Monday, February 21, 2011

ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...


ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನ್ನಡಪ್ರಭ ನಂ.೧ ಪತ್ರಿಕೆಯಾಗಬಹುದೇ ಎಂಬ ಪ್ರಶ್ನೆ ಇಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಅಗ್ದಿ ಜೋರಾಗಿಯೇ ಮತದಾನ ನಡೆದಿದೆ. ಒಟ್ಟು ೪೭೦ ಮಂದಿ ವೆಬ್ ಓದುಗರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ೨೪೪ ಜನರಿಗೆ ವಿಶ್ವೇಶ್ವರ ಭಟ್ಟರು ಕನ್ನಡಪ್ರಭವನ್ನು ನಂ.೧ ಮಾಡುತ್ತಾರೆ ಎಂಬ ವಿಶ್ವಾಸವಿದೆ. ೨೦೭ ಮಂದಿ ಇದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ೧೯ ಮಂದಿ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರಿಸುಮಾರು ಶೇ.೫೧ರಷ್ಟು ಜನರಿಗೆ ಭಟ್ಟರ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆ ಇದೆ. ಶೇ.೪೪ರಷ್ಟು ಮಂದಿ ಪತ್ರಿಕೆಗಳ ಸೆಣೆಸಾಟದಲ್ಲಿ ಭಟ್ಟರು ಕನ್ನಡಪ್ರಭವನ್ನು ನಂ.೧ ಮಾಡಲಾರರು ಎಂದು ಬಲವಾಗಿ ನಂಬಿದ್ದಾರೆ. ಶೇ. ೪ರಷ್ಟು ಮಂದಿಗೆ ಈ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಂತೆ ಕಾಣುವುದಿಲ್ಲ.

ಕಾದು ನೋಡೋಣ, ಏನಾಗುತ್ತದೆ ಎಂಬುದನ್ನು.

ಅದು ಸರಿ, ಈಗ ಒಟ್ಟು ಐದು ನ್ಯೂಸ್ ಚಾನಲ್‌ಗಳು ಕನ್ನಡದಲ್ಲಿವೆ. ಈ ಪೈಕಿ ಉದಯ ನ್ಯೂಸ್ ಹೆಸರಿಗೆ ಮಾತ್ರ ನ್ಯೂಸ್ ಚಾನಲ್ ಆಗಿದೆ, ಅದನ್ನು ಬೇರೆ ನ್ಯೂಸ್ ಚಾನಲ್‌ಗಳ ಜತೆ ಪೈಪೋಟಿಗೆ ನಿಲ್ಲಿಸಲು ಅದರ ಮಾಲೀಕರಿಗೇ ಇಷ್ಟವಿದ್ದಂತಿಲ್ಲ. ಇನ್ನು ಉಳಿದಿರುವವು ನಾಲ್ಕು; ಟಿವಿ೯, ಸುವರ್ಣ ನ್ಯೂಸ್, ಸಮಯ ಹಾಗು ಜನಶ್ರೀ ನ್ಯೂಸ್. ಹೊಸ ಚಾನಲ್‌ಗಳು ಬಂದಂತೆಲ್ಲ ಹೊಸಹೊಸ ಮುಖಗಳು ಸುದ್ದಿ ನಿರೂಪಕರಾಗಿ, ವಿಶ್ಲೇಷಕರಾಗಿ ಕಾಣಿಸಿಕೊಳ್ಳುತ್ತಿವೆ. ಇವತ್ತು ಇದೇ ನಿರೂಪಕರು ಕನ್ನಡ ಮೀಡಿಯಾದ ಹೊಸ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಅವರುಗಳ ನಡುವೆಯೂ ಆರೋಗ್ಯಕರ ಪೈಪೋಟಿ ಜಾರಿಯಲ್ಲಿದೆ.

ಈಗ ಹೇಳಿ, ನಿಮಗೆ ಯಾರು ತುಂಬ ಇಷ್ಟವಾಗುವ ಟಿವಿ ಸ್ಟಾರ್? ನಿಮ್ಮ ಆಯ್ಕೆಗೆಂದು ಚಾಲ್ತಿಯಲ್ಲಿರುವ, ಜನಪ್ರಿಯರಾಗಿರುವ ಕೆಲವರ ಹೆಸರನ್ನು ಇಲ್ಲಿ ಸೂಚಿಸಿದ್ದೇವೆ. ನಿಮಗೆ ಇಷ್ಟವಾಗುವವರಿಗೆ ಮರೆಯದೆ ಓಟ್ ಮಾಡಿ. ಒಬ್ಬರಿಗೇ ಓಟ್ ಮಾಡಬೇಕು ಅಂತ ಏನೂ ಇಲ್ಲ, ನಿಮಗೆ ಇಷ್ಟವಾಗುವ ಎಲ್ಲರಿಗೂ ನೀವು ಓಟ್ ಮಾಡಬಹುದು. ಈ ಬಾರಿ ಆ ಅವಕಾಶವನ್ನು ಕಲ್ಪಿಸಲಾಗಿದೆ. ಮತ ಚಲಾಯಿಸುವುದಕ್ಕೆ ಮುನ್ನ ನಾವು ಆಯ್ದು ನೀಡಿರುವ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯವನ್ನೂ ಒಮ್ಮೆ ಗಮನಿಸಿ.

ಹಮೀದ್ ಪಾಳ್ಯ: ಈಟಿವಿ ಮೂಲಕ ಪರಿಚಿತರಾದವರು. ಅಲ್ಲಿ ಸುದ್ದಿ ವಾಚಕರಾಗಿದ್ದವರು ಟಿವಿ೯ಗೆ ಬಂದ ಕೂಡಲೇ ಸ್ಟಾರ್ ಆದರು. ಪಕ್ಕಾ ಪ್ರೊಫೆಷನಲ್. ಯಾವುದನ್ನು ಕೊಟ್ಟರೂ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ; ಅದಕ್ಕೆ ತಕ್ಕ ಅಧ್ಯಯನ. ಹಮೀದ್ ಎಂದರೆ ಒಂದು ಪಾಸಿಟಿವ್ ಎನರ್ಜಿ, ಪುಟಿಯುವ ಉತ್ಸಾಹ. ಹೀಗಾಗಿಯೇ ಅವರು ಬಹಳಷ್ಟು ವೀಕ್ಷಕರಿಗೆ ಅಚ್ಚುಮೆಚ್ಚು.

ರಂಗನಾಥ್ ಭಾರದ್ವಾಜ್: ಇವರೂ ಕೂಡ ಈಟಿವಿ ಪ್ರಾಡಕ್ಟೇ. ಟಿವಿ೯ನಲ್ಲಿ ಜನಪ್ರಿಯತೆ ಗಳಿಸಿದವರು. ಒಂದು ಸಿನಿಮಾಕ್ಕೆ ನಾಯಕರೂ ಹೌದು. ಲಘು ಹಾಸ್ಯ ಮಿಶ್ರಿತ ಶೈಲಿ, ಧ್ವನಿಯ ಏರಿಳಿತದಲ್ಲೇ ಮೋಡಿ ಮಾಡುವ ಕಲೆಗಾರ. ಸದ್ಯಕ್ಕೆ ಸುವರ್ಣ ನ್ಯೂಸ್ ಬಿಟ್ಟಿದ್ದಾರೆ. ಸಿನಿಮಾ ಶೂಟಿಂಗು ಮುಗಿಸಿದ ಮೇಲೆ ಜನಶ್ರೀ ಸೇರುತ್ತಾರೆ ಎಂಬುದು ವದಂತಿ.

ರೆಹಮಾನ್ ಹಾಸನ್: ಪವರ್ ಹೌಸ್ ಪರ್ಫಾಮರ್. ಖಚಿತವಾದ ಮಾತು, ದೃಢವಾದ ಧ್ವನಿ, ಸ್ಪಷ್ಟವಾದ ಉಚ್ಛಾರಣೆ. ಟಿವಿ೯ನಿಂದ ಹಲವರು ಗುಳೆ ಹೋದಾಗ ತಾನೇ ಮುಂದೆ ನಿಂತು ಕೊರತೆಯಾಗದಂತೆ ನೋಡಿಕೊಂಡ ನಿಷ್ಠಾವಂತ. ಮೂರು-ನಾಲ್ಕು ಗಂಟೆ ಸತತ ಕಾರ್ಯಕ್ರಮ ನಡೆಸಿರುವ ರೆಹಮಾನ್ ಟಿವಿ೯ನ ಸದ್ಯದ ಆಸ್ತಿ.

ಲಕ್ಷ್ಮಣ್ ಹೂಗಾರ್: ಕಮ್ಯುನಿಸ್ಟ್ ಹಿನ್ನೆಲೆ. ಜನವಾಹಿನಿ, ಕನ್ನಡಪ್ರಭದಲ್ಲಿ ಮೊದಲು ಸೇವೆ. ನಂತರ ಟಿವಿ೯ನಲ್ಲಿ ರಾಜಕೀಯ ವರದಿಗಾರ. ಈಗ ಚಕ್ರವ್ಯೂಹ ನಡೆಸುತ್ತಾರೆ, ಹಾಗೆಯೇ ರಾಜಕೀಯ ಸಂಬಂಧಿ ವಿಶೇಷ ಕಾರ್ಯಕ್ರಮಗಳನ್ನೂ ಕೂಡ. ಸೈದ್ಧಾಂತಿಕ ಸ್ಪಷ್ಟತೆ, ನಿಖರವಾದ ರಾಜಕೀಯ ಜ್ಞಾನ ಇರುವ ಹೂಗಾರ್ ಬಿಡುವಿನ ಸಮಯದಲ್ಲಿ ತನ್ನ ಸಣ್ಣ ತೋಟದಲ್ಲಿ ಭೂಮಿ, ಪ್ರಕೃತಿಯ ಜತೆ ಮುಖಾಮುಖಿಯಾಗಿ ಎಲ್ಲವನ್ನೂ ಮರೆಯುತ್ತಾರೆ.

ಚಂದ್ರೇಗೌಡ: ಕನ್ನಡಪ್ರಭ, ಈಟಿವಿಗಳಲ್ಲಿದ್ದು, ನಂತರ ಕೆಲಕಾಲ ಇಂಗ್ಲಿಷ್ ಮ್ಯಾಗಜೀನ್ ಒಂದಕ್ಕೆ ಕೆಲಸ ಮಾಡಿ, ಸುವರ್ಣದಲ್ಲಿದ್ದು ಇದೀಗ ಸಮಯದಲ್ಲಿರುವ ಚಂದ್ರೇಗೌಡ ಅವರ ಸದ್ಯದ ಡೆಸಿಗ್ನೇಷನ್ ಮುಖ್ಯ ವರದಿಗಾರ. ಪತ್ನಿ ಶಾರದಾ ನಾಯಕ್ ಕೂಡ ಪತ್ರಕರ್ತೆಯಾಗಿದ್ದವರು. ರಾಜಕೀಯ ಸಂಬಂಧಿ ಕಾರ್ಯಕ್ರಮಗಳನ್ನು ಚೆನ್ನಾಗಿ ನಡೆಸಿಕೊಡುತ್ತಾರೆ.

ಶಿವಪ್ರಸಾದ್ ಟಿ.ಆರ್.: ಟಿವಿ೯ನ ಮತ್ತೊಂದು ಆಸ್ತಿ. ಈಜಿಪ್ಟ್‌ನಲ್ಲಿ ಕ್ರಾಂತಿಯಾದರೆ, ದಿಲ್ಲಿಯಲ್ಲಿ ಚಳಿ ಬಿದ್ದರೆ, ಮಾಲೆಗಾಂವ್‌ನಲ್ಲಿ ಬಾಂಬ್ ಇದ್ದರೆ, ಹೀಗೆ ಎಲ್ಲಿ ಏನೇ ಆದರೂ ಶಿವಪ್ರಸಾದ್ ಅವರ ಧ್ವನಿಯೇ ಟಿವಿ೯ನಲ್ಲಿ ಕೇಳಿಬರುತ್ತದೆ. ಹೀಗೆ ಎಲ್ಲಕ್ಕೂ ಸ್ಪಂದಿಸುವ, ಅರಿತುಕೊಳ್ಳುವ ಅದಕ್ಕಾಗಿ ಅಧ್ಯಯನ ಮಾಡುವ ಶಿಸ್ತು ಶಿವಪ್ರಸಾದ್ ಅವರಿಗಿದೆ. ಕನ್ನಡ, ಇಂಗ್ಲಿಷ್ ಎರಡರಲ್ಲೂ ಬರೆಯುವ ಆರೋಗ್ಯಕರ ಅಭ್ಯಾಸವೂ ಇವರಿಗಿದೆ.

ಗೌರೀಶ್ ಅಕ್ಕಿ: ಇವರೂ ಕೂಡ ಈಟಿವಿಯಿಂದ ಬಂದವರೇ. ಸುವರ್ಣ ನ್ಯೂಸ್‌ನಲ್ಲಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿದ್ದರೆ ಅಲ್ಲಿ ಅಕ್ಕಿ ಇರುತ್ತಾರೆ. ಅದು ವಿಶೇಷ ಪರಿಣತಿ, ಮಿಕ್ಕಂತೆ ರಾಜಕೀಯ, ಕಲೆ ಇತ್ಯಾದಿ ಎಲ್ಲಕ್ಕೂ ಸೈ. ಮೃದು ಮಾತು, ಅಪೀಲಿಂಗ್ ಆಗುವ ವ್ಯಾಖ್ಯಾನ ಇವರ ವಿಶೇಷ.

ರಮಾಕಾಂತ್: ಹಿಂದೆ ಟಿವಿ೯ನಲ್ಲಿದ್ದು, ನಂತರ ಕಸ್ತೂರಿ ಸೇರ್ಪಡೆಯಾಗಿ, ವಾಪಾಸು ಟಿವಿ೯ಗೆ ಬಂದು, ಇದೀಗ ಜನಶ್ರೀಯಲ್ಲಿರುವ ರಮಾಕಾಂತ್ ಸದ್ಯಕ್ಕೆ ಜನಶ್ರೀಯ ಮುಖ್ಯ ನಿರೂಪಕ. ಗಂಟೆಗಟ್ಟಲೆ ಕಾರ್ಯಕ್ರಮ ನಡೆಸುವ ಕ್ಷಮತೆ ಇದೆ ಎನ್ನುವುದು ಪ್ಲಸ್ ಪಾಯಿಂಟ್.

ಎಲ್ಲಾ ಸರಿ, ಹೆಣ್ಣು ಮಕ್ಕಳ ಹೆಸರೇ ಇಲ್ವಲ್ಲ ಅಂದಿರಾ? ಅವರ ಸಂಖ್ಯೆ ದೊಡ್ಡದು, ಅವರ ಕುರಿತು ಇನ್ನೊಮ್ಮೆ ಸಮೀಕ್ಷೆ ಮಾಡೋಣ. ಈಗ ದಯಮಾಡಿ ಓಟ್ ಮಾಡಿ, ಕಾಯ್ತಾ ಇರ‍್ತೀವಿ.

12 comments:

 1. ಒಳ್ಳೇ ಸಮೀಕ್ಷೆ, ನೀವು ಹೇಳಿದಂತೆ ಓಟ್ ಮಾಡಿದ್ದೇನೆ. ರಿಸಲ್ಟ್ ಗಾಗಿ ಕಾತರ ಇರುತ್ತೆ.

  ReplyDelete
 2. ಎಲ್ಲರ ಪರಿಚಯ ಚೆನ್ನಾಗಿ ಮಾಡಿದ್ದೀರಿ. ಆದರೆ ಅವರ ನೆಗಟಿವ್ ಅಂಶಗಳ ಕಡೆ ಕೂಡ ಬೆಳಕು ಚೆಲ್ಲಬೇಕಾಗಿತ್ತು ಅನಿಸುತ್ತದೆ.

  ReplyDelete
 3. ಯಾವ ಉದ್ದೇಶಕ್ಕೆ ಈ ಸಮೀಕ್ಷೆಯನ್ನು ಸಂಪಾದಕೀಯ ನಡೆಸುತ್ತಿದೆ? ಮತ ಚಲಾಯಿಸಲು ಮಾನದಂಡಗಳೇನು? ಸಂಪಾದಕೀಯಕ್ಕೆ ಇವತ್ತು ಯಾವ ಪತ್ರಿಕೆ ಕಛೇರಿಯಿಂದಲೂ ಮಾಹಿತಿ ಬಂದಂತೆ ಕಾಣುತಿಲ್ಲ...! ಕಣ್ಣು ಮುಚ್ಚಿ ಹಾಲು ಕುಡಿಯುತಿರುವ ಬೆಕ್ಕಿನ ಹೆಜ್ಜೆಗುರುತುಗಳನ್ನು ಸಾಕಷ್ಟು ನರಿಗಳು ಹಿಂಬಾಲಿಸುತ್ತಿವೆ. ಜೋಪಾನ

  ReplyDelete
 4. @ Anonymous,
  ಇದು ಸಂಪಾದಕೀಯದ ಖಾಸಗಿ ಬ್ಲಾಗು. ಇಷ್ಟವಾದವರು ಬಂದು ನೋಡ್ತಾರೆ, ಇಷ್ಟವಾದರೆ ವೋಟ್ ಮಾಡ್ತಾರೆ. ಯಾರ ಗಂಟೇನು ಹೋಗುತ್ತೆ ಸ್ವಾಮಿ. ನಿಮಗೆ ಇಷ್ಟವಿಲ್ಲದಿದ್ದರೆ ನೋಡಬೇಡಿ. ನರಿಗಳು ಹಿಂಬಾಲಿಸುತ್ತಿವೆ ಅಂತೀರಾಲ್ಲ, ನರಿಗಳು-ನಾಯಿಗಳು ಯಾವಾಗಲೂ ಇರ್ತಾವೆ, ಅವುಗಳಿಗೆ ಹೆದರುವ ಻ವಶ್ಯಕತೆ ಇಲ್ಲ.
  ಬೆಕ್ಕನ್ನು ಹುಡುಕಿಕೊಂಡು ಬಂದ ನರಿಗಳಿಗೆ ಹುಲಿಗಳು ಎದುರಾದರೆ? ಆಗ ಹೇಗಿರುತ್ತೆ?
  anyhow, ಸಮೀಕ್ಷೆ ಸಖತ್ತಾಗಿದೆ.
  -ಹರೀಶ್

  ReplyDelete
 5. ಯಾರು ಯಾರಿಗೆ ಇಷ್ಟವಾದ್ರೆ ನಿಮಗೇನು ಸ್ವಾಮಿ? ಕಷ್ಟ ಪಟ್ಟು ಸುದ್ದಿ ಕೊಡೋದು ವರದಿಗಾರರು, ಕ್ಯಾಮೆರಾಮನ್ಗಳು....ಇವ್ರು ಕೋಟು, ಮೇಕಪ್ ಮಾಡ್ಕಂಡು ಕ್ಯಾಮೆರಾ ಮುಂದೆ ಬೆಳಗಾನ ಮಾತಾಡೋದು! ದುಡಿಯೋ ಜನಾನ ಗುರುತಿಸಿ, ಕಿಸಿದದ್ದೇ ಕಿಸಿಯೋ ಕಿಸುಬಾಯಿ ದಾಸರು ಯಾರಿಗೆ ಇಷ್ಟವಾಗ್ತಾರೆ?

  ReplyDelete
 6. ಟಿವಿ ವಾಚಕರು ತೆರೆಯ ಮುಂದಿನ ಬೊಂಬೆಗಳಷ್ಟೆ... ಹಿಂದಿನ ಶ್ರಮಮಾತ್ರ ಬೇರೆಯವರದ್ದು, ಹೆಸರು ಮಾತ್ರ ಇವರಿಗೆ. ಸುದ್ದಿಯ ಕಲ್ಪನೆ, ಏಕು-ಪುಕು ತಿಳಿಯದೆ ಲೈವ್ ನಲ್ಲಿ ಪೆದ್ದು ಪೆದ್ದಾಗಿ ಪ್ರಶ್ನಿಸುವ ಸಮಸ್ತ ಟಿವಿ ವಾಚಕರಿಗೆ ಕಡ್ಡಾಯವಾಗಿ ಸುದ್ದಿಯ ಹಿಂದಿನ ವಿಷಯಗಳ ಕುರಿತು ಅನುಭವ ಗಳಿಸಲು ಕಡ್ಡಾಯ ಮಾಡಿದ್ದು ಬಹುಶ: ಜಿ ಎನ್ ಮೋಹನ್.ಆದಾಗ್ಯೂ ಯಾರೂ ಸುಧಾರಿಸಿದಂತೆ ಕಂಡಿಲ್ಲ ಆದರೂ ಇದ್ದುದರಲ್ಲಿ ಅತ್ಯುತ್ತಮ ವಾರ್ತಾ ವಾಚಕರು ಹಮೀದ್ ಪಾಳ್ಯ, ರಾಧಿಕಾರಾಣಿ ಮತ್ತು ಜಯಪ್ರಕಾಶ್ ಶೆಟ್ಟಿ ಉಪ್ಪಳ.

  ReplyDelete
 7. lekana mattu consept tumba chennagide... adre innu sumaaru hesarugalu bittu hogiveyalla... illi yaru good annalu tumba kasta... yakendra ellaru ondondu vishyadalli nipunariddare... matte avara subjet kuritante episod click aaguttade... adaru idaralli hameed palya mattu ranganath bharadwaj click aadavaru ennabahudu....


  Harish Kumar R.
  Graphic Designer, Udayavani

  ReplyDelete
 8. kannada tv journalsim is not mature enough to conduct this type of poll also...

  ReplyDelete
 9. ಒಳ್ಳೆ ಸಮೀಕ್ಷೆ.ಸರ್ ಇದರಲ್ಲಿ ನೀವು ರಂಗನಾಥ್.ಹೆಚ್.ಆರ್ ಅವರ ಹೆಸರು ಸೇರಿಸಬಹುದಿತ್ತು.ನೀವು ಲಿಸ್ಟ್ ಮಾಡಿದವರಲ್ಲಿ ನನ್ನ ವೋಟು ಹಮೀದ್ ಸರ್ ಗೆ .ನನ್ನ ಪ್ರಕಾರ top 1-hameed,2-gourish,3-rahaman,4-laxman

  ReplyDelete
 10. ಉದಯ ಧರ್ಮಸ್ಥಳFebruary 24, 2011 at 9:07 PM

  ಖುಷಿ ಕೊಡುವ ಸಂಗತಿಯೆಂದರೆ, ಇಲ್ಲಿರುವವವರು ತಮ್ಮನ್ನು ತಾವು ನಿತ್ಯವೂ ಅಪ್
  ಗ್ರೇಡ್ ಮಾಡಿಕೊಳ್ಳಬೇಕಾಗಿರುತ್ತದೆ. ಅವರೊಂದಿಗೆ ಸಂಪರ್ಕವಿಟ್ಟುಕೊಂಡವರಿಗೆ ಗೊತ್ತಾಗುತ್ತದೆ. ಈ ಎಲ್ಲರೂ ಅವರದೆ ಆದ ಗುಂಗಿನಲ್ಲಿರುತ್ತಾರೆ. ಪರ್ಟಿಕ್ಯುಲರ್ ವಿಚಾರ, ಪರ್ಟಿಕ್ಯುಲರ್ ಸನ್ನಿವೇಶದ ನಂತರ ಅವರು ಬೇರೆಲ್ಲೋ ಕಳೆದು ಹೋಗಿಬಿಡುತ್ತಾರೆ. ಹೊಸಬರೂ ಬಹಳಬೇಗ ಹಳಬರಾಗುತ್ತಾರೆ. ಅವರಲ್ಲಿ ಕೇಳಿದಾಗ ಅವರಿಗೆ ದಿನ ಕಳೆದು ಹೋಗಿತ್ತಿರುವುದೇ ಗೊತ್ತಾಗುವುದಿಲ್ಲ. ಅವರೆಲ್ಲರದೂ ಸೂರ್ಯ ಕೆಲಸ. ಸುತ್ತೆಲ್ಲ ಸುತ್ತುತ್ತಿದ್ದರೂ ಇವರ ಗಮನಕ್ಕೆ ಬಂದು ಹಾಗೆ ಕಳೆದುಹೋಗುತ್ತಿರುತ್ತವೆ. ಕರಗುತ್ತಿರುತ್ತವೆ. ಅವರು ಹಾಗೆ ಇದ್ದುಬಿಡುತ್ತಾರೆ. ಇವರೆಲ್ಲರದ್ದು ಒಂತರ ಇವರದಲ್ಲದ ಮಾತು, ಬದುಕು, ನೀತಿ ಎಲ್ಲ...!ಆದರೂ ಇವರು ರಾಜಕೀಯೇತರ ರಾಜಕಾರಣಿಗಳ ಹಾಗಿರುವವರು ಅಂತ ಅವರಲ್ಲಿ ಒಬ್ಬರು ಹೇಳಿದ ನೆನಪು ಬಂತು. ಅದಕ್ಕೆ ಬರೆದೆ.

  ReplyDelete
 11. ಅಲ್ಲ ನೀವು ಒಬ್ಬರ ಹಿನ್ನೆಲೆ (COMMUNIST) ಮಾತ್ರ ಹಾಕಿದ್ದೀರಿ ಬೇರೆಯವರ ಹಿನ್ನೆಲೆ ಏನು ಅಂತ ಗೊತ್ತಾಗೋದು ಬೇಡವೆ????
  ನನಗನಿಸುತ್ತೆ ಇದು ಬೇರೆ ತರಹದ ಗಣತಿ ನಡೀತಾ ಇದೆ,.,..,. ಕನ್ನಡ ಪ್ರಭಕ್ಕೆ ಹೊಗಳಿದ್ದು ಹಾಗೆ ವಗೈರೆ ವಗೈರೆ,,,,,, ಇದು ನೀವು ONE SIDE ANGLEಲ್ಲಿ ಮಾಡ್ತಾ ಇದಿರಿ By Sharan.H

  ReplyDelete