Friday, July 1, 2011

ದೇಶಕಾಲ ವಾಗ್ವಾದ: ಡಿ.ಎಸ್.ನಾಗಭೂಷಣ್ ಬರೆದ ಪ್ರಕಟವಾಗದ ಪ್ರಸ್ತಾವನೆ


ದೇಶಕಾಲ ತ್ರೈಮಾಸಿಕದ ವಿಶೇಷ ಸಂಚಿಕೆ ಕುರಿತಂತೆ ನಡೆದ ಬಹುದೀರ್ಘ ಚರ್ಚೆ ನಿಮಗೆ ನೆನಪಿರಬಹುದು. ಈ ವಾಗ್ವಾದವನ್ನು ಪುಸ್ತಕ ರೂಪದಲ್ಲಿ ತರಲು ಇದನ್ನು ಆರಂಭಿಸಿದ್ದ ಚಂದ್ರಶೇಖರ ಐಜೂರು ಮತ್ತು ಮಂಜುನಾಥ ಲತಾ ನಿರ್ಧರಿಸಿದ್ದರು. ಈ ಪುಸ್ತಕಕ್ಕಾಗಿ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಬರೆದ ಪ್ರಸ್ತಾವನೆ ಇಲ್ಲಿದೆ. ಚರ್ಚೆಗೆ ಸ್ವಾಗತ.-ಸಂಪಾದಕೀಯ
                                                                 

`ಭಾಷೆಯೇ ದೈವ’ ನಿಜ! ಹಾಗಾಗಿಯೇ ಭಾಷೆ ದೆವ್ವವೂ ಹೌದು!!:
ಮುಗಿಯಲಾರದ ಚರ್ಚೆಗೊಂದು ಮುಗಿತಾಯದ ಯತ್ನ 


 (ಇವು ಚಂದ್ರಶೇಖರ ಐಜೂರು ಮತ್ತು ಮಂಜುನಾಥ್ ಲತಾ ಅವರು ’ದೇಶ ಕಾಲ’ ಪತ್ರಿಕೆ ಹಾಗೂ ಅದರ ವಿಶೇಷಾಂಕದ ಬಗ್ಗೆ ’ಲಂಕೇಶ್’ನಲ್ಲಿ ಆರಂಭಿಸಿ ನಡೆಸಿದ ಚರ್ಚೆಯ ಉದ್ದೇಶಿತ ಪುಸ್ತಕ ರೂಪಕ್ಕೆ. ಬರೆದ ಪ್ರಸ್ತಾವನೆಯ ಮಾತುಗಳು. ಆದರೆ, ತರಾತುರಿಯಲ್ಲಿ ಮತ್ತು ಒತ್ತಾಯಪೂರ್ವಕವಾಗಿ ಹಾಗೂ ನನಗೆ ಓದು-ಬರಹ ಕಷ್ಟವಾಗಿದ್ದ ಅವಧಿಯಲ್ಲಿ ನನ್ನಿಂದ ಈ ಪ್ರಸ್ತಾವನೆಯನ್ನು ಬರೆಸಿದ ಇವರು, ಪುಸ್ತಕವನ್ನು ಮಾತ್ರ ಅದೂ ಇದೂ ಕಾರಣ ಹೇಳುತ್ತಾ, ತಿಂಗಳುಗಳು ಕಳೆದರೂ ಪ್ರಕಟಿಸದೇ ಹೋದರು! ಕುತೂಹಲಗೊಂಡ ನಾನು ಈ ಬಗ್ಗೆ ನನ್ನ ಇತರ ಗೆಳೆಯರನ್ನು ವಿಚಾರಿಸಿದಾಗ, ನನ್ನ ಪ್ರಿಯ ಗೆಳೆಯರೇ ಆದ ಬಂಜಗೆರೆ ಜಯಪ್ರಕಾಶರಿಂದಲೂ ಇವರು ಇನ್ನೊಂದು ಪ್ರಸ್ತಾವನೆಯನ್ನು ಬರೆಸಿದ್ದಾರೆ ಮತ್ತು ನಾನು ಈಗಾಗಲೇ ಪ್ರಸ್ತಾವನೆಯೊಂದನ್ನು ಬರೆದಿರುವುದನ್ನು ಅವರಿಗೆ ತಿಳಿಸದೆ ಇದನ್ನು ಮಾಡಿದ್ದಾರೆ ಎಂಬ ಸಂಗತಿ ತಿಳಿದು ಬಂತು. ಇದರಿಂದಾಗಿ, ನನ್ನನ್ನು ಕುರಿತ ಅವರ ನಿರೀಕ್ಷೆಗಳೂ ಹುಸಿಯಾಗಿ ನನ್ನ ಪ್ರಸ್ತಾವನೆಯ ಮಾತುಗಳಿಂದ ಅವರಿಗೆ ಮುಜುಗರವುಂಟಾಗಿದೆ ಎಂಬುದು ನನಗೆ ಸ್ಪಷ್ಟವಾಯಿತು. ಹಾಗೇ, ಅವರ ಈ ನಿರ್ಧಾರದಿಂದ ಅವರನ್ನು ಕುರಿತ ನನ್ನ ನಿರೀಕ್ಷೆಗಳೂ ಹುಸಿಯಾದವು ಎಂಬುದನ್ನು ಇಲ್ಲಿ ಬೇರೆ ಹೇಳಬೇಕಿಲ್ಲ. ಹಾಗಾಗಿ, ನಾನು ಐಜೂರರಿಗೆ ಅವರ ಉದ್ದೇಶಿತ ಪುಸ್ತಕದಲ್ಲಿ ನನ್ನ ಪ್ರಸ್ತಾವನೆಯನ್ನು ಪ್ರಕಟಿಸುವ ಅಗತ್ಯವಿಲ್ಲ ಮಾತ್ರವಿಲ್ಲ, ಅದನ್ನು ಯಾವುದೇ ಕಾರಣದಿಂದ ಇನ್ನೊಂದು ಪ್ರಸ್ತಾವನೆಯೊಂದಿಗೆ ಪ್ರಕಟಿಸಕೂಡದೆಂದು(ಇಬ್ಬರಿಗೂ ಮುಜುಗರವಾಗದಿರಲೆಂದು) ಹೇಳಿದ ಮೇಲೂ, ಯಾವ ದ್ವಂದ್ವಕ್ಕೆ ಸಿಕ್ಕಿಯೋ ಏನೋ;ಅಥವಾ ಮತ್ತಾವ ಕಾರಣದಿಂದಲೋ, ಅವರು ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ. ಹಾಗಾಗಿ, ಅವರು ಆದಷ್ಟು ಬೇಗ ಬಂಜಗೆರೆಯವರ ಪ್ರಸ್ತಾವನೆಯೊಂದಿಗೇ ಪುಸ್ತಕ ಪ್ರಕಟಿಸಲು ಅನುವಾಗುವಂತೆ ಮತ್ತು ಅನಗತ್ಯ ವಿಳಂಬದಿಂದಾಗಿ ಈ ಚರ್ಚೆ ಸಾಂದರ್ಭಿಕ ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದೆಂಬ ದೃಷ್ಟಿಯಿಂದ ನನ್ನ ಆ ಪ್ರಸ್ತಾವನೆಯ ಮಾತುಗಳನ್ನು ಈಗ ಈ ಅಂತರ್ಜಾಲ ವೇದಿಕೆಯಲ್ಲಿ ಪ್ರಕಟಿಸುತ್ತಿರುವೆ. ಇದನ್ನು ಎಡಪಂಥೀಯ ವೈಚಾರಿಕ ಮಾಸಿಕವೊಂದು ಅತಿ ದೀರ್ಘವಾಯಿತೆಂದು ಹೇಳಿ ಮತ್ತು ಇನ್ನೊಂದು ಅತಿ ಹ:ಳೆಯ ಸಾಹಿತ್ಯಿಕ ದ್ವೈಮಾಸಿಕವೊಂದು ಸೈದ್ಧಾಂತಿಕ ಮುಜುಗರದ ಕಾರಣ ನೀಡಿ ಪ್ರಕಟಿಸಲು ನಿರಾಕರಿಸಿದವು ಎಂಬುದನ್ನೂ ಇಲ್ಲಿ ತಿಳಿಸಲಿಚ್ಛಿಸುವೆ.
       ’ಲಂಕೇಶ’ ಪತ್ರಿಕೆಯಲ್ಲಿ ಬಂದ ಚರ್ಚೆಯನ್ನು ವಿವರವಾಗಿ ಗಮನಿಸದ ಮತ್ತು ಗಮನಿಸದೇ ಹೋದವರೂ ಕೂಡಾ ಈ ಪ್ರಸ್ತಾವನೆಯನ್ನು ಸ್ಥೂಲವಾಗಿಯಾದರೂ ಗ್ರಹಿಸಬಹುದಾದಂತೆ ಇದನ್ನು ಆದಷ್ಟೂ ಕಡೆ ಹಿನ್ನೆಲೆ ನೀಡಿ, ವಿವರಗಳೊಂದಿಗೆ ಬರೆಯಲಾಗಿದೆ. ಗೆಳೆಯರ ಮುಕ್ತ ಮತ್ತು ಗಂಭೀರ ಅಭಿಪ್ರಾಯಗಳಿಗೆ ಸ್ವಾಗತವಿದೆ.-ಡಿ.ಎಸ್.ನಾಗಭೂಷಣ )
ದೇಶಕಾಲವೆಂಬ ಕನ್ನಡ ತ್ರೈಮಾಸಿಕವೊಂದು ಐದು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ವಿಶೇಷಾಂಕವೊಂದನ್ನು ಹೊರತಂದ ಸಂದರ್ಭದಲ್ಲಿ ನನ್ನ ಕಿರಿಯ ಗೆಳೆಯರಾದ ಮಂಜುನಾಥ ಲತಾ ಹಾಗೂ ಚಂದ್ರಶೇಖರ ಐಜೂರು ಅವರು ದೇಶವಿದೇನಹಾ! ಕಾಲವಿದೇನಹಾ? ಎಂಬ ಲೇಖನ ಬರೆದು, ಅದು ಸಾರ್ವಜನಿಕವಾಗಿ ಪ್ರಕಟವಾಗುವ ಮುನ್ನವೇ, ಅದರ ಪ್ರತಿಯೊಂದನ್ನು ಈ-ಮೇಲ್ ಮೂಲಕ ನನಗೆ ಕಳಿಸಿದ್ದರು. ಅದನ್ನು ಕಷ್ಟಪಟ್ಟು ಓದಿದ ನನಗೆ, ಅದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಮನಸ್ಸಾಗಲಿಲ್ಲ. ಈ ಗೆಳೆಯರು ತಪ್ಪು ಕಾರಣಗಳೆನ್ನೆತ್ತಿಕೊಂಡು-ಜಗತ್ತಿನ ಇಂದಿನ ಎಲ್ಲ ಅನಾಹುತಗಳಿಗೂ, ಕೆಟ್ಟ ಬೆಳವಣಿಗೆಗಳಿಗೂ ಈ ಪತ್ರಿಕೆಯೂ ಜವಾಬ್ದಾರವೆಂಬಂತೆ-ಸಂಚಿಕೆಯನ್ನು ತುಂಬಾ ರೂಕ್ಷವಾಗಿ ಟೀಕಿಸಿದ್ದಾರೆನಿಸಿತು. ಕೆಲ ದಿನಗಳ ನಂತರ ಐಜೂರ್ ದೂರವಾಣಿ ಕರೆ ಮಾಡಿ ನನ್ನ ಪ್ರತಿಕ್ರಿಯೆ ಕೇಳಿದಾಗ ನಾನು ಇದನ್ನೇ ಹೇಳಿದೆ. ಜೊತೆಗೆ ಕೆಲವು ಕಿವಿ ಮಾತುಗಳನ್ನೂ:
   
ಡಿ.ಎಸ್.ನಾಗಭೂಷಣ
ಮುಖ್ಯವಾಗಿ, ಜಾತಿಯೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ಟೀಕಿಸುವಾಗ, ಅದು ನಮಗೇ ಗೊತ್ತಿಲ್ಲದ ಹಾಗೆ-ಆದರೆ ಸುಮ್ಮನೆ ನೋಡುವವರಿಗೆ ಅಥವಾ ಓದುವವರಿಗೆ ಎದ್ದು ಕಾಣುವಂತೆ-ಅದು ಎರಡೂ ಕಡೆ ಕತ್ತರಿಸಿಕೊಂಡು ಹೋಗುತ್ತಾ ನಮ್ಮನ್ನೇ-ನಮ್ಮ ಸಣ್ಣತನಗಳನ್ನೇ-ಬಯಲು ಮಾಡಬಲ್ಲುದಾಗಿದೆ. ಹಾಗಾಗಿ ಜಾತಿ ಹಿಡಿದು ಮಾತಾಡುವಾಗ ನಾವು ಜಾತ್ಯತೀತರಾಗಿದ್ದರೆ ಮಾತ್ರ ನಮ್ಮ ಮಾತುಗಳು ವಿಶ್ವಾಸಾರ್ಹವೆನಿಸಿಕೊಳ್ಳುತ್ತವೆ ಎಂದು ಹೇಳಿದೆ. ಹಾಗೇ, ಇಂದು ಮೇಲ್ಜಾತಿವಾದ ಎಂಬುದಷ್ಟೇ ಜಾತಿವಾದವೆನ್ನಿಸಿಕೊಳ್ಳದೆ, ಇಂದಿನ ಸಂದರ್ಭದಲ್ಲಿ ಕೆಳಜಾತಿವಾದವೂ ಅಪಾಯಕಾರಿ ಜಾತಿವಾದವೆನ್ನಿಸಿಕೊಳ್ಳಬಹುದಾಗಿದೆ ಎಂದೂ ಸೂಚಿಸಿದೆ. ಇವರೆಡರ ನಡುವಣ ಸ್ಪರ್ಧೆಯೇ ಇಂದು ಬೇರೆ ಬೇರೆ ವೇಷ ತೊಟ್ಟು ಕನ್ನಡದಲ್ಲಿ ಹೇಗೆ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ವಾಗ್ವಾದಗಳನ್ನು ಸೃಷ್ಟಿಸಿ ನಮ್ಮೆಲ್ಲರನ್ನೂ ದಾರಿ ತಪ್ಪಿಸುತ್ತಿದೆ ಎಂದು ಅದಕ್ಕ್ಕೆ ಒಂದೆರಡು ಉದಾಹರಣೆಗಳನ್ನೂ ನೀಡಿದೆ. ಅಷ್ಟೇ ಅಲ್ಲ, ನಿಮ್ಮ ಲೇಖನವೂ ಜಾತಿಯೊಂದನ್ನೇ ಮುಂದಿಟ್ಟುಕೊಂಡು;ಆದರೆ ಅದಕ್ಕೆ ಸಾಮಾಜಿಕ-ರಾಜಕೀಯ ನ್ಯಾಯದ ಮುಸುಕು ಹಾಕಿ, ಆ ಮೂಲಕ ಸಂಸ್ಕೃತಿ ಚಿಂತನೆ ಮಾಡುವ ಸುತ್ತು ಬಳಸಾದ ಹತಾಶ ಪ್ರಯತ್ನದಂತೆ ನನಗೆ ಕಾಣುತ್ತಿದ್ದು, ಇದು ಇನ್ನೊಂದು ಹುಸಿ ವಾಗ್ವಾದದ ಸೃಷ್ಟಿಗೆ ಕಾರಣವಾಗಬಹುದಾದ್ದರಿಂದ ನಾನು ಪ್ರತಿಕ್ರಿಯಿಸಲಾರೆ ಎಂದು ಮಾತು ಮುಗಿಸಲು ಯತ್ನಿಸಿದೆ.
   
ಆದರೆ ಐಜೂರರು, ಮಾತು ಮುಂದುವರೆಸಲೋ ಏನೋ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದುದಕ್ಕೆ ಜಾತಿ ರಾಜಕಾರಣವೇ ಕಾರಣವಲ್ಲವೇ ಎಂದು ಕೇಳಿದಾಗ ನನಗೆ ರೇಗಿ ಹೋಯಿತು. ರೇಗುತ್ತಲೇ ನೀವು ಅದನ್ನು ಓದಿದ್ದೇರೇನ್ರಿ? ಎಂದು ಕೇಳಿದಾಗ ಅವರಿಂದ ಬಂದ ಇಲ್ಲ ಎಂಬ ಉತ್ತರ ನನ್ನನ್ನು ನಿಜವಾಗಿ ಅಪ್ಪಳಿಸಿತೆಂದೇ ಹೇಳಬೇಕು! ಎಲಾ ಈತನ ಧೈರ್ಯವೇ ಎಂದು ಒಂದು ಕ್ಷಣ ಅವಾಕ್ಕಾದೆನಾದರೂ, ಮರುಕ್ಷಣವೇ ಆ ಉತ್ತರದ ಹಿಂದಿದ್ದ ಮುಗ್ಧ ಸತ್ಯ ನಿಷ್ಠೆಯ ಮುಂದೆ ನನ್ನ ಕೋಪವೆಲ್ಲ ಕರಗಿ ಹೋಯಿತು. ಮನಸ್ಸು ಸ್ವಲ್ಪ ನಿಸೂರಾದಂತಾಗಿ, ಮೊದಲು ನೀವು ಆ ಕಾದಂಬರಿಯನ್ನು ಓದಿ. ಆನಂತರ ನಿಮ್ಮ ನೋಟ ಮತ್ತು ಭಾಷೆ ಕೊಂಚವಾದರೂ ಬದಲಾಗಬಹುದು ಎಂದು ಮಾತು ಮುಗಿಸಿದೆ.

ಈ ನಿರ್ದಿಷ್ಟ ಸಂದರ್ಭವನ್ನು ಏಕೆ ಹೇಳುತ್ತಿದ್ದೇನೆಂದರೆ, ಅದು ಐಜೂರು ಮತ್ತು ಅವರ ಮಿತ್ರರ ವಾದಗಳಲ್ಲಿ ಜನಪರತೆ ಎಂಬ ಕಲ್ಪನೆಯ ಅತಿ ಸರಳೀಕರಣ ಮತ್ತು ಅದರಿಂದ ಹುಟ್ಟಿದ ಹುಚ್ಚು ಆವೇಶ, ಭಂಡ ತರ್ಕಗಳು ಇರುವುವಾದರೂ, ಅಪ್ರಮಾಣಿಕತೆ ಇರಲಾರದು ಎಂದು ನನಗೆ ಹೊಳೆದ ಸಂದರ್ಭವದಾದ್ದರಿಂದ. ಇವರ ಲೇಖನ ಮುಂದೆ ಲಂಕೇಶ್ ಪತ್ರಿಕೆಯಲ್ಲಿ ಆರಂಭಿಸಿದ ಪತ್ರ ಸಮರ ರೂಪದ ಚರ್ಚೆಯ ಯಾವ ಹಂತದಲ್ಲೂ, ಅನೇಕರ ಒತ್ತಾಯದ ಹೊರತಾಗಿಯೂ ನಾನು ಭಾಗವಹಿಸಲಿಲ್ಲ. ಕಾರಣ, ದಿಕ್ಕಾಪಾಲಾಗಿ ಹರಿದು ಹೋಗುತ್ತಿದ್ದ ಅದರ ರಭಸಕ್ಕೆ ನಾನು ಬೆದರಿದ್ದೆ. ಆದರೆ ಇಂದು ನಾನು, ಈ ಚರ್ಚೆ ಪುಸ್ತಕ ರೂಪದಲ್ಲಿ ಬರುತ್ತಿರುವಾಗ ಅದಕ್ಕೊಂದು ಪ್ರಸ್ತಾವನೆ ಬರೆಯಲು ಮುಂದಾಗಿರುವುದಕ್ಕೆ ಇದೂ ಒಂದು ಕಾರಣ. ಅಂದರೆ; ಇವರೊಂದಿಗೆ ಎಷ್ಟೇ ಕಷ್ಟವಾದರೂ ಮಾತು ಮುಂದುವರೆಸಬಹುದು ಮತ್ತು ಮುಂದುವರಿಸಬೇಕು ಎಂಬುದು. ಇನ್ನೊಂದು, ಐಜೂರರು ನನ್ನ ಕಟು ಟೀಕೆಯ ಮಾತುಗಳ ಹೊರತಾಗಿಯೂ, ಅವನ್ನೆಲ್ಲ ವಿಧೇಯ ವಿದ್ಯಾರ್ಥಿಯಂತೆ ಕೇಳಿಸಿಕೊಂಡು, ನನ್ನ ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ಅನಿರ್ದಿಷ್ಟ ಅವಧಿಯವರೆಗೆ ವಿಳಂಬವಾಗಲಿದೆ ಎಂದು ಹೇಳಿದರೂ, ಈ ಪ್ರಸ್ತಾವನೆ ಬರೆಯಲು ನನ್ನನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸಿರುವುದು. ಜೊತೆಗೆ ನಾನು ಮಂಜುನಾಥ್ ಲತಾ-ಐಜೂರು ಹಾಗೂ ಅವರ ಓರಿಗೆಯ ಕಿರಿಯ ಗೆಳೆಯರಿಗೆ ಅವರ ಕೆಲವು ಅನಗತ್ಯ ಆಟಾಟೋಪಗಳನ್ನು ನೋಡಿದಾಗ ಹೇಳಲೇಬೇಕೆಂದಿದ್ದ;ಆದರೆ ಸೂಕ್ತ ಸಂದರ್ಭ ಬಾರದೆ ಹೇಳಲಾಗದಿದ್ದ ಹಲವು ಮಾತುಗಳನ್ನೂ, ಸಂಗತಿಗಳನ್ನು ಹೇಳಲು ಈ ಸಂದರ್ಭ ಒಂದು ಸೂಕ್ತ ಪರಿಪ್ರೇಕ್ಷವನ್ನೂ ಒದಗಿಸಿರುವುದು ಮತ್ತೊಂದು ಕಾರಣವೆಂದೂ ಹೇಳಬಹುದು. ಹೀಗಾಗಿ ನನ್ನ ಈ ಬರಹ ನನ್ನ ಹಿರಿಯರಿಗೆ ಮತ್ತು ಓರಿಗೆಯವರಿಗೆ ಅತಿ ದೀರ್ಘವೆನಿಸಿದರೆ ಕ್ಷಮೆ ಇರಲಿ. ಹೇಗೂ ಐಜೂರರು ಎಷ್ಟಾದರೂ ಬರೆಯಿರಿ, ಏನಾದರೂ ಬರೆಯಿರಿ, ಅಂತೂ ಈ ಸಂದರ್ಭದಲ್ಲಿ ನೀವು ಬರೆಯಿರಿ ಎಂದು ಅಭಯ ನೀಡಿದ್ದಾರೆ!

                                         -೨-
ನನ್ನ ಈ ಮೇಲಿನ ಮಾತುಗಳನ್ನು ಓದಿ, ನಾನು ಈ ಚರ್ಚೆಯಲ್ಲಿ ಭಾಗವಹಿಸದಿರಲು ದೇಶಕಾಲದ ಚರಿತ್ರೆಯ ಬಗೆಗೆ ಈತನಿಗೆ ನಿಜವಾಗಿ ಯಾವೊಂದು ನಿಲುವಾಗಲೀ, ಅಭಿಪ್ರಾಯವಾಗಲೀ ಇಲ್ಲದಿರುವುದೂ ಒಂದು ಕಾರಣವಿರಬಹುದು ಎಂದು ಯಾರಾದರೂ ಯೋಚಿಸಿದ್ದರೆ ಅದು ತಪ್ಪು. ಮಂಜುನಾಥ್ ಲತಾ ಹಾಗೂ ಐಜೂರರ ಲೇಖನ ಬರುವ ಮುನ್ನವೇ ನಾನು ಈ ಪತ್ರಿಕೆಯ ವಿಶೇಷಾಂಕದ ಬಿಡುಗಡೆಯು ಪ್ರಜಾವಾಣಿಯೂ ಸೇರಿದಂತೆ ನಮ್ಮ ಎಲ್ಲ ಮಾಧ್ಯಮಗಳಲ್ಲಿ ಪಡೆದ ಅಭೂತಪೂರ್ವ ಪ್ರಚಾರ ಕಂಡು, ಅದನ್ನು ಪ್ರಶ್ನಿಸಿ, ಟೀಕಿಸಿ ಪ್ರಜಾವಾಣಿಗೆ ಪುಟ್ಟ ಪತ್ರವೊಂದನ್ನು ಬರೆದಿದ್ದೆ. ಆದರೆ ಆ ಪತ್ರಿಕೆ ತನ್ನ ನಿಲುವನ್ನು ಪ್ರಶ್ನಿಸಿದ, ಟೀಕಿಸಿದ ಏನನ್ನೂ ಪ್ರಕಟಿಸದ ತನ್ನ ಎಂದಿನ ನೀತಿಗನುಗುಣವಾಗಿ ಪ್ರಕಟಿಸಲಿಲ್ಲ.(ಈ ಪತ್ರ ಇತ್ತೀಚಿನ ನನ್ನ ಇಲ್ಲಿ ಯಾರೂ ಅಮುಖ್ಯರಲ್ಲ ಪುಸ್ತಕದಲ್ಲಿ ಪ್ರಕಟವಾಗಿದೆ.)

ಹಾಗೆ ನೋಡಿದರೆ ನಾನು ದೇಶಕಾಲ ಪತ್ರಿಕೆ ಆರಂಭವಾದಾಗಿನಿಂದಲೂ ಅದರ ಚಂದಾದಾರನಾಗಿದ್ದವನು. ಅಷ್ಟೇ ಅಲ್ಲ, ಕೆ.ವಿ. ಅಕ್ಷರ ಅವರ ಕೋರಿಕೆಯ ಮೇರೆಗೆ ಒಂದು ಸಂಚಿಕೆಯ ಸಮಯ ಪರೀಕ್ಷೆ ವಿಭಾಗಕ್ಕಾಗಿ ಟೆಲಿವಿಷನ್ ಬಗ್ಗೆ ಒಂದು ಪುಟ್ಟ ಲೇಖನವನ್ನೂ ಬರೆದವನು. ಹಾಗೇ, ಈ ಪತ್ರಿಕೆಯ ಪುಸ್ತಕ ವಿಮರ್ಶೆ ವಿಭಾಗದ ಹೊಣೆ ಹೊತ್ತಿದ್ದ ಜಿ. ರಾಜಶೇಖರರು ಪತ್ರಿಕೆಗಾಗಿ ಪುಸ್ತಕ ವಿಮರ್ಶೆ ಮಾಡಲು ಕೋರಿದಾಗ, ಇವರು ಆಯ್ದು ಕೊಟ್ಟ ಪುಸ್ತಕಗಳನ್ನಷ್ಟೇ ವಿಮರ್ಶೆ ಮಾಡಬೇಕಾಗಿದ್ದುದರಿಂದ ಅದು ಒಪ್ಪಿಗೆಯಾಗದೆ ನಿರಾಕರಿಸಿದವನು. ಆದರೆ ಅದರ ಆರನೇ ಸಂಪುಟಕ್ಕೆ ಹಾಗೂ ವಿಶೇಷಾಂಕಕ್ಕೆ ಸಕಾಲದಲ್ಲಿ ಚಂದಾ ಕಳಿಸಲು ಮರೆತು ಚಂದಾದಾರತ್ವವನ್ನು ಕಳೆದುಕೊಂಡವನು! (ಹಾಗೆಂದು ನೆನಪು.) ಮಿತ್ರರನೇಕರು ವಿಶೇಷ ಸಂಚಿಕೆಯಲ್ಲಿನ ವಿಶೇಷಗಳ ಬಗ್ಗೆ ಮಾತನಾಡಲು ತೊಡಗಿದಾಗ, ನನಗೇಕೆ ಆರನೇ ಸಂಪುಟದ ಮೊದಲ ಸಂಚಿಕೆಯಾಗಲೀ, ವಿಶೇಷ ಸಂಚಿಕೆಯಾಗಲೀ ಬಂದಿಲ್ಲ ಎಂದು ಯೋಚಿಸಿದಾಗಲೇ ನನ್ನಿಂದಾಗಿದ್ದ ಪ್ರಮಾದ ಗೊತ್ತಾದದ್ದು! ಕನ್ನಡ ಸಾಹಿತ್ಯ ಪತ್ರಿಕೆಗಳ ಇತಿಹಾಸದಲ್ಲೇ ಬಹುಶಃ ಇಷ್ಟು ಕಟ್ಟುನಿಟ್ಟಾದ ಸದಸ್ಯತ್ವ ಕಾರ್ಯಕ್ರಮ ಎಂದೂ ನಡೆದಿರಲಾರದು! ಬಹುಶಃ ಇದು ಈ ಪತ್ರಿಕೆಯ ದೊಡ್ಡಸ್ಥಿಕೆಗಳಲ್ಲಿ ಒಂದಾಗಿರಬಹುದು! ನಾನೂ ನನ್ನ ಕೆಲವು ಗೆಳೆಯರೊಂದಿಗೆ ಹತ್ತು-ಹದಿನೈದು ವರ್ಷಗಳ ಕಾಲ (ಸಾಹಿತ್ಯ) ಸಂವಾದ ಎಂಬ ಒಂದು ಸಾಹಿತ್ಯ ಪತ್ರಿಕೆ ನಡೆಸಿದವನಾಗಿ, ಕನ್ನಡ ಸಾಹಿತ್ಯ ಪತ್ರಿಕೆಯೊಂದು ಇಂತಹ ದೊಡ್ಡಸ್ಥಿಕೆ ಸಂಪಾದಿಸಿರುವುದು ನನಗೆ ಹೆಮ್ಮೆಯ ಸಂಗತಿಯೇ ಎನಿಸಿ ಸುಮ್ಮನಾದೆ.

ಆದರೆ ಆರನೇ ಸಂಪುಟದ ಮೊದಲ ಸಂಚಿಕೆಯ ಬಗೆಗೆ ನನಗೆ ಕೂತೂಹಲವಿರಲಿಲ್ಲವಾದರೂ, ವಿಶೇಷ ಸಂಚಿಕೆ ಕುರಿತು, ಅದರ ಬಗ್ಗೆ ಈ ಹಿಂದಿನ ಸಂಚಿಕೆಯಲ್ಲಿ ನೀಡಿದ್ದ ಮಾಹಿತಿಯಿಂದಾಗಿ ಕುತೂಹಲವಿತ್ತು. ಆರನೇ ಸಂಪುಟದ ಬಗ್ಗೆ ಕುತೂಹಲವಿಲ್ಲದಿರಲು ಕಾರಣ, ಅದರ ಐದು ವರ್ಷಗಳ ಯಾವೊಂದು ಸಂಚಿಕೆಯೂ ನನ್ನಲ್ಲಿ ಅಂತಹ ವಿಶೇಷ ಕುತೂಹಲವನ್ನೇನೂ ಹುಟ್ಟಿಸದ್ದಿದುದು. ಒಳ್ಳೆಯ ಕಾಗದ, ಕನ್ನಡ ಸಾಹಿತ್ಯ ಪತ್ರಿಕೆಗಳಿಗೆ ನವೀನವೆನ್ನಿಸುವ ರಕ್ಷಾಪುಟ, ಪುಟ ವಿನ್ಯಾಸ, ರೇಖಾ ಚಿತ್ರಗಳು ಮತ್ತು ಅತ್ಯುತ್ತಮ ಮುದ್ರಣಗಳೊಂದಿಗೆ ಸಾಮಾನ್ಯ ಸಾಮಗ್ರಿಯನ್ನು ಅಸಾಮಾನ್ಯವೆಂಬಂತೆ ಪ್ರಸ್ತುತಗೊಳಿಸುವ ಹೊಸ ಕಾಲದ ವಾಣಿಜ್ಯ ಲೋಕದ ಪ್ಯಾಕೇಜ್ ತಂತ್ರ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅದರ ಕರಾರುವಕ್ಕಾದ ಕ್ಲುಪ್ತತೆ ಮಾತ್ರ ಈ ಪತ್ರಿಕೆಯ ಹೆಚ್ಚುಗಾರಿಕೆಯಾಗಿ ನನಗೆ ಕಂಡಿತ್ತು.

ನಾವು ತರುತ್ತಿದ್ದ (ಸಾಹಿತ್ಯ) ಸಂವಾದ, ನ್ಯೂಸ್ ಪ್ರಿಂಟ್ ಕಾಗದದಲ್ಲಿ; ಮಲ್ಲಾಡಿಹಳ್ಳಿ, ಹೊಳಲ್ಕೆರೆ, ಹಾಸನ ಇತ್ಯಾದಿ ಸಣ್ಣಪುಟ್ಟ ಊರುಗಳ ಸಾಮಾನ್ಯ ಮುದ್ರಣಾಲಯಗಳಲ್ಲಿ ಅತಿ ಸಾಮಾನ್ಯ ರೀತಿಯಲ್ಲಿ ಮುದ್ರಣಗೊಳ್ಳುತ್ತಿದ್ದರೂ, ಅದರ ಸಂಚಿಕೆಗಳು ಈ ಪತ್ರಿಕೆಯ ಸಂಚಿಕೆಗಳಿಗಿಂತ ಹೆಚ್ಚು ಮೌಲಿಕವಾಗಿದ್ದುವೆಂದೇ ಈಗ ಕಾಲದೂರದಲ್ಲಿ ನಿಂತು ನೆನೆದಾಗಲೂ ನನಗೆ ಅನ್ನಿಸುತ್ತಿದೆ. ಹಾಗಾಗಿಯೇ ಅದರ ಚಂದಾದಾರರ ಸಂಖ್ಯೆ ಒಂದು ಕಾಲದಲ್ಲಿ ಒಂದು ಸಾವಿರದ ಹತ್ತಿರ ಹತ್ತಿರ ಮುಟ್ಟಿ, ನನಗೆ ತಿಳಿದಂತೆ ಸಣ್ಣ ಪತ್ರಿಕೆಗಳ ಇತಿಹಾಸದಲ್ಲಿ  ಒಂದು ದಾಖಲೆಯನ್ನೇ ಸ್ಥಾಪಿಸಿತ್ತು. ಆದರೆ ಇಂದು ಆ ಪತ್ರಿಕೆಯ ಸಾಮಾನ್ಯ ಸಂಚಿಕೆಗಳ ಬಗೆಗಿರಲಿ, ಅದು ಹೊರತಂದ ಅಂದಿನ ಬಹು ಮುಖ್ಯ ಲೇಖಕರ ಬಹು ಮುಖ್ಯ ಲೇಖನಗಳನ್ನೊಳಗೊಂಡ ಆಲನಹಳ್ಳಿ ಕೃಷ್ಣ, ಮಾಸ್ತಿ, ಸತ್ಯಜಿತ್ ರೇ, ಎ.ಕೆ.ರಾಮಾನುಜನ್, ಮಹಿಳಾ ಸಾಹಿತ್ಯ ಸ್ಪಂದನ ಮುಂತಾದ ವಿಶೇಷಾಂಕಗಳ ಬಗೆಗೂ ಯಾರೂ ಸಾಂದರ್ಭಿಕವಾಗಿ ಕೂಡಾ ಪ್ರಸ್ತಾಪ ಮಾಡುತ್ತಿಲ್ಲ! ಏಕೆಂದರೆ ಅದು ಯಾವುದೇ (ಸಾಹಿತ್ಯ ಅಥವಾ ಸಾಹಿತ್ಯೇತರ)ಸ್ಥಾಪಿತ ಹಿತಾಸಕ್ತಿಗಳ ದಾಕ್ಷಿಣ್ಯಕ್ಕೆ ಅಥವಾ ಮರ್ಜಿಗೆ ಸಿಗದಂತೆ ಎಚ್ಚರಿಕೆ ವಹಿಸಿ ತನ್ನ ಪಾಡಿಗೆ ತನ್ನ ದಾರಿ ಸವೆಸಿತು. ಆ ದಾರಿ ಬಿಟ್ಟೊಡನೆ ಅದು ಸ್ಥಗಿತಗೊಂಡಿತು ಎಂಬುದು ಬೇರೆ ವಿಚಾರ.

 ಆದರೆ ಇಂದು ದೇಶಕಾಲವನ್ನು ಕೆಲವರು ಅಡಿಗರ ಸಾಕ್ಷಿಗೆ ಹೋಲಿಸಿಕೊಂಡು, ಸಾಹಿತ್ಯೇತರ ಕಲ್ಮಶಗಳಿಂದ ಮಲಿನಗೊಂಡಿರುವ ಇಂದಿನ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಶ್ರೇಷ್ಠ ಸಾಹಿತ್ಯದ ದಿನಗಳು ಮರಳಿ ಬರಲು ಬೇಕಾದ ಬಾಗಿಲನ್ನು ತೆರೆಯಲಾಗಿದೆ ಎಂದು ಸಂಭ್ರಮಪಡುತ್ತಿದ್ದರೆ; ಇನ್ನು ಕೆಲವರು ಇದನ್ನು ಈಗ ಇದ್ದಕ್ಕಿದ್ದಂತೆ ಕೆಲವರಿಂದ ಆರಂಭವಾಗಿರುವ ಅಡಿಗ ಪುನರುತ್ಥಾನ ಕಾರ್ಯಕ್ರಮದ ಭಾಗವಾಗಿ ನೋಡುತ್ತಾ, ಶ್ರೇಷ್ಠ ಸಾಹಿತ್ಯ ಕಲ್ಪನೆಯ ಪುನರಾಗಮನವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ! ಇದು ನಮ್ಮ ಇಂದಿನ ಸಾಹಿತ್ಯ ಜಗತ್ತು ಕೇವಲ ತತ್ಕಾಲೀನ ಸಾಹಿತ್ಯ ರಾಜಕಾರಣದ ಹುದಲಿನಲ್ಲಿ ಸಿಕ್ಕಿಕೊಂಡು ತನ್ನ ಇತ್ತೀಚಿನ ಪರಂಪರೆಯ ಬಗೆಗೇ ಹೇಗೆ ಕಿವಿಗೆ ಬಿದ್ದ ಬರೀ ಅರ್ಧ ಸತ್ಯದ ಮಾತುಗಳ ಆಧಾರದ ಮೇಲೇ ಚರ್ಚೆಗಳನ್ನು ಕಟ್ಟಿಕೊಂಡು ದೊಡ್ಡ ದೊಡ್ಡ ತೀರ್ಮಾನಗಳಿಗೆ ಬರುವಂತಹ ದುಃಸ್ಥಿತಿಗೆ ಈಡಾಗಿದೆ ಎಂಬುದನ್ನು ಸೂಚಿಸುತ್ತದೆ. ಏಕೆಂದರೆ, ಇವರಿಬ್ಬರಿಗೂ, ಸಾಕ್ಷಿ ಏನಾಗಿತ್ತು ಹಾಗೂ ಇದನ್ನು ದೇಶಕಾಲದೊಂದಿಗೆ ಏಕೆ ಹೋಲಿಸಲಾಗದು ಮತ್ತು ಜಾಗೃತ ಸಾಹಿತ್ಯ ಸಮ್ಮೇಳನದ ಸಂದರ್ಭ ಎಂತಹುದು ಹಾಗೂ ಅಲ್ಲಿ ಶ್ರೇಷ್ಠ ಸಾಹಿತ್ಯದ ಕಲ್ಪನೆ ಮತ್ತು ಚರ್ಚೆ ಏಕೆ ಮತ್ತು ಹೇಗೆ ಮೂಡಿಬಂತು ಎಂಬುದರ ಪರಿವೆಯೇ ಇದ್ದಂತಿಲ್ಲ.

ಸಾಕ್ಷಿ ಒಳ್ಳೆಯದಕ್ಕೋ ಕೆಟ್ಟದಕ್ಕೋ(ಇದು ಸರಳ ತೀರ್ಮಾನಗಳಿಗೆ ಸಿಗದ ಬೇರೆಯೇ ಚರ್ಚೆ) ಕನ್ನಡ ಸಾಹಿತ್ಯ ಕಂಡ ಒಂದು ದೊಡ್ಡ ಪಲ್ಲಟದ ದಿಕ್ಕು-ದೆಸೆ ಹಾಗೂ ತಲ್ಲಣಗಳನ್ನು ದಾಖಲಿಸುವ ತುರ್ತಿನಲ್ಲಿ ಹುಟ್ಟಿದ ಪತ್ರಿಕೆ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅದಕ್ಕೊಂದು ಸ್ಥಾನವಿದೆ. ಆದರೆ ದೇಶಕಾಲದ ಹಿಂದೆ, ಸಮಯ ಪರೀಕ್ಷೆಯಂತಹ ಅದರ ಕೆಲವು ಬೌದ್ಧಿಕ ವಯ್ಯಾರಗಳನ್ನು ಗಮನಿಸಿದಾಗ ಅದರದೇ ಆದ ಕೆಲವು ಸಾಹಿತ್ಯಿಕ-ಸಾಂಸ್ಕೃತಿಕ ಆತಂಕಗಳು ಗೋಚರವಾಗುವುವಾದರೂ, ಅಂತಹ ಯಾವುದೇ ಚಾರಿತ್ರಿಕ ತುರ್ತೂ ಇದ್ದಂತಿಲ್ಲ. ಅದು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ತನ್ನ ಸ್ಥಾನವನ್ನಿರಲಿ, ಅಸ್ತಿತ್ವವನ್ನೇ ಇನ್ನೂ ಸ್ಥಾಪಿಸಿಕೊಂಡಂತಿಲ್ಲ. ಹೀಗಿರುವಾಗ ಈ ಪತ್ರಿಕೆಯ ಸುತ್ತ ಇಷ್ಟು ದೊಡ್ಡದಾಗಿ, ದೊಡ್ಡ ದನಿಯಲ್ಲಿ ನಡೆದಿರುವ ಚರ್ಚೆ ಕನ್ನಡ ಸಾಹಿತ್ಯ ಜಗತ್ತಿನ ಚರ್ಚೆಗಳನ್ನು ಇಂದು ಈ ಜಗತ್ತಿನ ಹೊರಗಿನ ಶಕ್ತಿಗಳೇ ನಿಯಂತ್ರಿಸುತ್ತಿರುವ ದುರಂತವನ್ನು ಸೂಚಿಸುತ್ತದೆ ಎಂದು ಭಾವಿಸಿರುವೆ.

ಈ ಕಾರಣದಿಂದಾಗಿಯೇ, ಗೋಪಾಲಕೃಷ್ಣ ಅಡಿಗರು ಪ್ರತಿಪಾದಿಸಿದ್ದ ಶ್ರೇಷ್ಠ ಸಾಹಿತ್ಯದ(ಇದು, ಅದರ ಉದ್ದೇಶಿತ ಅರ್ಥದ ಸಮರ್ಪಕ ವರ್ಣನೆಯಲ್ಲವಾದರೂ!) ಕಲ್ಪನೆಯ ಐತಿಹಾಸಿಕತೆಯ ಬಗ್ಗೆ ಇಲ್ಲಿ ಒಂದಿಷ್ಟು ವಿಸ್ತಾರವಾಗಿಯೇ ಬರೆಯಬೇಕಾಗಿದೆ. ಇದು ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶಿವರಾಮ ಕಾರಂತರು ಕೇಳಿದ ಮಸಾಲೆ ದೋಸೆ ಪ್ರಶ್ನೆಯಂತೆಯೇ ಉದ್ದೇಶಪೂರ್ವಕ ಅಪವ್ಯಾಖ್ಯಾನಕ್ಕೆಳಗಾಗಿದೆ. ಆ ಮೂಲಕ ಅನೇಕ ಗೊಂದಲಗಳನ್ನೂ, ಅನಗತ್ಯ ಆತಂಕಗಳನ್ನು ಸೃಷ್ಟಿಸುತ್ತಾ, ಸಾಹಿತ್ಯಿಕ-ಸಾಂಸ್ಕೃತಿಕ ಚರ್ಚೆಗಳನ್ನು ಮಂಜುನಾಥ್ ಲತಾ-ಐಜೂರರ ಬರಹದಂತೆ ಸಲ್ಲದ ವಲಯಗಳಿಗೆ, ಹೋಲಿಕೆಗಳಿಗೆ, ಉದಾಹರಣೆಗಳಿಗೆ, ಭಾಷೆಗೆ ಎಳೆದೊಯ್ಯುವ ಪ್ರಯತ್ನಗಳಿಗೆ ದಾರಿ ಮಾಡಿಕೊಟ್ಟಿದೆ.

ಸಾಹಿತ್ಯ, ಅದೆಷ್ಟೇ ಸಾಮಾಜಿಕ-ರಾಜಕೀಯ ಸತ್ವವನ್ನು ಗಳಿಸಿಕೊಂಡರೂ, ಅದು ತನ್ನ ಮೂಲ ಲಕ್ಷಣಗಳನ್ನು ಕಳೆದುಕೊಳ್ಳದೆ ಸಾಹಿತ್ಯವಾಗಿ ಉಳಿಯಬೇಕು. ಅಂದರೆ ಅದು ಮನುಷ್ಯನನ್ನು ಒಳಗಿಂದ ಅಲ್ಲಾಡಿಸಬೇಕು. ಹೊರಗಿಂದ ಅಲ್ಲ. ಅದು ಹೊರಗಿಂದ ಅಲ್ಲಾಡಿಸ ಹೊರಟಷ್ಟೂ ಅದು ತನ್ನ ಸತ್ವವನ್ನು ಕಳೆದುಕೊಂಡು ಸಾಹಿತ್ಯವಾಗಿ ತನ್ನ ವಿಶ್ವಾಸಾರ್ಹತೆಯನ್ನೂ ಕಳೆದುಕೊಳ್ಳುತ್ತದೆ. ಇದು ನಮ್ಮ ಸಾಹಿತ್ಯ ಪರಂಪರೆಗೇ ಮಾಡುವ ಅನ್ಯಾಯ. ಅತ್ತ ನವ್ಯದ ಅತಿ ವಿಶಿಷ್ಟ ಸಾಹಿತ್ಯ ಮೀಮಾಂಸೆಯ ಮಡಿವಂತಿಕೆಯ ಕಾಟದಿಂದಾಗಿಯೂ, ಇತ್ತ ಅದರ ಸಾಂಸ್ಕೃತಿಕ ರಾಜಕಾರಣ ವಿರುದ್ಧ ಸೆಟೆದೆದ್ದ ಅಖಿಲ ಕರ್ನಾಟಕ ಲೇಖಕರ ಮತ್ತು ಕಲಾವಿದರ ಒಕ್ಕೂಟವು೧ ಸಾಹಿತ್ಯ ಗುಣದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದ ನಿಲುವಿನಿಂದಾಗಿಯೂ, ಎಲ್ಲೂ ಸಲ್ಲದ ಕೆಲವು ಸಾಹಿತಿ ವೇಷಧಾರಿಗಳು ಬಂಡಾಯ ಸಾಹಿತ್ಯ ಸಂಘಟನೆಯ ಹೆಸರಿನಲ್ಲಿ ನಡೆಸಲಾರಂಭಿಸಿದ ರಾಜಕೀಯ ಪುಢಾರಿತನದ ಮುಖವಾಣಿಯಾಗ ಹೊರಟ ಆಧುನಿಕ ಕನ್ನಡ ಸಾಹಿತ್ಯ, ತನ್ನ ಈ ದುರ್ಬಲ ಘಟ್ಟದಲ್ಲ್ಲಿ ಎದುರಿಸಿದ್ದು ಇಂತಹ ಅಪಾಯವನ್ನೇ. ಈ ಸಂದರ್ಭದಲ್ಲೇ ಜನ ಮತ್ತು ಜೀವಗಳ ಮೇಲೆ ಗುತ್ತೇದಾರಿಕೆಯನ್ನು ಸಾರಿಕೊಂಡ ಕನ್ನಡ ಸಾಹಿತ್ಯದ ನವ (ಮಾಂಸಾಹಾರಿ!)ಪುರೋಹಿತರು, ಸಾಹಿತ್ಯದ ಜನಪರ, ಜೀವಪರ, ಜನವಿರೋಧಿ, ಜೀವವಿರೋಧಿ ಇತ್ಯಾದಿ ಸುಲಭ ವರ್ಗೀಕರಣವನ್ನು ಆರಂಭಿಸಿದ್ದು.

ಇದರಿಂದ ಆತಂಕಿತಗೊಂಡ ಸಹಜ ಸಾಹಿತಿಯಾದ ಲಂಕೇಶ್-ಇವರು ಬಂಡಾಯವನ್ನು ಡಂಬಾಯ ಎಂದು ವ್ಯಂಗ್ಯವಾಡುತ್ತಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು-ಈ ಪ್ರವೃತ್ತಿಯ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದೇ ಜಾಗೃತ ಸಾಹಿತ್ಯ ಸಮ್ಮೇಳನ. ಅವರು ಇದನ್ನು ಆಯೋಜಿಸಿದ್ದು, ತಮ್ಮ ಮೊದಲ ಅವತಾರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕರಾಗಿ ಅದಕ್ಕೆ ಖಡ್ಗ ದೀಕ್ಷೆ ನೀಡಿದ ಡಿ.ಆರ್.ನಾಗರಾಜರ ಸಂಚಾಲಕತ್ವದಲ್ಲಿ ಎಂಬುದನ್ನೂ ನಾವು ಗಮನಿಸಬೇಕು. ನಾಗರಾಜರು ತಮ್ಮ ಈ ಎರಡನೇ ಅವತಾರದಲ್ಲಿ ತಮ್ಮ ಮೊದಲ ಅವತಾರದಲ್ಲಿ ಮಾಡಿದ್ದ ಸಾಹಿತ್ಯ ಪಾಪವನ್ನು ತೊಳೆದುಕೊಳ್ಳಲು ಯತ್ನಿಸಿದರೂ, ಅವರು ಇಂದೂ ಕಾವ್ಯವನ್ನು ಖಡ್ಗ ಮಾಡುವ ಕಾವ್ಯ ಕಮ್ಮಾರಿಕೆಯಲ್ಲಿ ನಿರತರಾಗಿರುವ ಕೆಲವರ ಕಣ್ಮಣಿಯೂ ಆಗಿರುವುದಕ್ಕೆ, ಅವರ ಜಾತಿಮೂಲವಷ್ಟೇ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!

ಅದೇನೇ ಇರಲಿ, ಆ ಹೊತ್ತಿಗೆ ಅಡಿಗರು ತಮ್ಮ ಆವರೆಗಿನ ಪ್ರತಿಪಾದನೆಗಳಿಗೇ ಉಲ್ಟಾ ಹೊಡೆದಂತೆ(ಮರ್ಮಸ್ಥಾನಕ್ಕೇ ಬಿದ್ದ ಒಕ್ಕೂಟದವರ ಹೊಡೆತ ತಾಳಲಾರದೆ?) ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರಿಂದ(ಇದು ಆಗ ಕಸಾಪದ ಅಧ್ಯಕ್ಷರಾಗಿದ್ದ ಹಂಪನಾ ಮಾಡಿದ ಕ್ರಾಂತಿ!) ಆರಂಭವಾದಂತೆ ಸಾಕಷ್ಟು ಕಾಲ ತಮ್ಮ ವಿವಾದಾತ್ಮಕ ಸಾಂಸ್ಕೃತಿಕ ನಂಬಿಕೆಗಳು ಮತ್ತು ರಾಜಕೀಯ ನಿಲುವುಗಳಿಂದಾಗಿ ಸರ್ವ ದಿಕ್ಕುಗಳಿಂದಲೂ ಟೀಕೆ-ದೂಷಣೆಗಳನ್ನೇ ಎದುರಿಸಿ ಹಣ್ಣಾಗಿದ್ದರೂ, ಅವರು ಈ ಸಮ್ಮೇಳನದಲ್ಲ್ಲ್ಲಿ ಸಾಹಿತ್ಯದ ಸ್ವಾಯತ್ತತೆ ಕುರಿತಂತೆ, ಅದನ್ನು ತಮ್ಮ ಜೀವನ್ಮರಣದ ಪ್ರಶ್ನೆ ಎಂಬಂತೆ ಪರಿಗಣಿಸುವುದಾಗಿ ಹೇಳುತ್ತಾ ಆಡಿದ ಕೆಲವು ದಿಟ್ಟ ಮಾತುಗಳು ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ದಾಖಲರ್ಹವಾದವು. ಅವು, ಕನ್ನಡ ಸಾಹಿತ್ಯದ ಮೇಲೆ ಪಂಪ, ಅಲ್ಲಮ, ಹರಿಹರ, ಕುಮಾರವ್ಯಾಸ, ಬೇಂದ್ರೆ, ಕುವೆಂಪು ಅವರಿಗಿಂತ, ಹಾವನೂರು ಆಯೋಗದ ಪ್ರಭಾವವೇ ಹೆಚ್ಚಾಗಿ ಅದು ತನ್ನ ಮೂಲ ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸಿದ್ದಾಗ ಆಡಿದ ಮಾತುಗಳು;ಅದೂ, ತನ್ನನ್ನು ಒಬ್ಬ ಬ್ರಾಹ್ಮಣ ಎಂದು ಸಾಂಸ್ಕೃತಿಕವಾಗಿಯಾದರೂ ಗುರುತಿಸಿಕೊಳ್ಳುತ್ತಿದ್ದ ಲೇಖಕನೊಬ್ಬ ಅಂದಿನ ಕೂಗುಮಾರಿ ಸಾಹಿತ್ಯ ವಾತಾವರಣದ ಮಧ್ಯೆ ಎಂಬ ಕಾರಣಕ್ಕೂ; ಅವುಗಳ ದಿಟ್ಟತನ ಐತಿಹಾಸಿಕವಾಗಿ ಗಮನಾರ್ಹವೆನಿಸುತ್ತದೆ.

 ಆದರೆ ಕೆ.ವಿ.ಸುಬ್ಬಣ್ಣನವರು ತಾವು ಆಗಾಗ್ಗೆ ಪ್ರದರ್ಶಿಸುವ ತಮ್ಮ ಬೌದ್ಧಿಕ ವಿಭಿನ್ನತೆಯನ್ನು ಸಾರುವ ಐಲುತನದ ಭಾಗವಾಗಿ(ಇಂತಹ ಐಲುತನದಿಂದಾಗಿಯೇ ಅವರು, ಕನ್ನಡ ರಂಗಭೂಮಿ ಇತಿಹಾಸದಲ್ಲೇ ಒಂದು ಅಪೂರ್ವ ಪ್ರಯೋಗವೆನಿಸಬಹುದಾಗಿದ್ದ ಸದಾರಮೆಯಂತಹ ಸಹಜ ಕಂಪನಿ ನಾಟಕವನ್ನು ಬಿ.ವಿ.ಕಾರಂತರಂತಹವರ ಕೈಗೆ ಕೊಟ್ಟೂ, ಅದು ಮಕಾಡೆ ಮಲಗುವಂತೆ ಮಾಡಿದ್ದು ನನಗೆ ನೆನಪಿದೆ.) ಅಂದಿನ ಕಾಲಕ್ಕೆ ತಕ್ಕ ರಾಜಕೀಯ ಸರಿತನದ ಭಾಷಣ ಮಾಡುವ ಪ್ರಯತ್ನ ಮಾಡಿ, ಶ್ರೇಷ್ಠ ಸಾಹಿತ್ಯ ಕಲ್ಪನೆ ಕುರಿತ ಚರ್ಚೆಯನ್ನೇ ದಾರಿ ತಪ್ಪಿಸಿದರು. ಬಹುಶಃ ತಾವು ನೀನಾಸಂ ಮೂಲಕ ತಮ್ಮದೇ ರೀತಿಯಲ್ಲಿ ತೊಡಗಿದ್ದ ಸಾಹಿತ್ಯ-ಸಂಸ್ಕೃತಿ ಶ್ರೇಷ್ಠತೆಯ ಆಂದೋಲನದ ಬಗೆಗಿನ ಅಪರಾಧ ಭಾವದಿಂದ ಹೊರಬರುವ ಸುಲಭ ಹೊರ ದಾರಿಯಾಗಿ ಅವರು ಈ ಸರಳ ಸಮಾಜಮುಖಿ ನಿಲುವನ್ನು ತಾಳಿರಬಹುದು. ಸುಬ್ಬಣ್ಣ ಆಗಾಗ್ಗೆ ತಮ್ಮನ್ನು ತಾವು ಸಮಾಜವಾದಿ ಎಂದು ಗುರುತಿಸಿಕೊಳ್ಳುತ್ತಿದ್ದವರು ತಾನೇ! ಅವರು ಈ ಭಾಷಣದಲ್ಲಿ ಶ್ರೇಷ್ಠ ಸಾಹಿತ್ಯದ ಕಲ್ಪನೆ ಹುಟ್ಟಿಸುವ ಅಮಲಿನ ಬಗ್ಗೆ ಆಡಿದ ಕೆಲವು ಎಚ್ಚರಿಕೆಯ ಮಾತುಗಳು ಗಮನಾರ್ಹವಾದುವಾದರೂ, ಒಟ್ಟಾರೆ ಅದರ ಗಮನ ಬೌದ್ಧಿಕವಾಗಿಯೂ ರೋಚಕವೆನಿಸುವ ಸುಲಭ ಜನಪರತೆಯ ಕಡೆಗೇ ಇತ್ತು ಎಂಬುದನ್ನು ನಾವು ಗಮನಿಸಬೇಕು. ಶ್ರೇಷ್ಠತೆ ಸಾಹಿತ್ಯದ ಕಸುಬಿನಲ್ಲಿ ಸಹಜವಾಗಿ ಮೂಡಿಬರುವುದು ಅಪೇಕ್ಷಣೀಯ. ಆದರೆ ಶ್ರೇಷ್ಠತೆ ಸಾಧಿಸಬೇಕು ಎನ್ನುವುದು ವ್ಯಸನವಾಗುವುದು ಅವಶ್ಯಕವೋ? ಎಂಬ ಅವರ ಗೊಂದಲಕಾರಿಯಾದ ಪ್ರಶ್ನೆ ಯಾರನ್ನು ಉದ್ದೇಶಿದ್ದು ಮತ್ತು ಏಕೆ ಎಂದು ಅರ್ಥವಾಗುವುದಿಲ್ಲ!

ಇದರಿಂದಾಗಿ, ಯಾರೂ ಲಂಕೇಶ್ ಮತ್ತು ಡಿ.ಆರ್. ನಾಗರಾಜರ ಉದ್ದೇಶಗಳ ಬಗ್ಗೆಯಾಗಲೀ ಅಡಿಗರ ಮಾತುಗಳ ಬಗ್ಗೆಯಾಗಲೀ ಚರ್ಚಿಸದೆ, ಸುಬ್ಬಣ್ಣನವರ ಭಾಷಣದ ಶೀರ್ಷಿಕೆಯಿಂದಲೇ ಮತ್ತೇರಿಸಿಕೊಂಡು ಈಗಲೂ ಜನಪರ ಸಾಹಿತ್ಯದ ಜೈಕಾರ ಕೂಗುತ್ತಲೇ ಇದ್ದಾರೆ. ಈ ಮತ್ತಿನಲ್ಲಿ, ಅಡಿಗರ ವಿರುದ್ಧ ಕಟುಮಾತುಗಳನ್ನಾಡಿ ದೂರವಾದ ಮೇಲೆ; ಅವರ ಮತ್ತು ಅವರ ಶಿಷ್ಯರ ವಿರುದ್ಧ ತಾವೇ ಟಂಕಿಸಿದ ಬ್ರೇಮಿನ್ ಗುಣವಾಚಕವನ್ನು ರೋಚಕ ಪರಿಣಾಮದೊಂದಿಗೆ ಚಲಾಯಿಸುತ್ತ್ತಾ ದೊಡ್ಡ ಪ್ರಚಾರಾಂದೋಲನವನ್ನೇ ನಡೆಸಿದ್ದ ಲಂಕೇಶ್‌ಗೆ, ಈ ಸಮ್ಮೇಳನಕ್ಕೆ ಅಡಿಗರನ್ನೇ ಕರೆಸುವ ಅನಿವಾರ್ಯತೆ ಏಕುಂಟಾಯಿತು ಎಂಬ ಬಗ್ಗೆಯೂ ಯಾರೂ ಯೋಚಿಸಿದಂತಿಲ್ಲ. ಹಾಗೇ ಅಡಿಗರು ಈ ಭಾಷಣ ಮಾಡುವ ಹೊತ್ತಿಗೆ ಎಷ್ಟು ದಾರಿ ಸವೆಸಿ, ಏನಾಗಿದ್ದರು ಎಂಬುದರ ಬಗ್ಗೆಯೂ ಯಾರೂ ಅಷ್ಟಾಗಿ ತಲೆ ಕಡೆಸಿಕೊಂಡಂತಿಲ್ಲ. ಈ ಸಂಬಂಧ ನನ್ನ ಒಂದು ಅನುಭವವನ್ನು ಇಲ್ಲಿ ದಾಖಲಿಸಿದರೆ ತಪ್ಪಾಗಲಾರದು.

 ಅಡಿಗರ ಕಾವ್ಯವನ್ನು(ಅದು ನನಗೆ ಅಷ್ಟೇನೂ ಪರಿಚಯವಿಲ್ಲದ ವೈದಿಕ ಸಂಪ್ರದಾಯದ ಕಲ್ಪನೆಗಳು ಮತ್ತು ಪರಿಭಾಷೆಯ ನುಡಿಗಟ್ಟುಗಳಿಂದಾಗಿ ಸರಿಯಾಗಿ ಸಂವಹನವಾಗುತ್ತಿಲ್ಲ ಎಂಬ ಕಾರಣಕ್ಕೆ) ಅಷ್ಟಾಗಿ ಇಷ್ಟಪಡದಿದ್ದ ನಾನು ಅವರನ್ನು ಅವರ ಕೊನೆಯ ದಿನಗಳಲ್ಲೊಮ್ಮೆ(ಆಲನಹಳ್ಳಿ ಕೃಷ್ಣನ ಸಾವಿನ ಸಂದರ್ಭದಲ್ಲಿ ಆಕಾಶವಾಣಿಗಾಗಿ ನಾನು ರೂಪಿಸಿದ ಕಾರ್ಯಕ್ರಮವೊಂದಕ್ಕಾಗಿ ಅವರಿಂದ ಕೆಲವು ನೆನಪಿನ ಮಾತುಗಳನ್ನು ಧ್ವನಿಮುದ್ರಿಸಿಕೊಳ್ಳಲು) ಅವರ ಮನೆಯಲ್ಲೊಮ್ಮೆ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಹೀಗೇ ಸಣ್ಣದಾಗಿ ಸಾಹಿತ್ಯ ಚರ್ಚೆ ಆರಂಭವಾಗಿ, ನಾನು ಮಾತುಗಳ ಮಧ್ಯೆ ನಿಮ್ಮ ಇತ್ತೀಚಿನ ಕವನಗಳು ನನಗೆ ತುಂಬಾ ಇಷ್ಟವಾಗುತ್ತವೆ ಎಂದೆ. ನಾನು ಅವರ ಚಿಂತಾಮಣಿಯಲ್ಲಿ ಕಂಡ ಮುಖದ ಕೆಲವು ಪದ್ಯಗಳನ್ನು ಉಲ್ಲೇಖಿಸಿದೆ. ತಕ್ಷಣ ಅವರ ಮುಖದಲ್ಲಿ ಕಿರುನಗೆ ಪುಟಿದೆದ್ದು, ಯಾಕೇಂದ್ರೆ ಅವುಗಳಲ್ಲಿ ನವ್ಯದ ವಾಸನೆ ಕಡಿಮೆಯಾಗಿದೆ ಕಣಯ್ಯ! ಎಂದು ನನ್ನನ್ನು ದಂಗು ಬಡಿಸಿದರು.(ಇದನ್ನು ನಾನು ಸಾಹಿತ್ಯ ಸಂವಾದಕ್ಕಾಗಿ ಮಾಡಿದ  ಅವರ ಸುವರ್ಣ ಪುತ್ಥಳಿ ಕವನ ಸಂಕಲನದ ವಿಮರ್ಶೆಯಲ್ಲೂ ಉಲ್ಲೇಖಿಸಿದ್ದೇನೆ)೨ ನನ್ನ ಪ್ರಕಾರ ಆ ಹೊತ್ತಿಗೆ ಅಡಿಗರಿಗೇ ನವ್ಯದ ಮತ್ತು ಅದರ ಹೆಸರಿನಲ್ಲಿ ನಡೆದ ಚಳುವಳಿಯ ಮಿತಿಗಳು, ಅನಾಹುತಗಳು ಗೊತ್ತಾಗಿದ್ದವು.

ಅಡಿಗರೊಂದಿಗೆ ಅಂದು ಮಾತಾಡಿದ ನನಗೆ ಅನ್ನಿಸಿದ ಇನ್ನೊಂದು ಅಂಶವೆಂದರೆ, ಅವರು ಜನಸಂಘ ಮತ್ತು ಆನಂತರ ಭಾಜಪದ ಅಭ್ಯರ್ಥಿಯಾಗಿ ಚುನಾವಣೆಗಳಲ್ಲಿ ಭಾಗವಹಿಸಿದ್ದರ ಹಿಂದೆ ಹೆಚ್ಚು ಕಾಂಗ್ರೆಸ್ ವಿರೋಧಿ ಧೋರಣೆ ಇರಬಹುದೇ ಹೊರತು(ಅವರು ಆರಂಭದಲ್ಲಿ ಲೋಹಿಯಾ ಅಭಿಮಾನಿಯಾಗಿದ್ದರು ಎಂಬುದನ್ನು ಗಮನಿಸಬೇಕು.), ಹಿಂದುತ್ವವಲ್ಲ ಎಂಬುದು.೩ ಅವರ ಕಾಂಗ್ರೆಸ್ ವಿರೋಧಿ ಧೋರಣೆ ಕಾಲಕ್ರಮದಲ್ಲಿ ವಿಮರ್ಶಾತ್ಮಕವಾಗದೆ ಕುರುಡಾಗಿ, ಅವರನ್ನು ಹಿಂದುತ್ವದ ಕಡೆಗೆ ತಳ್ಳಿರಬಹುದು. ಈ ಮಧ್ಯೆ ಅವರು ಬರೆದ ಮತ್ತೆ ಮೊಳಗಲಿ ಪಾಂಚಜನ್ಯ, ನಾನು ಹಿಂದೂ, ನಾನು ಬ್ರಾಹ್ಮಣದಂತಹ ಅಗ್ಗದ ಪದ್ಯಗಳು, ಅವರು ಆಂತರ್ಯದಲ್ಲಿ ಎದುರಿಸುತ್ತಿದ್ದ ಈ ರಾಜಕೀಯ ಆಯ್ಕೆಯ ಬಿಕ್ಕಟ್ಟಿನಿಂದ(ನವ್ಯ ಕಾವ್ಯ ಕುರಿತ ನನ್ನ ಸೀಮಿತ ತಿಳುವಳಿಕೆ ಪ್ರಕಾರ, ಅವರ ಶಿಖರ ಕಾಲದ ಮುಖ್ಯ ರಚನೆಗಳು ಎಂದು ಹೇಳಲಾಗುವ ಸರಿ ಸುಮಾರು ಎಲ್ಲ ಕವನಗಳಲ್ಲೂ ಇದು ಕಾಣುವಂತಿದ್ದು, ಇದೇ ಅವುಗಳ ಶಿಲ್ಪ ಸೌಂದರ್ಯಕ್ಕೂ, ಅನುಮಾನಾಸ್ಪದ ತಾತ್ವಿಕತೆಗೂ ಕಾರಣವಾಗಿರುವಂತಿದೆ.) ಪಾರಾಗಲು ಆರಿಸಿಕೊಂಡ ಸುಲಭ ಮಾರ್ಗದ ಫಲಗಳಾಗಿ ಮಾತ್ರ ನನಗೆ ಕಾಣುತ್ತವೆ.೩ ಆ ಮಟ್ಟಿಗೆ ಅಡಿಗರು ರಾಜಕೀಯ ವ್ಯಕ್ತಿತ್ವವಾಗಿ ದುರ್ಬಲರೆಂದೇ ಹೇಳಬೇಕು. ವ್ಯಕ್ತಿತ್ವದ ಈ ಬಿರುಕು ನವ್ಯದ ಹೆಗ್ಗುರುತಾಗಿದ್ದು, ಇದು ಲಂಕೇಶರನ್ನೂ ಸೇರಿದಂತೆ ಈ ಚಳುವಳಿಯ ಸಂಪರ್ಕಕ್ಕೆ ಬಂದ ಯಾರನ್ನೂ ಕಾಡದೇ ಬಿಟ್ಟಿಲ್ಲ ಎಂಬುದನ್ನು ನಾವು ಗಮನಿಸಬೇಕು. ಲಂಕೇಶರ ಸಾಹಿತ್ಯದಲ್ಲಿ ಮಾತ್ರವಲ್ಲ, ಪತ್ರಿಕೋದ್ಯಮದ ಬದುಕಿನಲ್ಲೂ ಇಂತಹ ಹಲವಾರು ಬಿರುಕು-ದೌರ್ಬಲ್ಯಗಳನ್ನು(ಆದರೆ ಇವು ಮಂಜುನಾಥ್ ಲತಾ-ಐಜೂರರಿಗೆ ಮಾತ್ರ ತಮ್ಮ ಬರಹದ ಧಾಟಿಯನ್ನು ಸಮರ್ಥಿಸಿಕೊಳ್ಳಲು ಆಧಾರವಾಗಿರುವುದು, ಇವೊತ್ತಿನ ಸಾಹಿತ್ಯ-ಸಾಂಸ್ಕೃತಿಕ ಚರ್ಚೆಗಳು ಹಿಡಿದಿರುವ ಅಡ್ಡದಾರಿಯನ್ನು ಸೂಚಿಸುತ್ತದಷ್ಟೆ!) ನಾವು ಗಮನಿಸಬಹುದು.೪ ಇದು ಲಂಕೇಶರಿಗೇನೂ ಗೊತ್ತಿರಲಿಲ್ಲವೆಂದಲ್ಲ. ಹಾಗೇ ಅಡಿಗರ ದೌರ್ಬಲ್ಯಗಳೂ, ಶಕ್ತಿಗಳೂ.

ಇದನ್ನೆಲ್ಲ ಇಲ್ಲಿ ಏಕೆ ಹೇಳಬೇಕಾಯಿತೆಂದರೆ, ಶ್ರೇಷ್ಠ ಸಾಹಿತ್ಯ ಎಂಬುದು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಂದು ಅಗತ್ಯವಾಗಿದ್ದ ಕಲ್ಪನೆಯಾಗಿತ್ತು ಮತ್ತು ಅದು ಕನ್ನಡ ಸಾಹಿತ್ಯದ ಏಳುಬೀಳುಗಳ ಮಧ್ಯೆ ನಮ್ಮ ಕಾಲದ ಇಬ್ಬರು ಗಂಭೀರ ಸಾಹಿತ್ಯ ಕುಶಲ ಕರ್ಮಿಗಳ ಸಾಕ್ಷ್ಯದಲ್ಲಿ ಕಮ್ಮಟಗೊಂಡು ಮೂಡಿದುದಾಗಿತ್ತು ಎಂಬುದನ್ನು ಸೂಚಿಸಲು. ಆದರೆ ಇಂದು ಅದನ್ನು ಹಾಗೆಯೇ-ಸಂದರ್ಭದಿಂದ ಕಿತ್ತು-ಎತ್ತಿಕೊಂಡು ಚರ್ಚಿಸ ಹೊರಟರೆ ದಾರಿ ತಪ್ಪುತ್ತೇವೆ. ದೇಶಕಾಲದ ಬಗ್ಗೆ ನಡೆದಿರುವ ಈ ಚರ್ಚೆಯ ಎರಡೂ ಬದಿಗಳ ಹಿಂದಿರುವ ಮುಖ್ಯ ತೊಂದರೆ ಇದೇ ಎನ್ನಿಸುತ್ತದೆ. ಏಕೆಂದರೆ, ಎರಡೂ ಕಡೆಯವರು ಅದನ್ನು ನೇರವಾಗಿ, ಸ್ಪಷ್ಟವಾಗಿ ಹೇಳಿಕೊಳ್ಳದಿದ್ದರೂ, ದೇಶಕಾಲವು ಶ್ರೇಷ್ಠ ಸಾಹಿತ್ಯದ ರಾಜಕಾರಣ ಮಾಡುತ್ತಾ ತನ್ನ ಪ್ರತಿಷ್ಠೆಯನ್ನು ಮೆರೆದಿದೆ ಎಂಬ ಆಕ್ರೋಶ ಮಂಜುನಾಥ್-ಐಜೂರು ಮತ್ತು ಅವರ ಬೆಂಬಲಿಗ ಗೆಳೆಯರ ಬರಹದ ಹಿಂದೆ ಕಂಡರೆ; ಕೆ. ಫಣಿರಾಜ್-ಜಿ. ರಾಜಶೇಖರ್‌ರ ಪ್ರತಿಕ್ರಿಯೆ ಅದೇ ಶ್ರೇಷ್ಠ ಸಾಹಿತ್ಯದ ಕಲ್ಪನೆಯನ್ನು, ಅದರ ತರ್ಕ ಮತ್ತು ಪರಿಭಾಷೆಯನ್ನು ನಂಬಿ, ಸಾಹಿತ್ಯ ಕುರಿತ ಎಲ್ಲ ಮಾತುಗಳೂ ವಿಮರ್ಶೆಯ ಭಾಷೆಯಲ್ಲಿರಬೇಕು ಎಂದು ನಿರೀಕ್ಷಿಸುತ್ತದೆ. ರಾಜಶೇಖರರ ಖಡಕ್ ವಾದವಂತೂ, ನವ್ಯದ ಗುಡಿಯ ಜೀರ್ಣೋದ್ಧಾರಕ್ಕಾಗಿ ಚಂದಾ ಎತ್ತಲು ಎಚ್ಚರಿಕೆ!ಯ ಕರಪತ್ರ ಬರೆದ ಹಾಗೆ ಪದೇ ಪದೇ ಅಡಿಗರ ಕಾವ್ಯ ಮತ್ತು ಮಾತುಗಳನ್ನು ಉಲ್ಲೇಖಿಸುತ್ತಾ ತನ್ನ ವಾದವನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಈ ಚರ್ಚೆಯಲ್ಲಿ ಎರಡೂ ಕಡೆ ಪದೇ ಪದೇ ಅಡಿಗ-ಲಂಕೇಶ-ಸುಬ್ಬಣ್ಣರ ಕಾಲದ ಶ್ರೇಷ್ಠ ಸಾಹಿತ್ಯ ಕಲ್ಪನೆ ಕುರಿತ ಮೌಲಿಕ ಚರ್ಚೆಗಳ ಉಲ್ಲೇಖಗಳು ಬರುತ್ತದೆ.

ಇದು ನನ್ನ ಪ್ರಕಾರ ಅಸಂಗತ ಪ್ರಲಾಪ. ಏಕೆಂದರೆ ಇಂದು ಸಂದರ್ಭ ಬದಲಾಗಿದೆ. ಶ್ರೇಷ್ಠ ಸಾಹಿತ್ಯದ ಚರ್ಚೆಯನ್ನು ಮುನ್ನೆಲೆಗೆ ತಂದ ಬಂಡಾಯ ಮೊಂಡಾಗಿ, ವೈವಿಧ್ಯಮಯ ಹಿನ್ನೆಲೆಗಳುಳ್ಳ ಹೊಸ ತಲೆಮಾರಿನ ಅನೇಕ ಲೇಖಕ-ಲೇಖಕಿಯರು ಯಾರ ಮತ್ತು ಯಾವ ಮರ್ಜಿಗೂ ಸಿಗದೆ ವೈವಿಧ್ಯಮಯ ಬಣ್ಣ ಬೆಡಗುಗಳೊಂದಿಗೆ ತಮ್ಮಷ್ಟಕ್ಕೆ ತಾವು ಬರೆಯುತ್ತಾ, ವಿಮರ್ಶೆಯ ಹೊಸ ಪರಿಭಾಷೆಯನ್ನೇ ಒತ್ತಾಯಿಸುವಷ್ಟು ಸಾಹಿತ್ಯ ಸಂದರ್ಭ ಚಲನಶೀಲವಾಗಿದೆ.೫ ನನಗಂತೂ ಇದು ತೇಜಸ್ವಿ ತಮ್ಮ ಅಬಚೂರಿನ ಪೋಸ್ಟಾಫೀಸು ಕಥಾ ಸಂಗ್ರಹಕ್ಕೆ ಹೊಸ ದಿಗಂತೆಡೆಗೆ ಶೀರ್ಷಿಕೆಯಲ್ಲಿ ಬರೆದಿದ್ದ ಮುನ್ನುಡಿಯ ಮಾತುಗಳ ವಿಸ್ತರಣೆಯಾಗಿ ಮಾಯಾಲೋಕ-೧ರ ಲೇಖಕರ ಮಾತುಗಳಲ್ಲ್ಲಿ ಸೂಚಿಸಿದ ಹೊಸ ಕಾಲದ ಹೊಸ ನುಡಿಗಟ್ಟುಗಳ, ಉಕ್ತಿಭಂಗಿಗಳ ಹಾಗೂ ಅಭಿವ್ಯಕ್ತಿ ವಿಧಾನಗಳ ಅನ್ವೇಷಣೆಯ ತಹತಹದಂತೆಯೇ ಕಾಣುತ್ತದೆ. ಏಕೆಂದರೆ ನನಗೆ ತಿಳಿದಂತೆ ಕಳೆದ ಇಪ್ಪತ್ತೈದು-ಮುವ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯವನ್ನು ಜಾತಿ-ಮತ-ವರ್ಗ ಹಾಗೂ ಸಾಹಿತ್ಯ-ಸಾಹಿತ್ಯೇತರ ಹಿನ್ನೆಲೆಗಳ ಬೇಧವಿಲ್ಲದೆ;ಹಾಗಾಗಿ ಸಾಹಿತ್ಯ ಮೀಮಾಂಸೆಯ ಬೌದ್ಧಿಕ ಕಾಟವಿಲ್ಲದೆ ಯಾರಾದರೂ ಏಕಾಕಿಯಾಗಿ ಪ್ರಭಾವಿಸಿ ನಿರ್ದೇಶಿಸಿದ್ದರೆ, ಅವರು ತೇಜಸ್ವಿಯವರೇ. ತಮ್ಮ ವಿಫುಲವಾದ ಅ-ಶ್ರೇಷ್ಠ ಮತ್ತು ಅ-ಮೌಲಿಕ ಸಾಹಿತ್ಯದ ಮೂಲಕ. ಹಾಗಾಗಿಯೇ ಕೆಲ ಅಡಿಗ ಪುನರುತ್ಥಾನವಾದಿ ಸಾಹಿತ್ಯ ನಿಷ್ಠುರ ವಿಮರ್ಶಕರು ಅವರನ್ನು ಅನಂತಮೂರ್ತಿ-ಲಂಕೇಶರಿಗೆ ಹೋಲಿಸಿ, ಅವರು (ಶ್ರೇಷ್ಠ)ಸಾಹಿತಿಯೇ ಅಲ್ಲ ಎಂದು ತಮಗೆ (ವಿಶ್ವಾಸವಿದ್ದವರ ಬಳಿ ಕಿವಿಯಲ್ಲಿ)ಹೇಳುವುದುಂಟು. ಇರಲಿ, ಈ ವಿಷಯಕ್ಕೆ ಮತ್ತೆ ಬರೋಣ.

                                        -೩-
ಮೊದಲಾಗಿ ದೇಶಕಾಲ, ನಿರ್ದಿಷ್ಟವಾಗಿ ಅದರ ವಿಶೇಷಾಂಕ; ನಾನು ಈಗಾಗಲೇ ಸೂಚಿಸಿದ ಹಾಗೆ, ಶ್ರೇಷ್ಠ ಸಾಹಿತ್ಯದ ಕಲ್ಪನೆಯನ್ನು ನಂಬಿ ರೂಪುಗೊಂಡಿಲ್ಲ. ನಂಬಿಯೇ ರೂಪುಗೊಂಡಿರುವುದು ಎಂದು ಯಾರಾದರೂ ಸಂಪಾದಕರ ಮೇಲೆ ಮಂಪರು ಪರೀಕ್ಷೆ ನಡೆಸಿ ಕಂಡು ಹಿಡಿದಿದ್ದರೂ, ಅದರ ಕುರುಹುಗಳು ಸಂಚಿಕೆಯಲ್ಲ್ಲಿ ಕಾಣುವುದಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತಾಡಲು ಹೋಗುವುದಿಲ್ಲ. ಏಕೆಂದರೆ, ಈ ಪತ್ರಿಕೆಯ ಬಗ್ಗೆ ತಮ್ಮ ಪ್ರತಿಕ್ರಿಯೆಗಳುದ್ದಕ್ಕೂ ಕಾಣುವ ಹಾಗೆ ವಿಪರೀತ ಅಭಿಮಾನವಿಟ್ಟವರಂತೆ ತೋರುವ ರಾಜಶೇಖರರು, ಎಲ್ಲಿ, ನಿಮ್ಮ ಈ ಮಾತಿಗೆ ಪಠ್ಯದ ಸಾಕ್ಷ್ಯ ನೀಡಿ ಎಂದು ಕೇಳಿಯಾರ! ಆದುದರಿಂದ ಅವನ್ನೆಲ್ಲ ಬಿಟ್ಟು, ಸಂಪಾದಕರು ಆರಿಸಿರುವ ೨೧ನೇ ಶತಮಾನದ ೨೧ ಲೇಖಕರ ಮತ್ತು ೨೧ ಕೃತಿಗಳ ಪಟ್ಟಿಯ ಹಿಂದಿನ ಯೋಜನೆಯ ರೀತಿ-ನೀತಿಗಳನ್ನಷ್ಟೇ ನೋಡೋಣ. ಈ ಪಟ್ಟಿಯ ಹೆಸರುಗಳ, ಕೃತಿಗಳ ಆಯ್ಕೆಯ ಹಿಂದಿರುವ ನ್ಯಾಯಾನ್ಯಾಯಗಳ ವಿಷಯ ಬೇಡ(ಮತ್ತೆ ಅದಕ್ಕೆ ರಾಜಶೇಖರ್ ಸಾಕ್ಷ್ಯ ಕೇಳಿಯಾರು!); ಅದರ ಕಲ್ಪನೆಯ ಹಿಂದಿನ ಧಾರ್ಷ್ಟ್ಯವನ್ನು ನೋಡಿದರೇ ಈ ಸಂಚಿಕೆಯ ಆಯೋಜಕರ ಅಡ್ಡಕಸುಬಿತನ ಕಾಣುತ್ತದೆ. ೨೧ನೇ ಶತಮಾನದ ಹತ್ತನೇ ಒಂದು ಭಾಗವೂ ಮುಗಿದಿಲ್ಲದಿರುವಾಗ ಮತ್ತು ಒಬ್ಬ ಮನುಷ್ಯನ ಬರಹದ ಬದುಕೇ ಸರಾಸರಿ ೪೦-೫೦ ವರ್ಷ ಇರುವಾಗ, ಇವರು ಮುಂದಿನ ನೂರು ವರ್ಷಗಳ ಸಾಹಿತ್ಯದ ಬಗ್ಗೆ, ಕೃತಿಗಳ ಬಗ್ಗೆ ಮಾತನಾಡಬಲ್ಲ(ಆ ಮಾತು ಎಂತಹುದೇ ಆಗಿರಲಿ) ಧೈರ್ಯ ಮಾಡುತ್ತಾರೆಂದರೆ ಇವರನ್ನು ತಲೆ ಕೆಟ್ಟವರೆಂದು ನಿರ್ಲಕ್ಷಿಸಬೇಕೋ ಅಥವಾ ಇದರ ಹಿಂದಿನ ಅಪ್ರಬುದ್ಧ ಸಾಹಿತ್ಯ ರಾಜಕಾರಣವನ್ನು ಕಂಡು ಹೇಸಬೇಕೋ ತಿಳಿಯದಾಗುತ್ತದೆ!

ಜೊತೆಗೆ ಈ ೨೧ ಜನ ಲೇಖಕ/ಲೇಖಕಿಯರ ಬಗ್ಗೆ ಇವರೇ ಅಥವಾ ಇವರ ಸಂಪಾದಕೀಯ ಬಳಗದ ಯಾರಾದರೂ ಬರೆಯದೆ, ಈ ಆಯ್ಕೆಗೆ ಸಂಬಂಧವೇ ಇಲ್ಲದ ಮತ್ತು ಯಾವ ಉದ್ದೇಶಕ್ಕಾಗಿ ತಾವು ಬರೆಯುತ್ತಿದ್ದೇವೆ ಎಂಬುದು ಗೊತ್ತಿಲ್ಲದೇ ಇರುವವರಿಂದ ಬರೆಸುವ ಹುನ್ನಾರ ಬೇರೆ! ಬರಿ ಹುನ್ನಾರವೇನು, ಕೆಟ್ಟ ರಾಜಕಾರಣವಿದು. ನನ್ನ ಪತ್ನಿಗೂ ಹೀಗೆ ಯಾಕೆಂದು ಗೊತ್ತಿಲ್ಲದೆ ಒಬ್ಬ ಕವಿ/ಕವಯತ್ರಿಯ ಬಗ್ಗೆ ಬರೆಯುವ ಆಹ್ವಾನ ಬಂದಿದ್ದುದರಿಂದ; ಆದರೆ ಆಕೆಗೆ ಆ ಆಹ್ವಾನದ ಈ ಪರಿಯಲ್ಲೇ ಇದ್ದ ರಾಜಕಾರಣದ ವಾಸನೆ ಬಡಿದೋ ಏನೋ ನಿರಾಕರಿಸಿದ್ದರಿಂದ ಇದು ನನಗೆ ಗೊತ್ತಾಯಿತಷ್ಟೆ. ಈ ಸಂಬಂಧ ನನಗೆ ತಿಳಿದುಬಂದ ಇನ್ನೊಂದು ಸಂಗತಿಯೆಂದರೆ, ನನ್ನ ಪತ್ನಿಯಂತೆಯೇ ಹಲವು ಲೇಖಕರು ಬರೆಯಲು ನಿರಾಕರಿಸಿದ್ದರಿಂದಾಗಿ, ತಮ್ಮ ಈ ಆಯ್ದ ೨೧ ಜನ ಲೇಖಕರಲ್ಲಿ ಹಲವರ ಬಗ್ಗೆ ಈ ಪತ್ರಿಕೆಯ ಸಂಪಾದಕ ಬಳಗ ಯಾರನ್ನು ಸಾಹಿತ್ಯದ ಗಂಧ-ಗಾಳಿ ಇಲ್ಲದವರು ಎಂದು ಪರಿಗಣಿಸಿ ನಿರ್ಲಕ್ಷಿಸಿತ್ತೋ, ಕೊನೆಗೆ ಅಂತಹವರನ್ನೇ ಕಾಡಿ ಬೇಡಿ, ಪುಸಲಾಯಿಸಿ ಬರೆಯಿಸಿದ್ದಾರೆ! ಇನ್ನು ಈ ಇಡೀ ಯೋಜನೆಯ ಮಟ್ಟ ಎಲ್ಲಿಗೆ ಇಳಿದಿರಬಹುದು ಯೋಚಿಸಿ!

ಬಹುಶಃ ಇದನ್ನು ತಿಳಿದೇ-ತಮ್ಮ ಈ ಗುಪ್ತ ರಾಜಕೀಯ ಸಾಹಸ ಹಾಸ್ಯಾಸ್ಪದ ರೀತಿಯಲ್ಲಿ ವಿಫಲಗೊಂಡಿದ್ದರಿಂದಾದ ಮುಜುಗರವನ್ನು ಮರೆಮಾಚಿಕೊಳ್ಳಲೆಂದೇ-ಸಂಪಾದಕ ಮಂಡಳಿಯವರು, ಕೆಲವರು ಪತ್ತೇದಾರಿ ನಡೆಸಿ ಹೇಳುತ್ತಿರುವಂತೆ, ತಮ್ಮ ಈ ಉತ್ಪನ್ನದ ಬಿಡುಗಡೆಗಾಗಿ ಮಾಧ್ಯಮಗಳ ಮೇಲೆ ಕಾರ್ಪೋರೇಟ್ ಸಂಸ್ಥೆಗಳು ಅನುಸರಿಸುವ ಅತ್ಯಾಧುನಿಕ ಮಾದರಿಯ ಸಂಪನ್ಮೂಲಗಳನ್ನೇ ಬಳಸಿ ಭರ್ಜರಿ ಪ್ರಚಾರ ಪಡೆದಿರಬಹುದು! ಆದರೆ ಇದೇ ಅವರಿಗೆ ಮುಳುವಾಗಿ, ನಮ್ಮಂತಹವರ ಕೆಟ್ಟ ಕಣ್ಣು(ಮತ್ತು ಮಂಜುನಾಥ್ ಲತಾ-ಐಜೂರರಂತಹ ಹಲವರ ದುಷ್ಟ ಕಣ್ಣೂ?) ಅವರ ಮೇಲೆ ಬೀಳುವಂತೆಯೂ ಆಗಿಬಿಟ್ಟಿತಲ್ಲಾ? ಅದೇನೇ ಇರಲಿ, ದೇಶಕಾಲದ ಈ ಪ್ರಯತ್ನ ಬಂಡಾಯದ ಕೆಲವರು ಮಾಡಿದ ಪ್ರಯತ್ನದಂತೆಯೇ ಸಾಹಿತ್ಯಕ್ಕೆ ಹಾನಿ ಮಾಡುವ ಪ್ರಯತ್ನವೇ ಆಗಿದೆ. ವಾಸ್ತವ ಹೀಗಿರುವಾಗ ಈ ಪತ್ರಿಕೆಯ ಮೇಲೆ ಶ್ರೇಷ್ಠ ಸಾಹಿತ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದಿರಲಾರದು!

 ಇನ್ನು ಪತ್ರಿಕೆಯಲ್ಲಿ/ವಿಶೇಷಾಂಕದಲ್ಲಿ ಬ್ರಾಹ್ಮಣ ಲೇಖಕರ ಸಂಖ್ಯೆ ಹೆಚ್ಚಾಗಿದೆ(ಅರುಣ್ ಜೋಳದಕೂಡ್ಲಿಗಿಯವg ಭಾಷೆಯಲ್ಲಿ, ಬ್ರಾಹ್ಮಣರ ಲಾಬಿ) ಎನ್ನುವ ಆಧಾರದ ಮೇಲೆ ಶ್ರೇಷ್ಠತೆಯ ವ್ಯಸನದ ಆರೋಪ ಮಾಡಿದರೆ, ಅದು ಲಂಕೇಶ್ ನಂಬಿದ್ದ ಶ್ರೇಷ್ಠ ಸಾಹಿತ್ಯದ ಕಲ್ಪನೆಗೇ ಮಾಡುವ ಅವಮಾನ. ಹಾಗಾಗಿ, ಇದರ ಮೇಲೆ ಹೆಚ್ಚೆಂದರೆ ಸುಪ್ತ (ಮೇಲ್)ಜಾತೀಯತೆಯ ಆರೋಪ ಮಾಡಿ ತೃಪ್ತಿ ಪಟ್ಟುಕೊಳ್ಳಬಹುದು. ಆದರೆ ಇಂದು ಸಾಮಾಜಿಕ ನ್ಯಾಯದ ರಾಜಕಾರಣ ಸಾಹಿತ್ಯ ಕ್ಷೇತ್ರಕ್ಕೂ ಹಬ್ಬಿ ಅಕಾಡೆಮಿ ಅಧ್ಯಕ್ಷತೆ, ಸದಸ್ಯತ್ವ, ಬಹುಮಾನ-ಪ್ರಶಸ್ತಿ ಇತ್ಯಾದಿ ಬಹುತೇಕ ಅಧಿಕೃತ ಮಾನ್ಯತೆಗಳು ಸಾಹಿತ್ಯ ನ್ಯಾಯವೊಂದನ್ನು ಬಿಟ್ಟು ಸಾಮಾಜಿಕ ನ್ಯಾಯದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ನ್ಯಾಯಗಳ ಹೆಸರಲ್ಲಿ ಬಹುಪಾಲು ಅಯೋಗ್ಯರ ಪಾಲಾಗುತ್ತಾ, ಸಾರ್ವಜನಿಕರಲ್ಲಿ ಸಾಹಿತ್ಯದ ಗುಣಾತ್ಮಕತೆ ಕುರಿತಂತೆ ಗಂಭೀರ ಸಂದೇಹಗಳು ಸೃಷ್ಟಿಯಾಗುತ್ತಿರುವ ದಿನಗಳನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಇದು ಇಂದಿನ ಈ ಸಂದರ್ಭಕ್ಕೆ ಪತ್ರಿಕೆ ತೋರಿಸುತ್ತಿರುವ ತನ್ನದೇ ರೀತಿಯ ಪ್ರತಿಕ್ರಿಯೆ ಯಾಕಾಗಿರಬಾರದು?(ಅಥವಾ ಪತ್ರಿಕೆಯ ಆರಂಭದ ಹಿಂದಿನ ಸ್ಫೂರ್ತಿಯೇ ಇದಾಗಿರಬಹುದು, ಯಾರಿಗೆ ಗೊತ್ತು?) ತೇಜಸ್ವಿ ಪ್ರಕಾರ ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೀಸಲು ಏನಾದರೂ ಅಗತ್ಯವಿದ್ದರೆ ಅದು ಬ್ರಾಹ್ಮಣರಿಗೆ ಅಗತ್ಯವಾಗಿದೆ.೬ ಅದನ್ನು ದೇಶಕಾಲ ಅರ್ಥ ಮಾಡಿಕೊಂಡು ಜಾರಿಗೆ ತಂದಿರಲೂಬಹುದು!              
                                 
                                           -೪-            
ಇರಲಿ. ಈ ಚರ್ಚೆಯಲ್ಲಿ ನನಗೆ ಮೊದಲಿಗೇ ಎದ್ದು ಕಾಣುವ ದುಃಖ, ವಿಷಾದದ ಸಂಗತಿ ಎಂದರೆ, ಮಂಜುನಾಥ್ ಲತಾ-ಐಜೂರರ ಲೇಖನವನ್ನು, ಅದರಲ್ಲಿನ ಪ್ರತಿ ಮಾತನ್ನೂ ಫಣಿರಾಜ್-ರಾಜಶೇಖರರು ವಿಮರ್ಶೆಯೆಂದು(ಅದು ಸೂಕ್ತ ಪರಿಭಾಷೆಯಲ್ಲಿಲ್ಲವೆಂದು ದೂರುತ್ತಲೇ!) ಬಗೆದು, ಸಹಜವಾಗಿಯೇ ಅದಕ್ಕೆ ಉತ್ತರಿಸಲಾಗದ ಹತಾಶೆ-ಕ್ರೋಧಗಳಿಗೆ ತಮ್ಮನ್ನು ತಾವು ತೆತ್ತುಕೊಂಡಿರುವುದು. ಆದರೆ ನನಗೆ ಅದು ಮೊದಲ ನೋಟಕ್ಕೇ ದಿಕ್ಕು ದೆಸೆಯಿಲ್ಲದ ಸಾರ್ವಜನಿಕ ದೂರು-ಬೈದಾಟಗಳು ತುಂಬಿದ ದೊಡ್ಡ ರಂಪದಂತೆ ಕಂಡಿದೆ. ಹಾಗಾಗಿಯೇ ನಾನು ಅದಕ್ಕೆ ಪ್ರತಿಕ್ರಿಯಿಸಬೇಕಾಗಿಲ್ಲ; ಪ್ರತಿಕ್ರಿಯಿಸಬೇಕಾದವರು ಬೇರೆ ಇದ್ದಾರೆ ಎಂದು ಸುಮ್ಮನಾದೆ. ನನ್ನ ಆಶ್ಚರ್ಯಕ್ಕೆ, ಇದಕ್ಕೆ ಯಾರು ಪ್ರತಿಕ್ರಿಯಿಸಬೇಕಿತ್ತೋ(ಪ್ರತಿಕ್ರಿಯಿಸಬೇಕೆನಿಸಿದರೆ) ಅವರು ಪ್ರತಿಕ್ರಿಯಿಸದೆ, ಈ ಇಬ್ಬರು ಪ್ರತಿಕ್ರಿಯಿಸಿದ್ದಾರೆ! ಅದೂ ಕತ್ತಿವರಸೆಯ ಆವೇಶದೊಂದಿಗೆ... ಇದರಿಂದಾಗಿ, ಇವರು ಈ ರಂಪವಾದರೂ ಏಕೆ ಹುಟ್ಟಿಕೊಂಡಿದೆ ಎಂದು ಯೋಚಿಸುವ, ಅದರ ಹಿಂದಿನ ಪ್ರವೃತ್ತಿಗಳನ್ನೂ, ಕಾರಣಗಳನ್ನು ಗುರುತಿಸಿ ಅವಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಮೂಲಕ ಚರ್ಚೆಯನ್ನು ಆರಂಭದ ಹಂತದಲ್ಲೇ ಮುಕ್ತಾಯಗೊಳಿಸುವ ಸಹನೆ-ವ್ಯವಧಾನಗಳನ್ನು ಸಂಘಟಿಸಿಕೊಳ್ಳಲಾಗದೆ, ಸುಖಾಸುಮ್ಮನೆ ತಮ್ಮ ದೌರ್ಬಲ್ಯಗಳನ್ನು ಬಯಲು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಂಡಿದ್ದಾರೆ. ಈ ತಪ್ಪು ಹೆಜ್ಜೆಯಿಂದಾಗಿ ಇವರ ವಾದಗಳೂ ಒಂದೇ ಸಮನೆ ತಪ್ಪು ಹೆಜ್ಜೆಗಳನ್ನಿಡುತ್ತಾ ಹೋಗಿವೆ. ಕೆಲವೆಡೆ ಅನುಮಾನಾಸ್ಪದವೆನ್ನಿಸುವಂತೆ ಕೂಡಾ. ಇದು ನನ್ನಲ್ಲಿ ಸಾಕಷ್ಟು ಕಸಿವಿಸಿಯನ್ನೂ ಕೆಲವು ಆತಂಕಗಳನ್ನೂ ಹಟ್ಟು ಹಾಕಿದೆ.
   
 ಏಕೆಂದರೆ, ಇವರಿಬ್ಬರು ಇವೊತ್ತಿನ ಕನ್ನಡ ಸಾಹಿತ್ಯ ಸಂದರ್ಭವನ್ನು ಇಂದು ತಮ್ಮದೇ ವಿಶಿಷ್ಟ ಜವಾಬ್ದಾರಿ ಮತ್ತು ಒಳನೋಟಗಳೊಂದಿಗೆ ವ್ಯಾಖ್ಯಾನಿಸುತ್ತಿರುವ ಎರಡು ಪ್ರಮುಖ ವೈಚಾರಿಕ ಧಾರೆಗಳಲ್ಲಿ ಒಂದರ ಬಹು ಮುಖ್ಯ ವಕ್ತಾರರೆಂದು ನಾನು ಭಾವಿಸಿದ್ದೇನೆ. ಇವರು ಸದರಿ ಚರ್ಚೆಯೇ ಒಂದು ನೆಪವಾಗಿ, ಈ ಧಾರೆಯ ಇವೊತ್ತಿನ ನಂಬಿಕೆಗಳನ್ನು, ನಿಲುವುಗಳನ್ನು ತಮ್ಮದೇ ಕಾರಣಗಳಿಂದಾಗಿ ಸಾಕಷ್ಟು ಕಟುವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದಾರೆ. ಇದರಿಂದ ಕೆರಳಿದ, ಕುತೂಹಲಗೊಂಡ ಇತರ ಅನೇಕರು ಅನಿವಾರ್ಯವೆಂಬಂತೆ ಮಧ್ಯ ಪ್ರವೇಶಿಸಿ, ಚರ್ಚೆಯನ್ನು ದೇಶಕಾಲವನ್ನು ಮೀರಿದ ಸಮಕಾಲೀನ ಸಾಹಿತ್ಯ ರಾಜಕಾರಣದ ಕೆಲವು ಪ್ರಶ್ನೆಗಳಿಗೆ ವಿಸ್ತರಿಸಿ ಒಳ್ಳೆಯದನ್ನೇ ಮಾಡಿದ್ದಾರೆ. ಇದರಿಂದಾಗಿ ನನಗೂ, ಮಂಜುನಾಥ್ ಲತಾಐಜೂರರ ರಂಪ ನೆಪ ಮಾತ್ರವಾಗಿ, ಇವೊತ್ತಿನ ಸಾಹಿತ್ಯಿಕ-ಸಾಂಸ್ಕೃತಿಕ ಸಂದರ್ಭದ ಈ ವಿಸ್ತಾರದಲ್ಲಿ ನನ್ನನ್ನು ನಾನೇ ಕಂಡುಕೊಳ್ಳಲು, ಸ್ಪಷ್ಟಪಡಿಸಿಕೊಳ್ಳಲು ಅವಕಾಶವಾಗಿದೆ. ಹೀಗಾಗಿ ನಾನು ಇಲ್ಲಿ ಇವರ ಇಲ್ಲಿನ ಅಭಿಪ್ರಾಯ-ನಿಲುವುಗಳನ್ನು ಮತ್ತು ವಾದ ವೈಖರಿಗಳನ್ನು ಸಂದರ್ಭೋಚಿತ ನಿಷ್ಠುರತೆಯಿಂದ ಮತ್ತು ಸವಿವರವಾಗಿ ಪರಿಶೀಲಿಸುವ ಹುಮ್ಮಸ್ಸು ಮೂಡಿದೆ. ಈ ನನ್ನ ಗೆಳೆಯರು ಇದನ್ನು ಸಹಿಸಬಲ್ಲರೆಂಬ ನಂಬಿಕೆ ನನಗಿದೆ.

 ಮೊದಲಾಗಿ ಈ ಚರ್ಚೆಯ ಸಂದರ್ಭದಲ್ಲಿ ನನ್ನನ್ನು ಕಾಡಿದ ಮುಖ್ಯ ಪ್ರಶ್ನೆಯೆಂದರೆ, ದೇಶಕಾಲದ ಮುಖ್ಯ ಪಾತ್ರಧಾರಿಗಳೇ ಸುಮ್ಮನಿರುವಾಗ, ಫಣಿರಾಜ್-ರಾಜಶೇಖರರೇಕೆ ಅದರ ಪರವಾಗಿ ಉತ್ತರ ಕೊಡಲು ಹೊರಟರು? ಅದೂ, ಅದರ ಜೊತೆ ನೀನಾಸಂ, ಅಕ್ಷರ ಪ್ರಕಾಶನ, ಟಿ,ಪಿ.ಅಶೋಕ, ಅಕ್ಷರ, ಅನಂತಮೂರ್ತಿ ಇತ್ಯಾದಿಗಳನ್ನೆಲ್ಲ ಸೇರಿಸಿಕೊಂಡು! ಮೊದಲೇ ಈ ಪತ್ರಿಕೆ ಒಂದು ಖಾಸಗಿ ಲಿಮಿಟೆಡ್ ಕಂಪನಿ ಎಂಬ ಆರೋಪಕ್ಕೆ ಈಡಾಗಿರುವಾಗ, ಈ ಆರೋಪ ಸರಿಯಾಗಿಯೇ ಇದೆ ಎನ್ನುವಂತೆ ರಾಜಶೇಖರ್ ಪದೆ ಪದೇ, ಇದು ಶುದ್ಧ ಖಾಸಗಿ ಪ್ರಯತ್ನವಾಗಿರುವುದರಿಂದ ಸಾರ್ವಜನಿಕ ಉತ್ತರದಾಯಿತ್ವದ ಪ್ರಶ್ನೆಯೇ ಏಳುವುದಿಲ್ಲ ಎಂದು ಪತ್ರಿಕೆಯ ಉತ್ತರದಾಯಿತ್ವದವನ್ನು ತಾವೇ ಹೊತ್ತವರಂತೆ ಘೋಷಿಸುತ್ತಾರೇಕೆ? ಇನ್ನು ಅಂತಹ ಪ್ರಶ್ನೆ ಕೇಳಬಹುದಾದವರನ್ನು ಪೋಲಾಂಡ ನಾಯಕರು, ತಲೆ ತಿರುಕರು ಇತ್ಯಾದಿ ಅರ್ಥವಾಗದ ಮತ್ತು ಅರ್ಥವಾಗುವ ಹಲವು ಗುಣವಾಚಕ-ಬಿರುದುಗಳಿಂದ ಅಲಂಕರಿಸುವಷ್ಟು ಪತ್ರಿಕೆ ಕುರಿತ ತೀವ್ರ ಮಮಕಾರವೇಕೆ? ಎಲ್ಲಕ್ಕಿಂತ ಮಿಗಿಲಾಗಿ, ಇವರಿಬ್ಬರೂ-ಒಬ್ಬರು ವಾಗ್ವಾದ ಪರಂಪರೆಯನ್ನು ಎತ್ತಿಹಿಡಿಯುವ ನೆಪದಲ್ಲಿ, ಇನ್ನೊಬ್ಬರು ಪತ್ರಿಕೆಯಲ್ಲಿ ಬರೆದ ಜವಾಬ್ದಾರಿಯ ಹೆಸರಿನಲ್ಲ್ಲಿ-ದೇಶಕಾಲದ ವಿರೋಧಿಗಳಿಗೆ ಅಪ್ಪಟ ಸಾಹಿತ್ಯಿಕ-ಸಾಂಸ್ಕೃತಿಕ ರಾಜಕಾರಣದಂತೆ ಕಾಣುವ ಅದರ ಆಯ್ಕೆ ಮತ್ತು ಅಭಿರುಚಿಗಳನ್ನು ನಿರ್ಧರಿಸುವ ಸಂಪಾದಕೀಯ ನೀತಿಯನ್ನು ಈ ಕಂಪನಿಯ ಪಿ.ಆರ್.ಓ.ಗಳಂತೆ ಸಮರ್ಥಿಸುವ ಪ್ರಯತ್ನ ಮಾಡುವರೇಕೆ? ಇದನ್ನು ರಾಜಶೇಖರರು ಪದೇ ಪದೇ ಪತ್ರಿಕೆ ವಿಮರ್ಶಾತೀತವಲ್ಲವೆಂದು ಹೇಳಹೇಳುತ್ತಲೇ, ಆದರೆ ಯಾರು ಏನು ಹೇಳಿದರೂ ಕೇಳಿಸಿಕೊಳ್ಳದವರಂತೆ, ಪ್ರಶ್ನಾತೀತಗೊಳಿಸಿ;ಮತ್ತು ಫಣಿರಾಜರು ಮೂಲ ಲೇಖನದ ವಾಗ್ವಾದ ಭಂಜನಾ ಪ್ರವೃತ್ತಿಯನ್ನು ಎಳೆ ಎಳೆಯಾಗಿ ವಿವರಿಸುವ ಪ್ರಯತ್ನದಲ್ಲಿ ಇಲ್ಲಿ ಚರ್ಚೆಯೇ ಸಾಧ್ಯವಿಲ್ಲವೆಂದು ಹೇಳುತ್ತಾ ಅದನ್ನು ಚರ್ಚಾತೀತಗೊಳಿಸಿ, ಗಾಬರಿ ಹುಟ್ಟಿಸುತ್ತಾರೆ.

ಫಣಿರಾಜರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಆಧುನಿಕ ಕನ್ನಡ ಸಾಹಿತ್ಯ ವಾಗ್ವಾದ ಪರಂಪರೆಯ ಚರಿತ್ರೆಯನ್ನೇ ಬಿಚ್ಚಿಡುತ್ತಾ, ಅದರಲ್ಲಿ ತಮ್ಮ ಸಕ್ರಿಯ ಭಾಗವಹಿಸುವಿಕೆಯ ಸ್ವರೂಪವನ್ನು ವಾಕ್ಯ ವಾಕ್ಯಗಳ ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳನ್ನು ಬಗೆ ಬಗೆದು... ಇತ್ಯಾದಿಯಾಗಿ ಯಾವುದೋ ಭರ್ಜರಿ ಮಾಂಸಾಹಾರಿ ಭೋಜನದ ವರ್ಣನೆಯಂತೆ ರುಚಿಕಟ್ಟಾಗಿ ವಿವರಿಸುತ್ತಾ, ಆದರೆ ಅದಕ್ಕೆ ಇಲ್ಲಿ ಅವಕಾಶವೇ ನೀಡಿಲ್ಲ್ಲವೆಂದು ಗೋಳಾಡುತ್ತಾ, ಮಂಜುನಾಥ್ ಲತಾ-ಐಜೂರ ಲೇಖನದ ಪ್ರಸ್ತುತತೆಯನ್ನೇ ತಳ್ಳಿಹಾಕಿದ್ದಾರೆ. ಆದರೆ ಅವರ ವಾಗ್ವಾದ ಪ್ರಿಯತೆ ಅವರನ್ನು ಮತ್ತೆ ಮತ್ತೆ ಕಾಡುತ್ತಾ, ಒಂದಲ್ಲ ಒಂದು ನೆಪ ಹುಡುಕಿಕೊಂಡು ಅವರು ಚರ್ಚೆಯಲ್ಲಿ ರಾಜಶೇಖರರ ಜೊತೆ ತಾವೂ ಪ್ರಮುಖ ಪಾತ್ರ ವಹಿಸಲು ನಿರಂತರವಾಗಿ ಹೆಣಗಿದ್ದಾರೆ! ಹಾಗಾದರೆ ಫಣಿರಾಜ್ ದೂಷಿಸುವ ಹಾಗೆ, ಮಂಜುನಾಥ್ ಲತಾ-ಐಜೂರರು ವಾಗ್ವಾದ ಭಂಜಕರೋ ಅಥವಾ ಜನಕರೋ? ಫಣಿರಾಜರೇ ಹೇಳಬೇಕು!

 ಅದೆಲ್ಲ ಒತ್ತಟ್ಟಿಗಿರಲಿ, ವಾಗ್ವಾದ ಪ್ರಿಯ ಫಣಿರಾಜರಿಗೆ ನನ್ನ ಒಂದೇ ಪ್ರಶ್ನೆ: ನೀವು ಅನೇಕ ವಾಗ್ವಾದಗಳನ್ನು ಸುಪ್ರಸಿದ್ಧವೆಂದೂ, ಅಮೂಲ್ಯವೆಂದೂ ಹೆಸರಿಸಿದ್ದೀರಿ. ಆದರೆ ಇವು ಸುಪ್ರಸಿದ್ಧ, ಅಮೂಲ್ಯ ಯಾಕೆ? ಇವು ನಿಮ್ಮಂತಹವರ ವಾಗ್ವಾದಗಳ ತಾಂತ್ರಿಕ ಪರಿಣಿತಿಯನ್ನು ಚುರುಕುಗೊಳಿಸಿವೆಯೆಂದೋ ಅಥವಾ ಇವು ನಿಮ್ಮ ಸಾಹಿತ್ಯ ಗ್ರಹಿಕೆಯ ಸೂಕ್ಷ್ಮಗಳ ಮೇಲೆ ಏನಾದರೂ ನಿರ್ಣಾಯಕ ಪರಿಣಾಮ ಬೀರಿವೆಯೆಂದೋ? ನೀವು ಒಟ್ಟಿಗೇ ಮಾಸ್ತಿ, ಕುವೆಂಪು, ಲಂಕೇಶ್, ತೇಜಸ್ವಿ, ಸುಬ್ಬಣ್ಣ, ಅಡಿಗ, ಅನಂತಮೂರ್ತಿಯವರನ್ನೊಳಗೊಂಡ ವಾಗ್ವಾದಗಳನ್ನು ನಿಮ್ಮ ವಾಗ್ವಾದ ಪರಂಪರೆಯ ಬುಟ್ಟಿಯಲ್ಲಿಟ್ಟು, ಈ ಬುಟ್ಟಿ ನೋಡಿ ಎಷ್ಟು ಭದ್ರವಿದೆ, ಚೆಂದವಿದೆ ಎಂದು ಮಾತ್ರ ಕೂಗಿ ಕೂಗಿ ಹೇಳುತ್ತಿರುವಂತಿದೆ. ಮಾಸ್ತಿಗೆ ಕುವೆಂಪು ನೀಡಿದ ಉತ್ತರ, ಸಾಕ್ಷಿಗೆ ಲಂಕೇಶ್ ಬರೆದ ಅಪ್ರಕಟಿತ ಪತ್ರ ಮತ್ತು ಅದನ್ನು ಕುರಿತ ಲಂಕೇಶರ ಟಿಪ್ಪಣಿ, ಅನಂತಮೂರ್ತಿಯವರನ್ನು ಮಾದರಿಯಾಗಿಟ್ಟುಕೊಂಡು ನವ್ಯದ ಬಗ್ಗೆ ತೇಜಸ್ವಿ ಬರೆದ ಟೀಕೆ ಮತ್ತು ಸುಬ್ಭಣ್ಣನವರ ಕುವೆಂಪುಗೊಂದು ಪುಟ್ಟ ಕನ್ನಡಿ ಪುಸ್ತಕದ ಬಗ್ಗೆ ಲಂಕೇಶ್ ಮಾಡಿದ ವಿಮರ್ಶೆ ಇವುಗಳು ಆಹಾ ಎಂತಹ ವಾಗ್ವಾದಗಳು! ವಾಗ್ವಾದಗಳೆಂದರೆ ಹೀಗಿರಬೇಕು!! ಎಂದು ಲೊಟ್ಟೆ ಹೊಡೆಯುತ್ತಾ ಚಪ್ಪರಿಸುವದಕ್ಕಷ್ಟೇ ಇವೆಯೋ ಅಥವಾ ಅವುಗಳಿಂದ ಏನನ್ನಾದರೂ ಕಲಿತು/ಪಡೆದು ಬೆಳೆದಿದ್ದೇವೆಯೋ? ವಾಗ್ವಾದವೆಂದರೆ, ನೀವು ಬಹು ಅಮೂಲ್ಯವೆಂಬಂತೆ ವರ್ಣಿಸಿರುವ ಬಹಳ ಪರಿಶ್ರಮದಿಂದ ವಿಮರ್ಶೆಯ ಪರಿಕಲ್ಪನೆಗಳನ್ನು ರೂಢಿಸುವ ಜೀವಮಾನದ ಕಸುಬಿಗೆ ಒದಗಿ ಬರುವ ಜಡ ಪಂಡಿತ ಪಠ್ಯವಲ್ಲ ಎಂದು ನಾನು ಭಾವಿಸಿದ್ದೇನೆ.

ಮಂಜುನಾಥ್ ಮತ್ತು ಐಜೂರರ ಲೇಖನದ ಹಿಂದೆ ಈ ಪ್ರಶ್ನೆ, ಈ ಅನುಮಾನ ಇದ್ದಂತಿದೆ. ಆದರೆ ಕೂಸನ್ನು ಬಿಟ್ಟು ಮಾಸನ್ನು ಮೂಸಿನೋಡಿದಂತೆ, ಫಣಿರಾಜ್ ಮತ್ತು ರಾಜಶೇಖರರು ಪ್ರಸ್ತುತ ಬರಹದಲ್ಲ್ಲಿನ ಅದರ ಅಸಾಧ್ಯ ವ್ಯಂಗ್ಯ-ಕಟಕಿಗಳಿಂದ ವಿಚಲಿತರಾದಂತೆ ಈ ಪ್ರಶ್ನೆ/ಅನುಮಾನಗಳನ್ನು ಗುರುತಿಸಲು ವಿಫಲರಾಗಿದ್ದಾರೆ. ಹಾಗಾಗಿ ಈ ಬರಹದಲ್ಲಿ ಅವರು ಬರೀ ದುರುದ್ದೇಶವನ್ನೇ ಕಂಡು ರೋಸಿ ಹೋದವರಂತೆ ವ್ಯಗ್ರರಾಗಿ, ತಾವೂ ಅದೇ ತೆರನ ವ್ಯಂಗ್ಯ ಕಟಕಿಗಳಿಗೆ ಶರಣಾಗಿದ್ದಾರೆ. ಆ ಮೂಲಕ ಚರ್ಚೆ ತಮ್ಮ ಹಿಡಿತವನ್ನು ಮೀರಿ ಬೆಳೆಯಲು ತಾವೇ ಆಹ್ವಾನ ನೀಡಿಕೊಂಡಿದ್ದಾರೆ. ಈ ಆಹ್ವಾನವನ್ನು ಅಗತ್ಯ ವೀರಾವೇಶದಿಂದಲೇ ರಾಜಶೇಖರರು ಎದುರಿಸಿದ್ದಾರೆ, ನಿಜ. ಆದರೆ, ವಸಂತ ಬನ್ನಾಡಿಯವರು ಈ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿ ಈ ಬರಹದ ಮೂಲ ಕಾಳಜಿಗಳನ್ನು ಹಲವು ಉದಾಹರಣೆಗಳ ಮೂಲಕ ಎತ್ತಿ ತೋರಿಸಿದಾಗಲೂ ಮತ್ತು ಇಂದಿನ ಸಂದರ್ಭದಲ್ಲಿ ಅವುಗಳನ್ನು ಚರ್ಚಿಸಬೇಕಾದ ಅನಿವಾರ್ಯತೆಯನ್ನು ಸೂಚಿಸಿದಾಗಲೂ(ಆದರೆ ಬನ್ನಾಡಿಯವರು, ಇಡೀ ದೇಶವೇ ಈಗ ಫೋರ್ಡ್ ಫೌಂಡೇಶನ್‌ನ ಅಪ್ಪನಂತಿರುವ ವಿಶ್ವ ಬ್ಯಾಂಕ್‌ನ ಹಣ ಮತ್ತು ನಿರ್ದೇಶನಗಳಲ್ಲಿ ನಡೆಯುತ್ತಿರುವಾಗ, ನೀನಾಸಂ ಯಾವುದೋ ಪುರಾತನ ಕಾಲದಲ್ಲಿ ಫೋರ್ಡ್ ಫೌಂಡೇಶನ್ ಹಣ ಪಡೆದದ್ದರ ಬಗ್ಗೆ ಈಗಲೂ ಅದನ್ನು ಅಟಕಾಯಿಸುವುದು ತರವಲ್ಲ ಎಂದೇ ನನ್ನ ಭಾವನೆ.) ಜಾಣತನದಿಂದ ಅವುಗಳಿಂದ ತಪ್ಪಿಸಿಕೊಂಡು ಮತ್ತೇನನ್ನೋ ಹೇಳತೊಡಗಿದಾಗ ಮಾತ್ರ್ರ ಅವರ ಇಡೀ ವಾದವೇ ಅನುಮಾನಾಸ್ಪದವೆನ್ನಿಸಬಿಡತೊಡಗುತ್ತದೆ.

ಉದಾಹರಣೆಗೆ, ಅಡಿಗರ ಕಾವ್ಯದ ಬಗ್ಗೆ ಅನಂತಮೂರ್ತಿಯವರು ಬರೆದ ಮುನ್ನುಡಿ ಕುರಿತು ಬನ್ನಾಡಿ ಮಾಡಿದ ಟೀಕೆಯ ಮೊದಲ ಭಾಗವನ್ನು(ಇವರ ಕಾವ್ಯ ಅರ್ಥವಾಗಲು ನಮ್ಮ ಆರ್ಯ ಸಂಪ್ರದಾಯದ ಪರಿಚಯವಿರಬೇಕು ಇತ್ಯಾದಿ) ನಿರ್ಲಕ್ಷಿಸುವ(ಇದು ಏಕೆನ್ನುವುದೇ ಇಲ್ಲಿ ಮುಖ್ಯ.) ಅವರು ಎರಡನೇ ಭಾಗವನ್ನಷ್ಟೇ(ಅಡಿಗ ಮತ್ತು ಬೇಂದ್ರೆಯವರ ಕಾವ್ಯದ ಶ್ರೇಷ್ಠತೆಯನ್ನು ಕುರಿತ ಮಾತು) ಹಿಡಿದುಕೊಂಡು ತಮ್ಮ ಜಾಣತನವನ್ನೆಲ್ಲ ಬಳಸುತ್ತಾ ಬನ್ನಾಡಿಯವರ ಮೇಲೇ ವ್ಯಂಗ್ಯದ ಬಾಣ ಬಿಡುತ್ತಾರೆ. ಇನ್ನು ಕುವೆಂಪು ಕವಿಯಾದರೆ ನಾನು ಕವಿಯಲ್ಲ ಎಂಬ ಅಡಿಗರು ಆಡಿದರೆನ್ನಲಾದ ಮಾತನ್ನು ಸಾಂಸ್ಕೃತಿಕ ರಾಜಕಾರಣದ ಉದಾಹರಣೆಯಾಗಿ ಬನ್ನಾಡಿ ಉಲ್ಲೇಖಿಸಿದರೆ, ರಾಜಶೇಖರ್ ಅದನ್ನು ನೇರವಾಗಿ ಜಾತಿ ನೆಲೆಗೇ ಒಯ್ದು, ಅಡಿಗರು ಅನೇಕ ಬ್ರಾಹ್ಮಣ ಕವಿಗಳನ್ನೂ ಹೀಗೆ ಹಂಗಿಸಿದ್ದಾರೆ ಎಂದು ಸಮಝಾಯಿಷಿ ಕೊಡುತ್ತಾರೆ. ಆ ಮೂಲಕ ಕಾವ್ಯ ಕುರಿತ ಅಡಿಗರ ನಿಲುವನ್ನು ಆಜ್ಞೆ ಎಂಬಂತೆ ಒಪ್ಪಿಕೊಂಡು, ಕುವೆಂಪು ಕಾವ್ಯವನ್ನೇ ಇಡಿಯಾಗಿ ಅಲ್ಲಗೆಳೆಯುವ ಪ್ರಯತ್ನ ಮಾಡುತ್ತಾರೆ.(ಬನ್ನಾಡಿಯವರು ದೂರುವಂತೆ, ಎಸ್. ಮಂಜುನಾಥರ ಕವನಗಳು ದೇಶಕಾಲದಲ್ಲಿ ಹೆಚ್ಚು ಪ್ರಕಟವಾಗಿರುವುದು, ಕುವೆಂಪು ಕುರಿತ ಅವರ ಇಂತಹುದೇ ನಂಬಿಕೆಯ ಕಾರಣದಿಂದಲೇ ಎಂದು ಬನ್ನಾಡಿಯವರೂ ಸೇರಿದಂತೆ ಯಾರಾದರೂ ಅನುಮಾನಪಟ್ಟರೆ ಅದನ್ನು ನಾನು ಒಪ್ಪುವುದಿಲ್ಲ.) ಮತ್ತೆ ಆ ಮೂಲಕ ರಾಜಶೇಖರರು ನಮ್ಮ ಸಾಹಿತ್ಯ ಪರಂಪರೆಯಲ್ಲಿ ಕವಿ ಎಂದರೆ ಏನು, ಅದರಲ್ಲಿ ಯಾವೆಲ್ಲ ಆಯಾಮಗಳು ಒಳಗೊಳ್ಳುತ್ತವೆ ಎಂಬುದರ ಪರಿವೆಯೇ ಇಲ್ಲದಂತೆ, ತಾವು ವೈಯುಕ್ತಿಕ ಎಂಬ ಶಬ್ದದ ಅರ್ಥವಲಯವನ್ನೇ ಸಂಕುಚಿತಗೊಳಿಸಿದ ಆಧುನಿಕ ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಸೆರೆಯಾಳಾಗಿರುವುದನ್ನು ಹೆಮ್ಮೆಯಿಂದ ಒಪ್ಪಿಕೊಂಡಂತೆ ಕಾಣುತ್ತದೆ.

ಒಂದೇ ಕಾಲದಲ್ಲಿ ಬಿಡುಗಡೆಯಾದ ಸಂಸ್ಕಾರ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಬಗ್ಗೆ ಸಾಕ್ಷಿಯಲ್ಲಿ ತಲಾ ಎಷ್ಟೆಷ್ಟು ಲೇಖನಗಳು ಪ್ರಕಟವಾಗಿವೆ ಸ್ವಲ್ಪ ನೋಡಿ ಎಂದು ಬನ್ನಾಡಿ ಹೇಳಿದರೆ, ರಾಜಶೇಖರ್ ಮುಗುಮ್ಮಾಗಿ ಮಲೆಗಳಲ್ಲಿ ಮದುಮಗಳುವಿನ ಸಾಹಿತ್ಯ ಶ್ರೇಷ್ಠತೆ ಪ್ರಶ್ನಾತೀತಾವಾಗಿತ್ತು ಎಂದು ತಾವೀಗ ಸರ್ಟಿಫಿಕೇಟ್ ಕೊಟ್ಟು, ಸಂಸ್ಕಾರದ ಬಗ್ಗೆ ಲೇಖನಗಳ ಮಹಾಪೂರವೇ ಹರಿದು ಬರಲು ಅದು ಉಂಟು ಮಾಡಿದ ಕೋಲಾಹಲವೇ ಕಾರಣವೆಂದು ಹೇಳುತ್ತಾರೆ. ಎಂತಹ ಕೋಲಾಹಲ, ಯಾರ ಮಧ್ಯೆ? ಅದು ಕಾದಂಬರಿಯ ಒಳಗಿಗೆ ಸಂಬಂಧಿಸಿದ್ದೋ ಅಥವಾ ಹೊರಗೆ ಮೂಡಿದ್ದೋ? ಇದನ್ನು ಮಾತ್ರ ಅವರು ಹೇಳುವುದಿಲ್ಲ! ಮಲೆಗಳಲ್ಲಿ ಮದುಮಗಳುಬಗ್ಗೆ ಹೆಚ್ಚು ಚರ್ಚೆಯಾಗದ್ದಕ್ಕೆ ಕಾರಣ, ಅದರ ವಸ್ತು ವಿವಾದಾತ್ಮಕವಾಗಿಲ್ಲದಿದ್ದುದಂತೆ! ಸಾಹಿತ್ಯ ವಿಮರ್ಶೆ ತನ್ನನ್ನು ತಾನು ಇಂತಹ ಕೋಲಾಹಲ-ವಿವಾದಗಳಿಗೆ ಗಂಭೀರವಾಗಿ ತೆತ್ತುಕೊಳ್ಳಬಹುದೆನ್ನುವುದು ಸಾಕ್ಷಿ ಹೇಳಿದ ಸಾಹಿತ್ಯ ಪಾಠವೇ ಆಗಿದ್ದರೆ, ರಾಜಶೇಖರ್ ಈ ಪತ್ರಿಕೆ ಮತ್ತು ಅಡಿಗರ ಬಗ್ಗೆ ಇನ್ನೊಂದೆಡೆ ಮಾಡುವ ಎಂತಹ ದೊಡ್ಡ ಕವಿ! ಎಂತಹ ದೊಡ್ಡ ಪತ್ರಿಕೆ! ಎಂಬ ಉದ್ಗಾರ ನಮ್ಮಲ್ಲಿ ಆಕಳಿಕೆಯನ್ನು ಮಾತ್ರ ಹುಟ್ಟಿಸಬಲ್ಲುದು.

 ಮಲೆಗಳಲ್ಲಿ ಮದುಮಗಳುವಿನಂತಹ ಮೊದಲ ನೋಟಕ್ಕೇ ಕನ್ನಡಕ್ಕೆ ಸಂಪೂರ್ಣ ಹೊಸತು ಎನ್ನಿಸುವ ಕಾದಂಬರಿ ಬಂದಾಗ ಅದರ ಹೊಸತುಗಳನ್ನು ವಿವರವಾಗಿ ಗುರುತಿಸುವ ವಿಮರ್ಶಾತ್ಮಕ ಪ್ರಯತ್ನವಿರಲಿ, ಅದರ ಬಗ್ಗೆ ಅಗತ್ಯ(ಸಂಸ್ಕಾರಕ್ಕೆ ತೋರಿದ ಹತ್ತನೇ ಒಂದು ಭಾಗದಷ್ಟಾದರೂ) ಕುತೂಹಲವನ್ನೂ ತಾಳಲಾಗಲಿಲ್ಲವೆಂದರೆ ಸಾಕ್ಷಿ ಮತ್ತು ಅದರ ಬಳಗದ ನೋಟ ಕ್ರಮದಲ್ಲೇ ಮೂಲ ದೋಷವಿದ್ದಿರಬಹುದು ಎಂಬ ಸಂದೇಹ ಈಗಲಾದರೂ ರಾಜಶೇಖರರಿಗೆ ಉಂಟಾಗಲಿಲ್ಲವೆಂದರೆ ಏನು ಹೇಳುವುದು? ರಾಜಶೇಖರ್ ಕುವೆಂಪು ಬಗೆಗೆ ಆಗ ವಿಫುಲವಾಗಿ ಬರೆದ ವಿಮರ್ಶಕರನ್ನು ವಂದಿ ಮಾಗಧರು ಎಂದು ಕರೆಯುತ್ತಾರೆ. ಎಂ.ಜಿ.ಕೃಷ್ಣಮೂರ್ತಿ ಬ್ರಾಹ್ಮಣರೂ, ಇಂಗ್ಲಿಷ್ ಅಧ್ಯಾಪಕರೂ ಆಗಿದ್ದರೂ ಕೂಡ ಕುವೆಂಪು ಅವರನ್ನು ಓದಬೇಕಾದ, ಅರ್ಥೈಸಿಕೊಳ್ಳಬೇಕಾದ ಹೊಸ ಬಗೆಗಳನ್ನು ಅನಾವರಣ ಮಾಡಿದರಂತೆ!(ರಾಜಶೇಖರ್‌ರಿಂದ ಇಂತಹ ಮಾತುಗಳನ್ನು ಕೇಳಿ ನಾನು ಗಾಬರಿಗೊಂಡಿದ್ದೇನೆ ಎಂದಷ್ಟೇ ಇಲ್ಲಿ ಹೇಳಬಲ್ಲೆ!) ಆದರೆ ಕುವೆಂಪು ಅವರನ್ನು ಓದಬೇಕಾದ, ಅರ್ಥೈಸಿಕೊಳ್ಳಬೇಕಾದ ಬಗೆಯನ್ನು ಸಕಲ ಶಾಸ್ತ್ರೀಯ ಹಿನ್ನೆಲೆ ಮತ್ತು ಸಾಹಿತ್ಯಿಕ ಒಳನೋಟಗಳೊಂದಿಗೆ ಅದ್ಭುತವಾಗಿ ನಿರೂಪಿಸಿರುವವರು ಬಹುಶಃ ರಾಜಶೇಖರ್ ಈ ವಂದಿ ಮಾಗಧರಲ್ಲಿ ಒಬ್ಬರೆಂದು ಪರಿಗಣಿಸುವ ಸುಜನಾ ಅವರೆಂಬುದು ಅವರಿಗೆ ತಿಳಿದಿರಲಾರದು. ಇದಕ್ಕೆ ಅವರು ಶೂದ್ರರೂ, ಕನ್ನಡ ಅಧ್ಯಾಪಕರೂ ಆಗಿರುವುದು ಕಾರಣವಿರಲಾರದು ಎಂದು ನಾನು ಭಾವಿಸಿದ್ದೇನೆ.

 ದೇಶಕಾಲ ಅದರ ಬೈಂಡ್ ಒಳಗಷ್ಟೇ ಇಲ್ಲ, ಅದರ ಹೊರಕ್ಕೂ ಒಂದು ಭಾವುಕ ಕೂಟವಾಗಿ ಚಾಚಿಕೊಂಡಿದೆ ಎಂದು ಬನ್ನಾಡಿ ಹೇಳಿದರೆ, ಅದನ್ನು ಕುಚೇಷ್ಟೆಯಿಂದ ಅರ್ಥೈಸಿ ವ್ಯಂಗ್ಯವಾಡುವ ರಾಜಶೇಖರ್; ತೇಜಸ್ವಿ ನಿಧನರಾದ ಸಂದರ್ಭದಲ್ಲಾದರೂ ಅವರ ಬಗ್ಗೆ ಈ ಪತ್ರಿಕೆಯಲ್ಲಿ ಒಂದು ಲೇಖನವೂ ಬರಲಿಲ್ಲವೇಕೆ(ನನ್ನ ಪ್ರಕಾರ ಈ ಪ್ರಶ್ನೆಯೇ ಅಸಂಗತ.) ಎಂದು ಕೇಳಿದಾಗ ಮಾತ್ರ ಎಚ್ಚರದಪ್ಪಿಯೋ ಏನೋ(ಪಾಪ, ಅವರನ್ನು ಇಷ್ಟು ಕಾಡಿದರೆ ಇನ್ನೇನಾದೀತು!) ಟಿ.ಪಿ.ಅಶೋಕ೭ ತೇಜಸ್ವಿ ಬಗ್ಗೆ ಪ್ರತ್ಯೇಕ ಪುಸ್ತಕವನ್ನೇ ಬರೆದಿಲ್ಲವೇ, ಅವರ ಸಾಹಿತ್ಯದ ಬಗ್ಗೆ ನೀನಾಸಂ ಅನೇಕ ಅಧ್ಯಯನ ಶಿಬಿರಗಳನ್ನು ನಡೆಸಿಲ್ಲವೇ ಎಂದು ಕೇಳುತ್ತಾರೆ! ಇನ್ನು ಬನ್ನಾಡಿಯವರು ಇದೇ ಟಿ.ಪಿ.ಅಶೋಕರ ತಥಾಕಥಿತ ವಿಮರ್ಶಾ ರಾಜಕಾರಣದ ಪ್ರಸ್ತಾಪ ಮಾಡಿದರೆ, ಫಣಿರಾಜರು ಅನಾಮತ್ತಾಗಿ ಅವರ ರಕ್ಷಣೆಗೆ ಧಾವಿಸಿ, ಅವರು ಇದೀಗ ತಾನೇ ಎಚ್.ಎಸ್.ಶಿವಪ್ರಕಾಶ್ ಅವರ ಸಮಗಾರ ಭೀಮವ್ವ ಪದ್ಯವನ್ನು ಸಂಯುಕ್ತ ಕರ್ನಾಟಕದಲ್ಲಿ ಕನ್ನಡದ ಶ್ರೇಷ್ಠ ಪದ್ಯವೆಂದು ಗುರುತಿಸಿದ್ದಾರಲ್ಲಾ ಎಂದು ಉತ್ತರಿಸುತ್ತಾರೆ! (ಈ ಇಡೀ ಸಂದರ್ಭ, ನಾವು ಶಾಲಾ ಕಾರ್ಯಕ್ರಮಗಳಲ್ಲಿ ನೋಡಿ ನಲಿಯುತ್ತಿದ್ದ, ಏನೋ ಕೇಳಿದರೆ ಏನೋ ಉತ್ತರಿಸುವ ಕಿವುಡು ಬ್ರಾಹ್ಮಣರ ಪ್ರಹಸನ ನೆನಪಿಗೆ ಬರುತ್ತದೆ!) ಆದರೆ ಈ ವಿಶೇಷಾಂಕದಲ್ಲಿ ಎಚ್.ಎಸ್.ಶಿವಪ್ರಕಾಶರ ಪದ್ಯವೇಕಿಲ್ಲ(ಎಂಬ ಮತ್ತೊಂದು ಅಸಂಗತ) ಪ್ರಶ್ನೆಗೆ ಉತ್ತರ ಕೊಡುವಾಗ, ಶಿವಪ್ರಕಾಶ್ ತಮ್ಮದೇ ಕಾರಣಗಳಿಗಾಗಿ ದೇಶಕಾಲಕ್ಕೆ ಬರೆಯಬೇಕೆಂಬ ಕೋರಿಕೆಯನ್ನು ನಿರಾಕರಿಸಬಹುದು ಎಂಬ ಅನುಮಾನ ಯಾರಿಗೂ ಬಾರದಂತೆ ಇವರು ವಹಿಸಿರುವ ಎಚ್ಚರಿಕೆ ಮಾತ್ರ ಗಮನಾರ್ಹವಾಗಿದೆ!

ಇದೇ ರೀತಿಯಲ್ಲಿ ವಾದ ಮುಂದುವರೆಸುತ್ತಾ, ಜಯಂತ ಕಾಯ್ಕಿಣಿಯವರು ಲೇಖಕರನ್ನು ಪರಿಚಯಿಸುವ ರೀತಿಯ ಬಗ್ಗೆ ಟೀಕೆ ಮಾಡಿದವರನ್ನು, ಅವರಿಗೆ ಅದರಲ್ಲೇ ಇರುವ ಜಯಂತರ ಕೋಮಲ ಗಾಂಧಾರವೆಂಬ ಒಳ್ಳೆಯ ಕಥೆ ಕಾಣುವುದಿಲ್ಲವೇಕೆ ಎಂದು ರಾಜಶೇಖರ್ ಪ್ರಶ್ನಿಸುತ್ತಾರೆ. ನಿಜ ರಾಜಶೇಖರ್, ಜಯಂತರ ಈ ಕಥೆ ಚೆನ್ನಾಗಿದೆ;ತುಂಬಾನೇ ಚೆನ್ನಾಗಿದೆ. ಆದರೆ ಅದು ಅವರು ಲೇಖಕರನ್ನು ಪರಿಚಯಿಸುವ ಹುಸಿ ರೀತಿ ನೀತಿಗಳನ್ನು ರದ್ದು ಮಾಡಿಬಿಡುವುದೇ? ಒಂದು ಗಂಭೀರ ಸಾಹಿತ್ಯ ಸಂಚಿಕೆಯಲ್ಲಿ ಲೇಖಕರ ಪರಿಚಯವನ್ನೂ ವಿಮರ್ಶೆಯ ಜವಾಬ್ದಾರಿಯಿಂದಲೇ ಮಾಡಬೇಕಾಗುತ್ತದೆ;ಸಿನೆಮಾ ಹಾಡಿನ ಹುಸಿ ಶೈಲಿ ಅವರ ಸಾಹಿತ್ಯಿಕ ಪ್ರಾಮಾಣಿಕತೆಯನ್ನೇ ಅನುಮಾನಾಸ್ಪದಗೊಳಿಸಬಲ್ಲುದಾಗಿದೆ. ಹೀಗೆ ರಾಜಶೇಖರ್(ಜೊತೆಗೆ ಫಣಿರಾಜ್) ತಾವು ಇಲ್ಲವೆಂದು ಹೇಳುವ ಭಾವುಕ ಕೂಟ ಭಾವುಕ ನೆಂಟಸ್ತಿಕೆ ಇತ್ಯಾದಿಗಳು ಇದ್ದರೂ ಇರಬಹುದೇನೋ ಎಂಬ ಅನುಮಾನವನ್ನು ಓದುಗರಲ್ಲಿ ಹುಟ್ಟಿಸುವ ರೀತಿಯಲ್ಲಿ ವಾದ ಮಾಡುವುದನ್ನು ಕಂಡು ಪರಮಾಶ್ಚರ್ಯವಾಗುತ್ತದೆ.

ಈ ಮೊದಲೇ ಹೇಳಿದಂತೆ, ಚರ್ಚೆ ಎಂದರೆ ಕೋರ್ಟು ಕಛೇರಿಗಳ ನಡಾವಳಿ ಎಂಬಂತೆ, ಅದರಲ್ಲಿ ಅನ್ನಿಸಿಕೆ-ಅಭಿಪ್ರಾಯಗಳಿಗೆ ಅವಕಾಶವೇ ಇಲ್ಲವೆಂದು ಸಾರುತ್ತಾ, ರಾಜಶೇಖರ್ ಎಲ್ಲದಕ್ಕೂ ಪಠ್ಯದ ಸಾಕ್ಷ್ಯ ಕೇಳುತ್ತಾರೆ. ಆದರೆ ತಾವು ಮಾತ್ರ ದೇಶಕಾಲದ ವಿಶೇಷಾಂಕವನ್ನು, ಅದರ ಚಿಲ್ಲರೆ ಮಾರಾಟಗಾರರಂತೆ ಅದರ ಪರಿವಿಡಿಯನ್ನು ಪಟಪಟನೆ ಹೇಳಿ, ಇಷ್ಟು ತಿಳಿದರೆ ಸಾಕು, ಯಾರಿಗಾದರೂ ಇದು ಯಾವುದೇ ದೀಪಾವಳಿ ವಿಶೇಷಾಂಕಕ್ಕೆ ಹೋಲಿಸಿದರೂ ವಿಶಿಷ್ಟವಾಗಿ ನಿಲ್ಲುತ್ತದೆ ಎಂದು ಗೊತ್ತಾಗಲು! ಎಂಬಂತೆ ಒಂದೇ ವಾಕ್ಯದಲ್ಲಿ ತೀರ್ಪು ಘೋಷಿಸಿಬಿಡುತ್ತಾರೆ!(ತಾವೇ ಹೇರುವ ಚರ್ಚೆಯ ನಿರ್ಬಂಧಗಳು ಇಲ್ಲಿ ಅವರ ಅರಿವಿಗೆ ಬಂದಿದೆ ಎಂದು ಭಾವಿಸೋಣ!) ಇನ್ನು ಬನ್ನಾಡಿಯವರು ನೀನಾಸಂ ಆವರಣದಲ್ಲಿ ತಮಗೆ ಉಸಿರುಗಟ್ಟಿದಂತಾಗುತ್ತದೆ ಎಂದರೆ, ರಾಜಶೇಖರರು ಅದಕ್ಕೂ ಪಠ್ಯದ ಸಾಕ್ಷ್ಯ ಕೇಳಲು ಹವಣಿಸುತ್ತಾರೆಂದರೆ ಏನು ಹೇಳುವುದು? ರಾಜಶೇಖರರಿಗೆ ಚರ್ಚೆಯಲ್ಲಿ ರೂಪಕ ಭಾಷೆಯೂ ನಿಷಿದ್ಧವೇ? ಇರಲಿ, ಇನ್ನು ಮುಂದೆ ಬನ್ನಾಡಿಯವರಿಗೆ ಎಂದಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನಿಸಿ, ಅದಕ್ಕಾಗಿ ಉಸಿರುಗಟ್ಟಿ ಸಾಯುವ ಮಾರ್ಗವನ್ನೇ ಆಯ್ದುಕೊಂಡು ನೀನಾಸಂಗೆ ಹೋದರೆ, ರಾಜಶೇಖರರಿಗೆ ಸಾಕ್ಷ್ಯ ಒದಗಿಸುವ ದೃಷ್ಟಿಯಿಂದಲಾದರೂ ಜೊತೆಯಲ್ಲಿ ವೈದ್ಯರೊಬ್ಬರನ್ನು ಕರೆದುಕೊಂಡು ಹೋಗುವುದು ಒಳ್ಳೆಯದು!

                                         -೫-
ಕೊನೆಗೆ ರಾಜಶೇಖರ್ ಸಾಹಿತ್ಯ ನೆಲೆಯ ಚರ್ಚೆಯಿಂದ ಸುಸ್ತಾದವರಂತೆ ಸಾಮಾಜಿಕ ನೆಲೆಗೆ ಹೊರಳುತ್ತಾರೆ. ಬಸವಣ್ಣನ ಉದಾಹರಣೆ ಕೊಟ್ಟು, ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ನಡುವೆ ವ್ಯತ್ಯಾಸವೇ ಇಲ್ಲವೇ ಎಂದು (ಎಚ್ಚೆಸ್ವಿಯವರ ವಾದದ ಬೆಂಬಲದೊಂದಿಗೆ) ಆಶ್ಚರ್ಯಪಡುತ್ತ್ತ್ತಾ, ಬ್ರಾಹ್ಮಣನಿಗೆ ಬದಲಾಗುವ ಸಾಧ್ಯತೆಗಳನ್ನೇ ಅಲ್ಲಗೆಳೆಯಲಾಗುತ್ತಿದೆಯೇ ಎಂದು ಕೇಳಿದಾಗ ಮಾತ್ರ ನಿಜವಾಗಿಯೂ ಬೇಸರವೆನಿಸುತ್ತದೆ. ಆದರೆ, ಬ್ರಾಹ್ಮಣರನ್ನು ಹೀಗೇ ಕಾಡಿದ ಲೋಹಿಯಾವಾದಿಗಳು ನೇಪಥ್ಯಕ್ಕೆ ಸರಿದ ಮೇಲೆ ಬನ್ನಾಡಿಯಂಥವರು ಆ ಕೆಲಸವನ್ನು ಕೈಗೆತ್ತಿಕೊಂಡಂತಿದೆ ಎಂದು ಅವರು ಹೇಳಿದಾಗ, ಈ ಬೇಸರ ಮರುಕವಾಗಿ ಮಾರ್ಪಡುತ್ತದೆ. ಅದೇನೇ ಇರಲಿ, ಅಂತೂ ಈ ಮೂಲಕ ರಾಜಶೇಖರ್ ನೇಪಥ್ಯಕ್ಕೆ ಸರಿದಿರುವುದು ಲೋಹಿಯಾವಾದಿಗಳೇ ಹೊರತು ಲೋಹಿಯಾವಾದವಲ್ಲ ಎಂಬುದನ್ನು ಗುರುತಿಸಿದ್ದಾರೆ. ಅದಕ್ಕಾಗಿ ಲೋಹಿಯಾವಾದಿಗಳೆನಿಸಿಕೊಂಡವರೆಲ್ಲರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜೊತೆಗೆ, ಇದಕ್ಕೆಲ್ಲ ಕಾರಣ; ಲೋಹಿಯಾ ಎತ್ತಿದ್ದ ಜಾತಿ ಪದ್ಧತಿಯ ಹಿಂದಿನ ರಾಜಕಾರಣದ ಸಂಕೀರ್ಣ ಪ್ರಶ್ನೆ ಕನ್ನಡ ಸಾಹಿತ್ಯ-ಸಂಸ್ಕೃತಿ ಸಂದರ್ಭದಲ್ಲಿ ಇನ್ನೂ ಸಂಪೂರ್ಣ ಪರಿಹಾರವಾಗದಿರುವುದೇ ಆಗಿದೆ ಎಂದು ರಾಜಶೇಖರ್‌ಗೆ ತಿಳಿಸಬಯಸುತ್ತೇನೆ.
   
ಈ ಪರಿಸ್ಥಿತಿಗೆ ಸಾಮಾಜಿಕ ನ್ಯಾಯವನ್ನು ಕೇವಲ ಕೆಳಜಾತಿವಾದವಾಗಿ ಮಾರ್ಪಡಿಸಿದ ಹಿಂದುಳಿದ ಜಾತಿಗಳ ಕಳ್ಳ ಪ್ರಗತಿಪರರು ಎಷ್ಟು ಕಾರಣರೋ(ಬರಗೂರು ರಾಮಚಂದ್ರಪ್ಪನವರ ಇಲ್ಲಿನ ಪ್ರತಿಕ್ರಿಯೆಯ ಪ್ರಕಾರ, ಕರ್ನಾಟಕದ ಮಟ್ಟಿಗೆ ಮೇಲ್ಜಾತಿ ಮತ್ತು ಮಧ್ಯಮ ಪ್ರಬಲ ಜಾತಿಗಳ ನಾಯಕತ್ವದ ಮನಸ್ಸು ಮಲಿನಗೊಂಡಿದೆ. ಆಹಾ! ಒಂತಹ ಒಕ್ಕಣ್ಣಿನ ಸತ್ಯ!) ಅಷ್ಟೇ ಕಾರಣರು, ಎಚ್ಚೆಸ್ವಿಯವರು ವಿವರಿಸುವಂತಹ ನವೋದಯ ಸಾಹಿತಿಗಳು ಜಾತಿ ಮೀರಿದ ಮಾದರಿಯನ್ನು ಎತ್ತಿ ಹಿಡಿಯುತ್ತಾ ಜನಿವಾರಗಳನ್ನು ಸಂದರ್ಭಾನುಸಾರ ಬಿಚ್ಚಿ ಹಾಕಿಕೊಳ್ಳುವ(ಹಾಗೂ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ತಾವೇ ಮುಂದೆ ನಿಂತು ಹಾಕಿಸುವ) ಆತ್ಮದ್ರೋಹಿ ಬ್ರಾಹ್ಮಣ ಬಂಡಾಯಗಾರರೂ ಕಾರಣ. ಅನಂತಮೂರ್ತಿಯವರಂತಹ ಅನಂತಮೂರ್ತಿಯವರೇ ಈಗ ನಮ್ಮ ಜಾತಿ ವಿರೋಧಿ ಆಂದೋಲನ(ಅಂತಹುದೇನಾದರೂ ಈಗ ಇದ್ದರೆ!) ಜಾತಿಗಳು ಸೃಷ್ಟಿಸಿದ ಸಾಂಸ್ಕೃತಿಕ ನೆಲೆಗಳ ವೈವಿಧ್ಯಗಳ ನಾಶಕ್ಕೆ ಕಾರಣವಾಗಬಾರದು ಎಂದು ಕರೆ ಕೊಡಬಲ್ಲಂತಹ ತಲೆಕೆಳಗಾದ ಸೌಂದರ್ಯ ಕಲ್ಪನೆಯನ್ನು(ಜಾತಿಯಿಂದ ಈ ಸಾಂಸ್ಕೃತಿಕ ವೆವಿಧ್ಯವೋ ಅಥವಾ ಈ ಸಾಂಸ್ಕೃತಿಕ ವೈವಿಧ್ಯದಿಂದ ಜಾತಿಯೋ?) ಕಟ್ಟಿಕೊಡಬಲ್ಲರೆಂದರೆ, ಬ್ರಾಹ್ಮಣ್ಯವೆಂಬುದು ಯಾವ ಯಾವಾಗ ಯಾವ್ಯಾವ ರೂಪಗಳನ್ನು ತಾಳಬಲ್ಲುದೆಂಬುದನ್ನು ರಾಜಶೇಖರ್ ಯೋಚಿಸಬಲ್ಲರೆ?೮

ಇಷ್ಟೆಲ್ಲ ಪ್ರಶ್ನೆ-ಗೊಂದಲಗಳು ಇನ್ನೂ ಉಳಿದಿರುವಾಗ, ಅಡಿಗ-ಸುಬ್ಬಣ್ಣ-ಅನಂತಮೂರ್ತಿ ಒಂದು ದೀರ್ಘಾವಧಿಯವರೆಗೆ ಪರಸ್ಪರ ಬೆನ್ನು ಕೆರೆದುಕೊಂಡಿದ್ದನ್ನು ಕಂಡವರಲ್ಲಿ(ಸುಬ್ಬಣ್ಣ ಅವರು ಅನಂತಮೂರ್ತಿಯವರ ಮೊದಲ ಮೂರು ಕಾದಂಬರಿಗಳನ್ನು ತ್ರಿವಳಿಯಾಗಿ ನೋಡಿ ಬರೆದಿರುವ ದೀರ್ಘ ಲೇಖನವನ್ನು ಗಮನಿಸಿರುವವರಿಗೆ ವಿಮರ್ಶೆಯಲ್ಲಿ ಕಲ್ಪನೆಗೂ ಎಷ್ಟು ಅಗಾಧ ಅವಕಾಶವಿದೆ ಎಂದು ಆಶ್ಚರ್ಯವಾಗುತ್ತದೆ!) ಕೆಲ ಜಾತಿ ಜನಗಣತಿವಾದಿಗಳಿಗೆ ಅದರಲ್ಲಿ ದೂರದಲ್ಲಾದರೂ ಜಾತಿ ಗೋಚರವಾದರೆ ಆಶ್ಚರ್ಯವೇನು? ಈಗಲೂ ಅಕ್ಷರ ಪ್ರಕಾಶನದ ಪ್ರಕಟಣೆಗಳ ಪಟ್ಟಿ ನೋಡಿದರೆ, ಅದರಲ್ಲಿ ಒಂದು ಜಾತಿಯ ಲೇಖಕರೇ ಪ್ರಧಾನವಾಗಿ ಗೋಚರವಾಗುತ್ತಾರೆ ಏಕೆ ಎಂದು ಯಾರಾದರೂ(ಆತ ಜಾತಿವಾದಿಯೇ ಆಗಿರಲಿ) ಕೇಳಿದರೆ, ಅದಕ್ಕೆ ಗುಣಮಟ್ಟದ ಲೇಖಕರು ಆ ಒಂದು ಜಾತಿಯಲ್ಲೇ ಹೆಚ್ಚಿದ್ದಾರೆ ಎಂದು ಯಾರಾದರೂ ಉತ್ತರ ಕೊಡಬಲ್ಲರೇ? ಅಥವಾ ರಾಜಶೇಖರ್‌ರಂತಹವರು ಅದೊಂದು ಸರ್ಕಾರಿ ಅನುದಾನಕ್ಕೆ ಕೈಯೊಡ್ಡದ ಖಾಸಗಿ ಪ್ರಕಾಶನ;ಅದಕ್ಕೆ ಈ ಪ್ರಶ್ನೆ ಹಾಕಬಾರದು ಎಂದು ಉತ್ತರ ಹೇಳುವುದರ ಜೊತೆಗೆ, ಅದರಿಂದ ನನ್ನ ಒಂದು ಪುಸ್ತಕವೂ ಪ್ರಕಟವಾಗಿರುವುದರಿಂದ ಅವರ ಪರವಾಗಿ ಉತ್ತರ ಕೊಡುವುದು ನನ್ನ ಜವಾಬ್ದಾರಿ ಎಂದೂ ಸೇರಿಸುವರೋ?  ವಿಜಯ ಕರ್ನಾಟಕದ ಪ್ರತಾಪ ಸಿಂಹ ತನ್ನ ಪಂಥಕ್ಕೆ ವಿರುದ್ಧವಾದವರ ಮೇಲೆಲ್ಲ ಕೆಸರೆರಚುತ್ತಿದ್ದಾಗ ಸುಮ್ಮನಿದ್ದ ಫಣಿರಾಜರಂತಹವರು, ಅದೊಮ್ಮೆ ಅನಂತಮೂರ್ತಿಯವರ ಮೇಲೆ ಬಿದ್ದಾಗ ಮಾತ್ರ ಹೌಹಾರಿ ಸಹಿ ಸಂಗ್ರಹಕ್ಕೆ ಮುಂದಾಗುತ್ತಾರೆಂದರೆ(ಈ ಸಂಬಂಧ ನನ್ನ ಸಹಿಗಾಗಿ ಫಣಿರಾಜ್ ಅಂತರ್ಜಾಲದ ಮೂಲಕ ನನ್ನೊಂದಿಗೆ ನಡೆಸಿದ ವಾಗ್ವಾದ ಇಂತಹ ಇನ್ನೊಂದು ಚರ್ಚೆಗೆ ಕಾರಣವಾಗಬಹುದಷ್ಟು ದೊಡ್ಡದಾಗಿದೆ!) ಅದನ್ನು ಏನೆಂದು ಅರ್ಥೈಸುವುದು? ಇದಕ್ಕೆ ಬಹುಶಃ ಇವರು ತಮ್ಮ ವಾದಗಳನ್ನು ವಿಷದೀಕರಿಸಲು ಆಗಾಗ್ಗೆ ಉಲ್ಲೇಖಿಸುವ ಚೋಮ್‌ಸ್ಕಿಯಾಗಲೀ, ಫ್ಯುಕೋ ಆಗಲೀ ವಾಲ್ಟರ್ ಬೆಂಜಮಿನ್ ಆಗಲೀ ಉತ್ತರಿಸಲಾರರು!

                                          -೬-
ಉತ್ತರ, ಕಾಣಬಲ್ಲವರಿಗೆ; ಫಣಿರಾಜರು ತಮ್ಮ ವಾಗ್ವಾದ ಚರಿತೆಯಲ್ಲಿ ಕನ್ನಡದ ಮುಖ್ಯ ವಾಗ್ವಾದಗಳಲ್ಲೊಂದು ಎಂದು ಹೆಸರಿಸುವ ತೇಜಸ್ವಿಯವರ ಒಕ್ಕೂಟದ ಭಾಷಣವೆಂದೇ ಪ್ರಸಿದ್ಧವಾದ ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆಯಲ್ಲಿದೆ ಎಂದರೆ ಈ ಗೆಳೆಯರು ಒಪ್ಪಲಾರರು. ಅದು ಪೂರ್ಣ ಬ್ರಾಹ್ಮಣ ವಿರೋಧಿ ಎಂದಲ್ಲದಿದ್ದರೂ, ಜಾತಿ ಕೇಂದ್ರಿತ ವಿಶ್ಲೇಷಣೆ ಎಂದು ಅವರು ಹೇಳಿಯಾರು. ಹೇಳಿಯಾರು ಎಂಬ ಪದಪ್ರಯೋಗ ಏಕೆ ಮಾಡಿರುವೆನೆಂದರೆ, ತೇಜಸ್ವಿಯವರ ಬಹು ಮುಖ್ಯ ಲೇಖನವೆಂದು ನಾನು ಪರಿಗಣಿಸಿರುವ ಇದರ ಬಗ್ಗೆ ನನಗೆ ತಿಳಿದ ಮಟ್ಟಿಗೆ ಈವರೆಗೆ ಯಾರೂ(ತೇಜಸ್ವಿ ಬಗ್ಗೆ ವಿಫುಲವಾಗಿ, ವಿಸ್ತಾರವಾಗಿ ಬರೆದಿರುವರೆಂದು ಹೇಳಲಾಗುವವರೂ ಸೇರಿದಂತೆ) ಏನೂ ಹೇಳಿಲ್ಲ! ಈ ದೃಷ್ಟಿಯಿಂದ ಫಣಿರಾಜರು ಈ ತೇಜಸ್ವಿ ಲೇಖನವನ್ನು ವಾಗ್ವಾದವೆಂದು ಭವ್ಯವಾಗಿ ಕರೆದಿರುವುದೇ ಒಂದು ತಮಾಷೆ. ಏಕೆಂದರೆ, ಅದು ಪ್ರಕಟವಾದ ೩೮ ವರ್ಷಗಳ ನಂತರವೂ ನಮ್ಮ ವಿಶ್ವವಿದ್ಯಾಲಯಗಳೊಳಗಿನ ಮತ್ತು ಹೊರಗಿನ ಅಧಿಕೃತ ಸಂಸ್ಕೃತಿ ಚಿಂತಕರ ನಡುವೆ ಅದು ಚರ್ಚೆಗೆ ಬರುವುದಿರಲಿ, ಪ್ರಸ್ತಾಪಕ್ಕೂ ಬಂದಿಲ್ಲ! ಅದು ಸ್ಥಾಪಿತ ಕನ್ನಡ ಸಾಹಿತ್ಯ-ಸಂಸ್ಕೃತಿ ಸಂಕಥನದ ಆಧಾರಗಳನ್ನೇ, ಅದನ್ನು ಏಕಪಕ್ಷೀಯವಾಗಿ ಪೋಷಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯಗಳೊಳಗಿನ ಮತ್ತು ಹೊರಗಿನ ಸ್ಥಾಪಿತ ಹಿತಾಸಕ್ತಿಗಳ ಬುಡಗಳನ್ನೇ ಅಲ್ಲಾಡಿಸಬಲ್ಲ ರೀತಿಯಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚರಿತ್ರೆಯನ್ನು ಸ್ಫೋಟಕವೆನ್ನಿಸುವ ನೆಲೆಗಳಲ್ಲಿ ಪುರ್ನನಿರೂಪಿಸುವ ಒಂದು ದೊಡ್ಡ ತಾತ್ವಿಕ ಪ್ರಯತ್ನ ಮಾಡುತ್ತದೆ ಎಂಬುದೇ ಅದಕ್ಕೆ ಕಾರಣ ಎಂದು ನಾನು ಭಾವಿಸಿದ್ದೇನೆ.

 ತೇಜಸ್ವಿ ಇಲ್ಲಿ ಜಾತಿಯನ್ನು ಕೇವಲ ಸಾಮಾಜಿಕ ಶ್ರೇಣೀಕರಣದ ನೆಲೆಯಲ್ಲಿ ನೋಡದೆ, ಅದು ಹೇಗೆ ಬದುಕಿನ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ಕ್ರಮಗಳೂ ಸೇರಿದಂತೆ ಸರ್ವ ಸೂಕ್ಷ್ಮಗಳನ್ನೂ ನಿಯಂತ್ರಿಸುವ ಒಂದು ರಾಜಕೀಯ ತಂತ್ರವಾಗಿ;ಆದರೆ ಪ್ರಾಚೀನ ತತ್ವ ಪರಂಪರೆಯ ಮಾರುವೇಷದಲ್ಲಿ ಕ್ರಿಯಾಶೀಲವಾಗಿದೆ ಎಂಬುದನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಇದರ ಭಾಗವಾಗಿ, ನವ್ಯ ಸಾಹಿತ್ಯದ ಒಂದು ಮಾದರಿ ಚಿಂತನೆಯನ್ನಿಟ್ಟುಕೊಂಡು (ಯು.ಆರ್.ಅನಂತಮೂರ್ತಿಯವರ ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಲೇಖಕ) ಸಮಕಾಲೀನ ಸಂದರ್ಭದಲ್ಲಿನ ಅದರ ಆಟ-ಪಾಠಗಳನ್ನು ಅನನ್ಯ ಒಳನೋಟಗಳೊಂದಿಗೆ ವ್ಯಾಖ್ಯಾನಿಸುತ್ತಾರೆ. ಆ ಮೂಲಕ ಅವರು ಇಂದಿನ ಆಧುನಿಕ ಸಂದರ್ಭದಲ್ಲಿ ಜಾತಿಯನ್ನು ಅದರೆಲ್ಲ ವೇಷಭೂಷಣಗಳೊಂದಿಗೆ ಮಾತ್ರವಲ್ಲ, ನಮ್ಮ ಬದುಕಿನ ಸರ್ವಾಂಗಗಳಲ್ಲೂ ಆಳಕ್ಕಿಳಿದಿರುವ ಅದರ ಬೇರುಗಳೊಡನೆ ಕಿತ್ತೊಗೆಯಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಇದರ ಹೊರತಗಾಗಿ ಸಾಹಿತ್ಯ-ಸಂಸ್ಕೃತಿ-ಧರ್ಮಗಳೂ ಸೇರಿದಂತೆ ನಮ್ಮ ಬದುಕಿನ ಒಟ್ಟು ರಾಜಕೀಯವೇ ಇಂದಿನ ವಿಕ್ಷಿಪ್ತತೆಗಳಿಂದ ಸುತರಾಂ ಹೊರಬರಲಾರದು ಎಂಬುದನ್ನು ಒಂದು ಹೊಸ ತತ್ವದರ್ಶನದ ರೂಪದಲ್ಲಿ ಮಂಡಿಸುತ್ತಾರೆ.೧೦

ಮೇಲ್ನೋಟಕ್ಕೆ ಇದು, ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ವೈದಿಕ ಸಂಸ್ಕೃತಿ ಬೀಸುತ್ತಿರುವ ಏಕರೂಪಿ ಆಯ್ಕೆ ಮತ್ತು ಅಭಿರುಚಿಗಳ ಜಾಲದ ಬಗೆಗಿನ ತನ್ನ ತೀಕ್ಷ್ಣ ನೋಟ ಮತ್ತು ಮಾತುಗಳಿಂದಾಗಿ; ಬ್ರಾಹ್ಮಣರಾಗಿ ನೋಡಿದರೆ ಬ್ರಾಹ್ಮಣ ವಿರೋಧಿಯಾಗಿಯೂ, ಶೂದ್ರರಾಗಿ ನೋಡಿದರೆ ಶೂದ್ರ ಪರವಾಗಿಯೂ ಕಾಣುತ್ತದೆ. ಆದರೆ ಈ ಎರಡೂ ನೋಟಗಳನ್ನು ಧಿಕ್ಕರಿಸಿ ನೋಡಬಲ್ಲವರಿಗೆ, ಅದು ಜಾತಿ ವಿರೋಧಿಯಾಗಿ ತನ್ನ ಸಂಸ್ಕೃತಿ ವಿಶ್ಲೇಷಣೆಯನ್ನು ಮಂಡಿಸುತ್ತಾ ಭಾರತದ ಬದುಕಿನ ಜೀವಸತ್ವವಾದ ಬಹು ಸಂಸ್ಕೃತಿಯ ಸಮಾಜಕ್ಕಾಗಿ ಹಂಬಲಿಸುತ್ತಿರುವುದು ಗೊತ್ತಾಗುತ್ತದೆ. ಆದರೆ ನಮ್ಮ ಸಮಾಜ ತೇಜಸ್ವಿ ಹೇಳುವ ಅರ್ಥದಲ್ಲಿನ ಜಾತಿ ವಿರೋಧಿ ನಿಲುವನ್ನು ತಳೆಯಲಾಗದೆ, ಸದಾ ವೇಷ ಮತ್ತು ಭಾಷೆಗಳನ್ನು ಬದಲಾಯಿಸುತ್ತಾ ತನ್ನ ಬೌದ್ಧಿಕ ನಾಯಕತ್ವವನ್ನು ಭದ್ರ ಮಾಡಿಕೊಳ್ಳುತ್ತಾ ಹೋಗುತ್ತಿರುವ ಬ್ರಾಹ್ಮಣ ಪುರೋಹಿತಶಾಹಿಯ ರಾಜಕಾರಣ ಹಾಗೂ ಆದಷ್ಟೂ ತನ್ನ ಜಾತಿಗಷ್ಟೇ ಲೌಕಿಕ ಲಾಭಗಳನ್ನು ಗೆಬರಿಕೊಳ್ಳಲು ಹವಣಿಸುವುದರಾಚೆಗೆ ಬೆಳೆಯಲು ನಿರಾಕರಿಸುತ್ತಿರುವ ಸಾಮಾಜಿಕ ನ್ಯಾಯದ ವಿಷವ್ಯೂಹಕ್ಕೆ ಸಿಕ್ಕ ಶೂದ್ರ ರಾಜಕಾರಣಗಳಿಂದಾಗಿ; ಎಂದೂ ಮುಗಿಯಲಾರದ ಜಾತಿ ಸಂಘರ್ಷದ ಮನೋಸ್ಥಿತಿಯಲ್ಲೇ ತೊಳಲಾಡುವಂತಹ ಪರಿಸ್ಥಿತಿಗೆ ಈಡಾಗಿದೆ. ಇದರಿಂದಾಗಿ ಈ ಚಿಂತನೆ ಬ್ರಾಹ್ಮಣ ವಿರೋಧಿ ಮತ್ತು ಶೂದ್ರಪರವೆಂಬ ಎರಡು ಜಾತಿವಾದಿ ನೋಟಗಳಿಗಷ್ಟೇ ಸಿಗುತ್ತಾ ಕಳೆದು ಹೋಗಿದೆ. ದೇಶಕಾಲ ಕುರಿತ ಸದರಿ ಚರ್ಚೆಯಲ್ಲೂ ನಾನು ಕಾಣುವುದು ಈ ಪರಿಸ್ಥಿತಿಯನ್ನೇ. ಹಾಗಾಗಿ ಅದು ಇನ್ನೊಂದು ಎಂದೂ ಮುಗಿಯಲಾರದ ಚರ್ಚೆಯಾಗಿಯೇ ಉಳಿಯುವ ಅಪಾಯವನ್ನು ಎದುರಿಸುತ್ತಿರುವುದು.

ನಿಜ, ಡಿ.ಆರ್.ನಾಗರಾಜರು ರೂಪಿಸದ್ದೆಂದು ಹೇಳಲಾಗುವ ಸಂಸ್ಕೃತಿ ಚಿಂತನೆಯ ಹಿಂದೆ ಇದರ (ಋಣ ನೆನೆಯದ) ಗಾಢ ಪ್ರಭಾವವನ್ನು ಕಾಣಬಹುದು. ಆದರೆ ಅವರ ಈ ಸಂಸ್ಕೃತಿ ಚಿಂತನೆ ತನಗೊಲ್ಲದ/ಸಲ್ಲದ ಮಹತ್ವಾಕಾಂಕ್ಷೆಯೊಂದಿಗೆ ಸೀಮೋಲ್ಲಂಘನೆ ಮಾಡಿ ವಿಶ್ವಾತ್ಮಕ ನೆಲೆಗಳಿಗೆ ಮತ್ತು ಪರಿಭಾಷೆಗೆ ವಿಸ್ತರಿಸಿಕೊಂಡಿದ್ದರಿಂದ, ಅದರೊಳಗಿನ ತೇಜಸ್ವಿ ಚಿಂತನೆಯ ಬೇರುಗಳು ನೆಲ ಕಳಚಿಕೊಂಡಂತಾಗಿವೆ. ಹಾಗಾಗಿ, ಅದು ಯಾವ ನೆಲೆಗಳಲ್ಲಿ ತನ್ನ ನಿಜವಾದ ಪ್ರಸ್ತುತತೆಯನ್ನೂ, ವಿಸ್ತರಣೆಯನ್ನೂ, ಪರಿಣಾಮಶೀಲತೆಯನ್ನೂ ಕಂಡುಕೊಳ್ಳಬೇಕಿತ್ತೋ ಅಲ್ಲಿ ಕಂಡುಕೊಳ್ಳಲಾಗದಾಗಿದೆ. ಆದರೆ ಇಂದು ಆ ಸಾಧ್ಯತೆಗೆ ಅವಕಾಶಗಳು ತೆರೆದುಕೊಂಡಂತಿದೆ. ಏಕೆಂದರೆ, ಈಗ ಪ್ರಧಾನವಾಗಿ ತೇಜಸ್ವಿ ಕಟ್ಟಿದ ಪರಂಪರೆ ಎಂದೇ ಗುರುತಿಸಬಹುದಾದ ರೀತಿಯಲ್ಲಿ,(ಅನಂತಮೂರ್ತಿಯವರು ತೇಜಸ್ವಿಯವರನ್ನು ಮಾರ್ಗ ಪ್ರವರ್ತಕ ಲೇಖಕ ಎಂದು ಗುರುತಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ಹೊಸ ತಲೆಮಾರಿನ ಹಲವು ಲೇಖಕರು ಸಾಹಿತ್ಯ ನಿರ್ಮಾಣಕ್ಕೆ ಸಾಮಾನ್ಯ ಸಾಮಾಜಿಕ ಪರಿಜ್ಞಾನವಷ್ಟೇ ಸಾಕೆಂಬಂತೆ (ಸಾಹಿತ್ಯ ಸಂಪ್ರದಾಯಗಳ ಭಾರದಿಂದ)ಮುಕ್ತವಾಗಿ ಬರೆಯುತ್ತಿದ್ದಾರೆ. ತೇಜಸ್ವಿ ಚಿಂತನೆ, ಹೊ ತಲೆಮಾರಿನ ಈ ಲೇಖಕರು ಜಾಗತೀಕರಣದ ಬಹುಮುಖಿ ಪರಿಣಾಮಗಳಿಂದಾಗಿ ಸದ್ಯದ ಸಾಹಿತ್ಯಿಕ-ಸಾಂಸ್ಕೃತಿಕ ಸಂದರ್ಭದಲ್ಲಿ ಎದುರಿಸುತ್ತಿರುವ ಹಲವು ತಾತ್ವಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತ್ತಾ, ಇಂದು ನಮ್ಮನ್ನು ಮತ್ತೆ ಚರ್ಚೆಗಾಗಿ ಆಹ್ವಾನಿಸುತ್ತಿರುವಂತಿದೆ. ಈ ತಲೆಮಾರಿಗೇ ಸೇರಿದ ಮಂಜುನಾಥ್ ಲತಾ-ಐಜೂರರ ಲೇಖನದ ಹಿಂದಿನ ಗೊಂದಲಗಳೂ, ಅಸಂಬದ್ಧ ಆಕ್ರೋಶಗಳೂ, ಗೋಜಲಾದ ಪ್ರಶ್ನೆಗಳೂ;ಹಾಗಿದ್ದೂ ಅದು ಹುಟ್ಟು ಹಾಕಿರುವ ಸದರಿ ಕುತೂಹಲಕರ ಚರ್ಚೆ ಇದಕ್ಕೆ ಸಾಕ್ಷಿಯಂತಿದೆ.

ಈ ಹಿನ್ನೆಲೆಯಲ್ಲಿ, ಯಾರಿಗಾದರೂ ಏಳುವ ದೊಡ್ಡ ಪ್ರಶ್ನೆಯೆಂದರೆ, ತೇಜಸ್ವಿಯವರ ಚಿಂತನೆಯನ್ನು ಸಾಮಾನ್ಯ ಸಾಮಾಜಿಕರು ಹೋಗಲಿ, ನಮ್ಮ ಲೇಖಕ-ಬುದ್ಧಿಜೀವಿಗಳಾದರೂ ಏಕೆ ಈವರೆಗೆ ಗಂಭೀರ ಪರಿಶೀಲನೆಗೆ ಒಳಪಡಿಸಿಲ್ಲ? ಅವರ ಸಾಹಿತ್ಯವನ್ನು ಅದರ ಒಟ್ಟು ತಾತ್ವಿಕತೆಯ ಅನ್ವೇಷಣೆಯಾ ಪ್ರಯತ್ನವಾಗಿ ನೋಡದೆ, ಅದನ್ನು ಸಾಹಿತ್ಯ ಪ್ರಕಾರವಾರು ವಿಂಗಡಿಸಿ ವಿಶ್ಲೇಷಿಸಿ; ಅಂತಹ ವಿಶ್ಲೇಷಣೆಗಳಿಂದ ಪಡೆದ ಸಾಮಾಜಿಕ ಮತ್ತು ಸಾಹಿತ್ಯಿಕ ರೋಮಾಂಚನಗಳಲ್ಲಿ ಮುಳುಗಿ ಹೋಗಿರುವಂತೆ ತೋರುವ ನಮ್ಮ ಪ್ರಧಾನ ಧಾರೆಯ ವಿಮರ್ಶೆ ಸಹಜವಾಗಿಯೇ, ಆ ತಾತ್ವಿಕತೆಯ ಬೇರುಗಳನ್ನು ತಡಕಲು ಹೋಗದೆ ತನ್ನ ರಾಜಕೀಯ ಆಸಕ್ತಿಗಳು ಭಂಗಗೊಳ್ಳದಂತೆ ನೋಡಿಕೊಂಡಿದೆ. ಕೆಲವರು ತಾವು ಮತ್ತೇನನ್ನೋ ಬರೆಯುವದರ ಭಾಗವಾಗಿಯಷ್ಟೇ, ನಾನು(ಬಹುಶಃ ನಾನೊಬ್ಬನೇ?) ಈ ಬಗ್ಗೆ ಬರೆದ ನಾಲ್ಕೈದು ಲೇಖನಗಳ೧೧ ಗಲಾಟೆ ತಾಳಲಾಗದೆಂಬಂತೆ, ಅಲ್ಲೊಂದು ಇಲ್ಲೊಂದು ಪ್ರತಿಕ್ರಿಯೆ ನೀಡುತ್ತ್ತಾ ಆನುಷಂಗಿಕವಾದ ಕೆಲವು ತಕರಾರುಗಳನ್ನು ಎತ್ತಿರುವುದನ್ನು ಗಮನಿಸಿದ್ದೇನೆ.(ಹಾಗೆ ನೋಡಿದರೆ ಮುಖ್ಯವಾಗಿ ಪ್ರತಿಕ್ರಿಯೆ ಬರಬೇಕಾಗಿದ್ದದ್ದು ಅನಂತಮೂರ್ತಿಯವರಿಂದ;ಆದರೆ ಬರಲಿಲ್ಲ!)

ನಿಜ, ತೇಜಸ್ವಿ ಅವರ ವಾದದಲ್ಲಿ ಕೆಲವು ತೊಂದರೆಗಳಿವೆ, ಅತಿಗಳಿವೆ. ಮುಖ್ಯವಾಗಿ ನಾನು ಗಮನಿಸಿದ್ದು, ಬಹು ನೆಲೆಗಳ ಜಾತಿವ್ಯವಸ್ಥೆಯನ್ನು ಬರಿ ಬ್ರಾಹ್ಮಣ-ಶೂದ್ರ ನೆಲೆಯಲ್ಲಿ ವ್ಯಾಖ್ಯಾನಿಸಿ ತೀರ್ಮಾನಗಳಿಗೆ ಬರುವುದು; ವೈದಿಕ ಪರಂಪರೆಯನ್ನು ಏಕಶಿಲಾಖಂಡ ರೂಪದಲ್ಲಿ ನೋಡಿ ಅರ್ಥೈಸುವ ಪ್ರಯತ್ನ ಮಾಡುವುದು; ಆಳದಲ್ಲಿ ಜೈನಕ್ಕಿಂತ ಹೆಚ್ಚಾಗಿ ಬೌದ್ಧ ಪರಂಪರೆ ಕನ್ನಡ ಸಮಾಜದ ತಾತ್ವಿಕ ಪ್ರತಿರೋಧ ಶಕ್ತಿಯನ್ನು ರೂಪಿಸಿದೆ ಎಂಬುದನ್ನು ಗುರುತಿಸದೇ ಹೋಗಿರುವುದು, ಇತ್ಯಾದಿ. ಆದರೆ ಇವು ತೇಜಸ್ವಿ ಈ ದರ್ಶನವನ್ನು ಮಂಡಿಸಿದ ಕಾಲದಲ್ಲಿ ನಡೆದಿದ್ದ ಚರ್ಚೆಗಳು ಹೇರಿದ್ದ ಮಿತಿಗಳು ಹಾಗೂ ಒತ್ತಾಯಗಳು ಎಂದು ನಾನು ಭಾವಿಸುತ್ತೇನೆ  
                                   
ಇದನ್ನು ದರ್ಶನವೆಂದು ಕರೆಯುವುದು ದೊಡ್ಡ ಮಾತು ಎಂದು ಯಾರಾದರೂ ಭಾವಿಸಿದರೆ; ಬೇಡ. ಚಿಂತನೆ ಎಂದೇ ಕರೆಯೋಣ. ಆದರೆ ಇಷ್ಟು ದೊಡ್ಡ ಚಿಂತನೆಯನ್ನು ಬೆಳೆಸುವುದು ಹೋಗಲಿ, ಕನಿಷ್ಟ ಒಂದು ವಿವಾದ ಎಂದಾದರೂ ನಮ್ಮ ಲೇಖಕ-ಬುದ್ಧಿಜೀವಿಗಳು ಚರ್ಚೆಗೆ ಎತ್ತಿಕೊಳ್ಳಲಿಲ್ಲ ಎಂದರೆ ಅದಕ್ಕೇನು ಕಾರಣ? ತೇಜಸ್ವಿಯವರ ಮಾತುಗಳಲ್ಲಿಯೇ ಹೇಳುವುದಾದರೆ, ನಮ್ಮ ಜನ ಜಾತಿ ಸುದ್ದಿ ಎತ್ತಿದರೆ ವಿದ್ಯುತಂತಿ ಮುಟ್ಟಿದ ಹಾಗೆ ಆಡುತ್ತಾರೆ. ಇದು ಸಾಮಾನ್ಯ ಜನಕ್ಕಿಂತ ಹೆಚ್ಚಾಗಿ ನಮ್ಮ ಬುದ್ಧಿಜೀವಿಗಳಿಗೆ ಅನ್ವಯಿಸುವ ಮಾತು. ಏಕೆಂದರೆ ಸಾಮಾನ್ಯ ಜನಕ್ಕೆ ಜಾತಿ ಒಂದು (ಕುರುಡು)ನಂಬಿಕೆ ಮಾತ್ರವಾಗಿದ್ದರೆ, ನಮ್ಮ ಬಹಳಷ್ಟು ಬುದ್ಧಿಜೀವಿಗಳಿಗೆ ಅದು ಅವರ ಅಸ್ತಿತ್ವದ ನಿಜ ಆಧಾರ! ತೇಜಸ್ವಿ ಹೇಳಿದ ಅರ್ಥದಲ್ಲಿ ಜಾತಿ ಬಿಡಿ ಎಂದರೆ, ಅವರು ತಮ್ಮ ಲೌಕಿಕ ಬದುಕಿನ ಹಲವು-ಹೆಂಡತಿ, ನೆಂಟರಿಷ್ಟರು-ನೆಲೆಗಳಲ್ಲಿ (ಅನಗತ್ಯ)ತೊಂದರೆ, ಕಷ್ಟ ಕೋಟಲೆ ಹಾಗೂ ಗೋಜಲುಗಳಿಗೆ ಸಿಕ್ಕಿಹಾಕಿಕೊಳ್ಳುವುದಲ್ಲದೆ, ತಮ್ಮ ಬುದ್ಧಿಜೀವತ್ವಕ್ಕೆ ಮತ್ತು ಅದರಿಂದ ಲಭ್ಯವಾಗಿರುವ ಸ್ಥಾನಮಾನ-ಕೀರ್ತಿ-ಸವಲತ್ತುಗಳಿಗೆ ಆಧಾರಗಳಾದ ಅವರ ಓದಿನ ಆಯ್ಕೆ, ಗಳಿಸಿದ ಪಾಂಡಿತ್ಯ, ರೂಢಿಸಿಕೊಂಡ ಚಿಂತನಾ ಕ್ರಮ, ಕಟ್ಟಿಕೊಂಡ ಮಾದರಿಗಳು, ಅವು ರೂಪಿಸಿದ ನಂಬಿಕೆಗಳು, ಎತ್ತಿಹಿಡಿದ ವಿಚಾರಗಳು, ಕರೆ ನೀಡಿದ ಬಂಡಾಯಗಳು, ಊದಿದ ಕ್ರಾಂತಿ ಕಹಳೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಮರುಳು ಮಾಡುವ ಅವುಗಳ ಪರಿಭಾಷೆ ಎಲ್ಲವನ್ನೂ ತ್ಯಜಿಸಬೇಕಾಗುತ್ತದೆ. ಇಡಿಯಾಗಿ ತಮ್ಮನ್ನು ತಾವು ಹೊಸದಾಗಿ ಕಟ್ಟಿಕೊಳ್ಳಬೇಕಾಗುತ್ತದೆ.

ಈ ಪ್ರಳಯ, ಸ್ವಯಂನಾಶ(ಇದಕ್ಕೆ ರಚನಾತ್ಮಕ ಪರ್ಯಾಯ-ಬೌದ್ಧ-ಶಬ್ದವೆಂದರೆ ಆತ್ಮನಾಶ) ಯಾರಿಗೆ ಬೇಕು? ಆದರೆ ಇವರು ಅಲ್ಲಮಪ್ರಭುವಿನ ತನ್ನ ತಾನರಿತರೆ ಅದೇ ಪ್ರಳಯ! ಎಂಬ ಮಾತನ್ನು ಮಾತ್ರ ಅವಕಾಶ ಸಿಕ್ಕೆಡೆಗಳಲ್ಲೆಲ್ಲ ರೋಮಾಂಚಿತರಾಗಿ ಹೇಳುತ್ತಾ, ವ್ಯಾಖ್ಯಾನಿಸುತ್ತಾ ಆನಂದಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ! ಇದೇ, ಇದೇ, ನಮ್ಮ ಬೌದ್ಧಿಕ ಜಗತ್ತಿನ ಈ ಆತ್ಮದ್ರೋಹಿ ವರ್ತನೆಯೇ, ಇಂದಿನ ಕನ್ನಡ ಸಮಾಜವನ್ನು ಈ ದೇಶಕಾಲ ಕುರಿತ ಈ ಚರ್ಚೆಯಲ್ಲಿಯೂ ಕಾಣುವಂತಹ ಪರಸ್ಪರ ಅರಿವ, ಅನುಸಂಧಾನಿಸುವ, ಸಮೀಪಿಸುವ ಯಾವುದೇ ಸಾಧ್ಯತೆಯೂ ಗೋಚರವಾಗದ ರೀತಿಯಲ್ಲಿ ಒಡೆದಿಟ್ಟಿರುವುದು.

                                        -೭-
ಫಣಿರಾಜ್ ತಾವು ತೇಜಸ್ವಿ ವಾದದ ಪರ ಇರುವುದಾಗಿ ಹೇಳಿಕೊಂಡಿದ್ದಾರೆ.೧೨ ಅಷ್ಟೇ ಅಲ್ಲ, ತೇಜಸ್ವಿಯವರ ಈ ಚಿಂತನೆಯನ್ನು ಅಮೂಲ್ಯ ಪಠ್ಯವೆಂದೂ ವರ್ಣಿಸಿದ್ದಾರೆ, ಆದರೆ ಇಂತಹ ಹೇಳಿಕೆಗಳಿಂದ, ವರ್ಣನೆಗಳಿಂದ ಏನು ಪ್ರಯೋಜನ? ಸಾಕಷ್ಟು ಬರೆದಿರುವ, ಮಾತನಾಡಿರುವ, ಹೋರಾಟ-ಕಾರ್ಯಕ್ರಮಗಳನ್ನು ರೂಪಿಸಿರುವ ಅವರು ತೇಜಸ್ವಿಯವರ ಈ ಚಿಂತನೆಯ ಬಗ್ಗೆ ಎಲ್ಲಿ, ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಚರ್ಚೆ ಎತ್ತಿದ್ದಾರೆ? ಚರ್ಚೆ ಎತ್ತುವುದಿರಲಿ, ಉಲ್ಲೇಖವನ್ನಾದರೂ ಮಾಡಿದ್ದಾರೆ? ಮಾಡಿರುವುದೇ ಅದರೆ, ಸದರಿ ಚರ್ಚೆಯಲ್ಲಿಯೂ ಅಂತಹ ಯಾವ ತಾತ್ವಿಕ ಸೂಚನೆಗಳೂ ಕಾಣುವುದಿಲ್ಲವಲ್ಲ? ತೇಜಸ್ವಿ ಚಿಂತನೆ ಪರವಾದ ಇಲ್ಲಿನ ಅವರ ಇಂತಹ ಬಾಯಿಮಾತಿನ ಸಗಟು ಸಹಾನುಭೂತಿ, ಅವರ ಕೋಮು ಸೌಹಾರ್ದ ಕಾರ್ಯಕ್ರಮದಂತಹ ಒಂದು ಕಾರ್ಯಕ್ರಮದ ರೂಪದಲ್ಲಾದರೂ ಕಾಣಿಸಿಕೊಳ್ಳುವಂತಾಗಿದ್ದರೆ, ಅವರ ಸಹಾನುಭೂತಿಗೆ ಒಂದು ಅರ್ಥವಿರುತ್ತಿತ್ತು.

ಅಂತಹ ಕಾರ್ಯಕ್ರಮ ರೂಪುಗೊಳ್ಳಲು ಮೊದಲು ಅಂತಹ ಚಿಂತನೆಯನ್ನು ಕುರಿತ ಮಂಥನ ನಡೆಯಬೇಕಲ್ಲ? ಹಾಗಾಗಿ ಫಣಿರಾಜ್ ತಮ್ಮ ವಾಗ್ವಾದಪ್ರಿಯತೆಗೆ ಒಂದು ಕ್ರಿಯಾಶೀಲ ರೂಪು ಕೊಟ್ಟು ಅದನ್ನು ಅರ್ಥಪೂರ್ಣಗೊಳಿಸಲು ಮೊದಲು ಮಾಡಬೇಕಾದುದು, ತಾವು ಪರವಾಗಿರುವುದಾಗಿ ಹೇಳಿಕೊಂಡಿರುವ ಈ ಚಿಂತನೆಯ ಕುರಿತು ತಮ್ಮ ಸಹಮನಸ್ಕ ಮಿತ್ರರೊಂದಿಗೆ ಚರ್ಚೆ ಆರಂಭಿಸುವುದು. ಅದಕ್ಕೇ ದೇಶಕಾಲವೇ ಮೊದಲ ವೇದಿಕೆಯಾಗುವುದಾದರೆ ಇನ್ನೂ ಒಳ್ಳೆಯದೇ! ಹಾಗೇ ಮಂಜುನಾಥ್ ಲತಾ-ಚಂದ್ರಶೇಖರ ಐಜೂರ್ ಹಾಗೂ ಅವರ ಮಿತ್ರರು ಈ ಚರ್ಚೆಯನ್ನು ಮುಂದುವರೆಸಿ, ಆ ಚಿಂತನೆ ಎಲ್ಲ ಸಾಮಾಜಿಕ ಶ್ರೇಣಿಗಳ ಜನರ ಅನುಭವಗಳ ಮೂಸೆಯಲ್ಲಿ ಎರಕಗೊಂಡು; ಅದೊಂದು ವ್ಯಾಪಕ ರಾಜಕೀಯ ಕಾರ್ಯಕ್ರಮವಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳಲು ಸಾಧಶ್ಯವೇ? ಇದರ ಭಾಗವಾಗಿ, ಈ ಚರ್ಚೆಗೆ ಧುಮುಕಿದ ಎಲ್ಲರೂ ಈ ಧುಮುಕಿನ ಉತ್ಸಾಹದೊಂದಿಗೇ ತಮ್ಮ ಕೊಡುಗೆ ಸಲ್ಲಿಸುವಂತೆ ಪ್ರೇರೇಪಿಸಲು ಸಾಧ್ಯವಾದರೆ, ಈ ಚರ್ಚೆ ಒಂದು ಸಾರ್ಥಕ ಅಂತ್ಯ ಕಂಡೀತು. ಇಲ್ಲವಾದರೆ, ಮಂಜುನಾಥ್-ಐಜೂರರ (ಉದ್ದನೆಯ)ಬಾಲ ತರ್ಕವನ್ನೇ ಬಳಸಿ ಹೇಳುವುದಾದರೆ, ಉತ್ತರ ಕರ್ನಾಟಕದ ಸಾವಿರಾರು ಜನ ನೆರೆ ಸಂತ್ರಸ್ತರು ಕೇಳುವವರಿಲ್ಲದೆ ಬೀದಿ ಪಾಲಾಗಿರುವಾಗ ಚರ್ಚೆಗಾಗಿ ಚರ್ಚೆ ನಡೆಸಿದ ಸಾಮಾಜಿಕ ಅಪರಾಧದಲ್ಲಿ ನಾವೆಲ್ಲರೂ ಪಾಲುದಾರರಾಗಬೇಕಾಗುತ್ತದೆ!

ಬಹುಶಃ ಇದನ್ನೇ(ಈ ಚಿಂತನೆಯನ್ನೇ ಆಧರಿಸಿದ್ದಲ್ಲವಾದರೂ) ಕೆ.ಪಿ. ಸುರೇಶ್ ದೇಶಕಾಲಕ್ಕೆ ವಿಷನ್ನ ಕೊರತೆ ಇದೆ ಎಂದು ಹೇಳಲು ಹೋಗಿದ್ದು ಎಂದು ಕಾಣುತ್ತದೆ. ಮೊದಲಾಗಿ ನಮ್ಮ ಬದುಕಿಗೆ ಒಂದು ವಿಷನ್ನ ಇರುವುದಾದರೆ, ನಾವು ಮಾಡುವ ಎಲ್ಲ ಕೆಲಸಗಳಿಗೂ ಒಂದು ವಿಷನ್ ಇದ್ದೀತು. ಆದರೆ ರಾಜಶೇಖರ್ ಎಲ್ಲ ಆದರ್ಶಗಳೂ, ಸಿದ್ಧಾಂತಗಳೂ ಅವುಗಳ ವಿರೋಧಾಭಾಸಗಳಿಂದಾಗಿಯೋ, ಮತ್ತಾವುದೋ ಕಾರಣದಿಂದಲೋ ಮಣ್ಣು ಪಾಲಾಗಿರುವಾಗ ಯಾವ ಸಿದ್ಧಾಂತ, ಯಾವ ವಿಷನ್ ಎಂದು ಕೇಳುತ್ತಾ ವ್ಯಂಗ್ಯವಾಡುತ್ತಾರೆ. ಅವರೂ ಜಾಗತೀಕರಣದ ತಾತ್ವಿಕರಂತೆ ಇತಿಹಾಸವೇ ಅಂತ್ಯವಾದಂತೆ ಮಾತಾಡುತ್ತಿರುವುದು ಆಶ್ಚರ್ಯಕರ! ರಾಜಶೇಖರ್ ಎಲ್ಲಿದ್ದವರು ಎಲ್ಲಿಗೆ ಬಂದು ಮುಟ್ಟಿದ್ದಾರೆ ಎಂದೂ ಆಶ್ಚರ್ಯವಾಗುತ್ತದೆ! ಅವರು ಆಗ ಅಲ್ಲಿದ್ದುದಕ್ಕೇ ಈಗ ಇಲ್ಲಿಗೆ ಬಂದು ಮುಟ್ಟಿರುವುದೋ? ನಾನಂತೂ, ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇದೇ ರಾಜಶೇಖರರು ಶಿವರಾಮ ಕಾರಂತರನ್ನು ಸಂದರ್ಶಿಸಿದ್ದಾಗ ಕಾರಂತರು ಪ್ರತಿ ಪ್ರಶ್ನೆಗೂ ಎಲ್ಲವನ್ನೂ ಮೊದಲೇ ನಿಶ್ಚಯಿಸಿಕೊಂಡವರ ಹಾಗೆ ಇವರ ಮೇಲೆ ಹರಿಹಾಯ್ದಿದ್ದದನ್ನು ಓದಿ ಹೇಗೆ ಬೆಪ್ಪಾಗಿದ್ದೆನೋ, ಈಗ ರಾಜಶೇಖರರು ಈ ಚರ್ಚೆಯಲ್ಲಿ ಪ್ರಶ್ನೆ ಕೇಳಿದವರ ಮೇಲೆಲ್ಲಾ ಯಥಾವತ್ ಹಾಗೇ ಹರಿಹಾಯ್ದಿರುವುದನ್ನು ಓದಿ ಬೆಪ್ಪಾಗಿದ್ದೇನೆ. ಕಾಲಚಕ್ರ ಎಷ್ಟು ಬೇಗ ತಿರುಗಿ ಇಲ್ಲಿಗೆ ಬಂದು ನಿಂತಿದೆ ಎಂದು ಆಶ್ಚರ್ಯವಾಗುತ್ತದೆ!

ಅದೇನೇ ಇರಲಿ, ಎಷ್ಟೇ ಸಾವಿರ ಸಿದ್ಧಾಂತಗಳು ಸಾಯಲಿ, ತನ್ನ ಅಸಂಗತ ರಚನೆಗಳಲ್ಲಿ ಎದುರಾಗಿ ನಮ್ಮನ್ನು ಹೆದರಿಸುವ ಬದುಕನ್ನು ಸಂಗತ ಮಾಡಿಕೊಂಡು, ಸ್ವಲ್ಪವಾದರೂ ನೆಮ್ಮದಿಯಿಂದ ಬದುಕಲು ಒಂದು ಸಿದ್ಧಾಂತ-ಅದು ತೇಜಸ್ವಿ ಹೇಳುವಂತೆ ಕಾಮನ್ ಸೆನ್ಸ್ ರೂಪದಲ್ಲೇ ಇರಲಿ-ಬೇಕೇ ಬೇಕು. ಆದರೆ ಅದು ಸದಾ ಕೆಡವುತ್ತಾ, ಆದರೆ ಅದೇ ಸಮಯದಲ್ಲಿ ಕಟ್ಟಿಕೊಳ್ಳುತ್ತಾ ಇರುವ ಚಲನಶೀಲ ಸಿದ್ಧಾಂತವಾಗಿರಬೇಕಾಗುತ್ತದಷ್ಟೆ. ಇದು ಗೊತ್ತಿದ್ದರೆ, ಸಿದ್ಧಾಂತಗಳ ಸಾವು ಅಥವಾ ನಾಶ ಎಂಬ ಮಾತೇ ಅಸಂಗತ ಎಂಬುದು ಸ್ಪಷ್ಟವಾದೀತು! ಇದೆಲ್ಲ ರಾಜಶೇಖರ್‌ಗೆ ಗೊತ್ತಿಲ್ಲವೆಂದು ಹೇಳುತ್ತಿಲ್ಲ. ಅವರಿಗೆ ಹೇಳುವ ನೆಪದಲ್ಲಿ ಮಂಜುನಾಥ್ ಲತಾ-ಐಜೂರರಿಗೂ ಹೇಳುತ್ತಿರುವೆನಷ್ಟೆ. ಏಕೆಂದರೆ ಇವರಿಬ್ಬರೂ ಸದರಿ ಚರ್ಚೆಯನ್ನು ಮುಗಿಸುತ್ತಾ(ಅದರೆಲ್ಲ ಅರ್ಥಗಳಲ್ಲಿ?) ಇಡೀ ಚರ್ಚೆಯಿಂದ ಏನೂ ಪಡೆಯದವರಂತೆ ಅಥವಾ ಏನನ್ನೂ ಕಳೆದುಕೊಳ್ಳದವರಂತೆ, ಒಟ್ಟಿನಲ್ಲಿ ಅದರಲ್ಲಿ ಕಲಿಯಲು ಏನೂ ಇರಲಿಲ್ಲವೆಂಬಂತೆ; ಛಲ ಬಿಡದ ತ್ರಿವಿಕ್ರಮನ ರೀತಿ ಅದೇ ಹಳೆಯ ಆರೋಪಗಳ, ವ್ಯಂಗ್ಯ-ಟೀಕೆಗಳ ಬೇತಾಳವನ್ನು ಇನ್ನಷ್ಟು ಉಬ್ಬಿದ ಆತ್ಮವಿಶ್ವಾಸದೊಂದಿಗೆ ಹೆಗಲಿಗೇರಿಸಿಕೊಂಡು ನಡೆದಿರುವುದನ್ನು ಕಂಡು ನಿಜವಾಗಿ ಸುಸ್ತಾಗಿರುವೆ.

ಹಾಗಾಗಿ, ನಾನು ಈವರೆಗೆ ಬರೆದಿರುವ ಈ ಪುರಾಣವೆಲ್ಲ ಶಿವರಾತ್ರಿಯ ಒಂದು ಹರಿಕಥೆಗೆ ಸಮವಾಗಿಬಿಡಬಹುದೇ ಎಂಬ ಅನುಮಾನದಿಂದಲೇ ಈ ಬರಹವನ್ನು ಮುಗಿಸುತ್ತಿರುವೆ! ಆದರೆ ಮುಗಿಸುವ ಹೊತ್ತಿನಲ್ಲಿ ಏಕೋ, ಫಣಿರಾಜರು ಆರಂಭದಲ್ಲೇ ತಮ್ಮ ವಾದಕ್ಕೆ ಬೆಂಬಲವಾಗಿ ಭಾಷೆಯೇ ದೈವ ಎಂಬುದು ಲಂಕೇಶರ ನಿಷ್ಠುರ ತಿಳುವಳಿಕೆಯಾಗಿತ್ತು ಎಂಬ ಪಾಠ ಹೇಳಿದ್ದು ನೆನಪಿಗೆ ಬರುತ್ತಿದೆ. ಇದು ಲಂಕೇಶರ ಮೂಲ ತಿಳುವಳಿಕೆಯೋ, ಅಲ್ಲವೋ ನನಗೆ ತಿಳಿಯದು. ಆದರೆ ನನಗೆ ಒಂದು ತಿಳಿದಿದೆ: ದೆವ್ವವಿದ್ದೆಡೆ ಮಾತ್ರ ದೈವವಿರಬಲ್ಲುದು. ಅವರೆಡೂ ಅವಳಿ ಸೃಷ್ಟಿಗಳು! ಹಾಗಾಗಿ ಭಾಷೆಯೇ ದೈವ ಎಂಬ ಮಾತಿನ ಹಿಂದೆಯೇ ಭಾಷೆಯೇ ದೆವ್ವ ಎಂಬ ಮಾತಿರುತ್ತದೆ ಎಂಬ ನಿಷ್ಠುರ ತಿಳುವಳಿಕೆಯೂ ನಮಗಿದ್ದರೆ ಒಳ್ಳೆಯದು ಎಂಬ ಎಚ್ಚರಿಕೆಯ ಮಾತನ್ನೂ ಇಲ್ಲಿ ಸೇರಿಸಬಯಸುವೆ.


೧. ಈ ಅಖಿಲ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವು ೧೯೭೩ರಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ನೇತೃತ್ವದಲ್ಲಿ ಮೈಸೂರಿನಲ್ಲಿ ಸಮಾವೇಶ ನಡೆಸಿ, ನವ್ಯ ಸಾಹಿತ್ಯದ ಹಿಂದೆ ತಾನು ಗುರುತಿಸಿದ ಅಘೋಷಿತ ಸಾಂಸ್ಕೃತಿಕ ರಾಜಕೀಯ ಪ್ರಣಾಳಿಕೆಯ ವಿರುದ್ದ ಸಮರ ಸಾರಿತು. ಇದರ ಅಧ್ಯಕ್ಷರು, ಜಿ.ಎಸ್.ಶಿವರುದ್ರಪ್ಪ. ಈ ಸಮಾವೇಶವನ್ನು ಉದ್ಘಾಟನೆ ಮಾಡಿದವರು ಕುವೆಂಪು. ಈ ಉದ್ಘಾಟನಾ ಭಾಷಣವೇ ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಎಂದು ಮುಂದೆ ಪ್ರಸಿದ್ಧವಾದದ್ದು. ಈ ಸಮಾವೇಶದ ಇನ್ನೊಂದು ಮುಖ್ಯ ಭಾಷಣವೆಂದರೆ, ಕನ್ನಡ ಸಾಹಿತ್ಯ-ಸಂಸ್ಕೃತಿಗಳನ್ನು ಕುರಿತ ಚರ್ಚೆಯ ನೆಲೆಗಳನ್ನೇ ಸಂಪೂರ್ಣ ಬದಲಿಸಿದ ತೇಜಸ್ವಿಯವರ ಕರ್ಣಾಟಕ ಸಂಸ್ಕೃತಿ ವಿಶ್ಲೇಷಣೆ.
   ಈ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖರೆಂದರೆ, ಪಿ.ಲಂಕೇಶ್, ದೇವನೂರ ಮಹಾದೇವ, ಎಂ.ಡಿ.ನಂಜುಂಡಸ್ವಾಮಿ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಕೆ.ಎಂ.ಶಂಕರಪ್ಪ್ಪ, ಕೆ.ರಾಮದಾಸ್, ರಾಜಶೇಖರ ಕೋಟಿ, ಪ.ಮಲ್ಲೇಶ್, ಆಲನಹಳ್ಳಿ ಕೃಷ್ಣ, ಬೆಸಗರಹಳ್ಳಿ ರಾಮಣ್ಣ, ಕಾಳೇಗೌಡ ನಾಗವಾರ, ಕಲ್ಲೆ ಶಿವೋತ್ತಮ ರಾವ್, ವಿಶುಕುಮಾರ್ ಮುಂತಾದವರು. ಈ ಒಕ್ಕೂಟ ಅದರ ಪದಾಧಿಕಾರಿಗಳ ನಡುವೆ ತಾಳಮೇಳವಿಲ್ಲದ ಕಾರಣ(ತೇಜಸ್ವಿ ಪ್ರಕಾರ) ಸಂಘಟನೆಯಾಗಿ ಬಹುಬೇಗ ಕಳೆದುಹೋಯಿತಾದರೂ, ಅದು ಉಂಟು ಮಾಡಿದ ಪ್ರಭಾವ ಕನ್ನಡ ಸಾಹಿತ್ಯದ ದಿಕ್ಕು ದೆಸೆಗಳನ್ನೇ ಬದಲಿಸಿ, ನವ್ಯ ಚಳುವಳಿಗೆ ಅಂತ್ಯ ಹಾಡಿತು. ಈ ಸಮಾವೇಶದ ಪ್ರಮುಖ ಭಾಷಣಗಳು ಸಂಕ್ರಮಣ-೬೦ರಲ್ಲಿ ಪ್ರಕಟವಾಗಿವೆ.
  ೨. ಇದು ನನ್ನ ಗಮನ(೧೯೯೦) ವಿiರ್ಶಾ ಸಂಕಲನದ ನಾಲ್ಕು ಕವನ ಸಂಕಲನಗಳು ಶೀರ್ಷಿಕೆಯ ಲೇಖನದ ಭಾಗವಾಗಿ ಪ್ರಕಟವಾಗಿದೆ.
  ೩. ಈ ಸಂದರ್ಭದಲ್ಲಿ ನನ್ನಲ್ಲಿ ಮೂಡಿದ ಇನ್ನೊಂದು ಅನ್ನಿಸಿಕೆಯೆಂದರೆ, ಅಡಿಗರಂತಹ ತೀವ್ರ ಸಂವೇದನಾಶೀಲ ಪ್ರತಿಭಾವಂತ ಕವಿ ಹಿಂದುತ್ವದಂತಹ ಬರಡು ಸಿದ್ಧಾಂತಕ್ಕೆ ಮರುಳಾಗಿರಲಾರರು. ಮರುಳಾಗಿದ್ದಲ್ಲಿ, ಚಿಂತಾಮಣಿಯಲ್ಲಿ ಕಂಡ ಮುಖ, ಯಜಮಾನ ಬಂಡಾಯ, ಪ್ರೀತಿ, ಮೈಗೆ ಹಿತವಾದರೆ, ಸಂತೋಷವಾಗುತ್ತದೆ, ಶಾಂತವೇರಿಯ ಅಶಾಂತ ಸಂತದಂತಹ ಕವನಗಳನ್ನು ಬರೆಯಲಾರರು.  
  ೪. ಇದರ ಬಗ್ಗೆ ನಾನು ನನ್ನ ಅನೇಕ(೨೦೦೫) ವಿಮರ್ಶಾ ಸಂಕಲನದ ಐದು ಪ್ರತಿಕ್ರಿಯೆಗಳು ಶೀರ್ಷಿಕೆಯ ಲೇಖನದಲ್ಲ್ಲಿ ವಿವರವಾಗಿಯೇ ಬರೆದಿದ್ದೇನೆ.
  ೫. ಈ ಬಗ್ಗೆ ನಾನು ನನ್ನ ಇತ್ತೀಚಿನ ಇಲ್ಲಿ ಯಾರೂ ಅಮುಖ್ಯರಲ್ಲ(೨೦೧೦) ಸಮಾಜವಾದಿ ಸಂಕಥನಗಳು-೪ ಸಂಗ್ರಹದಲ್ಲಿನ ಸಮಕಾಲೀನ ಸಾಹಿತ್ಯ ಮತ್ತು ಸೃಜನಶೀಲತೆ ಕುರಿತ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ.
   ೬. ಇದೇ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕಾದ ತೇಜಸ್ವಿಯವರ ಇನ್ನೊಂದು ಮಾತೆಂದರೆ, ನಾನು ಹಲವಾರು ಯುವ ಬರಹಗಾರರ, ದಲಿತ, ಬಂಡಾಯ ಸಾಹಿತ್ಯ ಕಮ್ಮಟಗಳಲ್ಲಿ ಕುಳಿತು ಕೇಳಿದ್ದೇನೆ. ಅಲ್ಲೆಲ್ಲ ತಮ್ಮ ಬರವಣಿಗೆಯ ರಾಜಕೀಯ ಮತ್ತು ಸಾಮಾಜಿಕ ಆಯಾಮಗಳ ಬಗ್ಗೆ ಮಾತಾಡುತ್ತಾರೆಯೇ ಹೊರತು, ಸಾಹಿತ್ಯ ಒಂದು ಲಲಿತ ಕಲೆ, ತಮ್ಮ ಕಲಾಭಿವ್ಯಕ್ತಿ ಭಾಷೆಯಲ್ಲಿ ಅಭಿವ್ಯಕಿಯಾಗಿ ರೂಪುಗೊಳ್ಳುವಾಗ ಪಡೆಯುವ ಆಕಾರಗಳೇನು? ಹಿಂದಿನ ಸಾಹಿತ್ಯಕ್ಕೂ ತಮಗೂ ಸಾಮ್ಯಗಳೆನು? ವ್ಯತ್ಯಾಸಗಳೇನು? ಇತ್ಯಾದಿಗಳ ಬಗ್ಗೆ ಅವರು ಹೆಚ್ಚು ಚಿಂತಿಸಿದಂತೆ ಕಾಣಲಿಲ್ಲ.... ಸಾಹಿತ್ಯದಲ್ಲಿ ಎಂದೂ ಮೀಸಲಾತಿ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಜಾತಿ ಆಧಾರದ ಮೇಲೆ ವಿಶೇಷ ಸೌಲಭ್ಯ ಯಾಚಿಸುವುದಕ್ಕಿಂತ ವಿಶ್ವದ ಶ್ರೇಷ್ಠ ಬರಹಗಾರರೊಡನೆ ಹೋಲಿಸಿ ಎರಡನೇ ಅಥವಾ ಮೂರನೇ ದರ್ಜೆ ಬರಹಗಾರನಾದರೂ ಒಳ್ಳಿತೆಂಬುದು ನನ್ನ ನಿಲುವು
  ೭. ಆಧುನಿಕ ಕನ್ನಡ ಸಾಹಿತ್ಯದಲ್ಲಿನ ವಾರಸುದಾರಿಕೆಗಳ ಬಗ್ಗೆ ವಿಶೇಷ ಆಸಕ್ತಿ ಮತ್ತು ಪರಿಶ್ರಮಗಳನ್ನು ತೋರಿರುವ ಈ ವಿಮರ್ಶಕರ ಪ್ರಕಾರ, ಕನ್ನಡ ಸಾಹಿತ್ಯವೆಂದಾಕ್ಷಣ ಈಗ ಇಬ್ಬರು ಶ್ರೀನಿವಾಸರು ನೆನಪಿಗೆ ಬರುತ್ತಾರೆ; ಒಬ್ಬರು ಶ್ರೀನಿವಾಸ ವೈದ್ಯರಾದರೆ, ಇನ್ನೊಬ್ಬರು ಕೆ.ಎಚ್.ಶ್ರೀನಿವಾಸರು!
  ೮. ಅಂರ್ತಜಾತಿ ವಿವಾಹಿತರ ಸಮಾವೇಶವೊಂದರ ಸಂದರ್ಭದಲ್ಲಿ ಅಂರ್ತಜಾತಿ ವಿವಾಹಗಳ ಬಗ್ಗೆ ಕೆ.ವಿ.ಸುಬ್ಬಣ್ಣನವರನ್ನು ಅಭಿಪ್ರಾಯ ಕೇಳಿದರೆ-ತಮ್ಮ ಆದರ್ಶ ಸಾಂಸ್ಕೃತಿಕ ನಾಯಕ ಶಿವರಾಮ ಕಾರಂತರು ಜಾತಿ ಬಿಟ್ಟು ಮದುವೆಯಾದ ಮುಕ್ಕಾಲು ಶತಮಾನದ ನಂತರವೂ-ಸರಿ ಸರಿ, ಆದರೆ ಸಹೃದಯತೆ ಮತ್ತು ಸಮಾನ ಮನಸ್ಕತೆ ಗಮನದಲ್ಲಿರಬೇಕು ಎಂದು ವಿಶೇಷ ಎಚ್ಚರಿಕೆ ಕೊಡುವರೆಂದರೆ ಏನು ಹೇಳುವುದು? ಜಾತಿ ವಿವಾಹಗಳಲ್ಲಿ ಈ ಸಹೃದಯತೆ ಮತ್ತು ಸಹಮನಸ್ಕತೆಗಳು ಸಹಜವೆಂದು ಇದರ ಅರ್ಥವಾದರೆ, ಸುಬ್ಬಣ್ಣ ಏನು ಹೇಳುತ್ತಿದ್ದಾರೆಂದು ಆಶ್ಚರ್ಯವಾಗುವುದಿಲ್ಲವೆ? ಏಕೆ ಹೀಗೆ?
  ೯. ಈ ಲೇಖನ ಮತ್ತು ಅದಕ್ಕೆ ಪೂರಕವೆನ್ನಿಸುವ ಅವರ ಇನ್ನಷ್ಟು ಲೇಖನಗಳನ್ನೊಳಗೊಂಡ ಸಂಗ್ರಹ, ವಿಮರ್ಶೆಯ ವಿಮರ್ಶೆ ಪ್ರಕಟವಾಗಿ ಎರಡು ವರ್ಷವಾಗುತ್ತಾ ಬಂದರೂ, ತಮ್ಮ ಗೆಣೆಕಾರ/ಕಾರ್ತಿಯರ ಪುಸ್ತಕ ಬಂದೊಡನೆ ಪತ್ರಿಕೆಗಳಿಗೆ ವಿಮರ್ಶೆ ಬರೆಯಲು ಹಾತೊರೆದು ಬೀಳುವ ಈ ವಲಯದ ಯಾವೊಬ್ಬ ವಿಮರ್ಶಕನೂ/ಳೂ ಈ ಪುಸ್ತಕದ ಬಗ್ಗೆ ಒಂದು ವಿಮರ್ಶೆ ಬರೆಯುವುದರಿಲಿ, ಎಲ್ಲೂ ಮಾತಾಡಲೂ ಹೋಗಿಲ್ಲ! ಅಷ್ಟೇ ಅಲ್ಲ, ಕನ್ನಡದ ಪ್ರಮುಖ ಪತ್ರಿಕೆ-ಪುರವಣಿಗಳಾವುವೂ ಇದರ ವಿಮರ್ಶೆ ಇರಲಿ, ಪರಿಚಯವನ್ನೂ ಮಾಡಿಸುವ ಗೋಜಿಗೆ ಹೋಗಿಲ್ಲ. ಇದೆಲ್ಲ ಏನನ್ನು ಸೂಚಿಸುತ್ತದೆ?
  ೧೦. ಇದನ್ನೇ ಅವರು ನಂತರ ತಮ್ಮ ಜಾತಿ ಪದ್ಧತಿ ಮತ್ತು ಕಲಾಭಿವ್ಯಕ್ತಿ ಎಂಬ ಲೇಖನದಲ್ಲಿ ಹೇಳಿದ್ದು ಹೀಗೆ: ಈ ನ್ಯೂನತೆಗಳನ್ನು ಕೇವಲ ಸಾಹಿತ್ಯದ ಮಟ್ಟಿಗೆ, ಸಂಸ್ಕೃತಿಯ ಮಟ್ಟಿಗೆ ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಈ ನ್ಯೂನತೆ ಸಾಹಿತ್ಯದ ಸಾಲುಗಳ ನಡುವೆ ಪೂರ್ಣ ವಿರಾಮ, ಅರ್ಧ ವಿರಾಮ, ಕಾಮಾಗಳಿಂದಲೋ, ಸಮಾಸಗಳಿಂದಲೋ, ತತ್ಸಮ ತದ್ಭವಗಳಿಂದಲೋ ಉದ್ಭವಿಸಿರುವ ವ್ಯಾಕರಣ ದೋಷಗಳಲ್ಲ. ಅದರ ಬೇರುಗಳು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರವನ್ನೂ ಮೀರಿ ಸಾಮಾಜಿಕ ಸಥರದಲ್ಲಿ ದಟ್ಟವಾಗಿ ವ್ಯಾಪಿಸಿರುವುದರಿಂದಲೇ, ಜಾತಿ ಪದ್ಧತಿಯನ್ನು ಅಲ್ಲಿ ನಿನಾರ್ಶಮ ಮಾಡಿದರೆ ಮಾತ್ರ ಮಿಕ್ಕ ಕ್ಷೇತ್ರಗಳಲ್ಲಿ ಮುಸುಗಿರುವ ಹೊಗೆ ತಿಳಿಯಾಗುತ್ತದೆ (ವಿಮರ್ಶೆಯ ವಿಮರ್ಶೆ)
  ೧೧. ಗಮನ(೧೯೯೦)ದ ನವ್ಯೋತ್ತರ ವಿಮರ್ಶೆ: ಒಂದು ತಾತ್ವಿಕ ನೋಟ, ಬೇರು ಬಿಳಲು(೨೦೦೬)ವಿನ ಆಧುನಿಕ ಕನ್ನಡದ ತಾತ್ವಿಕ ಸಂವಾದಗಳು, ಈ ಭೂಮಿಯಿಂದ ಆ ಆಕಾಶದವರೆಗೆ(೨೦೦೭)ವಿನ ತೇಜಸ್ವಿಯವರ ಸಾಹಿತ್ಯ ಮೀಮಾಂಸೆ ಹಾಗೂ  ಇಲ್ಲಿ ಯಾವುದೂ ಅಮುಖ್ಯವಲ್ಲ(೨೦೧೦)ದ ತೇಜಸ್ವಿಯವರ ಪರ್ಯಾಪ್ತ ಸಂಸ್ಕೃತಿ ಚಿಂತನೆ ಹಾಗೂ ತೇಜಸ್ವಿಯವರ ಬೌದ್ಧ ಮಾರ್ಗ ಪ್ರವರ್ತಕತೆ ಲೇಖನಗಳನ್ನು ಗಮನಿಸಬಹುದು.
  ೧೨. ಇದೇ ಸಂಬಂಧವಾಗಿ, ತಾವು ಕೋಮುವಾದದ ವಿಷಯವಾಗಿ ಕೋಮುವಾದ ಕುರಿತ ವಾಗ್ವಾದದಲ್ಲಿ ತೇಜಸ್ವಿ ಜೊತೆಗಿರಲಾರೆನೆಂದೂ; ಅನಂತಮೂರ್ತಿ ಮತ್ತು ಸುಬ್ಬಣ್ಣನವರ ಪರವಾಗಿ ಇರಬಯಸುವುದಾಗಿಯೂ ಹೇಳಿದ್ದಾರೆ. ಆದರೆ, ಎನ್.ಡಿ.ಎ. ಸರ್ಕಾರ ಚುನಾವಣೆ ಮೂಲಕ ಪದಚ್ಯುತವಾಗವವರೆಗೆ ಕೋಮುವಾದ ಕುರಿತ ಅನಂತಮೂರ್ತಿಯವರ ನಿಲುವು ಹೇಗಿತ್ತು(ಗುಜರಾತ್‌ನಲ್ಲಿ ಮುಸ್ಲಿಮರ ನರಮೇಧ ನಡೆಯುತ್ತಿದ್ದ ಸಂದರ್ಭದಲ್ಲಿ, ಆ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅನಂತಮೂರ್ತಿಯವರು ನೀಡಿದ ಎಚ್ಚರ ತುಂಬಿದ ಸೂಕ್ಷ್ಮ ಸಮತೋಲನದ ಉತ್ತರ ಹೀಗಿತ್ತು: ಈ ದೇಶಕ್ಕೆ ಮೋದಿ ಮತ್ತು ಲಾಲೂ ಅವರ ರಾಜಕಾರಣ ಒಳ್ಳೆಯದಲ್ಲ!) ಮತ್ತು ಆನಂತರ ಯಾವ ತೀವ್ರತೆ ಪಡೆಯಿತು ಎಂಬುದನ್ನು ಫಣಿರಾಜ್ ಸ್ವಲ್ಪ ವಿವರವಾಗಿ ಗಮನಿಸಿದರೆ ಒಳ್ಳೆಯದು. ಇನ್ನು ಸುಬ್ಬಣ್ಣನವರ ಸುಪ್ರಸಿದ್ಧ ಗುಜರಾತ್ ಸ್ವಗತ ಓದಿ, ಅದರ ಧಾಟಿ ನೋಡಿ ನನಗಂತೂ, ಗುಜರಾತಿನ ಮುಸಲ್ಮಾನರ ಬಗೆಗಿಂತ ಸುಬ್ಬಣ್ಣನವರ ಬಗೆಗೇ ಅಯ್ಯೋ ಪಾಪ! ಎನಿಸಿತ್ತು!

4 comments:

  1. Asahane hagu tannannu oppadavara bagge anagatya sidimidi DSN ravara bahuteka barahagala guna. Adu e barahadalliyu kanuttade. e lekhanada tumba neravagi kelavu kade parokshavagi anekara bagge madiruva commentgalannu nodidare achchariyaguttade. dayavittu DSN yara baggeyu karikollade bareyuva yatna madali.

    ReplyDelete
  2. ದೇಶಕಾಲ ಚರ್ಚೆ ಕುರಿತ ನನ್ನ ಬರಹಕ್ಕೆ ಶಿವಕುಮಾರ್ ಎಂಬುವವರು ಬರೆದಿರುವ ಪ್ರತಿಕ್ರಿಯೆಯನ್ನು ಗಮನಿಸಿರುವೆ.
    ಶಿವಕುಮಾರ್ ಈ ಬರಹವನ್ನು ನೆಪವಾಗಿ ಇಟ್ಟುಕೊಂಡು ನನ್ನ ಎಲ್ಲ ಬರಹಗಳ ಬಗ್ಗೆ ಮಾಡಿರುವ ಟೀಕೆಯನ್ನು ಮತ್ತು ಈ ಬರಹದ ಬಗ್ಗೆ ಬರೆಯುತ್ತಾ ‘ಅನಗತ್ಯ ಸಿಡಿಮಿಡಿ’ ಮತ್ತು ‘ಕಾರಿಕೊಂಡ’ ಎಂಬ ಪದಪ್ರಯೋಗಗಳನ್ನು ಮಾಡಿರುವುದನ್ನು ಗಮನಿಸಿದರೆ, ನನ್ನ ಬರಹ ಕುರಿತ ಅವರ ಪೂರ್ವನಿಶ್ಚಿತ ಅಸಹನೆಯ ನಿಲುವು ಸ್ಪಷ್ಟವಾಗುತ್ತದೆ. ಅವರು ಉದಾಹರಣೆಗಳೊಂದಿಗೆ ಮತ್ತು ಸಮರ್ಥನೆಗಳೊಂದಿಗೆ ಈ ಪದ ಪ್ರಯೋಗಗಳನ್ನು ಮಾಡಿದ್ದರೆ, ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬಹುದಿತ್ತು.
    ವಿವೇಚನೆ-ವಿಶ್ಲೇಷಣೆ ಎಂದರೆ ವಿಚಾರ ಮಂಡನೆ, ವಾದ, ತರ್ಕ, ಟೀಕೆ-ಟಿಪ್ಪಣಿ ಸಹಜ. ಆದರೆ ನಾನು ಈ ಬರಹವೂ ಸೇರಿದಂತೆ ನನ್ನ ಯಾವ ಬರಹದಲ್ಲೂ, ಸೂಕ್ತ ವಿವರಣೆ ಅಥವಾ ಸಮರ್ಥನೆಯಿಲ್ಲದೆ ಯಾವುದರ ಅಥವಾ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಇವರು ಮೆಚ್ಚುವ ಅಭಿಮಾನಿಸುವ ವ್ಯಕ್ತಿ-ವಿಚಾರಗಳ ಬಗ್ಗೆ ಟೀಕೆ ಮಾಡಿದರೆ, ಅದನ್ನು ಸೂಕ್ತ ಸಮರ್ಥನೆಯೊಂದಿಗೆ ಎದುರಿಸಲಾಗದವರು ಮಾತ್ರ ಇಂತಹ ಸಾರಾಸಗಟಾದ ಅಭಿಪ್ರಾಯ-ಪದಪ್ರಯೋಗಗಳನ್ನು ಮಾಡಿ ಮೂಲ ವಿವೇಚನೆ-ವಿಶ್ಲೇಷಣೆಗಳನ್ನೂ, ವಿಶ್ಲೇಷಣಾಕಾರನನ್ನೂ ಬುಡಮೇಲುಗೊಳಿಸಿದೆವೆಂದು ತೃಪ್ತಿ ಪಟ್ಟುಕೊಳ್ಳಬಹುದೇನೋ, ತಿಳಿಯದು. ಆ ತೃಪ್ತಿ ಅವರಿಗೆ ಸದಾ ಇರಲಿ!
    ನನಗೆ ಎಲ್ಲವನ್ನೂ ಲೀಲಾವಿನೋದಿಯಾಗಿ; ಈ ದೃಷ್ಟಿಯಿಂದ ಇದು ಸರಿ, ಆ ದೃಷ್ಟಿಯಿಂದ ಇದು ಸರಿ ಎಂದು ಎಲ್ಲರನ್ನೂ ಓಲೈಸುತ್ತಾ ಸವಿ ಚರ್ಚೆ ಮಾಡಿ ‘ಮಂಗಳ’ ಹಾಡುವ ದೇಶಾವರಿ ಶೈಲಿ ಒಲಿದಿಲ್ಲ, ಕ್ಷಮಿಸಿ.
    -ಡಿಎಸ್ಸೆನ್

    ReplyDelete
  3. ನೋಡಿ.. ಪ್ರತಿಯೊಬ್ಬ ಸಾಹಿತಿಯು ಕೂಡ ಬೇರೆ... ದೃಷ್ಟಿಕೋನ , ವಿಚಾರ ಎಲ್ಲವೂ ಬೇರೆ.. ಯಾರು ಸರಿ ಯಾರು ತಪ್ಪು ಎನ್ನುವ ವಾದವೇಕೆ ? ತಿಳೀತ ಇಲ್ಲ...
    ಒಂದು ಗಮನಿಸಬೇಕಾದ ಅಂಶ ಏನು ಅಂದ್ರೆ.. ಈತ್ತೀಚಿನ.. ನಾಹಿತಿಗಳಿಗೆ ಒಂದು ದೃಡ ನಿಲುವು ಕಡಿಮೆ...

    ಗಾಳಿ ಬಂದಾಗ ತುರಿಕೊಳ್ಳುವ... , ರಾಜಕೀಯದ ನೆರಳಿನಲ್ಲಿವ.. , ಅನಗತ್ಯ.. ಪ್ರಚಾರ್‌ದಲ್ಲಿರುವ.., ಪದೇ ಪದೇ ಪ್ಲಾಏಟು ಬದ್ಲಾಇಸುವ
    , ಒಂದು ಗೀಳು.. ಅದು ಒಂದು ಜಾತಿ,ಗುಂಪು, ಆ ವಾದ ಎ ವಾದ... ಏನೇ ಇರಬಹುದು..

    ಆದ್ರೆ ಕಾರಂತ್, ಏಚ್ ಏನ್ , ಕೈಲಾಸಂ, ಇನ್ನೂ ಮುಂತಾದ ಮಹನೀಯರು.. ಯಾವತ್ತೂ ತಮ್ಮತನವನ್ನು ಬಿಟ್ಟು ಕೊಡಲಿಲ್ಲ ..

    ಕೊನೆಯದಾಗಿ - ಒಬ್ಬ ಸಾಹಿತಿಗೆ .. ಜಾತಿ ಮತ್ ಭೇದ ಇವುಗಳ ಹಂಗೆ ಇರಬಾರ್ದೂ..

    ReplyDelete