Friday, February 17, 2012

ಸದನದಿಂದ ಮಾಧ್ಯಮಗಳನ್ನು ಹೊರಗಿಡುವುದು ಬುದ್ಧಿವಂತಿಕೆಯಲ್ಲ, ಬಡತನ



-ಚಿದಂಬರ ಬೈಕಂಪಾಡಿ

ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ ಎನ್ನುವ ಮಾತು ನಿಜ ಎನ್ನುವುದನ್ನು ರಾಜಕಾರಣಿಗಳು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದರೂ ಆಂತರಿಕವಾಗಿ ಅವರು ಹಾಗೆ ಯೋಚಿಸುತ್ತಾರೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ವಿಧಾನಸಭಾ ಕಲಾಪ ನಡೆಯುತ್ತಿದ್ದಾಗ ಅಶ್ಲೀಲ ವೀಡಿಯೋ ನೋಡಿದರೆಂಬುದು ಜಗಜಾಹೀರಾಗುತ್ತಿದ್ದಂತೆಯೇ ಇಡೀ ರಾಜಕೀಯ ಕ್ಷೇತ್ರದಲ್ಲಿ ತಲ್ಲಣಗಳು ಕಾಣಿಸಿಕೊಂಡವು.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡ ದೃಶ್ಯಗಳು ಮತ್ತೆ ಮತ್ತೆ ಕಣ್ಣೊರೆಸಿಕೊಂಡು ನೋಡುವಷ್ಟರ ಮಟ್ಟಕ್ಕೆ ದಿಗಿಲುಂಟು ಮಾಡಿದವು. ವಿಧಾನ ಸಭೆಯ ಇತಿಹಾಸದಲ್ಲಿ ಗದ್ದಲಗಳು ನಡೆದಿವೆ, ಕುರ್ಚಿ, ಮೈಕ್ ಬಿಸಾಡಿದ ಘಟನೆಗಳು ನಡೆದಿವೆ, ಅನೇಕ ಕಾರಣಗಳಿಗಾಗಿ ಅನೇಕ ರೀತಿಯ ರಂಪಾಟಗಳು ಘಟಿಸಿವೆ, ಸದನದೊಳಗೇ ರಾತ್ರಿಯೆಲ್ಲ ಧರಣಿ ನಡೆಸಿರುವುದು ಹೀಗೆ ಹತ್ತು ಹಲವು ಘಟನೆಗಳು ಈ ದೇವಮಂದಿರದೊಳಗೆ ನಡೆದಿವೆ. ಆದರೆ ಅಶ್ಲೀಲ ವೀಡಿಯೋ ನೋಡಿ ಸಿಕ್ಕಿಬಿದ್ದ ಮೊಟ್ಟಮೊದಲ ಘಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಅಶ್ಲೀಲ ಮಾತುಗಳನ್ನು ಅಥವಾ ಅನ್‌ಪಾರ್ಲಿಮೆಂಟರಿ ಪದಬಳಕೆ ಮಾಡುವುದೇ ತಪ್ಪು ಎನ್ನುವಷ್ಟರಮಟ್ಟಿಗೆ ಸದನಕ್ಕೆ ಘನತೆಯಿದೆ. ಈ ಕಾರಣಕ್ಕಾಗಿಯೇ ಅಂಥ ಪದಗಳನ್ನು ಆಡಿದವರು ಕ್ಷಮೆಯಾಚಿಸಿರುವುದು, ಅಂಥ ಪದಗಳನ್ನು ಕಡತದಿಂದ ಕಿತ್ತು ಹಾಕಿಸಿದಂಥ ನೂರಾರು ಉದಾಹರಣೆಗಳಿವೆ. ಆದರೆ ಅಶ್ಲೀಲ ವೀಡಿಯೋ ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸನ್ನಡತೆಯನ್ನು ಸದನದೊಳಗಿರುವವರು ಪಾಲಿಸುವಂತೆ ಮಾಡುವುದು ಜವಾಬ್ದಾರಿಯುತವಾದ ಹಾಗೂ ಸುಧಾರಣೆಯ ಕ್ರಮ. ಅಶ್ಲೀಲ ವೀಡಿಯೋ ಪ್ರಕರಣದ ಅಂತಿಮ ತೀರ್ಪೇ ಹೊರಬಿದ್ದಿಲ್ಲ, ನಿಜಕ್ಕೂ ತಪ್ಪಾಗಿರುವುದು ಎಲ್ಲಿ? ಎನ್ನುವ ಶೋಧವೂ ಆಗಿಲ್ಲ. ಅತ್ಯಂತ ಆತುರವಾಗಿ ರಾಜಕಾರಣಿಗಳ ಮನಸ್ಸು (ಸಾಮೂಹಿಕವಾಗಿ ಅಲ್ಲ, ಕೆಲವೇ ಕೆಲವು) ಮಾಧ್ಯಮಗಳನ್ನು ಸದನದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಆಘಾತಕಾರಿ. ಅಶ್ಲೀಲ ವೀಡಿಯೋ ನೋಡಿದ ಅಪರಾಧಕ್ಕಿಂತಲೂ ಘೋರವಾದ ಅಪರಾಧವನ್ನು ಮಾಡಲು ಕರ್ನಾಟಕದಲ್ಲಿ ಸಂಚು ಹೆಣೆಯುತ್ತಿರುವುದು ನಿರೀಕ್ಷಿತವೂ ಹೌದು.

ಸದನದೊಳಗೆ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ತಮಗೆ ಅನುಕೂಲಕರವಾದ ಸೂತ್ರ ಹೆಣೆದು ಯಾರನ್ನು ಬಿಡಬೇಕು?, ಯಾರನ್ನು ಬಿಡಬಾರದು ಎನ್ನುವ ತೀರ್ಮಾನಕ್ಕೆ ಬರುವಂಥ ದಡ್ಡ ಕೆಲಸವನ್ನು ಬುದ್ಧಿವಂತರು ಮಾಡುತ್ತಿರುವುದು ಮೂರ್ಖತನ ಮತ್ತು ಅವಿವೇಕಿತನ ಕೂಡಾ. ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳಿಗೆ ಸದನದೊಳಗೆ ಮಣೆಹಾಕಿ ಹುಳುಕನ್ನು ಎತ್ತಿತೋರಿಸುವ ಮಾಧ್ಯಮಗಳ ಕತ್ತುಹಿಚುಕುವ ದಡ್ಡತನ ಇದರ ಹಿಂದಿದೆ. ಬೆಳಕೇ ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಂತಾಗುತ್ತದೆ ಮಾಧ್ಯಮಗಳಿಲ್ಲದ ಸದನವನ್ನು ಊಹಿಸುವುದು ಎನ್ನುವ ಸಾಮಾನ್ಯ ಅರಿವೂ ಇಲ್ಲದಷ್ಟು ಬುದ್ಧಿ ಬಡತನವೇ ನಮ್ಮ ರಾಜಕಾರಣಿಗಳಿಗೇ?

ಮಾಧ್ಯಮಗಳ ಕತ್ತು ಹಿಚುಕುವ, ತಮಗೆ ಬೇಕಾದಂತೆ ಕುಣಿಸುವ ತಂತ್ರಗಳನ್ನು ದಶಕಗಳ ಹಿಂದೆಯೂ ಅನೇಕರು ರೂಪಿಸಿದ್ದರು ಮತ್ತು ತಮ್ಮದೇ ಆದ ತಂತ್ರಗಾರಿಕೆಯಿಂದ ಕಾರ್ಯಗತ ಮಾಡುವ ದುಸ್ಸಾಹಸವನ್ನು ಮಾಡಿ ಇತಿಹಾಸದ ಪುಟ ಸೇರಿಕೊಂಡಿರುವ ದೊಡ್ಡ ರಾಜಕಾರಣಿಗಳನ್ನು ಈಗಿನವರು ನೆನಪು ಮಾಡಿಕೊಂಡರೆ ಅರ್ಥವಾಗಿ ಬಿಡುತ್ತದೆ ತಾವೇನು ಮಾಡಲು ಹೊರಟಿದ್ದೇವೆಂಬುದು. ನಿರ್ಮಲವಾಗಿದ್ದ ಮಾಧ್ಯಮ ಕ್ಷೇತ್ರವನ್ನು ಪೇಯ್ಡ್ ನ್ಯೂಸ್ ಮೂಲಕ ಕಲುಷಿತಗೊಳಿಸಿದವರು ಯಾರು?

ಪತ್ರಕರ್ತನ ಹುದ್ದೆ ನಿರ್ವಹಿಸಿದರೆ ಹೊಟ್ಟೆಗೇನು ಗತಿ ? ಎನ್ನುವ ಕಾಲ ಬದಲಾಗಿದೆ, ರಾಜಕಾರಣಿಯ ಮನಸ್ಸಿನ ಹಿಂದೆ ಮಾಧ್ಯಮಗಳು ಮತ್ತು ಮಾಧ್ಯಮ ಮಂದಿಯ ಬುದ್ಧಿ ಕೆಲಸ ಮಾಡುವಂತಾಗಿರುವ ಸ್ಥಿತಿಗೆ ಹೊಣೆ ಯಾರು? ವೃತ್ತಿಘನತೆ ಎತ್ತಿಹಿಡಿಯುವುದೇ ಪರಮಧರ್ಮವೆಂದು ಬದುಕಿದ ಮಾಧ್ಯಮ ಮಂದಿಯ ನಿಜವಾದ ಬದುಕು ಹಿಂದೆ ಹೇಗಿತ್ತು ? ಈಗ ಹೇಗಿದೆ ? ಇಂಥ ಬದಲಾವಣೆಯ ಬಿರುಗಾಳಿಯ ಸುಳಿಯನ್ನು ಅರ್ಥಮಾಡಿಕೊಳ್ಳಿ.

ಸದನದೊಳಗೆ ಪ್ರವೇಶಿಸುವುದೆಂದರೆ ದೇವಮಂದಿರಕ್ಕೆ ಪ್ರವೇಶಿಸಿದಂತೆ ಎನ್ನುವ ಕಲ್ಪನೆ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸದನದೊಳಗಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ಮೌಲ್ಯಗಳು ಇಳಿಮುಖವಾಗುತ್ತಿವೆ ಎನ್ನುವ ಸ್ವರವನ್ನು ಹಿರಿಯ ಪತ್ರಕರ್ತರು ಬಹಿರಂಗವಾಗಿ ಎತ್ತುತ್ತಿರುವುದು. ತಮ್ಮ ಅನೂಕೂಲಕ್ಕೆ ಮಾಧ್ಯಮಗಳನ್ನು ತೆಕ್ಕೆಯಲ್ಲಿಟ್ಟುಕೊಂಡು, ಮಾಧ್ಯಮ ಮಂದಿಯನ್ನು ಮಡಿಲಲ್ಲಿಟ್ಟುಕೊಂಡು ಮುದ್ದಾಡಿದವರು ಈಗ ಕೈಚೆಲ್ಲಿದರೆ ಹೇಗೆ ? ಎನ್ನುವುದು ಇಲ್ಲಿ ಪ್ರಶ್ನೆಯಲ್ಲ.

ಒಬ್ಬ ಶಾಸಕನ ಸರಿಸಮಾನಕ್ಕೆ ಅಧಿಕಾರಿಗಳು ನಿಂತು ಮಾತನಾಡುವುದೇ ತಪ್ಪು ಎನ್ನುವ ದಿನಗಳಿದ್ದವು. ಮಂತ್ರಿಯ ಜೊತೆಯಲ್ಲಿ ವೇದಿಕೆ ಹತ್ತುವುದೇ ಸಲ್ಲದು ಎನ್ನುವ ನಿರ್ಬಂಧದ ದಿನಗಳಿದ್ದವು. ಈಗ ಅಧಿಕಾರಿಗಳೇ ರಾಜಕಾರಣಿಗಳ ಹೆಗಲಮೇಲೆ ಕೈ ಹಾಕಿಕೊಂಡು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾದರೆ ಕಳೆದುಹೋಗಿರುವ ಮೌಲ್ಯಗಳನ್ನು ಎಲ್ಲಿ ಹುಡುಕುವಿರಿ? ಮಡೆಸ್ನಾನ, ಪಂಕ್ತಿಭೇದ ಭೋಜನ, ತಲೆಮೇಲೆ ಮಲಸುರಿದುಕೊಂಡು ಪ್ರತಿಭಟಿಸುವಂಥ ಘಟನೆಗಳು ನಿಮ್ಮ ಸುತ್ತಲೂ ನಡೆಯುತ್ತಿವೆಯಲ್ಲ ಅವುಗಳ ವಿರುದ್ಧ ತಾರ್ಕಿಕವಾದ ಹೋರಾಟ ಮಾಡಲು ಸಾಧ್ಯವಾಯಿತೇ? ಖಾಸಗೀಕರಣಕ್ಕೆ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಎಂಥ ಅನಾಹುತವಾಗುತ್ತಿದೆ ಎನ್ನುವ ಅರಿವಾದರೂ ಬೇಡವೇ?

ದೇಹಕ್ಕೆ ಮುಪ್ಪು ಬಂದರೆ ಒಪ್ಪಿಕೊಳ್ಳಬಹುದು, ಬುದ್ಧಿಗೆ ಮುಪ್ಪು ಬರಬಾರದು. ಮಾಧ್ಯಮಗಳನ್ನು ಸದನದಿಂದ ದೂರವಿಡುವ ಪ್ರಯತ್ನವೆಂದರೆ ಬುದ್ಧಿಗೆ ಮುಪ್ಪು ಬಂದಿದೆ ಎಂದೇ ಅರ್ಥ. ಇಂಥ ತಪ್ಪು ಕೆಲಸವನ್ನು ಮಾಡಿದ ಅಪಕೀರ್ತಿಗೆ ಕರ್ನಾಟಕ ಒಳಗಾಗುವುದು ನಿಜಕ್ಕೂ ಆಘಾತಕಾರಿ. ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕೆಡಿಪಿ ಸಭೆಗಳನ್ನು ನೋಡಿದರೆ ಸಾಕು ನಿದ್ದೆ ಗೊರಕೆ, ಆಕಳಿಕೆ, ಮೊಬೈಲ್ ನಲ್ಲಿ ಸರಸ-ಸಲ್ಲಾಪದ ಲೋಕವೇ ಅನಾವರಣಗೊಳ್ಳುತ್ತದೆ. ಅಲ್ಲೂ ಮಾಧ್ಯಮಗಳಿವೆ, ಆದರೆ ಎಚ್ಚೆತ್ತುಕೊಂಡಿಲ್ಲ, ಈಗ ವಿಧಾನಸಭೆಯ ಕಲಾಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಚುರುಕಾಗುವ ಕಾಲ ಸನ್ನಿಹಿತವಾಗಿದೆ.

ವಿಧಾನಸಭೆಯ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ ಸಫಲವಾದರೆ ಅದು ಕೆಳಹಂತಕ್ಕೂ ಅನ್ವಯವಾಗುವ ಅಪಾಯವಿದೆ. ಸದನದ ಕಲಾಪ ಗೌಪ್ಯ ಅಲ್ಲ, ಅದನ್ನು ಸಾರ್ವಜನಿಕರು ಅರ್ಥಾತ್ ಪ್ರಜೆಗಳು ತಿಳಿದುಕೊಳ್ಳುವ ಮೂಲಭೂತ ಹಕ್ಕೂ ಕೂಡಾ. ಅಂತೆಯೇ ಮಾಧ್ಯಮಗಳು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದರಲ್ಲಿ ತಪ್ಪಿಲ್ಲ. ರಾಜಕಾರಣಿಗಳು ಅದರಲ್ಲೂ ಮಾಧ್ಯಮಗಳ ಬೆಳಕಲ್ಲೇ ಹೊಳಪುಕಂಡುಕೊಂಡವರು ಬುದ್ಧಿಗೆ ಕವಿದಿರುವ ಮುಸುಕನ್ನು ಸರಿಸಿಕೊಳ್ಳುವುದು ಒಳ್ಳೆಯದು. ಅವಿವೇಕತನ ಎಂದೂ ಬುದ್ಧಿವಂತಿಕೆಯೆನಿಸಿಕೊಳ್ಳುವುದಿಲ್ಲ, ಇಲ್ಲೂ ಹಾಗೆಯೇ.

1 comment:

  1. ಸದನದೊಳಗೆ ಗಣಿಗಳ್ಳರು, ಭೂಮಾಫಿಯಾಗಳು ,ದೇಶ ದೋಚುವ ದಂಧೆಗಾರರೇ ತುಂಬಿಕೊಂಡರೆ ,ಅದಕ್ಕೆ ದೇಶ ಭಕ್ತರ 'ಧರ್ಮ ಸಮರ್ಥನೆ' ಸಿಕ್ಕಿ ಬಿಟ್ಟರೆ ಇನ್ನೇನಾದೀತು. ಕಮಲಧಾರಿಗಳಿಂದ ಕರ್ನಾಟಕವನ್ನು ,ಪ್ರಜಾಪ್ರಭುತ್ವವನ್ನು ಉಳಿಸಬೇಕು.ಉತ್ತಮ ಲೇಖನ.

    ReplyDelete