Monday, February 28, 2011

ಹರಕೆ-ಹರಾಜು: ಅಕ್ಷರ ಹೊಡೆದ ಕೊನೆಯ ಮೊಳೆ...


ಹರಕೆ-ಹರಾಜು ಯಾವುದು ಸಹಜ, ಯಾವುದು ಅವಮಾನ? ಎಂಬ ಲೇಖನದ ಮೂಲಕ ಹೊಸ ಸಂಸ್ಕೃತಿ ಚಿಂತನೆಯೊಂದನ್ನು ಮಂಡಿಸಿದ್ದ ಕೆ.ವಿ.ಅಕ್ಷರ, ತನ್ಮೂಲಕ ಹುಟ್ಟಿಕೊಂಡಿದ್ದ ವಾಗ್ವಾದಕ್ಕೆ ಅಂತಿಮ ಉತ್ತರವೊಂದನ್ನು ಕೊಡುವ ಮೂಲಕ ಕೊನೆಯ ಮೊಳೆ ಜಡಿದಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಡೆದ ಸಂವಾದವನ್ನು ಅಕ್ಷರ ಅವರ ಸ್ಪಷ್ಟನೆಗಳೊಂದಿಗೆ ಕೊನೆಗೊಳಿಸಲಾಗಿದೆ.  ಜೊತೆಗೆ ನಾನೆ ಸ್ವದೇಶಿ, ನೀನೆ ಪರದೇಶಿ ಎಂಬ ಶೀರ್ಷಿಕೆಯಲ್ಲಿ ಅಕ್ಷರ ಅವರ ಚಿಂತನೆಗಳನ್ನು ನಿಕಷಕ್ಕೆ ಒಳಪಡಿಸುವ ಜಿ.ರಾಜಶೇಖರ ಅವರ ಲೇಖನವೂ ಮೊನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ.

ಹಾಗೆ ನೋಡುವುದಾದರೆ ಈ ಚರ್ಚೆಯನ್ನು ಪ್ರಜಾವಾಣಿ ಮುಕ್ತಾಯಗೊಳಿಸಿದ್ದರೂ ಅದು ಹೊಸ ಕವಲುಗಳನ್ನು ಪಡೆದು ಮುಂದುವರೆಯುತ್ತಲೇ ಇರುತ್ತದೆ. ಮಾನಾವಮಾನಗಳ ಚರ್ಚೆಯ ಸಂದರ್ಭದಲ್ಲೆಲ್ಲ ಅಕ್ಷರ ಹೊಸೆದುಕೊಟ್ಟ ಹೊಸ ವ್ಯಾಖ್ಯಾನ ಮತ್ತೆ ಮತ್ತೆ ಪ್ರತ್ಯಕ್ಷವಾಗಲಿದೆ. ಸಾಂಸ್ಕೃತಿಕ ವಾಗ್ವಾದಗಳೇ ಹಾಗೆ, ಯಾವಾಗ ಬೇಕಾದರೂ ಆಕಳಿಸಿ ಮೈಮುರಿದು ಎದ್ದು ನಿಲ್ಲಬಹುದು!

ವಿಶೇಷವೆಂದರೆ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಈ ಲೇಖನ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ಚರ್ಚೆಗೊಳಪಡದೆ, ಬೇರೆಡೆಯೂ ಮೈದಳೆದು ಸಂಸ್ಕೃತಿ ಚಿಂತಕರನ್ನು ಆಕರ್ಷಿಸಿತು. ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಈ ಲೇಖನದ ಮೂಲ ಆಶಯಗಳನ್ನು ಕಟುಟೀಕೆಗೆ ಒಳಪಡಿಸಿದ್ದನ್ನು ನೀವು ಬಲ್ಲಿರಿ. ನಂತರ ಎಚ್.ಎಸ್.ಶಿವಪ್ರಕಾಶ್ ಮತ್ತು ಸಂವರ್ಥ ಸಾಹಿಲ್  ಬರೆದ ಎರಡು ಮನುಮುಟ್ಟುವ ಪ್ರತಿಕ್ರಿಯೆಗಳನ್ನೂ ಪ್ರಕಟಿಸಿದ್ದೆವು. ಅತ್ತ ಅವಧಿಯಲ್ಲೂ ಈ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಅಗ್ನಿ, ಗೌರಿ ಲಂಕೇಶ್, ಹಾಯ್ ಬೆಂಗಳೂರ್ ಮತ್ತಿತರ ವಾರಪತ್ರಿಕೆಗಳಲ್ಲೂ ಈ ಕುರಿತ ಚರ್ಚೆಗಳು ನಡೆದವು.

ಇದೀಗ ಅಕ್ಷರ ಅವರ ಅಂತಿಮ ಪ್ರತಿಕ್ರಿಯೆ ಪ್ರಕಟಗೊಂಡಿದೆ. ಈ ಪ್ರತಿಕ್ರಿಯೆಯ ಕುರಿತೂ ನಮಗೆ ತಕರಾರಿದೆ. ಯಥಾಪ್ರಕಾರ ಅಕ್ಷರ ಅವರದು ಅಕ್ಷರಗಳ ಜತೆಗಿನ ಆಟ. ಇಲ್ಲೂ ಸಹ ನಿಚ್ಚಳವಾಗಿ ಎದ್ದು ಕಾಣುವುದು ಅವರ ಬೌದ್ಧಿಕ ಕಸರತ್ತು.

೧. ತಮ್ಮ ಚಿಂತನೆಗಳು ಕನ್ನಡದ ವಿಚಾರಶೀಲರ ಗ್ರಹಿಕೆಯನ್ನು ಮೀರಿದ್ದೇನೋ ಎಂಬ ಬೌದ್ಧಿಕ ಅಹಂಕಾರ ಅಕ್ಷರ ಅವರನ್ನು ಕಾಡಿರಲಿಕ್ಕೂ ಸಾಕು. ಅಥವಾ ಆ ಪ್ರಕಾರದ ಭ್ರಮೆಗಳಲ್ಲಿ ಅವರು ಸಿಲುಕಿಕೊಂಡಿರುವ ಅಪಾಯವನ್ನೂ ನಿರಾಕರಿಸುವಂತಿಲ್ಲ. ಹರಕೆ-ಹರಾಜು ಲೇಖನವನ್ನು ವಿರೋಧಿಸಿದವರೆಲ್ಲ ಅದನ್ನು ಗ್ರಹಿಸುವಲ್ಲೇ ಎಡವಿದ್ದಾರೆ ಎಂಬ ಅರ್ಥವನ್ನು ಅವರ ಪ್ರತಿಕ್ರಿಯೆ ಧ್ವನಿಸುತ್ತದೆ.

೨. ಮಡೆಸ್ನಾನ ಮೌಢ್ಯವೇ, ಅಲ್ಲವೇ ಎಂಬ ಜಿಜ್ಞಾಸೆ ಅಕ್ಷರ ಅವರಲ್ಲಿ ಇನ್ನೂ ಉಳಿದುಕೊಂಡಿದೆ. ನಮ್ಮ ಸಮಾಜದ ಕೆಲವು ಪರಂಪರಾನುಗತ ಆಚರಣೆಗಳು ಅತ್ತ ಮೌಢ್ಯವೂ ಅಲ್ಲದ, ಇತ್ತ ಅಧ್ಯಾತ್ಮಿಕವೂ ಅಲ್ಲದ ಸಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಇದಕ್ಕೆ ಅವರು ಬಳಸಿಕೊಂಡಿರುವುದು ವೈದೇಹಿ ಬರೆದ ಇದು ಲೌಕಿಕ ಸಂಕಟಗಳ ಅನಿವಾರ್ಯ ಅಭಿವ್ಯಕ್ತಿ ಇರಬಹುದೇ ಎಂಬ ಸಾಲನ್ನು. ಅಲ್ಲಿಗೆ ಮಡೆಸ್ನಾನವನ್ನು ಅವರು ಮೌಢ್ಯ ಎನ್ನಲು ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಅದನ್ನು ಅಧ್ಯಾತ್ಮಿಕ ಎನ್ನಲು ತಕ್ಕ ಆಧಾರಗಳೂ ಅವರ ಬಳಿಯಿಲ್ಲ. ಹೀಗಾಗಿ ಮಧ್ಯದ ಯಾವುದೋ ಅಮೂರ್ತ ಶೋಧದಲ್ಲಿ ಅವರು ದಾರಿತಪ್ಪಿ ನಿಂತಿದ್ದಾರೆ.

೩. ಹುಟ್ಟಿನ ಮೂಲದ ಅಸಮಾನತೆಗಳು ಯಾವ ರೂಪದಲ್ಲಿದ್ದರೂ ಖಂಡನಾರ್ಹವೇ ಎಂದು ಅಕ್ಷರ ಒಪ್ಪಿಕೊಳ್ಳುತ್ತಾರೆ. ಮಡೆಸ್ನಾನದಲ್ಲಿ ಹುಟ್ಟಿನ  ಮೂಲದ ಅಸಮಾನತೆ ಅವರ ಕಣ್ಣಿಗೆ ಗೋಚರಿಸದಿರುವುದು ಮಾತ್ರ ವಿಸ್ಮಯ. ಹುಟ್ಟಿನ  ಮೂಲದ ಅಸಮಾನತೆಗಳು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳೂ ಸೇರಿದಂತೆ ಸಾಕಷ್ಟು ದೇವಸ್ಥಾನಗಳಲ್ಲಿ ಇವೆ. ಅದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಹೊರತಾಗಿಲ್ಲ. ಅಸಮಾನತೆಯನ್ನು ವಿಜೃಂಭಿಸುವ ಪ್ರತ್ಯೇಕ ಪಂಕ್ತಿಗಳಂಥ ಆಚರಣೆಗಳೇ ಮಡೆಸ್ನಾನವೆಂಬ ಸಂಪ್ರದಾಯದ ಮೂಲ ಎಂಬುದನ್ನು ಅಕ್ಷರ ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರೂ ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವಾದಕ್ಕಾಗಿ ಬಳಸುತ್ತಾರೆ.

ಈ ಬಗೆಯ ರಾಜಕೀಯ ಸಮರ್ಪಕತೆಯ ಪ್ರದರ್ಶನದಿಂದ ಯಾವ ವೈಜ್ಞಾನಿಕ ಸಮಾಜಶಾಸ್ತ್ರವೂ ಬೆಳೆಯುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಕಾಲವೀಗ ಬಂದಿದೆ ಎಂದು ಅಕ್ಷರ ಬರೆಯುತ್ತಾರೆ. ನಿಜವಿರಬಹುದು. ಆದರೆ ಮಡೆಸ್ನಾನದ ವಿಶ್ಲೇಷಣೆಗೆ ಬೇಕಾಗಿರುವುದು  ರಾಜಕೀಯ ಸಮರ್ಪಕತೆಯ ಪ್ರದರ್ಶನವಲ್ಲ, ಮಾನವ ಘನತೆಯ ಕುರಿತಾದ ಸಾಮಾನ್ಯ ಜ್ಞಾನ ಎಂಬುದನ್ನು ಅವರು ಬುದ್ಧಿಪೂರ್ವಕವಾಗಿ ಮರೆಯುತ್ತಾರೆ.

೪. ಹರಕೆ-ಹರಾಜು ಲೇಖನದ ಕೂತವ-ನಿಂತವ-ನೋಡುವವ ಎಂಬ ರೂಪಕ ಅತಿ ಹೆಚ್ಚು ಟೀಕೆಗೊಳಗಾಗಿತ್ತು. ಅಕ್ಷರ ಆ ರೂಪಕವನ್ನು ಮತ್ತೆ ಸಮರ್ಥಿಸಿದ್ದಾರೆ. ಈ ಪ್ರಳಯಾಂತಕ ರೂಪಕ ಹುಟ್ಟಿದ್ದು ಹೇಗೆ ಎಂಬ ರಹಸ್ಯವನ್ನೂ ಅವರು ಹೊರಗೆಡಹಿದ್ದಾರೆ. ಹೆಗ್ಗೋಡು ಕುಟುಂಬದ ಚಿಂತನೆಯ ಹಿಂದಿನ ಬೌದ್ಧಿಕ ವಲಯದ ಪ್ರಮುಖರಾದ ಅಶೀಶ್ ನಂದಿಯವರ ಹ್ಯುಮಿಲಿಯೇಷನ್ ಎಂಬ ಲೇಖನವನ್ನು ಆಧರಿಸಿ ಈ ರೂಪಕವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿಶ್ಲೇಷಿಸಿದ್ದಾರಂತೆ. ಬಹುಶಃ ಮುಂದಿನ ಸಂಸ್ಕೃತಿ ಶಿಬಿರದ ವೇಳೆ ಶಿಬಿರಾರ್ಥಿಗಳು ಅಶೀಶ್ ನಂದಿಯವರಿಂದ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಬಹುದು.

ಗಾಂಧಿಯವರೇ ಆಗಲಿ, ಅಂಬೇಡ್ಕರ್‌ರೇ ಆಗಲಿ ಕೇವಲ ಇನ್ನೊಬ್ಬರ ಪರವಾಗಿ ಹೋರಾಟ ಮಾಡಲಿಲ್ಲ. ಜೊತೆಯಾಗಿ ಮಾಡುವುದಕ್ಕೂ ಪರವಾಗಿ ಮಾಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಜೊತೆಯಾಗಿ ಮಾಡುವ ಕೆಲಸಕ್ಕೆ ಆಳವಾದ ನೈತಿಕ ಶಕ್ತಿಯೂ ವೈಯಕ್ತಿಕ ಚಾರಿತ್ರ್ಯವೂ ಅಗತ್ಯವಾಗುತ್ತದೆ, ಪರವಾಗಿ ಮಾಡುವ ಕೆಲಸ ಹಾಗಲ್ಲ ಎಂದು ಅಕ್ಷರ ಟಿಪ್ಪಣಿ ಮಾಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟಕ್ಕೆ ನೈತಿಕ ಶಕ್ತಿ, ವೈಯಕ್ತಿಕ ಚಾರಿತ್ರ್ಯ ಬೇಕಿರಲಿಲ್ಲ ಎಂದು ಅವರು ಸೂಚಿಸಬಹುದೆ? ಮಡೆಸ್ನಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಟಿಪ್ಪಣಿಯನ್ನು ಅನ್ವಯಿಸಿ ಹೇಳುವುದಾದರೆ, ಮಡೆಸ್ನಾನವನ್ನು ಮಾಡುವವರ ಪರವಾಗಿ ಪ್ರತಿಭಟನೆ ಅನಗತ್ಯ. ಒಂದು ವೇಳೆ ಮಡೆಸ್ನಾನ ಅಪಮಾನಕಾರಿ ಎಂದು ಮಾಡುವವರು ಭಾವಿಸುವುದಾದರೆ, ಅದಕ್ಕೆ ಅವರು ಹೋರಾಟಕ್ಕಿಳಿಯುವುದಾದರೆ ಮಾತ್ರ ಅವರ ಜತೆಗೂಡಿ ಹೊರಾಡಬಹುದು. ಆಗ ಮಾತ್ರ ಅದು ನೈತಿಕವಾಗುತ್ತದೆ! ಇದನ್ನು ಯಥಾಸ್ಥಿತಿವಾದ ಎಂದು ಕರೆಯದೆ ಇರಲು ಸಾಧ್ಯವೇ? ಹೊಸಬಗೆಯ ಸಂಸ್ಕೃತಿ ಚಿಂತನೆಯೆಂದರೆ ಯಥಾಸ್ಥಿತಿವಾದವೇ?

೫. ಪುರೋಹಿತಶಾಹಿ ಅಂದರೇನು? ಅದು ಜಾತಿ ಸೂಚಕವೇ? ವೃತ್ತಿ ಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೇ? ಎಂಬ ಬ್ರಾಕೆಟ್ಟಿನೊಳಗಿನ ಪ್ರಶ್ನೆಗಳನ್ನು ಅಕ್ಷರ ಎತ್ತಿದ್ದಾರೆ. ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ ಎಂಬುದನ್ನು ಅರಿಯದವರಷ್ಟು ಅಕ್ಷರ ಮುಗ್ಧರಲ್ಲ. ಪುರೋಹಿತಶಾಹಿಯನ್ನು ಜಾತಿಗೋ ವೃತ್ತಿಗೋ ಆರೋಪಿಸಿ ಈ ಚರ್ಚೆಯಲ್ಲಿ ಯಾರೂ ಮಾತನಾಡಿಲ್ಲ. ಪುರೋಹಿತಶಾಹಿಯನ್ನು ಕಟುವಾಗಿ ಟೀಕಿಸಿದ ವಿವೇಕಾನಂದ, ಕುವೆಂಪು, ಲೋಹಿಯಾ ಅವರಾದಿಯಾಗಿ ಯಾರೂ ಸಹ ಹೀಗೆ ಸರಳೀಕರಿಸಿ ವಿಶ್ಲೇಷಿಸಿಲ್ಲ. ಹೀಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಇವತ್ತಿನ ಕಾಲಮಾನದಲ್ಲಿ ಜಾತಿ ಕುರಿತ ಚರ್ಚೆ ಪಡೆದುಕೊಳ್ಳುವ ವಿಕೃತ ಸ್ವರೂಪಗಳಿಗೆ ಅನುಕೂಲಕರವಾದ ಸಣ್ಣ ಪ್ರಚೋದನೆಯೊಂದಕ್ಕೆ ಅವರು ಕಿಡಿಹಚ್ಚುವ ಯತ್ನದಲ್ಲಿದ್ದಾರೆ ಎನಿಸುತ್ತದೆ.

ಕಡೆಯದಾಗಿ ಅಕ್ಷರ ತಮಗೆ ಈ ಲೇಖನ ಬರೆಯಲು ನಿಜಪ್ರೇರಣೆ ಏನೆಂಬುದನ್ನು ಹೇಳಿದ್ದಾರೆ. ನನ್ನ ತಂದೆ ಪುರುಸೊತ್ತಾದಾಗ ಪೂಜೆ ಮಾಡುತ್ತಿದ್ದರು; ನನ್ನ ಅಜ್ಜಿ ಹರಕೆಗಳನ್ನು ಹೊರುತ್ತಿದ್ದರು. ಇನ್ನು ನನ್ನ ಸುತ್ತಮುತ್ತಲಿರುವ, ಎಲ್ಲ ಜಾತಿಯ ಜನರೂ ಕೂಡಿರುವ ಸಮುದಾಯವು ದಿನಬೆಳಗಾದರೆ ಪೂಜೆ-ಪುನಸ್ಕಾರ-ಹಬ್ಬ-ಹರಕೆಗಳಲ್ಲೇ ಮುಳುಗಿರುವಂಥದ್ದು. ಇಂಥ ನಮ್ಮನ್ನೆಲ್ಲ ಹಿಂದುಳಿದವರೆಂದು ಪ್ರತಿಗಾಮಿಗಳೆಂದು ಮೂಢರೆಂದು ಯಾರಾದರೂ ಬಿಂಬಿಸಲೆತ್ನಿಸಿದರೆ ಅದು ನನಗೆ ಬೌದ್ಧಿಕ ಅಹಂಕಾರವಾಗಿ ಕಾಣುತ್ತದೆ ಎನ್ನುತ್ತಾರೆ ಅವರು.

ಒಂದು ವಿಷಯವನ್ನು ಅವರು ಬೇಕೆಂದೇ ಮರೆತಿದ್ದಾರೆ.  ಹರಕೆ-ಹರಾಜು ಲೇಖನವನ್ನು ಟೀಕೆಗೆ ಒಳಪಡಿಸಿದ ಎಲ್ಲರೂ ಇಂಥ ಹಿನ್ನೆಲೆಗಳಿಂದಲೇ ಬಂದವರು. ಪೂಜೆ, ವ್ರತ, ಹರಕೆ ಎಲ್ಲವೂ ವೈಯಕ್ತಿಕ ಆಚರಣೆಗಳು. ಅವು  ನಂಬಿಕೆಗಳನ್ನು ಆಧರಿಸಿದ್ದು. ಅವುಗಳ ಕುರಿತು ಯಾರಿಗೂ ತಂಟೆ, ತಕರಾರಿಲ್ಲ. ತಕರಾರಿರುವುದು ಒಂದು ಸಮುದಾಯದವರು ಉಂಡು ಎದ್ದ ಮೇಲೆ, ಆ ಎಲೆಗಳ ಮೇಲೆ ಉಳಿದ ಸಮುದಾಯಗಳ ಜನರು ಉರುಳಾಡುವ ಅಸಹ್ಯದ ಕುರಿತು. ಅದು ಕೇವಲ ನಂಬಿಕೆಯ ಪ್ರಶ್ನೆ ಮಾತ್ರವಲ್ಲ. ಅಕ್ಷರ ಅವರು ಹೇಳುವ ಮಾನಾವಮಾನಗಳ ಪ್ರಶ್ನೆ, ಮನುಷ್ಯ ಘನತೆಯ ಪ್ರಶ್ನೆ, ವಿವಿಧ ಹಂತಗಳಲ್ಲಿ ಒಡೆದು ಚೂರಾಗಿರುವ ಸಮಾಜವನ್ನು ಸಮಾನವಾಗಿ ಬದುಕುವಂತೆ ಪ್ರೇರೇಪಿಸುವ ಕಾಲದ ಅಗತ್ಯದ ಪ್ರಶ್ನೆ, ಆಧುನಿಕ ಯುಗದ ಪ್ರಲೋಭನೆಗಳಿಗೆ ಒಳಗಾಗಿ ಮುಗ್ಧ ಜನರು ಅಸಹಾಯಕರಾಗಿ ಹುಡುಕಿಕೊಳ್ಳುತ್ತಿರುವ ಅಪಮಾರ್ಗಗಳ ಪ್ರಶ್ನೆ.
ಅದು ಅಕ್ಷರ ಅವರಿಗೆ ಅರ್ಥವಾಗದ್ದೇನಲ್ಲ.

ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ, ಅಷ್ಟೆ.

25 comments:

 1. 'ಅಕ್ಷರ'ದಲ್ಲೇ ಅಹಂ ಇದೆ. ಅಕ್ಷರ ಕಲಿತು ಬರೆಯುವ ವ್ಯಕ್ತಿ ಶಿಷ್ಟ ಬರಹಗಾರನಾಗುತ್ತಾನೆ. ಆದರೆ ಅದೇ ಅನಕ್ಷರಸ್ಥ ಗಾಯಕ ಜನಪದವಾಗಿ ಉಳಿಯುತ್ತಾನೆ. ಅದಿರಲಿ. ಇಲ್ಲಿಯೂ ಹಾಗೆ. ಕೆ.ವಿ ಅಕ್ಷರ ತನಗೆ ಅಕ್ಷರ ಗೊತ್ತು. ತಾನು ಬರೆದದ್ದನ್ನು ತನ್ನ ಅಕ್ಷರ ಜ್ಞಾನದಿಂದ ಸಮರ್ಥಿಸಿಕೊಳ್ಳಬಲ್ಲೆ ಎಂಬ ಅಹಂನಿಂದಲೇ ಈ ಲೇಖನ ಬರೆದಿದ್ದಾರೆ. ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ.
  - ನಿರಕ್ಷರಿ

  ReplyDelete
 2. A super reply to Akshara's arrogance-filled article. Thanks to Prajavani for exposing Akshara. I am surprised, why Anantamurthy did not comment on this.

  ReplyDelete
 3. ಅಕ್ಷರ ಅವರು ತಾವಿರುವ ನೆಲೆಯಲ್ಲಿ ನಿಂತು ಮಡೆಸ್ನಾನ ಮೌಢ್ಯವನ್ನು ನೋಡದಿರುವುದು
  ಪ್ರಜ್ಞಾವಂತ ಸಮುದಾಯಕ್ಕೊಂದು ಅಪಮಾನ. ಅವರ ಮನಸ್ಸಿಗೆ ಅಸಹಜ ಅನಿಸುವುದನ್ನು ಸಹಜ ಎಬಂತೆ ಬರೆವ ಮೊಲಖ ನೈತಿಕತೆ ಕಳೆದುಕೊಂಡಿರುವುದು ದುರಂತ. ಲೇಖನ ಧಾಟಿ ಸೊಗಸಾಗಿದೆ.

  ReplyDelete
 4. ಇಂದಿನ ನಂಬಿಕೆಗಳು ನಾಳೆ ಅಸಹ್ಯವಾಗಿ ಕಾಣಬಹುದು. ಮಡೆ ಸ್ನಾನದಂತ ಆಚರಣೆಗಳು ತಮಗಿದ ಅವಮಾನ ಎಂಬ ಭಾವನೆಗಳು ಮೂಡದ ತನಕವೂ ಒಂದಿಲ್ಲೊಂದು ರೂಪದಲ್ಲಿ ನಡೆಯುತ್ತಲೇ ಇರುತ್ತವೆ.

  ReplyDelete
 5. ಎಲ್ಲರೂ ಅವರನ್ನು ಅವರು ಸಮರ್ಥಿಸಿಕೊಳ್ಳುವವರೇ..... ಬುದ್ದಿಜೀವಿಗಳು ಎಂದು ತಮ್ಮನ್ನು ತಾವೇ ತಿಳಿದವರು ಹಾಗೂ "ಪ್ರತಿ ವಾರದ ಅಚ್ಚರಿ" ಬರೆಯುವವರು ಹೇಗೆ ಏನೇ ಬರೆದರೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತರೋ, ಹಾಗೆ ಅಕ್ಷರ ಅವರು ಸಮರ್ಥಿಸಿಕೊಳ್ಳಲು ಅರ್ಹರು....

  ReplyDelete
 6. ಸಂಪಾದಕೀಯದ ಪ್ರತಿಕ್ರಿಯೆ ಸರಿಯಾಗಿದೆ, ಅಕ್ಷರ ತನ್ನ ಪುರೋಹಿತಶಾಹಿ ನಿಲುವುಗಳನ್ನು ಸಂಘರ್ಷದ ಹಾದಿಯಲ್ಲಿ ತೆರೆದಿಡುವ ಮೂಲಕ ತಮ್ಮ ಭೌದ್ದಿಕ ದಿವಾಳಿತನಕ್ಕೆ ಸಾಕ್ಷಿ ಒದಗಿಸುತ್ತಿದ್ದಾರೆ. ಹರಕೆ ಕುರಿತ ತಮ್ಮ ಲೇಖನದ ಗ್ರಹಿಕೆಯ ಬಗ್ಗೆ ಮಾತಾನಾಡುವ ಅಕ್ಷರ, ಅದಕ್ಕಾಗಿ ದಾರ್ಶನಿಕರ ತರಹ ಚಿಂತನೆಯನ್ನ ಹರಿಬಿಡುವ ಮೂಲಕ ಸಮರ್ಥಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ. ಗಾಂಧಿ-ಅಂಬೇಡ್ಕರ್ ಹೋರಾಟದ ಕುರಿತು ವಿನಾಕಾರಣ ತಡವಿಕೊಳ್ಳುವ ಅಕ್ಷರ ಅವರಿಗೆ ಈ ಕುರಿತು ಮಾತನಾಡಲು ಯಾವ ತಾತ್ವಿಕ ನೆಲೆಗಟ್ಟು ಇದೆ ಎಂಬುದನ್ನು ಬಹಿರಂಗ ಪಡಿಸಬೇಕಿದೆ. ತನಗೆ ಜ್ಞಾನದ ಶ್ರೀಮಂತಿಕೆ ಇದೆ ಎಂಬುದನ್ನು ಬರಹದಲ್ಲಿ ಹೊರಹಾಕಲು ಪ್ರಯತ್ನಿಸುವ ಮೂಲಕ ತನ್ನನ್ನು ಸರಿ ಎಂದು ಕರೆದುಕೊಳ್ಳುವ ಹುಂಬತನವನ್ನು ಅಕ್ಷರ ಅವರು ಬಿಡಲಿ. ಸಾಹಿತ್ಯವನ್ನ ಪುರೋಗಾಮಿ ನೆಲೆಗಟ್ಟಿನಲ್ಲಿ ಪ್ರದರ್ಶಿಸದೇ ಆತ್ಮಾವಲೋಕನ ಮಾಡಿಕೊಂಡು ಮುಂದುವರೆಯಲಿ ಎಂದು ಬಯಸುತ್ತೇನೆ.

  ReplyDelete
 7. ನಿರುಪದ್ರವಿಯಾದ ಆದರೆ ನೋಡಲು ಕೊಳಕಾದ ಸಂಪ್ರದಾಯವೊಂದಕ್ಕೆ ಘನ ವಿದ್ವಾಂಸರೆಲ್ಲ ಯಾವ ಪರಿಯಾಗಿ ಕೂಗು ಹಾಕುತ್ತಾರೆ ಎಂದು ನೋಡಲು ಮಜವಾಗಿದೆ. ಎಲ್ಲಾ ಧರ್ಮಗಳಲ್ಲೂ ಕೆಲವು ಕುರುಡು ನಂಬಿಕೆಗಳಿವೆ, ಅದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಯಾರೂ ದಲಿತರನ್ನು ಮಡೆಸ್ನಾನ ಮಾಡಲು ಪ್ರೋತ್ಸಾಹಿಸುವುದಾಗಲೀ, ಅವರ ಮೇಲೆ ಒತ್ತಡ ಹಾಕುವುದಾಗಲೀ ಇದ್ದರೆ ಇಷ್ಟೆಲ್ಲಾ ಹುಯಿಲೆಬ್ಬಿಸಬಹುದು. ಆದರೆ ಅವರಾಗೇ ಮಾಡಿದ್ದಾರೆ, ಜತೆಗೆ ಮೇಲ್ಜಾತಿಯವರೂ ಇದರಲ್ಲಿ ಪಾಲ್ಗೊಂಡಿದ್ದಾರೆ, ಇದೆಲ್ಲ ಗೊತ್ತಿದ್ದೂ ಬುದ್ದಿವಂತರು ಇಷ್ಟುದ್ದ ಬರೆದು ಸಂತಸಪಡುತ್ತಾರೆ, ಯಾಕೆಂದರೆ ಇದು ಹಿಂದು ಧರ್ಮದೊಂದಿಗೆ ತಳಕು ಹಾಕಿಕೊಂಡ ಆಚರಣೆ. ಅಷ್ಟೂ ಸುಧಾರಣೆಯ ಕೆಚ್ಚಿದ್ದರೆ ಈ ಚಿಂತಕರು ಮಡೆಸ್ನಾನ ಮಾಡುವ ದಲಿತರನ್ನು ಸೇರಿಸಿ ಅವರಲ್ಲಿ "ಇದು ಕೊಳಕು, ಇನ್ನು ಮುಂದೆ ಉಂಡ ಎಲೆಯ ಮೇಲೆ ಹೊರಳಬೇಡಿ" ಎಂದು ಮನವರಿಕೆ ಮಾಡಿಕೊಳ್ಳಲಿ...
  -ವೇಣು

  ReplyDelete
 8. Akshara is right. He has a very valid point of view which none of you want to see. It is your problem.

  ReplyDelete
 9. ಅಕ್ಷರ ಅವರು ಬರೆದದ್ದು ಸರಿಯಾಗಿದೆ. ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಬಹುತೇಕರು ಸೋತಿದ್ದಾರೆ ಅಷ್ಟೆ.ಇಲ್ಲಿ ಉದ್ದುದ್ದ ಬರೆಯುವುದು, ಅವರಿವರನ್ನು ಟೀಕಿಸುವುದು ಮಾಡುವಬದಲು ಮಡೆಸ್ನಾನ ಮಾಡುವವರನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಇದು ಮೌಢ್ಯ ಎಂದು ಮನವರಿಕೆ ಮಾಡಿಕೊಡಕ್ಕಾಗುತ್ತದಾ ನೋಡಿ.

  ReplyDelete
 10. ಅಕ್ಷರ ಅವರಿಗೆ ಪ್ರತಿಕ್ರಿಯಿಸಿರುವ ರೀತಿ ಚೆನ್ನಾಗಿದೆ. ನಿಮ್ಮ ಪ್ರತಿಕ್ರಿಯೆಯನ್ನು ಟೀಕಿಸುವ ಕೆಲವು ಪ್ರತಿಕ್ರಿಯೆಗಳನ್ನೂ ಗಮನಿಸಿದೆ. ಎಲ್ಲ ಜೊಳ್ಳು ಜೊಳ್ಳು. ನೀವು ಹೇಳಿರುವ ಒಂದೇ ಒಂದು ಅಂಶವನ್ನೂ ಕೌಂಟರ್ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಒಂದು ಸಾಂಸ್ಕೃತಿಕ ವಾಗ್ವಾದದಲ್ಲಿ ತೊಡಗಿಕೊಳ್ಳುವುದು ಹೇಗೆ ಎಂಬ ಸಾಮಾನ್ಯಜ್ಞಾನವೂ ಅವರಿಗಿದ್ದಂತೆ ಕಾಣುವುದಿಲ್ಲ.

  ReplyDelete
 11. ಅಕ್ಷರ ಅವರನ್ನು ಟೀಕಿಸುವ ಬದಲು ಮಡೆಸ್ನಾನ ಮಾಡುವ ಜಾಗಕ್ಕೆಹೋಗಿ ಅದು ಮೌಢ್ಯ ಎಂಬ ಮನವರಿಕೆ ಮಾಡಿಕೊಡಬೇಕು ಎಂಬ ಉಚಿತ ಸಲಹೆ ತುಂಬ ಹಾಸ್ಯಾಸ್ಪದವಾದದ್ದು. ಇದೇ ಅಕ್ಷರ ಅವರು ಪ್ರಸ್ತುತ ಲೇಖನವನ್ನು ಬರೆಯುವ ಮುನ್ನ ಮಡೆಸ್ನಾನ ಮಾಡುವ ಜಾಗಕ್ಕಾಗಲಿ ಅಥವಾ ಐಪಿಲ್ ಆಟಗಾರರ ಹರಾಜು ನಡೆಯುವ ಜಾಗಕ್ಕಾಗಲೀ ಭೇಟಿ ನೀಡಿದ್ದರೇ? ಅಲ್ಲಿ ತಾವು ನಡೆಸಿದ ಅಧ್ಯಯನ ಅಥವಾ ಸಂಶೊಧನೆಯ ಕೂಸು ಈ ಲೇಖನವೇ? "ಸೋ ಕಾಲ್ಡ್" ಬುದ್ಧಿ ಜೀವಿಗಳನ್ನು ಬೆಂಬಲಿಸುವ ಮೊದಲು ಅವರ ಹಿನ್ನಲೆಯ ಪೂರ್ವಾಪರಗಳ ಅಧ್ಯಯನ ಒಳ್ಳೆಯದು. ಇಂದಿನ ಭೃಷ್ಟ ರಾಜಕಾರಣಿಗಳಿಗಿಂತ ಬುದ್ಧಿಜೀವಿಗಳು ತುಂಬಾ ಅಪಾಯಕಾರಿ.

  ReplyDelete
 12. ಅಕ್ಷರ ಕುರಿತ ನಿಮ್ಮ ತಕರಾರುಗಳಿಗೆ ನನ್ನ ಪ್ರತಿಕ್ರಿಯೆ:

  <<<೧. ..... ಹರಕೆ-ಹರಾಜು ಲೇಖನವನ್ನು ವಿರೋಧಿಸಿದವರೆಲ್ಲ ಅದನ್ನು ಗ್ರಹಿಸುವಲ್ಲೇ ಎಡವಿದ್ದಾರೆ ಎಂಬ ಅರ್ಥವನ್ನು ಅವರ ಪ್ರತಿಕ್ರಿಯೆ ಧ್ವನಿಸುತ್ತದೆ.>>>

  ಅವರ ಬೌದ್ದಿಕ ಅಹಂಕಾರದ ಪ್ರಶ್ನೆಗಳೇನೇ ಇರಲಿ, ಒಟ್ಟಾರೆ ಈ ಆಚರಣೆ ಮತ್ತು ನಂಬಿಕೆ ನಡುವಣ ಸಂಬಂದ ಸ್ವರೂಪವನ್ನು ಗುರುತಿಸುವಲ್ಲಿ ಎಡವಿದ್ದಲ್ಲದೆ ವಿರೋಧಗಳೆಲ್ಲವೂ 'ಮೂಡನಂಬಿಕೆ' ಎಂಬ ಚೌಕಟ್ಟಿನಡಿಯಲ್ಲಿ ಈ ಆಚರಣೆಯನ್ನು ಜರೆಯುವಲ್ಲಿ ಬೌದ್ದಿಕತೆಯನ್ನು ಮೆರೆದರೇ ವಿನಃ ಈ (ಇಂತಹ ನೂರಾರು)ಆಚರಣೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಹನೆಯನ್ನು ತೋರಿಲ್ಲ ಎನ್ನುವುದನ್ನು ಸೂಚಿಸಿದ್ದಾರೆ. ಈ ಕುರಿತ ಚರ್ಚೆ ಸಂಪದ ಬ್ಲಾಗ್ ನಲ್ಲಿ ವಿಸ್ತೃತವಾಗಿ ಆಗಿದೆ. ಅಕ್ಷರರ ಈ ಕುರಿತ ಹಿಂದಿನ ಲೇಖನದ ಮೇಲೆ ನಡೆದ ಹಲವು ಚರ್ಚೆಗಳನ್ನು ನೀವು ಉಲ್ಲೇಖಿಸಿದರೂ ಸಂಪದದಲ್ಲಿ ನಡೆದ ಆ ಚರ್ಚೆಯನ್ನು ನೀವು ಉಲ್ಲೇಖಿಸುವುದಿಲ್ಲ.

  <<<೨. ... ಮೌಢ್ಯವೂ ಅಲ್ಲದ, ಇತ್ತ ಅಧ್ಯಾತ್ಮಿಕವೂ ಅಲ್ಲದ ಸಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ..... ಹೀಗಾಗಿ ಮಧ್ಯದ ಯಾವುದೋ ಅಮೂರ್ತ ಶೋಧದಲ್ಲಿ ಅವರು ದಾರಿತಪ್ಪಿ ನಿಂತಿದ್ದಾರೆ.>>>
  ನೂರಾರು ಜನ ಸಾಮೂಹಿಕವಾಗಿ ಆಚರಿಸುತ್ತಿರುವ ಇಂತಹ ಒಂದು ಆಚರಣೆಯಲ್ಲಿ(ನಿಮ್ಮಂತಹ ಹಲವು ವೈಚಾರಿಕರು ಇವನ್ನು ಅಸಹ್ಯ,ಮೌಡ್ಯ,ಅವಮಾನಕರ ಎಂದು ಜರೆಯುತ್ತಿರುವುದು ಗೊತ್ತಿದ್ದೂ) ಭಾಗವಹಿಸುತ್ತಿದ್ದಾರೆಂದರೆ ಇಂತವನ್ನು ಬೇರೆಯದೇ ರೀತಿಯಲ್ಲಿ ಏನಾದರೂ ಅರ್ಥಮಾಡಿಕೊಳ್ಳಲು ಸಾಧ್ಯವೇ ಎಂಬ ಕುತೂಹಲಕ್ಕೆ ಪರ್ಯಾಯ ಚೌಕಟ್ಟಿನ ತಡಕಾಟದಲ್ಲಿದ್ದಾರೆ. ಜ್ಞಾನವೆಂದರೆ ಇಂತಹ ಹುಡುಕಾಟವೇ ಅಲ್ಲವೇ?

  <<<೩. ಹುಟ್ಟಿನ ಮೂಲದ ಅಸಮಾನತೆಗಳು...... ಅಸಮಾನತೆಯನ್ನು ವಿಜೃಂಭಿಸುವ ಪ್ರತ್ಯೇಕ ಪಂಕ್ತಿಗಳಂಥ ಆಚರಣೆಗಳೇ ಮಡೆಸ್ನಾನವೆಂಬ ಸಂಪ್ರದಾಯದ ಮೂಲ ಎಂಬುದನ್ನು ಅಕ್ಷರ ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ..>>>

  ಅಕ್ಷರರಲ್ಲಿನ ಜಿಜ್ಞಾಸೆಯ ನಿಜವಾದ ಮೂಲವೇ ಇದು. ಆಚರಣೆಗಳು ಮತ್ತು ಸಾಮಾಜಿಕ ಸಮಾನತೆ/ಅಸಮಾನತೆ ಇಲ್ಲವೇ ಯಾವುದೇ ರೀತಿಯ ಅಂತಸ್ತಿನ ನಡುವಣ ಸಂಬಂದವೇನು? ಆಚರಣೆಗಳು ಹೇಗೆ ಸಾಮಾಜಿಕ ಅಂತಸ್ತನ್ನು ಸೃಜಿಸುತ್ತವೆ? ಆ ಪ್ರಕ್ರಿಯೆ ಏನು? ಸಮಾಜಶಾಸ್ತ್ರೀಯವಾಗಿ ಈ ಕುರಿತ (ಪಶ್ಚಿಮದ ನಿರೂಪಣೆಯನ್ನು ಪುನರ್ ಜಪಿಸುವುದನ್ನು ಹೊರತುಪಡಿಸಿ) ಯಾವುದೇ ಸೈದ್ದಾಂತಿಕ ವಿವರಣೆ ಇದುವರೆಗೂ ಲಬ್ಯವಿಲ್ಲ. ಎಲ್ಲ ವಿವರಣೆಗಳು "ನೋಡಿ ಕೋಳಿ ಕೂಗುತ್ತಿದೆ; ಬೆಳಗಾಗುತ್ತಿದೆ" ಎಂಬಂತಹವುಗಳೇ.

  "ಮಾನವ ಘನತೆಯ ಕುರಿತಾದ ಸಾಮಾನ್ಯ ಜ್ಞಾನ" ಸಾಕಾಗದು ಅದನ್ನು ಸಾಕಾರಗೊಳಿಸುವುದೂ ನಮ್ಮ ಹೊಣೆ. ಅದು ಇಂತಹ ಆಚರಣೆಗಳನ್ನು 'ಮೌಡ್ಯ'ವೆಂದು ಜರೆಯುವುದರಿಂದಲೇ ಸಾಧಿತವಾಗದು. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ಸರಿಯಾದ ಹೆಜ್ಜೆಯಾಗಬಹದು. ಅಕ್ಷರರು ಅದನ್ನೇ ಪ್ರಯತ್ನಿಸುತ್ತಿದ್ದಾರೆ ಎನಿಸುತ್ತಿದೆ.

  <<<೪. ... ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿಶ್ಲೇಷಿಸಿದ್ದಾರಂತೆ...>>>

  ಒಂದು ಆಚರಣೆಯಲ್ಲಿ ತೊಡಗಿರುವವರನ್ನು ಅವರ ಅನುಭವಕ್ಕೆ ವಿರುದ್ದವಾಗಿ ನಾವು ವೈಚಾರಿಕರೆನಿಸಿಕೊಂಡವರು ಅವರನ್ನು ನೀವು ಮುಟ್ಟಾಳರು ಮೂರ್ಖರು ಎಂದು ನಿಂದಿಸಿಯೇ ಅವರ ಆಚರಣೆಯಲ್ಲಿನ ತಪ್ಪುಗಳನ್ನು ಎತ್ತಿತೋರಿಸಬೇಕೇ? ಭೂಮಿ ಸುತ್ತ ಸೂರ್ಯ ಸುತ್ತುತ್ತಿಲ್ಲ (ಅದೇ ನಮ್ಮ ಅನುಭವವಾಗಿದ್ದರೂ) ಭೂಮಿಯೇ ಸೂರ್ಯನನ್ನು ಸುತ್ತುತ್ತಿದೆ ಎಂದು ತೋರಿಸುವಾಗ ಮೊದಲಿನ ನಂಬಿಕೆ ಉಳ್ಳವರನ್ನು ಮೂರ್ಖರೆನ್ನೆಲೇ ಬೇಕಿಲ್ಲ. ನಿಮಗೆ ಏಕೆ ಆ ರೀತಿ ಅನುಭವವಾಗುತ್ತಿತ್ತು ಎಂಬುದನ್ನು (ಅವರನ್ನು ಮೂರ್ಖರೆನ್ನದೆ) ವಿವರಿಸಿ ತೋರಿಸಬೇಕು.


  <<<೫. ಪುರೋಹಿತಶಾಹಿ ಅಂದರೇನು? ಅದು ಜಾತಿ ಸೂಚಕವೇ? ವೃತ್ತಿ ಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೇ? ಎಂಬ ಬ್ರಾಕೆಟ್ಟಿನೊಳಗಿನ ಪ್ರಶ್ನೆಗಳನ್ನು ಅಕ್ಷರ ಎತ್ತಿದ್ದಾರೆ. ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ>>>>
  ಅಕ್ಷರರ ಮುಗ್ದತೆ ಬದಿಗಿರಲಿ ಕೊನೆಗೂ ಇಲ್ಲಿಯ ವಿವರಣೆಯಿಂದ ಇದು ಎಂತಹ ಸಾಮಾನ್ಯ ಜ್ಞಾನ ಎಂಬುದು ಸಾಬೀತಾಗುವುದಿಲ್ಲ. ಪುರೂಹಿತುಶಾಹಿ ಎಂದರೇನು ನೀವೇ ಸ್ವಲ್ಪ ವಿವರಿಸಿ.

  <<>>

  ವಿಕೃತವೋ ಪ್ರಕೃತವೋ ನಿರ್ದಾರವಾಗುವುದು ಆ ಚರ್ಚೆಯ ವಿವರಣೆಗಳು ಎಷ್ಟರ ಮಟ್ಟಿಗೆ ಇಲ್ಲಿಯ ಸಮಾಜದ ವಾಸ್ತವ ಅನುಭವವನ್ನು ಕಟ್ಟಿಕೊಡುತ್ತದೆ ಎಂಬುದರ ಮೇಲೆ ನಿಂತಿದೆಯೇ ವಿನಃ ವೈಯುಕ್ತಿಕ ಹೊಗಳಿಕೆ ನಿಂದನೆಯ ಮೇಲಲ್ಲ. ಜೊಳ್ಳಾಗಿದ್ದರೆ ತೂರಿಹೋಗುತ್ತದೆ ಬಿಡಿ ಚಿಂತೆ ಆತಂಕ ಏಕೆ?

  -ಡಾ.ಎ.ಷಣ್ಮುಖ

  ReplyDelete
 13. ಸಂಪಾದಕೀಯದ ತಕರಾರು ಏನೆಂಬುದನ್ನು ಹೀಗೆ ಹೇಳಿದ್ದಾರೆ ಲೇಖಕರು : "ತಕರಾರಿರುವುದು ಒಂದು ಸಮುದಾಯದವರು ಉಂಡು ಎದ್ದ ಮೇಲೆ, ಆ ಎಲೆಗಳ ಮೇಲೆ ಉಳಿದ ಸಮುದಾಯಗಳ ಜನರು ಉರುಳಾಡುವ ಅಸಹ್ಯದ ಕುರಿತು". ಆದರೆ ಇಲ್ಲಿ ಉಂಡು ಎದ್ದ ಎಂದು ಹೇಳಲಾದ ಒಂದು ಸಮುದಾಯ ಯಾವುದು? ಇದನ್ನು ಎಲ್ಲೂ ಹೇಳಿಲ್ಲ. ಗೊತ್ತಿದ್ದರೆ ತಿಳಿಸಿ. ಅವರೆಲ್ಲರೂ ಯಾವ ಸಮುದಾಯ? ದಲಿತರೇ, ಮುಸ್ಲಿಮರೇ, ಕ್ರಿಶ್ಚಿಯನ್ನರೇ ಪಾರ್ಸಿಗಳೇ ಅಥವಾ ಬ್ರಾಹ್ಮಣರೇ?

  ಅಂದ ಹಾಗೆ ಮಡೆಸ್ನಾನಕ್ಕೆ ನನ್ನದು ವಿರೋಧವಿದೆ. ಆದರೆ ಸಂಪಾದಕೀಯದ ಕಾರಣಕ್ಕಲ್ಲ. ಯಾಕೆಂದರೆ ಸಂಪಾದಕೀಯ ಕೇವಲ ವಿರೋಧಿಸುವುದಕ್ಕಾಗಿ ವಿರೋಧಿಸುತ್ತಿರುವಂತೆ ಕಾಣುತ್ತದೆ. ಅಲ್ಲ ಎಂದಿದ್ದರೆ ಎಂಜಲೆಲೆಯಲ್ಲಿ ಉಂಡೆದ್ದವರು ಯಾವ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೆಂದು ಸ್ಪಷ್ಟಪಡಿಸಬೇಕು (ಅಂದರೆ ಅದರಲ್ಲಿ ಊಟ ಮಾಡಿದ ಸಮುದಾಯದ ಜನರಿರಲಿಲ್ಲ ಎಂದು ಸಾಧಿಸಬೇಕು). ಹಾಗಿದ್ದಲ್ಲಿ ಮಾತ್ರ ಈ ಲೇಖನಕ್ಕೆ ಒಂದು ಬೆಲೆ ಬರುತ್ತದೆ. ಇಲ್ಲದಿದ್ದರೆ ಹಿಂದುಗಳಲ್ಲೇ ಒಡಕು ಮೂಡಿಸಿ ತಮಾಷೆ ನೋಡುವ ಉದ್ದೇಶ ಇದೆ ಎಂಬುದನ್ನು ಸಂಪಾದಕೀಯ ಒಪ್ಪಿಕೊಳ್ಳಬೇಕು.

  ReplyDelete
 14. ಡಾ. ಷಣ್ಮುಖರವರೇ ಸರಿಯಾಗಿ ಗುರುತಿಸಿದ್ದೀರಿ, ತಮ್ಮದೇ ಬ್ಲಾಗ್‌ನಲ್ಲಿ(ಸಂಪದ) ನಡೆದ ಸುಧೀರ್ಘವಾದ ಚರ್ಚೆಯನ್ನು ಸಂಪಾದಕರು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ಸಂಪಾದಕರು ಎತ್ತಿರುವ ಹಲವಾರು ಪ್ರಶ್ನೆಗಳ ಸುತ್ತ ಅಲ್ಲಿ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ನಿಮ್ಮ (ಡಾ. ಷಣ್ಮುಖ) ಪ್ರತಿಕ್ರಿಯೆ ಸೂಕ್ತವಾದುದಾಗಿದೆ. ಚರ್ಚೆ ಇಲ್ಲಿ ನಡೆದಿತ್ತು:http://sampada.net/%E0%B2%86%E0%B2%9A%E0%B2%B0%E0%B2%A3%E0%B3%86%E0%B2%97%E0%B2%B3-%E0%B2%A8%E0%B3%8B%E0%B2%9F-%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%9C%E0%B3%80%E0%B2%B5%E0%B2%BF%E0%B2%97%E0%B2%B3-%E0%B2%B9%E0%B3%8A%E0%B2%AF%E0%B3%8D%E0%B2%A6%E0%B2%BE%E0%B2%9F#comment-135066

  ಪ್ರವೀಣ್ ಕೋಣಂದೂರು
  ಸಿ. ಎಸ್. ಎಲ್. ಸಿ

  ReplyDelete
 15. ಬಯ್ಯುವುದನ್ನೆ ಸಮಾಜಶಾಸ್ತ್ರವೆನ್ನುವಂತೆ ನಡೆದುಕೊಳ್ಳುತ್ತಿರುವ ನಮ್ಮ ಬುದ್ಧಿಜೀವಿಗಳಿಗೂ, ಅವನತಿಯತ್ತ ಧಾವಿಸುತ್ತಿರುವ ಕನ್ನಡದ ಸಾರಸ್ವತಲೋಕಕ್ಕು ಹಿಡಿದ ಕನ್ನಡಿಯಂತಿದೆ ಈ ಲೇಖನ. ಯಾವುದೇ ವಿಚಾರವನ್ನೂ ಹೇಳುವುದಿಲ್ಲ. ಬರೀಯ ಒಣ ಲೇವಡಿ. ಒಂದು ಉದಾ. ಲೇಖನದಲ್ಲಿ ಬರುವ ಈ ಹೇಳಿಕೆಯನ್ನೇ ನೋಡಿ: "ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ ಎಂಬುದನ್ನು ಅರಿಯದವರಷ್ಟು ಅಕ್ಷರ ಮುಗ್ಧರಲ್ಲ. ಪುರೋಹಿತಶಾಹಿಯನ್ನು ಜಾತಿಗೋ ವೃತ್ತಿಗೋ ಆರೋಪಿಸಿ ಈ ಚರ್ಚೆಯಲ್ಲಿ ಯಾರೂ ಮಾತನಾಡಿಲ್ಲ"

  ತಮ್ಮ ಹೆಸರನ್ನೂ ಸೂಚಿಸಲು ಹಿಂಜರಿಯುವ/ಹೆದರುವ ಇ ಲೇಖನದ ಲೇಖಕರು, ಇಷ್ಟೆಲ್ಲಾ ಬಯ್ದನಂತರವೂ 'ಪುರೋಹಿತಶಾಹಿ'ಎಂದರೆ ಏನು ಎಂದು ಮಾತ್ರ ಹೇಳುವ ಗೋಜಿಗೆ ಹೋಗುವುದೇ ಇಲ್ಲ. ಗೊತ್ತಿದ್ದರೆ ಅಲ್ಲವೇ ಹೇಳುವುದು. ಗೊತ್ತಿಲ್ಲದಿದ್ದವೆರೆಲ್ಲರೂ ಯಾವಾಗಲೂ ಬರಿಯ ಇಲ್ಲದ ಗುಮ್ಮನನ್ನೇ ತೋರಿಸಿದ್ದು ಅಲ್ಲವೆ?

  ಲೇವಡಿ, ಬಯ್ಗುಳ, ತಮಾಷೆ ಇತ್ಯಾದಿಗಳು ಚರ್ಚೆಗೆ ಪರ್ಯಾಯವೂ ಅಲ್ಲ, ಅವು ಯಾವ ವಿಚಾರವನ್ನೂ ಮಂಡಿಸುವುದೂ ಇಲ್ಲ. ನೆನಪಿರಲಿ, ಅವು ಯಾವ ಸಮಸ್ಯೆಯನ್ನೂ ಎಂದೂ ಪರಿಹರಿಸಿಯೂ ಇಲ್ಲ.

  ReplyDelete
 16. ಕೆ.ವಿ. ಅಕ್ಷರ ಎಂಬ "ಚಿಂತಕ"ರೊಬ್ಬರ ತೃತೀಯ ದರ್ಜೆಯ ಒಂದು ಬರಹ ಕನ್ನಡದಲ್ಲಿ ಇಷ್ಟು ವ್ಯಾಪಕ ಚರ್ಚೆಯನ್ನು ಕಾಣುತ್ತದೆ ಎಂದರೆ ಆಶ್ಚರ್ಯ ಪಡಬೇಕೋ ದು:ಖ ಪಡಬೇಕೋ ತಿಳಿಯುತ್ತಿಲ್ಲ.ಸಮಾಜ ವಿಜ್ನಾನಗಳ ಸಂಶೋಧನೆಗಳ ನೆಪದಲ್ಲಿ ಕೆಲವು ಯಥಾಸ್ಥಿತಿವಾದಿಗಳು ಅರ್ಥಹೀನ ಸಾಮಾಜಿಕ ಆಚರಣೆಗಳನ್ನು ಬಗೆಬಗೆಯಾಗಿ ವಿಶ್ಲೇಷಿಸುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

  ReplyDelete
 17. ಕೆ.ವಿ. ಅಕ್ಷರ, ಮಡೆಸ್ನಾನ ಆಚರಣೆಯ ಕುರಿತು ನೀಡಿರುವ ಹೊಸ ಚಿಂತನೆಯ ಎಳೆಯನ್ನು ಆಲೋಚಿಸುವ ಪ್ರಯತ್ನವನ್ನು ಮಾಡುವ ಬದಲು ಕೇವಲ "ತೃತೀಯ ದರ್ಜೆಯ ಬರಹ ಎಂದೋ", ಅಥವಾ "ಭ್ರಮೆ ಅಥವಾ ಬೌದ್ಧಿಕ ಅಹಂಕಾರ ಕಾಡುತ್ತಿದೆಯೇನೊ" ಎಂದು ಅಕ್ಷರ ಅವರಿಗೆ ವ್ಯಕ್ತಿಗತ ಟೀಕೆ ಮಾಡಿದರೆ ಯಾವ ಲಾಭವೂ ಇಲ್ಲ, ಬದಲಿಗೆ ಅವರ ಹೊಸ ಚಿಂತನೆಯ ಎಳೆಯ ಕುರಿತು ಗಂಭೀರವಾಗಿ(ತೃತೀಯ ದರ್ಜೆಯ ಟೀಕೆ ಮಾಡುವ ಬದಲು) ಚರ್ಚೆಮಾಡಿದರೆ ಅದು ನಿಜವಾದ ಚರ್ಚೆಯಾಗಿ ಅದರಿಂದ ಏನಾದರು ಸಹಾಯವಾದಿತು. ಅರ್ಥಹೀನ ಸಾಮಾಜಿಕ ಆಚರಣೆಗಳನ್ನು ಬಗೆಬಗೆಯಾಗಿ ವಿಶ್ಲೇಷಿಸುತ್ತಿದ್ದಾರೆ, ಯಥಾಸ್ಥಿತಿ ಕಾಪಾಡುತ್ತಿದ್ದಾರೆ ಎಂದು ಕೇವಲ ಪದಗಳನ್ನು ಪುಖಾಂನುಪುಂಖವಾಗಿ ಬಳಸುವ ಬದಲು ಮಡೆಸ್ನಾನ ಆಚರಣೆಯ ಕುರಿತು ಅಕ್ಷರ ಹೇಳುವುದರಲ್ಲಿ ದೋಷ ಎಲ್ಲಿ ಅಡಗಿದೆ, ಯಾವ ಅಂಶವು ಚರ್ಚೆಯನ್ನೂ ಮುಂದೊತ್ತಲು ಸಹಾಯಕವಾಗಿದೆ ಎನ್ನುವುದರ ಕುರಿತು ವಿಶ್ಲೇಷಿಸಬೇಕು(ವ್ಯಕ್ತಿಗತವಾಗಿ ಟೀಕೆ ಮಾಡುವುದು ವಿಶ್ಲೇಷಣೆಯಲ್ಲ). ಅಂತಹ ಚರ್ಚೆಗಳು ಮಾತ್ರ ಆರೋಗ್ಯಕರ ಚರ್ಚೆ ಎನಿಸಿಕೊಳ್ಳಬಲ್ಲವು.
  ವ್ಯಕ್ತಿಗತ ಟೀಕೆಗಳು ಸಾಮಾಜಿಕ ವಿಜ್ಞಾನವನ್ನು ಸರಿಯಾಗಿ ಕಟ್ಟಲು ಸಹಾಯಮಾಡುವುದಿಲ್ಲ, ಯಾವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುವುದಿಲ್ಲ, ಬದಲಿಗೆ ಅದು ಅವರ ಬೌದ್ಧಿಕ ಸಾಮರ್ಥ್ಯವನ್ನು ತೋರಿಸುತ್ತದೆ.

  ಕವಿತಾ. ಪಿ.ಎನ್.
  ಶಂಕರಘಟ್ಟ

  ReplyDelete
 18. ಅಕ್ಷರ ರವರನ್ನು ವೈಕ್ತಿಕವಾಗಿ ಟೀಕಿಸುವಾವರಿಗೆ,
  ಇಲ್ಲಿಯರೆಗೆ ಬೌದ್ಧಿಕತೆ, ವೈಚಾರಿಕತೆ, ವಿಜ್ಞಾನಕ್ಕೆ ಅಷ್ಟೊಂದು ಬೆಲೆ ಕೊಟ್ಟಿದ್ದೇವೆ ಎಂದು ತಿಳಿದ ಇಂದಿನ ವಿಚಾರವಾದಿಗಳಿಗೆ ಭಾರತೀಯ ಸಮಾಜದಲ್ಲಿ ಇದಾವೆ ಎಂದು ತಿಳಿದ ಜಾತಿವ್ಯವಸ್ಥೆ, ಪುರೋಹಿತಶಾಹಿ ವ್ಯವಸ್ಥೆ ಬಗ್ಗೆ ವೈಚಾರಿಕ ವಿವರಣೆಯನ್ನು ಕೇಳಿದರೆ ಯಾಕೆ ತಡವರಿಸುತ್ತಿದ್ದಾರೆಂಬುದು ಅರ್ಥವಾಗುತ್ತಿಲ್ಲ (ವಿಜ್ಞಾನಕ್ಕೆ ಹೆಚ್ಚಿನ ಜನರು ಒತ್ತುಕೊದುತ್ತರಾದರು ಸಾಮಾಜಿಕ ವಿದ್ಯಮಾನವನ್ನು ವೈಜ್ಞಾನಿಕವಾಗಿ ವಿವರಿಸಲು ವಿಫಲವಾಗಿದ್ದಾರೆಂದೆ ಹೇಳಬಹುದು). ಇಂತವರಿಗೆ ಕೆಲವು ಪ್ರಶ್ನೆಗಳು: ಯಾವುದೇ ಆಚರಣೆಯು ಮೌಡ್ಯವೆಂದು ನಿಮಗೆ ಹೇಗೆ ತಿಳಿಯಿತು? ( ಭಾರತಿಯ ಸಂಪ್ರದಯಗಳಲ್ಲಿರುವ ಆಚರಣೆಗಳನ್ನು ಮೌಡ್ಯವೆಂದು ಪಶ್ಚಿಮದವರು ಹೇಗೆ ಗ್ರಹಿಸಿದರು ಎಂಬುದರ ಬಗ್ಗೆ ಲುಡ್ವಿಗ್ ವಿಟ್ಗೆನ್ ಸ್ತ್ಯೇನ್ ಹೇಳಿದ್ದಾರೆ) ಈ ಪ್ರಶ್ನೆಯ ಸುತ್ತ ವೈಜ್ಞಾನಿಕವಾಗಿ ಚರ್ಚೆ ನಡೆಸಿದರೆ ಜ್ಞಾನ ಮತ್ತು ಬೌದ್ಧಿಕತೆ ಎರಡು ಬೆಳದು ಇರುವ ಸಮಸ್ಯೆ ಬಗೆಹರಿಯಬಹುದು, ಆದರೆ ಮಡೆಸ್ನಾನ ಆಚರಣೆ ಎಂದರೆ ಮೌಡ್ಯತೆ ಎಂದು ತಿರ್ಮಾನಿಸಿ ಮಾಡುವ ಚರ್ಚೆಯಿಂದ ಉಪಯೋಗವದಿತೇ? ಈ ಪ್ರಶ್ನೆಗೆ 'ಇಲ್ಲ' ಎಂಬ ಉತ್ತರವೇ ಹೆಚ್ಚಾಗಿ ಸೂಕ್ತವೆನಿಸುತದೆ. ಏಕೆಂದರೆ ಭಾರತಿಯ ಸಂಪ್ರದಯಗಳಲ್ಲಿರುವ ಹಲವು ಆಚರಣೆಗಳನ್ನು ಮೌಡ್ಯವೆಂದು ತಿಳಿದಿರುವುದು ಕೇವಲ ವ್ಯಕ್ತಿಯ ಅಥವಾ ಗುಂಪಿನ ವಯಕ್ತಿಕ ನಂಬುಗೆ ಅಥವಾ ಅನಿಸಿಕೆ ಮೇಲೆ ನಿಂತಿರುತ್ತೆ. ಆದರೆ ವಿಜ್ಞಾನ ಇಂತಹ ನಂಬಿಕೆಗಳನ್ನು ಇಟ್ಟುಕೊಂಡ ಜನರ ಅನಿಸಿಕೆಗಳನ್ನು ಒಳಗೊಂಡಂತೆ ಸಂಬಂದಿಸಿದ ವಿದ್ಯಮಾನಕ್ಕೆ ಸೈದ್ಧಾಂತಿಕ ಚೌಕಟ್ಟನ್ನು ನೀಡಿ ವೈಜ್ಞಾನಿಕವಾಗಿ ವಿವರಿಸುತದೆ. ಹಾಗಾಗಿ ಮಡೆಸ್ನಾನ ಎಂಬ ಆಚರಣೆಗೆ ಸಂಬಂಧಿಸಿದ ವೈಚಾರಿಕ ಚರ್ಚೆಯಾದರೆ ಒಳಿತು.

  ಉತ್ತರವನ್ನು ನಿರೀಕ್ಷಿಸುವವ...
  ಶಂಕರಪ್ಪ

  ReplyDelete
 19. made snana is wrong.wrong ethically,morally.period.
  1> but please start more pitched battle against all forms of such practices (widespread)which are against individual freedom not just this one. fight against those which are more widespread ( ofcouse , you had to give befitting reply to akshara)....
  1a>
  madesnana is problem of ignorance and used by few individuals. "truly progressive ones " help others also to avoid such traps.
  2>some practices are thrown upon us (include children,women,lower castes) by our parents,some by society and some by both. those thrown upon us by society are the hard to break beacuse of fear .
  3> madesnana is similar to several practices
  that are present in the system..
  and those who are " truly commoitted to honesty,integrity "will understand to what i am referring to.
  4>
  ask the questions abut each such practices
  is the practice done to only a few individuals/groups/any form of groups?
  is the force(mob fear,physical , threats) involved ?if the force is involved , then it is more heinous crime. if no force is invloved ,then lack of awareness and proper thinking could be the problem.

  totally ,madesnana= practice x=practice y= practice z..
  these practice x and practice y and practice z
  also need to fought against because these are more widespread.
  fight against these also analytically .(may be with 100000 times effort)..

  ReplyDelete
 20. What a bullshit...who told you that Madesnana is aritual which is curtailing Individual freedom? Every devotee is free to do that ritual, if he is not interested, he/she will not participate.

  You people even do not know what ritual is? but start to murmur like a talk takes place in coffee shop, which makes time pass to drink a cup of coffee, and nothing else

  ReplyDelete
 21. An anonymous reader has rightly stated that Akshara's write up is the expression of third rate thinking.Kavita PN has called that comment itself third rate and wants him to debate it..What is there to debate. By extention,these people are capable of inviting an"intellectual debate"on even such heinous pracices as human beings carrying night soil on their head."Anonymous" has called these people as statusquoists. He is wrong. He should have called them retrogressives.If she had known how much discussion has taken place how many have resented Akshara's position from how many angles in various sources, she couldn't have asked for any more threadbare debate.I think she is fond of debating.But this is no debating competition here.

  ReplyDelete
 22. ’ಅನಾಮಿಕ’ರವರೆ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು,

  ಲೇಖನ ಹಾಗೂ ಚರ್ಚೆಗಳು ಕನ್ನಡದಲ್ಲಿ ನಡೆಯುತ್ತಿರುವುದರಿಂದ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡುತ್ತಿದ್ದೇನೆ.
  ನಿಮಗೆ ಕೆಳಗಿನ ಲಿಂಕ್ ಗಳನ್ನು ಕೊಡುವ ಅವಶ್ಯಕತೆ ಇರಲಿಲ್ಲ, ಆದರೆ ಮಡೆಸ್ನಾನ ಆಚರಣೆಯ ಬಗ್ಗೆ ಆಗುತ್ತಿರುವ ಚರ್ಚೆಗಳನ್ನು ನಾನು ಸರಿಯಾಗಿ ಓದಿಕೊಂಡಿಲ್ಲ ಎಂಬ ತಮ್ಮ ಅನುಮಾನವನ್ನು ಬಗೆಹರಿಸಲು ಈ ಕೆಳಗೆ ಲಿಂಕ್ ಗಳನ್ನು ನೀಡಬೇಕಾದ ಸಂದರ್ಭ ಬಂದಿದೆ.

  1.ಪ್ರಜಾವಾಣಿಯ, ಸಾಪ್ತಾಪಿಕ ಪುರವಣಿಯಲ್ಲಿ ಅಕ್ಷರವರ ಲೇಖನ, ಆ ಲೇಖನಕ್ಕೆ ಖ್ಯಾತನಾಮರು ಬರೆದ ಪ್ರತಿಕ್ರಿಯೆಗಳನ್ನು ಓದಿದ್ದೇನೆ. ಅದಕ್ಕೆ ನಾನು ಕೂಡ ಪ್ರತಿಕ್ರಿಯಿಸಿದ್ದೇ ಆದರೆ ಹೊಸ ಚಿಂತನೆಗಳಿಗೆ ಸ್ವಾಗತ ನೀಡದಿದ್ದರಿಂದ ಅದು ಪತ್ರಿಕೆಯಲ್ಲಿ ಪ್ರಕಟಗೊಳಲಿಲ್ಲ, ಆದರೆ ಶೀಘ್ರದಲ್ಲಿಯೇ ಬ್ಲಾಗ್ ನಲ್ಲಿ ಪ್ರಕಟವಾಗುವುದು.

  2.ಸಂಪದದಲ್ಲಿ ನಡೆದ ದೀರ್ಘ ಚರ್ಚೆಗಳು
  http://sampada.net/%E0%B2%86%E0%B2%9A%E0%B2%B0%E0%B2%A3%E0%B3%86%E0%B2%97%E0%B2%B3-%E0%B2%A8%E0%B3%8B%E0%B2%9F-%E0%B2%AC%E0%B3%81%E0%B2%A6%E0%B3%8D%E0%B2%A7% E0%B2%BF%E0%B2%9C%E0%B3%80%E0%B2%B5%E0%B2%BF%E0%B2%97%E0%B2%B3-%E0%B2%B9%E0%B3%8A%E0%B2%AF%E0%B3%8D%E0%B2%A6%E0%B2%BE%E0%B2%9F

  3.http://cslcku.wordpress.com/2010/12/21/ritua/

  4.ಅವಧಿಯಲ್ಲಿ ನಡೆದ ಚರ್ಚೆಗಳು

  5.ತಮಗೆ ಇನ್ನೂ ಆಸಕ್ತಿ ಇದ್ದರೆ ಹೇಳಿ ಫೇಸ್ ಬುಕ್ ನಲ್ಲಿ ನಡೆದ ಚರ್ಚೆಗಳ ಲಿಂಕ್ ನ್ನು ಸಹ ಕಳಿಸುವೆ.

  ಇಲ್ಲಿ ನಡೆದ ಎಲ್ಲ ಚರ್ಚೆಗಳನ್ನು ಓದಿದ್ದೇನೆ. ಸಂಪಾದಕೀಯದಲ್ಲಿ ನಡೆಯುತ್ತಿರುವ ಚರ್ಚೆಯು ವ್ಯಕ್ತಿಗತ ಟೀಕೆಯಲ್ಲಿ ಮುಳುಗಿ ತನ್ನ ಗಂಭೀರತೆಯನ್ನು ಕಳೆದುಕೊಳ್ಳಬಾರದು ಎಂದು ಈ ಮೊದಲು ನಾನು ಪ್ರತಿಕ್ರಿಯಿಸಿದ್ದೆ. ಖಂಡಿತವಾಗಿಯೂ ನನಗೆ ಉತ್ತಮ ಹಾಗು ಗಂಭೀರ ಚರ್ಚೆಯನ್ನು ಮಾಡುವಲ್ಲಿ ಹಾಗೂ ಪಾಲ್ಗೊಳ್ಳುವಲ್ಲಿ ಆಸಕ್ತಿ ಇದೆ, ತಾವು ಅದನ್ನು ಗುರುತಿಸಿದ್ದೀರಿ ಸ್ಪಲ್ಪ ತಪ್ಪಾಗಿ ಅಷ್ಟೆ. ತಾವು ಬರೆದ ಶೈಲಿಯನ್ನು ನೋಡಿದರೆ ಚರ್ಚೆಯನ್ನು ಸ್ಪಲ್ಪವಾದರು ಓದಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ. ಈ ಮೇಲಿನ ಎಲ್ಲ ಲಿಂಕ್ ಗಳ ಚರ್ಚೆಯನ್ನು ಓದಿಕೊಂಡು ತಾವು ಬಂದರೆ ನಾವು ಚರ್ಚೆಯನ್ನು ಮುಂದುವರೆಸೋಣ. ಲೇಖನ ಸರಿಯಾಗಿಲ್ಲ, ಸರಿಯಾಗಿದೆ, ಅಥವಾ ಲೇಖನಕ್ಕೆ ಮತ್ತು ಲೇಖಕನನ್ನು ಯಾವುದಾದರೂ ತಲೆಪಟ್ಟಿಯೊಡನೆ ತಳುಕು ಹಾಕಿದರೆ ಉಪಯೋಗವಿಲ್ಲ. ಅದು ಚರ್ಚೆ ಎನಿಸಿಕೊಳ್ಳುವುದಿಲ್ಲ ಬದಲಿಗೆ ಒಂದು ಸಣ್ಣ ಅಭಿಪ್ರಾಯ ಅಷ್ಟೆ.

  ಒಂದು ಸಣ್ಣ ಕುತೂಹಲವಿದೆ, ನಾನು ಈ ಬ್ಲಾಗ್ ನಲ್ಲಿ ಮಡೆಸ್ನಾನ ಆಚರಣೆಯ ಕುರಿತು ನನ್ನ ಯಾವುದೇ ವಾದಗಳನ್ನು ಮುಂದಿಟ್ಟಿಲ್ಲ, ಬದಲಿಗೆ ವ್ಯಕ್ತಿಗತ ಟೀಕೆ ಬೇಡ ಎಂದಿದ್ದೆ ಅಷ್ಟೆ. ಆದರೆ ನನ್ನ ವಾದಗಳು ಏನು ಎಂಬುದನ್ನು ತಿಳಿಯುವ ಮೊದಲೆ ತಮಗೆ ನಾನು ಈ ಚರ್ಚೆಯನ್ನು ಓದಿಕೊಂಡಿಲ್ಲ ಎಂಬುದು ಹೇಗೆ ತಿಳಿಯಿತು? ವಾದಗಳಿಲ್ಲದ ಪ್ರತಿಕ್ರಿಯೆಗಳನ್ನು ನೋಡಿದರೆ ತಮಗೆ ಎದುರಾಳಿಯ ವಾದ ಅವರ ಓದಿನ ಆಳ ಎಲ್ಲವೂ ತಿಳಿದುಬಿಡುತ್ತದೆಯೇ?

  ಕೊನೆಗೊಂದು ಮಾತು: ಪ್ರತಿಕ್ರಿಯೆಯಲ್ಲಿ ಹೆಸರನ್ನು ಉಲ್ಲೇಖಿಸಿದರೆ ಒಳಿತು.

  ಕವಿತ ಪಿ.ಎನ್.
  ಶಂಕರಘಟ್ಟ

  ReplyDelete
 23. Santhosh, you have rightly pointed out that knowingly or unknowingly these people are against the 'individual freedom'. They are fully 'ignorant' about this: Madesnana is people's choice not force. They should get 'awareness' about the rituals and its nature.

  praveen

  ReplyDelete