Wednesday, July 6, 2011

ರವಿ ಹೆಗಡೆ ಉದಯವಾಣಿಯಲ್ಲಿ ಏನಾದ್ರೂ ಪವಾಡ ಮಾಡ್ತಾರಾ?


ಗೊತ್ತಾ ನಿಮಗೆ, ಉದಯವಾಣಿಯಲ್ಲಿ ಘಮಾಸಾನ್ ಲಡಾಯಿ. ಗ್ರೂಪ್ ಎಡಿಟರ್ ರವಿ ಹೆಗಡೆಗೂ ಚೀಫ್ ರಿಪೋರ್ಟರ್ ಗುರುಮೂರ್ತಿಗೂ ಕುಸ್ತಿ. ಯಾಕೆ ನೀವು ಈ ಬಗ್ಗೆ ಬರೀತಾ ಇಲ್ಲ. ಇವತ್ತು ಇಬ್ರು ಕೆಲಸ ಬಿಟ್ಟೋದ್ರು. ಸಂಕೇಶ್ವರರ ಪತ್ರಿಕೆ ಬರ‍್ತಾ ಇದ್ದಂತೆ ನಡೆಯುತ್ತೆ ದೊಡ್ಡ ಪ್ರಮಾಣದ ವಲಸೆ, ನೋಡ್ತಾ ಇರಿ. ಇಲ್ಲಿ ಏನೇನೋ ನಡೀತಾನೇ ಇದೆ. ನೀವು ಅದ್ಯಾವುದೋ ಬಾಬಾ ರಾಮದೇವು, ಮತ್ತೇನೋ ಹಾನಗಲ್ ಪ್ರಭಾಕರ, ಕೆಜಿಎಫ್ ಪ್ರಸಾದ ಇತ್ಯಾದಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳ ಕಡೆ ಮನಸ್ಸು ಮಾಡಿ ಮೀಡಿಯಾ ವಿದ್ಯಮಾನವನ್ನೇ ಮರೆತಿದ್ದೀರಿ. ಈ ಕಡೆನೂ ಸ್ವಲ್ಪ ನೋಡಿ ಎನ್ನುತ್ತಾರೆ ನಮ್ಮ ಓದುಗ ಕಮ್ ಇನ್‌ಫಾರ್‌ಮರ್‌ಗಳು.

ಹೊಸ ವ್ಯವಸ್ಥೆ, ಸಣ್ಣ ಪುಟ್ಟ ಕಂಪನಗಳು ಸಹಜ. ತಾವು ಕರಕೊಂಡು ಬಂದ ಹುಡುಗರ ಮೇಲೆ ರವಿ ಹೆಗಡೆಯವರಿಗೆ ಕೊಂಚ ಹೆಚ್ಚೇ ಮುದ್ದು ಅನ್ನೋದು ಈ ಕಂಪನದ ಮೂಲ. ತಮ್ಮ ಒಂದಿಬ್ಬರು ಶಿಷ್ಯ ವರದಿಗಾರರಿಗೆ ಅಸೈನ್‌ಮೆಂಟೇ ಹಾಕಬೇಡಿ ಎಂದರಂತೆ ರವಿ ಹೆಗಡೆ. ಸಣ್ಣ ಪ್ರಮಾಣದ ಕಿರಿಕಿರಿ. ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣ ೩.೫ರಷ್ಟಿತ್ತಾ? ಗೊತ್ತಿಲ್ಲ.

ಇಂಥವು ಎಲ್ಲ ಕಡೆ ನಡೆಯುತ್ತಿರುತ್ತವೆ. ಹೊಸ ಸಂಪಾದಕರು ತಮಗೆ ಬೇಕಾದ ಸಿಬ್ಬಂದಿಯನ್ನು ತಂದು ಕೂರಿಸಿಕೊಳ್ಳುವುದು ಈಗೀಗ ಮಾಮೂಲು. ಸ್ವಲ್ಪ ಹೆಚ್ಚು ಮುದ್ದು ಮಾಡುವುದೂ ನಡೆದುಕೊಂಡು ಬಂದ ರೀತಿರಿವಾಜು. ಹೀಗಾಗಿ ಈ ಥರಹದ ಕಂಪನಗಳು. ಆದರೆ ಉದಯವಾಣಿಗೆ ಗ್ರೂಪ್ ಎಡಿಟರ್ ಆದ ಮೇಲೆ ರವಿ ಹೆಗಡೆ ಏನೇನು ಮಾಡಿದ್ರು, ಏನೇನು ಮಾಡ್ತಿದ್ದಾರೆ ಅನ್ನೋದು ಸ್ವಲ್ಪ ಇಂಟರೆಸ್ಟಿಂಗ್ ಆಗೇ ಇದೆ, ಅದನ್ನು ಹೇಳೋ ಪ್ರಯತ್ನ ಇಲ್ಲಿ ಮಾಡ್ತಾ ಇದ್ದೇವೆ.

ತೀರಾ ಇತ್ತೀಚಿಗೆ ಅವರು ತಮ್ಮ ಬ್ಲಾಗ್‌ಗೆ ಮತ್ತೆ ಜೀವತುಂಬಿ ಒಂದು ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ. ಕೆಲವು ಮೀಡಿಯಾ ಬ್ಲಾಗ್‌ಗಳಲ್ಲಿ (ಸಂಪಾದಕೀಯ ಅಲ್ಲ) ತಮ್ಮ ವಿರುದ್ಧ ಬಂದ ಆರೋಪಗಳಿಗೆ ಅವರು ಉತ್ತರಿಸಬೇಕಿತ್ತು. ಅದಕ್ಕಾಗಿ ಉತ್ತರಿಸಿದ್ದಾರೆ. ಇಲ್ಲಿನ ಆರೋಪಗಳು ನಮ್ಮವಲ್ಲವಾದ್ದರಿಂದ ರವಿಯವರ ಸಮರ್ಥನೆಗಳ ಬಗ್ಗೆಯೂ ನಮಗೆ ಅಂಥ ಆಸಕ್ತಿಯೇನಿಲ್ಲ.

ಆದರೆ ನಾವು ಹೇಳಲು ಹೊರಟ ವಿಷಯ ಬೇರೆಯದ್ದೇ ಆಗಿದೆ. ಉದಯವಾಣಿ ಪತ್ರಿಕೆಯ ವ್ಯವಸ್ಥೆಯೇ ಸಂಕೀರ್ಣವಾಗಿದೆ. ಒಂದೇ ಪತ್ರಿಕೆಯಲ್ಲಿ ಮೂರು ಸಂಸ್ಥೆಗಳ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂದರೆ ನೀವು ನಂಬಬೇಕು. ಸಂಪಾದಕರೊಂದು  ಸಂಸ್ಥೆಯಿಂದ ನೇಮಕಾತಿಯಾಗಿದ್ದರೆ, ವರದಿಗಾರರು ಇನ್ನೊಂದು ಸಂಸ್ಥೆಯ ಸಿಬ್ಬಂದಿ. ಡಿಟಿಪಿಯವರು ಇನ್ನೊಂದು ಸಂಸ್ಥೆಯಡಿಯಲ್ಲಿ ದುಡಿಯುತ್ತಿರುತ್ತಾರೆ. ಇವರೆಲ್ಲರನ್ನೂ ಏಕತ್ರಗೊಳಿಸಿ ಒಂದು ಪತ್ರಿಕೆ ತರಬೇಕು. ಇದೆಲ್ಲ ತಾಂತ್ರಿಕ ಸಮಸ್ಯೆಗಳು.

ಅದಕ್ಕೆ ಹೊರತಾದ ಸಂಕೀರ್ಣತೆಗಳೂ ಸಹ ಇವೆ. ಮಣಿಪಾಲದ ಉದಯವಾಣಿಗೂ ಬೆಂಗಳೂರಿನ ಉದಯವಾಣಿಗೂ ಅಜಗಜಾಂತರ ವ್ಯತ್ಯಾಸ. ಒಂದೇ ಪತ್ರಿಕೆಗೆ ಎರಡೆರಡು ಮುಖ!. ಡಾ.ಪೂರ್ಣಿಮ ಅವರು ಸಂಪಾದಕರಾಗಿದ್ದಾಗ ಬೆಂಗಳೂರು ಉದಯವಾಣಿ ವೈಚಾರಿಕ ವಿಚಾರಧಾರೆಗಳೊಂದಿಗೆ ಪ್ರಗತಿಪರವಾಗಿ ಮೂಡಿಬರುತ್ತಿದ್ದರೆ, ಮಣಿಪಾಲದಲ್ಲಿ ಅದಕ್ಕೆ ತದ್ವಿರುದ್ಧ ವ್ಯವಸ್ಥೆ ಚಾಲ್ತಿಯಲ್ಲಿತ್ತು.

ಕರಾವಳಿಯಲ್ಲಿ ಉದಯವಾಣಿ ಈಗಲೂ ನಂ.೧ ಪತ್ರಿಕೆಯೇ ಹೌದು. ಹಾಗಂತ ಅಲ್ಲಿ ಪ್ರಯೋಗಿಸಿದ್ದನ್ನೆಲ್ಲ ಇತರ ಕರ್ನಾಟಕ ಆವೃತ್ತಿಗಳಿಗೆ ಬಳಸಲು ಸಾಧ್ಯವಿಲ್ಲ. ಬೆಂಗಳೂರು ಆವೃತ್ತಿ ನಡೆಸಿದಂತೆ ಮಣಿಪಾಲದ್ದನ್ನು ನಡೆಸುವಂತಿಲ್ಲ. ಇದು ಸಮಸ್ಯೆ.

ಬಹುಶಃ ರವಿ ಹೆಗಡೆಯವರನ್ನು ಕರೆತಂದು ಗ್ರೂಪ್ ಎಡಿಟರ್ ಮಾಡಿದ ಹಿನ್ನೆಲೆಯಲ್ಲಿ ಉದಯವಾಣಿಗೆ ಒಟ್ಟಾರೆಯಾಗಿ ಒಂದು ವ್ಯಕ್ತಿತ್ವ ತಂದುಕೊಡುವ ಉದ್ದೇಶವೇನಾದರೂ ಮ್ಯಾನೇಜ್‌ಮೆಂಟಿಗಿತ್ತಾ? ಗೊತ್ತಿಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ಗ್ರೂಪ್ ಎಡಿಟರ್ ಎಂಬ ಡೆಸಿಗ್ನೇಷನ್ ಪ್ರಯೋಗವೇ ಹೊಸತು. ಉದಯವಾಣಿಯಲ್ಲಿ ಬಳಸಲಾಗುತ್ತಿರುವ ಗ್ರೂಪ್ ಎಡಿಟರ್ ಪದಕ್ಕಿರುವ ಅರ್ಥವನ್ನು ಗಮನಿಸಿದರೆ ಕನ್ನಡದ ಇತರೆಲ್ಲ ಪತ್ರಿಕೆಗಳ ಎಡಿಟರುಗಳೂ ಗ್ರೂಪ್ ಎಡಿಟರ್‌ಗಳೇ. ಆದರೆ ಉದಯವಾಣಿಯಲ್ಲಿ ಆವೃತ್ತಿಗೊಬ್ಬ ಸಂಪಾದಕರಿದ್ದ ಹಿನ್ನೆಲೆಯಲ್ಲಿ ಈ ಡೆಸಿಗ್ನೇಷನ್ ಪ್ರಯೋಗ ಅಗತ್ಯವಾಗಿತ್ತೇನೋ?

ಅದೇನೇ ಇರಲಿ. ರವಿ ಹೆಗಡೆ ಬಂದ ನಂತರ ಜತೆಗೆ ಒಂದಷ್ಟು ಮಂದಿಯನ್ನು ಕರೆತಂದರು. ಪ್ರಯೋಗಗಳು ನಡೆದವು. ಹೊಸ ಬಗೆಯ ವಿನ್ಯಾಸ ಕಾಣಿಸಿಕೊಂಡಿತು. ಎಲ್ಲ ಸರಿ, ಏನಾದ್ರೂ ಪ್ರಯೋಜನ ಆಯ್ತಾ?

ಐಆರ್‌ಎಸ್ ಸರ್ವೆಯ ಫಲಿತಾಂಶಗಳನ್ನು ನೀವು ಗಮನಿಸಿರುತ್ತೀರಿ. ಅದರ ಪ್ರಕಾರ ಉದಯವಾಣಿ ಕಳೆದ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.೪ರಷ್ಟು ಓದುಗರನ್ನು ಕಳೆದುಕೊಂಡಿದೆ. ಇದಿಷ್ಟೇ ಮಾಹಿತಿ ಇಟ್ಟುಕೊಂಡರೆ ರವಿ ಮೊದಲ ಯತ್ನದಲ್ಲಿ ಸೋತರೇನೋ ಅನ್ನಿಸುವುದು ನಿಜ.

ಆದರೆ ಬೆಂಗಳೂರಿನ ಆವೃತ್ತಿಗಳನ್ನು ಮಾತ್ರ ಗಮನಕ್ಕೆ ತೆಗೆದುಕೊಳ್ಳುವುದಾದರೆ ಉದಯವಾಣಿ ಉಳಿದೆಲ್ಲ ಪತ್ರಿಕೆಗಳನ್ನು ಹಿಂದಿಕ್ಕಿದೆ. ಅದೂ ಸಹ ಗಮನಾರ್ಹ ಅಂಶವೇ ಹೌದು. ಐಆರ್‌ಎಸ್‌ನ ಅಂಕಿಅಂಶಗಳನ್ನು ಎರಡು ವಿಧಾನದಲ್ಲಿ ವಿಶ್ಲೇಷಿಸಲಾಗುತ್ತದೆ. ಮೊದಲನೆಯದು ಟಿಆರ್ ಅಂದರೆ ಟೋಟಲ್ ರೀಡರ್‌ಶಿಪ್, ಎರಡನೆಯದು ಎಐಆರ್ ಅಂದರೆ ಆವರೇಜ್ ಇಶ್ಯೂ ರೀಡರ್‌ಶಿಪ್. ಟಿಆರ್ ವಿಧಾನದಲ್ಲಿ ಉದಯವಾಣಿ ಬೆಂಗಳೂರು ಆವೃತ್ತಿ ಓದುಗರ ಸಂಖ್ಯೆ ಶೇ.೧೮.೯ರಷ್ಟು ಏರಿಕೆಯಾಗಿದೆ. ಇದೇ ವಿಧಾನದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇರುವ ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳು ಕ್ರಮವಾಗಿ ಶೇ. ೫.೩, ಶೇ. ೧.೯ ಹಾಗೂ ಶೇ. ೨.೯ರಷ್ಟು ಓದುಗರನ್ನು ಕಳೆದುಕೊಂಡಿವೆ (ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ.)

ಅದೇ ರೀತಿ ಎಐಆರ್ ವಿಧಾನದಲ್ಲೂ ಸಹ ಶೇ.೩೪.೯ರಷ್ಟು ಪ್ರಗತಿಯನ್ನು ಸಾಧಿಸುವಲ್ಲಿ ಬೆಂಗಳೂರು ಉದಯವಾಣಿ ಯಶಸ್ವಿಯಾಗಿದೆ. ಇದೇ ವಿಧಾನದಲ್ಲಿ ಬೆಂಗಳೂರು ಆವೃತ್ತಿಯ ವಿಜಯ ಕರ್ನಾಟಕ ಶೇ. ೧.೪ರಷ್ಟು ಹೆಚ್ಚು ಓದುಗರನ್ನು ಮಾತ್ರ ಸಂಪಾದಿಸಲು ಶಕ್ತವಾಗಿದ್ದರೆ, ಪ್ರಜಾವಾಣಿ ಶೇ.೬.೯ ರಷ್ಟು ಓದುಗರನ್ನು ಕಳೆದುಕೊಂಡಿದೆ. ಕನ್ನಡಪ್ರಭಕ್ಕೆ ಶೇ. ೧.೬ ಓದುಗರನ್ನು ಗಳಿಸಿಕೊಳ್ಳಲು ಮಾತ್ರ ಸಾಧ್ಯವಾಗಿದೆ. (ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ)

ಇತರ ಪತ್ರಿಕೆಗಳು ಬೆಂಗಳೂರಿನಲ್ಲಿ ಹೊಂದಿರುವ ಪ್ರಸರಣಾ ಸಂಖ್ಯೆಯ ಗಾತ್ರವನ್ನು ಗಮನಿಸಿದಾಗ, ಉದಯವಾಣಿ ತನ್ನ ಓದುಗರನ್ನು ಹೆಚ್ಚಿಸಿಕೊಂಡಿರುವುದು ಅಷ್ಟೇನು ಮಹತ್ವದ ಸುದ್ದಿಯಲ್ಲ ಎಂದೂ ಸಹ ಹೇಳಬಹುದು. ಆದರೆ ಬೆಂಗಳೂರು ಉದಯವಾಣಿ ಗಮನಾರ್ಹವಾದ ಸಂಖ್ಯೆಯಲ್ಲಿ ಓದುಗರನ್ನು ಪಡೆಯುತ್ತಿದೆ ಎಂಬುದೂ ಸತ್ಯವೇ ಹೌದು. ಇದಕ್ಕೆ ರವಿ ಹೆಗಡೆ ಕೈಚಳಕವೂ ಕಾರಣವಿರಬಹುದೇ? ಹಾಗಿದ್ದಲ್ಲಿ ಬೆಂಗಳೂರೇತರ ಕರ್ನಾಟಕದಲ್ಲಿ ಅವರ ಪ್ರಭಾವಳಿ ಯಾಕೆ ಕಾಣಿಸುತ್ತಿಲ್ಲ? ಇತರ ಪತ್ರಿಕೆಗಳಿಗೆ ಇರುವ ಹಲವಾರು ಆವೃತ್ತಿಗಳ ಅನುಕೂಲ ಉದಯವಾಣಿಗಿಲ್ಲದಿರುವುದು ಈ ಹಿನ್ನೆಡೆಗೆ ಕಾರಣವೇ? ಇದು ಪ್ರಶ್ನೆ.

ನಿಜ ಹೇಳಬೇಕೆಂದರೆ ಈ ಐಆರ್‌ಎಸ್, ಎಬಿಸಿ, ಟಿಆರ್‌ಪಿ ಇತ್ಯಾದಿಗಳ ಬಗ್ಗೆ ನಮಗಿರುವ ಕುತೂಹಲವೂ ಕಡಿಮೆಯೇ. ಆದರೆ ಇವೇ ಸದ್ಯಕ್ಕೆ ಪತ್ರಿಕೆಗಳ ಜನಪ್ರಿಯತೆಯನ್ನು ಅಳೆಯುವ ಅಧಿಕೃತ (ಎಲ್ಲ ಪತ್ರಿಕೆಗಳು ಒಪ್ಪಿಕೊಂಡ) ಮಾನದಂಡವಾಗಿರುವುದರಿಂದ ಇದನ್ನಿಲ್ಲಿ ಪ್ರಸ್ತಾಪಿಸಿದ್ದೇವೆ.

ಮತ್ತೆ ರವಿ ಹೆಗಡೆ ವಿಷಯಕ್ಕೆ ಬರುವುದಾದರೆ, ಅವರು ನೋಡಲೂ ಸಹ ಯಾವುದೋ ಕಾರ್ಪರೇಟ್ ಕಂಪೆನಿಯ ಸಿಇಓ ತರಹ ಕಾಣುತ್ತಾರೆ. ಲೆಕ್ಕಾಚಾರದಲ್ಲಿ ಅವರು ಮುಂದು. ಒಂದು ಪಕ್ಕಾ ಯೋಜನೆ ಇಟ್ಟುಕೊಂಡೇ  ಒಂದೊಂದೇ ಹೆಜ್ಜೆ ಇಡುತ್ತಿರಬಹುದು. ಬಹುಶಃ ಇದು ದೀರ್ಘಕಾಲದ ಸಮರ ಎಂಬುದು ಅವರಿಗೆ ಅರಿವಿಗೂ ಬಂದಿರಬಹುದು. ಇದೆಲ್ಲ ಗೊತ್ತಿದ್ದೇ ಅವರು ಉದಯವಾಣಿಯಲ್ಲಿ ಆಸೀನರಾಗಿದ್ದಾರೆ.

ಕೇವಲ ಬೆಂಗಳೂರು, ಮಣಿಪಾಲ, ಹುಬ್ಬಳ್ಳಿ ಆವೃತ್ತಿಗಳನ್ನಿಟ್ಟುಕೊಂಡು ಅವರು ಇತರ ಪತ್ರಿಕೆಗಳ ಜತೆ ಪೈಪೋಟಿ ನಡೆಸುವುದೂ ಕಷ್ಟವೇ. ಆದರೆ ಪೈಗಳ ಕುಟುಂಬದಲ್ಲೂ ಹೊಸ ರಕ್ತ, ಬಿಸಿರಕ್ತ ವ್ಯಾವಹಾರಿಕ ಜಗತ್ತಿಗೆ ಕಾಲಿಟ್ಟಿದೆ. ಅದರ ಪರಿಣಾಮವಾಗಿಯೇ ಹುಬ್ಬಳ್ಳಿ ಆವೃತ್ತಿ ಆರಂಭವಾಗಿದ್ದು ಎಂಬ ಮಾತಿದೆ. ಹೀಗಾಗಿ ಇನ್ನೂ ಎರಡು ಮೂರು ಎಡಿಷನ್‌ಗಳ ಸ್ಥಾಪನೆ ಆದರೂ ಆಶ್ಚರ್ಯವಿಲ್ಲ. ಹಾಗಾದರೆ ಉದಯವಾಣಿಯೂ ಸಹ ಮೊದಲ ಮೂರು ಸ್ಥಾನಗಳಿಗೆ ಪೈಪೋಟಿ ನಡೆಸಬಹುದು. ರವಿ ಹೆಗಡೆ ಮತ್ತವರ ತಂಡಕ್ಕೆ ಒಳಿತಾಗಲಿ.

ಇದನ್ನೆಲ್ಲ ಹೇಳುತ್ತಿರುವ ಸಂದರ್ಭದಲ್ಲಿ ವಿಜಯ ಸಂಕೇಶ್ವರರು ಆರಂಭಿಸಲಿರುವ ಪತ್ರಿಕೆ ಎಲ್ಲ ಪತ್ರಿಕೆಗಳ ಲೆಕ್ಕಾಚಾರಗಳನ್ನು ತಲೆಕೆಳಕು ಮಾಡುವ ಹಾಗೆ ಕಾಣುತ್ತಿದೆ. ಈ ಬಾರಿಯೂ ಸಹ ಸಂಕೇಶ್ವರರು ದೊಡ್ಡ ಮಟ್ಟದ ಬೆಲೆ ಸಮರವನ್ನು ಘೋಷಿಸಲಿದ್ದಾರೆ. ಅದು ಸುನಾಮಿಯಂತೆ ಕನ್ನಡ ಪತ್ರಿಕೆಗಳ ಮಾಲೀಕರು, ಮ್ಯಾನೇಜ್‌ಮೆಂಟುಗಳನ್ನು ಆವರಿಸಿಕೊಳ್ಳಲಿದೆ. ನಿಜವಾಗ್ಲೂ ಸಂಕೇಶ್ವರರು ಐವತ್ತು ಪೈಸೆಗೆ ಪತ್ರಿಕೆ ಕೊಡ್ತಾರಾ? ಹಾಗಿದ್ದರೆ ಪತ್ರಿಕೆ ಮಾರುವವನಿಗೆ ಎಷ್ಟು ಕಮಿಷನ್ ಕೊಡ್ತಾರೆ? ಆ ಕಥೆ ಮುಂದೆ ನಿಮಗೆ ಹೇಳುತ್ತೇವೆ.

ಎಲ್ಲ ಮಾಧ್ಯಮ ಸಂಸ್ಥೆಗಳ ಮಾಲೀಕರು, ಸಂಪಾದಕರುಗಳಿಗೆ ನಮ್ಮದೊಂದು ವಿನಂತಿ. ಐಆರ್‌ಎಸ್, ಎಬಿಸಿ, ಟಿಆರ್‌ಪಿ ಇತ್ಯಾದಿಗಳ ಫಲಿತಾಂಶ ಏನೇ ಇರಲಿ. ನೀವುಗಳು ಪಾಲ್ಗೊಳ್ಳಲಿರುವ ದರಸಮರದ ಲಾಭ ಯಾರಿಗಾದರೂ ಆಗಲಿ, ಮಾಧ್ಯಮರಂಗದಲ್ಲಿ ಇನ್ನೇನೇ ಬಿರುಗಾಳಿ, ಸುನಾಮಿಗಳು ಏಳಲಿ. ನೀವು ಮಾತ್ರ ಜನಪರವಾಗಿರಿ, ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಿ. ಕರ್ನಾಟಕವನ್ನು ಆವರಿಸಿಕೊಂಡಿರುವ ತರೇವಾರಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರೋಗಗಳಿಂದ ಮುಕ್ತಗೊಳಿಸುವತ್ತ ನಿಮ್ಮ ಪ್ರಾಮಾಣಿಕ ಪ್ರಯತ್ನ ಇರಲಿ. ನಿಮ್ಮ ರೇಟಿಂಗು, ಮಾರ್ಕೆಟ್ಟು ಇತ್ಯಾದಿ ಟೆಕ್ನಿಕಾಲಿಟಿಗಳಿಗಿಂತ ನಮಗಿರುವ ಆಸಕ್ತಿ ಮತ್ತು ಕಾಳಜಿ ಇದೇ ಆಗಿದೆ.

4 comments:

 1. "ಐಆರ್‌ಎಸ್, ಎಬಿಸಿ, ಟಿಆರ್‌ಪಿ ಇತ್ಯಾದಿಗಳ ಫಲಿತಾಂಶ ಏನೇ ಇರಲಿ. ನೀವುಗಳು ಪಾಲ್ಗೊಳ್ಳಲಿರುವ ದರಸಮರದ ಲಾಭ ಯಾರಿಗಾದರೂ ಆಗಲಿ, ಮಾಧ್ಯಮರಂಗದಲ್ಲಿ ಇನ್ನೇನೇ ಬಿರುಗಾಳಿ, ಸುನಾಮಿಗಳು ಏಳಲಿ. ನೀವು ಮಾತ್ರ ಜನಪರವಾಗಿರಿ.." - Word!

  ReplyDelete
 2. ಸಂಕೇಶ್ವರರರು ಆರಂಭಿಸಲಿರುವ ಪತ್ರಿಕೆಯು ಮತ್ತೆ ಕನ್ನಡ ಪತ್ರಿಕೋದ್ಯಮದಲ್ಲಿ ದರ ಸಮರವೆಂಬ ಅನೈತಿಕ ಚಾಳಿಯನ್ನು ಆರಂಭಿಸಲಿದೆ ಎಂಬ ಸೂಚನೆ ನೀಡಿದ್ದೀರಿ. ದರ ಸಮರವು ಪತ್ರಿಕೋದ್ಯಮ ರಂಗದಲ್ಲಿರುವ ಮೌಲ್ಯಗಳ ಕೊರತೆಯನ್ನು ಹಾಗೂ ಭ್ರಷ್ಟತೆಯನ್ನು ಇನ್ನಸ್ಟು ಹೆಚ್ಚಿಸುತ್ತದೆಯೇ ಹೊರತು ಅದನ್ನು ಕಡಿಮೆಗೊಳಿಸಲಾರದು. ಹೀಗಾಗಿ ದರ ಸಮರ ಅನಪೇಕ್ಷಿತ. ಈ ದರ ಸಮರದಿಂದ ದೊಡ್ಡ ಪೆಟ್ಟು ಬೀಳುವುದು ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಸಣ್ಣ ಪತ್ರಿಕೆಗಳ ಮೇಲೆ. ಇದು ಹಿಂದೆ ಸಂಕೇಶ್ವರರು ನಡೆಸಿದ ದರ ಸಮರದಿಂದ ಸಾಬೀತಾಗಿದೆ. ದರ ಸಮರ ನಡೆಸಿ ಪತ್ರಿಕೆ ನಡೆಸಬೇಕಾದರೆ ಜಾಹೀರಾತುಗಳನ್ನೂ ಅವಲಂಬಿಸಬೇಕಾಗುತ್ತದೆ ಹಾಗೂ ಇದರಿಂದ ಪತ್ರಿಕೆಯ ಭ್ರಷ್ಥತೆ ಇನ್ನಷ್ಟು ಹೆಚ್ಚಾಗುತ್ತದೆ. ಸಂಕೇಶ್ವರರು ಈ ಹಿಂದೆ ಪತ್ರಿಕೆ ಆರಂಭಿಸಿ ಪತ್ರಿಕಾರಂಗದಲ್ಲಿ ಉನ್ನತ ಮೌಲ್ಯಗಳನ್ನೇನೂ ಎತ್ತಿ ಹಿಡಿಯಲಿಲ್ಲ. ವಾಸ್ತವವಾಗಿ ಸಂಕೇಶ್ವರರು ಪತ್ರಿಕೆ ಆರಂಭಿಸಿದ ನಂತರ ಕರ್ನಾಟಕದಲ್ಲಿ ಮೌಲ್ಯಗಳ ಕುಸಿತ ಹಿಂದೆಂದಿಗಿಂತಲೂ ತೀವ್ರವಾಗಿದೆ. ಹೀಗಾಗಿ ಸಂಕೇಶ್ವರರು ಈ ಹಿಂದೆ ಪತ್ರಿಕೆ ಆರಂಭಿಸಿ ಸಾಧಿಸಿದ್ದೇನು ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಒಮ್ಮೆ ಪತ್ರಿಕೆ ಆರಂಭಿಸಿ ಅದನ್ನು ಮಾರಿ ಈಗ ಪುನಃ ಪತ್ರಿಕೆ ಆರಂಭಿಸಿ, ದರ ಸಮರ ನಡೆಸಿ ಪತ್ರಿಕಾ ರಂಗದ ಮೌಲ್ಯಗಳ ಕುಸಿತಕ್ಕೆ ಕಾರಣವಾಗುವ ಸಂಕೇಶ್ವರರ ತಿಕ್ಕಲುತನ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಕಾಣುತ್ತದೆ. ನೀವು ಇದನ್ನು "ಕಮೆಂಟು" ಗಳಲ್ಲಿ ಹಾಕುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೂ ನಿಮ್ಮ ಗಮನಕ್ಕೆ ತರಲು ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ.

  ReplyDelete
 3. bulll st...
  niv badirodu ok adre information wrong. alri group editor agi avru enu madok agilla. nim report nododre heli barsiro hagide. nodona niv e coment hakthiro ilvo annodramele decide madbahudu.
  idi udayavani ninthirode manipal edition mele. e sull suddi, puncher gincher ella yarig bekri...?

  ReplyDelete
 4. We are looking for TRP ratings for Kannada TV channels... it seems Udaya and Suvarna are having net to net fight...

  Udaya Music has lots of ads would like to know if Ads are free on that channel...

  Seems Suvarna and Samaya having tight fight... Udaya News is relaunched... even samll screen making news...  let us know if you have TRP news of all Kannada channels including Chandana, Chintu and Udaya Movies.... please

  ReplyDelete