Monday, November 21, 2011

ದಿನೇಶ್ ಅಮೀನ್ ಮಟ್ಟು ಹೇಳಿದ್ದು ಮತ್ತು ಹೇಳದೆ ಉಳಿದದ್ದು...


 ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ವಿವಾದಾತ್ಮಕ ಹೇಳಿಕೆಗಳನ್ನು ಕುರಿತು ಪ್ರಜಾವಾಣಿಯ ಇಂದಿನ ಅನಾವರಣ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ. ದಿನೇಶ್ ಅವರು ಮೊದಲ ಬಾರಿಗೆ ಅತ್ಯಂತ ಡಿಪ್ಲಮ್ಯಾಟಿಕ್ ಆಗಿ ಇದನ್ನು ಬರೆದಿದ್ದಾರಾ ಅನ್ನುವ ಅನುಮಾನ ನಮಗೆ. ಅನುಮಾನ ಯಾಕೆ ಅನ್ನೋದನ್ನು ಹೇಳುವ ಪ್ರಯತ್ನ ಮಾಡುತ್ತೇವೆ.

ಮಾರ್ಕಂಡೇಯ ಖಟ್ಜು 
ಮಾರ್ಕಂಡೇಯ ಖಟ್ಜು ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಸಿಎನ್‌ಎನ್ ಐಬಿಎನ್‌ನ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ದೇಶದ ಮಾಧ್ಯಮಗಳ ಕುರಿತು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಅಮೀನ್ ಮಟ್ಟು ಬರೆಯುವುದು ಹೀಗೆ: ..... ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ. ಖಟ್ಜು ಹೇಳಿರುವ ಮಾತುಗಳು ಪತ್ರಕರ್ತನ್ನು ಕೆರಳಿಸಿವೆ. ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳು ಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ. ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?....

ನಿಜವಾದ ಮಾತೇ ಇದು? ದೇಶದ ಪತ್ರಕರ್ತರೆಲ್ಲ ಖಡ್ಜು ಮಾತಿನಿಂದ ಕೆರಳಿದ್ದಾರೆಯೇ? ಖಟ್ಜು ಅವರ ವಿರುದ್ಧ ಇಡೀ ಪತ್ರಕರ್ತ ಸಮೂಹವೇ ಕೋಪ ಮಾಡಿಕೊಂಡಿದೆಯೇ? ಖಟ್ಜು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಬಲ್ಲ ಪತ್ರಕರ್ತರೇ ಇಲ್ಲವೇನು? ಬೇರೇನೂ ಬೇಡ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳೋಣ. ಖಟ್ಜು ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿ ಎಷ್ಟೋ ದಿನ ಕಳೆದ ನಂತರ ಪ್ರಜಾವಾಣಿಯಲ್ಲಿ ಒಂದು ತೀವ್ರ ಖಂಡನೆಯ ಸಂಪಾದಕೀಯ ಹೊರಬಂದಿತ್ತು. ಮತ್ತೆ ಒಂದೆರಡು ಪತ್ರಿಕೆಗಳಲ್ಲಿ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!)  ಖಟ್ಜು ಮಾತುಗಳಿಗೆ ಇಡೀ ಪತ್ರಿಕಾ ಸಮೂಹ ಸಿಟ್ಟಿಗೆದ್ದಿದೆ ಎಂದು ಅಮೀನ್‌ಮಟ್ಟು ಯಾಕೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ?

ಹಾಗೆ ನೋಡಿದರೆ ದಿನೇಶ್ ಅವರು ಖಟ್ಜು ಆಡಿರುವ ಎಲ್ಲ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಖಟ್ಜು ಯಾವ ಆದರ್ಶಗಳನ್ನು ಪತ್ರಕರ್ತರಿಂದ ಬಯಸುತ್ತಿದ್ದಾರೋ ಆ ಆದರ್ಶಗಳನ್ನು ಹೊಂದಿರುವ ಅಪರೂಪದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು. ಹೀಗಾಗಿ ಖಟ್ಜು ಅವರು ಮಾಧ್ಯಮಗಳ ಕುರಿತು ಆಡಿರುವ ಅನೇಕ ಮಾತುಗಳಿಗೆ ಅವರ ಪರೋಕ್ಷ ಸಮ್ಮತಿ ಇದೆ. ಖಟ್ಜು ಹೇಳುವ ರೀತಿ ಸರಿಯಿಲ್ಲವೆಂಬುದು ಅವರ ಆಪಾದನೆ. ಖಟ್ಜು ಆರೋಪಗಳೆಲ್ಲವೂ ಹಳೆಯವು ಎಂಬುದು ಅವರ ಟೀಕೆ. (ಹಳೇ ಆರೋಪಗಳು ಅಪ್ರಸ್ತುತ ಯಾಕಾಗಬೇಕು? ಅಷ್ಟಕ್ಕೂ ಈ ಸಂದರ್ಶನದಲ್ಲಿ ಕರಣ್ ಎತ್ತಿದ ಪ್ರಶ್ನೆಗಳಿಗೆ ಖಟ್ಜು ಉತ್ತರಿಸುತ್ತಾ ಹೋಗಿದ್ದಾರಷ್ಟೆ.) ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೇ ಇದ್ದರೆ ಮಾತು ಸೋತುಹೋಗುತ್ತದೆ. ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.

ನ್ಯಾಯಸ್ಥಾನದಲ್ಲಿ ಕುಳಿತುಕೊಂಡವರು ಪ್ರಾಮಾಣಿಕರಾಗಿದ್ದರೂ ಸಣ್ಣಪ್ರಮಾಣದ (ಕೆಲವೊಮ್ಮೆ ದೊಡ್ಡಪ್ರಮಾಣದ) ಬಾಯಿಬಡುಕುತನ ಪ್ರದರ್ಶನ ತೋರುತ್ತಿರುವುದು ದಿನೇಶ್ ಅವರಿಗೆ ಗೊತ್ತಿಲ್ಲದ ವಿದ್ಯಮಾನವೇನೂ ಅಲ್ಲ. ಕರ್ನಾಟಕದ ಉದಾಹರಣೆ ಕೊಡುವುದಾದರೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ನ್ಯಾ.ವೆಂಕಟಾಚಲ ಹಾಗು ನ್ಯಾ ಸಂತೋಷ್ ಹೆಗ್ಡೆ ಅವರಿಬ್ಬರೂ ಈ ಅಪವಾದದಿಂದ ಮುಕ್ತರಾಗಿರಲಿಲ್ಲ. ಆದರೆ ಮಾತು ಅತಿರೇಕವಾಯಿತು ಎನ್ನುವ ಕಾರಣಕ್ಕೂ ಮಾತಿನ ಹಿಂದಿನ ಆಶಯಗಳೆಲ್ಲವೂ ತಿರಸ್ಕಾರಕ್ಕೆ ಯೋಗ್ಯವಾಗುತ್ತವೆಯೇ?

ದಿನೇಶ್ ಅವರೂ ಸೇರಿದಂತೆ ಖಟ್ಜು ಅವರನ್ನು ವಿರೋಧಿಸುತ್ತಿರುವುದು ಅವರು ಸಂದರ್ಶನದಲ್ಲಿ ಆಡಿದ ಕೆಲವು ಸಡಿಲ ಮಾತುಗಳನ್ನು ಮಾತ್ರ. ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ, ಫಿಲಾಸಫಿ ಇತ್ಯಾದಿಗಳಲ್ಲಿ ಪರಿಣತಿ ಇಲ್ಲ ಎಂಬ ಅವರ ಮಾತುಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಪತ್ರಕರ್ತರಿಗೆ ಎಂಬ ಶಬ್ದದ ಹಿಂದೆ ಕೆಲವು ಅಂತಲೋ, ಬಹುತೇಕ ಅಂತಲೋ ಒಂದು ಪದಬಳಕೆಯಾಗಿದ್ದರೆ ಈ ವಿಷಯದ ಚರ್ಚೆಯೇ ಅಸಾಧ್ಯವಾಗುತ್ತಿತ್ತು. ಖಟ್ಜು ಆತುರದಲ್ಲಿ ಅದನ್ನು ಮರೆತಿದ್ದಾರೆ. ಹೀಗಾಗಿ ಪೆನ್ನುಗಳು ಖಡ್ಗಗಳಾಗುತ್ತಿವೆ.

ಖಟ್ಜು ಹೇಳದೇ ಉಳಿದದ್ದನ್ನು ಹೇಳುವ ಆತುರದಲ್ಲಿ ದಿನೇಶ್ ಅವರು ಒಂದು ಸ್ಪಷ್ಟ ಲೋಪವನ್ನು ಉಳಿಸಿದ್ದಾರೆ. ಖಟ್ಜು ಮಾಧ್ಯಮ ಭ್ರಷ್ಟಾಚಾರ, ಕಾಸಿಗಾಗಿ ಸುದ್ದಿ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಆಕ್ಷೇಪಣೆ ತೆಗೆದಿದ್ದಾರೆ. ಕರಣ್ ಜತೆಗಿನ ಸಂದರ್ಶನದಲ್ಲಿ ಖಟ್ಜು ಈ ವಿಷಯಯನ್ನು ಕಟುವಾಗಿಯೇ ಪ್ರಸ್ತಾಪಿಸಿದ್ದಾರೆ. ಹಿಂದೆಲ್ಲ ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರೇ ೧೦,೦೦೦ ರೂ. ಪಡೆದು ಅಭ್ಯರ್ಥಿಗಳ ಪರವಾಗಿ ಬರೆಯುತ್ತಿದ್ದರು. ಇದನ್ನು ಗಮನಿಸಿದ ಮ್ಯಾನೇಜ್‌ಮೆಂಟುಗಳು ತಾವೇ ಲಾಭ ಮಾಡಿಕೊಳ್ಳಲು ಕಾಸಿಗಾಗಿ ಸುದ್ದಿ ದಂಧೆಯನ್ನು ಆರಂಭಿಸಿದವು ಎಂದು ಖಟ್ಜು ಹೇಳಿರುವುದನ್ನು ದಿನೇಶ್ ಪ್ರಮಾದವಶಾತ್ ಮರೆತಿದ್ದಾರೆ. ಒಂದೇ ಪತ್ರಿಕೆಯಯಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಕಾಸಿಗಾಗಿ ಸುದ್ದಿಗಳು ಪ್ರಕಟವಾದಾಗ ಆದ ಅವಾಂತರಗಳನ್ನೂ ಖಟ್ಜು ನೆನಪಿಸಿಕೊಂಡಿದ್ದಾರೆ.

ಬಹಳ ಮುಖ್ಯವಾಗಿ ಖಟ್ಜು ಅವರ ಸಿಟ್ಟು ಇರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು. ಈ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜ್ಯೋತಿಷಿಗಳ ವಿಜೃಂಭಣೆ, ಕ್ರಿಕೆಟ್-ಸಿನಿಮಾಗಳಿಗೆ ದಕ್ಕುವ ಪ್ರಾಶಸ್ತ್ಯ, ತೇಜೋವಧೆ, ಜನಗಳನ್ನು ಉದ್ದೇಶಪೂರ‍್ವಕವಾಗಿ ಒಡೆಯುವ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಖಟ್ಜು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಪ್ರೆಸ್ ಕೌನ್ಸಿಲ್‌ನ ಅಡಿಯಲ್ಲೇ ಈ ಚಾನಲ್‌ಗಳನ್ನೂ ತರುವ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಪ್ರಧಾನಿಗೂ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಪ್ರೆಸ್ ಕೌನ್ಸಿಲ್ ಅನ್ನು ಮೀಡಿಯಾ ಕೌನ್ಸಿಲ್ ಆಗಿ ಬದಲಾಯಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವೇ ಗಂಭೀರವಾಗಿ ಚರ್ಚೆಯಾಗಬೇಕಿತ್ತಲ್ಲವೇ? ಇದಕ್ಕೆ ಹೊರತಾಗಿ ಪತ್ರಕರ್ತರ ಕೌಶಲ್ಯದ ವಿಷಯವೇ ಚರ್ಚೆಯ ವಿಷಯವಾಗಿದ್ದು ಏಕೆ?

ದಿನೇಶ್ ಅಮೀನ್ ಮಟ್ಟು
ಕಡೆಯದಾಗಿ ಪ್ರೆಸ್ ಕೌನ್ಸಿಲ್‌ಗೆ ಇನ್ನೊಂದಿಷ್ಟು ಅಧಿಕಾರ ಬೇಕು ಎಂದು ಖಟ್ಜು ಹೇಳಿದ್ದಾರೆ. ನಿಜವಾಗಿಯೂ ಪತ್ರಿಕೋದ್ಯಮಿಗಳನ್ನು (ಎಲ್ಲಾ ಪತ್ರಕರ್ತರನ್ನಲ್ಲ) ಕೆರಳಿಸಿರುವುದು ಇದೇ ವಿಷಯ. ಖಟ್ಜು ಒಂದು ಬಗೆಯ ಮೂಗುದಾರ ಬೇಕು ಎನ್ನುತ್ತಿದ್ದಾರೆ. ಮಾಧ್ಯಮಗಳು ಹಾದಿ ತಪ್ಪಿ ಹೋಗಿರುವುದರಿಂದಲೇ ಈ ಮೂಗುದಾರದ ಪ್ರಸ್ತಾಪ ಮಾಡುತ್ತಿದ್ದಾರೆ. ಪತ್ರಕರ್ತರು ಒಂದೇ ಸ್ವಯಂ ನಿಯಂತ್ರಣದ ಹಾದಿ ತುಳಿಯಬೇಕು, ಅಥವಾ ಇನ್ಯಾವುದೋ ಸಂಸ್ಥೆಯ-ನ್ಯಾಯಮಂಡಳಿಯ ಮೂಗುದಾರಕ್ಕೆ ಒಳಗಾಗಬೇಕು. ಹೀಗಾಗಿಯೇ ಖಟ್ಜು ಇದನ್ನು ಹೇಳಿದ್ದಾರೆ. ಒಂದು ವೇಳೆ ಹೆಚ್ಚು ಅಧಿಕಾರ ದೊರೆತರೂ,  ತಪ್ಪು ಮಾಡಿದ ಮಾಧ್ಯಮ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವುದು ವಿರಳಾತಿವಿರಳ ಸಂದರ್ಭಗಳಲ್ಲಿ ಎಂದು ಅವರು ಪದೇಪದೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಂಡಿಯಾದ ಮೀಡಿಯಾ ಯಾರ ಅಂಕೆಯಲ್ಲೂ ಇರಲು ಒಲ್ಲದು. ಹೀಗಾಗಿ ಸಕಾರಣವಾಗಿಯೇ ವಿರೋಧಗಳು ಎದ್ದಿವೆ. ರಾಷ್ಟ್ರಮಟ್ಟದ ಪತ್ರಿಕಾ ಸಂಘಟನೆಗಳು ಅಮೀನ್ ಮಟ್ಟು ಹೇಳಿದಂತೆ ಕತ್ತಿ ಝಳಪಿಸುತ್ತಿವೆ. ಹೀಗೆ ಬೇಕಾದವರ ಮೇಲೆ ಕತ್ತಿ ಝಳಪಿಸುವ ಸ್ವಾತಂತ್ರ್ಯ ಮಾಧ್ಯಮಗಳಿವೆ. ಅದನ್ನು ಅವು ಪರಿಪೂರ್ಣವಾಗಿ ಬಳಸಿಕೊಳ್ಳುತ್ತಿವೆ.

ಅಷ್ಟಕ್ಕೂ ಖಟ್ಜು ಹೇಳಿದಂತೆ ಪರಿಪೂರ್ಣವಾದ ಸ್ವಾತಂತ್ರ್ಯ ಎಂಬುದು ಇರಬೇಕಾ? ಸಾರ್ವಜನಿಕ ಬದುಕಿನ ಪ್ರತಿಯೊಬ್ಬರೂ ಯಾರಿಗಾದರೂ ಉತ್ತರದಾಯಿ ಆಗಲೇಬೇಕಲ್ಲವೇ? ಮಾನನಷ್ಟ ಕಟ್ಲೆಗಳಂಥ ಬಹುತೇಕ ಸಂದರ್ಭದಲ್ಲಿ ನಿರುಪಯೋಗಿಯಾದ, ನ್ಯಾಯಕ್ಕಾಗಿ ವರ್ಷಗಟ್ಟಲೆ ಕಾಲ ಅಂಗಲಾಚಬೇಕಾದ ಮಾರ್ಗವನ್ನು ಹೊರತುಪಡಿಸಿದರೆ ಮಾಧ್ಯಮಗಳಿಂದ ನೊಂದವರಿಗೆ ನ್ಯಾಯ ದೊರೆಯುವುದಕ್ಕೆ ಮಾರ್ಗ ಬೇಡವೇ? ಮಾನನಷ್ಟ ಕಟ್ಲೆಯಂಥವು ವೈಯಕ್ತಿಕ ತೇಜೋವಧೆಯಂಥ ಪ್ರಕರಣಗಳಿಗೆ ಸಂಬಂಧಿಸಿದ್ದವು. ಇಡೀ ಸಮಾಜವನ್ನೇ ದಿಕ್ಕುಗೆಡಿಸುವ ಪತ್ರಿಕಾಸಂಸ್ಥೆಗಳನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು? ಸದಾ ಕತ್ತಿಯಂಥ ಪೆನ್ನನ್ನು ಹಿಡಿದುಕೊಂಡೇ ಓಡಾಡುವವರನ್ನು ಎದುರಿಸಿ ನಿಲ್ಲುವವರಾದರೂ ಯಾರು?

ಜನಲೋಕಪಾಲದ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳನ್ನು ಒಪ್ಪಿಸಿದರೆ ಹೇಗೆ ಎಂಬ ಪ್ರಶ್ನೆಯೊಂದನ್ನು ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಮಾಧ್ಯಮ ಭ್ರಷ್ಟಾಚಾರವನ್ನು ಜನಲೋಕಪಾಲಕ್ಕೆ ವಹಿಸಿದರೆ, ಭ್ರಷ್ಟ ಪತ್ರಕರ್ತರಿಗೆ ಶಿಕ್ಷೆಯಾಗಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ಮಾಧ್ಯಮಗಳ ಇತರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಧರ್ಮದ ಹೆಸರಲ್ಲಿ ದೇಶ ಒಡೆಯುವ ಪತ್ರಕರ್ತರನ್ನು ಏನು ಮಾಡುವುದು?  ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಹರಡಿ ಜನರನ್ನು ಪಾತಾಳಕ್ಕೆ ತಳ್ಳುವವರನ್ನೇನು ಮಾಡೋದು? ಖಟ್ಜು ಹೇಳಿದಂತೆ ಹಸಿವು, ದಾರಿದ್ರ್ಯ ದೇಶದ ತುಂಬೆಲ್ಲ ಹರಡಿರುವಾಗ ಕರೀನಾ ಕಪೂರ್, ಐಶ್ವರ್ಯ ರೈಗಳ ಸುತ್ತ ಸುತ್ತುತ್ತ ವಂಚನೆ ಎಸಗುತ್ತಿರುವ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು ಏನು ಮಾಡುವುದು?

ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವುದರಿಂದ, ಮಂಡಳಿಗೆ ಅಧಿಕಾರ ದೊರೆತರೆ ಸರ್ಕಾರ ಮೀಡಿಯಾ ವ್ಯವಹಾರದಲ್ಲಿ ಕೈಹಾಕಬಹುದು ಎಂಬುದು ದಿನೇಶ್ ಹಾಗು ಇದನ್ನು ವಿರೋಧಿಸುತ್ತಿರುವ ಎಲ್ಲರ ಕಾಳಜಿ. ಆದರೆ ಪ್ರಜಾತಂತ್ರದಲ್ಲಿ ನ್ಯಾಯಾಧೀಶರಿಂದ ಹಿಡಿದು ಪೊಲೀಸರವರೆಗೆ ಎಲ್ಲರನ್ನೂ ನೇಮಿಸುವುದು ಸರ್ಕಾರವೇ ಅಲ್ಲವೇ? ಸರ್ಕಾರ ನೇಮಿಸಿದ ಪೊಲೀಸರು ಎಂಬ ಕಾರಣಕ್ಕೆ ಪೊಲೀಸರ ಅಡಿಯಲ್ಲಿ ನಾವು ಬರುವುದಿಲ್ಲವೆಂದು ಸಾಮಾನ್ಯ ಪ್ರಜೆ ಹೇಳಲು ಸಾಧ್ಯವೇ? ಎಲ್ಲರೂ ಸರ್ಕಾರದ ನೀತಿ ನಿರೂಪಣೆಗಳಿಂದ ಹೊರಗಿರಲು ಬಯಸುವುದಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಾದರೂ ಹೇಗೆ?

ಆಧುನಿಕ ಸಮಾಜವಾಗಿ ಬದಲಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ಭಾರತದಲ್ಲಿ ಈ ಸಂಕ್ರಮಣದ ಸ್ಥಿತಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ ಎಂದು ಖಟ್ಜು ಯೂರೋಪ್‌ನ ಉದಾಹರಣೆ ನೀಡಿ ಆಕ್ಷೇಪವೆತ್ತಿದ್ದಾರೆ. ಪತ್ರಕರ್ತರು ಜನಪರವಾಗಿಲ್ಲ ಎಂಬುದು ಅವರ ಮುಖ್ಯ ಹೇಳಿಕೆ. ಇದಲ್ಲವೇ ಮುಖ್ಯವಾಗಿ ಚರ್ಚಿಸಬೇಕಾದ ವಿಷಯ?

ಒಂದಂತೂ ನಿಜ, ನ್ಯಾಯಮಂಡಳಿ ಅಧ್ಯಕ್ಷರ ಹೇಳಿಕೆಗೆ ಈ ಪರಿಯಲ್ಲಿ ಮಾಧ್ಯಮಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಪತ್ರಕರ್ತ ಸಂಘಟನೆಗಳು ವೀರಾವೇಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ, ಒಂದೊಮ್ಮೆ ಸರ್ಕಾರ ಪ್ರೆಸ್ ಕೌನ್ಸಿಲ್‌ಗೆ ಹೆಚ್ಚುವರಿ ಅಧಿಕಾರ ದೊರೆತರೆ ಯಾವ ಪ್ರಮಾಣದಲ್ಲಿ ಗಂಟಲು ಹರಿದುಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗಾಗಿ ಮಾಧ್ಯಮ ಸಂಸ್ಥೆಗಳು ನೆಮ್ಮದಿಯಾಗಿರಬಹುದು. ಅವುಗಳ ಸ್ವೇಚ್ಛೆಗೆ ಅಡ್ಡಿ ಬರುವವರನ್ನು ಅವುಗಳು ಎಂದಿಗೂ ಸಹಿಸಿಕೊಳ್ಳುವುದಿಲ್ಲ.

ದಿನೇಶ್ ಅಮೀನ್‌ಮಟ್ಟು ಹೇಳಬೇಕಾಗಿದ್ದನ್ನು ಪೂರ್ತಿ ಹೇಳಲು ಸಾಧ್ಯವಾಗಿಲ್ಲವೇನೋ? ಹೀಗಾಗಿ ಅವರು ಹೇಳದೇ ಉಳಿದ ಮಾತುಗಳನ್ನು ಹೇಳಲು ಇಲ್ಲಿ ಯತ್ನಿಸಿದ್ದೇವೆ. ಅಷ್ಟಾಗಿಯೂ ಈ ಮಟ್ಟಿಗಿನ ನಿರ್ಭೀತ ಬರವಣಿಗೆಗಾಗಿ ಅವರಿಗೊಂದು ಥ್ಯಾಂಕ್ಸ್.

ಕೊನೆಕುಟುಕು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ. ಸೋಮಣ್ಣ ಜತೆ ಹಮೀದ್ ಪಾಳ್ಯ ಸುವರ್ಣ ನ್ಯೂಸ್‌ನಲ್ಲಿ ಸಂದರ್ಶನ ನಡೆಸಿದರು. ಹಂಗಾದ್ರೆ ನೀವು ಯಾವುದೇ ಅಪರಾಧ ಎಸಗಿಲ್ಲ, ಅವ್ಯವಹಾರ ನಡೆಸಿಲ್ಲ, ನಿಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಅಂತ ನೀವು ಹೇಳ್ತೀರಾ.... ಎಂದು ಹಮೀದ್ ಪದೇ ಪದೇ ಸೋಮಣ್ಣಗೆ ಕೇಳುತ್ತಿದ್ದರು. ಸೋಮಣ್ಣ ಹೇಳಬೇಕಾದ ಮಾತುಗಳನ್ನು ಹಮೀದ್ ಯಾಕೆ ಸಜ್ಜೆಸ್ಟ್ ಮಾಡ್ತಾ ಇದ್ರು? ಸೋಮಣ್ಣ ವಿರುದ್ಧ ದೂರು ದಾಖಲಾದ ನಂತರ ಇದು ರಾಜಕೀಯ ಪ್ರೇರಿತ ದೂರು ಎಂಬ ಅರ್ಥದ ವರದಿಯೊಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸುವರ್ಣದಲ್ಲಿ ಈಗ ಸೋಮಣ್ಣಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಹೀಗಿರುವಾಗ ಲೋಕಾಯುಕ್ತ ಕೋರ್ಟು ಯಾಕೆ ಬೇಕು ಅಲ್ಲವೇ?

Wednesday, November 16, 2011

ವಿನೋದ್ ಮೆಹ್ತಾ ಆತ್ಮಕತೆ ಮತ್ತು ಅದರ ಅನುವಾದ

ನಲವತ್ತು ವರ್ಷಗಳ ಸುದೀರ್ಘ ಕೆಲಸದ ನಂತರವೂ ಒಂದೇ ಒಂದು ಪ್ರೊಮೋಷನ್ ಇಲ್ಲದೆ ಇರುವ ಪತ್ರಕರ್ತ ಬಹುಶಃ  ವಿನೋದ್ ಮೆಹ್ತಾ ಒಬ್ಬರೇ ಇರಬೇಕು. ಕಾರಣ ಇಷ್ಟೆ, ಅವರು ನಾಲ್ಕು ದಶಕಗಳ ಹಿಂದೆ ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ಸಂಪಾದಕರಾಗಿ. ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಅವರು ಪತ್ರಿಕೆಗಳನ್ನು ಬೆಳೆಸಿದ ರೀತಿ, ಲಕ್ಷಾಂತರ ಓದುಗ ಸಮೂಹದ ಯೋಚನೆಗಳನ್ನು ಪ್ರಭಾವಿಸಿದ ಪರಿ ಮಾತ್ರ ರೋಚಕ.
ಅವರ ಆತ್ಮಕತೆ 'Lucknow Boy A Memoir' ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಒಮ್ಮೆ ಓದಲು ಶುರು ಹಚ್ಚಿದರೆ, ಪುಸ್ತಕ ಮುಗಿಸುವ ತನಕ ಅದನ್ನು ಬಿಡುವುದು ತೀರಾ ಕಷ್ಟ. ನೀವು ಪತ್ರಕರ್ತರಾಗಿದ್ದಲ್ಲಿ, ಓದುವ ಹವ್ಯಾಸ ಇದ್ದಲ್ಲಿ, ನೀವು ಓದಲೇಬೇಕಾದ ಪುಸ್ತಕ ಇದು.
ಇತ್ತೀಚೆಗೆ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಪತ್ರಕರ್ತರೊಬ್ಬರು ಆ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತೇನೆಂದು ಹೆದರಿಸಿದ್ದಾರೆ. ಮೆಹ್ತಾ ಮತ್ತು ‘ಆ ಪತ್ರಕರ್ತ’ರಿಗೂ ಅಜಗಜಾಂತರ ವ್ಯತ್ಯಾಸ. ಯಾವ ಕೋನದಿಂದ ನೋಡಿದರೂ, ಇಬ್ಬರನ್ನು ಒಂದೇ ಕಡೆ ನೆನೆಸಿಕೊಳ್ಳಲೂ ಸಾಧ್ಯವಿಲ್ಲ.
ಅವರ ತರ್ಜುಮೆಗಾಗಿ ಕಾಯದೆ, ಮೂಲ ಪ್ರತಿಯನ್ನೇ ಓದಿದರೆ ಸೂಕ್ತ ಎನಿಸುತ್ತದೆ. ಕಾರಣ ಇಷ್ಟೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು, ಪನ್ ಎಲ್ಲವೂ ಮಾಯವಾಗಿಬಿಡುವ ಆತಂಕವಿದೆ. ಏಕೆಂದರೆ, ಅನುವಾದಕ್ಕೆ ಅನುಮತಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಕರ್ತರ ಅನುವಾದ ಕಲೆಗಾರಿಕೆ ಅವರ ಕೈಗೆಳಗೆ ಕೆಲಸ ಮಾಡುವ ಅನೇಕರಿಗೆ ಗೊತ್ತಿರುವ ಸಂಗತಿ. ಹೋಗಲಿ, ಹಟಕ್ಕೆ ಬಿದ್ದು (ಕಚೇರಿಯ ಬೇರೆ ಸಿಬ್ಬಂದಿ ಸಹಾಯವಿಲ್ಲದೆ) ಆ ಮಹಾಶಯರೇ ಸಂಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದರೂ ಅದು ಮೂಲ ಕೃತಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಎರಡು ಮೂರು ದಿನಗಳ ಹಿಂದೆ, ಅವರು ತಮ್ಮ ಅಂಕಣವೊಂದರಲ್ಲಿ ಮೂಲ ಕೃತಿಯ ಒಂದೇ ಒಂದು ಪ್ಯಾರವನ್ನು ಅನುವಾದ ಮಾಡಲು ಹೋಗಿ ಎಡವಿದ್ದಾರೆ. ಹಸಿ ಹಸಿ ತಪ್ಪು ಮಾಡಿದ್ದಾರೆ.
ಇವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದು, ಮೆಹ್ತಾ ಅವರು ಪತ್ರಕರ್ತರು ಉಡುಗೊರೆಗಳನ್ನು ಪಡೆಯಬೇಕೆ ಎನ್ನುವ ವಿಚಾರದ ಬಗ್ಗೆ ಬರೆದದ್ದನ್ನು. ಮೆಹ್ತಾ ಉಡುಗೊರೆಗಳನ್ನು ತಿರಸ್ಕರಿಸುತ್ತಾರೆ. ಇತರೆ ಪತ್ರಕರ್ತರೂ, ತಮ್ಮ ವೃತ್ತಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹಾಗೇ ಮಾಡಬೇಕೆಂದು ಬಯಸುತ್ತಾರೆ. (ಈ ಪ್ರಸ್ತುತ ವಿಚಾರದ ಬಗ್ಗೆ ಮಾತನಾಡಲು ಅಥವಾ ಬರೆಯಲು ಈ ಅನುವಾದಕರು ಎಷ್ಟರ ಮಟ್ಟಿಗೆ ಅರ್ಹರು ಎಂಬುದು ಬೇರೆ ಮಾತು.)
ಈಗ ಮೂಲ ಕೃತಿ ಮತ್ತು ಅವರ ಅನುವಾದವನ್ನು ಗಮನಿಸೋಣ.
Should a journalist take freebies? No. Absolutely Not. Pay your way. For the four decades I’ve been editor, I can claim, hand on heart, that I have never visited a restaurant or stayed in a hotel or travelled in an airline without paying the full bill.
ಪತ್ರಕರ್ತರ ಅನುವಾದ: ಪತ್ರಕರ್ತರಾದವರು ಗಿಫ್ಟ್ ಗಳನ್ನು ಸ್ವೀಕರಿಸಬಹುದಾ? ಅದಕ್ಕೆ ಮೆಹ್ತಾ ಹೇಳೋದೇನೆಂದರೆ – ಬಿಲ್ ಕುಲ್ ಕೂಡದು. ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ನಾನು ಕಳೆದ ನಲವತ್ತು ವರ್ಷಗಳಿಂದ ಸಂಪಾಕನಾಗಿದ್ದೇನೆ, ಎದೆ ಮೇಲೆ ಕೈಯಿಟ್ಟು ಹೇಳುತ್ತೇನೆ, ಯಾವುದೇ ಹೋಟೇಲ್ ನಲ್ಲಾಗಲಿ, ನನ್ನ ಹಣ ಕೊಡದೇ ಉಳಿದಿಲ್ಲ. ಆಹಾರ ಸೇವಿಸಿಲ್ಲ. ಬಿಟ್ಟಿಯಾಗಿ ಯಾವ ವಿಮಾನದಲ್ಲೂ ಪಯಣಿಸಿಲ್ಲ.
(ಈ ಮೇಲಿನ ವಾಕ್ಯದಲ್ಲಿ ಅನುವಾದ ಲೋಪ ಇದೆ ಎಂದು ಹೇಳಲು ಇದನ್ನು ಉದಾಹರಿಸುತ್ತಿಲ್ಲ. ಆಫ್ ಕೋರ್ಸ್ ಮೆಹ್ತಾ ಹೃದಯ ಮುಟ್ಟಿ ಹೇಳಿದರೆ, ಅನುವಾದಕರು ಎದೆ ಮುಟ್ಟಿ ಹೇಳುತ್ತಾರೆ. ಅದರಲ್ಲಿ ಅಂತಹ ಪ್ರಮಾದವೇನಿಲ್ಲ ಬಿಡಿ. ಯಾರೂ ಲಿಟರಲಿ ಹೃದಯ ಮುಟ್ಟಿ ಹೇಳಲಾಗದು. ಆದರೆ ಈ ಅನುವಾದಕರು ಅದೇ ಎದೆಯನ್ನು ಮುಟ್ಟಿಕೊಂಡು ಈ ಮೇಲಿನ ಮಾತುಗಳನ್ನು ತಮ್ಮ ವಿಷಯದಲ್ಲಿ ಹೇಳಿಕೊಳ್ಳಲು ಸಾಧ್ಯವೆ?)
ಮುಂದುವರಿದು ಮೆಹ್ತಾ ಹೇಳುತ್ತಾರೆ. Occasionally, the management makes a fuss and insists on waiving the charges. My escape from the crafty kindness is to joking protest, ‘This is an insult. If you are trying to bribe me, it has to be more than 6000 rupees’ (the usual bill at a five-star restaurant for two people) or ‘If you don’t let me pay I’ll never come again.”
ಅನುವಾದ: “ಈ ವಿಷಯವಾಗಿ ನನ್ನ ಮ್ಯಾನೇಜ್ ಮೆಂಟ್ ಕಿರಿಕಿರಿ ಮಾಡಿದ್ದುಂಟು. ಆಗ ನಾನು ನಗುನಗುತ್ತಲೇ ಪ್ರತಿಭಟಿಸಿದ್ದಿದೆ. “ಇದು ನಿಜಕ್ಕೂ ಅವಮಾನಕರ. ನೀವು ನನಗೆ ಲಂಚ ಕೊಡಬೇಕೆಂದು ನಿರ್ಧರಿಸಿದರೆ, ಆರೇಳು ಸಾವಿರ ರೂಪಾಯಿಗಿಂತ ಹೆಚ್ಚು ಕೊಡಿ. (ಪಂಚತಾರಾ ಹೋಟೆಲ್ ನಲ್ಲಿ ಇಬ್ಬರ ಊಟ-ತಿಂಡಿಗೆ ಇಷ್ಟೇ ಬಿಲ್ ಆಗುತ್ತದೆ.) ನನಗೆ ಹಣ ಕೊಡಲು ಒಪ್ಪದಿದ್ದರೆ ಇನ್ನೆಂದೂ ನಾನು ಹೊಟೇಲ್ ಗೆ ಹೋಗಲಾರೆ”.
ಈಗ ಸೂಕ್ಷ್ಮವಾಗಿ ಮೂಲ ಹಾಗೂ ಅನುವಾದವನ್ನು ಗಮನಿಸಿ. ಮೆಹ್ತಾ ಹೇಳ ಹೊರಟಿರುವುದು, ಹೊಟೇಲ್ ಖರ್ಚುಗಳ ಮನ್ನಾ ವಿಚಾರವಾಗಿ ಒತ್ತಾಯ ಮಾಡಿದಾಗ ಅವರು ತೀರಾ ಸಹಜ ತಮಾಷೆಯಿಂದಲೇ ಪ್ರತಿಭಟಿಸುತ್ತಾರೆ. “ಇದು ಅವಮಾನ. ನೀವು ನನಗೆ ಲಂಚ ಕೊಡುವ ಪ್ರಯತ್ನ ಮಾಡುವುದಾದರೆ, ನೀವು 6,000 ಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ. ನೀವು ನನಗೆ ಹಣ ಕೊಡಲು ಅವಕಾಶ ಮಾಡಿಕೊಡದಿದ್ದರೆ, ಮತ್ತೆಂದೂ ಇಲ್ಲಿಗೆ ಬರುವುದಿಲ್ಲ”.
ಆದರೆ ಹತ್ತಾರು ಪುಸ್ತಕಗಳನ್ನು ಅನುವಾದ ಮಾಡಿರುವ ಮಹಾಶಯರು ಅಸಂಬದ್ಧವಾಗಿ ‘ನಾನು ಇನ್ನೆಂದೂ ಹೋಟೆಲ್ ಗೆ ಹೋಗಲಾರೆ’ ಎಂದು ಅನುವಾದಿಸಿದ್ದಾರೆ. ಕನಿಷ್ಟ ತಮ್ಮ ಅಂಕಣಕ್ಕೆ ಅಗತ್ಯವಾದ ಅನುವಾದವನ್ನು ಅವರೇ ಮಾಡುತ್ತಾರೆಂದು ತಿಳಿಯೋದೆ ಆದರೆ, ಇದು ಅವರಿಂದಲೇ ಆಗಿರುವ ತಪ್ಪು ಗ್ರಹಿಕೆ ಮತ್ತು ತಪ್ಪು ಅನುವಾದ. ಇಂತಹ ಅನುವಾದ ಬೇಕಾ?

Friday, November 4, 2011

ಮಾಧ್ಯಮ ವೃತ್ತಿ ತೊರೆಯಲು ಹೊರಟ ಹುಡುಗನ ಅಂತರಾಳದ ಮಾತುಗಳು...


ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಘೋಷಣೆಯಾಗಿವೆ. ಗೆಳೆಯರೊಬ್ಬರು ಮೇಲ್ ಮಾಡಿದ್ದಾರೆ. ಪ್ರಶಸ್ತಿ ಪಡೆದವರೊಬ್ಬರು ತಮ್ಮ ಸಂಪಾದಕರಿಗೆ ಕಾಲಿಗೆ ಬೀಳಲು ಪ್ರಯತ್ನಿಸುವ ದೃಶ್ಯವೊಂದು ಟಿವಿ ಚಾನಲ್‌ನಲ್ಲಿ ಪ್ರಸಾರವಾಗಿದೆ. ಪತ್ರಿಕೋದ್ಯಮವೂ ಮಠ-ಮಾನ್ಯವಾಗಿ ಹೋಯ್ತಾ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಏನುತ್ತರ ಕೊಡೋದು, ನೀವೇ ಹೇಳಿ.


ಇರ್ಷಾದ್
ಮತ್ತೊಬ್ಬ ಗೆಳೆಯರು ಇರ್ಷಾದ್ ಎಂ. ವೇಣೂರು ಅವರ ಬ್ಲಾಗ್ ಲಿಂಕ್ ಕಳಿಸಿದ್ದಾರೆ. ಇರ್ಷಾದ್ ಹೆಸರು ನೀವು ಕೇಳಿರಬಹುದು. ಪತ್ರಿಕೋದ್ಯಮ ವಿದ್ಯಾರ್ಥಿ. ಇಂಚರ ಎಂಬ ಬ್ಲಾಗ್ ಮೂಲಕ ಬ್ಲಾಗಿಗರಿಗೆ ಪರಿಚಿತರು. ಪತ್ರಿಕೋದ್ಯಮ ಕ್ಷೇತ್ರ ಬಿಡೋಣ ಅಂತಿದ್ದೀನಿ ಎಂದು ಅವರೊಂದು ಲೇಖನ ಬರೆದಿದ್ದಾರೆ. ಆದರ್ಶದ ಕನಸು ಹೊತ್ತ ಹೊಸ ಹುಡುಗ ಹುಡುಗಿಯರಿಗೆ ಮಾಧ್ಯಮ ಕ್ಷೇತ್ರ ಎಷ್ಟು ನಿರಾಶೆ ಮೂಡಿಸುತ್ತಿದೆ ಎನ್ನುವುದಕ್ಕೆ ಈ ಲೇಖನ ಸಾಕ್ಷಿ. ಇರ್ಷಾದ್ ತಮ್ಮ ನಿಲುವು ಬದಲಿಸಲಿ. ಅವರೇ ಹೇಳಿರುವಂತೆ ಮಾಧ್ಯಮಕ್ಷೇತ್ರ ಇಡಿಇಡಿಯಾಗೇನೂ ಕೆಟ್ಟಿಲ್ಲ. ನಿರಾಶೆ ಬೇಡ, ಹತಾಶೆ ಬೇಡ ಎಂಬುದು ನಮ್ಮ ಸಲಹೆ.


-ಸಂಪಾದಕೀಯ.

ಬಹಳ ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. ನನಗಿನ್ನೂ ನನ್ನ ಪ್ರೌಢ ಶಿಕ್ಷಣದ ದಿನಗಳು ನೆನಪಾಗುತ್ತವೆ. ನನ್ನ ಒಬ್ಬ ಪರ್ತಕರ್ತ ಸ್ನೇಹಿತನನ್ನು ಮೆಚ್ಚಿಕೊಂಡು ಈ ಬದುಕಿನಲ್ಲಿ ಏನಾದರೂ ಮಾಡಬೇಕೂಂತ ಮರುದಿನವೇ ನಾನೊಬ್ಬ ಪರ್ತಕರ್ತನಾಗುತ್ತೇನೆ ಎಂಬ ನಿರ್ಣಯ ಮಾಡಿದವನು ನಾನು. ಅಪ್ಪ ಅಮ್ಮನ ಬೈಗುಳಗಳ ಸುರಿಮಳೆ ಸಹಿಸಿಕೊಂಡು ಎಸ್‌ಎಸ್‌ಎಲ್‌ಸಿ ಬಳಿಕ ಸೈನ್ಸ್ ತೆಗೆದುಕೊಳ್ಳುವ ಅರ್ಹತೆ ಇದ್ದರೂ ಆರ್ಟ್ಸ್ ತೆಗೆದುಕೊಂಡೆ. ಬರವಣಿಗೆಯನ್ನೂ ಶುರು ಹಚ್ಚಿಕೊಂಡಿದ್ದೆ ಪ್ರಜಾವಾಣಿಯ ಮುಖಾಂತರ.

ಪದವಿಗೆ ಬಂದಾಗ ಬರವಣಿಗೆಯ ಹಸಿವು ಹೆಚ್ಚಾಯಿತು. ನನ್ನ ಹೆಸರು ಎಲ್ಲೋ ಓದಿದ್ದೇನೆ ಎಂಬ ಪ್ರತಿಕ್ರಿಯೆ ಕಂಡವರಿಂದ ಬರುವ ಮಟ್ಟಿಗೆ ನನ್ನ ಗುರುತು ಸಿಕ್ಕಿತ್ತು. ನನ್ನ ಪತ್ರಿಕೋದ್ಯಮದ ತುಡಿತವೂ ಹೆಚ್ಚಾಯಿತು. ರಜೆ ದಿನವೂ ಫೀಲ್ಡ್‌ಗಿಳಿಯುತ್ತಿದ್ದೆ. ನನ್ನ ಕ್ಯಾಮರಾ ಹಿಡಿದುಕೊಂಡು ಬೈಕ್ ಏರಿ ಹೊರಟೆನೆಂದರೆ ಹೊತ್ತು - ಊಟ ಯಾವುದರ ಪರಿವೆ ಇಲ್ಲದೆ ಸಮಾಜದ ಜೊತೆ ಬೆರೀತಿದ್ದೆ. ಸ್ಪೆಷಲ್ ಫೀಚರ್ ಸ್ಟೋರಿಗಳನ್ನು ಮಾಡುತ್ತಿದ್ದೆ. ಮಾನವೀಯ ದೃಷ್ಟಿಯಲ್ಲಿ ಹಲವರ ನೋವಿಗೆ ಕಿವಿಯಾಗುತ್ತಿದ್ದೆ. ಪದವಿಯ ದಿನದಲ್ಲೇ ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಬರವಣಿಗೆ - ಪತ್ರಿಕೋದ್ಯಮ - ಛಾಯಾಗ್ರಹಣ ಕುರಿತಾದ ಪಾಠ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ನಾನು ಸುವರ್ಣಾವಕಾಶ ಎಂದು ಸ್ಟೂಡೆಂಟ್ ರಿಪೋರ್ಟರ್ ಆಗಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶಿದ್ದೆ.

ಪತ್ರಿಕೋದ್ಯಮ ಎಂದರೆ ಏನು ಎಂದು ನನಗೆ ೯೯% ತಿಳಿದದ್ದು ಅಲ್ಲೇ. ಇಂಥಾ ಕಚ್ಡಾ ಕ್ಷೇತ್ರಕ್ಕೆ ನಾನು ಬಂದೆನಾ ಎಂಬ ಪಾಪ ಪ್ರಜ್ಞೆ ಕಾಡಿದ ಮೊದಲ ದಿನವದು. ಬಕೆಟ್ ಹಿಡಿದವನೇ ಅಲ್ಲಿ ಬಾಸು. ನಿಯತ್ತಿಂದ ಕೆಲಸ ಮಾಡುವವನು ಕಾಲಡಿಯ ಕಸ. ಎಲ್ಲರನ್ನೂ ಚೆನ್ನಾಗಿಟ್ಟುಕೊಂಡರೆ ಮಾತ್ರ ಅಲ್ಲಿರಬಹುದು. ಎಲ್ಲರ ಸಹಕಾರವೂ ಇರುತ್ತದೆ. ನೀಯತ್ತು - ನೀತಿ ಎಂದೆಲ್ಲಾ ಒನ್ ಮ್ಯಾನ್ ಆರ್ಮಿ ಆಗಹೊರಟರೆ ನಮಗೇ ಗುಂಡಿ ತೋಡುವ ಜನ! ಎಲ್ಲಾ ಬಿಟ್ಟು ರಿಯಾಲಿಟೀ ಶೋ ಎಂದು ಮಾಡಿ, ಬಹುಮಾನದ ಹಣ ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಊರಿಗೆ ಬಸ್ ಹತ್ತಿಸುವ ಜನಾನೇ ಅಲ್ಲಿರುವವರು. ಎಲ್ಲಾ ತಿಳಿದಾಗ ನಾನು ಅಲ್ಲಿಂದ ಹೊರಬಂದಿದ್ದೆ. ಜಾಬ್ ಆಫರ್ ಕೊಡುತ್ತೇವೆ ಎಂಬ ಆಫರ್ ಬಿಟ್ಟು.

ಮೊನ್ನೆ ಅಡ್ವಾಣಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಭೂಪಾಲದಲ್ಲಿ ಯಾತ್ರೆಯ ಪ್ರಚಾರಕ್ಕೆ ಬಿಜೆಪಿ ಸಂಸದ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರಿಗೆ ನೋಟು ನೀಡಿದ ವಿಚಾರ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಗಿಯೂ ಪ್ರಚಾರವಾಗಲಿಲ್ಲ. ಅದೇ ವರದಿ ಹಿಂದೂ ಪತ್ರಿಕೆಯಲ್ಲಿ ಲೀಡ್ ನ್ಯೂಸ್ ಆಗಿ ಓದಲು ಸಹಕಾರಿಯಾಯ್ತು. ಹಾಗಾದರೆ ಸಾಮಾನ್ಯ ಜನರಿಗೆ ವರದಿ ಮುಟ್ಟಿಸಬೇಕಾದ ಪರ್ತಕರ್ತರು ಮುಚ್ಚಿಹಾಕುವ ಕೆಲಸಕ್ಕಿಳಿದರೆ ಯಾಕೆ ಬೇಕು ಈ ಕ್ಷೇತ್ರ?

ಲಂಚಗುಳಿತನ ಪತ್ರಿಕೋದ್ಯಮಕ್ಕೂ ಆವರಿಸಿರುವಾಗ ಅಣ್ಣಾ ಹಜಾರೆಯನ್ನು ಬೆಂಬಲಿಸಿ ಬರೆಯುವ ಯಾವ ನೈತಿಕತೆ ನಮ್ಮಲ್ಲಿದೆ. ರಾಜಾ ಹಗರಣ ಬಯಲಿಗೆಳೆದಂತೆ ನಮ್ಮ ಪ್ರತಿಷ್ಠಿತ ಫಿಕ್ಸ್ ಆಗಿರುವ ಪರ್ತಕರ್ತರ ಹಗರಣ ಬಯಲುಗೊಂಡರೆ ಹೇಗಾಗಬಹುದು ನಮ್ಮ ಸ್ಥಿತಿ. ಬಹುಶಃ ರಸ್ತೆ ಮಧ್ಯ ನಿಲ್ಲಿಸಿ ಬೆತ್ತಲು ಜಗತ್ತು ತೋರಿಸಿದಂತಾಗಬಹುದು! ಹಲವು ವರ್ಷಗಳಿಂದ ನಾನು ವಸ್ತುನಿಷ್ಠ ಸುದ್ದಿ ಪತ್ರಿಕೆ ಎಂದು ಕನ್ನಡದ ಪತ್ರಿಕೆಯೊಂದನ್ನು ಓದುತ್ತಿದ್ದೆ. ಆದರೆ ಆ ಪತ್ರಿಕೆಗೆ ಪತ್ರಿಕಾವಲಯದ ಆಪರೇಷನ್ ಕಮಲ ಆದ ನಂತರ ಓದಿ ಓದಿ ಬೇಸತ್ತು ಹೋಗಿತ್ತು. ಮೊನ್ನೆ ಹೋಗಿ ಏಜಂಟನಿಗೆ ಒಂದೇ ಪತ್ರಿಕೆ ಸಾಕು. ಎರಡು ಬೇಡ ಎಂದು ಹೇಳಿ ಬಂದೆ.

ರಾಜಕಾರಣಿ ಹೇಳಿದ್ದನ್ನು ಪರ್ತಕರ್ತ ಕೇಳುವುದಾದರೆ, ಅವರನ್ನು ಕೇಳಿ ಬರೆಯುವುದಾದರೆ ಯಾವ ಕರ್ಮಕ್ಕೆ ಈ ಪ್ರೆಸ್ ಕಾರ್ಡ್. ಪರ್ತಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸಬೇಕಾದ ಪ್ರೆಸ್‌ಕ್ಲಬ್‌ಗಳು ಪರ್ತಕರ್ತನಿಗೆ ಅನ್ಯಾಯವಾಗುವಾಗ ಬಾಯಿ ಮುಚ್ಚಿ ಬಾಗಿಲು ಹಾಕಿಕೊಳ್ಳುವುದಾದರೆ ಯಾಕೆ ಬೇಕು ಆ ಕ್ಲಬ್‌ಗಳು. ಕೇಳಲು ಪ್ರಶ್ನೆಗಳು ಬಹಳ ಇದೆ. ಆದರೆ ಉತ್ತರಿಸುವ ತಾಕತ್ತು ಯಾರಲ್ಲಿದೆ?

ನನ್ನೂರಿನ ಹತ್ತಿರ ಒಂದು ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆ ಇದೆ. ಆ ಸಂಸ್ಥೆಯ ಮುಖ್ಯಸ್ಥ ಮಾಡುತ್ತಿರುವು ಅನಾಚಾರಗಳನ್ನೇ. ಆ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗೆ ಏನೋ ಸಮಸ್ಯೆಯಿಂದ ಕಾಲೇಜು ಬದಲಾಯಿಸಬೇಕಾಗಿ ಬಂದರೆ ಟಿ.ಸಿ ಬೇಕಾದರೆ ಮುಂದಿನ ಎರಡೂ ವರ್ಷಗಳ ಫೀಸು ಭರಿಸಬೇಕು. ಹಾಗಾದರೆ ಮಾತ್ರ ಟಿ.ಸಿ. ಸಿಗುತ್ತದೆ. ಇಲ್ಲದಿದ್ದರೆ ಹಳೆ ಗಂಡನ ಪಾದವೇ ಗತಿ. ಎಷ್ಟೇ ಕಷ್ಟವಾದರೂ ಕೂಡ. ಮಂಗಳೂರಿನ ಎಸ್‌ಇಝೆಡ್ ಗೆ ಆ ಸಂಸ್ಥೆಯ ಮುಖ್ಯಸ್ಥ ಪರವಾಗಿದ್ದಾಗ ಸಂತ್ರಸ್ತ ಜನರು ಪತ್ರಿಕಾಗೋಷ್ಠಿ ಆಯೋಸಿದ್ದರು. ನಾನು ಇಂಟರ್ನ್‌ಶಿಪ್ ಮಾಡುತ್ತಿದ್ದಾಗಿನ ಘಟನೆ ಅದು. ನಾನು ಅದನ್ನು ವರದಿ ಮಾಡಿ ನನ್ನ ಚೀಫ್‌ಗೆ ನೀಡಿದಾಗ ಆತ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದ. ಅವರ ಬಗ್ಗೆ ವರದಿ ಬರಿಬೇಡಿ, ಅದು ನಮ್ಮ ಜಾಹಿರಾತು ಪಾರ್ಟಿ ಎಂಬ ತಾಕೀತು ಬೇರೆ! ಅಷ್ಟೇ ಏಕೆ ಆ ಕಾಲೇಜಿನಲ್ಲಿ ದುರ್ಘಟನೆ ನಡೆದ ವರದಿಗಳು ತನ್ನನ್ನೇ ಮಾರಿಕೊಂಡ ಆ ಪತ್ರಿಕೆಯಲ್ಲಿ ಇಂದಿಗೂ ...... ಸಮೀಪದ ಖಾಸಗಿ ಕಾಲೇಜು ಎಂಬ ಲೀಡ್ನಲ್ಲಿ ಪ್ರಕಟಗೊಳ್ಳುತ್ತದೆ. ಪತ್ರಿಕೆಯ ಜೊತೆ ಹಾಗೆ ಬರೆಯಲಿಕ್ಕೆ ಅವನಿಗೂ ಜಾಹಿರಾತು ಸಿಗುತ್ತದೆ! ಇದು ವಸ್ತುನಿಷ್ಠ ಪತ್ರಿಕೋದ್ಯಮ!

ಹಾಗಂತ ಪತ್ರಿಕೋದ್ಯಮ ಸಂಪೂರ್ಣ ಕೊಳೆತು ನಾರುತ್ತಿದೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಪತ್ರಿಕೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದೆ. ಅಷ್ಟೇ ಸಂತೃಪ್ತಿಯಿಂದ ಅವರ ಹೊಟ್ಟೆ ತುಂಬಿಸುತ್ತಿದೆ.

ಒಮ್ಮೊಮ್ಮೆ ನನಗೆ ನನ್ನ ಮೇಲೆನೇ ಬೇಜಾರು ಬಂದು ಬಿಡುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಇಂದಿಗೂ ಇಲ್ಲಿ ನೀವು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದೆಲ್ಲಾ ಭರವಸೆ ಆಸೆ ಆಂಕಾಂಕ್ಷೆ, ಕನಸುಗಳನ್ನು ತುಂಬುತ್ತಿದ್ದೇನೆ. ನನ್ನ ಕೆಲವೊಂದು ಅನುಭವಗಳನ್ನು ಅವರ ಮುಂದಿಡುತ್ತೇನೆ. ಅವರು ಅದನ್ನು ಚೆನ್ನಾಗಿ ನಂಬಿ ನನ್ನನ್ನೇ ರೋಲ್ ಮಾಡೆಲ್ ಎಂದು ಭಾವಿಸುತ್ತಿದ್ದಾರೆ. ಆದರೆ ಬಾಯಿಯ ಒಳಗಿರುವುದು ಹುಳುಕು ಎಂಬ ಸತ್ಯ ಅವರಿಗೆ ಹೇಳಬೇಕೆಂದು ಮನಸು ಬಯಸುತ್ತೆ. ಕೂಡಲೇ ಸುಮ್ಮನಾಗುತ್ತದೆ.

ನನ್ನದೀಗ ಸ್ನಾತಕೋತ್ತರ ಪದವಿ ಶಿಕ್ಷಣ. ಅದೂ ಪತ್ರಿಕೋದ್ಯಮದಲ್ಲೇ. ಮಳೆ ನಿಂತು ಹೋದ ಮೇಲೆ ಎಂಬಂತೆ ಈಗ ನನಗಾಗಿರುವುದು ಜ್ಞಾನೋದಯಾನೋ ಅಥವಾ ವೈರಾಗ್ಯನೋ ಅಂತ ನನಗೆ ಮಾತ್ರ ಗೊತ್ತಿಲ್ಲ. ಹಾಗಂತ ಇನ್ನೇನೂ ಮಾಡೋಕಾಗಲ್ಲ ಅಂತಾನೂ ಗೊತ್ತು. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. ಫ್ರೀಲಾನ್ಸರ್ ಆಗುತ್ತೇನೆ. ಜೊತೆಗೆ ನಾಳೆ ಪಾಠ ಮಾಡುವ ಅವಕಾಶ ಬಂದರೆ ಮತ್ತೆ ನನ್ನ ವಿದ್ಯಾರ್ಥಿಗಳಲ್ಲಿ ಆಸೆಯ ಬೀಜ ಬಿತ್ತುತ್ತೇನೆ. ಎಷ್ಟಾದರೂ ಇದು ಮುಖವಾಡದ ಬದುಕು ಅಲ್ವಾ?

Tuesday, November 1, 2011

ಕನ್ನಡ ರಾಜ್ಯೋತ್ಸವವೂ, ನಮ್ಮ ಸುದ್ದಿವಾಹಿನಿಗಳ ಕನ್ನಡಾಭಿಮಾನವೂ...


ಇವತ್ತು ಕನ್ನಡ ರಾಜ್ಯೋತ್ಸವ. ಕನ್ನಡ ಮಾಧ್ಯಮಗಳಿಗೆ ನಾಡಪ್ರೇಮ ಉಕ್ಕಿ ಹರೀತಾ ಇದೆ. ತುಂಬಾ ಸಂತೋಷದ ವಿಷಯ. ಕನ್ನಡ ಪತ್ರಿಕೆಗಳ ಕನ್ನಡ ಪ್ರೀತಿಗೆ ಒಂದು ಅರ್ಥವಿದೆ. ಕನ್ನಡದ ವಿಷಯ ಬಂದಾಗ ಪತ್ರಿಕೆಗಳು ಸದಾ ಕಾಲಕ್ಕೂ ಧ್ವನಿ ಎತ್ತುತ್ತ ಬಂದಿವೆ. ಕನ್ನಡ ಭಾಷೆ-ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ವದ್ದು. ಹೀಗಾಗಿ ಇವತ್ತು ಎಲ್ಲ ಕನ್ನಡ ಪತ್ರಿಕೆಗಳು ರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಸಂಚಿಕೆಗಳು ಖುಷಿ ಕೊಡುತ್ತವೆ.

ಕನ್ನಡ ಸುದ್ದಿವಾಹಿನಿಗಳಿಗೂ ಇವತ್ತು ಕನ್ನಡಾಭಿಮಾನ ಹುಚ್ಚು ಹೊಳೆಯಂತೆ ಹರಿಯುತ್ತಿದೆ. ಇದೂ ಕೂಡ ಸಂತೋಷದ ವಿಷಯವೇ ಹೌದು. ಆದರೆ ಸುದ್ದಿವಾಹಿನಿಗಳ ವಿಷಯದಲ್ಲಿ ಕೆಲವೊಂದು ಆಕ್ಷೇಪಣೆಗಳು ನಮಗಿವೆ. ಆಕ್ಷೇಪಣೆಗಳಿರುವುದರಿಂದಲೇ ಸುದ್ದಿವಾಹಿನಿಗಳ ಕನ್ನಡಪ್ರೇಮ ಅತ್ಯಂತ ಕೃತಕವಾಗಿಯೂ ಕಾಣುತ್ತದೆ.

ಮೊದಲನೆಯದಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಪರಭಾಷಾ ಚಿತ್ರಗಳ ಮೋಹ ಹದ್ದು ಮೀರಿ ಹೋಗಿದೆ. ನಿಜ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಎಂಬುದು ವಾಸ್ತವ. ಗಣನೀಯ ಸಂಖ್ಯೆಯಲ್ಲಿ ಕನ್ನಡಿಗರೂ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂಬುದೂ ನಿಜ. ಕಲೆಗೆ ಭಾಷೆಯ ಗಡಿ ರೇಖೆ ಇರುವುದಿಲ್ಲ ಎನ್ನುವದನ್ನೂ ಒಪ್ಪಿಕೊಳ್ಳೋಣ.

ಆದರೆ ಇವತ್ತು ಕರ್ನಾಟಕದ ಯಾವ ಮೂಲೆಯಲ್ಲಾದರೂ ಹೋಗಿ ನೋಡಿ. ಕನ್ನಡೇತರ ಟಿವಿ ಚಾನಲ್‌ಗಳು ಪ್ರಸಾರವಾಗುತ್ತವೆ. ಅವುಗಳಿಗೆ ಕೇಬಲ್ ಆಪರೇಟರ್‌ಗಳು ಯಾವ ಅಡೆತಡೆಯನ್ನೂ ಮಾಡಿಲ್ಲ. ಪರಭಾಷಾ ಚಿತ್ರಗಳ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮಗಳು ಈ ಪರಭಾಷಾ ಚಾನಲ್‌ಗಳಲ್ಲೇ ಲಭ್ಯವಾಗಿರುವುದರಿಂದ ಕನ್ನಡ ಚಾನಲ್‌ಗಳಲ್ಲೂ ಅದೇ ಚರ್ವಿತ ಚರ್ವಣ ವರದಿಗಳು ಯಾಕೆ? ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿ ಬೇಕಿರುವವರು ಅದೇ ಭಾಷೆಯ ಚಾನಲ್‌ಗಳನ್ನು ನೋಡುತ್ತಾರೆ, ನೋಡಿಕೊಳ್ಳಲಿ. ಕನ್ನಡಿಗರ ಗಂಟಲಿಗೂ ಈ ಬಲವಂತದ ಅಡುಗೆಯನ್ನು ತುಂಬುವುದು ಯಾಕೆ?

ಇದು ಆರಂಭವಾಗಿದ್ದು ಟಿವಿ೯ ಮೂಲಕ. ಟಿವಿ೯ ಆಂಧ್ರಪ್ರದೇಶ ಮೂಲದ ಚಾನಲ್. ಹೀಗಾಗಿ ಟಿವಿ೯ ತೆಲುಗು ಪ್ರಸಾರ ಮಾಡುವ ಕಾರ್ಯಕ್ರಮಗಳ ದೃಶ್ಯಗಳನ್ನೇ ಬಳಸಿ ಟಿವಿ೯ ಕನ್ನಡ ಕೂಡ ತೆಲುಗು ಚಿತ್ರಗಳನ್ನು ವೈಭವೀಕರಿಸುವ ಕೆಲಸ ಆರಂಭಿಸಿತು. ತೆಲುಗು ಚಿತ್ರನಟ-ನಟಿಯರ ಜನ್ಮದಿನಗಳಂದು ಗಂಟೆಗಟ್ಟಲೆ ಕಾಲ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ತೆಲುಗು ಸಿನಿಮಾಗಳು ಬಿಡುಗಡೆಯಾಗುವ ಸಂದರ್ಭದಲ್ಲಂತೂ ಅತಿರೇಕದ ಪ್ರಚಾರ ನೀಡಲಾಯಿತು. ಇದೊಂದು ರೀತಿಯಲ್ಲಿ ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿ ಪ್ರಚಾರ ಕೊಡುವ, ಆ ಚಿತ್ರಗಳ ಮಾರುಕಟ್ಟೆ ಹೆಚ್ಚಿಸುವ ಪ್ರಯತ್ನದ ಹಾಗೇ ಕಾಣಿಸಿತು.

ಇದೇ ರೋಗ ಈಗ ಎಲ್ಲ ಚಾನಲ್‌ಗಳಿಗೂ ಅಂಟಿಕೊಂಡಿದೆ. ಸುವರ್ಣ ನ್ಯೂಸ್ ಮತ್ತು ಸಮಯ ಟಿವಿಯಲ್ಲೂ ಈಗ ಪರಭಾಷಾ ಸಿನಿಮಾಗಳ ಬಗ್ಗೆ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದು ಯಾಕೆ ಬೇಕು ಎಂಬ ಪ್ರಶ್ನೆಗೆ ಸಮರ್ಥನೀಯ ಉತ್ತರ ಚಾನಲ್ ನಡೆಸುವವರಲ್ಲಿ ಇದೆಯೋ ಇಲ್ಲವೋ ನಮಗಂತೂ ಗೊತ್ತಿಲ್ಲ.

ಎರಡನೆಯ ಆಕ್ಷೇಪಣೆ ಶೀರ್ಷಿಕೆಗಳಿಗೆ ಸಂಬಂಧಿಸಿದ್ದು. ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮಗಳ ಶೀರ್ಷಿಕೆಗಳಂತೂ ಪೂರ್ಣ ಇಂಗ್ಲಿಷ್‌ಮಯವಾಗಿ ಹೋಗಿದೆ. ಒಂದೆರಡು ಶೀರ್ಷಿಕೆಗಳು ಇಂಗ್ಲಿಷ್‌ನಲ್ಲಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಇಂಗ್ಲಿಷ್‌ನ ಸಾಕಷ್ಟು ಶಬ್ದಗಳು ಕನ್ನಡದೊಂದಿಗೆ ಬೆರೆತು ಹೋಗಿವೆ. ಅವುಗಳನ್ನು ಬಳಸುವುದು ತಪ್ಪಲ್ಲ. ಆದರೆ ಎಲ್ಲ ಶೀರ್ಷಿಕೆಗಳು ಇಂಗ್ಲಿಷಿನಲ್ಲೇ ಇರಬೇಕೆ? ಒಳ್ಳೆಯ ಕನ್ನಡ ಶೀರ್ಷಿಕೆಗಳನ್ನು ಇಡಲು ಸಾಧ್ಯವಿಲ್ಲವೇ?

ಕನ್ನಡ ಚಾನಲ್‌ಗಳನ್ನು ನಡೆಸುವ ಪತ್ರಕರ್ತರಿಗೆ ಕನ್ನಡ ಶೀರ್ಷಿಕೆಗಳನ್ನು ಇಡುವುದಕ್ಕೆ ಒಂದು ಬಗೆಯ ಕೀಳರಿಮೆ. ಇಂಗ್ಲಿಷ್ ಶೀರ್ಷಿಕೆ ಇಟ್ಟರೆ ಕಾರ್ಯಕ್ರಮಗಳು ಜನಪ್ರಿಯವಾಗುತ್ತವೆ ಎಂಬ ಮೂಢನಂಬಿಕೆ. ಕನ್ನಡದ ಶೀರ್ಷಿಕೆ ಇಟ್ಟು, ಆ ಶೀರ್ಷಿಕೆಯನ್ನೇ ಜನಪ್ರಿಯಗೊಳಿಸುವ ಧೈರ್ಯ, ಸಾಮರ್ಥ್ಯ ಇವರುಗಳಿಗೆ ಇದ್ದಂತೆ ಇಲ್ಲ. ಹೀಗಾಗಿ ಇಂಗ್ಲಿಷ್ ಚಾನಲ್‌ಗಳ ಹಾಗೆ ನ್ಯೂಸ್ ಅಟ್ ನೈನ್, ೯ ಪಿಎಂ ನ್ಯೂಸ್, ಬ್ರೇಕ್ ಫಾಸ್ಟ್ ನ್ಯೂಸ್, ಮಾರ್ನಿಂಗ್ ಕಾಫಿ, ಲೇಡೀಸ್ ಕ್ಲಬ್, ವಾರಂಟ್, ಚಾರ್ಜ್‌ಶೀಟ್, ಫಿಲ್ಮಿ ಫಂಡಾ ಇತ್ಯಾದಿ ಹೆಸರುಗಳನ್ನೇ ಇಡುತ್ತಾರೆ. ಕನ್ನಡದ ಹೆಸರುಗಳನ್ನು ಇಟ್ಟು ಅವುಗಳನ್ನೇ ಜನರ ನಾಲಿಗೆ ತುದಿಗೆ ತರುವುದಕ್ಕೂ ಒಂದು ಯೋಗ್ಯತೆ ಬೇಕಲ್ಲವೇ?

ಈ ಇಂಗ್ಲಿಷ್ ರೋಗವನ್ನು ಹರಡಲು ಶುರು ಮಾಡಿದ್ದು ಹಾಯ್ ಬೆಂಗಳೂರು ಪತ್ರಿಕೆ. ಹಲೋ, ಬಾಟಮ್ ಐಟಮ್, ಫೀಡ್ ಬ್ಯಾಕ್, ಸಾಫ್ಟ್ ಕಾರ್ನರ್, ಖಾಸ್‌ಬಾತ್ ಇತ್ಯಾದಿ ಶೀರ್ಷಿಕೆಗಳನ್ನು ಆರಂಭಿಸಿದ್ದು ರವಿ ಬೆಳಗೆರೆ. ನಂತರ ಇದು ಎಲ್ಲ ಕಡೆಗೂ ವಿಶೇಷವಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಹಬ್ಬಿತು. ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳ ಅಬ್ಬರದ ನಂತರವಂತೂ ಇಂಗ್ಲಿಷ್ ಹೆಸರುಗಳಿದ್ದರೆ ಮಾತ್ರ ಕಾರ್ಯಕ್ರಮ ಓಡುತ್ತವೆ ಎಂಬ ದರಿದ್ರ ಮೌಢ್ಯಕ್ಕೆ ವಾಹಿನಿಗಳು ಅಂಟಿಕೊಂಡವು.

ಮೂರನೆಯದಾಗಿ ಕನ್ನಡ ಸುದ್ದಿವಾಹಿನಿಗಳು ಬಳಸುವ ಭಾಷೆ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ನಿರೂಪಕರು, ವರದಿಗಾರರು ಬಳಸುವ ಕನ್ನಡವನ್ನು ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಒಂದು ವಾಕ್ಯದಲ್ಲಿ ಕನಿಷ್ಠ ನಾಲ್ಕೈದಾದರೂ ಇಂಗ್ಲಿಷ್ ಪದಗಳನ್ನು ಬಳಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಇವರುಗಳು ಮಾತನಾಡುತ್ತಾರೆ. ಕನ್ನಡ ಭಾಷೆಯ ಕುರಿತ ಪ್ರಾಥಮಿಕ ಜ್ಞಾನವೂ ಇಲ್ಲದವರೆಲ್ಲ ನಿರೂಪಕರು, ವರದಿಗಾರರಾಗಿರುವುದು ಇದಕ್ಕೆ ಕಾರಣ. ತಮಾಶೆಯೆಂದರೆ ಬಹುತೇಕ ಟಿವಿ ವರದಿಗಾರರು, ನಿರೂಪಕರಿಗೆ ತಪ್ಪಿಲ್ಲದಂತೆ ಒಂದು ಪ್ಯಾರಾ ಕನ್ನಡದಲ್ಲಿ ಬರೆಯಲೂ ಸಹ ಬರುವುದಿಲ್ಲ. ಚಾನಲ್‌ಗಳಲ್ಲಿ ಕೆಲಸ ಮಾಡುವವರಿಗೆ ಮಾತನಾಡುವುದಷ್ಟೇ ಗೊತ್ತಿದ್ದರೆ ಸಾಕು, ಬರೆಯಲು ಬರಬೇಕಿಲ್ಲ ಎಂಬ ವಾತಾವರಣ ಇದೆ. ಕನಿಷ್ಠ ತಮ್ಮ ಚಾನಲ್ ಕೆಲಸಗಾರರಿಗೆ ಕನ್ನಡ ಪ್ರಾಧ್ಯಾಪಕರಿಂದ ತರಬೇತಿ ಕೊಡುವ ಕೆಲಸವನ್ನೂ ಸಂಸ್ಥೆಗಳು ನಡೆಸುವುದಿಲ್ಲ. ಹೀಗಾಗಿ ಟಿವಿ ಚಾನಲ್‌ಗಳು ಮಾತಾಡಿದ್ದೇ ಕನ್ನಡ ಎನ್ನುವಂತಾಗಿದೆ.

ಕನ್ನಡ ರಾಜ್ಯೋತ್ಸವದ ದಿನ ಮುಖಕ್ಕೆ ಚಿತ್ರವಿಚಿತ್ರವಾಗಿ ಹಳದಿ ಕೆಂಪು ಬಣ್ಣ ಮೆತ್ತಿಕೊಂಡು, ಚಾನಲ್ ಲೋಗೋ ಪಕ್ಕದಲ್ಲಿ ಕನ್ನಡ ಬಾವುಟವನ್ನು ಪಟಪಟಿಸುವಂತೆ ಮಾಡಿದರೆ ಸಾಲದು, ಕನ್ನಡದ ಹೆಸರಿನಲ್ಲಿ ಚಾನಲ್ ನಡೆಸುತ್ತಿರುವ ಕಾರಣಕ್ಕಾದರೂ ಕನ್ನಡದ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವನ್ನು ಈ ವಾಹಿನಿಗಳು ಮಾಡುವಂತಾಗಲಿ. ಇದು ರಾಜ್ಯೋತ್ಸವ ಸಂದರ್ಭದಲ್ಲಿ ಈ ವಾಹಿನಿಗಳಿಗೆ ನಮ್ಮ ವಿನಮ್ರ ಮನವಿ.

ಅಂದಹಾಗೆ, ಎಲ್ಲ ಸಂಪಾದಕೀಯದ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Saturday, October 29, 2011

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ


ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ. 

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,

ಮುರುಗೇಶ್ ನಿರಾಣಿ
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ  ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ.  ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ?  ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ?  ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ರಾಜೀವ್ ಚಂದ್ರಶೇಖರ್
ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ... ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಸೋಮಶೇಖರ ಪಡುಕೆರೆ
ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ?  ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ.  ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು.  ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

Thursday, October 27, 2011

ಕೆಜಿಎಫ್‌ನಲ್ಲಿ ಮತ್ತೆ ಮೂವರ ದಾರುಣ ಸಾವು: ದಯಾನಂದ್ ಬರೆದ ಆಘಾತಕಾರಿ ಸತ್ಯ ವರದಿ


ನೋಡಿ ಬೀದಿಯ ಮೇಲೆ ರಕ್ತವಿದೆ.. ರಕ್ತವಿದೆ ಬೀದಿಯ ಮೇಲೆ..
- ಪ್ಯಾಬ್ಲೋನೆರೂಡ 


ಪ್ರಸಾದ್ ಕುಟ್ಟಿಯ ಜೀವವಿಲ್ಲದ ಕಾಯದಲ್ಲಿ ಇನ್ನೂ ಕಣ್ಣುಗಳು ಉಸಿರಾಡುತ್ತಿವೆಯೇನೋ ಅನ್ನಿಸುತ್ತಿತ್ತು.. ಈಗಲೋ ಆಗಲೋ ಕಣ್ರೆಪೆ ಮಿಟುಕಿಸಿ ಎಂದಿನಂತೆ ನಾಗೇಂದ್ರ ಬಾಬು ನನಗೊಮ್ಮೆ ಕಣ್ಣು ಹೊಡೆಯುತ್ತಾನಾ? ಕಟಿಂಗು ಸೇವಿಂಗು ಚೇಸಕುನ್ನಾನು ಚೂಡು ಸಾರ್ ಅಂದೇ ಬಿಡುತ್ತಾನೆ ಅನ್ನುವಂತೆ ಇದ್ದ ಪುಟ್ಟಹುಡುಗ ರವಿ.. ಮೂವರೂ ಆ ಮಲದ ಬಾವಿಯ ಪಕ್ಕದಲ್ಲೇ ಒಬ್ಬರ ಪಕ್ಕ ಒಬ್ಬರು ಸಾಲುಸಾಲಾಗಿ ಮಲಗಿಬಿಟ್ಟಿದ್ದರು. ಸುತ್ತಮುತ್ತಲಿದ್ದ ಜನರು ಪೋಲೀಸರು, ಮುನಿಸಿಪಾಲಿಟಿಯವರು, ಆಸುಪಾಸಿನವರು ಈ ಮೂರೂ ಜೀವಗಳನ್ನು ಡೆಡ್ಡುಬಾಡಿ, ಹೆಣ, ಅದು.. ಹೀಗೆಲ್ಲ ಏನೇನೋ ಯಾಕೆ ಅನ್ನುತ್ತಿದ್ದಾರೆ. ಹೆಸರು ಹಿಡಿದು ಕರೆಯಬಾರದಾ? ಈ ಮೂವರಿಗೆ ಹೆಸರು ಇಲ್ಲವಾ ಅಂತ ಸಿಟ್ಟು ಬರುತ್ತಿತ್ತು.

ಮೂವರನ್ನು ಬಲಿತೆಗೆದುಕೊಂಡಿದ್ದು ಇದೇ ಪಿಟ್.
 ಫೋಟೋ ತೆಗೆಯುತ್ತ, ವಿಡಿಯೋ ಶೂಟ್ ಮಾಡುತ್ತಿದ್ದವನಿಗೆ ಪೋಲೀಸನೊಬ್ಬ ಬನ್ನೀ ಈಕಡೆ ಸಾಕು ಸಾಕು ಅಂದಂತಾಯಿತು.. ಜೂಲುನಾಯಿಗೆ ಕೊಟ್ಟಷ್ಟೇ ಬೆಲೆಯನ್ನು ಅವನಿಗೆ ಕೊಟ್ಟು ನನ್ನ ಪಾಡಿಗೆ ನಾನು ವಿಡಿಯೋ ಶೂಟ್ ಮಾಡುತ್ತಲೇ ಇದ್ದೆ. ೬ ತಿಂಗಳ ಹಿಂದೆ ಈ ಮೂರೂ ಜೀವಗಳು ಕೆಜಿಎಫ್‌ನಲ್ಲಿ ಎದುರಾದಾಗ, ಕುಟ್ಟಿಯ ಮನೆಯಲ್ಲಿ ಡಾಲ್ಮೇಷಿಯನ್ ನಾಯಿಗೆ ಹೆದರುತ್ತ ಊಟ ಮಾಡಿದಾಗ, ಮಾರನೆ ಬೆಳಿಗ್ಗೆ ಅವರನ್ನೇ ಹಿಂಬಾಲಿಸಿಕೊಂಡು ಗೆಳೆಯ ಚಂದ್ರುವಿನೊಡನೆ ಅವರ ಮಲಹೊರುವ ವೃತ್ತಿಯ ವಿವರಗಳನ್ನು ಇದೇ ಪನಾಸೋನಿಕ್ ಕೆಮೆರಾ ಶೂಟ್ ಮಾಡಿದಾಗ, ಇದೇ ಕೆನಾನ್ ಸ್ಟಿಲ್ ಕೆಮೆರಾ ರವಿಯ ತಮಾಷೆಗಳನ್ನು, ಪ್ರಸಾದ್ ಕುಟ್ಟಿಯ ನಿಷ್ಕಲ್ಮಶ ನಗೆಯನ್ನು, ನಾಗೇಂದ್ರ ಬಾಬುವಿನ ವಿನಾಕಾರಣ ಕಣ್ಣು ಹೊಡೆಯುತ್ತಿದ್ದದ್ದನ್ನ್ದು ಚಿತ್ರಗಳಾಗಿ ನುಂಗುತ್ತಿದ್ದಾಗ ನನಗೂ ಚಂದ್ರುವಿಗೂ ಇದೇ ಜನರ ಕಳೇಬರಗಳನ್ನು ಮುಂದೊಂದು ದಿನ ನಾವೇ ಮಬ್ಬಿನ ಪೊರೆಯ ಕಣ್ಣಲ್ಲಿ ಶೂಟ್ ಮಾಡುತ್ತೇವೆ, ಚಿತ್ರ ಹಿಡಿಯುತ್ತೇವೆ ಎಂಬ ಯಾವ ಊಹೆಯೂ ಇರಲಿಲ್ಲ.. ಎಲ್ಲವೂ ಗಿರಗಿರನೆ ನನ್ನ ಸುತ್ತಲೇ ಓಡಾಡುತ್ತಲೇ ಇತ್ತು..

ಗಂಗರಾಜು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿದ್ದ ಮೂರೂ ಜೀವಗಳ ಚಪ್ಪಲಿಗಳನ್ನು ಯಾವ ಕಾರಣಕ್ಕೆ ಅಷ್ಟು ಶ್ರದ್ಧೆಯಿಂದ ಆರಿಸುತ್ತಿದ್ದನೋ.. ಗಂಗರಾಜುವಿನ ದೇಹದಲ್ಲೂ ಜೀವವಿದೆಯೋ ಇಲ್ಲವೋ ಅಂತ ಆ ಸೆಕೆಂಡಿಗೂ ಗಾಬರಿಯಾಯಿತು..  ಕಣ್ಣೂ ಮಿಟುಕಿಸುತ್ತಿದ್ದ ಅನ್ನುವುದನ್ನು ಬಿಟ್ಟರೆ ೧೭ ವರ್ಷದ ಆ ಹುಡುಗನ ಇಡೀ ದೇಹದಲ್ಲಿ ಮತ್ತೇನೂ ಚಲಿಸುತ್ತಿಲ್ಲ ಅನಿಸಿ ಗಂಗರಾಜೂ ವಿಸೆರೇಯ್ರಾ, ಆ ಚೆಪ್ಪುಲ್ನಿ ತೀಸುಕೊನಿ ಏಮ್ ಚೇಸ್ತಾವ್ ನುವ್ವು (ಗಂಗರಾಜು ಆ ಚಪ್ಪಲಿ ತಗೊಂಡು ಏನು ಮಾಡ್ತೀಯ, ಬಿಸಾಕು ಮಾರಾಯ)  ಅಂದೆ.. ನನ್ನ ಮಾತಿಗೆ ಕಿಲುಬುಕಾಸಿನ ಬೆಲೆಯೂ ಕೊಡದೆ ಅವನ ಪಾಡಿಗವನು ಚಪ್ಪಲಿಗಳನ್ನು ಆಯ್ದುಕೊಂಡು ಒಂದು ಹ್ಯಾಂಡ್ ಕವರ್ರಿಗೆ ತುಂಬಿಕೊಂಡು ಕಂಕುಳಿಗೆ ಸಿಗಿಸಿಕೊಂಡು ನನ್ನ ಬಳಿಗೆ ಬಂದು ನಿಂತ. ನಾಗನ್ನ ಪಂಡಗನೇಸಿ ಮೊನ್ನ ತೀಸುಕುನ್ನಾಡು ಚೆಪ್ಪುಲು ಬಾಗುನ್ನಾಯಿ, ನೇನೇಸ್ಕುಂಟಾ, ಕುಟ್ಟನ್ನದಿ ಮಾ ಅಕ್ಕಕಿ ಸರವುತುಂದಿ, ರವೀದಿ ಅಲಾಗೇ ಉಂಚುಕುಂಟಾ (ನಾಗಣ್ಣ ಮೊನ್ನೆ ತಗೊಂಡ ಚಪ್ಪಲೀನಾ, ಚೆನಾಗಿದಾವೆ ನಾನೇ ಇಟ್ಕೋತೀನಿ, ಕುಟ್ಟಣ್ಣನ ಚಪ್ಪಲಿ ನಮ್ಮಕ್ಕನಿಗೆ ಸರಿ ಹೋಗ್ತವೆ.. ರವೀದು ಹಂಗೇ ಇಟ್ಕೋತೀನಿ)  ಅಂದು ಸುಮ್ಮನೆ ಹೋಗಿ ಗೋಡೆ ಬದಿಗೆ ಹೋಗಿ ಕುಳಿತ. ಆ ಕ್ಷಣಕ್ಕೆ ಅವನನ್ನೂ ಆ ಮಲದ ಬಾವಿಗೆ ನೂಕಿ ನಾನೂ ಅವನ ಹಿಂದೆಯೇ ಬಿದ್ದು ಸಾಯಬೇಕು ಅನಿಸುವಷ್ಟು ಒದ್ದಾಡಿಹೋದೆ.
ನಾಗೇಂದ್ರ ಬಾಬುನ ಒಂದು ವಾರದ ಕೂಸು.

ಗಂಗರಾಜು ನನ್ನ ಜೊತೆಗೋ, ಅವನ ಪಾಡಿಗವನೋ ಮಾತನಾಡುತ್ತಲೇ ಇದ್ದ. ನನ್ನೂ ಪಿಲಿಚಾರು.. ನೇನೆಳ್ಳಲೇದು, ಪೋಲೀಸೋಳ್ಳು ಪಟ್ಟುಕೊನಿ ಎಳತಾರನಿ.. ಎಳ್ಳಲೇದು.. ರೈಲ್‌ಪಟ್ಲು ಉಂದಿ ಕದ ಅಕ್ಕಡನಿಂಚಿ ಪಾರಿಪೋಯಾ, (ನನ್ನನ್ನೂ ಕರೆದ್ರು, ನಾನು ಪೋಲೀಸರು ಹಿಡಕಂಡು ಹೋಗತಾರೆ ಅಂತ ರೈಲ್ವೇಹಳಿ ದಾಟಿಕೊಂಡು ಓಡಿಹೋದೆ) ಗಂಗರಾಜನಿಗೂ ಜೀವವಿಲ್ಲದೆ ಮಲಗಿದ್ದ ಮೂವರಿಗೂ ಹಸಿವು ಅನ್ನೋ ಮೂರಕ್ಷರದಲ್ಲಿ ಸಾಮ್ಯತೆಯಿತ್ತು.  ಕಕ್ಕಸ್ಸುಗುಂಡಿ ಹುಡುಕುತ್ತ ಅಲೆದಾಡುವ ಗಂಗರಾಜುವಿನ ನಿಸ್ತೇಜ ಮುಖದಲ್ಲಿ, ನಾಳೆಯಿಂದ ಯಾರಿಗೋಸ್ಕರ ಮಲದಗುಂಡಿ ಹುಡುಕಲಿ ಎಂಬ ಗೊಂದಲವಿತ್ತೇ? ನನಗೂ ಗೊಂದಲವಾಯಿತು.

ಹೊರಗಡೆ ಸೇರಿದ್ದ ಕೆನಡಿ ಲೈನ್‌ನ ಬಡವರು ಕಟ್ಟೆಯೊಡೆದ ಕೆರೆಯಂತೆ ಭೋರಿಡುತ್ತಿದ್ದರು. ಯಾರು ಯಾರಿಗೋಸ್ಕರ ಅಳುತ್ತಿದ್ದಾರೆ ಎಂಬುದನ್ನು ಯಾರಿಗೂ ಗುರ್ತಿಸಲಾಗುತ್ತಿರಲಿಲ್ಲ. ಒಂದಷ್ಟು ಸಂಘಟನೆಯ ಜನ ಸರ್ಕಾರಂತೆ ಸರ್ಕಾರ, ಇವನಪ್ಪಂದಂತೆ ಸರ್ಕಾರ ಎನ್ನುತ್ತ ಅದನ್ನದನ್ನೇ ಪುನರಾವರ್ತಿಸುತ್ತಿದ್ದರು. ಡೀಸಿಯೂ ಬಂದ. ಇದೇ ಡೀಸಿ ಹದಿನಾಲ್ಕು ದಿನಗಳ ಹಿಂದೆ ಇದ್ದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದು ಪ್ರತಿಭಟಿಸುತ್ತಿದ್ದ ಇದೇ ಜನರನ್ನ ಯಾರ ಹತ್ರ ಪರ‍್ಮಿಷನ್ ತಗೊಂಡು ಇಲ್ಲಿ ಗಲಾಟೆ ಮಾಡ್ತೀದೀರಿ, ಎಲ್ಲರನ್ನೂ ಒಳಗೆ ಹಾಕ್ತೀನಿ ಎಂದು ಅಲ್ಸೇಷಿಯನ್‌ಗಳೂ ನಾಚಿಕೊಳ್ಳುವಂತೆ ಬೊಗಳಿ ಹೋಗಿದ್ದ. ಅಂಥಹವನ ಬಾಯಲ್ಲಿ ಸತ್ತ ಮೂವರ ಬಗ್ಗೆ ಮರುಕವೂ, ಕನಿಕರವೂ ಸರ್ಕಾರಿ ಪದಗಳಾಗಿ ಸುರಿಯುತ್ತಿದ್ದವು. ಕೆಜಿಎಫ್ ಅನ್ನು ಜರ್ಮನಿಯೆಂತಲೂ ತಾನೊಬ್ಬ ಹಿಟ್ಲರ್ ಎಂತಲೂ ಪರಿಭಾವಿಸಿಕೊಂಡ ಇಂಥಹ ಮೃಗವೊಂದರ ಬಾಯಲ್ಲಿ ಇಷ್ಟೆಲ್ಲ ಸುನೀತ ಪದಗಳು ಎಲ್ಲಿ ಅಡಗಿದ್ದವು ಇಷ್ಟು ದಿನ ಎಂದು ಒಂದು ಕಡೆಯಿಂದ ನನಗೆ ಅಸಹ್ಯ ಕಿತ್ತುಕೊಂಡು ಬರುತ್ತಿತ್ತು.

ನಾಗೇಂದ್ರ ಬಾಬು ಬದುಕಿದ್ದಾಗ 
ಈ ಮೃಗವನ್ನು ನೋಡುವುದಕ್ಕಿಂತ ಇನ್ನಷ್ಟು ಹೊತ್ತು ಸತ್ತುಹೋದ ಆ ಜೀವಗಳ ಹೆಣವನ್ನು ನೋಡುತ್ತ ಕೂರುವುದು ಹೆಚ್ಚು ಸಹನೀಯ ಅನ್ನಿಸುತ್ತಿರುವಾಗ ರೊಚ್ಚಿಗೆದ್ದ ಬಡವರ ಗುಂಪಿನಿಂದ ಒಬ್ಬಾತ ತನ್ನ ಚಪ್ಪಲಿಯನ್ನು ಕೈಗೇ ತೆಗೆದುಕೊಂಡು ಕೊಟ್ಟ ಕೆಲಸವನ್ನು ಕಿತ್ತುಕೊಂಡಲ್ಲೋ, ನಾಚಿಕೆ ಇದೆಯೇನೋ ನಿನಗೆ? ಹೊಟ್ಟೆಗೇನು ಹೇಲು ತಿನ್ನತೀಯೇನೋ, ಕೆಲಸ ಇಲ್ಲದೆ ಮತ್ತೆ ಕಕ್ಕಸ್ಸು ಗುಂಡು ಬಳಿಯೋಕೆ ಹೋಗಿ ಸತ್ತವರಲ್ಲ ಮೂರು ಜನ, ಕಟುಕ ನನಮಗನೇ ಅಂತ ಉಂಗುಷ್ಟದ ಜಾಗದಲ್ಲಿ ಹೇರ್‌ಪಿನ್ನು ಸಿಕ್ಕಿಸಿದ್ದ ತನ್ನ ಚಪ್ಪಲಿಯನ್ನು ತೂರಲು ಸಿದ್ದವಾಗಿದ್ದ. ಬಿಟ್ಟರೆ ಕೈಯೊಂದು ಕಡೆ, ತಲೆಯೊಂದು ಕಡೆ ಎಂಬಂತೆ ಮೃಗವನ್ನು ಚೆಂಡಾಡಲು ಜನರು ಸಿದ್ದವಿದ್ದಂತೆ ಕಾಣಿಸಿತೋ ಏನೋ ಲಾಠಿಚಾರ‍್ಜಿಗೆ ಮೃಗ ಆದೇಶಿಸಿತು. ಮತ್ತೊಂದು ಪೋಲೀಸು ಮೃಗ ಪೀಪೀ ಊದಲಾಗಿ ಉಳಿದ ಖಾಕಿ ದಿರಿಸಿನ, ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಆ ಬಡಜನರನ್ನು ಮನಬಂದಂತೆ ಬಡಿಯತೊಡಗಿದರು,  ಜರ್ಮನಿಯ ಹಿಟ್ಲರ್ರನಂತೆಯೇ ದಿವೀನಾಗಿ ಇದ್ದ ಮೃಗವು ಸುಮ್ಮನೆ ನಿಂತು ಇದನ್ನೆಲ್ಲ ನೋಡುತ್ತಿತ್ತು. ಬಡವರು ತಮಗೆ ಕಂಡಕಂಡಲ್ಲಿಗೆ ಬಡಿಯುತ್ತಿದ್ದ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳಿಂದ ತಪ್ಪಿಸಿಕೊಂಡು ಸಿಕ್ಕಸಿಕ್ಕಲ್ಲಿಗೆ ನುಗ್ಗುತ್ತಿದ್ದರು. ಅಷ್ಟರಲ್ಲಿ ಪ್ರಭು.. ಹೆಣ ತಗೊಂಡು ಹೋಗ್ತಿದಾರೆ ಕಣ್ರೋ ಎನ್ನುತ್ತ ಕೂಗುತ್ತ ಓಡಿ ಬಂದ..

ರವಿ ಮತ್ತು ಆತನ ಪತ್ನಿ
ಇಲ್ಲಿ ಲಾಠಿಚಾರ‍್ಜ್ ಮಾಡಿ ಆ ಕಡೆ ಹೆಣವನ್ನು ಹೊತ್ತೊಯ್ಯಲು ಯತ್ನಿಸುತ್ತಿದ್ದ ಪೋಲೀಸರನ್ನು ಕಂಡಕಂಡಲ್ಲಿಗೆ ನೂಕಿ ಎಸೆದು ಮೂರೂ ಹೆಣಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಡೀಸಿಯ ಮುಂದಿಟ್ಟು ಪ್ರಭು ಇನ್ನೂ ಎಷ್ಟು ಜನಾ ಸತ್ತ ಮೇಲೆ ಕೆಜಿಎಫ್ ನಲ್ಲಿ ಮಲ ಹೊರೋರು ಇದಾರೆ ಅಂತ ನಂಬತೀಯಾ? ಬರ್ರಪ್ಪಾ ಬರ್ರಿ.. ಸಾಲಾಗಿ ನಿಂತುಕೊಳ್ಳೋಣ ಎಲ್ಲಾರಿಗೂ ಗುಂಡು ಹೊಡೆದು ಕೊಂದ್ಹಾಕಿ ಆಮೇಲೆ, ಕಕ್ಕಸ್ಸು ಬಳಿಯೋರು ಯಾರೂ ಇಲ್ಲ ಅಂತ ರಿಪೋರ್ಟ್ ಬರಕೋ ಅಂತ ಕೂಗಾಡಿಬಿಟ್ಟ. ಇದಾದ ೨ ನಿಮಿಷಕ್ಕೆ ಸರ್ಕಾರಿ ಮೃಗ ತಲೆತಪ್ಪಿಸಿಕೊಂಡು ಕಂಡ ಜೀಪು ಹತ್ತಿಕೊಂಡು ಪರಾರಿಯಾಗಿ ಹೋಯಿತು. ಶವಪರೀಕ್ಷೆಗೆ ತೆಗೆದುಕೊಂಡ ಹೋದ ಮೂವರ ಹೆಣಗಳನ್ನು ಆ ಬಡವರಿಗೆ ಬಡಿಯುತ್ತಲೇ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಸರ್ಕಾರಿ ಆಸ್ಪತ್ರೆಯ ಕಡೆಗೆ ವಾಹನದಲ್ಲಿ ಕೊಂಡೊಯ್ದರು.

ಮಾರನೆಯ ಬೆಳಿಗ್ಗೆ ಕೆನಡೀಸ್ ಲೈನ್‌ನ ಮೂರೂ ಕ್ರಿಯಾಶೀಲ ಜೀವಗಳು ಬಿಳಿ ಬಟ್ಟೆಯೊಳಗೆ ತುಂಬಿಸಿಟ್ಟ ಮಾಂಸದ ಮುದ್ದೆಗಳಂತೆ ಗಾಜಿನಪೆಟ್ಟಿಗೆಗಳಲ್ಲಿ ಸುತ್ತಿಕೊಂಡಿದ್ದರು. ಮೂರೂ ಗಾಜಿನಪೆಟ್ಟಿಗೆಗಳ ಪಕ್ಕವೂ ಆ ಜೀವಗಳ ಪತ್ನಿಯರು ಅಳಲೂ ನಿತ್ರಾಣವಿಲ್ಲದೆ ಕುಳಿತಿದ್ದರು. ಕುಟ್ಟಿಯ ನಡುವಯಸ್ಕ ಪತ್ನಿ, ರವಿ ಮತ್ತು ನಾಗೇಂದ್ರ ಬಾಬುರ ಚಿಕ್ಕವಯಸ್ಸಿನ ಪತ್ನಿಯರು.. ಅವರನ್ನು ಸಮಾಧಾನಿಸುತ್ತಿದ್ದ ನೆರೆಹೊರೆಯವರು, ನಾಗೇಂದ್ರಬಾಬುವಿನ ಒಂದು ವಾರದ ಮಗು ಕುಟ್ಟಿಯ ಡಾಲ್ಮೇಷಿಯನ್ ನಾಯಿಯ ಮೇಲಿನ ಕಪ್ಪುಕಪ್ಪು ಚಿಕ್ಕೆಗಳನ್ನೇ ನೋಡುತ್ತಿತ್ತು. ಬ್ಯಾಂಡ್ ಸೆಟ್ಟಿನವರು ಶೋಕಗೀತೆಗಳನ್ನು ಹುಡುಕೀ ಹುಡುಕೀ ವಾದ್ಯ ಬಡಿಯುತ್ತ ಇದ್ದ ಸಂದರ್ಭದಲ್ಲೇ ಕೆನಡಿ ಲೈನ್‌ನ ಎರಡೂ ಬದಿಗಿದ್ದ ತಮಿಳು ಮತ್ತು ತೆಲುಗು ಚರ್ಚುಗಳಲ್ಲಿ ಒಂದರೊಳಗಿನಿಂದ ಆತ್ಮ ಸ್ವರೂಪನೇ, ಪ್ರಿಯ ಆತ್ಮಸ್ವರೂಪನೇ, ಈಗ ಬಾ ದೇವ, ಇಳಿದು ಬಾ ದೇವ ನಮ್ಮ ಮಧ್ಯದೊಳು, ಪಾಪ ತೊಳೆದು ಶುದ್ದೀಕರಿಸು ಈ ದಿವ್ಯ ಸಮಯದೊಳು ಎಂಬ ಪ್ರಾರ್ಥನೆ. ಯಾವ ದೇಶದ ಯಾವ ಜಾತಿಯ ಯಾವ ಜನ ಪಾಪಗಳ ಬಗ್ಗೆ ಯೇಸುದೇವನು ಮಾತಾಡುತ್ತಿದ್ದಾನೋ ಎಂದುಕೊಳ್ಳುತ್ತ ಸಿಗರೇಟು ಹಚ್ಚಿ ವಕೀಲೆ ಗೆಳತಿ ಮೈತ್ರೇಯಿ ಕೃಷ್ಣನ್ ಬಳಿ ಬಳಿ ನಿಂತುಕೊಂಡೆ.

ಮೃತರ ಸಂಬಂಧಿಗಳೊಂದಿಗೆ ಲೇಖಕ ದಯಾನಂದ್
 ಫ್ಯಾಮಿಲಿ ಪ್ರೊಫೈಲ್ ಒಂದು ಬೇಕಿತ್ತು ದಯಾ, ಮೂರೂ ಫ್ಯಾಮಿಲಿಗಳದ್ದು ಪ್ರೊಫೈಲ್ ಮಾಡಿಬಿಡು ಅರ್ಜೆಂಟಾಗಿ ಬೇಕಿದೆ ಎಂದ ಮೈತ್ರೇಯಿ ಮಾತಿಗೆ ಹೂಂಗುಟ್ಟಿ ಜೀವ ಕಳೆದುಕೊಂಡ ಮೂವರ ಮನೆಗಳ ಬಳಿ ಹೋಗಿ ಫೋಟೋ ವಿಡಿಯೋ ಮಾಡುತ್ತ ನಿಂತೆ. ಗೆಳೆಯ ಚಂದ್ರು, ರಾಜೇಂದ್ರ ಮತು ಪುರುಷಿ ಎಲ್ಲರೂ ಜನಗಳ ಸಭೆ ನಡೆಸುತ್ತಿದ್ದ ಸರ್ಕಲ್ ಬಳಿ ಬರುತ್ತಿದ್ದಂತೆ ೮೦ರ ಇಳಿವೃದ್ಧೆ ಅಂತೋನಿಯಮ್ಮ ಸಿಕ್ಕರು. ನಾ ಕೊಡುಕು ಬಾಬೂ ಸನಿಪೋಯಾಡು ನೈನಾ.. ಇಪ್ಪುಡು ಚೂಡು ಇಂಕಾ ಮುಗ್ಗುರು ಎಲ್ಲಿಪೋಯಾರು, ಯಮದೂತುದು ಇಕ್ಕಡೇ ಎಕ್ಕಡೋ ರೈಲುಪಟ್ಲ ದಗ್ಗರ ದಾಚಿಕೊನಿ ಉನ್ನಾಡೇಮೋ ನೈನಾ.. ಅಪ್ಪುಡಪ್ಪುಡು ವಚ್ಚೀ.. ಮನವಾಳನಿ ತೀಸುಕೆನಿ ಎಳುತೂ ಉಂಟಾಡು. ಇಂಕೆನ್ನಿ ಪ್ರಾಣಾಲೂ ಎಳ್ಳಾಲನಿ ರಾಸಿಪೆಟ್ಟುಂಂದೋ ತೆಲೀದು ನೈನಾ (ನನ್ನ ಮಗ ಬಾಬೂ ಸತ್ತುಹೋದ, ಈಗ ಇನ್ನು ಮೂವರು ಸತ್ತು ಹೋಗಿದ್ದಾರೆ.. ಯಮದೂತರು ಇಲ್ಲೇ ಎಲ್ಲೋ ರೈಲುಹಳಿ ಆಸುಪಾಸಿನಲ್ಲಿ ಕದ್ದು ಕೂತಿರಬಹುದು, ಅವಾಗವಾಗ ಬಂದು ನಮ್ಮ ಜನಗಳನ್ನ ಹಿಂಗೆ ಎಳೆದುಕೊಂಡು ಹೋಗ್ತಿದಾರೆ, ಇನ್ನೂ ಎಷ್ಟು ಜೀವಗಳು ಹೀಗೇ ಹೋಗುತ್ತವೋ ಗೊತ್ತಿಲ್ಲ ಕಣಪ್ಪ) ಅನ್ನುತ್ತ ಬಂದು ಕೈ ಹಿಡಿದುಕೊಂಡಿತು. ಒಮ್ಮೆ ಕುಮಾರ ಕುಡಿದ ಚೊಂಬಿನಲ್ಲಿಯೇ ನಾನು ನೀರು ಕುಡಿದಿದ್ದರಿಂದ ನನ್ನ ಬಗ್ಗೆ ಇದ್ದ ಭಯಾತಂಕಗಳೆಲ್ಲ ದೂರವಾಗಿ, ನನ್ನನ್ನು ಕಂಡಾಗಲೆಲ್ಲ ಒಂದು ಚೊಂಬಿನಲ್ಲಿ ನೀರು ಹಿಡಿದುಕೊಂಡು ನೀಳ್ಳು ತಾಗಂಡಿ ಸಾರೂ ಎಂದು ಹಿಂದ್ಹಿಂದೆ ಓಡಾಡುತ್ತಿದ್ದ ಕುಮಾರ ಕೈಯಲ್ಲಿ ಚೊಂಬಿಲ್ಲದೆ ಸುಮ್ಮನೆ ಕುಳಿತಿದ್ದ. ಗಂಗರಾಜು ಅವನಿಗೆ ಕುಟ್ಟಿ ಪ್ರಸಾದನ ಜೊತೆ ತಾನು ಹೋಗದೆ ಇದ್ದ ಕಾರಣಕ್ಕೆ ಹೇಗೆ ನನ್ನ ಜೀವವುಳಿಯಿತು ಎಂಬುದನ್ನು ವಿವರಿಸುತ್ತ, ತಾನು ಆಯ್ದುಕೊಂಡು ಬಂದಿದ್ದ ಮೂವರ ಚಪ್ಪಲಿಗಳಲ್ಲಿ ಒಂದನ್ನು ಕುಮಾರನ ಎದುರಿಗೆ ಹಾಕಿ ಸೈಜು ನೋಡಲು ಹೇಳುತ್ತಿದ್ದ. ಅಮಾಯಕ ಗಂಗರಾಜನ ಬುದ್ದಿಮತ್ತೆಗೆ ಗಾಜಿನಪೆಟ್ಟಿಗೆಯೊಳಗೆ ಉಸಿರೂ ಮರೆತು ಮಲಗಿದ್ದ ಜೀವಗಳಿಗಿಂತ ಆ ಮೂರು ಜೊತೆ ಕಡಿಮೆಬೆಲೆಯ ಚಪ್ಪಲಿಗಳು ದೊಡ್ಡವಾಗಿ ಕಂಡಿದ್ದು ಕರುಳು ಕಿತ್ತುಬಂದಂತೆ ಆಯ್ತು.

ಪ್ರಸಾದ್ ಕುಟ್ಟಿಯ ಪತ್ನಿ
ಕೆಜಿಎಫ್‌ನಲ್ಲಿ ಮಲಹೊರುವವ ಪ್ರಕರಣ ಇವತ್ತು ನಿನ್ನೆಯದ್ದಲ್ಲ. ಬಿಜಿಎಂಎಲ್ ನೇತೃತ್ವದ ಗಣಿ ಮುಚ್ಚುವುದಕ್ಕೂ, ನಾಲ್ಕಂಕಿ, ಐದಂಕಿ ಸಂಬಳ ತೆಗೆದುಕೊಳ್ಳುತ್ತಿದ್ದ ಅಧಿಕಾರಿಗಳು ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳನ್ನು ಪಡೆದು ಕೆಲಸದಿಂದ ನಿವೃತ್ತಿಯಾದ ಸಮಯಕ್ಕೇ ಅದೇ ಗಣಿಯಲ್ಲಿ ಚಿನ್ನ ಅಗೆಯಲು ಸುರಂಗ ನುಗ್ಗುತ್ತಿದ್ದ ಅನಕ್ಷರಸ್ಥ ಕಾರ್ಮಿಕರು ನೇರವಾಗಿ ಬೀದಿಪಾಲಾಗುವುದಕ್ಕೂ ಒಂದೇ ಆಗಿತ್ತು. ಆಗಿನಿಂದ ಕುಡಿಯಲು ನೀರನ್ನೂ ಸಹ ಕೊಡದೆ ಈ ಕಾರ್ಮಿಕರ ಕ್ವಾಟ್ರಸ್‌ಗಳಿಗೆ ಬಲವಂತವಾಗಿ ಕ್ವಾಟ್ರಸ್‌ಗಳಿಂದ ಓಡಿಸಲು ಜಿಲ್ಲಾಡಳಿತದ ವತಿಯಿಂದ ಹುನ್ನಾರಗಳೂ ನಡೆದಿದ್ದವು. ಆ ಸಮಯದಲ್ಲಿ ಕೋಲಾರದ ಸಂಘಟನೆಗಳ ಮತ್ತು ಪ್ರಜ್ಞಾವಂತರ ಪ್ರತಿಭಟನೆಯ ಕಾರಣಕ್ಕೆ ಕೆಜಿಎಫ್ ನಗರಸಭೆಯಲ್ಲಿ ಈ ಕಾರ್ಮಿಕರಿಗೆ ಗುತ್ತಿಗೆ ಪೌರಕಾರ್ಮಿಕರ ತಾತ್ಕಾಲಿಕ ಕೆಲಸವನ್ನೂ ನೀಡಲಾಗಿತ್ತು. ಆ...ದರೆ ಗಣಿಯಿಂದ ನೇರವಾಗಿ ಗುತ್ತಿಗೆ ಕಂಟ್ರಾಕ್ಟರ ಕಪಿಮುಷ್ಠಿಯೊಳಗೆ ಸಿಲುಕಿಕೊಂಡ ಈ ಕಾರ್ಮಿಕರು ನಿಯತ್ತಾಗಿ ಕೆಲಸವನ್ನೇನೋ ಮಾಡಿದರು, ಸಂಬಳ ಮಾತ್ರ ಸಿಗಲಿಲ್ಲ. ಸತತ ೯ ತಿಂಗಳು ಸಂಬಳವಿಲ್ಲದೆ ದುಡಿಸಿಕೊಂಡ ಕೆಜಿಎಫ್ ನಗರಸಭೆ ಈ ಕಾರ್ಮಿಕರ ಹಸಿವನ್ನು ಮಾತ್ರ ಗಣನೆಗೆ ತಂದುಕೊಳ್ಳಲೇ ಇಲ್ಲ. ಅನಿವಾರ್ಯವಾಗಿ ಸಂಬಳ ಸಿಗದ ಕೆಲಸ ತ್ಯಜಿಸಿ ಹೊಟ್ಟೆಹೊರೆಯಲು ಮಲಹೊರುವ ಕೆಲಸಕ್ಕೇ ಈ ಕಾರ್ಮಿಕರು ಬೀಳುವಂತೆ ಮಾಡಿದ್ದ್ದು ಇದೇ ಕೆಜಿಎಫ್ ನಗರಸಭೆ.

ನಾಗೇಂದ್ರ ಬಾಬು ಪತ್ನಿ
ಕಳೆದ ನಾಲ್ಕೂವರೆ ತಿಂಗಳ ಹಿಂದೆ ಕೆಜಿಎಫ್‌ನ ಈ ಕಾರ್ಮಿಕರ ಮಲಹೊರುವ ಬರ್ಬರತೆಯ ಮಾಹಿತಿ ಜಗತ್ತಿನ ಮುಂದೆ ಬರುತ್ತಿದ್ದಂತೆಯೇ ತಮ್ಮ ಮುಖದ ಮೇಲೆಯೇ ಈ ಕಾರ್ಮಿಕರು ಮಲ ಎಸೆದಂತಾಗಿ ಕನಲಿಹೋದ ಕೋಲಾರದ ಡೀಸಿ ಮತ್ತು ನಗರಸಭೆಯ ಕಮಿಷನರ್ ತರಾತುರಿಯಲ್ಲಿ ಮಲಹೊರುವುದನ್ನು ನಿಷೇಧಿಸಿ ಆಟೋ ಪ್ರಚಾರ ಕೈಗೊಂಡರು. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳ ಗಡುವು ವಿಧಿಸಿ ಹೋದರು, ಸಚಿವರಿಗೆ ಚಪ್ರಾಸಿಗಳಿಗೆ ಕೊಡುವಷ್ಟು ಬೆಲೆಯನ್ನೂ ಕೊಡದ ಕೋಲಾರ ಜಿಲ್ಲಾಡಳಿತ ಸಚಿವರ ಅಷ್ಟೂ ಸೂಚನೆಗಳನ್ನು ಗಾಳಿಗೆ ತೂರಿ ೧೪೦ ಮಂದಿಗೆ ದಿನಗೂಲಿ ಕೆಲಸ ನೀಡಿ ಕೈತೊಳೆದುಕೊಂಡಿತು. ಅದಾದಮೇಲೆ ಮಾನವಹಕ್ಕುಗಳ ಆಯೋಗದ ಸದಸ್ಯ ರೆಡ್ಡಿ ಕೆಜಿಎಫ್‌ಗೆ ಭೇಟಿ ನೀಡಿ ಕೆಲವೊಂದು ಜನಪರ ಆದೇಶಗಳು ಮತ್ತು ಸೂಚನೆಗಳನ್ನು ನೀಡಿದರು. ಅದಕ್ಕೂ ಇವರು ಕಿಲುಬುಕಾಸಿನ ಬೆಲೆಯನ್ನೂ ಕೊಡಲಿಲ್ಲ. ಮಲಹೊರುವ ಪ್ರಕರಣ ಬಯಲಿಗೆ ಬಂದಾದ ಮೇಲೆ ಕಡೇಪಕ್ಷ ಅಂಥಹ ಮಲದಗುಂಡಿಗಳನ್ನು ಮುಚ್ಚುವ ಕೆಲಸವಾದರೂ ಮಾಡಿದ್ದರೆ, ಮಲದಗುಂಡಿಗಳು ಎಲ್ಲೆಲ್ಲಿವೆ ಎಂಬ ಸರ್ವೇಯನ್ನಾದರೂ ಕೈಗೊಂಡಿದ್ದರೆ, ಮಲಹೊರುತ್ತಿರುವ ಕಾರ್ಮಿಕರ ಜನಪರ ಅಭಿವೃದ್ಧಿಗಾದರೂ ಮನಸ್ಸು ಮಾಡಿದ್ದರೆ ಇವತ್ತು ಮೂರು ಜೀವಗಳು ಹೆಣವಾಗುತ್ತಿರಲಿಲ್ಲ. ಯಾವುದನ್ನೂ ಮಾಡದ ಜಿಲ್ಲಾಡಳಿತ ತಮ್ಮ ಘೋರ ದುರಹಂಕಾರದ ಕಾರಣಕ್ಕೆ ಮೂವರು ಸತ್ತ ಕೂಡಲೇ ಪರಿಹಾರದ ಚೆಕ್ಕುಗಳನ್ನು ಹಿಡಿದು ಹೆಣದ ಮುಂದೆ ನಿಂತಿದ್ದರು. ಸತ್ತವರು ಸತ್ತರು ಉಳಿದವರ ಕಥೆಯೇನು? ಎಂದು ಸಮಗ್ರ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದ ಸಫಾಯಿ ಕರ್ಮಾಚಾರಿ ಆಂದೋಲನದ ವಿಲ್ಸನ್ ಬೆಜವಾಡ, ಬಾಲನ್ ಮತ್ತು ಹೋರಾಟದ ಹಿನ್ನೆಲೆಯ ನಾಯಕರ ಮೇಲೆ ಕೆಜಿಎಫ್ ನಗರಸಭೆಯ ಉಪಾಧ್ಯಕ್ಷ ಭಕ್ತವತ್ಸಲಂ ಎಂಬ ವಯೋವೃದ್ದ ಪುಢಾರಿಯೊಬ್ಬ ಪಕ್ಕಾ ಬೀದಿರೌಡಿಯಂತೆ ಕೊರಳಪಟ್ಟಿ ಹಿಡಿದು ಪ್ರತಿಭಟನೆ ಏತಕ್ಕೆ ಮಾಡ್ತೀಯ ಅಂತ ಬೊಗಳುತ್ತಿದ್ದ. ನಗರಸಭೆಯೆಂದರೇನು, ಅದರ ಘನತೆ, ಕರ್ತವ್ಯಗಳ ಕಿಂಚಿತ್ ಅರಿವಿಲ್ಲದೆ ಬೀದಿ ರೌಡಿಯಂತೆ ಹೊಡೆದಾಟಕ್ಕೆ ನಿಂತಿದ್ದ ಭಕ್ತವತ್ಸಲಂನನ್ನು ನಗರಸಭೆಯ ಉಪಾಧ್ಯಕ್ಷನನ್ನಾಗಿ ಆರಿಸಿದ ಮಂದಿಗೆ ತಲೆಯಲ್ಲಿ ಮಿದುಳಿತ್ತೋ ಅಥವಾ ಮತ್ತೇನಾದರೂ ವಿಸರ್ಜನೆಯ ಪದಾರ್ಥವಿತ್ತೋ ಅನ್ನಿಸಿತು. ಈ ಮೂರುಕಾಸಿನ ರೌಡಿಯ ದುಂಡಾವರ್ತಿಗೆ ಭಯಬಿದ್ದ ಸತ್ತವರ ಮನೆಯ ಹೆಣ್ಣುಮಕ್ಕಳು ಪರಿಹಾರದ ಚೆಕ್ ಅನ್ನು ತೆಗೆದುಕೊಂಡರು.
ಗಂಗರಾಜು

ತಾವು ಮಾಡಿದ ಕೊಲೆಗಡುಕ ಕೆಲಸವನ್ನು ಅಚ್ಚುಕಟ್ಟಾಗಿ ಮುಚ್ಚಿಹಾಕಲು ಹೊರಟಿರುವ ಜಿಲ್ಲಾಡಳಿತದ ಮೃಗಗಳು, ನಗರಸಭೆಯ ಕಮಿಷನರ್ ಎಂಬ ಹಾಸ್ಯಾಸ್ಪದ ದೇ, ಮತ್ತು ಕೋಲಾರದ ಪೋಲೀಸರು ಹೆಣ ಎತ್ತಲು ಬಿಡದೆ ಪ್ರತಿಭಟಿಸಿದ ಕಾರಣಕ್ಕೆ ಏಳು ಮಂದಿಯ ಮೇಲೆ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಕೇಸಿನಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ತೆಗೆದುಕೊಳ್ಳುವ ಸಂಬಳಕ್ಕೆ ಯಾವತ್ತೂ ಕೆಲಸ ಮಾಡದೆ ಬಡವರ ವಿರೋಧಿಯಾಗಿಯೇ ವರ್ತಿಸುತ್ತಿರುವ ಕೆಜಿಎಫ್ ನಗರಸಭೆ, ಜಿಲ್ಲಾಡಳಿತದ ಅತ್ಯುಚ್ಚ ಸ್ಥಾನದಲ್ಲಿರುವ ರಾಜಾಸ್ಥಾನಿ ಮೃಗ, ಸಾಲ ನೀಡಿಕೆಯಲ್ಲಿ ಕಮೀಷನ್ ಹೊಡೆಯುತ್ತ ಕಮೀಷನ್ ಏಜೆಂಟರಿಂದ ವಸೂಲು ಮಾಡಿದ ಹಡಬೆ ದುಡ್ಡಿನಲ್ಲಿ ತಮ್ಮ ಮಕ್ಕಳ ಕೈಯಲ್ಲಿ ಪಟಾಕಿ ಹೊಡೆಸುತ್ತ ಮಜಾ ಮಾಡುತ್ತ ಬಿದ್ದಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸತ್ತಿದೆಯೋ ಬದುಕಿದೆಯೋ ಅಂತಲೂ ತಿಳಿಯದಂತಾಗಿರುವ ಕೋಲಾರ ಸಮಾಜ ಕಲ್ಯಾಣ ಇಲಾಖೆ. ಇವರಲ್ಲಿ ಯಾವನಾದರೂ ಒಬ್ಬನೇ ಒಬ್ಬ ಪಿತೃಸಂಜಾತ ಈ ಕಾರ್ಮಿಕರ ಪರವಾಗಿದ್ದರೂ ಈ ಮೂರೂ ಮಂದಿ ಇವತ್ತು ಸಾಯುತ್ತಿರಲಿಲ್ಲ. ಇವರ ಕುತ್ತಿಗೆಗೆ ಕೈಯಿಟ್ಟು ಜೈಲಿಗೆ ನೂಕುವ ದರ್ದು ಪೋಲೀಸರಿಗೂ ಇಲ್ಲ. ಬೀದಿರೌಡಿಗಳಿಂದ ತುಂಬಿ ತುಳುಕುತ್ತಿರುವ ಕೆಜಿಎಫ್ ಅಧಿಕಾರಿಗಳ ವರ್ಗ ಮತ್ತು ರಾಜಕಾರಣ ವರ್ಗಕ್ಕೂ ಇಲ್ಲ.  

ಆ ಸಾವಿನ ಮನೆಯಲ್ಲಿ ನಡೆದ ಇನ್ನು ಉಳಿದ ವಿವರಗಳನ್ನು ಬರೆಯಲು ಬೆರಳುಗಳೋ, ಅಥವಾ ಇನ್ಯಾವುದೋ.. ಬರೆಯಲು ssಒಪ್ಪುತ್ತಿಲ್ಲ.. ಸಂಜೆಯ ೪ರ ಹೊತ್ತಿಗೆ ಒಂದೇ ಗುಂಡಿಯೊಳಗೆ ಮೂರೂ ಜೀವಗಳನ್ನು ಒಂದರಪಕ್ಕ ಒಂದರಂತೆ ಜೋಡಿಸಿ ಒಬ್ಬೊಬ್ಬರಾಗಿ ಮೂರು ಹಿಡಿ ಮಣ್ಣು ಸುರಿಯುತ್ತಿರುವಾಗ.. ಆ ಮೂರೂ ಹೆಣಗಳ ಕೊನೆಯಲ್ಲಿ ಯಾವುದೋ ನಾಲ್ಕನೆಯ ಹೆಣವೂ ಜೀವಕಳೆದುಕೊಂಡಂತೆ ಕಣ್ಣು ತೇಲಿಸಿಕೊಂಡು ಬಿದ್ದಂತೆ ಕಾಣಿಸಿತು.. ಅರ್ಧಗುಂಡಿಯ ಮಣ್ಣೂ ತುಂಬುವವರೆಗೂ ಆ ನಾಲ್ಕನೆಯ ಹೆಣ ಯಾರದ್ದಾಗಿರಬಹುದೆಂಬ ಪ್ರಶ್ನೆಗೆ ಗೊಂದಲಗಳೇ ಢಿಕ್ಕಿ ಹೊಡೆಯುತ್ತಿದ್ದವು. ಕೆಜಿಎಫ್ ನಿಂದ ವಾಪಸ್ಸು ಬರುವ ದಾರಿಯಲ್ಲಿ ಆ ನಾಲ್ಕನೆಯ ಹೆಣದ ಚಿತ್ರ ಸುಸ್ಪಷ್ಟವಾಗಿ ಕಂಡುಬಿಟ್ಟಿತು. ವಿ ದಿ ಪೀಪಲ್ ಎಂದು ಶುರುವಾಗುವ ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಶಾಸನಗಳು, ಅಧಿಕಾರಿಗಳು, ಅಧಿಕಾರಗಳು, ಎಲ್ಲದಕ್ಕೂ ಈ ಮೂರು ಹೆಣಗಳು ಒಟ್ಟಿಗೆ ಸೇರಿ ಶವಪರೀಕ್ಷೆ ಮಾಡಿ ಮುಗಿಸಿ ಅವಕ್ಕೂ ಒಂದು ಬಿಳೇಬಟ್ಟೇ ಸುತ್ತಿ ತಮ್ಮ ಪಕ್ಕದಲ್ಲಿ ಮಲಗಿಸಿಕೊಂಡೇ ಮಣ್ಣಾದವು ಅನಿಸತೊಡಗಿ ಒಂದಷ್ಟು ನಿರಾಸೆಯೂ, ಕಡುಕೋಪವೂ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸ್ಪಷ್ಟ ನಿರ್ಧಾರಗಳೂ ಒಟ್ಟೊಟ್ಟಿಗೇ ನುಗ್ಗತೊಡಗಿದವು.. ಯಾವ ಯಾವ ಕಾನೂನುಗಳನ್ನು ಶಾಸನಗಳನ್ನು ಯಾವ ಯಾವ ಸರ್ಕಾರಿಮೃಗಗಳ ವಿರುದ್ದವೇ ತಿರುಗಿಸಿಬಿಟ್ಟು ಯಾರು ಯಾರನ್ನು ಜೈಲುಪಾಲು ಮಾಡಬೇಕೆನ್ನುವ ಒಂದೇ ಒಂದು ಅಜೆಂಡಾ ನನ್ನೆದುರು ಈಗ ತಕಪಕನೆ ಕುಣಿಯುತ್ತಿದೆ. ಅಂದಹಾಗೆ ಮಲದಗುಂಡಿ ಶುಚಿಗೊಳಿಸಲು ತೆರಳಿದ್ದ ಆರು ಜನರಲ್ಲಿ ಮೂವರು ಹೆಣವಾದರು.. ಒಬ್ಬರ ಹಿಂದೊಬ್ಬರು ಕಣ್ಣೆದುರೇ ಮಲದಬಾವಿಯೊಳಗೆ ಉಸಿರುಸಿಲುಕಿಕೊಂಡು ಒದ್ದಾಡುವುದನ್ನು ಕಣ್ಣಾರೆ ನೋಡಿದ ಉಳಿದ ಮೂವರಲ್ಲಿ ಒಬ್ಬರಾದ ಫಿಟ್ಸ್‌ಬಾಬು, ತಾನು ಆಗ ಹಾಕಿಕೊಂಡಿದ್ದ ಹರಕಲು ಅಂಡರ್‌ವೇರ್‌ನಲ್ಲಿಯೇ ದಿಕ್ಕುತಿಳಿಯದೆ ಕೂಗಿಕೊಂಡು ಹೋದವರು ಇನ್ನೂ ಪತ್ತೆಯಿಲ್ಲ. ಎಲ್ಲಿದ್ದಾರೋ ಏನೋ, ಫಿಟ್ಸ್ ಖಾಲೆಯಿಂದ ಬಳಲುತ್ತಿರುವ ನಡುವಯಸ್ಸಿನ ಬಾಬು ಈ ದೇಶದ ಪ್ರಜಾಪ್ರಭುತ್ವದಂತೆಯೇ ಈಗೆಲ್ಲಿ ಹರಿದ ಅಂಡರ್ ವೇರ್‌ನಲ್ಲಿಯೇ ದಿಕ್ಕು ತಿಳಿಯದೆ ಅಲೆದಾಡುತ್ತಿದ್ದಾರೋ..

-ಟಿ.ಕೆ. ದಯಾನಂದ 

Sunday, October 23, 2011

ಎಬಿಸಿ ವರದಿಯೂ, ಕನ್ನಡ ಪತ್ರಿಕೆಗಳ ಪೈಪೋಟಿಯೂ...


ವಿಜಯ ಸಂಕೇಶ್ವರರ ಬಹುನಿರೀಕ್ಷೆಯ ದಿನಪತ್ರಿಕೆ ವಿಜಯ ವಾಣಿ ಆರಂಭವಾಗುವುದಕ್ಕೆ ಇನ್ನು ಎರಡು ಮೂರು ತಿಂಗಳಷ್ಟೇ ಬಾಕಿ ಉಳಿದಿದೆ. ಬರುವ ಜನವರಿಯಲ್ಲೇ ಪತ್ರಿಕೆ ಆರಂಭವಾಗುವ ಸಾಧ್ಯತೆಗಳು ಇವೆ. ಹಾಗಾಗಿ ಬರುವ ವರ್ಷ ಕನ್ನಡ ಪತ್ರಿಕೆಗಳ ನಡುವೆ ಹೊಸದೊಂದು ಪೈಪೋಟಿಯ ಕಾಲ ಆರಂಭವಾಗಲಿದೆ. ಸಂಕೇಶ್ವರರ ವಿಜಯವಾಣಿ ಹತ್ತು ಆವೃತ್ತಿಗಳೊಂದಿಗೆ ಆರಂಭವಾಗುವ ಮುನ್ಸೂಚನೆ ಇರುವುದರಿಂದ ಅದು ನೇರವಾಗಿ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಗೇ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇದು ಗಂಭೀರವಾದ ಪರಿಣಾಮ ಬೀರುವುದು ಉದಯವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಿಗೆ ಎನ್ನುವುದು ನಿಸ್ಸಂದೇಹ.

ಸದ್ಯಕ್ಕೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಒಟ್ಟು ಪ್ರಸಾರ ಸಂಖ್ಯೆ ಎಬಿಸಿ ವರದಿಯ ಪ್ರಕಾರ ಹದಿನೈದರಿಂದ ಹದಿನಾರು ಲಕ್ಷ ಮಾತ್ರ. ಇತರ ಭಾಷೆಗಳಿಗೆ ಹೋಲಿಸಿದರೆ ಇದು ಕಡಿಮೆ. ಕರ್ನಾಟಕದಲ್ಲಿ ಪತ್ರಿಕೆ ಕೊಂಡು ಓದುವವರ ಸಂಖ್ಯೆ ಕಡಿಮೆ. ಇಲ್ಲದಿದ್ದರೆ ಐದು ಕೋಟಿಗೂ ಮೀರಿದ ಜನಸಂಖ್ಯೆಗೆ ಕನಿಷ್ಠ ೪೦ ಲಕ್ಷವಾದರೂ ಪತ್ರಿಕೆಗಳು ಖರ್ಚಾಗಬೇಕಿತ್ತು. ವಿಜಯವಾಣಿ ಹೊಸ ಓದುಗರನ್ನು ಪಡೆದು ಅಖಾಡಕ್ಕೆ ಇಳಿದರೆ ಅದು ಕನ್ನಡ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಂಡು ಬೆಳೆದರೆ? ಇತರ ಪತ್ರಿಕೆಗಳು ಬೆದರಿರುವುದು ಇದೇ ಕಾರಣಕ್ಕೆ.

ಸದ್ಯಕ್ಕೆ ಕನ್ನಡ ಪತ್ರಿಕೋದ್ಯಮದಲ್ಲಿ ನಂ.೧ ಪಟ್ಟಕ್ಕೆ ಸ್ಪರ್ಧೆ ಇರುವುದು ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಗಳ ನಡುವೆ ಮಾತ್ರ. ಮೊದಲ ಸ್ಥಾನದಲ್ಲಿರುವ ವಿಜಯ ಕರ್ನಾಟಕದ ಪ್ರಸಾರ ಸಂಖ್ಯೆಗಿಂದ ಪ್ರಜಾವಾಣಿಯ ಪ್ರಸಾರ ಸಂಖ್ಯೆ ಎಬಿಸಿ ಜನವರಿ-ಜೂನ್-೨೦೧೧ರ ವರದಿ ಪ್ರಕಾರ ೫೪ಸಾವಿರದಷ್ಟು ಮಾತ್ರ ಕಡಿಮೆ ಇದೆ. ಇದನ್ನು ಮೀರಲು ಸಾಧ್ಯವಾದರೆ ಪ್ರಜಾವಾಣಿ ಮತ್ತೆ ತನ್ನ ನಂ.೧ ಸ್ಥಾನವನ್ನು ಪಡೆಯಲಿದೆ. ಎಬಿಸಿ ವರದಿ ಪ್ರಕಾರ ೨೦೧೧ ಜನವರಿ-ಜೂನ್ ಅವಧಿಯಲ್ಲಿ ಪ್ರಜಾವಾಣಿ ಒಂದು ಸಾವಿರರಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲಷ್ಟೇ ಸಾಧ್ಯವಾಗಿದೆ. ಇದೇ ಸಮಯದಲ್ಲಿ ವಿಜಯ ಕರ್ನಾಟಕ ತನ್ನ ೫೦೦೦ದಷ್ಟು ಪ್ರಸಾರ ಸಂಖ್ಯೆ ಕಳೆದುಕೊಂಡಿದೆ.

ಮೂರನೇ ಸ್ಥಾನದಲ್ಲಿರುವ ಉದಯವಾಣಿಗೂ ಪ್ರಜಾವಾಣಿಗೂ ನಡುವಿನ ಅಂತರ ಗಣನೀಯ ಪ್ರಮಾಣದ್ದಾಗಿದೆ. ಮೂರನೇ ಸ್ಥಾನದಲ್ಲಿರುವ ಉದಯವಾಣಿಗಿಂತ ಸುಮಾರು ೨,೮೦,೦೦೦ದಷ್ಟು ಪ್ರಜಾವಾಣಿಯ ಪ್ರಸಾರ ಸಂಖ್ಯೆ ಹೆಚ್ಚು. ಉದಯವಾಣಿಯ ಮಟ್ಟಿಗೆ ಖುಷಿಯ ಬೆಳವಣಿಗೆ ಏನೆಂದರೆ ಈ ವರ್ಷದ ಪ್ರಥಮಾರ್ಧದಲ್ಲಿ ಅದು ಶೇ.೮ರಷ್ಟು ಪ್ರಸಾರ ಸಂಖ್ಯೆಯ ಬೆಳವಣಿಗೆಯನ್ನು ಕಂಡಿದೆ. ಇದು ಇತರ ಎಲ್ಲ ಪತ್ರಿಕೆಗಳಿಗಿಂತ ಹೆಚ್ಚು. ಸರಿಸುಮಾರು ೨೧ ಸಾವಿರದಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಉದಯವಾಣಿ ಸಫಲವಾಗಿದೆ.

ನಾಲ್ಕನೇ ಸ್ಥಾನದಲ್ಲಿರುವ ಕನ್ನಡಪ್ರಭ ಪತ್ರಿಕೆ ಉದಯವಾಣಿಗಿಂತಲೂ ೫೪ ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿದೆ. ಆದರೂ ಶೇ.೪ರಷ್ಟು ಬೆಳವಣಿಗೆ ಸಾಧಿಸಲು ಅಂದರೆ ಸುಮಾರು ೯,೦೦೦ ಹೆಚ್ಚು ಪ್ರಸಾರ ಸಂಖ್ಯೆಯನ್ನು ಹೊಂದಲು ಕನ್ನಡಪ್ರಭ ಯಶಸ್ವಿಯಾಗಿದೆ. ಇನ್ನು ಕನ್ನಡಪ್ರಭಕ್ಕಿಂತ ೩೫ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿರುವ ಸಂಯುಕ್ತ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಎಬಿಸಿ ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ನಿಖರವಾಗಿ ಹೇಳುತ್ತದೆ. ಅದು ಪತ್ರಿಕೆಗಳ ಪ್ರಿಂಟಿಂಗ್ ಸೆಕ್ಷನ್‌ಗಳಿಗೇ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಹೀಗಾಗಿ ಎಬಿಸಿ ನೀಡುವ ಅಂಕಿಅಂಶಗಳು ಅತ್ಯಂತ ವಿಶ್ವಾಸಾರ್ಹವಾಗಿರುತ್ತದೆ.

ಕನ್ನಡ ಪತ್ರಿಕೆಗಳ ೨೦೧೧ರ ಪ್ರಥಮಾರ್ಧದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಬಹುಶಃ ದ್ವಿತೀಯಾರ್ಧದಲ್ಲೂ ಅಂಥ ಬದಲಾವಣೆಗಳು ಕಾಣಿಸುವ ಸಾಧ್ಯತೆ ಕಡಿಮೆ. ಆದರೆ ವಿಜಯವಾಣಿ ಬಂದ ನಂತರ ಒಂದಷ್ಟು ಬದಲಾವಣೆ ಆಗೇತೀರುತ್ತದೆ ಎಂಬ ಮಾತು ಮಾಧ್ಯಮ ಪಂಡಿತರಲ್ಲಿದೆ.

ತಿಮ್ಮಪ್ಪ ಭಟ್ಟರು ವಿಜಯವಾಣಿ ಆರಂಭಕ್ಕೆ ಮುನ್ನ ಬೇಕಿರುವ ಎಲ್ಲ ಪೂರ್ವಸಿದ್ಧತೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ. ಹಲವು ಪತ್ರಿಕೆಗಳಿಗಿಂದ ಗುಳೆ ಹೋಗುವ ಕಾರ್ಯ ನಿಧಾನವಾಗಿ ಆರಂಭವಾಗಿದೆ. ಉದಯವಾಣಿಯಿಂದ ಕೆಲವರು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ಒಳ್ಳೆ ಹೆಸರು ಮಾಡಿರುವ, ಅಪಾರ ಶ್ರದ್ಧೆಯ ಹಿರಿಯ ವರದಿಗಾರ ರುದ್ರಣ್ಣ ಹರ್ತಿಕೋಟೆ ವಿಜಯವಾಣಿಯ ಪ್ರಮುಖ ಹುದ್ದೆಗೆ ತೆರಳಲಿದ್ದಾರೆ. (ಮುಖ್ಯ ವರದಿಗಾರ?) ಇನ್ನೂ ಯಾರ‍್ಯಾರು ಹೋಗುತ್ತಾರೋ ಕಾದು ನೋಡಬೇಕು.

ಮುಂದಿನ ವರ್ಷ ಕನ್ನಡ ಪತ್ರಿಕೆಗಳ ನಡುವೆ ಪೈಪೋಟಿಯಂತೂ ನಿಜ. ವಿಜಯ ಕರ್ನಾಟಕ ತನ್ನ ನಂ.೧ ಸ್ಥಾನ ಕಳೆದುಕೊಳ್ಳುತ್ತಾ? ಪ್ರಜಾವಾಣಿ ನಂ.೧ ಪಟ್ಟಕ್ಕೆ ಏರುತ್ತಾ? ವಿಜಯ ವಾಣಿ ಎಷ್ಟು ಎತ್ತರ ಏರಲು ಸಾಧ್ಯ?

ಅಷ್ಟಕ್ಕೂ ವಿಜಯವಾಣಿ ಇತರ ಪತ್ರಿಕೆಗಳ ಓದುಗರನ್ನು ಸೆಳೆದುಕೊಂಡರೆ, ಯಾವ ಪತ್ರಿಕೆ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ? ಸಂಕೇಶ್ವರರೇ ಸ್ಥಾಪಿಸಿದ ವಿಜಯ ಕರ್ನಾಟಕವೇ? ಒಂದು ಕಾಲದಲ್ಲಿ ಸಂಕೇಶ್ವರರ ನೆಚ್ಚಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು ನೇತೃತ್ವ ವಹಿಸಿರುವ ಕನ್ನಡಪ್ರಭವೇ? ಮಣಿಪಾಲದ ನೆರಳಿನಿಂದ ಹೊರಬಂದು ಬೆಂಗಳೂರಿನಲ್ಲಿ ಪ್ರಬಲವಾಗಿ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸುತ್ತಿರುವ ಉದಯವಾಣಿಯೇ? ಅಥವಾ ತನ್ನ ಸಾಂಪ್ರದಾಯಿಕ ಓದುಗರನ್ನು ತೀವ್ರವಾಗಿ ನೆಚ್ಚಿಕೊಂಡಿರುವ ಪ್ರಜಾವಾಣಿಯೇ?

ಕಾದು ನೋಡೋಣ.

Wednesday, October 19, 2011

ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆ...


ಬೇಜಾರು ಕಣ್ರೀ. ಮೀಡಿಯಾ ಬಗ್ಗೆ, ರಾಜಕಾರಣ ಬಗ್ಗೆ ಬರೆದೂ ಬರೆದೂ ಬೇಜಾರು. ಅದಕ್ಕೆ ಸುಮ್ಮನೆ ಒಂದು ಮಕ್ಕಳ ಕಥೆ ಬರೆದಿದ್ದೇವೆ. ಓದಿ ಖುಷಿಯಾದರೆ ಗುಡ್ ಅನ್ನೋ ಬಟನ್ ಒತ್ತಿ ಹೋಗಿ. ಚೆನ್ನಾಗಿಲ್ಲ ಅಂದ್ರೆ ಬ್ಯಾಡ್ ಅನ್ನಿ. ಬೇಜಾರು ಮಾಡಿಕೊಳ್ಳಲ್ಲ...

ಒಂದೂರಿನಲ್ಲಿ ಒಬ್ಬ ಪಾಳೇಗಾರ ಇದ್ದ. ಅವನ ಹೆಸರು ಶಾಲಿವಾಹನ ಅಂತ ಇಟ್ಟುಕೊಳ್ಳಿ. ಪಾಳೇಗಾರನಿಗೆ ಪಕ್ಕದ ಊರಿನ ಮತ್ತೊಬ್ಬ ಪಾಳೇಗಾರ ಕ್ಲೋಸ್ ಫ್ರೆಂಡು. ಅವನ ಹೆಸರು ಬಬ್ರುವಾಹನ.  ಇಬ್ಬರೂ ಆಗಾಗ ಭೇಟಿ ಮಾಡ್ಕೊಂಡು ಹರಟೆ ಹೊಡಿಯೋರು, ನಾಟಕ ನೋಡೋರು, ಒಟ್ಟಿಗೆ ಕೂತ್ಗಂಡು ಊಟ ಮಾಡೋರು. ಇಬ್ಬರೂ ಸೇರ‍್ಕಂಡು ಖಂಡಾಪಟ್ಟೆ ಆಸ್ತಿನೂ ಮಾಡ್ತಾ ಇದ್ರು.

ಶಾಲಿವಾಹನನಿಗೆ ಒಬ್ಬ ಸೇನಾಧಿಪತಿ ಇದ್ದ. ಯಾವಾಗಲೂ ಸೊಂಟದಲ್ಲಿ ಬಾಕು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಸಿಕ್ಕಸಿಕ್ಕವರನ್ನೆಲ್ಲ ತಿವಿಯೋದೇ ಅವನ ಕೆಲಸ. ಅವನ ಹೆಸರು ಗರುಡವಾಹನ ಅಂತ. ಏನಾಯ್ತಪ್ಪ ಅಂದ್ರೆ ಈ ಗರುಡವಾಹನನಿಗೂ ಬಬ್ರುವಾಹನನಿಗೂ ಆಗಿ ಬರಲೇ ಇಲ್ಲ. ಇಬ್ಬರೂ ಪಟಾಪಟಾಂತ ಪರಸ್ಪರ ಕಪಾಳಕ್ಕೆ ಹೊಡೆದುಕೊಳ್ತಾ ಇದ್ರು. ಜಗಳ ಮಾಡಕ್ಕೆ ಇಂಥದ್ದು ಅಂತ ಒಂದು ಕಾರಣನೂ ಬೇಕಾಗಿರಲಿಲ್ಲ. ಸುಮ್ ಸುಮ್‌ನೆ ಜಗಳ ಆಡೋರು. ಹಿಂಗೆಲ್ಲಾ ಆಗ್ತಾ ಇರುವಾಗ ಶಾಲಿವಾಹನ ಮಾತ್ರ ಸುಮ್ನೆ ಮೀಸೆ ಮರೆಯಲ್ಲೇ ನಗ್ತಾ ಇರ‍್ತಿದ್ದ. ಜಗಳ ಬಿಡಿಸೋಕ್ಕೂ ಹೋಗ್ತಾ ಇರ‍್ಲಿಲ್ಲ.

ಒಂದು ದಿವ್ಸ ಏನಾಯ್ತು ಅಂದ್ರೆ, ಶಾಲಿವಾಹನ ಏನೇನೋ ಸಮಸ್ಯೆ ಮಾಡಿಕೊಂಡು ಅವನ ಪಾಳೇಪಟ್ಟಿನ ಜನರೆಲ್ಲ ತಿರುಗಿಬಿದ್ರು. ಶಾಲಿವಾಹನ ಊರು ಬಿಡಬೇಕಾಗಿ ಬಂತು. ಜತೆಗೆ ಸೇನಾಧಿಪತಿ ಗರುಡವಾಹನನೂ ಅವನ ಸಕಲ ಕಾಲಾಳುಗಳೂ ಊರು ಬಿಟ್ಟರು. ಸಿಕ್ಕಿದ್ದೇ ಛಾನ್ಸು ಅಂತ ಬಬ್ರುವಾಹನ ಒಂದೇ ಸಮನೆ ದಾಳಿ ಶುರು ಮಾಡಿದ. ಸ್ನೇಹಿತ ಅಂತಾನೂ ಮುಖಮೂತಿ ನೋಡದೆ ಶಾಲಿವಾಹನನಿಗೂ, ಗರುಡವಾಹನನಿಗೂ ಚಚ್ಚತೊಡಗಿದೆ. ಪಾಪ, ಯುದ್ಧ ಮಾಡಣ ಅಂದ್ರೆ ಪಾಳೇಪಟ್ಟೆ ಇಲ್ಲ ಶಾಲಿವಾಹನನಿಗೆ.

ಆಮೇಲೆ ಶಾಲಿವಾಹನ ಏನೇನೋ ಮಾಡಿ, ಏನೋ ಒಂದು ಪಾಳೇಪಟ್ಟು ರೆಡಿ ಮಾಡ್ಕಂಡ. ಹಿಂದಿನ ಪಾಳೇಪಟ್ಟಿನಷ್ಟು ದೊಡ್ಡದಲ್ಲದಿದ್ದರೂ ಏನೋ ಒಂದು ಲೆವೆಲ್ಲಿಗೆ ಪರವಾಗಿಲ್ಲ ಅನ್ನಿಸುವಂಥ ಪಾಳೇಪಟ್ಟು ಅದು. ಒಂದು ಸಲ ಕೈಗೆ ಅಧಿಕಾರ ಸಿಕ್ಕಿದ್ದೇ ತಡ ಶಾಲಿವಾಹನನೂ, ಗರುಡವಾಹನನೂ ಒಟ್ಟಾಗಿ ಸೇರಿ ಬಬ್ರುವಾಹನನ ಮೇಲೆ ಯುದ್ಧ ಅನೌನ್ಸ್ ಮಾಡಿದ್ರು. ಭೀಕರ ಕಾಳಗ ಶುರುವಾಗಿ ಹೋಯ್ತು. ಯಾವ ಪರಿ ಜಗಳ ಆಡುದ್ರು ಅಂದ್ರೆ ಜನ ಎಲ್ಲ ಕ್ಯಾಕರಿಸಿ ಉಗಿದು, ಆಡ್ಕೊಂಡು ನಗೋ ಹಂಗೆ ಆಯ್ತು.

ಹಿಂಗೇ ಕಾಲ ಹೋಗ್ತಾ ಇರಬೇಕಾದ್ರೆ, ಬಬ್ರುವಾಹನ ಪಟ್ಟಕ್ಕೆ ಬಂದ ೧೬ನೇ ವರ್ಷದ ಆಚರಣೆ ಬಂತು. ಇಂಥ ಸಂದರ್ಭದಲ್ಲಿ ಬಬ್ರುವಾಹನನಿಗೆ ತನ್ನ ಗೆಳೆಯ ಶಾಲಿವಾಹನನ ಮೇಲೆ ಸಿಕ್ಕಾಪಟ್ಟೆ ಲವ್ ಬಂದು ಬಿಟ್ಟಿತು. ಸೀದಾ ಬಂದು ಶಾಲಿವಾಹನನನ್ನು ತಬ್ಬಿಕೊಂಡು ನೋಡು ಗೆಳೆಯಾ, ನಾನು ಈ ಲೆವೆಲ್ಲಿಗೆ ನನ್ನ ಪಾಳೇಪಟ್ಟು ಬೆಳೆಸೋದಿಕ್ಕೆ ನೀನೂ ಒಂದು ಕಾರಣ. ತುಂಬಾ ಥ್ಯಾಂಕ್ಸು ಕಣೋ ಅಂದ. ಅದೆಲ್ಲ ಸರಿ, ನೀನು ಅನ್ಯಾಯವಾಗಿ ನನ್ನ ಮೇಲೆ ಯುದ್ಧ ಮಾಡಿ ಮಾನಸಿಕವಾಗಿ ಘಾಸಿಗೊಳಿಸಿಬಿಟ್ಟಲ್ಲ ಯಾಕೆ ಅಂತ ಶಾಲಿವಾಹನ ಕೇಳಿದ. ಏನ್ ಬಿಡೋ ಮರಾಯ. ಒಂದು ವರ್ಷದ ಜಗಳ ಇದು, ಈ ಪುಟಗೋಸಿ ಜಗಳಕ್ಕೆ ನಮ್ಮ ೧೬ ವರ್ಷದ ಸ್ನೇಹ ಬಲಿಯಾಗಬೇಕಾ ಅಂತೇನೋ ಎಮೋಷನಲ್ ಆಗಿ ಮಾತನಾಡತೊಡಗಿದ ಬಬ್ರುವಾಹನ.

ಏನಪ್ಪಾ ಅಂದ್ರೆ, ಈ ಶಾಲಿವಾಹನನೂ, ಬಬ್ರುವಾಹನನೂ ಒಟ್ಟಿಗೆ ಗೆಳೆಯರಾಗಿದ್ದಾಗ ಯಾರ‍್ಯಾರದೋ ಸಹವಾಸ ಮಾಡಿ ಅನೈತಿಕ ಮಾರ್ಗದಿಂದ ಪಾಳೇಪಟ್ಟು ಬೆಳೆಸಿಕೊಂಡಿದ್ದರು. ಅದೆಲ್ಲವೂ ಮಹಾರಾಜರಿಗೆ ಗೊತ್ತಾಗಿ ಹೋಗಿತ್ತು. ಇಬ್ಬರ ಮೇಲೂ ಮಹಾರಾಜರು ಕಣ್ಣಿಟ್ಟುಬಿಟ್ಟಿದ್ದರು. ಮಹಾರಾಜರೇನೂ ಏಟು ಕೊಟ್ಟರೆ ಇಬ್ಬರಿಗೂ ಕೊಡುತ್ತಾರೆ. ಹೀಗಾಗಿ ಇಬ್ಬರಿಗೂ ಭಯ ಶುರುವಾಗಿ ಹೋಗಿತ್ತು.

ಹೀಗಾಗಿ ಬಬ್ರುವಾಹನ ಸ್ನೇಹದ ಪ್ರಸ್ತಾಪ ತಂದ ಕೂಡಲೇ ಶಾಲಿವಾಹನನೂ ಒಪ್ಪಿಕೊಂಡು, ಹಾಳಾಗ್ ಹೋಗ್ಲಿ ಬಿಡು. ನನ್ ತಂಟೆಗೆ ನೀನು ಬರಬೇಡ, ನಿನ್ ತಂಟೆಗೆ ನಾನು ಬರಲ್ಲ. ನಮ್ಮ ಗರುಡವಾಹನನ ಕಡೆ ಕಣ್ಣೆತ್ತಿನೂ ನೋಡಬೇಡ. ಒಟ್ಟಿಗೆ ಯಾವಾಗ್ಲಾದ್ರೂ ಸೇರಣ, ದ್ರಾಕ್ಷಾರಸ ಕುಡಿಯೋಣ ಅಂದು ಕೈಕುಲುಕೇಬಿಟ್ಟ.

ಆಮೇಲೆ ಅವರೆಲ್ಲ ಒಟ್ಟಿಗೆ ಸುಖವಾಗಿ ಬಾಳಿದರು.

(ಈ ಕಥೆ ಸಂಪೂರ್ಣ ಕಾಲ್ಪನಿಕ. ಕಥೆಯಲ್ಲಿನ ಪಾತ್ರಗಳು ನಿಜಜೀವನದ ಪಾತ್ರಗಳಿಗೆ ಹೋಲುತ್ತಿದ್ದರೆ ಅದೊಂದು ಪವಾಡ)

Tuesday, October 11, 2011

ಐಆರ್‌ಎಸ್ ಸರ್ವೆ ಕರ್ನಾಟಕ: ವಿಜಯ ಕರ್ನಾಟಕ ಈಗಲೂ ನಂ.೧


ಐಆರ್‌ಎಸ್ ಸರ್ವೆ ಬೆಂಗಳೂರು ಫಲಿತಾಂಶವನ್ನು ಕಳೆದ ಪೋಸ್ಟ್‌ನಲ್ಲಿ ಗಮನಿಸಿದ್ದಿರಿ. ಒಟ್ಟಾರೆ ಕರ್ನಾಟಕದ ಫಲಿತಾಂಶದ ವಿವರಗಳು ಇಲ್ಲಿವೆ. ಯಥಾಪ್ರಕಾರ ವಿಜಯ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ವಿಜಯ ಕರ್ನಾಟಕದ ಅಂದಾಜು ಓದುಗರ ಸಂಖ್ಯೆ ೩೪.೩೮ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೩೪.೭ರಷ್ಟಿತ್ತು. ಒಟ್ಟಾರೆಯಾಗಿ ಕಳೆದ ವರ್ಷವೊಂದರಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ಶೇ. ೫.೨ರಷ್ಟು ಏರಿದೆ.

ಎರಡನೇ ಸ್ಥಾನದಲ್ಲಿ ಇರುವ ಪ್ರಜಾವಾಣಿ ಕರ್ನಾಟಕದಾದ್ಯಂತ ಪ್ರಸಾರದಲ್ಲಿ ಗಣನೀಯ ಏರಿಕೆಯನ್ನು ದಾಖಲಿಸಿದೆ. ಆದರೆ ಕಳೆದ ತ್ರೈಮಾಸಿಕದಲ್ಲಿ ಶೇ.೧ರಷ್ಟು ಓದುಗರನ್ನು ಕಳೆದುಕೊಂಡಿದೆ ಕಳೆದ ಪ್ರಜಾವಾಣಿ ಅಂದಾಜು ಓದುಗರ ಸಂಖ್ಯೆ ೩೩.೬೯ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೩೪.೦೩ ಲಕ್ಷವಾಗಿತ್ತು.

ಮೂರನೇ ಸ್ಥಾನದಲ್ಲಿರುವ ಕನ್ನಡಪ್ರಭದ ಕಳೆದ ತ್ರೈಮಾಸಿಕದಲ್ಲಿ ಅಲ್ಪ ಏರಿಕೆಯನ್ನು ಕಂಡಿದೆ. ಓದುಗರ ಅಂದಾಜು ಸಂಖ್ಯೆ ಈಗ ೧೩.೫೪ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೧೩.೩೪ ಲಕ್ಷವಾಗಿತ್ತು. ಕಳೆದ ವರ್ಷದಲ್ಲಿ ಕನ್ನಡಪ್ರಭದ ಓದುಗರ ಸಂಖ್ಯೆ ಹೆಚ್ಚಳವಾಗಿದ್ದು, ೮.೬೨ ಲಕ್ಷ ಓದುಗರಿದ್ದ ಪತ್ರಿಕೆ ಸಾಕಷ್ಟು ಏರಿಕೆ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕದ ಓದುಗರ ಸಂಖ್ಯೆ ಈಗ ೧೧.೭೬ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೧೩.೦೬ ಲಕ್ಷವಾಗಿತ್ತು. ಅಂದರೆ ಪತ್ರಿಕೆ ಗಣನೀಯ ಸಂಖ್ಯೆಯಲ್ಲಿ ತನ್ನ ಓದುಗರನ್ನು ಕಳೆದುಕೊಂಡಿದೆ. ಆದರೂ ಕಳೆದ ವರ್ಷ ಶೇ. ೧೯.೫ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಉದಯವಾಣಿ ಪತ್ರಿಕೆ ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡದ್ದನ್ನು ಈ ತ್ರೈಮಾಸಿಕದಲ್ಲಿ ಗಳಿಸಿಕೊಳ್ಳಲು ಯಶಸ್ವಿಯಾಗಿದೆ. ಶೇ.೧೦.೩ರಷ್ಟು ಓದುಗರ ಸಂಖ್ಯೆ ಹೆಚ್ಚಿದ ಪರಿಣಾಮ ಈಗ ಅದರ ಪ್ರಸಾರ ಸಂಖ್ಯೆ ೯.೮೫ ಲಕ್ಷವಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಶೇ. ೨೪ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನಂತರದ ಸ್ಥಾನಗಳಲ್ಲಿದ್ದು, ಸಂಜೆವಾಣಿ, ಬೆಂಗಳೂರು ಮಿರರ್ ಮತ್ತು ತರುಣ್ ಭಾರತ್ ಪತ್ರಿಕೆಗಳು ಕಡೆಯ ಮೂರು ಸ್ಥಾನಗಳಲ್ಲಿವೆ.