗಳು ನಮ್ಮ ಕಣ್ತೆರೆಸಬೇಕು. ಇದೆ ವಿಚಾರದ ಕುರಿತ ಮತ್ತೊಂದು ಚಿಂತನಶೀಲ ಲೇಖನ ಹೊಸದಿಗಂತ ಪತ್ರಿಕೆಯ ಸಂಪಾದಕ ದು.ಗು.ಲಕ್ಷ್ಮಣ್ ಬರೆದಿದ್ದಾರೆ - 'ಮಡೆಸ್ನಾನವಲ್ಲ, ಬೇಕಿರುವುದು ಜ್ಞಾನದ ವಿವೇಕದ ಸ್ನಾನ' - ಸೋಮವಾರ ಡಿಸೆಂಬರ್ ೫. :
  http://www.hosadigantha.in/epaper.php?date=12-05-2011&name=12-05-2011-6&edition=mangalore

  ReplyDelete
 16. EECHINA DINAGALALLI BANDA ATTYANTA VAASTAVA,MAANAVEEYA,SAMAYOCHITAVAADA SHRESTA LEKHANA IDU..DHANYAVAADAGALU.-MANDYA RAMESH.

  ReplyDelete
 17. ನಿಮ್ಮ ಲೇಖನ ತುಂಬಾ ಅತ್ಭುತವಾಗಿದೆ.... ಮತ್ತು ಸರಿಯಾದ ದಿಕ್ಕಿನಲ್ಲಿದೆ... ಸಮಾಜದ ಕೆಲವು ಜಾತಿವಾದಿಗಳು ಇದನ್ನು ಸಮರ್ಥಿಸಿದ್ದಕ್ಕಿಂತ ಕರ್ನಾಟಕದ ಎಲ್ಲ ವರ್ಗದ ಜನರಿಂದಲೂ ಆಯ್ಕೆಯಾದ ಪ್ರಜಾಪ್ರಭುತ್ವದ ಸರ್ಕಾರದ ಸಚಿವರೊಬ್ಬರು ಸಮರ್ಥಿಸಿಕೊಂಡಿದ್ದು ಅವರ ವಿವೇಕಕ್ಕೆ ಮಂಕು ಬಡಿದಿರುವುದಕ್ಕೆ ಸಾಕ್ಷಿ... ಆ ಸಚಿವರು ಮಡೆಸ್ನಾನ ಮಾಡಿದರೆ ಆ ರೋಗ ದೂರಾಗಬಹುದು...

  ReplyDelete